ಲಿಂಗಾಯತ ನವ ಧರ್ಮ ಧುರೀಣರ ನಾಮಪರಿವಿಪರ್ಯಾಸ!

ಲಿಂಗಾಯತ ಎಂಬುದು ಪ್ರತ್ಯೇಕ ಧರ್ಮ, ಇದಕ್ಕೆ ಅಲ್ಪಸಂಖ್ಯಾತ ಮಾನ್ಯತೆ ನೀಡಲು ಕರ್ನಾಟಕ ಸರ್ಕಾರ ಶಿಫಾರಸು ಮಾಡಿದೆ. ಕೇಂದ್ರ ಸರ್ಕಾರ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಬೇಕಿದೆ. ಈ ನಡುವೆ, ಬಸವ ತತ್ತ್ವದ ಮೇಲೆ ರೂಪಿತವಾಗಿರುವ ಹೊಸ ಲಿಂಗಾಯತ ಧರ್ಮಕ್ಕೆ ಸೇರಬಲ್ಲ ನಾಯಕರ ಹೆಸರುಗಳಲ್ಲಿ ಹಿಂದೂ ದೇವರ ಹೆಸರು ಬಳಕೆ ಮಾಡುವುದು ಎಷ್ಟು ಸರಿ?

ಇಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮದ ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ ಶ್ರೀ ಶ್ರೀ ಶ್ರೀ ಗಳ ನಾಮ ವಿಶೇಷಗಳನ್ನು ವಿಶ್ಲೇಷಿಸೋಣ. ಅಂದ ಹಾಗೆ ಈ ಹೆಸರುಗಳು ಸ್ವಾಮಿಗಳಿಗೆ ಬಂದ ಹುಟ್ಟುನಾಮವಲ್ಲ! ಸನ್ಯಾಸ ದೀಕ್ಷೆಯಾದಾಗ ಇಟ್ಟುಕೊಂಡ ಹೆಸರುಗಳು. 

ಶಿವಮೂರ್ತಿ ಮುರುಘರಾಜೇಂದ್ರ ಸ್ವಾಮಿಗಳು: ಇವರ ಹೆಸರಿನಲ್ಲಿಯೇ ಶಿವನಿದ್ದಾನೆ. ಶಿವ ಹಿಂದೂ ದೇವ. ಲಿಂಗಾಯತರು ಯಾವುದೇ ಮೂರ್ತಿಪೂಜೆ, ಹಿಂದೂ ದೇವತೆಯ ಉಪಾಸನೆಯಲ್ಲಿ ತೊಡಗದಿದ್ದರೆ, ಇವರ ಹೆಸರಲ್ಲಿ ಶಿವ ಮತ್ತು ಮೂರ್ತಿಗೆ ಏಕೆ ಸ್ಥಾನ ಕೊಟ್ಟರು? 

ತರಳಬಾಳು ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು: ಶಿವ ಇವರ ಪ್ರಥಮ ಮತ್ತು ದ್ವಿತೀಯ ಎರಡು ಹೆಸರಲ್ಲಿಯೂ ಇದ್ದಾನೆ. ಅದಲ್ಲದೇ ಮೂರ್ತಿ ಮತ್ತು ಆಚಾರ್ಯ (ಗುರು) ಕೂಡ. ಹಾಗಿದ್ದರೆ ಇವರ ಹೆಸರಿನಲ್ಲಿರುವ ಶಿವ ಅದಾವ ಅಹಿಂದು ದೇವಾ/ದೇವತೆ? 

ಸಾಣೇಹಳ್ಳಿ ಪಂಡಿತಾರಾಧ್ಯ ಸ್ವಾಮಿಗಳು: ಪಂಡಿತಾರಾಧ್ಯ ಕಾಳಮುಖ ಯಾ ವೀರಶೈವರ ಪ್ರೀತ್ಯಾರ್ಥ ನಾಮ. ಅದರಲ್ಲೂ ರೇಣುಕರೊಬ್ಬರ ನಾಮ. ಈ ನಾಮವನ್ನು ಇವರ ಗುರುಗಳು ದಯಪಾಲಿಸಿದ್ದು. ಹಾಗಿದ್ದರೆ ಇವರ ಗುರುಗಳಿಗೆ ತಮ್ಮ ಧರ್ಮದ ಬಗ್ಗೆ ತಪ್ಪು ತಿಳುವಳಿಕೆಯಿತ್ತೇ? 

ಜಯ ಮೃತ್ಯುಂಜಯ ಸ್ವಾಮಿಗಳು: ಪಂಚಮಸಾಲಿ ಪೀಠಾಧೀಶರಾದ ಇವರ ಹೆಸರಿನಲ್ಲಿ ಉಗ್ರ ಶೈವ ಸಂಪ್ರದಾಯದ ಶಿವನಾಮವಿದೆ. ಮೃತ್ಯುಂಜಯ ಜಪ ಶೈವರ ಅತ್ಯಂತ ಉಗ್ರಪ್ರೀತಿಯ ಜಪ. ವೀರಶೈವ/ಲಿಂಗಾಯತರಲ್ಲಿ, ಗುರು ಪರಂಪರೆಯ ಮಠಾಧೀಶರು ಈ ಜಪದಲ್ಲಿ ಪರಿಣಿತರು. ಮೃತ್ಯುಂಜಯ ಅದು ಹೇಗೆ ಹಿಂದೂ ನಾಮಕ್ಕಿಂತ ಭಿನ್ನ? 

ಸಿದ್ದರಾಮ, ಸಿದ್ದಲಿಂಗ, ಇತ್ಯಾದಿ, ಇತ್ಯಾದಿ: ಈ ಸ್ವಾಮಿಗಳ ಹೆಸರಲ್ಲಿ ರಾಮನನ್ನು ಸಿದ್ಧಿಸಿದ, ಲಿಂಗವನ್ನು (ಇದು ಶಿವನಲ್ಲ ಎಂಬುದು ಇವರ ಅರಿಕೆ) ಸಿದ್ಧಿಸಿದ ಎಂಬರ್ಥ ಸಹಜ. ಹಾಗಿದ್ದರೆ ರಾಮ, ಲಿಂಗಾರ್ಥದ ಶಿವ, ಹಿಂದೂ ದೇವರುಗಳಲ್ಲವೇ? 

ಇನ್ನು ಲಿಂಗಾಯತ ಧರ್ಮಸಂಸ್ಥಾಪಕ ಬಸವಣ್ಣ! ಶಿವನ ವಾಹನ ನಂದಿಯ ಸಂಪ್ರೀತಿಯ ಕನ್ನಡ ನಾಮ. ಅಕ್ಕ ಮಹಾದೇವಿ ಪಾರ್ವತಿಯ ಅನ್ವರ್ಥಕ ನಾಮ, ಅಲ್ಲಮಪ್ರಭು ಶಿವನಾಮ!! 

ಇಂತಹ ಒಂದು ಸಾಮಾನ್ಯ ತಿಳುವಳಿಕೆ ಜನಸಾಮಾನ್ಯರಲ್ಲಿ ಜನಜನಿತ! ಅದ್ಯಾವ ಬೆಡಗಿನ ಒಡಪು, ದಿಜ್ಞಾನ, "ಅಹಿಂದ"ತ್ವ ಕರ್ನಾಟಕ ಸರ್ಕಾರ ರಚಿಸಿದ್ದ ಸಮಿತಿಯ ಹೊಳಹಿಗೆ ದಕ್ಕಿತು?!? ನ್ಯಾ. ಜಗಮೋಹನದಾಸ್ ಸಮಿತಿಯಾಗಲಿ, ಮುಖ್ಯಮಂತ್ರಿಗಳಾಗಲಿ, ಅಥವಾ ಮೇಲ್ಕಾಣಿಸಿದ ಶ್ರೀ ಶ್ರೀ ಶ್ರೀಗಳಾಗಲಿ ತಾವು ಕಂಡಕೊಂಡ ದಿಜ್ಞಾನದ ಸುಜ್ಞಾನವನ್ನು ನಾಡಿನ ಅಲ್ಪಜ್ಞ ಸಾಮಾನ್ಯರಿಗೆ ತಿಳಿಸಿ ಕಣ್ಣು ತೆರೆಸಬಲ್ಲುದೆ?

#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

No comments: