ಕುರುಡೆನ್ನಿಸುವಷ್ಟು ಮಹಿಳಾ ಸಬಲೀಕರಣ

ವಿವಾಹ ವಿಚ್ಚೇದಿತ ಆತ ಉತ್ತರ ಭಾರತದ ಡೆಂಟಲ್ ಕಾಲೇಜಿನ ಡಿಪಾರ್ಟ್ಮೆಂಟ್ ಒಂದರ ಮುಖ್ಯಸ್ಥ, ಸ್ನೇಹಜೀವಿ, ಪ್ರಾಮಾಣಿಕ. ವೈವಾಹಿಕವಾಗಿ ಡಾಕ್ಟರ್ ಓರ್ವಳನ್ನು ಮದುವೆಯಾಗಿ ಕಹಿಯುಂಡಿದ್ದವ ಮುಂದೆಂದೂ ಮದುವೆಯಾಗುವುದಿಲ್ಲ. ಹಾಗೇನಾದರೂ ವಿವಾಹವಾದರೆ ಬಡ, ಅವಿದ್ಯಾವಂತೆಯೊಂದಿಗೆ ಮಾತ್ರ ಎಂದು ನಿರ್ಧರಿಸಿದ್ದ. ಸ್ನೇಹಜೀವಿಯ ಸ್ನೇಹಿತರು ಆತನ ಒಳ್ಳೆಯತನಕ್ಕೆ ಮರುಗಿ, ಅವನ ಕೊರಗನ್ನು ತಾವೇ ಅನುಭವಿಸುತ್ತಿರುವಂತೆ ಕೊರಗಿ ಒಂದು ಬಡ ಅವಿದ್ಯಾವಂತೆಯನ್ನು ಹುಡುಕಿ ತೋರಿದರು. ಅವನಿಚ್ಛೆಯಂತೆ ಆತ ಹುಡುಗಿಯ ಪ್ರಸ್ತಾಪವನ್ನು ಒಪ್ಪಿ ಮದುವೆಯಾದ. ಒಂದೇ ತಿಂಗಳಲ್ಲಿ ಹುಡುಗಿ ಅವನೊಂದಿಗೆ ಹೊಂದಾಣಿಕೆಯಾಗದು ಎಂದು ಅಕಾರಣವಾಗಿ ಆತನನ್ನು ಶೋಷಿಸಿ ತೊರೆದು ಓಡಿದಳು. ನಂತರ ಒಂದು "ದೊಡ್ಡ" ಮೊತ್ತದ ಜೀವನಾಂಶ ಕೋರಿದಾಗ, ಕೋರ್ಟು ಡಾಕ್ಟರರ ಲೈಫ್ ಸ್ಟೈಲ್ ಆಧಾರದ ಮೇಲೆ "ಬಹುದೊಡ್ಡ" ಮೊತ್ತದ ಜೀವನಾಂಶ ಕೊಡುವಂತೆ ತೀರ್ಮಾನ ಕೊಟ್ಟಿತು.
ಇನ್ನೊಂದು ಕೇಸಿನಲ್ಲಿ, ಹೆಂಡತಿಯ ಅಕ್ರಮ ಸಂಬಂಧದಿಂದ ಬೇಸತ್ತಿದ್ದ ಗಂಡ ತನ್ನ ಹೆಂಡತಿ ಪ್ರಿಯಕರನೊಂದಿಗಿರುವ ವಿಡಿಯೋ ಸಾಕ್ಷಿಯೊಂದಿಗೆ adultery ಕೇಸ್ ಹಾಕಿ ವಿಚ್ಛೇದನ ಕೇಳಿದ. ಅಲ್ಲಿಯೂ ಆತನಿಗೆ ವ್ಯತಿರಿಕ್ತವಾಗಿ ಆತನ " ಅರ್ಧದಷ್ಟು ಆಸ್ತಿ"ಯನ್ನು ಕೊಡಿಸಿ
ಕೋರ್ಟು ಆಕೆಯ ಕ್ಷಮಾಪಣೆ ಕೇಳುವಂತೆ ಆದೇಶ ನೀಡಿತು.
ಇನ್ನು ನನ್ನ ಕಾರ್ಪೊರೇಟ್ ವಲಯದಲ್ಲಿ ಕೂಡ ಸಾಕಷ್ಟು ಮಹಿಳೆಯರು ಕೆಲಸದ ಒತ್ತಡವನ್ನು ತಾಳಲಾರದೆ, ಲೈಂಗಿಕ ಶೋಷಣೆಯ ನೆಪವೊಡ್ಡಿ ತಮ್ಮ ತಮ್ಮ ಬಾಸ್ಗಳ ನೌಕರಿಗೆ ಕುತ್ತು ತಂದು ಬೆವರಿಳಿಸಿದ್ದಾರೆ. ಕೆಲಸದ ಒತ್ತಡ ಹೆಚ್ಚಾದೊಡನೆ ಆರೋಗ್ಯದಿಂದ ಶುರುವಾಗುವ ನೆಪಗಳು ಕ್ರಮೇಣ ಅಜ್ಜಿ, ಅಜ್ಜರ ಸಾವಿಗೆ ಬಂದು ಕಟ್ಟಕಡೆಗೆ ಲೈಂಗಿಕ ಶೋಷಣೆಗೆ ಬಂದು ನಿಂತಿದ್ದ ಹಲವಾರು ಘಟನೆಗಳನ್ನು ನಾನೇ ನೋಡಿದ್ದೇನೆ.
ಭಾರತದಲ್ಲಿನ ವೈವಾಹಿಕತೆ, ಅತ್ಯಾಚಾರ, ಮಹಿಳಾ ಶೋಷಣೆಯ ಬಗೆಗಿನ ಕಾನೂನುಗಳು ಏಕಪಕ್ಷೀಯವಾಗಿ ಕುರುಡೆನ್ನಿಸುವಷ್ಟು ಮಹಿಳಾ ಸಬಲೀಕರಣವನ್ನು ಪುಷ್ಟೀಕರಿಸುತ್ತಿವೆ. ಕಾನೂನುಗಳ ಈ ಕಪಿಮುಷ್ಟಿಯಿಂದ ಅತ್ಯಾಚಾರ ಮಾಡದ, ಆದರೆ ಆರೋಪಕ್ಕೊಳಗಾದವ ಕೂಡ ತಪ್ಪಿಸಿಕೊಳ್ಳಲಾರ. ಇಂತಹ ಕಠಿಣ ಕಾನೂನುಗಳು ಈಗಾಗಲೇ ಇರುವಾಗ ಹೊಸ ಕಾನೂನುಗಳ ಔಚಿತ್ಯವಾದರೂ ಏನು ಎಂಬ ಪ್ರಶ್ನೆ ಮೂಡುತ್ತದೆ. ಭಾವುಕತೆಯ ಹುಚ್ಚಿನಲ್ಲಿ, ಮೀಡಿಯಾದ ಅಬ್ಬರಕ್ಕೆ ಸೋತು ಈ ರೀತಿ ಹುಚ್ಚು ಕಾನೂನುಗಳನ್ನು ಮಾಡುತ್ತ ಹೋದರೆ...!
ಹಾಗಿದ್ದಾಗ ಭಾರತದಲ್ಲಿ ಅತ್ಯಾಚಾರ ಪ್ರಕರಣಗಳು ತೀವ್ರವಾಗಿ ಹೆಚ್ಚುತ್ತಿರುವವೇ? ರಾಷ್ಟೀಯ ಕ್ರೈಮ್ ಬ್ಯುರೋ ಪ್ರಕಾರ ೨೦೧೩ ರಲ್ಲಿ ೨೪೯೨೩, ೨೦೧೫ ರಲ್ಲಿ ೩೪೬೫೧ ಅತ್ಯಾಚಾರ ಪ್ರಕರಣಗಳು ನಡೆದಿದ್ದು, ಇವುಗಳಲ್ಲಿ ೯೮% ಪರಿಚಿತರಿಂದ ನಡೆದಿವೆ ಎನ್ನುತ್ತದೆ. ಈ ೯೮ ಪ್ರತಿಶತ ಪರಿಚಿತರಿಂದ ನಡೆಯುವ ಅತ್ಯಾಚಾರಗಳಿಗೆ ಕಾರಣಗಳೇನು ಎಂದು ಹುಡುಕಬೇಕು. ಅದೇ ಅಮೇರಿಕಾದಲ್ಲಿ ವರ್ಷಕ್ಕೆ ಮೂರೂ ಲಕ್ಷಕ್ಕೂ ಹೆಚ್ಚು ಲೈಂಗಿಕ ಶೋಷಣೆಗಳು ನಡೆಯುತ್ತವೆ ಎನ್ನಲಾಗುತ್ತದೆ. ಇದ್ಯಾಕೆ ಸುದ್ದಿ ಮಾಧ್ಯಮದಲ್ಲಿ ಸುದ್ದಿಯಾಗುವುದಿಲ್ಲ?ಅಂದರೆ ಅಮೆರಿಕಾದಲ್ಲಿ ಅತ್ಯಾಚಾರಗಳ ಕುರಿತು ಜನ ಪ್ರತಿಭಟಿಸುವುದಿಲ್ಲವೇ? ಅಮೇರಿಕಾದ ಸುದ್ದಿ ಮಾಧ್ಯಮಗಳಲ್ಲಿ ನೈತಿಕತೆ ಭಾರತದಂತೆ ಅಧ್ಹಪತನಕ್ಕಿಳಿದಿಲ್ಲ, ಇಳಿಯಲಾರವು! ಏಕೆಂದರೆ ಅಲ್ಲಿನ ಕಾನೂನುಗಳು ಅಂತಹದಕ್ಕೆ ಆಸ್ಪದ ಕೊಡುವುದಿಲ್ಲ.
ಯಾವುದೇ ದೇಶವಾದರೂ ಆಯಾಯ ಅಪರಾಧವನ್ನು ತಮ್ಮ ತಮ್ಮ ಕಾನೂನುಗಳಿಗನುಗುಣವಾಗಿ ಶಿಸ್ತುಕ್ರಮ ಕೈಗೊಂಡು ಅಪರಾಧಿಗಳನ್ನು ಶಿಕ್ಷೆಗೆ ಗುರಿಪಡಿಸುತ್ತವೆ. ಯಾವುದೇ ಹುಚ್ಚು ವರದಿ ಪ್ರಸಾರವಾಗುವುದಿಲ್ಲ. ಭಾರತದಲ್ಲಿಯೂ ಕೂಡ ಅಪರಾಧಗಳಿಗೆ ತಕ್ಕಂತೆ ನಿಯಮಗಳಿದ್ದು ಅವುಗಳ ಪರಿಪಾಲನೆಯಲ್ಲಿ ಲೋಪಗಳಾಗುತ್ತಿವೆ. ಆಯಾಯ ರಾಜ್ಯ ಸರ್ಕಾರಗಳು ಆ ನಿಯಮಪಾಲನೆಯಲ್ಲಿ ಶಿಸ್ತುಕ್ರಮಗಳನ್ನು ಕೈಗೊಂಡು ಪರಿಸ್ಥಿತಿಯನ್ನು ಹತೋಟಿಯಲ್ಲಿಡಬೇಕೆ ಹೊರತು ಹೊಸ ಹೊಸ ಕಾನೂನುಗಳನ್ನು ಮಾಡುವುದಲ್ಲವೆನಿಸುತ್ತದೆ. ಅತ್ಯಾಚಾರಗಳ, ಮಹಿಳಾಸಬಲೀಕರಣದ ಕುರಿತಾದ ಹೊಸ ಹೊಸ ಕಾನೂನುಗಳ ಬೇಡಿಕೆ ಹೇಗಿದೆಯೆಂದರೆ, ಪ್ಲಾಸ್ಟಿಕ್ ಅನ್ನು ಸರಿಯಾಗಿ ಮರುಬಳಕೆಗೆ ಒಳಪಡಿಸಲಾಗದ ಸರ್ಕಾರಗಳು ಪ್ಲಾಸ್ಟಿಕ್ ಪರಿಸರಕ್ಕೆ ಮಾರಕವೆಂದು ಬಹಿಷ್ಕರಿಸುವ ( ಯಾವ ವಸ್ತು ಅತ್ಯಂತ ಸುಲಭವಾಗಿ ಮರುಬಳಕೆಗೆ ಒದಗಿಬರುವುದೋ ಅದು ಅತ್ಯಂತ ಪರಿಸರಸ್ನೇಹಿ ಕೂಡಾ), ಬಯಲು ಶೌಚವನ್ನು ನಿಯಂತ್ರಿಸಲಾಗದೇ ಮುಂದೆ ಶೌಚವನ್ನೇ ಬಹಿಷ್ಕರಿಸುವ ಆದೇಶ ನೀಡಬಹುದಾದಂತಹ ಮೂರ್ಖತನವೆನಿಸುತ್ತದೆ.
ಕಾನೂನು ಪರಿಪಾಲನೆಯಲ್ಲಿರುವ ಲೋಪಗಳನ್ನು ತಿದ್ದಿ ತೀಡಬೇಕಾದ ಸರ್ಕಾರಗಳ ಲೋಪ, ಹಾಗು ಆ ರೀತಿ ಆಗ್ರಹಿಸಬೇಕಾದ ಜನತೆ ಭಾಗವಾಗಿ ಎರಡು ಭಾರತದಲ್ಲಿ ಎಂದೋ ಕಳೆದುಹೋಗಿರುವವೆನಿಸುತ್ತದೆ.
ಮಾಹಿತಿತಂತ್ರಜ್ಞಾನದ ಆಸ್ಫೋಟನೆಗೊಂಡು ಕೈಗೊಂದು ಕ್ಯಾಮೆರಾ ಫೋನ್ ದೊರೆತು, ಆ ಆಟಿಕೆಗಳಿಗೆ ಕಾನೂನಿನ ಲಂಗುಲಗಾಮಿಲ್ಲದ ದುರವಸ್ಥೆಯಾಗಿ, ಸುದ್ದಿ ಮೀಡಿಯಾಗಳ ಅಬ್ಬರದಲ್ಲಿ ಭಾರತ ಕಳೆದುಹೋಗಿದೆ. ಈಗ ಭಾರತಕ್ಕೆ ಬೇಕಾದ್ದು ಮಹಿಳಾಸಬಲೀಕರಣದ ಕಾನೂನುಗಳಲ್ಲ, ಬದಲಾಗಿ ವೈಯುಕ್ತಿಕ ಘನತೆ, ಮಾಹಿತಿಯನ್ನು ಗೋಪ್ಯತೆಯನ್ನು ಕಾಪಾಡಬೇಕಾದ ಕಾನೂನುಗಳು!
ಇನ್ನು ಅದ್ಯಾವುದೋ ಬಿಜೆಪಿ ರಾಜಕಾರಣಿ ಸುದ್ದಿಮಾಧ್ಯಮಗಳಲ್ಲಿನ ಮಹಿಳೆಯರು ಔದ್ಯೋಗಿಕ ಲಾಭಕ್ಕೆ ಮಲಗುತ್ತಾರೆ ಎಂಬುದನ್ನು ಮಾಧ್ಯಮನಿರತರು ಪ್ರತಿಭಟಿಸುವ ಮುನ್ನ ತಮ್ಮ ಬಳಗದವರೇ ಅದ ಅನೇಕ ಮಹನೀಯರುಗಳು ತಮ್ಮ ಪಲ್ಲಂಗ ಪುರಾಣಗಳನ್ನು ಅಲೆಗ್ಸಾಂಡರನ ದಂಡಯಾತ್ರೆಯಂತೆ ಬರೆದುಕೊಂಡಿದ್ದನ್ನು ಪ್ರಶ್ನಿಸಲಿಲ್ಲವೇಕೆ? ನಿಮ್ಮ ಹೋರಾಟದ ಮಂಚೂಣಿಯಲ್ಲಿರುವ ನಟ ಕಮ್ ನೂತನ ಲೇಖಕ ಪ್ರಜಾವಾಣಿಯಲ್ಲಿ ಉಮೇದಿನಿಂದ ತನ್ನ ಕಾಮಸಂಬಂಧ ಕುರಿತು ಬರೆದುಕೊಂಡಿದ್ದಾರೆ. ನಿಮ್ಮ ಬಳಗದವರ ಅಲೌಕಿಕ, ಕ್ರಿಯಾತ್ಮಕ ಚಟುವಟಿಕೆಗಳ ಹೆಸರಲ್ಲಿ ನಡೆಸುವ ಲೈಂಗಿಕ ಶೋಷಣೆಯನ್ನು ಪ್ರಶ್ನಿಸದೇ, ಆ ರಾಜಕಾರಣಿ ತಾನು ಕಂಡಿರಬಹುದಾದ ಔದ್ಯೋಗಿಕ ಉನ್ನತಿಯ ಲೌಕಿಕ ಕಾರಣ ಕುರಿತು ಮಾತನಾಡಿದ್ದು ತಪ್ಪೇ?
ಅತಿಯಾಗಿ ತಿಂದು ಭೇಧಿಯಾದರೆ ಅದಕ್ಕೆ ಪ್ರಧಾನಮಂತ್ರಿ ಕಡೆ ಬೆರಳು ತೋರುವ, ಫೇಸ್ಬುಕ್ ಸ್ಟೇಟಸ್ , ವಾಟ್ಸಾಪ್ ಮೆಸೇಜ್ ಹರಡುವ ರೋಗ ನಿಲ್ಲಬೇಕು. ಈ ಬೆರಳು ತೋರುವ ಪ್ರವೃತ್ತಿಯಿಂದ ನಾಡಿನ ಬುದ್ದಿಜೀವಿಗಳು ಪ್ರಧಾನಿಯನ್ನು ಕೇಳಬೇಕಾದ ಅನೇಕ ಪ್ರಮುಖ ಸಂಗತಿಗಳ ಕುರಿತು ಸೊಲ್ಲೆತ್ತದೆ ಹುಚ್ಚು ಆರ್ಭಟದಲ್ಲಿ ಕಳೆದುಹೋಗಿದ್ದಾರೆ. ಬುದ್ಧಿಜೀವಿಗಳೇ ತಮ್ಮ ಬಾಯನ್ನು ಮುಚ್ಚಿಸಲಾಗುತ್ತಿದೆ ಎಂದು ನೀವು ತಿಳಿದಿದ್ದರೆ ನಿಮ್ಮನ್ನು ಬುದ್ದಿಜೀವಿಗಳೆಂದುಕೊಂಡದ್ದಕ್ಕೆ ನಾವು ನಮ್ಮನ್ನು ಹಳಿದುಕೊಳ್ಳಬೇಕು. ತಮ್ಮ ಈ ಬೆರಳು ತೋರುವ ಆರ್ಭಟದಲ್ಲಿ ನೀವಾಗಿಯೇ ನಿಮ್ಮ ಬಾಯಿ ಮುಚ್ಚಿಕೊಳ್ಳುತ್ತಿರುವಿರಿ. ಕಳೆದುಹೋಗಿರುವ ಅಥವಾ ಮಾರಿಕೊಂಡಿರುವ ನಿಮ್ಮ ಕ್ರಿಯಾಶೀಲತೆಯನ್ನು ದಯವಿಟ್ಟು ಮತ್ತೊಮ್ಮೆ ಪಡೆದುಬನ್ನಿ ಪಾಲನೆಯಾಗಬೇಕಾದ ನಿಯಮಗಳ ಕುರಿತು ಪ್ರತಿಭಟಿಸಿ, ದೇಶಕಾರಣ ನಿಮ್ಮ ಪ್ರತಿಭಟನೆಯ ಗುರಿಯಾಗಬೇಕಾದ್ದು ರಾಜಕಾರಣ ಗುರಿಯಾದದ್ದಕ್ಕೆ ವಿಷಾದವಿದೆ.
ಕೊಟ್ಟ ಕುದುರೆಯನೇರಲರಿಯದೆ ಮತ್ತೊಂದು ಕುದುರೆಯ ಬಯಸುವವ ವೀರನು ಅಲ್ಲ ಶೂರನೂ ಅಲ್ಲ.

#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

No comments: