ಅವಳ ವಚನ ಬೆಲ್ಲದಂತೆ: ಹೃದಯದಲ್ಲಿಪ್ಪುದು ನಂಜು ಕಂಡಯ್ಯಾ

 ಮಿತ್ರರಾದ ರಾಧಾಕೃಷ್ಣ ಕೌಂಡಿನ್ಯ ಅವರು 'ರವಿ ಹಂಜ್, ನೀವು ಬರೆದ ಕಾರಣ ಬಚಾವಾದ್ರಿ. ಬೇರೆ ಯಾರಾದರೂ ಆಗಿದ್ದರೆ ಟೈಟಲ್ ಕಾರಣಕ್ಕೆ ಇಪ್ಪತ್ನಾಲ್ಕು ಕೇಸ್ ಆಗಿರೋದು' ಎಂದು ನನ್ನ "ಬಸವರಾಜಕಾರಣ" ಕುರಿತು ಹೇಳಿದ್ದಾರೆ.

ಅವರು ಈ ಮಾತುಗಳನ್ನು ನಾನೊಬ್ಬ ಅನಿವಾಸಿ ಯಾ ಭಾರತೀಯ ಮೂಲದ ಅಮೆರಿಕನ್ ಎಂಬರ್ಥದಲ್ಲಿಯೋ ಅಥವಾ ನಾನೊಬ್ಬ ಹುಟ್ಟಿನಿಂದ ವೀರಶೈವಿಗನಾಗಿ ಎಂಬರ್ಥದಲ್ಲಿಯೋ ತಿಳಿಯದು. ಆದರೆ ಈ ಎರಡೂ ಬಗೆಯ ಲೇಖಕರ ಕೃತಿಗಳು ಭಾರತದಲ್ಲಿ ನಿಷೇಧಕ್ಕೊಳಗಾಗಿದ್ದವು. ಆ ಲೇಖಕರು ಸಲ್ಮಾನ್ ರಶ್ದಿ, ಮತ್ತು ಹೆಚ್. ಎಸ್. ಶಿವಪ್ರಕಾಶ್. ಇವರ ಕೃತಿಗಳ ವಿಷಯ ಕೂಡ ನನ್ನ 'ಬಸವರಾಜಕಾರಣ'ದಂತೆಯೇ ಅವರವರ ಹುಟ್ಟಿನ ಧರ್ಮದವೇ ಆಗಿದ್ದವು. ವ್ಯತ್ಯಾಸ ಅವರುಗಳದು ಸೃಜನಶೀಲ, ನನ್ನದು ಸೃಜನೇತರ!
ಇತಿಹಾಸದ ಘಟನೆಯನ್ನು ಆಗಿರಬಹುದು, ಹೀಗಿರಬಹುದು, ಹೋಗಿರಬಹುದು, ಬಂದಿರಬಹುದು, ಆ..ಬಹುದು, ಈ..ಬಹುದು ಓ..ಬಹುದು ಎಂಬ ಊಹಾತ್ಮಕ ಹಿನ್ನೆಲೆಯಲ್ಲಿ ಕಥನವನ್ನು ಕಟ್ಟಿದಾಗ ಸಮರ್ಥಿಸಿಕೊಳ್ಳಲು ಪುರಾವೆಗಳು ಇರಬೇಕು. ಅಂತಹ ಪುರಾವೆಗಳ ಕೊರತೆಯಿದ್ದಾಗ ಲೇಖಕ ತನ್ನ ಅನಿಸಿಕೆಗೆ ಸೃಜನಶೀಲ ರೂಪ ಕೊಡುತ್ತಾನೆ. ಅಂತಹ ರೂಪ ಕೊಟ್ಟಾಗ ಸಮರ್ಥಿಸಿಕೊಳ್ಳಲಾಗದೆ ಆ ಕೃತಿಗಳು ವಿವಾದ, ನಿಷೇಧಗಳಿಗೆ ತುತ್ತಾಗುವ ಸಂಭವ ಇರುತ್ತದೆ. ಈ ಸಂಭವ ತಕ್ಕ ಪುರಾವೆಗಳಿರದ ಸೃಜನೇತರ ಸಂಶೋಧನಾತ್ಮಕ ಕೃತಿಗಳಿಗೂ ಇರುತ್ತದೆ. ಆದರೆ ಯಾವ ಕೃತಿ ತನ್ನ ಸಂಶೋಧನಾ ವಿಷಯ ಮಂಡನೆಗೆ ತಕ್ಕ ಆಕರ, ಪುರಾವೆಗಳನ್ನು ಒದಗಿಸುತ್ತದೆಯೋ ಅದಕ್ಕೆ ಯಾವ ವಿವಾದ, ನಿಷೇಧದ ಭಯ ಇರುವುದಿಲ್ಲ. ಹಾಗೊಮ್ಮೆ ನಿಷೇಧಕ್ಕೆ ಒಳಪಟ್ಟರೂ ಅದು ಕೋರ್ಟಿನಲ್ಲಿ ನಿಲ್ಲುವುದಿಲ್ಲ. ಹಾಗಾಗಿಯೇ ಪ್ರೊ.ಕಲ್ಬುರ್ಗಿಯವರ ಸಂಶೋಧನೆಯ ತಪ್ಪುಗಳನ್ನು ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಚಿಸಿದ್ದ 'ಲಿಂಗಾಯತ ಪ್ರತ್ಯೇಕ ಧರ್ಮ ಸಮಿತಿ'ಯ ಸದಸ್ಯರುಗಳನ್ನು ಹೆಸರಿಸಿಯೇ ನನ್ನ ವಿಷಯ ಮಂಡನೆ ಮಾಡಿದ್ದೇನೆ.
ಇಂತಹ ಒಂದು ಗಟ್ಟಿ ನಿಲುವಿನಿಂದಲೇ ನಾನು 'ಬಸವರಾಜಕಾರಣ' ಬರೆಯಲು ಕೈ ಹಾಕಿದ್ದು, ಮತ್ತದು ಯಾವ ವಿವಾದಗಳಿಗೆ ಒಳಗಾಗದಿದ್ದುದು ಎಂದುಕೊಂಡಿದ್ದೇನೆ. ಓದುಗರು ಸಹ ಕೆಲವು ವಚನಗಳನ್ನು ನಾನು ಕುಯುಕ್ತಿಯಿಂದ ತಪ್ಪಾಗಿ ವ್ಯಾಖ್ಯಾನಿಸಿದ್ದೇನೆ ಎಂದು ಹೇಳಿರುವುದು ಬಿಟ್ಟರೆ ಉಳಿದ ವಿಚಾರಗಳ ಬಗ್ಗೆ ಏನನ್ನೂ ಹೇಳಿಲ್ಲ. ಅಂತಹ ಒಂದು ವಚನ ವ್ಯಾಖ್ಯಾನ ಹೀಗಿದೆ.
ಅವಳ ವಚನ ಬೆಲ್ಲದಂತೆ: ಹೃದಯದಲ್ಲಿಪ್ಪುದು ನಂಜು ಕಂಡಯ್ಯಾ
ಕಂಗಳಲ್ಲೊಬ್ಬನ ಕರೆವಳು; ಮನದಲೊಬ್ಬನ ನೆನೆವಳು!
ವಚನದಲ್ಲೊಬ್ಬನ ನೆರೆವಳು!
ಕೂಡಲಸಂಗಮದೇವಾ,
ಇಂತಹವಳ ತನುವೊಂದೆಸೆ, ಮನವೊಂದೆಸೆ, ಮಾತೊಂದೆಸೆ
ಈ "ಮಾನಸಗಳ್ಳಿ"ಯ ನನ್ನವಳೆಂದು ನಂಬುವ
ಕುರಿನರರನೇನೆಂಬೆನಯ್ಯಾ?
ಮೇಲುನೋಟಕ್ಕೆ ಈ ವಚನವನ್ನು ಓದಿದವರು ಇದು ಚಂಚಲ ಮನಸ್ಸಿನ ಕುರಿತಾದ ಸೊಗಸಿನ ವಚನ ಎಂದು ಅರ್ಥೈಸಿಕೊಳ್ಳುತ್ತಾರೆ. ಆದರೆ ಬಸವಣ್ಣನ ಕೌಟುಂಬಿಕ ಜೀವನವನ್ನು ಸಮಗ್ರವಾಗಿ ಗ್ರಹಿಸಿದಾಗ, ನೀಲಮ್ಮನ ವಚನಗಳ ಸೂಕ್ಷ್ಮವನ್ನು ಗಮನಿಸಿದಾಗ ಈ ವಚನವು ಬೇರೆಯದೇ ಅರ್ಥವನ್ನು ಮಹಿಳೆಯರ ಕುರಿತಾಗಿಯೇ ಕೊಡುತ್ತದೆ. ಹಾಗಾಗಿ ಬಸವಣ್ಣನು ಸೂಚ್ಯವಾಗಿ ಮಹಿಳೆಯರ ಚಂಚಲತೆ ಕುರಿತು ಈ ವಚನವನ್ನು ಹೇಳಿದ್ದಾನೋ ಅಥವಾ ತನ್ನ ಪತ್ನಿಯರ ಕುರಿತು ಅವಹೇಳನ ಮಾಡಿದ್ದಾನೋ ಎಂಬುದು ಮನೋವಿಶ್ಲೇಷಣೆಯ ಸಂಗತಿ. ಏಕೆಂದರೆ ಈ ವಚನದ ಹಿನ್ನೆಲೆಯಲ್ಲಿ ಬಸವಣ್ಣನು ಮಹಿಳೆಯರ ಬಗ್ಗೆ ಹೊಂದಿದ್ದ ಅಭಿಪ್ರಾಯ ಅವನಿಗೆ ಭೂಷಣಪ್ರಾಯವಂತೂ ಅಲ್ಲ. ಒಟ್ಟಾರೆ ಖುದ್ದು ಬಸವಣ್ಣನಂತಹ ಸಮಾನತೆಯ ಹರಿಕಾರನೇ ಹೀಗೆ ಹೇಳಿರುವಾಗ ಸಮಾಜವು ಅಂದು ಮಹಿಳೆಯನ್ನು ಯಾವ ಸ್ಥಾನಕ್ಕಿಳಿಸಿ ನೋಡುತ್ತಿತ್ತು ಎಂಬುದರ ಹೊಳಹು ಸಿಗುತ್ತದೆ.
ಮಾನವ ಧರ್ಮದ ಹಿನ್ನೆಲೆಯಲ್ಲಿ ಮನಶಾಸ್ತ್ರದ ಮುನ್ನೆಲೆಯಿಂದ ವಚನಕಾರರ ಸಾಮಾಜಿಕ ಮತ್ತು ವೈಯಕ್ತಿಕ ಜೀವನವನ್ನು ಸಮಗ್ರವಾಗಿಟ್ಟುಕೊಂಡು ವಚನಗಳನ್ನು ವಿಶ್ಲೇಷಿಸಿದಾಗ ಕಾಣುವ ಸತ್ಯವೇ ಬೇರೆ. ಭಾರತದ ಇತಿಹಾಸವು ಹೀಗೆ ಕ್ರಿಸ್ತಪೂರ್ವ ಕಾಲದಿಂದ ಇಪ್ಪೊತ್ತೊಂದನೇ ಶತಮಾನದ ವರ್ತಮಾನದವರೆಗಿನ ತನ್ನೆಲ್ಲಾ ಸ್ಥಿತ್ಯಂತರಗಳನ್ನು ಸ್ಪಷ್ಟವಾಗಿ ಸಮಗ್ರ ರೂಪದಲ್ಲಿ ಕಟ್ಟಿಕೊಡುತ್ತದೆ. ಭಾರತದ ಈ "Paradigm Shift" ನಿಚ್ಚಳವಾಗಿ ನೋಡಬಲ್ಲ ಸಂಶೋಧಕರಿಗೆ ಸಮಗ್ರವಾಗಿ ತೆರೆದಿಟ್ಟು ಕಾಯುತ್ತಿದೆ. ಇದಕ್ಕೆ ವಚನಕಾರರು ಮತ್ತವರ ಜೀವನವು ಸಹ ಹೊರತಲ್ಲ.

No comments: