ಪಠ್ಯ ವಾಪಸ್ಸಾತಿ

 ಸಾಲು ಸಾಲು ಚಿಂತಕರು ತಮ್ಮ ಲೇಖನ, ಪದ್ಯಗಳನ್ನು ಪಠ್ಯದಿಂದ ವಾಪಸ್ ಪಡೆಯುತ್ತಿರುವುದು ನಿಜಕ್ಕೂ ಆಘಾತಕಾರಿ. ಈ ವಾಪಸ್ಸಾತಿಯನ್ನು ಬುದ್ಧಿಜೀವಿಗಳು, ಸಾಮಾಜಿಕ ಚಿಂತಕರು ಎನ್ನಿಸಿಕೊಂಡವರು ಸಾಲು ಸಾಲಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡು ಯುದ್ಧ ಗೆದ್ದವರಂತೆ ಬೀಗುತ್ತಿರುವುದು ಇನ್ನಷ್ಟು ಆಘಾತಕಾರಿ ಮತ್ತು ಅಪಾಯಕಾರಿ ಸಹ.


ಇವರುಗಳು ಹೇಳುವಂತೆ ಪಠ್ಯ ಪರಿಷ್ಕರಣಾ ಸಮಿತಿಯ ಪರಿಷ್ಕರಣೆಗಳು ಬಲಪಂಥೀಯವಾಗಿದ್ದರೂ ಸಹ ಎಡದ ಕನಿಷ್ಠ ಪಠ್ಯಗಳಾದರೂ ಇರುವವಲ್ಲ ಎಂದು, ಮತ್ತು ಆ ಎಡ ಚಿಂತನಶೀಲ ಪದ್ಯಗದ್ಯಗಳು ವಿದ್ಯಾರ್ಥಿಗಳಲ್ಲಿ ಕಿಂಚಿತ್ತಾದರೂ ಭಿನ್ನ ಚಿಂತನೆಯನ್ನು ಹುಟ್ಟು ಹಾಕುತ್ತದಲ್ಲ ಎಂಬ ಸಮಾಜಮುಖಿ ಚಿಂತನೆ ಇವರಿಗೆ ಕಿಂಚಿತ್ತೂ ಇರಬೇಡವೇ?


ಮಕ್ಕಳ ವಿಕಾಸಕ್ಕೆ ಇವರ ಪಠ್ಯಗಳು ಅತ್ಯಾವಶ್ಯಕ ಎಂಬುದು ಮುಖ್ಯವೋ ಅಥವಾ ನಮ್ಮ ಗುಂಪಿನ ಕೆಲವರ ಅಥವಾ ತಮ್ಮ ಮೆಚ್ಚಿನ ಲೇಖನಗಳನ್ನು ಸೇರಿಸಿಲ್ಲದ ಕಾರಣ ನಮ್ಮದೂ ಬೇಡ ಎಂಬ ಜಿದ್ದಿನ ಕ್ರಮ ಇವರ ಉದ್ದೇಶವೋ?! ಇವರ ಉದ್ದೇಶ ಇಂತಹ ಕ್ಷುಲ್ಲಕ, ಮತ್ತು ಸಾಮಾಜಿಕ ವಿಕಾಸವಿಮುಖವಾದರೆ ಇವರು ಕಟ್ಟಲಿರುವ ಅಥವಾ ಕನಸಿರುವ ಸಮಾಜ ಎಂತಹದ್ದು?


ಈ ಪಠ್ಯ ವಾಪಸ್ಸಾತಿಯವರು ಹೇಳುವಂತೆ ನಾಡಿನಲ್ಲಿ ಕೆಡುಕಿನ ವಾತಾವರಣವನ್ನೇ ಈ ಪರಿಷ್ಕರಣಾ ಸಮಿತಿ ನಿರ್ಮಿಸುತ್ತಿದೆ ಎಂದು ಒಪ್ಪಿ ನೋಡಿದಾಗಲೂ ಕನಿಷ್ಠ ಭಿನ್ನ ಪಂಥದ ಇವರ ಪಠ್ಯವನ್ನು ಓದಿಯಾದರೂ ಮುಂದಿನ ಪೀಳಿಗೆಯಲ್ಲಿ ಕೆಲವು ಚಿಂತಕರು ಉದಯವಾಗಲಿ ಎಂಬ ದೂರದೃಷ್ಟಿ ಈ ಚಿಂತಕರಿಗೆ ಇಲ್ಲವೇ?


ನಿಮ್ಮ ಹೋರಾಟ ಪಠ್ಯ ಪರಿಷ್ಕರಣೆ ಸಮಿತಿಯ ವಿರುದ್ಧವಾಗಿದ್ದರೆ ಆ ಸಮಿತಿಯನ್ನು ರದ್ದು ಪಡಿಸಿ, ಶಿಕ್ಷಣ ಮಂತ್ರಿಯನ್ನು ಬದಲಾಯಿಸಿ ಎಂದು ಹೋರಾಡಿ. ಅದು ಪ್ರಜಾಪ್ರಭುತ್ವದ ಹೋರಾಟ ಎನಿಸುತ್ತದೆ! ಆದರೆ ಪಠ್ಯ ವಾಪಸ್ಸಾತಿ ಕ್ರಮ ನಿಮ್ಮ ವಿರೋಧಿಗಳ ಕ್ರಮಕ್ಕಿಂತ ಅತ್ಯಂತ ನೀಚ ಮತ್ತು ಸೇಡಿನ ಕ್ರಮ.


"ಈ ಪಠ್ಯ ವಾಪಸ್ಸಾತಿ ಸಹ ನಾಡಿಗೆ ಅಷ್ಟೇ ಕೇಡಿನ ಲಕ್ಷಣ! ಇದು ಮುಂದುವರಿಯಬಾರದು. ದಯವಿಟ್ಟು ಮುಂದುವರಿಯಬಾರದು" ಎಂಬ ಉದ್ಘೋಷದ, ಪಠ್ಯ ವಾಪಸ್ಸಾತಿಯ "ಆದಿ ರೂವಾರಿ"ಗಳು ದಯಮಾಡಿ ತಮ್ಮ ಕೇಡಿನ, ಸೇಡಿನ ನೀತಿಯನ್ನು ಪರಿಶೀಲಿಸಿ ತಮ್ಮ ಹೋರಾಟವನ್ನು ಸಾಮಾಜಿಕ ದೂರದೃಷ್ಟಿ ಮತ್ತು ಮಕ್ಕಳ ವಿಕಾಸದ ದಾರಿಯಲ್ಲಿ ಆಲೋಚಿಸಬೇಕು. 


#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ

No comments: