ಹುಯೆನ್ ತ್ಸಾಂಗ್, ಪುಲಿಕೇಶಿ

ಹುಯೆನ್ ತ್ಸಾಂಗ್: "ಕನ್ನಡ ಭಾಷೆಯನ್ನು ಮಾತನಾಡುವ ಮಹಾರಾಷ್ಟ್ರ ಜನತೆ ಎತ್ತರವೂ ಸಧೃಢರೂ ಮತ್ತು ಸ್ವಾಮಿನಿಷ್ಟೆ ಪರಿಪಾಲಕರೂ ಆಗಿದ್ದಾರೆ. ಇಲ್ಲಿನ ಪ್ರಭುವು ಎರಡನೇ ಪುಲಿಕೇಶಿ.  ಅತ್ಯಂತ ಬಲಶಾಲೀ ಸಾಮ್ರಾಜ್ಯವನ್ನು ಕಟ್ಟಿರುವ ಇವನು ಹುಟ್ಟಿನಿಂದ ಕ್ಷತ್ರಿಯನಾಗಿದ್ದು, ವೀರನೂ ಪರಾಕ್ರಮಿಯೂ ಆಗಿದ್ದಾನೆ. ತನ್ನ ತೋಳ್ಬಲದ ಪರಾಕ್ರಮದ ಆಭಿಮಾನಿಯಾಗಿರುವ ಈತನ ಸಾಮಂತರೆಲ್ಲಾ ಮಹಾ ಸ್ವಾಮಿನಿಷ್ಟರು. ನಿಷ್ಟೆಗೆ ಯಾರಾದರೂ ಧಕ್ಕೆ ತೋರಿದರೆ ಅವರನ್ನು ಅತ್ಯಂತ ಉಗ್ರ ಶಿಕ್ಷೆಗೆ ಗುರಿಪಡಿಸುತ್ತಿದ್ದನು. ಯುದ್ಧಗಳಲ್ಲಿ ತನ್ನ ಸೇನಾಧಿಕಾರಿಗಳೇನಾದರೂ ಪರಾಕ್ರಮವನ್ನು ಮೆರೆಯದೇ ಸೋತಿದ್ದರೆ ಅಂತವರಿಗೆ ಯಾವ ಕಠಿಣ ಶಿಕ್ಷೆಯನ್ನು ನೀಡದೇ ಕೇವಲ ಹೆಣ್ಣಿನ ವೇಷವನ್ನು ಹಾಕಿಸುತ್ತಿದ್ದನು. ಹೆಣ್ಣಿನ ವೇಷದ ಅವಮಾನಕ್ಕೆ ನೊಂದು ಆ ಅಧಿಕಾರಿಗಳು ಆತ್ಮಹತ್ಯೆಯನ್ನು ಮಾಡಿಕೊಳ್ಳುತ್ತಿದ್ದರು.

ರಾಜ ಹರ್ಷನಂತೆಯೇ ಪುಲಿಕೇಶಿ ಕೂಡಾ ನೂರಾರು ಆನೆಗಳ ಪಡೆಯೊಂದನ್ನು ಹೊಂದಿದ್ದನು. ಹರ್ಷನ ಸೈನ್ಯದ ಮಾದರಿಯಲ್ಲೇ ಇಲ್ಲಿಯೂ ಕೂಡ ಆನೆಗಳಿಗೆ ಮದ್ಯವನ್ನು ಕುಡಿಸಿ ಶತ್ರುಗಳ ಮೇಲೆ ನುಗ್ಗಿಸುತ್ತಿದ್ದರು. ಈತನ ಯುದ್ಧಕೌಶಲ್ಯ, ತಂತ್ರಗಾರಿಕೆಗಳಿಂದಾಗಿ ಶತ್ರುಗಳು ಭಯಭೀತರಾಗುತ್ತಿದ್ದರು. ಪುಲಿಕೇಶಿಯ ಕೀರ್ತಿ ಬಹುದೂರದವರೆಗೆ ಹಬ್ಬಿತ್ತು. ಶಿಲಾದಿತ್ಯನು (ಹರ್ಷ) ಪಶ್ಚಿಮದಿಂದ ಪೂರ್ವದವರೆಗೆ ದೂರದ ರಾಜ್ಯಗಳನ್ನು ಗೆದ್ದು ತನ್ನ ಆಡಳಿತಕ್ಕೊಳಪಡಿಸಿಕೊಂಡಿದ್ದರೂ, ಚಾಲುಕ್ಯ ಸಾಮ್ರಾಜ್ಯವನ್ನು ಮಾತ್ರ ಗೆಲ್ಲಲಾಗಿಲ್ಲ. ರಾಜ ಪುಲಿಕೇಶಿ ಹಿಂದು ರಾಜನಾಗಿದ್ದರೂ ಆತನ ಸಾಮ್ರಾಜ್ಯದಲ್ಲಿ ನೂರು ಬೌದ್ಧವಿಹಾರಗಳಿರುವವು"

ನನ್ನ ಅನಿಸಿಕೆ:  ಕನ್ನಡ ಮಾತಿನ ಪುಲಿಕೇಶಿ ತನ್ನ ರಾಷ್ಟ್ರವನ್ನು ಮಹಾನ್ ಎಂಬರ್ಥದಲ್ಲಿ "ಮಹಾರಾಷ್ಟ್ರ"ವೆಂದು ಕರೆದುಕೊಂಡಿದ್ದನು. ಕನ್ನಡದ ಪದವಾದ "ಮಹಾ ಹೋರಾಟಗಾರ" ಎಂಬ ಪದ ಅಪಭ್ರಂಶವಾಗಿ "ಮಹಾರಾಠ"ವಾಗಿ ಕ್ರಮೇಣ ಮರಾಠವಾಯಿತು. ಪುಲಿಕೇಶಿಯ ಆ ಕೆಚ್ಚು ಆತನ ನಂತರ ಕೂಡಾ ಮುಂದುವರಿದಿದ್ದರೆ ಇಂದು ಕರ್ನಾಟಕ ಕಾವೇರಿಯಿಂದ ಗೋದಾವರಿಯವರೆಗೆ ಇರುತ್ತಿದ್ದು, ಮರಾಠಿ ಎಂಬ ಭಾಷೆ ಇರುತ್ತಿರಲೇ ಇಲ್ಲವೇನೋ! ಮರಾಠಿ ಭಾಷೆ ಎಂಟನೇ ಶತಮಾನದಿಂದ ವೃದ್ಧಿಯಾಗುತ್ತಾ ಸಾಗಿಬಂದಿತು. ಇಂದಿನ ಪ್ರಸ್ತುತ ಭಾರತದಲ್ಲಿ ಕನ್ನಡ ಮಾತನಾಡುವ ಮಹಾರಾಷ್ಟ್ರದೊಂದಿಗೆ ಈಗಿನ ಕರ್ನಾಟಕವೂ ಸೇರಿ ಕನ್ನಡ ಮಾತನಾಡುವ ಎರಡು ರಾಜ್ಯಗಳಿರುತ್ತಿದ್ದವೆನಿಸುತ್ತದೆ. 

No comments: