ಜಾತ್ಯಾತೀತ ಅಮೆರಿಕಾದಲ್ಲಿ ಜಾತೀಯತೆ


ಜಾತಿ ಕೊಡುವಷ್ಟು ರೋಮಾಂಚನವನ್ನು ಯಾವ ನೀತಿಯೂ ಕೊಡುವುದಿಲ್ಲ! ರೈತ ಮುಖಂಡ ಪುಟ್ಟಣ್ಣಯ್ಯ

ರೈತ ಮುಖಂಡರಾದ ಪುಟ್ಟಣ್ಣಯ್ಯನವರ ಮೇಲಿನ ಮಾತು ಅತ್ಯಂತ ಮಾರ್ಮಿಕವಾಗಿದೆ.  ಈ ಜಾತೀಯತೆ ಎಂಬುದು ಭಾರತದಲ್ಲಷ್ಟೇ ಅಲ್ಲದೇ  ಭಾರತೀಯರಿರುವ ವಿಶ್ವದೆಲ್ಲೆಡೆ ಪಸರಿಸಿದೆ.  ’ಹಲವು ಕಾಲ ಹಂಸೆಯ ಸಂಗದಲ್ಲಿದ್ದರೇನು, ಬಕ ಶುಚಿಯಾಗಬಲ್ಲುದೇ? ಗಂಗಾನದಿಯಲ್ಲಿದ್ದರೇನು, ಪಾಷಾಣ ಮೃದುವಾಗಬಲ್ಲುದೇ? ಕಲ್ಪತರುವಿನ ಸನ್ನಿಧಿಯಲ್ಲಿದ್ದರೇನು, ಒಣ ಕೊರ್‍ಅಡು ಕೊನರಿ ಫಲವಾಗಬಲ್ಲುದೇ? ಕಾಶೀಕ್ಷೇತ್ರದಲ್ಲಿ ಒಂದು ಶುನಕವಿದ್ದರೇನು, ಅದರ ಹಾಲು ಪಂಚಾಮೃತಕ್ಕೆ ಸಲುವುದೇ? ತೀರ್ಥದಲೊಂದು ಗಾರ್ದಭನಿದ್ದರೇನು, ಕಾರಣಿಕನಾಗಬಲ್ಲುದೇ? ಖಂಡುಗ ಹಾಲೊಳಗೊಂದು ಇದ್ದಲಿಯಿದ್ದರೇನು, ಬಿಳುಹಾಗಬಲ್ಲುದೇ? ಇದ ಕಾರಣ ಕೂಡಲಸಂಗನ ಶರಣರ ಸನ್ನಿಧಿಯಲ್ಲಿ ಅಸಜ್ಜನನಿದ್ದರೇನು, ಸದ್ಭಕ್ತನಾಗಬಲ್ಲನೇ?’ ಎಂಬ ವಚನದಂತೆ ಅಮೇರಿಕಾದಲ್ಲಿದ್ದರೇನು ಭಾರತದಲ್ಲಿದ್ದರೇನು, ವಿದ್ಯೆಯಿದ್ದರೇನು ಅವಿದ್ಯೆಯಾದರೇನು, ಭಾರತೀಯ ಜಾತಿಮುಕ್ತನಾಗಬಲ್ಲನೇ?

ಸಾಮಾನ್ಯವಾಗಿ ಇಲ್ಲಿನ ಭಾರತೀಯರು ತಮ್ಮ ಅಲ್ಪಸಂಖ್ಯೆಯ ಕಾರಣದಿಂದಲೋ, ವಿಶಿಷ್ಟ ಸಂಸ್ಕೃತಿಯ ದೆಸೆಯಿಂದಲೋ ಅಷ್ಟಾಗಿ ಮುಖ್ಯವಾಹಿನಿಯಲ್ಲಿ ಬೆರೆಯದೇ ತಮ್ಮ ತಮ್ಮ ಭಾರತೀಯ ಮೂಲದ ಸ್ನೇಹಿತರುಗಳನ್ನೇ ಕಂಡುಕೊಂಡು ಸ್ನೇಹಸಂಬಂಧಗಳನ್ನು ಹೊಂದಿರುತ್ತಾರೆ. ಹಾಗೆಯೇ ನನಗೂ ಕೂಡ ಅನೇಕ ಭಾರತೀಯ ಮೂಲದ ಸ್ನೇಹಿತರಿದ್ದಾರೆ. ಅವರಲ್ಲಿ ಅನೇಕರು ಹೆಚ್ಚಿನದಾಗಿ ಆಂಧ್ರಪ್ರದೇಶದವರಾಗಿದ್ದಾರೆ. ಎಪ್ಪತ್ತರ ದಶಕ ಭಾರತೀಯ ಮೂಲದ ಡಾಕ್ಟರರುಗಳ ವಲಸೆಯ ಅಲೆಯಾದರೆ, ತೊಂಬತ್ತರ ದಶಕ ಐ.ಟಿ. ವಲಸಿಗರ ಅಲೆಯಾಯಿತು. ಈ ಅಲೆಗಳಲ್ಲಿ ಬಂದು ನೆಲೆಸಿರುವ ಭಾರತೀಯ ಮೂಲದವರು ತಮ್ಮ ತಮ್ಮ ಭಾಷೆಗಳ/ರಾಜ್ಯಗಳ ಹೆಸರಿನಲ್ಲಿ ಸಂಘ, ಸಂಸ್ಥೆಗಳನ್ನು ಸ್ಥಾಪಿಸಿಕೊಂಡು ತಮ್ಮ ಸಂಸ್ಕೃತಿಯ ನೆನಹನ್ನು ತಮ್ಮತಮ್ಮಲ್ಲೇ ಹಂಚಿಕೊಳ್ಳುತ್ತಾರೆ. ಹೀಗಿದ್ದ ಸಂಘ/ಸಂಸ್ಥೆಗಳಲ್ಲಿ ತಮ್ಮ ತಮ್ಮ ಪ್ರೋತ್ಸಾಹಕರ ಸಂಖ್ಯೆ ಏರಿದಂತೆ ನಿಧಾನವಾಗಿ ಭಾರತದ ಇತರೆ ಸಂಸ್ಕೃತಿಗಳಾದ ಜಾತೀಯತೆ, ಗುಂಪುಗಾರಿಕೆ, ರಾಜಕೀಯ, ಪಕ್ಷಭೇದಗಳು ಏರುತ್ತಿವೆ.

ವೈಯುಕ್ತಿಕವಾಗಿ ಇಂತಹ ಯಾವುದೇ ಸಂಘಗಳೊಂದಿಗೆ ಸಂಬಂಧವಿರದ ನನಗೆ ಪ್ರತ್ಯಕ್ಷ ಅನುಭವವಾಗಿರದಿದ್ದರೂ ಪರೋಕ್ಷವಾಗಿ ಆಗಿದೆ. ಕೆಲವು ವರ್ಷಗಳ ಹಿಂದೆ ಕೆಲಸದ ನಿಮಿತ್ತ ಪ್ರತಿ ವಾರವೂ ನ್ಯೂಯಾರ್ಕ್ ನಗರಕ್ಕೆ ಹೋಗುತ್ತಿದ್ದ ನಾನು, ಕೆಲವು ವರ್ಷಗಳ ಹಿಂದೆ ಒಂದು ಬೇಸಿಗೆಯಲ್ಲಿ ನನ್ನ ತೆಲುಗು ಮಿತ್ರರನ್ನು ಕಾಣುವ ಎಂದು ಒಂದು ವೀಕೆಂಡ್ ಅಲ್ಲಿಯೇ ಉಳಿದುಕೊಂಡೆನು. ಅವರೆಲ್ಲ ನನ್ನನ್ನು "ಈ ದಿನ ಆಂಧ್ರದ ಮಾಜಿ ಮುಖ್ಯಮಂತ್ರಿ ಚಂದ್ರಬಾಬುನಾಯ್ಡುಗೆ ಒಂದು ಸನ್ಮಾನವನ್ನು ಮಾಡುತ್ತಿದ್ದೇವೆ ನಡೆ ಹೋಗುವ" ಎಂದು ಕರೆದುಕೊಂಡು ಹೋದರು. ಎಲ್ಲಿ ನೋಡಿದರೂ ಹಳದಿ ವಸ್ತ್ರವನ್ನು ಹಣೆಗೆ ಕಟ್ಟಿಕೊಂಡಿದ್ದ ಜನರು ಕಾಣುತ್ತಿದ್ದರು. ಯಾವುದೋ ಒಂದು ಜಾತಿಯವರು ವೃತಗಳನ್ನೋ ಹಬ್ಬಗಳನ್ನೋ ಆಚರಿಸುವಾಗ ಹಳದಿ ಬಟ್ಟೆ ತೊಡುವುದನ್ನು ಬೆಂಗಳೂರಿನಲ್ಲಿ ನೋಡಿದ್ದೆನು. ಆ ರೀತಿಯ ವೃತವನ್ನು ಈ ಹಳದಿ ಪಟ್ಟಿ ಜನರು ಆಚರಿಸುತ್ತಿರಬಹುದೆಂದುಕೊಂಡು ಸುಮ್ಮನಾದರೂ ಅದು ನನ್ನನ್ನು ಭಾಧಿಸುತ್ತಿದ್ದಿತು. ಪಕ್ಕದಲ್ಲಿದ್ದ ನನ್ನ ಸ್ನೇಹಿತನನ್ನು ಮೆಲ್ಲಗೆ ಕೇಳಿದಾಗ ಅದು ತೆಲುಗುದೇಶಂ ಪಕ್ಷದ ಬಣ್ಣವೆಂದು ಹೇಳಿದನು! ನಂತರ ತಿಳಿದುದುದೇನೆಂದರೆ ಅದೊಂದು ತೆಲುಗು ಕಂ ದೇಶಂ ಸಭೆಯೆಂದೂ, ಚಂದ್ರಬಾಬುನಾಯ್ಡು ತಮ್ಮ ಪಕ್ಷಕ್ಕೆ ಅಮೇರಿಬೆಂಬಲಿಗರಿಂದ ಹಣ ಶೇಖರಿಸಲು ಒಂದು ತಿಂಗಳ "ಫಂಡ್ ರೈಸಿಂಗ್" ಕ್ಯಾಂಪೇನ್ ಗೆ ಬಂದಿರುವುದಾಗಿಯೂ, ಮತ್ತವರಿಗೆ ಇಲ್ಲಿ ತಿರುಗಲು ಒಬ್ಬ ಅಭಿಮಾನಿ ಚಾರ್ಟರ್ಡ್ ಫ್ಲೈಟ್ ಅನ್ನು ಇಪ್ಪತ್ತು ದಿನಗಳಿಗೆ ಕೊಡಿಸಿರುವುದಾಗಿಯೂ ಮತ್ತು ಈ ರೀತಿಯ ಸಾಕಷ್ಟು ಅಭಿಮಾನಿಗಳು ಟಿಕೇಟ್ ಆಕಾಂಕ್ಷಿಗಳಾಗಿ, ರಾಜ್ಯಪ್ರಶಸ್ತಿ ಆಕಾಂಕ್ಷಿಗಳಾಗಿ, ಇಲ್ಲವೇ ಮತ್ಯಾವುದೋ ಉದ್ದೇಶದ ಆಕಾಂಕ್ಷಿಗಳಾಗಿ ಸಾಕಷ್ಟು ಬೆಂಬಲವನ್ನು ನಾಯ್ಡುಗಳಿಗೆ ತೋರುತ್ತಾರಂತೆ! ಅದಕ್ಕೆ ಪೂರಕವಾಗಿ ಆ ಸಭೆಯಲ್ಲಿ ಒಬ್ಬ ಉದ್ಯಮಿ, ಬಹುಶಃ ಟಿಕೆಟ್ ಆಕಾಂಕ್ಷಿ ಇರಬಹುದೇನೋ, ಒಂದು ಚಿನ್ನದ ಗದೆ ಮತ್ತು ಕಿರೀಟವನ್ನು ನಾಯ್ಡುಗೆ ಅರ್ಪಿಸಿದನು.

ನಾಯ್ಡುರವರಿಗೆ ಏನೆನ್ನಿಸಿತೋ ಕೂಡಲೇ ತಮ್ಮ ಪಕ್ಕದಲ್ಲಿ ಕೂತಿದ್ದ ಎಡಿಸನ್ ಸಿಟಿ ಮೇಯರ್ ಅವರಿಗೆ ಆ ಕಿರೀಟವನ್ನು ತೊಡಿಸಿ, ಗದೆಯನ್ನು ಕೂಡ ಅವರ ಹೆಗಲಿಗೇರಿಸಿದರು! ಇದರಿಂದ ಆನಂದಗೊಂಡ ಎಡಿಸನ್ ಮೇಯರ್ ಆ ಕೊಡುಗೆಗಳನ್ನು ತನ್ನ ಮನೆಗೆ ಹೊತ್ತೊಯ್ದರೆ, ಕೊಟ್ಟ ಉದ್ಯಮಿ ಪೆಚ್ಚಾಗಿದ್ದ! ಅಂದು ನನಗೆ ಅಪ್ಪಟ ಭಾರತದ ಒಂದು ರಾಜಕೀಯ ಸಭೆಯ ಅನುಭವ ಬಹುಕಾಲದ ನಂತರ ಆಗಿತ್ತು. ಮರುದಿನ ಮೋಟಾರ್ ಸೈಕಲ್ ರ್‍ಯಾಲಿ ಕೂಡ ಇರುವುದೆಂದೂ, ರ್‍ಯಾಲಿಯ ನಂತರ ಉಚಿತ "ವೈನ್ ಅಂಡ್ ಡೈನ್" ಪಾರ್ಟಿ ಇರುವುದೆಂದನು. ಸಾಮಾನ್ಯವಾಗಿ ಮೋಟಾರ್ ಸೈಕಲ್ಲುಗಳನ್ನು ಹೊಂದಿರದ ಇಲ್ಲಿನ ಭಾರತೀಯರಲ್ಲಿ ಅದೆಷ್ಟು ಮಂದಿ ಆ ರ್‍ಯಾಲಿಗೆ ಬರುವರೋ ಎಂದು ನಾನು ಸಂದೇಹವನ್ನು ವ್ಯಕ್ತಪಡಿಸಿದ್ದಕ್ಕೆ, ನನ್ನ ಮಿತ್ರನು ರ್‍ಯಾಲಿಗಾಗಿಯೇ ಇಲ್ಲಿನ ಮೋಟಾರ್ ಸೈಕಲ್ ಕ್ಲಬ್ಬುಗಳನ್ನು ಬುಕ್ ಮಾಡಿಕೊಂಡಿದ್ದು, ಈ ರ್‍ಯಾಲಿಗೆ ಬರುವವರೆಲ್ಲಾ ಬಿಳಿ/ಕರಿಯ ಅಮೇರಿಕನ್ನರೆಂದನು! ಒಂದು ರೀತಿ ಭಾರತೀಯ ಸಿನೆಮಾಗಳಲ್ಲಿ ಬಿಳಿ ಸಹನಟ/ನಟಿಯರ ನೃತ್ಯಗಳಿರುವಂತೆ! ಭಾರತದ ಚುನಾವಣಾ ಸಮಯದಲ್ಲಿ ಹೆಂಡ, ಬಿರ್ಯಾನಿ ಹಂಚುವುದರ ಸುಧಾರಿತ ಕ್ರಮದಂತೆ, ಅಂದಿನ ಸಭೆಯಲ್ಲಿ ಕೂಡಾ ಉಚಿತ ವೈನ್ ಇದ್ದಿತು!

ಮತ್ತೊಮ್ಮೆ ಮತ್ತದೇ ಸ್ನೇಹಿತರನ್ನು ಕಾಣಲು ಮತ್ತೆ ನ್ಯೂಜೆರ್ಸಿಗೆ ಹೋಗಿದ್ದೆನು. ಈ ಬಾರಿ ತೆಲುಗು ನಟ ಬಾಲಕೃಷ್ಣನ ಯಾವುದೋ ಸಿನಿಮಾ ಇಲ್ಲಿಯೂ ಬಿಡುಗಡೆಯಾಗಿ ಅದರ ಪ್ರಚಾರಕ್ಕೆ ಖುದ್ದು ಬಾಲಕೃಷ್ಣ ಬಂದಿದ್ದನು. ಅವನ ಸಿನಿಮಾ ಬಿಡುಗಡೆಯ ದಿನ ಮತ್ತದೇ ಹಳದಿ ಪಟ್ಟಿಯ ಅಭಿಮಾನಿಗಳು ಹಳದಿ ಬಾವುಟಗಳನ್ನ್ಹಿಡಿದು ಬೆಂಬಲವನ್ನು ವ್ಯಕ್ತಪಡಿಸಿದರೆ, ಚಿರಂಜೀವಿ ಅಭಿಮಾನಿಗಳು ಕಪ್ಪು ಪಟ್ಟಿ, ಬಾವುಟಗಳನ್ನ್ಹಿಡಿದು ವಿರೋಧವನ್ನು ತೋರಿಸಿದ್ದರು. ವಿಚಾರಿಸಲಾಗಿ ಕಮ್ಮ ಜಾತಿಯ ಬಾಲಕೃಷ್ಣನನ್ನು ಕಾಪು ಜಾತಿಯವರು ವಿರೋಧಿಸುತ್ತಿದ್ದಾರೆ ಎಂದು ತಿಳಿಯಿತು. ಅದಕ್ಕೂ ಮುನ್ನ ಚಿರಂಜೀವಿಯ ಒಂದು ಚಿತ್ರಕ್ಕೂ ಇದೇ ಮರ್ಯಾದೆ ಸಿಕ್ಕಿತ್ತಂತೆ!

ಇಲ್ಲಿನ ತೆಲುಗು ಸಂಘಗಳು ತಾನಾ, ಬಾನಾ ಗಾನಾಗಳೆಂದು ಕಮ್ಮ, ರೆಡ್ಡಿ, ಕಾಪು ಜಾತಿಗಳಿಗನುಗುಣವಾಗಿ ಒಂದೊಂದು ತಲೆಯೆತ್ತಿವೆ!

ಹಾಗೆಯೇ ಆಂಧ್ರದಲ್ಲಿ ಚುನಾವಣೆಗಳಾದರೆ ಇಲ್ಲಿನ ತೆಲುಗರ ಬಿ.ಪಿ ಏರುತ್ತದೆ. ಆ ಬಿ.ಪಿ.ಯನ್ನು ಇಳಿಸಲು ಹಳದಿ ಪಟ್ಟಿ ಕಟ್ಟಿಕೊಂಡು ಕ್ಯಾಲಿಫೋರ್ನಿಯಾದ ಉದ್ದಗಲಕ್ಕೂ ಸೈಕಲ್ ಹೊಡೆಯುತ್ತಾರೆ!

ಇದು ಮೇಲ್ನೋಟಕ್ಕೆ ಸಿನಿಮಾ ಅಭಿಮಾನಿಗಳಂತೆ ಕಂಡರೂ ಇಲ್ಲಿ ಜಾತಿಗಳೇ ಪ್ರಮುಖವಾಗಿವೆ. ಕಮ್ಮ ಜಾತಿಯ ಪ್ರಾಬಲ್ಯವನ್ನು ಮುರಿಯಲು ಚಿರಂಜೀವಿ ಕಾಪು ಜನಗಳನ್ನು ಬೆಂಬಲಿಸಿ ರಾಜಕೀಯ ಎಂಟ್ರಿ ಆಗುತ್ತಿದ್ದಂತೆಯೇ ಈ ಜಾತೀಯತೆಯ ವಿಷ ಇಲ್ಲಿನ ತೆಲುಗು ಮೂಲದ ಭಾರತೀಯರನ್ನು ಬಹುವಾಗಿ ಆವರಿಸಿಕೊಂಡು ಬಿಟ್ಟಿತ್ತು. ಇದು ಕೇವಲ ತೆಲುಗರ ಕುರಿತಾಗಿ ಅಷ್ಟೇ ಅಲ್ಲ, ಉತ್ತರ ಭಾರತೀಯರಲ್ಲಿ ಇದು ಇನ್ನೂ ಭಯಂಕರವಾಗಿದೆ. ಅಮೇರಿಕಾದಲ್ಲಿದ್ದರೂ ಅವರು ತಮ್ಮ ರಾಜ್ಯದ ಅನ್ಯಜಾತಿಯವನಲ್ಲಿ ಸ್ನೇಹವನ್ನೂ ಮಾಡುವುದಿಲ್ಲ! ಬಿಹಾರೀ ಬ್ರಾಹ್ಮಣರು ಬನಿಯಾ ಜನಗಳನ್ನು ಸ್ವಲ್ಪ ದೂರವೇ ಇಡುತ್ತಾರೆ. ನನ್ನ ಆಪ್ತ ಬಿಹಾರೀ ಸ್ನೇಹಿತನ ಮನೆಗೆ ಅವರ ಸಂಬಂಧಿ ಶತ್ರುಘ್ನ ಸಿನ್ಹಾರವರು ಬಂದಾಗ ನಡೆದ ಗುಂಡಿನ ಪಾರ್ಟಿಯಲ್ಲಿ ಈ ವಿಷಯ ನನಗೆ ತಿಳಿಯಿತು. ಬಿಹಾರಿ ಸಂಘಗಳಲ್ಲಿ ಇದು ಇನ್ನೂ ವಿಕೋಪಕ್ಕೆ ಹೋಗುತ್ತದೆಂದು ನನ್ನ ಸ್ನೇಹಿತನು ತಿಳಿಸಿದನು.  ಅದೇ ರೀತಿ ಪಂಜಾಬಿ ಮೂಲದ ಸಿಖ್ಖರ ಗುರುದ್ವಾರಗಳಲ್ಲಿ ಒಳಪಂಗಡಗಳ ನಡುವೆ ಹೊಡೆದಾಟಗಳೇ ನಡೆದಿವೆ.

ಇದೆಲ್ಲವನ್ನು ಅರಿಯದೇ ನೋಡುವ ಇತರೇ ಅಮೇರಿಕನ್ನರು ಈ ಭಾರತೀಯರುಗಳೇ ವಿಚಿತ್ರ ಎಂದು ಮೂಗುಮುರಿಯುತ್ತಾರೆ! ಅದಕ್ಕೆ ಇರಬೇಕು, ಅನೇಕ ವಿದೇಶೀಯರು ಭಾರತೀಯರೆಂದರೆ ಪುಂಗಿ ನುಡಿಸಿ ಹಾವಾಡಿಸುವವರು, ಕೋತಿಗಳನ್ನು ಕುಣಿಸುವವರು, ಇಲಿ ಹಿಡಿದು ತಿನ್ನುವವರು, ಕತ್ತೆ, ನಾಯಿಗಳೊಂದಿಗೆ ಮುದುವೆಯಾಗುವವರು (ಮಳೆಯಾಗಲೆಂದೋ, ಪಾಪ ಪರಿಹಾರದ ನಿಮಿತ್ತವಾಗಿಯೋ ಇರಬಹುದು) ಇನ್ನೂ ಏನೇನೋ ವಿಚಿತ್ರ ಭಾರತೀಯ ಸುದ್ದಿಗಳನ್ನು ಕೇಳಿ, ಅದಕ್ಕೆ ತದ್ವಿರುದ್ಧವಾಗಿ ಇಲ್ಲಿನ ಭಾರತೀಯರು ಶುದ್ಧ ಸಸ್ಯಾಹಾರಿಗಳಾಗಿಯೋ, ಹಂದಿ/ದನವನ್ನು ತಿನ್ನದೆಯೋ, ಕತ್ತೆ ನಾಯಿಗಳನ್ನು ಬಿಡಿ, ಇಲ್ಲಿನ ಬಿಳಿ ಹುಡುಗಿಯರನ್ನೂ ಪರಿಗಣಿಸದೇ ಭಾರತೀಯರನ್ನೇ ಮದುವೆಯಾಗುವ ಭಾರತೀಯ ಸಂಸ್ಕೃತಿಯ ಇನ್ನೊಂದು ಬಗೆಯನ್ನು ನೋಡಿ, "ಇಂಡಿಯನ್ಸ್ ಆರ್ ಕ್ರೇಜಿ" ಎನ್ನುತ್ತಾರೆ.

ಈ ಜಾತಿಯ ವಿಷಗಾಳಿ ಅಮೇರಿಕಾದ ಕನ್ನಡ ಸಂಘಗಳಲ್ಲಿ ಎಷ್ಟರಮಟ್ಟಿಗಿದೆಯೋ ಗೊತ್ತಿಲ್ಲ. ನನ್ನ ಹಲವು ಕನ್ನಡ ಸ್ನೇಹಿತರು ಹೇಳುವುದೇನೆಂದರೆ ಅಲ್ಲಿಯೂ ಕೂಡ ಇದು ಸಂಖ್ಯೆಯೇರಿದಂತೆ ನಿಧಾನವಾಗಿ ಕಾಣಿಸುತ್ತಿದೆಯೆಂದು. ಮೊದಲೆಲ್ಲಾ ಇಲ್ಲಿನ ಕನ್ನಡ ಸಂಘಗಳ ಸಭೆಗಳಲ್ಲಿ, ವನಭೋಜನಗಳಲ್ಲಿ ಕೇವಲ ಸಸ್ಯಹಾರೀ ಊಟವಿರುತ್ತಿದ್ದರೆ, ಕೆಲವರು ಪ್ರತಿಭಟಿಸಿ ಭೋಜನಗಳಲ್ಲಿ ಮಾಂಸಹಾರವೂ, ವನಭೋಜನಗಳಲ್ಲಿ ಸುಟ್ಟ ಕೋಳಿಗಳೂ (ಗ್ರಿಲ್ಡ್ ಚಿಕನ್) ಸಿಗುವಂತೆ ಮಾಡಿದ್ದಾರೆಂದೂ, ಸದ್ಯಕ್ಕೆ ಈ ವಿವಾದವನ್ನು ಸಸ್ಯಾಹಾರ-ಮಾಂಸಹಾರದವರೆಗೆ ತಂದಿದ್ದಾರೆ.

ಬಹುವರ್ಷಗಳಿಂದಲೇ ಇಲ್ಲಿ ಸಾಕಷ್ಟು ಜಾತಿ ಕೂಟಗಳಿವೆ.  ಬಹುಶಃ  ತಮ್ಮ ಮಕ್ಕಳ ವಧುವರಾನ್ವೇಷಣೆಗೆ ಇವುಗಳನ್ನು ಹುಟ್ಟುಹಾಕಿದರೋ ಏನೋ ತಿಳಿಯದು ಒಟ್ಟಾರೆ ಜಾತಿಕೂಟಗಳು ಇಲ್ಲಿನ ಕನ್ನಡ ಅನಿವಾಸಿಗಳಲ್ಲಿ ಅದ್ಯಾವಾಗಲೋ ಬಂದಾಗಿದೆ. ವೀರಶೈವರೆಲ್ಲಾ ಉತ್ತರ ಅಮೇರಿಕಾ ವೀರಶೈವ ಸಂಘವನ್ನು ಎಪ್ಪಂತೆಂಟರಲ್ಲೇ ಸ್ಥಾಪಿಸಿಕೊಂಡಿದ್ದರೆ, ಅಮೇರಿಕಾ ಒಕ್ಕಲಿಗರ ಪರಿಷತ್ ತೊಂಬತ್ತೊಂದರಲ್ಲಿ ಅಸ್ತಿತ್ವಕ್ಕೆ ಬಂದಿದೆ. ಹಾಗೆಯೇ ಹವ್ಯಕರ ಸಂಘ, ಮಾಧ್ವರ ಸಂಘ, ಕೊಡವ ಸಂಘ, ಬಂಟರ ಸಂಘ, ಗೌಡ ಸಾರಸ್ವತ ಸಂಘ,  .................ಇತ್ಯಾದಿ, ಇತ್ಯಾದಿಗಳೂ ಇವೆ.

ವೀರಶೈವವೋ ಲಿಂಗಾಯತವೋ ಎಂಬ ಜಿಜ್ಞಾಸೆಯನ್ನು ಬದಿಗಿಟ್ಟು ಇಲ್ಲಿನ ವೀರಶೈವ/ಲಿಂಗಾಯತರು ತಮ್ಮ ಉತ್ತರ ಅಮೇರಿಕಾ ವೀರಶೈವ ಸಂಘವನ್ನು ಧಾರ್ಮಿಕ ಆಚರಣೆ, ಸಂಸ್ಕೃತಿ, ವಚನ ಪಾಠಗಳಿಗೆ ಸೀಮಿತಗೊಳಿಸಿದ್ದರೆ, ಒಕ್ಕಲಿಗ ಪರಿಷತ್ ನೇರವಾಗಿ ’ಅಕ್ಕ’ ರಾಜಕೀಯದಲ್ಲಿ ಸಕ್ರಿಯವಾಗಿದೆ.  ಈ ಜಾತಿ ರಾಜಕಾರಣದಿಂದಾಗಿಯೇ ಅಕ್ಕದಿಂದ ಒಂದು ಗುಂಪು ಬೇರೆಯಾಗಿ ನಾವಿಕ ಎಂಬ ಇನ್ನೊಂದು ಸಂಘವನ್ನು ಸ್ಥಾಪಿಸಿಕೊಂಡಿದೆ.  ಅಮೆರಿಕದಾದ್ಯಂತವಿರುವ ಕನ್ನಡ ಸಂಘಗಳು ತಮ್ಮ ತಮ್ಮ ಸಂಖ್ಯೆಗಳಿಗನುಗುಣವಾಗಿ ಅಕ್ಕ ಮಾತು ನಾವಿಕದೊಂದಿಗೆ ಗುರುತಿಸಿಕೊಂಡಿವೆ. ಇನ್ನಿತರೆ ಕನ್ನಡ ಮೂಲದ ಜಾತಿ ಸಂಘಗಳ ಬಗ್ಗೆ ನನಗೆ ಅಷ್ಟಾಗಿ ಪರಿಚಯವಿಲ್ಲ, ಹಾಗಾಗಿ ಅವುಗಳ ಬಗೆಗೆ ಏನನ್ನೂ ಹೇಳಲಾರೆ.

ಇರಲಿ, ಸಾಮಾನ್ಯವಾಗಿ ಉನ್ನತ ಶಿಕ್ಷಣವನ್ನು ಪಡೆದು, ಉತ್ತಮ ಬುದ್ದಿಮತ್ತೆಯನ್ನು ಹೊಂದಿ, ಅಮೇರಿಕಾ ಸೇರಿ, ಇಲ್ಲಿನ ಪ್ರಜೆಗಳಾದರೂ ತಮ್ಮ ಸುಪ್ತ ಜಾತೀಯತೆಯನ್ನು ತೊರೆಯಲಾಗದಷ್ಟು ಜಾತಿಗಳು ನಮ್ಮನ್ನು ಆವರಿಸಿಕೊಂಡಿವೆ. ಭಾರತದಲ್ಲಿಯೂ ಕೂಡ ವಿದ್ಯಾವಂತರಾದಷ್ಟು ಜಾತಿಜಾಗೃತರಾಗುತ್ತಾರೆಯೇ ಹೊರತು ಜಾತಿಪರಿಧಿಯ ಹೊರಕ್ಕೆ ಬರುವವರು ಕಡಿಮೆಯೇ! ಇದು ಸ್ವತಂತ್ರ್ಯ ಭಾರತದ ಸಾಮಾಜಿಕತೆಯ ವಿಕಾಸವೋ ವಿಕಾರವೋ, ಅಥವಾ ಭಾರತ ಸ್ವಾತಂತ್ರ್ಯಾ ನಂತರದ ಶಿಕ್ಷಣ ಕ್ರಾಂತಿಯ ಪರಿಣಾಮವೋ ಅರಿಯೇ! ಒಟ್ಟಾರೆ ಭಾರತ ಎತ್ತಲೋ ಪ್ರಗತಿಸುತ್ತಿದೆ.

ಇರಲಿ, ಆದರೆ ಇಲ್ಲಿನ ಬಹುತೇಕ ಭಾರತೀಯ ಮೂಲದ ಮಕ್ಕಳಿಗೆ ಮಾತ್ರ ಇಂಗ್ಲಿಷ್ ಬಿಟ್ಟರೆ ತಮ್ಮ ಮನೆಮಾತಾಗಲೀ ಇನ್ಯಾವ ಭಾಷೆಯಾಗಲಿ ಕಲಿತರೂ ಮಾತನಾಡಲಾಗದಷ್ಟು ಪರಿಣಿತಿ ಬರುವುದೇ ಇಲ್ಲ. ಇದು ಅಮೇರಿಕಾದ ಗಾಳಿ, ನೀರಿನ ಪರಿಣಾಮವೆಂದೇ ನನಗನಿಸುತ್ತದೆ. ಭಾಷಾ ಪಂಡಿತ ಪೋಷಕರಿದ್ದರೂ ಅಷ್ಟೇ, ಅನ್ಯಭಾಷಾ ತರಗತಿಗಳಿಗೆ ಕಳುಹಿಸಿದರೂ ಅಷ್ಟೇ. ಈ ಮಕ್ಕಳು ತಮ್ಮ ಮಾತೃಭಾಷೆಯನ್ನಷ್ಟೇ ಮಾತನಾಡುವವರಾಗಿದ್ದರೂ ಶಾಲೆಗೆ ಸೇರಿದೊಡನೆ ತಮ್ಮ ಮಾತೃಭಾಷೆಯನ್ನು ಕೆಲವೇ ತಿಂಗಳುಗಳಲ್ಲಿ ಮರೆತುಬಿಡುತ್ತಾರೆ. ನಂತರ ಅದು ಅಳಿಸಿಯೇ ಹೊಗುತ್ತದೆ. ಇವರು ತಮ್ಮ ಮಾತೃಭಾಷೆಯಲ್ಲಿ ಓದಲು/ಬರೆಯಲು ಕಲಿತರೂ ಅದು ಕೇವಲ ಓದಲು ಮತ್ತು ಬರೆಯುವಲ್ಲಿಗೆ ಸೀಮಿತವಾಗುತ್ತದಲ್ಲದೇ, ಅದರ ಅರ್ಥವೇ ಇವರಿಗೆ ಗೊತ್ತಾಗುವುದಿಲ್ಲ. ಅವರ ಮನೆಗಳಲ್ಲಿ ಇಂಗ್ಲಿಷ್ ಮಾತನಾಡದೇ ಅವರವರ ಮನೆಮಾತಿನಲ್ಲಿಯೇ ಅವರ ಪೋಷಕರು ಮಾತನಾಡುತ್ತಿದ್ದರೂ ಕೂಡ ಅವರುಗಳ ಮಾತೃಭಾಷೆ ಈ ಮಕ್ಕಳಿಗೆ ಅಷ್ಟಕ್ಕಷ್ಟೇ. ಇದು ಏಕೆ ಹೀಗೆಂದು ನನಗೆ ಇದುವರೆಗೂ ಅರ್ಥವಾಗದೇ ಒಂದು ರೀತಿಯ ಚಿದಂಬರ ರಹಸ್ಯವೇ ಆಗಿದೆ.

ಈ ಮಾತೃಭಾಷೆ ಬಾರದು ಎಂಬ ಕೊರತೆಯೊಂದನ್ನು ಬಿಟ್ಟರೆ, ಈ ಮಕ್ಕಳು ಭಾರತೀಯರು ಹೆಮ್ಮೆ ಪಡಬೇಕಾದಂತಹ ಪೀಳಿಗೆ ಎಂದೇ ಹೇಳಬಹುದು. ಇಲ್ಲಿನ ಪರಿಸರ, ಶಿಕ್ಷಣ, ಮೌಲ್ಯಗಳನ್ನು (ಭಾರತದಲ್ಲಿ ಈ ಬಗ್ಗೆ ಸಾಕಷ್ಟು ತಪ್ಪು ಕಲ್ಪನೆಯ ಅಪಪ್ರಚಾರವೇ ಇದ್ದು, ಇಲ್ಲಿನ ಅಸಲೀ ವಿಷಯಗಳ ನೈಜ ತಿಳುವಳಿಕೆ ಅಷ್ಟಾಗಿ ಇಲ್ಲ. ಇದರ ಬಗ್ಗೆ ಮತ್ತೊಮ್ಮೆ ಬರೆಯುವೆ.) ನೋಡುತ್ತ, ಕೇಳುತ್ತ ಬೆಳೆಯುವ ಈ ಮಕ್ಕಳು ಇದ್ದುದರಲ್ಲಿ ಅತ್ಯಂತ ಬುದ್ದಿವಂತರೂ, ವಿವೇಚನೆಯಿರುವವರೂ ಮತ್ತು ಪ್ರಾಮಾಣಿಕರೂ ಆಗಿರುತ್ತಾರೆ. ಇವರ ಪೋಷಕರು ಏನೇ ಸಂಘ/ಸಮ್ಮೇಳನಗಳನ್ನು ಮಾಡಿ, ಸಂಸ್ಕೃತಿಯ ನೆಪವಾಗಿ ತಮ್ಮ ಜಾತಿಯ ಅರಿವು ಮೂಡಿಸುವ ಪ್ರಯತ್ನಗಳು ಎಳ್ಳಷ್ಟೂ ಫಲಪ್ರದವಾಗಿರುವುದನ್ನು ನಾನಂತೂ ನೋಡಿಲ್ಲ. ನನ್ನ ಕಂಪೆನಿ ಪರವಾಗಿ ಸಾಕಷ್ಟು ಕ್ಯಾಂಪಸ್ ಇಂಟರ್ವ್ಯೂಗಳನ್ನು ಮಾಡಿ, ಈ ರೀತಿಯ ಭಾರತೀಯ ಮೂಲದ ಎರಡನೇ ಪೀಳಿಗೆಯ ಅನೇಕರನ್ನು ನಮ್ಮ ಕಂಪೆನಿಗೆ ಸೇರಿಸಿಕೊಂಡಿದ್ದೇನೆ. ಹಾಗೆಯೇ ಅವರೊಂದಿಗೆ ಕೆಲಸವನ್ನೂ ಮಾಡಿದ್ದೇನೆ. ಆ ಒಂದು ಅನುಭವವಿರುವುದರಿಂದ ಮೇಲಿನ ಮಾತುಗಳನ್ನು ನಾನು ಧೃಢವಾಗಿ ಹೇಳಬಲ್ಲೆ. ಅಷ್ಟೇ ಅಲ್ಲ, ಇದೇ ರೀತಿ ಭಾರತದಲ್ಲಿಯೂ ನಮ್ಮ ಯುವಜನತೆಗೆ ಜಾತಿ ಪರಿಧಿಯ ಪರಿಮಿತಿಗೆ ಸಿಕ್ಕದಂತಹ ಮುಕ್ತ ಪರಿಸರವಿರುವಂತಿದ್ದರೆ? ಎಂದು ಇವರನ್ನು ನೋಡಿದಾಗೆಲ್ಲ ಅಂದುಕೊಳ್ಳುತ್ತೇನೆ.

ಇರಲಿ, ಭಾರತದಲ್ಲಿಯೇ ಹದಿಹರೆಯದವರು ಏನೇನೋ ಸಮಸ್ಯೆಗಳಿಗೆ ಸಿಲುಕುತ್ತಿರುವಾಗ ಅಮೇರಿಕಾದ ಸ್ವಚ್ಛಂದ ವಾತಾವರಣದಲ್ಲಿ ಈ ಯುವಕರು ಹದಿಹರೆಯದ ಸಮಸ್ಯೆಗಳಿಗೆ ಸಿಲುಕದೇ ಇರಲು ಹೇಗೆ ಸಾಧ್ಯ? ಇಲ್ಲದ್ದನ್ನೆಲ್ಲಾ ಹೇಳಬೇಡಿ ಎನ್ನುವಿರಾ? ನಾನು ಗಮನಿಸಿದಂತೆ, ಈ ಸಮಸ್ಯೆ ಭಾರತೀಯ ಮೂಲದವರನ್ನು ಅಷ್ಟಾಗಿ ಕಾಡುತ್ತಿಲ್ಲವೆಂದೇ ಅನಿಸುತ್ತದೆ. ಈ ನವಪೀಳಿಗೆ ತಮ್ಮ ಅಲ್ಪಸಂಖ್ಯಾತತೆಯ ಕಾರಣದಿಂದಲೋ ಏನೋ ಒಂದು ರೀತಿಯಲ್ಲಿ ಸದಾ ಜಾಗೃತರಾಗಿರುತ್ತಾರೆ.  ಹಾಗೆಯೇ ಯಾರಾದರೂ ತಕ್ಷಣಕ್ಕೆ ಭಾರತೀಯರೆಂದು ಗುರುತಿಸಬಹುದಾದ ಚಹರೆಯಿಂದಾಗಿ ಈ ರೀತಿಯ ಜಾಗೃತಿ ಬೆಳೆದುಬಂದಿದೆಯೆಂದೇ ನನಗನಿಸುತ್ತದೆ! ಈ ಜಾಗೃತಿಯ ಪರಿಣಾಮದಿಂದಲೇ ಏನೋ ಅಷ್ಟಾಗಿ ಯುವ ಸಮಸ್ಯೆಗಳಿಗೆ ಸಿಲುಕದೇ ತಮ್ಮ ಹದಿಹರೆಯದ ಸಮಸ್ಯೆಗಳನ್ನು ಬುದ್ಧಿವಂತಿಕೆಯಿಂದ ನಿಭಾಯಿಸುತ್ತ ಬಹುಪಾಲು ಯುವಜನತೆ ಯಶಸ್ವಿಯಾಗಿದ್ದಾರೆ ಮತ್ತು ಆಗುತ್ತಿದ್ದಾರೆ ಎಂದೇ ಅನಿಸುತ್ತದೆ.

’ಪ್ರತ್ಯಕ್ಷವಾಗಿ ನೋಡಿದ್ದರೂ ಪರಾಮರ್ಶಿಸಿ ನೋಡು’ ಎಂಬುದನ್ನು ಚೆನ್ನಾಗಿ ಅರ್ಥೈಸಿಕೊಂಡಿರುವ ಈ ಮಕ್ಕಳು ಯಾವುದೇ ತತ್ವವನ್ನೋ, ವಿಚಾರವನ್ನೋ ಹೇಳಿದರೆ ಅದಕ್ಕೆ ನೂರೆಂಟು ಪ್ರಶ್ನೆಗಳನ್ನು ಹಾಕಿ, ಅರಿತು ನಂತರವೇ ಒಪ್ಪಿಕೊಳ್ಳುವಂತಹ ಶಾಲಾ ವಾತಾವರಣದಲ್ಲಿ ಬೆಳೆದಿರುವುದರಿಂದಲೂ ಮತ್ತು ಅವರುಗಳ ಪೋಷಕರು ತಮ್ಮ ಜಾತಿ/ಧರ್ಮಗಳ ಆಚರಣೆಗಳ ಬಗ್ಗೆ ತಿಳಿಸಿ, ಅವರುಗಳ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ಕೊಡುವ ಶಕ್ತಿಯನ್ನು ಹೊಂದಿರದ ಕಾರಣದಿಂದಲೂ, ಮತ್ತು ಪೋಷಕರು ಭಾರತದಲ್ಲಿಯ ಗದರಿಸುವಿಕೆಯ ರೀತಿ "ತಲೆಪ್ರತಿಷ್ಟೆ ಮಾಡಬೇಡ ಹೇಳಿದ್ದಷ್ಟನ್ನು ಮಾಡು" ಎಂದು ಇಲ್ಲಿನ ಪರಿಸರದಲ್ಲಿ ಹೇಳಲಾಗದ ಪರಿಣಾಮವಾಗಿಯೂ, ಈ ಯುವಶಕ್ತಿ ಜಾತಿ, ಅಂಧಶ್ರದ್ಧೆಗಳ ಬಗ್ಗೆ ಅಷ್ಟೊಂದು ಮಾಹಿತಿಯನ್ನು ಪಡೆದಿರಲಾರರು ಎಂದುಕೊಂಡಿದ್ದೇನೆ.

ಒಟ್ಟಾರೆ ಈ ಭಾರತೀಯ ಅಮೇರಿಕನ್ ಯುವ ಪೀಳಿಗೆ, "ಯಾತರ ಹೂವೇನು? ನಾತವಿದ್ದರೆ ಸಾಕು, ಜಾತಿಯಲಿ ಜಾತಿಯೆನಬೇಡ ಶಿವನೊಲಿದಾತನೇ ಜಾತ ಸರ್ವಜ್ಞ" ಎಂಬಂತೆ ಜಾತಿಪರಿಧಿಯ ಪರಿವೆ ಇಲ್ಲದೆ ಒಟ್ಟಿನಲ್ಲಿ ’ಭಾರತೀಯ ಅಮೇರಿಕನ್’ ಆಗಿದ್ದಾರೆ. ಇದೇ ರೀತಿ ಭಾರತದ ನಮ್ಮ ಸಮಾಜದಲ್ಲಿಯೂ "ಎಲುವಿನಾ ಕಾಯಕ್ಕೆ ಸಲೆ ಚರ್ಮದ ಹೊದಿಕೆ ಮಲಮೂತ್ರ ಕ್ರಿಮಿಗಳೊಳಗಿರ್ದ ದೇಹಕ್ಕೆ ಕುಲವಾವುದಯ್ಯ ಸರ್ವಜ್ಞ" ಎಂಬಂತಹ ಸ್ವಚ್ಛ ವಾತಾವರಣವಿದ್ದಿದ್ದರೆ ಭಾರತದಲ್ಲಿ ಇಂದು ’ಅಮೇರಿಕನ್ ಭಾರತೀಯ’ರಿರುತ್ತಿದ್ದರೋ ಏನೋ!

 http://epaper.udayakala.news/


No comments: