ನಿರಂಜನವಂಶ ರತ್ನಾಕರ!

 ರಾವ್ ಸಾಹೇಬ ಫಕೀರಪ್ಪ ಗುರುಬಸಪ್ಪ ಹಳಕಟ್ಟಿಯವರು ಶೂನ್ಯಪೀಠವು ಸಾಗಿಬಂದ ಇತಿಹಾಸವನ್ನು ವರ್ಣಿಸುವ "ನಿರಂಜನವಂಶ ರತ್ನಾಕರ" ಎಂಬ ಬಹುಮುಖ್ಯವಾದ ಗ್ರಂಥವನ್ನು ೧೯೩೨ರಲ್ಲಿ ಸಂಪಾದಿಸಿದ್ದಾರೆ. ಹಳೆಯ ಹಸ್ತಪ್ರತಿಯಲ್ಲಿದ್ದ ಇದರ ಮೂಲ ಲೇಖಕ ಯಾರೆಂದು ತಿಳಿದುಬಂದಿಲ್ಲ. ಆದರೆ ಈ ಗ್ರಂಥದಲ್ಲಿ ಯಾವುದೇ ಉತ್ಪ್ರೇಕ್ಷೆಗಳಿಲ್ಲದೆ ಶೂನ್ಯಪೀಠದ ಇಡೀ ವಂಶಾವಳಿಯನ್ನು ಮತ್ತದರ ಶೂನ್ಯಾಪೀಠಾಧಿಪತಿಗಳು ಸಾಗಿಬಂದ ಸಂಶೋಧಿತ ಇತಿಹಾಸವನ್ನು ನೈಜವಾಗಿ ವಾಸ್ತವದ ಹಿನ್ನೆಲೆಯಲ್ಲಿ ಕಟ್ಟಿಕೊಡಲಾಗಿದೆ. ಮೊದಲ ಭಾಗದಲ್ಲಿ ಅಲ್ಲಮಪ್ರಭುಗಳಿಂದ ಮುರುಘರಾಜೇಂದ್ರ ಸ್ವಾಮಿಗಳವರೆಗೆ (ಬಿಚ್ಚುಗತ್ತಿ ಭರಮಣ್ಣ ನಾಯಕನ ಕಾಲ)ಶೂನ್ಯಪೀಠದ ಆಗಿಹೋದ ಪೀಠಾಧಿಪತಿಗಳ ಸಂಕ್ಷಿಪ್ತ ಪರಿಚಯ ಇದ್ದರೆ ಎರಡನೇ ಭಾಗದಲ್ಲಿ ಮುಂದೆ ಶೂನ್ಯಪೀಠವು ಹೇಗೆ "ಸಮಯ"ಭೇದ ಅಂದರೆ ಆಚಾರ/ಅಭಿಪ್ರಾಯ ಭೇದಕ್ಕೊಳಗಾಗಿ ಭಿನ್ನ ಶಾಖೆಗಳಾಗಿ ಹೊಮ್ಮಿತು ಎಂಬ ಮಹತ್ವದ ಐತಿಹಾಸಿಕ ದಾಖಲೆ ಇದೆ.


ಭಾಗ ಒಂದರ ಸಂಕ್ಷಿಪ್ತ ವಿವರಣೆಯಲ್ಲಿ, "ಅಲ್ಲಮಪ್ರಭು, ಚೆನ್ನಬಸವಣ್ಣ ಮತ್ತು ಸಿದ್ಧರಾಮರು ಶೂನ್ಯಪೀಠದ ಮಠಾಧಿಪತಿಗಳಾದ ನಂತರ ಅನಾದಿಗಣನಾಥ, ಆದಿಗಣೇಶ್ವರ, ನಿರ್ಮಾಯಗಣೇಶ್ವರ, ನಿರಂಜನಸ್ವಾಮಿಗಳು, ಜ್ಞಾನಾನಂದಸ್ವಾಮಿಗಳು, ಆತ್ಮಗಣವರರು, ಅಧ್ಯಾತ್ಮಗಣನಾಥ, ರುದ್ರಮುನಿಸ್ವಾಮಿ, ಬಸವಪ್ರಭು ಸ್ವಾಮಿಗಳು, ಆದಿಲಿಂಗ ಸ್ವಾಮಿಗಳು, ಚನ್ನವೀರರಾಜೇಂದ್ರರು, ಗೋಸಲ ಸಿದ್ದೇಶ್ವರ ಸ್ವಾಮಿಗಳು, ಶಂಕರಾಚಾರ್ಯ ಸ್ವಾಮಿಗಳು, ದಿವ್ಯಲಿಂಗ ಸ್ವಾಮಿಗಳು, ಗೋಸಲ ಶ್ರೀ ಚನ್ನಬಸವರಾಜೇಂದ್ರರು, ತೋಂಟದ ಸಿದ್ಧಲಿಂಗ ದೇಶಿಕೇಂದ್ರರು, ನಿರಕ್ಷರ ಬೋಳುಬಸವೇಶ್ವರ ಸ್ವಾಮಿಗಳು, ಗುಮ್ಮಳಾಪುರದ ಗಡ್ಡದ ಸಿದ್ಧವೀರಣ್ಣ ಸ್ವಾಮಿಗಳು, ಗೂಳೂರ ಗುರುಸಿದ್ಧರಾಜೇಂದ್ರರು, ಗಗನದಾರ್ಯಸ್ವಾಮಿಗಳು, ಕಟ್ಟಿಗಿಹಳ್ಳಿ ಸಿದ್ಧವೀರಸ್ವಾಮಿಗಳು ನಂತರ ಮುರುಘರಾಜೇಂದ್ರ ಸ್ವಾಮಿಗಳು (ಬಿಚ್ಚುಗತ್ತಿ ಭರಮಣ್ಣನ ಕಾಲ) ಶೂನ್ಯಪೀಠವನ್ನು ಅಲಂಕರಿಸಿದ್ದರು" ಎನ್ನಲಾಗಿದೆ.


ಭಾಗ ಎರಡರಲ್ಲಿ, "ಕಟ್ಟಿಗಿಹಳ್ಳಿ ಸಿದ್ಧವೀರಸ್ವಾಮಿಗಳ ಕಾಲದಲ್ಲಿದ್ದ ಸಂಪಾದನೆ ಬುಡಕಟ್ಟಿನ ಸಿದ್ಧವೀರಪ್ಪ ಎಂಬ ಚರಮೂರ್ತಿಗಳಿದ್ದರು. ಇವರು ಸರ್ವಜ್ಞನ ತ್ರಿಪದಿಗಳನ್ನು ಸಂಪಾದಿಸಿ ಒಂದು ಪುಸ್ತಕವನ್ನು ಮಾಡಿದ ಕಾರಣ ಇವರಿಗೆ ಸಂಪಾದನೆ ಸಿದ್ಧವೀರಪ್ಪಗಳು ಎಂಬ ಹೆಸರು ಬಂದಿತ್ತು. ಮಹಾಪಂಡಿತರಾದ ಇವರಿಗೆ ಅಷ್ಟಾವರಣದಲ್ಲಿ ದೃಢತೆ ದಕ್ಕದ ಕಾರಣ ಅವರ ಲಿಂಗದ ಕಂಥೆಯು ಬಿರುಕುಬಿಟ್ಟಿತ್ತು. ಸಿದ್ದವೀರಪ್ಪಗಳು ತಮ್ಮ ಇಷ್ಟಲಿಂಗದ ವಿಷಯವನ್ನು ಗುರುಗಳಿಗೆ ತಿಳಿಸಿದಾಗ ಗುರುಗಳು ಅಷ್ಟಾವರಣದಲ್ಲಿ ದೃಢತೆಯನ್ನು ಮೂಡಿಸಿಕೋ ಎಂಬುದನ್ನು ನೇರವಾಗಿ ಹೇಳದೆ ಪರೋಕ್ಷವಾಗಿ ಮರುಕಂಥೆ ಕಟ್ಟಿಸಿಕೋ ಎಂದರು. ಮೂರು ಬಾರಿ ಕಂಥೆ ಕಟ್ಟಿಸಿದರೂ ಇಷ್ಟಲಿಂಗದ ಗೋಲಕ ಸಡಿಲವಾಗುತ್ತಲೇ ಇದ್ದಿತು. ಕಡೆಗೆ ಕಟ್ಟಿಗೆಹಳ್ಳಿ ಗುರುಗಳು ಶೂನ್ಯಪೀಠ ಶಾಸ್ತ್ರದ ಪ್ರಕಾರ ಸಿದ್ಧವೀರಪ್ಪಗಳ ಕೊರಳಿಗೆ ಬಹಿಷ್ಕಾರದ ಸಂಕೇತವಾಗಿ ಒಂದು ವಸ್ತ್ರವನ್ನು ಹಾಕಿ ಸಭೆಯಿಂದ ಹೊರಗೆ ಹಾಕಿದರು. ಇದರಿಂದ ಅವಮಾನಿತರಾದ ಸಿದ್ಧವೀರಪ್ಪಗಳು ಮೈಸೂರು ಸೀಮೆಯಲ್ಲಿದ್ದ ರಾಮಾನುಜ ವೈಷ್ಣವರು, ತಿಗಳರು, ತೆಲುಗು ಹತ್ತಿ ಬಣಜಿಗರು, ಹಂಡೆರಾವುತರನ್ನು ಸೇರಿಸಿಕೊಂಡು ಶಾಸ್ತ್ರವಾದದ ತರ್ಕಕ್ಕೆ ತನ್ನ ಗುರುಗಳಾಗಿದ್ದ ಕಟ್ಟಿಗೆಹಳ್ಳಿ ಸಿದ್ಧವೀರಸ್ವಾಮಿಗಳನ್ನು ಆಹ್ವಾನಿಸಿದರು. ಆದರೆ ತರ್ಕದಲ್ಲಿ ಅವರು ಸೋತುಹೋದರು. ಅದರ ಪರಿಣಾಮವಾಗಿ ಅವರ ಬೆನ್ನಿಗಿದ್ದವರು ತಪ್ಪು ದಂಡ ಕಟ್ಟಿ ದೀಕ್ಷೆ ಪಡೆದು ವೀರಶೈವಿಗರಾದರು. ತಪ್ಪು ದಂಡ ಕಟ್ಟಿಯೂ ದೀಕ್ಷೆ ಪಡೆಯದ ತಿಗಳರು, ತೆಲುಗು ಹತ್ತಿ ಬಣಜಿಗರು ವೈಷ್ಣವ ಧರ್ಮಕ್ಕೆ ಹೋದರು. ಕಟ್ಟಿಗಿಹಳ್ಳಿ ಸಿದ್ಧವೀರಸ್ವಾಮಿಗಳವರ ತರ್ಕವಾದಕ್ಕೆ ಮೆಚ್ಚಿದ ಮೈಸೂರು ಅರಸರು ೭೨ ಬಿರುದುಗಳನ್ನು ಕೊಟ್ಟು ಗೌರವಿಸಿದರು. ಬಹಿಷ್ಕೃತ ಚರಮೂರ್ತಿ ಸಿದ್ದವೀರಪ್ಪಗಳು ಹಾಗಲವಾಡಿ ಸಂಸ್ಥಾನದ ದೊರೆಯನ್ನು ಭಕ್ತನನ್ನಾಗಿ ಮಾಡಿಕೊಂಡು ಮಠ ಕಟ್ಟಿಕೊಂಡರು. ಸಿದ್ಧವೀರಪ್ಪನವರ ಬೆಂಬಲಕ್ಕೆ ಮೂಲ ಸಂಪಾದನೆ ಬುಡಕಟ್ಟಿನ ಹತ್ತು ಚರಮೂರ್ತಿಗಳಲ್ಲಿ ಐವರು ಚರಮೂರ್ತಿಗಳು ಸಹ ಹೋದರು" ಎಂದಿದೆ.


ಈ ತಾತ್ವಿಕಭೇದವೇ ಶೂನ್ಯಪೀಠದ ಮೊದಲ ಭೇದ! ಈ ಭೇದವನ್ನು "ಸಂಪಾದನೆಯ ಸಮಯ" ಎನ್ನುತ್ತಾರೆ. ಇಲ್ಲಿ ಸಮಯ ಎಂದರೆ ತಾತ್ವಿಕ/ಆಚಾರ ಭೇದ ಎಂದರ್ಥ. ಮೇಲ್ನೋಟಕ್ಕೆ ಇದು ವೈಯಕ್ತಿಕ ಪ್ರತಿಷ್ಠೆಯ ಭೇದ ಎನಿಸಿದರೂ ಇಲ್ಲಿ ಗುರು ಮತ್ತು ಚರಮೂರ್ತಿಗಳ ನಡುವಿನ ಸಾಧನೆಯ ಕುರಿತಾದ ತಾತ್ವಿಕ ಭಿನ್ನಾಭಿಪ್ರಾಯ ಈ ಸಮಯಕ್ಕೆ ಕಾರಣವಾಯಿತು ಎನ್ನಬಹುದು. 


ಏಕೆಂದರೆ ಈ ಭೇದವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಸಿದ್ಧವೀರಪ್ಪಗಳು ಸಾಧನೆಗೆ ಲಿಂಗವು ಅವಶ್ಯವೇ, ಅರುಹಿಗಿಂತ ಕುರುಹು ಮುಖ್ಯವೇ ಎಂಬ ನಿಲುವು ಹೊಂದಿದ್ದರೆನಿಸುತ್ತದೆ. ಕಟ್ಟಿಗೆಹಳ್ಳಿ ಸಿದ್ಧವೀರಸ್ವಾಮಿಗಳ ನಿಲುವು ಸಹ ಇದೇ ಆಗಿದ್ದರೂ ತಮ್ಮ ಚರಮೂರ್ತಿ ಶಿಷ್ಯನು ಅಷ್ಟಾವರಣದಲ್ಲಿ ದೃಢತೆ ಪಡೆದು ನಂತರ ಮುಂದಿನ ಸಾಧನೆಗೆ ಅನುವಾಗಲಿ. ಯಾವುದೇ ಬಳಸುಮಾರ್ಗ ಸರಿಯಲ್ಲ ಎಂಬ ಅಭಿಪ್ರಾಯವನ್ನು ಹೊಂದಿದ್ದರು ಎನಿಸುತ್ತದೆ. ಹಂತಹಂತವಾಗಿ ಸಾಧನೆಗೈಯದ ಶಿಷ್ಯನನ್ನು ನಿರ್ದಾಕ್ಷಿಣ್ಯವಾಗಿ ಹೊರಹಾಕಿದ ಗುರು ಮತ್ತು ಸಾಧನೆಯ ಸಂಪ್ರದಾಯದ ಒಂದು ಹಂತವು ಅನಾವಶ್ಯಕ ಎನ್ನುವ ದೃಢ ನಿರ್ಧಾರದ ಶಿಷ್ಯನ ನಡುವಿನ ಈ ಪ್ರಸಂಗವು ಅಂದಿನ ತರ್ಕದ ಮಹತ್ವವನ್ನು ತೋರುತ್ತದೆ. ಅಲ್ಲದೆ ತನ್ನ ನಿಲುವು ಸರಿಯಿದ್ದರೆ ಅದಕ್ಕೆ ಬದ್ಧನಾಗಿ ಗುರುವನ್ನು ಸಹ ಸವಾಲಿಗೀಡುಮಾಡುತ್ತಿದ್ದ ಶಿಷ್ಯಪರಂಪರೆಯ ಬಗ್ಗೆ ಸಹ ಒಂದು ಒಳನೋಟವನ್ನು ನೀಡುತ್ತದೆ.


"ಈ ಕಟ್ಟಿಗಿಹಳ್ಳಿ ಸಿದ್ಧವೀರಸ್ವಾಮಿಗಳಿಗೆ ಇಬ್ಬರು ಮರಿಗಳಿದ್ದರು. ಅವರೇ ಮುರುಘರಾಜೇಂದ್ರ ಶಾಂತವೀರ ಸ್ವಾಮಿಗಳು ಮತ್ತು ನೋಟದ (ನೋಡ)ಸಿದ್ಧಲಿಂಗ ದೇಶಿಕೇಂದ್ರ ಸ್ವಾಮಿಗಳು. ತ್ರಾಟಕ ಯೋಗದಲ್ಲಿ ಅಪ್ರತಿಮ ಸಾಧನೆ ಮಾಡಿದ್ದ ಕಾರಣ ಇವರಿಗೆ ನೋಟದ ಅಥವಾ ನೋಡ ಎಂಬ ಉಪಸರ್ಗ ಅವರ ಹೆಸರಿಗೆ ಸೇರಿದ್ದಿತು. ದಿಲ್ಲಿಯ ಮಲ್ಲೂಖಾನನಿಂದ ಶಿಖಾಶೈಲವನ್ನು ಪಡೆದ ಸಿದ್ದವೀರಸ್ವಾಮಿಗಳು ಶಿಖಾಶೈಲ ಪಟ್ಟಕ್ಕೆ ಮುರುಘರಾಜೇಂದ್ರರನ್ನೂ, ಶಿವಾನುಭವ ಚರಂತಿಗೆ ಪಟ್ಟಕ್ಕೆ ನೋಡಸಿದ್ಧಲಿಂಗದೇಶಿಕೇಂದ್ರರನ್ನೂ ನೇಮಿಸಿದ್ದರು. ಈ ಈರ್ವರೂ ಪರಸ್ಪರ ಹೊಂದಿಕೊಂಡು ಅಧಿಕಾರ ನಡೆಸುತ್ತಿದ್ದರು. ಹೀಗಿರುವಾಗ ನೋಡಸಿದ್ಧಲಿಂಗ ಸ್ವಾಮಿಗಳು ಲಿಂಗೈಕ್ಯರಾದ ಕಾರಣ ಅವರ ಸ್ಥಾನಕ್ಕೆ ಮುರುಘಾಶಾಂತವೀರ ಸ್ವಾಮಿಗಳು ನೋಡಸಿದ್ಧಲಿಂಗಸ್ವಾಮಿಗಳ ಮರಿಯಾಗಿದ್ದ ಕುಮಾರಸ್ವಾಮಿಗಳಿಗೆ ಪಟ್ಟ ಕಟ್ಟಿದರು" ಎನ್ನಲಾಗಿದೆ.


ಹಾಗೆಯೇ ಮುಂದುವರಿಯುತ್ತ, "ಒಂದು ಮಹಾನವಮಿ ಸಭೆಯಲ್ಲಿ ಶಿಖಾಪಟ್ಟದ ಮುರುಘರಾಜೇಂದ್ರ ಸ್ವಾಮಿಗಳು ತಮ್ಮ ಸಹವರ್ತಿ ಶಿವಾನುಭವ ಚರಂತಿಕೆಯ ಕುಮಾರಸ್ವಾಮಿಗಳನ್ನು ಪಕ್ಕದಲ್ಲಿ ಕೂರಿಸಿಕೊಂಡು ಸಮಾನ ಗೌರವ ನೀಡಿದ್ದುದು ಏಳುನೂರೆಪ್ಪತ್ತು ಬುಡಕಟ್ಟಿನ ವಿರಕ್ತ ಚರಮೂರ್ತಿಗಳಲ್ಲಿನ ಮೂಲ ಸಂಪಾದನೆ ಬುಡಕಟ್ಟಿನ ಐದು ಚರಮೂರ್ತಿಗಳಿಗೆ ಈರ್ಷ್ಯೆಯನ್ನುಂಟು ಮಾಡುತ್ತದೆ. ಆಗ ಅವರು ಕುಮಾರಸ್ವಾಮಿಗಳಿಗೆ ನೀಡಿದ ಅಂತಹುದೇ ಸಮಾನ ಸಾಷ್ಟಾಂಗ ಗೌರವವನ್ನು ನಮಗೂ ನೀಡಬೇಕು ಅಥವಾ ಕುಮಾರಸ್ವಾಮಿಗಳನ್ನು ನಮ್ಮೊಟ್ಟಿಗೆ ಕೆಳಹಂತದ ಆಸನದಲ್ಲಿ ಕೂರಿಸಬೇಕು ಎಂದು ಬೇಡಿಕೆಯನ್ನಿಡುತ್ತಾರೆ. ಆಗ ಉಳಿದ ಏಳುನೂರು ಎಪ್ಪತ್ತು ಬುಡಕಟ್ಟುಗಳ ಎಲ್ಲಾ ಚರಮೂರ್ತಿಗಳೂ ಒಕ್ಕೊರಲಿನಿಂದ, 'ಶಿವಾನುಭವ ಚರಂತಿಕೆಯ ಪಟ್ಟ ಇರುವುದು ಒಂದೇ ಒಂದು. ಅದು ಶಿಖಾಪಟ್ಟದಷ್ಟೇ ಸಮಾನ ಸ್ಥಾನ. ಅವರು ಸಾಮಾನ್ಯ ಚರಂತಿಕೆ ಪಟ್ಟಕ್ಕಿಂತ ಹೆಚ್ಚಿನ ಸ್ಥಾನದವರು. ಹಾಗಾಗಿ ಈ ಗೌರವಕ್ಕೆ ಅವರು ಅರ್ಹರು' ಎಂದು ಕುಮಾರಸ್ವಾಮಿಗಳ ಸ್ಥಾನಮಾನವನ್ನು ಬೆಂಬಲಿಸುತ್ತಾರೆ. ಆದರೂ ಒಪ್ಪದ ದುರಹಂಕಾರದ ಮಾತಿನ ಆ ಐವರನ್ನೂ ಹೊರಹಾಕಿ ಬಿಚ್ಚುಗತ್ತಿ ಭರಮಣ್ಣನಿಂದ ಗಡಿಪಾರು ಸಹ ಮಾಡಿಸಲಾಗುತ್ತದೆ. ಮುಂದೆ ಆ ಐವರಲ್ಲಿಯೂ 'ನಾನು ಹೆಚ್ಚು ನೀನು ಕಡಿಮೆ' ಎಂಬ ಅಹಂವುಂಟಾಗಿ ಐದೂ ಚರಂತಿಕೆಗಳು ಬೇರೆ ಬೇರೆ ಸಮಯಗಳಾಗಿ ಸ್ವತಂತ್ರವಾಗುತ್ತವೆ. ಇತ್ತ ಶೂನ್ಯಪೀಠದಡಿ ಇದ್ದ ಇನ್ನೂ ಕೆಲವು ಮಠಗಳಲ್ಲಿ ಇದೇ ರೀತಿಯ ಸ್ವಪ್ರತಿಷ್ಠೆಯ ಅಹಂ ಹೆಡೆಯೆತ್ತಿ ಮತ್ತಷ್ಟು ಸಮಯಭೇದಗಳಾಗುತ್ತವೆ. ಮುಂದೆ ಈ ಎಲ್ಲಾ ಸಮಯಗಳೂ ಸಂಘಟನೆಗೊಂಡು ಸಂಪಾದನಾ ಸಮಯ, ಮುರುಘಾ ಸಮಯ, ಕುಮಾರ ಸಮಯ, ಕೆಂಪಿನ ಸಮಯ, ಮತ್ತು ಚೀಲಾಳ ಸಮಯ ಎಂಬ ಐದು ಪ್ರಮುಖ ಸಮಯಗಳಾಗುತ್ತವೆ. ಮುಂದೆ ಇವುಗಳಲ್ಲಿ ಸಂಪಾದನಾ ಸಮಯ ಮತ್ತು ಕೆಂಪಿನ ಸಮಯಗಳು ಚೀಲಾಳ ಸಮಯದಲ್ಲಿ ವಿಲೀನವಾಗುತ್ತವೆ. ಮುರುಘಾ ಸಮಯದ ಮೂಲ ಚಿತ್ರದುರ್ಗದ ಮಠ. ಕುಮಾರ ಸಮಯದ ಮೂಲ ಜಡೇದ (ಸೋದೆ) ಮಠ ಮತ್ತು ಚೀಲಾಳ ಸಮಯದ ಮೂಲ ಡಂಬಳ ಮಠ! ಗದುಗಿನ ತೋಂಟದಾರ್ಯ ಮಠವು ತಮ್ಮಲ್ಲಿದ್ದ ಚೀಲಾಳ ತೋಟಪ್ಪಸ್ವಾಮಿಗಳ ದೆಸೆಯಿಂದ ತೋಂಟದಾರ್ಯ ಮಠ ಎಂದು ಹೆಸರಾಗಿದೆಯೇ ಹೊರತು ಎಡೆಯೂರು (ತೋಂಟದ) ಸಿದ್ಧಲಿಂಗೇಶ್ವರ ಸ್ವಾಮಿಗಳಿಂದಲ್ಲ ಎಂಬುದು ಗಮನಾರ್ಹ ಸಂಗತಿ. ಈ ಎಲ್ಲಾ ಸಮಯಗಳ ಮಠಗಳು ತಮ್ಮದೇ ಆದ ಚರಂತಿಕೆಯ ಶಾಖಾ ಮಠಗಳನ್ನು ಹೊಂದಿವೆ. ಮುರುಘಾ ಸಮಯ ಮತ್ತು ಕುಮಾರ ಸಮಯಗಳೆರಡೂ ಒಂದೇ ಎನಿಸಿದರೂ ಅವು ಭಿನ್ನವಾಗಿದ್ದವು ಎಂಬುದಕ್ಕೆ ಜಡೇದ ಮಠದಲ್ಲಿನ ಎರಡು ಬೇರೆ ಬೇರೆ ಗದ್ದುಗೆಗಳೇ ಸಾಕ್ಷಿ" ಎಂದು ವಿವರಿಸಲಾಗಿದೆ.


ಇಲ್ಲಿ ಸ್ಪಷ್ಟವಾಗಿ ಗಮನಿಸಿದರೆ ಮೊದಲ ಸಂಪಾದನೆ ಸಮಯದ ಭೇದದ ನಂತರ ಈ ಎಲ್ಲಾ ಉಳಿದ ಭೇದಗಳಲ್ಲಿ ಯಾವುದೇ ತಾತ್ವಿಕ ಭೇದ ಇರದೆ ಕೇವಲ ಮಠಾಧೀಶರ ವೈಯಕ್ತಿಕ ಸ್ವಪ್ರತಿಷ್ಠೆಯ ಕಾರಣ ಭೇದವುಂಟಾಗಿದ್ದರೂ ಇವುಗಳನ್ನು ಲೇಖಕ ಗೌರವಪೂರ್ವಕವಾಗಿ "ಸಮಯ" ಎಂದಿದ್ದಾನೆ. ಏಕೆಂದರೆ ಸ್ವಪ್ರತಿಷ್ಠೆಯ ವಿನಃ ಇವರೆಲ್ಲರೂ ಮಹಾನ್ ಸಾಧಕರೇ ಆಗಿದ್ದರು.


ಈ ಇಡೀ ಗ್ರಂಥದಲ್ಲಿ ಎಲ್ಲಿಯೂ ಲಿಂಗಾಯತ ಪ್ರತ್ಯೇಕವಾದಿಗಳು ಮಂಡಿಸುವ ಸಂಕಥನಗಳ ಒಂದೇ ಒಂದು ವಿಚಾರದ ಪ್ರಸ್ತಾಪವಿಲ್ಲ. ವಚನಗಳು ಧರ್ಮಗ್ರಂಥ ಎಂಬ ಉಲ್ಲೇಖವಿಲ್ಲ. ತರ್ಕ, ವೇದ, ವ್ಯಾಕರಣ, ಶಾಸ್ತ್ರಾಗಮ, ಪುರಾಣೋಪನಿಷತ್ತು, ನ್ಯಾಯ, ವೈಶೇಷಿಕವಲ್ಲದೇ ಮಂತ್ರಪಠಣದಲ್ಲಿನ ಪೂರಕ, ಕುಂಭಕ, ರೇಚಕ ಯೋಗದ ಉಲ್ಲೇಖಗಳಿವೆ. ಅಸಲಿಗೆ ವಚನಗಳ ಆಧಾರದ ಯಾವ ಧಾರ್ಮಿಕ ತಾತ್ಪರ್ಯವನ್ನೂ ಉಲ್ಲೇಖಿಸಿಲ್ಲ. ಶೂನ್ಯಪೀಠಕ್ಕೂ ಮುಂಚಿನ ವೀರಶೈವ ಪೀಠಗಳ ಕುರಿತು ಯಾವುದೇ ದ್ವೇಷವಾಗಲಿ, ವೈರತ್ವವಾಗಲಿ ಎಲ್ಲಿಯೂ ದಾಖಲಾಗಿಲ್ಲ. ಹಳೇಬೀಡಿನ ಮಠವೊಂದರ ವ್ಯಾಜ್ಯದ ಕುರಿತ ಪ್ರಸ್ತಾಪದಲ್ಲಿಯೂ, "ಶ್ರೀ ರಂಭಾಪುರಿ ವೀರಸಿಂಹಾಸನಕ್ಕೆ ಕಾರಣಕರ್ತರಾದ ಎಂಟುಜಡೆಯ ಸೋಮಶೇಖರ ಸ್ವಾಮಿಗಳವರು ಶ್ರೀಮತ್ ಪರಮೇಶ್ವರನ ಅರ್ಧಾಂಗಿಯಾದ ಉಮಾದೇವಿಯವರ ಮೇಲುದಿನ ಪರಮೇಶ್ವರನು ಸಕಲ ದೇವತೆಗಳೊಡನೆ ಮೂರ್ತವ ಮಾಡಿದ ಸಭಾ ಮಧ್ಯದಿ ಭೃಂಗೀಶ್ವರನ ವಾದದಿಂ ಸಂಚಲತ್ವದಿ ನೊಗೆದ ಚಂದ್ರದ್ರೋಣ ಪರ್ವತದ ಸಮೀಸದಿ ಇರ್ದ ಗಾಳಿಪೂಜೆಯ ಗಿರಿಯ ಸಿದ್ಧಕುಲ ಶಿಖಾಮಣಿಗಳಾದ ಷಟುಸ್ಥಲ ಪ್ರಭು ವಂಶೋದ್ಭವರಾದ ಮುಳ್ಳಕಟ್ಟಿಗೆಯ ಮೇಲೆ ತಪಸ್ಸುಗೈದ ನಿಮಿತ್ಯದಿಂ ಪೆಸರು ಪಡೆದ ಮುಳ್ಳಕಟ್ಟಿಗೆಯ ಸ್ವಾಮಿಗಳವರ ಗದ್ದುಗೆಗೆ ಕಾರಣ ಕರ್ತರಾದ ಹೊಲಿಕೆರೆ ರಾ|| ಕೆಂಪಿನ ಸಿದ್ಧಬಸವ..." ಬರೆದ ಪತ್ರ ಎಂದೇ ದಾಖಲಿಸಲಾಗಿದೆ. ಅಂದರೆ ಎಲ್ಲಾ ಗುರು-ವಿರಕ್ತ ಪರಂಪರೆಯ ಸ್ವಾಮಿಗಳು ಸೌಹಾರ್ದದಿಂದಲೇ ಇದ್ದರು ಮತ್ತು ಪಂಚಪೀಠಗಳ ಬಗ್ಗೆ ಉನ್ನತವಾದ ಗೌರವಾದರಗಳನ್ನು ಹೊಂದಿದ್ದರು ಎಂಬುದಕ್ಕೆ ಈ ವಿವರಣೆ ಸಾಕ್ಷಿಯಾಗಿದೆ.


ಅಲ್ಲದೆ, "...ಶಿವಾನುಭಾವ ಚರಂತಿಗೆ ಪಟ್ಟವೆಂತಲೂ ಶಿಖಾಪಟ್ಟವೆಂತಲೂ ಎರಡು ಪಟ್ಟವಾಗಿ ಸ್ವಾಮಿಗಳಾದ ಉಭಯತರೂ ಕಟ್ಟಿಗೆಹಳ್ಳಿ ಸ್ವಾಮಿಗಳವರ ತರುವಾಯ ದಲ್ಲಿ ಏಳುನೂರ ಎಪ್ಪತ್ತು ಬುಡಕಟ್ಟಿನ ಚರಮೂರ್ತಿಗಳೂ, ಮೂರು ಸಾವಿರ ವಿರಕ್ತರು ಮತ್ತು ಇವರ ಸೂತ್ರಿಕರಾದ ಪಂಚಾಚಾರ್ಯರು ಸಕಲ ದೇವಭಕ್ತರು ನೋಡಸಿದ್ದಲಿಂಗಸ್ವಾಮಿಗಳ ತರುವಾಯ ಚರಂತಿಕೆ ಪಟ್ಟಕ್ಕೆ ಕುಮಾರಸ್ವಾಮಿಗಳೂ ಶಿಖಾಪಟ್ಟಕ್ಕೆ ಮುರುಘಾ ಸ್ವಾಮಿಗಳೂ ಮಾಡಿದ ಕಾರಣ ಮುರುಘಾಸ್ವಾಮಿಗಳು ಸಮ ಮರ್ಯಾದೆ ಕೊಟ್ಟದ್ದು ವಾಸ್ತವವಿದೆ" ಎಂದು ಪಂಚಪೀಠ ಮತ್ತು ವಿರಕ್ತ ಪೀಠದ ಸಮನ್ವಯವನ್ನು ತೋರಿದೆ.


ಹೀಗೆ ಸಮಗ್ರವಾಗಿ ಯಾವುದೇ ಸಿದ್ಧಾಂತ ಭೇದವಿಲ್ಲದೆ ಕೇವಲ ಮಠಾಧೀಶರ ವೈಯಕ್ತಿಕ ಪ್ರತಿಷ್ಠೆಯ ಜಗಳಗಳ ಕಾರಣ ಈ ಸಮಯ ಭೇದಗಳುಂಟಾಗಿದ್ದವು ಎಂಬುದು ಗಮನಾರ್ಹ. ಈ ಎಲ್ಲಾ ಭೇದಗಳ ನಡುವೆಯೂ ಯಾವುದೇ ಮಠಾಧಿಪತಿಗಳು ಭಕ್ತರನ್ನು ವಿಭಜಿಸಿರಲಿಲ್ಲ. ವಿವಿಧ ಆಕಾರ, ಲೋಹ, ಮಣ್ಣಿನ ಹಣತೆಗಳಾಗಿಯೂ ಜ್ಯೋತಿಯೊಂದೇ ಎನ್ನುವಂತೆ ಎಲ್ಲರೂ ಸಮಗ್ರವಾಗಿ ಶ್ರೀಮದ್ವೀರಶೈವವನ್ನೇ ಪ್ರತಿಪಾದಿಸುತ್ತಿದ್ದರು. ಶಕ್ತಿವಿಶಿಷ್ಟಾದ್ವೈತ, ಸಿದ್ಧಾಂತ ಶಿಖಾಮಣಿ, ಕರಣಹಸಿಗೆ, ಮಂತ್ರಗೋಪ್ಯ, ಮಿಶ್ರಾರ್ಪಣ, ಸೃಷ್ಟಿವಚನ, ಮತ್ತು ವಚನಸಾಹಿತ್ಯ ಎಲ್ಲವನ್ನೂ ಶಿವಾನುಭವವೆಂದು ಬೋಧಿಸುತ್ತಿದ್ದರು. ಭಕ್ತರು ಸಹ ಗುರುವಿರಕ್ತರ ಎಲ್ಲಾ ಧಾರ್ಮಿಕ ಕಾರ್ಯಗಳನ್ನು ಬೆಂಬಲಿಸಿ ಪಾಲ್ಗೊಳ್ಳುತ್ತಿದ್ದರು. ಮುಂದಿನ ಕಾಲಘಟ್ಟದಲ್ಲಿ ಸಾಧು-ವೀರಶೈವರು ತಮ್ಮದೇ ಜಾತಿಪೀಠವನ್ನು ಸ್ಥಾಪಿಸಿಕೊಂಡದ್ದನ್ನು ಸಹ "ಸಮಯ" ಭೇದದ ಮುಂದುವರಿಕೆಯೇ ಆಗಿದೆ ಎನ್ನಬಹುದು. ಹಾಗಿದ್ದಾಗಲೂ ವೀರಶೈವದ ವಿಭಜನೆಗೆ ಯಾರೂ ಕೈಹಾಕಿರಲಿಲ್ಲ. ಈಗ ಈ ಸಾಧುಪೀಠದಲ್ಲಿಯೂ "ಸಮಯ" ಭೇದ ಉಂಟಾಗಿ ಮೂಲಮಠ ವೀರಶೈವ ಎಂದರೆ, ಶಾಖಾಮಠವೊಂದು ಲಿಂಗಾಯತ ಎನ್ನುತ್ತಿದೆ. ಈ ಸಾಧು-ವೀರಶೈವದ ಜಾತಿ ಸಮಯಭೇದವನ್ನೇ ಮಾದರಿಯಾಗಿ ಅನುಸರಿಸಿ ಸ್ಥಾಪನೆಗೊಂಡ ಪಂಚಮಸಾಲಿ ಜಾತಿಪೀಠವು ಸ್ಥಾಪನೆಯಂದೇ ಕೆಲವು ಪ್ರತಿಷ್ಠಿತ ವ್ಯಕ್ತಿಗಳ ಪ್ರತಿಷ್ಠೆಯ ಕಾರಣವಾಗಿ ಎರಡಾಗಿ ಭೇದಗೊಂಡಿದೆ. ಈಗ ಈ ಪೀಠವನ್ನು ಮತ್ತಷ್ಟು ಪ್ರಭಾವಿಗಳು ಐದಾಗಿ ಭೇದಿಸುವ ಹವಣಿಕೆ ನಡೆಸಿದ್ದಾರೆ. ಈ ಎಲ್ಲಾ ಕಾರಣಗಳಿಗಾಗಿಯೇ ಈ ಜಾತಿಪೀಠಿಗಳಿಗೆ ಧಾರ್ಮಿಕತತ್ವಕ್ಕಿಂತ ಪ್ರಜಾಪ್ರಭುತ್ವದ ಮತ (ಓಟು) ರಾಜಕೀಯವಷ್ಟೇ ಏಕೈಕ ಉದ್ದೇಶವಾಗಿದೆ. ಅಂದರೆ ಸ್ಪಷ್ಟವಾಗಿ ವೀರಶೈವದ ಈ ಸಮಯಭೇದವು ಮತಧರ್ಮಕಾರಣದಿಂದ ಮತದಾರರಾಜಕಾರಣಕ್ಕೆ ರೂಪಾಂತರಗೊಂಡ ಮಾರ್ಪು ಯಾನೆ Paradigm Shift of philosophy into politics! ಹಾಗಾಗಿಯೇ ಬಹುಪಾಲು ಜಾತಿಪೀಠಿಗಳಿಗೆ ಗೊತ್ತಿರುವುದು ಕೇವಲ ಕೆಲವು ಸರಳ ವಚನಗಳು ಮಾತ್ರವೇ ಹೊರತು ವೀರಶೈವ ಆಧ್ಯಾತ್ಮಿಕ ತತ್ವದ ಲವಲೇಶವಲ್ಲ. ಇದು ಈ ಪೀಠಾಧಿಪತಿಗಳ ತಪ್ಪಲ್ಲ, ಅವರ ಜಾತಿಭಕ್ತರು ಅದನ್ನೇ ಬಯಸಿ ಇವರಿಗೆ ಪಟ್ಟ ಕಟ್ಟಿದ ಕಾರಣ ಅವರು ಅದಕ್ಕೆ ಬದ್ಧರಾಗಿರಲೇಬೇಕಾದ್ದು ಅನಿವಾರ್ಯ. ಹಾಗಾಗಿಯೇ ಜಾತಿಪೀಠಗಳ ಪೀಠಾಧಿಪತಿಗಳು ಸ್ವಜಾತಿ ರಾಜಕಾರಣಿಗಳ ಮತ್ತು ಉದ್ಯಮಿಗಳ ಕೈವಶರಾಗಿದ್ದಾರೆ. ಒಬ್ಬರು "ಭಕ್ತದೇವರು"ಗಳ ಅಣತಿಯಂತೆ ಮೀಸಲಾತಿಗೆ ಮುಷ್ಕರ ನಡೆಸುತ್ತಿದ್ದರೆ, ತಮ್ಮ ತಾಳಕ್ಕೆ ಕುಣಿಯದ ಇನ್ನೊಬ್ಬ ಯೋಗಿಕ, ತಾತ್ವಿಕ ಪೀಠಾಧಿಪತಿಗಳನ್ನು ಹರಿಹರದ ಮಾಜಿ "ಶಾಸಕದೇವರು" ಏಕವಚನದಲ್ಲಿಯೇ ತಮ್ಮ ಅಡಿಯಾಳನ್ನು ಝಾಡಿಸುವಂತೆ ಝಾಡಿಸಿರುವುದನ್ನು ಇಡೀ ರಾಜ್ಯವೇ ನೋಡಿದೆ. ಎಲ್ಲವೂ ಅಯೋಮಯ! ಸಾಮಾಜಿಕ ಮೀಸಲಾತಿಯನ್ನು ಬಯಸಿ ಸಾಮಾಜಿಕ ಜನರು ಹೋರಾಡುವುದು ಸಮ್ಮತವೇ ಹೊರತು ಆಧ್ಯಾತ್ಮಿಕ ಸ್ವಾಮಿಗಳಾದವರು ಹೋರಾಡುವುದು ಸಮ್ಮತವಲ್ಲವೇ ಅಲ್ಲ. ಇದು ಮೀಸಲಾತಿ ಬಯಸುವ ಬೇಡಜಂಗಮ, ಪಂಚಮಸಾಲಿ ಸೇರಿ ಎಲ್ಲಾ ಜನಾಂಗಕ್ಕೂ ಅನ್ವಯ. ಏಕೆಂದರೆ ಪರಮ ಸನ್ಯಾಸಿ ಸ್ವಾಮಿ ವಿವೇಕಾನಂದರು, "ಸನ್ಯಾಸಿ ಎಂದರೆ ಯಾರು ಖಾವಿ ತೊಟ್ಟು ಪ್ರಪಂಚ ಮತ್ತು ಪ್ರಾಪಂಚಿಕ ಬಂಧಗಳನ್ನು ತೊರೆದು ತಮ್ಮ ಜೀವನವನ್ನು ಕೇವಲ ಮತ್ತು ಕೇವಲ ಆಧ್ಯಾತ್ಮಿಕ ಚಿಂತನೆ, ಸತ್ಯಾನ್ವೇಷಣೆ, ಸ್ವಶಿಸ್ತು ಮತ್ತು ಮಾನವಧರ್ಮಕ್ಕಾಗಿ ಮುಡಿಪಾಗಿಡುವರೋ ಅವರು" ಎಂದಿದ್ದಾರೆ.


ಈ ಪ್ರಾಪಂಚಿಕ ಲೌಕಿಕ ಮಾರ್ಪಿಗೆ ಪ್ರಮುಖವಾಗಿ ಖಾದಿಗಿಂತ ಖಾವಿಯೇ ಸುಲಭ ಸೋಪಾನ ಎಂದು ಮತಧರ್ಮನಿರಪೇಕ್ಷದ ಸೆಕ್ಯುಲರ್ ಸಾಂವಿಧಾನಿಕ ಪ್ರಜಾಪ್ರಭುತ್ವದಲ್ಲಿ ಸಾಬೀತಾದ ಕಾರಣ ಇಂದು ಪ್ರತಿ ಜಾತಿಗೂ ಒಂದೊಂದು ಪೀಠಗಳಾಗುತ್ತಿರುವುದು ನಿರಂಜನವಂಶ ರತ್ನಾಕರದ ಆಧುನಿಕ ವಿಸ್ತರಣೆ ಎನ್ನಬಹುದಾದರೂ ಎನ್ನಲಾಗದು! ಏಕೆಂದರೆ ಇವರಿಗೆಲ್ಲ ಅಲ್ಲಮಪ್ರಭು ಮತ್ತು ಚೆನ್ನಬಸವಣ್ಣನು ರೂಪಿಸಿದ ಗುರುದೀಕ್ಷೆಯ ವಿಧಿವಿಧಾನಗಳ ಪ್ರಕಾರ ಯಾವ ಚರಂತಿಕೆ, ಹರಗುರುಚರನಿರಂಜನ ದೀಕ್ಷೆಯೂ ಆಗಿಲ್ಲ. ಹಾಗಾಗಿ ಇವರ್ಯಾರೂ ಲಿಂಗಾಯತ ಪದ್ಧತಿಯ ಪ್ರಕಾರ ಗುರುಗಳೇ ಅಲ್ಲ! ಏನಿದ್ದರೂ ಜಾತಿಗಾಗಿ ವೇಷಧರಿಸಿದ ವೇಷಧಾರಿಗಳು ಮಾತ್ರ! 


ಏಕೆಂದರೆ ಸ್ವಾಮಿಯಾಗಿ ಪಟ್ಟ ಕಟ್ಟುವ ಮೊದಲು ಓರ್ವ ಚರಮೂರ್ತಿಗಳಿಂದ ಉದ್ದೇಶಿತ ಭಾವಿ ಸ್ವಾಮಿಗೆ ಶಿವಪುರಾಣ, ಬಸವಪುರಾಣ, ಚೆನ್ನಬಸವಪುರಾಣ ಗ್ರಂಥಗಳನ್ನು ಕೊಡಿಸಿ 'ಪುರಾಣ ಚರಂತಿ' ಎಂದು ನೇಮಕಾತಿ ಮಾಡುತ್ತಾರೆ. ಈ ಪುರಾಣ ಚರಂತಿಯು ಮುಂದೆ ಕರಣಹಸಿಗೆ, ಮಂತ್ರಗೋಪ್ಯ, ಮಿಶ್ರಾರ್ಪಣ, ಮತ್ತು ಸೃಷ್ಟಿವಚನಗಳನ್ನು ಅಭ್ಯಾಸ ಮಾಡಿ ಸಾಧನೆ ಮಾಡಿದ ನಂತರ ಅವನಿಗೆ ಸಭಾಮಧ್ಯದಲ್ಲಿ ಓರ್ವ ಜಗದ್ಗುರುವಿನಿಂದ ಅಥವಾ ಓರ್ವ ಹಿರಿಯ ಶಾಖಾಮಠದ ಗುರುವಿನಿಂದ ಈ ಕೃತಿಗಳನ್ನು ಗೌರವಪ್ರಧಾನ ಮಾಡಿದಾಗ ಮಾತ್ರ ಆ ಚರಂತಿಯು ವಿರಕ್ತನಾಗಿ ಪಟ್ಟಾಧಿಕಾರಿಯಾಗುವನು. ಪುರಾಣ ಚರಂತಿ ಮತ್ತು ವಿರಕ್ತನಾಗುವ ನಡುವೆ ಅನೇಕ ಕಠಿಣ ಸಾಧನೆಗಳ ಪರೀಕ್ಷೆಗಳಿವೆ. ಇವುಗಳನ್ನು ಸಾಧಿಸದಿದ್ದರೆ ಆತ ಕೇವಲ ಪುರಾಣ ಚರಂತಿ ಮಾತ್ರವಾಗಿರುತ್ತಾನೆ. ಇಂತಹ ಯಾವುದೇ ನಿಯಮಬದ್ಧವಾಗಿ ಪಟ್ಟವಾಗದ ಇವರೆಲ್ಲರೂ ಸ್ಪಷ್ಟವಾಗಿ ನಿರಂಜನವಂಶ ರತ್ನಾಕರವಲ್ಲದೆ ಲಿಂಗಾಯತಕ್ಕೂ ಹೊರಗು.


ಒಟ್ಟಾರೆ, ಇದಿಷ್ಟು ಬಸವಸ್ಥಾಪಿತ ಅಲ್ಲಮಪ್ರಭುವಿನ ಶೂನ್ಯಪೀಠವು ವಿಭಜನೆಗೊಂಡ ಸಂಕ್ಷಿಪ್ತ ಇತಿಹಾಸ! ತಾತ್ವಿಕ ಭೇದಗಳು ಕ್ರಮೇಣವಾಗಿ ವೈಯಕ್ತಿಕ ಪ್ರತಿಷ್ಠೆಗಳಾಗಿ ಬದಲಾಗುತ್ತಾ ಹೇಗೆ ಒಂದು ಪೀಠವನ್ನು ಛಿದ್ರಿಸುತ್ತ ನಡೆದವು ಎಂಬುದರ ಸ್ಪಷ್ಟ ಚಿತ್ರಣ! ಅಂದಹಾಗೆ ಬಸವಣ್ಣನು ಸ್ಥಾಪಿಸಿದ್ದುದು ಆಗಲೇ ಇದ್ದ ವೀರಶೈವ ಪಂಥದ ಒಂದು ಜಗದ್ಗುರು ಪೀಠವನ್ನೇ ಹೊರತು ಹೊಚ್ಚ ಹೊಸ ಧರ್ಮವನ್ನಲ್ಲ. ವಿಪರ್ಯಾಸವೆಂದರೆ 'ಅರಿವೇ ಗುರು' ಎಂದ ಬಸವಣ್ಣನು ತನ್ನರಿವಿಗೆ ಬಾರದಂತೆ "ಶೂನ್ಯ ಸಮಯಭೇದ"ವನ್ನು ಆರಂಭಿಸಿ "ಸಮಯಭೇದ ಸ್ಥಾಪಕ"ನಾದನು. ಹೀಗೆ ಶಿವನ ವೃಷಭನೆನ್ನುವ ಗಣನು ತನಗರಿವಿಲ್ಲದೆ ಷಣ್ಮುಖನಿಗೆ ಪ್ರಸಾದ ಕೊಡುವುದನ್ನು ಮರೆತ ಕಾರಣದಿಂದ ಶಾಪಗ್ರಸ್ತನಾಗಿ ಧರೆಗೆ ಬಸವನಾಗಿ ಬಂದು ಮತ್ತೊಮ್ಮೆ ತನಗರಿವಿಲ್ಲದಂತೆ ಸಮಯಭೇದ ಸೃಷ್ಟಿಸಿ ಶಾಪಗ್ರಸ್ತನಾದನೆನಿಸುತ್ತದೆ. ಇದು ಶಾಪಗ್ರಸ್ತ ವೃಷಭ ಗಣನ ಗಮ್ಯವೇ ಆಗಿತ್ತೋ ಆ ಕಾಲಜ್ಞಾನಿ ಚೆನ್ನಬಸವಣ್ಣನೇ ಬಲ್ಲ ಎಂಬಂತೆ ಬಸವನು ನಿಶ್ಶೂನ್ಯನಾಗಿಯೇ ಧರೆಯಿಂದ ಹಠಾತ್ ಆಗಿ ಯಾವ ಸುಳಿವನ್ನೂ ಬಿಡದೆ ನಿರ್ಗಮಿಸಿದ್ದಾನೆ!


ಇತಿಹಾಸದಲ್ಲಿ 'ಶೂನ್ಯಪೀಠ' ಸ್ಥಾಪನೆಯಾದ ನಂತರ 'ಶೂನ್ಯಸಂಪಾದನೆ' ಬಂದಂತೆ 'ಶೂನ್ಯ ಸಮಯಭೇದ'ದ ನಂತರ 'ಸಂಪಾದನಾ ಸಮಯ' ಬಂದಿದೆ, ಅಷ್ಟೇ! ಪಾಶುಪತ-ಕಾಳಾಮುಖ-ವೀರಶೈವ-ಲಿಂಗಾಯತ ಪಂಥದ ಸಮಗ್ರ ಸ್ವರೂಪವನ್ನು ಗ್ರಹಿಸಿದರೆ ಎಲ್ಲವೂ ಕಾಲಜ್ಞಾನದಂತೆ ಪೂರ್ವನಿರ್ಧರಿತ ಶ್ರೀಮನ್ನಿರಂಜನ ಪ್ರಣವ ಸ್ವರೂಪ ಜಂಗಮಚಕ್ರದಂತೆ ಉರುಳುತ್ತಿದೆಯಷ್ಟೇ. ಈ ಉರುಳುವಿಕೆ ಕೇವಲ ವೀರಶೈವಕ್ಕಷ್ಟೇ ಅಲ್ಲದೆ ಇಡೀ ಸಿಂಧೂ/ಹಿಂದೂ/ಸನಾತನ/ಭಾರತೀಯ/ಇಂಡಿಯತನಕ್ಕೆ ಅನ್ವಯ ಎಂಬುದು ಕಾಲಜ್ಞಾನ ಸಂಪುಟದ ಒಳಮರ್ಮ.


ಇರಲಿ, ಈ ಏಕಮೇವ ಶೂನ್ಯಪೀಠವು ಮುಂದೆ ನಾಲ್ಕು ಜಗದ್ಗುರುಗಳಾಗಿ ಭಿನ್ನವಾಗಿದೆ. ಸ್ಥಾವರಗೊಂಡ ಶೂನ್ಯಪೀಠದ ಚಿತ್ರದುರ್ಗದ ಮುರುಘಾಮಠ, ಹುಬ್ಬಳ್ಳಿಯ ಮೂರುಸಾವಿರಮಠ, ಗದುಗಿನ ತೋಂಟದಾರ್ಯಮಠದ ಸ್ವಾಮಿಗಳಲ್ಲದೆ ಮುಂಡರಗಿಯ ಅನ್ನದಾನಸ್ವಾಮಿಗಳನ್ನು ಅಂದಿನ ಬ್ರಿಟಿಷ್ ಸರ್ಕಾರದ ಮೂಲಕವೇ ಜಗದ್ಗುರು ಎಂದು "ತೀರ್ಮಾನಿಸ"ಲಾಗಿದೆ ಎಂದು ಈ ಗ್ರಂಥದ ಎರಡನೇ ಭಾಗದ "ಬುಡದ ಕೆಲವು ಮಾತುಗಳು" ಎಂಬ ಪ್ರಸ್ತಾವನೆಯಲ್ಲಿ ಉಲ್ಲೇಖಿಸಲಾಗಿದೆ. ಹಾಗೆಯೇ, "ತಮ್ಮ ತಮ್ಮ ಮಠಗಳಲ್ಲಿ ತಾವೇ ಜಗದ್ಗುರುಗಳೆಂದು ಬರೆದುಕೊಳ್ಳುವ, ಭಕ್ತರಿಂದ ಕರೆಸಿಕೊಳ್ಳುವ ಬಹಳಷ್ಟು ಸ್ವಾಮಿಗಳಿದ್ದಾರೆ" ಎಂದೂ ಹೇಳಲಾಗಿದೆ. ಅಂದ ಹಾಗೆ ಈ ಗ್ರಂಥವು ೧೯೩೩ ರಿಂದ ೧೯೩೭ ರವರೆಗೆ ವೀರಶೈವ ಮಹಾಸಭಾದ ಅಧ್ಯಕ್ಷರಾಗಿದ್ದ ದಿವಂಗತ ಡಾ. ಫಕೀರಪ್ಪ ಗುರುಬಸಪ್ಪ ಹಳಕಟ್ಟಿಯವರ ಅಧ್ಯಕ್ಷೀಯ ಕಾಲದಲ್ಲಿಯೇ ಪ್ರಕಟವಾಗಿದೆ. ಈ ಬುಡದ ಮಾತುಗಳು ಇಂದು ಹೆಮ್ಮರವಾಗಿ ಬೆಳೆದು ವರ್ತಮಾನದ ಇಪ್ಪತ್ತೊಂದನೇ ಶತಮಾನದಲ್ಲಂತೂ ಆಸ್ಫೋಟಕರವಾಗಿ ಶಂಕರ, ಮಂಕರ ಮತ್ತು ಕಿಂಕರರೂ ಸಹ ಜಗದ್ಗುರುಗಳಾಗಿದ್ದಾರೆ ಎಂದು ಜಗತ್ತೇ ಬಲ್ಲದು. ಮೇಲೆ ತಿಳಿಸಿದಂತೆ ಕಾಲಜ್ಞಾನ ಸಂಪುಟದ ಒಳಮರ್ಮದ ಒಂದು ಸುಳಿಮಿಂಚಾಗಿ "ನಿರಂಜನವಂಶ ರತ್ನಾಕರ"ದ ಬುಡದ ಮಾತುಗಳು ಇಂದು ಪ್ರತಿಯೊಬ್ಬ 'ಪಾಶುಪತ-ಕಾಳಾಮುಖ-ವೀರಶೈವ-ಲಿಂಗಾಯತ' ಅನುಯಾಯಿಯ ಆತ್ಮಲಿಂಗಕ್ಕೆ ದಿವ್ಯ ಬೆಳಕಿನ ಕಂಥೆಯಾಗಿ ಆವರಿಸಬೇಕಾದ್ದು ಪ್ರತ್ಯೇಕ ಧರ್ಮ, ಮಿಸಲಾತಿಯಂತಹ ಆಮಿಷಗಳ ಕಗ್ಗತ್ತಲಲ್ಲಿ ಅಂತೆಕಂತೆಯಾಗಿದೆ.


ಕೇವಲ "ಆಸನದ ಅಂತಸ್ತು"ಗಳ ಕಾರಣ ಕೆಲವು ಭೇದಗಳಾಗಿದ್ದವು ಎಂಬುದು ಇತಿಹಾಸ. ಈ ಆಸನ ಅಂತಸ್ತಿನ ಕಾರಣವನ್ನು ಹಿಡಿದು ಕೆಲವು ಹಿತಾಸಕ್ತಿಗಳು ಪಂಚಪೀಠ-ವಿರಕ್ತರಲ್ಲಿ ಪರಮಭೇದವನ್ನು ಹುಟ್ಟುಹಾಕಿದರೂ ಅದನ್ನು ಸಮಾಜವು ಭೇದವಾಗಿ ಪರಿಗಣಿಸಿರಲಿಲ್ಲ. ಶೂನ್ಯಪೀಠದ ವಿರಕ್ತರಲ್ಲಾಗಲಿ ಪಂಚಪೀಠಗಳ ಗುರುವರ್ಗದಲ್ಲಾಗಲಿ ಏನೇ ವೈಮನಸ್ಯವುಂಟಾದರೂ ಅವರೆಲ್ಲರೂ ಅಖಂಡವಾಗಿ ಎಂದಿಗೂ ಧರ್ಮವನ್ನು ಕಾಪಾಡಿದ್ದರು. ಗುರುವಿರಕ್ತ ಜಂಗಮರು ಕಂತೆಭಿಕ್ಷೆಯನ್ನೂ ಮಾಡಿ ಮಠಗಳನ್ನು ಕಟ್ಟಿ ಪಾಠಶಾಲೆಗಳನ್ನು ನಡೆಸಿದ್ದರು. ಅನೇಕ ಗ್ರಂಥಸಂಪಾದನೆಗಳನ್ನು ಮಾಡಿ ಜ್ಞಾನದ ಭಂಡಾರವನ್ನು ಸಮಾಜಕ್ಕೆ ಅರ್ಪಿಸಿದ್ದರು. ತಮ್ಮ ಧರ್ಮಕ್ಕೆ ಯಾವುದೇ ರೀತಿಯ ಧಕ್ಕೆಯುಂಟಾದಾಗ ಉಗ್ರರಾಗಿ ಕಾಳಾಮುಖ ಕೆಚ್ಚಿನಿಂದ ಹೋರಾಡಿದ್ದರು ಕೂಡ. ಹಾಗಾಗಿಯೇ ಮೈಸೂರಿನ ಚಿಕ್ಕದೇವರಾಜ ಒಡೆಯರನ ತೆರಿಗೆಯನ್ನು ತೀವ್ರವಾಗಿ ವಿರೋಧಿಸಿ ನಾಲ್ಕುನೂರಕ್ಕೂ ಅಧಿಕ ಜಂಗಮರು ಪ್ರಾಣಾರ್ಪಣೆ ಮಾಡಿದ್ದಾರೆ. ಇವರನ್ನು ನೇರವಾಗಿ ಎದುರಿಸಲಾಗದೆ ಚಿಕ್ಕದೇವರಾಜ ಒಡೆಯರನು ಮೋಸದಿಂದ ಕೊಂದದ್ದು ಕಾಳಾಮುಖ ವೀರಶೈವ ಕೆಚ್ಚಿನ ಸಂಕೇತದ ಐತಿಹಾಸಿಕ ಸಾಕ್ಷಿಯಾಗಿದೆ. ಚೆನ್ನಬಸವಣ್ಣನಿಂದ ಜಗದ್ಗುರು ಮುರುಘರಾಜೇಂದ್ರ ಮಹಾಸ್ವಾಮಿಗಳವರೆಗೆ ಆಗಿ ಹೋದ ಎಲ್ಲಾ ಶೂನ್ಯಪೀಠಾಧ್ಯಕ್ಷರು ಜೈನ, ವೈಷ್ಣವ ಮತ್ತಿತರೆ ಧರ್ಮೀಯರು ಆಕ್ರಮಿಸಿದ ಶೈವ ದೇವಾಲಯಗಳನ್ನು ವಶಪಡಿಸಿಕೊಂಡು ಅಲ್ಲಿ ಶೈವಾರಾಧನೆಯನ್ನು ಮರುಸ್ಥಾಪಿಸಿದ್ದರು ಎಂದು ನಿರಂಜನ ವಂಶ ರತ್ನಾಕರ ಗ್ರಂಥವು ದಾಖಲಿಸಿದೆ. ಎಲ್ಲಿಯೂ ಸ್ಥಾವರಗಳನ್ನು ನಿರಾಕರಿಸಿದ ಉದಾಹರಣೆಯಿಲ್ಲ. ಇಂತಹ ಪರಂಪರೆಯ ವೀರಶೈವದಲ್ಲಿ ಜಾತಿ ಸಮಯಭೇಧದ ತರುವಾಯ ಜಂಗಮ ದ್ವೇಷದ ವೀರಶೈವ ಬೇರೆ ಲಿಂಗಾಯತ ಬೇರೆ ಎನ್ನುವ "ಘಾತುಕ ಸಮಯ" ಉಂಟಾಗಲು ಕಾರಣವೇನು?!?


ಅದಕ್ಕೆ ಕಾರಣ, ನಾವೀನ್ಯ ಲಿಂಗಾಂಗ ಸಾಮರಸ್ಯ!


ಆರಂಭದಲ್ಲಿ ಯಾವುದೇ ಭೇದವನ್ನೆಣಿಸದೆ ಶ್ರೀಮದ್ವೀರಶೈವವನ್ನೇ ಬೋಧಿಸುತ್ತಿದ್ದ ಪ್ರಾಕಾಂಡ ಪ್ರವಚನಕಾರರಾದ ಲಿಂಗಾನಂದ ಸ್ವಾಮಿಗಳು "ಮನದ ಮುಂದಣ ಆಸೆಯೇ ಮಾಯೆ ಕಾಣಾ ಗುಹೇಶ್ವರ" ಎಂಬಂತೆ ವರ್ತಮಾನದ ಶೂನ್ಯಪೀಠವಿರುವ ಚಿತ್ರಕಲ್ಲು ದುರ್ಗದಲ್ಲಿ ಒಂದು ಮಹಾಮಾಯೆಗೆ ಒಳಗಾದದ್ದೇ ಇದಕ್ಕೆ ಮೂಲ ಎನ್ನಬಹುದು. ಅದು ಲಿಂಗಾನಂದರ ತಪ್ಪಲ್ಲ, ಚಿತ್ರಕಲ್ ದುರ್ಗದ ಗಾಳಿಯೇ ಹಾಗೆ! "ಅರಿತರೆ ಆರು ಪಟ್ಟ, ಮರೆತರೆ ಮೂರು ಪಟ್ಟ" ಎಂಬ ದುರ್ಗದ ಜಾತಕ ಫಲ, ತನ್ನಲ್ಲಿ ಕಾಲಿಟ್ಟ ಪಂಡಿತರನ್ನು ಕಾಡದೇ ಬಿಟ್ಟೀತೆ? ಅವರ ಮನಸ್ಸನ್ನು ಚಂಚಲಗೊಳಿಸಿ ಚೆಲ್ಲಾಪಿಲ್ಲಿ ಮಾಡಿಯೇಬಿಟ್ಟಿತು. ಲಿಂಗಾನಂದರ ಮತ್ತು ಮಹಾದೇವಿಯವರ ಪ್ರವಚನಗಳಿಗೆ ಗುರುವಿರಕ್ತ ಜಂಗಮರೂ ಸೇರಿದಂತೆ ಇಡೀ ವೀರಶೈವ ಸಮಾಜ ಒಕ್ಕೊರಲಿನ ಪ್ರೋತ್ಸಾಹ, ಬೆಂಬಲ ನೀಡಿತ್ತು. ಯಾವಾಗ ಅವರ ಮಾರ್ಗ ಧರ್ಮವನ್ನು ಬಿಟ್ಟಿತೋ ಆಗ ಎಲ್ಲರೂ ವಿರೋಧಿಸತೊಡಗಿದರು.


ಈ ಮಹಾ"ದೇವಿ" ಮಾಯೆಯ ಕುರಿತು, ಇವರೀರ್ವರ ಲಿಂಗಾಂಗ ಸಾಮರಸ್ಯದ ಕುರಿತು ಎಲ್ಲಾ ಗುರುವಿರಕ್ತ ಸ್ವಾಮಿಗಳೂ, ವೀರಶೈವ ಸಮಾಜವೂ ಅಂದು ನಿಷ್ಠುರವಾಗಿ ಖಂಡಿಸಿತು. ಈ ಬಗ್ಗೆ ಆಸಕ್ತರು ಆ ಕಾಲಘಟ್ಟದ ಸಮಾಚಾರ ಮಾಧ್ಯಮವನ್ನು ಗಮನಿಸಬೇಕು. ಅದರಲ್ಲೂ "ಲಿಂಗಾಯತ ಪ್ರತ್ಯೇಕ ಧರ್ಮ" ಸತ್ಯಶೋಧನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಯೋಜಿಸಿದ್ದ ಸಮಿತಿಯ ಅರ್ಧಕ್ಕೂ ಹೆಚ್ಚು ಸದಸ್ಯರು ಪಳಗಿದ್ದ ಲಂಕೇಶ್ ಪತ್ರಿಕೆಯಲ್ಲಿಯೇ ಈ ಬಗ್ಗೆ ಸಾಕಷ್ಟು ವರದಿಗಳು ಬಂದಿದ್ದವು. ಲಂಕೇಶರ ಮಗಳೇ ಈ ಪ್ರತ್ಯೇಕ ಮಾಯೆಗೆ ಒಳಗಾದಾಗ ಸರ್ಕಾರಿ ಕೃಪಾಪೋಷಿತ ಈ ಸಮಿತಿಯು ಅದೆಲ್ಲವನ್ನೂ ಮರೆತು ಈ ಜೋಡಿ ಸೃಷ್ಟಿಸಿದ ಸಂಕಥನಕ್ಕೆ ಮತ್ತು ಕಲಬುರ್ಗಿಯ ಸುಳ್ಳಿನ ಸಂಶೋಧನೆಗಳಿಗೆ ತಕ್ಕಂತೆ ಆತ್ಮವಂಚನೆಯ ವರದಿ ನೀಡಿತ್ತು ಎನ್ನುವುದು ಇತಿಹಾಸ. ಒಟ್ಟಾರೆ ಬಹಿಷ್ಕಾರದ ಭಯವೋ ಅಥವಾ ಇವರ ಪ್ರವಚನಗಳನ್ನು ಮೆಚ್ಚಿ ಸೇರುತ್ತಿದ್ದ ಜನಸಮೂಹವನ್ನು ಕಂಡು ಇವರಲ್ಲುಂಟಾದ ಧಾರ್ಷ್ಟ್ಯದ ಮನೋವಿಕಾರವೋ, ಈರ್ವರೂ ಲಿಂಗಾಯತ ಬೇರೆ ಎಂದು ತಮ್ಮದೇ ಮಾರ್ಗವನ್ನು ಬಸವ ಕವಚದ ಶ್ರೀರಕ್ಷೆಯಲ್ಲಿ ಆರಂಭಿಸಿದರು. ಅದಕ್ಕೆ ಕೆಲವೇ ಕೆಲವು ವಿಘ್ನಸಂತೋಷಿಗಳ ಬೆಂಬಲ ಸಹ ಸಿಕ್ಕಿತು. ಈ ಬೆಂಬಲದ ನಶೆಯಲ್ಲಿ ಮಹಾಮಾಯೆಯು ಜಗತ್ತಿನ ಪ್ರಪ್ರಥಮ ಮಹಿಳಾ ಜಗದ್ಗುರು ಎಂಬ ಅಕ್ಷತ ಮೇರಿ ಮಾತೆಯಾಗಿ ತಮ್ಮ ಹೆಸರಿನ ಹಿಂದೆ ಜಗದ್ಗುರು ಎಂದು ಸೇರಿಸಿಕೊಂಡು ಇಲ್ಲದ ಶೂನ್ಯದಲ್ಲಿ ಪೀಠವನ್ನೇರಿಬಿಟ್ಟರು! ವಚನ ಚಳವಳಿಯ ಶರಣೆಯರೆಲ್ಲರೂ ಯಕಶ್ಚಿತ್ "ಅಕ್ಕ" ಎಂದು ಕರೆಸಿಕೊಂಡಿದ್ದರೆ ಇಪ್ಪತ್ತನೇ ಶತಮಾನದ ನಾನು ಅವರ "ಹ(ಅ)ಮ್ಮ"ನಂತೆ ಎನ್ನುವ ಅಹಂನಿಂದ "ಮಾತೆ" ಎಂಬ ಉಪಸರ್ಗವನ್ನು ತಮ್ಮ ಹೆಸರಿಗೆ ಸೇರಿಸಿಕೊಂಡರು. ಇನ್ನು ಸ್ಥಾವರಗೊಂಡಿರುವ ಮೂಲ ಶೂನ್ಯಪೀಠವಿರುವ ಮತ್ತು ಈ ಮಾತೆಯ ಮೂಲವೂ ಆದ ಚಿತ್ರದುರ್ಗ ಪಟ್ಟಣದ ಒಂದು ಪಟಾಲಂ ತನ್ನ ಸದಸ್ಯರ ಕಾರುಗಳ ಹಿಂದೆ ಇತ್ತೀಚಿನ ದಶಕದಲ್ಲಿ "ಜಗದ್ಗುರು" ಎಂದು ಬರೆಸಿಕೊಂಡಿತ್ತು ಎಂಬುವಲ್ಲಿಯವರೆಗೆ ಈ ಆಧುನಿಕ ಜಗದ್ಗುರು ಪಟ್ಟವಲ್ಲರಿ ವಿಸ್ತರಿಸಿಕೊಂಡು ಬಂದಿದೆ!


ಈ ಮಾತೆಯ ಸಂತತಿ ಬೆಳೆಸಲು ಶೈಕ್ಷಣಿಕವಾಗಿ ಸಾಧನೆ ಮಾಡಲಾಗದೆ ಬೆಳೆಸಿಕೊಂಡ ತಮ್ಮ ವೈಯಕ್ತಿಕ ಜಂಗಮದ್ವೇಷದಿಂದ ಮತ್ತು ಶೀಘ್ರಸ್ಖಲಿತ ಸಂಶೋಧನೆಗಳ ಕಾರಣ ಶೂನ್ಯಪೀಠದ ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳಿಂದಲೇ ಅವಮಾನಿತರಾಗಿದ್ದ ಆದರೆ ನಾಡಿನ ಸಂಶೋಧಕಪ್ರಜ್ಞೆ ಎಂದೇ ಖ್ಯಾತರಾಗಿರುವ ಎಂ.ಎಂ.ಕಲಬುರ್ಗಿಯವರು ತಮ್ಮ ಉದ್ದಂಡ ವೃತ್ತಿಯನ್ನೇ ಮೀಸಲಿರಿಸಿದರು. ಈ ಸಂಶೋಧಕರ ಸಂಶೋಧನೆಗಳು ಎಷ್ಟೊಂದು ಪೊಳ್ಳಾಗಿದ್ದವು ಎಂದು ಹಿಂದಿನ ಲೇಖನಗಳಲ್ಲಿ ಪುರಾವೆ ಸಮೇತ ನಾನು ಸಾಬೀತುಪಡಿಸಿರುವುದು ಇಲ್ಲಿ ಉಲ್ಲೇಖಾರ್ಹ. ಇನ್ನು ಈ ಸಂಶೋಧಕರು ಮತ್ತು ಪ್ರತ್ಯೇಕವಾದಿಗಳು ಹೇಳುವ ಪಂಚಾಚಾರ್ಯರು ಈ ಧರ್ಮದಲ್ಲಿ ನುಸುಳಿದ್ದರು, ಆಂಧ್ರದ ಆರಾಧ್ಯರು ಬೇರೆ, ಲಿಂಗಾಯತ ಜಂಗಮರು ಬೇರೆ ಇತ್ಯಾದಿ ಯಾವ ಸಂಗತಿಗಳೂ ಈ ಗ್ರಂಥದಲ್ಲಷ್ಟೇ ಅಲ್ಲದೆ ಯಾವುದೇ ಇತಿಹಾಸಜ್ಞ ಮಾನ್ಯ ದಾಖಲೆಗಳಲ್ಲಿ ಉಲ್ಲೇಖವಾಗಿಲ್ಲ. ಈ ಗ್ರಂಥವು ಐತಿಹಾಸಿಕ ಸಂಶೋಧನೆಯ ಬಹುಮುಖ್ಯವಾದ ಗ್ರಂಥ ಎಂದು ಫ. ಗು. ಹಳಕಟ್ಟಿಯವರೇ ಪ್ರಸ್ತಾವನೆಯಲ್ಲಿ ನುಡಿದಿದ್ದಾರೆ. ಈ ಗ್ರಂಥದ ಗಂಧಗಾಳಿಯೂ ಗೊತ್ತಿರದೆ ದುರ್ಗಂಧ ಸೂಸಿದ ಸಂಶೋಧಕರ ಸಂಶೋಧನೆ ಎಂತಹ ಸುಳ್ಳು ಎಂದು ಈಗ ಜಗತ್ತೇ ಬಲ್ಲುದು. ಹೀಗಿದ್ದರೂ 'ಬಿದ್ದರೂ ಮೀಸೆ ಮಣ್ಣಾಗಲಿಲ್ಲ' ಎಂಬ ಮೀಸೆ ತಿರುವಿಕೆ ಕುತ್ಸಿತ ಕೂಪಮಂಡೂಕ ವಾದ ಪ್ರತ್ಯೇಕವಾದಿಗಳದ್ದು! ಒಟ್ಟಿನಲ್ಲಿ ಇವರ ವಾದವು, ಎಲ್ಲಿಗೆ ಬಂತು ಸಂಗಯ್ಯ? ಇಲ್ಲಿಗೆ ಬಂತು ಸಂಗಯ್ಯವಾಗಿದೆ! ಇಂತಹ ಬಾಲಿಶ ಸಂಶೋಧನೆಗಳಾಧರಿತವಾಗಿ ಓರ್ವ ಘನ ಸರ್ಕಾರದ ಮುಖ್ಯಮಂತ್ರಿ ಪ್ರತ್ಯೇಕ ಧರ್ಮ ಮಾಡಲು ಹೊರಟಿದ್ದರು ಎಂದರೆ ಸಂಶೋಧನಾ ನೆಲೆಯಲ್ಲಿ ರಾಜ್ಯದ ಮರ್ಯಾದೆಯು ಅಂತರರಾಷ್ಟ್ರೀಯವಾಗಿ ಎಂತಹ ನಗೆಪಾಟಲಿಗೆ ಒಳಗಾಗಿರಬಹುದು ಮತ್ತು ಹೀಗೆಯೇ ಮುಂದುವರಿದರೆ ಶಾಶ್ವತವಾಗಿ ಒಳಗಾಗಬಹುದು ಎಂಬುದು ಕನ್ನಡಮ್ಮನ ಕಂದಗಳಿಗೆ ಬಿಟ್ಟ ವಿಷಯ. ಅಂದ ಹಾಗೆ ಈ ಸುಳ್ಳಿನ ಸರದಾರರು ಈಗಲೂ ಸತ್ಯವಾಗಿ ಮುಖ್ಯಮಂತ್ರಿಗಳ ಆಸ್ಥಾನಪಂಡಿತರಾಗಿಯೇ ಇದ್ದಾರೆ.


ಇರಲಿ, ಹೀಗೆ ಅಲ್ಲಿಂದ ಬೆಳೆದ ಈ ಧರ್ಮ"ಘಾತುಕ ಸಮಯ"ವು ಅನೇಕ ಆಸೆ ಆಮಿಷಗಳಿಗೆ ಕೆಲವು ವಿರಕ್ತರನ್ನು ಒಳಗಾಗಿಸುತ್ತ, ನವ್ಯದ ವಿದೇಶಿ ಕಮ್ಯೂನಿಸ್ಟ್ ಸಿದ್ಧಾಂತದ ಮಾಯೆಗೆ ಸಿಲುಕಿಸುತ್ತ, ಮುಗ್ಧ ಭಕ್ತರಲ್ಲಿ ಇಲ್ಲದ ಪುರೋಹಿತಶಾಹಿ ಸಂಕಥನವನ್ನು ಹೇಳುತ್ತ ಜಂಗಮದ್ವೇಷವನ್ನು ತುಂಬಿ ಪ್ರತ್ಯೇಕ ಧರ್ಮವನ್ನು ಶೂನ್ಯದಿಂದ ಸೃಷ್ಟಿಸತೊಡಗಿದರು. ಶೂನ್ಯದಿಂದಲೇ ಪ್ರಪ್ರಥಮ ಮಹಿಳಾ ಜಗದ್ಗುರು, ಮಾತೆ ಇತ್ಯಾದಿ ಉಪಸರ್ಗಗಳನ್ನು ಸೃಷ್ಟಿಸಿಕೊಂಡವರಿಗೆ ಅದೇ ಶೂನ್ಯದಿಂದ ಒಂದು ನಿಶ್ಶೂನ್ಯ ಧರ್ಮವನ್ನು ಸೃಷ್ಟಿಸುವುದು ಕಷ್ಟವೇ?! ಅದರಲ್ಲೂ ಓಟಿಗೆ ನೋಟು ಎನ್ನುವ ಚೌಕಾಸಿ ಪ್ರಭುಗಳು, ನೋಟಿಗಾಗಿ ಓಟು ಎನ್ನುವ ದೈನೇಸಿ ಪ್ರಜೆಗಳ ಊಳಿಗಮಾನ ಸ್ವೇಚ್ಛಾಚಾರದ ಪ್ರಜಾಪ್ರಭುತ್ವದಲ್ಲಿ ಮತ್ತು ಮೀಸಲಾತಿ ಎನ್ನುವ ಚೀಪುಕಡ್ಡಿಮಿಠಾಯಿಯ ಮಧುಮೇಹದ ವ್ಯವಸ್ಥೆಯಲ್ಲಿ!!! ಹಾಗಾಗಿ ಗುರುವೂ ಇಲ್ಲದೆ, ಜಂಗಮವೂ ಇಲ್ಲದೆ ಲಿಂಗವನ್ನೂ ಲಿಂಗಾರ್ಪಿತ ಲಿಂಗಾರ್ಪಿತ ಲಿಂಗಾರ್ಪಿತ ಮಾಡಿ ಕೇವಲ ಆಯತ ಆಯತ ಆಯತದ ಆಯಕಟ್ಟಿಗಾಗಿ ತನುಮನವನ್ನು ಪ್ರತ್ಯೇಕ ಧರ್ಮಿಗಳು ಬಳಲಿಸುತ್ತಿದ್ದಾರೆ. ಆಯತ ಎಂದರೆ ನೆಲೆ, ಉಚಿತ, ಕ್ರಮ, ಲಾಭ, ಒಳಹರಿವು ಎಂಬೆಲ್ಲ ಅರ್ಥವಿದೆ ಎಂಬುದು ಕನ್ನಡ ಪದ ವಿಶೇಷ. ಉಳಿದಂತೆ,


ಎನ್ನ ಆಯತ ಅವಧಾನಗೆಟ್ಟಿತ್ತಯ್ಯಾ.

ಎನ್ನ ಸ್ವಾಯತ ಸಂದಳಿಯಿತ್ತಯ್ಯಾ.

ಎನ್ನ ಸಮಾಧಾನ ತರಹವಾಯಿತ್ತಯ್ಯಾ.

ಎನ್ನ ಅರಿವು ನಿಜದಲ್ಲಿ ನಿಃಪತಿಯಾಯಿತ್ತಯ್ಯಾ.

ಕಲಿದೇವರದೇವಾ, ನಿಮ್ಮಲ್ಲಿ ಶಬ್ದಮುಗ್ಧವಾದೆನು.


ಬಸವ ಸ್ಥಾಪಿತ ಶೂನ್ಯಪೀಠದ ನಿರಂಜನ ವಂಶ ರತ್ನಾಕರದ ನಿಯಮಾವಳಿಗಳ ಪ್ರಕಾರವಾಗಿ ದೀಕ್ಷೆ ಪಡೆಯದೆ ಲಿಂಗಾಯತದ ಹೊರಗುಳಿದ ಇಂತಪ್ಪ ಸ್ವಘೋಷಿತ ಜಗದ್ಗುರುಗಳು ಲಿಂಗಾಯತ ಪ್ರತ್ಯೇಕ ಧರ್ಮ ಎನ್ನುವುದು ಬಾಲವೇ ಆನೆಯನ್ನು ಅಲ್ಲಾಡಿಸಿದಂತೆ! 


ದೇಶದ ಇತಿಹಾಸವನ್ನು ಸಮಗ್ರವಾಗಿ ಗ್ರಹಿಸಿದಾಗ ಮನುಸ್ಮೃತಿಯಲ್ಲಿ ಇಲ್ಲದ್ದು ಇದೆಯೆಂದು ಹೇಗೆ ಸಮಗ್ರವಾಗಿ ರಾಷ್ಟ್ರೀಯವಾಗಿ ಸಂವಿಧಾನದಲ್ಲಿ ಸಾದರಪಡಿಸಲಾಗಿದೆಯೋ ಅದೇ ಮಾದರಿಯನ್ನು ಸಂಕ್ಷಿಪ್ತವಾಗಿ ಪ್ರಾದೇಶಿಕವಾಗಿ ಈ ಧರ್ಮಕಾರಣದಲ್ಲಿ ಪ್ರಯೋಗಿಸಲಾಗುತ್ತಿದೆ. ವಿದೇಶಿ ಬ್ರಿಟಿಷರ 'ವಿಭಜಿಸಿ ಆಳು' ನೀತಿ ಬ್ರಿಟಿಷರಿಗೆ ಅನಿವಾರ್ಯವಾಗಿತ್ತು, ಮಾಡಿದರು. ಆದರೆ ಸ್ವದೇಶಿ ಚಳುವಳಿ ಮಾಡಿಯೇ ಪಡೆದ ಸ್ವತಂತ್ರ ಭಾರತದಲ್ಲಿ ಮಾಡಿದ ಸಾಂವಿಧಾನಿಕ ಜಾತಿನೀತಿಯ ವಿಭಜನೆ ಯಾರಿಗೆ ಬೇಕಿತ್ತು ಎಂಬುದು ಸ್ಪಟಿಕದ ಶಲಾಕೆಯಷ್ಟೇ ಸುಸ್ಪಷ್ಟ. ಹಾಗೆಯೇ ಅಂಬೇಡ್ಕರರ ನಿಲುವೂ ಮಾಣಿಕ್ಯದ ದೀಪ್ತಿಯಷ್ಟೇ ಉಜ್ವಲ.


ಸತ್ಯಮೇವ ಜಯತೆ ಎಂಬ ಉದ್ಘೋಷದ ರಾಷ್ಟ್ರದಲ್ಲಿ ಅಸತ್ಯವೇ ಏಕಮೇವ ಜಯಶಾಲಿಯಾಗಿದೆ!


- ರವಿ ಹಂಜ್


No comments: