ಉಸಿರೇ, ನಿನ್ನ ಸಂಗವಿಲ್ಲದೆ ನಾನೇನು ಮಾಡಲಿ...
ಒಳಗೆಳೆದು ಹೊರ ನೂಕುವ ನಿನ್ನಯ ಬೆಸುಗೆಅರ್ಥೈಸಲಾರೆ ಈ ನಿನ್ನ ಪ್ರೀತಿಯ ಒಸುಗೆ
ದೇವರಾಣೆ ಗಿರಗಿರನೆ ನನ್ನ ತಿರುಗಿಸುವ ಪರಿಗೆ!
ನೀ ಎನ್ನ ಪ್ರೇಯಸಿ, ನೀ ನನ್ನ ರಾಕ್ಷಸಿ
ಏನಾಗುತ್ತಿದೆ ಆ ನಿನ್ನ ಸುಂದರ ಮನಸ್ಸಿಗೆ ರೂಪಸಿ!
ಕುಲುಕುಲುಕಿ ಇರಿದಿರಿದು ಚುಚ್ಚಿದರು ನೀನು
ಬಿರಿಬಿರಿದು ತೋರುವೆನು ಪ್ರೀತಿಯನು ನಾನು
ಕಣಕಣವ ಕೊಡು ನೀ ನಿನ್ನದೆಲ್ಲವನ್ನೂ
ಕೊಡುವೆ ನಾ ನನ್ನದೆಲ್ಲವನ್ನು....
ಈ ಹುಚ್ಚು ಪ್ರೇಮದ್ವೇಷದೆ ನೀ ಎನ್ನ ಮರೆತಿದ್ದರೂ
ನಿನ್ನ ನಿಗೂಢ ಮಾಂತ್ರಿಕ ಮಾಟದಲಿ
ಅತಳ ವಿತಳ ಪಾತಾಳಗಳ ಕಂಡು ತಲೆ ತಿರುಗಿ
ಉರುಳುರುಳಿ ಬಿದ್ದು ತಲೆಯೊಡೆದು
ಆದ ಗಾಯಗಳ ನಡುವೆ ನಾ ಚೆನ್ನಾಗಿಯೇ ಇರುವೆ.
ನೀರಲ್ಲಿ ಮುಳುಗಿದ್ದರೂ ಉಸಿರಾಡುತ್ತಲೇ ಇರುವೆ!
ಏಕೆಂದರೆ ನನ್ನೆಲ್ಲವೂ ನಿನ್ನೆಲ್ಲವನ್ನು ಪ್ರೀತಿಸುತ್ತಿದೆ
ನಿನ್ನೆಲ್ಲ ಬಳುಕು ಭಿನ್ನಾಣಗಳನ್ನು,
ನಿನ್ನೆಲ್ಲ ಪರಿಪೂರ್ಣ ದೋಷಗಳನ್ನು.
ಕಣಕಣವ ಕೊಡು ನೀ ನಿನ್ನದೆಲ್ಲವನ್ನೂ
ಕೊಡುವೆ ನಾ ನನ್ನದೆಲ್ಲವನ್ನು....
ನೀ ನನ್ನ ಚಿತ್ತ ಚಂಚಲ, ನೀ ನನ್ನ ವೇಗ, ನೀ ಎನ್ನ ಮೇಘ ಅನುಕ್ಷಣವು ತಲೆಯಲ್ಲಿ ನಿನ್ನದೇ ಮಲ್ಹಾರ ರಾಗ.
ನೀನೊಂದು ಮದ್ಯ ನನಗದು ಮಿಥ್ಯ!
ಎಷ್ಟು ಕುಡಿದರು ನನಗೆ ದಕ್ಕಿಹುದು ಬರೀ ನಿನ್ನ ಘಮಲು
ಏರಿಹುದು ನಿನಗೆ ನಿನ್ನದೇ ಮದ್ಯದ ಭಾರೀ ಅಮಲು.
ನೀರಲ್ಲಿ ಮುಳುಗಿದ್ದರೂ ಉಸಿರಾಡುತ್ತಲೇ ಇರುವೆ
ಸೋಲುತ್ತಿದ್ದರೂ ಗೆಲ್ಲುತ್ತಲಿರುವೆ.
ಏಕೆಂದರೆ ನನ್ನೆಲ್ಲವೂ ನಿನ್ನೆಲ್ಲವನ್ನು ಪ್ರೀತಿಸುತ್ತಿದೆ
ನಿನ್ನೆಲ್ಲ ಆ ಓರೆ ಕೋರೆಗಳನ್ನು,
ನಿನ್ನೆಲ್ಲ ಆ ಪರಿಪೂರ್ಣ ದೋಷಗಳನ್ನು.
ಕಣಕಣವ ಕೊಡು ನೀ ನಿನ್ನದೆಲ್ಲವನ್ನೂ
ಕೊಡುವೆ ನಾ ನನ್ನದೆಲ್ಲವನ್ನು....
ಸೋಲುತ್ತಿದ್ದರೂ ಗೆಲ್ಲುತ್ತಲೇ ಇರುವೆ
ನೀ ಎನ್ನ ಅಂತ್ಯ ನೀ ಎನ್ನ ಆದಿ
ನೀನೊಂದೆ ನನ್ನ ಅಳಿದುಳಿದ ಹಾದಿ!
ಉರುಳುತ್ತಿದೆ ಎನ್ನ ಜೀವನದ ಗಾಲಿ
ಉಸಿರೆಳೆದುಕೊಳ್ಳುತ್ತ ಆ ಹಾದಿಯ ಧೂಳಿ.
ನೀ ಎನ್ನ ಏಕೈಕ ನಿಶ್ಯಕ್ತ ನಲುವು
ಜಗವದನು ಕರೆಯುವುದು ಅವ್ಯಕ್ತ ಒಲವು.
ಕಣಕಣವ ಕೊಡು ನೀ ನಿನ್ನದೆಲ್ಲವನ್ನೂ
ಕೊಡುವೆ ನಾ ನನ್ನದೆಲ್ಲವನ್ನು....
ಕಣಕಣವ ಕೊಡು ನೀ ನಿನ್ನದೆಲ್ಲವನ್ನೂ
ಕೊಡುವೆ ನಾ ನನ್ನದೆಲ್ಲವನ್ನು....
ನನ್ನದೆಲ್ಲವೂ ನಿನ್ನದೇ ಆಗಿದ್ದರೂ
ಬಸಿಬಸಿದು ಕೊಡುವೆ ಮಿಗಿಲಿದಣುವಣುವನ್ನು!
ಸೋಲುತ್ತಿದ್ದರೂ ಗೆಲ್ಲುತ್ತಲೇ ಇರುವೆ
ಗೆದ್ದರೂ ನಿನಗಾಗಿ ಮತ್ತೆ ಮತ್ತೆ ಸೋಲುತ್ತಲೇ ಇರುವೆ.
ಕಣಕಣವ ಕೊಡು ನೀ ನಿನ್ನದೆಲ್ಲವನ್ನೂ
ಕೊಡುವೆ ನಾ ನನ್ನದೆಲ್ಲವನ್ನು....
- ರವಿ ಹಂಜ್