ಕನ್ನಡ ವಿರೋಧಿಗಳಿಗೆ ಮಸಿ ಬಳಿಯುವ ಮುನ್ನ...




ಕಳೆದ ವಾರ ಕನ್ನಡ ಚಿತ್ರರಂಗದ ಕುರಿತು ಹಾಸ್ಯವಾಗಿ ಬರೆದಿದ್ದರೂ ಅದು ಇಂದಿನ ಚಿತ್ರರಂಗದ ನೈಜ ಚಿತ್ರಣವೇ ಅಗಿತ್ತೆಂದು ಓದುಗರು ತಿಳಿಸಿದಾಗ ಖುಷಿಗೊಳ್ಳುತ್ತ ಈ ಬಾರಿ ಕೊಂಚ ಸೀರಿಯಸ್ ಆಗಿ ಕನ್ನಡ ರಕ್ಷಣೆ ಹೇಗಿದ್ದರೆ ಚೆನ್ನವೆಂದು ಯೋಚಿಸಿದಾಗ ಕಂಡದ್ದು ಬಹಳಷ್ಟು...

ಅಲ್ಲ ನಮ್ಮ ಕನ್ನಡ ಹೋರಾಟಗಾರರಿಗೆ ಕನ್ನಡ ಹೋರಾಟವೆಂದರೆ ಬೆಂಗಳೂರಿನ ದಂಡು ಪ್ರದೇಶದ ಅಂಗಡಿಗಳ ಮುಂದೆ ಕನ್ನಡ ಫಲಕಗಳನ್ನು ಹಾಕಿಸುವುದೇ ಅಂದುಕೊಂಡಿದ್ದಾರೇಕೆ? ಆ ಪ್ರದೇಶದ ಹೆಸರೇ ಹೇಳುವಂತೆ ಅದು ಮಿಲಿಟರಿ ಪ್ರದೇಶವಾಗಿ ಭಾರತದೆಲ್ಲೆಡೆಯ ಯೋಧರು, ವಲಸೆಗಾರರು ನೆಲೆಗೊಂಡು ಬೆಂಗಳೂರಿನಲ್ಲಿಯೇ ಭಾರತದ ದರ್ಶನದ ಜೊತೆಗೆ ಐ.ಟಿ/ಬಿ.ಟಿ ಗಳ ದೆಸೆಯಿಂದ ವಿಶ್ವದರ್ಶನವನ್ನೂ ನೀಡುತ್ತಿರುವ ಪ್ರದೇಶವಾಗಿರುವಾಗ ಅಲ್ಲಿ ಕನ್ನಡ ಫಲಕಗಳಿದ್ದರೂ ಒಂದೆ ಇಲ್ಲದಿದ್ದರೂ ಒಂದೇ. ಯಾಕೆಂದರೆ ಅದನ್ನು ಓದಲು ನಮ್ಮ ಬೆಂಗಳೂರು ಕನ್ನಡಿಗರಿಗೂ ಬರುವುದಿಲ್ಲ.

ಯೋಚಿಸಿ, ಕೇವಲ ನಾಮಫಲಕಗಳಿಂದ ಕನ್ನಡ ಉದ್ಧಾರವಾಗುವುದೇ?

ಈ ಹೋರಾಟಗಾರರ ಹೋರಾಟದ ಕೆಲವು ಸ್ಯಾಂಪಲ್ಲುಗಳನ್ನು ನೋಡಿ, ಇಂಗ್ಲಿಷ್ ನಾಮಫಲಕಗಳಿಗೆ ಕಪ್ಪು ಬಣ್ಣ ಬಳಿಯುವುದು, ಐ.ಟಿ ಕಂಪೆನಿಗಳು ಕನ್ನಡಿಗರಿಗೆ ಉದ್ಯೋಗ ಕೊಡಬೇಕೆಂದು ಪ್ರದರ್ಶನ ಏರ್ಪಡಿಸುವುದು, ಭಾರೀ ನಿರೀಕ್ಷೆಯಲ್ಲಿರುವ ತಮಿಳು/ತೆಲುಗು ಸಿನೆಮಾದ ಪ್ರದರ್ಶನವನ್ನು ಬಂದ್ ಮಾಡಿಸುವುದು, ಬೆಳಗಾವಿಯ ಮರಾಠಿ ಹೋರಾಟಗಾರರು ಕೈಗೆ ಸಿಕ್ಕಿದಾಗ ಅವರ ಮುಖಕ್ಕೆ ಮಸಿ ಬಳಿಯುವುದು ಇನ್ನು ಇಂತಹುದೇ ಮಾದರಿಯ ಚಳವಳಿಗಳನ್ನು ಆಗಾಗ್ಗೆ ತಮ್ಮ ಕ್ಯಾಲೆಂಡರ್ ಪ್ರಕಾರ ಮಾಡುವುದು. ಒಟ್ಟಾರೆ ಇವರ ನಡುವಳಿಕೆ ನಮ್ಮ ಇತರೆ ಅಲ್ಪಜ್ಞ ರಾಜಕಾರಣಿಗಳಂತೆಯೇ ಬೆಂಗಳೂರೇ ಕರ್ನಾಟಕವೆಂದುಕೊಂಡತೆಯೇ ಇದೆ. ಅಲ್ಲ, ಬೆಂಗಳೂರು ಕನ್ನಡಿಗರು ತಮಿಳು/ತೆಲುಗು ಕಲಿತು ತಮ್ಮ ಭಾಷಾ ಪ್ರೌಢಿಮೆ ಮೆರೆಯುತ್ತಿದ್ದರೆ ಅದಕ್ಕೆ ತೆಲುಗರು ತಮಿಳರು ಕಾರಣರೇ ಇಲ್ಲಾ ಆ ಭಾಷೆಯ ಚಲನಚಿತ್ರಗಳು ಕಾರಣವೆ? ಈ ಹೋರಾಟಗಾರರಿಗೆ ಕರ್ನಾಟಕದ ಇತರೆ ಪಟ್ಟಣಗಳಾದ ಶಿವಮೊಗ್ಗ, ದಾವಣಗೆರೆ, ಬಳ್ಳಾರಿ ಹುಬ್ಬಳ್ಳಿ, ಮಂಗಳೂರು, ಬಿಜಾಪುರ ಮತ್ತಿತರೆ ಪಟ್ಟಣಗಳಲ್ಲಿ ವಾಸವಾಗಿರುವ ಮಾರ್ವಾಡಿಗಳು, ತೆಲುಗರು, ತಮಿಳರು, ಮರಾಠಿಗರು, ಸುಲಲಿತವಾಗಿ ಕನ್ನಡ ಮಾತನಾಡುತ್ತ ಕನ್ನಡದವರೇ ಆಗಿ ಇಲ್ಲಿಯೇ ಜೀವನವನ್ನು ಕಂಡುಕೊಂಡು, ಕನ್ನಡ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ಸೇರಿಸುತ್ತಿರುವುದು ಕಣ್ಣಿಗೆ ಕಾಣದೇ? ಕರ್ನಾಟಕದಲ್ಲಿ ವ್ಯಾಪಕವಾಗಿ ಕನ್ನಡದವರೇ ಆಗಿಹೋಗಿರುವ ಸವಿತಾ ಸಮಾಜದ ತೆಲುಗು ಭಾಷಿಗರು, ಮರಾಠಿ ಮನೆಮಾತಿನ ದರ್ಜಿಗಳು, ತಮಿಳು ಮನೆಮಾತಿನ ಐಯಂಗಾರರು...ಇನ್ನು ಅನೇಕರು ಬೆಂಗಳೂರು ಕನ್ನಡಿಗರಿಗಿಂತ ಹೆಚ್ಚಾಗಿ ಕನ್ನಡದವರೇ ಆಗಿಲ್ಲವೆ?

ಈ ಸಮಸ್ಯೆ ಬೆಂಗಳೂರಿನಲ್ಲೇ ಏಕಿದೆ? ಇದಕ್ಕೆಲ್ಲ ಮೂಲ, ಬೆಂಗಳೂರೇ ಕರ್ನಾಟಕ, ಬೆಂಗಳೂರು ಸಮಸ್ಯೆ ಕರ್ನಾಟಕದ ಸಮಸ್ಯೆ ಎಂದುಕೊಂಡಿರುವ ಅಲ್ಪ ದೃಷ್ಟಿಯ ರಾಜಕಾರಣೀ ಹೋರಾಟಗಾರರು, ಮೂಲತಃ ಕನ್ನಡಿಗರಾಗಿ ಯಾರಾದರೂ ಕನ್ನಡದಲ್ಲಿ ಮಾತನಾಡಿಸಿದರೆ ’ಐ ಡೋಂಟ್ ನೊ ಕನ್ನಡ’ ಎಂಬ ಬೆಂಗಳೂರು ಕನ್ನಡಿಗರು, ಬೆಂಗಳೂರನ್ನು ಸಿಂಗಾಪುರ ಮಾಡುತ್ತೇನೆಂದು ಬೆಂಗಳೂರಿನ ಸೂಪರ್ ಮೇಯರ್ ಅಂತೆ ವರ್ತಿಸುತ್ತ ಅಂದಿನ ಕಾಂಗ್ರೆಸ್ ಮುಖ್ಯಮಂತ್ರಿಗಳು ಹಾಕಿಕೊಟ್ಟ ಪೀಠಿಕೆ, ಕೊಟ್ಟ ಕೆಲಸ ಮಾಡಲಾಗದೆ ನೆಪ ಹೇಳಿ ತಪ್ಪಿಸಿಕೊಳ್ಳುವ ಸೋಮಾರಿ ಕನ್ನಡಿಗ ನೌಕರರು, ಪ್ರತಿಯೊಬ್ಬ ರಾಜಕಾರಣಿಯೂ ಬೆಂಗಳೂರಿನ ತಲೆಹಿಡಿಯುತ್ತ, ಉತ್ತರ ಭಾರತದ ತಮ್ಮ ತಮ್ಮ ಪಕ್ಷಗಳ ಮರಿ,ಪುಡಿ,ಪುಂಡ ರಾಜಕಾರಣಿಗಳಿಗೆಲ್ಲ ಬೆಂಗಳೂರಿನಲ್ಲಿ ಸೈಟ್ ಕೊಡಿಸುವ ವ್ಯವಹಾರಗಳನ್ನು ಮಾಡುತ್ತ ಬೆಂಗಳೂರನ್ನು ಮಾರುತ್ತಿರುವುದರ ಪರಿಣಾಮವೇ ಇಂದಿನ ಬೆಂಗಳೂರು ಮತ್ತದರ ಅಲ್ಪಸಂಖ್ಯಾತನಾದ ಕನ್ನಡಿಗನ ಸಮಸ್ಯೆ.

ದೂರದಲ್ಲೆಲ್ಲೋ ಸುನಾಮಿ ಬಂದಾಗ, ಅಮೇರಿಕಾದಲ್ಲಿ ಕಟ್ರೀನಾ ಬೀಸಿದಾಗ, ಪಾಕಿಸ್ತಾನದಲ್ಲಿ ಭೂಕಂಪವಾದಾಗ ತಮ್ಮ ಮನೆಯಲ್ಲೇ ಯಾರೋ ಸಂಕಷ್ಟಕ್ಕೆ ಬಿದ್ದಂತೆ ಚಡಪಡಿಸುವ ಬೆಂಗಳೂರಿಗರಿಗೆ ಶತಮಾನದಿಂದಲೂ ಬರ ಬಿದ್ದೋ ಇಲ್ಲ ನೆರೆ ಬಂದೋ ಮನೆ ಮಠ ಕಳೆದುಕೊಂಡು ಗುಳೇ ಹೋಗುತ್ತಿರುವ ಉತ್ತರ ಕರ್ನಾಟಕದವರ ಕಷ್ಟ ಕಾಣದೇ? ಇಪ್ಪತ್ತೊಂದನೇ ಶತಮಾನದಲ್ಲೂ ಹದಿನೆಂಟನೇ ಶತಮಾನದಂತಿರುವ ಮಧ್ಯ / ಉತ್ತರ ಕರ್ನಾಟಕವು ಅಭಿವೃದ್ಧಿಯ ಪರಿಚಯವೂ ಇಲ್ಲದೆ ಹಾಳು ಸುರಿಯುತ್ತಿರುವುದು ಕಾಣದೆ? ಬೆಂಗಳೂರಿಗರು ಅತ್ತ ಸುಳಿದಿದ್ದರೆ ತಾನೆ ಕಾಣುವುದು? ಬೆಂಗಳೂರು ಕನ್ನಡಿಗರು ತಮ್ಮ ತಮ್ಮ ನೆರೆಹೊರೆಯಲ್ಲಿರುವ ಕನ್ನಡಿಗರೊಂದಿಗೆ ಇಂಗ್ಲಿಷ್ ನಲ್ಲಿ ಮಾತನಾಡುತ್ತ, ದರ್ಶಿನಿ ಹೋಟೆಲ್ಲಿಗೆ ಹೋಗಿ ಅಲ್ಲಿನ ಬಡಪಾಯಿ ಕನ್ನಡ ಸಪ್ಲೈಯರ್ ಗೆ ಇಂಗ್ಲಿಷ್ ನಲ್ಲಿ ಆರ್ಡರ್ ಮಾಡುವ ಇವರು, ಗರುಡಾ ಮಾಲ್ ಇಲ್ಲ ಬ್ರಿಗೇಡ್ ನ ಪಬ್ ಗಳಿಗೆ ಹೋಗಿ ದಿಢೀರನೆ ಕನ್ನಡಿಗರಾಗಿ ಬಿಡುತ್ತಾರೆ. ಇಲ್ಲಾ, ಲೀಲಾ ಪ್ಯಾಲೇಸ್ ಗೆ ಹೋಗಿ ಅಲ್ಲಿನ ಕನ್ನಡ ಬಾರದ ವ್ಹೇಟರ್ ಗಳಿಗೆ ಕನ್ನಡದಲ್ಲಿ ಆಜ್ಞಾಪಿಸುವ ಇವರು, ಇದೀಗ ಬೆಂಗಳೂರಿಗೆ ಕಷ್ಟ ಬಂದೊಡೆ, ಅದು ಕನ್ನಡದ ಕಷ್ಟ, ಕರ್ನಾಟಕದ ಕಷ್ಟ ಅಂದರೆ ಹೇಗೆ? ಇದನ್ನೆಲ್ಲ ನೋಡಿ ಬೇಸತ್ತ ಕರ್ನಾಟಕ ಏಕೀಕರಣದ ಹೋರಾಟಗಾರ ಪಾಟೀಲ ಪುಟ್ಟಪ್ಪನವರೇ ಉತ್ತರ ಕರ್ನಾಟಕವನ್ನು ವಿಭಜಿಸಿ ಬೇರೆ ರಾಜ್ಯ ಬೇಡುವ ಸ್ಥಿತಿಗೆ ಬಂದಿದ್ದರೆ, ಅದನ್ನು ಸರಿಯಾಗಿ ಗ್ರಹಿಸುವ ಶಕ್ತಿಯೇ ಇಲ್ಲದ ಕನ್ನಡ ಹೋರಾಟದ ಕಾಂಟ್ರ್ಯಾಕ್ಟರರುಗಳು ಅವರನ್ನು ’ಕನ್ನಡದ್ರ್‍ಓಹಿ’ ಎಂದು ಕರೆದು ಅವರ ವಿರುದ್ಧ ಬೆಂಗಳೂರಿನಲ್ಲಿ ಮೆರವಣಿಗೆ ಮಾಡಲಿಲ್ಲವೆ?
ಇನ್ನು ಕನ್ನಡ ರಾಜಕಾರಣಿಗಳೋ ಆ ಕನ್ನಡಮ್ಮನಿಗೇ ಪ್ರೀತಿ. ಯಾವೊಬ್ಬ ರಾಜಕಾರಣಿಯಾಗಲಿ ತನ್ನ ಮುಂದಿನ ಎರಡು ವರ್ಷಗಳ ಯೋಜನೆಗಳ ಬಗ್ಗೆ ಒಂದು ನೀಲಿನಕಾಶೆ ತೋರಿಸೆಂದರೆ ಸೋಮಯಾಜಿಯೋ, ಜೈನ್ ವೊ, ನಾಡಿಶಾಸ್ತ್ರದವನ ಬಳಿಯೋ ಇಲ್ಲವೇ ಹಾರನಹಳ್ಳಿ ಮಠದಲ್ಲಿ ಹೊತ್ತಿಗೆ ತೆಗೆಸಲೋ ಓಡುವ, ಇಲ್ಲವೇ ನಮ್ಮದೆಲ್ಲ ಹೈಕಮ್ಯಾಂಡ್ ಹೇಳಿದಂತೆ ಎಂದು ತಲೆಯಾಡಿಸುವವರೇ ಆಗಿದ್ದಾರೆ. ಅಂತಹ ಅತಿರಥ ಮಹಾನಟ ಡಾ: ರಾಜ್ ಅವರೇ ತಮ್ಮ ಬಕ್ಕತಲೆಯನ್ನು ಮುಚ್ಚಿಕೊಳ್ಳದೆ ತೋರುತ್ತಿದ್ದರೆ, ಈ ಜನಸೇವಕ ನಂ. ೧ ಮುಖ್ಯಮಂತ್ರಿ ತಮ್ಮ ನೈಜ ರೂಪ ತೋರದೆ, ವಿಗ್ ಹಾಕಿ ತಲೆ ಮುಚ್ಚಿಕೊಳ್ಳುತ್ತಿರುವುದನ್ನು ನೋಡಿದರೆ ಅರ್ಥವಾಗದೇ ಇವರೆಷ್ಟು ಮುಕ್ತ ಮನಸ್ಸಿನವರೆಂದು? ಅದೇ ರೀತಿಯ ಫೋಟೋ ಪ್ರಿಯ ವಾಟಾಳು ಯಾವತ್ತಾದರೂ ಟೋಪಿ ತೆಗೆದಿದ್ದುದು ನೋಡಿರುವಿರೇ? ತಮ್ಮ ತಮ್ಮ ರೂಪವನ್ನೇ ಎದುರಿಸಲಾಗದ ಈ ಸುರಸುಂದರಾಂಗರು ಇನ್ನು ನಾಡಿನ ಸಮಸ್ಯೆಗಳನ್ನು ಎದುರಿಸುವರೇ? ಇನ್ನು ಕ.ರ.ವೇ ಎಂಬ ಕನ್ನಡ ಹೋರಾಟಗಾರರ ಸಂಘವು ಶುರುವಾಗುತ್ತಿದ್ದಂತೆಯೇ ಅವರ ಬಣ, ಇವರ ಬಣ, ಮಗದೊಬ್ಬರ ಬಣವೆಂದು ವಿಭಜನೆಗೊಂಡು ಕನ್ನಡಿಗರ ಒಗ್ಗಟ್ಟಿನ ಪ್ರದರ್ಶನ ನೀಡಲಿಲ್ಲವೇ? ಇಂದು ಇಂಜಿನಿಯರಿಂಗ್ ನ ಯಾವುದೇ ವಿಷಯದಲ್ಲಿ ಪದವಿ ಪಡೆದ ರಾಜ್ಯದೆಲ್ಲೆಡೆಯ ಯುವಕರು ನೌಕರಿ ಪಡೆಯಬೇಕಾದರೆ ಬೆಂಗಳೂರಿಗೇ ಗುಳೇ ಹೋಗಬೇಕಾದಂತಹ ಸ್ಥಿತಿ ರಾಜ್ಯದ ತುಂಬೆಲ್ಲಾ ಇರಲು ಯಾರು ಕಾರಣರು? ಸೋನಿಯಾ ನಮ್ಮ ಮನೆ ಸೊಸೆ ಎನ್ನುತ್ತ ತಮ್ಮ ಪುತ್ರನೋ / ಪುತ್ರಿಯೋ ಅಂತರ್ಜಾತೀಯ ವಿವಾಹವಾದರೆ ಅವರನ್ನು ಕೊಲ್ಲುತ್ತೇವೆನ್ನುವ, ಮುಂದಿನ ಜನ್ಮದಲ್ಲಿ ಮುಸಲ್ಮಾನನಾಗಿ ಹುಟ್ಟಿಸೆಂದು ಸಾಮರಸ್ಯದ ಪಾಠ ಹೇಳಿ ಓಟು ಬಾಚಿಕೊಳ್ಳುತ್ತ ಅಧಿಕಾರ ನನ್ನ ಪುತ್ರರಿಗೆ ಮಾತ್ರವೆನ್ನುವ, ಒಟ್ಟಿನಲ್ಲಿ ದೇಶ ಹಾಳಾಗಲಿ, ನಮ್ಮ ಮನೆ ಹಾಳಾಗಬಾರದೆಂಬ ಶೂನ್ಯ ದೇಶಾಭಿಮಾನಿ ನಾಯಕರುಗಳೂ ಜನರೂ ಇರುವವರೆಗೆ ದೇಶ, ಭಾಷೆ, ಸಂಸ್ಕೃತಿಯ ಉದ್ಧಾರ ಆಗುವುದೆ?

ಮಸಿ ಬಳಿಯುವುದಾದರೆ, ಬಳಿಯಬೇಕಾದ್ದು ನಮ್ಮ ನಾಯಕರುಗಳಿಗೇ ವಿನಹ ಮರಾಠಿಗರಿಗಲ್ಲ ಅಥವ ಕನ್ನಡ ಫಲಕ ತೂಗುಹಾಕದೇ ಇರುವ ಬ್ರಿಗೇಡ್/ ಎಮ್.ಜಿ. ರೋಡಿಗರಿಗಲ್ಲ. ಬಳಿಯಬೇಕಾದ್ದು ತಮ್ಮ ತಮ್ಮ ಹೈಕಮ್ಯಾಂಡ್ ಗಳನ್ನು ಮೆಚ್ಚಿಸಲು ರಾತ್ರೋರಾತ್ರಿ ಕಾವೇರಿ ನೀರು ಬಿಡುವ ಕನ್ನಡ ಮಂತ್ರಿಗಳಿಗೆ, ತಮ್ಮ ಸಂಸಾರವನ್ನು ಎಲ್ಲೋ ಬಿಟ್ಟು ತನ್ನ ರಾಜ್ಯಕ್ಕೆ ಉತ್ತಮ ರಸ್ತೆಗಳನ್ನು ಕೊಡಬೇಕೆಂದು ಬಂದಿರುವ ಕನ್ನಡಿಗನ ಕಾಲೆಳೆಯುವ ಕನ್ನಡದ ಮಣ್ಣಿನ ಮಗನಿಗೆ, ಕನ್ನಡ ಸಿನೆಮಾ ಎನ್ನುತ್ತ, ಸಂಪೂರ್ಣ ಪರಕೀಯ ಸಂಸ್ಕೃತಿಯನ್ನು ಮೆರೆಸುವ ಕನ್ನಡ ಚಿತ್ರರಂಗದ ಕನ್ನಡ ಕಂದಮ್ಮಗಳಿಗೆ.

ಇದನ್ನು ಬಿಡಿ, ಕೇವಲ ಭಾಷೆಯ ಬಗ್ಗೆ ಹೋರಾಡಿದರೆ ಸಾಕೆ? ನಮ್ಮ ಸಂಸ್ಕೃತಿ ಪರಂಪರೆಯ ಸ್ಮಾರಕಗಳಿಗೆ ಹೋರಾಡುವವರ್‍ಯಾರು? ಇಂದು ಹಂಪಿಯ ಐತಿಹಾಸಿಕ ಸ್ಮಾರಕವೊಂದರ ಮೇಲೆ ಹಸಿರು ಬಾವುಟದ ಪ್ರಾರ್ಥನಾ ಧ್ವಜವೆದ್ದಿರುವುದು, ಬಾದಾಮಿಯ ಕೋಟೆಯ ಮೇಲೆ ಕಟ್ಟಿರುವ ಇದೇ ರೀತಿಯ ಇನ್ನೊಂದು ಕಟ್ಟಡ (ಇಲ್ಲಿ ಟಿಪ್ಪು ಕಟ್ಟಿಸಿರುವ ಐತಿಹಾಸಿಕ ಮಸೀದಿಯೊಂದಿದ್ದು, ಅದು ಹಿಂದೂ ಮುಸ್ಲಿಂ ಭಾವೈಕ್ಯತೆಯ ಸಂಕೇತದಂತೆ ಕಂಗೊಳಿಸುತ್ತಿದೆ. ಇದರ ಬಗ್ಗೆ ನಾನು ಹೇಳುತ್ತಿಲ್ಲ.) ಹಾಗೆಯೇ ಬಿಜಾಪುರದ ಸುಲ್ತಾನರು ಕಲಾಪೋಷಕರಾಗಿ, ತಮ್ಮ ಆಸ್ಥಾನದಲ್ಲಿದ್ದ ಉತ್ತಮ ಸಂಗೀತ ಕಲಾವಿದರುಗಳ ಸಂಗೀತವನ್ನು ಸವಿಯಲು ವಾಸ್ತುಶಿಲ್ಪದ ಆಶ್ಚರ್ಯವೇ ಎನ್ನುವಂತಹ ರಂಗಮಂದಿರವಾಗಿ ಕಟ್ಟಿಸಿರುವ ಗೋಲ್ ಗುಂಬಜ್ ನ ಮೂಲ ಉದ್ದೇಶವನ್ನು ಮರೆಮಾಚಿ, ಇಲ್ಲಿ ಒಮ್ಮೆ ಕೂಗಿದರೆ ಏಳು ಬಾರಿ ಪ್ರತಿಧ್ವನಿಸುತ್ತದೆಂಬ ಸಂಗತಿಯನ್ನೇ ಏಖಾಂಶ ಮಾಡಿ ನಮ್ಮ ಮಕ್ಕಳಿಗೆ ಬೋಧಿಸಿ, ಅದನ್ನೋದಿದ ಜನರು ಗುಂಬಜ್ ಗೆ ಭೇಟಿ ನೀಡಿ ’ಕುರ್‍ಯೋ’ ’ಮರ್‍ಯೋ’ ಎಂದು ಕರ್ಕಶವಾಗಿ ಕಿರುಚುವುದನ್ನು ಕೇಳಿ, ಮುಂದಿನ ಪೀಳಿಗೆ ಇಲ್ಲಿ ಸದಾ ಸಂಗೀತೋತ್ಸವವನ್ನು ಆಚರಿಸಲೆಂದು ಅದನ್ನು ಕಟ್ಟಿಸಿದ ಸುಲ್ತಾನರು ಗೋರಿಯಲ್ಲೇ ತಮ್ಮ ತಲೆಯನ್ನು ಚಚ್ಚಿಕೊಳ್ಳುತಿರಬಹುದು. ಇನ್ನು ಈ ರಂಗಸ್ಥಳದಲ್ಲಿ ಸರ್ಕಾರವೇ ಕೃತಕ ಸಮಾಧಿಗಳನ್ನು ಪ್ರತಿಷ್ಟಾಪಿಸಿ ಇದರ ಐತಿಹಾಸಿಕ ಪರಂಪರೆಗೆ ಚ್ಯುತಿ ತಂದಿರುವುದಕ್ಕೆ ಏನು ಹೇಳೋಣ (ಮೂಲ ಸಮಾಧಿಗಳು ನೆಲಮಾಳಿಗೆಯಲ್ಲಿವೆ)... ಈ ರೀತಿಯ ಇನ್ನು ಹತ್ತು ಹಲವಾರು ಅಭಾಸಗಳನ್ನು ತೊಡೆದು ರಕ್ಷಿಸುವವರ್‍ಯಾರು. ಹಂಪಿಯಂತಹ ಪ್ರಮುಖ ಐತಿಹಾಸಿಕ ಪರಂಪರೆಯ ಪಳೆಯುಳಿಕೆಗಳು ಮೂತ್ರಿಗಳಾಗಿ, ಪಾಯಿಖಾನೆಗಳಾಗಿ ಉಪಯೋಗಿಸಲ್ಪಡುತ್ತಿರುವಾಗ, ಇನ್ನು ಹಂಪಿಯಷ್ಟು ವಿಶೇಷವಿಲ್ಲದ ನಮ್ಮ ಇತರೆ ಐತಿಹಾಸಿಕ ಸ್ಮಾರಕಗಳ ಸ್ಥಿತಿಗತಿಗಳ ಕುರಿತಂತೂ ಹೇಳುವುದೇ ಬೇಡ. ಅವುಗಳೆಲ್ಲ ಇನ್ನೂ ಶೋಚನೀಯ ಸ್ಥಿತಿಯಲ್ಲಿದ್ದು ಅವುಗಳನ್ನು ಕಟ್ಟಿಸಿದ್ದ ವೀರ ಕನ್ನಡಿಗರ ಪ್ರೇತಾತ್ಮಗಳೂ ಅವುಗಳನ್ನು ನೋಡಿ, ನೇಣು ಹಾಕಿಕೊಳ್ಳಬೇಕಾದಂತಹ ಸ್ಥಿತಿಯಲ್ಲಿವೆ.
ಚಿತ್ರ: ಹಂಪಿ ವಿರುಪಾಕ್ಷೇಶ್ವರನ ಆವರಣದಲ್ಲಿಯೇ ಇರುವ ಒಂದು ಸ್ಮಾರಕದ ಸ್ಥಿತಿ. ಬಹುಶಃ ಅರ್ಚಕರ / ಕಾವಲುಭಟನ ವಾಸಸ್ಥಳವಾಗಿದ್ದಿರಬಹುದು.

ಇದಕ್ಕೆಲ್ಲ ಪರಿಹಾರ ಬೇಡವೆ? ಕಡೇ ಪಕ್ಷ, ಈ ಉದ್ದೇಶದಿಂದ ವಸ್ತುನಿಷ್ಟವಾಗಿ ದನಿ ಎತ್ತಿರುವ ಚಿದಾನಂದಮೂರ್ತಿಗಳನ್ನು ’ಚಡ್ಡಿ’ ಎಂದು ನಮ್ಮ ಕನ್ನಡ ಮುಖಂಡರೇ ಬ್ರ್ಯಾಂಡಿಸುತ್ತಿರುವುದರ ವಿರುದ್ಧವೆಂದಾದರೂ ಚಿದಾನಂದಮೂರ್ತಿಗಳ ಕಳಕಳಿಯನ್ನು ಎತ್ತಿ ಹಿಡಿದು ಅವರಾಸೆಗೆ ಒತ್ತಾಸೆಯಾಗಿದ್ದಾರೆಯೆ ಕನ್ನಡ ಹೋರಾಟಗಾರರು? ಬಹುಶಃ ತಮ್ಮ ಚಡ್ಡಿಯೊಳಗಿರಬೇಕಿದ್ದ ಪ್ರಮುಖ ಆಂಗಗಳನ್ನು ಕಳೆದುಕೊಂಡಿರುವ ಅಸೂಯೆ ಅವರನ್ನು ಭಾದಿಸುತ್ತಿರಬೇಕು.

ಎರಡನೇ ಪುಲಕೇಶಿ ಮರಾಠಿಗನೆಂದು ಐತಿಹಾಸಿಕವಾಗಿ ದಾಖಲಾಗಿರುವ ಸಂಗತಿಯಿದ್ದು, ಇತಿಹಾಸವನ್ನು ಕೊಂಚ ಆಳವಾಗಿ ಓದಿದವರಿಗೆ ಅವನು ಕನ್ನಡಿಗನೋ ಮರಾಠಿಗನೋ ಎಂಬ ಸಂದೇಹ ಬರುವಂತಿದ್ದರೂ, ಇದರ ಪರಿವೆಯೇ ಇಲ್ಲದಿರುವಂತಿರುವುದು, ವಿಜಯನಗರದ ಕೃಷ್ಣದೇವರಾಯ ಇಂದಿನ ರಾಜಕಾರಣಿಗಳಂತೆ ಅಂದೇ ಕನ್ನಡಿಗರಿಗೆ ನಾನು ಕನ್ನಡಿಗನೆಂದೂ ಅತ್ತ ತೆಲುಗರಿಗೆ ’ದೇಸಭಾಷಲಂದು ತೆಲುಗು ಲೇಸ’ (ದೇಶಭಾಷೆಗಳಲ್ಲೆಲ್ಲ ತೆಲುಗು ಲೇಸು) ಎಂದಿರುವುದು...ಪಟ್ಟಿ ಬೆಳೆಯುತ್ತಾ ಹೋಗುತ್ತದೆ ಸರಿಪಡಿಸಬೇಕಾದ ಇತಿಹಾಸದ ಸಂಗತಿಗಳದ್ದು ಮತ್ತು ಕನ್ನಡಕ್ಕೊಂದು ಸರಿಯೆನ್ನಿಸುವಂತಹ ಕಾಯಕಲ್ಪ ಸೃಷ್ಟಿಸಬೇಕಾದ ಅನಿವಾರ್ಯತೆಯದ್ದು. ಇಂತಹ ವಿಷಯಗಳನ್ನೆಲ್ಲಾ ಮರೆತು ನಮ್ಮ ಸಂಶೋಧಕ ಸಾಹಿತಿ ವರ್ಗವೂ ಕೂಡ ಬಸವಣ್ಣನ ಮೂಲದಂತಹ ಇಲ್ಲದ ವಿವಾದಗಳನ್ನು ಸೃಷ್ಟಿಸುವ ವಿಷಯಗಳಲ್ಲಿ ಮಗ್ನರಾಗಿರುವುದು.. ಇವುಗಳಿಗೆಲ್ಲಾ ಕನ್ನಡ ಹೋರಾಟ ಬೇಡವೇ?

ಕನ್ನಡವು ಹೆಚ್ಚಿನ ಜ್ಞಾನಪೀಠ ಪ್ರಶಸ್ತಿಗಳನ್ನು ಗಳಿಸಿ, ಸಾಹಿತ್ಯಿಕವಾಗಿ ಮುಂಚೂಣಿಯಲ್ಲಿದ್ದ ಬೆಂಗಾಳಿ, ಮರಾಠಿ ಭಾಷೆಗಳನ್ನು ಹಿಂದಿಕ್ಕಿ ಮುನ್ನುಗ್ಗಿರುವಾಗಿ, ನಮಗೇಕೆ ಬೇಕು ಈ ಶಾಸ್ತ್ರ್‍ಈಯ ಭಾಷೆಯ ಭಿಕ್ಷೆ? ಪ್ರತಿಯೊಂದು ಪ್ರಶಸ್ತಿ / ಸ್ಥಾನಮಾನಗಳಿಗೆ ಅರ್ಜಿ ಹಾಕಿ, ಮರ್ಜಿ ಹಿಡಿಯಬೇಕಾದ ಇಂದಿನ ಪರಿಸ್ಥಿಯಲ್ಲಿ ಅವುಗಳೆಲ್ಲ ತಲೆಹಿಡುಕರ ಪಾಲಾಗುತ್ತಿರುವುದು ಕಣ್ಣೆದುರೇ ಕಾಣುತ್ತಿರುವಾಗ ನಾವೇಕೆ ಅದಕ್ಕೆ ಹೋರಾಡಿ ಅಂತಹವರೆನ್ನಿಸಿಕೊಳ್ಳಬೇಕು? ಸಾಹಿತ್ಯ ಕ್ಷೇತ್ರದ ಮೇರು ಶಿಖರದಲ್ಲಿರುವ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನವನ್ನು ಕೇಂದ್ರವು ಅಂಗೀಕರಿಸದಿದ್ದರೆ ಅದು ಕೇಂದ್ರ ಸರ್ಕಾರವು ನಾಚಿಕೆ ಪಡಬೇಕಾದ ವಿಷಯವೇ ಹೊರತು ಕನ್ನಡಿಗರಲ್ಲ.

ಹೋರ್‍ಆಟ ಬೇಕಿರುವುದು ಕರ್ನಾಟಕದ ನಿಜ ಏಕೀಕರಣಕ್ಕೆ. ಕೊಡವರು, ಕೊಂಕಣರು, ಡೆಂಕಣರು ನಮ್ಮವರೆಂದು ಭರವಸೆ ಮೂಡಿಸುವುದಕ್ಕೆ, ಕರ್ನಾಟಕದ ಸಮತೋಲನದ ಬೆಳವಣಿಗೆಗೆ, ಸಮಗ್ರ ಕರ್ನಾಟಕದ ಸಮೃದ್ಧಿಗೆ, ನಮ್ಮ ಸಂಸ್ಕೃತಿಯ ರಕ್ಷಣೆಗೆ.

ಕರ್ನಾಟಕ ಏಕೀಕರಣಗೊಂಡು ಅದೆಷ್ಟೋ ವರ್ಷಗಳೇ ಕಳೆದು ಆಂದು ಅಂದುಕೊಂಡ ಕನಸುಗಳೆಲ್ಲ ಇನ್ನೂ ಕನಸಾಗಿರುವುದಕ್ಕೆ ನಮಗೆ ನಾವೇ ಮಸಿ ಬಳಿದುಕೊಳ್ಳೋಣ.

ಅಣಕ:

ಮೊನ್ನೆ ಅರೇಕಲ್ ಎಂಬ ಸಂಸ್ಥೆಯ ನೌಕರರು ಮುತ್ತೆತ್ತಿಯಲ್ಲಿ ಕ್ಯಾಂಪ್ ಮಾಡಿ, ಪ್ಲಾಸ್ಟಿಕ್ ಮತ್ತಿತರೆ ತ್ಯಾಜ್ಯ ವಸ್ತುಗಳನ್ನು ಆರಿಸಿ ಸ್ವಚ್ಚಗೊಳಿಸಿದರೆಂದು ಓದಿ ಖುಷಿಗೊಂಡೆ. ನಂತರ ಇದ್ಯಾವುದಪ್ಪ, ಅರೇಕಲ್ ಸಂಸ್ಥೆ? ಪರವಾಗಿಲ್ಲ ಯಾರೋ ಕನ್ನಡಿಗರೋ, ಕೇರಳಿಗರೋ, ತಮಿಳರೋ ತಮ್ಮ ಹಳ್ಳಿಯ (ಆನೇಕಲ್, ಮೂರ್ಕಲ್, ಇಳಕಲ್ ನಂತೆ) ಹೆಸರಲ್ಲೇ ತಂತ್ರಜ್ಞಾನ ಸಂಸ್ಥೆ ಸ್ಥಾಪಿಸಿ ಸ್ಥಳೀಯ ಹೆಸರನ್ನು ಮೆರೆಸಿದ್ದಾರೆ ಎಂದು ಹೆಮ್ಮೆ ಪಡುತ್ತ ಇದು ಮಲಯಾಳೀ ಊರೋ ಕೊಡಗಿನ ಹಳ್ಳಿಯೋ ಕಂಡುಕೊಳ್ಳಬೇಕೆಂದು ಎಷ್ಟು ಹುಡುಕಿದರೂ ಈ ಸಂಸ್ಥೆಯ ಜಾತಕ ದೊರೆಯದಾಯಿತು. ಕಡೆಗೆ ಅದರ ಮೂಲಕ್ಕಿಂತ ಆ ಸಂಸ್ಥೆ ಸ್ಥಳೀಯತೆಯನ್ನು ಮೆರೆಸಿರುವುದು ಮುಖ್ಯವೆಂದು ಇದರ ಕುರಿತು ನನ್ನ ಸ್ನೇಹಿತರ ಮುಂದೆ ಕೊಚ್ಚಿಕೊಂಡು, ಕಡೆಗಾದರೂ ಒಂದು ಅಪ್ಪಟ ದೇಸೀ ಹೆಸರಿನ ತಂತ್ರಜ್ಞಾನ ಸಂಸ್ಥೆಯೊಂದಿದೆಯಲ್ಲ ಎಂದಾಗ, ಅವರು ಕೊಂಚ ಆಲೋಚಿಸಿ ನಂತರ ನನ್ನೆಡೆಗೆ ಮುಸಿಮುಸಿ ನಕ್ಕರು. ಇದು ಪ್ರಖ್ಯಾತ ಒರ್‍ಯಾಕಲ್ ಸಂಸ್ಥೆಯ ಬೆಂಗಳೂರಿನ ಕಟ್ಟಡದ ಮೇಲಿರುವ ಕನ್ನಡ ನಾಮಫಲಕ ’ಅರೇಕಲ್’ ಎಂದು ಸಾರುತ್ತಿರುವುದೆಂದು ಅವರು ಹೇಳಿದಾಗ ಏನೇನೋ ಯೋಚಿಸಿದ್ದ ನನಗೆ ಪೆಚ್ಚಾಯಿತು.

ಬೇಕೇ ನಮಗೆ ಈ ರೀತಿಯ ಕನ್ನಡ ಫಲಕ?

ಮತ್ತೊಂದು ರಾಜ್ಯೋತ್ಸವ

ಮತ್ತೊಂದು ರಾಜ್ಯೋತ್ಸವ ಬರುತ್ತಿದೆ. ಬಹುಶಃ ಅಣ್ಣಮ್ಮ ದೇವಿ ಕನ್ನಡ ಸಂಘದವರು ಈ ಸಾರಿ ಕೂಡ ಚಂದಾ ಎತ್ತಿ ಆರ್ಕೆಸ್ಟ್ರಾ ಹೂಡಿಸಿ ’ಮಾರಿ ಕಣ್ಣು ಹೋರಿ ಮ್ಯಾಗೆ, ನನ್ನ ಕಣ್ಣು ನಿನ್ನ ಮ್ಯಾಗೆ’ ಎಂದು ತಮ್ಮ ತಮ್ಮ ಕೇರಿಯ ಹುಡುಗಿಯರಿಗೆ ಸಂದೇಶ ಕಳುಹಿಸಿ ಕುಣಿದು ಕುಪ್ಪಳಿಸುವ ಕನಸು ಕಾಣುತ್ತ, ಯಾರಾದರೂ ಅಡ್ಡ ಬಂದರೆ ’ಹೊಡಿ ಮಗಾ, ಹೊಡಿ ಮಗಾ’ ಎಂದು ಮಟ್ಟ ಹಾಕಿ ’ರಾಜ್ಯೋಸ್ತವ’ ಆಚರಿಸಲು ಸಿದ್ಧತೆ ಮಾಡಿಕೊಳ್ಳುತ್ತಿರಬಹುದು.

ಹಾಗೆಯೇ ಯೋಚಿಸಿ ನೋಡಿ, ಈ ’ರಾಜ್ಯೋಸ್ತವ’ಕ್ಕೆ ಕನ್ನಡ ಚಿತ್ರರಂಗದ ಕೊಡುಗೆ ಅಪಾರ. ಕನ್ನಡಕ್ಕೆ ಹೊಸ ಹೊಸ ಚಿತ್ರ ವಿಚಿತ್ರ ಪದಪುಂಜಗಳಾದ ಪೆಟ್ರೋಮ್ಯಾಕ್ಸ್, ಢಗಾರ್, ಡೌವ್, ಉಡೀಸ್ ಇನ್ನೂ ಮುಂತಾದ ಪದಗಳನ್ನು ಸೇರಿಸಿ, ದ್ರಾವಿಡ ಮಕ್ಕಳೂ ಗಾಬರಿಯಾಗುವಷ್ಟು ಗಿರಿಜಾಮೀಸೆ, ಜರಿಪಂಚೆ ತೊಟ್ಟು, ಮಹಿಳೆಯರೂ ಅಸೂಯೆ ಪಡುವಷ್ಟು ಆಭರಣಭೂಷಿತರಾದ ನಾಯಕನಟನ ಗೆಟಪ್ ನಲ್ಲಿ ನಮ್ಮ ಸಾಹಸಸಿಂಹ, ರೆಬೆಲ್ ಸ್ಟಾರ್ ಅಷ್ಟೇ ಅಲ್ಲದೆ ಇತ್ತೀಚಿನ ಉಪ್ಪಿ ತುಪ್ಪಗಳೂ ಮೆರೆದು, ಕನ್ನಡಾಂಭೆಯ ಸಂಸ್ಕೃತಿ ಸೌರಭವನ್ನು ಶ್ರೀಮಂತಗೊಳಿಸಿದ್ದಾರೆ. ಕೆಲವು ಕನ್ನಡ ಚಿತ್ರಗಳ ಹೆಸರುಗಳನ್ನೇ ಗಮನಿಸಿ, ಮೆಂಟಲ್ ಮಂಜ, ಸೈಕಲ್ ನಂಜನೆಂದೋ, ಇಲ್ಲಾ, ಕುರಿಗಳು, ಕತ್ತೆಗಳೆಂದೋ ಅಥವಾ ಬರೀ ’ಶ್’ ಎಂದೂ ಉಸ್ಸಪ್ಪಾ ಎನಿಸುವರು.

ಉದಾಹರಣೆಗೆ ಈಗಷ್ಟೇ ಸುಪರ್ ಹಿಟ್ ಆದ ’ಮುಂಗಾರುಮಳೆ’ ಯನ್ನೇ ತೆಗೆದುಕೊಳ್ಳಿ. ನಾಯಕ ಫ್ರ್ಇಜ್ ನಿಂದ ಬಿಯರ್ ಬಾಟಲ್ ತೆಗೆಯುತ್ತ ತನ್ನ ಅಮ್ಮನಿಗೆ ತನ್ನಪ್ಪ ಹೇಗೆ ಕಾಳು ಹಾಕಿದನೆಂದು ಕೇಳುವುದನ್ನು ನೋಡಿದ ನನಗೆ ಕೊಂಚ ಕಸಿವಿಸಿಯಾಯಿತು. ಅರೆ ಇದೇನಪ್ಪಾ! ಕಾಳು ಹಾಕುವುದೆಂದರೆ? ಆಗ ಆ ನಾಯಕನ ಮಾತೆ ’ಸನ್ನಿ, ಅದೊಂದು ದೊಡ್ಡ ಕತೆ. ನನಗೊಂದು ವೊಡ್ಕಾ, ಜಿನ್ ಟಾನಿಕ್ ಬೆರೆಸಿ, ಡ್ರಿಂಕ್ ಮಾಡಿಕೊಂಡು ಬಾ. ಹಾಗೆಯೇ ಪಿಜ್ಜಾ ಡೆಲಿವರಿಗೆ ಫೋನ್ ಮಾಡಿಬಿಡು. ಎಲ್ಲಾ ಹೇಳುತ್ತೇನೆ’ ಎನ್ನುತ್ತಾಳೆಂದುಕೊಂಡೆ! ಸದ್ಯ, ಕಾಳು ತಿಂದ ಆ ಕೋಳಿ ತಾಯಿ ಹಾಗೆನ್ನಲಿಲ್ಲ. ಬಹುಶಃ ’ಮುಂಗಾರು ಮಳೆ-೨’ ರಲ್ಲಿ ಈ ಸೀನ್ ಇರಬಹುದು!

ಹೇಮಾವತಿಯ ಹಿನ್ನೀರು, ಜೋಗ, ಸಕಲೇಶಪುರದಂತಹ ಸ್ಥಳಗಳಲ್ಲಿ ಚಿತ್ರಿತವಾಗಿ ಕೊಡಗೆನ್ನುವ, ಕೊಡವರೆನ್ನುತ್ತ ಭಾಂಗ್ರಾ ಕುಣಿತ ಕುಣಿಯುವ, ಧಿಡೀರನೆ ಪಾಪ್ ಆಲ್ಬಮ್ ನಂತಹ ಹಾಡು ನೃತ್ಯಗಳು ಬಂದೆರಗಿ ಹಾಗೆಯೇ ಮಾಯವಾಗಿಬಿಡುವ, ಹಲ್ಲಂಡೆ ತಿರುಗುತ್ತ, ಹುಚ್ಚುಹುಚ್ಚಾಗಿ ಮಾತನಾಡುವುದೇ ಜೀವನ, ಎಂತಹುದೋ ಒಂದು ಹುಡುಗಿಯನ್ನು ಪ್ರೀತಿಸುವುದೇ ಜೀವನದ ಮಹತ್ತರ ಗುರಿ ಎಂಬುವ, ಹುಡುಗಿ ’ಅಯ್ಯೋ’ ಎಂದರೆ ಮದುವೆಯಾಗೆಂದು ಪೀಡಿಸುವ ಈ ಪರಿಯ ಸಿನಿಮಾವು ನೂರಿನ್ನೂರು ದಿನ ಓಡುತ್ತಿರುವುದೆಂದರೆ ಇದಕ್ಕಿಂತ ಕಡಿಮೆ ಓಡಿದ ಅಥವಾ ಡಬ್ಬ ಸೇರಿದ ಚಿತ್ರಗಳು ಹೇಗಿದ್ದವೆಂಬುದನ್ನು ಅವುಗಳನ್ನು ನೋಡಿದ ಚಿತ್ರಪ್ರೇಮಿಗಳೇ ಹೇಳಬೇಕು! ಇದ್ದುದರಲ್ಲಿ ಈಗ ಬರುತ್ತಿರುವ ಕನ್ನಡ ಚಿತ್ರಗಳಲ್ಲಿ ಇದು ಓ.ಕೆ. ಎನ್ನಬಹುದಾದ ಚಿತ್ರವೆಂದು ’ಹಾಳು ಊರಿಗೆ ಉಳಿದವನೇ ಗೌಡ’ ನೆಂಬಂತೆ ಇದು ಯಶಸ್ವಿಯಾಯಿತೆಂದು ನನ್ನ ಬಹುಪಾಲು ಕನ್ನಡ ಚಿತ್ರಪ್ರೇಮೀ ಸ್ನೇಹಿತರು ಅಭಿಪ್ರಾಯಿಸಿದ್ದಾರೆ.

ಒಟ್ಟಿನಲ್ಲಿ ನಿರ್ಮಾಪಕರ ಜೇಬನ್ನಷ್ಟೇ ತುಂಬುವುದಲ್ಲದೆ ’ಮುಂಗಾರುಮಳೆ’ಯು ಜೋಗದ ಗುಂಡಿಗೆ ಹೆಚ್ಚಿನ ಮಟ್ಟಿಗೆ ಪ್ರವಾಸಿಗರನ್ನು ಸೆಳೆಸಿ, ಆ ಪ್ರವಾಸಿಗರು ನಾಯಕ ನಟ ಗಣೇಶನಂತೆ ಬಿಯರ್ ಹಿಗ್ಗಿ ತಾವು ಅವನ ಧಾಟಿಯಲ್ಲಿಯೇ ತಮ್ಮ ತಮ್ಮ ಮಮ್ಮಿ-ಡ್ಯಾಡಿಯರನ್ನು ಪ್ರಶ್ನಿಸುವುದನ್ನು ಕಲ್ಪಿಸಿಕೊಂಡು, ಅದಕ್ಕವರ ಹಿರಿಯರು ಹೇಗೆ ಪ್ರತಿಕ್ರಿಯಿಸಬಹುದೆಂಬ ಕಲ್ಪನೆಯಿಂದ ಬೆಚ್ಚಿ ಬಿದ್ದು ತಾವು ಗಣೇಶನಂತೆ ಕಸದ ಗುಂಡಿಗೆ ಬೀಳದೆ, ತಮ್ಮ ಖಾಲಿ ಬಿಯರ್ ಬಾಟಲಿಗಳನ್ನು ಮಾತ್ರ ಎಸೆದು ಜೋಗವನ್ನು ತಿಪ್ಪೇಗುಂಡಿಯಾಗಿ ಮಾಡಿಸಿರುವ ಮುಂಗಾರುಮಳೆ, ಜೋಗದ ಗುಂಡಿಯನ್ನೂ ಭರ್ಜರಿಯಾಗಿಯೇ ತುಂಬಿಸಿದೆ.

ಸರಿ, ನಂತರ ಕೊಂಚ ವಿಚಾರಿಸಲಾಗಿ ಇತ್ತೀಚಿನ ಯುವಪೀಳಿಗೆ ’ಕಾಳು ಹಾಕುವುದು’, ’ಬಿಸ್ಕೀಟು ಹಾಕುವುದು’ ಎಂದು ಪರೋಕ್ಷವಾಗಿ ಹುಡುಗಿಯರ ಹಿಂದೆ ಸುತ್ತುವುದನ್ನು ಹಾಗೆ ಕರೆಯುತ್ತಾರೆಂದು ತಿಳಿಯಿತು. ಬಹುಶಃ, ಇದು ಅಮೇರಿಕಾವನ್ನು ಅನುಕರಿಸುತ್ತ ಅಲ್ಲಿ ಹುಡುಗಿಯರನ್ನು ಪಡ್ಡೆಗಳು ಬಿಚ್ಚ್, ಚಿಕ್ ಎಂದು ಸಂಭೋದಿಸುವುದರ ವಿಸ್ತೃತ ಭಾಗವಾಗಿ, ಸದಾ ಅಮೇರಿಕಾದ ಕನಸಿಗೆ ಹಾತೊರೆಯುತ್ತಿರುವ ಬೆಂಗಳೂರಿನ ಕನ್ನಡದ ಕಂದಮ್ಮಗಳು, ಈ ಬಿಚ್ಚ್, ಚಿಕ್ ಗಳು ಬಿಸ್ಕೀಟು ಮತ್ತು ಕಾಳು ತಿನ್ನುತ್ತವೆಂದು ಊಹಿಸಿ ಈ ರೀತಿಯ ಭಾಷಾ ಪ್ರಯೋಗ ಜಾರಿಯಾಗಿರಬಹುದೆಂದುಕೊಂಡೆನು!

ಬಹುಶಃ ಬೆಂಗಳೂರಿನ ಕನ್ನಡಮ್ (ಇದೇನು ಕನ್ನಡಮ್ ಎಂದಿರಾ? ಇಂದು ಕನ್ನಡಮ್ಮ ಕೂಡ ಇದು ಓಲ್ಡ್ ಫ್ಯಾಷನ್ ಎಂದು ನೀಲಮ್ಮ ನೀಲಂ ಆದಂತೆ, ಹಾಲಮ್ಮ ಹಲಂ ಆದಂತೆ ತಾನೂ ಮಿನಿ ಸ್ಕರ್‍ಟ್ ತೊಟ್ಟು ’ಕನ್ನಡಮ್’ ಎಂದು ಹೆಸರು ಬದಲಾಯಿಸಿಕೊಂಡಿದ್ದಾಳೆ!) ನ ಲಲನೆಯರು ಬಿಸ್ಕೀಟು ತಿಂದು, ಥೇಟ್ ಪ್ಯಾರಿಸ್ ಹಿಲ್ಟನ್ ಳಂತೆ ’ಹೇ ಬಿಚ್ಚ್, ಇಟ್ಸ್ ಹಾಟ್!’ ಅನ್ನುತ್ತಿರಬಹುದು ಅಥವಾ ಕಾಳು ತಿಂದು ಹಾಲಿವುಡ್ ನ ಹಾಟ್ ಚಿಕ್ ಬ್ರಿಟ್ನಿ ಸ್ಪಿಯರ್ಸ್ ಧಾಟಿಯಲ್ಲಿ ’ಊಪ್ಸ್, ಐ ಡಿಡ್ ಇಟ್ ಅಗೈನ್!’ ಎಂದು ತಮಿಳು, ತೆಲುಗು, ಮತ್ತು ಹಿಂದಿಯ ಬಿಚ್ಚ್-ಅಮ್ಮಗಳಿಗೆ ಸವಾಲು ಹಾಕುತ್ತಿರಬಹುದು.

ಇನ್ನು ಬೆಂಗಳೂರಿನಲ್ಲಿ ಕನ್ನಡವನ್ನು ಆದಷ್ಟೂ ಅಶಿಕ್ಷಿತ / ಅಸಂಸ್ಕೃತ ರೀತಿಯಲ್ಲಿ ಮಾತನಾಡುವುದೇ ಈಗಿನ ಸ್ಟೈಲ್ ಎಂಬಂತೆ ಬೆಂಗಳೂರಿಗರು ಮಾತನಾಡುತ್ತಾರೆ. ಮೊದಲಿನಿಂದಲೂ ಕರ್ನಾಟಕದ ಇತರೆಲ್ಲೆಡೆಗಿಂತ ಭಿನ್ನವಾಗಿ ’ಏನ್ ಗುರು’, ’ಏನಮ್ಮಾ’, ’ಏನ್ಸಾರ್’ ಎಂಬ ವಿಶಿಷ್ಟ ನುಡಿಗಟ್ಟುಗಳನ್ನು ಬಳಸುತ್ತಿದ್ದ ಬೆಂಗಳೂರಿಗರು ಅಪ್ಪಿತಪ್ಪಿ ಯಾರಾದರೂ ಈ ನುಡಿಗಟ್ಟುಗಳಿಲ್ಲದೆ ಸಂಭಾಷಣೆಯನ್ನು ಆರಂಭಿಸಿದರೆ ’ಬಿಟ್ಬಂದಹಳ್ಳಿ’ಯವನೆಂದು ಹೀಗಳೆಯುತ್ತಿದ್ದವರು ತಮ್ಮ ವೈಶಿಷ್ಟವನ್ನು ಮೆರೆವ ಭರದಲ್ಲಿ ಈಗೆಲ್ಲ ’ಏನ್ಲಾ ಮಗಾ’, ’ಬಾರ್‍ಲಾ ಮಚ್ಚಾ’, ಸ್ಕೆಚ್ಚು ಮಚ್ಚು ಎನ್ನುತ್ತಿದ್ದಾರೆ. ಇದು ಕನ್ನಡ ಭಾಷಾ ವಿಕಾಸವೋ ವಿನಾಶವೋ ನಾನರಿಯೇ!

ಬೇಕಿದ್ದರೆ ಬೆಂಗಳೂರು ಕನ್ನಡವನ್ನು ಗಮನಿಸಿ ನೋಡಿ! ಅದು ಯಾವಾಗಲೂ ಕರ್ನಾಟಕದ ಇತರೆ ಪ್ರದೇಶಗಳಿಗಿಂತ ಭಿನ್ನವೆಂಬುದಕ್ಕೆ ಟಿ.ಪಿ. ಕೈಲಾಸಂ ರವರ ನಾಟಕಗಳನ್ನೇ ಓದಿ ನೋಡಿ, ಬೆಂಗಳೂರು ಕನ್ನಡ ಆವಾಗಿನಿಂದಲೂ ಭಿನ್ನವೆಂಬುದು ಮನವರಿಕೆಯಾಗುತ್ತದೆ.

ಇನ್ನು ಇತ್ತೀಚಿನ ಬೆಂಗಳೂರೇ ಕರ್ನಾಟಕವೆಂದು ತಿಳಿದಿರುವ ಐಟಿ/ಬಿಟಿ, ರಾಜಕೀಯ ಧುರೀಣರಿಗೆ ಪೈಪೋಟಿಯೆಂಬಂತೆ ಕನ್ನಡ ಚಿತ್ರರಂಗವು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕನ್ನಡ ಮಾತನಾಡುವವರೆಲ್ಲ ಕೊಳಚೆ ಪ್ರದೇಶದವರು, ಕೂಲಿಗಳು, ಗಾಡಿ ಎಳೆಯುವವರೆಂದು ವರ್ಗೀಕರಿಸಿ, ವಿಶಾಲ ಸಾಮರ್ಥ್ಯದ ಕನ್ನಡ ಭಾಷೆಯನ್ನು ಕತ್ತರಿಸಿ ಈ ಬೆಂಗಳೂರು ಕನ್ನಡವನ್ನೇ ಕನ್ನಡವೆಂದು ಎತ್ತಿ ತನ್ನ ಕಲಾಕೃತಿಗಳಿಂದ ಇಡೀ ಕರ್ನಾಟಕಕ್ಕೆ ಈ ಭಾಷಾ ವಿಕಾಸವನ್ನು ಪಸರಿಸುತ್ತಿದೆ. ಕಳೆದ ಜೂನ್ ನಲ್ಲಿ ನಾನು ಪ್ರವಾಸದಲ್ಲಿದ್ದಾಗ ಅಪ್ಪಟ ಗಂಡುಮೆಟ್ಟಿನ ಪ್ರದೇಶಗಳಾದ ಹುಬ್ಬಳ್ಳಿ, ಬಿಜಾಪುರದಲ್ಲಿಯೂ ಅಲ್ಲಿನ ಯುವಜನಾಂಗವು ಬೆಂಗಳೂರು ಶೈಲಿಯಲ್ಲಿ ’ಏನ್ಲಾ ಸಿಸ್ಯಾ’, ’ಓಯ್ತಿಯಾ ಮಗಾ’ ಎಂದು ಮಾತನಾಡಿಕೊಳ್ಳುವುದನ್ನು ನಾನು ಕೇಳಿದಾಗ ನನಗೇ ನಂಬಲಾಗಲಿಲ್ಲ! ಅಲ್ಲಿಯ ಗಡಸು ಶೈಲಿಯೊಂದಿಗೆ ಮಿಶ್ರಿತಗೊಂಡು ಈ ಬೆಂಗಳೂರು-ವಿಕಸಿತ-ಕನ್ನಡ ಅತ್ಯಂತ ನಾಟಕೀಯವೆನಿಸಿದರೂ ಆ ಯುವಕರು ಮಾತನಾಡಿಕೊಳ್ಳುತ್ತಿದ್ದುದನ್ನು ನೋಡಿದರೆ ಕುಲಗೆಟ್ಟ ನಮ್ಮ ದೃಶ್ಯಮಾಧ್ಯಮಗಳು ಒಂದು ಪರಿಸರದ ಮೇಲೆ ಯಾವ ರೀತಿಯ ಅಡ್ಡ ಪರಿಣಾಮವನ್ನುಂಟು ಮಾಡಬಹುದೆಂಬ ಸತ್ಯದ ದರ್ಶನ ಬಾದಾಮಿಯಂತಹ ಆ ಸಣ್ಣ ಊರಿನಲ್ಲಿ ನನಗಾಯಿತು.

’ಅವಳ ರಾತ್ರಿಗಳು’, ’ಇವನ ಭ್ರಾಂತಿಗಳು’ ಎಂದು ಸಿನಿಮಾ ಮಾಡುತ್ತಿದ್ದ ಕೇರಳಿಗರು ಅವುಗಳಿಗೆಲ್ಲ ತಿಲಾಂಜಲಿಯಿಟ್ಟು, ಸೀಮಿತ ಮಾರುಕಟ್ಟೆಯಿದ್ದರೂ ಕಲಾಕೃತಿಗಳೆನ್ನುವಂತಹ ಚಿತ್ರಗಳನ್ನು ಮಾಡುತ್ತಿದ್ದರೆ, ಆರು ಜ್ಞಾನಪೀಠಗಳ ಹಿನ್ನೆಲೆಯ, ಅಸಾಧಾರಣ ಸಾಹಿತಿ, ಕತೆಗಾರರಿರುವ, ನಮ್ಮದೇ ಆದ ವಿಶಿಷ್ಟ ಸಂಸ್ಕೃತಿ, ಕಲೆಗಳಿದ್ದರೂ, ಬರ ಬಿದ್ದವರಂತೆ ಪರಭಾಷೆಯ ಕತೆ, ಸಂಸ್ಕೃತಿಗೆ ಚಿತ್ರರಂಗದವರು ಮುಗಿಬಿದ್ದಿರುವುದು ನಿಜಕ್ಕೂ ನಾಚಿಕೆಗೇಡು. ಉದಾಹರಣೆಗೆ ಮೇಲೆ ಹೇಳಿದ ಜರಿಪಂಚೆ, ದಪ್ಪ ಮೀಸೆ, ಬಿಳಿ ಚಪ್ಪಲಿ ತೊಟ್ಟ ಪಾತ್ರದ ಗಂಡುತನಕ್ಕೂ, ನಮ್ಮ ಉತ್ತರ ಕರ್ನಾಟಕದ ರುಮಾಲು ಸುತ್ತಿ, ಕಚ್ಚೆ ಕಟ್ಟಿ, ಜಿರ್ ಜಿರ್ ಎನ್ನುವ ಜೀರಿಕಿ ಚಪ್ಪಲಿ ತೊಟ್ಟ, ಗಿರಿಜಾ ಮೀಸೆ / ಕತ್ತಿ ಮೀಸೆ ಹೊತ್ತ, ಗಡಸು ಭಾಷೆಯ ಗಂಡುತನಕ್ಕೂ (ಬಾಳಪ್ಪ ಹುಕ್ಕೇರಿ ಮತ್ತು ’ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಹಾಡಿನ ದೃಶ್ಯದಲ್ಲಿ ಡಾ:ರಾಜ್ ಅವರು ತೊಟ್ಟ ವೇಷ) ಹೋಲಿಸಿ ನೋಡಿ. ಯಾವುದು ಗಟ್ಟಿ ಎಂಬುದು ತಮಗೇ ತಿಳಿಯುತ್ತದೆ!

ಕಡೆಯ ಪಕ್ಷ ತಮಿಳು ಸಿನೆಮಾ ರೀಮೇಕಿಸುವ ಇವರು, ತಮಿಳರು ಪರಭಾಷೆಯ ನಟ ನಟಿಯರನ್ನು ಪ್ರೋತ್ಸಾಹಿಸಿದರೂ ಅವರುಗಳೆಲ್ಲ ದ್ರಾವಿಡ ಲಕ್ಷಣಗಳನ್ನೇ ಹೊಂದಿರುವಂತೆ ನೋಡಿಕೊಳ್ಳುವ ಬಗೆಯನ್ನಾದರೂ ಕಲಿಯುವುದು ಬಾರದೆ? ಉದಾಹರಣೆಗೆ ಕಪ್ಪು ಬಣ್ಣದ ರಜನೀಕಾಂತ್, ಮುರಳಿ, ದಪ್ಪ ತುಟಿಯ ಅರ್ಜುನ್ ಸರ್ಜಾ, ಗುಂಗುರು ಕೂದಲಿನ ಕೋಕಿಲ ಮೋಹನ್. ಇನ್ನು ಸೌಂದರ್ಯವೆಂದರೆ ಗುಂಡು ಗುಂಡಾಗಿ, ಮುದ್ದಾಗಿರುವುದೇ ಎಂದು ತಿಳಿದಿರುವ ತಮಿಳರು ಬಳುಕುವ ಬಳ್ಳಿಗಳನ್ನು ಬಿಟ್ಟು ಗುಂಡು ಗುಂಡಾಗಿರುವ ಖುಷ್ಬು, ನಗ್ಮಾ ಮತ್ತವಳ ತಂಗಿ, ರೋಜಾ, ರಮ್ಯಕೃಷ್ಣ ರಂತವರನ್ನು ಅಮದು ಮಾಡಿಕೊಂಡರೂ ತಮ್ಮ ಸಂಸ್ಕೃತಿಗೆ ಕುಂದಾಗದಂತೆ ನೋಡಿಕೊಳ್ಳುತ್ತಾರೆ.

ಇದನ್ನೆಲ್ಲ ನೋಡಿದರೆ, ಕನ್ನಡಿಗರು ನಿಜ ಅರ್ಥದಲ್ಲಿ ರಾಜ್ಯೋತ್ಸವವನ್ನು ಮಾಡುವುದಾದರೆ ಭಾಷೆ, ಕಲೆ, ಸಂಸ್ಕೃತಿಗಳ ಗಂಧವಿಲ್ಲದೆ, ತೆವಲಿಗೆ ಸಿನೆಮಾ ಮಾಡಿ, ನಮ್ಮ ಭಾಷೆ, ಸಂಸ್ಕೃತಿಯನ್ನು ಕದಡುತ್ತಿರುವ ಇಂದಿನ ಬಹುತೇಕ ಕನ್ನಡ ಚಿತ್ರರಂಗದ ಕನ್ನಡ ಸಿನಿಮಾಗಳನ್ನು ನೋಡುವುದಕ್ಕೆ ಐದು ವರ್ಷಗಳಿಗೆ ರಜಾ ಘೋಷಿಸಿ, ಅರ್ಥಪೂರ್ಣ ಕನ್ನಡ ಸಾಹಿತ್ಯ ಪುಸ್ತಕಗಳನ್ನು ಕೊಂಡು ಓದಿದರೆ ಅಥವ ಕನ್ನಡ ಪರ ಸಂಘ-ಸಂಸ್ಥೆಗಳು ಸಿನಿಮಾ ಹಾಡು ಕುಣಿತಗಳನ್ನೇರ್ಪಡಿಸುವುದನ್ನು ಬಂದ್ ಮಾಡಿ (ಕನ್ನಡ ರಾಜ್ಯೋತ್ಸವಕ್ಕಾಗಿಯಾದರೂ) ಆ ಹಣದಿಂದ ತಮ್ಮ ತಮ್ಮ ಬಡಾವಣೆಗಳಲ್ಲೋ, ಬೀದಿಗಳಲ್ಲೋ ಕನ್ನಡ ಪುಸ್ತಕಗಳನ್ನು ಹಂಚಿದರೆ ನಮ್ಮ ಹೆಮ್ಮೆಯ ಸಾಹಿತಿಗಳಾದರೂ ಬದುಕಿಕೊಳ್ಳುತ್ತಾರೆ.

ಅಣಕ:

ರಿಯಲ್ ಎಸ್ಟೇಟ್ ಕಂ ರೌಡಿಯಿಸಂ ನ ಕುಳವೊಂದು ಸಿನೆಮಾ ಮಾಡಬೇಕೆಂದು ನಿರ್ದೇಶಕ, ಚಿತ್ರಸಾಹಿತಿಯೊಂದಿಗೆ ಪಾನಗೋಷ್ಟಿ ನಡೆಸುತ್ತಿತ್ತು. ನಿರ್ಮಾಪಕ ಕುಳವು "’ಮಚ್ಚ’ ಅನ್ನೋ ಒಂದು ಸಿನೆಮಾ ಮಾಡವ್ಹಾ, ಮಚ್ಚನಿಗೊಂದು ಲವ್ವು ಸೈಡಿಗೊಂದು ಡವ್ವು ಸೇರಿಸಿ ಕತೆ ಮಾಡ್ರುಲ್ಹಾ ನನ್ಮಕ್ಳ" ಎಂದು ಅಪ್ಪಣಿಸುತ್ತಾನೆ.

ಆಗ ಚಿತ್ರಸಾಹಿತಿ "ಅಣ್ಣಾ, ನಡುವೆ ಒಂದು ’ಎಲ್ಲೋ ಜೋಗಪ್ಪ ನಿನ್ನರಮಾನೆ’ ಅನ್ನ ಐಟಂ ಥರ ಒಂದು ರಾಜ್ಯೋಸ್ತವ ಸೀನ್ ಆಕಿ, ಅದ್ರಲ್ಲಿ ’ಕನ್ನಡವೆನೆ ಕುಣಿದಾಡುವುದೆನ್ನೆದೆ’ ಅಂತ ಸುರುವಾಗೊ ಐಟಂ ಸಾಂಗ್ ಬರಿತೀನಿ. ಮುಂದಿನ ನೂರು ವರ್ಸವಾದರೂವೆ ಪ್ರತೀ ರಾಜ್ಯೋಸ್ತವಕ್ಕೂ ಎಲ್ಲ ಕಡೆ ಇದೇ ಸಾಂಗ್ ಕೇಳ್ಬೇಕು ಅಂಗ್ ತೆಗಿಯವ್ಹಾ’ ಅಂದ.

ಇದರಿಂದ ಉತ್ಸಾಹಗೊಂಡ ನಿರ್ದೇಶಕ "ರಾಖಿ ಸಾವಂತ್ ನ ಬುಕ್ ಮಾಡವ್ಹ, ಕನ್ನಡ ಬಾವುಟದ ಬಣ್ಣದ್ದೇ ಕಾಸ್ಟೂಮ್ ಹಾಕಿಸಿ, ಕ್ಲೋಸ್-ಅಪ್ ನಲ್ಲಿ ಅವಳು ’ಕನ್ನಡವೆನೆ ಕುಣಿದಾಡುವುದೆನ್ನೆದೆ’ ಅಂತ ಎದೆ ಕುಣುಸ್ಲಿ ಹೀರೋ ’ಮಚ್ಚ’ ಇತ್ಲಗಿಂದ ’ಕನ್ನಡವೆನೆ ಮೈ ನಿಮಿರುವುದು’ ಅಂತ ಸೊಂಟ ತಿರುಗ್ಸದ ಅಂಗೇ ಲಾಂಗ್-ಶಾಟ್ ಮಾಡ್ತಾ ಮೆಜೆಸ್ಟಿಕ್, ಸಿಟಿ ಮಾರ್ಕೆಟಲ್ಲಿ ಕುಣುಸ್ತ ಅಂಗೇ ಆಸ್ಟ್ರೇಲಿಯಾ, ಜಪಾನ್, ಹಾಂಕಾಂಗ್ ಒಂದು ರೌಂಡ್ ಸುತ್ತಿಸಿ ಮತ್ತೆ ಮೆಜೆಸ್ಟಿಕ್ಕಲ್ಲಿ ಎಂಡ್ ಮಾಡವ್ಹಾ." ಎಂದು ಸೀನ್ ವರ್ಣಿಸಿದ.

ಇದರಿಂದ ಖುಷಿಗೊಂಡ ರಿಯಲ್ ಎಸ್ಟೇಟ್ ಕುಳ, ’ಚಿಯರ್ಸ್, ಇಂಗಾದ್ರೂ ನಾನು ಕನ್ನಡ ಸೇವೆ ಮಾಡ್ದಂಗಾಯ್ತದೆ’ ಎಂದ.

ಜೈ ಕರ್ನಾಟಕ ಮಾತೆ!

ಗ್ರಾಮ ವಾಸ್ತವ್ಯದ ಗ್ರಾಮಸಿಂಹ!

ಅಂತೂ ಅಧಿಕಾರ ಹಸ್ತಾಂತರದ ಪ್ರಹಸನ ಮುಕ್ತಾಯಗೊಂಡಿದೆ. ಜೆಡಿಎಸ್ ನ ಎಲ್ಲಾ ಪಾತ್ರಧಾರಿಗಳೂ ಭರ್ಜರಿಯಾಗಿ ತಮ್ಮ ತಮ್ಮ ಪಾತ್ರಗಳನ್ನು ನೆರವೇರಿಸಿದ್ದಾರೆ.

ಯಾವುದೇ ಪೂರ್ವಾಗ್ರಹವಿಲ್ಲದೆ, ವಿಧಾನಸಭೆಯ ಚುನಾವಣೆಯ ನಂತರ ನಡೆದ ಘಟನೆಗಳನ್ನು, ಸರ್ಕಾರದ ಸಾಧನೆಗಳನ್ನು ಸಮಗ್ರವಾಗಿ ಅವಲೋಕಿಸಿದಾಗ ಕಣ್ಣಿಗೆ ಕಾಣುವುದು ಇಷ್ಟು.

ಧರಮ್ ಸಿಂಗ್ ಮುಖ್ಯಮಂತ್ರಿಯಾಗಿ ಸಾಮಾನ್ಯ ಜನತೆಗೆ ಸುಲಭವಾಗಿ ಸಿಗುವಂತಹ ಮುಖ್ಯಮಂತ್ರಿಯೆನಿಸಿಕೊಳ್ಳಬೇಕೆಂಬ ಹಂಬಲದಲ್ಲಿ ಕರೆದವರ ಮದುವೆ, ತಿಥಿ, ಸಿನಿಮಾ ಮಹೂರ್ತಗಳಿಗೆಲ್ಲ ಹೋಗಿದ್ದು ಮತ್ತು ಅಕ್ಷರಶ: ದೇವೇಗೌಡರ ದಲ್ಲಾಳಿಯಂತೆ ವರ್ತಿಸಿದ್ದು, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುವ ಹಂಬಲದಲ್ಲಿ ಜನತೆ ಅಷ್ಟೇನೂ ಕೇಳರಿಯದಿದ್ದ ’ಅಹಿಂದ’ ದ ಹಿಂದೆ ಬಿದ್ದು, ಕುಂಟು ನೆಪಕ್ಕೆ ಕಾಯುತ್ತಿದ್ದ ದೇವೇಗೌಡರಿಗೊಂದು ನೆಪ ಕೊಟ್ಟು ತಲೆ ಬೋಳಿಸಿಕೊಂಡು ತಮ್ಮೆಲ್ಲ ಆದರ್ಶಗಳೂ ಒಮ್ಮೆ ಮುಖ್ಯಮಂತ್ರಿಯಾಗುವುದೇ ಆಗಿದೆಯೆಂದು ಕಾಂಗ್ರೆಸ್ ಸೇರಿದ್ದು, ಧರಮ್ ಮಾದರಿಯಲ್ಲಿಯೇ ಕುಮಾರಸ್ವಾಮಿ ಕೂಡ ಜನರಿಗೆ ಸುಲಭವಾಗಿ ಸಿಕ್ಕುವ ಮುಖ್ಯಮಂತ್ರಿಯೆನಿಸಿಕೊಳ್ಳಬೇಕೆಂಬ ಪ್ರಚಾರಪ್ರಿಯತೆಗಾಗಿ ಗ್ರಾಮ ವಾಸ್ತವ್ಯ, ಶನಿ-ದರ್ಶನ (ಶನಿವಾರದ ದರ್ಶನ), ರಂಗಿನುಡುಪುಗಳಿಂದ ಆ ದಿಸೆಯಲ್ಲಿ ಕೊಂಚ ಯಶಸ್ವಿಯಾಗಿ ಕೊನೆಗೆ ಉತ್ತರಕುಮಾರನಂತೆ ’ಅಪ್ಪಯ್ಯಾ, ಎಡೆಯೂರಪ್ಪ ಕುರ್ಚಿ ಕೇಳ್ತನೆ ನೋಡು!’ ಎನ್ನುತ್ತ ಗ್ರಾಮಸಿಂಹವಾದದ್ದು, ಮುಂದಿನ ದೀಪಾವಳಿ ’ಅನುಗ್ರಹ’ ದಲ್ಲೇ ಎಂದು ಎಡೆಯೂರಪ್ಪನವರು ಡಂಗುರ ಸಾರಿದ್ದು, ಬಳ್ಳಾರಿಯ ಬಿಜೆಪಿ ಶಾಸಕರುಗಳು ಕುಮಾರಸ್ವಾಮಿ ಪಟಾಲಂ ನ ನೀರಿಳಿಸಿದ್ದು, ಇದಲ್ಲದೆ ಜೆಡಿಎಸ್ ನ ಬಿಸಿಲ್ಗುದುರೆ (ಮಿರಾಜ್), ಜಯಕುಮಾರ್, ಅನ್ಸಾರಿ ಮತ್ತಿತರು ನೀರಿಗೆ ಕಾದಾಡುವ ಬೀದಿ ಮಹಿಳೆಯರನ್ನೂ ಮೀರಿಸಿ ಎಡೆಯೂರಪ್ಪನವರನ್ನು ಜರೆದಿದ್ದು ಮತ್ತು ಅಕ್ಷರಶಃ ದೇವೇಗೌಡ ಕುಟುಂಬದ ಗುಲಾಮಗಿರಿಯನ್ನು ಮೆರೆಸಿದ್ದು, ಮತ್ತು ಹೊನ್ನಾಳಿ ಶಾಸಕ ರೇಣುಕಾಚಾರ್ಯರ ವೈಯುಕ್ತಿಕ ವಿಷಯ ಸಾರ್ವತ್ರಿಕವಾದದ್ದು.

ಮೊದಲರ್ಧದ ಕಾಂಗ್ರೆಸ್ಸಿನೊಂದಿಗಿನ ದೋಸ್ತಿಯಲ್ಲಿ ಸರ್ಕಾರವನ್ನು ರಚಿಸಿದ್ದು ಮತ್ತು ದೇವೇಗೌಡ/ಜನಾರ್ಧನ ಪೂಜಾರಿಯವರ ಪರಸ್ಪರ ಕೆಸರೆರೆಚಿದ್ದು ಸಾಧನೆಯಾದರೆ, ದ್ವಿತೀಯಾರ್ಧದಲ್ಲಿ ಬಿಜೆಪಿಯೊಂದಿಗೆ ಸೇರಿ ಜೆಡಿಎಸ್ ಸಂಪೂರ್ಣವಾಗಿ ಗಾಳಿಸುದ್ದಿಗಳನ್ನು ಹಬ್ಬಿಸುತ್ತ, ಎಡಿಯೂರಪ್ಪನವರನ್ನು ತುಛ್ಛೀಕರಿಸುವುದರಲ್ಲಿ ಸಂಪೂರ್ಣ ತಮ್ಮನ್ನು ತೊಡಗಿಸಿಕೊಂಡದ್ದೇ ಸಾಧನೆ.

ಗ್ರಾಮ ವಾಸ್ತವ್ಯದ ಸುದ್ದಿಗಳನ್ನು ಗಮನಿಸಿದರೆ, ಮುಖ್ಯಮಂತ್ರಿ ಅಲ್ಲಿಗೆ ಸೇರುತ್ತಿದ್ದುದೇ ರಾತ್ರಿ ಹನ್ನೆರಡು ಹೊಡೆದ ಮೇಲೆ! ನಂತರ ಉಂಡ ಶಾಸ್ತ್ರ ಮಾಡಿ ಇನ್ನೊಂದೆರಡು ಗಂಟೆಗಳ ಕಾಲಹರಣ ಮಾಡಿ, ಮತ್ತೊಂದು ತಾಸು ಮಲಗೆದ್ದು, ಐದು ಗಂಟೆಗೆ ಹೆಲಿಕಾಪ್ಟರ್ ಏರುವುದೇ ಇರುತ್ತಿತ್ತು. ಆದರೂ ಜೆಡಿಎಸ್ ಪಕ್ಷದ ಏಜೆಂಟ್ ರಂತೆ ದಿನಪತ್ರಿಕೆಗಳು ಈ ಸುದ್ದಿಯನ್ನು ಹಿರಿದು ಮಾಡಿ ಪ್ರಕಟಿಸಿ ಕುಮಾರಸ್ವಾಮಿಯವರನ್ನು ಮೆರೆಸಿದ್ದು ನಿಜ.

ಸೆಕ್ಯುಲರ್ ಅಂದರೆ ಏನೆಂದು ಕೇಳುತ್ತ ಮುಖ್ಯಮಂತ್ರಿಯಾಗಿ ನಂತರ ವಚನಭ್ರಷ್ಟನಾದರೂ ಚಿಂತೆಯಿಲ್ಲ ಸೆಕ್ಯುಲರ್ ಅಲ್ಲದ ಬಿಜೆಪಿಗೆ ಅಧಿಕಾರ ಹಸ್ತಾಂತರ ಮಾಡುವುದಿಲ್ಲವೆಂದದ್ದು ನೋಡಿದರೆ ’ಸೆಕ್ಯುಲರ್’ ಪದದ ಅರ್ಥ ಕಂಡುಕೊಳ್ಳಲು ಈ ವ್ಯಕ್ತಿ ಮುಖ್ಯಮಂತ್ರಿಯಾದನೇ? ಎಂದು ಜನ ಬೆರಗಾಗುವರೂ ಅಥವಾ ಎಂತಹ ಮೂರ್ಖನೆಂದು ಮರುಕ ಪಡುವರ್‍ಓ ಗೊತ್ತಿಲ್ಲ. ಒಟ್ಟಲ್ಲಿ ನಂಬಿಸಿ ಕೈ ಕೊಡುವ ವಿಷಯದಲ್ಲಿ ’ತಂದೆಯಂತೆ ಮಗ, ನೂಲಿನಂತೆ ಸೀರೆ’ ಎಂಬುದನ್ನು ತಮ್ಮ ಮೊದಲ ಇನ್ನಿಂಗ್ಸ್ ನಲ್ಲಿಯೇ ಅಮೋಘವಾಗಿ ಪ್ರದರ್ಶಿಸಿದ್ದಾರೆ!

ಸರ್ಕಾರ ಬಿದ್ದ ಅ ನಂತರದ ಪ್ರತಿಯೊಂದು ಹಂತದಲ್ಲಿಯೂ ಅತ್ಯಂತ ಕೀಳೆನ್ನಿಸಬಹುದಾದಂತಹ, ಚೆನ್ನಮ್ಮನವರು ಮಾಂಗಲ್ಯ ಉಳಿಸಿರೆಂದು ಅತ್ತಿದ್ದು, ದೇವೇಗೌಡರು ನೇಣು ಹಾಕಿಕೊಳ್ಳುವುದಾಗಿ ಬೆದರಿಸಿದ್ದು, ರೇವಣ್ಣ ಗಳಗಳನೆ ಅತ್ತಿದ್ದು, ಇವರೆಲ್ಲರ ಗೋಳಾಟವನ್ನು ನೋಡಿ ಅಷ್ಟರಲ್ಲಾಗಲೇ ಮಾಜಿಯಾಗಿದ್ದ ಕುಮಾರಸ್ವಾಮಿ ಕೂಡ ಅತ್ತ ವರದಿಗಳನ್ನೆಲ್ಲ ನೋಡಿದರೆ, ತನ್ನ ಸ್ವಂತ ಸಹೋದರರ ಮನಸ್ಸನ್ನೇ ಗೆಲ್ಲದ (ದೇವೇಗೌಡ ಸೋದರರ ಪುತ್ರರೊಬ್ಬರು ಇವರ ಕಿರುಕುಳದಿಂದ ಬೇಸತ್ತು ಚೆನ್ನಮ್ಮನವರ ಮೇಲೆ ಆಸಿಡ್ ದಾಳಿ ಮಾಡಿ ಜೈಲು ಸೇರಿದ್ದನ್ನು ಇಲ್ಲಿ ಸ್ಮರಿಸಬಹುದು) ಶೂನ್ಯ ಹೃದಯ ವೈಶಾಲ್ಯದ ದೇವೇಗೌಡ ಪ್ರಧಾನಮಂತ್ರಿಯಾಗಿದ್ದು ಹೃದಯ ವೈಶಾಲ್ಯವನ್ನು ಮೆರೆವ ಕನ್ನಡಿಗರ ಹೆಮ್ಮೆಯ ಸಂಗತಿಯೋ ಅಥವಾ ಇಂತಹ ಕ್ಷುಲ್ಲಕ ವ್ಯಕ್ತಿ ಕನ್ನಡಿಗನೆಂದು ಕನ್ನಡಿಗರು ತಲೆ ತಗ್ಗಿಸಬೇಕೊ ಎಂದು ಕನ್ನಡಿಗರೇ ಮುಂದಿನ ಚುನಾವಣೆಯಲ್ಲಿ ಹೇಳಬೇಕು!

ಹಾಗೆ ನೋಡಿದರೆ ಸಾರಾಯಿ ನಿಷೇಧ, ಕಳಸಾ ಬಂಡೂರಿ, ಭದ್ರಾ ಮೇಲ್ದಂಡೆ ಯೋಜನೆಗಳಂತಹ ಮಹತ್ವದ ಯೋಜನೆಗಳ ಅನುಷ್ಟಾನಗಳು ಮತ್ತಿತರೆ ಅಭಿವೃದ್ದಿಗಳು ನಡೆದದ್ದು ಬಿಜೆಪಿಯೊಂದಿಗಿನ ದೋಸ್ತಿಯಲ್ಲಿ ಎಂಬುದು ಗಮನಾರ್ಹ ಆಶ್ಚರ್ಯವಾಗಿದೆ.

ಒಟ್ಟಾರೆ ಜೆಡಿಎಸ್ ನ ಎಲ್ಲಾ ಕಾಲೆಳೆತ ಕಿರುಕುಳಗಳ ನಡುವೆಯೂ ಕೂಡ ಕೆಲವು ಉತ್ತಮವಾದಂತಹ ಯೋಜನೆಗಳನ್ನು ಅನುಷ್ಟಾನಗೊಳಿಸಿದ್ದು ಸಮ್ಮಿಶ್ರ ಸರ್ಕಾರದ ಸಾಧನೆಯೆನ್ನದೇ ಬಿಜೆಪಿಯದೇ ಸಾಧನೆ ಎನ್ನಬಹುದಾಗಿದೆ. ಬಹುಶಃ ಬಿಜೆಪಿ ರಾಜ್ಯಕ್ಕೆ ಉತ್ತಮ ಅಭಿವೃದ್ದಿಯನ್ನು ಕೊಡಬೇಕೆಂಬ ವಸ್ತುನಿಷ್ಠ ಉದ್ದೇಶವನ್ನು ಹೊಂದಿದ್ದರೆ, ಈಗ ಅಧಿಕಾರ ಕಳೆದುಕೊಂಡ ಮೇಲೆ ತಮ್ಮ ಅಭಿವೃದ್ದಿ, ತಾಳ್ಮೆಗಳ ಶಕ್ತಿಯನ್ನು ಜನಗಳಿಗೆ ತಿಳಿಸುವಂತಹ ಕಾರ್ಯಕ್ರಮಗಳನ್ನು ಹಾಕಿಕೊಳ್ಳದೇ ಅನವಶ್ಯಕವಾಗಿ ಓಟಿನ ರಾಜಕಾರಣದ ದತ್ತ ಪೀಠದಂತಹ ವಿಚಾರಗಳನ್ನೆತ್ತಿ ಅನಗತ್ಯವಾಗಿ ತಮಗೆ ದೊರಕಿರುವ ’ವಚನಭ್ರಷ್ಟತೆ’ಯ ಪ್ರಚಾರವನ್ನು ಕಳೆದುಕೊಳ್ಳುತ್ತಿರುವರೇನೋ?

ಈ ಜನ ನಾಯಕರುಗಳು ಅಸಹ್ಯವೆನ್ನಿಸುವುದಕ್ಕಿಂತಲೂ ಕೀಳಾಗಿ, ಯಾವುದೇ ಮೌಲ್ಯವಾಗಲೀ, ಜನಹಿತ ಕಾಳಜಿಯಾಗಲೀ ಸಿದ್ಧಾಂತಗಳಾಗಲೀ ಇಲ್ಲದೆ ವ್ಯಕ್ತಿಪೂಜೆಯೇ ದೇವಪೂಜೆಯೆಂಬಂತೆ ತಮ್ಮ ಹಿರಿಯ ನಾಯಕರೊಂದಿಗೆ ವರ್ತಿಸುತ್ತ, ತಮ್ಮ ಕೈಕೆಳಗಿರುವವರಿಂದ ತಮ್ಮ ಪೂಜೆಯನ್ನು ಬಯಸುತ್ತ, ನೂರಾರು ಕೋಟಿಗಳ ಹಗರಣಗಳಲ್ಲಿ ತೊಡಗಿರುವುದೇ ಪ್ರತಿಷ್ಟೆ ಎಂಬಂತೆ ಗರ್ವದಿಂದ ಬೀಗುವುದನ್ನು ನೋಡಿದರೆ ’ಭಾರತಕ್ಕಾಗಿ ನನ್ನ ಹೃದಯ ಮಿಡಿಯುತ್ತಿದೆ’ ಎಂದು ಬಡವರ ತಾಯಿ, ಬಂಧು ಇನ್ನು ಏನೇನೋ ಆಗಿದ್ದ ಮಹಾಮಾತೆಯೊಬ್ಬರ ಚುನಾವಣಾ ಉದ್ಘೋಷ ಬೇಡವೆಂದರೂ ಯಾಕೋ ನೆನಪಾಗುತ್ತಿದೆ.

ಒಟ್ಟಾರೆ ರಾಜಕೀಯದಲ್ಲಷ್ಟೇ ಇದ್ದ ನೈತಿಕ ಅಧ:ಪತನ, ಇಂದು ಚೆಲುವ, ಚೆನ್ನಿಗ, ರೆಡ್ಡಿ ಇನ್ನೂ ಹತ್ತು ಹಲವಾರು ಇಂತಹ ನಿಕೃಷ್ಟರನ್ನೇ ಆರಿಸಿ ಕಳುಹಿಸುತ್ತಿರುವ ಜನಸಾಮಾನ್ಯರಲ್ಲೂ ಗಾಢವಾಗಿ ಭಾರತದಾದ್ಯಂತ ಸುಪ್ತಗಾಮಿನಿಯಾಗಿ ಪಸರಿಸಿದೆಯೇನೋ ಅನಿಸುತ್ತಿದೆ!


ವಿನೋದ:

ಈ ವಾರದ ವಿನೋದವನ್ನು ದೇವೇಗೌಡ ಮತ್ತು ಕುಟುಂಬ ಕಸಿದುಕೊಂಡಿದೆ! :)

ಮಣ್ಣಿನ ಮಗನ ವಿರುದ್ಧ ಮಣ್ಣಿನ ಮಗ!

ಮೊನ್ನೆ ನೈಸ್ ಸಂಸ್ಥೆಯ ಮುಖ್ಯಸ್ಥ ಅಶೋಕ್ ಖೇಣಿಯವರು ತಮ್ಮಲ್ಲಿ ದೇವೇಗೌಡ ಮತ್ತು ಮಕ್ಕಳ ಭ್ರಷ್ಟಾಚಾರದ ದಾಖಲೆಗಳಿವೆಯೆಂದೂ ಮತ್ತು ತಾವು ಅದನ್ನು ಸತ್ಯವೆಂದು ಪ್ರಮಾಣಿಸಲು ವಿಧಾನಸೌಧದ ಎದುರು ಸಾರ್ವಜನಿಕವಾಗಿ ಲೈ ಡಿಟೆಕ್ಟರ್ ಪರೀಕ್ಷೆ ತೆಗೆದುಕೊಳ್ಳುವುದಾಗಿಯೂ ಮತ್ತು ತಾಕತ್ತಿದ್ದರೆ ದೇವೇಗೌಡ ಮತ್ತು ಮಕ್ಕಳೂ ಈ ಪರೀಕ್ಷೆಯನ್ನು ತೆಗೆದುಕೊಳ್ಳಲೆಂದು ಸವಾಲೆಸೆದಿದ್ದಾರೆಂದು ಓದಿದೆ. ಪರವಾಗಿಲ್ಲ ಈ ಖೇಣಿ ಎನಿಸಿತು. ಸಾಮಾನ್ಯವಾಗಿ ರಾಜಕಾರಣಿಗಳು ಚುನಾವಣೆಯ ಸಂದರ್ಭದಲ್ಲಿ ಸವಾಲು ಮರುಸವಾಲುಗಳೆನ್ನೆಸೆಯುತ್ತಿದ್ದು, ಖೇಣಿಯವರ ಸವಾಲು ಜನಗಳಿಗೆ ವಿಭಿನ್ನವೆನಿಸಿರಬಹುದೆಂದುಕೊಂಡೆನು.

ಸಾಮಾನ್ಯವಾಗಿ ಸವಾಲುಗಳಿಗೆ ಜವಾಬುಗಳನ್ನೀಯದೆ ಮರುಸವಾಲುಗಳನ್ನೆಸೆಯುವ ರಾಜಕಾರಣಿಗಳಿಂದೇನೂ ಹೊರತಾಗದ ಮಣ್ಣಿನ ಮಗ, ಮೊಮ್ಮಕ್ಕಳು ನಾನು ನಿರೀಕ್ಷಿಸಿದಂತೆ ವೈಜ್ಞಾನಿಕ ಯಂತ್ರವು ಎಲ್ಲಿ ತಮ್ಮ ಅಸಲೀ ಜಾತಕವನ್ನು ಕಂಡುಹಿಡಿಯುವುದೆಂದು ಭಯಪಟ್ಟು, ತಮ್ಮದೇ ಆದ ಧಮ್ಕೀ ಶೈಲಿಯಲ್ಲಿ ತಾವೇ ತಮ್ಮ ಜಾತಕ, ನಕ್ಷತ್ರಗಳನ್ನು ಖೇಣಿಯವರಿಗೆ ಕಳುಹಿಸುವುದಾಗಿ ಎಚ್ಚರಿಸಿದ್ದಾರೆ!

ಮೇಲುನೋಟಕ್ಕೆ ಯೋಚಿಸಿ ನೋಡಿದರೆ, ತಮ್ಮ ಸಂಸಾರವನ್ನು ಬೇರೆ ದೇಶದಲ್ಲಿ ಬಿಟ್ಟು, ಬೆಂಗಳೂರಿನ ಯಾವುದೋ ಅಪಾರ್ಟಮೆಂಟ್ ಒಂದರಲ್ಲಿ ವಾಸಿಸುತ್ತ ತನ್ನ ರಾಜ್ಯಕ್ಕೆ ಉತ್ತಮ ರಸ್ತೆಗಳನ್ನು ನೀಡಬೇಕೆಂಬ ಕನಸನ್ನು ಹೊತ್ತು, ಅದಕ್ಕೆ ಬಂದ ಎಲ್ಲ ಅಡೆತಡೆ, ಬೆದರಿಕೆಗಳಿಗೆ ಭಾರತದ ನ್ಯಾಯಾಂಗದ ಚೌಕಟ್ಟಿನಲ್ಲಿಯೇ ಹೋರಾಡುತ್ತ ಛಲದಂಕಮಲ್ಲನಂತೆ ಮುನ್ನುಗ್ಗುತ್ತಿರುವ ಖೇಣಿ ಮಣ್ಣಿನಮಗನೆನಿಸಿ, ಮತ್ತೊಂದೆಡೆ ರೈತರ ಸಮಸ್ಯೆಗಳಿಗೆ ಮೊಸಳೆ ಕಣ್ಣೀರಿಡುತ್ತ, ಸ್ವಂತ ಆರೋಗ್ಯಕ್ಕಾಗಿ ಪಾದಯಾತ್ರೆ ಮಾಡುತ್ತ, ಜೆಡಿಎಸ್ ಶಾಸಕರು ಎಲ್ಲಿ ಮಲಗಬೇಕು, ಏನು ತಿನ್ನಬೇಕು, ಏನು ಮಾತನಾಡಬೇಕೆಂದು ಲೆಕ್ಕವಿಡುತ್ತ ಬೇರೆಯವರ ಹೊಲದಲ್ಲಿ ಪಾಯಿಖಾನೆ ಮಾಡಿ ಮಣ್ಣಿನ ಮಡಿಲನ್ನು ತುಂಬುವ, ಡಾ: ರಾಜ್ ರ ಅನೇಕ ರೈತಮಕ್ಕಳ ಸಿನೆಮಾಗಳಲ್ಲಿ ತೋರಿಸಿದಂತೆ ಪಕ್ಕದ ನೆರೆಹೊರೆ ರೈತನ ಮೇಲೆ ಕತ್ತಿ ಮಸೆಯುವ ಹುಂಬ ರೈತನಂತೆ (ಸಾಮಾನ್ಯವಾಗಿ ಡಾ: ರಾಜ್ ಅವರಿಂದ ಒದೆ ತಿನ್ನುವ), ಪ್ರಗತಿಗೆ ಮಾರಕನಾಗಿ (ಸ್ವಂತ) ಮಕ್ಕಳಿಗೆ ಪೂರಕವಾಗಿ, ಜನಾರ್ಧನ ಪೂಜಾರಿಯವರು ಹೇಳುವ ಏಕೈಕ ಸತ್ಯದಂತೆ ಅತ್ಯುತ್ತಮ ನಟನೂ ಆಗಿ ಮಾಜಿ ಪ್ರಧಾನಿಗಳು ಉದ್ಘೋಷಿತ ಮಣ್ಣಿನಮಗನೆನಿಸಿದರೂ, ಜನ ಏಕೆ ಅರಿಯುತ್ತಿಲ್ಲವೋ?

ಬಹುಶಃ, ಜೀವನವೆಂದರೆ ಗೋಳಾಟವೆಂದೇ ತೋರಿಸುವ, ಬಕೇಟುಗಟ್ಟಲೆ ಕಣ್ಣೀರಿಳಿಸುವ ’ಮಾಯಾಮೃಗ’, ’ಪ್ರೀತಿ ಇಲ್ಲದ ಮೇಲೆ’ ಮುಂತಾದ ಮೆಗಾಸೀರಿಯಲ್ ಗಳಿಂದ ಬೇಸತ್ತಿರುವವರಿಗೆ ಮಣ್ಣಿನಮಗನ ನಾಟಕ ಕಂಪೆನಿ ತನ್ನ ಅನುಭವೀ ನಟರುಗಳಾದ ಚೆಲುವ, ಚೆನ್ನಿಗ, ಪೋಷಕ ಪಾತ್ರದ ಪ್ರಕಾಶ ಮತ್ತು ಉದಯೋನ್ಮುಖ ನಟರಾದ ಬಿಸಿಲ್ಗುದುರೆ (ಮಿರಾಜ್), ದಳವಾಯಿ (ಇವು ರಂಗದ ಮೇಲಿನ ಹೆಸರುಗಳಷ್ಟೇ ಅಲ್ಲದೆ ಇವರುಗಳ ನಿಜನಾಮಗಳೂ ಇವೇ ಆಗಿವೆ ಎಂಬುದು ಮಣ್ಣಿನಮಗನ ನಿರ್ದೇಶನಾ ಚಾತುರ್ಯಕ್ಕೆ ಮತ್ತು ನೈಜತೆಗೆ ಅವರು ಕೊಡುವ ಪ್ರಾಮುಖ್ಯತೆಗೆ ಸಾಕ್ಷಿ) ಇನ್ನು ಮುಂತಾದವರಿಂದ ಒಳ್ಳೆಯ ಮನರಂಜನೆ ನೀಡುತ್ತಿದೆಯೆಂದೋ ಅಥವ ಮೇಲೆ ತಿಳಿಸಿದ ಗುಣಗಳಷ್ಟೇ ಅಲ್ಲದೆ ಯಾವ ಎಗ್ಗಿಲ್ಲದೆ ಸಭೆ ಸಮಾರಂಭಗಳಲ್ಲಿ ನಿದ್ದೆ ಮಾಡುವ, ಯಾವ ವಿದೇಶೀ ಸಭೆಯಾದರೂ ಪಂಚೆ ಎತ್ತಿ ಕಟ್ಟುವ, ಪ್ರಪಂಚದ ಯಾವ ಮೂಲೆಗೆ ಹೋದರೂ ಮುದ್ದೆ-ಸೊಪ್ಪಿನಸಾರೇ ಬೇಕೆನ್ನುವಷ್ಟು ಭಾರತೀಯತೆಯನ್ನು ಮೆರೆಸುವ, ಮಲ-ಮೂತ್ರ ವಿಸರ್ಜನೆಗೂ ರಾಹುಕಾಲ/ಗುಳಿಕಕಾಲಗಳನ್ನು ನೋಡುವ, ಕರ್ನಾಟಕವನ್ನಾಳಲು ತಮಿಳುನಾಡಿನ ದೇವರುಗಳಿಗೆ ಮೊರೆ ಹೋಗುವ, ಭಜರಂಗಿಗಳೂ ನಾಚುವಷ್ಟು ಹೋಮ ಹವನಗಳನ್ನು ಮಾಡುವ, ವೈರಿ ನಿವಾರಣೆಗೆ ಮಾಟಮಂತ್ರ, ಭಾನಾಮತಿಗಳಿಗೆ ಮೊರೆಹೋಗುವ, ಜಾತ್ಯಾತೀತವೆಂಬುತ್ತ ಮುಳ್ಳುಗೌಡ/ದಾಸಗೌಡನೆಂದು ತೂಗುವ, ನಂಬಿಕೆ ದ್ರೋಹದ ಇತಿಹಾಸದ ಇವರು, ಬಹುಶಃ ಮತದಾರರಿಗೆ ಅತ್ಯಂತ ಪರಿಪೂರ್ಣ ಭಾರತೀಯನಾಗಿ, ತಮ್ಮ ಪ್ರತಿಬಿಂಬವೇ ಇವರಾಗಿ, ಶುದ್ಧ ದೇಸೀ ’ಮಣ್ಣಿನಮಗ’ನಾಗಿ ಕಾಣುತ್ತಿರಬೇಕು!

ಖೇಣಿಯವರ ಅದೃಷ್ಟವೋ, ದುರಾದೃಷ್ಟವೋ ಅವರ ಯೋಜನೆ ಮತ್ತು ಐಟಿ/ಬಿಟಿ ಗಳ ಭರಾಟೆಯಲ್ಲಿ ಬೆಂಗಳೂರು ಸಿಂಗಾಪುರವಾಗುವ ಮುನ್ನ ಅದರ ನೆಲಕ್ಕೆ ಭೂಗಳ್ಳರ ಚದುರಂಗದಾಟದಿಂದ ನ್ಯೂಯಾರ್ಕ್ ನೆಲದ ಬೆಲೆ ಬಂದು, ಅದೇ ರೀತಿ ನಮ್ಮ ಮಣ್ಣಿನಮಗನ ಪಂಚೆಯೊಳಗಿನ ಒಂದೊಂದು ನಿಕೃಷ್ಟ ರೋಮಗಳೂ (ಕ್ಷಮಿಸಿ, ಈ ಪದವನ್ನು ಬಳಸಬಾರದೆಂದುಕೊಂಡರೂ ಇದು ನಮ್ಮ ಮಣ್ಣಿನ ಮಗ, ಮೊಮ್ಮಕ್ಕಳು ಅತಿಯಾಗಿ ಬಳಸಿ, ಪ್ರೀತಿಸುವ ಪದ) ಹುಲುಸಾಗಿ ಈ ನೆಲದಲ್ಲಿ ಹಬ್ಬಿ, ಖೇಣಿಯವರ ಯೋಜನೆಗೆ ಮೀಸಲಾಗಿಟ್ಟ ನೆಲವನ್ನು ಪಸರಿಸಿಕೊಳ್ಳಬೇಕಿರುವಾಗ, ಖೇಣಿಯವರ ಯೋಜನೆ, ಜನತೆಯ ಪ್ರಯೋಜನೆಯ ಬಗ್ಗೆ ಕೇಳುವವರ್‍ಯಾರು?

ಕ್ಷುಲ್ಲಕ ಕಾರಣ ಸಿಕ್ಕರೂ ರಸ್ತೆತಡೆ, ರೈಲುತಡೆ, ಬಂದ್ ಗಳಿಗೆ ಕರೆ ನೀಡುವ ಕಾಂಗ್ರೆಸ್ ಆಗಲೀ ಬಿಜೆಪಿಗಳಾಗಲಿ, ಸಿನಿಮಾ ನಟಿಯೊಬ್ಬಳು ಹೂಸಿದರೂ ತಿಂಗಳುಗಟ್ಟಲೆ ಅದರ ಸುವಾಸನೆಯ ಬಗ್ಗೆ ಸುದ್ದಿ ಮಾಡುವ ಪತ್ರಿಕೆಯವರಾಗಲೀ, ಯಾರೊಬ್ಬರೂ ಈ ಖೇಣಿಯವರ ಸವಾಲಿನ ವಿಷಯವನ್ನೆತ್ತಿ ಮಣ್ಣಿನಮಗ, ಮೊಮ್ಮಕ್ಕಳ ಧೂಳನ್ನು ಕೊಡವದೇ ಇರುವುದೇಕೆ ಗೊತ್ತೆ?

ಇಂದಿನ ಪ್ರತಿಯೊಂದು ಪಕ್ಷದ ರಾಜಕಾರಣಿಯೂ ಈ ಬೆಂಗಳೂರು ರಿಯಲ್ ಎಸ್ಟೇಟ್ ದಂಧೆಯಲ್ಲಿ ತೊಡಗಿರುವುದೂ ಮತ್ತು ಈಗ ಇದನ್ನು ಸುದ್ದಿ ಮಾಡಿದರೆ ಈ ಲೈ ಡಿಟೆಕ್ಟರ್ ಭೂತ ಮುಂದೆ ತಮ್ಮನ್ನು ಅದಾವ ಪರಿ ಭಾಧಿಸುವುದೋ ಎಂಬ ಭಯದಿಂದ. ಹಾಗೆಯೇ ಸುದ್ದಿಮಾಧ್ಯಮಗಳಿಗೂ ಮುಂದೆಲ್ಲಿ ತಮ್ಮ ರೋಚಕಸುದ್ದಿಗಳನ್ನು ಪ್ರಮಾಣಿಸಲು ಈ ಲೈ ಡಿಟೆಕ್ಟರ್ ಪರೀಕ್ಷೆ ಬರುವುದೋ ಎಂಬ ದಿಗಿಲಿರಬಹುದು.

ಒಟ್ಟಿನಲ್ಲಿ ಪರಸ್ಪರ ಕೆಸರೆರಚುತ್ತ, ಅಮ್ಮನ ಮಗನಾದರೆ...ಅಪ್ಪನಿಗೆ ಹುಟ್ಟಿದ್ದರೆ...ಇಲ್ಲಾ ಗಂಡಸಾಗಿದ್ದರೆ...ಎಂದು ಕೀಳು ಮಟ್ಟದ ಸವಾಲೆಸೆಯುತ್ತಿದ್ದ ರಾಜಕಾರಣಿಗಳಿಗೆ ನ್ಯಾಯಯುತವಾಗಿ, ವೈಜ್ಞಾನಿಕವಾಗಿ, ಆದರ್ಶಯುತವಾಗಿ ಸವಾಲೆಸೆದಿರುವ ಖೇಣಿಯವರ ಉದ್ದೇಶ ವಸ್ತುನಿಷ್ಟವಾಗಿದ್ದರೆ, ಇದು ಇಂದು ತಾಂತ್ರಿಕತೆಯ ದೆಸೆಯಿಂದಲಾದರೂ ಬದಲಾಗಲೇಬೇಕಾದ ಸಾಮಾಜಿಕತೆಯ ಆರಂಭವೇನೋ ಎಂದು ಸಂತಸವಾಗುತ್ತಿದೆ.

ವಿನೋದ:

ಬೆಂಗಳೂರಿಗೆ ನ್ಯೂಯಾರ್ಕ್ ಬೆಲೆ ಹೇಗೆ ಬಂತು ಗೊತ್ತೆ?

ಒಬ್ಬ ಮಾಮೂಲಿ ಮನೆ ಬ್ರೋಕರ್ ನ ಬಳಿ ಒಬ್ಬ ಬಾಂಬೆವಾಲಾ ಬಂದು, ಒಂದು ನಿವೇಶನ ಬೇಕೆಂದು ಕೇಳಿದ.

ಸರಿ, ಬ್ರೋಕರ್ ಒಂದು ನಿವೇಶನ ತೋರಿಸಿ ತನ್ನ ಹರಕು-ಮುರುಕು ಹಿಂದಿಯಲ್ಲಿ ಐನೂರು ರುಪಾಯಿ ಚದರಡಿ ಎಂಬುದಕ್ಕೆ "ಪಾಂಚ್ ಹಜಾರ್" ಎಂದ.

ಬಾಂಬೆವಾಲಾ ಕೂಡ ತನ್ನ ಪ್ರತಿಷ್ಟೆಯನ್ನು ಮೆರೆಸುತ್ತ ತನ್ನ ಹರಕು-ಮುರುಕು ಇಂಗ್ಲಿಷ್ ನಲ್ಲಿ "ಓನ್ಲೀ ಫೋರ್ ಥೌಸಂಡ್ ಫೈವ್ ಹಂಡ್ರೆಡ್" ಎಂದ.

ಅದನ್ನರಿತ ಬ್ರೋಕರ್ ಒಳಗೆ ಖುಷಿಯಾಗಿ ವ್ಯವಹಾರ ಮುಗಿಸಿದ.

ಅಂದಿನಿಂದ ಬೆಂಗಳೂರಿನ ಆ ಏರಿಯಾಕ್ಕೆ ೪೫೦೦/ಚದರಡಿ ಫಿಕ್ಸ್ ಆಯಿತು. ಅಷ್ಟೇ ಅಲ್ಲದೆ ಇಡೀ ಬೆಂಗಳೂರಿನ ಬ್ರೋಕರ್ ಮಂಡಳಿಗೆ ಈ ಬೆಲೆ ಮಾದರಿಯಾಯಿತು.

ಇಷ್ಟು ಸರಳವಾದ ಇಕನಾಮಿಕ್ಸ್ ಗೆ ಪಾಶ್ಚಿಮಾತ್ಯರು ಅದೇಕೆ ಇನಫಲೇಶನ್, ಡಿಫಲೇಶನ್, ರಿಸೆಷನ್ ಅಂತ ತಲೆ ಕೆರೆದುಕೊಳ್ಳುವರೋ?

ಗೊತ್ತೆ?