ಮಣ್ಣಿನ ಮಗನ ವಿರುದ್ಧ ಮಣ್ಣಿನ ಮಗ!

ಮೊನ್ನೆ ನೈಸ್ ಸಂಸ್ಥೆಯ ಮುಖ್ಯಸ್ಥ ಅಶೋಕ್ ಖೇಣಿಯವರು ತಮ್ಮಲ್ಲಿ ದೇವೇಗೌಡ ಮತ್ತು ಮಕ್ಕಳ ಭ್ರಷ್ಟಾಚಾರದ ದಾಖಲೆಗಳಿವೆಯೆಂದೂ ಮತ್ತು ತಾವು ಅದನ್ನು ಸತ್ಯವೆಂದು ಪ್ರಮಾಣಿಸಲು ವಿಧಾನಸೌಧದ ಎದುರು ಸಾರ್ವಜನಿಕವಾಗಿ ಲೈ ಡಿಟೆಕ್ಟರ್ ಪರೀಕ್ಷೆ ತೆಗೆದುಕೊಳ್ಳುವುದಾಗಿಯೂ ಮತ್ತು ತಾಕತ್ತಿದ್ದರೆ ದೇವೇಗೌಡ ಮತ್ತು ಮಕ್ಕಳೂ ಈ ಪರೀಕ್ಷೆಯನ್ನು ತೆಗೆದುಕೊಳ್ಳಲೆಂದು ಸವಾಲೆಸೆದಿದ್ದಾರೆಂದು ಓದಿದೆ. ಪರವಾಗಿಲ್ಲ ಈ ಖೇಣಿ ಎನಿಸಿತು. ಸಾಮಾನ್ಯವಾಗಿ ರಾಜಕಾರಣಿಗಳು ಚುನಾವಣೆಯ ಸಂದರ್ಭದಲ್ಲಿ ಸವಾಲು ಮರುಸವಾಲುಗಳೆನ್ನೆಸೆಯುತ್ತಿದ್ದು, ಖೇಣಿಯವರ ಸವಾಲು ಜನಗಳಿಗೆ ವಿಭಿನ್ನವೆನಿಸಿರಬಹುದೆಂದುಕೊಂಡೆನು.

ಸಾಮಾನ್ಯವಾಗಿ ಸವಾಲುಗಳಿಗೆ ಜವಾಬುಗಳನ್ನೀಯದೆ ಮರುಸವಾಲುಗಳನ್ನೆಸೆಯುವ ರಾಜಕಾರಣಿಗಳಿಂದೇನೂ ಹೊರತಾಗದ ಮಣ್ಣಿನ ಮಗ, ಮೊಮ್ಮಕ್ಕಳು ನಾನು ನಿರೀಕ್ಷಿಸಿದಂತೆ ವೈಜ್ಞಾನಿಕ ಯಂತ್ರವು ಎಲ್ಲಿ ತಮ್ಮ ಅಸಲೀ ಜಾತಕವನ್ನು ಕಂಡುಹಿಡಿಯುವುದೆಂದು ಭಯಪಟ್ಟು, ತಮ್ಮದೇ ಆದ ಧಮ್ಕೀ ಶೈಲಿಯಲ್ಲಿ ತಾವೇ ತಮ್ಮ ಜಾತಕ, ನಕ್ಷತ್ರಗಳನ್ನು ಖೇಣಿಯವರಿಗೆ ಕಳುಹಿಸುವುದಾಗಿ ಎಚ್ಚರಿಸಿದ್ದಾರೆ!

ಮೇಲುನೋಟಕ್ಕೆ ಯೋಚಿಸಿ ನೋಡಿದರೆ, ತಮ್ಮ ಸಂಸಾರವನ್ನು ಬೇರೆ ದೇಶದಲ್ಲಿ ಬಿಟ್ಟು, ಬೆಂಗಳೂರಿನ ಯಾವುದೋ ಅಪಾರ್ಟಮೆಂಟ್ ಒಂದರಲ್ಲಿ ವಾಸಿಸುತ್ತ ತನ್ನ ರಾಜ್ಯಕ್ಕೆ ಉತ್ತಮ ರಸ್ತೆಗಳನ್ನು ನೀಡಬೇಕೆಂಬ ಕನಸನ್ನು ಹೊತ್ತು, ಅದಕ್ಕೆ ಬಂದ ಎಲ್ಲ ಅಡೆತಡೆ, ಬೆದರಿಕೆಗಳಿಗೆ ಭಾರತದ ನ್ಯಾಯಾಂಗದ ಚೌಕಟ್ಟಿನಲ್ಲಿಯೇ ಹೋರಾಡುತ್ತ ಛಲದಂಕಮಲ್ಲನಂತೆ ಮುನ್ನುಗ್ಗುತ್ತಿರುವ ಖೇಣಿ ಮಣ್ಣಿನಮಗನೆನಿಸಿ, ಮತ್ತೊಂದೆಡೆ ರೈತರ ಸಮಸ್ಯೆಗಳಿಗೆ ಮೊಸಳೆ ಕಣ್ಣೀರಿಡುತ್ತ, ಸ್ವಂತ ಆರೋಗ್ಯಕ್ಕಾಗಿ ಪಾದಯಾತ್ರೆ ಮಾಡುತ್ತ, ಜೆಡಿಎಸ್ ಶಾಸಕರು ಎಲ್ಲಿ ಮಲಗಬೇಕು, ಏನು ತಿನ್ನಬೇಕು, ಏನು ಮಾತನಾಡಬೇಕೆಂದು ಲೆಕ್ಕವಿಡುತ್ತ ಬೇರೆಯವರ ಹೊಲದಲ್ಲಿ ಪಾಯಿಖಾನೆ ಮಾಡಿ ಮಣ್ಣಿನ ಮಡಿಲನ್ನು ತುಂಬುವ, ಡಾ: ರಾಜ್ ರ ಅನೇಕ ರೈತಮಕ್ಕಳ ಸಿನೆಮಾಗಳಲ್ಲಿ ತೋರಿಸಿದಂತೆ ಪಕ್ಕದ ನೆರೆಹೊರೆ ರೈತನ ಮೇಲೆ ಕತ್ತಿ ಮಸೆಯುವ ಹುಂಬ ರೈತನಂತೆ (ಸಾಮಾನ್ಯವಾಗಿ ಡಾ: ರಾಜ್ ಅವರಿಂದ ಒದೆ ತಿನ್ನುವ), ಪ್ರಗತಿಗೆ ಮಾರಕನಾಗಿ (ಸ್ವಂತ) ಮಕ್ಕಳಿಗೆ ಪೂರಕವಾಗಿ, ಜನಾರ್ಧನ ಪೂಜಾರಿಯವರು ಹೇಳುವ ಏಕೈಕ ಸತ್ಯದಂತೆ ಅತ್ಯುತ್ತಮ ನಟನೂ ಆಗಿ ಮಾಜಿ ಪ್ರಧಾನಿಗಳು ಉದ್ಘೋಷಿತ ಮಣ್ಣಿನಮಗನೆನಿಸಿದರೂ, ಜನ ಏಕೆ ಅರಿಯುತ್ತಿಲ್ಲವೋ?

ಬಹುಶಃ, ಜೀವನವೆಂದರೆ ಗೋಳಾಟವೆಂದೇ ತೋರಿಸುವ, ಬಕೇಟುಗಟ್ಟಲೆ ಕಣ್ಣೀರಿಳಿಸುವ ’ಮಾಯಾಮೃಗ’, ’ಪ್ರೀತಿ ಇಲ್ಲದ ಮೇಲೆ’ ಮುಂತಾದ ಮೆಗಾಸೀರಿಯಲ್ ಗಳಿಂದ ಬೇಸತ್ತಿರುವವರಿಗೆ ಮಣ್ಣಿನಮಗನ ನಾಟಕ ಕಂಪೆನಿ ತನ್ನ ಅನುಭವೀ ನಟರುಗಳಾದ ಚೆಲುವ, ಚೆನ್ನಿಗ, ಪೋಷಕ ಪಾತ್ರದ ಪ್ರಕಾಶ ಮತ್ತು ಉದಯೋನ್ಮುಖ ನಟರಾದ ಬಿಸಿಲ್ಗುದುರೆ (ಮಿರಾಜ್), ದಳವಾಯಿ (ಇವು ರಂಗದ ಮೇಲಿನ ಹೆಸರುಗಳಷ್ಟೇ ಅಲ್ಲದೆ ಇವರುಗಳ ನಿಜನಾಮಗಳೂ ಇವೇ ಆಗಿವೆ ಎಂಬುದು ಮಣ್ಣಿನಮಗನ ನಿರ್ದೇಶನಾ ಚಾತುರ್ಯಕ್ಕೆ ಮತ್ತು ನೈಜತೆಗೆ ಅವರು ಕೊಡುವ ಪ್ರಾಮುಖ್ಯತೆಗೆ ಸಾಕ್ಷಿ) ಇನ್ನು ಮುಂತಾದವರಿಂದ ಒಳ್ಳೆಯ ಮನರಂಜನೆ ನೀಡುತ್ತಿದೆಯೆಂದೋ ಅಥವ ಮೇಲೆ ತಿಳಿಸಿದ ಗುಣಗಳಷ್ಟೇ ಅಲ್ಲದೆ ಯಾವ ಎಗ್ಗಿಲ್ಲದೆ ಸಭೆ ಸಮಾರಂಭಗಳಲ್ಲಿ ನಿದ್ದೆ ಮಾಡುವ, ಯಾವ ವಿದೇಶೀ ಸಭೆಯಾದರೂ ಪಂಚೆ ಎತ್ತಿ ಕಟ್ಟುವ, ಪ್ರಪಂಚದ ಯಾವ ಮೂಲೆಗೆ ಹೋದರೂ ಮುದ್ದೆ-ಸೊಪ್ಪಿನಸಾರೇ ಬೇಕೆನ್ನುವಷ್ಟು ಭಾರತೀಯತೆಯನ್ನು ಮೆರೆಸುವ, ಮಲ-ಮೂತ್ರ ವಿಸರ್ಜನೆಗೂ ರಾಹುಕಾಲ/ಗುಳಿಕಕಾಲಗಳನ್ನು ನೋಡುವ, ಕರ್ನಾಟಕವನ್ನಾಳಲು ತಮಿಳುನಾಡಿನ ದೇವರುಗಳಿಗೆ ಮೊರೆ ಹೋಗುವ, ಭಜರಂಗಿಗಳೂ ನಾಚುವಷ್ಟು ಹೋಮ ಹವನಗಳನ್ನು ಮಾಡುವ, ವೈರಿ ನಿವಾರಣೆಗೆ ಮಾಟಮಂತ್ರ, ಭಾನಾಮತಿಗಳಿಗೆ ಮೊರೆಹೋಗುವ, ಜಾತ್ಯಾತೀತವೆಂಬುತ್ತ ಮುಳ್ಳುಗೌಡ/ದಾಸಗೌಡನೆಂದು ತೂಗುವ, ನಂಬಿಕೆ ದ್ರೋಹದ ಇತಿಹಾಸದ ಇವರು, ಬಹುಶಃ ಮತದಾರರಿಗೆ ಅತ್ಯಂತ ಪರಿಪೂರ್ಣ ಭಾರತೀಯನಾಗಿ, ತಮ್ಮ ಪ್ರತಿಬಿಂಬವೇ ಇವರಾಗಿ, ಶುದ್ಧ ದೇಸೀ ’ಮಣ್ಣಿನಮಗ’ನಾಗಿ ಕಾಣುತ್ತಿರಬೇಕು!

ಖೇಣಿಯವರ ಅದೃಷ್ಟವೋ, ದುರಾದೃಷ್ಟವೋ ಅವರ ಯೋಜನೆ ಮತ್ತು ಐಟಿ/ಬಿಟಿ ಗಳ ಭರಾಟೆಯಲ್ಲಿ ಬೆಂಗಳೂರು ಸಿಂಗಾಪುರವಾಗುವ ಮುನ್ನ ಅದರ ನೆಲಕ್ಕೆ ಭೂಗಳ್ಳರ ಚದುರಂಗದಾಟದಿಂದ ನ್ಯೂಯಾರ್ಕ್ ನೆಲದ ಬೆಲೆ ಬಂದು, ಅದೇ ರೀತಿ ನಮ್ಮ ಮಣ್ಣಿನಮಗನ ಪಂಚೆಯೊಳಗಿನ ಒಂದೊಂದು ನಿಕೃಷ್ಟ ರೋಮಗಳೂ (ಕ್ಷಮಿಸಿ, ಈ ಪದವನ್ನು ಬಳಸಬಾರದೆಂದುಕೊಂಡರೂ ಇದು ನಮ್ಮ ಮಣ್ಣಿನ ಮಗ, ಮೊಮ್ಮಕ್ಕಳು ಅತಿಯಾಗಿ ಬಳಸಿ, ಪ್ರೀತಿಸುವ ಪದ) ಹುಲುಸಾಗಿ ಈ ನೆಲದಲ್ಲಿ ಹಬ್ಬಿ, ಖೇಣಿಯವರ ಯೋಜನೆಗೆ ಮೀಸಲಾಗಿಟ್ಟ ನೆಲವನ್ನು ಪಸರಿಸಿಕೊಳ್ಳಬೇಕಿರುವಾಗ, ಖೇಣಿಯವರ ಯೋಜನೆ, ಜನತೆಯ ಪ್ರಯೋಜನೆಯ ಬಗ್ಗೆ ಕೇಳುವವರ್‍ಯಾರು?

ಕ್ಷುಲ್ಲಕ ಕಾರಣ ಸಿಕ್ಕರೂ ರಸ್ತೆತಡೆ, ರೈಲುತಡೆ, ಬಂದ್ ಗಳಿಗೆ ಕರೆ ನೀಡುವ ಕಾಂಗ್ರೆಸ್ ಆಗಲೀ ಬಿಜೆಪಿಗಳಾಗಲಿ, ಸಿನಿಮಾ ನಟಿಯೊಬ್ಬಳು ಹೂಸಿದರೂ ತಿಂಗಳುಗಟ್ಟಲೆ ಅದರ ಸುವಾಸನೆಯ ಬಗ್ಗೆ ಸುದ್ದಿ ಮಾಡುವ ಪತ್ರಿಕೆಯವರಾಗಲೀ, ಯಾರೊಬ್ಬರೂ ಈ ಖೇಣಿಯವರ ಸವಾಲಿನ ವಿಷಯವನ್ನೆತ್ತಿ ಮಣ್ಣಿನಮಗ, ಮೊಮ್ಮಕ್ಕಳ ಧೂಳನ್ನು ಕೊಡವದೇ ಇರುವುದೇಕೆ ಗೊತ್ತೆ?

ಇಂದಿನ ಪ್ರತಿಯೊಂದು ಪಕ್ಷದ ರಾಜಕಾರಣಿಯೂ ಈ ಬೆಂಗಳೂರು ರಿಯಲ್ ಎಸ್ಟೇಟ್ ದಂಧೆಯಲ್ಲಿ ತೊಡಗಿರುವುದೂ ಮತ್ತು ಈಗ ಇದನ್ನು ಸುದ್ದಿ ಮಾಡಿದರೆ ಈ ಲೈ ಡಿಟೆಕ್ಟರ್ ಭೂತ ಮುಂದೆ ತಮ್ಮನ್ನು ಅದಾವ ಪರಿ ಭಾಧಿಸುವುದೋ ಎಂಬ ಭಯದಿಂದ. ಹಾಗೆಯೇ ಸುದ್ದಿಮಾಧ್ಯಮಗಳಿಗೂ ಮುಂದೆಲ್ಲಿ ತಮ್ಮ ರೋಚಕಸುದ್ದಿಗಳನ್ನು ಪ್ರಮಾಣಿಸಲು ಈ ಲೈ ಡಿಟೆಕ್ಟರ್ ಪರೀಕ್ಷೆ ಬರುವುದೋ ಎಂಬ ದಿಗಿಲಿರಬಹುದು.

ಒಟ್ಟಿನಲ್ಲಿ ಪರಸ್ಪರ ಕೆಸರೆರಚುತ್ತ, ಅಮ್ಮನ ಮಗನಾದರೆ...ಅಪ್ಪನಿಗೆ ಹುಟ್ಟಿದ್ದರೆ...ಇಲ್ಲಾ ಗಂಡಸಾಗಿದ್ದರೆ...ಎಂದು ಕೀಳು ಮಟ್ಟದ ಸವಾಲೆಸೆಯುತ್ತಿದ್ದ ರಾಜಕಾರಣಿಗಳಿಗೆ ನ್ಯಾಯಯುತವಾಗಿ, ವೈಜ್ಞಾನಿಕವಾಗಿ, ಆದರ್ಶಯುತವಾಗಿ ಸವಾಲೆಸೆದಿರುವ ಖೇಣಿಯವರ ಉದ್ದೇಶ ವಸ್ತುನಿಷ್ಟವಾಗಿದ್ದರೆ, ಇದು ಇಂದು ತಾಂತ್ರಿಕತೆಯ ದೆಸೆಯಿಂದಲಾದರೂ ಬದಲಾಗಲೇಬೇಕಾದ ಸಾಮಾಜಿಕತೆಯ ಆರಂಭವೇನೋ ಎಂದು ಸಂತಸವಾಗುತ್ತಿದೆ.

ವಿನೋದ:

ಬೆಂಗಳೂರಿಗೆ ನ್ಯೂಯಾರ್ಕ್ ಬೆಲೆ ಹೇಗೆ ಬಂತು ಗೊತ್ತೆ?

ಒಬ್ಬ ಮಾಮೂಲಿ ಮನೆ ಬ್ರೋಕರ್ ನ ಬಳಿ ಒಬ್ಬ ಬಾಂಬೆವಾಲಾ ಬಂದು, ಒಂದು ನಿವೇಶನ ಬೇಕೆಂದು ಕೇಳಿದ.

ಸರಿ, ಬ್ರೋಕರ್ ಒಂದು ನಿವೇಶನ ತೋರಿಸಿ ತನ್ನ ಹರಕು-ಮುರುಕು ಹಿಂದಿಯಲ್ಲಿ ಐನೂರು ರುಪಾಯಿ ಚದರಡಿ ಎಂಬುದಕ್ಕೆ "ಪಾಂಚ್ ಹಜಾರ್" ಎಂದ.

ಬಾಂಬೆವಾಲಾ ಕೂಡ ತನ್ನ ಪ್ರತಿಷ್ಟೆಯನ್ನು ಮೆರೆಸುತ್ತ ತನ್ನ ಹರಕು-ಮುರುಕು ಇಂಗ್ಲಿಷ್ ನಲ್ಲಿ "ಓನ್ಲೀ ಫೋರ್ ಥೌಸಂಡ್ ಫೈವ್ ಹಂಡ್ರೆಡ್" ಎಂದ.

ಅದನ್ನರಿತ ಬ್ರೋಕರ್ ಒಳಗೆ ಖುಷಿಯಾಗಿ ವ್ಯವಹಾರ ಮುಗಿಸಿದ.

ಅಂದಿನಿಂದ ಬೆಂಗಳೂರಿನ ಆ ಏರಿಯಾಕ್ಕೆ ೪೫೦೦/ಚದರಡಿ ಫಿಕ್ಸ್ ಆಯಿತು. ಅಷ್ಟೇ ಅಲ್ಲದೆ ಇಡೀ ಬೆಂಗಳೂರಿನ ಬ್ರೋಕರ್ ಮಂಡಳಿಗೆ ಈ ಬೆಲೆ ಮಾದರಿಯಾಯಿತು.

ಇಷ್ಟು ಸರಳವಾದ ಇಕನಾಮಿಕ್ಸ್ ಗೆ ಪಾಶ್ಚಿಮಾತ್ಯರು ಅದೇಕೆ ಇನಫಲೇಶನ್, ಡಿಫಲೇಶನ್, ರಿಸೆಷನ್ ಅಂತ ತಲೆ ಕೆರೆದುಕೊಳ್ಳುವರೋ?

ಗೊತ್ತೆ?

No comments: