ರೈತ, ಗೊಬ್ಬರ, ಪರಿಹಾರ
ಇರಲಿ, ಈಗ ಆ ಕಷ್ಟಜೀವಿ ರೈತನಿಲ್ಲ. ಆತನ ಮಕ್ಕಳು ತಮ್ಮ ತಮ್ಮ ಜಮೀನುಗಳನ್ನು ಬಾಡಿಗೆ ಟ್ರ್‍ಆಕ್ಟರಿನಿಂದ ಉಳುಮೆ ಮಾಡಿಸಿ, ಭತ್ತ ನೆಡುವ, ನೀರು ಕಟ್ಟುವ, ಕೀಟನಾಶಕ ಸಿಂಪಡಿಸುವ, ಗೊಬ್ಬರ ಚೆಲ್ಲುವ ಎಲ್ಲಾ ಕೃಷಿ ಕಾರ್ಯಗಳನ್ನಾದಿಯಾಗಿಯೂ ಗುತ್ತಿಗೆ ಕೊಟ್ಟು, ತಣ್ಣಗೆ ಕಟ್ಟೆ ಸೇರಿ, ಕಟ್ಟೆಪುರಾಣದಲ್ಲಿ ತೊಡಗಿದ್ದಾರೆ! ಅಲ್ಲಿ ಬೆಳೆಯುವ ಬೆಳೆಗಳೂ ಕೂಡ ತಮ್ಮ ’ಕಟ್ಟೆ ಅಡಿಕ್ಟ್’ ಧಣಿಗಳಂತೆ, ಪೇಟೆಯ ’ಡ್ರಗ್ ಅಡಿಕ್ಟ್’ ವ್ಯಸನಿಗಳಂತೆ ಈ ಕೀಟನಾಶಕ, ರಸಗೊಬ್ಬರಗಳಿಗೆ ಅಡಿಕ್ಟ್ ಆಗಿವೆ. ಏನೇ ಮಾಡಿದರೂ ಕಾಲಕಾಲಕ್ಕೆ ಇಂತಿಷ್ಟು ಎಂದು ಈ ಕೀಟನಾಶಕ/ರಸಗೊಬ್ಬರಗಳನ್ನು ಕೊಡದಿದ್ದರೆ, ಈ ಬೆಳೆಗಳು ಮಲಗೇಬಿಡುತ್ತವೆ. ಒಮ್ಮೆ ನನ್ನ ಅಕ್ಕಿ ವ್ಯಾಪಾರಿ ಮಿತ್ರನೊಬ್ಬ ನನ್ನನ್ನು ಯಾವ ರೀತಿಯ ಅಕ್ಕಿಯನ್ನು ಶಿಕಾಗೋನಲ್ಲಿ ಉಪಯೋಗಿಸುತ್ತೀಯೆಂದು ಕೇಳಿದನು. ಅದಕ್ಕೆ ನಾನು ಇತ್ತೀಚಿನ ಕೆಲ ವರ್ಷಗಳಿಂದ ನಾನು ಶ್ರೀಲಂಕಾದಿಂದ ಬರುವ ಕೆಂಪು ಅಕ್ಕಿಯನ್ನು ಉಪಯೋಗಿಸುತ್ತೇನೆಂದೂ ಮತ್ತು ಇಲ್ಲಿ ಚಿಕ್ಕಮಗಳೂರು ಕಡೆ ಸಿಗುವ ಕೆಂಪುಅಕ್ಕಿಯನ್ನೋ, ಪಾಲಿಷ್ ಕಡಿಮೆ ಇರುವ ಕಂದು ಬಣ್ಣದ ಅಕ್ಕಿಯನ್ನು ತಿನ್ನುವುದು ಒಳ್ಳೆಯದೆಂದು ಹೇಳಿದೆನು. ಅವನು ಅದಕ್ಕೆ ಅವನು "ಹಾಗೆಲ್ಲ ಇಲ್ಲಿ ಹೇಳಬೇಡ, ಪಾಲಿಷ್ ಕಡಿಮೆ ಇಟ್ಟರೆ, ಕೀಟನಾಶಕ/ರಸಗೊಬ್ಬರಗಳ ರಾಸಾಯನಿಕಗಳು ಹಾಗೆಯೇ ಉಳಿದು, ಸದ್ಯಕ್ಕೆ ಐವತ್ತಕ್ಕೆ ಸಾಯುತ್ತಿರುವ ಜನ, ಕಡಿಮೆ ಪಾಲಿಷ್ ಇರುವ ಅಕ್ಕಿ ತಿಂದು ಮೂವತ್ತಕ್ಕೆ ಸಾಯುವಂತಾಗುತ್ತದೆ. ಹಾಗಾಗಿ ಆದಷ್ಟೂ ಹೆಚ್ಚು ಪಾಲಿಶ್ ಮಾಡಿ, ರಸಾಯನಿಕಗಳನ್ನು ಹೆರೆದ ಅಕ್ಕಿಯನ್ನು ಬಳಸಬೇಕು" ಎಂದು ಹೇಳಿದನು. ಹಾಗೆಯೇ ತೆಂಗಿಗೆ ನುಸಿರೋಗಕ್ಕೆ ಯಾವುದೋ ಕೀಟನಾಶಕವನ್ನು ಬಳಸಿದ ಮರದಿಂದ ಎಳನೀರು ಕುಡಿದು ಕೆಲವರು ಸತ್ತು ಹೋದರೆಂದು ಹೇಳಿದನು. ಎಷ್ಟು ನಿಜವೋ, ಎಷ್ಟು ಗಾಳಿಸುದ್ದಿಯೋ. ಒಟ್ಟಾರೆ ನಮ್ಮ ರೈತ ಈ ರಾಸಾಯನಿಕಗಳ ಮೇಲೆ ಆಧಾರಿತನಂತೂ ಆಗಿದ್ದಾನೆ.
ಇನ್ನು ಜನನಾಯಕರೋ ಪಕ್ಷಾತೀತವಾಗಿ ಎಲ್ಲಾ ಪಕ್ಷದವರೂ ರೈತನ ಮೇಲೆ ಸವಾರಿ ಮಾಡಿ, ಶಾಶ್ವತ ಕೃಷಿ ವ್ಯವಸ್ಥೆಗಳಾದ ಮಾರುಕಟ್ಟೆ, ಬೆಲೆ ನಿಯಂತ್ರಣ, ಉಗ್ರಾಣ, ಸಾರಿಗೆಯಂತಹ ವ್ಯವಸ್ಥೆಗಳನ್ನು ಸರಿಪಡಿಸದೇ ಪರಿಹಾರಗಳನ್ನೊ, ಪ್ಯಾಕೇಜುಗಳನ್ನೋ ಘೋಷಿಸುತ್ತಿದ್ದಾರೆ. ಈ ಪರಿಹಾರಗಳ ಪರಿಣಾಮವೇ ಇಂದು ರೈತರನ್ನು ಪರಿಹಾರಕ್ಕೆ ಕೈಚಾಚುವಂತಹ ನಿಸ್ಸಹಾಯಕರನ್ನಾಗಿ ಮಾಡಿವೆ. ಹಿಂದೆ ಕೃಷ್ಣ ಸರ್ಕಾರದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತನಿಗೆ ಒಂದು ಲಕ್ಷ ಪರಿಹಾರ ಘೋಷಣೆಯಾದಾಗ ಸಾಲುಸಾಲಾಗಿ ಲಕ್ಷಕ್ಕಾಗಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈಗ ಬಿಜೆಪಿ ಸರ್ಕಾರದಲ್ಲಿಯೂ ಕೂಡ ಮೊನ್ನೆ ಗೋಲೀಬಾರಿಗೆ ಮೃತನಾದ ರೈತನ ಸಂಸಾರಕ್ಕೆ ಸರ್ಕಾರಿ ಉದ್ಯೋಗ/ಪರಿಹಾರಗಳು ಘೋಷಣೆಯಾದದ್ದೇ ತಡ, ರೈತರು ತಮಗೂ ಕೂಡ ಈ ಪರಿಹಾರಗಳು ದೊರಕುತ್ತವೇನೋ ಎಂದುಕೊಂಡು ಸಾಲುಸಾಲಾಗಿ ಅತ್ಮಹತ್ಯೆ ಮಾಡಿಕೊಳ್ಳುತ್ತಿರುವರೇನೋ ಎನಿಸುತ್ತದೆ. ಈ ಪರಿಹಾರ ಕೇವಲ ರೈತರಿಗಷ್ಟೇ ಅಲ್ಲ, ಇನ್ಯಾತರದ್ದೇ ಪರಿಹಾರಗಳಿಗೂ ಅನ್ವಯವಾಗುತ್ತದೆ. ಪ್ರತಿಯೊಂದಕ್ಕೂ ರಾಷ್ಟ್ರ್‍ಈಯ ವಿಮೆಯನ್ನು ಮಾಡಿಸಿ, ಪರಿಹಾರವನ್ನು ಹಕ್ಕನ್ನಾಗಿಯೂ, ನಿಶ್ಚಿತವಾಗಿಯೂ ಇರುವಂತೇ ಮಾಡಿದ್ದರೆ, ಜನ ಪರಿಹಾರಕ್ಕಾಗಿ ಸಾಯದೇ, ಪರಿಹಾರಾಪೇಕ್ಷಿಗಳಾಗಿ ಹೋರಾಡದೆ ಬದುಕುವ ಮಾರ್ಗವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದರೇನೋ.
ಈ ರಾಸಾಯನಿಕಗಳ ಮೇಲಿನ ಅವಲಂಬನೆ ಅನಿವಾರ್ಯವೇ? ಹಿಂದೆಲ್ಲ, ಈ ರಾಸಾಯನಿಕಗಳಿಲ್ಲದೆ ತಲತಲಾಂತರದಿಂದ ಭಾರತೀಯ ಕೃಷಿಕ ಬೇಸಾಯವನ್ನು ಮಾಡಿಯೇ ಇಲ್ಲವೆ ಅನಿಸುವಷ್ಟರ ಮಟ್ಟಿಗೆ ನಮ್ಮ ರೈತರು ಈ ರಾಸಾಯನಿಕಗಳ ಮೇಲೆ ಅವಲಂಬನೆಗೊಂಡಿದ್ದಾರೆ. ಇದ್ದುದರಲ್ಲಿ ಅನೇಕರು ಈ ರಾಸಾಯನಿಕಗಳನ್ನು ತೊರೆದು ನೈಸರ್ಗಿಕ ಕೃಷಿ ಪದ್ದತಿಗಳನ್ನು ಅಳವಡಿಸಿಕೊಂಡು ಯಶಸ್ವಿಯಾಗುತ್ತಿರುವ ಸಂಗತಿಗಳು ಅಲ್ಲಲ್ಲಿ ಕೇಳಬರುತ್ತಿದ್ದರೂ ನಮ್ಮ ರೈತರು ಯಾಕೋ ಮನಸ್ಸು ಮಾಡುತ್ತಿಲ್ಲ. ರೈತರ ಬಗ್ಗೆ ವಸ್ತುನಿಷ್ಟ ಕಾಳಜಿಯಿದ್ದಿದ್ದರೆ ರಾಜಕೀಯ ಪಕ್ಷಗಳು ರೈತನ ಹೆಸರಿನಲ್ಲಿ ರಾಜಕೀಯಗಳನ್ನು ಮಾಡದೆ, ಈ ನೈಸರ್ಗಿಕ ಕೃಷಿಯ ಪದ್ದತಿಗಳನ್ನು ಹೆಚ್ಚು ಪ್ರಚಾರಿಸುವತ್ತ ಎಂದು ಮುಖ ಮಾಡುವರೋ?
ರೈತ ಸಂಘಗಳು/ಕೃಷಿ ಅಭಿವೃದ್ಧಿ ಹೇಗಿರಬೇಕೆಂಬುದನ್ನು ನಮ್ಮ ನೆರೆಯ ಶ್ರೀಲಂಕಾವನ್ನು ನೋಡಿದರೆ ಸಾಕು, ಸಾಕಷ್ಟು ನಾವು ಕಲಿಯಬಹುದು. ಸಿದ್ಧವಸ್ತುಗಳನ್ನು ತಯಾರಿಸಿ ಮಾರುವುದನ್ನು ಬಿಡಿ, ತಾನು ಬೆಳೆದ ಭತ್ತ/ಬೇಳೆಗಳನ್ನೇ ನಮ್ಮ ರೈತರು ’ಗ್ರೇಡಿಂಗ್’ ಮಾಡಿಸಿ ಮಾರಲಾಗದಂತಹ ಸ್ಥಿತಿ ನಮ್ಮಲ್ಲಿದೆ. ಅದೇ ಪಕ್ಕದ ಶ್ರೀಲಂಕಾದ ರೈತ ತಾನು ಬೆಳೆದ ಪ್ರತಿಯೊಂದನ್ನು ಸಂಸ್ಕರಿಸಿ, ಸಿದ್ಧವಸ್ತುಗಳನ್ನಾಗಿಸಿಯೋ ಅಥವಾ ಅರೆ-ಸಿದ್ಧವಸ್ತುಗಳನ್ನಾಗಿಸಿಯೋ ತನ್ನ ರೈತ ಸಂಘದ ಮೂಲಕ ಐ.ಎಸ್.ಓ.೯೦೦೧ ಪ್ರಾಮಾಣಿಸಿ ಮಾರುಕಟ್ಟೆಗೆ ಕಳುಹಿಸುತ್ತಾನೆ. ಶ್ರೀಲಂಕಾದಿಂದ ಬರುವ ಕೆಂಪು ಅಕ್ಕಿ, ಟಿಲ್ಡಾ/ಪೆಪ್ಸಿ/ಕೋಕ್ ಕಂಪೆನಿಗಳ ಬಾಸ್ಮತಿ ಅಕ್ಕಿಯ ದುಪ್ಪಟ್ಟು ಬೆಲೆಗೆ ಅಮೇರಿಕಾದಲ್ಲಿ ಬಿಕರಿಯಾಗುತ್ತದೆ. ಆದರೇ ಅದೇ ತರಹದ ಚಿಕ್ಕಮಗಳೂರು ಕಡೆ ಬೆಳೆಯುತ್ತಿದ್ದ ಕೆಂಪು ಅಕ್ಕಿ ನಮ್ಮಲ್ಲೇ ಕಾಣೆಯಾಗಿದೆ! ಹಾಗೆಯೇ ಶ್ರೀಲಂಕಾದ ತೆಂಗಿನ ಸೇಂದಿ (ಟಾಡಿ)ಅರ್ಜೆಂಟೀನಾದ ವೈನ್ ಗಿಂತ ಹೆಚ್ಚಿನ ಬೆಲೆಗೆ ಬಿಕರಿಯಾಗುತ್ತದೆ. ನಮ್ಮಲ್ಲಿ ಸೇಂದಿಯೇ ಬ್ಯಾನ್ ಆಗಿದೆ! ಇದೆಲ್ಲವೂ ಅಲ್ಲಿನ ಕೃಷಿ ಸಹಕಾರಿ ಸಂಘಗಳು, ನಮ್ಮಲ್ಲಿನ ’ಅಗ್ಮಾರ್ಕ್’ ರೀತಿಯ ಶ್ರೀಲಂಕಾ ರಾಷ್ಟ್ರೀಯ ಸಂಸ್ಥೆಯ ಮುಖಾಂತರ ಇದೆಲ್ಲವನ್ನು ಸಾಧ್ಯವಾಗಿಸಿವೆ.
ಇನ್ನು ನಮ್ಮ ಅನೇಕ ನಾಯಕರು ರೈತರ ಉದ್ದಾರವೆಂದರೆ ಅವರು ಸಾಂಪ್ರದಾಯಿಕ ಬೆಳೆಗಳನ್ನು ಬಿಟ್ಟು ರಫ್ತಾಧಾರಿತ ಸಫೇದ್ ಮುಸ್ಲಿ ತರಹದ ಬೆಳೆಗಳನ್ನು ಬೆಳೆಯಬೇಕೆಂದು ಪರಿಹಾರ ಸೂಚಿಸುತ್ತಾರೆ. ತಿನ್ನಲಿಕ್ಕೇ ಇಲ್ಲದಿದ್ದ ಮೇಲೆ ಕಾಮವರ್ಧಕ ಗೆಡ್ಡೆ ಬೆಳೆದು ಯಾರಿಗೆ ಏನನ್ನು ತಿನ್ನಿಸುವರೋ ಈ ನಾಯಕರು! ಬಹುಶಃ ಮಾನಿಕಾ ಲೆವಿನ್ಸ್ಕಿಯನ್ನು ಮುಖ್ಯವಾಗಿ ಗಮನದಲ್ಲಿರಿಸಿಕೊಂಡಿರುವರೆನಿಸುತ್ತದೆ. ಇರಲಿ, ಒಂದು ವೇಳೆ ಆ ರೀತಿಯ ಬೆಳೆಗಳನ್ನು ಬೆಳೆದರೂ ಆ ರಫ್ತಿನ ಗುಣಮಟ್ಟವನ್ನು ಕಾಯ್ದುಕೊಳ್ಳುವಂಥಹ ವಾತಾವರಣ ನಮ್ಮಲ್ಲಿದೆಯೇ? ತಿಳಿಯದು.
ಆದರೆ ನಮ್ಮಲ್ಲೇ ಇರುವ ಭಾರತದ ಅಗಾಧ ಗ್ರಾಹಕ ಶಕ್ತಿಯ ಅರಿವೇ ನಮ್ಮ ನಾಯಕರಿಗಿದ್ದಂತಿಲ್ಲ. ಮೆಗಾಸಿಟಿಗಳನ್ನು ಬಿಡಿ, ಸಾಮಾನ್ಯ ಊರುಗಳಲ್ಲೇ ’ದರ್ಶಿನಿ’, ’ಹಳ್ಳಿಮನೆ’, ’ದಿಲ್ಲಿದರ್ಬಾರ್’ ಎಂಬ ಅದೆಷ್ಟು ಹೋಟೇಲುಗಳಿಲ್ಲ. ಆ ಎಲ್ಲಾ ಹೋಟೇಲುಗಳ ಗ್ರಾಹಕ ಶಕ್ತಿಯನ್ನೂ ಕೂಡಾ ಕಾಣದಷ್ಟು ಕುರುಡರಾಗಿದ್ದಾರೆ ನಮ್ಮ ನಾಯಕರು. ಈ ಅಗಾಧ ಗ್ರಾಹಕ ಶಕ್ತಿಯನ್ನು ಕಂಡೇ ತಾನೆ ಪೆಪ್ಸಿ/ಕೋಕ್/ವಾಲ್ ಮಾರ್ಟ್...ಇನ್ನಿತರೇ ವಿದೇಶೀ ಕಂಪೆನಿಗಳು ಭಾರತದತ್ತ ಮುಖ ಮಾಡಿರುವುದು. ನೀರಿನ ಒಂದು ಬಾಟಲಿಗೆ ಹತ್ತು ರೂಪಾಯಿ ಕೊಟ್ಟು ನೀರು ಕುಡಿಯುವ ನಾವು ಐದು ರೂಪಾಯಿಗೆ ಒಂದು ಎಳನೀರು ಕುಡಿಯುತ್ತೇವೆಯೇ? ಉಹೂಂ. ಮುಂದೇ ಅದೇ ಎಳನೀರು ಪೆಪ್ಸಿ/ಕೋಕ್ ಕಂಪೆನಿಗಳಿಂದ ಬಾಟಲಿ ರೂಪದಲ್ಲಿ ಬಂದರೆ ಮೂವತ್ತು ರೂಪಾಯಿ ಕೊಟ್ಟು ಕುಡಿಯುತ್ತೇವೆ. ನಮ್ಮ ರೈತ ಟೊಮ್ಯಾಟೋ/ಮೆಣಸಿನಕಾಯಿಗಳನ್ನು ಬೆಲೆಯಿಲ್ಲದೇ ರಸ್ತೆಗೆ ಸುರಿಯುತ್ತಿದ್ದರೆ, ಅದೇ ರಸ್ತೆಯ ಮೂಲೆಯಲ್ಲಿರುವ ಬೇಕರಿಯಲ್ಲಿ ’ಮ್ಯಾಗ್ಗಿ’ ಟೊಮ್ಯಾಟೋ/ಚಿಲ್ಲಿ ಸಾಸ್/ಕೆಚಪ್ ಗಳ ಬಾಟಲಿಗಳು ಮೂವತ್ತು ರೂಪಾಯಿಗೆ ಬಿಕರಿಯಾಗುತ್ತಿರುತ್ತವೆ. ಈ ಒಂದು ಸರಳ ಆರ್ಥಿಕ ಲೆಕ್ಕಾಚಾರವನ್ನರಿಯದ, ಮಣ್ಣಿನ ಮಕ್ಕಳೆನಿಸಿಕೊಳ್ಳಲು ಹಪಹಪಿಸುವ ನಾಯಕರು, ರೈತನನ್ನು ಹೇಗೆ ಉದ್ಧರಿಸಿಬೇಕೆಂದು ಕಂಡುಕೊಳ್ಳಲು ದೂರದ ಇಸ್ರೇಲಿಗೋ ಹಾಲೆಂಡಿಗೋ ಹೋಗುತ್ತಾರೆ. ಇದು ನಮ್ಮ ಆರ್ಥಿಕ ವ್ಯವಸ್ಥೆಯ ವಿಪರ್ಯಾಸ!
ಇನ್ನು ರೈತರ ಪರ ಹೋರಾಟವೆಂದರೆ, ರೈತನಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯ, ಪರಿಹಾರಗಳಿಗೆ ಹೋರಾಡುವುದೇ ಎಂದು ನಾವೇಕೆ ಅಂದುಕೊಳ್ಳಬೇಕೋ? ರೈತ ಸಂಘಗಳು ಕೇವಲ ಬಂದ್/ಹೋರಾಟ/ಪರಿಹಾರಯಾಚನೆಗಳಂಥಹ ರಾಜಕೀಯ ಪಕ್ಷಗಳ ಮಾದರಿಯ ಹೋರಾಟಗಳನ್ನು ಮಾಡೀ ಮಾಡೀ ರೈತರನ್ನು ಸೋಮಾರಿಗಳನ್ನಾಗಿಸುತ್ತಿವೆ. ಯಾರು ಹೆಚ್ಚು ಸೋಮಾರಿಗಳನ್ನು ಮಾಡುವನೋ ಅಂಥವನು ರಾಜಕಾರಣಿಯಾಗಿಯೂ, ಉಳಿದವರು ಅವನ ಬಾಲಬಡುಕರಾಗಿಯೋ ಅದಕ್ಕೂ ಮಿಕ್ಕುಳಿದವರು ಮಾನಸಿಕ ಖಿನ್ನತೆಯವರಾಗಿಯೂ ಈ ರಾಜಕಾರಣಿಗಳ ಆತ್ಮಹತ್ಯೆ ಯೋಜನೆಗೆ ಕುರಿಗಳಾಗುತ್ತಾರೆ. ಈ ರೈತ ಸಂಘಗಳು ತಮ್ಮ ಸಂಘಗಳ ಮುಖಾಂತರ ರೈತರು ಬೆಳೆದ ವಸ್ತುಗಳಿಗೆ ಮಾರುಕಟ್ಟೆ/ಸಂಸ್ಕರಣೆ/ಬಹುಮಹಡೀ ಕೃಷಿಪದ್ದತಿ/ ಅನುಭವ ಹಂಚಿಕೆಯಂಥಹ ಆರ್ಥಿಕ ಅಭಿವೃದ್ಧಿಯ ಸಹಕಾರೀ ಕಾರ್ಯಗಳನ್ನು ಕೈಗೊಳ್ಳಬಾರದೇಕೆ? ಚುನಾವಣೆಗಳಲ್ಲಿ ಸ್ಪರ್ಧಿಸಿ, ರಾಜ್ಯ/ರಾಷ್ಟ್ರ್‍ಅಗಳನ್ನು ಆಳುವ ಚತುರತೆಯಿರುವ ರೈತಸಂಘದ ನಾಯಕರು, ಈ ರೀತಿ ಸಹಕಾರಿ ಉದ್ದಿಮೆಗಳನ್ನು ಕಟ್ಟಿದರೆ ರೈತರ ಉದ್ದಾರ ತನ್ನಂತಾನೇ ಆಗುತ್ತದೆ. ಒಂದು ವಿರಕ್ತೀ ರಾಮಚಂದ್ರಾಪುರದ ಮಠ, ೨೦೦ ಮಿ.ಲೀ. ಗೋಮೂತ್ರವನ್ನು ಐವತ್ತು ರೂಪಾಯಿಗೆ ಮಾರುತ್ತಿರುವಾಗ, ಸಾರ್ವಜನಿಕ ನಾಯಕರೆನಿಸಿಕೊಳ್ಳುವ ಸಂಸಾರಿಗ ರೈತ ಮುಖಂಡರು ಈ ರೀತಿಯ ಉದ್ದಿಮೆಗಳನ್ನು ಸಹಕಾರೀ ಸಂಘಗಳ ಮುಖಾಂತರ ಮಾಡಬಹುದಲ್ಲವೇ? ರೈತಸಂಘಗಳು ಹಸಿರು ಟವೆಲ್ಲಿನಿಂದಾಚೆ ಎಂದು ಯೋಚಿಸುವರೋ?
ಹಿಡಿ ಬಿತ್ತಿ, ಖಂಡುಗ ತೆಗೆಯುವ ವ್ಯವಸಾಯವನ್ನು ಕಂಡೇ ಸರ್ವಜ್ಞ "ಕೋಟಿ ವಿದ್ಯೆಯಲಿ ಮೇಟಿ ವಿದ್ಯೆಯು ಲೇಸು" ಎಂದಿರುವನೇನೋ. ಇದ ಸರಿಯಾಗಿ ಅರಿಯದ ನಮ್ಮ ರಾಜಕಾರಣಿಗಳು, "ಕೊಟ್ಟ ಕುದುರೆಯನೇರಲರಿಯದೆ ಮತ್ತೊಂದು ಕುದುರೆಯ ಬಯಸುವರು ವೀರರೂ ಅಲ್ಲ, ಧೀರರೂ ಅಲ್ಲ! ಇದು ಕಾರಣ ನೆರೆ ಮೂರು ಲೋಕದ ಹಲ್ಲಣವ ಹೊತ್ತುಕೊಂಡು ಬಳಲುತ್ತೈದಾರೆ ಗುಹೇಶ್ವರನೆಂಬ ಲಿಂಗನವರೆತ್ತಬಲ್ಲರೋ!" ಎಂಬಂತೆ ಪರಸ್ಪರ ದೋಷಾರೋಪಗಳಲ್ಲೇ ಕಾಲ ಕಳೆಯುತ್ತಿದ್ದಾರೆಯೇ ಹೊರತು ದೇಶವನ್ನು ಸರಿದಾರಿಯಲ್ಲಿ ಎಂದು ನಡೆಸುವರೋ!
ರೈತರಿಗೆ ಬೇಕಾದ್ದು ರಸಗೊಬ್ಬರವೂ ಅಲ್ಲ, ಪರಿಹಾರವೂ ಅಲ್ಲ. ಕೇಸರಿಯೂ ಅಲ್ಲ, ಬಡವರ ತಾಯಿಯೂ ಅಲ್ಲ, ಮಣ್ಣಿನ ಮಕ್ಕಳೂ ಅಲ್ಲ, ಹಾಗೆಯೇ ಹಸಿರು/ಕೆಂಪು/ಬಿಳಿ/ಕಪ್ಪು ಟವೆಲ್ಲುಗಳೂ ಅಲ್ಲ. ಬೇಕಾದ್ದು ಪ್ರಾಮಾಣಿಕ ಸ್ವಾವಲಂಬನೆಯ ಆರ್ಥಿಕ ವ್ಯವಸ್ಥೆ. "ಅನ್ನದೇವರ ಮುಂದೆ ಇನ್ನು ದೇವರು ಉಂಟೆ, ಅನ್ನವಿರುವತನಕ ಪ್ರಾಣವು-ಜಗದೊಳಗನ್ನವೇ ದೈವ ಸರ್ವಜ್ಞ" ಎಂಬುದ ವಸ್ತುನಿಷ್ಟವಾಗಿ ಎಂದು ನಮ್ಮವರಿಗೆ ಅರಿವಾಗುವುದೋ!
ಅಣಕ:
ವೀರ್ಯ, ಸಫೇದ್ ಮುಸ್ಲಿ, ಲೆವೆನ್ಸ್ಕಿ, ರೈತ, ಗೋಲೀಬಾರ್ ಆಜ್ಞೆ ಕೊಟ್ಟಿದ್ದ್ಯಾರೆಂದು ಗೊತ್ತಿಲ್ಲದ ಸರ್ಕಾರ,ಗೊಬ್ಬರದ ಕೊರತೆಗೆ ಕೇಂದ್ರ ಕಾರಣವೆಂದು ಗೊತ್ತಿದ್ದೂ ರಾಜ್ಯ ಸರ್ಕಾರವನ್ನು ವಿರೋಧಿಸುವ ವಿರೋಧ ಪಕ್ಷಗಳು.... ಇದೆಲ್ಲಕ್ಕಿಂತ ಮಿಗಿಲಾದ ಅಣಕ ನನಗಂತೂ ಸದ್ಯಕ್ಕೆ ಹೊಳೆಯುತ್ತಿಲ್ಲ!?
ಎರಡನೇ ತಲೆಮಾರಿನ ಭಾರತೀಯ ಅಮೇರಿಕನ್ನರು!
ಇರಲಿ, ಈ ಮೊದಲನೇ ಹೊಚ್ಚ ಹೊಸ ಭಾರತೀಯ ವ(ಹೊ)ಲಸೆಗಾರರ ಪೀಳಿಗೆ, ಏನೇ ಸಂಘ, ದತ್ತಿ, ಸಮ್ಮೇಳನಗಳೆಂದು ತಿಪ್ಪರಲಾಗ ಹಾಕಿದರೂ ಇವರ ಮಕ್ಕಳುಗಳ ಎರಡನೇ ಪೀಳಿಗೆ, ಇದನ್ನು ಗಂಭೀರವಾಗಿ ಪರಿಗಣಿಸದೇ "ಸಮ್ ಕಲ್ಚರಲ್ ಫೆಸ್ಟಿವಲ್’ ಅಥವಾ ’ಫ್ಯಾನ್ಸಿ ಡ್ರೆಸ್ಸಿಂಗ್’ ಎಂದು ಸಂತೋಷಿಸುತ್ತಾರೆಯೇ ಹೊರತು ಅದಕ್ಕಿಂತ ಏನನ್ನೂ ಅರ್ಥೈಸಿಕೊಳ್ಳಲಾರರು. ಈ ಮಕ್ಕಳು ಯಾವುದೇ ಜಾತಿಗಳ ಪರಿಚಯವಿಲ್ಲದೇ ಎಲ್ಲಾ ಭಾರತೀಯರನ್ನು ಒಂದೇ ಎಂದು ಪರಿಗಣಿಸುತ್ತಾರೆ. ಅಬ್ಬಬ್ಬಾ ಎಂದರೆ ಹಿಂದೂ/ಮುಸ್ಲಿಂ ಎಂದೋ, ಸಸ್ಯಹಾರೀ/ಮಾಂಸಹಾರೀ ಎಂದೋ ಹೆಚ್ಚೆಂದರೆ ಉತ್ತರ ಭಾರತೀಯ/ದಕ್ಷಿಣ ಭಾರತೀಯ ಎಂಬಲ್ಲಿಗೆ ತಮ್ಮನ್ನು ಸೀಮಿತಗೊಳಿಸುತ್ತಾರೆಯೇ ವಿನಹಾ ಯಾವುದೇ ಜಾತಿಗಳಿಂದ ಗುರುತಿಸಲಾಗದಷ್ಟರ ಮಟ್ಟಿಗೆ ಮುಗ್ಧರಾಗಿದ್ದಾರೆ.
ಇನ್ನು ಮೊದಲನೇ ಪೀಳಿಗೆ, ತಮ್ಮ ನವ್ಯ ಪೀಳಿಗೆಗೆ ತಮ್ಮ ಭಾಷೆಗಳನ್ನು ಕಲಿಸಲು ಏನೆಲ್ಲಾ ಪ್ರಯತ್ನ ಪಟ್ಟರೂ ಅದು ಅಳಿಸಿಹೋಗುತ್ತಿದೆಯೆಂದೇ ಹೇಳಬೇಕು. ಇದೇಕೆ ಹೀಗೆ ಎಂದು ನನಗೂ ಅರ್ಥವಾಗಿಲ್ಲ. ಆದರೂ ಭಾರತದಲ್ಲಿ ಅನೇಕರು ಬಹುಭಾಷಾ ಪಂಡಿತರಾಗಿರುತ್ತಾರೆ. ಮನೆಮಾತು ಬೇರೆಯದೇ ಭಾಷೆಯಿದ್ದರೂ ತಾವು ವಾಸಿಸುವ ಆಯಾ ಪ್ರದೇಶದ ಪ್ರಾದೇಶಿಕ ಭಾಷೆಯನ್ನೂ ಮಾತನಾಡಬಲ್ಲವರಾಗಿರುತ್ತಾರೆ. ಬೆಂಗಳೂರು ಸೇರುವವರೆಗೆ ಕೇವಲ ಕನ್ನಡದಲ್ಲಷ್ಟೇ ನಿರರ್ಗಳವಾಗಿ ಮಾತನಾಡಲು ಬರುತ್ತಿದ್ದ ನನಗೆ, ಕೆಲವೇ ವರ್ಷಗಳ ಬೆಂಗಳೂರು ಕೃಪೆಯಿಂದ ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲಿ ಕನ್ನಡದಷ್ಟೇ ನಿರರ್ಗಳವಾಗಿ ಮಾತನಾಡುವುದು ಸಾಧ್ಯವಾಯಿತು. ಇಲ್ಲಂತೂ ಕನ್ನಡದವರು, ತೆಲುಗರು, ತಮಿಳರು ನನ್ನ ಸ್ವಲ್ಪ ವಿಚಿತ್ರ ಎನ್ನುವಂತಹ ’ರವಿ ಹಂಜ್’ ಹೆಸರಿನ ದೆಸೆಯಿಂದಾಗಿ ನನ್ನ ಹಿನ್ನೆಲೆಯನ್ನು ಗುರುತಿಸಲಾಗದೆ, ನನ್ನನ್ನು ತಮ್ಮ ತಮ್ಮ ರಾಜ್ಯಗಳಲ್ಲಿ ಸೆಟ್ಲ್ ಆಗಿರುವ "ಬಡ್ಡಿ ಲೇವಾದೇವಿಯ ಮಾರ್ವಾಡಿಯವನಿರಬಹುದು" ಎಂದುಕೊಳ್ಳುತ್ತಾರೆ. ಇನ್ನು ಉತ್ತರ ಭಾರತೀಯರೋ ನನ್ನನ್ನು ತಮ್ಮವನೆಂದೇ ಪರಿಗಣಿಸುತ್ತಾರೆ. ಒಟ್ಟಾರೆ ನನ್ನ ಹೆಸರಿನ ದೆಸೆಯಿಂದಂತೂ ನಾನು ಎಲ್ಲರಿಗೂ ಸಲ್ಲುವ ಭಾರತೀಯನಾಗಿದ್ದೇನೆ!
ಇರಲಿ, ಆದರೆ ಇಲ್ಲಿನ ಬಹುತೇಕ ಭಾರತೀಯ ಮೂಲದ ಮಕ್ಕಳಿಗೆ ಮಾತ್ರ ಇಂಗ್ಲಿಷ್ ಬಿಟ್ಟರೆ ತಮ್ಮ ಮನೆಮಾತಾಗಲೀ ಇನ್ಯಾವ ಭಾಷೆಯಾಗಲಿ ಕಲಿತರೂ ಮಾತನಾಡಲಾಗದಷ್ಟು ಪರಿಣಿತಿ ಬರುವುದೇ ಇಲ್ಲ. ಇದು ಅಮೇರಿಕಾದ ಗಾಳಿ, ನೀರಿನ ಪರಿಣಾಮವೆಂದೇ ನನಗನಿಸುತ್ತದೆ. ಭಾಷಾ ಪಂಡಿತ ಪೋಷಕರಿದ್ದರೂ ಅಷ್ಟೇ, ಅನ್ಯಭಾಷಾ ತರಗತಿಗಳಿಗೆ ಕಳುಹಿಸಿದರೂ ಅಷ್ಟೇ. ಈ ಮಕ್ಕಳು ತಮ್ಮ ಮಾತೃಭಾಷೆಯನ್ನಷ್ಟೇ ಮಾತನಾಡುವವರಾಗಿದ್ದರೂ ಶಾಲೆಗೆ ಸೇರಿದೊಡನೆ ತಮ್ಮ ಮಾತೃಭಾಷೆಯನ್ನು ಕೆಲವೇ ತಿಂಗಳುಗಳಲ್ಲಿ ಮರೆತುಬಿಡುತ್ತಾರೆ. ನಂತರ ಅದು ಅಳಿಸಿಯೇ ಹೊಗುತ್ತದೆ. ಇವರು ತಮ್ಮ ಮಾತೃಭಾಷೆಯಲ್ಲಿ ಓದಲು/ಬರೆಯಲು ಕಲಿತರೂ ಅದು ಕೇವಲ ಓದಲು ಮತ್ತು ಬರೆಯುವಲ್ಲಿಗೆ ಸೀಮಿತವಾಗುತ್ತದಲ್ಲದೇ, ಅದರ ಅರ್ಥವೇ ಇವರಿಗೆ ಗೊತ್ತಾಗುವುದಿಲ್ಲ. ಅವರ ಮನೆಗಳಲ್ಲಿ ಇಂಗ್ಲಿಷ್ ಮಾತನಾಡದೇ ಅವರವರ ಮನೆಮಾತಿನಲ್ಲಿಯೇ ಅವರ ಪೋಷಕರು ಮಾತನಾಡುತ್ತಿದ್ದರೂ ಕೂಡ ಅವರುಗಳ ಮಾತೃಭಾಷೆ ಈ ಮಕ್ಕಳಿಗೆ ಅಷ್ಟಕ್ಕಷ್ಟೇ. ಇದು ಏಕೆ ಹೀಗೆಂದು ನನಗೆ ಇದುವರೆಗೂ ಅರ್ಥವಾಗದೇ ಒಂದು ರೀತಿಯ ಚಿದಂಬರ ರಹಸ್ಯವೇ ಆಗಿದೆ.
ಎರಡನೇ ಪೀಳಿಗೆಯ ವಿಷಯ ಹೀಗಿರುವಾಗ, ಮೊದಲ ಪೀಳಿಗೆಯ ಹಲವರು ಕನ್ನಡ ಪೀಠ, ತಮಿಳು ಪೀಠ, ತೆಲುಗು ಪೀಠ....ಇನ್ನಿತರೆ ಭಾಷೆಗಳ ಪೀಠಗಳನ್ನು ಇಲ್ಲಿನ ಯಾವುದಾದರೂ ವಿಶ್ವವಿದ್ಯಾಲಯಗಳಲ್ಲಿ ಸ್ಥಾಪಿಸಲು ಪ್ರಯತ್ನಪಡುತ್ತಿರುತ್ತಾರೆ. ಮನೆಯಲ್ಲೇ ತಮ್ಮ ಮಕ್ಕಳಿಗೆ ತಮ್ಮ ಮನೆಮಾತು ಕಲಿಸಲಾಗದ ಇವರು ಪೀಠಗಳನ್ನು ಸ್ಥಾಪಿಸಿ ಅದ್ಯಾರಿಗೆ ಭಾರತೀಯ ಭಾಷೆಗಳನ್ನು ಕಲಿಸುವರೋ ನಾನರಿಯೆ! ಬಹುಶಃ ಇದು ತಾಯ್ನಾಡಿನಲ್ಲಿನ ಪ್ರಶಸ್ತಿಗಳ ಹಪಹಪಿಯೋ ಅಥವಾ ಪ್ರಚಾರಪ್ರಿಯತೆಯ ತೀಟೆಯೋ ಇರಬಹುದು.
ಈ ಮಾತೃಭಾಷೆ ಬಾರದು ಎಂಬ ಕೊರತೆಯೊಂದನ್ನು ಬಿಟ್ಟರೆ, ಈ ಮಕ್ಕಳು ಭಾರತೀಯರು ಹೆಮ್ಮೆ ಪಡಬೇಕಾದಂತಹ ಪೀಳಿಗೆ ಎಂದೇ ಹೇಳಬಹುದು. ಇಲ್ಲಿನ ಪರಿಸರ, ಶಿಕ್ಷಣ, ಮೌಲ್ಯಗಳನ್ನು (ಭಾರತದಲ್ಲಿ ಈ ಬಗ್ಗೆ ಸಾಕಷ್ಟು ತಪ್ಪು ಕಲ್ಪನೆಯ ಅಪಪ್ರಚಾರವೇ ಇದ್ದು, ಇಲ್ಲಿನ ಅಸಲೀ ವಿಷಯಗಳ ನೈಜ ತಿಳುವಳಿಕೆ ಅಷ್ಟಾಗಿ ಇಲ್ಲ. ಇದರ ಬಗ್ಗೆ ಮತ್ತೊಮ್ಮೆ ಬರೆಯುವೆ.) ನೋಡುತ್ತ, ಕೇಳುತ್ತ ಬೆಳೆಯುವ ಈ ಮಕ್ಕಳು ಇದ್ದುದರಲ್ಲಿ ಅತ್ಯಂತ ಬುದ್ದಿವಂತರೂ, ವಿವೇಚನೆಯಿರುವವರೂ ಮತ್ತು ಪ್ರಾಮಾಣಿಕರೂ ಆಗಿರುತ್ತಾರೆ. ಇವರ ಪೋಷಕರು ಏನೇ ಸಂಘ/ಸಮ್ಮೇಳನಗಳನ್ನು ಮಾಡಿ, ಸಂಸ್ಕೃತಿಯ ನೆಪವಾಗಿ ತಮ್ಮ ಜಾತಿಯ ಅರಿವು ಮೂಡಿಸುವ ಪ್ರಯತ್ನಗಳು ಎಳ್ಳಷ್ಟೂ ಫಲಪ್ರದವಾಗಿರುವುದನ್ನು ನಾನಂತೂ ನೋಡಿಲ್ಲ. ನನ್ನ ಕಂಪೆನಿ ಪರವಾಗಿ ಸಾಕಷ್ಟು ಕ್ಯಾಂಪಸ್ ಇಂಟರ್ವ್ಯೂಗಳನ್ನು ಮಾಡಿ, ಈ ರೀತಿಯ ಭಾರತೀಯ ಮೂಲದ ಎರಡನೇ ಪೀಳಿಗೆಯ ಅನೇಕರನ್ನು ನಮ್ಮ ಕಂಪೆನಿಗೆ ಸೇರಿಸಿಕೊಂಡಿದ್ದೇನೆ. ಹಾಗೆಯೇ ಅವರೊಂದಿಗೆ ಕೆಲಸವನ್ನೂ ಮಾಡಿದ್ದೇನೆ. ಆ ಒಂದು ಅನುಭವವಿರುವುದರಿಂದ ಮೇಲಿನ ಮಾತುಗಳನ್ನು ನಾನು ಧೃಢವಾಗಿ ಹೇಳಬಲ್ಲೆ. ಅಷ್ಟೇ ಅಲ್ಲ, ಇದೇ ರೀತಿ ಭಾರತದಲ್ಲಿಯೂ ನಮ್ಮ ಯುವಜನತೆಗೆ ಜಾತಿ ಪರಿಧಿಯ ಪರಿಮಿತಿಗೆ ಸಿಕ್ಕದಂತಹ ಮುಕ್ತ ಪರಿಸರವಿರುವಂತಿದ್ದರೆ? ಎಂದು ಇವರನ್ನು ನೋಡಿದಾಗೆಲ್ಲ ಅಂದುಕೊಳ್ಳುತ್ತೇನೆ.
ಇರಲಿ, ಭಾರತದಲ್ಲಿಯೇ ಹದಿಹರೆಯದವರು ಏನೇನೋ ಸಮಸ್ಯೆಗಳಿಗೆ ಸಿಲುಕುತ್ತಿರುವಾಗ ಅಮೇರಿಕಾದ ಸ್ವಚ್ಛಂದ ವಾತಾವರಣದಲ್ಲಿ ಈ ಯುವಕರು ಹದಿಹರೆಯದ ಸಮಸ್ಯೆಗಳಿಗೆ ಸಿಲುಕದೇ ಇರಲು ಹೇಗೆ ಸಾಧ್ಯ? ಇಲ್ಲದ್ದನ್ನೆಲ್ಲಾ ಹೇಳಬೇಡಿ ಎನ್ನುವಿರಾ? ನಾನು ಗಮನಿಸಿದಂತೆ, ಈ ಸಮಸ್ಯೆ ಭಾರತೀಯ ಮೂಲದವರನ್ನು ಅಷ್ಟಾಗಿ ಕಾಡುತ್ತಿಲ್ಲವೆಂದೇ ಅನಿಸುತ್ತದೆ. ಈ ನವಪೀಳಿಗೆ ತಮ್ಮ ಅಲ್ಪಸಂಖ್ಯಾತತೆಯ ಕಾರಣದಿಂದಲೋ ಏನೋ ಒಂದು ರೀತಿಯಲ್ಲಿ ಸದಾ ಜಾಗೃತರಾಗಿರುತ್ತಾರೆ. ನೀವು ನಂಬುತ್ತೀರೋ ಇಲ್ಲವೋ ಇಲ್ಲಿನ ಬಹುಪಾಲು ಭಾರತೀಯ ಯುವಪೀಳಿಗೆ ಬೆಂಗಳೂರಿನ ಎಮ್.ಜಿ. ರೋಡಿಗರಿಗಿಂತ ಸಭ್ಯವಾದ ಬಟ್ಟೆಗಳನ್ನು ಧರಿಸಿರುತ್ತಾರೆ! ಹಾಗೆಯೇ ಯಾರಾದರೂ ತಕ್ಷಣಕ್ಕೆ ಭಾರತೀಯರೆಂದು ಗುರುತಿಸಬಹುದಾದ ಚಹರೆಯಿಂದಾಗಿ ಈ ರೀತಿಯ ಜಾಗೃತಿ ಬೆಳೆದುಬಂದಿದೆಯೆಂದೇ ನನಗನಿಸುತ್ತದೆ! ಈ ಜಾಗೃತಿಯ ಪರಿಣಾಮದಿಂದಲೇ ಏನೋ ಅಷ್ಟಾಗಿ ಯುವ ಸಮಸ್ಯೆಗಳಿಗೆ ಸಿಲುಕದೇ ತಮ್ಮ ಹದಿಹರೆಯದ ಸಮಸ್ಯೆಗಳನ್ನು ಬುದ್ಧಿವಂತಿಕೆಯಿಂದ ನಿಭಾಯಿಸುತ್ತ ಬಹುಪಾಲು ಯುವಜನತೆ ಯಶಸ್ವಿಯಾಗಿದ್ದಾರೆ ಮತ್ತು ಆಗುತ್ತಿದ್ದಾರೆ ಎಂದೇ ಅನಿಸುತ್ತದೆ.
’ಪ್ರತ್ಯಕ್ಷವಾಗಿ ನೋಡಿದ್ದರೂ ಪರಾಮರ್ಶಿಸಿ ನೋಡು’ ಎಂಬುದನ್ನು ಚೆನ್ನಾಗಿ ಅರ್ಥೈಸಿಕೊಂಡಿರುವ ಈ ಮಕ್ಕಳು ಯಾವುದೇ ತತ್ವವನ್ನೋ, ವಿಚಾರವನ್ನೋ ಹೇಳಿದರೆ ಅದಕ್ಕೆ ನೂರೆಂಟು ಪ್ರಶ್ನೆಗಳನ್ನು ಹಾಕಿ, ಅರಿತು ನಂತರವೇ ಒಪ್ಪಿಕೊಳ್ಳುವಂತಹ ಶಾಲಾ ವಾತಾವರಣದಲ್ಲಿ ಬೆಳೆದಿರುವುದರಿಂದಲೂ ಮತ್ತು ಅವರುಗಳ ಪೋಷಕರು ತಮ್ಮ ಜಾತಿ/ಧರ್ಮಗಳ ಆಚರಣೆಗಳ ಬಗ್ಗೆ ತಿಳಿಸಿ, ಅವರುಗಳ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ಕೊಡುವ ಶಕ್ತಿಯನ್ನು ಹೊಂದಿರದ ಕಾರಣದಿಂದಲೂ, ಮತ್ತು ಪೋಷಕರು ಭಾರತದಲ್ಲಿಯ ಗದರಿಸುವಿಕೆಯ ರೀತಿ "ತಲೆಪ್ರತಿಷ್ಟೆ ಮಾಡಬೇಡ ಹೇಳಿದ್ದಷ್ಟನ್ನು ಮಾಡು" ಎಂದು ಇಲ್ಲಿನ ಪರಿಸರದಲ್ಲಿ ಹೇಳಲಾಗದ ಪರಿಣಾಮವಾಗಿಯೂ, ಈ ಯುವಶಕ್ತಿ ಜಾತಿ, ಅಂಧಶ್ರದ್ಧೆಗಳ ಬಗ್ಗೆ ಅಷ್ಟೊಂದು ಮಾಹಿತಿಯನ್ನು ಪಡೆದಿರಲಾರರು ಎಂದುಕೊಂಡಿದ್ದೇನೆ.
ಒಟ್ಟಾರೆ ಈ ಭಾರತೀಯ ಅಮೇರಿಕನ್ ಯುವ ಪೀಳಿಗೆ, "ಯಾತರ ಹೂವೇನು? ನಾತವಿದ್ದರೆ ಸಾಕು, ಜಾತಿಯಲಿ ಜಾತಿಯೆನಬೇಡ ಶಿವನೊಲಿದಾತನೇ ಜಾತ ಸರ್ವಜ್ಞ" ಎಂಬಂತೆ ಜಾತಿಪರಿಧಿಯ ಪರಿವೆ ಇಲ್ಲದೆ ಒಟ್ಟಿನಲ್ಲಿ ’ಭಾರತೀಯ ಅಮೇರಿಕನ್’ ಆಗಿದ್ದಾರೆ. ಇದೇ ರೀತಿ ಭಾರತದ ನಮ್ಮ ಸಮಾಜದಲ್ಲಿಯೂ "ಎಲುವಿನಾ ಕಾಯಕ್ಕೆ ಸಲೆ ಚರ್ಮದ ಹೊದಿಕೆ ಮಲಮೂತ್ರ ಕ್ರಿಮಿಗಳೊಳಗಿರ್ದ ದೇಹಕ್ಕೆ ಕುಲವಾವುದಯ್ಯ ಸರ್ವಜ್ಞ" ಎಂಬಂತಹ ಸ್ವಚ್ಛ ವಾತಾವರಣವಿದ್ದಿದ್ದರೆ ಭಾರತದಲ್ಲಿ ಇಂದು ’ಅಮೇರಿಕನ್ ಭಾರತೀಯ’ರಿರುತ್ತಿದ್ದರೋ ಏನೋ!
ಅಣಕ:
ಒಮ್ಮೆ ನನ್ನ ದೆಹಲಿ ಮೂಲದ ಸ್ನೇಹಿತ ಪೆಚ್ಚಾಗಿ ಕುಳಿತಿದ್ದ. ’ಏನಯ್ಯಾ ಸಮಾಚಾರ’ ಎಂದು ಕೇಳಿದ್ದಕ್ಕೆ, ಅವನು ತನ್ನ ಮಗನ ಹೆಸರನ್ನು ಬದಲಾಯಿಸಬೇಕೆಂದು ಯೋಚಿಸುತ್ತಿದ್ದೇನೆ ಎಂದನು. ಏಕೆ ’ಪ್ರೀಕ್ಷಿತ್’ ಎಂಬ ಸುಂದರ ಹೆಸರೇ ಇಟ್ಟಿದ್ದೀಯಲ್ಲ ಎಂದಿದ್ದಕ್ಕೆ, ಅವನು ತನ್ನ ಮಗನು ತನ್ನ ಪ್ರೀಕ್ಷಿತ್ ಎಂಬ ಹೆಸರನ್ನು ಅವನ ಅಮೇರಿಕನ್ ಸ್ನೇಹಿತರುಗಳು ಬಿಡಿಬಿಡಿಯಾಗಿ ’ಪ್ರಿಕ್ ಶಿಟ್’ ಎಂದು ಸಂಭೋದಿಸುವದನ್ನು ಬಿಡಿಬಿಡಿಯಾಗಿ ಬಿಡಿಸಿಟ್ಟಾಗ, ಹೆಸರುಗಳನ್ನು ತುಂಡರಿಸಿಕೊಳ್ಳುವ ಅವಘಡಗಳನ್ನು ನೋಡಿದ್ದ ನಾನು, ಸಂಪೂರ್ಣ ಹೆಸರುಗಳಿಂದ ಕೂಡ ಎಂತಹ ಪೇಚಿಗೆ ಸಿಲುಕಬಹುದೆಂದು ಪೆಚ್ಚಾದೆನು!
ಜಾತ್ಯಾತೀತ ಅಮೇರಿಕಾದಲ್ಲಿ ಜಾತೀಯತೆ?!
ಸಾಮಾನ್ಯವಾಗಿ ಇಲ್ಲಿನ ಭಾರತೀಯರು ತಮ್ಮ ಅಲ್ಪಸಂಖ್ಯೆಯ ಕಾರಣದಿಂದಲೋ, ವಿಶಿಷ್ಟ ಸಂಸ್ಕೃತಿಯ ದೆಸೆಯಿಂದಲೋ ಅಷ್ಟಾಗಿ ಮುಖ್ಯವಾಹಿನಿಯಲ್ಲಿ ಬೆರೆಯದೇ ತಮ್ಮ ತಮ್ಮ ಭಾರತೀಯ ಮೂಲದ ಸ್ನೇಹಿತರುಗಳನ್ನೇ ಕಂಡುಕೊಂಡು ಸ್ನೇಹಸಂಬಂಧಗಳನ್ನು ಹೊಂದಿರುತ್ತಾರೆ. ಹಾಗೆಯೇ ನನಗೂ ಕೂಡ ಅನೇಕ ಭಾರತೀಯ ಮೂಲದ ಸ್ನೇಹಿತರಿದ್ದಾರೆ. ಅವರಲ್ಲಿ ಅನೇಕರು ಹೆಚ್ಚಿನದಾಗಿ ಆಂಧ್ರಪ್ರದೇಶದವರಾಗಿದ್ದಾರೆ. ಎಪ್ಪತ್ತರ ದಶಕ ಭಾರತೀಯ ಮೂಲದ ಡಾಕ್ಟರರುಗಳ ವಲಸೆಯ ಅಲೆಯಾದರೆ, ತೊಂಬತ್ತರ ದಶಕ ಐ.ಟಿ. ವಲಸಿಗರ ಅಲೆಯಾಯಿತು. ಈ ಅಲೆಗಳಲ್ಲಿ ಬಂದು ನೆಲೆಸಿರುವ ಭಾರತೀಯ ಮೂಲದವರು ತಮ್ಮ ತಮ್ಮ ಭಾಷೆಗಳ/ರಾಜ್ಯಗಳ ಹೆಸರಿನಲ್ಲಿ ಸಂಘ, ಸಂಸ್ಥೆಗಳನ್ನು ಸ್ಥಾಪಿಸಿಕೊಂಡು ತಮ್ಮ ಸಂಸ್ಕೃತಿಯ ನೆನಹನ್ನು ತಮ್ಮತಮ್ಮಲ್ಲೇ ಹಂಚಿಕೊಳ್ಳುತ್ತಾರೆ. ಹೀಗಿದ್ದ ಸಂಘ/ಸಂಸ್ಥೆಗಳಲ್ಲಿ ತಮ್ಮ ತಮ್ಮ ಪ್ರೋತ್ಸಾಹಕರ ಸಂಖ್ಯೆ ಏರಿದಂತೆ ನಿಧಾನವಾಗಿ ಭಾರತದ ಇತರೆ ಸಂಸ್ಕೃತಿಗಳಾದ ಜಾತೀಯತೆ, ಗುಂಪುಗಾರಿಕೆ, ರಾಜಕೀಯ, ಪಕ್ಷಭೇದಗಳು ಏರುತ್ತಿವೆ.
ವೈಯುಕ್ತಿಕವಾಗಿ ಇಂತಹ ಯಾವುದೇ ಸಂಘಗಳೊಂದಿಗೆ ಸಂಬಂಧವಿರದ ನನಗೆ ಪ್ರತ್ಯಕ್ಷ ಅನುಭವವಾಗಿರದಿದ್ದರೂ ಪರೋಕ್ಷವಾಗಿ ಆಗಿದೆ. ಕೆಲಸದ ನಿಮಿತ್ತ ಪ್ರತಿ ವಾರವೂ ನ್ಯೂಯಾರ್ಕ್ ನಗರಕ್ಕೆ ಹೋಗುವ ನಾನು, ಕಳೆದ ಬೇಸಿಗೆಯಲ್ಲಿ ನನ್ನ ತೆಲುಗು ಮಿತ್ರರನ್ನು ಕಾಣುವ ಎಂದು ಒಂದು ವೀಕೆಂಡ್ ಅಲ್ಲಿಯೇ ಉಳಿದುಕೊಂಡೆನು. ಅವರೆಲ್ಲ ನನ್ನನ್ನು "ಈ ದಿನ ಆಂಧ್ರದ ಮಾಜಿ ಮುಖ್ಯಮಂತ್ರಿ ಚಂದ್ರಬಾಬುನಾಯ್ಡುಗೆ ಒಂದು ಸನ್ಮಾನವನ್ನು ಮಾಡುತ್ತಿದ್ದೇವೆ ನಡೆ ಹೋಗುವ" ಎಂದು ಕರೆದುಕೊಂಡು ಹೋದರು. ಎಲ್ಲಿ ನೋಡಿದರೂ ಹಳದಿ ವಸ್ತ್ರವನ್ನು ಹಣೆಗೆ ಕಟ್ಟಿಕೊಂಡಿದ್ದ ಜನರು ಕಾಣುತ್ತಿದ್ದರು. ಯಾವುದೋ ಒಂದು ಜಾತಿಯವರು ವೃತಗಳನ್ನೋ ಹಬ್ಬಗಳನ್ನೋ ಆಚರಿಸುವಾಗ ಹಳದಿ ಬಟ್ಟೆ ತೊಡುವುದನ್ನು ಬೆಂಗಳೂರಿನಲ್ಲಿ ನೋಡಿದ್ದೆನು. ಆ ರೀತಿಯ ವೃತವನ್ನು ಈ ಹಳದಿ ಪಟ್ಟಿ ಜನರು ಆಚರಿಸುತ್ತಿರಬಹುದೆಂದುಕೊಂಡು ಸುಮ್ಮನಾದರೂ ಅದು ನನ್ನನ್ನು ಭಾಧಿಸುತ್ತಿದ್ದಿತು. ಪಕ್ಕದಲ್ಲಿದ್ದ ನನ್ನ ಸ್ನೇಹಿತನನ್ನು ಮೆಲ್ಲಗೆ ಕೇಳಿದಾಗ ಅದು ತೆಲುಗುದೇಶಂ ಪಕ್ಷದ ಬಣ್ಣವೆಂದು ಹೇಳಿದನು! ನಂತರ ತಿಳಿದುದುದೇನೆಂದರೆ ಅದೊಂದು ತೆಲುಗು ಕಂ ದೇಶಂ ಸಭೆಯೆಂದೂ, ಚಂದ್ರಬಾಬುನಾಯ್ಡು ತಮ್ಮ ಪಕ್ಷಕ್ಕೆ ಅಮೇರಿಬೆಂಬಲಿಗರಿಂದ ಹಣ ಶೇಖರಿಸಲು ಒಂದು ತಿಂಗಳ "ಫಂಡ್ ರೈಸಿಂಗ್" ಕ್ಯಾಂಪೇನ್ ಗೆ ಬಂದಿರುವುದಾಗಿಯೂ, ಮತ್ತವರಿಗೆ ಇಲ್ಲಿ ತಿರುಗಲು ಒಬ್ಬ ಅಭಿಮಾನಿ ಚಾರ್ಟರ್ಡ್ ಫ್ಲೈಟ್ ಅನ್ನು ಇಪ್ಪತ್ತು ದಿನಗಳಿಗೆ ಕೊಡಿಸಿರುವುದಾಗಿಯೂ ಮತ್ತು ಈ ರೀತಿಯ ಸಾಕಷ್ಟು ಅಭಿಮಾನಿಗಳು ಟಿಕೇಟ್ ಆಕಾಂಕ್ಷಿಗಳಾಗಿ, ರಾಜ್ಯಪ್ರಶಸ್ತಿ ಆಕಾಂಕ್ಷಿಗಳಾಗಿ, ಇಲ್ಲವೇ ಮತ್ಯಾವುದೋ ಉದ್ದೇಶದ ಆಕಾಂಕ್ಷಿಗಳಾಗಿ ಸಾಕಷ್ಟು ಬೆಂಬಲವನ್ನು ನಾಯ್ಡುಗಳಿಗೆ ತೋರುತ್ತಾರಂತೆ! ಅದಕ್ಕೆ ಪೂರಕವಾಗಿ ಆ ಸಭೆಯಲ್ಲಿ ಒಬ್ಬ ಉದ್ಯಮಿ, ಬಹುಶಃ ಟಿಕೆಟ್ ಆಕಾಂಕ್ಷಿ ಇರಬಹುದೇನೋ, ಒಂದು ಚಿನ್ನದ ಗದೆ ಮತ್ತು ಕಿರೀಟವನ್ನು ನಾಯ್ಡುಗೆ ಅರ್ಪಿಸಿದನು.
ನಾಯ್ಡುರವರಿಗೆ ಏನೆನ್ನಿಸಿತೋ ಕೂಡಲೇ ತಮ್ಮ ಪಕ್ಕದಲ್ಲಿ ಕೂತಿದ್ದ ಎಡಿಸನ್ ಸಿಟಿ ಮೇಯರ್ ಅವರಿಗೆ ಆ ಕಿರೀಟವನ್ನು ತೊಡಿಸಿ, ಗದೆಯನ್ನು ಕೂಡ ಅವರ ಹೆಗಲಿಗೇರಿಸಿದರು! ಇದರಿಂದ ಆನಂದಗೊಂಡ ಎಡಿಸನ್ ಮೇಯರ್ ಆ ಕೊಡುಗೆಗಳನ್ನು ತನ್ನ ಮನೆಗೆ ಹೊತ್ತೊಯ್ದರೆ, ಕೊಟ್ಟ ಉದ್ಯಮಿ ಪೆಚ್ಚಾಗಿದ್ದ! ಅಂದು ನನಗೆ ಅಪ್ಪಟ ಭಾರತದ ಒಂದು ರಾಜಕೀಯ ಸಭೆಯ ಅನುಭವ ಬಹುಕಾಲದ ನಂತರ ಆಗಿತ್ತು. ಮರುದಿನ ಮೋಟಾರ್ ಸೈಕಲ್ ರ್‍ಯಾಲಿ ಕೂಡ ಇರುವುದೆಂದೂ, ರ್‍ಯಾಲಿಯ ನಂತರ ಉಚಿತ "ವೈನ್ ಅಂಡ್ ಡೈನ್" ಪಾರ್ಟಿ ಇರುವುದೆಂದನು. ಸಾಮಾನ್ಯವಾಗಿ ಮೋಟಾರ್ ಸೈಕಲ್ಲುಗಳನ್ನು ಹೊಂದಿರದ ಇಲ್ಲಿನ ಭಾರತೀಯರಲ್ಲಿ ಅದೆಷ್ಟು ಮಂದಿ ಆ ರ್‍ಯಾಲಿಗೆ ಬರುವರೋ ಎಂದು ನಾನು ಸಂದೇಹವನ್ನು ವ್ಯಕ್ತಪಡಿಸಿದ್ದಕ್ಕೆ, ನನ್ನ ಮಿತ್ರನು ರ್‍ಯಾಲಿಗಾಗಿಯೇ ಇಲ್ಲಿನ ಮೋಟಾರ್ ಸೈಕಲ್ ಕ್ಲಬ್ಬುಗಳನ್ನು ಬುಕ್ ಮಾಡಿಕೊಂಡಿದ್ದು, ಈ ರ್‍ಯಾಲಿಗೆ ಬರುವವರೆಲ್ಲಾ ಬಿಳಿ/ಕರಿಯ ಅಮೇರಿಕನ್ನರೆಂದನು! ಒಂದು ರೀತಿ ಭಾರತೀಯ ಸಿನೆಮಾಗಳಲ್ಲಿ ಬಿಳಿ ಸಹನಟ/ನಟಿಯರ ನೃತ್ಯಗಳಿರುವಂತೆ! ಭಾರತದ ಚುನಾವಣಾ ಸಮಯದಲ್ಲಿ ಹೆಂಡ, ಬಿರ್ಯಾನಿ ಹಂಚುವುದರ ಸುಧಾರಿತ ಕ್ರಮದಂತೆ, ಅಂದಿನ ಸಭೆಯಲ್ಲಿ ಕೂಡಾ ಉಚಿತ ವೈನ್ ಇದ್ದಿತು!
ಮೊನ್ನೆ ಮತ್ತದೇ ಸ್ನೇಹಿತರನ್ನು ಕಾಣಲು ಮತ್ತೆ ನ್ಯೂಜೆರ್ಸಿಗೆ ಹೋಗಿದ್ದೆನು. ಈ ಬಾರಿ ತೆಲುಗು ನಟ ಬಾಲಕೃಷ್ಣನ ’ಪಾಂಡುರಂಗ’ ಎಂಬ ಸಿನಿಮಾ ಇಲ್ಲಿಯೂ ಬಿಡುಗಡೆಯಾಗಿ ಅದರ ಪ್ರಚಾರಕ್ಕೆ ಖುದ್ದು ಬಾಲಕೃಷ್ಣ ಬಂದಿದ್ದನು. ಅವನ ಸಿನಿಮಾ ಬಿಡುಗಡೆಯ ದಿನ ಮತ್ತದೇ ಹಳದಿ ಪಟ್ಟಿಯ ಅಭಿಮಾನಿಗಳು ಹಳದಿ ಬಾವುಟಗಳನ್ನ್ಹಿಡಿದು ಬೆಂಬಲವನ್ನು ವ್ಯಕ್ತಪಡಿಸಿದರೆ, ಚಿರಂಜೀವಿ ಅಭಿಮಾನಿಗಳು ಕಪ್ಪು ಪಟ್ಟಿ, ಬಾವುಟಗಳನ್ನ್ಹಿಡಿದು ವಿರೋಧವನ್ನು ತೋರಿಸಿದ್ದರು. ವಿಚಾರಿಸಲಾಗಿ ಕಮ್ಮ ಜಾತಿಯ ಬಾಲಕೃಷ್ಣನನ್ನು ಕಾಪು ಜಾತಿಯವರು ವಿರೋಧಿಸುತ್ತಿದ್ದಾರೆ ಎಂದು ತಿಳಿಯಿತು. ಅದಕ್ಕೂ ಮುನ್ನ ಚಿರಂಜೀವಿಯ ಮುನ್ನಾಬಾಯಿಗೂ ಇದೇ ಮರ್ಯಾದೆ ಸಿಕ್ಕಿತ್ತಂತೆ! ಹಾಗೆಯೇ ’ಪಾಂಡುರಂಗ’ನಿಗೆ ಡ್ಯಾಲಸ್ ನ ಯಾವುದೋ ಪಾರ್ಕಿನಿಂದ ಥಿಯೇಟರ್ ವರೆಗೆ ಸೈಕಲ್/ಬೈಕ್ ರ್‍ಯಾಲಿಯೊಂದಿಗೆ, ಎರಡು ಸಾವಿರ ಕಾರುಗಳ ಪೆರೇಡ್ ನಡೆದು ಬಾಲಕೃಷ್ಣನ ಬರ್ತಡೇ ಆಚರಣೆ ನಡೆಯಿತಂತೆ! ಇನ್ನು ಇದು ಭಾರತೀಯ ಸಿನೆಮಾಗಳ ವಿದೇಶೀ ಬಿಡುಗಡೆಯ ಸಂಪ್ರದಾಯವಾಗಬಹುದೇನೋ?
ಇಲ್ಲಿನ ತೆಲುಗು ಸಂಘಗಳು ತಾನಾ, ಬಾನಾ ಗಾನಾಗಳೆಂದು ಕಮ್ಮ, ರೆಡ್ಡಿ, ಕಾಪು ಜಾತಿಗಳಿಗನುಗುಣವಾಗಿ ಒಂದೊಂದು ತಲೆಯೆತ್ತಿವೆ!
ಹಾಗೆಯೇ ಆಂಧ್ರದಲ್ಲಿ ಚುನಾವಣೆಗಳಾದರೆ ಇಲ್ಲಿನ ತೆಲುಗರ ಬಿ.ಪಿ ಏರುತ್ತದೆ. ಆ ಬಿ.ಪಿ.ಯನ್ನು ಇಳಿಸಲು ಹಳದಿ ಪಟ್ಟಿ ಕಟ್ಟಿಕೊಂಡು ಕ್ಯಾಲಿಫೋರ್ನಿಯಾದ ಉದ್ದಗಲಕ್ಕೂ ಸೈಕಲ್ ಹೊಡೆಯುತ್ತಾರೆ!
ಇದು ಮೇಲ್ನೋಟಕ್ಕೆ ಸಿನಿಮಾ ಅಭಿಮಾನಿಗಳಂತೆ ಕಂಡರೂ ಇಲ್ಲಿ ಜಾತಿಗಳೇ ಪ್ರಮುಖವಾಗಿವೆ. ಕಮ್ಮ ಜಾತಿಯ ಪ್ರಾಬಲ್ಯವನ್ನು ಮುರಿಯಲು ಚಿರಂಜೀವಿ ಕಾಪು ಜನಗಳನ್ನು ಬೆಂಬಲಿಸಿ ರಾಜಕೀಯ ಎಂಟ್ರ್‍ಇಯ ಸುದ್ದಿಯನ್ನು ತೇಲಿ ಬಿಡುತ್ತಿದ್ದಂತೆಯೇ ಈ ಜಾತೀಯತೆಯ ವಿಷ ಇಲ್ಲಿನ ತೆಲುಗು ಮೂಲದ ಭಾರತೀಯರನ್ನು ಬಹುವಾಗಿ ಆವರಿಸಿಕೊಂಡು ಬಿಟ್ಟಿವೆ. ಇದು ಕೇವಲ ತೆಲುಗರ ಕುರಿತಾಗಿ ಅಷ್ಟೇ ಅಲ್ಲ, ಉತ್ತರ ಭಾರತೀಯರಲ್ಲಿ ಇದು ಇನ್ನೂ ಭಯಂಕರವಾಗಿದೆ. ಅಮೇರಿಕಾದಲ್ಲಿದ್ದರೂ ಅವರು ತಮ್ಮ ರಾಜ್ಯದ ಅನ್ಯಜಾತಿಯವನಲ್ಲಿ ಸ್ನೇಹವನ್ನೂ ಮಾಡುವುದಿಲ್ಲ! ಬಿಹಾರೀ ಬ್ರಾಹ್ಮಣರು ಬನಿಯಾ ಜನಗಳನ್ನು ಸ್ವಲ್ಪ ದೂರವೇ ಇಡುತ್ತಾರೆ. ನನ್ನ ಆಪ್ತ ಬಿಹಾರೀ ಸ್ನೇಹಿತನ ಮನೆಗೆ ಅವರ ಸಂಬಂಧಿ ಶತ್ರುಘ್ನ ಸಿನ್ಹಾರವರು ಬಂದಾಗ ನಡೆದ ಗುಂಡಿನ ಪಾರ್ಟಿಯಲ್ಲಿ ಈ ವಿಷಯ ನನಗೆ ತಿಳಿಯಿತು. ಬಿಹಾರಿ ಸಂಘಗಳಲ್ಲಿ ಇದು ಇನ್ನೂ ವಿಕೋಪಕ್ಕೆ ಹೋಗುತ್ತದೆಂದು ನನ್ನ ಸ್ನೇಹಿತನು ತಿಳಿಸಿದನು.
ಇದೆಲ್ಲವನ್ನು ಅರಿಯದೇ ನೋಡುವ ಇತರೇ ಅಮೇರಿಕನ್ನರು ಈ ಭಾರತೀಯರುಗಳೇ ವಿಚಿತ್ರ ಎಂದು ಮೂಗುಮುರಿಯುತ್ತಾರೆ! ಅದಕ್ಕೆ ಇರಬೇಕು, ಅನೇಕ ವಿದೇಶೀಯರು ಭಾರತೀಯರೆಂದರೆ ಪುಂಗಿ ನುಡಿಸಿ ಹಾವಾಡಿಸುವವರು, ಕೋತಿಗಳನ್ನು ಕುಣಿಸುವವರು, ಇಲಿ ಹಿಡಿದು ತಿನ್ನುವವರು, ಕತ್ತೆ, ನಾಯಿಗಳೊಂದಿಗೆ ಮುದುವೆಯಾಗುವವರು (ಮಳೆಯಾಗಲೆಂದೋ, ಪಾಪ ಪರಿಹಾರದ ನಿಮಿತ್ತವಾಗಿಯೋ ಇರಬಹುದು) ಇನ್ನೂ ಏನೇನೋ ವಿಚಿತ್ರ ಭಾರತೀಯ ಸುದ್ದಿಗಳನ್ನು ಕೇಳಿ, ಅದಕ್ಕೆ ತದ್ವಿರುದ್ಧವಾಗಿ ಇಲ್ಲಿನ ಭಾರತೀಯರು ಶುದ್ಧ ಸಸ್ಯಾಹಾರಿಗಳಾಗಿಯೋ, ಹಂದಿ/ದನವನ್ನು ತಿನ್ನದೆಯೋ, ಕತ್ತೆ ನಾಯಿಗಳನ್ನು ಬಿಡಿ, ಇಲ್ಲಿನ ಬಿಳಿ ಹುಡುಗಿಯರನ್ನೂ ಪರಿಗಣಿಸದೇ ಭಾರತೀಯರನ್ನೇ ಮದುವೆಯಾಗುವ ಭಾರತೀಯ ಸಂಸ್ಕೃತಿಯ ಇನ್ನೊಂದು ಬಗೆಯನ್ನು ನೋಡಿ, "ಇಂಡಿಯನ್ಸ್ ಆರ್ ಕ್ರೇಜಿ" ಎನ್ನುತ್ತಾರೆ.
ಈ ಜಾತಿಯ ವಿಷಗಾಳಿ ಅಮೇರಿಕಾದ ಕನ್ನಡ ಸಂಘಗಳಲ್ಲಿ ಎಷ್ಟರಮಟ್ಟಿಗಿದೆಯೋ ಗೊತ್ತಿಲ್ಲ. ನನ್ನ ಹಲವು ಕನ್ನಡ ಸ್ನೇಹಿತರು ಹೇಳುವುದೇನೆಂದರೆ ಅಲ್ಲಿಯೂ ಕೂಡ ಇದು ಸಂಖ್ಯೆಯೇರಿದಂತೆ ನಿಧಾನವಾಗಿ ಕಾಣಿಸುತ್ತಿದೆಯೆಂದು. ಮೊದಲೆಲ್ಲಾ ಇಲ್ಲಿನ ಕನ್ನಡ ಸಂಘಗಳ ಸಭೆಗಳಲ್ಲಿ, ವನಭೋಜನಗಳಲ್ಲಿ ಕೇವಲ ಸಸ್ಯಹಾರೀ ಊಟವಿರುತ್ತಿದ್ದರೆ, ಕೆಲವರು ಪ್ರತಿಭಟಿಸಿ ಭೋಜನಗಳಲ್ಲಿ ಮಾಂಸಹಾರವೂ, ವನಭೋಜನಗಳಲ್ಲಿ ಸುಟ್ಟ ಕೋಳಿಗಳೂ (ಗ್ರಿಲ್ಡ್ ಚಿಕನ್) ಸಿಗುವಂತೆ ಮಾಡಿದ್ದಾರೆಂದೂ, ಸದ್ಯಕ್ಕೆ ಈ ವಿವಾದವನ್ನು ಸಸ್ಯಾಹಾರ-ಮಾಂಸಹಾರದವರೆಗೆ ತಂದಿದ್ದಾರಂತೆ. ಮುಂದೆ ಜಾತಿಗಳಿಗೆ ಬಂದರೂ ಬರಬಹುದೇನೋ?
ಆದರೆ ನಾನು ಗಮನಿಸಿದಂತೆ ಇದಾಗಲೇ ಜಾತಿಗಳ ಮಟ್ಟಕ್ಕೆ ಇಲ್ಲಿನ ಕನ್ನಡ ಅನಿವಾಸಿಗಳಲ್ಲಿ ಅದ್ಯಾವಾಗಲೋ ಬಂದಾಗಿದೆ. ವೀರಶೈವರೆಲ್ಲಾ ಉತ್ತರ ಅಮೇರಿಕಾ ವೀರಶೈವ ಸಂಘವನ್ನು ಎಪ್ಪಂತೆಂಟರಲ್ಲೇ ಸ್ಥಾಪಿಸಿಕೊಂಡಿದ್ದರೆ, ಅಮೇರಿಕಾ ಒಕ್ಕಲಿಗರ ಪರಿಷತ್ ತೊಂಬತ್ತೊಂದರಲ್ಲಿ ಅಸ್ತಿತ್ವಕ್ಕೆ ಬಂದಿದೆ. ಹಾಗೆಯೇ ಹವ್ಯಕರ ಸಂಘ, ಮಾಧ್ವರ ಸಂಘ.................ಇತ್ಯಾದಿ, ಇತ್ಯಾದಿಗಳೂ ಇವೆ.
ಹಿಂದೂ, ಜೈನ, ಬೌದ್ಧರಂತೆಯೇ ವೀರಶೈವ ಕೂಡ ಒಂದು ಧರ್ಮವೆನ್ನುವ ವೀರಶೈವರು ತಮ್ಮ ಉತ್ತರ ಅಮೇರಿಕಾ ವೀರಶೈವ ಸಂಘವನ್ನು ತಮ್ಮ ಧಾರ್ಮಿಕ ಆಚರಣೆ, ಸಂಸ್ಕೃತಿ, ವಚನ ಪಾಠಗಳಿಗೆ ಸೀಮಿತಗೊಳಿಸಿದ್ದರೆ, ಒಕ್ಕಲಿಗ ಪರಿಷತ್ ನೇರವಾಗಿ ’ಅಕ್ಕ’ ರಾಜಕೀಯದಲ್ಲಿ ಹೇಗೆ ತಮ್ಮ ಜನರನ್ನು ಬಲಪಡಿಸಬೇಕೆಂದು ಚರ್ಚಿಸುತ್ತದಂತೆ! ಈ ಸಂಘಗಳ ಸಭೆಗಳಿಗೆ ಹಾಜರಾಗಿದ್ದ ನನ್ನ ಕೆಲವು ಸ್ನೇಹಿತರು ಹೀಗೆ ಅಭಿಪ್ರಾಯಿಸಿದ್ದಾರೆ. ಇನ್ನಿತರೆ ಕನ್ನಡ ಮೂಲದ ಜಾತಿ ಸಂಘಗಳ ಬಗ್ಗೆ ನನಗೆ ಅಷ್ಟಾಗಿ ಪರಿಚಯವಿಲ್ಲ, ಮಿತ್ರರೂ ಇಲ್ಲ. ಹಾಗಾಗಿ ಅವುಗಳ ಬಗೆಗೆ ಏನನ್ನೂ ಹೇಳಲಾರೆ.
ಆದರೂ ನನ್ನೊಬ್ಬ ಓದುಗರು ಅಭಿಪ್ರಾಯಿಸಿದ ಪ್ರಕಾರ ಈ ಅನಿವಾಸೀ ಕನ್ನಡ ಸಂಘಗಳ ನೋಟೀಸ್ ಬೋರ್ಡ್ ಆಗಿರುವ, ಭಟ್ಟ, ಸಿಂಹ, ಜೋಷಿ, ಬೆಳಗೆರೆ, ತ್ರಿವೇಣಿ,ಶ್ರೀನಾಥ, ಶಾಮ, ರಾಮ, ದತ್ತಾತ್ರಿ ಎಂಬ ಹೆಸರುಗಳ ಬ್ರ್‍ಆಹ್ಮಣ ಅಂಕಣಕಾರರೇ ಇರುವ "ಅದಪ್ಪಾ ಕನ್ನಡ" ಎಂಬ ಕನ್ನಡ ಪೋರ್ಟಲ್, ಅನಿವಾಸಿಯರಲ್ಲಿ ಜಾತಿ ಅಜೆಂಡಾವನ್ನು ಬಿತ್ತುತ್ತಿದೆಯಂತೆ. ಇತ್ತೀಚೆಗೆ ಅನೇಕ ಮಹಿಳಾ ಓದುಗರು "ಅದಪ್ಪಾ ಕನ್ನಡ"ವನ್ನು, ಅದರಲ್ಲಿ ಹಾಕಿರುವ ಹಸಿ ಹೆಣ್ಣುಗಳ ಫೋಟೋಗಳ ದೆಸೆಯಿಂದಲೋ, ಬಿಸಿಯೇರಿಸುವ ಬ್ಯಾನರ್ ಗಳಿಂದಲೋ "ಪೋರ್ನೋ ಸೈಟ್" ಎಂದು ಪರಿಗಣಿಸಿ, ನಾನು ಬರೆಯುವ "ಅವರ್ ಕರ್ನಾಟಕ.ಕಾಮ್"ಗೆ ಸಾರಾಸಗಟಾಗಿ ವಲಸೆ ಬಂದಿದ್ದಾರೆ! ಹೀಗಂತ ಹಲವಾರು ಮಹಿಳಾ ಓದುಗರು ಇಮೈಲ್ ಕಳುಹಿಸಿ, "ಕನ್ನಡ, ಕನ್ನಡ ಎನ್ನುವ ’ಮಡಿವಂತ (ಬ್ರಾ)ಹ್ಮಣರ’ ಈ ಕನ್ನಡ ಪೋರ್ಟಲ್ ನಲ್ಲಿ ’ಬ್ರಾ’ ಇಲ್ಲದ ಹೆಣ್ಣುಗಳನ್ನು ತೋರುವ" ಬಗ್ಗೆ ಬರೆಯಿರೆಂದಿದ್ದರು. ಹಾಗಾಗಿ ಈ ವಿಷಯವನ್ನು ಸಂದರ್ಭಕ್ಕನುಗುಣವಾಗಿ ಇಲ್ಲಿ ಉಲ್ಲೇಖಿಸಿದ್ದೇನೆ.
ಇರಲಿ, ಚಿತ್ರದುರ್ಗದ ಶ್ರೀಗಳು ಭಾರತದಲ್ಲಿ ಜಾತಿ, ಕುಲ, ಗೋತ್ರಗಳಿಗೊಂದರಂತೆ "ಪೀಠ"ಗಳನ್ನು ಸ್ಥಾಪಿಸಿಕೊಡುವುದರ ಜೊತೆಗೆ, ಅಮೇರಿಕಾದಲ್ಲಿ ಕೂಡ "ಜಾತಿ ಪೀಠ"ಗಳನ್ನು ಸ್ಥಾಪಿಸಿಕೊಡುವತ್ತ ಯಾವಾಗ ಮುಖ ಮಾಡುವರೋ? ಈ ಹಿಂದೆ ಜಾತಿಪೀಠಗಳ ಕುರಿತು ನಾನು ಬರೆದ ಲೇಖನಕ್ಕೆ ಉತ್ತರವಾಗಿ ಹಲವರು ಆಗಲೇ ಇಲ್ಲಿನ ಪೀಠಗಳ ಪೀಠಾಧಿಪತಿಗಳಾಗಲು ಅರ್ಜಿಯನ್ನು ಕಳುಹಿಸಿದ್ದರು. ಒಬ್ಬ ಮಹಿಳಾ ಓದುಗರಂತೂ "ಅಕ್ಕ ಶಕ್ತಿ ಪೀಠ" ಎಂದು ತಮ್ಮ ಪೀಠದ ಹೆಸರನ್ನೂ ಸೂಚಿಸಿದ್ದಾರೆ! ದುರ್ಗದ ಶ್ರೀಗಳು ಈ ಅರ್ಜಿಗಳು ಬೇಕಿದ್ದರೆ ನನ್ನನ್ನು ಸಂಪರ್ಕಿಸಬಹುದು.
ಬಹಳ ಮಂದಿ ಅನಿವಾಸೀ ಭಾರತೀಯರು, ಸದಾ ನೀರಿನಿಂದ ಹೊರಗಿದ್ದಂತೆ ಚಡಪಡಿಸುತ್ತಾ "ಭಾರತದಲ್ಲಾಗಿದ್ದರೇ ಹಾಗಿರಬಹುದಿತ್ತು, ಹೀಗಿರಬಹುದಿತ್ತು..." ಎಂದೆಲ್ಲ ಬಡಬಡಿಸುತ್ತಾ ಭಾರತವನ್ನು ನೆನೆಯುವ, "ಇನ್ನು ಮೂರೇ ವರ್ಷ, ವಾಪಸ್ ಹೋಗಿಬಿಡುತ್ತೇವೆ" ಎಂದು ನಿತ್ಯವೂ ಕಂಡವರಲ್ಲಿ ಹೇಳಿಕೊಳ್ಳುವ ಇವರು ಯಾವತ್ತೂ ಭಾರತಕ್ಕೆ ಮರಳರು! ಈ ಬಡಬಡಿಕೆ, ಬುಡುಬುಡಿಕೆ ಎಲ್ಲಾ ಹೀಗೆ ಸುಮ್ಮನೇ ಒಂದು ಕಾಲಕ್ಷೇಪ, ಗೊಣಗಾಟ, ನರಳಾಟ. ಇಲ್ಲಿನ ಗ್ರಾಹಕ ಸ್ವಾತಂತ್ರ್ಯವನ್ನು ಶೋಷಿಸುತ್ತ, ಗಂಟುಮುಖವಿಟ್ಟು ಸೂಪರ್ ಮಾರ್ಕೆಟ್ ನ ಸಹಾಯಕರುಗಳನ್ನು ತಲೆಹರಟೆ ಪ್ರಶ್ನಿಸುತ್ತ, ಇವರ ತಲೆಹರಟೆ ಪ್ರಶ್ನೆಗಳಿಗೆ, ಆ ಸಹಾಯಕರೇನಾದರೂ ಕೊಂಚ ಅಸಡ್ಡೆ ತೋರಿದರೋ ಅಷ್ಟೇ. ಅವರನ್ನು "ವರ್ಣದ್ವೇಷಿ"ಗಳೆಂದು ಅವರುಗಳ ಮೇಲ್ವಿಚಾರಕರಿಗೆ ದೂರು ಕೊಟ್ಟು ಗೋಳು ಹುಯ್ದುಕೊಳ್ಳುತ್ತದೆ, ಈ ವರ್ಗ. ಇನ್ನು ಈ ವರ್ಗ ಭಾರತಕ್ಕೆ ಮರಳಿ, ಭಾರತದ "ಬೇಕಾದ್ರೆ ತಗಾ ಇಲ್ಲ ಅಂದ್ರೆ ತಿಗಾ ಮುಚ್ಕೊಂಡು ನಡೀತಿರು" ಎನ್ನುವ ತಾಳ್ಮೆಗೆಟ್ಟ ವ್ಯಾಪಾರಿಗಳನ್ನು ಎದುರಿಸುವುದೇ? ಈ ವರ್ಗದ ಜನಗಳು ಮಾಡುವ "ಅಮೇರಿಕಾ ಗ್ರಾಹಕ ಸ್ವಾತಂತ್ರ್ಯದ ಶೋಷಣೆ"ಯ ಬಗ್ಗೆ ಟಿ.ಎನ್. ಸೀತಾರಾಂ ರವರ ಧಾರಾವಾಹಿಗಳ ರೀತಿಯಲ್ಲಿ ಮೆಗಾಸೀರಿಯಲ್ಲುಗಳನ್ನೇ ತೆಗೆಯಬಹುದು! "ಮುಕ್ತ ಮಾಯಾಮೃಗವಾದ ಅಮೇರಿಕಾದಲ್ಲಿ ಮನ್ವಂತರಗೊಂಡವರೊಂದಿಗೆ ಮುಖಾಮುಖಿ" ಎಂದು!
ಅಮೇರಿಕಾದಲ್ಲಿದ್ದಾಗ ಇಡ್ಲಿ, ದೋಸೆ, ಭಾರತೀಯ ತಿನಿಸು ಬಿಟ್ಟರೆ ಮತ್ತಿನ್ನೊಂದನ್ನು ಮೂಸದ, ಭಾರತಕ್ಕೆ ರಜೆಗೆ ಹೋದಾಗ ಪಿಜ್ಜಾ, ಬರ್ಗರ್, ಪಾಸ್ತಾ ಎಂದೆಲ್ಲಾ ತಮ್ಮ ಸಂಬಂಧಿಗಳನ್ನು ಗೋಳು ಹುಯ್ದುಕೊಳ್ಳುವ; ಅಮೇರಿಕಾದ ಸುಡು ಬೇಸಿಗೆಯಲ್ಲಿ ದುಪ್ಪಟ್ಟಾಗಳನ್ನು ಚಳಿ ಬಂದವರಂತೇ ಹೊದ್ದು ಭಾರತೀಯ ಸಂಸ್ಕೃತಿಯ ರಾಯಭಾರಿಗಳಂತೆ ತಿರುಗುತ್ತಾ, ಬೆಂಗಳೂರಿಗೆ ಬಂದೊಡನೆ ಅಮೇರಿಕಾದ ರಾಯಭಾರಿಗಳಾಗುವ ಈ ಕನ್ಫೂಸ್ಡ್ ವರ್ಗದ ಬಗ್ಗೆ ಸರಮಾಲೆಗಳನ್ನೇ ಬರೆಯಬಹುದು. ಅನೇಕರು ಭಾರತದಿಂದಲೇ ಲೋಡುಗಟ್ಟಲೆ ಬಟ್ಟೆಗಳನ್ನು ತಂದಿರುತ್ತಾರೇನೋ! ಏಕೆಂದರೆ ಅವರುಗಳು ಹಾಕುವ ಭಾರತದ ಪ್ಯಾಂಟು, ಶರ್ಟುಗಳು ಇಲ್ಲಿ ಅಭಾಸವಾಗಿ ಕಾಣುತ್ತಿರುತ್ತವೆ. ಅದರ ಪರಿವೆಯೂ ಅವರಿಗಿರುವುದಿಲ್ಲ! "ವೆನ್ ಯು ಆರ್ ಇನ್ ರೋಮ್, ಬಿ ಲೈಕ್ ರೋಮನ್" ಎಂಬ ನಾಣ್ಣುಡಿಯನ್ನು ಇವರನ್ನು ನೋಡಿಯೇ ಸೃಷ್ಟಿಸಿದರೆಂದೆನಿಸುತ್ತದೆ!
ಇರಲಿ, ಸಾಮಾನ್ಯವಾಗಿ ಉನ್ನತ ಶಿಕ್ಷಣವನ್ನು ಪಡೆದು, ಉತ್ತಮ ಬುದ್ದಿಮತ್ತೆಯನ್ನು ಹೊಂದಿ, ಅಮೇರಿಕಾ ಸೇರಿ, ಇಲ್ಲಿನ ಪ್ರಜೆಗಳಾದರೂ ತಮ್ಮ ಸುಪ್ತ ಜಾತೀಯತೆಯನ್ನು ತೊರೆಯಲಾಗದಷ್ಟು ಜಾತಿಗಳು ನಮ್ಮನ್ನು ಆವರಿಸಿಕೊಂಡಿವೆ. ಭಾರತದಲ್ಲಿಯೂ ಕೂಡ ವಿದ್ಯಾವಂತರಾದಷ್ಟು ಜಾತಿಜಾಗೃತರಾಗುತ್ತಾರೆಯೇ ಹೊರತು ಜಾತಿಪರಿಧಿಯ ಹೊರಕ್ಕೆ ಬರುವವರು ಕಡಿಮೆಯೇ! ಇದು ಸ್ವತಂತ್ರ್ಯ ಭಾರತದ ಸಾಮಾಜಿಕತೆಯ ವಿಕಾಸವೋ ವಿಕಾರವೋ, ಅಥವಾ ಭಾರತ ಸ್ವಾತಂತ್ರ್ಯಾ ನಂತರದ ಶಿಕ್ಷಣ ಕ್ರಾಂತಿಯ ಪರಿಣಾಮವೋ ಅರಿಯೇ! ಒಟ್ಟಾರೆ ಭಾರತ ಎತ್ತಲೋ ಪ್ರಗತಿಸುತ್ತಿದೆ.
ಸಂದರ್ಭಕ್ಕನುಗುಣವಾಗಿ ಬಸವಣ್ಣನ ವಚನವೊಂದು ನೆನಪಾಗುತ್ತಿದೆ, ’ಹಲವು ಕಾಲ ಹಂಸೆಯ ಸಂಗದಲ್ಲಿದ್ದರೇನು, ಬಕ ಶುಚಿಯಾಗಬಲ್ಲುದೇ? ಗಂಗಾನದಿಯಲ್ಲಿದ್ದರೇನು, ಪಾಷಾಣ ಮೃದುವಾಗಬಲ್ಲುದೇ? ಕಲ್ಪತರುವಿನ ಸನ್ನಿಧಿಯಲ್ಲಿದ್ದರೇನು, ಒಣ ಕೊರ್‍ಅಡು ಕೊನರಿ ಫಲವಾಗಬಲ್ಲುದೇ? ಕಾಶೀಕ್ಷೇತ್ರದಲ್ಲಿ ಒಂದು ಶುನಕವಿದ್ದರೇನು, ಅದರ ಹಾಲು ಪಂಚಾಮೃತಕ್ಕೆ ಸಲುವುದೇ? ತೀರ್ಥದಲೊಂದು ಗಾರ್ದಭನಿದ್ದರೇನು, ಕಾರಣಿಕನಾಗಬಲ್ಲುದೇ? ಖಂಡುಗ ಹಾಲೊಳಗೊಂದು ಇದ್ದಲಿಯಿದ್ದರೇನು, ಬಿಳುಹಾಗಬಲ್ಲುದೇ? ಇದ ಕಾರಣ ಕೂಡಲಸಂಗನ ಶರಣರ ಸನ್ನಿಧಿಯಲ್ಲಿ ಅಸಜ್ಜನನಿದ್ದರೇನು, ಸದ್ಭಕ್ತನಾಗಬಲ್ಲನೇ?’ ಅಮೇರಿಕಾದಲ್ಲಿದ್ದರೇನು ಭಾರತದಲ್ಲಿದ್ದರೇನು, ವಿದ್ಯೆಯಿದ್ದರೇನು ಅವಿದ್ಯೆಯಾದರೇನು, ಭಾರತೀಯ ಜಾತಿಮುಕ್ತನಾಗಬಲ್ಲನೇ?
ಅಣಕ:
ನೂತನ ಬಿಜೆಪಿ ಶಾಸಕರು ದೇವರುಗಳು, ರೆಡ್ಡಿ, ಎಡ್ಯೂರಪ್ಪ, ಚಿಗಪ್ಪ, ದೊಡ್ಡಪ್ಪಗಳ ಹೆಸರಿನಲ್ಲೆಲ್ಲಾ ಪ್ರಮಾಣ ವಚನ ಸ್ವೀಕರಿಸಿದ್ದನ್ನು ಕೇಳಿದ್ದೀರಷ್ಟೇ.
ರಾಜ್ಯದ ಜನತೆಯೆಲ್ಲಾ ರೇಣುಕಾಚಾರ್ಯರು "ಜಯಲಕ್ಷ್ಮಿ" ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸುವರೆಂದು ಕಾತುರದಿಂದ ಎದುರು ನೋಡುತ್ತಿದ್ದರೆ, ಠುಸ್ಸೆನ್ನುವಂತೆ ’ಎಡ್ಯೂರಪ್ಪ’ ಹೆಸರಿನಲ್ಲಿ ಪ್ರಮಾಣ ಮಾಡಿದ್ದೇಕೋ?
ಬಹುಶಃ ಅಂತರಂಗದಲ್ಲಿ ’ಆಹ್, ಜೈಲಕ್ಷ್ಮಿ, ಆಹ್ ಜೈಲಕ್ಷ್ಮಿ’ ಎಂಬ ಅಸ್ಖಲಿತ ಪದಗಳ ಸ್ಖಲನಲೋಕದಲ್ಲಿ ವಿಹರಿಸುತ್ತಿದ್ದರೇನೋ!
Coming Next Week: An article on second generation Indian Americans.
ಮಗದೊಮ್ಮೆ ಕೆಂಪೇಗೌಡ, ವಿಮಾನ ನಿಲ್ದಾಣ!
ಕೆಂಪೇಗೌಡರ ವಿಷಯವಾಗಿ ನಾನು ಐತಿಹಾಸಿಕ ವಿಷಯಗಳನ್ನು ಮಂಡಿಸಿ, ಕೆಂಪೇಗೌಡರಿಗಿಂತ ಹೆಚ್ಚಾಗಿ ಕನ್ನಡ/ಕರ್ನಾಟಕಕ್ಕೆ ಆಗಿಹೋದ ಸರದಾರರು, ಸಾಮಂತರು, ರಾಜರುಗಳು ಮತ್ತು ಚಕ್ರವರ್ತಿಗಳ ಹೆಸರುಗಳು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೆಚ್ಚು ಸಮಂಜಸವೆಂದು ಹೇಳಿದ್ದೆ. ರಾಜ್ಯಕ್ಕೊಂದೇ ಇರುವಂತಹ ವಿಮಾನನಿಲ್ದಾಣ ಇದಾಗಿರುವುದರಿಂದ ಇಡೀ ರಾಜ್ಯ ಒಪ್ಪುವಂತಹ ಹೆಸರನ್ನು ಇಡಬೇಕೆಂಬುದು ನನ್ನ ಅಭಿಪ್ರಾಯ. ಈ ಅಭಿಪ್ರಾಯ ರಾಜ್ಯದೆಲ್ಲೆಡೆಯ ಕನ್ನಡಿಗರ ಅಭಿಪ್ರಾಯವಾಗಿರುವುದರಿಂದಲೇ ಜನ ವಿವಿಧ ಹೆಸರುಗಳನ್ನು ಸೂಚಿಸುತ್ತಿದ್ದಾರೆ. ಬಸ್ ನಿಲ್ದಾಣಗಳಂತೆ ಎಲ್ಲಾ ಊರುಗಳಲ್ಲೂ ಅಂತರ್ರಾಷ್ಟ್ರೀಯ ವಿಮಾನನಿಲ್ದಾಣಗಳಿದ್ದರೆ ಈ ಹೆಸರಿನ ಸಮಸ್ಯೆಯೇ ಬರುತ್ತಿರಲಿಲ್ಲ. ದುರದೃಷ್ಟವಶಾತ್ ಈ ಮಟ್ಟದ ವಿಮಾನನಿಲ್ದಾಣ ಒಂದೇ ಇರುವುದು!
ಇನ್ನು ಬೆಂಗಳೂರಿನ ಭದ್ರ ಬುನಾದಿಯ ಬಗ್ಗೆ ಬಿಡಿಸಿ ಹೇಳಬೇಕೆಂದರೆ ಅದನ್ನು ನನ್ನ ಲೇಖನಕ್ಕೆ ಬಂದ ಅನಾಮಧೇಯ ಈಮೈಲ್ ಗಳ ಶೈಲಿಯಲ್ಲಿ ಹೇಳುವುದಾದರೆ "ಕೃಷ್ಣದೇವರಾಯನ ಬಳಿ ತಮಗೊಂದು ಊರು ಕಟ್ಟಿಕೊಳ್ಳಲು ಐದು ಹೋಬಳಿಗಳ ಉಂಬಳಿ ಬೇಡಿ, ನಾಲ್ಕು ಗೋಪುರಗಳ ಗೂಟ ನೆಟ್ಟು, ಬೆಂದಗಾಳೂರೆಂದು ಬೋರ್ಡ್ ಕೆತ್ತಿಸಿ, ಹತ್ತಾರು ಕೆರೆಕಟ್ಟೆಗಳನ್ನು ಕಟ್ಟಿಸಿದಾಕ್ಷಣ ಕೆಂಪೇಗೌಡ ಬೆಂಗಳೂರು ನಿರ್ಮಾತೃವೇ? ಬಿಜಾಪುರದ ಆದಿಲ್ ಶಾಹಿಯ ಸೈನಿಕ ಸರದಾರ ಶಹಾಜಿ (ಛತ್ರಪತಿ ಶಿವಾಜಿಯ ತಂದೆ) ದಾಳಿಗೆ ಸೋತು ಸುಣ್ಣವಾಗಿ ಹೋದ ಕೆಂಪೇಗೌಡರೊಂದಿಗೇ ಬೆಂದಗಾಳೂರಿನ ಬೋರ್ಡು ಮುರಿದು ಬಿದ್ದಿತ್ತು." ಎಷ್ಟೋ ವರ್ಷಗಳ ನಂತರ ಮೈಸೂರು ಅರಸರು ಬೆಂದಗಾಳೂರನ್ನು ಕೊಂಡು ಅದಕ್ಕೆ ಒಂದು ಪಟ್ಟಣದ ಸ್ವರೂಪವನ್ನು ಕೊಟ್ಟು "ಬೆಂಗಳೂರು" ಎಂಬ ಭದ್ರ ಬುನಾದಿಯನ್ನು ಹಾಕುವವರೆಗೂ ಅದು ಬೆಂದಗಾಳೂರೆಂಬ ಹಳ್ಳಿಯೇ ಆಗಿದ್ದಿತು. ಹಾಗೆಯೇ ಬ್ರಿಟಿಷರು ತಮ್ಮ ಮದ್ರಾಸ್ ಪ್ರಾಂತ್ಯ ಮತ್ತು ತಮ್ಮ ಮಿತ್ರ ಮೈಸೂರು ಸಂಸ್ಥಾನದ ಮಧ್ಯದಲ್ಲಿದೆಯೆಂದೂ, ಮದ್ರಾಸಿನ ಬೇಸಿಗೆಯ ಬವಣೆಯಿಂದ ತಪ್ಪಿಸಿಕೊಳ್ಳಲೂ ಕಾರಣವಾಗಿ ಬೆಂಗಳೂರನ್ನು "ನಗರ"ವಾಗಿ ಪರಿವರ್ತಿಸಿದರು. ಒಟ್ಟಾರೆ "ಬೆಂದಗಾಳೂರು" ಎಂಬ ಹಳ್ಳಿ "ಬೆಂಗಳೂರು" ಎಂಬ ಪಟ್ಟಣ/ನಗರವಾಗಲು ಕಾರಣ ನಾಲ್ಮಡಿ ಕೃಷ್ಣರಾಜ ಒಡೆಯರ್, ಬ್ರಿಟಿಷರು ಮತ್ತು ಇತರೆ ಮೈಸೂರು ಅರಸರು. ಇನ್ನು ಕರ್ನಾಟಕ ರಾಜ್ಯ ಸ್ಥಾಪನೆಯನಂತರ ಕರ್ನಾಟಕದ ರಾಜಧಾನಿಯಾಗಿ ಇದು ಬೆಳೆದಿದ್ದನ್ನು ನಾವ್ಯಾರು ಹೇಳಬೇಕಿಲ್ಲ.
ಇನ್ನು ಇನ್ನೋರ್ವ ಓದುಗರು ಹೇಳಿರುವಂತೆ, ಹೊಯ್ಸಳನ ಸಾಹಸ, ಪುಲಕೇಶಿಯ ಧೈರ್ಯ, ಮಯೂರವರ್ಮನ ಛಲ, ಕೃಷ್ಣದೇವರಾಯನ ಸಾಹಿತ್ಯಾಸಕ್ತಿ, ಮೈಸೂರು ಅರಸರ ದೂರಗಾಮಿತ್ವ, ಚೆನ್ನಮ್ಮನ ಸ್ವಾಭಿಮಾನ, ಓಬವ್ವನ ನಿಷ್ಟೆಯಂತಹ ಕತೆಗಳಂತೇ ಅದ್ಯಾವ ಐತಿಹಾಸಿಕ ಕತೆಗಳನ್ನು ಐತಿಹಾಸಿಕ ಪುಟಗಳಿಂದ ಹೆಕ್ಕಿ ಕೆಂಪೇಗೌಡರ ಕುರಿತಾಗಿ ನಮ್ಮ ಮುಂದಿನ ಜನಾಂಗಕ್ಕೆ ಹೇಳುವುದಿದೆ?
ಸತ್ಯಾಗ್ರಹ, ಬಂದ್, ಮುಷ್ಕರಗಳು "ಸ್ವಾತಂತ್ರ್ಯ ಚಳುವಳಿಯ ಬೈಪ್ರಾಡಕ್ಟ್"ಗಳಾದರೆ, ಓಲೈಕೆ, ಜಾತೀಯತೆಗಳು "ಸ್ವಾತಂತ್ರ್ಯದ ಬೈಪ್ರಾಡಕ್ಟ್"ಗಳಾಗಿವೆ. ಮಹಾತ್ಮ ಗಾಂಧಿಯವರು ಅಂದು ಧರ್ಮಾಧರಿತ ದೇಶ ವಿಭಜನೆಗೆ ಒಪ್ಪಿಗೆ ನೀಡಿ, ನಂತರ ನಿಷ್ಟುರ ನಿರ್ಧಾರವನ್ನು ತೆಗೆದುಕೊಳ್ಳದೆ ಓಲೈಕೆಗೆ ಮುನ್ನುಡಿ ಬರೆದು ಸ್ವಾತಂತ್ರ್ಯವನ್ನಷ್ಟೇ ಅಲ್ಲದೆ, ಸ್ವಾತಂತ್ರ್ಯವನ್ನು ಹೇಗೆ ಬೇಕೋ ಹಾಗೆ ಬಳಸಿಕೊಳ್ಳುವ "ಸತ್ಯಾಗ್ರಹ"ವೆಂಬ ಅಸ್ತ್ರವನ್ನೂ ಕೊಟ್ಟು ಹೋಗಿದ್ದಾರೆ! ಅಂದಿನ ಮಹಾತ್ಮ ಗಾಂಧಿಯಿಂದ ಇಂದಿನ ಸೋನಿಯಾ ಗಾಂಧಿಯವರೆಗೆ ಆಗಿಹೋದ ಎಲ್ಲಾ ನಾಯಕರುಗಳು ಧರ್ಮಕ್ಕಷ್ಟೇ ನಿಯಮಿತವಾಗಿದ್ದ ಒಲೈಕೆಯನ್ನು ಜಾತಿಗಳಿಗೆ, ಉಪಜಾತಿಗಳಿಗೆ, ವಿವಿಧ ಸಮಾಜ ವರ್ಗಗಳಿಗೆ ವಿಂಗಡಿಸುತ್ತ ಇಂದು ಜಾತಿಗಳನ್ನು ಮತಬ್ಯಾಂಕುಗಳಾಗಿ ಪರಿವರ್ತಿಸಿದ್ದಾರೆ.
ಈ ಮತಬ್ಯಾಂಕ್ ಬಲವಾಗಿದ್ದರಷ್ಟೇ ಆಯಾ ಜಾತಿಯವರಿಗೆ ಪ್ರಾಶಸ್ತ್ಯ, ಇಲ್ಲದಿದ್ದರೆ ಕೇಳುವವರೇ ಇಲ್ಲ! ಹಾಗಾಗಿಯೇ ಇಂದು ಬೆಂಗಳೂರು ಪಟ್ಟಣದ ನಿಜ ನಿರ್ಮಾತೃ; ಬ್ರಿಟಿಷರಿಂದ "ಆಧುನಿಕ ಅಶೋಕ"; ಗಾಂಧೀಜಿಯವರಿಂದ "ರಾಜರ್ಷಿ" ಎಂದು ಕರೆಸಿಕೊಂಡಿದ್ದ, ಇಡೀ ವಿಶ್ವವೇ ಇವರೆಡೆಗೆ ಬೆರಗಾಗಿ ನೋಡುವಂತೆ ಮಾಡಿದ್ದ ನಾಲ್ಮಡಿ ಕೃಷ್ಣರಾಜ ಒಡೆಯರರ ಅಲ್ಪಸಂಖ್ಯಾತ "ಅರಸು" ಜಾತೀವರ್ಗ, ಈ ಐತಿಹಾಸಿಕ ಸಂಗತಿಯನ್ನು ಸ್ಪಷ್ಟೀಕರಿಸುವ ಪ್ರಯತ್ನಕ್ಕೆ ಕೈಹಾಕದೇ ಸುಮ್ಮನಿರುವುದು. ಸಂಖ್ಯಾಬಲವಿಲ್ಲದವರ ಕೂಗನ್ನು ಯಾರು ಕೇಳುತ್ತಾರೆ? ಸುಮ್ಮನೆ ಬೆದರಿಸಿ ಬಾಯ್ಮುಚ್ಚಿಸುವವರೇ ಎಲ್ಲ. ಅಂತಹ ಪ್ರಾಮಾಣಿಕ ಪ್ರಯತ್ನವನ್ಯಾರಾದರೂ ಮಾಡಿದರೆ ಅವರನ್ನು "ಸಮಾಜದ್ರೋಹಿ"ಗಳೆಂದು ಬ್ರ್ಯಾಂಡಿಸುವುದು, ಮುಷ್ಕರಗಳಿಂದ ಹೆದರಿಸುವುದು ಇದ್ದದ್ದೇ. ಇಂದು ಇತಿಹಾಸಕಾರ ಚಿದಾನಂದಮೂರ್ತಿಗಳನ್ನು "ಚೆಡ್ಡಿ" ಎಂದು ಬ್ರ್ಯಾಂಡಿಸಿರುವಂತೆ! ಮೂರ್ತಿಗಳು ಬ್ರಾಹ್ಮಣ ಮಹಿಳೆಯಾಗಿದ್ದರೆ "ಬ್ರಾ" ಎನ್ನುತ್ತಿದ್ದರೇನೋ!!! ಕೆಂಪೇಗೌಡರಿಗೆ ಅಂಟಿದ ಜಾತಿಯ ಬಲವಿರದಿದ್ದರೇ ಇಂದು ಕೆಂಪೇಗೌಡರನ್ನು ಕೇಳುವವರೇ ಇರುತ್ತಿರಲಿಲ್ಲ ಎಂಬುದನ್ನು ನಮ್ಮ ವಿದ್ಯಾವಂತ ಸಮಾಜ ಅರಿಯದೇ? ಈ ಬಹುಸಂಖ್ಯಾತ ಕೆಂಪೇಗೌಡರ ವರ್ಗದ ಲಾಬಿಯ ಮೇಲ್ಪಂಕ್ತಿಯನ್ನು ಅನುಕರಿಸುತ್ತ ಇಂದು ಕುರುಬ ಸಮಾಜ ಸಂಗೊಳ್ಳಿ ರಾಯಣ್ಣನನ್ನು, ವೀರಶೈವ ಉಪಜಾತಿಯ ಪಂಚಮಸಾಲೀ ಸಮಾಜ ಕಿತ್ತೂರು ಚೆನ್ನಮ್ಮನನ್ನೂ ತಮ್ಮ ತಮ್ಮ ಜಾತಿಯ ರತ್ನಗಳೆಂದು ಬಿಂಬಿಸುತ್ತ ಈ ಈರ್ವರ ಚರಿತ್ರೆಗೆ ಜಾತಿಯ ಹೊದಿಕೆಯನ್ನು ಹೊದಿಸುತ್ತಿದ್ದಾರೆ.
ಆದರೆ ಹೊಯ್ಸಳ, ಮಯೂರವರ್ಮ ಮತ್ತಿತರೇ ಕನ್ನಡ ಕಲಿಗಳ ಜಾತಿಗಳು, ಇಂದು ಪ್ರಭಾವಶಾಲೀ ಜಾತಿಗಳಾಗಿಲ್ಲದ ಕಾರಣ ಅವರುಗಳನ್ನು ಕೇಳುವವರೇ ಇಲ್ಲದೇ ಅವರುಗಳೆಲ್ಲಾ "ಬಾರ್ ಅಂಡ್ ರೆಸ್ಟೋರಂಟ್"ಗಳಲ್ಲಿ (ಅವರವರ ಹೆಸರಿನ) ತಮ್ಮ ತಮ್ಮ ಗೋಳನ್ನು ಮರೆಯುತ್ತಿದ್ದಾರೆ! ಇಂದು ಗೌರವ, ಘೋಷಣೆಗಳ ಮರ್ಯಾದೆ ಏನಿದ್ದರೂ ಅವರವರ ಜಾತಿಬಲದ ಮೇಲೆಯೇ ಹೊರತು, ಮಹಾತ್ಮರುಗಳ ಸೇವಾ ಕೊಡುಗೆಗಳ ಬಲದ ಮೇಲಲ್ಲ. ಹಾಗಾಗಿಯೇ ಈ ಹೆಸರುಗಳಲ್ಲಿ ಬಲಶಾಲಿಯಾದ ಬಸವಣ್ಣನನ್ನು "ಇವ ನಮ್ಮವ, ಇವ ನಮ್ಮವ" ಎಂದು ಹಲವು ಜಾತಿಗಳು, ಬಸವನ ಜಾತಿಯ ಕುರಿತಾಗಿ ಸಂಶೋಧನೆಗಳನ್ನೂ ಮತ್ತು ಆ ಸಂಶೋಧನೆಗಳ ವಿರುದ್ಧ ಪ್ರತಿಭಟನೆಗಳನ್ನೂ ಮಾಡುತ್ತಿವೆ. ಇತಿಹಾಸ ಪ್ರಸಿದ್ಧರನ್ನು ಬಿಡಿ, ಇತ್ತೀಚಿನವರಾದ ದಾರ್ಶನಿಕ, ಕವಿ, ಜಾತಿಗಳನ್ನು ಮೆಟ್ಟಿನಿಂತ, "ಗುಡಿ, ಚರ್ಚು, ಮಸಜೀದಿಗಳ ಬಿಟ್ಟು ಹೊರಬನ್ನಿ"ರೆಂದು ಕರೆ ನೀಡಿದ, ಮಂತ್ರಮಾಂಗಲ್ಯದ ಸರಳ ವಿವಾಹ ಸೂತ್ರವನ್ನು ಅವಿಷ್ಕಾರಿಸಿದ ಕುವೆಂಪು ಅವರನ್ನೂ ಈ ಜನ, ಜಾತಿಯ ಶಾಲು ಹೊದಿಸಿ ಸನ್ಮಾನಿಸುತ್ತಿದ್ದಾರೆ!
ನಾವುಗಳು ವಿದ್ಯಾವಂತರಾದಷ್ಟೂ ಜಾತಿ ಜಾಗೃತರಾಗುತ್ತಿದ್ದೇವೆ. ಹೆಚ್ಚು ಹೆಚ್ಚು ಜಾತಿಗಳನ್ನು ಅವುಗಳ ಉಪಜಾತಿಗಳನ್ನು ಸಂಶೋಧಿಸಿ ಪ್ರಚಾರ ಪಡಿಸುತ್ತಿದ್ದೇವೆ. ನಮ್ಮ ಸಾಮಾಜಿಕ ಶಿಕ್ಷಣ ನಮ್ಮನ್ನು ಜಾತಿಪರಿಧಿಯ ಹೊರಕ್ಕೆ ತೆಗೆಯಲಾರದಷ್ಟು ಜಡ್ಡುಗಟ್ಟಿಹೋಗಿದೆ.
ಇನ್ನು ಕೆಂಪೇಗೌಡರ ತೆಲುಗು ಮನೆಮಾತಿನವರೆಂಬ ವಿಷಯವನ್ನು ಎತ್ತಿದ್ದುದು, ಈ ಓರಾಟಗಾರರ ದೆಸೆಯಿಂದಲೇ! ಕನ್ನಡ ಹೋರಾಟವೆಂದರೆ ಅನ್ಯಭಾಷಿಗರನ್ನು ಸದೆಬಡಿಯುವುದು ಎಂದೇ ವಿಶ್ಲೇಷಿಸಿಕೊಂಡಿರುವ ಇವರ ಕುರಿತಾಗಿ ಕಳೆದ ಅಕ್ಟೋಬರ್ ೨೦೦೭ ರ ಕನ್ನಡ ಕುರಿತಾದ ನನ್ನ ಲೇಖನಗಳನ್ನೂ ಮತ್ತು "ಯೇ ಕಚ್ಚ್ರಾ ಲೋಗ್ ಹೈ", ಹೊಗೇನಕಲ್ ಕುರಿತಾದ ಲೇಖನಗಳನ್ನು ಓದಿ, ನನ್ನ ಉದ್ದೇಶ ನಿಮಗೆ ತಿಳಿಯುತ್ತದೆ. ಅದೇ ರೀತಿ ಕನ್ನಡದ ಆರು ಜ್ಞಾನಪೀಠಿಗಳಲ್ಲಿ ಮೂವರು ಅನ್ಯಭಾಷಾ ಮನೆಮಾತಿನ ಕನ್ನಡ ಸಾಹಿತಿಗಳಿದ್ದಾರೆ. ಹಾಗಂತ ಅವರೆಲ್ಲಾ ಕನ್ನಡಿಗರಲ್ಲವೆಂಬುದು ಮೂರ್ಖತನದ ಪರಮಾವಧಿಯೇ ಸರಿ. ಮರಾಠಿ ಪುಲಕೇಶಿ ಕನ್ನಡಕ್ಕೆ ಪ್ರಾಮುಖ್ಯತೆ ಕೊಟ್ಟು ಕನ್ನಡವನ್ನು ಮೆರೆಸಿದಂತೆ, ತೆಲುಗು ಮಾತೃಭಾಷೆಯ ಕೃಷ್ಣದೇವರಾಯ ಖುದ್ದು ಕನ್ನಡ ಸಾಹಿತ್ಯಾಸಕ್ತನಾಗಿ ಕನ್ನಡ ಸಾಹಿತ್ಯವನ್ನು ಪ್ರೋತ್ಸಾಹಿಸಿ ಬೆಳೆಸಿದಂತಹ ಮಹತ್ವದ ಸಂಗತಿಯಂತೆ ಕನ್ನಡ/ಕರ್ನಾಟಕದ ಸಂಸ್ಕೃತಿಯ ರಾಯಭಾರಿಯಾಗಿ ದಾಖಲಿಸಲು ಕೆಂಪೇಗೌಡರ ಕುರಿತು ಯಾವುದೇ ಸಂಗತಿಗಳಿಲ್ಲ.
ಇದೆಲ್ಲಕ್ಕಿಂತ ಬಹುಮುಖ್ಯವಾಗಿ ಬೆಂಗಳೂರಿಗೆ ಈ ಮಟ್ಟದ ಒಂದು ವಿಮಾನ ನಿಲ್ದಾಣ ಬರಲು ಏಕಮಾತ್ರ ಕಾರಣ ಐ.ಟಿ. ಈ ಐ.ಟಿ. ಎಂಬುದು ಬೆಂಗಳೂರಿನಲ್ಲಿರದಿದ್ದರೆ ಹೇಗಿರುತ್ತಿತ್ತೆಂದು ನೀವೇ ಊಹಿಸಿ. ಇದಕ್ಕೆ ಮೂಲ ಕಾರಣರಾದ ಇನ್ಫೋಸಿಸ್ ನ ನಾರಾಯಣಮೂರ್ತಿಯವರ ಹೆಸರು ಕೂಡ ಸೂಕ್ತವೆನಿಸುತ್ತದೆ. ಅಥವಾ "ಕಮರ್ಷಿಯಲ್ ಬೆಂಗಳೂರಿಗರ" ರೀತಿಯಲ್ಲಿ ಯೋಚಿಸಿದರೆ ಇಂದಿನ ಬೆಂಗಳೂರು ವಿಮಾನ ನಿಲ್ದಾಣ ಅಮೇರಿಕಾದ ಕೊಡುಗೆ. ಅಮೇರಿಕಾದದಿಂದ ಹರಿದು ಬಂದ ಡಾಲರ್ ವ್ಯವಹಾರದ ಮೂಲವಾಗಿಯೇ ಈ ವಿಮಾನ ನಿಲ್ದಾಣ ನಿರ್ಮಾಣವಾದುದು. ಹಾಗಿದ್ದ ಮೇಲೆ ಅಮೇರಿಕಾ ಎಂಬ ಬೆಂಗಳೂರು ಗ್ರಾಹಕನನ್ನು ಸಂತೋಷಪಡಿಸಲು ’ಬಿಲ್ ಗೇಟ್ಸ್’ ಎಂದೋ ಕ್ಲಿಂಟನ್ ಎಂದೋ ಅಥವಾ ಮಾನಿಕಾ ಲೆವಿನ್ಸ್ಕಿ ಎಂದೂ ಕೂಡ ಹೆಸರಿಸಬಹುದಲ್ಲವೆ. ಅವರವರ ಭಾವಕ್ಕೆ, ಅವರವರ ತಾಳಕ್ಕೆ......!
ಇರಲಿ, ಬುದ್ದಿಜೀವಿಗಳು ಈ ಕರವೇ ಹೋರಾಟಗಾರರ ಕಾಲೆಳೆದು ಮೂದಲಿಸದೆ ತೆಪ್ಪಗೆ ಇವರೊಟ್ಟಿಗೆ ಅಷ್ಟೋ/ಇಷ್ಟೋ ಕೈಜೋಡಿಸಿ "ಅಳಿಲುಸೇವೆ" ಮಾಡಬೇಕೆಂದು ಕೂಡ ಕೆಲ ಓದುಗರು ಅಭಿಪ್ರಾಯಿಸಿದ್ದಾರೆ. ಕನ್ನಡ ಧ್ವಜ ಲೇಪಿತ, ಅಂಬೇಡ್ಕರ್ ಶೈಲಿಯ ಪೋಸಿನಲ್ಲಿ ನಿಂತಿರುವ ಕರವೇ ಅಧ್ಯಕ್ಷರ ಚಿತ್ರ ಲೇಪನವಿರುವ ಕರವೇ ಅಧ್ಯಕ್ಷರ ಸ್ಕಾರ್ಪಿಯೋ ವಾಹನ, ಗಾಂಧಿನಗರದ ಕಛೇರಿ ಮತ್ತು ಕನ್ನಡ ಹೋರಾಟವೇ ಫುಲ್ ಟೈಮ್ ಉದ್ಯೋಗವಾಗಿರುವ ಇವರ ಆದಾಯದ ಮೂಲ, ಕರವೇ ಸಂಸ್ಥೆಯ ಹೋರಾಟಕ್ಕೆ ಹಣ ಎಲ್ಲಿಂದ ಹರಿದು ಬರುತ್ತಿದೆ? ಕನ್ನಡಿಗರಾದ ನಾವು ನೀವೆಲ್ಲರೂ ನಮ್ಮ ತಿಂಗಳ ಸಂಬಳದಲ್ಲಿ ಒಂದು ದಿನದ ಸಂಬಳವನ್ನು ಕರವೇಗೆ ಕೊಡುತ್ತಿದ್ದೇವೆಯೇ? ಎಂದೆಲ್ಲ ಪ್ರಾಮಾಣಿಕ ತನಿಖೆಯಾದರೆ ಗಾಂಧಿನಗರದಲ್ಲಲ್ಲಾ, ಪರಪ್ಪನ ಅಗ್ರಹಾರದಲ್ಲಿರಬೇಕಾಗುತ್ತದೆ, ಸ್ವಾಮಿ! ಕನ್ನಡ/ಕರ್ನಾಟಕವೆಂಬುದು ಇವರಿಗೆ ಒಂದು ರಕ್ಷಾ ಕವಚವಷ್ಟೇ. ಈ ಹುಲುಸಾದ ಕನ್ನಡ ಬೆಳೆಯ ಸಂಕ್ರಮಣಕ್ಕಾಗಿಯೇ ಇದು ಎರಡು ಬಣವಾಗಿದ್ದೆಂದು ನಮ್ಮ ವಿದ್ಯಾವಂತ ಸಮಾಜಕ್ಕೆ ಅರಿವಿಲ್ಲವೇ? ಭಾರತದಲ್ಲಿನ ಹೋರಾಟಗಳ ವ್ಯವಹಾರಜ್ಞಾನ, ನನ್ನಂಥಹ ನಯಾಗರ ನಾಡಿನ "ಸೋಷಿಯಲ್ ಲೈಫ್" ಇಲ್ಲದೇ ಬಳಲುತ್ತಿರುವವನಿಗೇ ಕಾಣುತ್ತಿರಬೇಕಾದರೆ, ಭಾರತದಲ್ಲಿ ಸದಾ "ಸೋಷಿಯಲ್ ಲೈಫ್"ನಲ್ಲಿ ಮುಳುಗಿರುವ, ಬೆಂಗಳೂರಿನಲ್ಲೇ ವ್ಯವಹರಿಸುತ್ತ ನಿತ್ಯ ಕಾವೇರೀ ನೀರು ಕುಡಿಯುವ ಹಲವರಿಗೆ ಈ ವ್ಯವಹಾರಜ್ಞಾನ ಅರ್ಥವಾಗದಿದ್ದುದಕ್ಕೇ ಏನು ಹೇಳಬೇಕೋ ನನಗೆ ತೋಚುತ್ತಿಲ್ಲ. ಬಹುಶಃ, ವಾಹನ ಚಾಲನೆ, ಲೈಟ್ ಸ್ವಿಚ್ ಇವುಗಳೆಲ್ಲಾ ಅಮೇರಿಕಾದಲ್ಲಿ ಭಾರತದ ತದ್ವಿರುದ್ಧವಾಗಿರುವಂತೆ "ದೂರದ ಬೆಟ್ಟ, ನುಣ್ಣಗೆ" ಎಂಬ ನಮ್ಮ ನಾಣ್ಣುಡಿ ಕೂಡ ನನಗೆ ವ್ಯತಿರಿಕ್ತವಾಗಿ ದೂರದ ಸಂಗತಿಗಳನ್ನು ಭೂತಾಕಾರವಾಗಿ, ಕ್ಷಕಿರಣಗಳ ರೂಪದಲ್ಲಿ ಕಾಣಿಸುವಂತೆ ಕೆಲಸ ಮಾಡುತ್ತಿದೆಯೇನೋ!
ಇನ್ನು ಹಲವರು ಕರವೇಯ ಹದಿಮೂರು ಅಂಶಗಳಲ್ಲಿ ಕೊನೆಯದಾದ ಈ ಹೆಸರಿಸುವ ಅಂಶವನ್ನು ಬೇಕೆಂದೇ ಎತ್ತಿ ನನ್ನ ಬಾಯ್ಚಟವನ್ನು ತೀರಿಸಿಕೊಂಡು ನನ್ನನ್ನು ನಾನೇ ಒಬ್ಬ ಬುದ್ದಿಜೀವಿ ಎಂದು ಮೆರೆಸಿಕೊಂಡಿದ್ದೇನೆಂದು ಕೋಪವನ್ನು ತೋರಿದ್ದಾರೆ. ಇದನ್ನು "ಜಾಣಕುರುಡು", "ಜಾಣಕಿವುಡು" ಎನ್ನದೇ ಇನ್ನೇನು ಹೇಳಬೇಕೋ ತಿಳಿಯದು. ಕರವೇ ಹೋರಾಟದ ಕುರಿತಾಗಿ ಬಂದಿದ್ದ ಪತ್ರಿಕಾ ವರದಿಗಳನ್ನು ಓದಿ ನೋಡಿ, ಈ ಹೆಸರಿನ ವಿಷಯವನ್ನು ಯಾರು ಏಕಾಂಶವಾಗಿ ಮಾಡಿದರೆಂದು! ಅಂದು ಸದುದ್ದೇಶವೆಂದುಕೊಂಡು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ ನನ್ನ ಅನೇಕ ಮಿತ್ರರು ನಂತರ ಪಾಶ್ಚಾತ್ತಾಪ ಪಟ್ಟಿದ್ದಾರೆ. "ಅಂದು ಕೆಂಪೇಗೌಡ, ಇಂದು ನಾರಾಯಣಗೌಡ" ಎಂಬ ಮುಗಿಲು ಮುಟ್ಟಿತ್ತಿದ್ದ ಅಂದಿನ ಘೋಷಣೆಗಳು ಏನು ಸಾರಿದವು? ಅದನ್ನೇ ನಾನು "ಮತ್ತೊಬ್ಬ ಒಕ್ಕಲಿಗ ನಾಯಕನ ಉದಯ" ಎಂದು ಕರೆದಿದ್ದು. ಯಾವಾಗ ತಮ್ಮ ಬಾಣ ತಮಗೇ ತಿರುಗಿ ಬರುತ್ತಿದೆಯೆಂದು ತಿಳಿಯಿತೋ ಕೂಡಲೇ ನಾರಾಯಣಗೌಡರು "ಇದೆಲ್ಲಾ ಪತ್ರಿಕೆಯವರ ಹುನ್ನಾರ"ವೆಂದು ಹೇಳಿಕೆ ಕೊಟ್ಟರು. ಅಂದರೆ ಮೇಲಿನ ಘೋಷಣೆಗಳನ್ನು ಮಾಡಿದ್ದುದು ಪತ್ರಕರ್ತರೇ? ಹಾಗಾದರೆ ಕೆಂಪೇಗೌಡರಿಗೆ ನಾರಾಯಣಗೌಡರು ಸರಿಸಮಾನರೇ? ಇದಕ್ಕೆ ಪೂರಕವಾಗಿ ನನ್ನ ಯುವ ಮಿತ್ರ ಸುಪ್ರೀತ್ ಅವರ ಅಭಿಪ್ರಾಯವನ್ನು ಗಮನಕ್ಕೆ ಇಲ್ಲಿ ಕೊಟ್ಟಿದ್ದೇನೆ. ದಯವಿಟ್ಟು ಪರಾಂಭರಿಸಿ.
ಸ್ವಾತಂತ್ರ್ಯ ಹೋರಾಟದ ಫಲಕ್ಕಿಂತ ಅದರ ಬೈಪ್ರಾಡಕ್ಟ್ ಗಳಾದ ಜಾತೀಯತೆ, ಓಲೈಕೆಗಳ ದೆಸೆಯಿಂದಾಗಿ ಭವ್ಯ ಭಾರತದ ಇತಿಹಾಸ ಕುಲಗೆಟ್ಟು ಹೋಗುತ್ತಿದೆ. ವಿದೇಶೀ ಆಳ್ವಿಕೆಯನ್ನು ವಿರೋಧಿಸಿ ಸ್ವಾತಂತ್ರ್ಯ ಗಳಿಸಿದ ಭಾರತ, ತನ್ನ ನೈಜ ಇತಿಹಾಸವನ್ನರಿಯಲು ವಿದೇಶೀ ಇತಿಹಾಸಕಾರರ ಮೊರೆ ಹೋಗಬೇಕೇನೋ!
ಅಣಕ:
ಒಂದೊಮ್ಮೆ ಬೆಂಗಳೂರಿನಲ್ಲಿದ್ದ ಡ್ಯಾನ್ಸ್ ಬಾರಿನಲ್ಲಿ ಕನ್ನಡ ಓರಾಟಗಾರರು "ಎಲ್ಲೋ ಜೋಗಪ್ಪ ನಿನ್ನರಮಾನೆ" ಎಂಬ ಕನ್ನಡ ಪಾಪಿ (ಇಂಗ್ಲಿಷ್ ಪಾಪ್ ನ ಕನ್ನಡ ರೂಪಾಂತರ) ಸಂಗೀತವನ್ನು ಕೇಳುತ್ತ ನೃತ್ಯವನ್ನು ನೋಡುತ್ತಿದ್ದರು. ಬೆಚ್ಚನೆಯ ನೃತ್ಯಕ್ಕೆ ಜಾಗೃತಗೊಂಡ ಓರಾಟಗಾರನೊಬ್ಬ ತನ್ನ ಓರಾಟದ ಧಣಿಗೆ "ಅಣ್ಣಾ, ಈ ಡ್ಯಾನ್ಸ್ ಬಾರಿಗೆ ’ಸಿಂಡ್ರೆಲ್ಲಾ’ ಅಂತ ಇಂಗ್ಲಿಸ್ ಎಸ್ರಿಟ್ಟವ್ರೇ! ಒಂದು ಸ್ಕೆಚ್ ಆಕಿ ’ನೃತ್ಯರಾಣಿ ಶಾಂತಲೆ’ ಅಂತ ಕನ್ನಡಾ ಎಸ್ರು ಮಡಗ್ಸದಾ?" ಎಂದು ಪ್ರಶ್ನಿಸಿದನು.
"ಅದ್ಯಾರ್‍ಲಾ ಶಾಂತ್ಲಾ?"
"ಯಿಷ್ಣುವರ್ಧನನ ಎಣ್ತಿ, ಒಳ್ಳೇ ಡ್ಯಾನ್ಸರ್ ಆಗಿದ್ಲಂತೆ, ಅಂಗಂತ ಯಾವ್ದೋ ಸಿನುಮಾದಾಗೆ ನೋಡಿದ್ದೆ ಕಣಣ್ಣಾ"
"ಸಾಅಸಸಿಮ್ಮ ಯಿಷ್ಣುವರ್ಧನನ ಎಣ್ತಿ, ಭಾರ್‍ತಿ ಕಣಲೇ ಅಲ್ಕ. ಅಣ್ಣಾವ್ರ ಜತೆ ಭಾರೀ ಕುಣೀತಿದ್ಲು. ಅವ್ಳೆಸ್ರಿಟ್ರೆ ಎಡವಟ್ಟಾಯ್ತದೆ."
"ಯೇ, ಅಷ್ಟೂ ಗೊತ್ತಿಲ್ವ ನಂಗೆ. ಇದು ಅವನ್ಯಾವನೊ ಯಿಷ್ಣುವರ್ಧನ ಅನ್ನ ರಾಜನಿದ್ದ್ನಂತೆ. ಅವನೆಂಡ್ತಿ"
"ಔದಾ, ಅಂಗಾರೆ ಆ ಎಸ್ರು ಮಡುಗ್ಸ್ ಬೇಕಾದ್ದೆ. ಸ್ಕೆಚ್ ರೆಡಿ ಮಾಡು"
ಸದ್ಯ, ನೃತ್ಯರಾಣಿ ಶಾಂತಲೆಯ ಅದೃಷ್ಟ, ಡ್ಯಾನ್ಸ್ ಬಾರುಗಳು ಬಂದ್ ಆಗಿವೆ!
ಸುಪ್ರೀತ್ ಅವರ ಅಭಿಪ್ರಾಯ:
"ರವಿಯವರೇ,ನಿಮ್ಮ ಹಿಂದಿನ ಲೇಖನಕ್ಕೆ ನಾನು ಬರೆದ ಪ್ರತಿಕ್ರಿಯೆಯಲ್ಲಿ ಕರವೇ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದ ಹಾಗೆ ಮಾಡುತ್ತಿರುವ ಹೋರಾಟಗಳಲ್ಲಿ ಉಳಿದೆಲ್ಲಾ ಬೇಡಿಕೆಗಳನ್ನು ಬಿಟ್ಟು ಕೇವಲ ಕೆಂಪೇಗೌಡರ ಹೆಸರಿಡಬೇಕು ಎಂಬ ಬೇಡಿಕೆಯನ್ನು ಹಿಡಿದುಕೊಂಡು ಟೀಕಿಸಿದ್ದರ ವಿರುದ್ಧ ನನ್ನ ಅಭಿಪ್ರಾಯ ದಾಖಲಿಸಿದ್ದೆ. ಅಲ್ಲದೆ ಬಹಳಷ್ಟು ಮಂದಿ ಕನ್ನಡಿಗರು ಹೋರಾಟಗಳನ್ನು ಸಾಂಕೇತಿಕ ಎಂದು ಭಾವಿಸಿ ನಿಜವಾಗಿ ಬೀದಿಗಿಳಿಯಬೇಕಾದ ಸಂದರ್ಭದಲ್ಲೂ ಮೌನರಾಗಿರುವ ಸ್ವಭಾವದವರಾದ್ದರಿಂದ ಅವರಿಗೆ ಕರವೇಯಂಥ ಸಂಘಟನೆಗಳು ಪುಂಡರ ಗುಂಪಾಗಿ ಕಾಣುತ್ತದೆ ಎಂದು ಚಿಂತಿಸಿ ಹಾಗೆ ಬರೆದಿದ್ದೆ.ಆದರೆ ಯಾವಾಗ ಪತ್ರಿಕೆಗಳಲ್ಲಿ ಜವರೇಗೌಡರು, ಒಕ್ಕಲಿಗೆ ಮಠದ ಸ್ವಾಮೀಜಿ ಹಾಗೂ ಕರವೇ ‘ಕೆಂಪೇಗೌಡರ ಹೆಸರಿಡದಿದ್ದರೆ ನಿಲ್ದಾಣದ ಉದ್ಘಟನೆಗೆ ಬಿಡುವುದಿಲ್ಲ’ ಎಂದು ಆರ್ಭಟಿಸಿರುವ ವರದಿ ಓದಿದೆನೋ ಆಗ ನಿಮ್ಮ ಲೇಖನ ಚೆನ್ನಾಗಿ ಅರ್ಥವಾಯಿತು! ಈ ಲೇಖನದಲ್ಲಿ ನೀವು ವಿವರಿಸಿರುವ ಹಾಗೆ ಕನ್ನಡಿಗರಿಗೆ ಪ್ರಾತಿನಿಧ್ಯ ಮುಂತಾದ ಸಂಗತಿಗಳೆಲ್ಲಾ ನಡೆಯಬೇಕಾದ್ದು ಸರಕಾರದ ಮಟ್ಟದಲ್ಲಿ. ಅಲ್ಲಿ ತೆರೆ ಮರೆಯ ಕೆಲಸ ನಡೆಯುವಾಗ ಮೌನದಿಂದಿರುವ ಹೋರಾಟಗಾರರು ಭಾವುಕವಾಗಿ ಜನರನ್ನು ಕೆರಳಿಸಲು ಹೊರಡುವುದು ನಿಜಕ್ಕೂ ಆಕ್ಷೇಪಾರ್ಹ. ಸುಪ್ರೀತ್"