ಕ್ರಿ.ಶ. ೩೪೫ರಲ್ಲಿ ಮಯೂರ ಶರ್ಮನು ಸ್ಥಾಪಿಸಿದ ಕದಂಬರ ವಂಶದ ನಾಲ್ಕನೇ ತಲೆಮಾರಿನ ರಾಜನಾಗಿದ್ದ ಶಿವಕೋಟಿ, ಜೈನಧರ್ಮದ ಅನುಯಾಯಿಯಾಗುವುದರೊಂದಿಗೆ ಪ್ರವರ್ಧಮಾನಕ್ಕೆ ಬಂದ ಜೈನ ಧರ್ಮ, ಮುಂದೆ "ಆಯ್ ಹೊಳೆ " ಎಂದ ಆರನೇ ಶತಮಾನದ ಚಾಲುಕ್ಯರು, ಏಳನೇ ಶತಮಾನದ ರಾಷ್ಟ್ರಕೂಟರಿಂದ ನಂತರ ಹನ್ನೆರಡನೇ ಶತಮಾನದ "ಹೊಯ್ ಸಳ"ನ ಹೊಯ್ಸಳರವರೆಗೆ ಕರ್ನಾಟಕದಲ್ಲಿ ಮೆರೆದಿದ್ದು ಜೈನ ಧರ್ಮ!
ಮೂರನೇ ಶತಮಾನದಿಂದ ಹತ್ತನೇ ಶತಮಾನದವರೆಗೆ ಕರ್ನಾಟಕದಲ್ಲಿ ಜೈನಧರ್ಮ ಅಕ್ಷರಶಃ ಎಲ್ಲೆಡೆ ಪಸರಿಸಿತ್ತು. ತನ್ನ ಪೂರ್ವಜರು ಹರಿಸಿದ್ದ ರಕ್ತದ ಕೋಡಿಯ ಪಾಪ ಪ್ರಾಯಶ್ಚಿತ್ತವಾಗಿ ಕದಂಬರ ಶಿವಕೋಟಿ ಜೈನಧರ್ಮವನ್ನು ಆಲಂಗಿಸಿದಂದಿನಿಂದ ಆರಂಭಗೊಂಡ ಜೈನ ಧರ್ಮದ ಪ್ರವರ್ಧಮಾನ, ಹೆಮ್ಮರವಾಗಿ ಬೆಳೆದು ಕರ್ನಾಟಕದಾದ್ಯಂತ ಪಸರಿಸಿ, ಏಳು ಶತಮಾನಕ್ಕೂ ಹೆಚ್ಚು ಕರ್ನಾಟಕವನ್ನು ಆಳಿದ್ದು ನಿಜ. ಕಾಲಾನುಕ್ರಮವಾಗಿ ಎಲ್ಲ ಧರ್ಮಗಳ ಹಾಗೆ ಜೈನ ಧರ್ಮ ಕೂಡಾ ಕೆಲವು ಪಟ್ಟಭದ್ರಹಿತಾಸಕ್ತಿಗಳ ದಾಳವಾಗಿ ನಲುಗುತ್ತಾ, ದ್ವೇಷವನ್ನು ಬೆಳೆಸಿಕೊಳ್ಳುತ್ತಾ, ಹೊಯ್ಸಳರ ರಾಣಿ ಶಾಂತಲೆ ಸಲ್ಲೇಖನಾ ವೃತ ಕೈಗೊಂಡು ಜೀವ ತೊರೆಯುವಲ್ಲಿಗೆ ಜೈನ ಧರ್ಮ ಕೂಡಾ ಸಲ್ಲೇಖನಾ ವೃತದಂಚಿಗೆ ಬಂದು ನಿಂತಿತ್ತು.
ರಾಷ್ಟ್ರಕೂಟರ ನಂತರದ ಮತ್ತು ಹೊಯ್ಸಳರ ಕಾಲದ ನಡುವೆ ವೀರಶೈವತ್ವ ಪ್ರವರ್ಧಮಾನಕ್ಕೆ ಬಂದಿತು. ಇದು ದಿಢೀರನೆ ಬಂದ ಬೆಳವಣಿಗೆಯಲ್ಲ. ಕರ್ನಾಟಕದಾದ್ಯಂತ ಜೈನ ಬಸದಿಗಳು ಎಲ್ಲೆಲ್ಲೂ ಗೋಚರಿಸುತ್ತಿದ್ದವು. ಆದಿಕವಿ ಪಂಪ, ಪೊನ್ನ, ರನ್ನ, ಚಾವುಂಡರಾಯರೆಲ್ಲ ಜೈನರು. ಅಂದಿನ ಸಾಹಿತ್ಯ, ಕಲೆಗಳ ಎಲ್ಲಾ ಪ್ರಾಕಾರಗಳಲ್ಲೂ ಜೈನ ಧರ್ಮ ಹಾಸುಹೊಕ್ಕಾಗಿದ್ದಿತು. ಪ್ರೊ. ಕಲ್ಬುರ್ಗಿಯವರು ಯಕ್ಷಗಾನ ಕೂಡಾ ಜೈನ ಯಕ್ಷಿಣಿ ಕಲೆ ಎಂದೇ ಪ್ರತಿಪಾದಿಸುತ್ತಿದ್ದರು. ಆದರೆ ರಾ ಷ್ಟ್ರಕೂಟರ ಕೊನೆಯ ಆಡಳಿತದ ಕಾಲದಿಂದ ಕ್ರಮೇಣವಾಗಿ ಜೈನಧರ್ಮ ಆಳುವವರ, ಉಳ್ಳವರ ಧರ್ಮವಾಗಿ ಬದಲಾಗಿತ್ತು.
ಅಂದಿನ ಜನರಲ್ಲಿ ಧರ್ಮದ ಬಗೆಗೆ ದ್ವೇಷವಿರದಿದ್ದರೂ ಆಳುವವರ ಮತ್ತು ಅಳಿಸಿಕೊಳ್ಳುವವರ ನಡುವಿನ ಕಂದಕ ಅಗಲವಾಗುತ್ತಾ ಸಾಗಿತ್ತು. ಇದು ಧರ್ಮಗಳ ಸಂಘರ್ಷಕ್ಕಿಂತ ಆಳುವವರ ಮತ್ತು ಅಳಿಸಿಕೊಳ್ಳುವವರ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿತ್ತು. ಜೈನಧರ್ಮ ರಾಜರ, ರಾಜಾಶ್ರಯದ, ಶ್ರೀಮಂತರ, ಬುದ್ದಿಜೀವಿಗಳ, ಪಂಡಿತರ ಧರ್ಮವಾಗಿ ಸೀಮಿತಗೊಂಡಿತ್ತು. ಜಗತ್ತಿನ ಎಲ್ಲಾ ಧರ್ಮಗಳಂತೆಯೇ ಜೈನ ಧರ್ಮ ಕೂಡ ತನ್ನ ವಿಸ್ತರಣೆಯನ್ನು ಬಯಸುತ್ತಿತ್ತು. ಆ ವಿಸ್ತರಣೆಯ ಆಸೆ ಧಾರ್ಮಿಕ ಪಕ್ಷಪಾತಕ್ಕೆ ಎಡೆ ಮಾಡಿಕೊಟ್ಟಿತ್ತು. ತುಳಿತಕ್ಕೊಳಗಾಗಿ ದ್ದ ದುಡಿಯುವ ವರ್ಗದ ಸಾಮಾನ್ಯಪ್ರಜೆಗಳು ಕ್ರಾಂತಿಕಾರ ಬದಲಾವಣೆಗಾಗಿ ಚಡಪಡಿಸುತ್ತಿದ್ದರು. ಅವರ ದನಿಗೆ ಶಕ್ತಿಯಾಗಿ ನಿಂತವರು ವೀರಶೈವರು!
ತಮ್ಮ ಪಂಥದ ವಿಸ್ತರಣೆಗೆ ಮಾರ್ಗಗಳನ್ನು ಹುಡುಕುತ್ತಿದ್ದ ವೀರಶೈವರಿಗೆ ಈ ಸಂಘರ್ಷ ಒಂದು ಬೇರುಮಟ್ಟದ ಅತಿ ದೊಡ್ಡ ವಿಸ್ತರಣೆಯ ಅವಕಾಶವಾಗಿ ಕಂಡಿತು. ಇದೇ ಭಾರತದ ಪ್ರಪ್ರಥಮ ರಾಜಪ್ರಭುತ್ವದಿಂದ ಪ್ರಜಾಪ್ರಭುತ್ವದೆಡೆಗೆ ನಡೆದ ಕ್ರಾಂತಿ ಎನ್ನಬಹುದು! ಶೋಷಿತರ ಹೆಪ್ಪುಗಟ್ಟಿದ್ದ ಕಿಚ್ಚು ಧರ್ಮದ ರೂಪವಾಗಿ ಆಸ್ಫೋಟಗೊಂಡಿತ್ತು.
ಒಂಬತ್ತನೇ ಶತಮಾನದ ಕೊನೆಯಲ್ಲಿ ಆಗಿಹೋಗಿರಬಹುದಾದ, ಇಂದು ವೀರಶೈವ ಧರ್ಮಸಂಸ್ಥಾಪಕರೆನ್ನಲಾಗುವ ರೇಣುಕರು ಜೈನಧರ್ಮದ ವಿರುದ್ಧ ದಂಗೆದ್ದ ಕ್ರಾಂತಿಯ ಉದ್ಭವ ನಾಯಕರುಗಳಾಗಿ ಹೊಮ್ಮಿದರು. ಇದೊಂದು ಜನಸಮೂಹ ಕ್ರಾಂತಿಯಾದ್ದರಿಂದಲೇ ಇಲ್ಲಿ ನಾಯಕ ಯಾ ಧರ್ಮಸಂಸ್ಥಾಪಕ ಒಬ್ಬನಲ್ಲ! ಅಷ್ಟಕ್ಕೂ ಇಲ್ಲಿ ಧರ್ಮಸಂಸ್ಥಾಪನೆಯಾಗಲಿಲ್ಲ. ಆಗಲೇ ಇದ್ದ ವೀರಶೈವ ಯಾ ಶೈವಧರ್ಮಕ್ಕೆ ಕೆಲ ಪರಿಷ್ಕರಣೆಯಾಗಿ ಸಸ್ಯಾಹಾರ, ಲಿಂಗಾಧಾರಣೆ, ಆಚಾರ, ಮುಂತಾಗಿ ಅನಾವರಣಗೊಂಡಿತೆಂಬುದು ನನ್ನ ಅಭಿಪ್ರಾಯ. ಇವರು ಲಿಂಗದಿಂದ ಉದ್ಭವರಾದರೆನ್ನಲಾದ ಸ್ಥಳ ಕೊಲ್ಲಿಪಾಕಿ, ಇಂದಿನ ಕೊಳನುಪಾಕ, ಇಂದಿಗೂ ಜೈನರ ಒಂದು ಪ್ರಮುಖ ಧಾರ್ಮಿಕ ಸ್ಥಳ! ರೇಣುಕರ ಸಮಕಾಲೀನರೆನ್ನಬಹುದಾದ ಪೂರ್ವಕಾಲೀನ ಶರಣರಾದ ಓಹಿಲ, ಉದ್ಭಟ , ಕೆಂಭಾವಿ ಭೋಗಯ್ಯ, ಮುಂತಾದ ಶರಣರು ರೇಣುಕರು ಹಚ್ಚಿದ ಈ ಕ್ರಾಂತಿಯನ್ನು ಪಸರಿಸುವಲ್ಲಿ ಮಹತ್ತರ ಕೊಡುಗೆಯನ್ನು ನೀಡಿದ್ದಾರೆ. ಈ ಪೂರ್ವಕಾಲೀನ ಶರಣರನ್ನು ಜೇಡರ ದಾಸಿಮಯ್ಯ (ಕ್ರಿ.ಶ ೯೮೦-ಕ್ರಿ.ಶ. ೧೦೪೦) ತನ್ನ ವಚನಗಳಲ್ಲಿ ಕೊಂಡಾಡಿದ್ದಾನೆ. ಹಾಗಾಗಿ ಇಂದಿನ ರೂಪದ ವೀರಶೈವ/ಲಿಂಗಾಯತ ಧರ್ಮ ಯಾ ಪಂಥದ ಆರಂಭವನ್ನು ನಿಶ್ಚಿತವಾಗಿ ಹತ್ತನೇ ಶತಮಾನಕ್ಕೆ ತೆಗೆದುಕೊಂಡು ಹೋಗಬಹುದು.
ಇನ್ನು ಹನ್ನೆರಡನೇ ಶತಮಾನದಲ್ಲಿ ಬಸವಣ್ಣ, ಅಲ್ಲಮ, ಅಕ್ಕಮಹಾದೇವಿ, ಮುಂತಾದ ಸಮಕಾಲೀನ ಶರಣರು ಈ ವೀರಶೈವ ಕ್ರಾಂತಿಯನ್ನು ಎರಡನೇ ಘಟ್ಟಕ್ಕೆ ಕೊಂಡೊಯ್ದರು. ಹತ್ತನೇ ಶತಮಾನದಲ್ಲಿ ನಡೆದ ವೀರಶೈವ ಕ್ರಾಂತಿಯಾಗಲೇ ಧಾರ್ಮಿಕ ಪರಿಷ್ಕರಣೆ, ರಕ್ತಕ್ರಾಂತಿಯೂ ಸೇರಿದಂತೆ ಕೆಲವು ಜನಕ್ರಾಂತಿಗೆ ಬೇಕಾದ ಪೂರಕ ತತ್ವಗಳನ್ನು ತಿಳಿಸಿಕೊಟ್ಟಿತ್ತು. ಅದೇ ತತ್ವಗಳನ್ನು ಬುನಾದಿಯಾಗಿಟ್ಟುಕೊಂಡು, ಅಂದಿನ ಕಾಟಘಟ್ಟಕ್ಕೆ ಬೇಕಿದ್ದ ಕೆಲ ಬದಲಾವಣೆಗಳೊಂದಿಗೆ ಕಲ್ಯಾಣಕ್ರಾಂತಿ ಜರುಗಿತು. ಇದು ಕೂಡ ಜೈನ ಧರ್ಮದ ಉಳ್ಳವರ ವಿರುದ್ಧವಾಗಿ! ಇದನ್ನು ಭಾರತದ ರಾಜಪ್ರಭುತ್ವದಿಂದ ಪ್ರಜಾಪ್ರಭುತ್ವದೆಡೆಗಿನ ಎರಡನೇ ಕ್ರಾಂತಿಯೆನ್ನಬಹುದು.
ಈ ಎರಡೂ ಕ್ರಾಂತಿಗಳ ಕಾಲಘಟ್ಟದಲ್ಲಿ ಸಾಕಷ್ಟು ಜೈನಬಸದಿಗಳು ಶೈವಮಂದಿರಗಳಾಗಿ ಬದಲಾದವು. ಸಾಕಷ್ಟು ಜೈನರ ಹತ್ಯೆಯಾಯಿತು. ವರ್ಷಗಳ ಹಿಂದೆ ಅಣ್ಣಿಗೇರಿಯಲ್ಲಿ ಸಿಕ್ಕಿದ್ದ ತಲೆಬುರುಡೆಗಳು ಈ ಕ್ರಾಂತಿಯಲ್ಲಿ ಹತ್ಯೆಯಾಗಿದ್ದ ಜೈನರ ತಲೆಬುರುಡೆಗಳಿರಬಹುದೆಂದು ಪ್ರೊ. ಕಲ್ಬುರ್ಗಿಯವರು ಸಂಶಯಿಸಿದ್ದರು. ಆ ಕ್ರಾಂತಿಯಲ್ಲಿ ಶೈವರಷ್ಟೇ ಅಲ್ಲದೆ ಇನ್ನಿತರೇ ಪಂಥದ ಅವಕಾಶವಾದಿಗಳು ಕೂಡ ಬಸದಿಗಳನ್ನು ಆಕ್ರಮಿಸಿಕೊಂಡು ತಮ್ಮ ತಮ್ಮ ದೇವರುಗಳನ್ನು ಸ್ಥಾಪಿಸಿಕೊಂಡರು. ಇದೇ ತೆರನಾಗಿ ಜೈನ ಯಕ್ಷಿಣಿಯರ ಸ್ಥಳಗಳಾದ ಚಂದ್ರಗುತ್ತಿ, ಸವದತ್ತಿಯಂತಹ ಸ್ಥಳಗಳಲ್ಲಿ ರೇಣುಕೆ, ಎಲ್ಲಮ್ಮ, ಮುಂತಾದ ದೇವತೆಗಳು ಸ್ಥಾಪಿಸಲ್ಪಟ್ಟವು.ಅದೇ ರೀತಿ ಹೊಯ್ಸಳ, ರಾಷ್ಟ್ರಕೂಟ, ಚಾಲುಕ್ಯ, ಕದಂಬರವಾಸ್ತುಶಿಲ್ಪಗಳ ಮಂದಿರಗಳಲ್ಲಿಯೂ ಶೈವ, ವೈಷ್ಣವ ದೇವರುಗಳನ್ನು ಕಾಣಬಹುದು. ಇಲ್ಲಿ ಆಯಾಯ ದೇವಸ್ಥಾನ ಮತ್ತು ಅಲ್ಲಿ ಪ್ರತಿಷ್ಠಾಪಿಸಿರುವ ಗರ್ಭಗುಡಿ ವಿಗ್ರಹಗಳ ಕಾರ್ಬನ್ ಡೇಟಿಂಗ್ ನಡೆಸಿದರೆ ಖಚಿತ ಮಾಹಿತಿ ದೊರೆಯುತ್ತದೆ. ಭಾರತೀಯ ಐತಿಹಾಸಿಕ ಉತ್ಖನನ ಇಲಾಖೆಗಳಾಗಲಿ, ಸರ್ಕಾರವಾಗಲಿ ಇಂತಹ ವೈಜ್ಞಾನಿಕ ಸಂಶೋಧನೆಯನ್ನು ಕೈಗೊಳ್ಳಬಲ್ಲುದೇ?!
ಇನ್ನು ವಿಜಯನಗರ ಸಾಮ್ರಾಜ್ಯದ ಕಾಲಘಟ್ಟದಲ್ಲಿ ಹಲವು ವೀರಶೈವ ಕವಿಗಳು ರಾಯನ ಕೃಪೆಯಿಂದ ಮೈಸೂರು, ಬೆಂಗಳೂರು, ಮಲೆನಾಡು ಪ್ರದೇಶದಲ್ಲಿ ಸಾಕಷ್ಟು ಜನರನ್ನು ವೀರಶೈವಿಗರನ್ನಾಗಿಸಿದರು. ಅರೆಮಲೆನಾಡಿನ ಕೆಲವರು ಎಡೆಯೂರು ಸಿದ್ಧಲಿಂಗೇಶ್ವರರ ಕಾಲದಲ್ಲಿಯೂ ವೀರಶೈವರಾಗಿ ಮತಾಂತರಗೊಂಡಿದ್ದರು. ಆದರೆ ಅತಿ ಹೆಚ್ಚು ಮತಾಂತರಗೊಂಡದ್ದು ಕೃಷ್ಣದೇವರಾಯನ ಕಾಲದಲ್ಲಿ. ಈಗಲೂ ಇಲ್ಲಿ "ಗೌಡ ಲಿಂಗಾಯತ", "ಕುರುಬ ಲಿಂಗಾಯತ" ಎಂದು ವೀರಶೈವಿಗರು ತಮ್ಮನ್ನು ಗುರುತಿಸಿಕೊಳ್ಳುತ್ತಾರೆ.
ಈ ಇತಿಹಾಸ ಗೊತ್ತಿರುವ ಪಂಡಿತರು ಇದ್ದಾರೋ ಇಲ್ಲವೋ ತಿಳಿಯದು. ಈ ವಿಷಯದ ಕುರಿತಾಗಿ ನಿಖರವಾಗಿ ಹೇಳಬಲ್ಲ ಪ್ರೊ. ಕಲ್ಬುರ್ಗಿ ಕೊಲೆಯಾಗಿ ಹೋಗಿದ್ದಾರೆ. ಆದರೆ ಅವರು ತಮ್ಮ ಯಾವುದೋ ವೈಯುಕ್ತಿಕ ಅಭಿಪ್ರಾಯಕ್ಕೆ ಶರಣಾಗಿ ಈ ಹಿಂದೆಯೇ ಬಸವಧರ್ಮವೇ ಲಿಂಗಾಯತ ಎನ್ನುವ ಲಾಬಿ ಪರವಾಗಿ ನಿಂತಿದ್ದರಿಂದ ಅವರ ನಿಲುವುಗಳ ಗುರಿಯಾಗಿ ಕೆಲವರಿಗೆ ಅವರ ಸಂಶೋಧನೆ ಪ್ರಶ್ನಾರ್ಹವೆನಿಸಬಹುದು. ಇನ್ನು ಪ್ರೊ. ಚಿದಾನಂದಮೂರ್ತಿಗಳು ಈ ಕುರಿತಾಗಿ ನಿಷ್ಚಿತವಾಗಿ ಅಭಿಪ್ರಾಯ ಮಂಡಿಸಲು ಮಾತೆತ್ತಿದರೆ ಜನರು ಅವರನ್ನು "ಚಡ್ಡಿ"ಎಂದು ಮೂದಲಿಸಿ ಬಾಯಿ ಮುಚ್ಚಿಸುತ್ತಿದ್ದಾರೆ. ಇನ್ನುಳಿದ ಸಂಶೋಧಕ ಪಂಡಿತರು ಇದ್ದರೂ ಕೂಡಾ ಒಂದು ಗುಂಪಿಗೆ ಶರಣಾಗಿ ಜಾಣಮರೆವು ತೋರುತ್ತಿದ್ದಾರೆ ಎಂಬುದು ನನ್ನ ಅನಿಸಿಕೆ. ಇನ್ನುಳಿದಂತೆ ಮಾನ್ಯ ಸರ್ಕಾರ ರಚಿಸಿದ್ದ ಸಮಿತಿ ಮೇಲ್ಕಾಣಿಸಿದ ಸಮಗ್ರ ಇತಿಹಾಸವನ್ನು ಅವಲೋಕಿಸಿದ್ದಾರೋ ಇಲ್ಲವೋ ತಿಳಿಯದು. ಇಡೀ ಸಮಿತಿಯ ರಚನೆಯನ್ನೇ ವೀರಶೈವ ಸಮಾಜ ಪ್ರಶ್ನಿಸಿದೆ. ಹಾಗಾಗಿ ಈ ಸಮಿತಿಯ ವರದಿ ಪ್ರಸ್ತುತವೂ ಅಲ್ಲ. ಅತ್ಯಂತ ಶ್ರೀಸಾಮಾನ್ಯ ಅನಿವಾಸಿ ಭಾರತೀಯನಾದ ನನ್ನಂಥಹ ಕುತೂಹಲಿಗೆ ಗ್ರಾಸವಾಗಿರುವ ಈ ಸದ್ವಿಚಾರ ಸರ್ಕಾರೀ ಪ್ರಾಯೋಜಿತ ಪಂಡಿತರ ಗುಂಪಿಗೆ ಸರಳವಾಗಿ ಮನಗಾಣಬೇಕು. ಹಾಗೆ ಮನಗಾಣದಿದ್ದರೆ ಸರ್ಕಾರಿ ಹಣ ಹೇಗೆ ಪೋಲಾಗುತ್ತಿದೆ ಎಂಬುದನ್ನು ಕನ್ನಡಿಗ ಮತದಾರ ಮನಗಾಣಬೇಕು.
ಇರಲಿ, ಇದು ವೀರಶೈವ ಪಂಥ/ಧರ್ಮ, ಹತ್ತನೇ ಶತಮಾನದಿಂದ ಹದಿಮೂರನೇ ಶತಮಾನದವರೆಗೆ ಸಾಗಿ ಬಂದ ಹಾದಿ. ಅಂದಿನ ಧಾರ್ಮಿಕ, ಸಾಮಾಜಿಕ, ರಾಜಕೀಯ, ಮಾನವವಿಕಾಸ, ಸಾಹಿತ್ಯ, ವಾಸ್ತುಶಿಲ್ಪ, ಮತ್ತು ಇತಿಹಾಸಗಳನ್ನೆಲ್ಲ ಸಮಗ್ರವಾಗಿ ಪರಿಗಣಿಸಿ ತುಲನಾತ್ಮಕವಾಗಿ ವಿಶ್ಲೇಷಿಸಿದಾಗ ಕಂಡುಬರುವ ಸತ್ಯ!
ಒಟ್ಟಾರೆ, ಹತ್ತನೇ ಶತಮಾನದಿಂದ ಕೊಲ್ಲಿಪಾಕಿಯಲ್ಲಿ ಶುರುವಾದ ಸಮಾನತೆಯ ಕ್ರಾಂತಿ ಮುಂದಿನ ಮೂರು ಶತಮಾನದಲ್ಲಿ ಕರ್ನಾಟಕದ ಪ್ರಮುಖ ಪಂಥವಾಗಿ ಬೆಳೆಯಿತೇ ಹೊರತು ಸಮಾನತೆಯನ್ನು ತರಲಿಲ್ಲ. ಸಂಖ್ಯಾಶಾಸ್ತ್ರ ಮುಖ್ಯವಾಯಿತೇ ಹೊರತು ಧರ್ಮಶಾಸ್ತ್ರವಲ್ಲ! ಹೀಗೆ ಬೆಳೆದು ಬಂದ ಪಂಥಕ್ಕೆ ಒಂದು ಹೊಸ ವ್ಯಾಖ್ಯಾನ ಕೊಟ್ಟು ತಮ್ಮ ಒಳಹಿತಾಸಕ್ತಿಯನ್ನು ಮೆರೆಸಿ ಮತ್ತದೇ ಸಂಖ್ಯಾಶಾಸ್ತ್ರದ ಮರುಸಂಸ್ಥಾಪನೆಯೇ ಈ ಪ್ರತ್ಯೇಕ ಧರ್ಮದ ಬೇಡಿಕೆ. ಇದು ಅಂದಿನಿಂದ ಇಂದಿನವರೆಗೆ ಸಾಗಿದ ಪ್ರತಿಯೊಂದು ಧರ್ಮಗಳ ಉದ್ದೇಶ. ಈ ಉದ್ದೇಶ ಸರಿಯೇ, ತಪ್ಪೇ?
ಇಪ್ಪತ್ತೊಂದನೇ ಶತಮಾನದ ಪ್ರಜಾಪ್ರಭುತ್ವ ಭಾರತದಲ್ಲಿ ಧರ್ಮಗಳು, ಜಾತಿಗಳು ಪ್ರಸ್ತುತವಾಗುತ್ತಿರುವುದಕ್ಕೆ ಕಾರಣ ಭಾರತದ ಊಳಿಗಮಾನ್ಯ ಪ್ರಜಾಪ್ರಭುತ್ವ ವಿಕೃತಿ. ಇಲ್ಲಿರುವುದು ಪ್ರಜಾಪ್ರಭುತ್ವದ ಅಣಕ ಮತ್ತು ವಿಪರ್ಯಾಸ. ಇಂದು ಅಲ್ಲಮನ ವಚನ " ಅರುಹ ಪೂಜಿಸಲೆಂದು ಕುರುಹು ಕೊಟ್ಟೆಡೆ, ಅರುಹ ಮರೆತು ಕುರುಹ ಪೂಜಿಸುವ ಹೆಡ್ಡರ ನೋಡಾ ಗುಹೇಶ್ವರ!" ಸರ್ವ ಜಾತಿ, ಧರ್ಮಗಳಿಗೂ ಅನ್ವಯ.
ಈ ವಿಕಾರಣವಾಗಿಯೇ ಸಾಮಂತನಾಗಿದ್ದ ಕೆಂಪೇಗೌಡ ತನ್ನ ಜಾತಿಬಲದಿಂದ ಇಂದು ಇಡೀ ಕರ್ನಾಟಕ ಇತಿಹಾಸದ ಪ್ರಮುಖ ಆಡಳಿತಗಾರನೆನಿಸುತ್ತಾನೆ. ಜಾತಿಬಲವಿಹೀನ ಮಯೂರ, ಪುಲಕೇಶಿ, ಅಮೋಘವರ್ಷ, ಹೊಯ್ಸಳರು ಮದ್ಯದಂಗಡಿಗಳ ನಾಮಫಲಕಕ್ಕೆ ಸೀಮಿತಗೊಂಡಿದ್ದಾರೆ. ಇದು ವಾಸ್ತವ!
ಒಟ್ಟಾರೆ, ಇವನಾರವ ಇವನಾರವ ಇವನಾರವನೆಂದೊಡೆ, ಇವ ನಮ್ಮ(ಜಾತಿಯ)ವ ಇವ ನಮ್ಮ (ಜಾತಿಯ)ವ ಇವ ನಮ್ಮ (ಜಾತಿಯ)ವ ಅನ್ನಿರಯ್ಯ!
ಲಿಂಗಾಯತ ಪದದ ಬಗ್ಗೆ: ಲಿಂಗಾಯತ ಪದ ಬಸವಣ್ಣನವರ ಮುಂಚಿತವಾಗಿಯೇ ಬಳಕೆಯಲ್ಲಿತ್ತು. ಲಿಂಗಾರಾಧಕರಾದ ಕಾಳಮುಖ/ವೀರಶೈವರು ಗುರುತಿಗಾಗಿ ಕೊರಳಲ್ಲಿ ಲಿಂಗ ಧರಿಸುವ ಆಚರಣೆಯನ್ನು ಕೊಲ್ಲಿಪಾಕಿ ಕ್ರಾಂತಿಯಲ್ಲಿ ಅನುಷ್ಠಾನಕ್ಕೆ ತಂದರು. ತುಳಿತಕ್ಕೊಳಗಾದ ಜನಗಳು ಲಿಂಗವನ್ನು ಧರಿಸಿ ನೀವೇ ಯತಿ(ಗುರು)ಗಳಾಗಿ, ಮೌಢ್ಯತೆಯಿಂದ ಹೊರಬನ್ನಿ, ಪುರೋಹಿತಶಾಹಿ/ಆಳುವವರ ದಬ್ಬಾಳಿಕೆಯನ್ನು ನಿಗ್ರಹಿಸಿ ಎಂಬ ಕರೆಯ "ಲಿಂಗಾಯತಿ" ಪದ ಅಪಭ್ರಂಶಗೊಂಡು ಲಿಂಗಾಯತವೆಂದಾಯಿತು. ಇದು ಸಾಕಷ್ಟು ವಿರಕ್ತ ಮಠಾಧೀಶರಿಗೆ ಗೊತ್ತಿರುವ ಸಂಗತಿ. ಅದ್ಯಾವ ಲೌಕಿಕ ಬಂಧನ ಈ ಕುರಿತು ಮಾತನಾಡಲಾಗದೇಅವರನ್ನು ಕಟ್ಟಿ ಕೂರಿಸಿದೆಯೋ ಬಲ್ಲವರೇ ಹೇಳಬೇಕು.