ಆಗಷ್ಟೇ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿದು ಕಾರಿನಲ್ಲಿ ಹೋಟೆಲಿನೆಡೆ ಹೋಗುತ್ತಿದೆ. ಹಿಂಗಾರು ಮಳೆಯನ್ನೇ ಕಾಣದ ಚಾಲಕ, ಸೆಪ್ಟೆಂಬರ್ ನ ಮಳೆಯನ್ನ ಅಕಾಲ ಮಳೆಯೆಂದೂ, ಕೇಡುಗಾಲದ ಮಳೆಯೆಂದೂ ಶಪಿಸುತ್ತ ನನ್ನೊಂದಿಗೆ ಉಭಯಕುಶಲೋಪರಿ ನಡೆಸುತ್ತ ಕಾರು ಚಲಾಯಿಸುತ್ತಿದ್ದ. ನನ್ನ ಭಾರತೀಯ ಸಿಮ್ ಕಾರ್ಡನ್ನು ಗ್ಲೋವ್ ಬಾಕ್ಸಿನಲ್ಲಿ ಇಟ್ಟಿರುತ್ತೇನೆಂದು ನನ್ನ ತಮ್ಮ ಹೇಳಿದ್ದ. ಹಾಗೆಯೇ ಚಾಲಕನೊಂದಿಗೆ ಮಾತನಾಡುತ್ತ ಸಿಮ್ ಕಾರ್ಡ್ ಬದಲಿಸಿಕೊಳ್ಳುವ ಎಂದು ಕಾರಿನ ಗ್ಲೋವ್ ಬಾಕ್ಸ್ ತೆರೆದೆ. ತೆರೆದೊಡನೆಯೇ ಚಕ್ಕನೆ ದೊಡ್ಡ ಇಲಿಯೊಂದು ಮೈಮೇಲೆ ನೆಗೆಯಿತು! ಗಾಬರಿಯಾಗಿ ಸುಧಾರಿಸಿಕೊಳ್ಳುತ್ತಲೇ ಇಲಿಯನ್ನು ಹಿಡಿಯಲು ಹಾವೇನಾದರೂ ಇದ್ದರೆ?! ಎಂಬ ಯೋಚನೆ ಆ ರಾತ್ರಿಯಲ್ಲಿ ಮತ್ತಷ್ಟು ಗಾಬರಿಗೊಳಿಸಿತು.
ಗ್ಲೋವ್ ಬಾಕ್ಸಿನಿಂದ ನೆಗೆದ ಇಲಿ, ಮುಂದೆ ಕಾಣಬಹುದಾದ ಕರ್ನಾಟಕದ ಆಗುಹೋಗುಗಳ ಸಾಂಕೇತಿಕ ರಾಯಭಾರಿಯಂತೆ ಕಂಡಿತು!
ಪ್ರಚಲಿತ ಕರ್ನಾಟಕದಲ್ಲಿ ಸಾಕಷ್ಟು ಗೊಂದಲಗಳಿವೆ. ಈ ಗೊಂದಲಗಳು ರಾಜ್ಜ್ಯದ ಪ್ರತಿಯೊಂದು ಆಯಾಮದಲ್ಲೂ ಹಾಸುಹೊಕ್ಕಾಗಿವೆ. ಅದು ರಾಜಕೀಯ, ಸಾಮಾಜಿಕ, ಶಿಕ್ಷಣ, ಮಾಧ್ಯಮ ಅಥವಾ ಯಾವ ಕಡೆ ದೃಷ್ಟಿ ನೆಟ್ಟಿದೊಡೆಲ್ಲೆಲ್ಲ ಕಾಣಿಸಿದ್ದು ಗೊಂದಲ, ಗೋಜಲು!
ಎಪ್ಪತ್ತು ಎಂಬತ್ತರ ದಶಕಗಲ್ಲಿದ್ದ ಹೋರಾಟ, ಪ್ರಗತಿಪರತೆ, ಕ್ರಿಯಾಶೀಲತೆಗಳ ಗೂಡಾಗಿದ್ದ ಕರ್ನಾಟಕ ಇಂದು ಮೂಢ, ಅಜ್ಞಾನ, ಡಂಬಾಚಾರಗಳ ಗವಿಯಾಗಿದೆ.
ಜನರಲ್ಲಿದ್ದ ಹೋರಾಟ, ರೊಚ್ಚು, ನ್ಯಾಯಾಪರತೆ ಮುಂತಾದ ಗುಣಗಳೇ ಮಾಯವಾಗಿ ನಿಗೂಢ ಮಾನವರಂತೆ ಕಾಣುತ್ತಾರೆ.
ಇರಲಿ, ಇಲ್ಲಿ ಕೇವಲ ಓರ್ವ ಅನಿವಾಸಿ ಸಾಮಾನ್ಯನಾಗಿ ಕಂಡ ಸಾಮಾನ್ಯ ನೋಟಗಳಿಗೆ ಒಂದು ಹೊರನೋಟವನ್ನು ಕೊಡುತ್ತೇನೆ. ಉಳಿದುದು ನೀವೇ ನಿರ್ಧರಿಸಿ, ದೇಶ ಯಾವ ಮಾರ್ಗದಲ್ಲಿದೆ ಎಂದು.
ಬೆಂಗಳೂರಿನಿಂದ ದಾವಣಗೆರೆಗೆ ಹೊರಟ ನನಗೆ ಐದು ಟೋಲ್ ಗಳಲ್ಲಿ ಶುಲ್ಕ ಕಟ್ಟಬೇಕಾಯಿತು. ಟೋಲ್ ಹೆದ್ದಾರಿಗಳು ಕ್ಷಿಪ್ರವಾಗಿ ಒಂದೆಡೆಯಿಂದ ಇನ್ನೊಂದೆಡೆಗೆ ಸಂಪರ್ಕ ಕಲ್ಪಿಸುತ್ತವೆ ನಿಜ. ಆದರೆ ಕ್ಷಿಪ್ರವಾಗಿ ಹೋಗುವ ಸಂಕಷ್ಟವಿಲ್ಲದ ಪ್ರಜೆಗಳಿಗೆ ಬೆಂಗಳೂರಿನಿಂದ ದಾವಣಗೆರೆಗೆ ಹೋಗಲು ಟೋಲ್ ಇಲ್ಲದ ಸಮಾನಾಂತರ ಸಂಪರ್ಕ ರಸ್ತೆಯೇ ಇಲ್ಲದಂತಾಗಿದೆ. ಸರ್ಕಾರಿ ಅನುದಾನಿತ ಮೂಲಭೂತ ಹಕ್ಕುಗಳ ಶೋಷಣೆ ಈ ಪ್ರಗತಿಪಥವಾಗಿದೆ ಎಂಬುದು ನನ್ನ ಅಭಿಪ್ರಾಯ. . ಈ ಹೆದ್ದಾರಿಗೆ ಅನುಗುಣವಾಗಿ ಟೋಲ್ ಇಲ್ಲದ ಸರ್ವಿಸ್ ರಸ್ತೆ ಕೊಡದೇ , ಟೋಲ್ ಕಟ್ಟಿಸಿಕೊಳ್ಳುವುದು ಅಪರಾಧ ಎನಿಸುತ್ತದೆ. ನೀವು ಯಾವುದೇ ಇತರೆ ದೇಶದ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪ್ರಯಾಣಿಸಲು ಟೋಲ್ ಅಥವಾ ಟೋಲ್ ಇಲ್ಲದ ರಸ್ತೆಗಳನ್ನು ಗೂಗಲ್ ಮ್ಯಾಪಿನಲ್ಲಿ ಹುಡುಕಿನೋಡಿ, ಸಿಗುತ್ತವೆ. ಆದರೆ ಟೋಲ್ ಇಲ್ಲದೇ ಬೆಂಗಳೂರಿನಿಂದ ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿಗೆ ಪ್ರಯಾಣಿಸಲು ಸಾಧ್ಯವೇ? ಅದರಲ್ಲೂ ಅಜೀವಪರ್ಯಂತ ರಸ್ತೆ ಶುಲ್ಕವನ್ನು ಕಟ್ಟಿ ವಾಹನ ನೋಂದಾವಣಿ ಮಾಡಿಸಿಕೊಂಡೂ ಕೂಡ! ಇದು ನಮ್ಮ ಯೋಜನೆಗಳ ನಾಯಕತ್ವದ ಮಿತಿ. ಒಟ್ಟಾರೆ ಪರಿಕಲ್ಪನೆ, ಆಯೋಜನೆ, ನಿರ್ವಹಣೆ, ಪರಿಣಾಮಗಳ ಕಿಂಚಿತ್ತು ಆಳವಾಗಿ ಅಧ್ಯನಯ ಮಾಡದೆ ಕಾರ್ಪೊರೇಟ್ ಸಂಸ್ಥೆಗಳಿಗೆ ಶೋಷಿಸಲು ನಮ್ಮ ಹೆದ್ದಾರಿಗಳನ್ನು ಸರ್ಕಾರ ವಹಿಸಿಕೊಟ್ಟಂತಾಗಿದೆ
ಆದರೆ ಜನ ಇದಾವುದನ್ನು ಪರಿಗಣಿಸದೆ, ಹೋರಾಡದೆ, ಪ್ರತಿಭಟಿಸದೇ ಟೋಲ್ ಕಟ್ಟಿ ಹೋಗುವುದನ್ನು ಕಂಡರೆ ಭಾರತೀಯರೆಲ್ಲರೂ ತಮ್ಮದೇ ವ್ಯವಸ್ಥೆಯಲ್ಲಿ, ತಮ್ಮಿಂದಲೇ ಗುಲಾಮರಾಗಿದ್ದರೇನೋ ಎನಿಸುತ್ತದೆ. ಇದನ್ನು ಪ್ರತಿಭಟಿಸಿ ಹೋರಾಡುವ ಕರವೇ, ಜಯಕರ್ನಾಟಕ, ಮುಂತಾದ ರೋಲ್ಕಾಲ್ ಸಂಸ್ಥೆಗಳಿಗೆ ಈ ಹೆದ್ದಾರಿಗಳಲ್ಲಿ ಟೋಲ್ ಮಾಫಿ ಇದೆ. ಗಮನಿಸಿ, ಈ ಸಂಘಗಳ ಸದಸ್ಯರಾರೂ ಟೋಲ್ ಕಟ್ಟುವುದಿಲ್ಲ.
ಈ ಕುರಿತಾಗಿ ನನ್ನ ಹಲವಾರು ವಕೀಲ ಮಿತ್ರರಿಗೆ ಸಾರ್ವಜನಿಕ ಹಿತಾಸಕ್ತಿಯ ಮೊಕದ್ದಮೆ ಹೂಡಿ, ಖರ್ಚು ನಾ ಕೊಡುವೆನೆಂದರೆ, ನಮಗೆ ಕೂಡ ಜಿಲ್ಲೆಯಾದ್ಯಂತ ಸಂಚರಿಸಲು ಟೋಲ್ ಮಾಫಿಯಿದೆ ಎಂದು ನಕ್ಕು ಸುಮ್ಮನಾದರು.
ಸಂವಿಂಧಾನದ ಮೂಲಭೂತ ಹಕ್ಕುಗಳಾದ ಶೋಷಣೆಯ ವಿರುದ್ದದ ಹಕ್ಕು ಮತ್ತು ಸ್ವಾತಂತ್ರ್ಯದ ಹಕ್ಕುಗಳು, ಅದೇ ಸಂವಿಂಧಾನದ ಪರಿಮಿತಿಯಲ್ಲಿ ಮೇಲುನೋಟಕ್ಕೆ ದಮನಗೊಂಡಿವೆ. ಆದರೆ ಈ ಮೇಲ್ನೋಟವನ್ನು, ಶೈಕ್ಷಣಿಕಕ್ರಾಂತಿ, ರಾಜಕೀಯಕ್ರಾಂತಿ, ಮಾಹಿತಿಕ್ರಾಂತಿ, ತಂತ್ರಜ್ಞಾನಕ್ರಾಂತಿ,.... ಇನ್ನಿತರೇ ಕ್ರಾಂತಿ, ಯಾ ಪ್ರಗತಿಗೊಳಗಾಗಿರುವ ಶ್ರೀಸಾಮಾನ್ಯ ಕಾಣದಂತ ಅದ್ಯಾವ ಭ್ರಾಂತಿಗೊಳಗಾಗಿದ್ದಾನೋ ನಾನರಿಯೆ!
ದಾವಣಗೆರೆಯಲ್ಲಿ ಬ್ಯಾಂಕಿನ ಕೆಲವು ಕೆಲಸಗಳಿದ್ದವು. ಅಲ್ಲಿಯ ಬ್ಯಾಂಕ್ ಮ್ಯಾನೇಜರಿಗೆ ಎನ್ನಾರೈ ಖಾತೆಯ ಗಂಧಗಾಳಿಯೂ ಗೊತ್ತಿರಲಿಲ್ಲ. ಎನ್ನಾರೈಗಳಿಗೆ ಆಧಾರ್ ಅನಾವಶ್ಯಕವೆಂದು ಗೊತ್ತಿದ್ದರೂ ತಮ್ಮ ಬ್ಯಾಂಕಿನ ಸಾಫ್ಟವೇರ್ ಆಧಾರ್ ಸಂಖ್ಯೆಯನ್ನು ಕೇಳುತ್ತಿದೆಯೆಂದು ಗೋಳಾಡಿ, ನನ್ನನ್ನು ಗೋಳಾಡಿಸಿದರು. ಸರಿ, ಆಧಾರ್ ಕಾರ್ಡ್ ಮಾಡಿಸಿಕೊಳ್ಳುವ ಎಂದು ಒಂದು ಖಾಸಗಿ ಆಧಾರ್ ಸೇವಾ ಕೇಂದ್ರಕ್ಕೆ ಹೋದೆನು. ಕೇಂದ್ರದ ಒಳಹೋಗಲು ಚಪ್ಪಲಿಗಳನ್ನು ಹೊರಬಿಟ್ಟು ಗುಡಿಯೊಳಗೆ ಹೋದಂತೆ ಹೋಗಬೇಕಿತ್ತು. ಆ ಖಾಸಗಿ ಸಂಸ್ಥೆಯ ನೌಕರ ಮಾತ್ರ ಚಪ್ಪಲಿ ಧರಿಸಿದ್ದ. ಎಷ್ಟೇ ಆಗಲಿ ಆತ ಆಧಾರ್ ದಯಪಾಲಿಸುವ ದೇವರಲ್ಲವೇ?! ಒಂದೊಂದು ಆಧಾರ್ ಅರ್ಜಿಗೆ ಒಂದು ಗಂಟೆಗೂ ಹೆಚ್ಚು ಸಮಯ ತಗುಲುತ್ತಿತ್ತು, ನಿಧಾನ ಸಂಪರ್ಕದ ಕಾರಣ!
ಧೀರ್ಘಲೋಚನೆ ಇಲ್ಲದೇ ಒಂದು ವ್ಯವಸ್ಥೆಯನ್ನು ರೂಪಿಸಿದರೆ ಏನಾಗಬಹುದೋ ಅದೆಲ್ಲವೂ ನಾನು ಸಂವಹಿಸಿದ ಪ್ರತಿಯೊಂದು ಸಾಮಾನ್ಯ ಆಯಾಮದಲ್ಲೂ ಕಣ್ಣಿಗೆ ರಾಚುತ್ತಿತ್ತು. ಸರಿಯಾದ ಒಂದು ವ್ಯವಸ್ಥೆಯನ್ನು ನಿರೂಪಿಸದೇ ತಂತ್ರಜ್ಞಾನಗಳನ್ನು ಪರಿಚಯಿಸಿದರೆ ಏನಾಗಬಹುದೆಂಬುದಕ್ಕೆ ಭಾರತ ಅತ್ಯಂತ ಸಮಂಜಸ ಉದಾಹರಣೆ! ಬೇಸಿಗೆಯಲ್ಲಿ ಗಾಳಿಯಾಡಲಿ ಎಂದು ಕಿಟಕಿ ತೆರೆದು ಮಲಗಿದರೆ, ನಾಳೆ ನಿಮ್ಮ ವಿಡಿಯೋ ವೈರಲ್ ಆಗಬಹುದು!! ಸರಿಯಾದ ಪ್ರೈವಸಿ ಕಾನೂನು ರೂಪಿಸದೇ ಕ್ಯಾಮೆರಾ ಫೋನುಗಳನ್ನು ಬಿಟ್ಟರೆ ಏನಾಗಬಹುದೋ ಅದೆಲ್ಲವೂ ಆಗುತ್ತಿದೆ. ಮಂಗನಿಗೆ ಏಣಿ ಹಾಕಿಕೊಟ್ಟಂತೆ!
ಇರಲಿ, ಭಾರತ ತನ್ನ ಪ್ರಜೆಗಳು ವಿದೇಶದಲ್ಲಿಟ್ಟಿರುವ ಖಾತೆಗಳ ಮಾಹಿತಿ ಹಂಚಿಕೆ ಒಡಂಬಡಿಕೆಗೆ ಒಳಪಟ್ಟಿರುವುದರಿಂದ, ಭಾರತ ಕೂಡ ತನ್ನಲ್ಲಿರುವ ವಿದೇಶಿಯರ ಖಾತೆಗಳ ಮಾಹಿತಿಯನ್ನ ಹಂಚಿಕೊಳ್ಳಬೇಕಾಗುತ್ತಿದೆ. ಹಾಗಾಗಿ ಎನ್ನಾರೈ ಖಾತೆಗಳು ಭಾರತದಲ್ಲಿ ಟ್ಯಾಕ್ಸ್ ಫ್ರೀ ಆದರೂ ಎನ್ನಾರೈಗಳು ತಮ್ಮ ನಿವಾಸಿ ದೇಶದಲ್ಲಿ ಇಲ್ಲಿರುವ ಖಾತೆಗಳ ಬಡ್ಡಿ ಹಣದ ಮೇಲೆ ತೆರಿಗೆ ಕಟ್ಟುವುದು ಅನಿವಾರ್ಯವಾಗಿದೆ. ಹಾಗಾಗಿ ಈ ತೆರಿಗೆ ಜಂಜಾಟವನ್ನು ಬಗೆಹರಿಸಲು ನನ್ನ ಎನ್ನಾರೈ ಖಾತೆಗಳಲ್ಲಿದ್ದ ಹಣವನ್ನು ಮತ್ತೆ ನನ್ನ ಅಮೇರಿಕ ಖಾತೆಗೆ ವರ್ಗಾಯಿಸುವುದು ಕೂಡ ನನ್ನ ಪಟ್ಟಿಯಲ್ಲಿತ್ತು. ಕಪ್ಪುಹಣ ಭಾರತಕ್ಕೆ ವಾಪಸ್ ಬರುತ್ತದೋ ಇಲ್ಲವೋ, ಎನ್ನಾರೈಗಳು ಮಾತ್ರ ತಮ್ಮ ಅಪ್ಪಟ ಬಿಳಿ ಹಣವನ್ನು ವಾಪಸ್ ತೆಗೆಯುತ್ತಿರುವುದು ಸತ್ಯ! ಬಹುತೇಕ ಎನ್ನಾರೈಗಳು ತಮ್ಮೆ ಭಾರತೀಯ ಖಾತೆಗಳನ್ನು ಖಾಲಿ ಮಾಡುತ್ತಿದ್ದಾರೆ.
ಅಮೇರಿಕಾದ ಹವೆಗೆ ಹದಗೊಂಡ ನನ್ನ ಚರ್ಮ, ಭಾರತದ ಸೆಪ್ಟೆಂಬರ್ ಬಿರು ಬಿಸಿಲಿಗೆ (?) ಸನ್ ಬರ್ನ್ ಆಗಿತ್ತು. ಹಾಗಾಗಿ ಚರ್ಮತಜ್ಞರನ್ನು ಕಂಡು ಯಾವುದಾದರೂ ಕ್ರೀಮ್ ಕೊಳ್ಳುವ ಎಂದು ಕಂಡ ಒಂದು ನರ್ಸಿಂಗ್ ಹೋಮಿಗೆ ನುಗ್ಗಿದೆ. ಬಾಗಿಲ ಮುಂದೆ ಚಪ್ಪಲಿಗಳ ರಾಶಿಯೇ ಬಿದ್ದಿತ್ತು. ರೋಗಗಳ ಆಗರವೇ ಆಗಿಹ ಆ ನರ್ಸಿಂಗ್ ಹೋಮ್ ಕೂಡಾ ಚಪ್ಪಲಿಗಳನ್ನು ಹೊರಬಿಟ್ಟೇ ಒಳಗೆ ಬರಬೇಕೆಂಬ ನಿಯಮ ಮಾಡಿತ್ತು. ಬಹುಶಃ ಡಾಕ್ಟರ್ ದೇವೋಭವ ಎಂಬುದನ್ನು ಅಕ್ಷರಶಃ ಮನಗಂಡಿತ್ತೇನೋ! ಚಪ್ಪಲಿ ಇಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡಿದರೆ ಏನಾಗುತ್ತದೆಂದು ಅರಿಯದ ಆ ದೇವೋಭವ(ರ) ಜ್ಞಾನಕ್ಕೆ ಒಂದು ಉದ್ದಂಡ ನಮನವನ್ನು ಮನದಲ್ಲೇ ಅರ್ಪಿಸಿದೆನು. ಬರಿಗಾಲ ಪಾದಗಳಿಗೆ ಸಾಕಷ್ಟು ಸೊಳ್ಳೆಗಳು ಕಚ್ಚಿ ಕಚ್ಚಿ ರೋಗಿಗಳನ್ನು ಡಾಕ್ಟರ್ ಕಾಣಲು ಸಿದ್ಧಗೊಳಿಸುತ್ತಿದ್ದವು. ಹಾಗೆಯೇ ಕುಳಿತ ನನಗೆ ಕೇಳಿಸಿದ್ದು, ಗ್ಯಾಸ್ ಟ್ರಬಲ್ ಅಂತ ಬಂದವನಿಗೆ ಆಂಜಿಯೋಗ್ರಾಂ ಮಾಡಿಸಲು ಡಾಕ್ಟರ್ ಹೇಳಿದರೆಂದು ರೋಧಿಸುತ್ತಿದ್ದ. ಇನ್ನೊಬ್ಬ ತಾಯಿ ತನ್ನ ಹೈಸ್ಕೂಲ್ ಮಗನಿಗೆ ಜ್ವರವೆಂದು ಬಂದರೆ, ಆತನಿಗೆ ಹೈ ಬಿಪಿ ಕೂಡ ಇದೆಯೆಂದು, ಅಡ್ಮಿಟ್ ಮಾಡಿಸೆಂದಿರುವರೆಂದು...ಇತ್ಯಾದಿ ಇತ್ಯಾದಿ! ಒಟ್ಟಾರೆ ಮೆಡಿಕಲ್ ಮಾಲ್ ಪ್ರಾಕ್ಟೀಸ್ ಬಗ್ಗೆ ಕಾನೂನು ಮಾಡದೇ ಆರೋಗ್ಯವಿಮೆ ಬಂದರೆ ಏನಾಗಬಹುದೋ ಅದೆಲ್ಲವೂ ಇಲ್ಲಾಗಿದೆ. ಇನ್ಸೂರೆನ್ಸ್ ಕೊಡುತ್ತದಲ್ಲ ನಮಗೇನು ಎಂದು ಅಂಡೆತ್ತಿ ಹೂಸಿಸುವವ ಕೂಡ ಆಂಜಿಯೋಗ್ರಾಮ್ ಅಥವಾ ತೆರೆದೆದೆಯ ಶಾಸ್ತ್ರಚಿಕಿತ್ಸಗೆ ಎದೆಯೊಡ್ಡುತ್ತಾನೆ. . ಇನ್ಸೂರೆನ್ಸ್ ಇಲ್ಲದವರಿಗೆ ಸರ್ಕಾರಿ ಆರೋಗ್ಯಭಾಗ್ಯ, ಯಶಸ್ವಿನಿ, ಇತರೆ ವಿಮೆಗಳಿವೆ. ಹಾಗಾಗಿ ವಿಮೆ ಇಲ್ಲದವನೇ ದರಿದ್ರನು. ಎರಡು ದಶಕಗಳ ಹಿಂದೆ ಯಾರೂ ನೆಗಡಿ, ಕೆಮ್ಮು, ವಿಷಮಶೀತ ಜ್ವರ, ಟೈಫಾಯ್ಡ್ ಗಳಿಗೆ ಆಸ್ಪತ್ರೆ ಸೇರುತ್ತಿರಲಿಲ್ಲ. ಮನೆಯಲಿದ್ದೇ ಚಿಕಿತ್ಸೆ ಪಡೆಯುತ್ತಿದ್ದರು. ಯಾವಾಗ ಆರೋಗ್ಯವಿಮೆ, ಆರೋಗ್ಯಭಾಗ್ಯ, ಯಶಸ್ವಿನಿ ಯೋಜನೆಗಳು ಬಂದವೋ ವೈದ್ಯರು ರೋಗಿಗಳನ್ನು ಪ್ರತಿಯೊಂದಕ್ಕೂ ಅಡ್ಮಿಟ್ ಮಾಡಿಸಿಕೊಳ್ಳಲು ಶುರುಮಾಡಿದರು...ವಿಮೆಗಳಿಂದ ಹಣ ಪೀಕಲು. ಅವರುಗಳ ಈ ವಿಮಾಶೋಷಣೆಯ ಪರಿಣಾಮ ಮಿತಿ ಮೀರುತ್ತಿರುವುದರಿಂದಲೇ ಈಗ ಕರ್ನಾಟಕ ಖಾಸಗಿ ಆಸ್ಪತ್ರೆಗಳಿಗೆ ಲಗಾಮು ಹಾಕುವ ಯೋಜನೆಯೊಂದು ಬರುತ್ತಿದೆಯಂತೆ! ಇದನ್ನೇ ವಿದೇಶಗಲ್ಲಿ malpractice ಎನ್ನುವುದು. ಆರೋಗ್ಯ ವಿಮೆ ಇರುವೆಡೆಯೆಲ್ಲೆಲ್ಲ ಈ ರೀತಿಯ ಕಾನೂನುಗಳಿವೆ. ಇದರಿಂದ ಒಳಿತಾದರೆ ಒಳ್ಳೆಯದು.
ಈ ಬರಿಗಾಲ ಸೇವೆಯನ್ನು ಸರ್ಕಾರಿ, ಖಾಸಗಿ ಎಂದೆನ್ನದೇ ಹಲವಾರು ಕಚೇರಿಗಳಲ್ಲಿ ಕಂಡೆನು. ತಮ್ಮ ಗಿರಾಕಿ, ಗ್ರಾಹಕ, ಸೇವಾರ್ಥಿಗಳನ್ನೂ ಬರಿಗಾಲಲ್ಲಿ ಬಯಸುವ ಸೇವಾಕಾಂಕ್ಷಿಗಳು, ಸೇವಕರು ಮಾತ್ರ ಚಪ್ಪಲಿ ಧರಿಸಿಯೇ ಇರುತ್ತಿದ್ದರು. ಈ ಬರಿಗಾಲು ಭಾರತದಲ್ಲಿ ಬಲವಾಗಿ ಬೇರೂರಿರುವ "ಊಳಿಗಮಾನ್ಯ ಪ್ರಜಾಪ್ರಭುತ್ವ"ವನ್ನು ಅತ್ಯಂತ ಬೇರು ಮಟ್ಟದಲ್ಲೇ ತೋರುತ್ತದೆ.
ಇದು ಒಬ್ಬ ಶ್ರೀಸಾಮಾನ್ಯನಾಗಿ ನಾ ಕಂಡುಕೊಂಡ ಸಂಗತಿಗಳು. ಈ ಸಾಮಾನ್ಯ ಸಂಗತಿಗಳಲ್ಲೇ ಇಷ್ಟೊಂದು ವಿಪರ್ಯಾಸಗಳಿರಬೇಕಿದ್ದರೆ, ಇನ್ನು ದೇಶ/ರಾಜ್ಯವನ್ನು ಜ್ವಲಂತವಾಗಿ ಕಾಡುತ್ತಿರುವ ನೋಟ್ ಬ್ಯಾನ್, ಜಿ.ಸ್.ಟಿ, ಜಯಂತಿಗಳು, ಹಿಂದೂ ಭಯೋತ್ಪಾದನೆ, ಗೋಮಾಂಸ, ವೀರಶೈವ/ಲಿಂಗಾಯತ, ರಾಮ ರಹೀಮ...!
ಜನರೂ ಸಹ ತಮ್ಮ ಮೂಲಭೂತ ಸಮಸ್ಯೆಗಳನ್ನು ಸಮಸ್ಯೆಗಳೆಂದು ಪರಿಗಣಿಸುವುದೇ ಇಲ್ಲ. ದಾವಣಗೆರೆಯಂತಹ ನಗರದಲ್ಲಿ ಇಪ್ಪತ್ತು ದಿನಗಳಿಗೊಮ್ಮೆ ನಲ್ಲಿ ನೀರು ಬರುತ್ತದೆ. ಈ ಕುರಿತಾಗಿ ಜನತೆ ಇದೊಂದು ಸಮಸ್ಯೆಯೆನ್ನದೆ ನಮ್ಮ ಮನೆಯಲ್ಲಿ ಬೋರ್ ವ್ಯವಸ್ಥೆ ಇದೆ, ಇಲ್ಲದಿದ್ದರೆ ಟ್ಯಾಂಕರ್ನಲ್ಲಿ ನೀರು ತರಿಸಿಕೊಳ್ಳುತ್ತೇವೆಂದು ತಮ್ಮದೇ ಒಂದು ಪರಿಹಾರವನ್ನು ಕಂಡುಕೊಂಡಿದ್ದಾರೆ. ರಸ್ತೆಗಳು ಹದಗೆಟ್ಟಿರುವುದು, ರೈತರ ಬೋರವೆಲ್ ಗಳಿಗೆ ವಿದ್ಯುತ್ ಸರಬರಾಜಿಲ್ಲದಿರುವುದು, ಲಂಗುಲಮಗಾಮಿಲ್ಲದ ಬೆಲೆ ಏರಿಕೆ.... ಇತ್ಯಾದಿ ಇತ್ಯಾದಿ ಸಮಸ್ಯೆಗಳೇ ಅಲ್ಲ. ಅವರ ಜ್ವಲಂತ ಸಮಸ್ಯೆ ಈಗ ಬಿಗ್ ಬಾಸ್ ಯಾರು ಗೆಲ್ಲುತ್ತಾರೆ, ವೀರಶೈವ ಸರಿಯೋ ಲಿಂಗಾಯತ ಸರಿಯೋ, ಟಿಪ್ಪು ಸರಿಯೋ ತಪ್ಪೋ ಎನ್ನುವುದು, ಅಥವಾ ನನ್ನಂಥವರು ಸಿಕ್ಕರೆ ನಿಮ್ಮ ಟ್ರಂಪ್ ಹ್ಯಾಗೆ, ನಿಮಗೆಲ್ಲ ತುಂಬಾ ಕಷ್ಟವಾಗಿರಬೇಕೆಲ್ಲ ಎಂದು ಕಾಣದ ದುಃಖಕ್ಕೆ ದುಮ್ಮಾನಗೊಳ್ಳುವುದು.
ಸಂಕ್ಷಿಪ್ತವಾಗಿ, ನೋಟ್ ಬ್ಯಾನ್ ದೇಶದಲ್ಲಿ ಚಾಲನೆಯಲ್ಲಿದ್ದ ಒಟ್ಟು ನೋಟುಗಳ ಲೆಕ್ಕ ಕೊಟ್ಟಿದೆ. ಎಲ್ಲಿಂದ, ಯಾರಿಂದ, ಹೇಗೆ . ಸಂದಾಯವಾಗಿದೆ ಎಂಬ ಆಡಿಟ್ ಟ್ರೇಲ್ ಇದೆ. ಈ ಜಾಡ ಹಿಡಿದು ಜಾಲಾಡುವ ಛಾತಿ ಸರ್ಕಾರಕ್ಕಿದೆಯೇ? ಅಥವಾ ವಿರೋಧಪಕ್ಷಗಳು ಇದನ್ನು ಜಾಲಾಡಿ ಎಂದು ಡಿಮ್ಯಾಂಡಿಸುವ ಛಾತಿ ತೋರುವವೇ ಎಂಬುದು ಇಂದಿನ ನಾಗರೀಕನ ಪ್ರಶ್ನೆಯಾಗಬೇಕಿತ್ತು. ಆದರೆ ಈ ಕುರಿತು ಯಾವ ಮೀಡಿಯಾದಲ್ಲಿ ನಾನು ನೋಡಿಲ್ಲ, ಓದಿಲ್ಲ, ಕೇಳಿಲ್ಲ.
ಇನ್ನು ಜಯಂತಿಗಳ ಕುರಿತು ಹೇಳುವುದಾದರೆ ಧರ್ಮ ನಿರಪೇಕ್ಷ ಪ್ರಜಾಪ್ರಭುತ್ವ ಸರ್ಕಾರವೊಂದು ಯಾವುದೇ ರಾಜ (ಟಿಪ್ಪು, ಕೆಂಪೇಗೌಡ, ಇತ್ಯಾದಿ), ಧರ್ಮ ಪ್ರವರ್ತಕರ ಜಯಂತಿ (ಬಸವ, ಕನಕ, ವಾಲ್ಮೀಕಿ, ಇತ್ಯಾದಿ) ಆಚರಿಸುವುದು ಪ್ರಜಾಪ್ರಭುತ್ವದ ಅವಮಾನ. ಆದರೆ ಭಾರತದಲ್ಲೆಲ್ಲಿದೆ ಪ್ರಜಾಪ್ರಭುತ್ವ, ಇಲ್ಲಿರುವುದು ಊಳಿಗಮಾನ್ಯ ಪ್ರಜಾಪ್ರಭುತ್ವವಲ್ಲವೇ?
ನಾನು ಬೆಳೆದ ಕರ್ನಾಟಕದಲ್ಲಿ ನಲ್ಲಿಯಲ್ಲಿ ನೀರು ಬರದಿದ್ದರೆ ಖಾಲಿ ಬಿಂದಿಗೆ ಹಿಡಿದು ಮಹಿಳೆಯರು ಪ್ರತಿಭಟನೆ ತೋರುತ್ತಿದ್ದರು. ಇಂದು ಇಪ್ಪತ್ತು ದಿನಗಳಿಗೊಮ್ಮೆ ನಲ್ಲಿಯಲ್ಲಿ ನೀರು ಬಂದರೂ ಪ್ರತಿಭಟಿಸುವವರಿಲ್ಲ.
ಅಂದು ಕನ್ನಡಕ್ಕಾಗಿ ರಾಜ್ಯಾದಂತ ತಿಂಗಳುಗಟ್ಟಲೇ ಗೋಕಾಕ್ ಚಳುವಳಿ ನಡೆಸಿ ಹೋರಾಡಿದ ಜನ ಇಂದು ಕನ್ನಡ ಸಂಘಗಳಿದಲೇ ನಿರಂತರ ಶೋಷಣೆಗಳಗಾಗುತ್ತಿದ್ದಾರೆ ಮತ್ತು ಕನ್ನಡ ಶಾಲೆಗಳು ಮುಚ್ಚುತ್ತಿವೆ.
ಅಂದು ರೈತನೋರ್ವನಿಗೆ ಕಪಾಳಮೋಕ್ಷ ಮಾಡಿದ ವಿದ್ಯುತ್ ನಿಗಮದ ಇಂಜಿನಿಯರ್ ವಿರುದ್ಧ ಚಳುವಳಿಗಳು, ಸಮಾವೇಶಗಳು, ಪ್ರತಿಭಟನೆಗಳು ರಾರಾಜಿಸುತ್ತಿದ್ದವು. ಇಂದು ಅದೇ ವಿದ್ಯುತ್ ನಿಗಮದ ನೌಕರರು ರೈತರ ಬೋರ್ವೆಲ್ ಗಳಿಗೆ ಸರಿಯಾದ ವಿದ್ಯುತ್ ಸರಬರಾಜು ಮಾಡದೇ ನೀರಿದ್ದರೂ ಬಳಸದಂತೆ ಕಣ್ಣಾಮುಚ್ಚಾಲೆಯಾಡಿಸುತ್ತಾರೆ. ಕಿಡಿಗೇಡಿಗಳಾಗಿ ಸಿಂಗಲ್ ಫೇಸ್, ಡಬಲ್ ಫೇಸ್ ಎಂದು ಆಟವಾಡುತ್ತ ಮೋಟಾರ್ಗಳು ಪದೇ ಪದೇ ಸುಟ್ಟು ಹೋಗುವಂತೆ ಕಿಚಾಯಿಸುತ್ತಾರೆ. ಆದರೂ ಇವುಗಳ ವಿರುದ್ಧ ರೈತಸಂಘ ಯಾವುದೇ ಮುಷ್ಕರ, ಚಳುವಳಿಯ ನಡೆಸಿದ ಬಗ್ಗೆ ಸುದ್ದಿಯಿಲ್ಲ.
ಬೆಂಗಳೂರಿನ ಸೂಪರ್ ಮಾರ್ಕೆಟ್ಟುಗಳಲ್ಲೇ ಒಣಗಿಸಿದ ಟೊಮೇಟೊ, ಮಾವಿನಹಣ್ಣುಗಳನ್ನು ಕೊಳ್ಳುವ ಜನ ನಮ್ಮ ರೈತರೇಕೆ ಟೊಮ್ಯಾಟೋಗಳನ್ನು ಒಣಗಿಸದೇ ಬೆಲೆ ಇಲ್ಲವೆಂದು ರಸ್ತೆಗೆ ಸುರಿಯುತ್ತಾರೆ ಎಂದು ಚಿಂತಿಸುವುದಿಲ್ಲ.
ಅಂದು ಬೆಲೆ ಏರಿಕೆ ವಿರುದ್ಧ ಬಂದ್ ಗಳಾಗುತ್ತಿದ್ದವು. ಇಂದು ಜನ ತಾವು ಹೊಂದಿರುವ ಸೈಟುಗಳ ಬೆಲೆ ಏರಿದ್ದಕ್ಕೆ ಖುಷಿಗೊಂಡು ದುಬಾರಿ ಬೆಲೆಯ ಮದ್ಯ ಕುಡಿದು ಸಂತೋಷಿಸುತ್ತಾರೆ.
ಇಂದಿಗೂ ಕೂಡ ಮೂಲಭೂತ ಸಮಸ್ಯೆಗಳಾದ ಗಾಳಿ, ನೀರು, ವಿದ್ಯುತ್, ವಸತಿ ಸಮಸ್ಯೆಗಳು ಅಂದಿಗಿಂತ ಹೆಚ್ಚು ಜ್ವಲಂತವಾಗಿವೆ. ಆದರೆ ಜನ ಅವುಗಳ್ಯಾವುವೂ ಸಮಸ್ಯೆಗಳೆಂದು ಪರಿಗಣಿಸುವುದು ನಿಂತಿದೆ. ಸ್ಟಾಕ್ ಹೋಮ್ ಸಿಂಡ್ರೋಮಿಗೆ ಸಿಲುಕಿ ತಮ್ಮನ್ನು ಹಿಡಿದಿಟ್ಟುಕೊಂಡಿರುವ ಇಸಂಗಳಿಗೆ ಶರಣಾಗಿ ಅವುಗಳನ್ನು ಗಾಢವಾಗಿ ಪ್ರೀತಿಸುತ್ತಿದ್ದಾರೆ. ಆ ಇಸಂಗಳು ಧರ್ಮ, ಜಾತಿ, ಎಡಪಂಥ, ಬಲಪಂಥ, ರಾಜಕೀಯ ಪಕ್ಷ, ಹಾಗೂ ಕೆಲ ಕುಟುಂಬಗಳು (ರಾಜಕಾರಣಿಗಳ, ಸಿನಿಮಾ ನಟರ) ಇತ್ಯಾದಿ, ಇತ್ಯಾದಿ.
ಅಂದು ಪೂರ್ಣಚಂದ್ರ ತೇಜಸ್ವಿಯವರು ಲಂಕೇಶ್ ಪತ್ರಿಕೆ ಒಂದು ಹುಚ್ಚಾಸ್ಪತ್ರೆಯಂತಿದೆ ಎಂದಿದ್ದರಂತೆ. ಅವರ ಮಾತುಗಳು ಇಂದು ಇಡೀ ದೇಶಕ್ಕೆ ಅನ್ವಯವಾಗುತ್ತದೆ. ಇಂದು ಭಾರತಕ್ಕೆ ಬಂದು ಇಳಿದೊಡೆ ಕಾಣುವ ದೃಶ್ಯಗಳು ಅಕ್ಷರಷಃ ನಾವು ಯಾವುದೋ ಒಂದು ದೊಡ್ಡ ಹುಚ್ಚಾಸ್ಪತ್ರೆಗೆ ಬಂದಂತೆ ಕಾಣುತ್ತವೆ!!!
ಇರಲಿ ಮೇಲ್ಕಾಣಿಸಿದ ಇಲಿ ಸಮಸ್ಯೆ ಬಗ್ಗೆ ವಿಚಾರಿಸಲಾಗಿ ಕಂಡುಕೊಂಡದ್ದೇನೆಂದರೆ ಇಲಿಗಳ ಸಮಸ್ಯೆ ಸಾಕಷ್ಟು ವಾಹನವಿಮೆಯ ಕ್ಲೇಮ್ ಗಳನ್ನ ಹುಟ್ಟುಹಾಕಿದೆಯಂತೆ! ವಾಹನವಿಮೆ ಇಲಿಗಳಿಂದಾದ ನಷ್ಟವನ್ನು ಭರಿಸಿಕೊಡುತ್ತವಂತೆ. ಸದ್ಯ ಇಲಿ ಸಮಸ್ಯೆಗೆ ವಿಮ ಪರಿಹಾರವಿದೆ ಆದರೆ ಮೇಲ್ಕಾಣಿಸಿದ ಉಳಿದ ಸಮಸ್ಯೆಗಳಿಗೆ?!
ದೂರದಲ್ಲೆಲ್ಲೋ ಹರಿಕಥೆಯೊಂದ್ದು ಕೇಳಿಬರುತ್ತಿತ್ತು... "ಲೋಕವೆಲ್ಲ ಹೀಗೆ ಚಿಂತೆಯಲ್ಲಿ ಮುಳುಗಿರಲು ಮುಗಿಲಿನಿಂದ ಇದ್ದಕ್ಕಿದ್ದಂತೆ ಪುಷ್ಪವೃಷ್ಟಿಯಾಗುತ್ತಾ, ಅತ್ಯಂತ ಕಾಂತಿಯುತ ಬೆಳಕೊಂದು ಕಾಣಿಸಿತು. ಕಳವಳಗೊಂಡು ಜನ ಹುಬ್ಬೇರಿಸಿ ನೋಡುತ್ತಿದ್ದಾಗ ದೇವನೊಬ್ಬ ಉದಯಿಸಿದ. ಆತನೇ ನಮ್ಮ ಪ್ರಧಾನಿ ನರೇಂದ್ರ ದಾಮೋದರ್ ಮೋದಿ! ಭಕ್ತಜನರೇ, ಚಿಂತೆ ಬಿಡಿ, ಇನ್ನು ನಮ್ಮ ಕಷ್ಟಕಾರ್ಪಣ್ಯಗಳೆಲ್ಲಾ ತೀರಿಹೋದವು. ಇನ್ನು ನಮ್ಮದು ಸುವರ್ಣಯುಗ. ಜಯಮಂಗಳ ನಿತ್ಯ ಶುಭಮಂಗಳ!!!"
No comments:
Post a Comment