ಒಂದು ಉದ್ಯಮ ಯಶಸ್ವಿಯಾಗಲು ಬಂಡವಾಳ, ಸಂಪನ್ಮೂಲ, ಗ್ರಾಹಕ ಶಕ್ತಿ, ಮತ್ತು ಯೋಜನೆ ಅವಶ್ಯಕ. ಅದರಲ್ಲೂ ಪ್ರಾಮಾಣಿತ ಸಿದ್ದ ಮಾದರಿಯ ವ್ಯವಹಾರ ಸೂತ್ರವಿದ್ದರಂತೂ ಅಂತಹ ವ್ಯವಹಾರಗಳು ಸೋಲುವ ಅವಕಾಶಗಳು ಕಡಿಮೆ. ಕೆಲವೊಮ್ಮೆ ಅಂತಹ ವ್ಯವಹಾರಗಳು ಕುದುರಲು ಕೊಂಚ ಸಮಯ ತೆಗೆದುಕೊಳ್ಳಬಹುದು. ಆದರೆ ಅದಕ್ಕೆ ತಕ್ಕಂತೆ ನಿರ್ವಹಣಾ ಬಂಡವಾಳವನ್ನು ಜೋಡಿಸಿಕೊಂಡಿದ್ದರೆ ಅಂತಹ ವ್ಯವಹಾರಗಳನ್ನು ಸ್ಥಿರವಾಗಿ ನಿಲ್ಲಿಸಬಹುದು. ಅದರಲ್ಲೂ ಮಾಡಲಿಚ್ಚಿಸಿರುವ ವ್ಯವಹಾರದಲ್ಲಿ ವಿದೇಶಿ ಶಿಕ್ಷಣ, ಅನುಭವ, ಕಾರ್ಯಕ್ಷಮತೆ, ನಿಷ್ಠೆ ಇರುವ ಸಹಾಯಹಸ್ತವಿದ್ದರಂತೂ ಯಶಸ್ಸು ಕಟ್ಟಿಟ್ಟದ್ದು. ಅಂತಹ ಸೂತ್ರವಿದ್ದುದರಿಂದಲೇ ಕಾಫ಼ಿ ಡೇ ಮೊದಲ್ಗೊಂಡು ಇನ್ನೂ ಅನೇಕ ಕಂಪೆನಿಗಳು ಬೆಳೆದದ್ದು. ಇಂತಹ ಯಶಸ್ವೀ ಉದ್ಯಮಗಳು ಸಾಕಷ್ಟು ಉದ್ಯೋಗಗಳನ್ನು ಸೃಷ್ಟಿಸಿವೆ. ಟಾಟಾ, ಬಿರ್ಲಾ, ನಾರಾಯಣಮೂರ್ತಿ, ಮಲ್ಯ, ನೀರವ್ ಮೋದಿ, ಸಿದ್ದಾರ್ಥ ಮುಂತಾಗಿ ಪ್ರತಿಯೊಬ್ಬ ಉದ್ಯಮಿಯೂ ತಮ್ಮ ತಮ್ಮ ಉದ್ಯಮಗಳಲ್ಲಿ ಸಾಕಷ್ಟು ಉದ್ಯೋಗಗಳನ್ನು ಸೃಷ್ಟಿಸಿದ್ದಾರೆ. ಅಲ್ಲಿನ ಉದ್ಯೋಗಿಗಳಲ್ಲಿ ಆಯಾಯ ಉದ್ದಿಮೆದಾರರ ಬಗ್ಗೆ ಹೆಮ್ಮೆ,ಅಭಿಮಾನ ಮೂಡುವುದು ಸಹಜ ಕೂಡ. ಅದರಲ್ಲೂ ಅವರು ಸ್ವಜಾತಿಯವರಾದರೆ ರೋಮಾಂಚನ!
ಹಾಗೆಯೇ ಅಂತಹ ಉದ್ಯಮಗಳು ನಲುಗಿದಾಗ, ಆ ನಲುಗುವಿಕೆಗೆ ಭಾವನಾತ್ಮಕ ಕಾರಣಗಳು ಸೇರಿಕೊಂಡರೆ ಹೊರಹೊಮ್ಮುವ ಅಭಿಪ್ರಾಯಗಳು ಪರಸ್ಪರ ವಿರೋಧಾಭಾಸಗಳಿಂದ ದ್ವಂದ್ವದ ಗೊಂದಲದ ಗೂಡಾಗಿರುತ್ತವೆ.
ಅಂತಹ ಒಬ್ಬ ಯಶಸ್ವೀ ಉದ್ಯಮಿ, ಹೊಸದಾಗಿ ಇನ್ಯಾವುದೋ ಉದ್ಯಮಕ್ಕೆ ಕೈ ಹಾಕಿ ನಷ್ಟ ಮಾಡಿಕೊಂಡು ದೇಶ ಬಿಟ್ಟು ಓಡಿಹೋದರೆ ಆತನ ಬಗ್ಗೆ ಮೂಡುವ ಅಭಿಪ್ರಾಯ, ಆತ ಆತ್ಮಹತ್ಯೆ ಮಾಡಿಕೊಂಡರೆ ಮೂಡುವ ಅಭಿಪ್ರಾಯಕ್ಕೆ ವಿರುದ್ಧವಾಗಿರುತ್ತದೆ. ಈ ಎರಡೂ ನಿದರ್ಶನಗಳು ನಮ್ಮ ಕರ್ನಾಟಕದಲ್ಲಿಯೇ ಆಗಿವೆ.
ಲಕ್ಷಾಂತರ ಹುದ್ದೆಗಳನ್ನು ಸೃಷ್ಟಿಸಿದ್ದ ವಿಜಯ್ ಮಲ್ಯ ತಮ್ಮ ಅದಮ್ಯ ಉತ್ಸಾಹದಲ್ಲಿ ನಾಗರೀಕ ವಿಮಾನಯಾನ ಉದ್ದಿಮೆ ಸ್ಥಾಪಿಸಿ ನಷ್ಟ ಅನುಭವಿಸಿ ದೇಶ ತೊರೆದಾಗ ಅವರ ಮೇಲೆ ಇಡೀ ದೇಶವೇ ಹರಿಹಾಯ್ದಿದ್ದಿತು. ಯಾವುದೇ ತೆರಿಗೆ ವಂಚನೆಯಂತಹ ಅಪರಾಧವಿರದಿದ್ದ ಅವರು ಬ್ಯಾಂಕುಗಳ ಸಾಲ ತೀರಿಸದೆ ಓಡಿಹೋಗಿದ್ದರು. ಆಗ ಯಾವೊಬ್ಬ ಕನ್ನಡಿಗನೂ ಮಲ್ಯ ನಮ್ಮ ದ್ರಾವಿಡ, ಕನ್ನಡ ಹೆಮ್ಮೆ, ಅನ್ನ ಕೊಟ್ಟ ಧಣಿ, ಲಕ್ಷಾಂತರ ಉದ್ಯೋಗ ಸೃಷ್ಟಿಸಿದ ಸಂತ, ನಾವೆಲ್ಲಾ ಚಂದಾ ಎತ್ತಿ ಅವರ ಸಾಲ ತೀರಿಸುತ್ತೇವೆ ಎನ್ನಲಿಲ್ಲ.
ಈಗ ಅದೇ ಅದಮ್ಯ ಉತ್ಸಾಹದಲ್ಲಿ ಹೊಸ ಹೊಸ ಉದ್ದಿಮೆಗಳಲ್ಲಿ ತೊಡಗಿಸಿಕೊಳ್ಳುತ್ತಾ ನಷ್ಟ ಅನುಭವಿಸುವುದರೊಂದಿಗೆ ತೆರಿಗೆ ವಂಚನೆಯನ್ನು ಎದುರಿಸುತ್ತಿದ್ದ ಸಿದ್ದಾರ್ಥ ದುರದೃಷ್ಟವಶಾತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದರೊಟ್ಟಿಗೆ ಇಡೀ ದೇಶದ ಮರುಕವನ್ನೂ ಪಡೆದುಕೊಂಡಿದ್ದಾರೆ. ಅದರಲ್ಲೂ ಕನ್ನಡಿಗರು ಇವರು ನಮ್ಮವರು ದ್ರಾವಿಡರು, ಇವರ ವಿರುದ್ಧ ಜಾತಿವ್ಯವಸ್ಥೆ, ಧರ್ಮ, ರಾಜಕೀಯ ಷಡ್ಯಂತ್ರ ಮಾಡಲಾಗಿದೆ ಎನ್ನುತ್ತ ಎಲ್ಲಾ ಸೂಕ್ಷ್ಮಗಳನ್ನೂ ಬಲ್ಲ ದಿವ್ಯಜ್ಞಾನಿಗಳಂತೆ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.
ಒಂದು ವೇಳೆ ಮಲ್ಯ ಇದೇ ರೀತಿ ಆತ್ಮಹತ್ಯೆ ಮಾಡಿಕೊಂಡಿದ್ದರೆ ಸಿದ್ಧಾರ್ಥರ ಕುರಿತಾದ ಅಭಿಪ್ರಾಯದಂತೆಯೇ ಜನತೆಯ ಅಭಿಪ್ರಾಯ ಇರುತ್ತಿದ್ದಿತೇ? ಖಂಡಿತಾ ಇಲ್ಲ. ಏಕೆಂದರೆ ಮಲ್ಯ, ಜಾತಿ ಸಂಖ್ಯಾಶಾಸ್ತ್ರದ ಬೆಂಬಲವಿಲ್ಲದ ಒಬ್ಬ ನತದೃಷ್ಟ. ಜಾತಿ ಉಂಟು ಮಾಡುವ ರೋಮಾಂಚನವನ್ನು ಯಾವ ನೀತಿಯೂ ಉಂಟು ಮಾಡುವುದಿಲ್ಲವೆಂದು ರೈತ ಮುಖಂಡ ಪುಟ್ಟಣ್ಣಯ್ಯ ಹೇಳುತ್ತಿದ್ದರು. ಆ ಅಭಿಪ್ರಾಯ ಈ ಘಟನೆಯಲ್ಲಿ ಜ್ವಲಂತವಾಗಿ ಹೊಮ್ಮಿದೆ.
ಜಾತಿ, ಧರ್ಮ, ಆರ್ಯ, ದ್ರಾವಿಡ, ಕನ್ನಡ/ಕನ್ನಡೇತರ ಇಂತಹ ವಿಷಯಗಳು ವ್ಯವಹಾರ/ಉದ್ದಿಮೆಗಳ ಮೇಲೆ ಹೇಗೆ ಪ್ರಭಾವ ಬೀರುತ್ತವೆಂಬುದನ್ನು ನಾನಂತೂ ಅರಿಯೆ. ಉದ್ದಿಮೆಯೆಂದರೆ ಕೇವಲ ಬಂಡವಾಳ, ಸಂಪನ್ಮೂಲ, ಪ್ರಾಮಾಣಿತ ವ್ಯವಹಾರಸೂತ್ರ, ಗ್ರಾಹಕ ಆಕರ್ಷಣಾ ಸೂತ್ರ, ನಿರ್ವಹಣೆ ಮತ್ತು ವಿಸ್ತರಣಾ ಸೂತ್ರಗಳು ಮಾತ್ರ ಮುಖ್ಯವೆಂದುಕೊಂಡಿರುವ ನನಗೆ ಜಾತಿ, ಧರ್ಮಗಳೂ ಬಹುಮುಖ್ಯವೆಂಬುದುದನ್ನು ಒಪ್ಪಲಾಗುತ್ತಿಲ್ಲ. ಈ ರೀತಿ ಜಾತಿ/ಧರ್ಮಗಳು ಮುಖ್ಯವೆನ್ನುವ ಜಾಣರಿಗೆ ಮಲ್ಯ, ಸಿದ್ಧಾರ್ಥರು ಕೂಡ ಪ್ರಭಾವಿ ಕುಟುಂಬದಿಂದ ಬಂದವರಾದ್ದರಿಂದ ಯಶಸ್ಸು ಮಾಡಲು ಸಾಧ್ಯವಾಯಿತೆನ್ನಿ, ನಿಮ್ಮ ಮೇಲೆ ಹರಿಹಾಯುತ್ತಾರೆ. ಭಾರತದಲ್ಲಿ ಪಿತ್ರಾರ್ಜಿತವು ಇಂದಿರಾ, ರಾಜೀವ್, ರಾಹುಲ್, ಕುಮಾರಸ್ವಾಮಿ, ಸ್ಟಾಲಿನ್, ಜಗನ್, ಅಖಿಲೇಶ್, ಅಂಬಾನಿ ಪುತ್ರರು, ಸಿನೆಮಾದ ರಾಜಕುಮಾರ್ ಪುತ್ರರು ಹೀಗೆ ಎಲ್ಲಾ ರಂಗಗಳಲ್ಲಿಯೂ ಹಾಸುಹೊಕ್ಕಾಗಿದ್ದರೂ, ಸಾವು ಅದೆಲ್ಲವನ್ನೂ ತೊಳೆದು ಪ್ರತಿಭೆಯೆನ್ನುವ ಸರ್ಟಿಫಿಕೇಟ್ ಕೊಡಿಸಿಬಿಡುತ್ತದೆ. ಹಾಗೊಂದು ಭಾವುಕತೆಯನ್ನು ಹೊರಗಿಟ್ಟು ಸ್ಥಿತಪ್ರಜ್ಞತೆಯಿಂದ ಸನ್ನಿವೇಶವನ್ನು ಅವಲೋಕಿಸುವ ಶಕ್ತಿಯಿದ್ದರೂ ಹೇಳಲಾಗದ ಸಂದಿಗ್ಧತೆಯನ್ನು ಜಾತಿಯೆನ್ನುವ ಭ್ರಾಂತಿ ಸೃಷ್ಟಿಸಿಬಿಡುತ್ತದೆ.
ಒಂದೇ ಆಯಾಮದ, ಈ ಎರಡು ಸನ್ನಿವೇಶಗಳಲ್ಲಿ ವ್ಯಕ್ತಗೊಂಡ ಜನಾಭಿಪ್ರಾಯಗಳು ಅಥವಾ ಮಾಧ್ಯಮಗಳಲ್ಲಿ ಮೂಡಿಬಂದ ಅಭಿಪ್ರಾಯಗಳು ಪರಸ್ಪರ ತದ್ವಿರುದ್ಧವಾಗಿವೆ. ಆದರೂ ಎರಡೂ ಘಟನೆಗಳಿಗೂ ಮೋದಿ ಸರ್ಕಾರ ಕಾರಣವೆಂಬ ಸಮೀಕರಣವೂ ಇದೆ.
ಇದೆಲ್ಲಕ್ಕೂ ಮೋದಿ ಸರ್ಕಾರ ಕಾರಣವೇ?
ವಾರ್ಷಿಕ ಬಜೆಟ್ಟುಗಳ ಸಮಯದಲ್ಲಿ ಆಗಾಗ್ಗೆ ತೆರಿಗೆ ಹಾಕುವ ಆದಾಯದ ಮಿತಿಯನ್ನು ಪರಿಷ್ಕರಿಸಿ ಮತ್ತದಕ್ಕೆ ತಕ್ಕಂತಹ ನಿಯಮಗಳ ಬದಲಾವಣೆಗಳನ್ನು ಮಾಡಲಾಗಿದೆಯೇ ಹೊರತು, ಯಾವುದೇ ಗಹನವಾದ ಗುರುತರ ಬದಲಾವಣೆಗಳನ್ನು ಆದಾಯ ತೆರಿಗೆ ಇಲಾಖೆಯಲ್ಲಿ ಇತ್ತೀಚೆಗೆ ಮಾಡಿದ ಉದಾಹರಣೆಗಳಿಲ್ಲ. ಮಲ್ಯರ ಸಾಲ ವಸೂಲಾತಿಗೆ ಬ್ಯಾಂಕುಗಳು ಮಾಡಬೇಕಾದ ಕರ್ತವ್ಯದಂತೆಯೇ ತೆರಿಗೆ ಅಧಿಕಾರಿಗಳು ತೆರಿಗೆ ವಸೂಲಾತಿಯ ಕ್ರಮಗಳನ್ನು ಸಿದ್ದಾರ್ಥರ ಮೇಲೆ ಕೈಗೊಂಡಿರುತ್ತಾರೆ. ಬ್ಯಾಂಕ್ ಅಧಿಕಾರಿಗಳ ಕ್ರಮವನ್ನು ಒಪ್ಪುವ ನಾವುಗಳು, ತೆರಿಗೆ ಅಧಿಕಾರಿಗಳ ಕ್ರಮವನ್ನು "ತೆರಿಗೆ ಭಯೋತ್ಪಾದನೆ" ಎಂಬುದು ಅಸಹಿಷ್ಣುತೆಯ ಪ್ರತಿರೂಪವೆನಿಸಿಬಿಡುತ್ತದೆ. ಹಾಗೊಂದು ವೇಳೆ ಇದು ಕಿರುಕುಳವೆನಿಸಿದರೆ ಪ್ರಶ್ನಿಸಲಾಗದಷ್ಟು ನಮ್ಮ ಸಂವಿಧಾನ, ಕಾನೂನುಗಳು ಅಶಕ್ತವಾಗಿವೆಯೇ?
ಸಬಲರಿಗೇ ರಕ್ಷಣೆ ಕೊಡಲಾಗದ ಕಾನೂನು ವ್ಯವಸ್ಥೆ, ಮತ್ತು ಸಂವಿಧಾನಗಳು ಸಾಮಾನ್ಯರನ್ನು ಹೇಗೆ ರಕ್ಷಿಸಿಯಾವು ಎಂಬ ವಿಕಲ್ಪವನ್ನು ಈ "ತೆರಿಗೆ ಭಯೋತ್ಪಾದನೆ" ಎನ್ನುವುದು ಮೂಡಿಸಿಬಿಡುತ್ತದೆ.
ಕಾಂಗ್ರೆಸ್, ಬಿಜೆಪಿ, ಅಥವಾ ಇನ್ಯಾರದ್ದೇ ಸರ್ಕಾರ ಬರಲಿ ಮತ್ತು ಸುಧಾರಣಾ ನಿಯಮಗಳನ್ನು ಜಾರಿಗೆ ತರಲಿ. ಇವುಗಳ ಅನುಷ್ಟಾನ ಅಧಿಕಾರಶಾಹಿಗಳ ಕೈಯಲ್ಲಿದೆ.
ಇದೆಲ್ಲದಕ್ಕೂ ಕಾರಣ ಆ ಚುನಾಯಿತ ಸರ್ಕಾರಗಳಾಗಲಿ, ಅವುಗಳು ತಂದ ಸುಧಾರಣಾ ಕ್ರಮಗಳಷ್ಟೇ ಕಾರಣವಾಗಿಬಿಡುವುದಿಲ್ಲ. ಸರ್ಕಾರ ಯಾವುದೇ ಬರಲಿ ಮತ್ತು ಅವುಗಳ ಉದ್ದೇಶ ಎಷ್ಟೇ ಪ್ರಾಮಾಣಿಕವಾಗಿರಲಿ, ಅವುಗಳ ಸುಧಾರಣಾ ನಿಯಮಗಳ ಅನುಷ್ಠಾನಕ್ಕೆ ಕಾಂಪ್ಲೆಕ್ಸ್ ನಿಯಮಗಳನ್ನು ರೂಪಿಸಿ ಅನಿಷ್ಟಗಳಾಗಿಸುತ್ತಿರುವುದು ಅಧಿಕಾರಶಾಹಿ ಬಾಬುಗಿರಿ. ಹುಚ್ಚಾಪಟ್ಟೆ ಸಾಲ ಕೊಟ್ಟು ಉದ್ಯಮಿಗಳು ದೇಶ ಬಿಟ್ಟು ಹೋಗುವಂತೆ ಮಾಡಿದ್ದುದು ಆ ಬಾಬುಗಿರಿಯ ಅಧಿಕಾರಶಾಹಿ. ಅದೇ ರೀತಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದೂ ಇದೇ ಅಧಿಕಾರಶಾಹಿಗಳ ಬಾಬುಗಿರಿಯ ಕಾರಣದಿಂದಲೇ! ಭ್ರಷ್ಟ್ರ, ಶತದಡ್ಡ ಮಂತ್ರಿಗಳಿಗೆ ಆಯಾಯ ಆಯಕಟ್ಟಿನ ಜಾಗ, ದುಡ್ಡು ಹೊಡೆಯುವ ವಾಮಮಾರ್ಗಗಳನ್ನು ತೋರಿಸಿಕೊಡುವುದೂ ಕೂಡ ಇದೇ ಬಾಬುಗಿರಿ ಯಾ ಚಮಚಾಗಿರಿ. ಪ್ರೈವಸಿ ಯಾ ಖಾಸಗಿತನದ ಕುರಿತಾಗಿ ಯಾವುದೇ ಗಹನವಾದ ಬದಲಾವಣೆಗಳನ್ನು ತಾರದೆ ಖಾಸಗಿತನದವೆಂಬುದು ಸಾರ್ವಜನಿಕವಾಗಿ ಬಟಾಬಯಲಾಗುತ್ತಿದೆ. ಇಂತಹ ಮಾನಹಾನಿಗಳಿಂದಾಗಿ ಬಡವ ಬಲ್ಲಿದ, ಶಕ್ತ ಅಶಕ್ತ, ಪುರುಷ ಮಹಿಳೆಯರೆಲ್ಲರೂ ಸಮಾನತೆಯನ್ನು ಕಾಣುತ್ತಿದ್ದಾರೆ. ಇದು ಕೂಡಾ ದೂರದರ್ಶಿತ್ವವಿಲ್ಲದ , ಸರಿಯಾದ ನಿಯಮಗಳನ್ನು ರೂಪಿಸದೆ ತಂತ್ರಜ್ಞಾನವನ್ನು ಅಪ್ಪಿಕೊಂಡುದರ ಪರಿಣಾಮ. ಇದೂ ಕೂಡ ಅಧಿಕಾರಿಶಾಹಿಯ ಚರ್ಬಿಯ ಮದ.
ಒಂದು ಬ್ಯಾಂಕ್ ಖಾತೆ ತೆಗೆಯುವುದಾಗಲಿ, ಶಾಲೆಗೆ ಸೇರಿಸುವುದಿರಲಿ ಯಾ ಚಾಲನಾ ಪರವಾನಗಿಯಿರಲಿ...ಈ ಅಧಿಕಾರಶಾಹಿಗಳು ರೂಪಿಸಿರುವ ನಿಯಮಗಳು ತಲೆ ತಿರುಗಿಸಿಬಿಡುತ್ತವೆ. ಸುಮ್ಮನೆ ಭಾರತದ ಕೆಲವು ವೆಬ್ಸೈಟುಗಳನ್ನು ಮತ್ತು ಕೆಲವು ವಿದೇಶಿ ವೆಬ್ಸೈಟುಗಳನ್ನು ತುಲನೆ ಮಾಡಿ ನೋಡಿ, ನಮ್ಮವರೆಷ್ಟು ಕಾಂಪ್ಲೆಕ್ಸ್ ಎಂದು ಗೊತ್ತಾಗುತ್ತದೆ. ಆದರೆ ಯಾರೂ ಇತ್ತ ಕಡೆ ಗಮನ ಹರಿಸುವುದಿಲ್ಲ. ಕೇವಲ ಸರ್ಕಾರಿ ನೌಕರರ ದೈನಂದಿನ ವ್ಯವಹಾರಗಳಲ್ಲಿನ ಭ್ರಷ್ಟಾಚಾರದ ಕಡೆ ಜನ ಗಮನ ಹರಿಸುತ್ತಾರೆಯೇ ಹೊರತು, ನೀತಿ ನಿಯಮಗಳ ಸೃಷ್ಟಿಸುವ ಬಾಬುಗಿರಿಯತ್ತವಲ್ಲ. ಜನತೆ ಇತ್ತಕಡೆ ಗಮನ ಹರಿಸದಂತೆ ಮಾಡಿರುವುದು ಕೂಡಾ ಇದೇ ಬಾಬುಗಿರಿ. ಸ್ವಲ್ಪ ಒಳಹೊಕ್ಕು ನೋಡಿದರೆ ಇದು ಕಾಣದಂತಹ ಬುದ್ದಿವಂತ ವ್ಯವಸ್ಥೆಯೇನೂ ಅಲ್ಲ! ಆದರೆ ಇತ್ತಕಡೆ ಏಕೋ ಬುದ್ದಿವಂತರ ಚಿತ್ತ ಹರಿದಿಲ್ಲದಿರುವುದು ಒಂದು ಮಹಾ ದುರಂತ.
ಆದರೆ ಸಿದ್ದಾರ್ಥರ ಸಾವಿನ ಹಿಂದೆ ಅಧಿಕಾರಶಾಹಿ ಇರಲಾರದು. ಒಬ್ಬ ಅಧಿಕಾರಯುತ ಮಹತ್ವಾಕಾಂಕ್ಷಿ, ಕೇವಲ ಸಂಬಳದ/ಗಿಂಬಳದ ಅಧಿಕಾರಶಾಹಿಗೆ ಹೆದರುವುದಿಲ್ಲ. ಅವರ ಉದ್ದಿಮೆಯ ಸೋಲು ಅವರಿಗೆ ಬಹುಶಃ ನುಂಗಲಾರದ ತುತ್ತೆನಿಸಿತ್ತೇನೋ.
http://epaper.udayakala.news/

No comments:
Post a Comment