"ನುಡಿ ಸೂತಕ" ಕೃತಿಯು ಕನ್ನಡ ಸಾಹಿತ್ಯ ಲೋಕದಲ್ಲಿ ಒಂದು ನೂತನ ವಿಮರ್ಶಾ ಪ್ರಯೋಗವನ್ನು ಮಾಡಿದೆ. ’ಕೃತಿ’ ಮತ್ತು ’ಸಂಸ್ಕೃತಿ’ ಎಂಬ ಎರಡು ಭಾಗಗಳಲ್ಲಿ ಈ ವಿಮರ್ಶಾ ಕೃತಿಯನ್ನು ರಚಿಸಲಾಗಿದೆ. ಮಾನವಶಾಸ್ತ್ರದ ನೆಲೆಯಲ್ಲಿಯೇ ಜನಾಂಗೀಯ ಶೋಷಣೆಯನ್ನು ಮೆಟ್ಟಿ ನಿಂತ ಸಾಧಕರ ಜೀವನಗಾಥೆಗಳ ಪರಿಚಯಾತ್ಮಕ ವಿಮರ್ಶೆಯ ಆಯಾಮ ’ಕೃತಿ’ ಭಾಗದಲ್ಲಿಯೂ ಮತ್ತು ಬುಡಕಟ್ಟು ಸಂಸ್ಕೃತಿಗಳ ಪೂರ್ವಾಗ್ರಹಿತ ಸಂಶೋಧನೆಗಳ ಸಶಕ್ತ ಅನಾವರಣ ’ಸಂಸ್ಕೃತಿ’ ಭಾಗದಲ್ಲಿಯೂ ಇದೆ.
ಬ್ಯಾಪಾರಿ ಮನೋರಂಜನ್, ಫ್ರೆಡ್ ಡಗ್ಲಾಸ್, ವಾರಿಸ್ ಡಿರಿ ಅವರ ಸಂಘರ್ಷಗಾಥೆಯ ಜೊತೆಗೆ ಹಳಗನ್ನಡದಲ್ಲಿ ಗುಲಾಮಗಿರಿಯ ಪ್ರಸ್ತಾಪ ಮತ್ತು ಸ್ವರೂಪ, ಕರ್ನಾಟಕದ ಕೊರಚರು: ಒಂದು ಸಬಾಲ್ಟರ್ನ್ ನೋಟ, ಕೊರಮರ ಶೋಷಣೆ, ಮತ್ತು ನೀಹ ಅವರ ಲೇಖನ ಸಾಹಿತ್ಯದ ವಿಮರ್ಶೆಗಳು ಎಂತಹ ಅಪಾಯಕಾರಿ ಸನ್ನಿವೇಶಗಳನ್ನು ಆ ಸಾಧಕರು ಎದುರಿಸಿರಬಹುದು ಎಂಬ ಮಾನವಶಾಸ್ತ್ರದ ಹಿನ್ನೆಲೆಯನ್ನು "ಕೃತಿ" ಭಾಗವು ತೆರೆದಿಡುತ್ತದೆ.
"ಕೃತಿ"ಯು ಒಂದೆಡೆ ಶ್ರೀಸಾಮಾನ್ಯನನ್ನು ಪ್ರಚೋದಿಸಿ ಚೈತನ್ಯಿಸಿ ಧನಾತ್ಮಕವಾಗಿ ಸ್ಫೂರ್ತಿ ತುಂಬಿದರೆ, ಇನ್ನೊಂದೆಡೆ ಎಂತಹ ಸವಾಲುಗಳನ್ನು ಎದುರಿಸಿ ಸಾಧನೆಗೆ ಅಣಿಯಾಗಬೇಕಾಗುತ್ತದೆ ಎಂಬ ವಾಸ್ತವ ಚಿತ್ರಣವನ್ನು ತೋರಿಸುತ್ತದೆ.
ಮಾನವಶಾಸ್ತ್ರದ ನೆಲೆಯ ಮಹತ್ತರವಾದ ಭಾರತೀಯ ಕೃತಿಗಳಲ್ಲದೆ ಜಾಗತಿಕ ಕೃತಿಗಳೂ ಸೇರಿದಂತೆ ಮತ್ತು ಮಲಬಾರ್ ಅಡಿಯನ್ನರ ಕಥನದ ’ಕಾಲಾ’ ಸಿನಿಮಾವನ್ನೂ ವಿಮರ್ಶೆಯ ತೆಕ್ಕೆಗೆ ತೆಗೆದುಕೊಂಡು ವಿಶ್ಲೇಷಣಾತ್ಮಕವಾಗಿ ಕೃತಿಗಳ ವಿಮರ್ಶೆಯನ್ನು ’ಕೃತಿ’ ಭಾಗದಲ್ಲಿ ಕಟ್ಟಿಕೊಡುತ್ತ ಹೇಗೆ ಆ ಸಾಧಕರು ಎಲ್ಲಾ ಶೋಷಣೆಯನ್ನೂ ಮತ್ತು ಸಿದ್ಧಸೂತ್ರದ ನೆಪಗಳನ್ನು ಮೆಟ್ಟಿ ನಿಂತರು ಎಂಬ ಧನಾತ್ಮಕ ಚಿಂತನೆಯನ್ನು ಹರಿಸಲಾಗಿದೆ. ಶೋಷಣೆಯೇ ಸಾಧನೆಗೆ ಅಡ್ಡಿ ಎಂಬ ನೆಪಗಳನ್ನೊಡ್ಡಿ ಕಾಲಹರಣ ಮಾಡುವ ಎಲ್ಲರಿಗೂ ಈ ಕೃತಿಗಳು ಮತ್ತು ಮಲ್ಲಯ್ಯನವರ ಪರಿಚಯಾತ್ಮಕ ವಿಮರ್ಶೆ ದಾರಿದೀಪವಾಗಿದೆ. ಹಾಗೆಯೇ "ಸಂಸ್ಕೃತಿ"ಯಲ್ಲಿ ಋಣಾತ್ಮಕ ಸಂಶೋಧನೆಗಳನ್ನು ಖಂಡಿಸಿ ವಾಸ್ತವಿಕ ಸತ್ಯದ ಹಾದಿಯ ವಿಮರ್ಶೆಯ ಚಿಂತನೆಯ ಪ್ರಚೋದನೆಯನ್ನು ತೋರುತ್ತ ಕರ್ನಾಟಕ ಬುಡಕಟ್ಟು ಸಂಸ್ಕೃತಿಗಳಾದ ಮ್ಯಾಸಬೇಡ, ಗೊಲ್ಲರ ಮೇಲಿನ ಸಂಶೋಧನೆಗಳಲ್ಲಿನ ಸಂಕಥನವನ್ನು ಕಟು ವಾಸ್ತವದ ಹಿನ್ನೆಲೆ ಮತ್ತು ಆಕರಗಳ ನೆಲೆಯಲ್ಲಿ ತೀಕ್ಷ್ಣ ವಿಮರ್ಶೆಯಾಗಿಸಿ ಸಕಾರಣವಾಗಿ ಪ್ರಶ್ನಿಸಲಾಗಿದೆ. ಈ ಎಲ್ಲಾ ಕಾರಣಗಳಿಂದಾಗಿ ಈ ಕೃತಿ ನೂತನ ಪ್ರಯೋಗ ಎನಿಸಿದೆ.
ಮುಖ್ಯವಾಗಿ ಮಾನವನ ಮೂಲವೃತ್ತಿಯ ಸಂಗ್ರಹಣೆ, ಬೇಟೆ, ಪಶುಪಾಲನೆ, ಬೇಸಾಯದ ಹಿನ್ನೆಲೆಯಲ್ಲಿ ರೂಪುಗೊಂಡ ಮಾನವ ಜನಾಂಗದ ಮೂಲ ಸಂಸ್ಕೃತಿಗಳು ಇಲ್ಲಿನ ’ಸಂಸ್ಕೃತಿ’ ಭಾಗದ ವಿಮರ್ಶೆಯ ಹೃದ್ಯಭಾಗವಾಗಿವೆ. ಇದು ಮೇಲ್ನೋಟಕ್ಕೆ ಕರ್ನಾಟಕ ಬುಡಕಟ್ಟು ಸಂಸ್ಕೃತಿಗಳ ಕುರಿತಾದ ವಿಷಯವೆನಿಸಿದರೂ ಈ ಸಂಸ್ಕೃತಿಯ ಪದ್ಧತಿಗಳು, ಆಚರಣೆಗಳು ವಿಶ್ವದೆಲ್ಲೆಡೆಯ ನೆಲಮೂಲ ಸಂಸ್ಕೃತಿಗಳ ಜೊತೆ ಅಗಾಧ ಸಾಮ್ಯತೆಯನ್ನು ಹೊಂದಿವೆ. ಉದಾಹರಣೆಗೆ ಈ ಭಾಗದ "ಮಾನವ ಚರಿತ್ರೆಯಲ್ಲಿ ಬಂಡವಾಳವಾದ ಹಸಿವು ಎಂಬ ಜಾತಿಗೆಟ್ಟ ಪ್ರತಿಮೆ" ಅಧ್ಯಾಯದಲ್ಲಿ ಬರುವ ಕನ್ನಯ್ಯನ ಬೇಟೆ ನೀತಿಯು ಜಾಗತಿಕವಾಗಿ ಬಹುಪಾಲು ಬುಡಕಟ್ಟು ಜನಾಂಗಗಳ ಬೇಟೆಯ ನೀತಿಯೇ ಆಗಿತ್ತು. ಅದೇ ರೀತಿ "ಮ್ಯಾಸಬೇಡರನ್ನು ಕುರಿತ ಸಂಶೋಧನೆ: ಮಿತಿ ಮೀರಬೇಕಾದ ಸ್ಥಿತಿ" ಅಧ್ಯಾಯದಲ್ಲಿ ವಿವರಿಸಿದ ಮ್ಯಾಸಬೇಡ ಸಂಸ್ಕೃತಿಯ ಪೋತರಾಜು ಆದವರಿಗೆ ಜೀವಂತ ಹೋತಗಳ ರಕ್ತ ಕುಡಿಸುವ ಪದ್ಧತಿಯು ಆಫ್ರಿಕಾದ ಮಸಾಯಿ ಬುಡಕಟ್ಟಿನೊಂದಿಗೆ ಸಾಮ್ಯತೆ ಹೊಂದಿದೆ. ಈಗಿನ ಆಧುನಿಕ ಮಾಸಾಯಿಗಳು ಬಾಯಿಯಿಂದ ಕಚ್ಚದೆ ಹಸು, ಹೋತಗಳ ರಕ್ತನಾಳಗಳಿಗೆ ಬಾಣದಿಂದ ಚುಚ್ಚಿ ಬೆಚ್ಚನೆಯ ರಕ್ತ ಹೀರುತ್ತಾರೆ.
ಇಂತಹ ಪ್ರಮುಖ ಸಾಮ್ಯತೆಗೆ ಇರುವ ಕಾರಣ, ಈ ಎಲ್ಲಾ ಸಂಸ್ಕೃತಿಗಳೂ ಮಾನವನ ವಿಕಾಸದ ಜೊತೆಜೊತೆಗೆ ಪ್ರಾಕೃತಿಕ ಧರ್ಮವಾಗಿ ರೂಪುಗೊಂಡು ವಿಕಾಸ ಹೊಂದಿದ "ಜಾಗತಿಕ ಪ್ರಾಕೃತಿಕ ಸಂಸ್ಕೃತಿ"ಗಳಾಗಿವೆ. ಹಾಗಾಗಿಯೇ ಆದಿಮಾನವರು (ನಿಯಾಂಡ್ರಥಲ್ ನಿಂದ ನಿಯೋಲಿಥಿಕ್ ವರೆಗೆ) ರಚಿಸಿದ ಗುಹಾ ರೇಖಾಚಿತ್ರಗಳು ಬಳ್ಳಾರಿಯ ಸಂಗನಕಲ್ಲು, ಆರಿಜೋನಾದ ಕ್ಯಾನ್ಯನ್ ಡಿ ಚೆಲ್ಲಿ, ಇಂಡೋನೇಷಿಯಾದ ಸುಲಾವೇಶಿ ಟಿಡಾಂಗ್ನೇ, ಸ್ಪೇನಿನ ಮಾಲ್ಟ್ರಾವಿಸೋ ಮತ್ತು ಆರ್ದೆಲ್ಸ್, ಜಗತ್ತಿನಲ್ಲಿಯೇ ಅತ್ಯಂತ ಹಳೆಯದು ಎನ್ನಲಾಗುವ ನಮೀಬಿಯಾದ ಅಪೋಲೋ ೧೧ರವರೆಗೆ ಸಾಮ್ಯತೆ ಹೊಂದಿವೆ ಮತ್ತವು ಕೂಡುಕಟ್ಟು ಸಂಸ್ಕೃತಿಯನ್ನೇ ಪ್ರತಿಪಾದಿಸಿವೆ. ಹಾಗಾಗಿ ಕೇವಲ ಬೇಟೆಯಂತಹ ಆಹಾರ ಸಂಗ್ರಹಣೆ ನಿಯಮವಲ್ಲದೆ ಕೂಡುಕಟ್ಟು ಸಂಸ್ಕೃತಿಯ ಫಲವಂತಿಕೆ, ಜೀವಸೃಷ್ಟಿ, ಆರಾಧನೆ, ಮತ್ತು ಅಂತಿಮ ಸಂಸ್ಕಾರಗಳವರೆಗಿನ ಎಲ್ಲಾ ಆಯಾಮಗಳೂ ಜಾಗತಿಕವಾಗಿ ಅಗಾಧ ಸಾಮ್ಯತೆಯನ್ನು ಹೊಂದಿವೆ. ಇದಕ್ಕೆ ಸಾಕ್ಷಿಯಾಗಿ ಜಗತ್ತಿನಾದ್ಯಂತ ನೋಡಲು ಸಿಗುವ ಟೋಟೆಮ್ ಚಿಹ್ನೆಗಳು, ಲಿಂಗಾರಾಧನೆ, ಯೋನಿಪೂಜೆಯಂತಹ ಫಲವಂತಿಕೆಯ ಶಿಲ್ಪಗಳು, ಬಳ್ಳಾರಿ ಜಿಲ್ಲೆಯ ಕುಡುತಿನಿಯ ಬೂದಿಗುಂಪಾಗಳ ರೀತಿಯಲ್ಲಿಯೇ ತಮಿಳುನಾಡಲ್ಲದೆ ಅಮೇರಿಕಾದ ಅರ್ಕನ್ಸಾಸಿನವರೆಗೆ ಹಬ್ಬಿರುವ ಶವಸಂಸ್ಕಾರ ತಿಟ್ಟಗಳು ಹಬ್ಬಿವೆ. ಶಿಲೆ, ಬೆರಣಿ, ಮಣ್ಣು, ಚಿಪ್ಪುಗಳಂತಹ ವಸ್ತುಗಳನ್ನು ಶವದ ಸುತ್ತ ಪೇರಿಸಿ ಸುಡುವಂತಹ ನಿಯೋಲಿಥಿಕ್ ಕಾಲದ ಜನರ ಈ ತಿಟ್ಟಗಳನ್ನು ಕಟ್ಟಿ ಶವಸಂಸ್ಕಾರ ಮಾಡುವ ಪದ್ಧತಿಯು ಪ್ರಪಂಚದಾದ್ಯಂತ ಬಳಕೆಯಲ್ಲಿತ್ತು. ಹೀಗೆ ಬೂದಿಗುಂಪಾಗಳನ್ನು ಸೃಷ್ಟಿಸಿ ಶವಸಂಸ್ಕಾರ ಮಾಡುವ ಪದ್ಧತಿಯಂತೆಯೇ ಅವರದೇ ಆದ ಶವಸಂಸ್ಕಾರ ಪದ್ಧತಿ ನಿಯಾಂಡ್ರಥಲ್ ಜನರದ್ದೂ ಜಾಗತಿಕವಾಗಿ ಒಂದೇ ರೀತಿಯದಾಗಿತ್ತು. ಒಟ್ಟಿನಲ್ಲಿ ಮಾನವ ಜನಾಂಗ ಮತ್ತು ಮಾನವ ಸಂಸ್ಕೃತಿಗಳು ಆರಂಭದಿಂದಲೂ ಜಾಗತಿಕವಾಗಿದ್ದವು.
ಹಾಗಾಗಿಯೇ ಮನಶ್ಯಾಸ್ತ್ರಜ್ಞರು, "ಮೇಲ್ನೋಟಕ್ಕೆ ಸಂಸ್ಕೃತಿಗಳು ಬೇರೆ ಬೇರೆ ಎನಿಸಿದರೂ ಆಳದಲ್ಲಿ ಒಂದೇ ಆಗಿವೆ. ಸಂಸ್ಕೃತಿ ಮತ್ತು ಸಾಮಾಜಿಕತೆಗಳು ಮಾನವನ ನಡವಳಿಕೆಯ ಮೇಲೆ ತಕ್ಕ ಮಟ್ಟಿಗೆ ಪರಿಣಾಮ ಹೊಂದಿದ್ದರೂ ಅದು ಆಳದಲ್ಲಿ ಪರಿಣಾಮ ಹೊಂದಿರದು. ಮಾನವನ ನಡವಳಿಕೆಯ ಮೇಲೆ ಸಂಸ್ಕೃತಿಯ ಪರಿಣಾಮ ಬೀರಿ ಹೇಗೆ ಬೇಕೋ ಹಾಗೆ ಮಾನವ ನಡವಳಿಕೆಯನ್ನು ಬದಲಾಯಿಸಬಹುದೆಂದು ಸಾಕಷ್ಟು ಸಮಾಜಶಾಸ್ತ್ರಜ್ಞರು ತಪ್ಪು ತಿಳಿದಿದ್ದಾರೆ. ಮೇಲ್ನೋಟಕ್ಕೆ ಸಂಸ್ಕೃತಿಗಳು ಬೇರೆ ಬೇರೆ ಎಂದು ಕಂಡರೂ ಆಳದಲ್ಲಿ ಹೇಗೆ ಒಂದೇ ಆಗಿರುವವೋ ಅದೇ ರೀತಿ ಮಾನವನ ನಡವಳಿಕೆಗಳು ಮೇಲ್ನೋಟಕ್ಕೆ ಭಿನ್ನವೆನಿಸಿದರೂ ಆಳದಲ್ಲಿ ಒಂದೇ ಆಗಿವೆ ಎಂದು ಖ್ಯಾತ ಮನಶಾಸ್ತ್ರಜ್ಞರಾದ ಲಿಡಾ ಕಾಸ್ಮೈಸ್ ಮತ್ತು ಜಾನ್ ಟೂಬಿ ತಮ್ಮ ಪ್ರಯೋಗಗಳ ಮೂಲಕ ಸಾಬೀತು ಪಡಿಸಿದ್ದಾರೆ. ಇದೇ ಅಭಿಪ್ರಾಯವನ್ನು ಖ್ಯಾತ ಮಾನವಶಾಸ್ತ್ರಜ್ಞರಾದ ಮಾರ್ವಿನ್ ಹ್ಯಾರಿಸ್ ತಮ್ಮ ಮಾತುಗಳಲ್ಲಿ ಹೀಗೆ ಹೇಳುತ್ತಾರೆ, "ಒಂದು ಸಂಸ್ಕೃತಿಯ ಜನರು ದನವನ್ನು ತಿಂದು ಹಂದಿಯನ್ನು ಪೂಜಿಸಿದರೆ, ಇನ್ನೊಂದು ಸಂಸ್ಕೃತಿಯ ಜನರು ದನವನ್ನು ಪೂಜಿಸಿ ಹಂದಿಯನ್ನು ತಿನ್ನುತ್ತಾರೆ. ಇದು ಎರಡು ಸಂಸ್ಕೃತಿಗಳ ಮೇಲ್ನೋಟದ ಸ್ಪಷ್ಟ ಭಿನ್ನತೆ! ಆದರೆ ದನ ಮತ್ತು ಹಂದಿಗಳು ಕೋತಿ, ನಾಯಿ, ತಿಮಿಂಗಿಲಗಳಂತೆಯೇ ಮಾನವನಿಗೆ ಪ್ರಾಣಿಜನ್ಯ ಪ್ರೋಟೀನ್ ಆಹಾರ ಪದಾರ್ಥಗಳಾಗಿವೆ ಮತ್ತು ಮಾನವನಿಂದ ತಿನ್ನಲ್ಪಡುತ್ತವೆ. ಆದಲ್ಲದೇ ಇದೇ ದನ ಮತ್ತು ಹಂದಿಗಳು ಬುದ್ಧ, ಅಲ್ಲಾಹ್, ಜೀಸಸ್ ಅವರಂತೆಯೇ ಮಾನವನಿಗೆ ಜೀವಚೈತನ್ಯ ತುಂಬುವ ಪೂಜ್ಯಾರ್ಹ ವಸ್ತುಗಳೂ ಆಗಿವೆ. ಹಾಗಾಗಿ ಎಲ್ಲಾ ಸಂಸ್ಕೃತಿಯ ತಳಹದಿಯಲ್ಲಿ ಪ್ರಾಣಿಜನ್ಯ ಪ್ರೋಟೀನ್ ಸೇವನೆ, ಪ್ರಾಣಿಗಳೆಡೆಗಿರುವ ಪೂಜ್ಯ ಅಥವಾ ಅಪೂಜ್ಯ ಭಾವನೆ ಮಾನವ ಸಹಜವಾಗಿ ಒಂದೇ ಆಗಿದೆ.
ಹ್ಯಾರಿಸ್ ಅವರ ಉದಾಹರಣೆಯ ಹಿನ್ನೆಲೆಯಲ್ಲಿ ಮಾನವ ಸಂವಹನದ ಭಾಷೆಗಳನ್ನು ಗಮನಿಸಿದಾಗ, ಭಾಷೆಗಳೂ ಸಹ ಮೇಲ್ನೋಟಕ್ಕೆ ಬೇರೆ ಬೇರೆ ಎನಿಸಿದರೂ ಅವುಗಳಲ್ಲಿನ ಭಾವಾರ್ಥ ಒಂದೇ ಆಗಿದೆ. ಇದಕ್ಕೆ ಉದಾಹರಣೆಯಾಗಿ ನಮ್ಮದೇ ಕನ್ನಡ ಭಾಷೆಯ ಕೆಲವು ನುಡಿಗಟ್ಟುಗಳನ್ನು ಇಂಗ್ಲಿಷ್ ಮತ್ತು ಸ್ಪ್ಯಾನಿಷ್ ಭಾಷೆಗಳ ನುಡಿಗಟ್ಟುಗಳಿಗೆ ಹೋಲಿಸಿ ನೋಡಿದಾಗ ಅವೆಲ್ಲವೂ ಒಂದೇ ಆಗಿವೆ, ಅಕ್ಷರಶಃ! ಅಂತಹ ಕೆಲವು ನುಡಿಗಟ್ಟುಗಳು ಹೀಗಿವೆ:
೧. ಸ್ಪ್ಯಾನಿಷ್ ಗಾದೆ: Donde hay gana, hay maña!
ಇಂಗ್ಲಿಷ್ ಗಾದೆ: Where there is a will, there is a way!
ಕನ್ನಡ ಗಾದೆ: ಮನಸ್ಸಿದ್ದರೆ ಮಾರ್ಗ!
೨. ಸ್ಪ್ಯಾನಿಷ್ ಗಾದೆ: Donde hay humo, hay calor!
ಇಂಗ್ಲಿಷ್ ಗಾದೆ: There is no smoke without fire!
ಕನ್ನಡ ಗಾದೆ: ಬೆಂಕಿಯಿಲ್ಲದೆ ಹೊಗೆ ಏಳುವುದಿಲ್ಲ!
೩. ಸ್ಪ್ಯಾನಿಷ್ ಗಾದೆ: Con paciencia y saliva, un elefante se tiro a una hormiga!
ಇಂಗ್ಲಿಷ್ ಗಾದೆ: Little strokes fell great oaks!
ಕನ್ನಡ ಗಾದೆ: ಹನಿಹನಿಗೂಡಿದರೆ ಹಳ್ಳ!
೪. ಸ್ಪ್ಯಾನಿಷ್ ಗಾದೆ: Con su pan se lo coma!
ಇಂಗ್ಲಿಷ್ ಗಾದೆ: Reap what you sow!
ಕನ್ನಡ ಗಾದೆ: ಮಾಡಿದ್ದುಣ್ಣೋ ಮಹಾರಾಯ!
೫. ಸ್ಪ್ಯಾನಿಷ್ ಗಾದೆ: Mucho ruido y pocas nueces!
ಇಂಗ್ಲಿಷ್ ಗಾದೆ: Empty vessels make much noise!
ಕನ್ನಡ ಗಾದೆ: ತುಂಬಿದ ಕೊಡ ತುಳುಕುವುದಿಲ್ಲ!
ಮೂರು ಬೇರೆ ಬೇರೆ ಭಾಷೆಗಳ ಬೇರೆ ಬೇರೆ ಸಂಸ್ಕೃತಿಯ ಗಾದೆಗಳು ಮೂಲದಲ್ಲಿ ಸಮಾನಾರ್ಥ ಹೊಂದಿವೆ. ಹೀಗೆ ಆಳವಾಗಿ ನೋಡಿದಾಗ ಮಾನವನ ಮೂಲ ಸ್ವರೂಪಿ ಸಾಂಸ್ಕೃತಿಕ ಸಾಮ್ಯತೆ ಜಗತ್ತಿನ ಎಲ್ಲಾ ಸಂಸ್ಕೃತಿಗಳಲ್ಲಿಯೂ ಸಮಾನವಾಗಿ ಕಾಣುತ್ತದೆ. ಇಂತಹ ಮನೋವೈಜ್ಞಾನಿಕ ಮಾನವಶಾಸ್ತ್ರದ ನೆಲೆಯಿಂದ ಸಮಾಜಶಾಸ್ತ್ರವನ್ನು ಅವಲೋಕಿಸುವ ಸಂಶೋಧನೆಗಳು ಈಗೀಗ ಹೆಚ್ಚಾಗಿ ನಡೆಯುತ್ತಿವೆ.
ಹೀಗೆ ಅಗಾಧವಾಗಿ ಸಾಮ್ಯತೆಯಿಂದಿದ್ದ "ಜಾಗತಿಕ ಪ್ರಾಕೃತಿಕ ಸಂಸ್ಕೃತಿ"ಗಳು ಕಾಲಾಂತರದಲ್ಲಿ ಹೇಗೆ ಕೃತ್ರಿಮ ಅಪ್ರಾಕೃತಿಕ ಸಂಸ್ಕೃತಿಗಳ ಪ್ರಭಾವಕ್ಕೆ ಒಳಗಾದವು?
ಎಂಬ ಮೂಲಭೂತ ಪ್ರಶ್ನೆಯ ಹಿನ್ನೆಲೆಯಲ್ಲಿ ಲೇಖಕರಾದ ಆರಡಿ ಮಲ್ಲಯ್ಯ ಕಟ್ಟೇರ ಅವರು ಕರ್ನಾಟಕದ ಬುಡಕಟ್ಟು ಸಂಸ್ಕೃತಿಗಳ ಕುರಿತಾದ ಸಂಶೋಧನೆಗಳನ್ನು ತಾರ್ಕಿಕವಾಗಿ ಪ್ರಶ್ನಿಸುತ್ತಾ ಈ ಸಂಶೋಧನೆಗಳು ಮೂಲತಃ ಹೇಗೆ ದಾರಿ ತಪ್ಪಿವೆ ಎಂಬುದನ್ನು ಮೇಲ್ನೋಟಕ್ಕೆ ಸಾಬೀತು ಪಡಿಸುತ್ತಾರೆ. ಈ ಪ್ರಶ್ನಿಸುವಿಕೆಯಲ್ಲಿ ಮಲ್ಲಯ್ಯನವರ ನೇರ ನಡೆ, ತಾತ್ವಿಕ ಸಿಟ್ಟು, ಅಲ್ಲಲ್ಲಿ ಇಣುಕುವ ವ್ಯಂಗ್ಯ ಹೆಚ್ಚು ಇಷ್ಟವಾಗುತ್ತದೆ. ಇದಕ್ಕೆ ಆಯಾಯ ಸಂಶೋಧಕರನ್ನು ಮತ್ತು ಅಂತಹ ಕೃತ್ರಿಮ ಅಪ್ರಾಕೃತಿಕ ಸಂಸ್ಕೃತಿಯ ಸಂಕಥನಕ್ಕೆ ಪೂರಕವಾಗಿ ದೃಷ್ಟಾಂತ ಕಥೆಗಳನ್ನು ಸೃಷ್ಟಿಸಿದ ಖ್ಯಾತನಾಮರನ್ನೂ ನೇರವಾಗಿ ಹೆಸರಿಸಿ ಪ್ರಾಕೃತಿಕ ಸಂಸ್ಕೃತಿಯ ಉದಾರತೆ, ಮಹಿಳಾ ಸಮಾನತೆ, ಮಾನವೀಯ ಕಳಕಳಿಯನ್ನು ಎತ್ತಿ ಹಿಡಿಯುತ್ತಾರೆ. ಇಂತಹ ಪ್ರಶ್ನಿಸುವಿಕೆಯು ಈ ಹಿಂದೆ ಮತ್ತು ಈಗಲೂ ಆಗುತ್ತಿದೆ. ಆದರೆ ಆ ಬಹುಪಾಲು ಪ್ರಶ್ನಿಸುವಿಕೆಗಳು ಪೂರಕ ಆಕರಗಳೊಂದಿಗೆ ಅಂಕಿಅಂಶಗಳಿಲ್ಲದೆ ಕೇವಲ ಭಾವನಾತ್ಮಕ ನೆಲೆಯಿಂದ ಕೇಳಲ್ಪಟ್ಟು ಹಿನ್ನೆಲೆಗೆ ಸರಿದಿವೆ ಮತ್ತು ತಂತ್ರಜ್ಞಾನದ ಆಸ್ಫೋಟದೊಂದಿಗೆ ವರ್ತಮಾನದಲ್ಲಿ "ಟ್ರೋಲ್" ಆಗಿವೆ.
ಆದರೆ ಮಲ್ಲಯ್ಯನವರು ಸ್ಪಷ್ಟವಾಗಿ ಮತ್ತು ಸ್ಫುಟವಾಗಿ ಪ್ರಾಕೃತಿಕ ಐತಿಹ್ಯದ ಜನಪದ ವ್ಯಕ್ತಿಗಳಾದ ಬಂದಮ್ಮ ಭಾಗೀರತಿಯಾದುದು, ಅಜೀವಕ ತಿಪ್ಪಯ್ಯ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿಯಾದುದು, ಮದ್ದಾನಸ್ವಾಮಿಯ ಸಂಗಾತಿ ಬೇಡರ ಕನಕಮ್ಮನ ಕತೆಯನ್ನು ಮಠಸ್ಥರು ಮುಚ್ಚಿದುದನ್ನು ವಿವರಿಸುತ್ತಾರೆ. ಈ ಚಿಂತನೆಗಳು ಜನಪದದ ಪ್ರಾಕೃತಿಕ ಮುಂದಾಳುಗಳು ಹೇಗೆ ಅಪ್ರಾಕೃತಿಕ ಪೂಜಾವಸ್ತುಗಳಾದರು ಎಂಬ ಸಂಕಥನವನ್ನು ಪರಾಮರ್ಶಿತ ದಾಖಲೆಯೊಂದಿಗೆ ತೆರೆದು ಚಿಂತನೆಗೆ ಹಚ್ಚುತ್ತವೆ.
ಈ ಎಲ್ಲಾ ಕಾರಣಗಳಿಗಾಗಿ ಸಿದ್ಧ ಸಿದ್ಧಾಂತಗಳ ಹೇರಿಕೆಯ ಸಂಶೋಧನೆಗಳನ್ನು ತಾರ್ಕಿಕವಾಗಿ ಮತ್ತು ಪೂರಕ ಸಂಶೋಧನ ಆಕರಗಳೊಂದಿಗೆ ಪ್ರಶ್ನಿಸುವ ಮಾದರಿಗಳಲ್ಲಿರುವ ಕೆಲವೇ ಕೆಲವು ಕೃತಿಗಳಲ್ಲಿ "ನುಡಿ ಸೂತಕ" ಕೃತಿಯೂ ಒಂದಾಗಿದೆ. ಆದರೆ ಈ ಕೃತಿಯು ಮಾನವಶಾಸ್ತ್ರದ ಹಿನ್ನೆಲೆಯಲ್ಲಿದೆಯಷ್ಟೆ. ಇನ್ನುಳಿದ ಕ್ಷೇತ್ರಗಳಲ್ಲಿಯೂ ಇಂತಹ ಪ್ರಯತ್ನಗಳು ಆಗಬೇಕಿದೆ.
ಪ್ರಾದೇಶಿಕ ವೈಶಿಷ್ಟ್ಯವನ್ನು ಮೈಗೂಡಿಸಿಕೊಂಡು ವಿಶಿಷ್ಟವೆನಿಸಿದ ಜಾಗತಿಕ ಪಶುಪಾಲಕ, ಬೇಟೆಗಾರ, ವ್ಯವಸಾಯಿ ಸಂಸ್ಕೃತಿಗಳ ವಿಶಿಷ್ಟ ಆಚರಣೆಗಳನ್ನು ದಾಖಲಿಸಿ ಅವುಗಳನ್ನು ಮತ್ತೊಮ್ಮೆ ಜಾಗತಿಕ ಪ್ರಾಕೃತಿಕ ಸಂಸ್ಕೃತಿಗಳ ಜೊತೆ ಸಮೀಕರಿಸಿದಾಗ ಕೂಡುಕಟ್ಟು ಪದದ ವಿಶಾಲಾರ್ಥ ವಿಸ್ತರಿಸುತ್ತದೆ. ಅಂದಹಾಗೆ ಈ ಜಾಗತಿಕ ಪ್ರಾಕೃತಿಕ "ಕೂಡುಕಟ್ಟು" ಪದವೇ ಅಪ್ರಾಕೃತಿಕ ಸಂಸ್ಕೃತಿಯ "ವಸುದೈವ ಕುಟುಂಬಕಂ" ಎಂದಾಗಿದೆ. ಈ ನಿರ್ಧಾರಕ್ಕೆ ಬರಲು ಪ್ರಾದೇಶಿಕ ಪಶುಪಾಲಕ, ಬೇಟೆಗಾರ, ವ್ಯವಸಾಯಿ ಸಂಸ್ಕೃತಿಗಳ ವಿಶಿಷ್ಟತೆಯ ಸ್ಪಷ್ಟ ದಾಖಲಾತಿ ಅಗತ್ಯ. ಅಂತಹ ದಾಖಲಾತಿ ಹೇಗೆ ಪೂರ್ವಾಗ್ರಹ ಮತ್ತು ತಪ್ಪು ಗ್ರಹಿಕೆಗಳಿಂದ ದಾರಿ ತಪ್ಪಿದೆ ಎಂದು ಕರ್ನಾಟಕದ ಆದಿಮ, ಮ್ಯಾಸಬೇಡರ, ಗೊಲ್ಲರ ಆಚರಣೆ ಮತ್ತು ವಿಶಿಷ್ಟತೆಯನ್ನು ಸವಿಸ್ತಾರವಾಗಿ ವಿವರಿಸುತ್ತಾ ಮಲ್ಲಯ್ಯ ತಾತ್ವಿಕವಾಗಿ ಪ್ರಶ್ನಿಸುತ್ತಾರೆ. ಈ ದಾಖಲಾತಿ ಸರಿಯಾದರೆ ಮುಂದಿದನ್ನು ಜಾಗತಿಕ ಬೇಟೆಗಾರ ಆಚರಣೆಗಳೊಂದಿಗೆ ಸಮೀಕರಿಸಿ ಅವುಗಳಲ್ಲಿನ ವ್ಯತ್ಯಾಸಗಳು ಹೇಗೆ ಭೌಗೋಳಿಕ, ಹವಾಮಾನ, ಪರಿಸರ ಇತ್ಯಾದಿಗಳಿಂದ ಪ್ರಭಾವಿತಗೊಂಡವು ಮತ್ತು ಈ ಸಂಸ್ಕೃತಿಗಳ ಮೇಲೆ ನಿಯೋಲಿಥಿಕ್ ಕ್ರಾಂತಿ, ಜನಾಂಗೀಯ ವಲಸೆ, ಪುರೋಹಿತಶಾಹಿಯ ಪ್ರಭಾವಗಳನ್ನು ಸಹ ಸ್ಪಷ್ಟವಾಗಿ ನಿರೂಪಿಸಬಹುದು. ಆದರೆ ಆ ನಿಟ್ಟಿನಲ್ಲಿ ಸಾಗಲು ಇಲ್ಲಿನ ಪ್ರಾದೇಶಿಕ ಸಂಶೋಧನೆಗಳನ್ನು ಸರಿದಾರಿಗೆ ತರುವುದು ಅವಶ್ಯ ಎಂಬ ಚಿಂತನೆ ಮಲ್ಲಯ್ಯನವರದು ಎನಿಸುತ್ತದೆ.
ಈ ಕೃತಿಯ ಸಂಸ್ಕೃತಿ ಭಾಗದಲ್ಲಿ ಆಯಾಯ ಸಂಸ್ಕೃತಿಗಳ ವಿಕಾಸವನ್ನು ಜಾಗತಿಕ ಮಾನವೀಯ ಶಾಸ್ತ್ರದ ಹಿನ್ನೆಲೆಯಿಂದ ವಿಶ್ಲೇಷಿಸುವ ಪ್ರಯತ್ನವನ್ನು ಸೂಕ್ಷ್ಮವಾಗಿ ಕರ್ನಾಟಕದ ಮ್ಯಾಸಬೇಡ (ಬೇಟೆಗಾರ) ಸಂಸ್ಕೃತಿಯ ಹಿನ್ನೆಲೆಯವರೇ ಆದ ಉತ್ತರ ಭಾರತದ ಬಿಲ್ಲುಗಾರರೊಂದಿಗೆ ತೂಲಿಸುತ್ತ ಮುಂದೆ ಆಗಬೇಕಾದ ಜಾಗತಿಕ ಬೇಟೆಗಾರ ಸಮುದಾಯಗಳ ಸಂಸ್ಕೃತಿಯೊಂದಿಗೆ ತೂಲಿಸುವ ಸಾಧ್ಯತೆಯ ಸೂಚನೆಯನ್ನು ಮಲ್ಲಯ್ಯನವರು ಕೊಡುತ್ತಾರೆ. ಆ ನಿಟ್ಟಿನಲ್ಲಿ ಮಲ್ಲಯ್ಯನವರು ಯಶ ಸಿಗಲಿ.
ಇನ್ನುಳಿದಂತೆ ಮಾನವಶಾಸ್ತ್ರದ ಹಿನ್ನೆಲೆಯ ವಿಷಯಗಳೇ ಆದ ಲೋಕಾಯತ, ತಂತ್ರ ಪಂಥ, ಚಾರ್ವಾಕ ಸಂಸ್ಕೃತಿಗಳ ವಿಮರ್ಶೆಯೂ ಆಸಕ್ತಿದಾಯಕ ಮತ್ತು ಒಟ್ಟಾರೆ ಕೃತಿಯ ಆಶಯಕ್ಕೆ ಪೂರಕ.
ವಿಮರ್ಶೆ, ಸಂಶೋಧನೆಯ ನಿಲುವನ್ನು ಕೃತಿ ಮತ್ತು ಸಂಸ್ಕೃತಿಗಳ ಎರಡು ಭಾಗಗಳಲ್ಲಿರುವ ಬಿಡಿಬಿಡಿಯಾಗಿರುವ ಲೇಖನಗಳ ನಡುವೆ ಮುಖಾಮುಖಿಯಾಗಿಸಬಲ್ಲ, ಒಂದನ್ನೊಂದು ಬೆಸೆಯಬಲ್ಲ ಒಂದು ತಂತು ಬೇಕೆನಿಸುತ್ತದೆ. ಎಲ್ಲಾ ವಿಷಯಗಳೂ ಮಾನವಶಾಸ್ತ್ರದ ವಿಷಯಗಳೇ ಆದ್ದರಿಂದ ಆ ಬೆಸೆಯುವ ತಂತು ಸಾಧ್ಯವೆನಿಸುತ್ತದೆ. ಅಧ್ಯಾಯಗಳ ನಡುವೆ ಆ ತಂತುಗಳು ಅಲ್ಲಲ್ಲಿ ಕಂಡುಬಂದರೂ ಅದು ಆಯಾಯ ಅಧ್ಯಾಯದ ವಿಷಯಕ್ಕೆ ಮಾತ್ರ ಸೀಮಿತ ಎನಿಸುತ್ತದೆ. ಅಧ್ಯಾಯದಿಂದ ಅಧ್ಯಾಯಕ್ಕೆ ಖೋ ಕೊಡುವಂತಹ ಒಂದು ತಂತು ಯಾ ಥೀಮ್ ಓದನ್ನು ಆಪ್ತವಾಗಿಸಿ ಸೃಜನಶೀಲ ಓದುಗರಿಗೆ ರುಚಿಸಬಹುದು ಎಂಬ ಆಶಯ ನನ್ನದು. ಮಲ್ಲಯ್ಯನವರು ಆ ನಿಟ್ಟಿನಲ್ಲಿ ಕ್ರಿಯಾಶೀಲರಾಗಲಿ ಎಂದು ಆಶಿಸುವೆ.
ಒಟ್ಟಾರೆ ಇಂತಹ ವಿಶೇಷ ಪ್ರಯೋಗಗಳು ಇಂದಿನ ತುರ್ತು! ಅದಕ್ಕಾಗಿ ಆರಡಿ ಮಲ್ಲಯ್ಯ ಕಟ್ಟೇರ ಅವರು ಅಭಿನಂದನಾರ್ಹರು.
ರವಿ ಹಂಜ್
ಶಿಕಾಗೊ.
No comments:
Post a Comment