'ಅರಿದೆಡೆ ಆರದು, ಮರೆದೊಡೆ ಮೂರದು' ಕುರಿತು ಓದುಗರಾದ ಪ್ರಸ್ತು ಅವರ ಇಮೇಲ್ ಅಭಿಪ್ರಾಯ:

ಐತಿಹಾಸಿಕ ಸಂಶೋಧನಾತ್ಮಕ ಕೃತಿಗಳಿಗೆ ಹೆಸರಾಗಿರುವ ಲೇಖಕರಾದ ರವಿ ಹಂಜ್ ಅವರ ಪ್ರಸ್ತುತ ಕಾದಂಬರಿಯಾದ 'ಅರಿದೆಡೆ ಆರದು, ಮರೆದೊಡೆ ಮೂರದು' ಕೃತಿಯು ಅವರ ಹೊಸ ಬಗೆಯ ಸಾಹಿತ್ಯ ಶೈಲಿಯ ಪ್ರಯೋಗವಾಗಿದೆ. ಹಲವು ಅಧ್ಯಾಯಗಳಲ್ಲಿ ಬರೆಯಲಾದ ಕಾದಂಬರಿಯು ಗತಕಾಲದ ಇತಿಹಾಸವನ್ನಾಧರಿಸಿದ ಐತಿಹಾಸಿಕ ಕಾದಂಬರಿಯಾಗಿದ್ದು, ಮಠೀಯ ವ್ಯವಸ್ಥೆಯನ್ನು ಸೂಕ್ಷ್ಮ ಸಂವೇದನಾಶೀಲತೆಯೊಂದಿಗೆ ಅನಾವರಣಗೊಳಿಸುತ್ತದೆ. ಇದರ ಪ್ರತಿಯೊಂದು ಅಧ್ಯಾಯದ ಆರಂಭದಲ್ಲಿ ಸನ್ನಿವೇಶಕ್ಕೆ ಸಮಂಜಸವೆನಿಸುವ ಪೂರಕವಾದ ವಚನವನ್ನು ಅವುಗಳ ಪೀಠಿಕೆಯಾಗಿ ಉಲ್ಲೇಖಿಸಲಾಗಿದೆ.

ಕೃತಿಯ ಶೀರ್ಷಿಕೆಯ ಮರ್ಮದಂತೆ ಮನುಷ್ಯನು ತನ್ನ ಮನುಜಧರ್ಮವನ್ನು ಅರಿತು ಬದುಕಿದಾಗಲೇ ಉತ್ತಮನೆನಿಸಿಕೊಳ್ಳಬಲ್ಲನೇ ವಿನಃ ತನ್ನ ಸದ್ಗುಣಶೀಲತೆಯನ್ನು ಮರೆತು ಬದುಕಿದಾಗ ಅಧಮನೆನಿಸಿಕೊಳ್ಳಲು ಕ್ಷಣಕಾಲವೂ ತಗಲುವುದಿಲ್ಲ ಎಂಬುದನ್ನು ಕಾದಂಬರಿಕಾರರು ಅರ್ಥಪೂರ್ಣವಾಗಿ ಅರುಹಿದ್ದಾರೆ. 12ನೇ ಶತಮಾನದಿಂದ ಪ್ರಸ್ತುತ ಕಾಲಮಾನದ ವರೆಗೂ ಕಥಾವಸ್ತುವಿನ ವಿಸ್ತಾರತೆ ಚಾಚಿಕೊಂಡಿದ್ದರಿಂದ ಗತಕಾಲದ ಸದ್ಗುಣಶೀಲತೆಯಿಂದ ವರ್ತಮಾನದ ದುರಾಚಾರವು ವ್ಯವಸ್ಥೆಯೊಂದನ್ನು ಹೇಗೆ ದುರವಸ್ಥೆಗೆ ಕೊಂಡೊಯ್ಯಬಲ್ಲದು? ಎಂಬುದನ್ನು ಲೇಖಕರು ದೃಷ್ಟಾಂತೀಕರಿಸುತ್ತಾರೆ. ಮಠದ ಪೀಠಾಧಿಪತಿಗಳ ಸರಣಿ-ಕಥನವು ಒಳಗೊಂಡಿರುವ ಪಾತ್ರಗಳು ತಮ್ಮ ಮುಗ್ಧತೆಯಿಂದ ಹೇಗೆ ಅನುಭವದ ಪ್ರಬುದ್ಧತೆಯತ್ತ ವಿಕಸನ ಹೊಂದುತ್ತವೆ ಎಂಬುದನ್ನು ಮನೋವೈಜ್ಞಾನಿಕ ತಳಹದಿಯ ಮೇಲೆ ಸಂರಚಿಸಿರುತ್ತಾರೆ. ಪ್ರಸ್ತುತ ಕಾದಂಬರಿಯಲ್ಲಿ ಬಹುತೇಕ ಪಾತ್ರಧಾರಿಗಳ ಮೂಲಕ ಅರಹುವ ಅಣಕ-ಸಾಹಿತ್ಯವನ್ನು ಅವರ ಇದೊಂದೇ ಕೃತಿಯಲ್ಲದೆ ಬಹುತೇಕ ಕೃತಿಗಳಲ್ಲಿಯೂ ಕಾಣಬಹುದಾಗಿದೆ. ಹೀಗೆ ಸಮಾಜವನ್ನು ತಿದ್ದುವ, ಮಾದರಿ ವ್ಯವಸ್ಥೆಯನ್ನು ರೂಪುಗೊಳಿಸುವ ಆಶಯವನ್ನು ಹೊಂದಿರುವ ಇವರ ಕೃತಿಗಳು ಇಂದಿನ ದಿನಗಳಲ್ಲಿ ಹೆಚ್ಚು ಪ್ರಸ್ತುತವೆನಿಸುತ್ತವೆ. 

ಕೃತಿಯಲ್ಲಿ, ಸಂಸಾರಿಗಳನ್ನು ಮೀರಿಸುವಂತಹ ಸುಖವನ್ನೆಲ್ಲಾ ಸಂತರು ಸುಖಿಸಿದ್ದು ಅವರ ಸ್ವಚ್ಛಂದ ಬದುಕಿನ ಸಹಜತೆಯನ್ನು ತೋರುತ್ತದೆ. ಆದಾಗ್ಯೂ ಅವರೆಲ್ಲರೂ ಸ್ವಯಂಶಿಸ್ತನ್ನು, ಆಚಾರಗಳು, ನಡಾವಳಿಗಳನ್ನು ಮರೆತು ಪ್ರಾಪಂಚಿಕ ಆಕರ್ಷಣೆಗಳಿಗೆ ದಾಸರಾಗುವುದರ ಅಡ್ಡಪರಿಣಾಮಗಳನ್ನು ಕಾದಂಬರಿಕಾರರು ಪರಿಶೀಲನೆಗೆ ಒಡ್ಡುತ್ತಾರೆ. ಯಾವುದೇ ಬಂಧನಗಳಿಗೆ ಒಳಪಡದೆ, ನಿಬಂಧನೆಗಳಿಲ್ಲದೆ ಹೀಗೆ ಸ್ವೇಚ್ಛೆಯಿಂದ ಬದುಕಲು ಸನ್ಯಾಸವನ್ನು ಲೌಕಿಕತೆಯೆಡೆಗೆ ಕರೆದೊಯ್ಯುವ ಬಳಸುದಾರಿಯಾಗಿ ಬಳಸಿಕೊಂಡಿರುವುದನ್ನು ಲೇಖಕರು ಪರೋಕ್ಷವಾಗಿ ಖಂಡಿಸುತ್ತಾರೆ! ಹೀಗೆಲ್ಲ ಅವಧೂತರಾಗಿ ಬದುಕುವ ಈ ಸಂತರ ಕುರಿತು ಓದುವಾಗಲೆಲ್ಲ ಕುಮಾರ ಜೀವ ತಟ್ಟನೆ ಭಾಸವಾಗುತ್ತಾನೆ. ಕುಮಾರ ಜೀವನಂತೆ ಇಲ್ಲಿಯೂ ಕೂಡ ಸಂತರಾದವರು ಅಗಣಿತ ಸಂತಾನ ಪ್ರಸರಣದಲ್ಲಿ ಕಾರ್ಯೋನ್ಮುಖರಾಗಿರುವುದು ವಿಡಂಬನೆಗಿಂತಲೂ ಹೆಚ್ಚಾಗಿ ಕಳವಳಕಾರಿ ಸಂಗತಿಯಾಗಿದೆ. 

ಇಡೀ ಜಗತ್ತನ್ನೇ ಮಠದ ನಾಲ್ಕು ಗೋಡೆಗಳಲ್ಲಿ ತರುವ, ಅತಿ ಸಾಮಾನ್ಯನನ್ನೂ ಎಲೈಟ್ ದರ್ಜೆಗೇರಿಸುವ ಕಾಲ್ಪನಿಕ ಕಥಾಹಂದರವು ತುಂಬಾ ಹಾಸ್ಯಮಯವಾಗಿಯೂ, ರಸವೊತ್ತಾಗಿಯೂ ಮೂಡಿಬಂದಿರುತ್ತದೆ. ಹಾಗಾಗಿ ಕಾದಂಬರಿಯ ಶೀರ್ಷಿಕೆಯು ಸಂಕಥನದ ಉದ್ದಕ್ಕೂ ತನ್ನ ಬಿಂಬದೊಂದಿಗೆ ಸಮರ್ಪಕತೆಯನ್ನು ತೋರುತ್ತದೆ. 

ಒಟ್ಟಾರೆ, ಹಾಸ್ಯ ಮತ್ತು ವಿಡಂಬನೆ ಎರಡೂ ಸಮಾನಾಂತರವಾಗಿ ಕ್ರಮಿಸಿ ಮನುಷ್ಯನ ನಿಜರೂಪವನ್ನು ಅನಾವರಣಗೊಳಿಸುವ ಅರಿವಿನ ಕಾದಂಬರಿ ಇದಾಗಿರುತ್ತದೆ.

- ಪ್ರಸ್ತು

No comments: