ನನ್ನ ಒಂದು ಕಾರು ಬೆಂಗಳೂರಿನಲ್ಲಿ ಇದ್ದುದರಿಂದ ಅದನ್ನು ತರಲು ಹೊಸದುರ್ಗದಿಂದ ಬಸ್ಸಿನಲ್ಲಿ ಬೆಂಗಳೂರಿಗೆ ಹೋಗುವುದು ಎಂದು ನಿರ್ಧರಿಸಿದೆ. ಅದಕ್ಕೆ ದಾವಣಗೆರೆಯಲ್ಲಿರುವ ನನ್ನ ಸೋದರಳಿಯ, "ನಾನೂ ಬರುತ್ತೇನೆ. ನೀವು ಚಿತ್ರದುರ್ಗಕ್ಕೆ ಬನ್ನಿ. ಅಲ್ಲಿಂದ ಸುಸಜ್ಜಿತ ಎಲೆಕ್ಟ್ರಿಕ್ ಬಸ್ಸಿನಲ್ಲಿ ಹೋಗೋಣ" ಎಂದ. ಸರಿಯೆಂದು ಬೆಳಿಗ್ಗೆ ಆರೂವರೆಗೆ ಹೊಸದುರ್ಗದಿಂದ ಚಿತ್ರದುರ್ಗಕ್ಕೆ ಬಸ್ ಹತ್ತಿ ಕಂಡಕ್ಟರ್ ಕೈಗೆ ನೂರು ರೂಪಾಯಿ ಕೊಟ್ಟೆ. ಅದಕ್ಕೆ ಆತ, "ಒಂದು ರೂಪಾಯಿ ಚಿಲ್ಲರೆ ಕೊಡಿ" ಎಂದ. ಚಿಲ್ಲರೆ ಇರದ ಕಾರಣ ಇಲ್ಲವೆಂದೆ.
ಒಂದು ರೂಪಾಯಿ ಕೊಟ್ಟಿದ್ದರೆ ನಲ್ವತ್ತು ರೂಪಾಯಿ ವಾಪಸ್ ಕೊಟ್ಟು ಟಿಕೆಟ್ ಕೊಡುತ್ತಿದ್ದ ಕಂಡಕ್ಟರ್, "೩೯" ಎಂದು ಅರವತ್ತೊಂದರ ಟಿಕೆಟ್ ಹಿಂದೆ ಗೀಚಿ ಟಿಕೆಟ್ ಕೊಟ್ಟ.
ಮೂವತ್ತು ಅಥವಾ ಮೂವತ್ತೈದು ವಾಪಸ್ ಕೊಟ್ಟು ಉಳಿದದ್ದು ಗೀಚಿ ಕೊಡಬಹುದಾಗಿದ್ದ ಆ ವಿಶ್ವಗುರು ಹಾಗೇಕೆ ಕೊಟ್ಟನೋ ಗೊತ್ತಿಲ್ಲ!
ಆತನ ಉದ್ದೇಶ ಏನೇ ಆಗಿದ್ದರೂ ಚಿತ್ರದುರ್ಗದಲ್ಲಿ ಇಳಿದಾಗ ಮರೆಯದೆ ಚಿಲ್ಲರೆ ಪಡೆದುಕೊಳ್ಳಬೇಕೆಂಬ ವಿಷಗುರುತ್ವ ನನ್ನದಾಯಿತು. ಬಸ್ ಇಳಿದು ಚಿಲ್ಲರೆ ಕೇಳಿದಾಗ ಆತ ನೂರಾ ಇಪ್ಪತ್ತು ರೂಪಾಯಿ ನನ್ನ ಕೈಗೆ ತುರುಕಿ, "ನಿಮ್ಮ ಚಿಲ್ಲರೆ ಮುರಿದುಕೊಂಡು ಉಳಿದದ್ದು ಈ ಈರ್ವರಿಗೆ ಹಂಚಿ ಎಂದು ರೈಟ್ ಹೇಳಿದ!
ಎಲಾ ಇವನ...ಎಂದುಕೊಂಡು ಇಪ್ಪತ್ತು ನನಗೆ ಸಾಕೆಂದು ಹೇಳಿ ನೂರು ರೂಪಾಯಿ ಇನ್ನೊಬ್ಬ ಸಹಚಿಲ್ಲರಿಗನಿಗೆ ಕೊಟ್ಟು, ಬೈಟು ಕಾಫಿ ಕುಡಿದು ಹಂಚಿಕೊಳ್ಳಿ ಎಂದು ನಾನೂ ರೈಟ್ ಹೇಳಿ ಬೆಂಗಳೂರು ಪ್ಲಾಟ್ಫಾರ್ಮ್ ಕಡೆ ನಡೆದೆ.
ಇತ್ತ ನನ್ನ ಸೋದರಳಿಯ ಹೇಳಿದ್ದ ಬಸ್ ಬಂದಾಗ ಅದರಲ್ಲಿ ಅವನು ಕಾಣಲಿಲ್ಲ. ಫೋನ್ ಮಾಡಿದಾಗ ಹಾಯಾಗಿ ಮಲಗಿದ್ದ ಅವನು ಎದ್ದು, "ನೀವು ಅಲ್ಲಿ ತಿಂಡಿ ತಿನ್ನುತ್ತೀರಿ. ಈ ಕೂಡಲೇ ಹೊರಟು ಬರುತ್ತೇನೆ" ಎಂದ.
ಗತಿಯಿಲ್ಲದೆ ಮರೆತಿದ್ದ ಲಕ್ಷ್ಮಿ ಟಿಫಿನ್ ರೂಂ ನೆನೆಸಿಕೊಂಡು ಆ ಕಡೆ ಆಟೋ ಹತ್ತಲು ಅನುವಾಗುತ್ತಿದ್ದಂತೆಯೇ ನನ್ನ ಸಹಚಿಲ್ಲರಿಗ ಓಡೋಡಿ ಬಂದು ಹತ್ತೊಂಬತ್ತು ರೂಪಾಯಿ ಕೊಟ್ಟು ಬದ್ಧತೆ ಮೆರೆದ. ಆತನ ಬದ್ಧತೆ ಕಂಡಕ್ಟರನ ಮಲಬದ್ಧತೆಯ ಮುಖವನ್ನು ಮರೆಸಿತು. ಆದರೆ ಅದನ್ನು ಮರೆಯದಂತೆ ನಾನು ಹತ್ತಿದ ಆಟೋ ಚಾಲಕ ಲಕ್ಷ್ಮಿ ಟಿಫಿನ್ ರೂಂ ಮುಂದೆಯೇ ಹಲವಾರು ಬಾರಿ ಸುತ್ತಿಸತೊಡಗಿದ. ಚೆನ್ನೈನಲ್ಲಿ ಆಟೋದವರು ಸುತ್ತಿಸುವುದು ಕೇಳಿದ್ದೆ. ಆ ಚಾಳಿ ದುರ್ಗಕ್ಕೆ ಬಂದುದು ಪ್ರಗತಿಯ ಸಂಕೇತ ಎಂದುಕೊಂಡು, "ವಿಶ್ವಗುರುವೇ, ಏಕೆ ಮೂರು ಬಾರಿ ಲಕ್ಷ್ಮಿ ಟಿಫಿನ್ ರೂಂ ಬಂದರೂ ನಿಲ್ಲಿಸದೆ ಇಲ್ಲೇ ಸುತ್ತಿಸಿದೆ?" ಎಂದೆ.
ಅದಕ್ಕೆ ಅವನು, "ಅದರ ಹತ್ತಿರ ಎಲ್ಲಾದರೂ ಅಡ್ರೆಸ್ ಹೇಳುವಿರೇನೋ ಎಂದು ಸುತ್ತಿಸಿದೆ" ಎಂದ.
"ಸರಿ, ಬಿಡಪ್ಪ" ಎಂದು ಬಸ್ ನಿಲ್ದಾಣದಿಂದ ನಡೆಯಬಹುದಾದ ಜಾಗಕ್ಕೆ ಆಟೋದಲ್ಲಿ ಬಂದ ತಪ್ಪಿಗೆ ಅರವತ್ತು ರೂಪಾಯಿ GST ಸಮೇತ ಕಕ್ಕಿದೆ.
***
ಟಿಫಿನ್ ರೂಮಿನಲ್ಲಿ ಕೆಲವು ನಿಯೋಜಿತ ಭೇಟಿಗಳನ್ನು ಮುಗಿಸಿ ಅನಿಯೋಜಿತ ಎಸ್ಕೆ ಶಾಮಸುಂದರ ಅವರನ್ನೂ ಭೇಟಿ ಮಾಡಿ ನಂತರ ನನ್ನ ಸೋದರಳಿಯ ಹತ್ತಿ ಬಂದ ವಿದ್ಯುತ್ ಚಾಲಿತ ಬಸ್ ಹತ್ತಿದೆ. ಅಷ್ಟರಲ್ಲೇ ನನ್ನ ಸೋದರಳಿಯನ ಬಾಸ್ ಕರೆ ಮಾಡಿ ಯಾವುದೋ ಅರ್ಜೆಂಟ್ ಕೆಲಸವನ್ನು ಅವನಿಗೆ ವಹಿಸಿದ ಕಾರಣ ನಾನೊಬ್ಬನೇ ಬೆಂಗಳೂರಿಗೆ ಪಯಣಿಸಿದೆ.
ನವರಂಗ್ ಬಳಿ ಬಸ್ ಇಳಿದವಗೆ ಓರ್ವ ನವರಂಗಿ ವಿಶ್ವಗುರು ಆಟೋ ಚಾಲಕ ಸಿಕ್ಕಿದ. ಆಟೋ ಹತ್ತಿ ಮಲ್ಲೇಶ್ವರ ಹನ್ನೊಂದನೇ ಕ್ರಾಸ್ ಎಂದೆ. "ಜಾಸ್ತಿ ಕೇಳಲ್ಲ. ನೂರು ರೂಪಾಯಿ ಕೊಡಿ, ಸಾಕು" ಎನ್ನುತ್ತಾ "ಎಲ್ಲಿಂದ?" ಎಂದ. "ದಾವಣಗೆರೆ" ಎಂದೆ. ಆಗಷ್ಟೇ ನಮ್ಮ ದಾವಣಗೆರೆ ಧಣಿಗಳ ಗುಣಗಾನ ಮಾಡಿ ಖ್ಯಾತನಾಗಿದ್ದ ರಿಜ್ವಾನನಿಗೆ ಅಜ್ವಾನ ಹಾಕಿ ಹಪ್ಪಳ ಮಾಡಿದ. ನಂತರ ನನ್ನ ಉದ್ಯೋಗದ ಬಗ್ಗೆ ಕೇಳಿದ. ನಾನು ನಿವೃತ್ತಿಯಾಗಿದ್ದೇನೆ ಎಂದೆ. ಥಟಕ್ಕನೆ ಆಟೋ ನಿಲ್ಲಿಸಿ ಮುಖ ನೋಡಿ, "ಇಷ್ಟು ಬೇಗ!?" ಎಂದ.
"ಹೌದು, ಕೈಕಾಲು ಗಟ್ಟಿಯಿದ್ದಾಗ ರಿಟೈರ್ ಆಗಿ ದೇಶ ಸುತ್ತಿ, ವಯಸ್ಸಾದ ಮೇಲೆ ಖುರ್ಚಿ ಮೇಲೆ ಕುಳಿತು ಕೆಲಸ ಮಾಡಬೇಕೆಂಬುದು ನನ್ನ ಪ್ಲ್ಯಾನ್" ಎಂದೆ.
"ಸಂತೋಷ. ನಿಮ್ಮಿಂದ ಒಂದು ಸಹಾಯ ಎಕ್ಸ್ಪೆಕ್ಟ್ ಮಾಡಬಹುದಾ?" ಎಂದ.
"ಆಗುವುದಾದರೆ ಮಾಡೋಣ, ಹೇಳಿ" ಎಂದೆ.
"ಖಂಡಿತ ಮಾಡ್ತೀನಿ ಅಂದ್ರೆ ಕೇಳ್ತೀನಿ" ಎಂದು 'ವೃಥಾ ಸುಖಾಸುಮ್ಮನೆ ಎಲ್ಲಾ ನಾನು ಕೇಳುವ ಚಿಲ್ಲರೆ ಮನುಷ್ಯ ಅಲ್ಲ. ಸಹಾಯ ಮಾಡದೆ ಹೋದರೆ ನೀನೇ ಚಿಲ್ಲರೆ ಆಗುವುದು' ಎಂಬರ್ಥದಲ್ಲಿ ನಮ್ಮೀರ್ವರ ಘನತೆಯ ಬಗ್ಗೆ ಒಂದು ಸೂಕ್ಷ್ಮ ಎಚ್ಚರಿಕೆ ಕೊಟ್ಟ.
"ನನ್ನ ಕೈಲಾದರೆ ಮಾಡುತ್ತೇನೆ. ಆಗದ್ದನ್ನೆಲ್ಲ ಮಾಡಲು ಆಗುತ್ತದೆ ಎನ್ನಲು ನಾನು ರಾಜಕಾರಣಿ ಅಲ್ಲ" ಎಂದೆ.
"ಏನೂ ಇಲ್ಲ, ನನ್ನ ಮಗಳ ಕಾಲೇಜ್ ಫೀಸು ಹದಿನೈದು ಸಾವ್ರ ಕಟ್ಟಬೇಕಿತ್ತು. ನೀವು ಕೊಟ್ರೆ ನಾನು ಸ್ವಲ್ಪ ಸ್ವಲ್ಪ ವಾಪಸ್ ಕೊಟ್ಟು ತೀರುಸ್ತೀನಿ. ನಿಮಗೆ ಹದಿನೈದು ಸಾವ್ರ ಏನು ದೊಡ್ಡದಲ್ಲ. ಎಲ್ಲೋ ಕಳೆದುಬಿಡ್ತೀರಿ. ನೋಡಿ ಗೂಗಲ್ ಪೇ ಮಾಡಿ" ಎಂದ.
"ಡಬ್ಬಲ್ ಮೀಟ್ರು ಓಕೆ, ನುರೈವತ್ತರಷ್ಟು ಮೀಟ್ರು ಯಾಕೆ!?!" ಎಂದುಕೊಳ್ಳುತ್ತ, "ಅಷ್ಟೆಲ್ಲಾ ದೊಡ್ಡ ಮನುಷ್ಯ ನಾನಲ್ಲ, ವಿಶ್ವಗುರುವೇ" ಎಂದು ನೂರು ರೂಪಾಯಿ ಕೊಟ್ಟು ಇಳಿದೆ.
***
ದಾವಣಗೆರೆಯಲ್ಲಿ ನನಗೆ ಈಗ ಇರಲು ಜಾಗವಿಲ್ಲ. ಏಕೆಂದರೆ ನನ್ನ ಮನೆಯನ್ನು ಬಾಡಿಗೆ ಕೊಟ್ಟಿದ್ದೇನೆ. ಹಾಗಾಗಿ ದಾವಣಗೆರೆಗೆ ಹೋದಾಗ ಹೋಟೆಲ್ಲಿನಲ್ಲಿ ಇರುವುದು ಅನಿವಾರ್ಯ. ವಾರದಲ್ಲಿ ಸದಾ ನಾಲ್ಕು ದಿನ ಹೋಟೆಲ್ಲಿನಲ್ಲಿರುವುದು ನನಗೆ ಅಭ್ಯಾಸವಾಗಿಹೋಗಿರುವ ಕಾರಣ, ಹೋಟೆಲ್ಲಿನಲ್ಲಿರುವುದು ನನಗೆ ಅತ್ಯಂತ ಪ್ರೀತಿಯ ಸಂಗತಿ. ಆದರೆ ನನ್ನ ಊರಿನಲ್ಲಿಯೇ ಎಂದೂ ಹೋಟೆಲ್ಲಿನಲ್ಲಿ ಉಳಿಯದ ನನಗೆ ದಾವಣಗೆರೆಯಲ್ಲಿ ಹೋಟೆಲ್ಲಿನಲ್ಲಿರುವುದು ಒಂದು ರೀತಿಯ ನಿರ್ವಾತ ಅನಾಥ ಭಾವನೆಯನ್ನು ಉಂಟು ಮಾಡಿತು. ಅದರಲ್ಲೂ ದಾವಣಿಗರ ಹೋಟೆಲ್ಲುಗಳ ಸೊಕ್ಕಿನ ಸಿಬ್ಬಂದಿಗಳು ರೂಮು ಕೊಡುವುದೇ ತಾವು ಮಾಡುವ ಮಹದುಪಕಾರ ಎಂಬಂತೆ ವರ್ತಿಸಿ ಒಂದೇ ನೀರಿನ ಬಾಟಲ್ಲು, ಒಂದೇ ಒಂದು ಟವೆಲ್ಲು ಕೊಟ್ಟು ಶವರ್ ಕರ್ಟನ್ನು ಹಾಕದೆ, ಚೆಕಿನ್ ಮುಂಚಿತವಾಗಿ ಎಸಿ ರೂಮನ್ನು ತಂಪಾಗಿರಿಸದೆ ಆದರೆ ಡೆಂಟಲ್ ಕಿಟ್ ಇಟ್ಟು ದಿನಕ್ಕೆ ನಾಲ್ಕೂವರೆಯಿಂದ ಏಳು ಸಾವಿರ ಕೀಳುವ ಪಕ್ಕಾ ವ್ಯಾಪಾರಿ ಮಾಜಿ ದಲ್ಲಾಳಿ, ಹಾಲಿ ರಿಯಲ್ ಎಸ್ಟೇಟ್ ಟೈಕೂನುಗಳ ಹೋಟೆಲ್ ನನ್ನಲ್ಲಿ ಇನ್ನಷ್ಟು ಅನಾಥ ನಿರ್ವಾತವನ್ನು ತುಂಬಿದವು.
ಮರುದಿನ ನನ್ನ ಅತ್ತೆಯ ಮಗ ತನ್ನಲ್ಲಿರುವ ಪ್ರಾಣಿ ಪ್ರೀತಿಯನ್ನು ನನ್ನಲ್ಲೂ ಕಂಡಂತೆ ಅವರ ಮಿಲ್ಲಿನಲ್ಲಿ ಬೀಡು ಬಿಟ್ಟಿರುವ ಮಠದ ಆನೆಯನ್ನು ತೋರಿಸಲು ಕರೆದುಕೊಂಡು ಹೋದ. ಆನೆ ಆಗಲೇ ನಗರ ಸಂಚಾರಕ್ಕೆ ಹೋಗಿಯಾಗಿತ್ತು. 'ಸರಿ' ಎಂದು ಅಲ್ಲಿಂದ ಒಂದು ಮದುವೆ, ಎರಡು ಗೃಹ ಪ್ರವೇಶಗಳಲ್ಲಿ ಮೂರು ಊಟ ಮುಗಿಸಿಕೊಂಡು ರಾಮ್ ಅಂಡ್ ಕೊ ಸರ್ಕಲ್ ಕಡೆ ಹೊರಟೆ. ಎದುರಿಗೆ ಆನೆ ಬರುವುದು ಕಂಡಿತು. ಅದು ಹೇಗೋ ಏನೋ ಆನೆಯು ಎಲ್ಲಾ ಬಿಟ್ಟು ನನ್ನ ಕಾರನ್ನು ತಡೆದು ಕಿಟಕಿ ತೆರೆಯುವಂತೆ ಸೊಂಡಿಲಿನಿಂದ ನಾಕ್ ನಾಕ್ ಬಡಿಯಿತು. ಕಿಟಕಿ ಇಳಿಸಿದ ನನ್ನ ತಲೆಯ ಮೇಲೆ ಸೊಂಡಿಲಿಟ್ಟು ಆಶೀರ್ವದಿಸಿ ವಿಶ್ವಗುರು ಆನೆ "ತಕ್ಕ" ದಕ್ಷಿಣೆ ಪಡೆದು ಮುನ್ನಡೆಯಿತು.
***
ನನ್ನ ತೋಟದ ಹತ್ತಿರ ಒಂದು ದೊಡ್ಡ ಕೆರೆಯಿದೆ. ಈ ಕೆರೆಗೆ ಭದ್ರಾ ಮೇಲ್ದಂಡೆ ಯೋಜನೆಯ ನಾಲೆಯಿಂದ ನೀರು ತುಂಬಿಸುವ ಏತ ನೀರಾವರಿಗೆ ಹಿಂದಿನ ಕಮಲ ಶಾಸಕರು ಐದು ಕೋಟಿ ತೆಗೆದಿರಿಸಿದ್ದನ್ನು ಇಂದಿನ ಕೈ ಶಾಸಕರು ಬೇರೆ ಕಾರ್ಯಕ್ಕೆ ಕೊಟ್ಟಿದ್ದಾರಂತೆ. ಮೊನ್ನೆ ಈ ಹಾಲಿ ಕೈ ಶಾಸಕರು ನನ್ನ ತೋಟದ ಪಕ್ಕದಲ್ಲಿರುವ ಹದಿನೈದು ಮನೆಗಳ ಹಳ್ಳಿಗೆ ಭೇಟಿ ಕೊಟ್ಟು ಅಲ್ಲಿನ ರಾಮನ ದೇವಾಲಯಕ್ಕೆ ಮುಜರಾಯಿ ಇಲಾಖೆಯಿಂದ ಹತ್ತು ಲಕ್ಷ ಮತ್ತು ತಮ್ಮ ಕೈಯಿಂದ ಇಪ್ಪತ್ತು ಲಕ್ಷ ಕೊಡಿಸುತ್ತೇನೆ, ದೇವಸ್ಥಾನವನ್ನು ಕೆಡವಿ ಕಟ್ಟಿ ಎಂದು ಹೇಳಿ ಹೋಗಿದ್ದಾರೆ.
ಐನೂರಕ್ಕೂ ಹೆಚ್ಚಿನ ಓಟುಗಳ ಹಳ್ಳಿಯ ಜನೋಪಯೋಗಿ ನೀರಾವರಿ ಯೋಜನೆಯನ್ನು ತಡೆದು ಮೂವತ್ತು ಓಟುಗಳ ಅರ್ಧದ ಹದಿನೈದು ಓಟುಗಳಿಗೆ ಮೂವತ್ತು ಲಕ್ಷ ರೂಪಾಯಿಗಳ ಬಂಡವಾಳದ ದೇವಸ್ಥಾನವು ಯಾವ ರಾಜಕೀಯ ಸಮೀಕರಣ ಎಂದು ನನಗರ್ಥವಾಗಲಿಲ್ಲ?!? ಬಹುಶಃ ಕೆರೆಯಲ್ಲಿ ಕಮಲ ಬೆಳೆಯುತ್ತದೆಂದು ಕೆರೆಯನ್ನು ಒಣಗಿಸಿ ರಾಮಮಂದಿರವೊಂದನ್ನು ತಮ್ಮ "ಕೈ" ಕಟ್ಟಬಲ್ಲದು ಎಂದು ತೋರುವ ದೂರದೃಷ್ಟಿ ಅವರದಿರಬಹುದು.
***
ಹೀಗೆ ಬಸ್ ನಿರ್ವಾಹಕ, ಆಟೋ ಚಾಲಕ, ಹೋಟೆಲ್ ಮಾಲೀಕ, ರಾಜಕಾರಣಿ ಇತ್ಯಾದಿ ಅಷ್ಟೇ ಅಲ್ಲದೆ ಸಾಕುಪ್ರಾಣಿಗಳು ಸಹ ಬಕರಾಗಳನ್ನು ಗುರುತಿಸಿ ನುಣ್ಣಗೆ ಬೋಳಿಸುವ ಜಾಗತಿಕ ವ್ಯಾಪಾರಿತನದ ವಿಶ್ವಗುರುವೆಂಬೋ ವಿಶ್ವಗುರುಗಳನ್ನು ನನ್ನಂತಹ ಅಮಾಯಕ ಅನಿವಾಸಿ ಬೇವರ್ಸಿಗಳು ಮೀರಿಸಲು ಸಾಧ್ಯವೇ?!
#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ
#ಕರ್ನಾಟಕವೆಂಬೋಕಮಂಗಿಪುರದಲ್ಲಿ
No comments:
Post a Comment