ವಿಶ್ವವಾಣಿ ಬಸವ ಮಂಟಪ - ಪೂಜೆ ಪಾರ್ಟಿ ಟೈಮ್ ಸಮಾಜ ಸೇವೆ ಫುಲ್ ಟೈಮ್

 ಚಿತ್ರದುರ್ಗದ ಜಿಲ್ಲೆಯ ಅನೇಕ ಸ್ವಾಮಿಗಳಿಗೆ ಅದೇನೋ ಪ್ರಚಾರದ ತೆವಲು. ಹೇಗಾದರೂ ಮಾಡಿ ಪತ್ರಿಕೆಗಳಲ್ಲಿ ತಮ್ಮದೊಂದು ಸುದ್ದಿ ಇರಬೇಕು ಎಂದು ಸದಾ ತುರಿಸಿಕೊಳ್ಳುತ್ತಿದ್ದರು. ಭಾರತದಲ್ಲಿ ಉಂಟಾದ ಮಾಧ್ಯಮರಂಗ ಅಸ್ಫೋಟದೊಂದಿಗೆ ಇವರ ತುರಿಕೆ ಅತಿಯಾಗಿ "ಪೂಜೆ ಪಾರ್ಟಿ ಟೈಮ್, ಸಮಾಜ ಸೇವೆ ಫುಲ್ ಟೈಮ್" ಎಂಬ ಉದ್ಘೋಷದೊಂದಿಗೆ ಈ ಹುಚ್ಚು ಇಂದು ಉತ್ತುಂಗದ ತುತ್ತ ತುದಿಯನ್ನು ಏರಿದೆ. ಈ ಉತ್ತುಂಗದ ತುದಿಯಲ್ಲಿರುವ ಓರ್ವ ರಂಗ ಜಂಗಮ ಎನಿಸಿದ ಸ್ವಾಮಿಗಳು, "ಗಣಪತಿ ಪೂಜೆ ಮಾಡಬಾರದು" ಎಂದು ಹೇಳಿ ಕಳೆದ ವರ್ಷ ಕರ್ನಾಟಕದ ತುಂಬಾ ಬಯಲಾಟ ಆಡಿಸಿದ್ದರು.


ಆಗ ಅದನ್ನು ಸಕಾರಣವಾಗಿ ವಿಮರ್ಶಿಸಿದ್ದ ವಿಶ್ವವಾಣಿ ಸಂಪಾದಕರ ಮೇಲೆ ತಮ್ಮ ಬೆಂಬಲಿಗರಿಂದ ಫತ್ವಾ ಹೊರಡಿಸಿದ್ದರು. ಯಾವಾಗ ವಿರೋಧ ಪ್ರಬಲವಾಯಿತೋ ಆಗ, "ನಾನು ಕರೆ ನೀಡಿದ್ದು ಲಿಂಗಾಯತರಿಗೆ ಮಾತ್ರ ಎಲ್ಲರಿಗೂ ಅಲ್ಲ" ಎಂದು ಪರದೆ ಇಳಿಬಿಟ್ಟರು. ಅಲ್ಲಿಗೆ ಗಣಪತಿ ಪ್ರಸಂಗ ರಂಗ ಪ್ರಯೋಗ ಯಶಸ್ವಿಯಾಗಿ ಮಾಧ್ಯಮದಲ್ಲಿ ಸಾಕಷ್ಟು ಪ್ರಚಾರ ಗಿಟ್ಟಿಸಿಕೊಟ್ಟಿತು.


ಕಳೆದ ವಾರ ಹೊಳಲ್ಕೆರೆಯಲ್ಲಿ "ಚಿನ್ಮೂಲಾದ್ರಿ ಚಿತ್ಕಳೆ" ಎಂಬ ಸಂಪಾದಿತ ಗ್ರಂಥದ ಸ್ಪೂರ್ತಿಯಾದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಜಗದ್ಗುರುಗಳ ಒಂದೊಮ್ಮೆಯ ಬದ್ಧ ವಿರೋಧಿಗಳಾಗಿದ್ದ ಇವರು ಅವರ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಪುಢಾರಿ ಭಕ್ತರ ದೆಸೆಯಿಂದ ಹಾಜರಿದ್ದು, "ಲಿಂಗಾಯತ ಹಿಂದೂ ಧರ್ಮದ ಭಾಗವಲ್ಲ...." ಇತ್ಯಾದಿಯಾಗಿ ಹಿಂದೂ ಧರ್ಮದ ಅವಹೇಳನ ಮಾಡಿದರು. ಇದನ್ನು ಟೀಕಿಸಿ ವಿಶ್ವವಾಣಿಯ ವಿಶ್ವೇಶ್ವರ ಭಟ್ಟರು, "...ಸಾಕು ಮಾಡಿ ನಿಮ್ಮ ಗೊಡ್ಡು ಪುರಾಣ" ಎಂಬ ಲೇಖನವನ್ನು ಬರೆದರು. ಈಗ ಮತ್ತೊಮ್ಮೆ ಲಿಂಗಾಯತ ಅನ್ಯಧರ್ಮ ಎಂಬ ನಶೆಯ ಭಕ್ತರು ಭಟ್ಟರ ಮೇಲೆ ಫತ್ವಾ ಹೊರಡಿಸಿದ್ದಾರೆ. 


ಇರಲಿ, ಈ ಎಲ್ಲಾ ರಂಗನಾಟಕಗಳ ಆಚೆ ಲಿಂಗಾಯತ ಹಿಂದೂ ಧರ್ಮದ ಭಾಗವಾಗಿತ್ತೇ? ನೋಡೋಣ ಬನ್ನಿ.


ಮೊದಲಿಗೆ ಲಿಂಗಾಯತರಿಗೆ ಒಂದು ಧರ್ಮಗ್ರಂಥವಿದೆ. ಈ ಅರೆಬೆಂದ ಸ್ವಾಮಿಗಳು ಹೇಳುವಂತೆ ಕೇವಲ ವಚನಗಳ ಕಟ್ಟು ಲಿಂಗಾಯತರ ಧರ್ಮಗ್ರಂಥವಲ್ಲ! ಚೆನ್ನಬಸವಣ್ಣನು ರಚಿಸಿದ "ಕರಣ ಹಸಿಗೆ" ಲಿಂಗಾಯತರ ಧರ್ಮಗ್ರಂಥ ಎಂದು ಮಾನ್ಯತೆ ಪಡೆದಿದೆ. ವಿಪರ್ಯಾಸವೆಂಬಂತೆ ಮೊನ್ನೆ ಯಾವ ವೇದಿಕೆಯಲ್ಲಿ ರಂಗಜಂಗಮರು ಲಿಂಗಾಯತ ಹಿಂದೂ ಧರ್ಮದ ಭಾಗವಲ್ಲ ಎಂದು ಭಾಷಣ ಮಾಡಿದ್ದರೋ ಅದೇ ಸ್ಮರಣೋತ್ಸವ ಆಚರಿಸಿದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿಗಳೇ ಇದರಲ್ಲಿ ಪ್ರಕಾಂಡ ಪಂಡಿತರಾಗಿದ್ದರು!


ಇರಲಿ, ಈಗ ಲಿಂಗಾಯತರಲ್ಲಿ ಓಂ ಇಲ್ಲ, ವೇದವಿಲ್ಲ, ಆಗಮವಿಲ್ಲ, ಅದಿಲ್ಲ ಇದಿಲ್ಲ ಎನ್ನುತ್ತಾ ವಿಶ್ವವಾಣಿಗೆ ಬಸವಲಿಂಗ ಸವಾಲ್ ಎಂದು ಸವಾಲು ಹಾಕುತ್ತಿರುವ ಅಜ್ಞಾನಿ ಅಧಮ ಆಧುನಿಕ ಹೆಡ್ಡ ಧರ್ಮಾಂಧರಿಗಾಗಿ "ಲಿಂಗಾಯತ"ರು ಪಾಲಿಸಬೇಕಾದ ಚೆನ್ನಬಸವಣ್ಣ ವಿರಚಿತ "ಕರಣ ಹಸಿಗೆ" ಗ್ರಂಥದಿಂದ ಆಯ್ದ ಭಾಗ:


ಅಕಾರವೆಂಬ ಪ್ರಣವದಲ್ಲಿ - 

ಅಗ್ನಿಶ್ಚ ಋಗ್ವೇದಸ್ತಥಾ ರುದ್ರೋಧಿದೇವತಾ | 

ಆಕಾರ ಚಯಂಯಾತಿ ಪ್ರಥಮೇ ಪ್ರಣವಾಂಶಿಕೆ|| 


ಉಕಾರನೆಂಬ ಪ್ರಣವದಲ್ಲಿ - 


ಅಂತರಿಕ್ಷೇ ಯಜುರ್ವೇದೋಭವೇತ್ ಓಂ ಈಶ್ವರೋದೇವತಾ|

ಉಕಾರೇಚ ಲಯಂಯಾತಿ ದ್ವಿತೀಯಂ ಪ್ರಣವಾಂಶಿಕೆ| 


ಮಕಾರವೆಂಬ ಪ್ರಣವದಲ್ಲಿ -

ವಿದ್ಯೇಷು ಸಾಮವೇದೋಭವೇತ್ ಓಂ ಸದಾಶಿವೋ ದೇವತಾ|

ಮಕಾರೇಚ ಲಯಂಯಾಕಿ ತೃತೀಯೇ ಪ್ರಣವಾಂಶಿಕೆ||


ಅಕಾರೇಚ ಉಕಾರೇಚ ಮಕಾರೇಚ ತೃತೀಯಕೆ|

ಇದಮೇಕಂ ಸಮುತ್ಪನ್ನಂ ಓಂ ಇತಿಜ್ಯೋತಿಃ ರೂಪಕಂ||


ಓಂಕಾರಾತ್ಪ್ರಭವಾವೇದಂ | ಓಂಕಾರಾತ್ಪ್ರಭವಾಸ್ವರಂ 

ಓಂಕಾರಾತ್ಪ್ರಭವಾ ಸರ್ವಂ | ತ್ರೈಲೋಕ್ಯಂ ಸಚರಾಚರಂ 

ಸರ್ರವ್ಯಾಪಕಮೋಂಕಾರಂ ಮಂತ್ರೋನ್ಯತ್ರ ನಶೋಭತೆ |

ಪ್ರಣವೋಹಿ ಪರಬ್ರಹ್ಮ ಪ್ರಣವಂ ಪರಮಂ ಪದಂ | 

ಓಂಕಾರಂ ನಾದರೂಪಂಚ ಓಂಕಾರಂ ಬಿಂದುರೂಪಕಂ | 

ಓಂಕಾರಂ ವ್ಯಾಪಿ ಸರ್ವತ್ರಂ ಓಂಕಾರ ಗೋಪ್ಯಮಾನಸಂ | 

ಎಂದಿದು ಪ್ರಣವದುತ್ಪತ್ತಿ. 


ಮೇಲಿನ ಅಕಾರ ಉಕಾರ ಮಕಾರ ಪ್ರಣವದ ಮೂರು ಶ್ಲೋಕಗಳ ಅರ್ಥವು - 


ಅಕಾರವೆಂದು ಹೇಳಿಸಿಕೊಳ್ಳುವ ಪ್ರಣವದ ಅಕ್ಷರದೊಳಗೆ ಅಗ್ನಿಃ ತೇಜವೆಂಬುದೊಂದು ತತ್ತ್ವವು, 

ಋಗ್ವೇದವೆಂಬ ವೇದವು, ರುದ್ರಮೂರ್ತಿಯೆಂಬುದೊಂದು ಅಧಿದೇವತೆಯು, ಇಂದ್ರಾದಿ ನಿರ್ಜರರೆಂಬ ದೇವತೆಗಳು ಉತ್ಸತ್ತಿಯಾದರು. ಉತ್ಪತ್ತಿಯಾಗಿ ಪರಶಿವನ ಸಗುಣಾನಂದ ಸೃಷ್ಟಿಯ ಲೀಲಾವಿಲಾಸ ಉಂಟಾಗಿರುವ ಪರಿಯಂತರ ಉಂಟಾಗಿರ್ದು ಲೀಲೆ ಸಾಕಾದ ಬಳಿಕ ಓಂಕಾರ ಪ್ರಣವದ ಒಂದನೇ ಅಂಶವಾದ ಅಕಾರ ಪ್ರಣವದಲ್ಲಿಯೇ ವಿಶ್ರಾಂತಿಯನ್ನು ಐದುತ್ತಿಹವು. - ಇದು ಮೇಲಿನ ಅಕಾರ ಪ್ರಣವ ಶ್ಲೋಕದ ಅರ್ಥವು. 


ಉಕಾರ ಪ್ರಣವದಲ್ಲಿ ವರ್ಣದೊಳಗಂತರಿಕ್ಸ, ಆಕಾಶ ತತ್ತ್ವ, ಯಜುರ್ವೇದ, ಈಶ್ವರನೆಂಬ ಅಧಿದೇವತೆ, ಇಂದ್ರಾದಿ ಅಪ್ಸರರೆಂಬ ದೇನತೆಗಳು ಉತ್ಪತ್ತಿಯಾದರು. ಲೀಲೆ ಸಾಕಾದ ಬಳಿಕ ಪ್ರಣವದ ಎರಡನೇ ಅಂಶವಾದ ಉಕಾರದಲ್ಲಿ ವಿಶ್ರಾಂತಿಯನ್ನು ಐದುತ್ತಿಹವು. - ಇದು ಉಕಾರ ಪ್ರಣವಡ ಶ್ಲೋಕಾರ್ಥವು.  


ಮಕಾರ ಪ್ರಣವದಲ್ಲಿ ಸುಜ್ಞಾನ ಕಲಾತ್ಮ ತತ್ತ್ವ, ಚತುಸ್ಪಷ್ಠಿ ಕಳಾವಿದ್ಯೆಗಳು, ಸಾಮವೇದವು, ಸದಾಶಿವನೆಂಬ ಅಧಿದೇವತೆಯು ಇಂದ್ರಾದಿ ಅಷ್ಟ ದಿಕ್ಟಾಲಕರು ಉದಯವಾದರು. ಲೀಲೆ ಸಾಕಾದ ಬಳಿಕ ಪ್ರಣವದ ತೃತೀಯಾಂಶವಾದ ಮಕಾರ ಪ್ರಣವದಲ್ಲಿ ವಿಶ್ರಾಂತಿಯನ್ನು ಐದುತ್ತಿಹವು. 


ಓಂಕಾರದ ಅರ್ಥ - ಇನ್ನು ಓಂಕಾರ ಪ್ರಣವದಿಂದ ನಾಲ್ಕು ವೇದಗಳು, ನಾಲ್ಕು ಉಪ ವೇದಗಳು, ಆಗಮಗಳು, ಶಾಸ್ತ್ರ ಪುರಾಣಗಳು, ಷಡಧ್ವ ಷಡ್ಗುಣ ವಸ್ತು, ತತ್ತ್ವಪಂಚಕವು, ಸಪ್ತ ಭುವನಂಗಳು ಹುಟ್ಟಿದವು.


ಈಗ ನೀವೇ ನಿರ್ಧರಿಸಿ, ಲಿಂಗಾಯತವು ಹಿಂದುವೋ ಅಹಿಂದುವೋ?


ಇನ್ನು ಈ ರಂಗ ಜಂಗಮರು ತಮ್ಮ ಆರಂಭದ ವರ್ಷಗಳಲ್ಲಿ ಪ್ರಚಾರದ ಆಸ್ಥೆಯಿಂದ ನಮ್ಮ ದಾವಣಗೆರೆ ಹಳೆಪೇಟೆಯ ದುಗ್ಗಮ್ಮನ ಜಾತ್ರೆಯ ಸಮಯದಲ್ಲಿ "ಪ್ರಾಣಿಬಲಿ ಬೇಡ, ಬೇವಿನ ಉಡುಗೆಯ ಸೇವೆ ಬೇಡ" ಎಂದೆಲ್ಲಾ ಸ್ಥಳೀಯ ಪತ್ರಿಕೆಗಳಲ್ಲಿ ಕರೆ ನೀಡುತ್ತಿದ್ದರು. ವಿಪರ್ಯಾಸವೆಂದರೆ ಇವರ ಅಗ್ರಭಕ್ತರೇ ಮುಂದೆ ನಿಂತು ಕೋಣನ ಬಲಿ ನಡೆಯುವಂತೆ ಇಂದಿಗೂ ನೋಡಿಕೊಳ್ಳುತ್ತಿದ್ದಾರೆ.


ವಿಚಿತ್ರವೆಂದರೆ ಇವರ ಮಠ ಇರುವ ಹಳ್ಳಿಯ ಜಾತ್ರೆಯಲ್ಲಿ ಸಹ ಈವರೆಗೂ ಪ್ರಾಣಿಬಲಿ ನಿಂತಿಲ್ಲ. ಅಲ್ಲಿ ಇವರು ಪ್ರಾಣಿಬಲಿ ನಿಲ್ಲಿಸಿ ಎಂದು ಕರೆ ಕೊಟ್ಟಿದ್ದು ಈವರೆಗೂ ಕೇಳಿಲ್ಲ. ಏಕೆಂದರೆ ದೊಡ್ಡ ಪ್ರೇಕ್ಷಕರಿರುವ ರಂಗದಲ್ಲಿ ಮಾತ್ರ ನಾಟಕಗಳು ಕಳೆಗಟ್ಟುವುದು!


-ರವಿ ಹಂಜ್

ವಿಶ್ವವಾಣಿ ಬಸವ ಮಂಟಪ - ವಚನಗಳು ಮಾತ್ರ ಲಿಂಗಾಯತ ಧರ್ಮಗ್ರಂಥಗಳಲ್ಲ

 ಲಿಂಗಾಯತ ಸ್ವತಂತ್ರ ಧರ್ಮ ಎನ್ನುವ ಕೂಗನ್ನು ಒಪ್ಪಿ ಲಿಂಗಾಯತವನ್ನು ಹಿಂದೂ ಮತ್ತು ವೀರಶೈವ ಎರಡರಿಂದಲೂ ದೂರವಿಟ್ಟು ಅದನ್ನು ಸ್ವತಂತ್ರ ಧರ್ಮ ಎಂದೇ ಈಗೊಮ್ಮೆ ವಿಶ್ಲೇಷಿಸೋಣ. ಈ ಕೂಗಿಗರು ಹೇಳುವಂತೆ ಇದು ಬಸವ-ಸ್ಥಾಪಿತ ಸ್ವತಂತ್ರ ಧರ್ಮ. ಇದರ ಸಂಸ್ಥಾಪಕ ಬಸವಣ್ಣ ಮತ್ತು ಧರ್ಮಗ್ರಂಥ ವಚನ ಸಾಹಿತ್ಯ ಎನ್ನೋಣ.


ಆದರೆ ಲಿಂಗಾಯತವು ಸ್ಥಾಪಿತಗೊಂಡ ಹನ್ನೆರಡನೇ ಶತಮಾನದ ಶರಣರು ಕೇವಲ ವಚನ ಸಾಹಿತ್ಯವನ್ನಷ್ಟೇ ರಚಿಸಿಲ್ಲ. ಅದು ಪ್ರಮುಖವಾಗಿ ವಚನ ಸಾಹಿತ್ಯ ಮತ್ತು ವಚನೇತರ ಸಾಹಿತ್ಯ ಎಂಬ ಎರಡು ಬಗೆಯ ಸಾಹಿತ್ಯವನ್ನು ಹೊಂದಿದೆ.


ಈ ಧರ್ಮದ ಸಂಸ್ಥಾಪಕರಾಗಲಿ ಅಥವಾ ಅವರು ಬೋಧಿಸಿದ ಧರ್ಮಾನುಷ್ಟಾನವು ವಚನ ಸಾಹಿತ್ಯವನ್ನು ಧಾರ್ಮಿಕ ಗ್ರಂಥ ಅಥವಾ ಧರ್ಮಪಾಲನ ಮಾರ್ಗದರ್ಶಿ ಎಂದು ಎಲ್ಲಿಯೂ ಹೇಳಿಲ್ಲ. ವಚನ ಸಾಹಿತ್ಯವು ಕೇವಲ ಶ್ರೀಸಾಮಾನ್ಯನ ದೈನಂದಿನ ಜೀವನ, ಸಾಮಾಜಿಕ ನೀತಿ, ಕಾಯಕ, ದಾಸೋಹಗಳ ಮಹತ್ವವನ್ನು ತಿಳಿಸುವುದರ ಜೊತೆಗೆ ತಮ್ಮ ಧರ್ಮದ ಮಹಿಮೆ, ಗರಿಮೆ, ಪರಧರ್ಮ ಅವಹೇಳನ, ಸ್ವಧರ್ಮ ವಿಸ್ತರಣೆಯ ಸಾಧನಗಳ ಕುರಿತಾಗಿದೆಯೇ ಹೊರತು ಲಿಂಗಾಯತ ಧರ್ಮದ ಧರ್ಮಾನುಷ್ಟಾನ, ಆಧ್ಯಾತ್ಮಿಕ ಸಾಧನೆಯ ಕುರಿತಲ್ಲ.  ಆ ವಿಷಯಗಳಿಗಾಗಿಯೇ ವಚನೇತರ ಸಾಹಿತ್ಯವಿದೆ. ಹಾಗೆಂದು ವಚನೇತರ ಸಾಹಿತ್ಯದಲ್ಲಿ ಸ್ಪಷ್ಟವಾಗಿ ಶರಣರೇ ಹೇಳಿದ್ದಾರೆ.


ಬಸವಣ್ಣ ಮತ ವಿಸ್ತರಣೆ ಕಾಯಕದಲ್ಲಿ ತೊಡಗಿದರೆ, ಚೆನ್ನಬಸವಣ್ಣ ಮತಕ್ಕೆ ಸೇರಿದವರ ಆಚಾರ ವಿಚಾರಗಳನ್ನು ಕ್ರಮಗೊಳಿಸುವ ಕಾರ್ಯವನ್ನು ಕೈಗೊಂಡಿದ್ದನು. ಬಸವಣ್ಣನು ಲಿಂಗವೆಂದು ಕಲ್ಲು ಕಟ್ಟಿಕೊಂಡು ಬಂದವರೆಲ್ಲರಿಗೂ ಅನುಭಾವ ಮಂಟಪಕ್ಕೆ ಪ್ರವೇಶವಿತ್ತಿದ್ದರೆ, ಚೆನ್ನಬಸವಣ್ಣನ ಷಟ್ಸ್ಥಲಮಂದಿರಕ್ಕೆ ಸಾಧನೆಯ ಮಾನ್ಯತೆ ಪಡೆದವರಿಗೆ ಮಾತ್ರ ಪ್ರವೇಶವಿತ್ತು. ಪ್ರಾಣಲಿಂಗಿಯಾದ ಸಿದ್ಧರಾಮನಿಗೂ ಅಲ್ಲಿ ಪ್ರವೇಶವಿರಲಿಲ್ಲ. ರಾಜಯೋಗಿ ಎನಿಸಿದ್ದ ಸಿದ್ಧರಾಮನು ಎಲ್ಲಾ ರೀತಿಯಿಂದ ಪರಿಪೂರ್ಣನಿದ್ದರೂ ಶಿವಯೋಗರಹಸ್ಯ ಅರಿಯದ ಕಾರಣ ಅಲ್ಲಮನಿಂದ ನಿರ್ದಿಷ್ಟನಾಗಿ ಚೆನ್ನಬಸವಣ್ಣನಿಂದ ಸಂಸ್ಕಾರ ಪಡೆದ ನಂತರವೇ ಪ್ರಮಥಗಣ ಮಾಲಿಕೆ ಸೇರಿ ಇಲ್ಲಿಗೆ ಪ್ರವೇಶ ಪಡೆದನು. - ಹೀಗೆಂದು ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯ ವಾಗ್ಮಯ ಶಾಖೆಯು ೧೯೩೪ ರಲ್ಲಿ ಪ್ರಕಟಿಸಿದ "ಚೆನ್ನಬಸವ ಪುರಾಣ"ದ ಪ್ರಸ್ತಾವನೆಯಲ್ಲಿ ಮುರಿಗೆಪ್ಪ ಚೆಟ್ಟಿಯವರು ಬರೆದಿದ್ದಾರೆ.


ಹೀಗೆ ಲಿಂಗಾಯತ ಧರ್ಮಕ್ಕೆ ಸೇರಿದವರು ಷಟ್ಸ್ಥಲಗಳ ಮಜಲುಗಳಾದ ಭಕ್ತ, ಮಾಹೇಶ್ವರ, ಪ್ರಸಾದಿ, ಪ್ರಾಣಲಿಂಗಿ, ಶರಣಗಳನ್ನು ಏರಿ ಅಂತಿಮವಾಗಿ ಐಕ್ಯರಾಗುತ್ತಿದ್ದರು. ಈ ಮಜಲುಗಳನ್ನು ಏರಲು ವಚನೇತರ ಸಾಹಿತ್ಯದ ಅಧ್ಯಯನ ಸಾಧನೆ ಅವಶ್ಯವಿತ್ತು.


ವಚನ ಸಾಹಿತ್ಯವು ಜನಸಾಮಾನ್ಯರ ಸಾಮಾಜಿಕ ಸಾತ್ವಿಕ ಜೀವನ ಕ್ರಮಕ್ಕೆ ಬೇಕಾದ ಕನಿಷ್ಠ ಶಿಕ್ಷಣ ಮಾರ್ಗಸೂಚಿ ಎನಿಸಿದರೆ ಹೆಚ್ಚಿನ ಸಾಧನೆಗೆ ಅನುವಾಗಲು ಸ್ನಾತಕೋತ್ತರ, "ಪೋಸ್ಟ್ ಡಾಕ್ಟೋರಲ್" ಎನ್ನಬಹುದಾದ ವಚನೇತರ ಸಾಹಿತ್ಯ ಕೃತಿಗಳಿವೆ. ಅವು ಕರಣ ಹಸಿಗೆ (ಶಾರೀರಿಕ ವಿಜ್ಞಾನ), ಮಿಶ್ರಾರ್ಪಣ - ಶರಣಸತಿ ಲಿಂಗಪತಿ ಪಾರಮಾರ್ಥಿಕ (ಸಕೀಲಗಳ ಷಟ್ಸ್ಥಳ ಸಿದ್ಧಾಂತದ ತಳಹದಿಯ ಮೇಲೆ ದೇಹೀಂದ್ರಿಯ, ಸೃಷ್ಟಿ ಶಾಸ್ತ್ರ, ಮನಃಶಾಸ್ತ್ರಗಳನ್ನು ತಾರ್ಕಿಕವಾಗಿ ಬೋಧಿಸುವ ಶಿವಯೋಗ), ಮಂತ್ರಗೋಪ್ಯ - (ಯೋಗ ಸಿದ್ಧಿ, ಆತ್ಮಸಿದ್ದಿ),  ಘಟಚಕ್ರ - ಸೃಷ್ಟಿಯ ಉತ್ಪತ್ತಿ, ಪಿಂಡಾಂಡ - ಬ್ರಹ್ಮಾಂಡ ಸಂಯೋಗ, ಮತ್ತು ಅಲ್ಲಮ/ಮಹಾದೇವಿಯವರ ಸೃಷ್ಟಿ ವಚನಗಳು.


ಲಿಂಗಾಯತದ ಶರಣ ಸ್ಥಲವೇರಿದ ನಂತರ ಗಣಂಗಳು ಎಂದು ವಿಶೇಷ ಸಾಧನೆ ಅಥವಾ ಹುದ್ದೆ ಎನ್ನುವಂತಹ ಎಂಟು ಗಣಂಗಳ ಪೂಜ್ಯ ಸ್ಥಾನಗಳಿವೆ. ಈ ಸ್ಥಾನಗಳನ್ನು ಗಳಿಸಿದವರು ಚೆನ್ನಬಸವಣ್ಣನ ಷಟ್ಸ್ಥಲಮಂದಿರದ ಪ್ರವೇಶಕ್ಕೆ ಅರ್ಹರಾಗಿದ್ದರು ಎಂದು ಚೆನ್ನಬಸವ ಪುರಾಣ ಹೇಳುತ್ತದೆ. ಹಾಗಾಗಿಯೇ ಮುರಿಗೆಪ್ಪ ಚೆಟ್ಟಿಯವರು ತಮ್ಮ ಪ್ರಸ್ತಾವನೆಯಲ್ಲಿ, ಅಂತಹ ಪ್ರಮಥಗಣ ಸ್ಥಾನವನ್ನು ಪಡೆದ ನಂತರವೇ ಸಿದ್ಧರಾಮನಿಗೆ ಇಲ್ಲಿ ಪ್ರವೇಶ ಸಿಕ್ಕದ್ದು ಎಂದಿರುವುದು.


ಹೀಗೆ ಕಳಬೇಡ ಕೊಲಬೇಡ...ಎನ್ನುವ ಪಂಚಶೀಲದ ವಚನದ ಶಿಶುವಿಹಾರ ಪಠ್ಯದಿಂದ ಹಿಡಿದು ಸ್ನಾತಕೋತ್ತರದ ಸೃಷ್ಟಿ ವಚನಗಳವರೆಗಿನ ವಚನಗಳನ್ನು ಗ್ರಹಿಸಿ ಅನುಭಾವ ಪಡೆದು ನಂತರ ಪೋಸ್ಟ್ ಡಾಕ್ಟೋರಲ್ ಅನುಭಾವಕ್ಕೆ ವಚನೇತರ ಸಾಹಿತ್ಯವನ್ನು ಅಭ್ಯಸಿಸಿ ಸಾಧನೆ ಮಾಡಿ ಶರಣನಾಗಿ ಪೀಠಾಧಿಪತಿಯಾಗಿ, ಶೂನ್ಯ ಪೀಠಾಧಿಪತಿಯಾಗಿ ಸ್ಥಾನ ಗಳಿಸಲು ಸಾಧ್ಯ ಎನ್ನುತ್ತವೆ ಈ ಎಲ್ಲಾ ಲಿಂಗಾಯತ ಧರ್ಮಗ್ರಂಥಗಳು. ಜೀವನಕ್ರಿಯೆಗೆ ಅಷ್ಟಾವರಣ, ನೀತಿಗೆ ಪಂಚಾಚಾರ, ಜ್ಞಾನಕ್ಕೆ ಷಟ್ಸ್ಥಲ ಎಂಬ ಶಿಕ್ಷಣ ಮಾರ್ಗಸಾಧನೆಯ ನಂತರ ಗಣ, ಪೀಠದ ಹುದ್ದೆ.... ಇದಿಷ್ಟು ಲಿಂಗಾಯತ ಸಾಧನೆಯ ಸಿದ್ಧಿ ಮಾರ್ಗ!


ಈ ಎಲ್ಲಾ ಕಾರಣಗಳಿಂದಾಗಿ ಈ ಧರ್ಮಕೂಗಿಗರು ಹೇಳುವಂತೆ ಕೇವಲ ವಚನ ಸಾಹಿತ್ಯದ ಕಟ್ಟು ಲಿಂಗಾಯತದ ಧರ್ಮಗ್ರಂಥವಲ್ಲ! 


ಇದೇ ರೀತಿ ಪೀಠಾಧಿಪತಿಯಾಗಿ ಪಟ್ಟ ಕಟ್ಟಿ ಮಾನ್ಯ ಮಾಡಲು ಸಹ ಕಟ್ಟುನಿಟ್ಟಾದ ಕ್ರಮಗಳಿವೆ.


ಪಟ್ಟಾಧಿಕಾರದ ಪ್ರತಿಯೊಬ್ಬ ಸ್ವಾಮಿಗೂ ಈ ವಚನೇತರ

ಸಾಹಿತ್ಯದ ಒಂದು ಕಟ್ಟು ಕೊಡಲಾಗುತ್ತದೆ. ಅದರಲ್ಲೂ ಮೊದಲು ಓರ್ವ ಚರಮೂರ್ತಿಗಳಿಂದ ಅವರಿಗೆ ಶಿವ ಪುರಾಣ, ಬಸವ ಪುರಾಣ, ಚೆನ್ನಬಸವ ಪುರಾಣ ಗ್ರಂಥಗಳನ್ನು ಕೊಡಿಸಿ ಪುರಾಣ ಚರಂತಿ ಎಂದು ನೇಮಕಾತಿ ಮಾಡುತ್ತಾರೆ. ಈ ಪುರಾಣ ಚರಂತಿಯು ಮುಂದೆ ಕರಣ ಹಸಿಗೆ, ಮಂತ್ರಗೋಪ್ಯ, ಮಿಶ್ರಾರ್ಪಣ, ಸೃಷ್ಟಿ ವಚನಗಳನ್ನು ಅಭ್ಯಾಸ ಮಾಡಿ ಸಾಧನೆ ಮಾಡಿದ ನಂತರ ಅವನಿಗೆ ಸಭಾಮಧ್ಯದಲ್ಲಿ ಗುರುವಿನಿಂದ ಈ ಕೃತಿಗಳನ್ನು ಗೌರವಪ್ರಧಾನ (ಒಂದು ರೀತಿಯಲ್ಲಿ ಪದವಿ ಪ್ರದಾನ ಸಮಾರಂಭದಂತೆ) ಮಾಡಿದಾಗ ಮಾತ್ರ ಚರಂತಿಯು ವಿರಕ್ತನಾಗಿ ಪಟ್ಟಾಧಿಕಾರಿಯಾಗುವನು. ಇಲ್ಲದಿದ್ದರೆ ಆತ ಕೇವಲ ಪುರಾಣ ಚರಂತಿ ಮಾತ್ರವಾಗಿರುತ್ತಾನೆ. ಈ ಕುರಿತು ಹೆಚ್ಚಿನ ಮಾಹಿತಿಗೆ ಆಸಕ್ತರು "ನಿರಂಜನ ವಂಶ ರತ್ನಾಕರ" ಕೃತಿಯನ್ನು ಪರಾಂಭರಿಸಬಹುದು.


ಹೀಗೆ ಚರಂತಿಯಾಗಿ ಗುರುವಿನಿಂದ ಪಟ್ಟ ಕಟ್ಟಿಸಿಕೊಂಡ ಒಬ್ಬನೇ ಒಬ್ಬ ವಿರಕ್ತ ಇಂದಿನ ಇಪ್ಪತ್ತೊಂದನೇ ಶತಮಾನದಲ್ಲಿ ಇಲ್ಲವೇ ಇಲ್ಲ ಎಂದೇ ಹೇಳಬಹುದು. ವಚನೇತರ ಸಾಹಿತ್ಯದಲ್ಲಿ ಜ್ಞಾನ ಪಡೆದಿದ್ದರೋ ಇಲ್ಲವೋ ಆದರೆ ಗುರುವಿನಿಂದ ಹೀಗೆ ವಚನೇತರ ಸಾಹಿತ್ಯದ ಕಟ್ಟು ಪಡೆದು ಪೀಠಾಧಿಪತಿಯಾಗಿದ್ದು ನಾನು ಬಲ್ಲಂತೆ ಇಂದು ಬಂಧಿಖಾನೆಯಲ್ಲಿರುವ ಮುರುಘಾಶರಣರು ಮಾತ್ರ!


ಇನ್ನು ಈ ಎಲ್ಲಾ ಲಿಂಗಾಯತ ತತ್ವಜ್ಞಾನ ಆಚರಣಾ, ಸಾಧನಾ ಸೂತ್ರಗಳನ್ನು ಭಾರತದಲ್ಲಿ ಅದಾಗಲೇ ಆಚರಣೆಯಲ್ಲಿದ್ದ ಸನಾತನ ಧರ್ಮದ ಆತ್ಮ, ಪರಮಾತ್ಮ, ಅಂತರಾತ್ಮ, ನ್ಯಾಯ, ಮೀಮಾಂಸೆ, ತರ್ಕ, ಧ್ಯಾನಗಳ ಪಾಶುಪತ, ಕಾಳಾಮುಖ, ತಾಂತ್ರಿಕ, ಬೌದ್ಧ, ಜೈನ, ಮುಂತಾದ ತತ್ವಜ್ಞಾನ ಶಾಲೆಗಳಿಂದ ಪಡೆದ ಮೂಲ ವಿಷಯಗಳ ಸರಳೀಕೃತ, ಪರಿಷ್ಕೃತ, ಉನ್ನತೀಕರಿಸಿದ ಪಠ್ಯವೇ ಆಗಿದೆ ಎಂಬುದು ಗಮನಾರ್ಹ. 


ಇಂತಿಪ್ಪ ಕಟ್ಟುನಿಟ್ಟಿನ ಲಿಂಗಾಯತವನ್ನು ಈಗಿನ ಆಧುನಿಕ ಶರಣ ವಿರಕ್ತರು ಜಾತಿಗೆ, ಆಸ್ತಿಗೆ, ಅಧಿಕಾರಕ್ಕೆ, ಮೀಸಲಾತಿಗೆ, ಮತ(vote)ಬ್ಯಾಂಕಿಗೆ ಮತ(Religion) ಬೇಕೆಂಬ "ಶರಣ ಹಸಿಗೆ" ಮಾಡಿ ಪಟ್ಟ ಕಟ್ಟಿಸಿಕೊಂಡು ಅವಿರಕ್ತರೇ ಆಗಿ ಇಂದು ಈ ಪ್ರತ್ಯೇಕತೆಯ ಕೂಗಿನಲ್ಲಿ ವಿಜೃಂಭಿಸುತ್ತಿದ್ದಾರೆ. ಲಿಂಗಾಯತ ಧರ್ಮದ ಶಿಶುವಿಹಾರದ ಪ್ರಾಸಸಾಹಿತ್ಯದಂತಹ ಬೆರಳೆಣಿಕೆಯ ಕೆಲವು ವಚನಗಳನ್ನು ಕಂಠಪಾಠ ಮಾಡಿ ರಾಜಕೀಯ ಹುರುಪಿನಿಂದ ಭಾಷಣ ಮಾಡುವ ಒಂದೊಮ್ಮೆಯ ತೆಂಗಿನಕಾಯಿಕಳ್ಳ, ಕುಡುಕರಿಗೆ ನಿಪ್ಪಟ್ಟು ತಂದುಕೊಡುತ್ತಿದ್ದವ, ಊಟಕ್ಕೆ ವಿಷ ಬೆರೆಸಿ ಕೊಂದು ಮಠ ಸೇರಿದ್ದವ, ತಮ್ಮ ಕಾಮಕ್ಕೆ ವಿವೇಕಾನಂದ-ನಿವೇದಿತಾ, ಗಾಂಧಿ ಮತ್ತವರ ಆಜುಬಾಜಿಗಿದ್ದ ಇಬ್ಬರು ಹೆಣ್ಣುಗಳ ಸಂಬಂಧದಂತೆಯೇ ನಾನೂ ಸಹ ಕೇವಲ ಇಂದ್ರಿಯ ನಿಗ್ರಹ ಪ್ರಯೋಗ ಮಾಡುತ್ತಿದ್ದೆ ಎಂದಂತಹ ಕದ್ದ, ಕೊಂದ, ಹುಸಿಯ ನುಡಿವ ಗುರು-ಗುರುಮಾತೆಯರಷ್ಟೇ ನಮಗೆ ಬೇಕೆನ್ನುವ ಭಕ್ತರೂ ಇದಕ್ಕೆ ಮೂಲ ಕಾರಣ ಎನ್ನಬಹುದು. 


ಹಾಗಾಗಿ ಇವರೆಲ್ಲರ ವಾದ ಏನೇ ಇದ್ದರೂ ಲಿಂಗಾಯತವನ್ನು ಕರಣ ಹಸಿಗೆಯ ಸೂತ್ರದಂತೆ ಹಸುಗೆ ಮಾಡಿ ನೋಡಿದಾಗ ಅದು ಭಾರತ ನೆಲಮೂಲದ ಹಿಂದೂ ಎನ್ನುವ, ಸನಾತನ ಎನ್ನುವ, ಅಹಿಂದೂ ಎನ್ನುವ, ಆರ್ಯ ಎನ್ನುವ, ದ್ರಾವಿಡ ಎನ್ನುವ, ವೈದಿಕ ಎನ್ನುವ, ಅವೈದಿಕ ಎನ್ನುವ, ತಂತ್ರ ಎನ್ನುವ, ಮಂತ್ರ ಎನ್ನುವ, ಉತ್ಕೃಷ್ಟ ಎನ್ನುವ, ಅನಿಷ್ಟ ಎನ್ನುವ ಮುಂದೆ ಇನ್ನೂ ಏನೇನೋ ಎನ್ನಲಿರುವ ಈ ನೆಲದಲ್ಲೇ ಘನಿರ್ಭೂತಗೊಂಡ ಕರಣದ ಹಸುಗೆಗೊಂಡ ತತ್ವಜ್ಞಾನದ ಭಾಗವೇ ಆಗಿದೆ. 


-ರವಿ ಹಂಜ್

ವಿಶ್ವವಾಣಿ ಬಸವ ಮಂಟಪ - ಮುಖಪುಟ ನೋಡಿ ವೀರಾವೇಶ

ಷಟಸ್ಥಲ ಸಿದ್ಧಾಂತದ ಪ್ರತಿಪಾದಕರಾದ ಚೆನ್ನಬಸವಣ್ಣನ ಹುಟ್ಟಿನ ಬಗ್ಗೆ ಪ್ರೊ. ಎಂ. ಎಂ. ಕಲಬುರ್ಗಿಯವರು ಸಂಶೋಧನೆ ನಡೆಸಿ, "ಚೆನ್ನಬಸವಣ್ಣನು ಬಸವಣ್ಣನವರ ತಂಗಿ ಅಕ್ಕನಾಗಮ್ಮ ಮತ್ತು ಡೋಹರ ಕಕ್ಕಯ್ಯನಿಗೆ ಹುಟ್ಟಿದವನು" ಎಂದು ಓರ್ವ ವಿರಕ್ತ ಪೀಠಾಧಿಪತಿಗಳಿಗೆ ತಿಳಿಸಿದರು. ವಿರಕ್ತರು, "ಓಹ್, ಹಾಗಿದ್ದರೆ ಈ ವಿಚಾರವನ್ನು ಏಕೆ ಎಲ್ಲಿಯೂ ದಾಖಲಿಸಿಲ್ಲ?" ಎಂದದ್ದಕ್ಕೆ, ಕೆಳಜಾತಿಯ ಕಕ್ಕಯ್ಯನನ್ನು ಆಕ್ಕನಾಗಮ್ಮ ಮದುವೆಯಾಗಿದ್ದಳು ಎಂದರೆ ಅದು ಅವಮಾನಕಾರವೆಂದು ಬಗೆದು ಅದನ್ನು ಮುಚ್ಚಿಡಲಾಗಿದೆ ಎಂಬುದು ಕಲಬುರ್ಗಿಯವರ ರೋಚಕ ಸಂಶೋಧನೆಯಾಗಿತ್ತು. 

ಸರಿ, ಅದಕ್ಕೆ ಆಧಾರವೇನು ಎಂದದ್ದಕ್ಕೆ ಕೆಲವು ಪುರಾಣಗಳಲ್ಲಿ ಚೆನ್ನಬಸವಣ್ಣನು ಕಕ್ಕಯ್ಯನ "ಪ್ರಸಾದದಿಂದ" ಹುಟ್ಟಿದನು ಎಂದಿದೆ. ವಾಚ್ಯವಾಗಿ ಹೇಳಲಾಗದ್ದನ್ನು ಪುರಾಣಗಳಲ್ಲಿ ಹೀಗೆ ಸೂಚ್ಯವಾಗಿ ಹೇಳಲಾಗಿದೆ ಎಂಬುದು ಅವರ ಪುರಾವೆಯಾಗಿತ್ತು.

ಅವರ ನವರಸ-ಸಂಶೋಧನೆಯಿಂದ ರೋಮಾಂಚನಗೊಂಡ ವಿರಕ್ತ ಮಹಾಸ್ವಾಮಿಗಳು ೨೬-೧೦-೧೯೮೦ರ ಕಾರ್ಯಕರ್ತರ ಮಹಾಸಭೆಯಲ್ಲಿ, "ಚೆನ್ನಬಸವಣ್ಣನು ಡೋಹರ ಕಕ್ಕಯ್ಯನ ಮಗ. ಈ ಜನ್ಮರಹಸ್ಯವನ್ನು ನಾಡಿನ ಖ್ಯಾತ ಸಂಶೋಧಕರು ಕಂಡುಹಿಡಿದಿದ್ದಾರೆ" ಎಂದು ಘೋಷಣೆ ಮಾಡಿದ್ದರು.

ಇದೇ ತರ್ಕವನ್ನು "ನಿನ್ನ ಪ್ರಸಾದ ನಾನಯ್ಯ" ಎಂಬ ವಚನ ವಿನಯದ ಮಾತಿಗೆ ಅನ್ವಯಿಸಿದರೆ ಆಗುವ ಅನರ್ಥ ಎಂತಹದ್ದಿರಬಹುದು?!?! ಖುದ್ದು ಚನ್ನಬಸವಣ್ಣನೇ ನಾನು ನಿಮ್ಮ ಪ್ರಸಾದ ಎಂದು ಬಸವಣ್ಣನ ಕುರಿತು ಕೆಳಗಿನ ವಚನದಲ್ಲಿ ಹೇಳಿದ್ದಾನೆ. 

"ಧರೆಯಾಕಾಶವಿಲ್ಲದಂದು, ಅನಲ ಪವನ ಜಲ ಕೂರ್ಮರಿಲ್ಲದಂದು,

ಚಂದ್ರಸೂರ್ಯರೆಂಬವರು ಕಳೆದೋರದಂದು,

ಆತ್ಮಸ್ಥಲ ಅನುಭಾವಕ್ಕೆ ಬಾರದಂದು,

ನಿತ್ಯನಿಜಲಿಂಗವ ಬಲ್ಲರಾರಯ್ಯ ನೀವಲ್ಲದೆ ?

ಮಹಾಘನಕ್ಕೆ ಘನವಾಹನವಾಗಿ, ಅಗಮ್ಯಸ್ಥಾನದಲ್ಲಿ ನಿಂದು

ಭರಿತರಾಗಿರಬಲ್ಲರಾರಯ್ಯಾ ನೀವಲ್ಲದೆ ?

ನಿಮ್ಮ ಒಕ್ಕು ಮಿಕ್ಕ ಶೇಷಪ್ರಸಾದದ ಕಾರುಣ್ಯದ ಶಿಶುವಾಗಿ ಒಡಲೊಳಗೆ ಇದ್ದಲ್ಲಿ

ವಿಭೂತಿ ಪಟ್ಟವ ಕಟ್ಟಿ, ಹಸ್ತಮಸ್ತಕಸಂಯೋಗವ ಮಾಡಿ

ಎನ್ನನುಳುಹಿದರಾರಯ್ಯ ನೀವಲ್ಲದೆ ?

ಕೂಡಲಚೆನ್ನಸಂಗಮದೇವರ ಸಾಕ್ಷಿಯಾಗಿ

ನಾನು ನಿಮ್ಮ ಕರುಣದ ಕಂದನೆಂಬುದ ಮೂರುಲೋಕ ಬಲ್ಲುದು ಕಾಣಾ ಸಂಗನಬಸವಣ್ಣ"

ಇಲ್ಲಿ ಡಾ: ಎಂ.ಎಂ. ಕಲಬುರ್ಗಿಯವರ ಸಂಶೋಧನಾ "ಪ್ರಸಾದ"ದ ತರ್ಕವನ್ನು ಅನ್ವಯಿಸಿದರೆ ಆಗುವ ಅಧ್ವಾನವನ್ನು ಯೋಚಿಸಿದರೆ....ಓಂ ಶ್ರೀ ಗುರು ಬಸವಲಿಂಗಾಯ ನಮಃ!

***

ಇನ್ನು ವೀರಶೈವ ಪದವನ್ನು ವಚನಗಳಲ್ಲಿ ತುರುಕಲಾಗಿದೆ ಎನ್ನುವವರು ಪ್ರಮುಖವಾಗಿ ಖ್ಯಾತ ಸಂಶೋಧಕರಾದ ಎಂ.ಎಂ. ಕಲ್ಬುರ್ಗಿಯವರ ಕಡೆಯೇ ಬೆರಳು ತೋರುತ್ತಾರೆ. ಅದಕ್ಕೆ ತಕ್ಕಂತೆ ಪ್ರೊ. ಕಲ್ಬುರ್ಗಿಯವರು ವೀರಶೈವ ಎಂಬ ಪದಬಳಕೆಯಾಗಿರುವ ಬಸವ, ಅಲ್ಲಮ, ಅಕ್ಕನ ವಚನಗಳನ್ನು ಪ್ರಕ್ಷೇಪ ವಚನಗಳೆಂದು ತಿರಸ್ಕರಿಸುತ್ತಾರೆ (ಅವರ ಪೂರ್ವೋಕ್ತ ಕೃತಿ, ಪುಟ ೧೪). ಆದರೆ ಅವು ಏಕೆ ಪ್ರಕ್ಷೇಪ ಎನ್ನಲು ಸಮರ್ಥ ಕಾರಣಗಳನ್ನು ಕೊಡುವುದಿಲ್ಲ. ಆದಲ್ಲದೆ ಲಿಂಗಾಯತ ಎಂಬ ಪದ ಬಳಕೆಯ ವಚನಗಳು ಅತ್ಯಂತ ಕಡಿಮೆ ಸಂಖ್ಯೆಯಲ್ಲಿರುವುದಕ್ಕೆ ಸಹ ಅವರು ಯಾವುದೇ ಸಮಜಾಯಿಷಿ ಕೊಟ್ಟಿಲ್ಲ. 

ಆದರೆ ಹೀಗಿದ್ದೂ ವೀರಶೈವ ಎಂದಿರುವ ಎಲ್ಲಾ ಪ್ರಕ್ಷಿಪ್ತ ವಚನಗಳನ್ನು ಇವರ ಸಂಪಾದಕತ್ವದಲ್ಲೇ ಅಧಿಕೃತವಾಗಿ ಪ್ರಕಟಿಸಲಾಗಿದೆ....ಓಂ ಶ್ರೀ ಗುರು ಬಸವಲಿಂಗಾಯ ನಮಃ!

***

ಪ್ರೊ. ಕಲ್ಬುರ್ಗಿಯವರ ಕೃತಿ "ಲಿಂಗಾಯತ ಸ್ವತಂತ್ರ ಧರ್ಮ"ದಲ್ಲಿನ ’ವೀರಶೈವ ಇತಿಹಾಸ ಮತ್ತು ಭೂಗೋಲ’ ಎಂಬ ಅಧ್ಯಾಯದಲ್ಲಿ "ಹದಿಮೂರನೇ ಶತಮಾನದ ಪಾಲ್ಕುರಿಕೆ ಸೋಮನಾಥನ ತೆಲುಗು ಭಾಷೆಯಲ್ಲಿರುವ ’ಬಸವಪುರಾಣ’ದಲ್ಲಿ ಲಿಂಗವಂತ, ವೀರಮಾಹೇಶ್ವರ ಪದಗಳಿವೆಯಾದರೂ ವೀರಶೈವ ಪದ ಕಂಡುಬರುವುದಿಲ್ಲ" ಎನ್ನುತ್ತಾ "ಬಸವಪುರಾಣವನ್ನು ಕನ್ನಡಕ್ಕೆ ಅನುವಾದಿಸಿದ ಭೀಮಕವಿಯು (ಕ್ರಿ. ಶ. ೧೩೬೮) ಕೆಲವೊಮ್ಮೆ ಅಲ್ಲಿಯ ವೀರಮಾಹೇಶ್ವರ ಪದಕ್ಕೆ ಬದಲು ಇಲ್ಲಿ ವೀರಶೈವ ಪದವನ್ನು ಬಳಸಿದ್ದಾನೆ. ಕನ್ನಡದಲ್ಲಿ ವೀರಶೈವ ಪದ ಕಂಡುಬರುವುದು ಇದೇ ಮೊದಲು. ಹಾಗಾಗಿ ವೀರಶೈವ ಪದ ಪಾಲ್ಕುರಿಕೆ ಸೋಮೇಶನ ತೆಲುಗು ಬಸವಪುರಾಣಮು ಮತ್ತು ಭೀಮಕವಿಯ ಕನ್ನಡ ಬಸವಪುರಾಣದ ಮಧ್ಯದ ಕಾಲಾವದಿಯಲ್ಲಿ ಹುಟ್ಟಿದೆಯೆಂದು ಸ್ಪಷ್ಟವಾಗಿ ಹೇಳಬಹುದು" ಎನ್ನುತ್ತಾರೆಯೇ ಹೊರತು ಇದರಲ್ಲಿ ಲಿಂಗಾಯತ ಪದವೂ ಇಲ್ಲದ್ದನ್ನು ಮಾತ್ರ ಅವರು ಹೇಳುವುದಿಲ್ಲ. ಹಾಗೆಯೇ ಮುಂದುವರಿಯುತ್ತ ಪ್ರೊ. ಕಲ್ಬುರ್ಗಿಯವರು "ಈ ಸಂದರ್ಭದಲ್ಲಿ ’ಆಂಧ್ರಪ್ರದೇಶದ ವೀರಶೈವ’ ವಿಷಯವನ್ನು ಕುರಿತ ಪಿಹೆಚ್ಡಿ ಪ್ರಬಂಧದಲ್ಲಿ ಹೇಳಲಾಗಿರುವ ’ Palakuriki Somanatha was the earliest to use word Virashaiva in Andhra. In his Chaturveda Saram, Somanatha describes lord Hari as Virashaiva, because the latter performed certain heroic deeds, such as offering his own eyes to Shiva, as a token of deep devotion. In Basava Puranam however, he appears to have give deeper meaning to Virashaiva, though the word was not actually used. (Virashaiva in Andhra, K. Lalitamba p 2)' ಅಭಿಪ್ರಾಯವನ್ನು ಅವಶ್ಯ ಗಮನಿಸಬೇಕು" ಎನ್ನುತ್ತಾರೆ.

ಆದರೆ ಈ ಮೇಲಿನ ಪಿಹೆಚ್ಡಿ ಉದಾರಹಣೆಯಲ್ಲೇ "ಪಾಲ್ಕುರಿಕಿ ಸೋಮನಾಥನು ತನ್ನ ’ಚಾತುರ್ವೇದ ಸಾರಂ’ ಕೃತಿಯಲ್ಲಿ ವೀರಶೈವ ಪದವನ್ನು ಆಂಧ್ರದಲ್ಲಿ ಪ್ರಪ್ರಥಮವಾಗಿ ಬಳಸಿದ್ದಾನೆ. ಬಸವಪುರಾಣದಲ್ಲಿ ವೀರಶೈವ ಪದವನ್ನು ಬಳಸದಿದ್ದರೂ ಅದನ್ನು ಇನ್ನಷ್ಟು ಗಾಢವಾಗಿಸಿದ್ದಾನೆ ಎನ್ನುವ ಲಲಿತಾಂಬ ಅವರ ಇಂಗ್ಲಿಷ್ ಒಕ್ಕಣೆಯನ್ನು ಅರಿಯುವಷ್ಟು ಇಂಗ್ಲಿಷ್ ಪ್ರೌಢಿಮೆ ಪ್ರೊ. ಕಲ್ಬುರ್ಗಿಯವರಿಗೆ ಇರಲಿಲ್ಲವೇ?! ಇದ್ದರೆ ಈ ಒಕ್ಕಣೆಯನ್ನು ಬಿಟ್ಟು ಉಳಿದದ್ದನ್ನು ಏಕೆ ಹೆಕ್ಕಿಕೊಂಡರು....ಓಂ ಶ್ರೀ ಗುರು ಬಸವಲಿಂಗಾಯ ನಮಃ!

***

ಇಂತಹ ಅವಘಡಗಳ ಸಾಲು ಸಾಲು ಸಾಧನೆಗಳು ಪ್ರೊಫೆಸರರ ತೆಕ್ಕೆಯಲ್ಲಿವೆ. ಇಂತಹ ಸಂಶೋಧಕರನ್ನೇ ಇಂದಿನ ರಾಜಕಾರಣಪ್ರೀತ ಆಧುನಿಕ ಲಿಂಗಾಯತ ಧರ್ಮದ ಹೋರಾಟಗಾರರು ತಮ್ಮ "ಸಂಶೋಧನಾ ಲಾಂಛನ"ವಾಗಿರಿಸಿಕೊಂಡು ಅವರ "ಪ್ರಸಾದ"ದ ಸಿದ್ಧಮಾದರಿ ಸಂಶೋಧನೆಯಲ್ಲಿ ವಚನಗಳನ್ನು ಗೆರೆ ಕೆರೆ ದರ್ಗಾ ಮುರ್ಗಾ ಚರ್ಗಾ ಜಮಾಖರ್ಚುದಾರರು, ಕಮ್ಯೂನಿಸ್ಟರು, ಉದಾರಿಗಳು, ವಾಟ್ಸಾಪಿವೀರರು ತಮ್ಮ ತಮ್ಮ ಮೂಗಿನ ನೇರಕ್ಕೆ ಸಿದ್ಧಾಂತಕ್ಕೆ ವಚನಗಳನ್ನು ವ್ಯಾಖ್ಯಾನಿಸಿ/ಸಮೀಕರಿಸಿ ಮಾಡಿರುವ ಅಧ್ವಾನಗಳು, ಜಗದಗಲ ಮುಗಿಲಗಲ........ಓಂ ಶ್ರೀ ಗುರು ಬಸವಲಿಂಗಾಯ ನಮಃ!

***

ಇನ್ನು ಅಂದು ಇವರ ಸಂಶೋಧನೆ ನಂಬಿ ಭೀಷಣ-ಭಾಷಣ ಮಾಡಿದ್ದ ವಿರಕ್ತರ ಮುಂತಲೆಗಳು ತಮ್ಮ ಹೆಸರಿನ ಹಿಂದಿರುತ್ತಿದ್ದ ಶ್ರೀ ಮ.ನಿ.ಪ್ರ. ಕ್ಕೆ ತಿಲಾಂಜಲಿಯಿಟ್ಟು ಮಾತೃ ಹೃದಯಿ, ರೈತ ಋಣಿ, ವಿದ್ಯಾಗಣಿ, ಕಲ್ಯಾಣಕಣ್ಮಣಿ, ರಂಗಜಂಗಮ, ಮುಂತಾದ ಚಿಂತಕ ಬೆಡಗಿನ ಬಿರುದುಗಳೊಂದಿಗೆ ಕಲಬುರ್ಗಿ-ಸಂಶೋಧನಾ ಪರಂಪರೆಯ ಕಮ್ಯೂನಿಸ್ಟ್ ಪ್ರೊಫೆಸರರುಗಳು ಪೊಡಮಟ್ಟ ಗೌರವ "ಡಾ" ಇಟ್ಟುಕೊಂಡು ತಮ್ಮ ಅನುರಕ್ತಿಯನ್ನು ಮೆರೆಯುತ್ತಿರುವುದು....ಓಂ ಶ್ರೀ ಗುರು ಬಸವಲಿಂಗಾಯ ನಮಃ!

***

ಪ್ರಚಲಿತ "ವಚನ ದರ್ಶನ" ಕೃತಿಯ ಹಿನ್ನೆಲೆಯಲ್ಲಿ ಕೇವಲ ಮುಖಪುಟ ನೋಡಿ ವೀರಾವೇಶ ಮೆರೆಯುತ್ತಿರುವ ಇವರ ನಡೆ ಹಾಸ್ಯಾಸ್ಪದ. ಇವರ ವಚನ ವ್ಯಾಖ್ಯಾನ ಮಾತ್ರವೇ ಸರಿ. ಉಳಿದವರದು ತಪ್ಪು ಎಂದು ಫರ್ಮಾನು ಹೊರಡಿಸಿದ್ದಾರೆ. ಅಷ್ಟರ ಮಟ್ಟಿಗೆ ವಚನ ಸಾಹಿತ್ಯದ ಮೇಲೆ ಕಮ್ಯುನಿಸ್ಟರ ಹಕ್ಕೊತ್ತಾಯವಾಗಿದೆ. ಈ ಹಿನ್ನೆಲೆಯಲ್ಲಿ ಓರ್ವ ವಾಟ್ಸಾಪಿ ವೀರರು ವಚನದರ್ಶನದ ಗೌರವ ಸಂಪಾದಕರಿಗೆ ಕೇಳಿದ ವಚನ ಹೀಗಿತ್ತು.

"ಕಟ್ಟಿದ ಲಿಂಗವ ಕಿರಿದು ಮಾಡಿ,

ಬೆಟ್ಟದ ಲಿಂಗವ ಹಿರಿದು ಮಾಡುವ ಪರಿಯ ನೋಡ!

ಇಂತಪ್ಪ ಲೊಟ್ಟಿಮೂಳರ ಕಂಡರೆ

ಗಟ್ಟಿವುಳ್ಳ ಪಾದರಕ್ಷೆಯ ತೆಗೆದುಕೊಂಡು

ಲೊಟಲೊಟನೆ ಹೊಡೆಯೆಂದಾತ ನಮ್ಮ ಅಂಬಿಗರ ಚೌಡಯ್ಯ"

ಇಂದು ತಾಯಂದಿರು ತಮ್ಮ ಪ್ರಾಥಮಿಕ ಶಾಲೆಯಲ್ಲಿರುವ ಮಕ್ಕಳಿಗೆ ಟಿವಿ ನೋಡಬೇಡ, ಮೊಬೈಲ್ ಮುಟ್ಟಬೇಡ, ಕಂಪ್ಯೂಟರ್ ಗೇಮ್ ಆಡಬೇಡ. ಕೇವಲ ಪುಸ್ತಕಗಳನ್ನು ಓದು. ಹೋಂ ವರ್ಕ್ ಮಾಡು. ಇಲ್ಲದಿದ್ದರೆ ಹೊಡೆಯುತ್ತೇನೆ ಎನ್ನುವುದರ ಹಿಂದಿನ ಉದ್ದೇಶವೇ ಈ ವಚನದ ಹಿಂದಿನ ಉದ್ದೇಶ ಸಹ. ಲಿಂಗವೆಂದು ಕಲ್ಲು ಕಟ್ಟಿಕೊಂಡು ಬಂದವರನ್ನೆಲ್ಲ ಅನುಭವ ಮಂಟಪಕ್ಕೆ ಸೇರಿಸಿಕೊಂಡ ಬಸವಣ್ಣ, ಬೇರೆಲ್ಲ ಬಿಟ್ಟು ಮೊದಲು ಲಿಂಗಪೂಜೆಯಲ್ಲಿ ಸಾಧನೆ ಮಾಡಿ ಎಂಬ ಉದ್ದೇಶವನ್ನು ಅಂಬಿಗರ ಚೌಡಯ್ಯ ಹೀಗೆ ವಾಚ್ಯವಾಗಿ ಹೇಳಿದ್ದಾನೆ. ಇದನ್ನು ಕಮ್ಯುನಿಸ್ಟ್ ಪ್ರಣೀತರು ಮೂರ್ತಿಪೂಜೆ, ದೇವಾಲಯಗಳನ್ನು ಶರಣರು ಬಹಿಷ್ಕರಿಸಿದ್ದರು ಎಂಬ ತಮ್ಮ ಸಿದ್ಧಾಂತದ ಪುರಾವೆಯಾಗಿ ಬಳಸುತ್ತಾರೆ.

ಇವರ ವಾದವನ್ನು ಒಪ್ಪುವುದಾದರೆ ಶ್ರೀಶೈಲ ಬೆಟ್ಟದ ಲಿಂಗವ ಹಿರಿದು ಮಾಡಿದ ಅಕ್ಕಮಹಾದೇವಿ, ನದಿ ಸಂಗಮದ, ಗುಹೆಯಲ್ಲಿನ ಸ್ಥಾವರದ ಲಿಂಗಗಳ ಅಂಕಿತ ಮಾಡಿಕೊಂಡ ಬಸವಣ್ಣ, ಅಲ್ಲಮರ ನಡೆಗೆ ಇದನ್ನು ಅನ್ವಯಿಸಿದರೆ ಆಗುವ ಅಧ್ವಾನ.........ಓಂ ಶ್ರೀ ಗುರು ಬಸವಲಿಂಗಾಯ ನಮಃ!

ಅಂದ ಹಾಗೆ ಬಸವಾದಿ ಪ್ರಮಥರು ಬೋಧಿಸಿದ/ ಧ್ಯಾನಿಸಿದ/ಸಾಧಿಸಿದ ಮಂತ್ರ, ಓಂ ನಮಃ ಶಿವಾಯ ಎಂಬ ಷಡಕ್ಷರಿ ಅಥವಾ ನಮಃ ಶಿವಾಯ ಎಂಬ ಪಂಚಾಕ್ಷರಿ ಮಂತ್ರ! 

ಹೀಗೆ ಮೂಲಮಂತ್ರವನ್ನೇ ಮೂಲೋಚ್ಚಾಟನೆ ಮಾಡಿ ರಾಜಕಾರಣಕ್ಕಾಗಿ ಬಸವರಾಜಕಾರಣವ್ಹಿಡಿದು "ಪ್ರಸಾದೀ"ಕರಣ ತಂತ್ರ ಬಳಸಿ ಸಾಮಾಜಿಕ ಲಾಭಕ್ಕಾಗಿ ಓಂ ಗುರು ಬಸವಲಿಂಗಾಯ ನಮಃ ಎಂದು ಘೋಷಿಸುತ್ತ ಮತ್ತೊಂದು ಮಗದೊಂದಕ್ಕೆ ಮಾಡುತ್ತಿರುವ ಕುರುಹಿನ ಹೆಡ್ಡರಿಂದ ಅರುಹಿನ ಲಿಂಗಾಯತವನ್ನು ಕಾಪಾಡಬೇಕಿದೆ.

ಆರುಹ ಪೂಜಿಸಲೆಂದು ಕುರುಹ ಕೊಟ್ಟೆಡೆ 

ಅರುಹ ಮರೆತು ಕುರುಹ ಪೂಜಿಸುವ 

ಹೆಡ್ಡರಾ ನೋಡಾ ಗುಹೇಶ್ವರ!!

ವಿ. ಸೂ: ಪ್ರೊ ಎಂ. ಎಂ. ಕಲಬುರ್ಗಿಯವರ "ಪ್ರಸಾದ" ಸಂಶೋಧನೆಯ ವಿಚಾರದ ಪುರಾವೆ ಮತ್ತು ಹೆಚ್ಚಿನ ಮಾಹಿತಿಗೆ ಆಸಕ್ತರು ಶ್ರೀ ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ಜಗದ್ಗುರುಗಳ ರಜತ ಮಹೋತ್ಸವದ ಸ್ಮರಣ ಸಂಚಿಕೆಯಾದ "ಚಿನ್ಮೂಲಾದ್ರಿ ಚೇತನ"ದಲ್ಲಿನ ಎಲ್. ಬಸವರಾಜು ಅವರ ಲೇಖನವನ್ನು ಪರಾಂಭರಿಸಬಹುದು. ಅಲ್ಲದೇ ಈ ರಜತ ಮಹೋತ್ಸವದ ಸಮಾರಂಭದಲ್ಲಿ ಹಾಜರಿದ್ದ ಪ್ರೊಫೆಸರರಿಗೆ ಅವರ ಸಂಶೋಧನೆಗಾಗಿ ಭಕ್ತರು "ತಕ್ಕ" ಉಡುಗೊರೆ ನೀಡಿದ್ದ ಐತಿಹಾಸಿಕ ಸತ್ಯದ ಬಗ್ಗೆ ತಮ್ಮ ಹಿರಿತಲೆಗಳನ್ನು ಪ್ರಶ್ನಿಸಬಹುದು.

-ರವಿ ಹಂಜ್ 

#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ

*****