ವಿಶ್ವವಾಣಿ - ಪೂಜೆ ಪಾರ್ಟಿ ಟೈಮ್ ಸಮಾಜ ಸೇವೆ ಫುಲ್ ಟೈಮ್

 ಚಿತ್ರದುರ್ಗದ ಜಿಲ್ಲೆಯ ಅನೇಕ ಸ್ವಾಮಿಗಳಿಗೆ ಅದೇನೋ ಪ್ರಚಾರದ ತೆವಲು. ಹೇಗಾದರೂ ಮಾಡಿ ಪತ್ರಿಕೆಗಳಲ್ಲಿ ತಮ್ಮದೊಂದು ಸುದ್ದಿ ಇರಬೇಕು ಎಂದು ಸದಾ ತುರಿಸಿಕೊಳ್ಳುತ್ತಿದ್ದರು. ಭಾರತದಲ್ಲಿ ಉಂಟಾದ ಮಾಧ್ಯಮರಂಗ ಅಸ್ಫೋಟದೊಂದಿಗೆ ಇವರ ತುರಿಕೆ ಅತಿಯಾಗಿ "ಪೂಜೆ ಪಾರ್ಟಿ ಟೈಮ್, ಸಮಾಜ ಸೇವೆ ಫುಲ್ ಟೈಮ್" ಎಂಬ ಉದ್ಘೋಷದೊಂದಿಗೆ ಈ ಹುಚ್ಚು ಇಂದು ಉತ್ತುಂಗದ ತುತ್ತ ತುದಿಯನ್ನು ಏರಿದೆ. ಈ ಉತ್ತುಂಗದ ತುದಿಯಲ್ಲಿರುವ ಓರ್ವ ರಂಗ ಜಂಗಮ ಎನಿಸಿದ ಸ್ವಾಮಿಗಳು, "ಗಣಪತಿ ಪೂಜೆ ಮಾಡಬಾರದು" ಎಂದು ಹೇಳಿ ಕಳೆದ ವರ್ಷ ಕರ್ನಾಟಕದ ತುಂಬಾ ಬಯಲಾಟ ಆಡಿಸಿದ್ದರು.


ಆಗ ಅದನ್ನು ಸಕಾರಣವಾಗಿ ವಿಮರ್ಶಿಸಿದ್ದ ವಿಶ್ವವಾಣಿ ಸಂಪಾದಕರ ಮೇಲೆ ತಮ್ಮ ಬೆಂಬಲಿಗರಿಂದ ಫತ್ವಾ ಹೊರಡಿಸಿದ್ದರು. ಯಾವಾಗ ವಿರೋಧ ಪ್ರಬಲವಾಯಿತೋ ಆಗ, "ನಾನು ಕರೆ ನೀಡಿದ್ದು ಲಿಂಗಾಯತರಿಗೆ ಮಾತ್ರ ಎಲ್ಲರಿಗೂ ಅಲ್ಲ" ಎಂದು ಪರದೆ ಇಳಿಬಿಟ್ಟರು. ಅಲ್ಲಿಗೆ ಗಣಪತಿ ಪ್ರಸಂಗ ರಂಗ ಪ್ರಯೋಗ ಯಶಸ್ವಿಯಾಗಿ ಮಾಧ್ಯಮದಲ್ಲಿ ಸಾಕಷ್ಟು ಪ್ರಚಾರ ಗಿಟ್ಟಿಸಿಕೊಟ್ಟಿತು.


ಕಳೆದ ವಾರ ಹೊಳಲ್ಕೆರೆಯಲ್ಲಿ "ಚಿನ್ಮೂಲಾದ್ರಿ ಚಿತ್ಕಳೆ" ಎಂಬ ಸಂಪಾದಿತ ಗ್ರಂಥದ ಸ್ಪೂರ್ತಿಯಾದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಜಗದ್ಗುರುಗಳ ಒಂದೊಮ್ಮೆಯ ಬದ್ಧ ವಿರೋಧಿಗಳಾಗಿದ್ದ ಇವರು ಅವರ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಪುಢಾರಿ ಭಕ್ತರ ದೆಸೆಯಿಂದ ಹಾಜರಿದ್ದು, "ಲಿಂಗಾಯತ ಹಿಂದೂ ಧರ್ಮದ ಭಾಗವಲ್ಲ...." ಇತ್ಯಾದಿಯಾಗಿ ಹಿಂದೂ ಧರ್ಮದ ಅವಹೇಳನ ಮಾಡಿದರು. ಇದನ್ನು ಟೀಕಿಸಿ ವಿಶ್ವವಾಣಿಯ ವಿಶ್ವೇಶ್ವರ ಭಟ್ಟರು, "...ಸಾಕು ಮಾಡಿ ನಿಮ್ಮ ಗೊಡ್ಡು ಪುರಾಣ" ಎಂಬ ಲೇಖನವನ್ನು ಬರೆದರು. ಈಗ ಮತ್ತೊಮ್ಮೆ ಲಿಂಗಾಯತ ಅನ್ಯಧರ್ಮ ಎಂಬ ನಶೆಯ ಭಕ್ತರು ಭಟ್ಟರ ಮೇಲೆ ಫತ್ವಾ ಹೊರಡಿಸಿದ್ದಾರೆ. 


ಇರಲಿ, ಈ ಎಲ್ಲಾ ರಂಗನಾಟಕಗಳ ಆಚೆ ಲಿಂಗಾಯತ ಹಿಂದೂ ಧರ್ಮದ ಭಾಗವಾಗಿತ್ತೇ? ನೋಡೋಣ ಬನ್ನಿ.


ಮೊದಲಿಗೆ ಲಿಂಗಾಯತರಿಗೆ ಒಂದು ಧರ್ಮಗ್ರಂಥವಿದೆ. ಈ ಅರೆಬೆಂದ ಸ್ವಾಮಿಗಳು ಹೇಳುವಂತೆ ಕೇವಲ ವಚನಗಳ ಕಟ್ಟು ಲಿಂಗಾಯತರ ಧರ್ಮಗ್ರಂಥವಲ್ಲ! ಚೆನ್ನಬಸವಣ್ಣನು ರಚಿಸಿದ "ಕರಣ ಹಸಿಗೆ" ಲಿಂಗಾಯತರ ಧರ್ಮಗ್ರಂಥ ಎಂದು ಮಾನ್ಯತೆ ಪಡೆದಿದೆ. ವಿಪರ್ಯಾಸವೆಂಬಂತೆ ಮೊನ್ನೆ ಯಾವ ವೇದಿಕೆಯಲ್ಲಿ ರಂಗಜಂಗಮರು ಲಿಂಗಾಯತ ಹಿಂದೂ ಧರ್ಮದ ಭಾಗವಲ್ಲ ಎಂದು ಭಾಷಣ ಮಾಡಿದ್ದರೋ ಅದೇ ಸ್ಮರಣೋತ್ಸವ ಆಚರಿಸಿದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿಗಳೇ ಇದರಲ್ಲಿ ಪ್ರಕಾಂಡ ಪಂಡಿತರಾಗಿದ್ದರು!


ಇರಲಿ, ಈಗ ಲಿಂಗಾಯತರಲ್ಲಿ ಓಂ ಇಲ್ಲ, ವೇದವಿಲ್ಲ, ಆಗಮವಿಲ್ಲ, ಅದಿಲ್ಲ ಇದಿಲ್ಲ ಎನ್ನುತ್ತಾ ವಿಶ್ವವಾಣಿಗೆ ಬಸವಲಿಂಗ ಸವಾಲ್ ಎಂದು ಸವಾಲು ಹಾಕುತ್ತಿರುವ ಅಜ್ಞಾನಿ ಅಧಮ ಆಧುನಿಕ ಹೆಡ್ಡ ಧರ್ಮಾಂಧರಿಗಾಗಿ "ಲಿಂಗಾಯತ"ರು ಪಾಲಿಸಬೇಕಾದ ಚೆನ್ನಬಸವಣ್ಣ ವಿರಚಿತ "ಕರಣ ಹಸಿಗೆ" ಗ್ರಂಥದಿಂದ ಆಯ್ದ ಭಾಗ:


ಅಕಾರವೆಂಬ ಪ್ರಣವದಲ್ಲಿ - 

ಅಗ್ನಿಶ್ಚ ಋಗ್ವೇದಸ್ತಥಾ ರುದ್ರೋಧಿದೇವತಾ | 

ಆಕಾರ ಚಯಂಯಾತಿ ಪ್ರಥಮೇ ಪ್ರಣವಾಂಶಿಕೆ|| 


ಉಕಾರನೆಂಬ ಪ್ರಣವದಲ್ಲಿ - 


ಅಂತರಿಕ್ಷೇ ಯಜುರ್ವೇದೋಭವೇತ್ ಓಂ ಈಶ್ವರೋದೇವತಾ|

ಉಕಾರೇಚ ಲಯಂಯಾತಿ ದ್ವಿತೀಯಂ ಪ್ರಣವಾಂಶಿಕೆ| 


ಮಕಾರವೆಂಬ ಪ್ರಣವದಲ್ಲಿ -

ವಿದ್ಯೇಷು ಸಾಮವೇದೋಭವೇತ್ ಓಂ ಸದಾಶಿವೋ ದೇವತಾ|

ಮಕಾರೇಚ ಲಯಂಯಾಕಿ ತೃತೀಯೇ ಪ್ರಣವಾಂಶಿಕೆ||


ಅಕಾರೇಚ ಉಕಾರೇಚ ಮಕಾರೇಚ ತೃತೀಯಕೆ|

ಇದಮೇಕಂ ಸಮುತ್ಪನ್ನಂ ಓಂ ಇತಿಜ್ಯೋತಿಃ ರೂಪಕಂ||


ಓಂಕಾರಾತ್ಪ್ರಭವಾವೇದಂ | ಓಂಕಾರಾತ್ಪ್ರಭವಾಸ್ವರಂ 

ಓಂಕಾರಾತ್ಪ್ರಭವಾ ಸರ್ವಂ | ತ್ರೈಲೋಕ್ಯಂ ಸಚರಾಚರಂ 

ಸರ್ರವ್ಯಾಪಕಮೋಂಕಾರಂ ಮಂತ್ರೋನ್ಯತ್ರ ನಶೋಭತೆ |

ಪ್ರಣವೋಹಿ ಪರಬ್ರಹ್ಮ ಪ್ರಣವಂ ಪರಮಂ ಪದಂ | 

ಓಂಕಾರಂ ನಾದರೂಪಂಚ ಓಂಕಾರಂ ಬಿಂದುರೂಪಕಂ | 

ಓಂಕಾರಂ ವ್ಯಾಪಿ ಸರ್ವತ್ರಂ ಓಂಕಾರ ಗೋಪ್ಯಮಾನಸಂ | 

ಎಂದಿದು ಪ್ರಣವದುತ್ಪತ್ತಿ. 


ಮೇಲಿನ ಅಕಾರ ಉಕಾರ ಮಕಾರ ಪ್ರಣವದ ಮೂರು ಶ್ಲೋಕಗಳ ಅರ್ಥವು - 


ಅಕಾರವೆಂದು ಹೇಳಿಸಿಕೊಳ್ಳುವ ಪ್ರಣವದ ಅಕ್ಷರದೊಳಗೆ ಅಗ್ನಿಃ ತೇಜವೆಂಬುದೊಂದು ತತ್ತ್ವವು, 

ಋಗ್ವೇದವೆಂಬ ವೇದವು, ರುದ್ರಮೂರ್ತಿಯೆಂಬುದೊಂದು ಅಧಿದೇವತೆಯು, ಇಂದ್ರಾದಿ ನಿರ್ಜರರೆಂಬ ದೇವತೆಗಳು ಉತ್ಸತ್ತಿಯಾದರು. ಉತ್ಪತ್ತಿಯಾಗಿ ಪರಶಿವನ ಸಗುಣಾನಂದ ಸೃಷ್ಟಿಯ ಲೀಲಾವಿಲಾಸ ಉಂಟಾಗಿರುವ ಪರಿಯಂತರ ಉಂಟಾಗಿರ್ದು ಲೀಲೆ ಸಾಕಾದ ಬಳಿಕ ಓಂಕಾರ ಪ್ರಣವದ ಒಂದನೇ ಅಂಶವಾದ ಅಕಾರ ಪ್ರಣವದಲ್ಲಿಯೇ ವಿಶ್ರಾಂತಿಯನ್ನು ಐದುತ್ತಿಹವು. - ಇದು ಮೇಲಿನ ಅಕಾರ ಪ್ರಣವ ಶ್ಲೋಕದ ಅರ್ಥವು. 


ಉಕಾರ ಪ್ರಣವದಲ್ಲಿ ವರ್ಣದೊಳಗಂತರಿಕ್ಸ, ಆಕಾಶ ತತ್ತ್ವ, ಯಜುರ್ವೇದ, ಈಶ್ವರನೆಂಬ ಅಧಿದೇವತೆ, ಇಂದ್ರಾದಿ ಅಪ್ಸರರೆಂಬ ದೇನತೆಗಳು ಉತ್ಪತ್ತಿಯಾದರು. ಲೀಲೆ ಸಾಕಾದ ಬಳಿಕ ಪ್ರಣವದ ಎರಡನೇ ಅಂಶವಾದ ಉಕಾರದಲ್ಲಿ ವಿಶ್ರಾಂತಿಯನ್ನು ಐದುತ್ತಿಹವು. - ಇದು ಉಕಾರ ಪ್ರಣವಡ ಶ್ಲೋಕಾರ್ಥವು.  


ಮಕಾರ ಪ್ರಣವದಲ್ಲಿ ಸುಜ್ಞಾನ ಕಲಾತ್ಮ ತತ್ತ್ವ, ಚತುಸ್ಪಷ್ಠಿ ಕಳಾವಿದ್ಯೆಗಳು, ಸಾಮವೇದವು, ಸದಾಶಿವನೆಂಬ ಅಧಿದೇವತೆಯು ಇಂದ್ರಾದಿ ಅಷ್ಟ ದಿಕ್ಟಾಲಕರು ಉದಯವಾದರು. ಲೀಲೆ ಸಾಕಾದ ಬಳಿಕ ಪ್ರಣವದ ತೃತೀಯಾಂಶವಾದ ಮಕಾರ ಪ್ರಣವದಲ್ಲಿ ವಿಶ್ರಾಂತಿಯನ್ನು ಐದುತ್ತಿಹವು. 


ಓಂಕಾರದ ಅರ್ಥ - ಇನ್ನು ಓಂಕಾರ ಪ್ರಣವದಿಂದ ನಾಲ್ಕು ವೇದಗಳು, ನಾಲ್ಕು ಉಪ ವೇದಗಳು, ಆಗಮಗಳು, ಶಾಸ್ತ್ರ ಪುರಾಣಗಳು, ಷಡಧ್ವ ಷಡ್ಗುಣ ವಸ್ತು, ತತ್ತ್ವಪಂಚಕವು, ಸಪ್ತ ಭುವನಂಗಳು ಹುಟ್ಟಿದವು.


ಈಗ ನೀವೇ ನಿರ್ಧರಿಸಿ, ಲಿಂಗಾಯತವು ಹಿಂದುವೋ ಅಹಿಂದುವೋ?


ಇನ್ನು ಈ ರಂಗ ಜಂಗಮರು ತಮ್ಮ ಆರಂಭದ ವರ್ಷಗಳಲ್ಲಿ ಪ್ರಚಾರದ ಆಸ್ಥೆಯಿಂದ ನಮ್ಮ ದಾವಣಗೆರೆ ಹಳೆಪೇಟೆಯ ದುಗ್ಗಮ್ಮನ ಜಾತ್ರೆಯ ಸಮಯದಲ್ಲಿ "ಪ್ರಾಣಿಬಲಿ ಬೇಡ, ಬೇವಿನ ಉಡುಗೆಯ ಸೇವೆ ಬೇಡ" ಎಂದೆಲ್ಲಾ ಸ್ಥಳೀಯ ಪತ್ರಿಕೆಗಳಲ್ಲಿ ಕರೆ ನೀಡುತ್ತಿದ್ದರು. ವಿಪರ್ಯಾಸವೆಂದರೆ ಇವರ ಅಗ್ರಭಕ್ತರೇ ಮುಂದೆ ನಿಂತು ಕೋಣನ ಬಲಿ ನಡೆಯುವಂತೆ ಇಂದಿಗೂ ನೋಡಿಕೊಳ್ಳುತ್ತಿದ್ದಾರೆ.


ವಿಚಿತ್ರವೆಂದರೆ ಇವರ ಮಠ ಇರುವ ಹಳ್ಳಿಯ ಜಾತ್ರೆಯಲ್ಲಿ ಸಹ ಈವರೆಗೂ ಪ್ರಾಣಿಬಲಿ ನಿಂತಿಲ್ಲ. ಅಲ್ಲಿ ಇವರು ಪ್ರಾಣಿಬಲಿ ನಿಲ್ಲಿಸಿ ಎಂದು ಕರೆ ಕೊಟ್ಟಿದ್ದು ಈವರೆಗೂ ಕೇಳಿಲ್ಲ. ಏಕೆಂದರೆ ದೊಡ್ಡ ಪ್ರೇಕ್ಷಕರಿರುವ ರಂಗದಲ್ಲಿ ಮಾತ್ರ ನಾಟಕಗಳು ಕಳೆಗಟ್ಟುವುದು!


-ರವಿ ಹಂಜ್

No comments: