ಜಂಗಮೋ ಜಗದ್ರಕ್ಷಕ!

ಭಾರತದಲ್ಲಿ ಹುಟ್ಟಿದ ಕಾರಣ, ಮತ್ತಲ್ಲಿ ಹುಟ್ಟಿನಿಂದ ಜಾತಿ ಜಾರಿ ಇರುವ ಕಾರಣ ನನಗೂ ಜನರು ಜಾತಿಯನ್ನು ಅಂಟಿಸಿದ್ದರು. ಅಲ್ಲದೆ ಇಂದು ಯಾರಿಗೆ ಜಾತಿನಿಂದನೆ ಕೇಸು ದಾಖಲಿಸುವ ಹಕ್ಕಿದೆಯೋ ಅವರಿಂದಾದಿಯಾಗಿ ಎಲ್ಲಾ ಜಾತಿಯವರಿಂದಲೂ ಜಾತಿನಿಂದನೆಯನ್ನು ನಾನು ಅನುಭವಿಸಿದ್ದೇನೆ. ಇಂತಹ ಜಾತಿನಿಂದನೆ ಕಾರಣವಾಗಿ ಜಾತಿಯನ್ನು ನಾಶ ಮಾಡಬೇಕೆಂಬ ಚಿಂತಕರ ಚಿಂತನೆಯನ್ನು ನಾನು ಪ್ರೌಢಶಾಲೆಯಲ್ಲಿದ್ದಾಗಲೇ ಗಾಢವಾಗಿ ಅಪ್ಪಿಕೊಂಡು ಕೊರಳಲ್ಲಿದ್ದ ಜಾತಿಸೂಚಕ ಚಿಹ್ನೆಯನ್ನು ಕಿತ್ತು ಗಿರಗಿರನೆ ತಿರುಗಿಸಿ ಎಸೆದಿದ್ದೆ. ಅದಕ್ಕಾಗಿ ನಮ್ಮಪ್ಪನಿಂದ ಸಾಕಷ್ಟು ಚಿತ್ರಹಿಂಸೆ ಅನುಭವಿಸಿದರೂ ಅಂದು ಎಸೆದ ಆ ಚಿಹ್ನೆಯನ್ನು ಈವರೆಗೆ ಧರಿಸಿಲ್ಲ.


"ಮಾನವ ಧರ್ಮಕ್ಕೆ ಜಯವಾಗಲಿ", ಮತ್ತು "ಓ ನನ್ನ ಚೇತನ ಆಗು ನೀ ಅನಿಕೇತನ" ಎಂಬ ವಿಶ್ವಮಾನವ ಪ್ರಜ್ಞೆಗೆ ಅನುಗುಣವಾಗಿ ಅಮೇರಿಕಾದಲ್ಲಿರುವ ಯಾವುದೇ ಭಾಷೆ, ಜಾತಿ, ಧಾರ್ಮಿಕ ಸಂಘಗಳ ಸದಸ್ಯತ್ವವನ್ನು ಈವರೆಗೆ ತೆಗೆದುಕೊಂಡಿಲ್ಲ. ಸಾಹಿತ್ಯಿಕ ಆಸಕ್ತಿ ಇದ್ದರೂ ಇಲ್ಲಿನ ಕನ್ನಡ ಸಾಹಿತ್ಯ ರಂಗ ಎನ್ನುವ ಸಾಹಿತ್ಯಿಕ(?) ಗುಂಪನ್ನೂ ಸೇರಿಲ್ಲ. ಒಂದೆರಡು ಸಂಘಗಳ ಕಾರ್ಯಕ್ರಮಗಳಿಗೆ ಮನರಂಜನೆಗಾಗಿ ಹೋಗಿದ್ದೇನಷ್ಟೇ.


ಇನ್ನು ಯಾವುದೇ ಮಾಧ್ಯಮದಲ್ಲಿ ಈವರೆಗೆ ನಾನು ಹುಟ್ಟಿದ ಜಾತಿಯ ಕುರಿತಾಗಿ ಯಾವುದೇ ಸಕಾರಾತ್ಮಕ ಭಾವನೆಯ ಬರಹ, ಪೋಸ್ಟ್ ಹಾಕಿಲ್ಲ. ಸತ್ಯ ಪ್ರತಿಪಾದನೆಯ ಹಾದಿಯ ನನ್ನ ಲೇಖನಗಳು ಕೆಲವು ಪೂರ್ವಾಗ್ರಹಪೀಡಿತರಿಗೆ ಅವರ ಕಣ್ಣೋಟದಂತೆ ಕಂಡಿದ್ದರೆ ಅದು ಅವರ ರೋಗವಷ್ಟೇ. ಅಂತಹ ಒಬ್ಬರು ಹಿಂದೆ ನನ್ನ ಹುಟ್ಟಿನ ಜಾತಿಯನ್ನು ಹೆಕ್ಕಿ ನನ್ನ ಪುಸ್ತಕಕ್ಕೆ ಖ್ಯಾತನಾಮರು ಬರೆದ ಮುನ್ನುಡಿ ಅವರು ಬರೆದದ್ದಲ್ಲ ಎಂದು ಸುಳ್ಳುಸುದ್ದಿ ಹಬ್ಬಿಸಿದಾಗ, ಹೌದು ನಾನೊಬ್ಬ ಕಾಳಾಮುಖ ಜಂಗಮ. ನನ್ನ ಪುಸ್ತಕದ ಮುನ್ನುಡಿಯನ್ನು ಆ ಖ್ಯಾತನಾಮರು ಬರೆದಿಲ್ಲ ಎಂದು ಪುರಾವೆ ಸಮೇತ ನೀವು ಸಾಬೀತು ಮಾಡಿದರೆ ನಾನು ನನ್ನ ಲಿಂಗರೂಪಿ ಅಂಗವನ್ನು ಕತ್ತರಿಸಿಕೊಳ್ಳುವೆ. ತಪ್ಪಿದರೆ ನೀವು ಕತ್ತರಿಸಿಕೊಳ್ಳುವಿರಾ? ಎಂದು ಕಾಳಾಮುಖರಂತೆ ಸವಾಲು ಹಾಕಿದ್ದು ಬಿಟ್ಟರೆ ಮತ್ತೆಂದೂ ಆ ಕುರಿತು ಬರೆದಿಲ್ಲ.


ನಾನು ಬರೆಯಲು ಆರಂಭಿಸಿದ ನಂತರ ಪರಿಚಿತರಾದ

ಭಾರತದ ಅನೇಕ ಸ್ವಘೋಷಿತ ಉದಾರವಾದಿ, ಪ್ರಗತಿಪರ ಸ್ನೇಹಿತೆ/ತರು ನನ್ನ ಹುಟ್ಟಿನ ಜಾತಿಯನ್ನು ಹುಡುಕಿ ತೆಗೆದು ನನ್ನನ್ನು ಜಾತಿ ಹಿಡಿದು ನಾಜೂಕಾಗಿ ನಿರಂತರವಾಗಿ ನಿಂದಿಸುತ್ತಲೇ ಇದ್ದಾರೆ. ನನ್ನ ಬಸವ ಮಂಟಪ ಅಂಕಣದಿಂದ ಕಂಗೆಟ್ಟಿರುವ ಲಿಂಗಾಹತಿಗಳಂತೂ ಮಾತಿಭ್ರಮಣೆಗೊಂಡು ಜಾತಿನಿಂದನೆಯ ತೀವ್ರ ರೋಗಕ್ಕೆ ಒಳಗಾಗಿದ್ದಾರೆ. ಈಗಂತೂ ಏನನ್ನಾದರೂ ತಾರ್ಕಿಕವಾಗಿ ಪ್ರಶ್ನಿಸಿದರೆ ಸಾಕು ಪಂಥೋಗ್ರರಂತೆ ಜಾತಿ ಮೂಲದ ವಂಶಾವಾಹಿಯನ್ನು ಜಾಲಾಡುವ ಉಗ್ರವಾದ ಎಲ್ಲೆಡೆ ಸಾಂಕ್ರಾಮಿಕವಾಗಿ ಹರಡುತ್ತಿದೆ.


ಭಾರತದಲ್ಲಿ ನನ್ನ ಹಿತಾಸಕ್ತಿ ವಿಷಯಗಳು (ಸ್ವಯಾರ್ಜಿತ ಮನೆ, ತೋಟ, ಇತ್ಯಾದಿ ಆಸ್ತಿಗಳು) ಇರುವ ಕಾರಣ, ಅಲ್ಲಿನ ಈ ನವವಾತಾವರಣಕ್ಕೆ ತಕ್ಕಂತೆ ನನ್ನ ಹುಟ್ಟಿನ ಜಾತಿಯ ಕುರಿತಾಗಿ ಭಾವನೆಗಳನ್ನು ಬೆಳೆಸಿಕೊಳ್ಳುವ ಗತ್ಯಂತರ ತುರ್ತನ್ನು ಭಾರತೀಯ ಸಾಂವಿಧಾನಿಕ ಸಮಾಜಕ್ಕಾಗಿ ನಾನು ಜನನಾರ್ಜಿತವಾಗಿ ಈಗ ಹೇರಿಕೊಳ್ಳಬೇಕಿದೆ.


ಆ ಹೇರಿಕೆಯ ಕಾರಣವಾಗಿ ನನ್ನ ಹುಟ್ಟಿನ ಜಾತಿಯ ಬಗ್ಗೆ ನಾನು ಕಂಡುಕೊಂಡದ್ದು:


೧. ಕರ್ನಾಟಕ ಸಾಮ್ರಾಜ್ಯ ಸ್ಥಾಪನೆಗೆ ಪ್ರಮುಖ ಕೊಡುಗೆ ನೀಡಿದವರು ಕಾಳಾಮುಖ ಜಂಗಮರು ಯಾನೆ ವೀರಶೈವ ಜಂಗಮರು. ವಿದ್ಯಾರಣ್ಯರಿಗೂ ಮೊದಲು ಜಂಗಮರ "ಕ್ರಿಯಾಶಕ್ತಿ" ಕರ್ನಾಟಕ ಸಾಮ್ರಾಜ್ಯ (ವಿಜಯನಗರ ಸಾಮ್ರಾಜ್ಯ) ದ ರಾಜಗುರುವೂ ಆಗಿದ್ದ. 

(Ref: Founders of Vijayanagara, S. Srikantaya)


೨. ಶೈವ ಪಂಥ ಪ್ರಸಾರಕ್ಕೆ ದೇಶಾದ್ಯಂತ ಕೇದಾರದಿಂದ ಶ್ರೀಶೈಲದವರೆಗೆ ಮಠಗಳನ್ನು ಕಟ್ಟಿದವರು ಜಂಗಮರು.


೩. ಪಂಥಕ್ಕೊಡ್ಡಿದ ಸವಾಲುಗಳಲ್ಲಿ ಕೈ, ಕಾಲು, ರುಂಡಗಳನ್ನು ಕಡಿದುಕೊಂಡು ಶೈವಪಂಥವನ್ನು ಬೆಳೆಸಿದವರು ಜಂಗಮರು.


೪. ದಕ್ಷಿಣಾಚಾರ ಎಂಬ ಕಲಾಪ್ರಕಾರವನ್ನು ಹುಟ್ಟುಹಾಕಿ ಕರ್ನಾಟಕದ ಶಿಲ್ಪಕಲೆಗೆ ಮಾನ್ಯತೆ ತಂದುಕೊಟ್ಟವರು ಇದೇ ಕಾಳಾಮುಖ ಜಂಗಮರು.

(ದಕ್ಷಿಣಾಚಾರವೇ ಅಪಭ್ರಂಶಗೊಂಡು ಜಕಣಾಚಾರವಾಗಿ ಮುಂದೆ ಜಕಣಾಚಾರಿ ಎಂಬ ಕಾಲ್ಪನಿಕ ವ್ಯಕ್ತಿಯಾಗಿ ಈಗ ಆತನ ಹೆಸರಿನ ಜಯಂತಿ ಸಹ ಆಗಿದೆ).


೫. ಕಾಳಾಮುಖ ಜಂಗಮರ ಪ್ರಭಾವದಿಂದ ಸಾಮ್ರಾಜ್ಯ ವಿಸ್ತರಿಸಿದ ಚೋಳರು ತಮ್ಮ ಪ್ರಮುಖ ಯುದ್ಧದ ಹಡಗಿಗೆ ಕಾಳಾಮುಖ ಎಂದು ಹೆಸರಿಸಿ ಇವರನ್ನು ಆದರಿಸಿದ್ದರು.


೬. ಪಾಲ್ಕುರಿಕೆ ಸೋಮನಾಥ, ಹರಿಹರನ ಕಟ್ಟುಕಥೆಯ ಪುರಾಣ/ರಗಳೆಗಳಾಚೆ ವಿಶ್ವಮಾನ್ಯ ಪುರಾವೆಗಳಾದ ಶಿಲಾಶಾಸನಗಳ ಪ್ರಕಾರ ವಿಶ್ವಗುರು ಬಸವಣ್ಣ, ವೀರ ಮಾಹೇಶ್ವರ ಜಂಗಮ ಪುರುಷ, ನನ್ನ ವಂಶಿಭೂತ!

(ಅರ್ಜುನವಾಡ ಶಿಲಾಶಾಸನ - ಮಧುರಚೆನ್ನ, ಮುನವಳ್ಳಿ ಶಿಲಾಶಾಸನ - David Lorenzen)


೭. ಅಲ್ಲಮಪ್ರಭು ತನ್ನನ್ನು ತಾನೇ "ನೀವೆನ್ನ ವಂಶೀಭೂತರಾದ ಕಾರಣ_ನಿಮ್ಮ ಹೆಚ್ಚು ಕುಂದು ಎನ್ನದಾಗಿ..." ಎಂದು ಜಂಗಮರ ಕುರಿತಾದ ವಚನದಲ್ಲಿ ತಾನು ಜಂಗಮ ಎಂದು ಊರ್ಜಿತಗೊಳಿಸಿದ್ದಾನೆ.


೮. ಮುಗಿದೇಹೋಯಿತು ಎನ್ನುವ ಕಾಲಘಟ್ಟದಲ್ಲಿ ಪಂಥವನ್ನು ಪ್ರವರ್ಧಮಾನಕ್ಕೆ ತಂದ ಎಡೆಯೂರು ಸಿದ್ದಲಿಂಗೇಶ್ವರರು ಜಂಗಮರು. ಬರಡು ಪ್ರದೇಶಕ್ಕೆ ತೆಂಗು ಪರಿಚಯಿಸಿ ತೋಂಟದಾರ್ಯ ಎಂದಾದವರು ನನ್ನ ವಂಶೀಭೂತರು.


.೯. ಮೈಸೂರಿನ ಅರಸ ಚಿಕ್ಕದೇವರಾಜ ರೈತಾಪಿಗಳ ಮೇಲೆ ಹೆಚ್ಚಿನ ತೆರಿಗೆಯನ್ನು ವಿಧಿಸಿದಾಗ ಪ್ರತಿಭಟಿಸಿ ಅವನ ಮಸಲತ್ತಿಗೆ ನಾನೂರಕ್ಕೂ ಕ್ಕೂ ಹೆಚ್ಚು ಬಲಿಯಾದ ವೀರಮಾಹೇಶ್ವರರು, ನನ್ನ ಜಂಗಮರು.

.

.

.

.

.

ಪಟ್ಟಿ ಬಹು ದೊಡ್ಡದಿದೆ!


ಆದರೆ ನನಗಾಗಲಿ ನನ್ನ ವಂಶೀವರ್ತಮಾನ, ವಂಶೀಭವಿಷ್ಯಕ್ಕಾಗಲಿ ಇದು ನಮ್ಮ ಪರಂಪರೆ ಎಂಬುದನ್ನು ಬಿಟ್ಟರೆ ಇನ್ಯಾವುದೇ ಸಾಮಾಜಿಕ, ಆರ್ಥಿಕ, ರಾಜಕೀಯ "ವಿಶೇಷಣ"ಗಳ ಲಾಭವಿಲ್ಲ. ಹಾಗಾಗಿ ಇದರಿಂದ ನನ್ನ ಕಾಲರ್ ಮೇಲಕ್ಕೇರುವುದೂ ಇಲ್ಲ, ಪ್ಯಾಂಟು ಉದುರುವುದೂ ಇಲ್ಲ!


ಆದರೆ ಇಂತಿಪ್ಪ ವೀರಮಾಹೇಶ್ವರ ಜಂಗಮರು ಬಲಿದಾನ ನೀಡಿ ಉಳಿಸಿ ಬೆಳೆಸಿದ ಅಖಂಡ ವೀರಶೈವ ಲಿಂಗವಂತ ಪಂಥದ ಕೆಲವು ಅರಿವುಗೇಡಿ ಫಲಾನುಭವಿಗಳು ಈಗ ವೀರಶೈವ ಬೇರೆ, ಲಿಂಗಾಯತ ಬೇರೆ ಎನ್ನುವ ನಿರಾಧಾರಿ ಪಂಥೋಗ್ರರಾಗಿ, "ಜಂಗಮರು ಪಂಪೀಗಳು. ಅವರನ್ನು ಹೊರಹಾಕಿ. ಅವರಿಗೆ ಉದ್ಯೋಗ ಕೊಡಬೇಡಿ, ಅವರ ಬಳಿ ವ್ಯವಹಾರ ಮಾಡಬೇಡಿ, ಊರಲ್ಲಿ ಯಾವುದಕ್ಕೂ ಸೇರಿಸಬೇಡಿ. ಅವರನ್ನು ಬೆಳಿಗ್ಗೆ ಎದ್ದು ನೋಡಿದರೆ ದರಿದ್ರ ಅಂಟುತ್ತದೆ" ಎಂದೆಲ್ಲಾ ಜನಾಂಗೀಯ ನಿಂದನೆಯ ಪಿಂಪ್ ಪೀಪಿಯನ್ನು ಊದುತ್ತಿದ್ದಾರೆ. ನನ್ನ ವಂಶಜ ಬಸವನ ಹೆಸರನ್ನು ಕವಚ ಮಾಡಿಕೊಂಡ ನಟುವಾಂಗನೊಬ್ಬ, "ಜಂಗಮರಿಗೆ ವಿವೇಕ ಕಡಿಮೆ" ಎಂದು ತನ್ನ ಅವಿವೇಕವನ್ನು ಮೆರೆದಿದ್ದಾನೆ! ಇಂತಹ ಶುನಕಗಳ ಬೊಗಳುವಿಕೆ, ಪ್ರೇಕ್ಷಕರ ಸೀಟಿ, ಚಪ್ಪಾಳೆ ಗಿಟ್ಟಿಸಬಹುದೇ ಹೊರತು ಧರ್ಮವನ್ನು ನಿಲಿಸದು. ನಿಲಿಸಲು ಈ ಕುನ್ನಿಗಳೇನು ವೀರಗಣಾಚಾರಿ ಮಾಹೇಶ್ವರರೇ?!?


ನನ್ನ ಬಸವ ಮಂಟಪ ಅಂಕಣದ ವಿಷಯಗಳು ತಪ್ಪೆಂದು ನನ್ನ ವಂಶಿಭೂತ ಬಸವಣ್ಣನ ಕವಚ ಧರಿಸಿ ಮೆರವಣಿಗೆ ಹೊರಟಿರುವ ನಟುವಾಂಗ ಮತ್ತವನ ಕುನ್ನಿಗಳು ಸಾಕ್ಷಿ ಸಮೇತ ಸಾಬೀತು ಮಾಡಿದರೆ ಎನ್ನ ಶಿರಚ್ಛೇದ ಮಾಡಿಕೊಳ್ಳುವೆ. ಇದು ನನ್ನ ವೀರಗಣಾಚಾರ ಸವಾಲ್!


ಒಟ್ಟಾರೆ, ಊಳಿಗಮಾನ ಪ್ರಜಾಪ್ರಭುತ್ವದ ಭಾರತೀಯ ಸಾಂವಿಧಾನಿಕ ಜಾತಿಸಂಕುಲೆಯಲ್ಲಿ ಸಿಲುಕಿ ಅಲ್ಲಿಯೇ ಒದ್ದಾಡಬೇಕಾದ ಸಾಮಾಜಿಕ, ಆರ್ಥಿಕ, ಸಾಂಖ್ಯಿಕವಾಗಿ ಅಲ್ಪಸಂಖ್ಯಾತರಲ್ಲಿ ಅಲ್ಪಸಂಖ್ಯಾತರಾದ ಈ ಜನಕ್ಕೆ ಅವರ ಪರಂಪರೆಯನ್ನು ಈ ಮೂಲಕ ಪರಿಚಯಿಸಿದ್ದೇನೆ. 


ಹೋಗಿ, ವೀರ ಗಣಾಚಾರಿ ಜಂಗಮರೇ, ನೀವೂ ನಿಮ್ಮ ಕಾಲರ್ ಎತ್ತಿ, ವಿರೋಧಿ ನಟುವಾಂಗ ಲಿಂಗಾಹತಿಗಳ ಪ್ಯಾಂಟು ಉದುರಿಸಿ.


ಎತ್ತಿ ಉದುರಿಸುವ ಮುನ್ನ ನನ್ನ ವಂಶೀಭೂತ ಬಸವಣ್ಣನ ವಚನ ಪಂಥೋಗ್ರರಲ್ಲದೆ ಪಂಪೀಗಳೂ ಮರೆಯದೇ ನೆನಪಿಟ್ಟುಕೊಳ್ಳಿ.


ಅರಸು ವಿಚಾರ, ಸಿರಿಯು, ಶೃಂಗಾರ, ಸ್ಥಿರವಲ್ಲ ಮಾನವಾ.

ಕೆಟ್ಟಿತ್ತು ಕಲ್ಯಾಣ, ಹಾಳಾಯಿತ್ತು ನೋಡಾ.

ಒಬ್ಬ ಜಂಗಮದ ಅಭಿಮಾನದಿಂದ

ಚಾಳುಕ್ಯರಾಯನ ಆಳಿಕೆ ತೆಗೆಯಿತ್ತು,

ಸಂದಿತ್ತು, ಕೂಡಲಸಂಗಮದೇವಾ ನಿಮ್ಮ ಕವಳಿಗೆಗೆ.

ಜಂಗಮೋ ಜಗದ್ರಕ್ಷಕ!


- ರವಿ ಹಂಜ್ 

ಒಂದು ಚಪ್ಪಲಿ ಎಸೆತದ ಹಿಂದೆ!

ನ್ಯಾಯಾಧೀಶರು ನ್ಯಾಯಾಲಯದ ಕಾರ್ಯವಿಧಾನಗಳಲ್ಲಿ ಮತ್ತು ಲಿಖಿತ ಅಭಿಪ್ರಾಯಗಳಲ್ಲಿ ವ್ಯಂಗ್ಯಾತ್ಮಕ ಟೀಕೆಗಳನ್ನು ಬಳಸಿದರೆ, ಅದನ್ನು ಸಾಮಾನ್ಯವಾಗಿ "ಅನುಚಿತ ವರ್ತನೆ" ಎಂದು ಪರಿಗಣಿಸಲಾಗುತ್ತದೆ ಮತ್ತು ಇದು ಶಿಸ್ತುಕ್ರಮಕ್ಕೆ ದಾರಿ ಮಾಡಿಕೊಡುತ್ತದೆ. 


ಜಾಗತಿಕವಾಗಿ ಎಲ್ಲಾ ನ್ಯಾಯಾಂಗ ನಡವಳಿಕೆ ಸಂಹಿತೆಗಳು, "ನ್ಯಾಯಾಧೀಶರು ತಾಳ್ಮೆಯುಕ್ತರೂ, ಗೌರವಾನ್ವಿತರೂ, ಮತ್ತು ಸಭ್ಯಸ್ಥರು ಆಗಿರಬೇಕು" ಎನ್ನುತ್ತವೆ. ನ್ಯಾಯಾಧೀಶರು ವ್ಯಂಗ್ಯ, ಉಡಾಫೆ, ಮತ್ತು ಮೊನಚು ಮಾತುಗಳನ್ನು ಬಳಸಿದರೆ ಅವರನ್ನು ನ್ಯಾಯಾಂಗ ನಡವಳಿಕೆಗಳಿಗೆ ಭಂಗ ತಂದ ಆರೋಪದಡಿ ಶಿಕ್ಷೆಗೆ ಗುರಿಮಾಡಬಹುದು.


ನ್ಯಾಯಾಧೀಶರ ವ್ಯಂಗ್ಯದ ಮಾತುಗಳು, 

ಅಧಿಕಾರ ಅಸಮತೋಲನ, ಪಕ್ಷಪಾತವೆನಿಸಿ ನ್ಯಾಯವ್ಯವಸ್ಥೆಯೊಳಗಿನ ಬಲಹೀನ ವಾದಿಗಳು, ಸಾಕ್ಷಿಗಳು ಅಥವಾ ವಕೀಲರಿಗೆ ಅಪಮಾನವೆನಿಸಿ ಅವರನ್ನು ಮಾನಸಿಕವಾಗಿ ಕುಗ್ಗಿಸುತ್ತವೆ. ಇದು ಅವರುಗಳ ವಾದದ ಮೇಲೆ ಪರಿಣಾಮ ಬೀರಿ ಅವರಿಗೆ ಮೊಕದ್ದಮೆಯಲ್ಲಿ ಸೋಲುಂಟುಮಾಡಬಹುದು. ಅಲ್ಲದೇ ನ್ಯಾಯಾಧೀಶರ ವ್ಯಂಗ್ಯವು ನಿಷ್ಪಕ್ಷಪಾತಿ ಎನಿಸದೆ ಮೊಕದ್ದಮೆಯನ್ನು ಪೂರ್ವನಿರ್ಧಾರ ಮಾಡಿದ್ದಾರೆ ಅಥವಾ ಒಂದು ಪಕ್ಷದ ಬಗ್ಗೆ ನಕಾರಾತ್ಮಕ ದೃಷ್ಟಿಕೋನ ಹೊಂದಿದ್ದಾರೆ ಎಂಬ ಭಾವನೆಯನ್ನು ಸಾರ್ವಜನಿಕರಿಗೆ ನೀಡುತ್ತದೆ. ಇದು ಸಾರ್ವತ್ರಿಕವಾಗಿ ಸಮಗ್ರ ನ್ಯಾಯಾಂಗದ ಬಗ್ಗೆ ಜನರ ವಿಶ್ವಾಸವನ್ನು ಕುಗ್ಗಿಸುತ್ತದೆ. ಹಲವಾರು ಬಾರಿ ಸಾರ್ವಜನಿಕರು ಇಂತಹ ವ್ಯಂಗ್ಯವನ್ನು ಬೇರೆ ಬೇರೆ ರೀತಿಯಲ್ಲಿ ಗ್ರಹಿಸಿ ಸಮಾಜದಲ್ಲಿ ಅಸ್ಥಿರತೆಯನ್ನುಂಟು ಮಾಡಬಹುದು.


ಹಾಗಾಗಿ ಸಾಕಷ್ಟು ದೇಶಗಳು ಇಂತಹ ನ್ಯಾಯಾಧೀಶರನ್ನು ನ್ಯಾಯಾಂಗ ನಡವಳಿಕೆ ಆಯೋಗದಿಂದ ಶಿಸ್ತು ಕ್ರಮಕ್ಕೆ ಗುರಿ ಮಾಡಿವೆ. ಅವರ ವ್ಯಂಗ್ಯದ ಮಾಪನಕ್ಕೆ ತಕ್ಕಂತೆ ಎಚ್ಚರಿಕೆ, ಮುಚ್ಚಳಿಕೆ, ಅಮಾನತು, ಕಡ್ಡಾಯ ನಿವೃತ್ತಿಯಂತಹ ಶಿಕ್ಷೆಗಳನ್ನು ಕೊಟ್ಟಿವೆ.


ಈಗ ಭಾರತೀಯ ನ್ಯಾಯಾಧೀಶರೊಬ್ಬರು ತಮ್ಮಲ್ಲಿನ ಬಲಹೀನ ವಕೀಲವಾದಿಗೆ, "ನಿನ್ನ ವಿಷ್ಣುವನ್ನು ಕೇಳು ಹೋಗು" ಎಂದಿರುವುದು ವ್ಯಂಗ್ಯದ ಮಿತಿಯನ್ನು ಮೀರಿ ಧಾರ್ಮಿಕ ಅವಹೇಳನ ಎನಿಸುತ್ತದೆ. ಸಾಂವಿಧಾನಿಕವಾಗಿ ಭಾರತೀಯರಿಗೆ ಕೊಟ್ಟಿರುವ "ಧಾರ್ಮಿಕ ಹಕ್ಕು", ಓರ್ವ ಸಂವಿಧಾನಿಕ ನ್ಯಾಯಾಧೀಶರಿಂದಲೇ ಮುಕ್ಕಾಗಿಸುವ ಮಾತು ಸಂವಿಧಾನ ಶಿಲ್ಪಿ ಅಂಬೇಡ್ಕರರಿಗೆ ಮಾಡುವ ಘನಘೋರ ಅವಮಾನ.


ಅಂಬೇಡ್ಕರರನ್ನು, ಸಂವಿಧಾನವನ್ನು, ಮೂಲಭೂತ ಹಕ್ಕನ್ನು ಅವಹೇಳಿಸಿದ ವ್ಯಂಗೋಕ್ತಿಯ ನ್ಯಾಯಾಧೀಶರನ್ನು ಅವರ ಹುಟ್ಟಿನ ಜಾತಿಯ ಕಾರಣವಾಗಿ ಆಯುಧ ಮಾಡಿಕೊಂಡು ಅಂಬೇಡ್ಕರರ ಹೆಸರಿನಲ್ಲಿಯೇ ಅಂಬೇಡ್ಕರರನ್ನು ಅವಮಾನಿಸುತ್ತಿರುವುದು ಭಾರತೀಯ ಬುದ್ಧಿಜೀವಿಗಳ ಅಧೋಗತಿಯ ಪರಾಮಾವಧಿ!


ಈ ವ್ಯಂಗ್ಯದಿಂದ ಓರ್ವ ಹಿರಿಯ ವಕೀಲರೇ ಮಾನಸಿಕವಾಗಿ ಕುಗ್ಗಿ ವ್ಯಂಗೋಕ್ತಿ ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದಿದ್ದಾರೆ ಎಂದರೆ ಶ್ರೀಸಾಮಾನ್ಯನಿಗೆ ನ್ಯಾಯಾಂಗದ ಬಗ್ಗೆ ಎಂತಹ ಅವಿಶ್ವಾಸ ಮೂಡಿರಬಹುದು?!?! ಮಾನಸಿಕವಾಗಿ ಕುಗ್ಗಿಹೋಗುವ ಶ್ರೀಸಾಮಾನ್ಯ ಇನ್ನೇನನ್ನು ಎಸೆಯಲು ಸಿದ್ಧನಾಗಬಹುದು?!?!


ಇಲ್ಲಿ ತಾರ್ಕಿಕವಾಗಿ ನೈತಿಕವಾಗಿ ನ್ಯಾಯಯುತವಾಗಿ ಯಾರು ಯಾರನ್ನು ಅವಮಾನಿಸಿದ್ದಾರೆ? 


ಉಗಿಯುವುದು ಮೂತ್ರಿಸುವುದನ್ನು ನಿಯಂತ್ರಿಸಲು ಮೂಲೆಗಳಲ್ಲಿ ದೇವರ ಚಿತ್ರದ ಟೈಲ್ಸ್ ಜೋಡಿಸುವಂತೆ ಎಲ್ಲದಕ್ಕೂ ಬುದ್ಧ, ಬಸವ, ಅಂಬೇಡ್ಕರ್ ಅವರನ್ನು ಎಳೆದು ತಂದು ಅವರನ್ನು ಕತ್ತಿ, ಗುರಾಣಿ, ಕವಚ ಮಾಡಿಕೊಳ್ಳುವುದಕ್ಕೆ ಮೊದಲು ನಿಯಂತ್ರಣ ಹೇರಬೇಕು. 


- ರವಿ ಹಂಜ್