ನ್ಯಾಯಾಧೀಶರು ನ್ಯಾಯಾಲಯದ ಕಾರ್ಯವಿಧಾನಗಳಲ್ಲಿ ಮತ್ತು ಲಿಖಿತ ಅಭಿಪ್ರಾಯಗಳಲ್ಲಿ ವ್ಯಂಗ್ಯಾತ್ಮಕ ಟೀಕೆಗಳನ್ನು ಬಳಸಿದರೆ, ಅದನ್ನು ಸಾಮಾನ್ಯವಾಗಿ "ಅನುಚಿತ ವರ್ತನೆ" ಎಂದು ಪರಿಗಣಿಸಲಾಗುತ್ತದೆ ಮತ್ತು ಇದು ಶಿಸ್ತುಕ್ರಮಕ್ಕೆ ದಾರಿ ಮಾಡಿಕೊಡುತ್ತದೆ.
ಜಾಗತಿಕವಾಗಿ ಎಲ್ಲಾ ನ್ಯಾಯಾಂಗ ನಡವಳಿಕೆ ಸಂಹಿತೆಗಳು, "ನ್ಯಾಯಾಧೀಶರು ತಾಳ್ಮೆಯುಕ್ತರೂ, ಗೌರವಾನ್ವಿತರೂ, ಮತ್ತು ಸಭ್ಯಸ್ಥರು ಆಗಿರಬೇಕು" ಎನ್ನುತ್ತವೆ. ನ್ಯಾಯಾಧೀಶರು ವ್ಯಂಗ್ಯ, ಉಡಾಫೆ, ಮತ್ತು ಮೊನಚು ಮಾತುಗಳನ್ನು ಬಳಸಿದರೆ ಅವರನ್ನು ನ್ಯಾಯಾಂಗ ನಡವಳಿಕೆಗಳಿಗೆ ಭಂಗ ತಂದ ಆರೋಪದಡಿ ಶಿಕ್ಷೆಗೆ ಗುರಿಮಾಡಬಹುದು.
ನ್ಯಾಯಾಧೀಶರ ವ್ಯಂಗ್ಯದ ಮಾತುಗಳು,
ಅಧಿಕಾರ ಅಸಮತೋಲನ, ಪಕ್ಷಪಾತವೆನಿಸಿ ನ್ಯಾಯವ್ಯವಸ್ಥೆಯೊಳಗಿನ ಬಲಹೀನ ವಾದಿಗಳು, ಸಾಕ್ಷಿಗಳು ಅಥವಾ ವಕೀಲರಿಗೆ ಅಪಮಾನವೆನಿಸಿ ಅವರನ್ನು ಮಾನಸಿಕವಾಗಿ ಕುಗ್ಗಿಸುತ್ತವೆ. ಇದು ಅವರುಗಳ ವಾದದ ಮೇಲೆ ಪರಿಣಾಮ ಬೀರಿ ಅವರಿಗೆ ಮೊಕದ್ದಮೆಯಲ್ಲಿ ಸೋಲುಂಟುಮಾಡಬಹುದು. ಅಲ್ಲದೇ ನ್ಯಾಯಾಧೀಶರ ವ್ಯಂಗ್ಯವು ನಿಷ್ಪಕ್ಷಪಾತಿ ಎನಿಸದೆ ಮೊಕದ್ದಮೆಯನ್ನು ಪೂರ್ವನಿರ್ಧಾರ ಮಾಡಿದ್ದಾರೆ ಅಥವಾ ಒಂದು ಪಕ್ಷದ ಬಗ್ಗೆ ನಕಾರಾತ್ಮಕ ದೃಷ್ಟಿಕೋನ ಹೊಂದಿದ್ದಾರೆ ಎಂಬ ಭಾವನೆಯನ್ನು ಸಾರ್ವಜನಿಕರಿಗೆ ನೀಡುತ್ತದೆ. ಇದು ಸಾರ್ವತ್ರಿಕವಾಗಿ ಸಮಗ್ರ ನ್ಯಾಯಾಂಗದ ಬಗ್ಗೆ ಜನರ ವಿಶ್ವಾಸವನ್ನು ಕುಗ್ಗಿಸುತ್ತದೆ. ಹಲವಾರು ಬಾರಿ ಸಾರ್ವಜನಿಕರು ಇಂತಹ ವ್ಯಂಗ್ಯವನ್ನು ಬೇರೆ ಬೇರೆ ರೀತಿಯಲ್ಲಿ ಗ್ರಹಿಸಿ ಸಮಾಜದಲ್ಲಿ ಅಸ್ಥಿರತೆಯನ್ನುಂಟು ಮಾಡಬಹುದು.
ಹಾಗಾಗಿ ಸಾಕಷ್ಟು ದೇಶಗಳು ಇಂತಹ ನ್ಯಾಯಾಧೀಶರನ್ನು ನ್ಯಾಯಾಂಗ ನಡವಳಿಕೆ ಆಯೋಗದಿಂದ ಶಿಸ್ತು ಕ್ರಮಕ್ಕೆ ಗುರಿ ಮಾಡಿವೆ. ಅವರ ವ್ಯಂಗ್ಯದ ಮಾಪನಕ್ಕೆ ತಕ್ಕಂತೆ ಎಚ್ಚರಿಕೆ, ಮುಚ್ಚಳಿಕೆ, ಅಮಾನತು, ಕಡ್ಡಾಯ ನಿವೃತ್ತಿಯಂತಹ ಶಿಕ್ಷೆಗಳನ್ನು ಕೊಟ್ಟಿವೆ.
ಈಗ ಭಾರತೀಯ ನ್ಯಾಯಾಧೀಶರೊಬ್ಬರು ತಮ್ಮಲ್ಲಿನ ಬಲಹೀನ ವಕೀಲವಾದಿಗೆ, "ನಿನ್ನ ವಿಷ್ಣುವನ್ನು ಕೇಳು ಹೋಗು" ಎಂದಿರುವುದು ವ್ಯಂಗ್ಯದ ಮಿತಿಯನ್ನು ಮೀರಿ ಧಾರ್ಮಿಕ ಅವಹೇಳನ ಎನಿಸುತ್ತದೆ. ಸಾಂವಿಧಾನಿಕವಾಗಿ ಭಾರತೀಯರಿಗೆ ಕೊಟ್ಟಿರುವ "ಧಾರ್ಮಿಕ ಹಕ್ಕು", ಓರ್ವ ಸಂವಿಧಾನಿಕ ನ್ಯಾಯಾಧೀಶರಿಂದಲೇ ಮುಕ್ಕಾಗಿಸುವ ಮಾತು ಸಂವಿಧಾನ ಶಿಲ್ಪಿ ಅಂಬೇಡ್ಕರರಿಗೆ ಮಾಡುವ ಘನಘೋರ ಅವಮಾನ.
ಅಂಬೇಡ್ಕರರನ್ನು, ಸಂವಿಧಾನವನ್ನು, ಮೂಲಭೂತ ಹಕ್ಕನ್ನು ಅವಹೇಳಿಸಿದ ವ್ಯಂಗೋಕ್ತಿಯ ನ್ಯಾಯಾಧೀಶರನ್ನು ಅವರ ಹುಟ್ಟಿನ ಜಾತಿಯ ಕಾರಣವಾಗಿ ಆಯುಧ ಮಾಡಿಕೊಂಡು ಅಂಬೇಡ್ಕರರ ಹೆಸರಿನಲ್ಲಿಯೇ ಅಂಬೇಡ್ಕರರನ್ನು ಅವಮಾನಿಸುತ್ತಿರುವುದು ಭಾರತೀಯ ಬುದ್ಧಿಜೀವಿಗಳ ಅಧೋಗತಿಯ ಪರಾಮಾವಧಿ!
ಈ ವ್ಯಂಗ್ಯದಿಂದ ಓರ್ವ ಹಿರಿಯ ವಕೀಲರೇ ಮಾನಸಿಕವಾಗಿ ಕುಗ್ಗಿ ವ್ಯಂಗೋಕ್ತಿ ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದಿದ್ದಾರೆ ಎಂದರೆ ಶ್ರೀಸಾಮಾನ್ಯನಿಗೆ ನ್ಯಾಯಾಂಗದ ಬಗ್ಗೆ ಎಂತಹ ಅವಿಶ್ವಾಸ ಮೂಡಿರಬಹುದು?!?! ಮಾನಸಿಕವಾಗಿ ಕುಗ್ಗಿಹೋಗುವ ಶ್ರೀಸಾಮಾನ್ಯ ಇನ್ನೇನನ್ನು ಎಸೆಯಲು ಸಿದ್ಧನಾಗಬಹುದು?!?!
ಇಲ್ಲಿ ತಾರ್ಕಿಕವಾಗಿ ನೈತಿಕವಾಗಿ ನ್ಯಾಯಯುತವಾಗಿ ಯಾರು ಯಾರನ್ನು ಅವಮಾನಿಸಿದ್ದಾರೆ?
ಉಗಿಯುವುದು ಮೂತ್ರಿಸುವುದನ್ನು ನಿಯಂತ್ರಿಸಲು ಮೂಲೆಗಳಲ್ಲಿ ದೇವರ ಚಿತ್ರದ ಟೈಲ್ಸ್ ಜೋಡಿಸುವಂತೆ ಎಲ್ಲದಕ್ಕೂ ಬುದ್ಧ, ಬಸವ, ಅಂಬೇಡ್ಕರ್ ಅವರನ್ನು ಎಳೆದು ತಂದು ಅವರನ್ನು ಕತ್ತಿ, ಗುರಾಣಿ, ಕವಚ ಮಾಡಿಕೊಳ್ಳುವುದಕ್ಕೆ ಮೊದಲು ನಿಯಂತ್ರಣ ಹೇರಬೇಕು.
- ರವಿ ಹಂಜ್
No comments:
Post a Comment