ಹಳಸಿದ ಜೆಡಿಎಸ್, ಹಸಿದ ಬಿಜೆಪಿ, ಹೊಂಚುತ್ತಿರುವ ಕಾಂಗ್ರೆಸ್

ಮತ್ತೊಂದು ಸರ್ವಪಕ್ಷ ಪ್ರಹಸನ ಶುರುವಾಗಿದೆ. ಇದುವರೆಗೂ ಮಂತ್ರಿಗಳಷ್ಟೇ ಕಂತ್ರಿಯಾಗಿದ್ದ ಕಾಲ ಹೋಗಿ ರಾಜ್ಯಪಾಲರೂ ಲಜ್ಜೆಗೆಟ್ಟ ರಾಜಕೀಯ ದುಷ್ಟಕೂಟದಲ್ಲಿ ಅಧಿಕೃತವಾಗಿ ಪಾಲ್ಗೊಳ್ಳುತ್ತಿದ್ದಾರೆ. ಸಾಮಾನ್ಯವಾಗಿ ವಿಶ್ರಾಂತ ರಾಜಕಾರಣಿಗಳೇ ರಾಜ್ಯಪಾಲರುಗಳಾಗಿ ನೇಮಕಗೊಂಡರೂ ಯಾವುದೇ ರಾಜಕಾರಣಕ್ಕಿಳಿಯದೇ ಆ ಹುದ್ದೆಗೆ ಒಂದು ಘನತೆಯನ್ನು ಮೆರೆಯುವ ಸಂಪ್ರದಾಯವನ್ನು ಪಾಲಿಸಿಕೊಂಡು ಬರುತ್ತಿದ್ದರು. ಇದೀಗ ನಮ್ಮ ಮಣ್ಣಿನಮಗ ತಮ್ಮ ಘನತೆಯನ್ನೆಲ್ಲಾ ರಾಜ್ಯಕ್ಕಾಗಿ ತ್ಯಾಗ ಮಾಡಿ ಮಣ್ಣಿನ ಮೊಮ್ಮಕ್ಕಳ ಹಕ್ಕಿಗಾಗಿ ಹೋರಾಡುವ ಪರಿಯನ್ನು ನೋಡಿ ಇತರೆ ಘನವೆತ್ತ ಹುದ್ದೆಯ ಮಂದಿಯೆಲ್ಲ ಅವರ ಹಾದಿಯಲ್ಲಿ ನಡೆಯುವುದನ್ನು ನೋಡಿದರೆ ಭಾರತವು ನವ ನಾಗರೀಕತೆಯ ಪ್ರಗತಿಯ ಪಥದಲ್ಲಿದೆಯೋ ಅಥವಾ ತತ್ವ ಸಿದ್ಧಾಂತಗಳನ್ನೆಲ್ಲಾ ತೂರಿ ದುರ್ಗತಿಯ ಅಂಚಿನಲ್ಲಿದೆಯೋ ನಾನರಿಯೆ!

ಕೊನೆಯುಸಿರಿರುವ ತನಕ ಕೋಮುವಾದಿ ಬಿಜೆಪಿಗೆ ಅಧಿಕಾರ ಕೊಡೆನೆಂದು ಮಣ್ಣಿನ ಮಗ, ಮೊಮ್ಮಕಳು ಮತ್ತವರ ಪಡೆಯು ವಾಚಾಮಗೋಚರವಾಗಿ ಬಿಜೆಪಿಯನ್ನು ಜಾಡಿಸಿ, ಎಡೆಯೂರಪ್ಪನವರನ್ನು ’ಅಯೋಗ್ಯ’, ’ಕೈಲಾಗದವನು’ ಇನ್ನೂ ಏನೇನೋ ಅವರವರ ನಾಗರೀಕತೆಯನುಸಾರವಾಗಿ ಬೈಯ್ದವರು ಕೇವಲ ಎರಡೇ ವಾರಗಳ ಅಂತರದಲ್ಲಿ ಇದೇ ಅಯೋಗ್ಯ ಎಡೆಯೂರಪ್ಪ ತಮ್ಮ ಜಂಟೀ ಪಕ್ಷಗಳ ಶಾಸಕಾಂಗ ನಾಯಕನೆಂದು ಫೋಸ್ ಕೊಡುತ್ತಿರುವುದನ್ನು ನೋಡಿದರೆ ನಮಗೇ ನಾಚಿಕೆಯಾಗಬೇಕು, ಇಂತಹವರು ನಮ್ಮನ್ನು ಪ್ರತಿನಿಧಿಸುತ್ತಿದ್ದಾರೆಂದು.

ಮಾಜಿ ಪ್ರಧಾನಿಯವರಿಗೆ ಜನತೆಯಾದರೂ ಆ ಕೋಮುವಾದಿ ಬಿಜೆಪಿ ಅಧಿಕಾರಕ್ಕೆ ಬರುವ ಮುನ್ನ ವಿಷವನ್ನೋ ಹಗ್ಗವನ್ನೋ ಕೊಟ್ಟು ಮಣ್ಣಿನ ಮಗ ಮಾತಿಗೆ ತಪ್ಪಿದ ಮಗನಾಗುವುದನ್ನು ತಪ್ಪಿಸಬೇಕು. ಬಹುಶಃ ಜನತೆಯೂ ಕೂಡ ಇದು 'ಮಾತಿಗೆ ತಪ್ಪಿದ ಮಗ' ಬಯಲಾಟದ ಮುಂದುವರಿದ ಭಾಗವಾಗಿ 'ಮಾತಿಗೆ ತಪ್ಪಿದ ಅಪ್ಪ' ಎಂದುಕೊಂಡಿರುವರೇನೋ?

ಕೊನೆಯುಸಿರು ಹೋಗುವಂತಹದ್ದು ಏನೇನೂ ಆಗದೆ, ಕೇವಲ ಅಧಿಕಾರ ದಾಹದ ಕೆಲವು ಶಾಸಕರು ಪಕ್ಷ ತೊರೆದು ಹೋಗುತ್ತೇವೆಂಬುದಕ್ಕೇ ನಮ್ಮ ಮಾಜಿ ಪ್ರಧಾನಿ ತಮ್ಮ ಮಾತನ್ನು ತಪ್ಪುವುದಾದರೆ ಇನ್ನು ದೇಶದ ಗಂಭೀರ ಸಮಸ್ಯೆಗಳ ವಿಷಯಗಳು ಬಂದಾಗ ಏನೇನು ತಪ್ಪುವರೋ? ಪಾಪ, ಕೇವಲ ಎರಡು ವಾರಗಳ ಹಿಂದಷ್ಟೇ ಕೋಮುವಾದಿ ಬಿಜೆಪಿಗೆ ಅಧಿಕಾರ ಹಸ್ತಾಂತರಿಸಿದರೆ ನೇಣು ಹಾಕಿಕೊಳ್ಳುವೆನೆಂದ ಮಣ್ಣಿನಮಗ, ’ಅಯ್ಯೋ, ನನ್ನ ಮಾಂಗಲ್ಯ ಉಳಿಸಿ’ ಎಂದು ಇನ್ನೊಂದೆಡೆ ಒರಲಿಟ್ಟ ಮಣ್ಣಿನ ಸೊಸೆ, ’ಅಪ್ಪಯ್ಯನ್ನ ಏನಾದರೂ ಮಾಡಿ ಉಳಿಸು, ಕುಮ್ಮಿ’ ಎಂದು ಗಳಗಳನೆ ಅತ್ತ ಮಣ್ಣಿನ ಮೊಮ್ಮಗ, ’ವಚನಭ್ರಷ್ಟನೆಂಬ ಅಪವಾದವನ್ನು ಹೊತ್ತರೂ ಸರಿಯೇ, ಯಾವುದೇ ಕಾರಣಕ್ಕೂ ಕೋಮುವಾದಿಗಳಿಗೆ ಅಧಿಕಾರ ಹಸ್ತಾಂತರ ಮಾಡೆ’ ಎಂದು ಸಿನಿಮಾ ಹುಚ್ಚಿನ ಮತ್ತೊಂದು ಮೊಮ್ಮಗು ಅಂತಿಮವಾಗಿ ಘೋಷಿಸಿದಾಗ, ಇದಕ್ಕೆಲ್ಲ ’ಬಹುಪರಾಕ್, ಬಹುಪರಾಕ್’ ಎಂದ ಚೆಲುವ, ಚೆನ್ನಿಗರು, ’ಸುಭಾನ್ ಅಲ್ಲಾಹ್, ಸುಭಾನ್ ಅಲ್ಲಾಹ್’ ಎಂದ ಬಿಸಿಲ್ಗುದುರೆ ಮಿರಾಜ್...ಈ ಎಲ್ಲ ಭಯಂಕರ ಬಯಲಾಟ/ದೊಡ್ಡಾಟ/ಯಕ್ಷಗಾನ/ ಸೋಪ್ ಒಪೆರಾ ಗಳನ್ನು ನೋಡಿದ್ದ ಜನತೆಗೆ ಈಗ ಅದರ ಮುಂದಿನ ಭಾಗವಾಗಿಯೋ / ಅಂತಿಮ ಭಾಗವಾಗಿಯೋ ತೀವ್ರ ತಿರುವು ಬಂದು ಮತ್ತೊಂದಿಷ್ಟು ಕಾಲ ಮನರಂಜನೆಯೊದಗಿಸಲಿದೆ.

ಮೊದಲಾಟದಲ್ಲಿ ನಿರುಪದ್ರವೀ ಅಮವಾಸ್ಯೆ ಕಾಂತಿಯ ಪ್ರಕಾಶ, ದಿಢೀರನೆ ಕಾಂಗ್ರೆಸ್ ನ ಅನುಭವಿಗಳು ಕೊಟ್ಟ ವೈಯಾಗ್ರ ನುಂಗಿ ವೀರಾವೇಷ ಬಂದು ಗ್ರಹಣ ಬಿಟ್ಟ ಚಂದ್ರನಂತೆ ಪ್ರಕಾಶಿಸುತ್ತ ’ಪಢಪಢಾ ಶಿಖಂಡಿಯೆಂದಡಿಗಡಿಗೆ ನುಡಿಯಬೇಡೆಲೋ ಮೂಢ!’ ಎಂದು ತಮ್ಮ ಹಳೆಯ ನಾಟಕದ ಪಾತ್ರವೊಂದು ಪರಕಾಯ ಪ್ರವೇಶಗೊಂಡಂತೆ ಎಲ್ಲೆಡೆ ಮಿಂಚಿನ ಸಂಚಲನ ಮೂಡಿಸಿ ಸರ್ವಪಕ್ಷಗಳಿಗೂ ವೈಯಾಗ್ರ ಇಫೆಕ್ಟ್ ಮೂಡಿಸಿ, ತಕ್ಷಣ ಯಾವುದೋ ಒಂದು ಪಕ್ಷದ ಸಂಗವನ್ನು ಮಾಡಿ ಬಿಸಿ ಆರಿಸಿಕೊಂಡರೆ ಸಾಕೆಂಬುವಂತೆ ತೀವ್ರ ರೋಚನೆಯನ್ನೋ ಕಾಮನೆಯನ್ನೂ ಉಂಟುಮಾಡಿದ್ದಾರೆ. ಆದರೆ ಅವರ ಕಾಮನೆಯಾರುವ ಮುನ್ನವೇ, ಸಂಗ ಮಾಡುವುದರಲ್ಲಿ ಈಗಾಗಲೇ ಪರಿಣಿತರಾಗಿರುವ ಜೆಡಿಎಸ್ ನ ಅಧಿನಾಯಕರು ಈ ಪ್ರಕಾಶರ ಉತ್ಸಾಹ ಚುಂಬನದಲ್ಲೇ ಕೊನೆಗೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾಗಿಸಿದ್ದಾರೆ.

ಇನ್ನು ಎಡೆಯೂರಪ್ಪ ಮತ್ತು ಪಡೆ ಕರ್ನಾಟಕದ ಕಂಟಕ ಈ ಗೌಡ ಮತ್ತವರ ಕುಟುಂಬ, ಇದನ್ನು ಸಂಪೂರ್ಣ ನಾಶಮಾಡಿ ಎಂದು ಜಾಗಟೆ ಹೊಡೆದು, ಮಂಗಳಾರತಿ ಎತ್ತಿದ್ದು, ಈಗ ದಿಢೀರನೇ ಹೆಸರು ಬದಲಾಯಿಸಿಕೊಳ್ಳುವುದರ ಜೊತೆಗೆ ಬಣ್ಣವನ್ನೂ ಬದಲಿಸಿಕೊಂಡಿರುವುದನ್ನು ನೋಡಿದರೆ ಅಧಿಕಾರದ ದಾಹ ಎಂತಹವರನ್ನು ಯಾವ ಯಾವ ಮಟ್ಟಕ್ಕೆ ತರುತ್ತದಲ್ಲವೆಂದು ವ್ಯಥೆಯಾಗುತ್ತದೆ. ಜೆಡಿಎಸ್ ಸಂಪೂರ್ಣ ಛಿದ್ರಗೊಂಡು ಕರ್ನಾಟಕಕ್ಕೆ ಅಂಟಿದ ಈ ಜೆಡಿಎಸ್ ಶಾಪ ವಿಮೋಚನೆಗೊಂಡು ಯಾವುದಾದರೂ ಒಂದು ಪಕ್ಷಕ್ಕೆ ಬಹುಮತ ಬಂದು ಇನ್ನೊಂದು ಪಕ್ಷದ ಹಂಗಿಲ್ಲದೆ ಏಕಪಕ್ಷೀಯ ಸರ್ಕಾರವೇರ್ಪಡುವಂತಿದ್ದ ಅವಕಾಶವನ್ನು ಶಾಪ ವಿಮೋಚನೆಗೊಳಿಸಬೇಕಾದ ಬಿಜೆಪಿಗಳೇ ಇನ್ನಷ್ಟು ಶಾಪವನ್ನು ತಗಲಿಸುವತ್ತ ಹೊರಟಿರುವುದು ನೈತಿಕತೆಯ ಅಧಃಪತನವೇ ಸರಿ. ’ವಚನಭ್ರಷ್ಟತೆ’ಯ ಸಂಪೂರ್ಣ ಫಲವನ್ನು ಪಡೆದು ಮುಂದಿನ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆಯುವ ಎಲ್ಲಾ ಅವಕಾಶಗಳಿದ್ದರೂ ಈ ಅನುಮಾನದ ಹದಿನೆಂಟು ತಿಂಗಳುಗಳ ಅಧಿಕಾರಕ್ಕೆ ಹಪಹಪಿಸುತ್ತಿರುವುದು ಅವರುಗಳ ಅಧಿಕಾರದ ಹಸಿವಲ್ಲದೇ ಇನ್ನೇನೋ?

ಇನ್ನು ಸದಾ ಅಧಿಕಾರವನ್ನು ಅನುಭವಿಸುತ್ತಲಿದ್ದ ಕಾಂಗ್ರೆಸ್ಸಿಗರೋ ತಾವೇನೂ ಕಡಿಮೆಯವರಲ್ಲವೆಂದು ತೋರಿಸಲು ರಾಜ್ಯಪಾಲರನ್ನೂ ತಮ್ಮ ’ಮೇಡಂ’ರಿಂದ ಮೋಡಿಗೊಳಿಸಿ ತಮಗಿಷ್ಟದಂತೆ ಕುಣಿಸುತ್ತ ಮತ್ತೊಂದೆಡೆ ಶಾಸಕರ ಕೊಳ್ಳುವಿಕೆಯಲ್ಲಿ ತೊಡಗಿರುವುದನ್ನು ನೋಡಿದರೆ ಅವರ ಅಧಿಕಾರ ಲೋಲುಪತೆ ಎಂತಹವರನ್ನೂ ಅಸಹ್ಯಗೊಳಿಸುತ್ತದೆ.

ಒಟ್ಟಾರೆ ಈ ಎಲ್ಲಾ ವರ್ತಮಾನಗಳನ್ನು ದೂರದಿಂದ ಏನೇನೂ ವಿಶ್ಲೇಷಣೆಯಿಲ್ಲದೆ ಕನಿಷ್ಟವಾಗಿ ಅವಲೋಕಿಸಿದರೇ ಸಾಕು, ಈ ವರ್ತಮಾನಗಳು ಇಂದಿನ ಭಾರತದ ನೈತಿಕತೆ, ಪ್ರಾಮಾಣಿಕತೆ, ದೇಶಭಕ್ತಿ, ಪ್ರಜಾಪ್ರಭುತ್ವದ ಪ್ರಗತಿ(?) ಗಳ ಪ್ರತಿರೂಪವೆನಿಸಿ ಕರ್ನಾಟಕವಷ್ಟೇ ಅಲ್ಲದೆ ಸಂಪೂರ್ಣ ನೈಜ ಭಾರತದ ಸಮಗ್ರ ದರ್ಶನವನ್ನು ನೀಡುತ್ತಿದೆ.

ಆರ್ಥಿಕವಾಗಿ ಏನೇ ಸಾಧನೆ ಮಾಡಿದ್ದರೂ, ಭಾರತದ ಕಣಕಣದಲ್ಲೂ ಹಬ್ಬಿರುವ ಅನೈತಿಕತೆ, ಭ್ರಷ್ಟಾಚಾರದ ಜ್ವಾಲೆಯು ಈ ಎಲ್ಲಾ ಪ್ರಗತಿಯನ್ನು ಕ್ವಚಿತ್ತಾಗಿ ಸುಟ್ಟುಹಾಕಲಿದೆ. ಸದ್ಯಕ್ಕೆ ಭಾರತ ಪ್ರಕಾಶಿಸುವಂತೆ ಕಂಡರೂ ಒಳಗಣ್ಣಿಂದ ನೋಡಿದಾಗ, ಭಾರತ ಉರಿಯುತ್ತಿದೆ!

ಅಣಕ:

ಅಯ್ಯೋ, ಇಲ್ಲಿ ಏನೇ ತಿಣುಕಿ ಅಣಕ ಬರೆದರೂ ಅವು ಜೆಡಿಎಸ್ ನವರ ಪ್ರಹಸನಗಳ ಮುಂದೆ ಅತ್ಯಂತ ಗಂಭೀರವೆನಿಸಿಬಿಡುತ್ತವೆ. ಅವರ ಪ್ರಹಸನಗಳು ಅಷ್ಟೊಂದು ರೋಚನೀಯವಾಗಿರುವಾಗ ನಮ್ಮ ಅಣಕಗಳೆಲ್ಲಾ ಶೋಚನೀಯವೆನಿಸುತ್ತಿವೆ.

No comments: