ಕಳೆದೆರೆಡು ವಾರಗಳ ಹಿಂದಿನ ಲೇಖನದ ಮೃತ್ಯುಂಜಯನು ಮೃತನಾದುದಕ್ಕೆ ಅನೇಕ ಓದುಗರು ಸಂತಾಪ ಸೂಚಿಸಿ ಮೃತ್ಯುಂಜಯನು ’ಮುತ್ತು’ ಎಂದೋ, ’ಜಯ್’ ಎಂದೋ ಆಗಬೇಕಿತ್ತೆಂದು ತಮ್ಮ ತಮ್ಮ ಸಲಹೆಗಳನ್ನು ನೀಡಿದ್ದರು. ಆದರೆ ಈ ಹೆಸರುಗಳು ಭಾರತದ ಸಾಮಾನ್ಯ ರೀತಿಯ ಅರ್ಧನಾಮಗಳಾದುದರಿಂದ ಈ ಮೊದಲೇ ಈ ರೀತಿಯ ನಾಮಾರ್ಧಗಳು ಗೊತ್ತಿದ್ದರೂ ಅವುಗಳೆಡೆ ಗಮನ ಕೊಡದೆ ವಿಶಿಷ್ಟತೆಯ ಅನ್ವೇಷಣೆಯಲ್ಲಿ ವಿಶೇಷ ಶೈಲಿಯ ಅನುಕರಣಾ ದಾಸನಾಗಿದ್ದ ಮೃತ್ಯುಂಜಯನು ’ಮೃತ್’ ಆಗಿ ಪರಿವರ್ತಿತಗೊಂಡಿದ್ದನು. ಇಂತಹ ಅನುಕರಣಾ ಸಂಸ್ಕೃತಿಯ ವ್ಯಕ್ತಿಗೆ ’ಪೂಜಾರಿ ಕೊಟ್ಟರೆ ಮಾತ್ರ ತೀರ್ಥ’ವಾದುದರಿಂದ ನಮ್ಮ ಮೈಕೆಲ್ ಡಫ್ ನು ’ಮೃತ’ನ ಹಿಂದೆ ಒಂದು ’ಅ’ ಸೇರಿಸಿ ’ಅಮೃತ’ ಪಾನ ಮಾಡಿಸಿ ’ಅಮೃತ್’ನಾಗಿಸಿದನು. ಮತ್ತೆ ತನ್ನ ಹೆಸರು ವಿಶೇಷತೆಯಿಂದ ಸಾಮಾನ್ಯವಾದುದಕ್ಕೆ ಒಳಗೆ ವ್ಯಥೆ ಪಟ್ಟರೂ ಅದು ಅಮೇರಿಕನ್ ಓರ್ವನು ಕೊಟ್ಟುದಾದುದರಿಂದ ಅದನ್ನು ಒಪ್ಪಿಕೊಂಡು ’ಅಮೃತ್’ ಅನ್ನು ’ಎಮೃತ್’ ಎಂದು ಹೇಳಿಕೊಳ್ಳುತ್ತಾ ಮೃತ್ಯುಂಜಯನು ಸಾಗಿದನು.
ಇನ್ನು ಇತ್ತೀಚಿನ ಸುದ್ದಿಯಂತೆ ಕನ್ನಡಿಗರಿಗೆ ದೇವೇಗೌಡ ಒಳ್ಳೆಯ ಪಾಠ ಕಲಿಸಿದ್ದಾರೆ. ತನ್ನಂಥಹ ಸ್ವಾರ್ಥಿ, ಕುಟುಂಬ ಪ್ರ್‍ಏಮಿ, ಸ್ನೇಹಿತರನ್ನು / ವಿರೋಧಿಗಳನ್ನು ಯಾರಾದರೇನಂತೆ ಅವರನ್ನು ಒಮ್ಮೆ ಕೆಡವೇ ತೀರುವ, ಕಂದಾಚಾರಗಳಿಗೂ ವಾಮಾಚಾರಗಳಿಗೂ ಕಟ್ಟುಬಿದ್ದಿರುವ, ನಂಬಿದವರು ಮುಟ್ಟಿ ಮುಟ್ಟಿ ನೋಡಿಕೊಳ್ಳುವಂತೆ ’ಫ್’ ಮಾಡುವ, ರಾಜ್ಯದ ಯಾವುದೇ ದನ ಕಾಯುವವನೊಂದಿಗೂ ಪೈಪೋಟಿಗಿಳಿದು ಅವನ ಲಂಗೋಟಿಯನ್ನೆಳೆದು ಲಾತ ಕೊಡುವ, ರಾಜ್ಯ, ದೇಶಗಳೆಂದರೆ ಛಾಪಾ ಕಾಗದದ ಮೇಲೆ ತನ್ನಿತರೇ ಸ್ತಿರಾಸ್ಥಿ, ಚರಾಸ್ತಿಗಳಂತೆಯೇ ಕರಾರು ಪತ್ರ, ಹಕ್ಕು ಪತ್ರದಂತೆ ಬರೆಸಿಕೊಳ್ಳಬೇಕೆನ್ನುವ ತನ್ನಂಥಹ ಯಕಶ್ಚಿತ್ ಮುಗ್ಧ ಮಾನವನನ್ನು ಮುಖ್ಯಮಂತ್ರಿಯಾಗಿಸಿ, ಈ ದೇಶದ ಪ್ರಧಾನಿ ಪಟ್ಟಕ್ಕೇರಿಸಿದ್ದೇ ಅಲ್ಲದೇ ತನ್ನ ಪುತ್ರರತ್ನಗಳನ್ನೂ ಮಂತ್ರಿ ಮುಖ್ಯಮಂತ್ರಿಯಾಗಿಸಿದ್ದ ಮೂರ್ಖ ಕನ್ನಡಿಗರಿಗೆ ತಮ್ಮದೇ ಆದ ’ಫ್’ ಮಾಡುವ ಶೈಲಿಯಲ್ಲಿ ಸೊಂಟ ಮುರಿದಿದ್ದಾರೆ. ಇದನ್ನೆಲ್ಲಾ ಕಂಡು ಇತರೆ ರಾಜ್ಯದವರು ಕನ್ನಡಿಗರಿಗೆ ಐಯೋಡೆಕ್ಸ್ ಬೇಕೇ ಎಂದು ತಮ್ಮ ಮರುಕ ವ್ಯಕ್ತಪಡಿಸುತ್ತಿದ್ದಾರೆ.
ನಮ್ಮ ಮಣ್ಣಿನ ಮಗ ಮತ್ತು ಮೊಮ್ಮಕ್ಕಳಿಗೆ ಅತ್ಯಂತ ಅಪ್ಯಾಯಮಾನವಾಗಿ, ಅವರು ಬಹುಪಾಲು ತಮ್ಮ ಪ್ರತಿಯೊಂದು ವಾಕ್ಯಗಳಲ್ಲೂ ಬಳಸುವಂತಹ ಎರಡು ಅತೀ ಕನ್ನಡವೆನ್ನುವಂತಹ ಶಬ್ದಗಳಿವೆ. ಅದರಲ್ಲಿ ಒಂದನ್ನು ಆಲೋಚಿಸಿ ಸಭ್ಯವಾದ ರೀತಿಯಲ್ಲಿ ಹೇಗೆ ಪ್ರಯೋಗಿಸಬಹುದೆಂದು ತಲೆಕೆರೆದುಕೊಂಡು ’ನಿಕೃಷ್ಟ ರೋಮ’ವೆಂದು ಹಿಂದೆ ಬಳಸಿದ್ದೆ. ಆದರೆ ಅವರ ಇನ್ನೊಂದು ಪ್ರೀತಿ ಪಾತ್ರ, ಕಾಂಗ್ರೆಸ್ ನ ಗುರುತಾದ ’ಕೈ’ ಪದದಂತಿರುವ ಪದದ ಸಭ್ಯರೂಪ ದೊರಕದೆ ಅದನ್ನು ’ಫ್’ ಎಂದಿದ್ದೇನೆ. ನನ್ನ ಮಟ್ಟಿಗೆ ಈ ಎರಡೂ ಕನ್ನಡ ಪದಗಳನ್ನು ಕೇಳದವರು ಕನ್ನಡಿಗರೇ ಅಲ್ಲವೆಂದು ಭಾವಿಸಿದ್ದೇನೆ. ಏಕೆಂದರೆ ಉತ್ತರ ಕರ್ನಾಟಕದಲ್ಲಿ ಈ ಪದಗಳಿಗೆ ಬೇರೆ ಪರ್ಯಾಯ ಪದಗಳು ಬಳಕೆಯಲ್ಲಿದ್ದರೂ ಅಲ್ಲಿನ ಕನ್ನಡ ಬಂಧುಗಳು ಈ ಪದಗಳಿಗೆ ದಕ್ಷಿಣ ಕರ್ನಾಟಕದವರು ಏನೆನ್ನುತಾರೆಂದು ಕುತೂಹಲಿಗಳಾಗಿ ಅರಿತುಕೊಂಡು ತಮ್ಮ ಕನ್ನಡ ಜ್ಞಾನವನ್ನು ವಿಸ್ತರಿಸಿಕೊಂಡಿರುತ್ತಾರೆ!
ಇರಲಿ, ಮೇಲಿನೆರಡೂ ಘಟನೆಗಳನ್ನು ಸಮೀಕರಿಸಿ ನೋಡಿದಾಗ ಅವುಗಳಲ್ಲಿ ಒಂದು ಬಹುಮುಖ್ಯ ಸಾಮ್ಯತೆಯಿದೆ! ವ್ಯತ್ಯಾಸವಿದೆ!
ಮೊದಲನೇ ಘಟನೆಯಲ್ಲಿ ತನ್ನ ಬೇರುಗಳನ್ನು ಸರಿಯಾಗಿ ಗ್ರಹಿಸದೆ, ದೀಪಕ್ಕೆ ಹುಳುವು ಆಕರ್ಷಿತಗೊಂಡು ದಹಿಸಿಹೋಗುವಂತೆ, ಶ್ರೀ ಕೃಷ್ಣ ಆಲನಹಳ್ಳಿಯವರ ’ಪರಸಂಗದ ಗೆಂಡೆತಿಮ್ಮ’ ನ ಕತೆಯಲ್ಲಿನ ಗೆಂಡೆತಿಮ್ಮನ ಹೆಂಡತಿ ಘಮಲುದೆಣ್ಣೆ (ಸೆಂಟ್ / ಪರ್ಫ್ಹೂಮ್) ಪೂಸಿಕೊಂಡು, ಲಂಗ, ಬ್ರಾ ಗಳ ತೊಟ್ಟುಕೊಂಡು ತಾನು ಇತರೆ ಹಳ್ಳಿ ಹೆಂಗಸರಿಗಿಂತ ಭಿನ್ನವೆಂದು ತೋರಿಸುತ್ತ ಈ ಆಧುನಿಕತೆಯ ತಪ್ಪು ಗ್ರಹಿಕೆಯಿಂದಾಗಿ ತನಗರಿವಿಲ್ಲದಂತೆಯೇ ಅದಕ್ಕೆ ಬಲಿಯಾಗಿ ತನ್ನ ಸಂಸಾರವನ್ನೂ ಬಲಿಯಾಗಿಸಿಕೊಂಡಂತೆಯೇ ನಮ್ಮ ನವ ಯುವಕ ಮೃತ್ಯುಂಜಯನು ಬಲಿಯಾಗುವುದನ್ನು, ತನಗೆ ಆತನ ಹಿತಾಸಕ್ತಿಯಲ್ಲಿ ಯಾವುದೇ ಸಂಬಂಧವಿರದಿದ್ದರೂ ಆಧುನಿಕತೆಯ ಹರಿಕಾರ ಅಮೇರಿಕನ್ ಪ್ರಜೆಯೊಬ್ಬ ಅದನ್ನು ತಪ್ಪಿಸಿ ಸರಿದಾರಿಗೆ ತಂದರೆ, ಎರಡನೇ ಘಟನೆಯಲ್ಲಿ ಜನನಾಯಕ, ಜನೋದ್ಧಾರಕ ತನ್ನನ್ನು ನಂಬಿ ಗೆಲ್ಲಿಸಿ ಕಳುಹಿಸಿದ ಜನಗಳ ಹಿತಾಸಕ್ತಿಯನ್ನು ಆದ್ಯ ಕರ್ತವ್ಯದಂತೆ ಕಾಪಾಡಬೇಕಾದ ಧುರೀಣನೊಬ್ಬ ಹೇಗೆ ತನ್ನ ರಾಜ್ಯದ ಜನಾಸಕ್ತಿಯನ್ನು ತನ್ನ ವೈಯುಕ್ತಿಕ ಬಳಕೆಗೆ ಬಳಸಿಕೊಳ್ಳುತ್ತಿದ್ದಾನೆಂದು ತೋರಿಸುತ್ತದೆ.
ಒಟ್ಟಿನಲ್ಲಿ ವಿದೇಶೀ ಮೈಕೆಲ್ ಡಫ್ ನಮ್ಮ ಮೃತ್ಯುಂಜಯನ ಹಿತಾಸಕ್ತಿಯನ್ನು ಕಾಪಾಡಿದರೆ, ನಮ್ಮ ಅತೀ ಸ್ವದೇಶೀ ನಾಯಕ ರಾಜ್ಯವನ್ನು ತನ್ನ ಹೆಸರಿಗೆ ನಮೂದಿಸಿ ಕೊಡೆನ್ನುತ್ತಿದ್ದಾನೆ. ಈ ಪ್ರಸಕ್ತ ವಿದ್ಯಾಮಾನಗಳನ್ನು ಗಮನಿಸಿದರೆ ಕೆಲವು ಹಿರಿಯರು ಹೇಳುವಂತೆ ಬ್ರಿಟಿಷ್ ಆಳ್ವಿಕೆ ಭಾರತದಲ್ಲಿ ಇನ್ನೂ ಬಹುಕಾಲವಿರಬೇಕಿತ್ತೇನೋ?
ಪ್ರಜಾಪ್ರಭುತ್ವದ ಯಾವ ರಾಷ್ಟ್ರಗಳಲ್ಲಿಯೂ ಈ ರೀತಿ ಅತ್ಯಂತ ಕಡಿಮೆ ಸಂಖ್ಯೆಯನ್ನು ಹೊಂದಿದ ಪಕ್ಷಗಳು ಬಹುಮುಖ್ಯ ಪ್ರಧಾನಿ, ಮುಖ್ಯಮಂತ್ರಿಯಂತಹ ಹುದ್ದೆಗಳನ್ನು ಪಡೆದ ಘಟನೆಗಳಿಲ್ಲ. ಈ ಮಟ್ಟಿಗೆ ಇದು ಭಾರತದ ಪ್ರಜಾಪ್ರಭುತ್ವದ ಅಭೂತಪೂರ್ವ ಸಾಧನೆ, ಇರಾಕ್ ಒಂದನ್ನು ಹೊರತುಪಡಿಸಿ! ಏಕೆಂದರೆ ಅಲ್ಲಿಯೂ ಬಹುಪಕ್ಷಗಳ ಸರ್ಕಾರವಿದ್ದು ಮತ್ತು ನೀವದನ್ನು ಪ್ರಜಾಪ್ರಭುತ್ವದ ರಾಷ್ಟ್ರವೆಂದು ಪರಿಗಣಿಸಿದ್ದರೆ, ಅದನ್ನು ಹೊರತುಪಡಿಸಬೇಕಾಗುತ್ತದೆ.
ಈ ತಲೆಹಿಡುಕ ಸಂತತಿಯ ನಾಯಕರು ಮತ್ತೆ ಮುಂದಿನ ಚುನಾವಣೆಗಳಲ್ಲಿ ಮತ ಯಾಚಿಸುತ್ತ ಬಂದಾಗ ಮತದಾರರು ಏನು ಮಾಡಬೇಕೆಂದು ಯೋಚಿಸಿದಾಗ ನನಗೆ ಹೊಳೆದಿದ್ದು ಇಷ್ಟು... ಅತ್ಯಂತ ಬುದ್ಧಿವಂತ ಮತದಾರರೆಂದು ಖ್ಯಾತಿಗೊಂಡಿದ್ದ ಕನ್ನಡಿಗರಿಗೆ ’ಪಡುವಾರಹಳ್ಳಿ ಪಾಂಡವರು’ ಚಿತ್ರದ ಕ್ಲೈಮಾಕ್ಸ್ ದೃಶ್ಯದಲ್ಲಿ ಹುಚ್ಚಿಯೊಬ್ಬಳನ್ನು ’ಇಂತಹ ನಾಯಕರಿಗೆ ಯಾವ ರೀತಿಯ ಶಿಕ್ಷೆ ಕೊಡಬೇಕು?" ಎಂದು ಕೇಳಿದಾಗ, ಅವಳು "ಇಂತವ್ರು ಬರ್‍ತಲೇ ಇರ್‍ತಾರೆ, ನೀವು ಅವ್ರನ್ನ ಓಡುಸ್ತಲೇ ಇರ್ಬೇಕು. ಇಂತವ್ರು ಬರ್‍ತಲೇ ಇರ್‍ತಾರೆ, ನೀವು ಓಡುಸ್ತಲೇ ಇರ್ಬೇಕು" ಎನ್ನುವ ಸಲಹೆ ಅತ್ಯಂತ ಅನಿವಾರ್ಯವಾಗಿದೆಯೇನೋ ಅನ್ನಿಸಿತು!
ಆದರೂ ಇಂದಿನ ನವೀನ ತಂತ್ರಜ್ಜಾನದ ಬೌದ್ಧಿಕ ಉನ್ನತಿಯ ಬುದ್ಧಿವಂತ ಜನರಿಗೆ ಹಳೇ ಸಿನಿಮಾದ ಹಳ್ಳಿಯ ಅನಕ್ಷರಸ್ಥ, ಮತಿಭ್ರಮಣೆಗೊಂಡ, ಹುಚ್ಚಿಯೊಬ್ಬಳ ಸಲಹೆ ಅನ್ವಯವಾಗುತ್ತಿರುವುದು ವಿಪರ್ಯಾಸವೇ ಸರಿ.
ಆಣಕ:
ಯಥಾಪ್ರಕಾರ ಈ ವಾರದ ಆಣಕವನ್ನು ದೇವೇಗೌಡ ಮಂಡಳಿ ನೈಜವಾಗಿ ಅಭಿನಯಿಸುತ್ತ ನಿತ್ಯವೂ ನವ್ಯ ಪ್ರಯೋಗಗಳನ್ನು ಪ್ರಯೋಗಿಸುತ್ತ ತಮ್ಮ ಎಲ್ಲಾ ರಸಗಳನ್ನು ಹೊಮ್ಮಿಸುತ್ತಿದೆ! ಆದನ್ನು ನೋಡಿ ಆನಂದಿಸಿ.
ವಿಶೇಷ ಸೂಚನೆ: ಈ ರಸಗಳು ನೋಡಲು ಮಾತ್ರ ದಯವಿಟ್ಟು ಆ ರಸಗಳನ್ನು ’ಅಮೃತ’ವೆಂದು ಸೇವಿಸಲು ಹೋಗಬೇಡಿ!
Subscribe to:
Post Comments (Atom)
No comments:
Post a Comment