ಕುಮಾರಸ್ವಾಮಿ ಬಾಡೂಟ, ರಾಹುಲ್ ನ ಹೋಂಸ್ಟೇ!

ಕಳೆದ ವಾರದ ಅಂಕಣದಲ್ಲಿ "ಎ ಥಿಂಗ್ ಆಫ್ ಬ್ಯೂಟಿ ಈಸ್ ಜಾಯ್ ಫಾರ್ ಎವರ್" ಎಂಬುದನ್ನು ಯಾವ ಎಗ್ಗಿಲ್ಲದೇ, ಎಲ್ಲೆಲ್ಲಿ ಸೌಂದರ್ಯ ಅಡಗಿರುತ್ತದೆ ಎಂಬುದನ್ನು ಶೋಧಿಸಿ ಕಣ್ತುಂಬಿಕೊಳ್ಳುತ್ತಿದ್ದ ನಮ್ಮ ಕ್ರಿಕೆಟ್ ಪಟುಗಳ ಫೋಟೋವನ್ನು ಮೆಚ್ಚಿ ಬಹಳ ಜನ ಓದುಗ ಸೌಂದರ್ಯೋಪಾಸಕರು ಮೆಚ್ಚಿ ಈಮೇಲ್ ಕಳುಹಿಸಿದ್ದರು. ಅವರುಗಳ ಸೌಂದರ್ಯಾರಾಧನೆಯನ್ನು ತಣಿಸಿದ್ದಕ್ಕೆ ನನಗೆ ನಾನೇ ಬೆನ್ನು ಚಪ್ಪರಿಸಿಕೊಳ್ಳುತ್ತಾ ಆಗಾಗ್ಗೆ ಚಿತ್ರಸಮೇತ ಅಣಕಗಳನ್ನು ಕೊಡುತ್ತೇನೆ.

ಇರಲಿ, ಈ ಅಂಕಣದಲ್ಲಿ ಹದಿಹರೆಯದ ಹುಡುಗರಿಂದ ಪ್ರಬುದ್ಧರಾದ ಯುವಕರುಗಳ ಕುರಿತು ವಿಶ್ಲೇಷಿಸೋಣ.

ಈಗ ಕಾಂಗ್ರೆಸ್ ಪಕ್ಷದ ರಾಹುಲ್ ಗಾಂಧಿಯವರ "ಡಿಸ್ಕವರಿ ಆಫ್ ಇಂಡಿಯಾ" ಯಾತ್ರೆಯ ಸುದ್ದಿಯನ್ನು ಕಾಂಗ್ರೆಸ್ ಮಾಡಿಸುತ್ತಿದೆಯಷ್ಟೆ. ಭಾರತವನ್ನು ಸಮಗ್ರವಾಗಿ ತಿಳಿದುಕೊಳ್ಳಲು ರಾಹುಲ್, ಭಾರತದ ಹಳ್ಳಿ ಹಳ್ಳಿಗಳನ್ನು ಸುತ್ತಿ, ಶ್ರೀಸಾಮಾನ್ಯನ ಮನೆಯಲ್ಲಿ ಉಳಿದು, ಭಾರತೀಯರ ನಾಡಿ ಪರೀಕ್ಷಿಸುತ್ತಾರಂತೆ. ಎಷ್ಟೇ ಆಗಲಿ ಇದು ಇಂಡೋ-ಇಟಾಲಿಯನ್ ಚಾಕೋಲೇಟ್ ಬೇಬಿಯಲ್ಲವೇ? ನೆಹರೂ ಅವರ "ಡಿಸ್ಕವರಿ ಆಫ್ ಇಂಡಿಯಾ"ದ ಹೆಸರಿನೊಂದಿಗೆ ಕ್ರಿಸ್ಟೋಫರ್ ಕೊಲಂಬಸ್ ನಂತಹ ಇಟಾಲಿಯನ್ನರ ಅನ್ವೇಷಣಾ ಪ್ರವೃತ್ತಿಯನ್ನು ಮೈಗೂಡಿಸಿಕೊಂಡು ಡಿಸ್ಕವರಿಸಲು ಹೊರಟಿರಬೇಕು!

ಗಮನಿಸಿ ನೋಡಿ, ಇಂದಿನ ಭಾರತೀಯ ಯುವ ಪೀಳಿಗೆ ರಾಹುಲನಂತಹ ಡಿ.ಎನ್.ಎ ಹೊಂದಿರದಿದ್ದರೂ ಅವನೊಂದಿಗೆ ಅತ್ಯಂತ ಸಾಮ್ಯತೆಯನ್ನಂತೂ ಹೊಂದಿದೆ.

ದುಡಿಯಲು ಕಾಲ್ ಸೆಂಟರ್/ಐ.ಟಿ/ಬಿ.ಟಿ/ಬಿ.ಪಿ.ಒಗಳನ್ನು ನಂಬಿರುವ ಒಂದು ವರ್ಗದ ಯುವಜನತೆ, ಮೋಜಿಗೆ ಲೆಕ್ಕವಿಲ್ಲದಷ್ಟು ಪಬ್ಬುಗಳು, ಬಾರುಗಳು, ರೆಸ್ಟುರಾಗಳು, ಕಾಫಿ ಡೇಗಳಿಗೆ ನುಗ್ಗುತ್ತ, ಈ ಪೀಳಿಗೆ ಗರ್ಲ್/ಬಾಯ್ ಫ್ರೆಂಡ್ ಗಳೊಂದಿಗೆ ನೈಟ್ ಲೈಫ್ ಗಾಗಿ ತವಕಿಸುತ್ತಿರುತ್ತಾರೆ. ರಾಹುಲ್ ನಂತೆಯೇ ತಮ್ಮ ತಮ್ಮ ಸಂಗಾತಿಗಳೊಂದಿಗೆ ವಾಸಿಸುತ್ತಿರುತ್ತಾರೆ ಇಲ್ಲವೇ ಆ ಹಾದಿಯಲ್ಲಿರುತ್ತಾರೆ (ಹಾಗೆ ವಾಸಿಸುವ ಒಂದು ಪ್ರಬುದ್ಧ ಬುದ್ದಿಮಟ್ಟ ಅವರಲ್ಲಿರುತ್ತದೋ ಇಲ್ಲವೋ ಅದು ಬೇರೆಯ ವಿಷಯ). ಪಟ್ಟಣದ ಏಕತಾನತೆ ಬೋರಾದರೆ ಕೊಡಗಿನ ಹೋಂಸ್ಟೇಗಳಿಗೆ ಪ್ರವಾಸ ಹೊರಟು ಕಾಫೀ ಎಲ್ಲಿಂದ ಬರುತ್ತದೆಂದೋ, ಕಾಫಿಗೆ ಬೆರೆಸುವ ಹಾಲನ್ನು ಹಿಂಡಿ ಹಸುವಿಗೆ ಥೇಟ್ ಮುಂಗಾರುಮಳೆ ಗಣೇಶನ ಮಾದರಿಯಲ್ಲಿ "ನೋವಾಯ್ತಾ, ಸಾರಿ" ಎನ್ನುತ್ತಾರೆ. ಬಹುಶಃ ಕೊಡಗಿನ ಹಸುಗಳಿಗೂ ಇದು ಹೋಂಸ್ಟೇ ಗಿರಾಕಿ ಎಂದು ತಿಳಿದಿರುತ್ತದೇನೋ ಅವುಗಳು ಕೂಡ "ಯು ಆರ್ ವೆಲ್ ಕಂ" ಎನ್ನುವಂತೆ ’ಅಂಬಾ’ ಅಲ್ಲಲ್ಲ ’ಮೂ’ ಎನ್ನುತ್ತವೆ. ಹಾಲನ್ನು ಹಿಂಡಿ ಹಸುವಿಗೆ ನೋವಾಯಿತೆಂದುಕೊಳ್ಳುವ ಯುವ ಲಲನೆಯರು ಯಾವ ಎಗ್ಗಿಲ್ಲದೆ ಕೋಳಿಯನ್ನು ಜಗಿಯುತ್ತಾರೆ. ಬಹುಶಃ ಕೋಳಿಯನ್ನು ತರಕಾರಿ ಎಂದುಕೊಂಡಿರಬೇಕು. ರವಿಚಂದ್ರನ್ ನ ಯಾವುದೋ ಹಳೆಯ ಸಿನಿಮಾವೊಂದರಲ್ಲಿ ಭತ್ತ ಮರದ ಮೇಲೆಯೂ ತೆಂಗಿನಕಾಯಿ ಬಳ್ಳಿಯಿಂದಲೂ ಬರುತ್ತದೆಂದು ಹೇಳುವ ಅತಿಶಯೋಕ್ತೀ ಪಾತ್ರದ ನಿಜವ್ಯಕ್ತಿಗಳೇ ಇವರಾಗಿದ್ದಾರೆ. ಆಷ್ಟೇ ಅಲ್ಲ ಕೊಡಗಿನ ಕಾಫೀ ತೋಟದಮನೆಗಳಲ್ಲಿ "ಹೋಂಸ್ಟೇ"ಗೆ ಬರುವ ರಾಹುಲ್ ಮಾದರಿಯ ಯುವಪೀಳಿಗೆ ಈ ವಾಸ್ತವ್ಯಕ್ಕೆ ಪಂಚತಾರಾ ಹೋಟೇಲಿನ ದರ ಕಕ್ಕಲು ತಯ್ಯಾರಿರುತ್ತಾರೆ.

ನನ್ನ ಹಿರಿಯ ಮಿತ್ರರೋರ್ವರು "ಈ ತೋಟದ ಮನೆಗಳಲ್ಲಿ ಒಬ್ಬಂಟಿಗರಾಗಿ ಇದ್ದೂ ಇದ್ದೂ ಬೇಜಾರಾಗಿ ಹೋಗಿದೆ. ಮಾತನಾಡೋಣ ಎಂದರೂ ಯಾರೂ ಸಿಗಲ್ಲ. ಅದಕ್ಕೆ ದಿನಾಲೂ ಪೆಟ್ರೋಲ್ ಸುಟ್ಟುಕೊಂಡು ಪೇಟೆಗೆ ಹೋಗಿ, ಕ್ಲಬ್ಬಿನಲ್ಲಿ ಒಂದಷ್ಟು ಹೊತ್ತು ಇಸ್ಪೀಟಾಡಿ ಬೇಜಾರು ಕಳೆದುಕೊಳ್ಳಬೇಕು" ಎಂದು ಅಲವತ್ತುಕೊಂಡಾಗ ನಾನು ಅವರಿಗೆ "ಸುಮ್ಮನೆ ನಿಮ್ಮ ತೋಟವನ್ನು ಹೋಂಸ್ಟೇ ಎಂದು ಮಾಡಿ, ಒಂದು ಚಂದದ ಅಂತರ್ಜಾಲ ತಾಣವನ್ನು ಸೃಷ್ಟಿಸಿಬಿಡಿ. ಜನ ನಿಮ್ಮಲ್ಲಿಗೇ ಬಂದು, ನಿಮ್ಮೊಡನೆ ಮಾತನಾಡಿ, ನಿಮ್ಮ ಬೇಸರ ಕಳೆದು ದುಡ್ಡನ್ನೂ ಕೊಟ್ಟು ಹೋಗುತ್ತಾರೆ" ಎಂದೆನು. ನನ್ನ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿದ ಅವರು ಕೆಲವೇ ತಿಂಗಳುಗಳಲ್ಲಿ ಅದನ್ನು ಕಾರ್ಯಗತಗೊಳಿಸಿದರು. ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ, ಈಗ ಅವರಿಗೆ ನಾನು ಫೋನ್ ಮಾಡಿದರೂ ಮಾತನಾಡಲು ಪುರುಸೊತ್ತಿರುವುದಿಲ್ಲ. ಮೊದಲಾದರೆ ಕರೆದವರೆಲ್ಲರ ಮದುವೆ, ನಿಶ್ಚಿತಾರ್ಥಗಳಂತಹ ಕಾರ್ಯಕ್ರಮಗಳನ್ನು ಒಂಟಿತನದ ಬೇಸರವನ್ನು ನಿವಾರಿಸಿಕೊಳ್ಳುವ ಒಯಸಿಸ್ ಎಂದು ಪರಿಗಣಿಸಿದ್ದ ಇವರಿಗೆ ಈಗ ಆ ರೀತಿಯ ಯಾವ ಕಾರ್ಯಕ್ರಮಗಳಿಗೂ ಸಮಯವಿಲ್ಲ. ಒಮ್ಮೆ ನೀವೂ ಕೂಡ ಭೇಟಿ ಕೊಟ್ಟು ನೋಡಿ ನನ್ನ ಸ್ನೇಹಿತರ ಹೋಂಸ್ಟೇ ಅನ್ನು, http://www.makkithitta.com/

ಇರಲಿ ಈ ರೀತಿ ಯುವಪೀಳಿಗೆಯ ರಾಹುಲ್, ತನ್ನ ಡಿಸ್ಕವರಿಯಿಂದ ಲ್ಯಾಂಡ್ ಆದ ಬಳಿಕ ಭಾರತದ ನಾಡಿಯನ್ನು ಚೆನ್ನಾಗಿ ಅರಿತು ಅದಕ್ಕೆ ತಕ್ಕ ಚಿಕಿತ್ಸೆಯನ್ನು ಕೊಡುತ್ತಾನೇನೋ ನೋಡೋಣ!

ಇರಲಿ ಅದೊಂದು ಬಗೆಯ ಯುವಜನತೆಯಾದರೆ ಇನ್ನೊಂದು ಬಗೆಯ ಯುವಜನತೆ ಇದೆ. ಅದು ನಮ್ಮ ಮಣ್ಣಿನ ಮೊಮ್ಮಗ ಕುಮ್ಮಿ ಮಾದರಿಯದು. ಇವರು ನಮ್ಮ ಎಸ್.ಎಸ್.ಎಲ್.ಸಿ/ಪಿ.ಯು.ಸಿ. ಫೇಲಾಗಿ ರಿಯಲ್ ಎಸ್ಟೇಟು, ಟ್ರಾನ್ಸ್ ಪೋರ್ಟ್, ಮೀಟರ್ ಬಡ್ಡಿ, ದಲಾಲಿ, ಹಮಾಲಿ, ಸಿನಿಮಾ, ದಾದಾಗಿರಿ, ರಾಜಕೀಯಗಳಂಥಹ ಅಪ್ಪಟ ಮಣ್ಣಿನ ವಾಸನೆಯ ಉದ್ಯೋಗ/ವ್ಯವಹಾರಗಳಲ್ಲಿ ತೊಡಗಿಕೊಳ್ಳುವ ನಾಟಿ ಯುವತಳಿಯನ್ನು ಪ್ರತಿನಿಧಿಸುತ್ತಾರೆ. ಇನ್ನು ಈ ಕನ್ನಡದ ಕಂದ ಕುಮಾರಸ್ವಾಮಿ ಮಾಡಿದ್ದಾದರೂ ಏನು? ನಮ್ಮ ಹಳ್ಳಿ ಕಡೆಯ ಸೋಮಾರಿಗಳು ಆಗಾಗ್ಗೆ ನೆಂಟರ ಮನೆಗೆ ಹೋಗಿ ಕಾಲಕ್ಷೇಪ ಹಾಕುವಂತೆಯೇ ಅವರು ಗ್ರಾಮವಾಸ್ತವ್ಯ ಹಾಕಿದ್ದು. ಆಯಾ ಊರಿನ ತಮ್ಮ ತಮ್ಮ ಪಕ್ಷದ ಸ್ಥಿತಿವಂತರುಗಳ ಮನೆಗಳಲ್ಲಿ ಗಡದ್ದಾಗಿ ಬಾಡೂಟ ಉಂಡು, ವೇಳೆ ಮೀರಿದ ಸಮಯಕ್ಕೆ ವಾಸ್ತವ್ಯದ ಮನೆಗಳಿಗೆ ತೆರಳಿ ಇನ್ನೊಮ್ಮೆ ಉಂಡ ಶಾಸ್ತ್ರ ಮಾಡಿ ಮಲಗುತ್ತಿದ್ದುದೇ ಅವರ ಗ್ರಾಮವಾಸ್ತವ್ಯವಾಗಿತ್ತು. ವ್ಯತ್ಯಾಸವೆಂದರೆ ಸಿನಿಮಾ ನಿರ್ಮಾಪಕರಾದ ಇವರು ಮುದಿ ರಾಜಕಾರಣಿಗಳು ಮಾಡುತ್ತಿದ್ದುದ್ದನ್ನೇ ಕಾಪಿ ಮಾಡಿ, ಅದಕ್ಕೊಂದು "ಗ್ರಾಮವಾಸ್ತವ್ಯ" ಎಂಬ ಟೈಟಲ್ ಕೊಟ್ಟು, ಅಗತ್ಯ ಕನ್ನಡ ಸಿನಿಮಾ ಫಾರ್ಮುಲಾಗಳನ್ನೆಲ್ಲಾ ಸೇರಿಸಿ ಬಾಕ್ಸಾಫೀಸಿನಲ್ಲಿ ದಾಖಲಾಗುವಂತೆ ಮಾಡಿದ್ದು ಬಿಟ್ಟರೆ ಈ "ಗ್ರಾಮವಾಸ್ತವ್ಯ" ಬಡ ಬೋರೇಗೌಡನ ನಾಲ್ಕಾಣೆ ಕನಸುಗಳನ್ನೂ ವಾಸ್ತವವಾಗಿಸಿಲ್ಲ!

ರಾಹುಲ್ ಗಾಂಧಿ, ಸಿಗರೇಟ್ ಭಾರತೀಯ ಯುವಪೀಳಿಗೆಯನ್ನು ಪ್ರತಿನಿಧಿಸಿದರೆ, ಕುಮಾರಸ್ವಾಮಿ ಬೀಡಿ ಯುವಪೀಳಿಗೆಯನ್ನು ಪ್ರತಿನಿಧಿಸುತ್ತಾರೆ. ಒಟ್ಟಾರೆ ಜನತೆಗೆ ದಟ್ಟ ಹೊಗೆ!

ಇರಲಿ, ಈ ಗ್ರಾಮವಾಸ್ತವ್ಯ, ಹೋಂಸ್ಟೇಗಳಲ್ಲಿ ಯಾವುದೇ ಹೊಸತಿಲ್ಲ. ಹಿಂದಿನ ರಾಜಕಾರಣಿಗಳು ದೇಶದ ಉದ್ದಗಲಕ್ಕೆ ಸಂಚರಿಸಿದಾಗೆಲ್ಲ ಆಯಾ ಊರಿನ ತಮ್ಮ ತಮ್ಮ ಪಕ್ಷಗಳ ಸ್ಥಿತಿವಂತ ಕಾರ್ಯಕರ್ತರುಗಳ ಮನೆಯಲ್ಲಿ ತಂಗುತ್ತಿದ್ದರು. ಅದನ್ನೇ ಈ ಯುವನಾಯಕರುಗಳು ಹೊಸ ಹೆಸರಿನೊಂದಿಗೆ ಯಾವುದೋ ಕ್ರಾಂತಿಯನ್ನು ಮಾಡುತ್ತಿರುವಂತೆ ಪ್ರಚಾರ ಗಿಟ್ಟಿಸುತ್ತಿದ್ದಾರೆ. ಹಳೆಯ ನಾಯಕರು ರೋಚಕ ರಾತ್ರಿಗಳಿಗೆ ಐ.ಬಿ/ತೋಟದಮನೆಗಳನ್ನು ನೆಚ್ಚಿಕೊಳ್ಳುತ್ತಿದ್ದರೆ, ಈ ಯುವನಾಯಕರುಗಳು ರಿಸಾರ್ಟುಗಳಿಗೆ ಮುಗಿಬಿದ್ದಿದ್ದಾರೆ. ಅದನ್ನೇ ನಮ್ಮ ಗೆದ್ದಲು ಹಿಡಿದಿರುವ ಭಾರತೀಯ ಮಾಧ್ಯಮಗಳು ಈ ನಾಯಕರುಗಳು ತಿಂದೆಸೆಯುವ ಮೂಳೆಗಾಗಿ ಇವರುಗಳಿಗೆ ಭರ್ಜರಿ ಪ್ರಚಾರವನ್ನು ಕೊಡುತ್ತಿವೆ.

ಇದಕ್ಕೆ ಪೂರಕವಾಗಿ ಒಂದು ಸಂಗತಿಯನ್ನು ಹೇಳುತ್ತೇನೆ. ನಾನು ಹೈಸ್ಕೂಲಿನಲ್ಲಿದ್ದಾಗ ನನ್ನ ಅತ್ತೆ ಮಗಳ ಮದುವೆ ಆಗಷ್ಟೇ ಆಗಿತ್ತು. ನನ್ನನ್ನು ಅವಳೊಂದಿಗೆ ನಮ್ಮತ್ತೆಯ ಆಳಿಯ ಕೆನರಾ ಬ್ಯಾಂಕ್ ಉದ್ಯೋಗದಲ್ಲಿದ್ದ ಪಂಚನಹಳ್ಳಿ (ಹೊಸದುರ್ಗ ತಾಲ್ಲೂಕು)ಗೆ ಕಳುಹಿಸಿದ್ದರು. ಅವರ ಮನೆಯಲ್ಲಿ ನನ್ನದೇ ಓರಿಗೆಯ ಹುಡುಗನೊಬ್ಬನಿದ್ದ. ನಾನು ಅವನೊಂದಿಗೆ ಮಾತನಾಡುತ್ತ ಅವರ ಮನೆಯಲ್ಲಿ ಪಾಯಿಖಾನೆ ಎಲ್ಲಿದೆಯೆಂದು ಕೇಳಿದೆನು. ಅದಕ್ಕವನು ಇಡೀ ಪಂಚನಹಳ್ಳಿಯಲ್ಲಿ ಕೇವಲ ಒಂದೇ ಒಂದು "ಕಕ್ಕಸ್ಸು" ಇರುವ ಮನೆ ಇರುವುದೆಂದೂ ಅದಲ್ಲದೆ ಮತ್ತಿನ್ಯಾವ ಮನೆಯಲ್ಲಿಯೂ ಅದು ಇಲ್ಲವೆಂದು ಹೇಳಿ ಕೆರೆಯ ಕಡೆ ಕರೆದೊಯ್ದನು.

ಹಾಗೆಯೇ ಅವನೊಂದಿಗೆ ಮಾತನಾಡುತ್ತ ತಿಳಿದುಕೊಂಡುದುದೇನೆಂದರೆ - ಒಮ್ಮೆ ದಿವಂಗತ ಇಂದಿರಾಗಾಂಧಿಯವರು ಪಂಚನಹಳ್ಳಿಗೆ ಭೇಟಿ ಕೊಡುವ ಕಾರ್ಯಕ್ರಮ ನಿಗದಿಯಾಗಿತ್ತಂತೆ. ಪಂಚನಹಳ್ಳಿಯ ಆ ಕಾರ್ಯಕ್ರಮವು ಇಂದಿರಾಗಾಂಧಿಯವರ ಆ ದಿನದ ಕೊನೆಯ ಕಾರ್ಯಕ್ರಮವಾಗಿ, ಅವರು ಆ ರಾತ್ರಿ ಪಂಚನಹಳ್ಳಿಯಲ್ಲಿ ಉಳಿದುಕೊಳ್ಳುವುದೆಂದೂ ತೀರ್ಮಾನಿಸಿದ್ದರಂತೆ. ಆದರೆ ಮರುದಿನ ಬೆಳಗಿನ ನಿತ್ಯಕರ್ಮಗಳಿಗೆ ಇಂದಿರಾಗಾಂಧಿಯವರನ್ನು ಕೆರೆಯ ಕಡೆಗೆ ಕರೆದುಕೊಂಡು ಹೋಗಲಾಗುವುದೇ? ಆದುದರಿಂದ ಅವರ ವಸತಿಗಾಗಿ ನಿಗದಿಯಾಗಿದ್ದ ಆ ಊರಿನ ಸ್ಥಿತಿವಂತ ಕಾರ್ಯಕರ್ತನ ಮನೆಯ ಹೊರಗೆ ಒಂದು ಪಾಯಿಖಾನೆಯನ್ನು ಕಟ್ಟಿದರಂತೆ. ಆದರೆ ದುರದೃಷ್ಟವಶಾತ್, ಇಂದಿರಾಗಾಂಧಿಯವರು ಪಂಚನಹಳ್ಳಿಯಲ್ಲಿ ಭಾಷಣ ಮುಗಿಸಿ ಚಿಕ್ಕಮಗಳೂರಿಗೆ ಆ ರಾತ್ರಿಯೇ ದೌಡಾಯಿಸಿದ ಪ್ರಯುಕ್ತ ಈ "ಇಂದಿರಾಗಾಂಧಿಯವರ ಕಕ್ಕಸ್ಸು ಕೋಣೆ" ಅವರ ಅಮೃತಹಸ್ತ(?)ದಿಂದ ಉದ್ಘಾಟಿತವಾಗದೆ ಹಾಗೆಯೇ ಉಳಿದುಕೊಂಡಿದೆ ಎನ್ನುತ್ತ ಬೀಗ ಹಾಕಿದ್ದ ಆ ಘನ ಕಟ್ಟಡವನ್ನು ತೋರಿದನು! ಸಾಮಾನ್ಯವಾಗಿ ಎಲ್ಲಾ ಉದ್ಘಾಟನೆಗಳನ್ನು ಅಮೃತಹಸ್ತದಿಂದ ಉದ್ಘಾಟಿಸುತ್ತಿದ್ದ ದಿವಂಗತ ಪ್ರಧಾನಿಗಳು ಈ ಕಟ್ಟಡವನ್ನು ಅವರ ಶಿಷ್ಯ ಗುಂಡೂರಾವ್ ಅವರ ಮಾದರಿಯಲ್ಲಿ ಉದ್ಘಾಟಿಸಬೇಕಾದ ಅನಿವಾರ್ಯತೆಯನ್ನು ಮನಗಂಡು ಚಿಕ್ಕಮಗಳೂರಿಗೆ ದೌಡಾಯಿಸಿದರೇನೋ? ಬೀಗ ಜಡಿದಿದ್ದ ಆ ಕಟ್ಟಡವನ್ನು ಬಹುಶಃ ಇಂದಿರಾಗಾಂಧಿಯವರು ಮತ್ತಿನ್ಯಾವಗಲಾದರೂ ಬರುತ್ತಾರೆಂದು ಅದರ ಮಾಲೀಕ ಅದನ್ನು ಬಳಸದೇ ಹಾಗೆಯೇ ಜೋಪಾನ ಮಾಡುತ್ತಿದ್ದನೇನೋ? ಈಗೇನಾಗಿದೆಯೋ ಆ ಘನ ಕಟ್ಟಡಕ್ಕೆ ತಿಳಿಯದು!

ಅಣಕ:

ಕುಮಾರಸ್ವಾಮಿಯವರ "ಗ್ರಾಮ ವಾಸ್ತವ್ಯ" ಮತ್ತು ರಾಹುಲ್ ಗಾಂಧಿಯವರ "ಡಿಸ್ಕವರಿ ಆಫ್ ಇಂಡಿಯಾ" ಈ ಎರಡೂ ಕಾರ್ಯಕ್ರಮಗಳ ಆಂತರ್ಯ ಮತ್ತು ಬಾಹ್ಯ ಹೇಗಿವೆಯೆಂದರೆ ಕೆಳಗಿನ ಚಿತ್ರದ ಹೋರ್ಡಿಂಗ್ ನಲ್ಲಿರುವ "ಪ್ರಾಮಾಣಿಸಿದ ನೀರು" ಅವರುಗಳ ಬಾಹ್ಯ ಪ್ರಚಾರವನ್ನೂ, ಅದರ ಕೆಳಗಿನ ವ್ಯಕ್ತಿಯ ಕ್ರಿಯೆ ಇವರುಗಳ ಆಂತರ್ಯವನ್ನು ಸಾರುತ್ತಿರುವಂತಿದೆ.

2 comments:

Supreeth.K.S said...

>>>ರಾಹುಲ್ ಗಾಂಧಿ, ಸಿಗರೇಟ್ ಭಾರತೀಯ ಯುವಪೀಳಿಗೆಯನ್ನು ಪ್ರತಿನಿಧಿಸಿದರೆ, ಕುಮಾರಸ್ವಾಮಿ ಬೀಡಿ ಯುವಪೀಳಿಗೆಯನ್ನು ಪ್ರತಿನಿಧಿಸುತ್ತಾರೆ. ಒಟ್ಟಾರೆ ಜನತೆಗೆ ದಟ್ಟ ಹೊಗೆ!>>>

ತುಂಬಾನೆ ಮಜವಾಗಿದೆ ನಿಮ್ಮ ವಿಶ್ಲೇಷಣೆ. ಲಿಂಕನ್ ನಾಡಿನಲ್ಲಿ ಕುಳಿತು ಕನ್ನಡ ನಾಡಿನ ವಿದ್ಯಮಾನಗಳನ್ನು ಅದೆಷ್ಟು ಸೂಕ್ಷ್ಮವಾಗಿ ಅವಲೋಕಿಸುತ್ತೀರಲ್ಲಾ, ನಿಜಕ್ಕೂ ನಿಮ್ಮ ಬರಹಗಳನ್ನು ಓದಲು ಸಂತೋಷವಾಗುತ್ತದೆ.

ಅಣಕಗಳಂತೂ ಒಂದಕ್ಕಿಂತ ಒಂದು ಚೆನ್ನಾಗಿವೆ. ಪ್ರತಿವಾರ ತಪ್ಪದೆ ನಿಮ್ಮ ಅವಲೋಕನದ ಝಲಕ್ ನಮಗೆ ಸಿಕ್ಕುವಂತೆ ಮಾಡಿ ಪ್ಲೀಸ್...

ಅಮರ said...

ಓದಿ ಖುಷಿಗಿಂತ, ನಮ್ಮ ಪರಿಸ್ಥಿಯನ್ನ ಅರಿತು ನೋವಾದದ್ದು ಹೆಚ್ಚು. ರಾಹುಲ ಮಹಶಯನಿಗೆ ಇರುವ ಅರ್ಹತೆ 'ಗಾಂಧಿ' ಅಷ್ಟೆ. ನಮ್ಮ ಪರಿಸ್ಥಿತಿ ಹೇಗಾಗಿದೆ ಎಂದರೆ ಯಾರು ಆ ಫ್ಯಾಮಿಲಿಯಲ್ಲಿ ಹುಟ್ಟಿದರು ಒಳ್ಳೆಯವರು ಹುಟ್ಟಲಿ ದೇಶದ ಬಗ್ಗೆ ಯೋಚಿಸುವಂತವರು ಇರಲಿ ಅಂತ ದೇವರಲ್ಲಿ ವರ ಬೇಡುವ ಪರಿಸ್ಥಿತಿ ನಿರ್ಮಾಣ ಮಾಡಿದ್ದು ನಮ್ಮ ಈ ಹೊಲಸು ರಾಜಕೀಯ. ೧೦೦ ಕೋಟಿಗಿಂತ ಹೆಚ್ಚಿನ ಜನರಿರುವ ನಮ್ಮ ದೌರ್ಭಾಗ್ಯಕ್ಕೆ ಎನೆನ್ನಬೇಕೊ???

ಇನ್ನೂ ಕುಮ್ಮಿ ಕುಲಪುತ್ರ ರತ್ನಗಳು ಅಬ್ಬ!!! ಇಡಿ ರಾಜ್ಯವನ್ನೆ ಅವರ ಹೆಸರಿಗೆ ಬರೆದು ಕೊಟ್ಟರು ಅವರಿಗೆ ತೃಪ್ತಿ ಆಗೊಲ್ಲ ....... ಅವರಷ್ಟೆ ಅಲ್ಲ ...... ಅವರು ಮುಂದಿದ್ದಾರೆ ಅಷ್ಟೆ.... ಬೆನ್ನ ಹಿಂದಿರುವವರು ಸಮಸ್ಥ ರಾಜಕೀಯದ ಪ್ರತಿನಿಧಿಗಳು.
-ಅಮರ