ಕೆಂಪೇಗೌಡ, ಚುನಾವಣೆ ಮತ್ತು ರೆಡ್ಡಿಗಳು!

ಕಳೆದ ವಾರದ ಲೇಖನಕ್ಕೆ ಹಲವಾರು ಅಸಹನೆ, ಆಕ್ಷೇಪಗಳು ಬಂದಿದ್ದವು. ಆ ಎಲ್ಲಾ ಆಕ್ಷೇಪಗಳಿಗೆ ಉತ್ತರವಾಗಿ ಹೀಗೆ ಹೇಳಬಲ್ಲೆ -"ನಿಮ್ಮೆಲ್ಲಾ ಅಸಹನೆ, ಆಕ್ಷೇಪಗಳಿಗೆ ಲೇಖನದಲ್ಲಿಯೇ ಸಮಾಧಾನಗಳಿವೆ. ನಿಮ್ಮಗಳ ಪೂರ್ವಾಗ್ರಹಪೀಡಿತ ಮನಸ್ಸಿನಿಂದ ಹೊರಬಂದು ಮತ್ತೊಮ್ಮೆ, ಮಗದೊಮ್ಮೆ ಲೇಖನವನ್ನು ಓದಿ. ನಿಮ್ಮ ನಿಮ್ಮ ಪ್ರಶ್ನೆಗಳಿಗೆ ಉತ್ತರಗಳು ಸಿಗುತ್ತವೆ. ಬೆಂಗಳೂರೇತರ ಯಾವುದಾದರೂ ಪಟ್ಟಣಕ್ಕೋ (ಹುಬ್ಬಳ್ಳಿ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು...ಇತ್ಯಾದಿ) / ಚಿಕ್ಕ ಊರುಗಳಿಗೋ (ಹರಪನಹಳ್ಳಿ, ಹೊಸದುರ್ಗ, ಅರಸೀಕೆರೆ, ಮೂಡಿಗೆರೆ...ಇತ್ಯಾದಿ) ಹೋಗಿ ನೋಡಿ, ಅಲ್ಲಿನ ಮಾರ್ವಾಡಿಗಳು ಕನ್ನಡದಲ್ಲದೇ ಇನ್ಯಾವ ಭಾಷೆಯಲ್ಲಿ ವ್ಯವಹರಿಸುತ್ತಾರೆಂದು! ಬೆಂಗಳೂರೇ ಕರ್ನಾಟಕವಲ್ಲ. ಬೆಂಗಳೂರಿನಲ್ಲಿ ಕಟ್ಟಿರುವ "ಅಂತರ್ರಾಷ್ಟ್ರೀಯ" ವಿಮಾನ ನಿಲ್ದಾಣ ಕೇವಲ ಬೆಂಗಳೂರಿಗೆ ಸೀಮಿತವಲ್ಲ. ಅದು ಕರ್ನಾಟಕದ ಹೆಬ್ಬಾಗಿಲು. ನನ್ನಂಥಹ ಐಟಿ ಗುಲಾಮರಿಗಾಗಿಯೇ ಕಟ್ಟಿರುವ ಈ ವಿಮಾನನಿಲ್ದಾಣ ನನ್ನನ್ನು ಕೇವಲ ಬೆಂಗಳೂರಿಗೆ ಕರೆತರುವುದಿಲ್ಲ. ಅದು ಕರ್ನಾಟಕಕ್ಕೆ ಕರೆತರುತ್ತದೆ".

"ಹಾಗೆಯೇ ಕೆಂಪೇಗೌಡನಾಗಲೀ, ಟಿಪ್ಪೂ ಆಗಲೀ ಅಖಂಡ ಕರ್ನಾಟಕವನ್ನು ಪ್ರತಿನಿಧಿಸುವುದಿಲ್ಲ. ಯಾವುದೇ ಜಾತಿ ಸೋಂಕಿಲ್ಲದ, ಅಖಂಡ ಕರ್ನಾಟಕವನ್ನು ಪ್ರತಿನಿಧಿಸುವ ಅಮೋಘವರ್ಷ, ಹೊಯ್ಸಳ, ಪುಲಕೇಶಿ, ಪಂಪ...ಮುಂತಾದವರ ಹೆಸರುಗಳು ಹೆಚ್ಚು ಸಮಂಜಸವೆಂಬುದು ಲೇಖನದ ತಿರುಳು. ಕೆಂಪೇಗೌಡ ಐತಿಹಾಸಿಕ ವ್ಯಕ್ತಿಯಾದ್ದರಿಂದ ಅವನಿಗಿಂತ ಪ್ರಮುಖರಾದ ಐತಿಹಾಸಿಕ ವ್ಯಕ್ತಿಗಳನ್ನು ಹೆಸರಿಸಿದ್ದೇನೆ. ಹಾಗೆಯೇ ಸಮಗ್ರ ಕರ್ನಾಟಕದ ಪರಿಕಲ್ಪನೆಯಿಲ್ಲದೇ ಭಾವುಕ ಕನ್ನಡ ಹೋರಾಟ ನಡೆಸುವುದು ಐತಿಹಾಸಿಕ ಚರಿತ್ರೆಗೆ ಅರಿಯದೇ ಮಾಡುವ ಅಪಚಾರವೇ ಆಗಿದೆ. ಹಾಗಂತ ಕನ್ನಡಕ್ಕೆ ಹೋರಾಡಲು ಕನ್ನಡ ಪಂಡಿತನೋ ಅಥವಾ ಕನ್ನಡ ಇತಿಹಾಸಕಾರನೋ ಆಗಬೇಕೆಂದೇನೂ ಅಲ್ಲ! ಕನ್ನಡವೆಂದೊಡನೇ ಥಟ್ಟನೇ ನೆನಪಾಗುವ ಕುವೆಂಪು, ಕನ್ನಡಿಗರನ್ನೆಲ್ಲಾ ಒಂದುಗೂಡಿಸಿದ ಗೋಕಾಕ್ ವರದಿಯ ಗೋಕಾಕರು, ಕನ್ನಡ ಹೋರಾಟಗಾರ ಮುಖಂಡರಿಗೆ ಕನಿಷ್ಟವಾಗಿಯಾದರೂ ನೆನಪಿರಬೇಕು. ಇಲ್ಲಿ ನನ್ನ ಆಕ್ಷೇಪ ಕರವೇ ಮುಖಂಡರ ವರ್ತನೆಯ ಕುರಿತಾಗಿದೆಯೇ ಹೊರತು ಕಳಕಳಿಯ ವಿರುದ್ಧವಲ್ಲ. ಕನಿಷ್ಟ ಐತಿಹಾಸಿಕ ಅರಿವಿಲ್ಲದೇ ಮಾಡುವ ಭಾವುಕ ಹೋರಾಟಗಳು ಎಂತಹ ಅನಾಹುತಗಳನ್ನು ಸೃಷ್ಟಿಸುತ್ತದೆ ಎಂಬುದಕ್ಕೆ ಕೆಳಗಿನ ಅಣಕವನ್ನು ಓದಿ, ಚಿಂತಿಸಿ, ಮಂಥಿಸಿ.

ಕನ್ನಡಕ್ಕೆ ಅಪಚಾರವಾದಾಗ ಕನ್ನಡಿಗರು ಭರ್ಜರಿಯಾಗಿಯೇ ಯಾವ ಸಂಘಟನೆಗಳಿಲ್ಲದೇ ಪ್ರತಿಭಟಿಸಿದ್ದಾರೆ, ಹೋರಾಡಿದ್ದಾರೆ. "ಗೋಕಾಕ್ ವರದಿ ಜಾರಿಗೆ ಬರಲಿ" ಎಂದು ಇಂಗ್ಲಿಷ್ ಪ್ರಶ್ನೆಪತ್ರಿಕೆಯನ್ನು ಕನ್ನಡದಲ್ಲಿ ಉತ್ತರಿಸಿದ್ದ ನಮಗೆ ಅಂದು ಕರವೇಯಂಥಹ ಸಂಘಟನೆಗಳೇನೂ ಇರಲಿಲ್ಲ. "ಕಟ್ಟು-ನಡೆಸು-ಬಿಟ್ಟುಕೊಡು" (ಬಿ.ಒ.ಟಿ) ಒಪ್ಪಂದದಂತೆ ಕಟ್ಟಿರುವ ನೂತನ ವಿಮಾನನಿಲ್ದಾಣದ ಕಂಟ್ರಾಕ್ಟುದಾರರಿಗೆ ಅಂದಿನ ವಿಗ್ಗಿನ ಸುಂದರಾಂಗನ ಸರ್ಕಾರ ಕನ್ನಡಕ್ಕೆ/ಕನ್ನಡಿಗರಿಗೆ ಮಾನ್ಯತೆ, ಉದ್ಯೋಗ ಇತ್ಯಾದಿಗಳನ್ನು ಒಪ್ಪಂದದಲ್ಲಿ ಮಂಡಿಸಿ ಮೂಗುದಾರವನ್ನು ಹಾಕಿದ್ದರೆ ಇಂದು ಹೋರಾಡುವ ಅಗತ್ಯವೇ ಇರುತ್ತಿರಲಿಲ್ಲ. ಈಗ ಹೇಳಿ ಯಾರ ವಿರುದ್ಧ ಹೋರಾಡಬೇಕೆಂದು! ಹೈದರಾಬಾದಿನಲ್ಲಿ ಕಟ್ಟಿದ ನೂತನ ವಿಮಾನನಿಲ್ದಾಣದ ಕಂಟ್ರ್‍ಆಕ್ಟ್ ಅನ್ನು ಫಾರಿನ್ ಸಂಸ್ಥೆ ಬಿಡಿ, ರಿಲೈಯನ್ಸ್ ಸಂಸ್ಥೆಗೂ ಕೂಡ ಕೊಡದೇ ಅಚ್ಚ ತೆಲುಗು ಬಿಡ್ಡನಿಗೆ ಆಂಧ್ರ ಸರ್ಕಾರ ಕೊಟ್ಟಿದ್ದಿತು. ಹೋರಾಟಗಳ ಗುರಿ ತಾರ್ಕಿಕವಾಗಿ ಮೂಲೋಚ್ಚಾಟನೆಯತ್ತ ಮುಖ ಮಾಡಿದ್ದರೆ ಯಶಸ್ವಿಯಾಗುತ್ತವೆ. ಇಲ್ಲದಿದ್ದರೆ ಅವು ಸದ್ದುದ್ದೇಶಗಳಿದ್ದರೂ ಅನುಮಾನಿಸುವಂತಾಗುತ್ತವೆ.

ಇರಲಿ, ಈಗ ಅಂತೂ ಚುನಾವಣೆ ಮುಗಿದು ಬಿಜೆಪಿ ಅಧಿಕಾರ ಹಿಡಿದಿದೆ. ಹಿಂದಿನ ಸಮ್ಮಿಶ್ರ ಸರ್ಕಾರದ ನೆನಹಿಗಾಗಿಯೋ ಏನೋ ಈ ಬಾರಿಯೂ ಪಕ್ಷೇತರರನ್ನೊಳಗೊಂಡು ಸಮ್ಮಿಶ್ರವೆನಿಸಿದರೂ ಏಕಪಕ್ಷೀಯ ಸರ್ಕಾರ ಬಂದಿದೆ. ಹಾಗಂತ ಐದು ವರ್ಷಗಳೂ ಹೀಗೆ ಇರುತ್ತದೆ ಎಂದು ಹೇಳಲಾಗದು. ಮುಂದೆ ಕುಟಿಲ ರಾಜಕಾರಣಿಗಳು ಹೇಗಿರುತ್ತಾರೋ ಬಲ್ಲವರ್‍ಯಾರು? ಐದು ವರ್ಷಗಳ ಸುಭದ್ರತೆಗಾಗಿ ಬಿಜೆಪಿ, ಜೆಡಿಎಸ್ ನ ಹತ್ತು ಹಲವಾರು ಶಾಸಕರನ್ನು ತನ್ನೆಡೆಗೆ ಸೆಳೆದುಕೊಂಡು ಸ್ಥಿರತೆಯನ್ನು ಸೇಫ್ ಮಾಡಿಕೊಳ್ಳುವತ್ತ ಯೋಚಿಸಬೇಕೆನೋ!

ಇರಲಿ, ಒಟ್ಟಾರೆ "ತಾಯಿ-ಮಗ" ಪಕ್ಷವಾದ ಕಾಂಗ್ರೆಸ್ ಮತ್ತು "ಅಪ್ಪ-ಮಕ್ಕಳ" ಜೆಡಿಎಸ್ ಗಳನ್ನು ವಿರೋಧಿಸಿ ಜನಾದೇಶದಂತೆ ಅಧಿಕಾರ ಹಿಡಿದಿರುವ ಬಿಜೆಪಿ, ಗಣಿ ರೆಡ್ಡಿಗಳನ್ನು ಹದ್ದುಬಸ್ತಿನಲ್ಲಿಟ್ಟು, ತಾನು ಕೂಡ "ರೆಡ್ಡಿ ಸೋದರರ" ಕೌಟುಂಬಿಕ ಪಕ್ಷವಾಗದಂತೆ ತಡೆಗಟ್ಟುವುದು ಸೂಕ್ತ. ಏಕೆಂದರೆ ಅದಾಗಲೇ ಈ ರೆಡ್ಡಿ ಸೋದರರ ಬಗ್ಗೆ ಅಪಸ್ವರಗಳು ಮಾಧ್ಯಮದಲ್ಲಿ ಕೇಳಿ ಬರುತ್ತಿವೆ!

ಅಂದ ಹಾಗೆ ಚುನಾವಣೆ ಮುಂಚೆ ಜೆಡಿಎಸ್ ನ ಜಮೀರ್ ಅಹ್ಮದ್ "ಎಡ್ಯೂರಪ್ಪ ಮುಖ್ಯಮಂತ್ರಿಯಾದರೆ ಅವರ ಮನೆಯಲ್ಲಿ ಕೆಲಸದಾಳಾಗಿ ದುಡಿಯುವೆ" ಎಂದು ಸಾರ್ವಜನಿಕ ಪಣ ತೊಟ್ಟಿದ್ದ ಈ ಕುಮಾರಸ್ವಾಮಿ ಡ್ರೈವರ್ ಯಾವಾಗಿನಿಂದ ಎಡ್ಯೂರಪ್ಪ ಮನೆಯಲ್ಲಿ ಕೆಲಸಕ್ಕೆ ಹೋಗುವರೋ? ಬಹುಶಃ ಅವರ ಮಾಲೀಕ ಕುಮಾರಸ್ವಾಮಿಯೇ ವಚನಭ್ರಷ್ಟರಾಗಿರುವಾಗ ತಮ್ಮ ವಚನ ಎಲ್ಲಿಯ ಲೆಕ್ಕವೆಂದುಕೊಂಡು ಸುಮ್ಮನಾಗಿರುವರೇನೋ!

ಈ ಚುನಾವಣೆಯನ್ನು ಅವಲೋಕಿಸಿದಾಗ ಕಾಣುವುದು, ಪ್ರತಿ ಕ್ಷೇತ್ರದಲ್ಲಿಯೂ ಜನರು ಅಧಿಕವಾಗಿ ಮೂರು ಪಕ್ಷಗಳಿಗೆ ಮಾತ್ರ ಮತ ಚಲಾಯಿಸಿರುವುದು. ಬಿಎಸ್ಪಿ, ಎಸ್ಪಿ, ಸ್ವರ್ಣಯುಗ, ಜನತಾದಳ (ಯು), ಲೋಕ ಪರಿತ್ರಾಣ......ಮತ್ತಿತರೆ ಪಕ್ಷಗಳಿಗೆ ಬಿದ್ದಿರುವ ಮತಗಳು ಬಹಳಷ್ಟು ಕಡೆ ನೂರರ ಲೆಕ್ಕದಲ್ಲಿಯೇ ಇದೆ. ಮತಗಳು ಹಂಚಿಹೋಗದೇ ಪ್ರಮುಖ ಮೂರು ಪಕ್ಷಗಳಿಗೇ ಬಿದ್ದಿರುವುದೂ ಕೂಡ ಜನ ಹೆಚ್ಚು ಪಕ್ಷಗಳನ್ನು ಬಯಸದೇ ಇರುವ ಮೂರು ಪಕ್ಷಗಳಲ್ಲೇ ನೆಲೆ ಕಂಡುಕೊಳ್ಳಿರೆಂದು ರಾಜಕೀಯ ನಾಯಕರುಗಳನ್ನು ಎಚ್ಚರಿಸಿದಂತಿದೆ ಈ ಬಾರಿಯ ಚುನಾವಣೆ!

ಈ ಬಾರಿ ಚುನಾವಣಾ ಕಣದಲ್ಲಿದ್ದ ಆದರ್ಶವಾದಿಗಳನ್ನು ಜನ ಡೋಂಗೀ ಆದರ್ಶವಾದಿಗಳೆಂದುಕೊಂಡರೋ ಅಥವಾ ಮತಗಳು ಹಂಚಿಹೋಗುತ್ತವೆಂದೋ ಅಥವಾ ಈ ಆದರ್ಶವಾದಿಗಳನ್ನು ಆರಿಸುವುದರಿಂದ ಮತ್ತಷ್ಟು ಅತಂತ್ರ ವಿಧಾನಸಭೆ ಏರ್ಪಡುತ್ತದೆಂದೋ ಒಟ್ಟಾರೆ ಆದರ್ಶವನ್ನು ತಿರಸ್ಕರಿಸಿದ್ದಾರೆ.

ಈ ಹಿಂದೆ ನಾನು ಬರೆದಿದ್ದ ಹೊಳಲ್ಕೆರೆ ಕ್ಷೇತ್ರದಲ್ಲಿ ಬಿಜೆಪಿ ಗೆದ್ದು, ನನ್ನ ಆದರ್ಶವಾದೀ ಸ್ನೇಹಿತ ಚಂದ್ರಶೇಖರ್ ಒಂದೂವರೆ ಸಾವಿರಕ್ಕೂ ಹೆಚ್ಚು ಮತಗಳನ್ನು ಗಳಿಸಿದ್ದರೆ, ಮತ್ತದೇ ಗಾಂಧೀ ಪಕ್ಷದ ಮಹಿಮಾ ಪಟೇಲ್ ಚನ್ನಗಿರಿಯಲ್ಲಿ ಹತ್ತಿರ ಹತ್ತಿರ ಹತ್ತು ಸಾವಿರ ಮತಗಳನ್ನು ಪಡೆದಿದ್ದಾರೆ. ಕುಲಗೆಟ್ಟ ಮಾಧ್ಯಮಗಳು ಈ ಅಸಲೀ ಆದರ್ಶವಾದಿಗಳಿಗೆ ಸರಿಯಾದ ಪ್ರಚಾರವನ್ನು ಕೊಡದೆ ಅನ್ಯಾಯ ಮಾಡಿದವು.

ಆದರೆ ಈ ಎಲ್ಲಾ ಆದರ್ಶವಾದಿಗಳಲ್ಲಿ ಬೆಂಗಳೂರಿನ ಜಯನಗರದಲ್ಲಿ ಮೌಲ್ಯಾಗ್ರಹಿಸಿ ಸ್ಪರ್ಧಿಸಿದ್ದ ರವಿಕೃಷ್ಣಾರೆಡ್ಡಿಯವರು ಜಯ ಗಳಿಸಬಹುದೆಂದು ತರ್ಕಿಸಿದ್ದೆ. ಇವರಿಗೆ ದೊರೆತ ಮಾಧ್ಯಮಗಳ ಪ್ರಚಾರ ಮತ್ತು ಚನ್ನಗಿರಿ, ಹೊಳಲ್ಕೆರೆಗಿಂತ ವಿದ್ಯಾವಂತರು ಅಧಿಕವಾಗಿರುವ ಕಾರಣ ಬೆಂಗಳೂರಿನ ಜಯನಗರ ಕ್ಷೇತ್ರದಲ್ಲಿ, ರವಿಕೃಷ್ಣಾರೆಡ್ಡಿ ಜಯ ಗಳಿಸದಿದ್ದರೂ ವಿಜಯಿಯ ಸಮೀಪಸ್ಪರ್ಧಿಯಾಗಿ ಹೊಮ್ಮುತ್ತಾರೆಂದುಕೊಂಡಿದ್ದೆನು. ಆದರೆ ನನ್ನ ನಿರೀಕ್ಷೆ ಕ್ವಚಿತ್ತಾಗುವಂತೆ ಅವರಿಗೆ ೨೪೪ ಮತಗಳು ದೊರೆತಿವೆ. ಬಹುಶಃ ಇದು ಇಂದಿನ ಬೆಂಗಳೂರಿನಲ್ಲಿ ಮೌಲ್ಯಗಳಿಗೆ ಇರುವ ಬೆಲೆಯೇನೋ!!! ಇದ್ದುದರಲ್ಲಿ ಚನ್ನಗಿರಿ, ಹೊಳಲ್ಕೆರೆಗಳಂತ ಸಣ್ಣ ಊರುಗಳಲ್ಲಿಯೇ ಇನ್ನೂ ಪ್ರಾಮಾಣಿಕತೆ, ಮೌಲ್ಯಗಳಿಗೆ ಮೌಲ್ಯವಿದೆಯೆಂದೆನಿಸುತ್ತದೆ. ಅದಕ್ಕೇ ಇರಬೇಕು ಬಾಳಪ್ಪ ಹುಕ್ಕೇರಿ "ನಮ್ಮ ಹಳ್ಳೀ ಊರ ನಮಗ ಪಾಡಾಃ ಯಾತಕ್ಕವ್ವಾ ಹುಬ್ಬಳ್ಳೀ ಧಾರವಾಡಾಃ..." ಎಂದು ಹಾಡಿರುವುದು.

ಇಲ್ಲಾ, ಸಾಕಷ್ಟು ಗಿಮಿಕ್ ಗಳನ್ನು ನೋಡಿ, ಮಾಡಿರುವ ಸೊಫಿಸ್ಟಿಕೇಟೆಡ್ ಬೆಂಗಳೂರಿಗರು ರವಿಕೃಷ್ಣಾರೆಡ್ಡಿಯವರ ಪ್ರಾಮಾಣಿಕ ಪ್ರಯತ್ನವನ್ನು "ಕಿವಿ ಮೇಲೆ ಹೂವು ಇಡ್ತಾ ಅವ್ನೇ" ಎಂದು ಕನ್ನಡದಲ್ಲೋ ಅಥವಾ "ಓಲ್ಡ್ ವೈನ್ ಇನ್ ಎ ನ್ಯೂ ಬಾಟಲ್" ಎಂದು ಇಂಗ್ಲಿಷ್ ನಲ್ಲೋ ಅಂದುಕೊಂಡು ದುಬಾರಿಯಾದರೇನೋ! ಏಕೆಂದರೆ ರವಿಕೃಷ್ಣಾರೆಡ್ಡಿಯವರು ಚುನಾವಣೆಗೆ ಖರ್ಚು ಮಾಡಿದ್ದು ಹತ್ತಿರ ಹತ್ತಿರ ನಾಲ್ಕೂವರೆ ಲಕ್ಷ ಮತ್ತು ಗಳಿಸಿದ್ದು ಇನ್ನೂರ ನಲ್ವತ್ನಾಲ್ಕು ಓಟುಗಳು. ಅಲ್ಲಿಗೆ ಒಂದು ಓಟಿನ ಬೆಲೆ ಹದಿನೆಂಟು ಸಾವಿರ ರೂಪಾಯಿಗಳಿಗೂ ಹೆಚ್ಚು! ಒಂದು ಸುದ್ದಿಯ ಪ್ರಕಾರ ಬಿಜೆಪಿಯ ಕರುಣಾಕರರೆಡ್ಡಿ ಹರಪನಹಳ್ಳಿಯಲ್ಲಿ ಐವತ್ತು ಕೋಟಿ ಖರ್ಚು ಮಾಡಿ ಎಪ್ಪತ್ತು ಸಾವಿರ ಓಟು ಗಳಿಸಿ, ಪ್ರತಿಯೊಂದು ಓಟಿಗೆ ಏಳು ಸಾವಿರ ರೂಪಾಯಿ ಚೆಲ್ಲಿದ್ದಾರೆ. ಅಂದರೆ ರವಿಕೃಷ್ಣಾರೆಡ್ಡಿ ಪ್ರತಿ ಓಟಿಗೆ ಗಣಿ ರೆಡ್ಡಿಗಳು ಖರ್ಚು ಮಾಡಿದ್ದುದಕ್ಕಿಂತ ದುಪ್ಪಟ್ಟು ಹೆಚ್ಚಾಗಿ ಖರ್ಚು ಮಾಡಿದ್ದಾರೆ.

ಯಾಕೋ ಮೌಲ್ಯಗಳು ಭಾರತದಲ್ಲಿ ಅತೀ ದುಬಾರಿಯಾಗುತ್ತಿವೆ!

ಅಣಕ:

ಬೆಂಗಳೂರು ಕೇಂದ್ರಿತ ಕನ್ನಡ ಓರಾಟಗಾರರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ "ಕೆಂಪೇಗೌಡ" ಹೆಸರಿಡಬೇಕೆಂದಿರುವುದು ಏಕೆ ಗೊತ್ತೆ?

ಜಾತಿ ಎಂದಿರಾ? ಅಲ್ಲಾ. ಬೆಂದಗಾಳೂರು ಸ್ಥಾಪಿಸಿದ್ದಕ್ಕೆಂದಿರಾ ಅದೂ ಅಲ್ಲ.

ಕೆಂಪೇಗೌಡರು ಇಂದಿನ ಬೆಂಗಳೂರಿಗನ ನೈಜ ರೂಪ! ಅವರ ಮಾತೃಭಾಷೆ ತೆಲುಗು ಮತ್ತವರ ಮೂಲ ತಮಿಳುನಾಡಿನ ಕಂಚಿ ಪ್ರದೇಶ.

ಇದು ಅಣಕವಲ್ಲ, ಐತಿಹಾಸಿಕ ಸತ್ಯ.

ಹಾಗಿದ್ದರೆ ಇದನ್ನು ಅಣಕದಲ್ಲಿ ಬರೆದಿರುವುದಕ್ಕೆ ಕಾರಣ?

ಚೌ-ಚೌ ಕನ್ನಡದ ಬೆಂಗಳೂರಿಗರು ಇದನ್ನರಿಯದೇ ಅವರ ಹೆಸರಿಗಾಗಿ ಹೋರಾಡುತ್ತಿರುವುದು! ಕಣ್ಣರಿಯದಿರ್ದೊಡೇ ಕರುಳರಿಯದೇ?

"ಆನಾ, ಕೆಂಪೇಗೌಂಡರ್ ನಂಬಳ ಆಳ್" ಎಂದು ತಮಿಳ್ ಪಸಂಗಳ್ ಸಿರಿಕ್ಕಿರುವರ್!

ಕನ್ನಡ ಓರಾಟಗಾರರ "ಕೆಂಪೇಗೌಡ" ಹೆಸರಿನ ಜಾಡಿನಲ್ಲಿ...

ಬೆಂಗಳೂರಿನ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆಗೆ ಮುನ್ನ ಅದರ ಹೆಸರಿನ ಬಗ್ಗೆ ಅದಾಗಲೇ ಹೋರಾಟಗಳು ಉದ್ಘಾಟನೆಗೊಂಡಿವೆ! ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಬೆಂಗಳೂರಿನ ಹೊಸ ವಿಮಾನ ನಿಲ್ದಾಣಕ್ಕೆ "ಕೆಂಪೇಗೌಡ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ"ವೆಂದು ಹೆಸರಿಸದಿದ್ದರೆ ವಿಮಾನ ನಿಲ್ದಾಣವನ್ನು ಧ್ವಂಸಗೊಳಿಸುವುದಾಗಿ ಎಚ್ಚರಿಕೆಯನ್ನು ಹೊರಡಿಸಿದೆ.

ಇರಲಿ, ಈಗ ಈ ಕೆಂಪೇಗೌಡ ಬಗ್ಗೆ ಕೊಂಚ ತಿಳಿದುಕೊಳ್ಳೋಣ. ಕ್ರಿ.ಶ. ೧೫೧೩ ರಿಂದ ೧೫೬೩ ಕೆಂಪೇಗೌಡ ಹುಟ್ಟಿ, ಆಳಿ ಹೋದ ಕಾಲ. ವಿಜಯನಗರದ ಸಾಮಂತನಾಗಿದ್ದ ಕೆಂಪೇಗೌಡ ಯಲಹಂಕ ಪ್ರಾಂತವನ್ನು ಆಳುತ್ತಿದ್ದು, ಕ್ರಿ.ಶ. ೧೫೩೭ ರಲ್ಲಿ ಬೆಂಗಳೂರನ್ನು ಸ್ಥಾಪಿಸಿದನು. ಮುಂದೆ ಶಿವಾಜಿಯ ತಂದೆ ಶಹಾಜಿಯು ಬೆಂಗಳೂರನ್ನು ಬಿಜಾಪುರದ ಸುಲ್ತಾನರ ಸರ್ದಾರನಾಗಿದ್ದಾಗ ವಶಪಡಿಸಿಕೊಂಡು ಬೆಂಗಳೂರು, ಬಿಜಾಪುರದ ಸುಲ್ತಾನನ ಆಡಳಿತಕ್ಕೆ ಒಳಪಡುವುದಕ್ಕೆ ಕಾರಣನಾದನು. ಕೆಂಪೇಗೌಡ ತನ್ನ ಆಡಳಿತದಲ್ಲಿ ಬೆಂಗಳೂರಿನ ನಾಲ್ಕು ದಿಕ್ಕಿಗೆ ನಾಲ್ಕು ಗಡಿ ಗೋಪುರಗಳನ್ನು ಕಟ್ಟಿಸಿ ಒಂದು ಮಣ್ಣಿನ ಕೋಟೆಯನ್ನು ಕಟ್ಟಿಸಿದ್ದನು.

ಒಟ್ಟಾರೆ ಇದು ಕೆಂಪೇಗೌಡ ಕುರಿತಾದ ಸಂಕ್ಷಿಪ್ತ ಮಾಹಿತಿ. ಈ ರೀತಿಯ ಸಾಮಂತರು, ಸರದಾರರು ಕನ್ನಡ ನಾಡಿನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಆಗಿಹೋಗಿದ್ದಾರೆ. ಕಲ್ಲಿನ ಕೋಟೆಗಳನ್ನು ಕಟ್ಟಿ ಹೋದ ಇನ್ನೂ ಹೆಚ್ಚಿನ ಸರದಾರ ಸಾಮಂತರುಗಳ ಹೆಸರುಗಳೇ ಇಂದು ಯಾರಿಗೂ ನೆನಪಿಲ್ಲ. ಮದಕರಿ ನಾಯಕ, ಶಿವಪ್ಪ ನಾಯಕ, ಎಚ್ಚಮ ನಾಯಕರಂತಹ ಅಗ್ರಪಂಕ್ತಿಯ ಸರದಾರರೊಂದಿಗೆ ಹೋಲಿಸಿದರೆ ಕೆಂಪೇಗೌಡರ ಕೊಡುಗೆ ಅತ್ಯಂತ ಗೌಣ. ಒಟ್ಟಾರೆ ಕೆಂಪೇಗೌಡ ಅಂದಿನ ಕಾಲದ ಯಾವುದೇ ಸಣ್ಣ ಸಾಮಂತನಿಗಿಂತ ಬೇರೆಯಾಗಿ ನಿಲ್ಲುವಂತೆ ಕಾಣಿಸುವ ಯಾವುದೇ ಚಾರಿತ್ರ್ಯಾರ್ಹ ಕುರುಹುಗಳಾಗಲೀ, ಐತಿಹಾಸಿಕ ದಾಖಲೆಗಳಾಗಲೀ ಇಲ್ಲ. ಈ ಕೆಂಪೇಗೌಡ ಕನ್ನಡ ನಾಡು ನುಡಿಗಾಗಿಯಾಗಲೀ, ಒಗ್ಗಟ್ಟಿಗಾಗಲೀ ಹೋರಾಡಿದ್ದೂ ಇಲ್ಲ ಮತ್ತು ಆ ಅಧಿಕಾರವೂ ಇರಲಿಲ್ಲ. ಏಕೆಂದರೆ ಅವನೊಬ್ಬ ವಿಜಯನಗರ ಸಾಮ್ರಾಜ್ಯದ ಸಾಮಂತ ಮಾತ್ರ! ಅರಸರ ಅಡಿಯಾಳಾಗಿ ತಮ್ಮ ತಮ್ಮ ಪ್ರಾಂತ್ಯಗಳಲ್ಲಿ ಅಧಿಕಾರವನ್ನು ನಡೆಸುವುದಷ್ಟೇ ಅಂದಿನ ಸಾಮಂತರ ಕರ್ತವ್ಯವಾಗಿದ್ದಿತು. ಒಟ್ಟಾರೆ ಕೆಂಪೇಗೌಡರು ಕನ್ನಡ ನಾಡು ನುಡಿಗಳ ದೆಸೆಯಿಂದ ಯಾವುದೇ ರೀತಿಯಲ್ಲಿ ಐತಿಹಾಸಿಕ ವ್ಯಕ್ತಿಯಲ್ಲ.

ಹಾಗೆ ಕನ್ನಡ ನಾಡು ನುಡಿಗಾಗಿ ಹೋರಾಡಿದ ಅಮೋಘವರ್ಷ, ಮಯೂರವರ್ಮ, ಹೊಯ್ಸಳರು, ಚಾಲುಕ್ಯರು, ವಿಜಯನಗರದ ಅರಸರು ಇನ್ನು ಮುಂತಾದ ಅನೇಕ ಸಮಗ್ರ ಕರ್ನಾಟಕಕ್ಕೆ ಹೋರಾಡಿದ ನೂರು ಅರಸರ, ಸಾವಿರಾರು ಸಾಮಂತರ ಸಮೀಪಕ್ಕೆ ಕೂಡ ಕೆಂಪೇಗೌಡ ಹೆಸರು ಸಂದುವುದಿಲ್ಲ. ಏಕೆಂದರೆ ವಿಜಯನಗರ ಸಾಮ್ರಾಜ್ಯದ ನೂರಾರು ಸಾಮಂತರಲ್ಲಿ ಕೆಂಪೇಗೌಡನೂ ಕೂಡ ಒಬ್ಬ ಸಾಮಾನ್ಯ ಸಾಮಂತನಾಗಿದ್ದನು.

ಇನ್ನು ಬೆಂಗಳೂರು ವಿಮಾನ ನಿಲ್ದಾಣ ಕೇವಲ ಬೆಂಗಳೂರಿಗಷ್ಟೇ ಸೀಮಿತವಲ್ಲ. ಇದು ಇಡೀ ಕರ್ನಾಟಕದ ಆಸ್ತಿ. ಏಕೆಂದರೆ ಎಂತಹ ಮುಂದುವರಿದ ರಾಷ್ಟ್ರಗಳಲ್ಲಿಯೂ "ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ"ಗಳು ರಾಜ್ಯಕೊಂದರಂತೆಯೇ ಇರುತ್ತವೆ. ಪ್ರತಿ ರಾಜ್ಯದಲ್ಲಿ ಅನೇಕ ವಿಮಾನ ನಿಲ್ದಾಣಗಳಿದ್ದರೂ ಅವೆಲ್ಲಾ ಅಂತರ್ರಾಷ್ಟ್ರೀಯವಾಗಿರುವುದಿಲ್ಲವೆಂಬುದು ಗಮನಿಸಬೇಕಾದ ಅಂಶ. ಹಾಗಾಗಿಯೇ ಈ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ ರಾಜ್ಯಮಟ್ಟದ / ರಾಷ್ಟ್ರಮಟ್ಟದ ಚಾರಿತ್ರ್ಯಾರ್ಹ ವ್ಯಕ್ತಿಗಳ ಹೆಸರುಗಳನ್ನಿಟ್ಟಿರುತ್ತಾರೆ.

ವಿಷಯ ಹೀಗಿರುವಾಗ ಚಕ್ರವರ್ತಿ, ಅರಸರಾಗಿ ಮೆರೆದು, ಕನ್ನಡ ನಾಡು ನುಡಿಗಾಗಿ ಅಪಾರ ಕೊಡುಗೆಯನ್ನು ನೀಡಿರುವ ಚಾರಿತ್ರಿಕ/ಐತಿಹಾಸಿಕ ಅಮೋಘವರ್ಷ, ಪುಲಕೇಶಿ, ಹೊಯ್ಶಳ, ಮಯೂರವರ್ಮ, ವಿಜಯನಗರದ ಅರಸರುಗಳು ಇನ್ನು ಮುಂತಾದವರ ಹೆಸರುಗಳೆಲ್ಲಾ ಕೇವಲ ರಸ್ತೆ, ಬಡಾವಣೆ, ವೃತ್ತಗಳಿಗೆ ಸೀಮಿತವಾಗಿರುವಾಗ, ಒಬ್ಬ ಸಾಮಂತನಗಿದ್ದವನ ಹೆಸರನ್ನು ಇಡೀ ಕರ್ನಾಟಕದ, ಕನ್ನಡಿಗರ ಹೆಮ್ಮೆಯ ಕುರುಹಾಗಿರುವ ವಿಮಾನ ನಿಲ್ದಾಣಕ್ಕಿಡುವುದು ಸಮಗ್ರ ಕರ್ನಾಟಕದ ಪರಿಕಲ್ಪನೆಯ ಅಪಹಾಸ್ಯವೇ ಸರಿ.

ಮೊದಲಿನಿಂದಲೂ ಬೆಂಗಳೂರೇ ಕರ್ನಾಟಕ, ಬೆಂಗಳೂರು ಶೈಲಿಯ ಕನ್ನಡವೇ ಸ್ವಚ್ಚ ಕನ್ನಡ, ಬೆಂಗಳೂರಿನಲ್ಲಿ ಕನ್ನಡಕ್ಕೆ ಕುಂದುಂಟಾದರೆ ಇಡೀ ಕನ್ನಡಕ್ಕೇ ಕುಂದುಂಟಾಯಿತೆಂದು ಬಗೆಯುವ, ಬೆಂಗಳೂರಿಗೆ ತೊಂದರೆಯಾದರೆ ಅದು ಇಡೀ ಕರ್ನಾಟಕದ ತೊಂದರೆ ಎಂದು ಬೊಬ್ಬಿಡುವ, ಒಟ್ಟಾರೆ "ಘನ ಬೆಂಗಳೂರೇ" ಕರ್ನಾಟಕವೆಂಬ ಸಿದ್ದಾಂತವನ್ನು ಹೊಂದಿರುವ ಈ ಓರಾಟಗಾರರ ಅಲ್ಪದೃಷ್ಟಿಯ "ಹುಗ್ರ ಓರಾಟ"ವೇ ಇಂದಿನ ಬೆಂಗಳೂರಿಗೆ ಕಾರಣವೆನಿಸುತ್ತದೆ.

ಬೆಂಗಳೂರಿನಲ್ಲಿ ಕನ್ನಡಿಗರಿಗೆ ಉದ್ಯೋಗ, ಕನ್ನಡಕ್ಕೆ ಮಾನ್ಯತೆ, ಕನ್ನಡಕ್ಕೆ ಪ್ರಾಧಾನ್ಯತೆ ಎಂದೆಲ್ಲಾ ಇಂದು ಹೋರಾಡುತ್ತಿರುವ ಈ ಬೆಂಗಳೂರು ಕೇಂದ್ರಿತ ಓರಾಟಗಾರರು ತಮ್ಮ ಹೋರಾಟದಿಂದ ಕನ್ನಡ ಸೇವೆ ಮಾಡುತ್ತಿದ್ದಾರೆನ್ನುವಿರಾ? ಖಂಡಿತವಾಗಿಯೂ ಅಲ್ಲವೆನಿಸುತ್ತದೆ. ಅವರ ಈ ಹೋರಾಟ ತತ್ವನಿಷ್ಟವಾಗಿದ್ದರೆ ಅದು ಅವರುಗಳು, ತಮ್ಮ ಬೆಂಗಳೂರಿನಲ್ಲಿ ಕನ್ನಡ ಈ ಹೀನಾಯ ಸ್ಥಿತಿಗೆ ಬರಲು ಒಂದೊಮ್ಮೆ ತಾವೇ ಕಾರಣಕರ್ತರಾಗಿದ್ದಕ್ಕಾಗಿ ಮಾಡಿಕೊಳ್ಳುತ್ತಿರುವ ಪ್ರಾಯಶ್ಚಿತ್ತವೆನಿಸುತ್ತದೆ. ಆ ಪ್ರಾಯಶ್ಚಿತ್ತದ ಭರದಲ್ಲಿ ಕರ್ನಾಟಕದ ಪೂರ್ವಾತಿಹಾಸವನ್ನು ಅರಿಯದೆ ಕೇವಲ ಒಂದು ವರ್ಗಕ್ಕೆ, ಒಂದು ಹೋಬಳಿಗೆ ಸೀಮಿತವೆನಿಸುವಂತಹ ಕೆಂಪೇಗೌಡನ ಹೆಸರನ್ನು ಮೆರೆಸಿ, ಕನ್ನಡ/ಕರ್ನಾಟಕಕ್ಕೆ ಇನ್ನಷ್ಟು ಚ್ಯುತಿ ತರುತ್ತಿದ್ದಾರೆ.

ಬಹುಶಃ ಬೆಂಗಳೂರಿಗೆ "ಬೆಂದಗಾಳೂರು" ಎಂದು ಹೆಸರಿಸಿಸುವ ಮೂಲಕ ಕೆಂಪೇಗೌಡ, ಬೆಂಗಳೂರಿನಲ್ಲಿನ ಇಂದಿನ ದಿಢೀರ್‍ ದೋಸೆಗಳು; ಇನ್ಸ್ಟಂಟ್ ಮಸಾಲೆಗಳು; ತ್ವರಿತಗತಿಯ ತಿಂಡಿಗಳ ದರ್ಶಿನಿಗಳಿಂದ ಹಿಡಿದು ಇನ್ಸ್ಟಂಟ್ ಮದುವೆಗಳು; ಇನ್ಸ್ಟಂಟ್ ಹೋರಾಟಗಳು; ಸದಾ ರೆಡಿಯಾಗಿರುವ ನಾಯಕರುಗಳು....ಒಟ್ಟಾರೆಯ ಇನ್ಸ್ಟಂಟ್ ಸಂಸ್ಕೃತಿಗೆ ಕಾರಣೀಭೂತನಾದನೆಂದು ಈ ಇನ್ಸ್ಟಂಟ್ ಹೋರಾಟಗಾರರು ಸಂಶೋಧಿಸಿಕೊಂಡಿದ್ದಾರೇನೋ?

ಏಕೆಂದರೆ ಇದರ ಹೆಸರೇ "ಬೆಂದಗಾಳೂರು" ಅರ್ಥಾತ್ ಇನ್ಸ್ಟಂಟ್ ರೆಡಿ ಇರುವ ಊರು. ಹಾಗಾಗಿಯೇ ಇಲ್ಲಿ ಎಲ್ಲಾ ಇನ್ಸ್ಟಂಟ್. ಕಟ್ಟಿ ರೆಡಿ ಇರುವ ಏರ್ ಪೋರ್ಟಿಗೆ ಇನ್ಸ್ಟಂಟ್ ಕೆಂಪೇಗೌಡ ನಾಮಧಾರಣೆ!!!

ಬೆಂಗಳೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ ಅವಕಾಶವಾದಿಗಳಿಗೆ ಸಿಕ್ಕಿರುವ ಒಂದು ಸುವರ್ಣಾವಕಾಶ. ಈ ಸುವರ್ಣಾವಕಾಶದಲ್ಲಿ ಭೂಮಿಯನ್ನು ಹೆಚ್ಚಿನ ಬೆಲೆಗೆ ಮಾರಿದ ರೈತ, ವಿಮಾನ ನಿಲ್ದಾಣವನ್ನು ಕಟ್ಟಿ ನಿರ್ವಹಿಸುವ ಸಂಸ್ಥೆ, ರಾಜಕಾರಣಿಗಳು, ಭೂ ಮಾಫಿಯಾ....ಗಳಂತೆಯೇ ಈ ಹೋರಾಟಗಾರರು ಕೂಡ. ಈ ಹೋರಾಟದ ಮುಂಚೂಣಿಯಲ್ಲಿರುವವರಿಗೆ ಕನ್ನಡವೂ ಬೇಕಿಲ್ಲ, ಕೆಂಪೇಗೌಡನೂ ಬೇಕಿಲ್ಲ, ಬಡ ಬೋರೇಗೌಡನೂ ಲೆಕ್ಕಕ್ಕಿಲ್ಲ. ಈ ನಾಯಕರುಗಳಿಗೆ ಬೇಕಿರುವುದು ಸಿಕ್ಕಿರುವ ಈ ಅವಕಾಶವನ್ನು ಯಶಸ್ವಿಯಾಗಿ ಬಳಸಿಕೊಂಡು ಮತ್ತೊಬ್ಬ ಒಕ್ಕಲಿಗ ನಾಯಕನೂ, ಕನ್ನಡ ಕಂಠೀರವನೂ ಉದಕವಾಗುವುದು. ಹಾಗಾಗಿಯೇ ಇಂದು ಇವರು ನಮ್ಮ ನಿಮ್ಮೆಲ್ಲರ ಭಾಷಾ ಅಭಿಮಾನದ ಭಾವನೆಗಳನ್ನು ಶೋಷಿಸುತ್ತ, ಆ ಭಾವನೆಗಳನ್ನು ಯಶಸ್ವಿಯಾಗಿ ಬಿಕರಿಸುತ್ತಾ ತಮ್ಮ ನಾಯಕತ್ವದ ಬೇಳೆಯನ್ನು ಬೆಂದಗಾಳೂರಿನಲ್ಲಿ ಬೇಯಿಸಿಕೊಳ್ಳುತ್ತಿದ್ದಾರೆ.

ಈ ರೀತಿಯ ಹುನ್ನಾರಗಳಿರದಿದ್ದರೆ, ಇವರ ಹೋರಾಟ ತತ್ವನಿಷ್ಟ್ವವಾಗಿದ್ದರೆ ಕರವೇ ಎರಡು ಬಣಗಳಾಗುತ್ತಿತ್ತೇ? ಇಲ್ಲಿ ಕರವೇಯ ಒಂದು ಬಣ ತಮ್ಮ "ಸ್ವಜಾತಿ" ಪಕ್ಷಪಾತವನ್ನು ಮೆರೆಸುವ ಪ್ರಯತ್ನವನ್ನು ಮಾಡುತ್ತಿದೆಯೇ? ಹಾಗೆ ಸ್ವಜಾತೀ ಪಕ್ಷಪಾತವನ್ನು ಮಾಡಲೇಬೇಕಿದ್ದರೆ, ಭಾರತದ ಪ್ರಪ್ರಥಮ ಕನ್ನಡಿಗ ಪ್ರಧಾನಿಯಾಗಿದ್ದ, ಕನ್ನಡಿಗರ (ಕು)ಖ್ಯಾತಿಯನ್ನು ಭಾರತದಾದ್ಯಂತ ಮೆರೆಸಿದ ದೇವೇಗೌಡರ ಹೆಸರು, ಬೆಂಗಳೂರಿನ ಒಬ್ಬ ಮಾಜೀ ಮೇಯರ್ ಆಗಿದ್ದ ಕೆಂಪೇಗೌಡಗಿಂತ ಅತ್ಯಂತ ಹೆಚ್ಚು ಸೂಕ್ತವೆನಿಸುತ್ತದೆ.

ಭಾರತ ಅದ್ಯಾವ ದಿಕ್ಕಿನಲ್ಲಿ ಮುನ್ನಡೆಯುತ್ತಿದೆಯೋ ಅರ್ಥವಾಗುತ್ತಿಲ್ಲ. ಜಾತಿಗಳು ಇಂದು ಹೆಚ್ಚು ಹೆಚ್ಚು ಪ್ರಬಲವಾಗಿ ಪ್ರಜಾಪ್ರಭುತ್ವದಲ್ಲಿ ಬೇರೂರುತ್ತಿವೆ. ಯಾವ ಪ್ರಜಾಪ್ರಭುತ್ವದಿಂದ ಜಾತಿಗಳನ್ನು ಕೇವಲ ಜೀವನಶೈಲಿಗಳನ್ನಾಗಿ ಸೀಮಿತಗೊಳಿಸಬೇಕಾಗಿದ್ದಿತೋ ಅದೇ ಪ್ರಜಾಪ್ರಭುತ್ವ, ಜಾತಿಗಳನ್ನು ಪೋಷಿಸಿ ಹೆಮ್ಮರಗಳನ್ನಾಗಿಸಿದೆ. ಒಂದೆಡೆ ಹೆಮ್ಮರಗಳೆಲ್ಲಾ ನಾಶವಾಗಿ ಪರಿಸರ ವಿನಾಶದಂಚಿನಲ್ಲಿದ್ದರೆ, ಈ ಜಾತೀ ಪರಿಸರ ಅತ್ಯಂತ ಪ್ರಬಲವಾಗಿ ವಿಕಸಿಸುತ್ತಿದೆ.

ಕೆಂಪೇಗೌಡನೇನಾದರೂ ಇಂದು ಬದುಕಿದ್ದರೆ, ತನ್ನನ್ನು ಪಾಲಿಸಿ ಪೋಷಿಸಿದ ಅರಸು, ಚಕ್ರವರ್ತಿಗಳಿಗೆ ದೊರಕದ ಗೌರವ ತನಗೆ ತನ್ನ ಜಾತಿ ಪ್ರತಿಭೆಯಿಂದ ಈ ಓರಾಟಗಾರರು ಕೊಡಲು ಹೊರಟಿರುವುದನ್ನು ಕಂಡು ಖಡ್ಗ ಹಿರಿದು ಓರಾಟಗಾರರ ಧೂಳು ಕೊಡವುತ್ತಿದ್ದನೋ ಅಥವಾ ಇದು ತನ್ನ ಜನ ತನಗೆ ಮಾಡುತ್ತಿರುವ ಅವಮಾನವೆಂದು ಆತ್ಮಹತ್ಯೆಗೆ ಮುಂದಾಗುತ್ತಿದ್ದನೋ!?

ಕನ್ನಡ ಭಾಷೆ, ಕರ್ನಾಟಕದ ಸಂಸ್ಕೃತಿ ಅರಿಯದ ಅನ್ಯಭಾಷಿಗ ಬೆಂಗಳೂರಿಗರಿಂದುಂಟಾಗುವ ಅಪಾಯಕ್ಕಿಂತ, ಸಮಗ್ರ ಕರ್ನಾಟಕದ ಪರಿಕಲ್ಪನೆಯಿಲ್ಲದ ಅಲ್ಪಜ್ಞಾನೀ ಓರಾಟಗಾರರ ಹೋರಾಟ ಕನ್ನಡಕ್ಕೆ ಅತ್ಯಂತ ಅಪಾಯಕಾರಿಯೆನಿಸುತ್ತದೆ. ಅನ್ಯಭಾಷಿಗರು ತಮ್ಮದೇ ದ್ವೀಪಗಳನ್ನು "ಬೆಂಗಳೂರಿನಲ್ಲಷ್ಟೇ" ಸೃಷ್ಟಿಸಿಕೊಂಡರೆ, ನಮ್ಮವರೇ ಆದ ಓರಾಟಗಾರರು ನಮ್ಮ ನಮ್ಮಲ್ಲೇ "ರಾಜ್ಯಾದ್ಯಂತ" ದ್ವೀಪಗಳನ್ನು ಸೃಷ್ಟಿಸುತ್ತಿದ್ದಾರೆ. "ದಕ್ಷಿಣಪಥೇಶ್ವರ"ನೆಂದು ಇಡೀ ವಿಶಾಲ ದಕ್ಷಿಣ ಭಾರತವನ್ನೇ ಆಳಿದ ಪುಲಕೇಶಿ ಇಂದು "ಉತ್ತರ ಕರ್ನಾಟಕ"ದವನಾಗಿ ಕೇವಲ ಬಾದಾಮಿಗೆ ಸೀಮಿತಗೊಂಡಿದ್ದರೆ, ಸಮಾನತೆಯ ಹರಿಕಾರ ಬಸವಣ್ಣ ವೀರಶೈವರ ಅದರಲ್ಲೂ "ವಿರಕ್ತ" ಪಂಥಿಗೆ ಮಾತ್ರ ಸೀಮಿತನಾಗಿದ್ದಾನೆ. ಹಾಗೆಯೇ ಕೃಷ್ಣದೇವರಾಯ, ಹೊಯ್ಸಳ, ವೀರರಾಜೇಂದ್ರ, ಚೆನ್ನಮ್ಮ, ಹೊನ್ನಮ್ಮ.....ಮುಂತಾದ ಸೀಮಾತೀತರೆಲ್ಲಾ ಇಂದು ಅತ್ಯಂತ ಸೀಮಿತ.

ಈಗಾಗಲೇ "ನಾಡ ಪ್ರಭು" ಕೆಂಪೇಗೌಡ ಎನ್ನುತ್ತಿರುವ ಈ ಓಲೈಕೆ ಹೋರಾಟಗಾರರು ಮುಂದೆ "ಕನ್ನಡ ನಾಡ ಪ್ರಭು" ಕೆಂಪೇಗೌಡರು ಎಂದು ಇತಿಹಾಸವನ್ನು ತಿರುಚುವ ಸಾಹಸಕ್ಕೆ ಕೂಡ ಕೈ ಹಾಕುವರೇನೋ? ಯಾರಾದರೂ ಸೊಲ್ಲೆತ್ತಿದರೆ ಇದ್ದದ್ದೇ ಹೊಡಿಮಗಾ, ಕಡಿಮಗಾ ಬಿಡಬೇಡ ಅವ್ನ, ಮಾಡುಮಗಾ, ಮಾಡುಮಗಾ ಕೈಮಾ ಅವ್ನ... ಈ ರೀತಿಯ ಕೆಟ್ಟ ರಾಜಕಾರಣದ ದೆಸೆಯಿಂದಾಗಿಯೇ ಪಾಟೀಲ್ ಪುಟ್ಟಪ್ಪ ಬೇರೆ ರಾಜ್ಯವನ್ನೂ, ಕೊಡವರು ತಮ್ಮದೇ ರಾಜ್ಯವನ್ನೂ, ಕರಾವಳಿಯವರು ಕರಾವಳಿ ರಾಜ್ಯ(?)ವನ್ನೂ ಕೇಳುತ್ತಿದ್ದಾರೆ ಇಲ್ಲಾ ಕೇಳುವ ಹಾದಿಯಲ್ಲಿದ್ದಾರೆ. ಅಷ್ಟೇ ಅಲ್ಲಾ ಬೆಳಗಾವಿಯ ಕನ್ನಡಿಗರು ಕೂಡಾ ತಮಗೆ ಮಹಾರಾಷ್ಟ್ರವೇ ಸರಿಯೆಂದುಕೊಳ್ಳುತ್ತಿದ್ದಾರೆ.

ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ ದೇವರೆಂಬ ಪಂಚಿಂಗ್ ಲೈನಿನ, ಕರ್ನಾಟಕವೆಂದರೆ ಬರೀ ಬೆಂಗಳೂರೆಂಬ ಭ್ರಾಮಕದಲ್ಲಿ ಮುಳುಗಿರುವ ಈ ಓರಾಟಗಾರರಿಂದ ಕನ್ನಡಕ್ಕೆ ಅದೇನು ಗಂಡಾಂತರ ಕಾದಿದೆಯೋ?

ಈ ಓಲೈಕೆಯ ಪ್ರಭಾವ ನಮ್ಮಗಳ ಮೇಲೆ ಅದೆಷ್ಟು ಗಾಢವಾಗಿದೆಯೆಂದರೆ, ಈ ಲೇಖನವನ್ನು ಓದುತ್ತಾ, ಓದುತ್ತಾ ವಿದ್ಯಾವಂತರಾದ ನೀವುಗಳೂ ಕೂಡಾ "ಈ ರವಿ ಹಂಜ್ ಬಹುಶಃ ಬ್ರಾಹ್ಮಣನೋ, ಲಿಂಗಾಯ್ತರವನೋ ಇರಬೇಕು. ಅದಕ್ಕೆ ಕೆಂಪೇಗೌಡನ ಬಗ್ಗೆ ಹೀಗೆ ಬರೆದಿದ್ದಾನೆ!?" ಎಂದು ನನ್ನ ಇತಿಹಾಸದಲ್ಲಿ ಕುತೂಹಲಿಗಳಾಗುತ್ತಾ ಕರ್ನಾಟಕದ ಐತಿಹಾಸಿಕ ಅಂಶಗಳನ್ನು ಮರೆತೇಬಿಡುವಿರಿ. ಇದು "ಭಾರತ ಪ್ರಜಾಪ್ರಭುತ್ವ"ದ ದುರಂತ ವಿಪರ್ಯಾಸ!

ಅಣಕ:

ಕ್ರಿ.ಶ. ೨೦೨೫ ರಲ್ಲಿ ಒಂದು ಕನ್ನಡ ಕುಟುಂಬದ ತಂದೆ ಮಗುವಿನ ಸಂಭಾಷಣೆ ಹೀಗಿರುತ್ತದೆ.

ಆಗಷ್ಟೇ ಪೋಷಕರ ಜತೆ ಕರ್ನಾಟಕ ಪ್ರವಾಸ ಮಾಡಿ ಹಿಂದಿರುಗಿದ್ದ ಮಗು, "ಡ್ಯಾಡೀ, ಇಲ್ಲಿನ ಕಿಂಗ್ಸ್ ಅಂತಹ ಹಂಪಿ, ಗೋಲಗುಮ್ಮಟ, ಬಾದಾಮಿ ಗುಹೆಗಳು, ಹಳೇಬೀಡು-ಬೇಲೂರು ಟೆಂಪಲ್ ಮಾನ್ಯುಮೆಂಟ್ಸ್, ಚಿತ್ರದುರ್ಗದಂತಹ ಕಲ್ಲಿನ ಫೋರ್ಟ್ ಗಳನ್ನು ಕಟ್ಟಿಸಿದರೆ, ಕೆಂಪೇಗೌಡ ಏಕೆ ಕೇವಲ ನಾಲ್ಕು ಗೋಪುರ ಕಟ್ಟಿಸಿದ್ದಾನೆ?" ಎಂದು ಪ್ರಶ್ನಿಸಿತು.

"ಸನ್, ಕೆಂಪೇಗೌಡ ವಾಸ್ ಅ ಬಿಗ್ ಎಂಪರರ್. ಅವನಿಗೆ "ನಾಡ ಪ್ರಭು" ಅಂತಾರೆ ಗೊತ್ತ? ಅವನು ತನ್ನೆಲ್ಲಾ ಹಣವನ್ನು ತನ್ನ ಸಾಮಂತ/ಸರದಾರರಾಗಿದ್ದ ಈ ಸಿಲ್ಲೀ ಹಂಪಿ, ಬಾದಾಮಿ, ದುರ್ಗ ರಾಜರುಗಳಿಗೆ ಇವುಗಳನ್ನೆಲ್ಲಾ ಕಟ್ಟಿಸಲು ಕೊಟ್ಟುದುದರಿಂದ ಅವನು ಕೇವಲ ನಾಲ್ಕು ಗೋಪುರಗಳನ್ನು ಕಟ್ಟಿಸುವಂತಾಯಿತು. ಬೈ ದ ವೇ, ಯು ವಿಲ್ ಬಿ ಲರ್ನಿಂಗ್ ಇಟ್ ಇನ್ ಯುವರ್ ಸಿಕ್ಸ್ತ್ ಗ್ರೇಡ್ ಹಿಸ್ಟರಿ" ಎಂದು ತಂದೆ ಉತ್ತರಿಸಿದನು.

ಭಾರತ ಪ್ರಜಾಪ್ರಭುತ್ವದ ಅವಿರತ ಓಲೈಕೆಯ ದೆಸೆಯಿಂದಾಗಿ ಆ ತಂದೆಯಾಗಲೇ ತನ್ನ ಶಾಲಾ ಇತಿಹಾಸ ಪಠ್ಯದಲ್ಲಿ ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ಸುಭಾಸ್ ಚಂದ್ರ ಬೋಸರನ್ನು ಉಗ್ರಗಾಮಿಗಳೆಂದು ಓದುತ್ತಾ ಬೆಳೆದಿದ್ದನು!

ಕತ್ತಲು ರಾತ್ರಿ!

ಹೀಗೆಂದು ಚುನಾವಣೆಯ ಮುನ್ನಾ ದಿನದ ರಾತ್ರಿಯನ್ನು ಕರೆಯುತ್ತಿದ್ದರು! ಆ ರಾತ್ರಿಯಲ್ಲಿ ಅಭ್ಯರ್ಥಿಗಳ ಚೇಲಾಗಳು ಕಾರು ಜೀಪುಗಳಲ್ಲಿ ಸಾರಾಯಿ, ರಮ್ಮುಗಳನ್ನು ಹೇರಿಕೊಂಡು ಡಿಸ್ಟ್ರಿಬ್ಯೂಷನ್ ಗೆ ಹೊರಡುತ್ತಿದ್ದರು. ಆಯಾ ಡಿಸ್ಟ್ರಿಬ್ಯೂಷನ್ ಏರಿಯಾಗೆ ಅನುಗುಣವಾಗಿ ಸಾರಾಯಿ ಇಲ್ಲವೇ ರಮ್ ಹಂಚುತ್ತಿದ್ದರು. ಒಂದು ಓಟಿಗೆ ಇಂತಿಷ್ಟು ಎಂದು ಹಣವೂ ಹಂಚಿಕೆಯಾಗುತ್ತಿದ್ದಿತು.

ಹೀಗೊಂದು ಕತ್ತಲ ರಾತ್ರಿಯ ಅನುಭವ ನನಗೂ ಆಗಿದೆ. ಆಗ ದೇವೇಗೌಡ ಮತ್ತು ಶ್ರೀಕಂಠಯ್ಯ ಹಾಸನದ ಸಂಸದ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಆಗೆಲ್ಲಾ ರಾಜೀವ್ ಹತ್ಯೆಯ ಅನುಕಂಪದ ಕಾಲ. ಅಂದಿನ ಕತ್ತಲ ರಾತ್ರಿಗೆ ಖೋಡೇಸ್ ರಮ್ ಕ್ವಾರ್ಟರ್ ಬಾಟಲಿಗಳ ಕೇಸುಗಳು ನಮ್ಮ ಹಾಸ್ಟೆಲ್ಲಿಗೆ ಬಂದಿಳಿದವು. ಆಯಾ ಡಿಸ್ಟ್ರಿಬ್ಯೂಷನ್ ಏರಿಯಾದ ಪ್ರತಿಷ್ಟೆಗೆ ತಕ್ಕಂತೆ ಸಾರಾಯಿ, ರಾಜಾ ವಿಸ್ಕಿ, ಖೋಡೇಸ್ ರಮ್ಮುಗಳು ಹಂಚಲ್ಪಡುತ್ತಿದ್ದವು. ನಮ್ಮದು ಇಂಜಿನಿಯರಿಂಗ್ ಕಾಲೇಜ್ ಹಾಸ್ಟೆಲ್ ಆದ್ದರಿಂದ ನಮ್ಮ ಹಾಸ್ಟೆಲ್ಲಿಗೆ ರಮ್ ಬಂದಿದ್ದಿತು. ನಾನೂ ನನ್ನ ರೂಂಮೇಟ್ ದಶಕುಮಾರನೂ ನಮ್ಮ ಬ್ಲಾಕಿನಲ್ಲಿದ್ದ ಎಲ್ಲಾ ರೂಮುಗಳ ಡಿಸ್ಟ್ರಿಬ್ಯೂಷನ್ ವಹಿಸಿಕೊಂಡು ನಮ್ಮ ರೂಮಿಗೆ ಸಾಕಷ್ಟು ರಮ್ ಕೇಸುಗಳನ್ನು ತಂದಿಟ್ಟುಕೊಂಡು ಅದನ್ನು ಹಲವಾರು ತಿಂಗಳುಗಳ ಕಾಲ ಕುಡಿಯುತ್ತ, ಕುಡಿಸುತ್ತಾ ಅವುಗಳನ್ನು ಖಾಲಿ ಮಾಡಿದ್ದೆವು.

ಅಲ್ಲಾ, ಹಾಸ್ಟೆಲ್ಲಿನಲ್ಲಿರುವವರಿಗೆ ಓಟಿನ ಹಕ್ಕಿದ್ದರೂ ಅದು ಹಾಸನದಲ್ಲಿರುವುದಿಲ್ಲ. ಅದು ಹೇಗೆ ಇವರಿಗೆ ಲಿಕ್ಕರ್ ಹಂಚಿದರೋ ಎಂದುಕೊಳ್ಳುವಿರಾ? ಹಾಸ್ಟೆಲ್ ಹುಡುಗರ ಕೆಲಸ ಪ್ರಾಕ್ಸಿ ಓಟುಗಳನ್ನು ಹಾಕುವುದು. ಹೇಗೂ ನೀಟಾಗಿರುತ್ತಿದ್ದ ಎಂಜಿನಿಯರಿಂಗ್ ಹಾಸ್ಟೆಲ್ ಹುಡುಗರನ್ನು ನೋಡಿದರೆ ಅದ್ಯಾವ ಬೂತ್ ಅಧಿಕಾರಿಯೂ ಸಂಶಯಗೊಳ್ಳುತ್ತಿರಲಿಲ್ಲ. ಹಾಗಾಗಿ ಈ ಎಂಜಿನಿಯರಿಂಗ್ ಹಾಸ್ಟೆಲ್ ಹುಡುಗರೆಂದರೆ ಅಲ್ಲಿನ ಅಭ್ಯರ್ಥಿಗಳಿಗೆ ಬಲು ಇಷ್ಟವಾಗುತ್ತಿದ್ದರು. ಹಾಗಾಗಿಯೇ ಇಂದಿನ ಚುನಾವಣೆಯಲ್ಲಿ ರಾಹುಲ್ ಗಾಂಧಿ, ತನ್ನ ಪಕ್ಷದ ಅಭ್ಯರ್ಥಿಯ ಪರ ಮತ ಯಾಚಿಸುತ್ತಿದ್ದ ದಾವಣಗೆರೆಯ ಮೆಡಿಕಲ್ ಹಾಸ್ಟೆಲ್ಲಿನ ಹುಡುಗರನ್ನು ಭೇಟಿ ಮಾಡಿರುವುದು!!

ಹಾಗಾಗಿಯೇ ನಮಗೆಲ್ಲ ಪ್ರತಿಷ್ಟಿತ(??) ಖೋಡೇಸ್ ರಮ್ ಬರುತ್ತಿದ್ದಿತು. ಇದೆಂತಹ ಪ್ರತಿಷ್ಟಿತ ಮದ್ಯವೆಂದುಕೊಳ್ಳುವಿರಾ? "ಕದ್ದು ಹೋಳಿಗೆ ಕೊಟ್ಟರೆ, ಬೆಲ್ಲ ಕಡಿಮೆ ಅಂದಳಂತೆ" ಎನ್ನುವಂತೇ ಪುಗಸಟ್ಟೆ ಕೊಡುವ ಮೂರು ಬ್ರಾಂಡುಗಳಲ್ಲಿ ಇದೇ ಪ್ರತಿಷ್ಟಿತವಾದುದು. ಅಷ್ಟೇ ಅಲ್ಲದೆ ಎಂಜಿನಿಯರಿಂಗ್ ಹುಡುಗರೆಂದು ಕಾರಿನಲ್ಲಿ ಓಟಿಂಗ್ ಬೂತಿಗೆ ಕರೆದೊಯ್ದು ಮತ್ತೆ ವಾಪಸ್ ಬಿಡುತ್ತಿದ್ದರು.

ಬರೀ ಥ್ರಿಲ್ ಬಯಸುತ್ತಿದ್ದ ಆ ವಯಸ್ಸಿನಲ್ಲಿ ಇದೂ ಒಂಥರಾ ಥ್ರಿಲ್ಲಾಗಿರುತ್ತಿದ್ದಿತು. ಥ್ರಿಲ್ಲಿಗಾಗಿ ಏನೇನೋ ಮಾಡುತ್ತಿದ್ದ ಅಂದಿನ ವಯಸ್ಸು ಈ ರೀತಿಯ ಪ್ರಾಕ್ಸಿ ಓಟು ಹಾಕುವ ಅವಕಾಶವನ್ನು ಬಿಡುವುದೇ? ಅಂದು ನಾನು "ಸತ್ತವರಿಗೆ ಸಂತಾಪ" ಎಂದು ಮತ್ತು ನಮಗೆ ಮದ್ಯವನ್ನು ಸಪ್ಲೈಸಿದವರ ಪರವಾಗಿ ಕಾಂಗ್ರೆಸ್ಸಿಗೆ ನಿಯತ್ತಾಗಿ(?) ಓಟಿಸಿದ್ದರೆ, ನನ್ನ ಸ್ನೇಹಿತ ದಶಕುಮಾರ್ ಕಾಂಗ್ರೆಸ್ ರಮ್ ಕುಡಿದು ಜನತಾ ಪರಿವಾರದ ದೇವೇಗೌಡರಿಗೆ ಓಟಿಸಿದ್ದ! ಕೇಳಿದ್ದಕ್ಕೆ "ಆ ನನ್ಮಕ್ಕಳು ರಮ್ ಕೊಟ್ರೆ ಅದನ್ನು ಸುಮ್ನೆ ಇಸ್ಕೊಂಡು ನಮಗೆ ಸರಿ ಎನಿಸಿದವರಿಗೆ ಓಟು ಹಾಕಬೇಕು" ಎಂದು ಭಾರತೀಯ ಶ್ರೀಸಾಮಾನ್ಯನನ್ನು ಅದ್ಭುತವಾಗಿ ಪ್ರತಿನಿಧಿಸಿದ್ದ!

ಇರಲಿ, ಇಂದು ಆ ರೀತಿಯ ಕತ್ತಲು ರಾತ್ರಿಗಳಿಲ್ಲ. ಚುನಾವಣಾ ಆಯೋಗ, ಈ ಚುನಾವಣಾ ವೈಭವವನ್ನು ಸಂಪೂರ್ಣ ಅಳಿಸಿಹಾಕಿದೆ. ಒಂದು ರೀತಿ ಮದುವೆಗಳು ಶ್ರಾದ್ಧಗಳಂತೆ ಕಂಡಂತೆ! ಮೇಲ್ನೋಟಕ್ಕೆ ಇದು ಎಲ್ಲಾ ಅಭ್ಯರ್ಥಿಗಳಿಗೂ ಸಮಾನ ಅವಕಾಶವನ್ನು ಕೊಟ್ಟು, ಮತದಾರರು ಯಾವುದೇ ರೀತಿಯಿಂದ ಆಮಿಷಗಳಿಗೋ, ಪೊಳ್ಳು ಭರವಸೆಗಳಿಗೋ, ಭಾಷಣವೀರರ ಮೋಡಿಗೆ ಬಲಿಯಾಗದಂತೆ ಕಾಪಾಡುತ್ತಿದೆ ಎನಿಸಿದರೂ, ಅದಕ್ಕೆ ಅನೇಕ ಪರ್ಯಾಯಗಳನ್ನು ನಮ್ಮ ರಾಜಕಾರಣಿಗಳು ಅದಾಗಲೇ ಕಂಡುಕೊಂಡಿದ್ದಾರೆ. ಈಗ ಹೆಂಡ, ಪಂಚೆ, ಸೀರೆಗಳಿಲ್ಲ. ಎಲ್ಲಾ ಕ್ಯಾಷ್. ಪ್ರತಿಯೊಂದು ಓಟಿಗೆ ಒಂದು ಸಾವಿರದಿಂದ ಮೂರು ಸಾವಿರದವರೆಗೆ ಬೆಲೆ ನಿಗದಿಯಾಗುತ್ತಿದೆ. ಹಂಚಿಕೆಗೆ ಸ್ತ್ರೀಶಕ್ತಿ ಸಂಘಗಳು, ಕನ್ನಡ ಸಂಘಗಳು, ಜಾತಿ/ಧಾರ್ಮಿಕ ಸಂಸ್ಥೆಗಳು, ಪೀಠಗಳು....ಈ ಸಂಘಟನೆಗಳು, ಆ ಸಂಘಟನೆಗಳು! ಪ್ರತಿಯೊಂದು ಸಂಘಕ್ಕೂ ಅದರ ಸದಸ್ಯರ ಲೆಕ್ಕವ್ಹಿಡಿದು ಹಣ ಹಂಚಿಕೆಯಾಗುತ್ತಿದೆ. ಅದ್ಯಾವ ಸದುದ್ದೇಶಕ್ಕೆ ಸ್ಥಾಪಿತಗೊಂಡಿದ್ದವೋ ಈ ಸಂಘ ಸಂಘಟನೆಗಳು ಇಂದು ತತ್ಕಾಲಿಕವಾಗಿ ಹಣ ಹಂಚುವ ಏಜೆಂಟರಾಗುತ್ತಿವೆ. ಬಹುಶಃ ಈ ಸಂಘಟನೆಗಳಾಗಲೇ ತಮ್ಮ ಮೂಲ ಉದ್ದೇಶಕ್ಕಿಂತ ರಾಜಕಾರಣಿಗಳ ಬಾಲಬಡುಕತನವೇ ಉತ್ತಮ ಬಿಸಿನೆಸ್/ಸೇವೆ ಎಂದು ಆಗಲೇ ಕಂಡುಕೊಂಡಿರಬೇಕು.

ಒಟ್ಟಾರೆ ಅಂದು ಹುಡುಗು ಬುದ್ಧಿಯ ನಾವುಗಳು ಥ್ರಿಲ್ಲಿಗಾಗಿ ಏನೋ ಮಾಡಿದ್ದನ್ನು ಇಂದು ಜನ ಸಂಘಟನೆಯಾಗಿ ಮಾಡುತ್ತಿದ್ದಾರೆ!

ಅದರಲ್ಲೂ ಈಗ ಸಂಘಟನೆಗಳು ಜಾತಿ, ಒಳಜಾತಿ, ಉಪಜಾತಿಗಳಿಗೆಲ್ಲಾ ಒಂದೊಂದು ಸಂಘ, ಸಂಸ್ಥೆ, ಪೀಠಗಳನ್ನು ಸ್ಥಾಪಿಸಿಕೊಂಡು ಓಟಿನ ಬೇಟೆ, ಅಧಿಕಾರ ಹಂಚಿಕೆಯಲ್ಲಿ ತೊಡಗಿವೆ. ಒಂದು ರೀತಿಯಲ್ಲಿ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು!

ಮೊದಲೆಲ್ಲಾ ಜನ ತತ್ವಸಿದ್ಧಾಂತಗಳಿಗೆ ಓಟು ಹಾಕುತ್ತಿದ್ದರೆ, ಈಗ ಪ್ರತಿಯೊಂದಕ್ಕೂ ಜಾತಿಗಳೇ ಪ್ರಾಮುಖ್ಯವಾಗಿ ಜಾತಿ ಪದ್ಧತಿ ಇನ್ನೂ ಬಲವಾಗಿ ಬೇರೂರುತ್ತಿದೆಯೇನೋ ಎನಿಸುತ್ತದೆ. ಈ ಮೊದಲೆಲ್ಲಾ ನೀವು ಇಷ್ಟೊಂದು ಉಪಜಾತಿಗಳ ಹೆಸರುಗಳನ್ನು ಕೇಳಿದ್ದೆದೆಯೇ? ಒಟ್ಟಾರೆ ಯಾವುದನ್ನು ತೊಲಗಿಸಿಬೇಕೆಂದು ಭಾರತ ನಾಯಕರುಗಳು ಹೋರಾಡಿದ್ದರೋ ಅವರ ಸಂತತಿ ಅದನ್ನೇ ತ್ವರಿತವಾಗಿ ಭದ್ರವಾಗಿ, ಸ್ಥಿರವಾಗಿ ನೆಲೆಯೂರಿಸುತ್ತಿದ್ದಾರೆ. ಭ್ರಷ್ಟಾಚಾರ, ಜಾತೀಯತೆ, ಸ್ವಜನಪಕ್ಷಪಾತ ಇವುಗಳೆಲ್ಲಾ ಈಗ ಸಂಘ/ಸಂಘಟನೆಯ ರೂಪವನ್ನು ತಾಳಿ ಕತ್ತಲು ರಾತ್ರಿ ಮಾತ್ರವಿದ್ದ ಹಣ ಹಂಚಿಕೆ, ಓಲೈಕೆಗಳೆಲ್ಲಾ ದಿನನಿತ್ಯವೂ ಹಗಲಿನಲ್ಲೇ ರಾಜರೋಷವಾಗಿ ವ್ಯವಸ್ಥೆಯ ಅಂಗವಾಗಿ ನಡೆಯುವಂತಾಗಿದೆ.

ಭಾರತಕ್ಕಾಗಿ ನನ್ನ ಹೃದಯ ಮಿಡಿಯುತ್ತದೆ!
(ಇದು ಒಬ್ಬ ದಿವಂಗತ ರಾಜಕಾರಣಿಯ ಹಳೆಯ ಚುನಾವಣಾ ಉದ್ಘೋಷ! ಆದರೆ ಇದು ನಮ್ಮ ನಿಮ್ಮೆಲ್ಲರ ಹೃದಯಾಂತರಾಳದ ನಿತ್ಯ ನರಳಾಟ).

ಅಣಕ:

ಚುನಾವಣೆಯ ಈ ಬಿಸಿಯಲ್ಲಿ ನೀವುಗಳು ಖಂಡಿತವಾಗಿಯೂ "ಎಡಗೈ" ಮತ್ತು "ಬಲಗೈ" ಎಂಬ ದಲಿತ ಜಾತಿಯ ಎರಡು ಉಪಜಾತಿಗಳನ್ನು ಕೇಳಿರುತ್ತೀರಿ. ಹಾಗೆ ನೋಡಿದರೆ ಈ ಎಡಗೈ/ಬಲಗೈ ಕೇವಲ ದಲಿತರಿಗಷ್ಟೇ ಅಲ್ಲದೇ ಪ್ರಪಂಚದೆಲ್ಲಾ ಮಾನವ ಜೀವಿಗಳಿಗೂ ಅನ್ವಯಿಸುತ್ತದೆ ಎಂದರೆ ಆಶ್ಚರ್ಯವಾಗುವುದಲ್ಲವೇ?

ಪ್ರಪಂಚದೆಲ್ಲೆಡೆಯ ಜನ ಶೌಚಕ್ಕೆ ಎಡಗೈ ಬಳಸಿ "ಎಡಗೈ" ಎನಿಸಿಕೊಂಡರೆ, ಅಮೇರಿಕನ್ನರು ಬಲಗೈ ಬಳಸಿ "ಬಲಗೈ" ಪಂಗಡದವರಾಗಿದ್ದಾರೆ.

ಎಲ್ಲದಕ್ಕೂ ಅಮೇರಿಕನ್ನರನ್ನು ಕಾಪಿ ಮಾಡುವ ಭಾರತೀಯರ ಚಟ ಎಲ್ಲಾ ಓಕೆ. ಆದರೆ ಈ ವಿಷಯದಲ್ಲಿ ಇನ್ನೂ ’ಎಡಗೈ’ ಯಾಕೆ?

ದಾವಣಗೆರೆಯ ಧಣಿಯೂ ಮತ್ತು ಮಂಡಕ್ಕಿ ಭಟ್ಟಿ ಸಾಬಿಯೂ!

ಮೊನ್ನೆ ದಾವಣಗೆರೆಯಲ್ಲಿ ಕಾಂಗ್ರೆಸ್ ಟಿಕೆಟ್ ತಪ್ಪಿದ ಘಟನೆಯ ಬಗ್ಗೆ ಹಲವಾರು ಓದುಗ ಮಿತ್ರರು ವಿಚಾರಿಸಿ, ದಾವಣಗೆರೆಯವರಾದ ನೀವು ಈ ಕುರಿತಾಗಿ ಒಂದು ಲೇಖನ ಬರೆಯಿರೆಂದೂ, ಅದಕ್ಕೂ ಮುಂಚೆ ಇಲ್ಲಿನ ದುರ್ಗಾಂಬಿಕಾ ಜಾತ್ರೆಗೆ ಕೋಣನ ಬಲಿ ನಡೆದುದನ್ನು ಖಂಡಿಸಿ ಒಂದು ಲೇಖನವನ್ನು ಬರೆಯಿರೆಂದು ಓದುಗ ಮಿತ್ರ ಸ್ವಾಮಿಯವರೂ ಕೇಳಿದ್ದರು. ಈಗ ಚುನಾವಣೆಯ ಸಮಯವಾದುದರಿಂದ ಮತ್ತು ಈ ವಿಷಯವಾಗಿ ನಮ್ಮ ಜನಗಳನ್ನು ಜಾಗೃತಗೊಳಿಸಬೇಕಾದ(??) ತೀವ್ರ ಅನಿವಾರ್ಯತೆ ಇರುವುದರಿಂದ ಚುನಾವಣಾ ಸಂಬಂಧಿಯಾಗಿ ಬರೆಯೋಣವೆಂದು ನಿರ್ಧರಿಸಿ ಮತ್ತೆ ದಾವಣಗೆರೆಯ ಬಗ್ಗೆ ಬರೆಯುತ್ತಿರುವೆ. ಇನ್ನೊಮ್ಮೆ ಖಂಡಿತವಾಗಿಯೂ ಅಲ್ಲಿನ ದುರ್ಗಾಂಬಿಕಾ ದೇವಿ ಜಾತ್ರೆಯ ಪ್ರಾಣಿಬಲಿಯನ್ನು ಖಂಡಿಸಿಯೋ/ಪ್ರಶಂಸಿಸಿಯೋ ಬರೆಯುತ್ತೇನೆ. ಈ ಎರಡೂ ವಿಷಯಗಳೂ ನನಗೆ ಬಹು ಹತ್ತಿರ. ಏಕೆಂದರೆ ಈ ದಾವಣಗೆರೆ ಧಣಿಯ ಮನೆಯ ಹಿಂದೆಯೂ ಮತ್ತು ದುರ್ಗಾಂಬಿಕಾ ದೇವಸ್ಥಾನದ ಬೀದಿಯೂ ಆದ ಹಳೇಪೇಟೆ ನನ್ನ ದಾವಣಗೆರೆ ವಿಳಾಸ!

ವೃತ್ತಿಯಲ್ಲಿ ದಿನಸೀ ಮಂಡಿ ವರ್ತಕರಾದ ಧಣಿಗಳು ಕ್ರಮೇಣ ಸರಸ್ವತೀ ವರ್ತಕರಾಗಿ ಹೆಚ್ಚು ಹೆಚ್ಚು ಪ್ರವರ್ಧಮಾನಕ್ಕೆ ಬಂದುದು ನಿಮ್ಮೂರಿನ ಯಾವುದೇ ಪುಢಾರಿಯ ಕತೆಯಂತೆಯೇ ಇದೆ. ಈ ಲೇಖನ ಈ ಧಣಿಗಳ ಸಮಾಜಸೇವೆಯನ್ನು ಕುರಿತಾದುದರಿಂದ ಅದನ್ನು ಅಷ್ಟಕ್ಕೇ ಸೀಮಿತಗೊಳಿಸೋಣ. ಸುಮಾರು ಇಪ್ಪತ್ತಾರು/ಇಪ್ಪತ್ತೇಳು ವರ್ಷಗಳ ಹಿಂದೆ ಈ ಧಣಿಗಳ ಅಂದಿನ ವಾಸದ ಮನೆಯ ಹಿಂದೆ ಅವರ ಕೊಟ್ಟಿಗೆ ಇತ್ತು. ಧಣಿಗಳ ಹಿರಿಯ ಸೋದರರು ಇಲ್ಲಿ ಹಲವಾರು ಎಮ್ಮೆ, ಹೈಬ್ರಿಡ್ ಹಸುಗಳನ್ನು ಸಾಕಿದ್ದರು. ದಿನನಿತ್ಯ ಇವರ ಕೊಟ್ಟಿಗೆ ಶುದ್ಧಿಯಾಗುವಾಗ ಈ ಎಮ್ಮೆ/ಹಸುಗಳನ್ನು ತತ್ಕಾಲಿಕವಾಗಿ ಪಕ್ಕದ ಹಗೇದಿಬ್ಬ ಸರ್ಕಲ್ ಕಟ್ಟೆಯ ಕಲ್ಲಿನ ಕಂಬಗಳಿಗೆ ಕಟ್ಟುತ್ತಿದ್ದರು. ಈ ಎಲ್ಲಾ ಎಮ್ಮೆ/ಹಸುಗಳು ಹಗೇದಿಬ್ಬ ಸರ್ಕಲ್ಲಿನ ಸುತ್ತಲೂ ಗಂಜಲ/ಸಗಣಿಯನ್ನು ಹುಯ್ದು ಈ ಸರ್ಕಲ್ಲಿಗೆ ಒಂದು ವಿಶಿಷ್ಟ ಪರಿಮಳವನ್ನು ಪರ್ಮನೆಂಟಾಗಿ ಪಸರಿಸಿದ್ದವು. ದಾವಣಗೆರೆಯ ಧರ್ಮಬೀರು ಜನಗಳು ಗಂಜಲ ಹುಯ್ಯುವ ಯಾವುದೇ ಹಸು ಕಂಡರೂ ಅದರ ಬಾಲವನ್ನೆತ್ತಿ ಗಂಜಲವನ್ನು ತಮ್ಮ ಅಂಗೈಯಲ್ಲಿ ಹಿಡಿದು ಸೊರ್ರನೇ ಹೀರುವವರಾಗಿದ್ದರೂ, ಧಣಿಗಳ ಈ ಹಸುಗಳು ಹೈಬ್ರಿಡ್ ತಳಿಯಾದುದರಿಂದ ಇವುಗಳಿಗೆ ಆ ಭಾಗ್ಯವಿರಲಿಲ್ಲ. ಈಗ ಧಣಿಗಳ ಆ ಹಿರಿಯ ಸೋದರರಿಲ್ಲ. ಹಾಗೆಯೇ ಈ ಎಮ್ಮೆ/ಹಸುಗಳು ಕೂಡಾ ಇಲ್ಲವಾಗಿವೆ. ಹಗೇದಿಬ್ಬ ಸರ್ಕಲ್ಲಿನಲ್ಲಿರುತ್ತಿದ್ದ ಆ ದಿವ್ಯ ಗಂಜಲದ ಪರಿಮಳ, ಈಗ ಅಲ್ಲಿರುವ ಮಾನವ ಮೂತ್ರಿ ಮತ್ತು ಆ ಎಮ್ಮೆ / ಹಸುಗಳ ಸ್ಥಾನವನ್ನು ಆಕ್ರಮಿಸಿಕೊಂಡಿರುವ ಹಂದಿಗಳ ಮಲಮೂತ್ರದ ಪರಿಮಳದಿಂದ ಬದಲಾಯಿಸಲ್ಪಟ್ಟಿದೆ. ಆ ಹಳೆಯ ಗಂಜಲ / ಸಗಣಿಯ ನೆನಪುಗಳನ್ನು ಯಾರಾದರೂ ಮರೆತಾರೆಂದು ಧಣಿಗಳ ಗುಲಾಮರು ಆ ಪ್ರಾಣಿಪ್ರಿಯ ಧಣಿಯಣ್ಣನವರ ಸ್ಥಿರನೆನಪಿಗಾಗಿ "ಹಗೇದಿಬ್ಬ" ಎಂಬ ಜನಪದ ಸೊಗಡಿನ ಹೆಸರನ್ನು "ಓಲ್ಡ್ ಫ್ಯಾಷನ್" ಎಂದು ಅಳಿಸಿ, ಧಣಿಗಳ ಅಣ್ಣನವರ ಹೆಸರನ್ನು ಇಟ್ಟಿದ್ದಾರೆ!

ಇರಲಿ, ಈ ಶಾಶ್ವತ ಕೊಟ್ಟಿಗೆ ಮತ್ತು ತತ್ಕಾಲಿಕ ಕೊಟ್ಟಿಗೆ (ಹಗೇದಿಬ್ಬ ಸರ್ಕಲ್) ನಡುವೆ ಧಣಿಗಳ ಕಾರ್ ಶೆಡ್ ಒಂದು ಸರ್ಕಲ್ಲಿನೆಡೆ ಮುಖ ಮಾಡಿ ಇದ್ದಿತು. ಈ ಕಾರ್ ಶೆಡ್ ಮತ್ತು ಅದರ ಪಕ್ಕದಲ್ಲಿದ್ದ ಬಾಬಣ್ಣನ ಅಂಗಡಿ(ಈಗ ಹಲುವಾಗಲದ ಹಾಲಪ್ಪನವರ ಅಂಗಡಿ) ಮಧ್ಯದ ಓಣಿ, ಧಣಿಗಳ ಸೋದರ ಸಂಬಂಧಿಗಳ ಕಟ್ಟಡದಲ್ಲಿದ್ದ ಬಡ ಬಾಡಿಗೆದಾರರ ಓಡಾಟದ ಹಾದಿಯಾಗಿತ್ತು. ಈ ಹಾದಿಯಾಗಿ ನಾನು ಅನೇಕ ಸಾರಿ ಈ ಬಾಬಣ್ಣನ ಅಂಗಡಿಗೆ ಚಿಕ್ಕಪುಟ್ಟ ದಿನಸಿ ಸಾಮಾನು ತರಲು ಹೋಗುತ್ತಿದ್ದೆ. ಈ ಬಾಬಣ್ಣನ ಅಂಗಡಿಯ ಮುಂದಿನಿಂದ ಸುಮಾರು ೪ ಅಡಿ ಅಗಲ, ೫ ಅಡಿ ಆಳದ ದೊಡ್ಡ ಚರಂಡಿಯೊಂದು ಹಾದು ಹೋಗುತ್ತಿತ್ತು. ಸಾಕಷ್ಟು ದೊಡ್ಡದಿದ್ದ ಈ ಚರಂಡಿ ದಾವಣಗೆರೆಯ ಪ್ರಮುಖ ಚರಂಡೀ ಕಾಲುವೆಯಾಗಿದ್ದಿತೆಂದರೆ ಅದರ ಸೈಜನ್ನು ನೀವೇ ಊಹಿಸಿಕೊಳ್ಳಿ.

ಈ ಚರಂಡಿಯ ಆಳದಲ್ಲಿ, ಹರಿಯುವ ಕೊಚ್ಚೆಯ ಒಂದೆರಡು ಅಡಿಯಷ್ಟು ಎತ್ತರದಲ್ಲಿ ಒಂದು ಸರ್ಕಾರೀ ನಲ್ಲಿಯಿದ್ದಿತು. ಹರಿಯುವ ಕೊಚ್ಚೆ ತಗಲದಂತೆ ತುಸು ಎತ್ತರದ ಕಲ್ಲೊಂದನ್ನು ಹಾಕಿ ಅಲ್ಲಿನ ಬಡಜನರು ಚರಂಡಿಯಲ್ಲಿಳಿದು, ಆ ಕಲ್ಲಿನ ಮೇಲೆ ತಮ್ಮ ಕೊಡವನ್ನೂ, ತಮ್ಮ ಕಾಲುಗಳನ್ನೂ ಕೊಚ್ಚೆಯ ನೀರು ತಗಲದಂತೆ ಸರ್ಕಸ್ ಮಾಡುತ್ತ ನಿಂತು ತಮ್ಮ ದೈನಂದಿನ ನೀರನ್ನು ಹಿಡಿದಿಟ್ಟುಕೊಳ್ಳಬೇಕಿತ್ತು. ನನ್ನ ವಾರಿಗೆಯ ಹುಡುಗರ ಪೋಷಕರು ಅಲ್ಲಿಂದ ನೀರನ್ನು ತುಂಬಿಕೊಳ್ಳುವುದನ್ನು ನಿತ್ಯವೂ ನೋಡುತ್ತಿದ್ದ ನಾನು ಅವರುಗಳು ಅದು ಹೇಗೆ ಆ ಕೊಚ್ಚೆಯ ಚರಂಡಿಯಿಂದ ನೀರು ಹಿಡಿಯುವರೋ ಎಂದು ಹೇಸಿಗೆಯಾಗುತ್ತಿತ್ತು. ಆದರೆ ಬಡತನದ ಅನಿವಾರ್ಯ, ಅವರುಗಳಿಗೆ ಆ ನಲ್ಲಿಯೊಂದೇ ನೀರಿನ ಆಸರೆ, ಹಾಗಾಗಿ ಅವರೆಲ್ಲಾ ನಿಸ್ಸಹಾಯಕರಾಗಿದ್ದರು! ಅದಲ್ಲದೇ ಆ ನೀರನ್ನು ಹಿಡಿಯಲು ಆಗಾಗ್ಗೆ ಯುದ್ಧಗಳನ್ನೇ ಮಾಡಬೇಕಿತ್ತು! ಅದಾಗಲೇ ಸಾರ್ವಜನಿಕ ಸೇವೆಯಲ್ಲಿದ್ದ ಧಣಿಗಳು ಆಗಲೇ ದಾವಣಗೆರೆ ನಗರಸಭೆಯ ಅಧ್ಯಕ್ಷರಾಗಿ ಮಾಜಿಯಾಗಿದ್ದರು. ಪಾಪ ಅವರ ಕಣ್ಣಿಗೆ ಅವರ ಕಟ್ಟಡದಲ್ಲಿಯೇ ಬಾಡಿಗೆಯಿದ್ದ ಈ ಬಡವರ ನೀರಿನ ಬವಣೆ ಕಣ್ಣಿಗೆ ಬಿದ್ದಿರಲಿಲ್ಲ, ಬಿದ್ದಿದ್ದರೂ ಬೀಡಿ ಸೇದುವ ಈ ಬಡವರು ಹೀಗೆಯೇ ಇರಬೇಕೆಂದು ೫೫೫ ಸಿಗರೇಟಿನ ಧಣಿಗಳು ತೀರ್ಮಾನಿಸಿದ್ದರೇನೋ!

ಆಗ ನನಗೆ ಎಂಟು/ಹತ್ತರ ವಯಸ್ಸು. ಕಳೆದ ಈ ಇಪ್ಪತ್ತೇಳು ವರ್ಷಗಳಲ್ಲಿ ಧಣಿಗಳು ಸಾಕಷ್ಟು ಸಂಸ್ಥೆಗಳನ್ನು ಸ್ಥಾಪಿಸಿ, ಸ್ವತಃ ತಾವು ದಾವಣಗೆರೆಯ ಸಂಸದ/ಶಾಸಕರಾಗಿ, ತಮ್ಮ ಮಕ್ಕಳನ್ನು ಮಂತ್ರಿಗಳನ್ನಾಗಿಸಿ, ತಮ್ಮ ಪಟಾಲಂನ ಎಲ್ಲಾ ಸದಸ್ಯರಿಗೆ ಒಂದೊಂದು ಸ್ಥಾನಮಾನಗಳನ್ನು ಕೊಡಮಾಡಿಸಿ ತಾವೂ ಕೂಡ ಗೌರವ ಡಾಕ್ಟರೇಟ್ ಪಡೆದಿದ್ದಾರೆ.

ಆದರೆ ಸುಮಾರು ಮೂವತ್ತು ವರ್ಷಗಳ ತರುವಾಯ ಕೂಡ ಆ ನಲ್ಲಿ ಈಗಲೂ ಅಲ್ಲಿದೆ. ಜನ ಈಗಲೂ ಆ ಚರಂಡಿಯಲ್ಲಿ ಇಳಿದೇ ನೀರು ತುಂಬುತ್ತಿದ್ದಾರೆ. ನೀವೇ ಹೇಳಿ, ಇದು ಕೊಡುಗೈ ದಾನಿಗಳ ವರಪ್ರಸಾದವೋ ಅಥವಾ ಬಡವರೆದುರು ದಾವಣಗೆರೆ ಧಣಿಗಳ ದರ್ಪವೋ?

ಲಾಭದ ವಾಸನೆಯಿಲ್ಲದೇ ಯಾವುದೇ ಕೆಲಸಕ್ಕೆ ದಾವಣಗೆರೆ ವರ್ತಕರು ಕೈಹಾಕುವುದಿಲ್ಲವೆಂಬ ನನ್ನ ಮೈಸೂರು ಸ್ನೇಹಿತನ ಅಭಿಪ್ರಾಯಕ್ಕೆ ಧಣಿಗಳೇನೂ ಹೊರತಾಗಿರಲಿಲ್ಲ, ಹೊರತಾಗಿಲ್ಲ.

ಇನ್ನು ದಾವಣಗೆರೆ ಸಮಾಜಕ್ಕೆ ಇವರ ಕೊಡುಗೆಯನ್ನು ಯಾವ ಪೂರ್ವಾಗ್ರಹವಿಲ್ಲದೇ ಅವಲೋಕಿಸುವ ಮುನ್ನ, ಇವರ ಅಧಿಪತ್ಯದಲ್ಲಿರುವ ಬಾಪೂಜಿ ಸಂಸ್ಥೆಯನ್ನೇ ಗಮನಿಸೋಣ. ನೀವು ಹೇಗಾದರೂ ಎಣಿಸಿಕೊಂಡು ಬನ್ನಿ. ನಿಮ್ಮ ಕಣ್ಣಿಗೆ ರಾಚುವಂತೆ ಕಾಣುವುದು, ಈ ಸಂಸ್ಥೆಯಲ್ಲಿನ ನೌಕರರಲ್ಲಿ ಶೇಕಡಾ ೫೦%ಕ್ಕೂ ಹೆಚ್ಚು ನೌಕರರು ಧಣಿಗಳ ಧರ್ಮದ ಸಾಧು ವೀರಶೈವ ಸಮಾಜದವರಾಗಿರುವುದು! ಇನ್ನು ಧಣಿಗಳ ಓಟಿನ ಬ್ಯಾಂಕಿಗಾಗಿ ಅಲ್ಪಸಂಖ್ಯಾತ ಮುಸಲ್ಮಾನರು, ಪರಿಶಿಷ್ಟರು....ಇತ್ಯಾದಿ, ಇತ್ಯಾದಿ. ಸರಿ, ಬಾಪೂಜಿ ಸಂಸ್ಥೆಯೊಂದು ಜಾತಿ/ಧರ್ಮದ ಸಂಸ್ಥೆಯಾಗಿದ್ದರೆ ಈ ಅನುಪಾತ ಪ್ರಶ್ನಾತೀತ. ಆದರೆ ಇದು ಸಾರ್ವಜನಿಕ ಸಂಸ್ಥೆ! ಇಲ್ಲಿ ಅನ್ಯ ವೀರಶೈವರೂ ಇನ್ನಿತರ ಮುಂದುವರಿದ ಜಾತಿಯ ವ್ಯಕ್ತಿಗಳೇನಾದರೂ ಕಂಡರೆ, ಅವರುಗಳೋ ಅಥವಾ ಅವರ ಪೋಷಕರೋ ಈ ಧಣಿಗಳ ಸೇವೆಯನ್ನು ಅವಿರತವಾಗಿ ಮಾಡಿದ್ದಾರೆಂದೇ ಅರ್ಥ! ಅರ್ಥಾತ್ ಈ ಅನ್ಯಕೋಮಿಗರು ಇವರ ಮನೆಯಲ್ಲಿ, ಅಂಗಡಿಯಲ್ಲಿ ಅಥವಾ ಕೊಟ್ಟಿಗೆ, ಹೊಲ/ತೋಟಗಳಲ್ಲಿ ಅವಿರತವಾಗಿ ಅನುಪಮ ಸೇವೆಯನ್ನು ಸಲ್ಲಿಸಿದ ಹಿನ್ನೆಲೆಯವರೆಂದೇ ಅರ್ಥ. ಈ ರೀತಿಯ ಸೇವಾ ಅರ್ಹತೆ, ಇಲ್ಲಾ ಸಂಬಂಧಾರ್ಹತೆಗಳಿದ್ದರೆ ಮಾತ್ರ ಬಾಪೂಜಿ ಸಂಸ್ಥೆಯಲ್ಲಿ ಉದ್ಯೋಗ! ಇದು ಇವರ ಸಮಾಜಸೇವೆಯ ಇನ್ನೊಂದು ಪರಿ. ಯಾವ ಸಮಾಜವೆಂದು ಮಾತ್ರ ಕೇಳಬೇಡಿ. ಒಟ್ಟಾರೆ ಒಂದು ಸಮಾಜ.

ಇಲ್ಲಿ ಅತೀ ತಮಾಷೆಯ ಸಂಗತಿಯೆಂದರೆ ಈ ಸಾಧು ಸಮಾಜದ ಬಹುಪಾಲು ಬಾಪೂಜಿ ಸಂಸ್ಥೆಯ ನೌಕರರು, ಧಣಿಗಳು ತಮಗೆ "ಮಾವನವರು" / "ಕಕ್ಕ (ಚಿಕ್ಕಪ್ಪ)/ದೊಡ್ಡಪ್ಪ"ನವರಾಗಬೇಕೆಂದು ಹೇಳಿಕೊಳ್ಳುತ್ತಾರೆ. ಈ ಬಾದರಾಯಣ ಸಂಬಂಧದಲ್ಲಿ ಎಂತಹ ಸಮಾನತೆಯೆಂದರೆ ಅದು ಬಾಪೂಜಿ ಬ್ಯಾಂಕಿನ ಒಬ್ಬ ಅಟೆಂಡರನಿರಬಹುದು ಅಥವಾ ಬಾಪೂಜಿ ಎಂಜಿನಿಯರಿಂಗ್ / ಮೆಡಿಕಲ್ ಕಾಲೇಜುಗಳ ಪ್ರಾಶುಂಪಾಲರಿರಬಹುದು. ಎಲ್ಲರಿಗೂ ಧಣಿಗಳು ಸಂಬಂಧಿಗಳೇ! ಆದರೆ ಇವರ್‍ಯಾರೂ ಧಣಿಗಳ ಎದುರಿನಲ್ಲಿ ಅವರನ್ನು ಮಾವ/ಕಕ್ಕ/ದೊಡ್ಡಪ್ಪ ಎಂದು ಸಂಭೋಧಿಸುವುದಿಲ್ಲ. ಯಾಕೆಂದರೆ ಧಣಿಗಳು "ಬಾಸ್" ಎಂದು ಕರೆಸಿಕೊಳ್ಳಲು ಇಚ್ಚಿಸುತ್ತಾರಂತೆ. ಕನ್ನಡ ಸಿನಿಮಾಗಳನ್ನು ನೋಡಿ ಬೆಳೆಯುತ್ತಿದ್ದ ನಾನು, ಸಿನಿಮಾಗಳಲ್ಲಿ ಖಳನಾಯಕರುಗಳು "ಬಾಸ್" ಎಂದು ಕರೆಸಿಕೊಳ್ಳಲು ಇಚ್ಚಿಸುವಂತೆ ಇವರೇಕೆ ಹೀಗೆ ಕರೆಸಿಕೊಳ್ಳಲಿಚ್ಛಿಸುವರೋ(?) ಎಂದು ಆಶ್ಚರ್ಯಚಕಿತನಾಗುತ್ತಿದ್ದೆನು!

ಇವರ ಇನ್ನಿತರೇ ಸಮಾಜಸೇವೆಯೆಂದರೆ ತಮ್ಮ ಅತೀ ಹೆಣ್ಣು ಹಡೆದ ಬಂಧುಗಳ ಹೆಣ್ಣುಮಕ್ಕಳಿಗೆ ತಮ್ಮ ಸಂಸ್ಥೆಯಲ್ಲಿ ಕೆಲಸಗಳನ್ನು ಕೊಟ್ಟೋ ಅಥವಾ ಆ ಹೆಣ್ಣುಗಳನ್ನು ಮದುವೆಯಾಗುವವರಿಗೆ ಉದ್ಯೋಗಗಳನ್ನು ಕೊಟ್ಟೋ ವರದಕ್ಷಿಣೆಯ ಭೂತವನ್ನು ದೂರಮಾಡಿರುವುದು, ನಗರದೇವತೆ ದುರ್ಗಾಂಬಿಕಾದೇವಿಯ ಪ್ರಾಣಿಬಲಿಯನ್ನೂ ಒಳಗೊಂಡು ಯಾವುದೇ ಅಡೆತಡೆಯಿಲ್ಲದಂತೆ ಧರ್ಮಕಾರ್ಯಗಳು ನೆರವೇರುವಂತೆ ಸಹಾಯಹಸ್ತವನ್ನು ಚಾಚುವುದು, ಕೇವಲ ಒಂದು ನಗರಸಭೆ ಚುನಾಯಿತ ಅವಧಿಯೊಳಗೆ ತಮ್ಮ ಪಕ್ಷದ ಎಲ್ಲಾ ಪ್ರಮುಖ ಬೆಂಬಲಿಗರನ್ನು, ಓರ್ವ ಪಕ್ಷೇತರನನ್ನೂ ಒಳಗೊಂಡು ಎಲ್ಲರನ್ನೂ ದಾವಣಗೆರೆ ನಗರಸಭೆ ಅಧ್ಯಕ್ಷರನ್ನಾಗಿ ಮಾಡಿ "ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು" ಎಂಬ ತತ್ವವನ್ನು ಅನುಷ್ಟಾನಗೊಳಿಸಿರುವುದು, ತಮ್ಮ ಪುತ್ರನ ಮಂತ್ರಿಗಿರಿಯಲ್ಲಿ ಧಣಿಗಳು ತಮ್ಮ ಸೋದರ ಸಂಬಂಧಿಗಳ ಬೂದಾಳ್ ರಸ್ತೆಯಲ್ಲಿದ್ದ ಹೊಲಗಳನ್ನು ಜನತಾಮನೆಗೆ ದೊಡ್ಡಬೆಲೆಯ ಲಾಭಕ್ಕೆ ಕ್ರಯವಾಗಿಸಿ ತಮ್ಮ ಬಡಬಂಧುಗಳನ್ನು ಕಾಪಾಡಿದುದು ಇನ್ನೂ ಹತ್ತು ಹಲವು.

ಇನ್ನು ದಾವಣಗೆರೆ ಬೆಳೆದಂತೆ ಅಲ್ಲಿನ ನೀರಿನ ಕೊರತೆಯೂ ಬೆಳೆಯುತ್ತ ಅದರ ಸರಬರಾಜು ಹರಿಹರದ ತುಂಗಭದ್ರ ನದಿಯಿಂದ ಒಳಗೊಂಡು ಟಿ.ವಿ. ರಿಲೇ ಸ್ಟೇಷನ್ ಹತ್ತಿರ ಇನ್ನೊಂದು ಕೆರೆಯಾಗಿ ನಂತರ ಇವರ ಕಾಲದಲ್ಲಿ ಕುಂದುವಾಡದ ಕೆರೆಯೂ ಕೂಡ ನೀರು ಸರಬರಾಜಿಗೆ ಕಾಲಕ್ಕನುಗುಣವಾಗಿ ಉಪಯೋಗವಾಗಲ್ಪಟ್ಟಿತು. ಇದರಲ್ಲಿ ಯಾವ ಶಾಸಕನಿದ್ದರೂ ಈ ಬೆಳವಣಿಗೆ ಅನಿವಾರ್ಯವಾಗಿದ್ದಿತು ಮತ್ತು ಆಗಲೇಬೇಕಿತ್ತು. ಇದು ಧಣೀ ಪುತ್ರರ ಮಹತ್ಸಾಧನೆ ಎಂದು ಧಣಿಗಳ ಭಟ್ಟಂಗಿಗಳು ಡಂಗುರ ಹೊಡೆಸಿ, ಮತ್ತದೇ ಜನಪದ ಸೊಗಡಿನ "ಕುಂದುವಾಡದ ಕೆರೆ" ಎಂಬ ಹೆಸರನ್ನು ಅಳಿಸಿ ತಮ್ಮ ಧಣೀಪುತ್ರ ಸಾಗರ ಎಂದು ಶಿಲಾಶಾಸನವನ್ನು ಕೆತ್ತಿ, ಜನರಿಗೆ ತಿಳಿಹೇಳಿದ್ದಾರೆ.

ಗಂಡುಮೆಟ್ಟಿನ ನಾಡೆನ್ನುವ ಈ ಊರಿನ ಜನ ನೇರ ಮಾತುಕತೆಯ, ಯಾವುದೇ ಮುಚ್ಚುಮರೆಯಿಲ್ಲದ, ಆದಷ್ಟು ಪ್ರಾಮಾಣಿಕ ನಡತೆಯ ಜನರಾಗಿದ್ದರು. ಆದರೂ ನನ್ನ ದಾವಣಗೆರೆಯ ಸ್ನೇಹಿತನೋರ್ವ ಹೇಳುತ್ತಿದ್ದ, "ನೀನು ತಪ್ಪು ತಿಳಿದಿದ್ದೀ. ಈ ದಾವಣಗೆರೆಯ ಜನ ಯಾರಾದರೂ ಬಿಳಿ ಅಂಗಿ ತೊಟ್ಟು, ಮೇಲಿನ ಜೇಬಿನಲ್ಲಿ ಗರಿ ಗರಿ ನೂರರ ನೋಟೊಂದು ಕಾಣುವಂತಿದ್ದರೆ ಮಾತ್ರ ಮರ್ಯಾದೆ ಕೊಡುವರು. ನಿನ್ನ ಮೇಲಿನ ಜೇಬಿನಲ್ಲಿ ಪಾರದರ್ಶಕವಾಗಿ ಕಾಣುವ ನೋಟಿನ ಮೇಲೆ ಇವರುಗಳು ಕೊಡುವ ಮರ್ಯಾದೆ ಮೀಟರ್ ನಿಂತಿದೆ"ಯೆನ್ನುತ್ತಿದ್ದನು. ಅಂದು ಅದನ್ನು ಒಪ್ಪದಿದ್ದರೂ, ಬಹುಪಾಲು ವರ್ತಕನಗರಿಯಾದ ದಾವಣಗೆರೆಯ ಬಹುಪಾಲು ಜನ ಈ ರೀತಿ ಇದ್ದರೂ ಇರಬಹುದು ಎಂದುಕೊಂಡು ಸುಮ್ಮನಾಗಿದ್ದೆನು. ಆದುದರಿಂದಲೇ ಇರಬಹುದು ದಾವಣಗೆರೆಯ ಜನತೆ ಈ ಧಣಿಯ ಸಂಪತ್ತಿನ ಗ್ರ್ಯಾಫ್ ಏರಿಕೆಗೆ ಅನುಪಾತವಾಗಿ ಅವರನ್ನು ಓಲೈಸುವ ಅನುಪಾತ ಕೂಡಾ ಏರುತ್ತಿದೆ!

ಮೊದಲೆಲ್ಲಾ ದಾವಣಗೆರೆಯಲ್ಲಿ ಅಷ್ಟೊಂದು ಭಟ್ಟಂಗಿಗಳಿರುತ್ತಿರಲಿಲ್ಲ. ಏಕೆಂದರೆ ಅದು ದಾವಣಗೆರೆಯ ಜನತೆಗೆ ಆಗಿಬರದ ವಿಷಯ. ಇಲ್ಲಿನ ಜನರು ಅತ್ಯಂತ ಸ್ವಾಭಿಮಾನಿಗಳಾಗಿದ್ದರು. ಕಾಲ ಬದಲಾದಂತೆ ಇಲ್ಲಿನ ಹತ್ತಿಮಿಲ್ಲುಗಳು ಮುಚ್ಚಿ, ಮಂಡಿ ವರ್ತಕರ ಮಂಡಿ ಮುರಿದು, ಪ್ರತಿಯೊಂದು ವರ್ತಕ ವ್ಯವಹಾರಗಳು ದಿಕ್ಕು ತಪ್ಪಲಾರಂಬಿಸಿದಂತೆಯೇ ಈ ಜನರಲ್ಲಿದ್ದ ದರ್ಪ, ಅಹಂ ನಾಶವಾಗಿ, ಅದು ಕ್ರಮೇಣ ಅವರಲ್ಲಿನ ಸ್ವಾಭಿಮಾನವನ್ನೂ ಅಳಿಸುತ್ತ, ಇಂದು ಇಡೀ ನಗರಿಯೇ ಧಣಿಗಳ ಭಟ್ಟಂಗಿಗಳ ನಗರಿಯಾದಂತೆ ಕಾಣುತ್ತದೆ. ಇಂದು ದಾವಣಗೆರೆಯ ಪ್ರತಿಯೊಂದು ಬೀದಿ, ಮುಖ್ಯಸ್ಥಾನಗಳಿಗೂ ಧಣಿಗಳ ಅಥವಾ ಅವರ ಪುತ್ರರ, ವಂಶದವರ ಹೆಸರುಗಳನ್ನಿಟ್ಟು ಜನ ತಮ್ಮ ಭಟ್ಟಂಗಿತನವನ್ನು ಮೆರೆದಿದ್ದಾರೆ. ಸ್ವಾಭಿಮಾನೀ ದಾವಣಗೆರೆ ಭಟ್ಟಂಗಿಗೆರೆಯಾದುದನ್ನು ಪ್ರಾಮಾಣೀಕರಿಸುವಂತೆ ಮಹಾಸ್ವಾಭಿಮಾನೀ, ಪ್ರಾಮಾಣಿಕ, ಜಗಜ್ಜೆಟ್ಟಿ, ಬೀರಲಿಂಗೇಶ್ವರ ವ್ಯಾಯಾಮಶಾಲೆಯ ಮಲ್ಲರಾದ ಮಾಜೀ ಶಾಸಕರೋರ್ವರು ಈ ಮೊದಲೆಲ್ಲಾ "ಬರೀ ಒಂದೊಂದು ಬೀದಿ, ಸರ್ಕಲ್, ಬಸ್ ನಿಲ್ದಾಣಗಳಷ್ಟೇ ಏಕೆ ದಾವಣಗೆರೆ ಎಂಬ ಹೆಸರನ್ನೇ ಅಳಿಸಿ ಧಣಿಗಳ ನಗರವೆಂದು ಪುನರ್ ನಾಮಕರಣ ಮಾಡಿ"ರೆಂದು ಹೀಗಳೆಯುತ್ತ ಪ್ರತಿಭಟಿಸುತ್ತಿದ್ದವರು, ತಮ್ಮ ಜಾತೀ ಬಾಂಧವ ಸಿದ್ದರಾಮಯ್ಯನವರೊಂದಿಗೆ ಕಾಂಗ್ರೆಸ್ ಸೇರಿ, ಇಂದು ಧಣಿಗಳಿಗೆ "ಜೈ"ಕಾರವನ್ನು ಹಾಕುತ್ತಿದ್ದಾರೆ!!!

ಈ ಭಟ್ಟಂಗಿತನದ ಇನ್ನೊಂದು ಸ್ಯಾಂಪಲ್ ಹೇಗಿದೆ ಗೊತ್ತೆ? ಇಲ್ಲಿನ ಪ್ರಮುಖ ಬೀದಿಯೊಂದಕ್ಕೆ ದಾವಣಗೆರೆಯನ್ನು ಜಿಲ್ಲೆಯನ್ನಾಗಿಸಿದ ಜೆ.ಹೆಚ್.ಪಟೇಲರ ಹೆಸರನ್ನಿಟ್ಟಿದ್ದರು. ಸರಿ, ಎಲ್ಲಾ ಪ್ರಮುಖ ಸ್ಥಳಗಳಿಗೆ ಧಣಿಗಳ ಹೆಸರಿರುವಾಗಿ ಇದೊಂದನ್ನು ಬೇರೆ ಇಡಲಾಗುವುದೇ? ಆದರೆ ಇದನ್ನು ಹೇಗೆ ವಿರೋಧಿಸುವುದು, ಸರಿ ಈ ಭಟ್ಟಂಗೀ ಪಟಾಲಂ ಡಾ.ರಾಜಕುಮಾರ್ ಅವರ ಹೆಸರನ್ನು ಈ ಬೀದಿಗೆ ಇಡಬೇಕೆಂದು ಪ್ರತಿಭಟಿಸಿತು. ಕರ್ನಾಟಕದಲ್ಲಿ ಯಾರಾದರೂ ಡಾ.ರಾಜಕುಮಾರ್ ಹೆಸರಿಡುವುದನ್ನು ಬೇಡವೆನ್ನುವ ಧೈರ್ಯ ತೋರುವರೇ? ಹೇಗಿದೆ ಕಿಡಿಗೇಡಿತನ? ಈಗ ಈ ರಸ್ತೆಗೆ ಯಾರ ಹೆಸರಿಟ್ಟರೋ ಗೊತ್ತಿಲ್ಲ. ಈ ಎಲ್ಲಾ ಮಹತ್ಸಾಧನೆಯ ಹಿನ್ನೆಲೆಯಿರುವುದರಿಂದಲೇ ಇರಬೇಕು ಈ ಧಣೀಪುತ್ರರು ಇಂದು ಕಾಂಗ್ರೆಸ್ ಟಿಕೆಟ್ ಹೆಲಿಕಾಪ್ಟರ್ ನಲ್ಲಿ ಬರುವಂತೆಯೂ, ಮತ್ತದು ಕ್ಷಣಕ್ಷಣಂ ಥ್ರಿಲ್ಲರ್ ಸಂವೇದಿಯಾಗಿಯೂ ಆಗುವಂತೆ ನಿಭಾಯಿಸಿದುದು.

ಈಗ ಹೊಸ ಸಂತತಿಯ ಪಟಾಲಂ ಧಣಿಗಳನ್ನು "ಅಪ್ಪಾಜಿ" ಎಂದು ಕರೆಯುತ್ತಾರಂತೆ. ಧಣಿಗಳು ತಮ್ಮ ಚಪ್ಪಲಿ ಎಲ್ಲಿ ಹೋದವೆಂದು ಹುಡುಕುತ್ತಿದ್ದರೆ ಅದು ಅವರ ಪಟಾಲಂ ಕೈಯಲ್ಲಿರುತ್ತದಂತೆ. "ಅಪ್ಪಾಜಿ, ಇಲ್ಲಿವೆ ನಿಮ್ಮ ಚಪ್ಪಲಿಗಳು!" ಎನ್ನುತ್ತಾ ಧಣಿಗಳನ್ನು ಓಲೈಸುತ್ತಾರಂತೆ. ಒಮ್ಮೆ ಗಂಡುಮೆಟ್ಟಿನ ನಾಡಿನ ಜನ ಎನಿಸಿಕೊಂಡವರು ಇಂದು ಕೈಯಲ್ಲಿ ಮೆಟ್ಟು ಹಿಡಿದು ಓಲೈಸುತ್ತಿದ್ದಾರೆ!!!

ದಾವಣಗೆರೆಯ ಧಣಿಯಂತೆ ನಮ್ಮ "ಮಂಡಕ್ಕಿ ಭಟ್ಟಿ ಸಾಬಿ" ಯಾರೆಂದು ನಿಮಗೆ ಪರಿಚಯವಿರಲಾರದು. ಇವರೇ ತಮ್ಮ ಹೆಸರನ್ನು ಕಾಂಗ್ರೆಸ್ ಟಿಕೆಟ್ಟಿನಲ್ಲಿ ಹೊಡೆದು ಹಾಕಿ ಧಣಿಪುತ್ರರ ಹೆಸರನ್ನು ಕೆತ್ತಿ ಅನರ್ಹಗೊಂಡ ಇನ್ನೋರ್ವ ಕಾಂಗ್ರೆಸ್ ಅಭ್ಯರ್ಥಿ!

ಸುಮಾರು ಇಪ್ಪತ್ತೈದು ವರ್ಷಗಳ ಕೆಳಗೆ ದಾವಣಗೆರೆಯಲ್ಲೆಲ್ಲಾ ಕಮ್ಯುನಿಸ್ಟರ ಕಾಲ. ಆಗ ಈ ಮುಸ್ಲಿಂ ನಾಯಕರು ಕೌನ್ಸಿಲರ್ರೋ, ಕಾಂಗ್ರೆಸ್ ಕಮಿಟಿ ಮೆಂಬರ್ರೋ ಆಗಿ, ನಮ್ಮ ಹಗೇದಿಬ್ಬ ಸರ್ಕಲ್ಲಿನಲ್ಲೊಮ್ಮೆ ಚುನಾವಣಾ ಪ್ರಚಾರ ಭಾಷಣ ಮಾಡಿದ್ದರು. ಆಗ ಇವರೂ ಕೂಡ ವರ್ತಕ ಹಿನ್ನೆಲೆಯ ವ್ಯವಹಾರಗಳನ್ನು ಮಾಡುತ್ತಿದ್ದವರು, ಇಂದು ಧಣಿಗಳ ಆದರ್ಶವಾಗಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿಕೊಂಡಿದ್ದಾರಂತೆ. ಇರಲಿ, ಅಂದಿನ ಚುನಾವಣಾ ಭಾಷಣದಲ್ಲಿ ಇವರು "ಕಮ್ಯುನಿಸ್ಟರು ಏನು ಹೇಳುತ್ತಾರಪ್ಪಾ ಎಂದರೆ, ಈ ನಿಮ್ಮ ನಗರದೇವತೆ ದುರ್ಗಾಂಬಿಕಾ ದೇವಸ್ಥಾನದ ಮೇಲೆ ಬುಲ್ಡೋಜರ್ ಹತ್ತಿಸಿ ಅಂತಾರೆ. ರಷ್ಯಾ, ಚೀನಾದಲ್ಲೆಲ್ಲಾ ಹಂಗೇ ಮಾಡಿದ್ದಾರೆ. ಹೇಳಿ ಅಂತಹ ಕಮ್ಯುನಿಸ್ಟರಿಗೆ ನೀವು ಓಟು ಹಾಕಬೇಕಾ?" ಎಂದು ನೆರೆದ ಜನರನ್ನು ಕೇಳಿ ಕಾಂಗ್ರೆಸ್ ಬೆಂಬಲಿಸಲು ಕರೆ ನೀಡಿದ್ದರು.

ಈಗ ದಾವಣಗೆರೆಯಲ್ಲಿ ಕಮ್ಯುನಿಸ್ಟರಿಲ್ಲ. ಅಲ್ಲಿನ ಎಲ್ಲಾ ಮಿಲ್ಲುಗಳೂ ಮುಚ್ಚಿಹೋಗಿ ಮಿಲ್ಲುಗಳ ಕಾರ್ಮಿಕರು ಆಟೋರಿಕ್ಷಾ ಡ್ರೈವರ್ರುಗಳಾಗಿಯೋ, ಬೆಣ್ಣೆದೋಸೆ ಹೋಟೇಲುಗಳನ್ನು ಮಾಡಿಕೊಂಡೋ ಇದ್ದಾರೆ. ಬಹುಶಃ ಈಗ ಈ ಅಲ್ಪಸಂಖ್ಯಾತರ ನಾಯಕರು ಇದೇ ಭಾಷಣವನ್ನು ಕೊಂಚ ಕಾಲಕ್ಕೆ ತಕ್ಕಂತೆ ಬದಲಾಯಿಸಿಕೊಂಡು, ಅಜಾದ್ ನಗರದ ಸರ್ಕಲ್ಲಿನಲ್ಲಿ ಚುನಾವಣಾ ಭಾಷಣ ಮಾಡುತ್ತ, "ಬಿಜೆಪಿಗಳು ಏನು ಹೇಳುತ್ತಾರಪ್ಪಾ ಅಂದರೆ, ಈ ನಿಮ್ಮ ಜುಮ್ಮಾ ಮಸೀದಿಯ ಮೇಲೆ ಬುಲ್ಡೋಜರ್ ಹತ್ತಿಸಿ ಅಂತಾರೆ. ಗುಜರಾತ್, ರಾಜಸ್ಥಾನದಲ್ಲೆಲ್ಲಾ ಹಂಗೇ ಮಾಡಿದ್ದಾರೆ. ಹೇಳಿ ಅಂತಹ ಬಿಜೆಪಿಗಳಿಗೆ ನೀವು ಓಟು ಹಾಕಬೇಕಾ?" ಎಂದು ನೆರೆದ ಮುಗ್ಧ, ಬಡ ಮಂಡಕ್ಕಿ ಭಟ್ಟಿ ಕಾರ್ಮಿಕರನ್ನೂ, ಗುಜರಿ ಅಂಗಡಿ ವರ್ತಕರನ್ನೂ ಪ್ರಶ್ನಿಸಿ ಕಾಂಗ್ರೆಸ್ ಬೆಂಬಲಿಸಲು ಕರೆ ನೀಡುವರೇನೋ?

ಒಟ್ಟಾರೆ ಇದು ಕೇವಲ ದಾವಣಗೆರೆಯ ವೈಶಿಷ್ಟ್ಯವಲ್ಲ. ಇದು ಇಂದಿನ ಕರ್ನಾಟಕದ ಪ್ರತಿಯೊಂದು ವಿಧಾನಸಭಾ ಕ್ಷೇತ್ರಗಳ ನೈಜ ಚಿತ್ರಣ. ಪ್ರತಿಯೊಂದು ಕ್ಷೇತ್ರಗಳೂ ಒಂದೇ ತರಹ. ಪಾತ್ರಧಾರಿಗಳು ಮಾತ್ರ ಬೇರೆ. ಹಾಗಾಗಿಯೇ ಈ ಲೇಖನದಲ್ಲಿ ಧಣಿಗಳ, ಧಣಿಪುತ್ರರ ಮತ್ತಿತರೆ ಪುಢಾರಿಗಳ ಹೆಸರುಗಳಿಲ್ಲ! ಇಲ್ಲಿ ದಾವಣಗೆರೆಗೆ ಬದಲಾಗಿ ನಿಮ್ಮೂರಿನ ಹೆಸರು ಹಾಕಿಕೊಳ್ಳಿ, ಧಣಿಗಳ ಬದಲಾಗಿ ನಿಮ್ಮೂರಿನ ಪುಢಾರಿಗಳ ಹೆಸರುಗಳನ್ನು ಹಾಕಿಕೊಳ್ಳಿ. ಆಗ ಈ ಲೇಖನ, ಕೂಡಲೇ ನಿಮ್ಮದೇ ಲೇಖನವಾಗುತ್ತದೆ. ಧಣಿ/ಧಣೀಪುತ್ರರು ನಿಮ್ಮೂರಿನ ಶಾಸಕ ಮತ್ತವನ ಮಕ್ಕಳಾಗಬಹುದು, ಸಾಂಸದ ಮತ್ತವನ ಸೋದರರಾಗಬಹುದು....ಹಾಗೆಯೇ ರವಿ ಹಂಜ್ ನೀವಾಗಬಹುದು! ಒಟ್ಟಾರೆ ಅದಮ್ಯ ಸಾಮ್ಯತೆಯನ್ನು ಕೂಡಲೇ ಕಂಡುಕೊಳ್ಳುವಿರಿ!

ಮುಖ್ಯ ಹೆಸರುಗಳನ್ನು ಛಾಪಿಸಲೇಬೇಕೆಂತಾದರೆ ಅದು ಜಾತ್ಯಾತೀತ ದಳದ ದೇವೇಗೌಡ ಮತ್ತು ಮಕ್ಕಳಾಗಬಹುದು, ಬಿಜೆಪಿಯ ರೆಡ್ಡಿ ಮತ್ತು ಸೋದರರಾಗಬಹುದು, ಕಾಂಗ್ರೆಸ್ಸಿನ ಕೃಷ್ಣ ಮತ್ತು ಕಂಪೆನಿಯಾಗಬಹುದು, ಡಿಕೆಶಿ ಮತ್ತು ಸೋದರರಾಗಬಹುದು, ಸಮಾಜವಾದಿಯ ಬಂಗಾರಪ್ಪ ಮತ್ತು ಕುಟುಂಬವಾಗಬಹುದು........ಗಂಡುಮಕ್ಕಳಿದ್ದವರು ಪುತ್ರರನ್ನೂ, ಹೆಣ್ಣುಮಕ್ಕಳಿದ್ದವರೂ ಆಳಿಯಂದಿರನ್ನು, ಇನ್ನೂ ಯುವ ಪುಢಾರಿಗಳಾದರೆ ಅವರ ಸೋದರರನ್ನು ಸ್ಥಾಪಿಸುತ್ತಾ ಒಂದು ರೀತಿ ಆಧ್ಯಾತ್ಮದ ಸಿ.ಇ.ಓ ರವಿಶಂಕರರ "ವಸುದೈವ ಕುಟುಂಬಕಂ" ತತ್ವವನ್ನು ಎತ್ತಿಹಿಡಿಯುವವರೇ!

ಇದು ಕರ್ನಾಟಕಕ್ಕೆ ಮಾತ್ರ ಸೀಮಿತವಾಲ್ಲ, ಇಡೀ ಭಾರತದ ಯಾವುದೇ ಕ್ಷೇತ್ರವಾಗಬಹುದು! ಅಲ್ಲಿ ಲಾಲೂ ಮತ್ತವನ ಮೈದುನರಿರಬಹುದು, ಮುಲಾಯಂ ಮತ್ತವರ ಮಗನಿರಬಹುದು, ಸೋನಿಯಾ ಮತ್ತು ಮಕ್ಕಳಿರಬಹುದು, ಫಾರೂಕ್ ಮತ್ತು ಮಕ್ಕಳಾಗಬಹುದು, ಸಿಂಧಿಯಾ ಕುಟುಂಬವಿರಬಹುದು................ಬ್ರಹ್ಮಚಾರೀ ವಾಜಪೇಯಿ ಕೂಡಾ ತಮ್ಮ ಸೋದರಳಿಯನನ್ನೇ ಬೆಳೆಸುತ್ತಿರುವರಂತೆ! ಹಾಗಾಗಿಯೇ ಇದು ಭಾರತವ್ಯಾಪಿ! ಇನ್ನು ಸಮಾಜಸೇವೆಗಾಗಿ ಇವರಲ್ಲಿ ಕೆಲವರು ಬ್ರಾಹ್ಮಣರನ್ನು ಓಲೈಸಬಹುದು, ಹಲವರು ದಲಿತರನ್ನು ಮೆರೆಸಬಹುದು. ಆ ಪಕ್ಷದ ನಾಯಕರು ನರಮೇಧ ನಡೆಸಬಹುದು, ಈ ಪಕ್ಷದವರು ಭಯೋತ್ಪಾದಕರನ್ನು ನಾಯಕರನ್ನಾಗಿಸಬಹುದು. ಇಲ್ಲಿ ಕನ್ನಡ ಮಾತನಾಡಬಹುದು ಅಲ್ಲಿ ಹಿಂದಿ ಮಾತನಾಡಬಹುದು. ಅವರ ಗುರುತು ಹಸ್ತವಿರಬಹುದು ಇವರ ಗುರುತು ಮಹಿಳೆಯಿರಬಹುದು. ಇಲ್ಲಿನವರು ಪಂಚೆ, ಪ್ಯಾಂಟ್ ತೊಡಬಹುದು ಅಲ್ಲಿನವರು ಕುರ್ತಾ/ಪೈಜಾಮ ಹಾಕಬಹುದು. ಹಾಗೆಯೇ ಇಲ್ಲಿನ ಮತದಾರ ಬಡ ಬೋರೇಗೌಡನಾಗಿರಬಹುದು, ಅಲ್ಲಿನ ಮತದಾರ ಬಡ ಸಿಯಾರಾಮ್ ಇರಬಹುದು, ಅಷ್ಟೇ.

ಒಟ್ಟಾರೆ ಈ ರಾಜಕೀಯದಲ್ಲಿ ಎಲ್ಲರೂ ಸಮಾನರು! ಎಲ್ಲರೂ ಪಕ್ಷಾತೀತರು! ವೈವಿಧ್ಯತೆಯಲ್ಲಿ ಏಕತೆ! ಎಂತಹ ಸಮಾನತೆ! ಅಂಬೇಡ್ಕರ್ ಆಗಲೀ, ಗಾಂಧಿಯಾಗಲೀ ಇಂತಹ ರಾಜಕೀಯ ಸಮಾನತೆಯನ್ನು ಕನಸು ಮನಸಿನಲ್ಲಿಯೂ ಊಹಿಸಿಕೊಂಡಿರುವುದಿಲ್ಲವೇನೋ! ಆ ಮಟ್ಟಿಗೆ ಭಾರತದ ಈ ಸಮಾನತೆಯನ್ನು ಪ್ರಜಾಪ್ರಭುತ್ವದ ಯಾವ ದೇಶಗಳೂ ಇನ್ನೂ ಒಂದು ನೂರು ವರ್ಷಗಳ ಮಟ್ಟಿಗೆ ಹತ್ತಿರ ಕೂಡಾ ಸರಿಗಟ್ಟಲಾರವೇನೋ.

ಅಲ್ಲಾ, ಇಷ್ಟೆಲ್ಲಾ ಸಂಪತ್ತಿರುವ ಈ ಧಣಿ, ಗಣೀ, ಬಂಧು, ಹುಲಿ, ಸಿಂಹ, ಸ್ಟಾರ್ ಗಳಿಗೆ ಅದೇಕೆ ಹೀಗೆ ದೈನೇಸಿಯಾಗಿ ಈ ಪುಡಿಜನಗಳಿಗೆ ಕೈಮುಗಿದು ಓಟು ಬೇಡುವ ಅಭಿಲಾಷೆಯೋ? ಈ ರೋಗ ಇವರಿಗಷ್ಟೇ ಅಲ್ಲ, ದುಡ್ಡಿರುವ ಅನೇಕರು ಈ ರೀತಿ ಜನಸೇವೆ ಮಾಡಲು ಹಪಹಪಿಸುತ್ತಾರೆ. ಅಲ್ಲಾ ದುಡ್ಡಿಲ್ಲದವರು ಸಮಾಜಸೇವೆ ಮಾಡಲು ಸರ್ಕಾರೀ ಪ್ರತಿನಿಧಿತ್ವವನ್ನು ಪಡೆಯಲು ಪ್ರಯತ್ನಪಟ್ಟರೆ ಒಪ್ಪಬಹುದು. ಈ ಪಾಟಿ ದುಡ್ಡಿರುವವರು ಟ್ರಸ್ಟ್ ಗಳನ್ನೋ ಪ್ರತಿಷ್ಟಾನಗಳನ್ನೋ ಸ್ಥಾಪಿಸಿಕೊಂಡು ಸರ್ಕಾರದ ಹಂಗಿಲ್ಲದೆ ಸಮಾಜಸೇವೆಯನ್ನು ಮಾಡಬಹುದಲ್ಲವೇ? ಇನ್ಫೋಸಿಸ್ ನ ನಾರಾಯಣಮೂರ್ತಿ, ಮೈಕ್ರೋಸಾಫ್ಟ್ ನ ಬಿಲ್ ಗೇಟ್ಸ್ ತರಹ. ಅವರೆಲ್ಲಾ ಚುನಾಯಿತ ಪ್ರತಿನಿಧಿಗಳಾಗಲು ಬಯಸುತ್ತಿದ್ದಾರೆಯೇ? ಸಮಾಜಸೇವೆಯೇ ನಿಜ ಉದ್ದೇಶವಾದರೆ, ಯಾವ ಶ್ರೀಮಂತನೂ ಸರ್ಕಾರದ ಕೆಂಪುಪಟ್ಟಿ ಆಡಳಿತವನ್ನು ನಂಬಿ ಸಮಾಜಸೇವೆ ಮಾಡಲು ಹೋಗುವುದಿಲ್ಲ. ಈ ಶ್ರೀಮಂತರ ಸಮಾಜಸೇವೆಯ ನಿಜಾರ್ಥವನ್ನು ಭಾರತೀಯ ಶ್ರೀಸಾಮಾನ್ಯ ಅದ್ಯಾವಾಗ ಕಂಡುಕೊಳ್ಳುವನೋ?

ಅಣಕ:

ಅಂದ ಹಾಗೆ ದಾವಣಗೆರೆಯ ಕ್ಷೇತ್ರವೊಂದರಲ್ಲಿ ಅಭ್ಯರ್ಥಿ ಇಲ್ಲದ ಕಾಂಗ್ರೆಸ್, "ಮಟನ್ ಆಲಿ" ಎಂಬುವವರನ್ನು ಬೆಂಬಲಿಸುತ್ತಿದೆ.

ಮುಂದೆ ಮಹಿಳಾ ಮೀಸಲಾತಿ ಬಂದರೆ "ಚಿಕನ್ ಚಮೇಲೀ" ದಾವಣಗೆರೆ ಅಭ್ಯರ್ಥಿಯಾಗಬಹುದೇನೋ?

ಅಂದ ಹಾಗೆ ಇದು ಅಣಕವಲ್ಲ. ಅರ್ಧ ವರ್ತಮಾನ, ಮತ್ತರ್ಧ ಭವಿಷ್ಯ!

ನಗ್ನ ಭಾರತದ ಸ್ನಿಗ್ಧ ದರ್ಶನ!

ಇದೀಗ ಟಿಕೆಟ್ ಪ್ರಹಸನ ಮುಗಿದಿದೆ. ರಾಜಕೀಯ ಪಕ್ಷಗಳು ಒಂದೊಂದಾಗಿ ತಮ್ಮ ತಮ್ಮ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿವೆ. ಈ ಪ್ರಣಾಳಿಕೆಗಳನ್ನು ಹಾಗೆಯೇ ಗಮನಿಸಿದರೆ ಮಾನವನ ಹುಟ್ಟಿನಿಂದ ಸಾವಿನವರೆಗೆ ಎಲ್ಲಾ ಉಚಿತ! ವಾಸಿಸಲು ಉಚಿತ ಜನತಾಮನೆ, ಗರ್ಭಿಣಿಯರಿಗೆ ಉಚಿತ ಹೆರಿಗೆ, ಉಚಿತ ಪೌಷ್ಟಿಕ ಆಹಾರ, ಶಾಲೆಯ ವಯಸ್ಸಿಗೆ ಬಂದೊಡನೆ ಪ್ರತಿ ಹಾಜರಾತಿಗೆ ಹತ್ತು ರೂಪಾಯಿ ನಗದು ಮತ್ತು ಉಚಿತ ಊಟ, ಮನೆಗೆ ಹೋದರೆ ಕುಟುಂಬದೆಲ್ಲರ ಮನರಂಜನೆಗೆ ಉಚಿತ ಟಿ.ವಿ., ತಿನ್ನಲು ತಿಂಗಳಿಗೆ ಇಪ್ಪತ್ತು ಕೆ.ಜಿ. ಅಕ್ಕಿ ಉಚಿತ ಇಲ್ಲವೇ ಎರಡು ರೂಪಾಯಿಗೆ ಕೆ.ಜಿ. ಅಕ್ಕಿ, ಅಪ್ಪ ನಿರುದ್ಯೋಗಿಯೇ ಚಿಂತಿಸಬೇಡಿ ಅವನಿಗೆ ನಿರುದ್ಯೋಗೀ ಭತ್ಯೆ, ಹೈಸ್ಕೂಲಿಗೆ ಬಂದೊಡನೆ ಉಚಿತ ಸೈಕಲ್, ಆರೋಗ್ಯ ಕೆಟ್ಟಿತೇ ಅದಕ್ಕೂ ಇದೆ ಸರ್ಕಾರಿ ಸವಲತ್ತು. ಕ್ಲಿಷ್ಟವಾದ ಹೃದಯಾಘಾತದಂತಹ ಸಮಸ್ಯೆಯೇ? ಇದೋ "ಯಶಸ್ವಿನಿ" ಯೋಜನೆ ಅದಕ್ಕಾಗಿಯೇ. ಇದೆಲ್ಲಾ ಮಿಕ್ಕಿ ಸತ್ತರೆ ಉಚಿತ ಸರ್ಕಾರಿ ಅಂತ್ಯಕ್ರಿಯೆ!

ಮಕ್ಕಳು ಬೆಳೆದು ದೊಡ್ಡವರಾದರೆ ಅವರಿಗೂ ನಿರುದ್ಯೋಗಿ ಭತ್ಯೆ ಮತ್ತೆ ಯಥಾರೀತಿ ಜನತಾಮನೆ.......

ಹೀಗೆ ಒಂದು ಕುಟುಂಬಕ್ಕೆ ಬೇಕಾದ ಮನೆ ಜನತಾಮನೆಯಲ್ಲಿ ಉಚಿತವಾಗಿ ದೊರೆತು, ಹೊಚ್ಚ ಹೊಸ ಭರವಸೆಯಲ್ಲಿ ಕಲರ್ ಟಿ.ವಿ. ದೊರೆತು, ಮಕ್ಕಳು ಶಾಲೆಗೆ ಹೋಗಿ ಪ್ರತಿದಿನ ತಲೆಗೆ ಹತ್ತು ರೂಪಾಯಿ ತಂದು, ತಿಂಗಳಿಗೆ ಉಚಿತ ಇಪ್ಪತ್ತು ಕೆ.ಜಿ. ಅಕ್ಕಿ ದೊರೆತು, ತಮ್ಮ ವೃದ್ಧ ತಂದೆತಾಯಿಗಳಿದ್ದರೆ ಅವರುಗಳ ಹೆಸರಿನಲ್ಲಿ ವೃದ್ಧಾಪ್ಯ ವೇತನವೋ, ವಿಧವಾ ಮಾಸಾಶನವೋ ಇನ್ನಿತರೆ ದಿನಸಿ ಸಾಮಾನು ಗಳಿಸಿಕೊಟ್ಟು, ಒಟ್ಟಾರೆ ಒಂದು ಸಾಮಾನ್ಯ ಸಂಸಾರ ಸಾಗಲು ಏನೇನು ಬೇಕೋ ಅದೆಲ್ಲವೂ ಉಚಿತವಾಗಿ ದೊರೆತಾಗ ಅದ್ಯಾವ ಮಹಾಶಯ ದುಡಿಯಲು ಹೋಗುವನೋ? ಅದರಲ್ಲೂ ಏನೇನೂ ಕಷ್ಟವೇ ಇಲ್ಲದೆ ಸಾಂಗವಾಗಿ ಸಂಸಾರ ಸಾಗುತ್ತಿರುವಾಗ! ಪುಸ ಪುಸ ಬೀಡಿ ಸೇದುತ್ತ ಗೂಡಂಗಡಿಗಳ ಮುಂದೆ ಇಲ್ಲ ಹಳ್ಳಿ ಕಟ್ಟೆಗಳ ಮೇಲೆ...........ನಡೆಯಲಿ ಕಟ್ಟೆ ಪುರಾಣ.... ಜೀವನ ಪರ್ಯಂತ.

ಅಕಸ್ಮಾತ್ ಹೆಣ್ಣುಮಗುವಿದ್ದರೆ ಅದರ ಹೆಸರಿನಲ್ಲಿ ಮದುವೆ ಖರ್ಚಿಗೆ ಸರ್ಕಾರವೇ ಹತ್ತು ಸಾವಿರ ರೂಪಾಯಿ ಡಿಪಾಸಿಟ್ ಇಡುತ್ತದೆ, ಅದರ ಮದುವೆ ಖರ್ಚಿನ ಚಿಂತೆಯೂ ಇಲ್ಲ. ಆದರೆ ಉಚಿತ ಮಕ್ಕಳನ್ನು ಮಾಡಿಕೊಡುವ ಯೋಜನೆಗಳನ್ನು ಇನ್ನೂ ಯಾವ ಪಕ್ಷಗಳೂ ತಂದಿಲ್ಲ, ಆದನ್ನೊಂದು ತಾವೇ ಕಷ್ಟ ಪಟ್ಟು ಮಾಡಿಕೊಳ್ಳಬೇಕು. ಮುಂದೆ ಕಾಂಗ್ರೆಸ್ಸಿನ ಡಿ.ಕೆ.ಶಿವಕುಮಾರ್ ಅಥವಾ ಬಿಜಿಪಿಯ ರೇಣುಕಾಚಾರ್ಯ ಇವರುಗಳು ಮುಖ್ಯಮಂತ್ರಿಗಳಾದರೆ ಈ ಯೋಜನೆಗಳೂ "ಅಫಿಶಿಯಲ್" ಆಗಿ ಬರಬಹುದೇನೋ? ಜೆಡಿಎಸ್ ನಲ್ಲಿ ಈ ಯೋಜನೆ ಯಾವತ್ತೂ ಜಾರಿಗೆ ಬಾರದು ಏಕೆಂದರೆ ಅವರುಗಳು ಸಲಿಂಗಕಾಮಿಗಳು. ಬೇರೆ ಪಕ್ಷದವರನ್ನು ’ಫ್’ ಮಾಡುವುದು ಅವರಿಲ್ಲದಿದ್ದರೆ ತಮ್ಮ ಪಕ್ಷದವರಲ್ಲೇ ಒಬ್ಬರ ಮೇಲೆ ಸವಾರಿ ಮಾಡುವುದು! ಅದಲ್ಲದೇ ಅವರುಗಳು ಬಹುವಾಗಿ ಮೊರೆಹೋಗುವ ಜ್ಯೋತಿಷಿಗಳು ಅವರುಗಳಿಗೆ ಮಹಿಳೆಯರೇ ಮರಣವನ್ನು ತರುವವರೆಂದು ಎಚ್ಚರಿಕೆ ಬೇರೆ ಹೊರಡಿಸಿದ್ದಾರೆ!

ಈ ಭ್ರಷ್ಟಾಚಾರೀ ನಾಯಕರುಗಳ ಈ ಯೋಜನೆಗಳನ್ನೊಮ್ಮೆ ಇಣುಕಿ ನೋಡಿದರೆ ಈ ಯೋಜನೆಗಳು ಅವರುಗಳ ಕೊಳಕು ಮನಸ್ಸಿಗೆ ಹಿಡಿದ ಕೈಗನ್ನಡಿಯಂತಿವೆ. ಪ್ರತಿಯೊಂದನ್ನೂ ಪುಕ್ಕಟೆ ಬಯಸುವ ಇವರ ಮನೋಭೀಷ್ಟೆಯನ್ನೇ ಇವರುಗಳು ಜನರಿಗೆ ನೀಡುತ್ತ ದುಡಿಯದೇ ಮಜಾ ಮಾಡಬೇಕು ಎಂದು ಭೋಧಿಸುತ್ತಿದ್ದಾರೆ. ಬಹುಶಃ ಇವರುಗಳ ಪ್ರಕಾರ ಭಾರತದಲ್ಲಿ ಬಡವರಾಗಿ ಹುಟ್ಟುವುದೇ ಒಂದು ದುಡಿಮೆ ಇದ್ದಂತೆ. ಕಳೆದ ಐವತ್ತು ವರ್ಷಗಳಲ್ಲಿ ಈ ರಾಜಕಾರಣಿಗಳು ಬಡವರ್ಗವನ್ನು ಯಶಸ್ವಿಯಾಗಿ ಭಿಕ್ಷುಕರನ್ನಾಗಿ ಪರವರ್ತಿಸಿದ್ದಷ್ಟೇ ಅಲ್ಲದೆ ಈ ವರ್ಗವನ್ನು ತಮ್ಮ ಖಾಯಂ ಮತದಾರರನ್ನಾಗಿಸಿಕೊಂಡಿದ್ದಾರೆ. ಏಕೆಂದರೆ ಭಾರತದ ಮಧ್ಯಮ ವರ್ಗ ಓಟು ಹಾಕುವ ಪ್ರಯತ್ನವನ್ನೇ ಮಾಡುವುದಿಲ್ಲ. ಚುನಾವಣೆಯ ದಿನದ ರಜೆಯನ್ನು ಮಜವಾಗಿ ಕಳೆಯಲು ಅತ್ತೆಯ ಮನೆಗೋ ಮಾವನ ಮನೆಗೋ ಹೋಗುತ್ತಾರೆ ಇಲ್ಲವೇ ಹಾಯಾಗಿ ಸಂಸಾರದೊಂದಿಗೆ "ಮಾಯಾಮೃಗ" ಮೆಗಾಸೀರಿಯಲ್ಲನ್ನೋ ಇಲ್ಲಾ ಮತ್ತೊಂದು ಈ ರೀತಿಯ ಗೋಳಿನ ಕಣ್ಣೀರ ಸಿನೆಮಾವನ್ನೋ ವೀಕ್ಷಿಸುತ್ತಾರೆ.

ಈ ಬಾರಿಯ ಚುನಾವಣೆಯಲ್ಲಿ ಈ "ಕಣ್ಣೀರು" ಮೆಚ್ಚುವ ವರ್ಗ ಹೆಚ್ಚಾಗಿರುವುದರಿಂದಲೋ ಏನೋ ಕುಮಾರಸ್ವಾಮಿ ಥೇಟ್ ತಮ್ಮ ತಂದೆಯಂತೆ ಅತ್ತರೆ, ನಾವ್ಯಾಕೆ ಹಿಂದೆ ಬೀಳಬೇಕೆಂದು ಕೃಷ್ಣ, ಖರ್ಗೆ ಕೂಡಾ ಅಳುಮುಂಜಿ ನಟೀಮಣಿಯರೂ ನಾಚುವಂತೆ ಗಳಗಳನೆ ಕಣ್ಣೀರು ಹರಿಸಿದ್ದಾರೆ. ಇಲ್ಲಿಯವರೆಗೂ ಮಣ್ಣಿನ ಮಗನಿಗೆ ಮಾತ್ರ ಸೀಮಿತವಾಗಿದ್ದ ಕಣ್ಣೀರು, ಈ ಬಾರಿ ಮುಖ್ಯವಾಹಿನಿಯಾಗಿ ಎಲ್ಲಾ ಪಕ್ಷಗಳೆಡೆ ಹರಿಯುತ್ತಲಿದೆ. ಬಹುಶಃ ಗೆಲ್ಲುವ ಹುಮ್ಮಸ್ಸಿನಲ್ಲಿರುವ ಬಿಜೆಪಿಯವರು ಚುನಾವಣೆಯ ನಂತರ ಆನಂದಭಾಷ್ಪಗಳನ್ನು ಸುರಿಸೋಣವೆಂದುಕೊಂಡಿರಬಹುದು!

ಸ್ವಾತಂತ್ರ್ಯಾ ನಂತರದ ಪ್ರಜಾಪ್ರಭುತ್ವದಲ್ಲಿ ಆಗಿ ಹೋದ ಪ್ರತಿಯೊಂದು ಸರ್ಕಾರಗಳೂ ದೇಶದ ಸಮಸ್ಯೆಗಳನ್ನು ಪರಿಹರಿಸುವುದೆಂದರೆ ಪರಿಹಾರ ಭಿಕ್ಷೆ ಕೊಡುವುದೆಂದೇ ಜನಜನಿತವಾಗಿಸಿಬಿಟ್ಟಿದ್ದಾರೆ. ನಿಮ್ಮ ಮನೆಗೆ ನೀರು ನುಗ್ಗಿ ಯಾರಾದರೂ ಸತ್ತರೇ, ಇದೋ ಪರಿಹಾರ, ನೀರಿಲ್ಲವೇ ಇದೋ ಪರಿಹಾರ, ಸರ್ಕಾರಿ ಬಸ್ ಗುದ್ದಿ ಯಾರಾದರೂ ಸತ್ತರೆ, ಇದೋ ಪರಿಹಾರ. ಬರೀ ಗಾಯಗೊಂಡಿರೋ ಚಿಂತಿಸಬೇಡಿ ಇಲ್ಲಿದೆ ಪರಿಹಾರ. ಹೀಗೆ ಕಳೆದ ಅರ್ಧ ಶತಮಾನದಿಂದಲೂ ಆಳಿದ ಸರ್ಕಾರಗಳು ಪರಿಹಾರದ ಭಿಕ್ಷೆಯನ್ನು ಕೊಟ್ಟೂ ಕೊಟ್ಟೂ, ಈಗ ಜನತೆಯು ಕೂಡ "ಒಂದು ರೂಪಾಯಿ" ಭಿಕ್ಷೆ ಬಿಸಾಡಿ, "ಒಂದು ಹತ್ತು ರೂಪಾಯಿ" ಭಿಕ್ಷೆ ಕೊಡಿ ಎಂದು ಡಿಮ್ಯಾಂಡಿಸುವ ಬೆಂಗಳೂರು ಭಿಕ್ಷುಕರ ರೀತಿಯಲ್ಲಿ ಪರಿಹಾರವನ್ನು ಡಿಮ್ಯಾಂಡಿಸುವ ಭಿಕ್ಷುಕರಾಗಿದ್ದಾರೆ. ಒಟ್ಟಾರೆ ಅತೀವ ಸ್ವಾತಂತ್ರ್ಯದ ಬಳುವಳಿಯೆಂದರೆ ಜನತೆಯನ್ನು ಭಿಕ್ಷುಕರಾಗಿಸಿರುವುದು! ಇದು ಎಷ್ಟರ ಮಟ್ಟಿಗೆ ಬೆಳೆದಿದೆಯೆಂದರೆ ಮನೆಯವರೆಲ್ಲಾ ಸೇರಿ ಯೋಚಿಸುತ್ತಾರೆ, ನಮ್ಮಲ್ಲಿ ಯಾರು ಸತ್ತು ಪರಿಹಾರ ದೊರಕಿಸಿ ಕುಟುಂಬವನ್ನು ಉಳಿಸಬಹುದೆಂದು! ಏಕೆಂದರೆ ಅವರುಗಳಿಗೆ ಇನ್ನ್ಯಾವ ಯೋಚನೆಗಳೂ ತೋಚದಂತೆ ಈ ರಾಜಕಾರಣಿಗಳು ಎಲ್ಲಾ ಅಮೂಲ್ಯ ಜೀವಗಳಿಗೂ ಮೌಲ್ಯದ ಪಟ್ಟಿ ಕಟ್ಟೀ ಕಟ್ಟೀ ಮಂಕುಗೊಳಿಸಿದ್ದಾರೆ.

ಅಲ್ಲಾ ಇದಕ್ಕೆಲ್ಲಾ ರಾಷ್ಟ್ರೀಯ ವಿಮಾ ಯೋಜನೆಗಳನ್ನು ಜಾರಿಗೊಳಿಸಿ ಈ ಎಲ್ಲಾ ನೈಸರ್ಗಿಕ ವಿಕೋಪ, ಅಪಘಾತಗಳನ್ನು ಯಶಸ್ವಿಯಾಗಿ ನಿಭಾಯಿಸದೆ ಈ ರೀತಿಯ ಪರಿಹಾರಗಳನ್ನು ಇನ್ನೂ ಅನುಷ್ಟಾನಗೊಳಿಸುತ್ತಿರುವುದು ಏಕೆ ಗೊತ್ತೆ? ಒಂದು ವೇಳೆ ಹಾಗೆ ವಿಮಾ ಯೋಜನೆಗಳನ್ನು ಅನುಷ್ಟಾನಗೊಳಿಸಿದರೆ, ವಿಮಾ ಕಂಪೆನಿ ಮತ್ತು ಪ್ರಜೆಗಳ ನಡುವೆ ನೇರ ಸಂಪರ್ಕವೇರ್ಪಟ್ಟು ಯಾವುದೇ ಭ್ರಷ್ಟಾಚಾರಕ್ಕೆ ಆಸ್ಪದವೇ ಇಲ್ಲದಂತಾಗುತ್ತದೆ. ಆಗ ಈ ಪರಿಹಾರಗಳ ಬೆಳೆಯನ್ನೇ ನೆಚ್ಚಿಕೊಂಡಿರುವ ರಾಜಕಾರಣಿಗಳು, ಅಧಿಕಾರಿಗಳು, ಬ್ರೋಕರ್ ಗಳು ಏನಾಗುತ್ತಾರೆ? ಅದೊಂದು ಬಹುದೊಡ್ಡ ಫುಡ್ ಚೈನ್! ಅದನ್ನು ಕಾಪಾಡುವುದು ಹೇಗೆ?

ಅಂದ ಹಾಗೆ ನಮ್ಮದು ನಿಜಾರ್ಥದಲ್ಲಿ ಪ್ರಜಾಪ್ರಭುತ್ವವೇ? ಏಕೆಂದರೆ ಕಳೆದ ಹಲವಾರು ಚುನಾವಣೆಗಳಲ್ಲಿ ಮತದಾನವಾಗುತ್ತಿರುವುದು ಅಬ್ಬಬ್ಬ ಎಂದರೆ ೫೦%. ಪ್ರತೀ ಕ್ಷೇತ್ರದಲ್ಲಿ ಕನಿಷ್ಟ ನಾಲ್ಕು ಅಭ್ಯರ್ಥಿಗಳಿದ್ದಾರೆಂದುಕೊಂಡರೂ, ಗೆದ್ದ ಅಭ್ಯರ್ಥಿಗೆ ಬಿದ್ದ ಮತಗಳು ೨೦% ಉಳಿದ ೩೦% ಮತಗಳು ಸೋತ ಅಭ್ಯರ್ಥಿಗಳಲ್ಲಿ ಹಂಚಿ ಹೋಗಿ, ಆ ಎಲ್ಲಾ ೩೦% ಜನರು ಗೆದ್ದ ಅಭ್ಯರ್ಥಿಯನ್ನು ತಿರಸ್ಕರಿಸಿದ್ದಾರೆಂದು ಅರ್ಥ. ಹೀಗೆ ಒಟ್ಟು ಮತಗಳ ಅತ್ಯಂತ ಕಡಿಮೆ ಮತಗಳು ದೊರೆತ ಅಭ್ಯರ್ಥಿಯನ್ನು ಹೇಗೆ ಗೆದ್ದನೆನ್ನುವರೋ? ಅದಕ್ಕೊಂದು ಸರಿ ಅರ್ಥದ ಚುನಾವಣಾ ವ್ಯವಸ್ಥೆಯನ್ನು ಇನ್ನೂ ರೂಪಿಸದ ಭಾರತೀಯರು ಅದು ಹೇಗೆ ಭಾರತದ ಸಮಗ್ರತೆಯನ್ನು ರೂಪಿಸುವರೋ? ಈ ವ್ಯವಸ್ಥೆಯನ್ನು ಯಾರಾದರೂ ಸರಿಪಡಿಸಲೆತ್ನಿಸಿ ಸಂವಿಧಾನಕ್ಕೆ ತಿದ್ದುಪಡಿಯನ್ನು ತರಲು ಯತ್ನಿಸಿದರೆ, ಕೂಡಲೇ ಅವರನ್ನು ಕಾಂಗ್ರೆಸ್ಸಿನಿಂದ ಪಕ್ಷೇತರರವರೆಗೂ ಎಲ್ಲರೂ ಒಕ್ಕೊರಲಿನಿಂದ "ಇವರೇನು ಸಂವಿಧಾನ ಶಿಲ್ಪಿ ಅಂಬೇಡ್ಕರರಿಗಿಂತ ಬುದ್ಧಿವಂತರೇ? ಸಂವಿಧಾನಕ್ಕೆ ತಿದ್ದುಪಡಿ ತಂದು ಇವರು ಅಂಬೇಡ್ಕರರಿಗೆ ಅವಮಾನಿಸುತ್ತಿದ್ದಾರೆ" ಎಂದು ಓಲೈಕೆಗೆ ಮೊರೆಹೋಗುತ್ತಾರೆ. ಪಾಪ, ಅಂದಿನ ಭಾರತದ ಪರಿಕಲ್ಪನೆ, ಭವಿಷ್ಯ, ಪ್ರಗತಿಯ ಒಂದು ಸಮಗ್ರ ದೃಷ್ಟಿಯನ್ನಿಟ್ಟುಕೊಂಡು ಒಂದು ಶಿಸ್ತುಬದ್ಧ ಸಂವಿಧಾನವನ್ನು ಅಂಬೇಡ್ಕರರು ಬರೆದಿಟ್ಟಿದ್ದರೆ, ಇಂದು ಆ ಸಂವಿಧಾನವನ್ನು ಕಾಲಕ್ಕೆ ತಕ್ಕಂತೆ ಬದಲಾಯಿಸದೆ ನಮ್ಮ ನಾಯಕರುಗಳು ಅಂಬೇಡ್ಕರರಿಗೆ ಅಪಚಾರವೆಸಗುತ್ತಿದ್ದಾರೆನಿಸುತ್ತದೆ!

ಅಣಕ:

ಒಬ್ಬ ರಾಜಕಾರಣಿ ಅಮೇರಿಕಾ ಪ್ರವಾಸ ಮುಗಿಸಿ ಭಾರತಕ್ಕೆ ವಾಪಸ್ಸಾದ. ಸಂಜೆಯ ಪಾರ್ಟಿಯಲ್ಲಿ ಸೇರಿದ ಅವನ ಪಟಾಲಂ "ಅಮೇರಿಕಾದ ಜನ ಹೇಗೆ?" ಎಂದು ಪ್ರಶ್ನಿಸಿತು. ಅದಕ್ಕೆ ಅವನು, "ಅಮೇರಿಕಾದ ಜನ ಬಹಳ ಸಂಭಾವಿತರು. ಒಬ್ಬರಿಗೂ ಸುಳ್ಳು ಹೇಳಲು ಬರುವುದಿಲ್ಲ. ಅವರೊಂದು ತರಹ ದ್ವಾಪರಯುಗ, ತ್ರೇತ್ರಾಯುಗದಲ್ಲಿದ್ದಂತಿದ್ದಾರೆ. ಅಲ್ಲಿನ ಎಲೆಕ್ಷನ್ ಕ್ಯಾಂಡಿಡೇಟು ಒಬಾಮಾನಿಗೆ ಅವನ ಪಾದ್ರಿನ್ನೇ ಅಡ್ಜಸ್ಟ್ ಮಾಡೋದು ಗೊತ್ತಿಲ್ಲ! ಬೋಳೀಮಕ್ಕಳು ಇನ್ನೂ ಭಾಳ ರಾಜಕೀಯ ಕಲಿಯೋದು ಬಾಕಿ ಅದೆ" ಎಂದನು. ಮಾನಿಕಾ ಲೆವೆನ್ಸ್ಕಿ ಕತೆಯಿಂದ ಆಮೇರಿಕಾದವರೆಂದರೆ ಏನೇನೋ ಊಹಿಸಿಕೊಂಡಿದ್ದ ಅವನ ಪಟಾಲಂ, "ಅಂಗಿದ್ರೆ ಆ ಎಲ್ಲಾ ಯುಗಗಳಿಗಿಂತ ಹೊಸದಾದ ಕಲಿಯುಗದಲ್ಲಿರೋ ನಾವೇ ಭಾಳ ಮುಂದುವರಿದಿರೋದು!!!" ಎಂದು ತಮ್ಮತಮ್ಮಲ್ಲೇ ಅದೇನೋ ಜೋಕಿಸಿಕೊಂಡು ನಗಾಡಿಕೊಂಡರು.