ನಗ್ನ ಭಾರತದ ಸ್ನಿಗ್ಧ ದರ್ಶನ!

ಇದೀಗ ಟಿಕೆಟ್ ಪ್ರಹಸನ ಮುಗಿದಿದೆ. ರಾಜಕೀಯ ಪಕ್ಷಗಳು ಒಂದೊಂದಾಗಿ ತಮ್ಮ ತಮ್ಮ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿವೆ. ಈ ಪ್ರಣಾಳಿಕೆಗಳನ್ನು ಹಾಗೆಯೇ ಗಮನಿಸಿದರೆ ಮಾನವನ ಹುಟ್ಟಿನಿಂದ ಸಾವಿನವರೆಗೆ ಎಲ್ಲಾ ಉಚಿತ! ವಾಸಿಸಲು ಉಚಿತ ಜನತಾಮನೆ, ಗರ್ಭಿಣಿಯರಿಗೆ ಉಚಿತ ಹೆರಿಗೆ, ಉಚಿತ ಪೌಷ್ಟಿಕ ಆಹಾರ, ಶಾಲೆಯ ವಯಸ್ಸಿಗೆ ಬಂದೊಡನೆ ಪ್ರತಿ ಹಾಜರಾತಿಗೆ ಹತ್ತು ರೂಪಾಯಿ ನಗದು ಮತ್ತು ಉಚಿತ ಊಟ, ಮನೆಗೆ ಹೋದರೆ ಕುಟುಂಬದೆಲ್ಲರ ಮನರಂಜನೆಗೆ ಉಚಿತ ಟಿ.ವಿ., ತಿನ್ನಲು ತಿಂಗಳಿಗೆ ಇಪ್ಪತ್ತು ಕೆ.ಜಿ. ಅಕ್ಕಿ ಉಚಿತ ಇಲ್ಲವೇ ಎರಡು ರೂಪಾಯಿಗೆ ಕೆ.ಜಿ. ಅಕ್ಕಿ, ಅಪ್ಪ ನಿರುದ್ಯೋಗಿಯೇ ಚಿಂತಿಸಬೇಡಿ ಅವನಿಗೆ ನಿರುದ್ಯೋಗೀ ಭತ್ಯೆ, ಹೈಸ್ಕೂಲಿಗೆ ಬಂದೊಡನೆ ಉಚಿತ ಸೈಕಲ್, ಆರೋಗ್ಯ ಕೆಟ್ಟಿತೇ ಅದಕ್ಕೂ ಇದೆ ಸರ್ಕಾರಿ ಸವಲತ್ತು. ಕ್ಲಿಷ್ಟವಾದ ಹೃದಯಾಘಾತದಂತಹ ಸಮಸ್ಯೆಯೇ? ಇದೋ "ಯಶಸ್ವಿನಿ" ಯೋಜನೆ ಅದಕ್ಕಾಗಿಯೇ. ಇದೆಲ್ಲಾ ಮಿಕ್ಕಿ ಸತ್ತರೆ ಉಚಿತ ಸರ್ಕಾರಿ ಅಂತ್ಯಕ್ರಿಯೆ!

ಮಕ್ಕಳು ಬೆಳೆದು ದೊಡ್ಡವರಾದರೆ ಅವರಿಗೂ ನಿರುದ್ಯೋಗಿ ಭತ್ಯೆ ಮತ್ತೆ ಯಥಾರೀತಿ ಜನತಾಮನೆ.......

ಹೀಗೆ ಒಂದು ಕುಟುಂಬಕ್ಕೆ ಬೇಕಾದ ಮನೆ ಜನತಾಮನೆಯಲ್ಲಿ ಉಚಿತವಾಗಿ ದೊರೆತು, ಹೊಚ್ಚ ಹೊಸ ಭರವಸೆಯಲ್ಲಿ ಕಲರ್ ಟಿ.ವಿ. ದೊರೆತು, ಮಕ್ಕಳು ಶಾಲೆಗೆ ಹೋಗಿ ಪ್ರತಿದಿನ ತಲೆಗೆ ಹತ್ತು ರೂಪಾಯಿ ತಂದು, ತಿಂಗಳಿಗೆ ಉಚಿತ ಇಪ್ಪತ್ತು ಕೆ.ಜಿ. ಅಕ್ಕಿ ದೊರೆತು, ತಮ್ಮ ವೃದ್ಧ ತಂದೆತಾಯಿಗಳಿದ್ದರೆ ಅವರುಗಳ ಹೆಸರಿನಲ್ಲಿ ವೃದ್ಧಾಪ್ಯ ವೇತನವೋ, ವಿಧವಾ ಮಾಸಾಶನವೋ ಇನ್ನಿತರೆ ದಿನಸಿ ಸಾಮಾನು ಗಳಿಸಿಕೊಟ್ಟು, ಒಟ್ಟಾರೆ ಒಂದು ಸಾಮಾನ್ಯ ಸಂಸಾರ ಸಾಗಲು ಏನೇನು ಬೇಕೋ ಅದೆಲ್ಲವೂ ಉಚಿತವಾಗಿ ದೊರೆತಾಗ ಅದ್ಯಾವ ಮಹಾಶಯ ದುಡಿಯಲು ಹೋಗುವನೋ? ಅದರಲ್ಲೂ ಏನೇನೂ ಕಷ್ಟವೇ ಇಲ್ಲದೆ ಸಾಂಗವಾಗಿ ಸಂಸಾರ ಸಾಗುತ್ತಿರುವಾಗ! ಪುಸ ಪುಸ ಬೀಡಿ ಸೇದುತ್ತ ಗೂಡಂಗಡಿಗಳ ಮುಂದೆ ಇಲ್ಲ ಹಳ್ಳಿ ಕಟ್ಟೆಗಳ ಮೇಲೆ...........ನಡೆಯಲಿ ಕಟ್ಟೆ ಪುರಾಣ.... ಜೀವನ ಪರ್ಯಂತ.

ಅಕಸ್ಮಾತ್ ಹೆಣ್ಣುಮಗುವಿದ್ದರೆ ಅದರ ಹೆಸರಿನಲ್ಲಿ ಮದುವೆ ಖರ್ಚಿಗೆ ಸರ್ಕಾರವೇ ಹತ್ತು ಸಾವಿರ ರೂಪಾಯಿ ಡಿಪಾಸಿಟ್ ಇಡುತ್ತದೆ, ಅದರ ಮದುವೆ ಖರ್ಚಿನ ಚಿಂತೆಯೂ ಇಲ್ಲ. ಆದರೆ ಉಚಿತ ಮಕ್ಕಳನ್ನು ಮಾಡಿಕೊಡುವ ಯೋಜನೆಗಳನ್ನು ಇನ್ನೂ ಯಾವ ಪಕ್ಷಗಳೂ ತಂದಿಲ್ಲ, ಆದನ್ನೊಂದು ತಾವೇ ಕಷ್ಟ ಪಟ್ಟು ಮಾಡಿಕೊಳ್ಳಬೇಕು. ಮುಂದೆ ಕಾಂಗ್ರೆಸ್ಸಿನ ಡಿ.ಕೆ.ಶಿವಕುಮಾರ್ ಅಥವಾ ಬಿಜಿಪಿಯ ರೇಣುಕಾಚಾರ್ಯ ಇವರುಗಳು ಮುಖ್ಯಮಂತ್ರಿಗಳಾದರೆ ಈ ಯೋಜನೆಗಳೂ "ಅಫಿಶಿಯಲ್" ಆಗಿ ಬರಬಹುದೇನೋ? ಜೆಡಿಎಸ್ ನಲ್ಲಿ ಈ ಯೋಜನೆ ಯಾವತ್ತೂ ಜಾರಿಗೆ ಬಾರದು ಏಕೆಂದರೆ ಅವರುಗಳು ಸಲಿಂಗಕಾಮಿಗಳು. ಬೇರೆ ಪಕ್ಷದವರನ್ನು ’ಫ್’ ಮಾಡುವುದು ಅವರಿಲ್ಲದಿದ್ದರೆ ತಮ್ಮ ಪಕ್ಷದವರಲ್ಲೇ ಒಬ್ಬರ ಮೇಲೆ ಸವಾರಿ ಮಾಡುವುದು! ಅದಲ್ಲದೇ ಅವರುಗಳು ಬಹುವಾಗಿ ಮೊರೆಹೋಗುವ ಜ್ಯೋತಿಷಿಗಳು ಅವರುಗಳಿಗೆ ಮಹಿಳೆಯರೇ ಮರಣವನ್ನು ತರುವವರೆಂದು ಎಚ್ಚರಿಕೆ ಬೇರೆ ಹೊರಡಿಸಿದ್ದಾರೆ!

ಈ ಭ್ರಷ್ಟಾಚಾರೀ ನಾಯಕರುಗಳ ಈ ಯೋಜನೆಗಳನ್ನೊಮ್ಮೆ ಇಣುಕಿ ನೋಡಿದರೆ ಈ ಯೋಜನೆಗಳು ಅವರುಗಳ ಕೊಳಕು ಮನಸ್ಸಿಗೆ ಹಿಡಿದ ಕೈಗನ್ನಡಿಯಂತಿವೆ. ಪ್ರತಿಯೊಂದನ್ನೂ ಪುಕ್ಕಟೆ ಬಯಸುವ ಇವರ ಮನೋಭೀಷ್ಟೆಯನ್ನೇ ಇವರುಗಳು ಜನರಿಗೆ ನೀಡುತ್ತ ದುಡಿಯದೇ ಮಜಾ ಮಾಡಬೇಕು ಎಂದು ಭೋಧಿಸುತ್ತಿದ್ದಾರೆ. ಬಹುಶಃ ಇವರುಗಳ ಪ್ರಕಾರ ಭಾರತದಲ್ಲಿ ಬಡವರಾಗಿ ಹುಟ್ಟುವುದೇ ಒಂದು ದುಡಿಮೆ ಇದ್ದಂತೆ. ಕಳೆದ ಐವತ್ತು ವರ್ಷಗಳಲ್ಲಿ ಈ ರಾಜಕಾರಣಿಗಳು ಬಡವರ್ಗವನ್ನು ಯಶಸ್ವಿಯಾಗಿ ಭಿಕ್ಷುಕರನ್ನಾಗಿ ಪರವರ್ತಿಸಿದ್ದಷ್ಟೇ ಅಲ್ಲದೆ ಈ ವರ್ಗವನ್ನು ತಮ್ಮ ಖಾಯಂ ಮತದಾರರನ್ನಾಗಿಸಿಕೊಂಡಿದ್ದಾರೆ. ಏಕೆಂದರೆ ಭಾರತದ ಮಧ್ಯಮ ವರ್ಗ ಓಟು ಹಾಕುವ ಪ್ರಯತ್ನವನ್ನೇ ಮಾಡುವುದಿಲ್ಲ. ಚುನಾವಣೆಯ ದಿನದ ರಜೆಯನ್ನು ಮಜವಾಗಿ ಕಳೆಯಲು ಅತ್ತೆಯ ಮನೆಗೋ ಮಾವನ ಮನೆಗೋ ಹೋಗುತ್ತಾರೆ ಇಲ್ಲವೇ ಹಾಯಾಗಿ ಸಂಸಾರದೊಂದಿಗೆ "ಮಾಯಾಮೃಗ" ಮೆಗಾಸೀರಿಯಲ್ಲನ್ನೋ ಇಲ್ಲಾ ಮತ್ತೊಂದು ಈ ರೀತಿಯ ಗೋಳಿನ ಕಣ್ಣೀರ ಸಿನೆಮಾವನ್ನೋ ವೀಕ್ಷಿಸುತ್ತಾರೆ.

ಈ ಬಾರಿಯ ಚುನಾವಣೆಯಲ್ಲಿ ಈ "ಕಣ್ಣೀರು" ಮೆಚ್ಚುವ ವರ್ಗ ಹೆಚ್ಚಾಗಿರುವುದರಿಂದಲೋ ಏನೋ ಕುಮಾರಸ್ವಾಮಿ ಥೇಟ್ ತಮ್ಮ ತಂದೆಯಂತೆ ಅತ್ತರೆ, ನಾವ್ಯಾಕೆ ಹಿಂದೆ ಬೀಳಬೇಕೆಂದು ಕೃಷ್ಣ, ಖರ್ಗೆ ಕೂಡಾ ಅಳುಮುಂಜಿ ನಟೀಮಣಿಯರೂ ನಾಚುವಂತೆ ಗಳಗಳನೆ ಕಣ್ಣೀರು ಹರಿಸಿದ್ದಾರೆ. ಇಲ್ಲಿಯವರೆಗೂ ಮಣ್ಣಿನ ಮಗನಿಗೆ ಮಾತ್ರ ಸೀಮಿತವಾಗಿದ್ದ ಕಣ್ಣೀರು, ಈ ಬಾರಿ ಮುಖ್ಯವಾಹಿನಿಯಾಗಿ ಎಲ್ಲಾ ಪಕ್ಷಗಳೆಡೆ ಹರಿಯುತ್ತಲಿದೆ. ಬಹುಶಃ ಗೆಲ್ಲುವ ಹುಮ್ಮಸ್ಸಿನಲ್ಲಿರುವ ಬಿಜೆಪಿಯವರು ಚುನಾವಣೆಯ ನಂತರ ಆನಂದಭಾಷ್ಪಗಳನ್ನು ಸುರಿಸೋಣವೆಂದುಕೊಂಡಿರಬಹುದು!

ಸ್ವಾತಂತ್ರ್ಯಾ ನಂತರದ ಪ್ರಜಾಪ್ರಭುತ್ವದಲ್ಲಿ ಆಗಿ ಹೋದ ಪ್ರತಿಯೊಂದು ಸರ್ಕಾರಗಳೂ ದೇಶದ ಸಮಸ್ಯೆಗಳನ್ನು ಪರಿಹರಿಸುವುದೆಂದರೆ ಪರಿಹಾರ ಭಿಕ್ಷೆ ಕೊಡುವುದೆಂದೇ ಜನಜನಿತವಾಗಿಸಿಬಿಟ್ಟಿದ್ದಾರೆ. ನಿಮ್ಮ ಮನೆಗೆ ನೀರು ನುಗ್ಗಿ ಯಾರಾದರೂ ಸತ್ತರೇ, ಇದೋ ಪರಿಹಾರ, ನೀರಿಲ್ಲವೇ ಇದೋ ಪರಿಹಾರ, ಸರ್ಕಾರಿ ಬಸ್ ಗುದ್ದಿ ಯಾರಾದರೂ ಸತ್ತರೆ, ಇದೋ ಪರಿಹಾರ. ಬರೀ ಗಾಯಗೊಂಡಿರೋ ಚಿಂತಿಸಬೇಡಿ ಇಲ್ಲಿದೆ ಪರಿಹಾರ. ಹೀಗೆ ಕಳೆದ ಅರ್ಧ ಶತಮಾನದಿಂದಲೂ ಆಳಿದ ಸರ್ಕಾರಗಳು ಪರಿಹಾರದ ಭಿಕ್ಷೆಯನ್ನು ಕೊಟ್ಟೂ ಕೊಟ್ಟೂ, ಈಗ ಜನತೆಯು ಕೂಡ "ಒಂದು ರೂಪಾಯಿ" ಭಿಕ್ಷೆ ಬಿಸಾಡಿ, "ಒಂದು ಹತ್ತು ರೂಪಾಯಿ" ಭಿಕ್ಷೆ ಕೊಡಿ ಎಂದು ಡಿಮ್ಯಾಂಡಿಸುವ ಬೆಂಗಳೂರು ಭಿಕ್ಷುಕರ ರೀತಿಯಲ್ಲಿ ಪರಿಹಾರವನ್ನು ಡಿಮ್ಯಾಂಡಿಸುವ ಭಿಕ್ಷುಕರಾಗಿದ್ದಾರೆ. ಒಟ್ಟಾರೆ ಅತೀವ ಸ್ವಾತಂತ್ರ್ಯದ ಬಳುವಳಿಯೆಂದರೆ ಜನತೆಯನ್ನು ಭಿಕ್ಷುಕರಾಗಿಸಿರುವುದು! ಇದು ಎಷ್ಟರ ಮಟ್ಟಿಗೆ ಬೆಳೆದಿದೆಯೆಂದರೆ ಮನೆಯವರೆಲ್ಲಾ ಸೇರಿ ಯೋಚಿಸುತ್ತಾರೆ, ನಮ್ಮಲ್ಲಿ ಯಾರು ಸತ್ತು ಪರಿಹಾರ ದೊರಕಿಸಿ ಕುಟುಂಬವನ್ನು ಉಳಿಸಬಹುದೆಂದು! ಏಕೆಂದರೆ ಅವರುಗಳಿಗೆ ಇನ್ನ್ಯಾವ ಯೋಚನೆಗಳೂ ತೋಚದಂತೆ ಈ ರಾಜಕಾರಣಿಗಳು ಎಲ್ಲಾ ಅಮೂಲ್ಯ ಜೀವಗಳಿಗೂ ಮೌಲ್ಯದ ಪಟ್ಟಿ ಕಟ್ಟೀ ಕಟ್ಟೀ ಮಂಕುಗೊಳಿಸಿದ್ದಾರೆ.

ಅಲ್ಲಾ ಇದಕ್ಕೆಲ್ಲಾ ರಾಷ್ಟ್ರೀಯ ವಿಮಾ ಯೋಜನೆಗಳನ್ನು ಜಾರಿಗೊಳಿಸಿ ಈ ಎಲ್ಲಾ ನೈಸರ್ಗಿಕ ವಿಕೋಪ, ಅಪಘಾತಗಳನ್ನು ಯಶಸ್ವಿಯಾಗಿ ನಿಭಾಯಿಸದೆ ಈ ರೀತಿಯ ಪರಿಹಾರಗಳನ್ನು ಇನ್ನೂ ಅನುಷ್ಟಾನಗೊಳಿಸುತ್ತಿರುವುದು ಏಕೆ ಗೊತ್ತೆ? ಒಂದು ವೇಳೆ ಹಾಗೆ ವಿಮಾ ಯೋಜನೆಗಳನ್ನು ಅನುಷ್ಟಾನಗೊಳಿಸಿದರೆ, ವಿಮಾ ಕಂಪೆನಿ ಮತ್ತು ಪ್ರಜೆಗಳ ನಡುವೆ ನೇರ ಸಂಪರ್ಕವೇರ್ಪಟ್ಟು ಯಾವುದೇ ಭ್ರಷ್ಟಾಚಾರಕ್ಕೆ ಆಸ್ಪದವೇ ಇಲ್ಲದಂತಾಗುತ್ತದೆ. ಆಗ ಈ ಪರಿಹಾರಗಳ ಬೆಳೆಯನ್ನೇ ನೆಚ್ಚಿಕೊಂಡಿರುವ ರಾಜಕಾರಣಿಗಳು, ಅಧಿಕಾರಿಗಳು, ಬ್ರೋಕರ್ ಗಳು ಏನಾಗುತ್ತಾರೆ? ಅದೊಂದು ಬಹುದೊಡ್ಡ ಫುಡ್ ಚೈನ್! ಅದನ್ನು ಕಾಪಾಡುವುದು ಹೇಗೆ?

ಅಂದ ಹಾಗೆ ನಮ್ಮದು ನಿಜಾರ್ಥದಲ್ಲಿ ಪ್ರಜಾಪ್ರಭುತ್ವವೇ? ಏಕೆಂದರೆ ಕಳೆದ ಹಲವಾರು ಚುನಾವಣೆಗಳಲ್ಲಿ ಮತದಾನವಾಗುತ್ತಿರುವುದು ಅಬ್ಬಬ್ಬ ಎಂದರೆ ೫೦%. ಪ್ರತೀ ಕ್ಷೇತ್ರದಲ್ಲಿ ಕನಿಷ್ಟ ನಾಲ್ಕು ಅಭ್ಯರ್ಥಿಗಳಿದ್ದಾರೆಂದುಕೊಂಡರೂ, ಗೆದ್ದ ಅಭ್ಯರ್ಥಿಗೆ ಬಿದ್ದ ಮತಗಳು ೨೦% ಉಳಿದ ೩೦% ಮತಗಳು ಸೋತ ಅಭ್ಯರ್ಥಿಗಳಲ್ಲಿ ಹಂಚಿ ಹೋಗಿ, ಆ ಎಲ್ಲಾ ೩೦% ಜನರು ಗೆದ್ದ ಅಭ್ಯರ್ಥಿಯನ್ನು ತಿರಸ್ಕರಿಸಿದ್ದಾರೆಂದು ಅರ್ಥ. ಹೀಗೆ ಒಟ್ಟು ಮತಗಳ ಅತ್ಯಂತ ಕಡಿಮೆ ಮತಗಳು ದೊರೆತ ಅಭ್ಯರ್ಥಿಯನ್ನು ಹೇಗೆ ಗೆದ್ದನೆನ್ನುವರೋ? ಅದಕ್ಕೊಂದು ಸರಿ ಅರ್ಥದ ಚುನಾವಣಾ ವ್ಯವಸ್ಥೆಯನ್ನು ಇನ್ನೂ ರೂಪಿಸದ ಭಾರತೀಯರು ಅದು ಹೇಗೆ ಭಾರತದ ಸಮಗ್ರತೆಯನ್ನು ರೂಪಿಸುವರೋ? ಈ ವ್ಯವಸ್ಥೆಯನ್ನು ಯಾರಾದರೂ ಸರಿಪಡಿಸಲೆತ್ನಿಸಿ ಸಂವಿಧಾನಕ್ಕೆ ತಿದ್ದುಪಡಿಯನ್ನು ತರಲು ಯತ್ನಿಸಿದರೆ, ಕೂಡಲೇ ಅವರನ್ನು ಕಾಂಗ್ರೆಸ್ಸಿನಿಂದ ಪಕ್ಷೇತರರವರೆಗೂ ಎಲ್ಲರೂ ಒಕ್ಕೊರಲಿನಿಂದ "ಇವರೇನು ಸಂವಿಧಾನ ಶಿಲ್ಪಿ ಅಂಬೇಡ್ಕರರಿಗಿಂತ ಬುದ್ಧಿವಂತರೇ? ಸಂವಿಧಾನಕ್ಕೆ ತಿದ್ದುಪಡಿ ತಂದು ಇವರು ಅಂಬೇಡ್ಕರರಿಗೆ ಅವಮಾನಿಸುತ್ತಿದ್ದಾರೆ" ಎಂದು ಓಲೈಕೆಗೆ ಮೊರೆಹೋಗುತ್ತಾರೆ. ಪಾಪ, ಅಂದಿನ ಭಾರತದ ಪರಿಕಲ್ಪನೆ, ಭವಿಷ್ಯ, ಪ್ರಗತಿಯ ಒಂದು ಸಮಗ್ರ ದೃಷ್ಟಿಯನ್ನಿಟ್ಟುಕೊಂಡು ಒಂದು ಶಿಸ್ತುಬದ್ಧ ಸಂವಿಧಾನವನ್ನು ಅಂಬೇಡ್ಕರರು ಬರೆದಿಟ್ಟಿದ್ದರೆ, ಇಂದು ಆ ಸಂವಿಧಾನವನ್ನು ಕಾಲಕ್ಕೆ ತಕ್ಕಂತೆ ಬದಲಾಯಿಸದೆ ನಮ್ಮ ನಾಯಕರುಗಳು ಅಂಬೇಡ್ಕರರಿಗೆ ಅಪಚಾರವೆಸಗುತ್ತಿದ್ದಾರೆನಿಸುತ್ತದೆ!

ಅಣಕ:

ಒಬ್ಬ ರಾಜಕಾರಣಿ ಅಮೇರಿಕಾ ಪ್ರವಾಸ ಮುಗಿಸಿ ಭಾರತಕ್ಕೆ ವಾಪಸ್ಸಾದ. ಸಂಜೆಯ ಪಾರ್ಟಿಯಲ್ಲಿ ಸೇರಿದ ಅವನ ಪಟಾಲಂ "ಅಮೇರಿಕಾದ ಜನ ಹೇಗೆ?" ಎಂದು ಪ್ರಶ್ನಿಸಿತು. ಅದಕ್ಕೆ ಅವನು, "ಅಮೇರಿಕಾದ ಜನ ಬಹಳ ಸಂಭಾವಿತರು. ಒಬ್ಬರಿಗೂ ಸುಳ್ಳು ಹೇಳಲು ಬರುವುದಿಲ್ಲ. ಅವರೊಂದು ತರಹ ದ್ವಾಪರಯುಗ, ತ್ರೇತ್ರಾಯುಗದಲ್ಲಿದ್ದಂತಿದ್ದಾರೆ. ಅಲ್ಲಿನ ಎಲೆಕ್ಷನ್ ಕ್ಯಾಂಡಿಡೇಟು ಒಬಾಮಾನಿಗೆ ಅವನ ಪಾದ್ರಿನ್ನೇ ಅಡ್ಜಸ್ಟ್ ಮಾಡೋದು ಗೊತ್ತಿಲ್ಲ! ಬೋಳೀಮಕ್ಕಳು ಇನ್ನೂ ಭಾಳ ರಾಜಕೀಯ ಕಲಿಯೋದು ಬಾಕಿ ಅದೆ" ಎಂದನು. ಮಾನಿಕಾ ಲೆವೆನ್ಸ್ಕಿ ಕತೆಯಿಂದ ಆಮೇರಿಕಾದವರೆಂದರೆ ಏನೇನೋ ಊಹಿಸಿಕೊಂಡಿದ್ದ ಅವನ ಪಟಾಲಂ, "ಅಂಗಿದ್ರೆ ಆ ಎಲ್ಲಾ ಯುಗಗಳಿಗಿಂತ ಹೊಸದಾದ ಕಲಿಯುಗದಲ್ಲಿರೋ ನಾವೇ ಭಾಳ ಮುಂದುವರಿದಿರೋದು!!!" ಎಂದು ತಮ್ಮತಮ್ಮಲ್ಲೇ ಅದೇನೋ ಜೋಕಿಸಿಕೊಂಡು ನಗಾಡಿಕೊಂಡರು.

1 comment:

Anonymous said...

ನಿಮ್ಮ ಬರಹದ ಕೊನೆಯ ಜೋಕು ನಮ್ಮ ಇಡೀ ವ್ಯವಸ್ಥೆಗೆ ಹಿಡಿದ ಕನ್ನಡಿ. ನಿಮ್ಮಿಂದ ಇನ್ನಷ್ಟು ಲೇಖನಗಳು ಮೂಡಿಬರಲೆಂದು ಹಾರೈಸುವ...
ಗಣೇಶ್.