ಜನಹಿತ(?!) ಪರಮಾಣು ಒಪ್ಪಂದ ಮತ್ತು ನಾವು!

ಅಂತೂ ಈ ಅಮೇರಿಕಾ-ಭಾರತದ ನಡುವಿನ ಪರಮಾಣು (ಜನಹಿತ) ಒಪ್ಪಂದ ದೇಶಾದ್ಯಂತ ಸಂಚಲನವನ್ನು ಉಂಟುಮಾಡಿ ಕ್ಷಣಕ್ಷಣಕ್ಕೂ ಇಡೀ ದೇಶವನ್ನು ಉದ್ವೇಗದಲ್ಲಿಟ್ಟು ಕಾತರಿಸುವಂತೆ ಮಾಡಿ, ಸದ್ಯಕ್ಕೆ ಚುನಾವಣಾ ಭೂತ ಧುತ್ತನೇ ಎದುರಾಗದಂತೆ ಜನಸಾಮಾನ್ಯ ನಿಟ್ಟುಸಿರು ಬಿಡುವಂತಾಗಿದೆ. ಯಾವುದೇ ಒಂದು ಜ್ಞಾನವನ್ನು ಲೋಕ ಕಲ್ಯಾಣಕ್ಕಾಗಿಯಾಗಲೀ, ಲೋಕ ವಿನಾಶಕ್ಕಾಗಿಯಾಗಲೀ ಹೇಗೆ ಬೇಕೋ ಹಾಗೆ ಬಳಸಿಕೊಳ್ಳಬಹುದು. ಆ ಜ್ಞಾನ ಯಾರ ಕೈಯಲ್ಲಿದೆ ಎಂಬುದು ಇದನ್ನು ನಿರ್ಧರಿಸುತ್ತದೆ. ಅದು ತತ್ವ ಸಿದ್ದಾಂತಗಳಿರಬಹುದು ಅಥವಾ ವೈಜ್ಞಾನಿಕ ಸಂಶೋಧನೆಗಳಿರಬಹುದು. ಹಾಗೆಯೇ ಈ ಪರಮಾಣು ವಿಜ್ಞಾನ ಕೂಡಾ. ಹಾಗಾಗಿಯೇ ಪರಮಾಣು ಸಂಬಂಧೀ ಒಪ್ಪಂದಗಳನ್ನು ಅಣ್ವಸ್ತ್ರ (ಮಿಲಿಟರಿ) ಒಪ್ಪಂದವೆಂದೂ, ಜನ ಹಿತಾಸಕ್ತಿಯ (ಸಿವಿಲಿಯನ್) ಅಣು ಒಪ್ಪಂದಗಳೆಂದೂ ವಿಂಗಡಿಸುತ್ತಾರೆ. ಹಾಗಾಗಿಯೇ ನಾನು ಇದನ್ನು ಜನಹಿತ ಅಣು ಒಪ್ಪಂದವೆಂದು ಕರೆದಿದ್ದೇನೆ.

ಏನಿದು ಈ ಒಪ್ಪಂದ? ಇದರಲ್ಲಿನ ಅನುಕೂಲ/ಪ್ರತಿಕೂಲಗಳೇನು? ನಿಮ್ಮ ವೈಯುಕ್ತಿಕ ಅಭಿಪ್ರಾಯಗಳೇನು ಎಂದು ನನ್ನ ಆತ್ಮೀಯ ಓದುಗ ಮಿತ್ರ ಅನಿಲ್ ಕೇಳಿ ಬರೆದಿದ್ದರು. ಈ ವಿಷಯವಾಗಿ ಕಳೆದ ವಾರವೇ ಬರೆಯಬೇಕೆಂದಿದ್ದರೂ ನನ್ನ ಮೀನು ಹಿಡಿಯುವಾಟ "ಬರ್ತಾ" ಎಂಬ ಚಂಡಮಾರುತ ತಟ್ಟುವ ಶಂಕೆಯಿಂದ ಹೊಯ್ದಾಡಿ, ನನ್ನನ್ನು ಮತ್ಸ್ಯಕನ್ಯೆಯರಂತಿರುವ ದಕ್ಷಿಣ ಅಮೇರಿಕಾದ ಸ್ಪಾನಿಷ್ ಸುಂದರಿಯರ ನಡುವೆ ತೊಯ್ದಾಡಿಸಿ, ಮೈಯಾಮಿ ದಡಕ್ಕೆ ಎಸೆದಿತ್ತು! ಆ ತೊಯ್ದಾಟದ ಹಸಿ(ಬಿಸಿ)ಯನ್ನು ಆರಿಸಿಕೊಳ್ಳಲು ನನ್ನ ಬರವಣಿಗೆಯ ಪ್ರಕ್ರಿಯೆಯಿಂದ ಒಂದು ವಾರದ ರಜೆಯನ್ನು ತೆಗೆದುಕೊಳ್ಳಬೇಕಾಯಿತು. ನೀವುಗಳು ಇದನ್ನರಿತು ಕ್ಷಮಿಸುತ್ತೀರೆಂದುಕೊಂಡಿದ್ದೇನೆ.

ಇರಲಿ, ಈ ಒಪ್ಪಂದದ ಕುರಿತು ನಮ್ಮ ನಾಯಕರುಗಳು, ಎಡ-ಬಲ ಬುದ್ದಿಜೀವಿಗಳು, ವಿಜ್ಞಾನಿಗಳು....ಎಲ್ಲಾ ಏನು ಹೇಳುತ್ತಾರೆ ಎಂಬುದನ್ನು ವಿಶ್ಲೇಷಿಸುವ ಮುನ್ನ ಈ ಒಪ್ಪಂದದಲ್ಲಿರುವ ಕಟ್ಟಳೆಗಳನ್ನು ನಾವು ಅವಲೋಕಿಸೋಣ. ಇದರಲ್ಲಿರುವ ಕಟ್ಟಳೆಗಳು,

೧. ಭಾರತವು ’ಇಂಟರ್ ನ್ಯಾಷನಲ್ ಅಟಾಮಿಕ್ ಎನರ್ಜಿ ಅಸೋಸಿಯೇಷನ್ (ಐ.ಎ.ಇ.ಎ)’ನ ಪರಿವೀಕ್ಷಕರುಗಳನ್ನು ತನ್ನ ಜನಹಿತ ಪರಮಾಣು ಕೇಂದ್ರಗಳ ಪರಿವೀಕ್ಷಣೆಯನ್ನು ಮಾಡಲು ತೆರೆದಿಡಬೇಕು. ಅಂದಹಾಗೆ ಈ ಐ.ಎ.ಇ.ಎ ವಿಶ್ವಸಂಸ್ಥೆಯ ಅಂಗಸಂಸ್ಥೆ. ಭಾರತವು ತನ್ನ ಇಪ್ಪತ್ತೆರಡು ಅಣು ವಿಕಿರಣ ಕೇಂದ್ರಗಳಲ್ಲಿ ಹದಿನಾಲ್ಕು ಜನಹಿತದ್ದಾಗಿವೆಯೆಂದೂ, ಈ ಹದಿನಾಲ್ಕು ಕೇಂದ್ರಗಳನ್ನು ವಿಶ್ವಸಂಸ್ಥೆಯ ಪರಿವೀಕ್ಷಕರಿಗೆ ತೆರೆದಿಡುವುದಾಗಿ ಒಪ್ಪಿಕೊಂಡಿದೆ. ಅಷ್ಟೇ ಅಲ್ಲದೆ ಮುಂದೆ ತಾನು ಕಟ್ಟಬಹುದಾದ ಯಾವುದೇ ಜನಹಿತ ಪರಮಾಣು ವಿಕಿರಣ ಕೇಂದ್ರಗಳನ್ನು ಈ ಒಡಂಬಡಿಕೆಯ ಪ್ರಕಾರ ಪರಿವೀಕ್ಷಣೆಗೆ ತೆರೆದಿಡುವುದಾಗಿ ಹೇಳಿದೆ. ಭಾರತವು ಈ ಒಪ್ಪಂದದ ಮೊದಲು ತನ್ನ ಸ್ವಂತ ಶಕ್ತಿಯಿಂದ ನಿರ್ಮಿಸಿರುವ ಅಣು ವಿಕಿರಣ ಕೇಂದ್ರಗಳು ಈ ಒಪ್ಪಂದಕ್ಕೆ ಒಳಪಡುವುದಿಲ್ಲ.

೨. ಭಾರತವು ಮೇಲಿನ ಒಪ್ಪಂದಕ್ಕೆ ಪೂರಕವಾಗಿ ಯಾವುದೇ ರೀತಿಯ ಸೇಫ್ಟಿ ಪರೀವೀಕ್ಷಣೆಗಳನ್ನು ಮಾಡಲು ವಿಶ್ವಸಂಸ್ಥೆಯೊಂದಿಗೆ ಮತ್ತೊಂದು ಒಪ್ಪಂದಕ್ಕೆ ಸಹಿ ಹಾಕಲು ಒಪ್ಪಿದೆ.

೩. ಭಾರತ ತನ್ನ ತತ್ಕಾಲಿತವಾಗಿ ಸ್ಥಗಿತಗೊಳಿಸಿರುವ ಅಣ್ವಸ್ತ್ರ ಪರೀಕ್ಷೆಗಳನ್ನು ಯಥಾರೀತಿ ತತ್ಕಾಲವಾಗಿ ಸ್ಥಗಿತಗೊಳಿಸಿರುತ್ತದೆ.

೪. ಭಾರತವು ತನ್ನ ಅಣ್ವಸ್ತ್ರಗಳ ನಿರ್ಮಾಣಕ್ಕೆ ಬೇಕಾಗಬಹುದಾದ ಸಾಮಗ್ರಿಗಳನ್ನು ತಯಾರಿಸುವುದನ್ನು ಬಹಿಷ್ಕರಿಸುವ ಒಪ್ಪಂದವನ್ನು ಮುಕ್ತವಾಗಿ ಚರ್ಚಿಸಲು ಅಮೇರಿಕಾದೊಂದಿಗೆ ಅವಕಾಶವನ್ನು ಹೊಂದಿರುತ್ತದೆ.

೫. ಭಾರತವು ತನ್ನ ಪರಮಾಣು ತಂತ್ರಜ್ಞಾನವನ್ನಾಗಲೀ, ಸಾಮಗ್ರಿಗಳನ್ನಾಗಲಿ ಇತರೆ ಪರಮಾಣು ತಂತ್ರಜ್ಞಾನವಿಲ್ಲದ ದೇಶಗಳೊಂದಿಗೆ ಹಂಚಿಕೊಳ್ಳುವುದಾಗಲೀ ಮಾರುವುದಾಗಲೀ ಮಾಡಬಾರದು.

೬. ಭಾರತವು ತನ್ನ ಪರಮಾಣು ವಿಕಿರಣ ಕೇಂದ್ರಗಳನ್ನು ಕಟ್ಟುವ ಮತ್ತು ಸಾಮಗ್ರಿಗಳನ್ನು ಪೂರೈಸುವ ಕಾಂಟ್ರ್‍ಯಾಕ್ಟ್ ಅನ್ನು ಅಮೇರಿಕಾ ಕಂಪೆನಿಗಳಿಗೆ ಕೂಡ ಕೊಡಬೇಕು.

೭. ಅಮೇರಿಕಾವು ಭಾರತಕ್ಕೆ ಉಭಯ-ಬಳಕೆಯ ಪರಮಾಣು ತಂತ್ರಜ್ಞಾನ, ಯಂತ್ರ, ಸಾಮಗ್ರಿಗಳನ್ನು ಪೂರೈಸುತ್ತದೆ.

ಈ ಉಭಯ-ಬಳಕೆಯ ತಂತ್ರಜ್ಞಾನವನ್ನು ಉಪಯೋಗಿಸಿ ಭಾರತವು ಯುರೇನಿಯಮ್ ಅನ್ನು ವೃದ್ಧಿಗೊಳಿಸಿಬಹುದು ಅಥವಾ ಪ್ಲುಟೋನಿಯಮ್ ಅನ್ನು ಸಂಸ್ಕರಿಸಿ ಪರಮಾಣು ಅಸ್ತ್ರಗಳಿಗೆ ಬೇಕಾದ ಅವಶ್ಯಕ ಸಾಮಗ್ರಿಗಳನ್ನು ಕೂಡಾ ತಯಾರಿಸಿಕೊಳ್ಳಬಹುದಾಗಿದೆ. ಹಾಗಾಗಿಯೇ ಅಮೇರಿಕಾದಲ್ಲಿ ಈ ಒಪ್ಪಂದಕ್ಕೆ ಭಾರೀ ವಿರೋಧವನ್ನು ವ್ಯಕ್ತಪಡಿಸಲಾಗಿದೆ.

ಇದರಿಂದ ಭಾರತಕ್ಕೆ ಆಗುವ ಉಪಯೋಗಗಳು ಪರಮಾಣು ತಂತ್ರಜ್ಞಾನ, ಉಪಕರಣ, ಸಾಮಗ್ರಿಗಳ ಲಭ್ಯವಷ್ಟೇ ಅಲ್ಲದೆ ಅಂತರ್ರಾಷ್ಟ್ರ್‍ಈಯ ಮಟ್ಟದಲ್ಲಿ ಭಾರತಕ್ಕೆ ಮಾನ್ಯತೆ ದೊರಕುತ್ತದೆ. ಈ ಒಪ್ಪಂದವು ಭಾರತ ತನ್ನ ಪರಮಾಣು ಅಸ್ತ್ರಗಳ ಸಂಖ್ಯೆಯನ್ನು ಇಂತಿಷ್ಟೇ ಎಂದು ಸೀಮಿತಗೊಳಿಸುತ್ತಿಲ್ಲವೆಂದು ಅಂತರ್ರಾಷ್ಟ್ರೀಯ ವಲಯದಲ್ಲಿ ವಿರೋಧಗಳು ವ್ಯಕ್ತವಾಗಿವೆ. ಅಷ್ಟೇ ಅಲ್ಲದೇ ಈ ಒಪ್ಪಂದವು ಭಾರೀ ಭಾರತ ಪರವಾಗಿದೆಯೆಂದೂ ಅಮೇರಿಕಾದಲ್ಲಿ ವಿರೋಧಗಳು ವ್ಯಕ್ತವಾಗಿವೆ. ಚೀನಾವನ್ನು ಹತ್ತಿಕ್ಕಬೇಕೆಂಬ ಒಂದೇ ಉದ್ದೇಶದಿಂದ ಅಮೇರಿಕಾವು ಭಾರತಕ್ಕೆ ಭಾರೀ ಕೊಡುಗೆಯನ್ನು ನೀಡುತ್ತಿದೆ. ಇದು ಸಲ್ಲ ಎಂದೂ ಕೂಡ ವಿರೋಧಗಳು ಅಂತರ್ರಾಷ್ಟ್ರೀಯ ವಲಯದಲ್ಲಿ ವ್ಯಕ್ತವಾಗಿವೆ.

ಮತ್ತು ಯಾವುದೇ ಒಪ್ಪಂದಗಳನ್ನು ಸಂಬಂಧಿಸಿದ ಪಾರ್ಟಿಗಳು ಪರಸ್ಪರ ರದ್ದು ಮಾಡಬಹುದಾದಂತಹ ರದ್ದತಿ ಅವಕಾಶ ಕೂಡಾ ಇದರಲ್ಲಿ ಇದೆ.

ಇನ್ನು ಅಂತರ್ರಾಷ್ಟ್ರೀಯ ಮಟ್ಟದಿಂದ ನಮ್ಮ ಭಾರತದ ಪರಿಧಿಯೊಳಕ್ಕೆ ಬರೋಣ. ಈ ಒಪ್ಪಂದವನ್ನು ಶುರು ಮಾಡಿದ್ದ ಬಿಜೆಪಿ ಈಗ ಇದನ್ನು ವಿರೋಧಿಸುತ್ತಿರುವುದು ಏಕೆಂದು ಯಾರಿಗಾದರೂ ಅರ್ಥವಾಗಬಲ್ಲುದೇ ಆಗಿದೆ. ತಾವು ಶುರು ಮಾಡಿದ್ದು ಕಾಂಗ್ರೆಸ್ಸಿಗೆ ಹೆಸರು ತಂದುಕೊಟ್ಟರೆ ಹೇಗೆ ಎಂಬುದು ಬಿಜೆಪಿಯ ಕೊರಗು. ಇನ್ನು ನಮ್ಮ ಕಮ್ಯುನಿಸ್ಟರು, ವಿಶ್ವಾದ್ಯಾಂತ ಕಮ್ಯುನಿಸ್ಟ್ ಸರ್ಕಾರಗಳು ಏನಾಗಿದ್ದಾವೆಂದು ಕೊಂಚ ದೃಷ್ಟಿ ಹರಿಸಿ ನೋಡುವುದು ಉತ್ತಮ. ರಷ್ಯಾ ಛಿದ್ರಗೊಂಡು, ಕಾಂಬೋಡಿಯಾದ "ಕಿಲ್ಲಿಂಗ್ ಫೀಲ್ಡ್ಸ್" ಎಂದೇ ಪ್ರಖ್ಯಾತಗೊಂಡ ನರಮೇಧ ನಡೆದು, ಪಕ್ಕದ ಬರ್ಮಾದಲ್ಲಿ ಇನ್ನೂ ಜನ ಕೈಯಲ್ಲಿ ಜೀವ ಹಿಡಿದು ಬದುಕುತ್ತಿರುವುದು, ನಮ್ಮ ಪ್ರಜಾಪ್ರಭುತ್ವದ ಫಸಲು ಉಣ್ಣುತ್ತಿರುವ "ಲಾಲ್ ಸಲಾಮಿ" ಕಾಮ್ರೇಡರಿಗೆ ಅರಿವಾಗುತ್ತಿಲ್ಲವೇಕೋ? ಪ್ರಚಲಿತ ವಿಶ್ವಮಾನದಲ್ಲಿ ಈ ಸತ್ತ ಕಮ್ಯುನಿಸ್ಟ್ ತತ್ವಗಳು ಅಭಾಸವೆಂದು ಅರಿತೇ ಪೋಲೆಂಡ್ ಡೆಮಾಕ್ರಸಿಗೆ ಬದಲಾಯಿಸಿಕೊಂಡಿದೆ. ಹಾಗೆಯೇ ದೈತ್ಯ ಚೀನಾ ಕೂಡ ತನ್ನ ಪ್ರಜೆಗಳು ಮನೆ/ಮಠದಂತಹ ಆಸ್ತಿಗಳನ್ನು ಖರೀದಿಸಿ ಆಸ್ತಿ ಒಡೆಯರಾಗಬಹುದೆಂದು ಬದಲಾವಣೆಗಳನ್ನು ಮಾಡಿಕೊಳ್ಳುತ್ತ, ಕಾಮ್ರೇಡುಗಿರಿಯಿಂದ ಏಕ ಪಕ್ಷದ ಡೆಮಾಕ್ರಸಿಗೆ ಬದಲಾಗಿ, ನಿಧಾನವಾಗಿ ಭವಿಷ್ಯದಲ್ಲಿ ಸಂಪೂರ್ಣ ಡೆಮಾಕ್ರಸಿಯತ್ತ ನಡೆಯಲು ಮುಖ ಮಾಡಿದೆ. ಛಿದ್ರಗೊಂಡ ರಷ್ಯಾದ ದೇಶಗಳಲ್ಲಿನ ಹೈಸ್ಕೂಲು ಬಾಲೆಯರು " ಮುಂದೆ ನೀವು ಏನಾಗಬಯಸುತ್ತೀರಿ?" ಎಂಬ ಪ್ರಶ್ನೆಗೆ ತಾವು ಬೇಗನೇ "ಕಾಲ್ ಗರ್ಲ್"ಗಳಾಗಿ ಆದಷ್ಟು ಬೇಗ ದುಡಿದು ಬಡತನದಿಂದ ಪಾರಾಗುತ್ತೇವೆ ಎನ್ನುವಂತಹ ಪರಿಸ್ಥಿತಿ, ಬಹುಕಾಲ ರಷ್ಯಾವನ್ನಾಳಿದ ಕಮ್ಯುನಿಸ್ಟ್ ಪ್ರಭಾವದಿಂದಾಗಿದೆ.

ಇನ್ನು ಇದೇ ಪರಮಾಣು ಒಪ್ಪಂದ ಭಾರತ-ರಷ್ಯಾ ಅಥವಾ ಭಾರತ-ಚೀನಾ ನಡುವೆ ಇದ್ದಿದ್ದರೆ ನಮ್ಮ ಕಮ್ಯುನಿಸ್ಟರು "ಕೆಂಪು"ಹಾಸು ಹಾಸಿ ಸ್ವಾಗತಿಸುತ್ತಿದ್ದರು. ಒಂದು ವಿಶಿಷ್ಟ ಸಂಸ್ಕೃತಿಯ, ವಿಭಿನ್ನ ಜನಾಂಗದ ಒಂದು ಇಡೀ ಟಿಬೆಟ್ ದೇಶವನ್ನೇ ಆಕ್ರಮಿಸಿಕೊಂಡಿರುವ ಚೀನಾದ ವಿರುದ್ಧ ವಿಶ್ವಾದ್ಯಾಂತ ಭಾರೀ ವಿರೋಧಗಳು ವ್ಯಕ್ತವಾಗುತ್ತಿದ್ದರೂ, ಈ ನಮ್ಮ ಭಾರತೀಯ ಕಮ್ಯುನಿಸ್ಟರು ಎಂದಾದರೂ ಟಿಬೆಟ್ ನ ನರಮೇಧದ ವಿರುದ್ಧ ಉಸಿರೆತ್ತಿದ್ದಾರೆಯೇ? ಈ ಕಮ್ಯುನಿಸ್ಟರ ನಿಷ್ಟೆ ಭಾರತಕ್ಕಲ್ಲ, ಸತ್ತ ವಿದೇಶೀ ತತ್ವಗಳ ಪ್ರೇತಾತ್ಮಗಳಿಗೆ. ರಾಷ್ಟ್ರ್‍ಈಯ ಭದ್ರತೆಯ ಈ ಒಡಂಬಡಿಕೆಯ ವಿವರವಾದ ದಾಖಲೆಗಳನ್ನು, ತಮ್ಮೊಂದಿಗೆ ಸರ್ಕಾರ ಹಂಚಿಕೊಂಡಿಲ್ಲವೆಂದು ದೂರುತ್ತ ತಮ್ಮ ಬೆಂಬಲವನ್ನು ಹಿಂತೆಗೆದುಕೊಂಡ ಈ "ಲಾಲ್"ಗಳಿಗೆ, ರಾಷ್ಟ್ರ್‍ಈಯ ಭದ್ರತೆಯ ವಿಷಯಗಳನ್ನು ಭದ್ರವಾಗಿಡುವುದು ಕೂಡ ಪ್ರಧಾನಿಯ ಕಾರ್ಯವೆಂದು ತಿಳಿಯದೆ? ಹಾಗೇನಾದರೂ ಇವರಿಗೆ ವಿವರ ಸಿಕ್ಕಿದ್ದರೆ, ಅದರ ಕಾಪಿಯೊಂದು ಚೀನಾದ ಕೈ ಸೇರದೇ ಇರುವುದೇ?

ಸತ್ತ ತತ್ವಗಳ ಕಮ್ಯುನಿಸ್ಟರಂತೆಯೇ ನಮ್ಮ ಹಲವು ಬುದ್ಧಿಜೀವಿಗಳೂ ಕೂಡಾ ಯಾವುದೋ ಭಾವನಾಲೋಕದಲ್ಲಿ ವಿಹರಿಸುತ್ತಾ ಭಾರತದ ಕಠೋರ ಸತ್ಯದ ಅರಿವನ್ನು ಅರಿಯುವ ಪ್ರಯತ್ನವನ್ನೇ ಮಾಡಿಲ್ಲ/ಮಾಡುತ್ತಿಲ್ಲ. ಅರಿವಿದ್ದರೂ ಜಾಣ ಕುರುಡು, ಜಾಣ ಕಿವುಡು ಪ್ರದರ್ಶಿಸುತ್ತಾರೆ. ಹಲವಾರು ಬುದ್ಧಿಜೀವಿಗಳು, "ಅಂದು ಪ್ರಾಂತೀಯ ರಾಜರುಗಳು ಭಾರತವನ್ನು ತಟ್ಟೆಯಲ್ಲಿಟ್ಟು ಬ್ರಿಟಿಷರಿಗೆ ಕೊಟ್ಟಂತೆ ಇಂದು ಸರ್ಕಾರ, ಭಾರತವನ್ನು ಅಮೇರಿಕಾದ ಗುಲಾಮಗಿರಿಗೆ ಒಡ್ಡುತ್ತಿದೆ" ಎಂದೆಲ್ಲಾ ಕಾವ್ಯಮಯವಾಗಿ ವರ್ಣಿಸುತ್ತಾ ಮುಗ್ಧಜನರನ್ನು ಹಾದಿ ತಪ್ಪಿಸುತ್ತ ಜನರ ಮುಗ್ಧ ಭಾವನೆಗಳ ಶೋಷಣೆಯನ್ನೇ ಮಾಡುತ್ತಿದ್ದಾರೆ ಎನ್ನಬಹುದು. ಅಲ್ಲಾ, ಸ್ವಾತಂತ್ರ್ಯ ದೊರೆತು ನಾವುಗಳೆಲ್ಲಾ ಯಾವ ಸ್ಥಿತಿಯಲ್ಲಿಂದು ಇದ್ದೇವೆ ಎಂಬುದನ್ನು ನಮಗೆ ತಿಳಿಯದೇ? ಹಿಂದೊಮ್ಮೆ ಪಿ.ವಿ. ನರಸಿಂಹರಾಯರ ಕಾಲದಲ್ಲಿ ಒಬ್ಬ ಸಂಸದ ಒಂದು ಕೋಟಿಗೆ ಬಿಕರಿಯಾಗಿದ್ದರೆ ಇಂದು ಅದೇ ಸಂಸದ, ಆರ್ಥಿಕ ನೈಪುಣ್ಯ ಮನಮೋಹನ್ ಸಿಂಗ್ ರ ಕಾಲದಲ್ಲಿ ಮೂವತ್ತು ಕೋಟಿಗೆ ಬಿಕರಿಯಾಗುತ್ತಿದ್ದಾನೆ/ಆಗಿದ್ದಾನೆ. ಹಿಂದೊಮ್ಮೆ ಕಾಂಗ್ರೆಸ್ಸಿಗರು ಐದು ಲಕ್ಷಕ್ಕೆ ಒಬ್ಬೊಬ್ಬ ಶಾಸಕನನ್ನು ಖರೀದಿ ಮಾಡಿದ್ದರೆ, ಇಂದು ಬಿಜೆಪಿ ಹತ್ತತ್ತು ಕೋಟಿಗೆ ಖರೀದಿ ಮಾಡಿದೆ. ಇದೂ ಕೂಡಾ ಸ್ವತಂತ್ರ ಭಾರತದ ಇನ್ಫ್ಲೇಷನ್ ಮಹಿಮೆ ಇರಬಹುದು. ಅಷ್ಟೇ ಅಲ್ಲ, ಸ್ವತಂತ್ರ ಭಾರತದಲ್ಲಿ ಕೇವಲ ಇಪ್ಪತ್ತು ಸಂಸದರನ್ನಿಟ್ಟುಕೊಂಡು ಒಬ್ಬ ಪ್ರಧಾನಿಯಾಗಬಹುದು. ಪಕ್ಷೇತರನೊಬ್ಬ ಮುಖ್ಯಮಂತ್ರಿಯಾಗಬಹುದು. ರಾಜರೋಷವಾಗಿ ನಾನು ಈ ಜಾತಿ, ನನಗೆ ಇಂತಹ ಖಾತೆ ಬೇಕೆಂದು ಡಿಮ್ಯಾಂಡಿಸಬಹುದು. ನಮ್ಮ ಬುದ್ದಿಜೀವಿಗಳು ಈ ಸ್ವಾತಂತ್ರ್ಯವನ್ನು ಕೊಂಚ ಧೀರ್ಘವಾಗಿ ಅವಲೋಕಿಸುವುದು ಸೂಕ್ತ.

ಈ ಮೇಲ್ಕಾಣಿಸಿದ ಒಡಂಬಡಿಕೆಯ ಕಟ್ಟಳೆಗಳನ್ನು ನೀವೇ ಅವಲೋಕಿಸಿ ನಿರ್ಧರಿಸಿ ಇದು ಹೇಗೆ ಭಾರತವನ್ನು ಗುಲಾಮಗಿರಿಗೆ ಸಿಲುಕಿಸುತ್ತದೆಯೆಂದೂ ಮತ್ತು ಅಮೇರಿಕಾ ಹೇಗೆ ಭಾರತವನ್ನು ಆಳುತ್ತದೆಂದೂ. ಆಂದಹಾಗೆ, ಅಮೇರಿಕಾ ಚೀನಾದೊಂದಿಗೆ ಕೈಗಾರಿಕೋತ್ಪನ್ನಗಳ ಒಪ್ಪಂದವನ್ನೂ, ಜಪಾನ್/ಜರ್ಮನಿ/ಫಿಲಿಪೈನ್ಸ್....ಮುಂತಾದ ರಾಷ್ಟ್ರಗಳೊಂದಿಗೆ ತನ್ನ ಮಿಲಿಟರಿ ನೆಲೆಗಳನ್ನು ಸ್ಥಾಪಿಸಿಕೊಳ್ಳುವ ಒಪ್ಪಂದವನ್ನೂ, ಪಾಕಿಸ್ತಾನದೊಂದಿಗೆ ಶಸ್ತ್ರಾಸ್ತ್ರ ಪೂರೈಕೆಯ ಒಪ್ಪಂದವನ್ನೂ.......ಹಾಗೂ ಇನ್ನೂ ಅನೇಕಾನೇಕ ರಾಷ್ಟ್ರ್‍ಅಗಳೊಂದಿಗೆ ಅನೇಕ ವಿಧದ ಒಪ್ಪಂದಗಳನ್ನು ದಶಕಗಳ ಹಿಂದೆಯೇ ಮಾಡಿಕೊಂಡಿದೆ. ಆ ರಾಷ್ಟ್ರಗಳನ್ನೇನಾದರೂ ಇಂದು ಅಮೇರಿಕಾ ಆಳುತ್ತಿದೆಯೇ ಎಂದೂ ಕೂಡ ಗಮನಿಸಿ.

ಇಂದು ಅನ್ನ, ನೀರು, ಗಾಳಿಯಂತೆಯೇ ವಿದ್ಯುಚ್ಚಕ್ತಿ ಕೂಡ ನಮ್ಮ ನಿಮ್ಮೆಲ್ಲರ ಅವಶ್ಯಕಗಳಲ್ಲೊಂದಾಗಿದೆ. ಈ ಶಕ್ತಿಗೆ ಪರ್ಯಾಯ ಮಾರ್ಗಗಳಾಗಲೀ, ಇತರೆ ಮೂಲಗಳಾಗಲೀ ನಮ್ಮಲ್ಲಿ ಇರುವವೋ, ಇಲ್ಲವೋ ನಾನರಿಯೆ. ಒಟ್ಟಾರೆ ಈ ಒಪ್ಪಂದದ ನಿಮಿತ್ತ ನಮಗೆ ವಿದ್ಯುತ್ ಕೊರತೆ ನೀಗಿದರೆ ನಮಗೆ ಸಂತಸವೆನಿಸದೇ? ಸರ್ಕಾರಗಳು ಬರುತ್ತವೆ, ಹೋಗುತ್ತವೆ. ಆದರೆ ಅಮೇರಿಕಾದೊಂದಿಗಿನ ಈ ಒಪ್ಪಂದ ಮಾತ್ರ ಐತಿಹಾಸಿಕವಾದುದೇ ಸರಿ. ಈ ಒಪ್ಪಂದದಿಂದ ದೇಶದ ಹಿತಾಸಕ್ತಿಗೆ ಧಕ್ಕೆಯಾಗುತ್ತದೋ ಇಲ್ಲವೋ ಎಂಬುದನ್ನು ಸ್ವತಃ ತಾವುಗಳೇ ಪರಾಮರ್ಶಿಸಿ!

ಅಣಕ:

ಈ ಅಣು ಒಪ್ಪಂದಕ್ಕೆ ಕೆಲವು ಬುದ್ಧಿಜೀವಿಗಳು ಏಕೆ ವಿರೋಧ ವ್ಯಕ್ತಪಡಿಸುತ್ತಿರುವರು ಗೊತ್ತೆ?

ಏಕೆಂದರೆ ಅವರ ಅನೇಕ ಸಾಹಿತ್ಯಗಳು ಹುಟ್ಟುವುದೇ ಕರೆಂಟ್ ಕೈಕೊಟ್ಟು ಕತ್ತಲೆ ತುಂಬಿದಾಗ. ಸೀಮಿತ ೧೨*೧೨ ರೂಮಿನೊಳಗಿದ್ದರೂ ಆ ಗಾಢಾಂಧಕಾರ ಕತ್ತಲೆ ಅವರ ಸೀಮಿತ ಕೊಠಡಿಯನ್ನು ಅನಂತತೆಯ ಸೀಮಾತೀತ ವಿಶ್ವವಾಗಿ ಪರಿವರ್ತನೆಗೊಳಿಸಿ, ಸಾಹಿತ್ಯ ರಚನೆಯ ರಂಗುರಂಗಿನ ಭವ್ಯ ಪ್ರಪಂಚವನ್ನು ತೆರೆದಿಡುತ್ತದೆ. ಹೀಗೆ ೧೨*೧೨ ರ ಲೌಕಿಕ ಲೋಕದಿಂದ ಅನಂತತೆಯ ಅಲೌಕಿಕಕ್ಕೆ ತೇಲಿಸಿಕೊಂಡು ಹೋಗುವ ಈ ’ಪವರ್ ಕಟ್’ ಇಲ್ಲವಾದರೆ ಹೇಗೆ? ವಿಷಯ ಹೀಗಿರುವಾಗ ಈ ಜನಹಿತ ಪರಮಾಣು ಒಪ್ಪಂದ, ಭಾರತದ ಕರೆಂಟ್ ಅಭಾವವನ್ನು ನೀಗಿಸಿ ಅವರ ಕ್ರಿಯಾತ್ಮಕ ಚಟುವಟಿಕೆಯ ರಂಗಸ್ಥಳಕ್ಕೇ ಅಣ್ವಸ್ತ್ರವಾಗಿ ಬಡಿದರೆ ಹೇಗೆ?

1 comment:

Supreeth.K.S said...

ರವಿ ಸರ್,
ಇಷ್ಟೆಲ್ಲಾ ಮಾಹಿತಿ ಬೆರಳ ತುದಿಯಲ್ಲೇ ಲಭ್ಯವಿದ್ದರೂ ಬೇರೆಲ್ಲಾ ಕಾಲಗಳಿಗಿಂತ ಈಗ ಗೊಂದಲಗಳು ಹೆಚ್ಚಾಗಿವೆ, ಯಾವ ಸಂಗತಿಯ ಬಗೆಗೂ ನಿರ್ಧಾರಗಳಿಗೆ ಬರಲು ಸಾಧ್ಯವಾಗುವುದಿಲ್ಲ. ಮಾಹಿತಿಯನ್ನು ತುಂಬಾ ಸರಳವಾಗಿ ಯಾವ ಪೂರ್ವಾಗ್ರಹವೂ ಇಲ್ಲದ ಹಾಗೆ ಕೊಡುವ ಕೆಲಸ ಇಂದಿನ ತುರ್ತು ಅನ್ನಿಸುತ್ತಿದೆ.
ಬಹಳಷ್ಟು ಸಮಸ್ಯೆಗಳು ನಿವಾರಣೆಯಾದವು ನಿಮ್ಮ ಬರಹದಿಂದ.

ಸುಪ್ರೀತ್.ಕೆ.ಎಸ್