ಗೋಕರ್ಣ, ಮತಾಂತರ ಹಾಗೂ ನ್ಯೂ ಲೈಫ್!

ಈಗ ಎಲ್ಲೆಲ್ಲೂ ಮತೀಯ ಗಲಭೆಯ ಸುದ್ದಿ. ಫಾರ್-ಎ-ಚೇಂಜ್ ಎನ್ನುವಂತೆ ಇದು ಹಿಂದೂ-ಮುಸ್ಲಿಂ ಗಲಭೆಯಲ್ಲ, ಇದು ಇಪ್ಪತ್ತೊಂದನೇ ಶತಮಾನ, ಹಿಂದೂ-ಕ್ರಿಶ್ಚಿಯನ್ ಗಲಭೆ! ಇಪ್ಪತೊಂದನೇ ಶತಮಾನದ ಭಾರತಕ್ಕೆ ಇನ್ನೂ ಕಾಲಿಟ್ಟಿಲ್ಲವೇ, ಇದೋ ಸ್ವಾಗತ. ಭಾರತ ಪ್ರಕಾಶಿಸುತ್ತಿದೆ. ಮಠ ಮಾನ್ಯಗಳೂ ಕೂಡ ಕಾರ್ಪೋರೇಟ್ ಕಂಪೆನಿಗಳಾಗುತ್ತಿವೆ.

ಗೋಕರ್ಣಕ್ಕೆ ನೀವು ಹೋಗಿದ್ದೀರೋ ಇಲ್ಲವೋ ಗೊತ್ತಿಲ್ಲ, ನಾನಂತೂ ಎರಡು ವರ್ಷದ ಹಿಂದೆ ಹೋಗಿದ್ದೇನೆ. ಅದಕ್ಕೂ ಮುಂಚೆ ನನ್ನ ಸ್ನೇಹಿತ ಫ್ರ್ಯಾಂಕ್ ಕೂಡಾ ಓಂ ಬೀಚಿಗೆ ಹೋಗಿಬಂದಿದ್ದಾನೆ. ಒಟ್ಟಾರೆ ಆ ಕ್ಷೇತ್ರ ಒಬ್ಬ ಯೋಗ್ಯ ಮಠಾಧಿಪತಿಗಳ ಪಾದಸ್ಪರ್ಶದಿಂದ ಶುಚಿರ್ಭೂತವಾಗಬೇಕಾದ್ದಂತೂ ಅತ್ಯಂತ ಅನಿವಾರ್ಯವಾಗಿದ್ದಿತು ಎಂದು ಹೇಳಬಲ್ಲೆ. ಈ ಕಾರ್ಯಕ್ಕೆ ಈಗೇಕೆ ವಿರೋಧ ವ್ಯಕ್ತವಾಗುತ್ತಿದೆಯೋ, ಆಶ್ಚರ್ಯವೆನಿಸುತ್ತದೆ. ಏಕೆಂದರೆ ಈ ರೀತಿಯ ನಿರ್ವಹಣೆಗಳನ್ನು ಹಿಂದಿನ ಸರ್ಕಾರಗಳೂ ಧಾರ್ಮಿಕ ಸಂಸ್ಥೆಗಳಿಗೆ ವಹಿಸಿವೆ, ಅದೂ ಧಾರ್ಮಿಕವಲ್ಲದ ಕಾರ್ಯಗಳನ್ನು! "ಬಿಜೆಪಿ ಇದ್ದೊಡೆ, ನಾ ಬೊಬ್ಬಿಡೆ" ಎಂಬಂತೆ ಬುದ್ಧಿಜೀವಿಗಳು, ಜಾತ್ಯಾತೀತರು ಬೊಬ್ಬಿಡುವುದು ಅತೀ ರಂಜನೀಯವಾಗಿದೆ. ಏಕೆಂದರೆ ಹಿಂದಿನ ಕಾಂಗ್ರೆಸ್ ಕೃಷ್ಣ ಸರ್ಕಾರ ಬಿಸಿಯೂಟವನ್ನು (ಇದು ಧಾರ್ಮಿಕ ಕಾರ್ಯವಲ್ಲ) ಇಸ್ಕಾನ್ ಸಂಸ್ಠೆಗೆ ವಹಿಸಿಕೊಟ್ಟಾಗ ಏನೇನೂ ವಿರೋಧಿಸದಿದ್ದ ಬುದ್ಧಿಜೀವಿಗಳು, ಇಂದು ಒಂದು ಬ್ರಾಹ್ಮಣ ದೇವಸ್ಥಾನವನ್ನು ಒಂದು ಬ್ರಾಹ್ಮಣ ಮಠಕ್ಕೆ ವಹಿಸಿಕೊಟ್ಟಾಗ ಬೊಬ್ಬಿಡುವುದೇಕೋ?

ಹಾಗೆಯೇ ಒಂದು ಗೋತಳಿಯ ರಕ್ಷಣೆಯನ್ನು ರಾಮಚಂದ್ರಾಪುರ ಮಠಕ್ಕೆ ವಹಿಸಿಕೊಡುವುದನ್ನು ವಿರೋಧಿಸುವುದೂ ಕೂಡ ನಮ್ಮ ಬುದ್ಧಿಜೀವಿಗಳ/ರಾಜಕಾರಣಿಗಳ ಬುದ್ಧಿಮತ್ತೆಗೆ ಹಿಡಿದ ಕೈಗನ್ನಡಿಯಾಗಿದೆ. ಯಾವುದೇ ಅರ್ಥಶಾಸ್ತ್ರಜ್ಞನೂ ತಲೆದೂಗುವಂತೆ ಈ ರಾಮಚಂದ್ರಾಪುರದ ಮಠ, ನೂರೈವತ್ತು ಮಿಲಿಲೀಟರ್ ಗೋಮೂತ್ರವನ್ನು ಐವತ್ತು ರೂಪಾಯಿಗೆ ಮಾರುತ್ತಿದೆ. ಆದು ನಿಮಗೆಷ್ಟು ಬಾಟಲಿ ಬೇಕೋ ಅಷ್ಟೂ ಸಿಗುವುದಿಲ್ಲ, ವೆರಿ ಲಿಮಿಟೆಡ್ ಆರ್ಡರ್‍ಸ್ ಓನ್ಲೀ! ವಿಷಯ ಹೀಗಿರುವಾಗ ನಮ್ಮ ದೇಶೋದ್ಧಾರಕರು, ಬುದ್ಧಿಜೀವಿಗಳು ಕೆ.ಎಂ.ಎಫ್. ಅನ್ನೂ ಕೂಡ ಶ್ರೀರಾಮಚಂದ್ರಾಪುರ ಮಠಕ್ಕೆ ವಹಿಸಿಕೊಡಿ ಎಂದು ಬೊಬ್ಬಿಡುವುದರ ಬದಲು ವಿರೋಧಿಸುವುದರಲ್ಲಿ ಅದ್ಯಾವ ದೂರದೃಷ್ಟಿಯಿದೆಯೋ ನನ್ನಂಥಹ ಅಲ್ಪಬುದ್ಧಿಗೆ ಹೊಳೆಯುತ್ತಿಲ್ಲ.

ಕುತೂಹಲಕ್ಕೆ ನಾನು ಕೂಡ ಕಳೆದ ವರ್ಷ ರಾಮಚಂದ್ರಾಪುರ ಮಠಕ್ಕೆ ಭೇಟಿಕೊಟ್ಟು, ಅಲ್ಲಿನ ಗೋತಳಿಗಳನ್ನು ನೋಡಿಕೊಂಡು, ನಾಲ್ಕು ಬಾಟಲಿ ಗೋಮೂತ್ರವನ್ನು ಖರೀದಿಸಿ, ಅಲ್ಲಿನ ಸಿಬ್ಬಂದಿಯ ಊಟ ಮಾಡಿಕೊಂಡು ಹೋಗಿರೆಂಬ ಒತ್ತಾಯವನ್ನು ತಾಳಲಾರದೇ ನನ್ನ ಶಿವಮೊಗ್ಗೆಯಲ್ಲಿ ಕಾಯುತ್ತಿರುವ ಬಂಟರ ಹೋಟೇಲಿನ ಬಾಂಗುಡೆಯನ್ನು ಬಿಡಲಾರದೇ ತೊಳಲಿ "ಇನ್ನೂ ಹಸಿವಾಗಿಲ್ಲ, ಇನ್ನೊಂದು ರೌಂಡು ನಿಮ್ಮ ಗೋಶಾಲೆಯನ್ನು ಸುತ್ತಿ ಬಂದು ಊಟ ಮಾಡುತ್ತೇನೆಂದು ಕೈಕೊಟ್ಟು ಶಿವಮೊಗ್ಗೆಗೆ ಹಾರಿ ಬಾಂಗುಡೆಯ ದಾಂಗುಡಿಯನ್ನು ಆರಿಸಿಕೊಂಡಿದ್ದೆನು.

ಇದ್ದುದರಲ್ಲಿ ಈ ಚಿಕ್ಕ ಮಠ ಬಂದ ಭಕ್ತರಿಗೆ ಊಟ ಹಾಕಿ, ಆತಿಥ್ಯವನ್ನು ನೀಡುವುದನ್ನು ಕಂಡರೆ ಖುಷಿಯಾಗುತ್ತದೆ. ಇನ್ನು ದೊಡ್ಡ ಮಠಗಳ ಸುತ್ತೂರು, ಆದಿಚುಂಚನಗಿರಿ ಶ್ರೀಗಳು ಸರಸ್ವತೀ ಬಜಾರಿನಲ್ಲಿ ಸಾಕಷ್ಟು ಕಮಾಯಿಸಿ, ಬೀಮರ್, ಮರ್ಸಿಡಿಸ್ ಕಾರುಗಳನ್ನು ಬಿಡಿ, ಹೆಲಿಕಾಪ್ಟರ್ ಗಳನ್ನೇ ಇಟ್ಟುಕೊಂಡಿದ್ದಾರೆ. ಏಕೆಂದರೆ ಇವರಿಗೆ ದುಡ್ಡು ಚೆಲ್ಲಿ ಮತಾಂತರ ಮಾಡಿಸಬೇಕೆಂಬ ನಿಯಮವಿಲ್ಲ. ಹಾಗೆಯೇ ತಮ್ಮ ಭಕ್ತವರ್ಗದ ಕಷ್ಟಗಳಿಗೂ ನೆರವಾಗಬೇಕೆಂಬ ಹಮ್ಮೂ ಇಲ್ಲ. ತಮ್ಮ ತಮ್ಮ ಭಕ್ತರು ತಾವಾಗಿಯೇ ತಮ್ಮ ಮಠಗಳಿಗೆ ಬಂದರೆ, ಈ ಶ್ರೀಗಳಿಗೆ ಬಿಡುವಿದ್ದರೆ ದರ್ಶನ ನೀಡಿ ಆಶೀರ್ವಚನ ನೀಡಿ ಆಶೀರ್ವದಿಸುತ್ತಾರೆ.

ಇರಲಿ, ಭಾರತವೆಂಬುದು ಅತ್ಯಂತ ಪಾರಮಾರ್ಥಿಕರು, ಬುದ್ಧಿವಂತರೂ, ಸಂತರೂ, ವಿಜ್ಞಾನಿಗಳೂ, ಶ್ರೀಮಂತರು, ಕಲಾವಿದರೂ ಇರುವ ದೇಶ. ಹಾಗೆಯೇ ಬಡವರು, ನಿರ್ಗತಿಕರು, ದರೋಡೆಕೋರರು, ಲಂಪಟರು, ದಗಾಕೋರರೂ ಇರುವ ದೇಶ. ಒಂದು ರೀತಿ ಸಕ್ಕರೆ, ಮರಳು ಕಲಸಿ ಇಟ್ಟಿರುವಂತೆ, ಈ ಎಲ್ಲಾ ರೀತಿಯ ಭಾರತೀಯರೂ ಸೇರಿ ಭಾರತವಾಗಿದೆ. ಆದರೆ ಸಕ್ಕರೆ ಪ್ರಮಾಣ ಶೇ. ೨೦ರಷ್ಟಿದ್ದರೆ, ಮರಳಿನ ಪ್ರಮಾಣ ಶೇ.೮೦ರಷ್ಟು. ಇದು ಕೇವಲ ಇಂದಿನ ಭಾರತದ ಅನುಪಾತವಲ್ಲ, ಇದು ಬುದ್ಧನ ಮುಂಚಿನ ಭಾರತದ ಅನುಪಾತವೂ ಕೂಡ! ಭಾರತದ ಇತಿಹಾಸವನ್ನು ಇನ್ನೊಮ್ಮೆ ಭಾರತೀಯ ಪಠ್ಯೇತಿಹಾಸದ ಹೊರಗೆ ಓದಿದಾಗ ಇದು ನಿಮಗೇ ಮನನವಾಗುತ್ತದೆ. ಏಕೆಂದರೆ ನಮ್ಮ ಪಠ್ಯೇತಿಹಾಸದಲ್ಲಿ ವರ್ಣಿಸಿರುವ ಭಾರತ/ಭಾರತೀಯರೆಲ್ಲರೂ ಆ ಶೇ. ೨೦ರ ಅನುಪಾತದವರು. ಈ ಒಂದು ಕಠೋರ ಐತಿಹಾಸಿಕ ಸತ್ಯವನ್ನು ಪರಿಗಣಿಸಿ ಇಂದು ಭಾರತದಲ್ಲಿ ನಡೆಯುತ್ತಿರುವ ಮತಾಂತರ ಮತ್ತು ಅದರ ವಿರೋಧದ ಗಲಭೆಗಳನ್ನೂ ವಿವೇಚಿಸೋಣ.

ಒಬ್ಬ ವ್ಯಕ್ತಿಯ ಧಾರ್ಮಿಕ, ತಾತ್ವಿಕ, ಸೃಷ್ಟಿ ರಹಸ್ಯ, ಜೀವ/ಜೀವನ, ದೇವ, ಮಾನವ, ದಾನವ ವಿಚಾರಗಳ ಹಸಿವನ್ನು ಸಂತೈಸುವ ಒಂದು ಮಾರ್ಗವನ್ನು ಧರ್ಮವೆನ್ನುತ್ತೇವೆ. ಈ ಧಾರ್ಮಿಕ ಹಸಿವನ್ನು ಪಡೆದು, ಅದನ್ನು ಸಂತೈಸುವ ಮಾರ್ಗವನ್ನು ಶೋಧಿಸಿ ಸರಿ ಮಾರ್ಗವನ್ನು ಕಂಡುಕೊಂಡು, ಆ ಧರ್ಮವು ಅನ್ಯಧರ್ಮವಾಗಿದ್ದು, ಆ ಧರ್ಮವನ್ನು ಅನುಸರಿಸುವುದು ನಿಜಾರ್ಥದಲ್ಲಿ ಮತಾಂತರವೆನಿಸುತ್ತದೆ. ಮತಾಂತರವಿರಬೇಕಾದ್ದು ಕೂಡ ಹೀಗೆಯೇ. ಅದನ್ನೇ ನಮ್ಮ ಸಂವಿಧಾನ ಶಿಲ್ಪಿ ಆಂಬೇಡ್ಕರರು ಪ್ರತಿಪಾದಿಸಿ, ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ನಮ್ಮ ಸಂವಿಧಾನದಲ್ಲಿ ಕಲ್ಪಿಸಿದ್ದುದು.

ಇನ್ನು ಈ ರೀತಿಯ ಧಾರ್ಮಿಕ ಹಸಿವು ಯಾರಲ್ಲಿ ಉಂಟಾಗುತ್ತದೆ? ಎಂಬುದನ್ನು ನಿಮ್ಮಗಳ ಅವಲೋಕನಕ್ಕೆ ಬಿಡುತ್ತೇನೆ. ನನ್ನ ವೈಯುಕ್ತಿಕ ಅಭಿಪ್ರಾಯವೆಂದರೆ, ಇದು ಸಕಲ ಮೂಲಭೂತ ಸೌಕರ್‍ಯಗಳು ದೊರೆತು, ಅಂದರೆ ವಿದ್ಯಾಭ್ಯಾಸ, ವಸತಿ, ಉದ್ಯೋಗ ಇನ್ನು ಮುಂತಾದ ಭೌತಿಕ ಸವಲತ್ತುಗಳು ಸಿಕ್ಕು, ಅಂತರಂಗದಲ್ಲಿ ಧಾರ್ಮಿಕ ತರ್ಕಗಳೇರ್ಪಟ್ಟು, ಜ್ಞಾನದ ಹಸಿವುಂಟಾಗಿ, ಧರ್ಮದ ಮಾರ್ಗದರ್ಶನಕ್ಕಾಗಿ ತವಕಿಸಿ, ತನ್ನೆಲ್ಲಾ ಜಿಜ್ಞಾಸೆಗಳಿಗೆ ತಕ್ಕ ಉತ್ತರ ಸಿಕ್ಕು, ಉತ್ತರಿಸಿದ ಆ ಧರ್ಮವನ್ನು ಅಪ್ಪಿಕೊಳ್ಳುವುದು ನಿಜ ಧಾರ್ಮಿಕ ಸ್ವಾತಂತ್ರ್ಯವೆನಿಸುತ್ತದೆ. ಒಂದು ರೀತಿ ನಮ್ಮ ಮೇರುನಟರಾದ ರಾಜಕುಮಾರ್, ವಿಷ್ಣುವರ್ಧನ್ ಫಿಲಾಸಾಫಿಕಲ್ ಆದಂತೆ, ರಜನೀಕಾಂತ್ ಹಿಮಾಲಯಕ್ಕೆ ಹೋದಂತೆ. ಹಾಗೆಯೇ ಮಡೋನ್ನ, ಬೀಟಲ್ಸ್ ಗಳು ಕುಂಭಮೇಳಕ್ಕೆ ಬಂದಂತೆ. ಅಂಬೇಡ್ಕರರು ಬೌದ್ಧರಾದಂತೆ, ಆಂಧ್ರದ ಮುಖ್ಯಮಂತ್ರಿ ರಾಜಶೇಖರ ರೆಡ್ಡಿ ಸ್ಯಾಮ್ಯುಯೆಲ್ ರಾಜಶೇಖರ ರೆಡ್ಡಿಯಾದಂತೆ. ಇದು ನಿಜಾರ್ಥದ ಧಾರ್ಮಿಕ ಸ್ವಾತಂತ್ರ್ಯ ಹಾಗೂ ಬೌದ್ಧಿಕ ಮತಾಂತರ.

ಇನ್ನು ಭಾರತದಲ್ಲಿ ಆಗಿರುವ ಮತಾಂತರಗಳು, ಈ ರೀತಿಯ ಬೌದ್ಧಿಕ ಮತಾಂತರಗಳೇ? ಒಬ್ಬ ಏನೂ ಅರಿಯದ ಅಮಾಯಕ, ನಿರ್ಗತಿಕ ಬಡವನನ್ನು ಅನ್ನ, ಬಟ್ಟೆ ಕೊಟ್ಟು "ಇನ್ನು ಮುಂದೆ ನೀನು ಕ್ರಿಶ್ಚಿಯನ್. ನಿತ್ಯವೂ ಇಲ್ಲಿ ಬಂದು ತಿನ್ನು. ಹಾಗೆಯೇ ನಿನಗೆ ಈ ಉದ್ಯೋಗ"ವೆಂದಾಗ, ಆ ಬಡವ "ಪುಣ್ಯಾತ್ಮರು" ಎಂದುಕೊಳ್ಳುತ್ತಾನೆ. ಅವನಿಗೆ ಅನ್ನ, ಬಟ್ಟೆ ಕೊಟ್ಟ ಯಾವ ಧರ್ಮೀಯನಾದರೂ ಪುಣ್ಯಾತ್ಮನೇ ಆಗುತ್ತಾನೆ. ಆದರೆ ಆ ಬಡವನನ್ನು ನೀನು ಇನ್ನು ಮುಂದೆ "ಈ ಧರ್ಮದವನು" ಎನ್ನುವುದು ಆ ಬಡವನ ಶೋಷಣೆಯಲ್ಲವೇ? ನನಗಂತೂ ಇದು "ಮಕ್ಕಳ ಲೈಂಗಿಕ ಶೋಷಣೆ"ಯಷ್ಟೇ ಮಹಾಪರಾಧವೆನಿಸುತ್ತದೆ. ಹಸಿವಿಗೆ ಧರ್ಮವನ್ನು ಹೊರಿಸುವುದು "ಫೆಡಾಫೈಲ್" ಎನಿಸುತ್ತದೆ. ಇದು ಯಾವುದೇ ಧರ್ಮದವರ ಕಾರ್ಯವಾದರೂ ಸರಿಯೆ ಅವರೆಲ್ಲಾ ಫೆಡಾಫೈಲ್ ಗಳೇ ಹೊರತು ಖಂಡಿತವಾಗಿಯೂ ಸಂತ, ಮಾತೆ, ಬಾಬಾಗಳಲ್ಲ!

ಇನ್ನು ಈ ವಿಚಾರವಾಗಿ ನಮ್ಮ ರಾಜಕೀಯ ನಾಯಕರುಗಳ ಹೇಳಿಕೆಗಳನ್ನು ಗಮನಿಸಿದರೆ ಅತ್ಯಂತ ಹಾಸ್ಯಾಸ್ಪದವೂ ಮತ್ತು ಭಾರತದ ಬಗ್ಗೆ ವ್ಯಥೆಯೂ ಉಂಟಾಗುತ್ತದೆ. ಮೊದಲೆಲ್ಲಾ ಬಹುದೊಡ್ಡ ಪಟ್ಟಣಗಳಲ್ಲಿ ಇರುತ್ತಿದ್ದ ಚರ್ಚುಗಳು ಇಂದು ಹಳ್ಳಿ ಹಳ್ಳಿಗೆ ಬಂದಿವೆಯೆಂದರೆ, ಕ್ರಿಶ್ಚಿಯನ್ನರೆಲ್ಲಾ ಹಳ್ಳಿಗಳಿಗೆ ವಲಸೆ ಬಂದರೆ? ಜನಸಂಖ್ಯೆಯ ಅನುಪಾತವಾಗಿ ಈ ಪ್ರಾರ್ಥನಾ ಮಂದಿರಗಳ ಸಂಖ್ಯೆ ಏರಿದ್ದರೆ ಸರಿ, ಆದರೆ ಇವುಗಳ ಸಂಖ್ಯೆ ಆ ಅನುಪಾತದಲ್ಲಿದೆಯೇ? ಇದಕ್ಕೆಲ್ಲಾ ಪ್ರತಿಕ್ರಿಯಿಸುವ ಮುನ್ನ "ಹೋಂ ವರ್ಕ್" ಕೂಡಾ ಮಾಡಿಕೊಳ್ಳುವುದಿಲ್ಲ ನಮ್ಮ ಅತಿಬುದ್ಧಿಗಳು. ಈ ರೀತಿಯ ಶೋಷಣೆಯ ಮತಾಂತರ ಆಗದೇ ಇದ್ದರೆ ಇಂದು ಈ ಪಾಟಿ ಚರ್ಚುಗಳು ಕರ್ನಾಟಕದ ಹಳ್ಳಿ ಹಳ್ಳಿಗಳಲ್ಲಿ ಕಾಣಸಿಗುತ್ತಿದ್ದವೆ? ಇನ್ನೊಂದು ಧರ್ಮದ ಅವಹೇಳನ ಮಾಡಿ ತಮ್ಮ ಧರ್ಮವನ್ನು ಮೆರೆಸುವುದು ಎಲ್ಲಾ ಧರ್ಮಗಳವರೂ ಮಾಡುತ್ತಾರೆ. ಈ ರೀತಿಯ ಅವಹೇಳನ ಮಾಡಿ ಮತಾಂತರಕ್ಕೆ ಪ್ರಚೋದಿಸುವುದು ಇಂದು ನೆನ್ನೆಯದಲ್ಲ, ಬ್ರಿಟಿಷರ ಕಾಲದಿಂದಲೂ ಇದೆ. ಈ ವಿಷಯ/ಇತಿಹಾಸದ ಅರಿವು ನಮ್ಮ ನಾಯಕರಿಗಿಲ್ಲದಿರುವುದು ಅತ್ಯಂತ ಶೋಚನೀಯ. ನಮ್ಮ ದೇಶದ ನೂರು ವರ್ಷಗಳ ಇತಿಹಾಸವನ್ನೇ ಅರಿಯದ ಇವರು ಇನ್ನೇನನ್ನು ಅರಿಯಲು ಸಾಧ್ಯ?

ನಮ್ಮ ಸಿನಿಕ ಬುದ್ಧಿಜೀವಿಗಳು ದಾವಣಗೆರೆ ಸಮೀಪದ ಬಾಡ/ಉಚ್ಚಂಗಿದುರ್ಗದಲ್ಲಿ ಚರ್ಚುಗಳ ಧ್ವಂಸ ಎಂಬ ಸುದ್ದಿಯನ್ನು ಕೇಳಿ "ಹಿಂದೂ ಉಗ್ರವಾದಿಗಳನ್ನು ಮಟ್ಟಹಾಕಿ" ಎಂದು ಬೊಬ್ಬಿಡುವ ಮುನ್ನ ’ಅರೆ, ಬಾಡ, ಉಚ್ಚಂಗಿದುರ್ಗದಲ್ಲಿ ಚರ್ಚುಗಳು ಹೇಗೆ ಬಂದವು?" ಎಂದು ಪ್ರಶ್ನಿಸಿಕೊಳ್ಳದಿರುವುದು "ಕೋಣ ಈಯಿತು ಎಂದರೆ ಕೊಟ್ಟಿಗೆಗೆ ಕಟ್ಟು" ಎಂಬಂತಿದೆ. ಏಕೆಂದರೆ ಕನ್ನಡ ಸಾಹಿತ್ಯದ ಮೇರು ಪರ್ವತಗಳಾದ ಕುವೆಂಪು, ಮಾಸ್ತಿಯವರು ಈ ಮತಾಂತರದ ಕುರಿತಾಗಿ ತಮ್ಮ ಮಹಾನ್ ಕೃತಿಗಳಲ್ಲಿ ಉಲ್ಲೇಖಿಸಿದ್ದಾರೆ. ಕುವೆಂಪು ಅವರು ತಮ್ಮ ’ಮಲೆಗಳಲ್ಲಿ ಮದುಮಗಳು’ ಕಾದಂಬರಿಯಲ್ಲಿ ಈ ರೀತಿಯ ಮತಾಂತರದ ಕುರಿತಾಗಿ ಪ್ರಸ್ತಾಪಿಸಿದ್ದು, ಮಾಸ್ತಿಯವರು ತಮ್ಮ ’ಚಿಕವೀರ ರಾಜೇಂದ್ರ’ ಕಾದಂಬರಿಯಲ್ಲಿ ಈ ರೀತಿಯ ಮತಾಂತರದ ವಿಚಾರವಾಗಿ ನಡೆವ ವಾಗ್ಯುದ್ಯವನ್ನು ಬರೆದಿದ್ದಾರೆ. ಇವನ್ನೆಲ್ಲಾ ಓದಿದ್ದಾರೋ ಇಲ್ಲವೋ ನಮ್ಮ ಬುದ್ದಿಜೀವಿಗಳು?

ಇನ್ನು ಬಡವರ, ನಿರ್ಗತಿಕರ ಸೇವೆಯನ್ನು ಮಾಡಬೇಕೆಂಬ ನಿಜ ಹಂಬಲವಿದ್ದವರು ಧರ್ಮದ ಲೇಪನವಿಲ್ಲದೇ ಅಂತಹ ಕಾರ್ಯಗಳನ್ನು ಮಾಡಲು ಸಾಧ್ಯವಿಲ್ಲವೇ? ಈ ನಿರ್ಗತಿಕರಿಗಿಂತಲೂ ಹೆಚ್ಚಾಗಿ ಮುಸ್ಲಿಂ ಮಹಿಳೆಯರು ಅಫ್ಘಾನಿಸ್ತಾನ/ಪಾಕಿಸ್ತಾನ ಬಿಡಿ, ನಮ್ಮ ಭಾರತದಲ್ಲಿಯೇ ನರಳುತ್ತಿದ್ದಾರೆ. ಈ ಮಹಿಳೆಯರ ವಿಮೋಚನೆಗೆ ಕೈಹಾಕುವ ಸಾಹಸವನ್ನು ಈ ಸಂಸ್ಥೆಗಳು ಮಾಡುತ್ತವೆಯೇ? ಪರಧರ್ಮಸಹಿಷ್ಣುತೆ ಎಂಬ ಏಕೈಕ "ವಿಶಾಲ ಮನೋಭಾವನೆ"ಯಿರುವ ಒಂದೇ ಕಾರಣದಿಂದ ಹಿಂದೂ ಧರ್ಮ ಇಂದು ಇಂತಹ ಅವಘಡಗಳಿಗೆ ಒಳಗಾಗಿದೆ. ಈ ಧರ್ಮದ ಕುರಿತು ಮಾಹಿತಿಯನ್ನು ನಮ್ಮ ಜಗದ್ಗುರುಗಳು ಸರಿಯಾಗಿ ಪ್ರಚಾರಿಸದೇ, ತಮ್ಮತಮ್ಮ ಭಕ್ತಮಂಡಳಿಯ ಧಾರ್ಮಿಕ, ಸಾಮಾಜಿಕ, ಆರ್ಥಿಕ ಸಮಸ್ಯೆಗಳಿಗೆ ಸ್ಪಂದಿಸದೇ ಇಂದು ಹಿಂದೂ ಧರ್ಮವೊಂದು ಸನಾತನ ನಿಗೂಢವೂ, ಮೇಲ್ನೋಟಕ್ಕೆ ಕಂದಾಚಾರಗಳ ಆಗರವೂ ಆಗಿ ಕಾಣುತ್ತದೆ. ಈ ಮೇಲ್ನೋಟವನ್ನೇ ನಮ್ಮ ಬುದ್ಧಿಜೀವಿಗಳು ಹಿಂದೂಧರ್ಮವೆಂದು ಪರಿಗಣಿಸಿ ಅವಹೇಳನ ಮಾಡಿದ್ದಾರೆ ಮಾಡುತ್ತಿದ್ದಾರೆ. ಯಾವುದನ್ನೂ ಸುಧೀರ್ಘವಾಗಿ ಅವಲೋಕಿಸಿ ಅನುಸರಿಸುವ ಪಾಶ್ಚಿಮಾತ್ಯರೆಲ್ಲಾ ಹಿಂದೂ ಧರ್ಮವನ್ನು ಅಪ್ಪಿಕೊಳ್ಳುತ್ತಿದ್ದರೆ ನಮ್ಮ ಅರೆಬೆಂದ ಮಠಾಧೀಶರುಗಳು, ಹಿಂದುತ್ವವಾದಿಗಳು, ಬುದ್ಧಿಜೀವಿಗಳು ಹಿಂದೂಧರ್ಮವನ್ನು ಮತಾಂತರಿಗಳಷ್ಟೇ ಕುಲಗೆಡಿಸುತ್ತಿದ್ದಾರೆ.

ಇನ್ನು ವೈಯುಕ್ತಿಕವಾಗಿ ಉಚ್ಚೆ ಹುಯ್ಯಲು ಕೂಡಾ ರಾಹುಕಾಲ/ಗುಳಿಕಕಾಲ ನೋಡುವ ರಾಜಕಾರಣೀ ಸುಪ್ರಿಮೋಗಳು ಸಾರ್ವಜನಿಕವಾಗಿ ಢೋಂಗೀ ಜಾತ್ಯಾತೀತತೆಯನ್ನು ಮೆರೆಯುತ್ತಾರೆ. ಈ ರಾಜಕಾರಣಿಗಳು ಗ್ರಾಮವಾಸ್ತವ್ಯ, ಡಿಸ್ಕವರ್ ಇಂಡಿಯಾ ಎಂದೆಲ್ಲಾ ಹಳ್ಳಿ ಹಳ್ಳಿಗಳನ್ನು ಸುತ್ತಿದಾಗ ಹಳ್ಳಿಗಳಲ್ಲಿ ನಡೆಯುತ್ತಿದ್ದ ಈ ಧರ್ಮಸೂಕ್ಷ್ಮ ಕಾಣಬರದಿದ್ದುದು ಇವರುಗಳ ಜಾಣಕುರುಡೆನಿಸುತ್ತದೆ.

ನಿಜ ಹಿಂದುತ್ವ, ಪವಾಡ/ವರ್ಣಸಂಕರ/ಮೂಢನಂಬಿಕೆಗಳನ್ನೆಲ್ಲಾ ಮೀರಿದ್ದುದಾಗಿದೆ. ಈ ಧರ್ಮವು ತಮಗೆ ಹೇಗೆ ಬೇಕೋ ಹಾಗೆ ತಿದ್ದುವ, ತೀಡುವ ಫ್ಲೆಕ್ಸಿಬಲ್ ಧರ್ಮವಾದುದರಿಂದು ಇಂದು ಈ ಎಲ್ಲಾ ಅವಘಡಗಳೂ ಕಾಲಕಾಲಕ್ಕೆ, ಅವರವರ ಅನುಕೂಲಕ್ಕೆ ಇದರಲ್ಲಿ ಸೇರಿವೆ. ಬೌದ್ಧಧರ್ಮದ ಪ್ರಭಾವವನ್ನು ಹತ್ತಿಕ್ಕಲು ಗೋಮಾಂಸ ವರ್ಜ್ಯವನ್ನು ಹಿಂದೂ ಧರ್ಮಕ್ಕೆ ಸೇರಿಸಿದಂತೆಯೇ, ಕಾಲಕಾಲಕ್ಕೆ ಇಂದಿನ ಬುದ್ಧಿಜೀವಿಗಳಂತಹ ಬುದ್ಧಿವಂತರು ಶತಶತಮಾನಗಳಿಂದ ಹಿಂದೂ ಧರ್ಮವನ್ನು ತಮ್ಮ ಅನುಕೂಲಗಳಿಗೆ ಮಾರ್ಪಾಡಿಸಿಕೊಳ್ಳುತ್ತ ಇಂದಿನ ಹಿಂದೂ ಧರ್ಮ ವಿಕಸಿತಗೊಂಡಿದೆ. ಇದು ಎಷ್ಟೊಂದು ಫ್ಲೆಕ್ಸಿಬಲ್ ಎಂದರೆ ನೀವೇ ಒಂದು ಮಂತ್ರವನ್ನು ತಟ್ಟನೆ ರೂಪಿಸಬಹುದು. ಅದು "ಓಂ ಅಲ್ಲಾಹೋ ನಮಃ" ಅಥವಾ "ಓಂ ಜೀಸಸ್ಸೋ ನಮಃ" ಎಂದೂ ಆಗಬಹುದು! ಸಕಲ ಚರಾಚರಗಳಲ್ಲಿಯೂ ಪರಮಾತ್ಮನಿದ್ದಾನೆ. ಆದುದರಿಂದ ಸಕಲ ಚರಾಚರಗಳನ್ನೂ ಗೌರವಿಸು ಎಂಬ ಸಿಂಪಲ್ ತತ್ವದ ಪರಿಣಾಮವೇ ಹಿಂದೂಗಳು ಕಲ್ಲು, ಮರ, ನದಿ, ಸಾಗರಗಳನ್ನೆಲ್ಲಾ ಪೂಜಿಸುವುದು. ಆದರದಿಂದು ಮೌಢ್ಯವೆನಿಸುವಂತೆ ನಮ್ಮ ಬುದ್ದಿವಂತ ಜನಾಂಗ ಅದನ್ನು ವಿಶ್ಲೇಷಿಸಿದೆ. ಹಾಗಾಗಿಯೇ ಹಿಂದೂ ಧರ್ಮವೂ ಕೂಡಾ ಇಂದು ಮರಳು/ಸಕ್ಕರೆ ಸೇರಿರುವ ಕಲಬೆರಕೆಯಾಗಿದೆ. ಇದರಲ್ಲಿ ಸಕ್ಕರೆಯನ್ನು ಹೆಕ್ಕಿ ಒಂದು ಸಮಗ್ರ ರೂಪವನ್ನು ಕೊಡಬೇಕಾದ ಮಠಾಧೀಶರು "ಪೀಠ ರಾಜಕೀಯ"ದಲ್ಲಿ ಮುಳುಗಿಹೋಗಿದ್ದಾರೆ. ಬಹುಶಃ ಇದನ್ನೆಲ್ಲಾ ಮನಗಂಡೋ ಇಲ್ಲಾ ಮತಾಂತರವನ್ನು ಒಪ್ಪಿಕೊಳ್ಳಿ ಎಂದೋ ಒಟ್ಟಾರೆ ನಮ್ಮ ನಾಡಿನ ಘನ ಬುದ್ಧಿಜೀವಿಗಳು "ಯಾವ ದೇವರಿಗೆ ಕೈಮುಗಿದರೂ ಅದು ಕೇಶವನನ್ನು ತಲುಪುತ್ತದೆಂಬ ನಂಬುಗೆಯೇ ಹಿಂದುತ್ವ"ವೆಂದು ಹಿಂದೂ ಧರ್ಮದ ಅಧಿಪತಿಯ ಖಾಲೀ ಸ್ಥಾನವನ್ನು ತುಂಬುವ ಪ್ರಯತ್ನವನ್ನು ಮಾಡುತ್ತಿದ್ದಾರೋ ಅಥವಾ ಇಂದಿನ ಮತಾಂತರವನ್ನು ಒಪ್ಪಿಕೊಳ್ಳಿ ಎನ್ನುತ್ತಿದ್ದಾರೊ ನಾನರಿಯೆ.

ಇನ್ನು ಈ ನ್ಯೂಲೈಫ್ ಚರ್ಚುಗಳ ಚೈನ್ ಒಂದು ರೀತಿ ಹಿಂದೂ ತತ್ವದ ಮೆರುಗನ್ನು ಹಚ್ಚಿ ತಮ್ಮದೇ "ಕಲ್ಟ್"ನ ತತ್ವಗಳನ್ನು ಪ್ರಚಾರಿಸುವ ಇಸ್ಕಾನ್, ಕಲ್ಕಿ, ಸಾಯಿಬಾಬಾ, ದಾರೂಬಾಬಾ, ಮರ ಹತ್ತಿ ಕುಳಿತಿರುವ ಮಾತೆ.........ಇನ್ನು ಮುಂತಾದ ಕಲ್ಟ್ ಗಳಂತೆಯೇ ಕ್ರಿಶ್ಚಿಯಾನಿಟಿ ಮೆರುಗು ಹೊಂದಿರುವ ಕಲ್ಟ್. ಎಲ್ಲರಂತೆಯೇ ಇವರಿಗೂ ತಮ್ಮ ತಮ್ಮ ಸಂಘದ ಸದಸ್ಯರುಗಳ ಸಂಖ್ಯೆಯನ್ನು ಏರಿಸಿಕೊಳ್ಳಬೇಕೆಂಬ ಭರ. ಆಮ್ ವೇ, ಮನಿ-ಸರ್ಕುಲೇಷನ್...ಇನ್ನು ಮುಂತಾದ ಚೈನ್ ಬ್ಯುಸಿನೆಸ್ ಗಳಂತೆ! ಈ ರೀತಿಯ ಹುಚ್ಚಾಟಗಳಿಗೆ ಅಮಾಯಕರುಗಳು ಬಲಿಯಾಗುತ್ತಿರುವುದನ್ನು ತಡೆಗಟ್ಟಿ, ಜನ ನಿಜಾರ್ಥದ ಧರ್ಮಾನುಚರಣೆಗೆ ಅನುವಾಗುವಂತೆ ಸನಾತನ ಭಾರತ ಎಂದು ಅನುವಾಗುವುದೋ? ಬಹುಶಃ, ಭಾರತಕ್ಕೆ ನ್ಯೂಲೈಫ್ ಬೇಕಾಗಬಹುದೇನೋ!

ಅಣಕ:

ನಮ್ಮ ರೈತ ಪರಮೇಶಪ್ಪ "ಯೂರಿಯಾ" ಗೊಬ್ಬರಕ್ಕೆ "ವೀರ್ಯ" ಎನ್ನುತ್ತಿದ್ದನ್ನು ಓದಿದ್ದೀರಷ್ಟೆ. ಅವನು ಈ ನ್ಯೂಲೈಫ್ ಚರ್ಚಿಗೆ ಸೇರಿ ಪೀಟರ್ ಪರಮೇಶಪ್ಪನಾಗಿ "ಮೇರಿ", "ಜೇಮ್ಸ್", "ಜೀಸಸ್" ರನ್ನು ಏನೆನ್ನುತ್ತಿದ್ದನೋ ನಾ ಕಾಣೆ. ಆದರೂ ತನ್ನ ನೆರೆಮನೆಯ "ಆಂಡ್ರೂ ಆಡಿವೆಪ್ಪ"ನನ್ನು ಮಾತ್ರ "ಆಂಡಿನ ಅಡಿವೆಪ್ಪ" ಎನ್ನುತ್ತಿದ್ದನೆನೋ ಎನಿಸುತ್ತದೆ!

2 comments:

sunaath said...

ಮತಾಂತರಕ್ಕೆ ಧಾರ್ಮಿಕ ಜಿಜ್ಞಾಸೆ ಕಾರಣವಾಗಿಲ್ಲ. ಬಹಳಷ್ಟು ಮತಾಂತರಗಳಿಗೆ ರಾಜಕೀಯ ತಳಪಾಯವಿದೆ.
ತುರುಕರು,ಪರ್ಶಿಯನ್ನರು ಭಾರತದ ಮೇಲೆ ದಾಳಿ ಮಾಡಿದಾಗ, ಸೆರೆಯಾಳಾದ ಸೈನಿಕರನ್ನು ಕ್ಷಮಿಸಲು ಹಾಕುತ್ತಿದ್ದ ಶರತ್ತು ಮತಾಂತರದ್ದು. ಇದರ ಹಿಂದಿನ ಉದ್ದೇಶ: ಮತಾಂತರಿತರಾದವರು ಪಕ್ಷಾಂತರ ಮಾಡುತ್ತಾರೆನ್ನುವದು.
ಪೋರ್ತುಗೀಜರು ಕನ್ನಡ ಕರಾವಳಿಯಲ್ಲಿ ವ್ಯಾಪಾರದ ನೆಲೆಗಳನ್ನು ಸ್ಥಾಪಿಸಲು, ವಿಜಯನಗರದ ಅರಸರ ಹಾಗೂ ಬಿಜಾಪುರದ ಸುಲ್ತಾನರ ಅನುಮತಿ ಕೇಳಿದಾಗ,ಹಾಕಲಾದ ಶರತ್ತು: ಕರಾವಳಿಯ ಪ್ರಜೆಗಳನ್ನು ಮತಾಂತರಿಸಬಾರದು.
ಇದರ ಹಿಂದಿನ ಉದ್ದೇಶ ಸ್ಪಷ್ಟ.
ಅದಾಗ್ಯೂ ಸಹ ಪೋರ್ತುಗೀಜರ ಹಾಗು ಸ್ಥಳೀಯ ರಾಜರ ನಡುವೆ ನಡೆದ ಯುದ್ಧದಲ್ಲಿ, ಮತಾಂತರಗೊಂಡವರು ಪೋರ್ತುಗೀಜರ ಪರವಾಗಿ ಹೋರಾಡಿದರು!
ಈ ಕಾರಣಕ್ಕಾಗಿಯೇ ಟೀಪು ಸುಲ್ತಾನನು, ಮಂಗಳೂರಿನಲ್ಲಿ ಸೆರೆ ಸಿಕ್ಕ ಕ್ರಿಶ್ಚಿಯನ್ನರನ್ನು ಸೆರೆಯಾಳುಗಳನ್ನಾಗಿ ಕೊಡಗಿಗೆ ಒಯ್ದದ್ದು.

Ravi Hanj said...

Hi Sunaath - Thanks for commenting. I agree with you that the conversion was used as a tool to build the loyalty and force the regime in those days. Thats the historical truth. Unfortunately, it is still used the same way in the modern democratic world.

Ravi Hanj.