ಅಕ್ಕ, ಯಾಕೆ ಎಲ್ಲರಿಗೂ ಬೇಕು ನಿನ್ನ ಪಕ್ಕ?

ಅಮೇರಿಕಾ ಕನ್ನಡ ಕೂಟಗಳ ಆಗರವೆಂಬ ಹೆಸರಿನ ಈ ಸಂಸ್ಥೆ, ಅಮೇರಿಕಾದಲ್ಲಿರುವ ಎಲ್ಲಾ ಕನ್ನಡ ಕೂಟಗಳನ್ನು ಒಂದೇ ಸೂರಿನಡಿ ತಂದು ಎರಡು ವರ್ಷಗಳಿಗೊಮ್ಮೆ ೨೦೦೦ದೀಚೆಗೆ ಕನ್ನಡ ಸಮ್ಮೇಳನವನ್ನು ಏರ್ಪಡಿಸುತ್ತಿದೆ. ಅಮೇರಿಕಾದಲ್ಲಿ ಸಹಸ್ರಾರು ಕನ್ನಡಿಗರಿದ್ದರೂ ಈ ಸಮ್ಮೇಳನ/ಕನ್ನಡ ಕೂಟಗಳಿಗೆ ಹೋಗುವವರು ಕೇವಲ ಬೆರಳೆಣಿಕೆಯಷ್ಟು ಕನ್ನಡಿಗರು ಮಾತ್ರ. ಇದಕ್ಕೆ ಕಾರಣಗಳು ಭಾರತದ ಕೂಟ/ಸಮ್ಮೇಳನಗಳಲ್ಲಿ ನಡೆಯುವ ಅಂತರಿಕ ವಿಚಾರಗಳಂತೆಯೇ ಈ ಕೂಟ/ಸಮ್ಮೇಳನಗಳೇನೂ ಹೊರತಾಗಿಲ್ಲದಿರುವುದು. ಇಲ್ಲಿನ ಬಹುತೇಕ ಕನ್ನಡಿಗರು ತಮ್ಮ ಮೂರು ದಿನಗಳ ಲಾಂಗ್ ವೀಕೆಂಡ್ ಅನ್ನು ಸ್ಕೂಲುಗಳು ಶುರುವಾಗುವ ಮುಂಚಿನ ಕೊನೆಯ ಪ್ರವಾಸ/ಪಾರ್ಟಿಗಳಿಗೆ ಮೀಸಲಿಟ್ಟಿರುತ್ತಾರೆ. ಅದೇ ರೀತಿ ಏರ್ಪಡುವ ಅನೇಕ ಪಾರ್ಟಿಗಳಂತೆಯೇ ಈ "ಅಕ್ಕ" ಸಮ್ಮೇಳನ ಕೂಡ. ಅವರವರ ಭಾವಕ್ಕೆ, ಅವರವರ ತಾಳಕ್ಕೆ ಹೊಂದುವಂತಹ ಪಾರ್ಟಿಗಳಿಗೆ ನಾವು ನೀವುಗಳು ಹೋಗುವಂತೆಯೇ ಕೆಲವರ್ಗದ ಜನ ಈ "ಅಕ್ಕ" ಪಾರ್ಟಿಗೆ ಹೋಗುತ್ತಾರೆ. ಇದರಲ್ಲಿ ಇಲ್ಲಿನ ಬಹುತೇಕ ಕನ್ನಡಿಗರು ವಿಶೇಷವನ್ನೇನು ಕಾಣುವುದಿಲ್ಲ!

ನಿಮಗೆ ಆಶ್ಚರ್ಯವಾಯಿತೇ, ಇದರಲ್ಲಿ ವಿಶೇಷವೇನೂ ಇಲ್ಲವೆಂಬುದನ್ನು ಕೇಳಿ. ನಿಮಗೆ ಹೇಗೆ ಆಶ್ಚರ್ಯವಾಗುತ್ತಿದೆಯೋ ಹಾಗೆಯೇ ನನಗೂ ಕೂಡಾ ಸಖೇದಾಶ್ಚರ್ಯವಾಗುತ್ತಿದೆ, "ಅಕ್ಕ"ನ ಬಗ್ಗೆ ಕರ್ನಾಟಕದಲ್ಲಿ, ಅಲ್ಲಿನ ಸುದ್ದಿಪತ್ರಿಕೆಗಳಲ್ಲಿ, ವಿಧಾನಸೌಧದಲ್ಲಿ ಆಗುತ್ತಿರುವ ಸುದ್ದಿಯನ್ನು ನೋಡಿ!

ಇಂದಿನ ಮಾಹಿತಿ ಯುಗದಲ್ಲಿಯೂ ಕೂಡಾ ನಮ್ಮ ಸುದ್ದಿ ಮಾಧ್ಯಮಗಳು ವಿಚಾರಗಳನ್ನು ತಿಳಿದು, ಅಳೆದು ಬರೆಯದೇ ಹುಚ್ಚುಚ್ಚಾಗಿ "ಕೇವಲ ಮೂರು ಸಾವಿರ ಜನ ಸೇರುವ ಒಂದು ಸಮ್ಮೇಳನ, ಅದೂ ತಲೆಗೆ ಇನ್ನೂರು ಡಾಲರ್ ತೆತ್ತು" ಕುರಿತು ಇದೊಂದು ಅದ್ಭುತ ಸಮ್ಮೇಳನದಂತೆ, ಈ ಸಮ್ಮೇಳನದಿಂದ ಕನ್ನಡದ ಬಾವುಟ ಶ್ವೇತಭವನದ ಮೇಲೆ ಹಾರಾಡಿತೆಂಬುವಂತೆ, ವಿದೇಶೀ ಬಂಡವಾಳ ಬೆಂಗಳೂರಿಗೆ ಹುಚ್ಚೆದ್ದು ಹರಿಯುತ್ತದಂತೆಂಬುವಂತೆ ನಿತ್ಯವೂ "ಕೌಂಟ್ ಡೌನ್" ಮಾದರಿಯಲ್ಲಿ ಭಿತ್ತಿಸುತ್ತಿರುವುದನ್ನು ನೋಡಿ, ಇದು ನಮ್ಮ ಸುದ್ದಿಮಾಧ್ಯಮಗಳು ಮಾಹಿತಿಯನ್ನು ಬಳಸುವ ಉನ್ನತಿಯೋ, ಅಧಃಪತನವೋ ಎಂದು ದ್ವಂದ್ವಕ್ಕೊಳಗಾಗಿದ್ದೇನೆ.

ಇನ್ನು ಅಕ್ಕನ ಹಿಂದಿನ ಸಮ್ಮೇಳನಗಳಿಗೆ ಬಂದಂತಹ ಮಂತ್ರಿಮಹೋದಯರು ಅದೆಷ್ಟು ವಿದೇಶೀ ಬಂಡವಾಳವನ್ನು ಬೆಂಗಳೂರಿಗೆ ಹರಿಸಿದ್ದಾರೋ ಲೆಕ್ಕವಿಟ್ಟಿರುವರ್‍ಯಾರು? ಇಂತಹ ಸಮ್ಮೇಳನದಿಂದ ಬಂಡವಾಳ ಹರಿಯುತ್ತದೆಂದು ಹೇಳಿಕೊಳ್ಳುವ ಇಂದಿನ ಮುಖ್ಯಮಂತ್ರಿ, ಹಾಗೆಯೇ ಹೇಳಿಕೊಂಡ ಮಾಜೀ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ, ಎಸ್.ಎಮ್.ಕ್ರಿಸ್ (ಕೃಷ್ಣ) ಎಂತಹ "ಬಂಡವಾಳ" ಮೇಧಾವಿಗಳೆಂದು ನೀವೇ ಆಲೋಚಿಸಿ. ಬಂಡವಾಳ ಹರಿಸುವ/ಬೆಳೆಸುವ ಉದ್ದೇಶವಿದ್ದವರೂ ಅಂತರರಾಷ್ಟ್ರೀಯ ವಾಣಿಜ್ಯ ಸಮ್ಮೇಳನಗಳಿಗೋ, ರಾಷ್ಟ್ರನಾಯಕರುಗಳ ಸಮ್ಮೇಳನಗಳಿಗೋ ಹೋಗುತ್ತಾರೆಯೇ ವಿನಃ ಮಧ್ಯಮ ವರ್ಗದ ಸಾಂಸ್ಕೃತಿಕ ಸಮ್ಮೇಳನಕ್ಕೆ ಖಂಡಿತಾ ಹೋಗುವುದಿಲ್ಲ. ಇಲ್ಲಿ ಬಂಡವಾಳ ಹರಿಯುವುದೇನಿದ್ದರೂ ಬೆಂಗಳೂರಿನಲ್ಲಿ ಸೈಟು/ಮನೆ ಕೊಂಡುಕೊಳ್ಳಲು ಮಾತ್ರ! ಅದೂ ಬೆಂಗಳೂರಿನ ಇಂದಿನ ಬೆಲೆಗೆ ಯಾವುದಾದರೂ ಕೆಂಟುಕಿಯ ಕಮಂಗಿವಿಲ್ ನಲ್ಲಿರುವ ಮಿಕ ಮನಸ್ಸು ಮಾಡಿದರೆ.

ಇನ್ನು ಇಲ್ಲಿನ ಭಾರತೀಯರುಗಳ ಸಂಸ್ಕೃತಿಗಳ ವಿಚಾರವಾಗಿ ಈ ಹಿಂದೆಯೇ ನನ್ನ "ಜಾತ್ಯಾತೀತ ಅಮೇರಿಕೆಯಲ್ಲಿ ಜಾತೀಯತೆ" ಮತ್ತು "ಎರಡನೇ ತಲೆಮಾರಿನ ಅಮೇರಿಕನ್ನರು" ಲೇಖನಗಳಲ್ಲಿ ಸವಿವರವಾಗಿ ಬರೆದಿದ್ದೇನೆ, ನೀವೇ ಓದಿಕೊಳ್ಳಿ.

ಇನ್ನು ಈ ಸಮ್ಮೇಳನದಲ್ಲಿ ಸೇರುವವರು ನಿಮ್ಮನ್ಯಾರು ’ಕ್ಯಾರೇ’ ಎನ್ನರು. ಅವರೆಲ್ಲ ತಮ್ಮ ತಮ್ಮ ಪರಿಚಿತ ಬಂಧು-ಮಿತ್ರರೊಟ್ಟಿಗೆ ಸೇರಿ ಉಭಯಕುಶಲೋಪರಿಯಲ್ಲಿ ತೊಡಗಿರುತ್ತಾರೆ. ಅಕಸ್ಮಾತ್, ನಿಮ್ಮನ್ಯಾರಾದರೂ ಮಾತನಾಡಿಸಿದರೋ ಎಂದರೆ ಅವರು ರಿಯಲ್-ಎಸ್ಟೇಟ್ ಏಜೆಂಟರೋ, ಇನ್ಸೂರೆನ್ಸ್ ಏಜೆಂಟರೋ ಅಥವಾ ಬೆಳೆದು ನಿಂತ ಮಗಳ ತಂದೆಯೋ ಆಗಿರುತ್ತಾರೆ. ಇದು ನನ್ನ ಅನುಭವದ ಮಾತು.

ಹತ್ತು ವರ್ಷಗಳ ಹಿಂದೆ ನಾನು ಒಮ್ಮೆ ನನ್ನ ಸ್ನೇಹಿತನ ಒತ್ತಾಯಕ್ಕೆ ಮಣಿದು ಅವನೊಂದಿಗೆ ಒಂದು ಕನ್ನಡ ಕೂಟಕ್ಕೆ ಹೋಗಿದ್ದೆ. ಹೊಸಬರಾದ ನನ್ನನ್ನೂ ನನ್ನ ಸ್ನೇಹಿತನನ್ನೂ ಅಲ್ಲಿ ಕೇಳುವವರೇ ಇರಲಿಲ್ಲ. ಎಲ್ಲರೂ ತಮ್ಮ ತಮ್ಮ ಗುಂಪುಗಳೊಂದಿಗೆ ಬಿಜಿ. ಹೀಗಿದ್ದಾಗ ಒಬ್ಬ ಸಭ್ಯ ವ್ಯಕ್ತಿಯೋರ್ವರು ನನ್ನ ಪಕ್ಕಕ್ಕೆ ಬಂದು ಉಭಯಕುಶಲೋಪರಿಯಲ್ಲಿ ತೊಡಗಿದರು. ಮಾತನಾಡಿಸುವವರು ಒಬ್ಬರು ಸಿಕ್ಕರೆಂದು ನಾನು ಕೂಡ ಅವರೊಂದಿಗೆ ಮಾತಿನಲ್ಲಿ ತೊಡಗಿದೆನು. ನನ್ನ ಚಹರೆಯಿಂದ ನನ್ನನ್ನು ಒಬ್ಬ "ಯೋಗ್ಯ ವರ"ನೆಂದುಕೊಂಡ ಅವರು "ಏಕೆ, ಅಪಾರ್ಟ್ಮೆಂಟಿನಲ್ಲಿ ಒಬ್ಬರೇ ಇದ್ದೀರಿ. ಮದುವೆಯಾಗಬಹುದಲ್ಲವೇ" ಎನ್ನುತ್ತಾ ಅವರ ಮಗಳನ್ನು ಪರಿಚಯಿಸಿದರು! ಅವರಲ್ಲದೇ ಅಲ್ಲಿ ನನ್ನನ್ನು ಮಾತನಾಡಿಸಿದ ಇನ್ನೋರ್ವರೆಂದರೆ, ಒರ್ವ ರಿಯಲ್-ಎಸ್ಟೇಟ್ ಕಂ ಇನ್ಸೂರೆನ್ಸ್ ಏಜೆಂಟ್ "ಕನ್ನಡಿಗ"ರು. ಆ ತೊಂಬತ್ತರ ದಶಕದಲ್ಲಿ ಇಮಿಗ್ರೇಷನ್ ಲಾಯರ್ರುಗಳು ಭಾರೀ ಬಿಜಿಯಾಗಿದ್ದರು, ಈಗ ಅವರುಗಳೂ "ಅಕ್ಕ"ದಲ್ಲಿದ್ದಾರೆಂದು ಬಲ್ಲವರು ಹೇಳುತ್ತಾರೆ!

ಪ್ರಚಾರಪ್ರಿಯತೆ ಆಧುನಿಕ ಪ್ರಪಂಚದಲ್ಲಿ ಮಾನವನಿಗೆ ತಟ್ಟಿರುವ ಬಹುದೊಡ್ಡ ರೋಗ. ಈ ರೋಗದ ಕಾರಣವಾಗಿಯೇ ಈ ಸಮ್ಮೇಳನಗಳು ಏರ್ಪಡುವುದು. ಇಲ್ಲಿನ ಸಾಕಷ್ಟು ಅಮೇರಿಕನ್ನಡಿಗರಿಗೆ "ರಾಜ್ಯಪ್ರಶಸ್ತಿ"ಯ ರೋಗ ತಟ್ಟಿಕೊಂಡಿದೆ. ಕ್ಯಾಪಿಟಲಿಸ್ಟ್ ಅಮೇರಿಕಾದಲ್ಲಿ ಯಾವುದೇ ಕಾರ್ಯಕ್ಕೂ "೧-೮೦೦-ಸಹಾಯ" ಎಂಬ ಟೋಲ್ ಫ್ರೀ ನಂಬರಿನ ಸೇವೆಗಳಿದ್ದಾವೆ. ನಿಮ್ಮ ಮನೆ ಗುಡಿಸಬೇಕೆ, ’೧-೮೦೦-ಗುಡಿಸು’ ಫೋನಾಯಿಸಿ. ಡಾಕ್ಟರ್ ಬೇಕೆ, ’೧-೮೦೦-ಡಾಕ್ಟರ್’ ಫೋನಾಯಿಸಿ. ಹುಡುಗಿ ಬೇಕೆ, ೧-೮೦೦-ಹುಡುಗಿ. ಹುಡುಗ ಬೇಕೆ, ೧-೮೦೦-ಹುಡುಗ! ದುಡ್ಡಿದ್ದರೆ ನಿಮಗೆ ಸೇವೆ. ಈ ರೀತಿಯ ಸೇವೆ ಭಾರತದಲ್ಲಿ ಎಷ್ಟೇ ದುಡ್ಡು ಸುರಿದರೂ ಸಿಕ್ಕದು. ಇಲ್ಲಿನ ಸಂಸ್ಥೆಗಳು ಗ್ರಾಹಕ ಸಂತೃಪ್ತಿಯನ್ನು ಗಂಭೀರವಾಗಿ ಪರಿಗಣಿಸುತ್ತವೆ. ಇದರ ಬಗ್ಗೆ ಇನ್ನೊಂದು ಮಾತಿಲ್ಲ.

ಇರಲಿ, ವಿಷಯ ಹೀಗಿರುವಾಗ ತಲೆಗೆ ಇನ್ನೂರು ಡಾಲರ್ ತೆಗೆದುಕೊಂಡು, ಎಲ್ಲಾ ೧-೮೦೦-ನಂಬರಿನಲ್ಲಿ ಪಾರ್ಟಿ ಅರೇಂಜ್ ಮಾಡುವುದು ಅಂತಹ ಸಂಕಷ್ಟಕರ ಸಂಗತಿಯೆಂದು ನನಗಂತೂ ಅನಿಸದು. ಇಂತಹ ಮಾಹಿತಿಯನ್ನು ತಿಳಿದೂ ಸಹ ನಮ್ಮ ಸುದ್ದಿ ಮಾಧ್ಯಮಗಳು ರಾಜಕಾರಣಿಗಳಿಗೆ ನಾವೇನೂ ಕಮ್ಮಿ ಎಂಬಂತೆ "ಅಕ್ಕ" ಸಮ್ಮೇಳನವನ್ನು ಅದ್ಭುತವೆಂಬಂತೆ ಚಿತ್ರಿಸಿ ಕರ್ನಾಟಕದ ಜನಸಾಮಾನ್ಯರನ್ನು ದಿಕ್ಕು ತಪ್ಪಿಸುತ್ತಿದುದನ್ನು ನೋಡಲಾರದೆ ಈ ಕುರಿತಾಗಿ ನನ್ನ ಅನಿಸಿಕೆಗಳನ್ನು ಬರೆದಿದ್ದೇನೆ, ಚಿಂತಿಸಿ ಮಂಥಿಸಿ.

ಅಣಕ:

ಈ ಬಾರಿಯ ’ಅಕ್ಕ’ ಸಮ್ಮೇಳನಕ್ಕೆ ನನ್ನ ಫೇವರೈಟ್ ರಾಜಕಾರಣಿ ರೇಣುಕಾಚಾರ್ಯ ಬರುತ್ತಿದ್ದಾರೆ, "ಬಿ ವೇರ್ ಅಮೇರಿಕನ್ನಡತಿಯರೆ!"

"ಡೋಂಟ್ ವರ್ರಿ, ಅಮೇರಿಕನ್ನಡತಿಯರೇ ಅವರೊಂದಿಗೆ ನಾನೂ ಇದ್ದೇನೆ" ಎನ್ನುತ್ತಿದ್ದಾರೆ ಮಿಸೆಸ್.ರೇಣುಕಾಚಾರ್ಯರು, ಕೈಯಲ್ಲಿ ಟೇಸರ್ ಹಿಡಿದು!

4 comments:

ವಿ.ರಾ.ಹೆ. said...

ಇಲ್ಲಿ ಪತ್ರಿಕೆಯೊಂದು ಅಕ್ಕ ಸಮ್ಮೇಳನವನ್ನು ಅಂತಾರಾಷ್ಟ್ರೀಯ ಕನ್ನಡ ಸಮ್ಮೇಳನವೆಂದು ಬಣ್ಣಿಸಿತ್ತು!!

sunaath said...

ಹಾಗಿದ್ದರೆ, ಇದು ಅಕ್ಕ ಸಮ್ಮೇಳನದಲ್ಲಿ 'ಬೆಕ್ಕುಗಳ'ಹಾರಾಟ!

shivu.k said...

ಅಕ್ಕ ಬಗ್ಗೆ ನನಗಿದ್ದ ಕಲ್ಪನೆ ಎಲ್ಲಾ ಸುಳ್ಳು ಎಂದು ತಿಳಿಯಿತು. ಅದು ಬ್ರೋಕರುಗಳ[ವದು-ವರರ, ಭೂಮಿ]ಸಂತೆ ಎಂದಾಯಿತು. ಈ ಸಂತೆಗಿಂತ ತೇಜಸ್ವಿಯವರ ಸಂತೆ ಎಷ್ಟೋ ಮೇಲು.

ಶಿವು. ಛಾಯಾಗ್ರಾಹಕ ಬೆಂಗಳೂರು.

hamsanandi said...

ಅಕ್ಕ ಸಮ್ಮೇಳನಕ್ಕೆ ನಾನು ಯಾವಾಗಲೂ ಹೋಗಿಲ್ಲ - ಆದರೆ ಇಂತಹ ಸಮ್ಮೇಳನಗಳ ಬಗ್ಗೆ ಒಂದು ಮಾತು ಹೇಳಬೇಕೆನಿಸಿತು.

ಇಂತಹ ಕಾರ್ಯಕ್ರಮದಲ್ಲಿ ಲೋಕೋಭಿನ್ನರುಚಿಃ ಆದ್ದರಿಂದ ಎಲ್ಲರೂ ಅವರವರ ಭಾವಕ್ಕೆ, ಅವರವರ ಭಕ್ತಿಗೆ ಎನ್ನೋ ತರಹ ಅವರರಿಗೆ ಹಿಡಿಸಿದ ಕಡೆ ಓಡೋಡೋದು ಮಾಮೂಲು. ಒಬ್ರು ಚಿತ್ರಗೀತೆ ಕೇಳ್ತಾ ಕೂತ್ರೆ ಮತ್ತೊಬ್ರು ಆವರಣವೋ-ಅನಾವರಣವೋ ಅಂತ ಚರ್ಚೆ ಮಾಡ್ತಿರ್ತಾರೆ. ಇದು ಹೆಚ್ಚು-ಇದು ಕಡಿಮೆ ಅಂತಲ್ಲ, ಆದರೆ ಇಂತಹ ಕಾರ್ಯಕ್ರಮವನ್ನು ಆಯೋಜಿಸೋದನ್ನ (ಅದು ೧-೮೦೦ ನಂಬರ್ ಕರೆದು ಇರಹುದು, ಅಥವಾ ಅವರಿಗೆ ತೋಚಿದ ಒಳ್ಳೇ ಕಾರ್ಯಕ್ರಮ ನಡೆಸೋದರಲ್ಲಿ ಇರಬಹುದು) ತೀರಾ ಹಗುರವಾಗಾಗಿ ಕಾಣ್ಬೇಕಿಲ್ಲ ಅನ್ಸತ್ತೆ.

ಇದು ಅಮೆರಿಕದಲ್ಲಾದ್ರೂ -ಅಡಿಕೆಮಾರನಹಳ್ಳಿಲಾದ್ರೂ ನಿಜವಾದ ಮಾತೇ.