ಹೀಗೆಂದು ನಮ್ಮ ಸುಪ್ರೀಂ ಕೋರ್ಟ್ ಹೇಳಿದೆ. ಕೊನೆಗೂ ಭಾರತದ ಸರ್ವೋಚ್ಚ ನ್ಯಾಯಾಲಯ ಕಠೋರ ಸತ್ಯವನ್ನು ನಿಷ್ಟುರವಾಗಿ, ಅಸಹಾಯಕವಾಗಿ ಹೇಳಿದೆ.
ಹಿಂದಿನ ಲೇಖನದಲ್ಲಿ ಭಾರತ ಸ್ವಾತಂತ್ರ್ಯಗೊಂಡ ದಿನದಿಂದ ಹೇಗೆ ನಮ್ಮನ್ನಾಳಿದ ನಾಯಕರುಗಳು ಸೆಕ್ಯುಲರಿಸಂ ಅನ್ನು ಓಲೈಕೆಗೆ ತಿರುಚಿ ಯಶಸ್ವಿಯಾಗಿ ಪೋಷಿಸಿಕೊಂಡು ಬರುತ್ತಿದ್ದಾರೆಂದು ನನ್ನ ಅನಿಸಿಕೆಗಳನ್ನು ಬರೆದಿದ್ದೆ. ಅದಕ್ಕೆ ಪೂರಕವೆಂಬುವಂತೆ ಕಾಕತಾಳೀಯವಾಗಿ ಈ ವಾರ ನಮ್ಮ ಸುಪ್ರೀಂ ಕೋರ್ಟ್ ನಮ್ಮ ವಾದವನ್ನು ಒಪ್ಪಿ, ಆ ದೇವರಿಂದಲೂ ಈ ದೇಶವನ್ನು ಕಾಪಾಡುವುದು ಸಾಧ್ಯವಿಲ್ಲವೆಂದು ತೀರ್ಪಿತ್ತಿದೆಯೇನೋ!
ಇರಲಿ, ಈ ದೇಶವನ್ನು ಆ ದೇವರಿಂದಲೂ ಕಾಪಾಡುವುದು ಏಕೆ ಸಾಧ್ಯವಿಲ್ಲವೆಂಬುದನ್ನು ಮೊದಲು ನೋಡೋಣ. ನಾನು ಈ ಹಿಂದೆ ಬರೆದಂತೆ ನಮಗೆ ಸ್ವಾತಂತ್ರ್ಯವಲ್ಲ ಸಿಕ್ಕಿದ್ದು, ಸ್ವೇಚ್ಛಾಚಾರ. ಅಷ್ಟೇ ಅಲ್ಲ ಅದಕ್ಕೆ ಬೋನಸ್ ಆಗಿ "ಸೆಕ್ಯುಲರಿಸಂ", ಮತ್ತು ಬೈಪ್ರಾಡಕ್ಟ್ಸ್ ಆಗಿ ಚಳುವಳಿ, ಬಂದ್,.....ಮುಂತಾದವು.
ಕಳೆದ ವಾರದ ಲೇಖನದಲ್ಲಿ "ಭಾರತೀಯ ಸೆಕ್ಯುಲರಿಸಂ" ನ ಅಧ್ವಾನಗಳನ್ನು, ಅದಕ್ಕೆ ಪೂರಕವಾಗಿರುವ ಕಾನೂನುಗಳನ್ನು ಉಲ್ಲೇಖಿಸಿ, ಬುದ್ದಿಜೀವಿಗಳ ಬಗೆಯನ್ನು ಬಿಡಿಸಿ ಹೇಳಿದ್ದನ್ನು ಓದಿದ್ದೀರಷ್ಟೇ. ಇನ್ನು ಬೇರೆ ’ಸೆಕ್ಯುಲರ್’ ರಾಷ್ಟ್ರ್‍ಅಗಳಲ್ಲಿ ಸೆಕ್ಯುಲರಿಸಂ ಹೇಗಿರುತ್ತದೆ ಎಂಬುದನ್ನು ನೋಡೋಣ. ಅಮೇರಿಕಾ ಕೂಡಾ ಸೆಕ್ಯುಲರ್ ರಾಷ್ಟ್ರ್‍ಅ. ಇಲ್ಲಿ ಎಲ್ಲಾ ಧರ್ಮೀಯರೂ ತಮ್ಮಿಷ್ಟದ ಧರ್ಮವನ್ನು ವೈಯುಕ್ತಿಕವಾಗಿ, ಸಂಘಗಳಲ್ಲಿ ಪಾಲಿಸಿಕೊಳ್ಳಬಹುದು. ಆದರೆ ಈ ಎಲ್ಲಾ ಆಚರಣೆಗಳೂ ವೈಯುಕ್ತಿಕ. ಯಾವುದೂ ಇಲ್ಲಿನ ಕಾನೂನಿನಲ್ಲಿ ಸ್ಥಾನವನ್ನು ಪಡೆದಿಲ್ಲ. ಅಷ್ಟೇ ಏಕೆ ಕ್ರಿಸ್ಮಸ್ ಒಂದೇ ಧಾರ್ಮಿಕ ರಜೆಯಿರುವುದು ಇಲ್ಲಿ! ಅದೂ ಬಹು ಹಿಂದಿನಿಂದಲೂ ಇರುವುದರಿಂದ ಆ ರಜೆಯಿದೆ. ಆದರೆ ಈಗದನ್ನು ’ಕ್ರಿಸ್ಮಸ್’ ಎನ್ನದೇ "ಹಾಲಿಡೇ ಸೀಸನ್’ ಎಂದು ಸೂಚ್ಯವಾಗಿ ಕರೆಯಲಾರಂಭಿಸಿದ್ದಾರೆ. ಇತರೆ ಧರ್ಮದವರಿಗೆ ಕಿರಿಕಿರಿಯಾಗಬಾರದೆಂದು! ಇನ್ನೆಲ್ಲಾ ರಜೆಗಳೂ ರಾಷ್ಟ್ರೀಯತೆಯನ್ನು ಪ್ರತಿನಿಧಿಸುತ್ತವೆ, ’ಥ್ಯಾಂಕ್ಸ್ ಗಿವಿಂಗ್ ಡೇ’, ’ಮೆಮೋರಿಯಲ್ ಡೇ’, ’ಇಂಡಿಪೆಂಡೆನ್ಸ್ ಡೇ’.....ಮಂತಾದವುಗಳಂತೆ. ಈ ಉದಾಹರಣೆಯನ್ನು ಕೇವಲ ಒಂದು ಸೆಕ್ಯುಲರ್ ರಾಷ್ಟ್ರ್‍ಅ ಹೇಗಿರಬೇಕೆಂದು ಹೇಳುತ್ತಿದ್ದೇನೆಯೇ ಹೊರತು, ಅಮೇರಿಕಾವನ್ನು ಮೆರೆಸಲು ಖಂಡಿತಾ ಅಲ್ಲ!
ಇನ್ನು ಮಹಾತ್ಮರು ಹುಟ್ಟು ಹಾಕಿದ ’ಬಂದ್’, ಮುಷ್ಕರಗಳ ಬಗ್ಗೆ ಬರೆಯದಿರುವುದೇ ವಾಸಿ. ಏಕೆಂದರೆ ಇವುಗಳ ಅನುಭವ ನಿಮಗೆಲ್ಲಾ ಚೆನ್ನಾಗಿಯೇ ಇದೆ. ಬಂದ್/ಮುಷ್ಕರಗಳ ಪ್ರಗತಿ ಎಲ್ಲಿಯವರೆಗೆ ಬಂದಿದೆಯೆಂದರೆ, ಪ್ರೇಮಿ ಕೈಕೊಟ್ಟನೆ? ಅವನ ಮನೆ ಮುಂದೆ ಮುಷ್ಕರ ಹೂಡು, ಸಿನಿಮಾ ನಟಿಯ ಲಂಗ ಚಿಕ್ಕದಾಯಿತೇ? ಮುಷ್ಕರ ಹೂಡು, ರಾಜಕಾರಣಿಗೆ ಅಮೇರಿಕಾ ವೀಸಾ ಸಿಕ್ಕಲಿಲ್ಲವೇ? ಅದಕ್ಕೂ ಮುಷ್ಕರ ಹೂಡು ಎನ್ನುವುದರವರೆಗೂ ಬೆಳೆದಿದೆ. ಈಗಾಗಲೇ ಕಣ್ಣು ತೆರೆಯುವ ಬಾಬಾ, ಹಾಲು ಕುಡಿಯುವ ಗಣಪತಿ, ಅಳುವ ಮೇರಿ ಮುಂತಾದ ಪವಾಡಗಳನ್ನು ನೋಡಿರುವ ಜನ, ಯಾರಾದರೂ ಸತ್ತರೆ ಅವರನ್ನು ಬದುಕಿಸು ಎಂದು ಈ ದೇವರುಗಳ ಮುಂದೆ ಮುಷ್ಕರ ಹೂಡುವುದೊಂದೇ ಬಾಕಿಯಿರುವುದು ಎನಿಸುತ್ತದೆ. ಅಲ್ಲದೇ, ಮುಷ್ಕರಗಳಲ್ಲಿ ಕ್ರಿಯೇಟಿವಿಟಿಯೂ ಸೇರಿದೆ. ಕಪ್ಪುಪಟ್ಟಿ ಧರಿಸಿ, ತಲೆ ಬೋಳಿಸಿ, ಅರೆನಗ್ನರಾಗಿ, ಕಂಬ ಹತ್ತಿ, ಕತ್ತೆ ಸಿಂಗರಿಸಿ..............
ಇನ್ನು ಅಧಿಕಾರಿಗಳು, ಸರ್ಕಾರೀ ನೌಕರರ ಲಂಚದ ಕತೆಗಳನ್ನು ನಮ್ಮ ಮಾಧ್ಯಮಗಳು ಲೋಕಾಯುಕ್ತರೊಡಗೂಡಿ ರೋಚಕವಾಗಿ ಆಗಾಗ್ಗೆ ಪ್ರಕಟಿಸುತ್ತಿರುತ್ತವೆ. ಆದರೆ ಆ ನಂತರ ಆ ಕತೆಗಳ ಅಂತ್ಯ ಹೇಗಾಯಿತೆಂಬುದು ಮಾತ್ರ ಚಿದಂಬರ ರಹಸ್ಯ!
ಅದೇ ರೀತಿ ಕಾನೂನು ಚಾಲನೆಯೂ ತುಂಬಾ ಸೆಕ್ಯುಲರ್ ಆಗಿದೆ. ಯಾವುದೇ ಅಪರಾಧಕ್ಕೆ ಗೊತ್ತಿದ್ದೋ/ಗೊತ್ತಿಲ್ಲದೆಯೋ ಪರೋಕ್ಷವಾಗಿ ಸಹಾಯವೆಸಗಿದ್ದರೆ ಅಂತವರನ್ನು ಬಂಧಿಸಿ ವಿಚಾರಿಸಿ ಶಿಕ್ಷೆಗೆ ಒಳಪಡಿಸುವುದು ನಮ್ಮ ಒಂದು ಕಾನೂನು. ಆದರೆ ಅದರ ಅನುಷ್ಟಾನ ಮಾತ್ರ ಅಜಗಜಾಂತರ. ಉದಾಹರಣೆಗೆ ಕಳೆದ ವರ್ಷ ಗ್ಲಾಸ್ಗೋ ವಿಮಾನನಿಲ್ದಾಣಕ್ಕೆ ಬಾಂಬುಗಳು ತುಂಬಿದ್ದ ಜೀಪನ್ನೋಡಿಸಿದ ಕಫೀಲ, ತನ್ನ ಕಾರ್ಯದ ಮುನ್ನ ಅವನ ತಾಯಿಗೆ ಫೋನಾಯಿಸಿ ’ಇಂದಿನ ದಿನವೇ ಆದಿನ’ ಎಂದು ತಿಳಿಸಿದನೆಂದು ಸುದ್ದಿಗಳಲ್ಲಿ ಓದಿದ್ದೀರಿ ತಾನೆ. ಹಾಗೆ ತನ್ನ ಘನಕಾರ್ಯವನ್ನು ಸ್ವತಃ ತಿಳಿಸಿದರೂ, ಅದನ್ನು ಪೊಲೀಸರಿಗೆ ತಿಳಿಸದ ಆ ತಾಯಿಯನ್ನು ನಮ್ಮ ಪೊಲೀಸರು "ಅಪರಾಧ ಮುಚ್ಚಿಟ್ಟ" ಅಪರಾಧದ ಮೇಲೆ ಕೇಸನ್ನು ಹಾಕಿ ಕೋರ್ಟಿನಲ್ಲಿ ವಿಚಾರಣೆಯಾಯಿತೇ? ವೀರಪ್ಪನ್ ನಿಗೆ ಭಯದಿಂದ ಊಟ ಕೊಟ್ಟವರು, ನೀರು ಕೊಟ್ಟವರು, ಕೇವಲ ಅವನ ಊರಿನವರು ಎಂದೆಲ್ಲಾ ಆ ಹಳ್ಳಿಗರನ್ನು ಹಿಡಿದು ವಿಚಾರಣೆ ಮಾಡಿರುವಾಗ, ದಾಖಲೆ/ಸಾಕ್ಷಿಗಳಿದ್ದರೂ ಕಲೀಫನ ತಾಯಿಯನ್ನು ನಮ್ಮ ಪೊಲೀಸರು ಯಾಕೆ ಬಂಧಿಸಲಿಲ್ಲವೆಂಬುದೂ ನಮ್ಮ ’ಸೆಕ್ಯುಲರಿಸಂ’ ನ ಪರಿಣಾಮ! ಅಷ್ಟೇ ಅಲ್ಲ, ಒಬ್ಬ ಅನಿವಾಸೀ ಭಾರತೀಯ ಸಂಶಿತ ಅಪರಾಧಿ (ಉಗ್ರವಾದ), ಜಾಮೀನು ಪಡೆದು ಭಾರತಕ್ಕೆ ಹಿಂದಿರುಗಿದೊಡನೆ ’ಸೆಕ್ಯುಲರ್’ ಮುಖ್ಯಮಂತ್ರಿ ಖುದ್ದಾಗಿ ಭೇಟಿ ಮಾಡಿ, ಸರ್ಕಾರೀ ಉದ್ಯೋಗದ ಬಹುಮಾನವನ್ನು ಕೊಡುವುದರ ಮಟ್ಟಿಗೆ ನಮ್ಮ ಸೆಕ್ಯುಲರಿಸಂ ಬೆಳೆದಿದೆ. ಆದರೆ ನ್ಯೂಯಾರ್ಕ್ ನ ೯೧೧ ಭಯೋತ್ಪಾದಕರ ದಾಳಿಯಲ್ಲಿ ’ಮಡಿದ’ ಕರ್ನಾಟಕ ಮೂಲದ ಸಾಫ್ಟ್ವೇರ್ ಎಂಜಿನಿಯರರುಗಳಿಗೆ ಏನಾದರೂ ಗೌರವ ಸೂಚಿಸಿತೇ ನಮ್ಮ ಅಂದಿನ "ಸೆಕ್ಯುಲರ್" ಸರಕಾರ?
ಇರಲಿ, ಇದಕ್ಕೆಲ್ಲಾ ಪರಿಹಾರವಿರುವುದು ನಮ್ಮ ನ್ಯಾಯಾಂಗದಲ್ಲಿ ಮಾತ್ರ. ನಮ್ಮ ಸುಪ್ರೀಂ ಕೋರ್ಟ್ ನ್ಯಾಯಾಂಗವನ್ನು ಸರಿಯಾಗಿ ಅನುಷ್ಟಾನಗೊಳಿಸುವಲ್ಲಿ ಚಿತ್ತ ಹರಿಸಿ ರಾಷ್ಟ್ರ್‍ಅವನ್ನು ಸರಿದಾರಿಯಲ್ಲಿ ನಡೆಸುತ್ತದೆಂದು ಆಶಿಸುತ್ತಿರುವಾಗಿ, "ಈ ದೇಶವನ್ನು ಆ ದೇವರಿಂದಲೂ ಕಾಪಾಡಲಾಗದು" ಎಂಬ ಹೇಳಿಕೆ ನಮ್ಮ ನ್ಯಾಯಾಂಗದ ಹತಾಶತೆಯ ಪರಮಾವಧಿಯೆನಿಸುತ್ತದೆ.
ಯಾರಿಗೆ ಗೊತ್ತು? ನ್ಯಾಯಾಂಗವು ಕೂಡ ನಮ್ಮ ಶಾಸಕಾಂಗದ ರೀತಿ "ಪತ್ರಿಕಾ ಪ್ರಚಾರ"ದ ಹಪಹಪಿಗಾಗಿ ಪರಿತಪಿಸುತ್ತ ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದೆಯೇನೋ!
ಸ್ವಾತಂತ್ರ್ಯೋತ್ಸವದ ಶುಭಾಶಯಗಳು!
ಅಣಕ:
ಸ್ವಾತಂತ್ರ್ಯ ಹೋರಾಟದ ಸಿಪಾಯಿದಂಗೆ ಬಗ್ಗೆ ಓದಿದ್ದೀರಿ ತಾನೆ! ಇದರ ಬಗ್ಗೆ ನನ್ನ ಅಮೇರಿಕನ್ ಮಿತ್ರನೊಬ್ಬ ಹೇಳಿದ್ದೇನೆಂದರೆ, ಭಾರತೀಯರು ಈಗಿನಿಂದಷ್ಟೇ ಅಲ್ಲದೆ ಬಹು ಹಿಂದಿನಿಂದಲೂ ಗಾಳಿಸುದ್ದಿ ಪ್ರಿಯರಂತೆ. ಅದಕ್ಕೆ ಸಾಕ್ಷ್ಯವಾಗಿ ನಮ್ಮ ಸಿಪಾಯಿದಂಗೆ ಕುರಿತು ಈ ರೀತಿಯಾಗಿ ಹೇಳಿದನು - ಬಂದೂಕನ್ನು ಪಾಲೀಷ್ ಮಾಡಲು ಅಂದು ಯುರೋಪಿನಾದ್ಯಂತ ಪ್ರಾಣಿಜನ್ಯ ಕೊಬ್ಬನ್ನು ಉಪಯೋಗಿಸುತ್ತಿದ್ದರು. ಸಹಜವಾಗಿ ಈ ಕೊಬ್ಬು, ಕೊಬ್ಬುಭರಿತ ದನ/ಹಂದಿಗಳ ಕೊಬ್ಬಿನಿಂದ ಮಾಡಿದ್ದುದು. ಸರಿ, ಇದನ್ನು ತಿಳಿದುಕೊಂಡ ಒಬ್ಬ ಸಿಪಾಯಿ ’ಮಹಾತ್ಮ’ ನಾವುಗಳು ಇಂದು ಇತಿಹಾಸದಲ್ಲಿ ಓದುವಂತೆ "ಹಿಂದೂಗಳಿಗೆ ಹಸುವಿನ ಕೊಬ್ಬನ್ನೂ, ಮುಸ್ಲಿಮರಿಗೆ ಹಂದಿ ಕೊಬ್ಬನ್ನು ಕೊಟ್ಟು ಜಾತಿ ಕೆಡಿಸುತ್ತಿದ್ದಾರೆ" ಎಂಬ ಗಾಳಿಸುದ್ದಿಯನ್ನು ಹಬ್ಬಿಸಿದನಂತೆ! ಆ ಗಾಳಿಸುದ್ದಿಯೇ ಕೂಸೇ ನಮ್ಮ ಸಿಪಾಯಿದಂಗೆ ಎಂದನು!
ಯಾಕೋ ನನ್ನ ಅಮೇರಿಕನ್ ಮಿತ್ರನು ಹೇಳಿದ್ದುದು ನಿಜವೇನೋ ಎನಿಸುತ್ತದೆ!
Subscribe to:
Post Comments (Atom)
2 comments:
ಹೌದು ಸರ್,
ಸೆಕ್ಯುಲರ್ ಎಂಬ ಪದವನ್ನೇ ನಾಚಿಸುವಷ್ಟು ನಾವು ಸೆಕ್ಯುಲರ್‌ಗಳಾಗಿದ್ದೇವೆ. ವಿಪರೀತ ಗೋಜಲು ಗೊಜಲಾಗಿರುವ ಸಂಗತಿಯಿದು. ಅದಕ್ಕೇ ಬಹುಶಃ ಸುಪ್ರೀಂ ಕೋರ್ಟು ದೇವರಿಂದಲೂ ದೇಶ ಕಾಪಾಡಲಾಗದು ಎಂದದ್ದು ಎನ್ನಿಸುತ್ತದೆ.
ನಿಮ್ಮ ಅಣಕದ ಬಗ್ಗೆ ನನಗೆ ತಿಳಿದಿಲ್ಲ. ಬಹುಶಃ ಸತ್ಯವಿದ್ದರೂ ಆಶ್ಚರ್ಯವೇನಿಲ್ಲ. ನಮ್ಮೆಲ್ಲಾ ರಾಷ್ಟ್ರೀಯತೆ, ದೇಶದ ಕಲ್ಪನೆ, ದೇಶ ಪ್ರೇಮ ನಮ್ಮ ಧಾರ್ಮಿಕ ನಂಬಿಕೆ ಶ್ರದ್ಧೆಯ ವಿಸ್ತರಣೆಯೇ ಆಗಿದೆ.
೧೯೪೨ರಲ್ಲಿ Quit India ಎನ್ನುವ ಘೋಷಣೆ ಇತ್ತು. ಈಗ Loot India ಎನ್ನುವ ಘೋಷಣೆ ಜಾರಿಗೆ ಬಂದಿದೆ.
ಆ ಸಿದ್ಧಿಗಾಗಿಯೇ, ಲಾಲೂ ಪ್ರಸಾದ, ದೇವೇಗೌಡ ಮೊದಲಾದ ಅನೇಕ ರಾಜಕಾರಣಿಗಳು minority appeasing ಮಾಡುತ್ತಿರುವದು.
ನಿಜ ಹೇಳಬೇಕೆಂದರೆ, ಈ minority ಅನ್ನುವ conceptಏ ವಿಚಿತ್ರವಾಗಿದೆ. ಭಾರತದಲ್ಲಿ ಇರುವವರೆಲ್ಲರೂ ಭಾರತೀಯರೆ ಅಲ್ಲವೆ? ಯಾರಿಗೆ ಏಕೆ special rights ಮತ್ತು special concessions ಕೊಡಬೇಕು?
Post a Comment