ಸಮಾಜಮುಖಿ ಲೇಖನ  - ಕೇಂದ್ರ ಸರ್ಕಾರ ಜಂಟಿ ಕಾರ್ಯದರ್ಶಿ ಹುದ್ದೆ!

Image may contain: Ravi Hanj, crowd and text

ಕೇಂದ್ರ ಸರ್ಕಾರ ಜಂಟಿ ಕಾರ್ಯದರ್ಶಿ ಹುದ್ದೆಗಳಿಗೆ ಖಾಸಗಿ ಕಂಪೆನಿಗಳ ಆಡಳಿತ ತಜ್ಞರೂ ಅರ್ಜಿ ಸಲ್ಲಿಸಬಹುದೆಂಬ ನಿರ್ಣಯ ಒಂದು ಸ್ವಾಗತಾರ್ಹ ಬೆಳವಣಿಗೆ. ಸರ್ವರಿಗೂ ಸಮಪಾಲು ಎಂಬ ಸಂವಿಧಾನದ ಮೂಲ ಉದ್ದೇಶವನ್ನು ಎತ್ತಿ ಹಿಡಿಯುವ ಈ ಘನ ಉದ್ದೇಶವನ್ನು ಈ ಮೊದಲೇ ಯಾವ ಸರ್ಕಾರಗಳೂ ಏಕೆ ಯೋಚಿಸಲಿಲ್ಲವೆನ್ನುತ್ತಾ ಇದೊಂದು ಕ್ರಾಂತಿಕಾರಕ ನಿರ್ಣಯವೆಂದು ಮೋದಿ ಭಕ್ತರೂ, ಮತ್ತು ಇದು ಸಂವಿಧಾನವನ್ನು ಮೂಲೆಗೆ ತಳ್ಳುವ ಷಡ್ಯಂತ್ರವೆಂಬ ಮೋದಿ ವಿರೋಧಿಗಳ ಪರಸ್ಪರ ಏಕತಾನತೆಯ ಅಭಿಪ್ರಾಯಗಳನ್ನು ಬದಿಗಿಟ್ಟು ಇದರ ಹಿನ್ನೆಲೆ, ಅನುಕೂಲ ಮತ್ತು ಅಪಾಯಗಳೇನೆಂದು ವಿಶ್ಲೇಷಿಸೋಣ.

ಬ್ರಿಟಿಷರು ಆರಂಭಿಸಿದ್ದ ನಾಗರೀಕ ಸೇವಾ ಪರೀಕ್ಷೆಗಳನ್ನು ಪಾಸಾಗಿ ಬರುತ್ತಿದ್ದ "ದೊರೆ"ಗಳೇ ಮುಂದೆ ಸ್ವತಂತ್ರ್ಯ ಭಾರತದಲ್ಲಿ ಭಾರತೀಯ ಸೇವಾ ಪರೀಕ್ಷೆಗಳನ್ನು ಪಾಸು ಮಾಡಿ "ಬಾಬು"ಗಳಾಗಿ ಬರಲಾರಂಭಿಸಿದರು. ಈ ಸ್ಪರ್ಧಾತ್ಮಕ ಪರೀಕ್ಷೆಯನ್ನು ಪಾಸು ಮಾಡಿದವರ ವ್ಯವಹಾರಗ್ರಹಿಕೆ, ಆಡಳಿತದ ಅನುಭವ, ಶಿಕ್ಷಣವೆಲ್ಲಾ ಪ್ರಶ್ನಾರ್ಹವೆನಿಸದೆ, ಈ ಪರೀಕ್ಷೆಗಳ ಪ್ರಶ್ನೆಗಳು, ಆ ಪ್ರಶ್ನೆಗಳಿಗಿರಬಹುದಾದ ಕೌಟಿಲ್ಯ ಉತ್ತರಗಳು, ಮತ್ತು ಅದನ್ನು ಪಾಸು ಮಾಡಿದವರಿಗೆ ಸಿಕ್ಕಬಹುದಾದ ಸ್ಥಾನಮಾನಗಳ ಕುರಿತಾದ ರೋಚಕತೆಗೆ ಸಮಾಜದಲ್ಲಿ ಆದ್ಯತೆ ಹೆಚ್ಚಿದೆ. 

ಇರಲಿ, ಯಾವುದೇ ಒಂದು ಸಂಸ್ಥೆಯನ್ನು (ಸರ್ಕಾರಿ, ಸಹಕಾರಿ, ವಾಣಿಜ್ಯ, ಅಥವಾ ಸೇವಾಸಂಸ್ಥೆಗಳಿರಬಹುದು) ಮುನ್ನಡೆಸಲು ಬೇಕಾಗಿರುವ ಮೂಲ ಶಿಕ್ಷಣ ಮತ್ತು ಅನುಭವಗಳೆಂದರೆ, ಆಯಾಯ ಸಂಸ್ಥೆ ತೊಡಗಿರುವ ಮೂಲ ಕಸುಬಿನ ಅರಿವು, ಆಯವ್ಯಯ ಪತ್ರ ಸಮತೋಲನ, ಆಡಳಿತದ ಸರಳೀಕರಣ, ಶೀಘ್ರ ಮತ್ತು ಸುದೀರ್ಘ ಯೋಜನೆಗಳು, ಆ ಯೋಜನೆಗಳನ್ನು ನಿಯೋಜಿಸುವ ಮಾರ್ಗ, ಬರಬಹುದಾದ ಅಡಚಣೆಗಳು, ಆ ಅಡಚಣೆಗಳನ್ನು ನಿವಾರಿಸುವ ಸೂತ್ರ, ಸುದೀರ್ಘ ಗುರಿಗಳನ್ನು ಅಳತೆ ಮಾಡಬಹುದಾದ ಉಪ ಗುರಿಗಳನ್ನಾಗಿ ವಿಂಗಡಿಸಿ, ಅದನ್ನು ಸಾಧಿಸಲು ತಂಡವನ್ನು, ನಿಯಮಗಳನ್ನು ರೂಪಿಸಿ ನಿಯೋಜಿಸುವ,  ಮತ್ತು ಆ ಯೋಜನೆಗಳು ತಮ್ಮ ಸಂಸ್ಥೆಯು ತನ್ನ ಘನ ಉದ್ದೇಶ/ಗುರಿಗಳನ್ನು ಮುಟ್ಟಲು ಹೇಗೆ ಸಹಾಯಕಾರಿ ಎಂದು ಹಿರಿಯ ಪಾಲುದಾರರಿಗೆ ಮನವರಿಕೆ ಮಾಡಿಕೊಡುವ ಚಾಕಚಕ್ಯತೆ, ಮತ್ತು ವಕ್ತಾರಿಕೆ ಪ್ರಾಥಮಿಕವಾಗಿ ಅವಶ್ಯವೆನಿಸುತ್ತದೆ. ಈ ರೀತಿಯ ಅನುಭವ ಮತ್ತು ಶಿಕ್ಷಣವನ್ನು ನಮ್ಮ ಸ್ಪರ್ಧಾತ್ಮಕ ಸೇವಾ ಪರೀಕ್ಷೆಗಳು ಯಾ ತರಬೇತಿಗಳು ಹೊಂದಿವೆಯೇ? ಗೊತ್ತಿಲ್ಲ! ಆದರೆ ಖಾಸಗೀ ರಂಗದಲ್ಲಿ ಆಯಾಯ ಸಂಸ್ಥೆಗಳು ತೊಡಗಿರುವ ಮೂಲ ವ್ಯವಹಾರಕ್ಕೆ ಸಂಬಂಧಿಸಿದ ವಿಷಯದ ಪದವಿಯೊಂದಿಗೆ ಆಡಳಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಯಾ ಅನುಭವವನ್ನು ಹೊಂದಿದ ಅಗತ್ಯ ಅನುಭವಿಗಳಿರುತ್ತಾರೆ. 

ಈ ರೀತಿಯ ಮೂಲ ಶಿಕ್ಷಣ ಮತ್ತು ಅನುಭವ ಖಾಸಗೀ ರಂಗದಲ್ಲಿ ಅತ್ಯಾವಶ್ಯಕ. ಏಕೆಂದರೆ ಅಲ್ಲಿನ ಆಡಳಿತಗಾರರಿಗೆ ಕೆಲಸ ಗಿಟ್ಟಿಸುವಲ್ಲಿಂದ ಹಿಡಿದು, ಆ ಕೆಲಸದಲ್ಲಿ ಮುಂದುವರಿಯಲು ಈ ಗುಣಗಳು ಅವಶ್ಯವಲ್ಲದೇ, ನಿರಂತರ ಬದಲಾಗುತ್ತಿರುವ ಸಾಮಾಜಿಕ ಮತ್ತು ಭೌಗೋಳಿಕ ನಿಯಮಗಳನುಸಾರವಾಗಿ, ತಂತ್ರಜ್ಞಾನಗಳಿಗೆ ಅನುಗುಣವಾಗಿ ನಿತ್ಯನೂತನವಾಗುತ್ತ ಬದಲಾವಣೆಯನ್ನು ಅಪ್ಪಿಕೊಳ್ಳುತ್ತ ಸಾಗಬೇಕಾದ್ದು ಸೃಷ್ಟಿನಿಯಮದ ಚಲನೆಯಷ್ಟೇ ಸಹಜವೆಂಬ ನಿರೀಕ್ಷೆಯಿರುತ್ತದೆ!

ಇಲ್ಲಿಯವರೆಗೆ ಯಾವುದೇ ಐ.ಎ.ಎಸ್ ಅಧಿಕಾರಿ ಈ ರೀತಿಯ ಕ್ಷಿಪ್ರಗತಿಯನ್ನು ಅಪ್ಪಿಕೊಂಡು ಸಂಚಲನವನ್ನು ಮೂಡಿಸಿದ್ದನ್ನು ನಾನು ನೋಡಿಲ್ಲ.  ಇದು ಟಿ.ಎನ್. ಶೇಷನ್ ಅವರು ಚುನಾವಣಾ ಕಮಿಷನ್ ಮುಖ್ಯಸ್ಥರಾಗಿದ್ದ ಕಾರ್ಯವೈಖರಿಯನ್ನು ಪರಿಗಣಿಸಿಯೂ ಕೂಡ! ಇದಕ್ಕೆ ಸರ್ಕಾರಿ ಉದ್ಯೋಗಖಾತ್ರಿಯೋ ಅಥವಾ ಅಲ್ಲಿನ ಜಡವ್ಯವಸ್ಥೆಯ ಕಾರಣವೋ ನಾನರಿಯೆ. ಆದರೆ ಈ ಅಧಿಕಾರಿಗಳ ಸಾಕಷ್ಟು  ಕಾರ್ಯವೈಖರಿಯ ಬಗ್ಗೆ ಅವರುಗಳ ಪರೀಕ್ಷೆಗಳ ಮಾದರಿಯಲ್ಲೇ ಮತ್ತದೇ ರೋಚಕತೆ, ಪ್ರಚಾರದ ಹಪಾಹಪಿ, ಮತ್ತು ಸಿನೆಮಾ ಆಗಬಹುದಾದ ಕಥಾವಸ್ತುಗಳಿರುವವೇ ಹೊರತು ಅವರುಗಳು ಮಾಡಿದ ಗಮನಾರ್ಹ ಪ್ರಗತಿ ಅಲ್ಲವೆನ್ನಬಹುದು.

ಇನ್ನು ಪ್ರಧಾನಿಯವರ ಈ ನಿರ್ಣಯದ ವಿಷಯಕ್ಕೆ ಬರೋಣ. ಈ ರೀತಿಯ ಆಲೋಚನೆಯನ್ನು ಮುಂದಿಡುವಲ್ಲಿ ಪ್ರಧಾನಿ ಮೋದಿ ಖಂಡಿತ ಮೊದಲಿಗರಲ್ಲ! ದಿವಂಗತ ಪ್ರಧಾನಿ ರಾಜೀವ್ ಗಾಂಧಿಯವರು ಇದೇ ಸದ್ದುದ್ದೇಶದಿಂದ ಸಾಗರೋತ್ತರ ಭಾರತೀಯರನ್ನು ದೇಶದ ಅಭಿವೃದ್ದಿಗೆ ಕೈಜೋಡಿಸಲು ಕರೆ ನೀಡಿದ್ದಲ್ಲದೇ, ಆ ಪ್ರಯತ್ನವಾಗಿ ಸ್ಯಾಮ್ ಪಿತ್ರೋಡಾರನ್ನು ಕರೆ ತಂದು ಸಿ-ಡಾಟ್ ಎಂಬ ಸರ್ಕಾರಿ ಸಂಸ್ಥೆಯ ಮುಖ್ಯಸ್ಥರಾಗಿ ನೇಮಿಸಿ ದೂರಸಂಪರ್ಕ ವಲಯದ ಕ್ಷಿಪ್ರಕ್ರಾಂತಿಗೆ ನಾಂದಿ ಹಾಡಿದ್ದರು. 

ಒಂದು ಕಾರ್ಪೊರೇಟ್ ವಲಯದ ಖಾಸಗಿ ಅನುಭವದಿಂದ ಸರ್ಕಾರಿ ರಂಗಕ್ಕೆ ಆಗಮಿಸಿದ ಸ್ಯಾಮ್ ಪಿತ್ರೋಡಾ ಕ್ಷಿಪ್ರಗತಿಯಲ್ಲಿ ಭಾರತೀಯ ದೂರಸಂಪರ್ಕ ರಂಗದಲ್ಲಿ ಸಂಚಲನ ಮೂಡಿಸಿ ಕ್ರಾಂತಿ ಮಾಡಿದರು! ಆ ಖಾಸಗೀ ವಲಯದ ಅನುಭವಿ ಹಾಕಿದ ಭದ್ರ ಬುನಾದಿಯಿಂದಲೇ ಇಂದು ಭಾರತ ಐ.ಟಿ. ತಂತ್ರಜ್ಞಾನದಲ್ಲಿ ಗಮನಾರ್ಹ ಸಾಧನೆಯನ್ನು ಸಾಧಿರುವುದು ಎನ್ನಬಹುದು. ನಂತರದ ದಿನಗಳಲ್ಲಿ ಸರ್ಕಾರಿ ಆಡಳಿತಯಂತ್ರದ ಬಾಬುಗಳು ಇವರ ವೇಗಕ್ಕೆ ಹೆಜ್ಜೆ ಹಾಕಲಾಗದೆ ಗುಂಪುಗಾರಿಕೆಯಲ್ಲಿ ತೊಡಗಿದ್ದುದು, ಮತ್ತು ಇದರಲ್ಲಿ ನನಗೇನು ಲಾಭ ಎಂಬ ರಾಜಕಾರಣಿಗಳ ದೆಸೆಯಿಂದ ಇತರೆ ಸಾಗರೋತ್ತರ ಕಾರ್ಪೊರೇಟ್ ವಲಯದ ಜನ ಭಾರತದೆಡೆ ಮುಖ ಮಾಡದೆ, ರಾಜೀವ್ ಗಾಂಧಿಯವರ "ಮರಳಿ ಗೂಡಿಗೆ" ಕರೆ ಬೆಚ್ಚಗೆ ಗೂಡು ಸೇರಿತು. 

ಆ ನಂತರ ನಾಗರೀಕ ಸೇವಾ ವಲಯದಲ್ಲಿ ಮತ್ತೆ ಸಂಚಲನ ಮೂಡಿಸಿದ ಗಮನಾರ್ಹ ಬೆಳವಣಿಗೆಯೆಂದರೆ ಭಾರತದ ಬಹುಮುಖ್ಯವಾದ ಆಧಾರ್ ಕಾರ್ಡ್ ಯೋಜನೆ. ಇದನ್ನು ಯಶಸ್ವಿಯಾಗಿ ನಿರ್ವಹಿಸಿದವರು ಕೂಡಾ ಖಾಸಗಿ ವಲಯದ ನಂದನ್ ನೀಲೇಕಣಿಯವರು! ಸರ್ಕಾರಿ ಪರಿಹಾರಗಳು, ಬ್ಯಾಂಕಿಂಗ್ ಖಾತೆ, ತೆರಿಗೆ, ಆಸ್ತಿ ಮತ್ತಿತರೆ ಕೆಲ ಮೂಲಭೂತವೆನ್ನಿಸಬಹುದಾದಂತಹ ವಿಷಯಗಳಿಗೆ ಆಧಾರ್ ಅನ್ನು ಆಧಾರವಾಗಿಸಿದರೆ ಬಹುಪಾಲು ಭ್ರಷ್ಟಾಚಾರವನ್ನು ತಡೆಗಟ್ಟಬಹುದೆಂಬುದು ನೀಲೇಕಣಿಯವರ ಆಶಯವಾಗಿತ್ತು. ಆದರೆ ಅವರ ನಂತರ "ಬಾಬು"ಗಳ ಕೈವಶವಾಗಿರುವ ಆಧಾರ್, ಆಗಾಗ್ಗೆ ಸುದ್ದಿಯಾಗಿ ಗೋಣಿಚೀಲದ ಮೂಟೆಗಳಲ್ಲಿ, ಖಾಲಿ ಅಪಾರ್ಟ್‍ಮೆಂಟುಗಳಲ್ಲಿ ಅನಾಥವಾಗಿ ಗೋಚರಿಸುತ್ತಿದೆ!

ಅದೇ ರೀತಿಯಾಗಿ ತನ್ನ ನಾಡಿಗೆ ಉತ್ತಮ ರಸ್ತೆಗಳನ್ನು ಕೊಡುವ ಉದ್ದೇಶದಿಂದ ಆಗಮಿಸಿದ ಖಾಸಗೀ ಖೇಣಿಯವರ ಮೈಸೂರು-ಬೆಂಗಳೂರು ರಸ್ತೆಯ ನೈಸ್ ಯೋಜನೆ ಕೂಡಾ ಅನುಕರಣೀಯ! ಆದರೆ ಅವರು ಸರ್ಕಾರದಿಂದ ನಿಯೋಜಿತರಾಗಿರಲಿಲ್ಲ. ಸುಸಜ್ಜಿತ ರಸ್ತೆಗಳನ್ನು ನಿರ್ಮಿಸಿ, ಆ ರಸ್ತೆಗಳ ಇಕ್ಕೆಲಗಳಲ್ಲಿ ಬಡಾವಣೆಗಳನ್ನು ನಿರ್ಮಿಸಿದರೆ ತಂತಾನೇ ಸಾಮಾಜಿಕ ಅಭಿವೃದ್ದಿ ಸಂಭವಿಸುತ್ತದೆಂಬ ಸೂತ್ರವನ್ನು ತೋರಿಸಿದರು. ಆ ಸೂತ್ರವನ್ನು ಹಿಡಿದ ರಾಜಕಾರಣಿಗಳು ಇಂದು ನಿವೇಶನಗಳ ಬೆಲೆಯಲ್ಲಿ ಬೆಂಗಳೂರು ಅಮೇರಿಕಾವನ್ನೂ ಮೀರಿಸುವಂತೆ ಮಾಡಿದ್ದಾರೆ. ಆ ರಾಜಕಾರಣಿಗಳಿಗೆ ಬೆಂಬಲಕರ ಆಯೋಜನೆಗಳನ್ನು ಯೋಜಿಸಿದ "ಬಾಬು"ಗಳು ಬೆಂಗಳೂರಿನ ಜನ ಮಳೆ ಬಂದರೆ ನೆನೆಯದೇ ಕೇವಲ ನೆನಪಿಸಿಕೊಂಡು ಒದ್ದೆಯಾಗುವಂತೆ ಮಾಡಿದ್ದಾರೆ.

ಸ್ಯಾಮ್ ಪಿತ್ರೋಡ, ನಂದನ್ ನೀಲೇಕಣಿ, ಮತ್ತು ಅಶೋಕ್ ಖೇಣಿಯವರ ಮೇಲಿನ ಮೂರು ನಿದರ್ಶನಗಳನ್ನು ಗಮನಿಸಿದಾಗ, ಈ ನಿರ್ಣಯ ಖಂಡಿತ ಉತ್ತಮವೆನಿಸುತ್ತದೆ. ಈ ತರದ ವ್ಯಕ್ತಿಗಳು ನೀರಾವರಿ, ಕೃಷಿ ಮಾರುಕಟ್ಟೆ, ಅರಣ್ಯ, ಹಣಕಾಸು, ತೆರಿಗೆ, ಪರಿಸರ ಖಾತೆಗಳಲ್ಲಿ ಯಾವ ರೀತಿಯ ಬದಲಾವಣೆಗಳನ್ನು ತರಬಲ್ಲರೆಂದು ಊಹಿಸಿಕೊಳ್ಳಿ! ಏಕತಾನತೆಯ ಆಡಳಿತಯಂತ್ರಕ್ಕೆ ಚುರುಕು ಮುಟ್ಟಿಸುವ, ವಿಭಿನ್ನ ಆಯಾಮವನ್ನು ತೋರುವ ಈ ರೀತಿಯ ಪ್ರಾಯೋಗಿಕ ಪ್ರಯತ್ನಗಳು ಖಂಡಿತವಾಗಿ ಫಲ ನೀಡುತ್ತವೆ. ಹಾಗಾಗಿಯೇ ಅನೇಕ ದೇಶಗಳು ತಮ್ಮ ಆಡಳಿತಯಂತ್ರದಲ್ಲಿ ಖ್ಯಾತ ಕಂಪೆನಿಗಳ ಸಲಹೆಗಾರರನ್ನು ಕಾಲಕಾಲಕ್ಕೆ ನಿಯೋಜಿಸಿಕೊಳ್ಳುತ್ತಲೇ ಇರುತ್ತವೆ. ವೈಯುಕ್ತಿಕವಾಗಿ ನಾನೂ ಕೂಡಾ ಅಮೇರಿಕಾದ ಫೆಡರಲ್ ಮತ್ತು ಹಲವು ರಾಜ್ಯಗಳ ಇಂತಹ ಹಲವಾರು ಸರ್ಕಾರಿ ಯೋಜನೆಗಳಲ್ಲಿ ಸಲಹೆಗಾರನಾಗಿ ಕೆಲಸ ಮಾಡಿ, ಆ ಯೋಜನೆಗಳು ಫಲಫೃದವಾಗುವುದಕ್ಕೆ ಸಾಕ್ಷಿಯಾಗಿದ್ದೇನೆ. 

ಹಾಗಾಗಿ ನನ್ನ ವೈಯುಕ್ತಿಕ ಅನುಭವದ ಹಿನ್ನೆಲೆಯಲ್ಲಿ ಇದೊಂದು ಉತ್ತಮ ನಿರ್ಣಯ. ಪ್ರಧಾನಿ ಮೋದಿಯವರು, ದಿವಂಗತ ರಾಜೀವ್ ಗಾಂಧಿಯವರಂತೆಯೇ ಈ ಯೋಜನೆಯನ್ನು ಸಾಗರೋತ್ತರ ನಾಗರೀಕರಿಗೂ ವಿಸ್ತರಿಸುವ ಬಗ್ಗೆ ಆಲೋಚಿಸಬೇಕು. ಜಾಗತೀಕರಣ ಇಂದಿನ ಅನಿವಾರ್ಯತೆ, ಯಾವ ಎಡ/ಬಲ ಪಂಥದವರೂ ನಿರಾಕರಿಸಲಾಗದ ಅನಿವಾರ್ಯತೆ! ಅದನ್ನು ಸಮರ್ಥವಾಗಿ ನಿಭಾಯಿಸಲು ಆಡಳಿತದಲ್ಲಿ ಜಾಗತಿಕ ಅನುಭವದ ವ್ಯಕ್ತಿಗಳು ಇಂದಿನ ತುರ್ತಿನ ಸಂಪನ್ಮೂಲಗಳು. ಆ ಕಾರಣವಾಗಿಯೇ ಭಾರತೀಯ ಮೂಲದ ವ್ಯಕ್ತಿಗಳು ಅಮೇರಿಕಾದ ಖಾಸಗೀ ವಲಯದಲ್ಲಿ ಮತ್ತು ಸರ್ಕಾರೀ ವಲಯದಲ್ಲಿ ಹೆಚ್ಚು ಹೆಚ್ಚಾಗಿ ಕಾಣತೊಡಗಿರುವುದೆನಿಸುತ್ತದೆ. 

ಸದೃಢ ದೇಶ ಕಟ್ಟುವ ಘನಕಾರ್ಯದಲ್ಲಿ ಎಲ್ಲಾ ವರ್ಗಗಳೂ ಕೈಜೋಡಿಸಬೇಕೆಂಬ ಸದುದ್ದೇಶವೇ ಸಂವಿಧಾನದ ಆಶಯವಾಗಿದೆ. ಆ ಆಶಯಕ್ಕನುಗುಣವಾಗಿಯೇ ವಿಧಾನಪರಿಷತ್ತು, ಮತ್ತು ರಾಜ್ಯಸಭೆಗಳಿಗೆ ಸಾಮಾಜಿಕ ರಂಗಗಳಲ್ಲಿ ಖ್ಯಾತರಾದವರನ್ನು ನಾಮನಿರ್ದೇಶನ ಮಾಡುವ ಹಿನ್ನೆಲೆ ಕೂಡ! ಹಾಗಾಗಿ ಪ್ರಧಾನಿಯವರ ಈ ನಿರ್ಣಯ ಕ್ರಾಂತಿಕಾರಕವೆನಿಸದೇ, ಸಂವಿಧಾನಬದ್ಧ ಆಶಯದ ವಿಸ್ತೃತ ಭಾಗವೆನಿಸುತ್ತದೆ. ಅದಲ್ಲದೇ ಈ ಹುದ್ದೆಗಳು ಮೂರರಿಂದ ಐದು ವರ್ಷಗಳ ಅವಧಿಯ ಹಂಗಾಮಿ ಹುದ್ದೆಗಳು, ಅದೂ ಆಯ್ದ ಕೆಲ ಇಲಾಖೆ/ವಿಭಾಗಗಳಲ್ಲಿ! ಈ ಪ್ರಾಯೋಗಿಕ ಪ್ರಯತ್ನ ಯಶಸ್ವಿ ಎನಿಸಿದರೆ ಇದನ್ನು ವಿಸ್ತರಿಸುತ್ತಾ ಸಾಗುವುದು ಯಾವುದೇ ರೀತಿಯಲ್ಲಿ ಅಸಂವಿಧಾನಿಕವೆನಿಸುವುದಿಲ್ಲ.  

ಆದರೆ ಈ ವ್ಯವಸ್ಥೆಯು ಆಡಳಿತ ಪಕ್ಷದಲ್ಲಿರುವವರು ತಮ್ಮ ಹಿತಾಸಕ್ತಿಯನ್ನು ಕಾಪಾಡಲು ಪ್ರಭಾವೀ ಖಾಸಗಿ ಆಪ್ತವಲಯವನ್ನು ಆಯಕಟ್ಟಿನ ಜಾಗದಲ್ಲಿ ಕೂರಿಸಿ ಷಡ್ಯಂತ್ರ ಹೂಡಲು ಅನುಕೂಲ ಮಾಡಿಕೊಡಬಹುದಾದ ಅಪಾಯವನ್ನು ಒಡ್ಡಬಹುದಲ್ಲದೇ ಐ.ಎ.ಎಸ್ ಮತ್ತು ಐ.ಎ.ಎಸ್ ಅಲ್ಲದ ಅಧಿಕಾರಿಗಳ ನಡುವಿನ ಸಂಘರ್ಷಕ್ಕೆ ಕಾರಣವಾಗಿ ಕುಟಿಲ ವಾಮಮಾರ್ಗಗಳಿಗೂ ಎಡೆ ಮಾಡಿಕೊಡುತ್ತಾ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡಬಹುದು. ಆ ರೀತಿಯ ಪ್ರತಿಕೂಲ ಪರಿಸ್ಥಿತಿಯನ್ನು ನಿಭಾಯಿಸುವ ನಿಯಂತ್ರಣ ಮತ್ತು ಸಮತೋಲನದ ಪ್ರತಿಬಂಧಕ ಮಾರ್ಗಗಳನ್ನು ರೂಪಿಸಿದರೆ ಇದೊಂದು ಉತ್ತಮ ಯೋಜನೆಯಾಗುವಲ್ಲಿ ಎರಡು ಮಾತಿಲ್ಲ. 

ಆದರೆ, ಈ ರೀತಿಯ ಯಾವುದೇ ಘನ ಸಂವಿಧಾನಿಕ ಉದ್ದೇಶಗಳನ್ನು ನಮ್ಮ ರಾಜಕಾರಣಿಗಳೆಲ್ಲಾ ಪಕ್ಷಾತೀತವಾಗಿ ತಮ್ಮ ಅನುಕೂಲಕ್ಕೆ ಬಳಸಿಕೊಂಡಿರುವ ಪರಂಪರೆಯೇ ನಮ್ಮದಿದೆ! ವಿಧಾನಪರಿಷತ್ತು, ರಾಜ್ಯಸಭೆಗಳ ನಾಮನಿರ್ದೇಶನದ ಸ್ಥಾನಗಳನ್ನು ಓಲೈಕೆಗಾಗಿ ಬಳಸುತ್ತ, ತಮ್ಮ ತಮ್ಮ ಬೆಂಬಲಿಗ ಘನ ವಿದ್ವಾಂಸರನ್ನೋ ಅಥವಾ ಘಟ್ಟಿ ಕು(ಖೂ)ಳಗಳನ್ನೋ ಪ್ರತಿಷ್ಟಾಪಿಸುತ್ತಿರುವುದು ನಮ್ಮ ಕಣ್ಣ ಮುಂದಿದೆ. ಆ ದೂ(ದು)ರಾಲೋಚನೆಯ ದೆಸೆಯಿಂದ ವಿರೋಧಪಕ್ಷಗಳೂ ಇದೊಂದು ಚಿನ್ನದ ಮೊಟ್ಟೆಯಿಡುವ ಕೋಳಿಯೆಂದು ಮೋದಿಯವರ ಈ ನಿರ್ಣಯದ ಬಗ್ಗೆ ಗಟ್ಟಿಯಾಗಿ ಪ್ರತಿಭಟಿಸುತ್ತಿಲ್ಲವೆನಿಸುತ್ತದೆ.

ಆಡಳಿತ ಯಂತ್ರದಲ್ಲಿ ಪಾರದರ್ಶಕತೆಯನ್ನು ತಂದು ಭ್ರಷ್ಟಾಚಾರ ನಿರ್ಮೂಲನೆಯಾಗುವವರೆಗೆ ಎಂತಹ ಘನ ಉದ್ದೇಶದ ಯೋಜನೆಗಳೂ ಈಡೇರದೇ ಹಳ್ಳ ಹಿಡಿದ ಸಾಕಷ್ಟು ನಿದರ್ಶನಗಳಿವೆ. ಅವುಗಳಲ್ಲಿ ಪೂಜಾರಿಯವರ ಸಾಲಮೇಳದಿಂದ ಮಲ್ಯ, ನೀರವ ಮೋದಿಗಳ ಸಾಲಕೂಟದೊಂದಿಗೆ ಇತ್ತೀಚಿನ ನೋಟ್ ಬ್ಯಾನ್‍ವರೆಗೆ ಎಲ್ಲಾ ಘನ ಉದ್ದೇಶದ ಯೋಜನೆಗಳನ್ನೂ ಯಶಸ್ವಿಯಾಗಿ ಹೇಗೆ ಹಳ್ಳ ಹಿಡಿಸಬಹುದೆಂಬುದನ್ನು ಸಹಕಾರೀ ಬ್ಯಾಂಕುಗಳಿಂದ ಹಿಡಿದು ರಾಷ್ಟ್ರೀಕೃತ ಬ್ಯಾಂಕುಗಳ ಆಡಳಿತವರ್ಗ ಕರತಲಾಮಲಕ ಮಾಡಿಕೊಂಡು ಮೋದಿಯವರಿಗೆ ದೊಡ್ಡ ಕಮಲವನ್ನೇ ಮುಡಿಗೇರಿಸಿದ್ದಾರೆ.

ಒಟ್ಟಾರೆ ನಿಷ್ಠ, ಮತ್ತು ಪಾರದರ್ಶಕ ಅನುಷ್ಟಾನ ಮುಖ್ಯ. ಪ್ರತಿಯೊಂದು ವ್ಯವಸ್ಥೆಗೂ ಅದರದೇ ಆದ ನಿಯಂತ್ರಣ ಮತ್ತು ಸಮತೋಲನ ನಿಯಮಗಳನ್ನು ರೂಪಿಸಿದಾಗ ಆ ವ್ಯವಸ್ಥೆ ಯಶಸ್ವಿಯಾಗುತ್ತದೆ. ಆ ಬದ್ಧತೆ ನಮ್ಮಲ್ಲಿದೆಯೇ ಎಂಬುದು ಇಂದಿನ ಬಹು ಮುಖ್ಯ ಪ್ರಶ್ನೆ!

No comments: