ಕೊರೋನಾ ವಿಶ್ಲೇಷಣೆ 2

ಕೊರೋನಾ ವಿಶ್ವಾದ್ಯಂತ ಕಾಲಿಟ್ಟಾಗಿನಿಂದ ವಿವಿಧ ದೇಶಗಳು ಕೈಗೊಂಡ ಕಾರ್ಯಕ್ರಮಗಳನ್ನು ಅವಲೋಕಿಸಿದಾಗ ಭಾರತ ವಿಶೇಷವಾಗಿ ಪ್ರತ್ಯೇಕವಾಗಿಯೇ ನಿಲ್ಲುತ್ತದೆ. ಅದು ಹೇಗೆಂದು ತಿಳಿಯಲು ಕಳೆದ ಒಂದು ತಿಂಗಳಿನಿಂದಾದ ಘಟನಾವಳಿಗಳನ್ನು ವಿಶ್ಲೇಷಿಸುವುದು ಬೇಡ, ಕೇವಲ ಗಮನಿಸೋಣ.

ಅಮೇರಿಕೆಗೆ ಕರೋನಾ ಕಾಲಿಟ್ಟಾಗಿನಿಂದ ಅಲ್ಲಿನ ಅಧ್ಯಕ್ಷರಾದ ಟ್ರಂಪ್ ನಿತ್ಯ ತನ್ನ ದೇಶವಾಸಿಗಳಿಗೆ ಸರ್ಕಾರ ಕೈಗೊಂಡ ಕಾರ್ಯಕ್ರಮಗಳ ಕುರಿತು ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ. ಇದು ವೈರಸ್ ಸೋಂಕಿತರ ಸಂಖ್ಯಾಂಶ, ಸೋಂಕನ್ನು ಧೃಢೀಕರಿಸುವ ಪ್ರಗತಿ, ಉಪಲಬ್ಧ ಸಾಧನಗಳು, ಸೋಂಕನ್ನು ನಿಯಂತ್ರಿಸಲು ಸರ್ಕಾರ ಕೈಗೊಂಡ ಕಾರ್ಯಕ್ರಮಗಳ ಕಾರ್ಯಸೂಚಿ ಮುಂತಾದ ಸೋಂಕಿಗೆ ಸಂಬಂಧಿಸಿದ ನೇರ ವಿಷಯಗಳಲ್ಲದೆ, ಇದರಿಂದುಂಟಾದ ಆರ್ಥಿಕ ಹಿಂಜರಿತವನ್ನು ತಡೆಯಲು ಒಂದು ಟ್ರಿಲಿಯನ್ ಡಾಲರ್ರುಗಳ ಯೋಜನೆ, ಮನೆಯಿಂದ ಕೆಲಸ ಮಾಡುವ ಅನುಕೂಲವಿಲ್ಲದವರಿಗೆ ಆರ್ಥಿಕ ಸಹಾಯ ಇತ್ಯಾದಿ ಇತ್ಯಾದಿ ಯೋಜನೆಗಳ ಘೋಷಣೆ ಮತ್ತವುಗಳ ಕುರಿತಾದ ಪ್ರಗತಿಯನ್ನೂ ಹೊಂದಿವೆ. 

ಟ್ರಂಪ್ ನ ಉತ್ಸಾಹ ಎಷ್ಟರಮಟ್ಟಿಗಿದೆಯೆಂದರೆ ಭಾರತದ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಕೆಲವು ಆಸ್ಪತ್ರೆಗಳಲ್ಲಿ ಕೊರೋನಾ ಗುಣಪಡಿಸಲು ಮಲೇರಿಯಾ ಗುಣಪಡಿಸುವ ಕ್ಲೋರೋಕ್ವಿನ್ ಔಷಧಿಯನ್ನು ಬಳಸಿ ಯಶಸ್ವಿಯಾದ ಸುದ್ದಿಯನ್ನಿಟ್ಟುಕೊಂಡು ಕ್ಲೋರೋಕ್ವಿನ್ ಅನ್ನು ತಾನೇ ಖುದ್ದು ಪುರಸ್ಕರಿಸುವಷ್ಟು ಇದೆ. ಅಂದರೆ ಈ ಸೋಂಕಿನಿಂದಾಗುವ ವ್ಯತ್ಯಯಗಳನ್ನು ತಡೆಯಲು ಕೇವಲ ಯೋಜನೆಗಳನ್ನು ಹಾಕುವುದಷ್ಟೇ ಅಲ್ಲದೆ ಸೋಂಕನ್ನು ಗುಣಪಡಿಸುವ ಔಷಧಿಯೆಡೆಗೂ ತನ್ನ ಅತ್ಯಾಸಕ್ತಿಯನ್ನು ವ್ಯಕ್ತಪಡಿಸುವಷ್ಟು ಒಬ್ಬ ನಾಯಕನಾಗಿ ಕಾರ್ಯೋನ್ಮುಖನಾಗಿರುವುದು ಶ್ಲಾಘನೀಯ. ಇಲ್ಲಿ ಗಮನಿಸಬೇಕಾದ ಅಂಶ ಚುನಾಯಿತ ನಾಯಕನೊಬ್ಬ ತನ್ನ ಚುನಾಯಿತ ಸ್ಥಾನಕ್ಕೆ ಕೊಟ್ಟಿರುವ ಒಂದು ಬದ್ಧತೆ.

ಇನ್ನು ಒಬ್ಬ ಶಂಕಿತ ಸೋಂಕುದಾರನನ್ನು ಪರೀಕ್ಷಿಸಿ ಧೃಢೀಕರಿಸಲು ನಾಲ್ಕರಿಂದ ಆರು ದಿನಗಳ ಸಮಯ ಬೇಕು. ಅತಿ ಶೀಘ್ರವಾಗಿ ಸೋಂಕನ್ನು ಧೃಢೀಕರಿಸುವ ಸಾಧನಗಳನ್ನು ಕಂಡುಹಿಡಿದು ಉತ್ಪಾದಿಸಲು ಸಾಕಷ್ಟು ಖಾಸಗಿ ಸಂಸ್ಥೆಗಳಿಗೆ ಫ಼ೆಬ್ರುವರಿ ೨೯ರಂದು ಅಮೇರಿಕಾದ ಸಿಡಿಸಿ ಅನುಮತಿ ನೀಡಿತು. ಅವುಗಳಲ್ಲಿ ಇಂಟೆಗ್ರೇಟೆಡ್ ಡಿ.ಎನ್.ಎ ಎಂಬ ಸಂಸ್ಥೆಯೇ ಮಾರ್ಚ್ ಒಂಬತ್ತರಂದು ಏಳು ಲಕ್ಷ ಪರೀಕ್ಷಾ ಸಾಧನಗಳನ್ನು ಉತ್ಪಾದಿಸಿತು. ನಂತರ ಮಾರ್ಚ್ ಹತ್ತರಂದು ಅಮೇರಿಕಾದ ಆರೋಗ್ಯ ಮತ್ತು ಮಾನವ ಸೇವೆಯ ಕಾರ್ಯದರ್ಶಿ ಅಲೆಕ್ಸ್ ಅಜಾರ್ ಇಂದಿಗೆ ಇಪ್ಪತ್ತೊಂದು ಲಕ್ಷ ಪರೀಕ್ಷಾ ಸಾಧನಗಳು ಲಭ್ಯವಾಗಿವೆ ಎಂಬ ಸುದ್ದಿಯನ್ನು ಪ್ರಕಟಿಸಿದರು. ಅಂದರೆ ಅಲ್ಲಿನ ಸರ್ಕಾರ ಮತ್ತು ಸಂಸ್ಥೆಗಳ ಬದ್ಧತೆ, ಕಾರ್ಯತತ್ಪರತೆಯನ್ನು ಗಮನಿಸಿ.

ಇದು ಅಮೇರಿಕಾ ಕೊರೋನಾ ಕುರಿತು ಕೈಗೊಂಡ ಒಂದು ಯೋಜನೆಯ ಫ಼ಲಶೃತಿಯ ಝಲಕ್.

ಅಂದ ಹಾಗೆ ಅಮೇರಿಕಾದಲ್ಲಿ ಅಡುಗೂಲಜ್ಜಿ ವೈದ್ಯಪಾಕವಾಗಲೀ, ಈರುಳ್ಳಿ, ಬೆಳ್ಳುಳ್ಳಿ ಭಜ್ಜಿಗಳಾಗಲಿ, ಬಿಸಿಲಿನ ಜಳದ ಕುರಿತಾಗಲಿ ಯಾವುದೇ ಗಾಸಿಪ್ಪುಗಳು ಹರಡಲಿಲ್ಲ.

ಈಗ ಭಾರತದತ್ತ ನೋಡೋಣ...

ಭಾರತ ಸರ್ಕಾರ ಮಾರ್ಚ್ ಹತ್ತರಂದು ತನ್ನಲ್ಲಿಗೆ ಬರುವ ವಿದೇಶಿ ಪ್ರವಾಸಿಗರ ಮೇಲೆ ನಿರ್ಬಂಧ ಹೇರಿತು. ಆದರೆ ಅದರ ಅನುಷ್ಟಾನದಲ್ಲಿ ಸೋತಿತು. ಹಾಗೆ ಬಂದ ಪ್ರಯಾಣಿಕರಲ್ಲಿ ಭಾರತೀಯರೇ ಸಾಕಷ್ಟು ಜನರಿದ್ದರು. ಅವರೆಲ್ಲರನ್ನೂ ನಿಮ್ಮ ನಿಮ್ಮ ಮನೆಗಳಲ್ಲಿ ಕ್ವಾರಂಟೈನ್ ಆಗಿರಿ ಎಂದಿತೇ ಹೊರತು ಅವರ ಮೇಲೆ ನಿಗಾ ಇರಿಸಲಿಲ್ಲ. ಅವರನ್ನು ಸರ್ಕಾರಿ ಸ್ವಾಮಿತ್ವದ ಐಟಿಡಿಸಿ (ಟೂರಿಸಂ ಇಲಾಖೆ) ಮುಂತಾದ ವಾಹನಗಳಲ್ಲಿ ಮನೆ ಸೇರಿಸಿ ಮನೆಯಲ್ಲಿಯೇ ಇರುವಂತೆ ತಾಕೀತು ಮಾಡಬಹುದಿತ್ತು, ಮಾಡಲಿಲ್ಲ.

ಹಾಗೆ ಹೋಗಲು ಬಿಟ್ಟ ಸೋಂಕಿತರು ಎಲ್ಲಿ ಹೋಗಿದ್ದರು, ಯಾರ್ಯಾರ ಸಂಪರ್ಕಕ್ಕೆ ಬಂದಿದ್ದರು ಇತ್ಯಾದಿ ಇತ್ಯಾದಿ ತಿಳಿಯಲು ಒಬ್ಬೊಬ್ಬ ಪ್ರಯಾಣಿಕನ ಹಿಂದೆ ಒಬ್ಬೊಬ್ಬ ಸಾಂಗ್ಲಿಯಾನ, ವ್ಯೂಮಕೇಶ ಮುಖರ್ಜಿಯಂತಹ ಪತ್ತೇದಾರರನ್ನೇ ಬಿಡಬೇಕಾಗುತ್ತದೆ. ಶಂಕಿತ ಸೋಂಕಿತರ ವಿಷಯ ಹೀಗಿದ್ದು ಮತ್ತು ಸೋಂಕನ್ನು ಧೃಢೀಕರಿಸುವ ಸಾಧನಗಳ ಅಂಕಿ ಅಂಶ ಲಭ್ಯವಿಲ್ಲದಿದ್ದಾಗ ಸರ್ಕಾರ ಪ್ರಕಟಿಸಿರುವ ಶಂಕಿತರ/ಸೋಂಕುದಾರರ ಅಂಕಿ ಅಂಶಗಳು ಪ್ರಶ್ನಾರ್ಹವೆನಿಸಿಬಿಡುತ್ತವೆ.

ಅಲ್ಲಿ ಅಮೇರಿಕಾ ತನ್ನ ಬಳಿಯಿರುವ ಸೋಂಕು ಪರೀಕ್ಷಾ ಸಾಧನಗಳ ಅಂಕಿ ಅಂಶವನ್ನು ಪ್ರಕಟಿಸಿದಂತೆ, ಭಾರತ ತನ್ನಲ್ಲಿರುವ ಕೊರೋನಾ ಪರೀಕ್ಷಾ ಸಾಧನಗಳ ಅಂಕಿ ಅಂಶ, ತನ್ನಲ್ಲಿರುವ ಸಾಧನ, ಒಬ್ಬ ಶಂಕಿತ ಸೋಂಕಿತನನ್ನು ಸೋಂಕಿತನೆಂದು ಧೃಡೀಕರಿಸಲು ತೆಗೆದುಕೊಳ್ಳುವ ಸಮಯ ಇತ್ಯಾದಿ ಕುರಿತಾದ ಪ್ರಕಟಿತ ಮಾಹಿತಿಯನ್ನಾಗಲಿ ಸುದ್ದಿಯನ್ನಾಗಲಿ ನಾನೆಲ್ಲೂ ಗಮನಿಸಿಲ್ಲ.

ಇನ್ನು ಟ್ರಂಪನಂತೆ ಯಾವುದೇ ಯೋಜನೆಗಳನ್ನು ಭಾರತದ ಪ್ರಧಾನಿಗಳು ಇದುವರೆಗೂ ಪ್ರಕಟಿಸಿಲ್ಲ. ಒಂದು ದಿನದ "ಜಂತಾ ಕರ್ಫ಼್ಯೂ" ಘೋಷಿಸಿದ್ದನ್ನು ಬಿಟ್ಟರೆ ಈವರೆಗೆ ಯಾವುದೇ ಮಹತ್ತರ ಯೋಜನೆಗಳು ಘೋಷಿತಗೊಂಡಿಲ್ಲ. ಜನತಾ ಕರ್ಫ಼್ಯೂನ ಅಭೂತಪೂರ್ವ ಯಶಸ್ವಿಯ ನಂತರ ಜನತೆ ಮನೆಯಲ್ಲಿದ್ದು ಭೌತಿಕ ಸಾಮಾಜಿಕ ಬಂಧವನ್ನು ಹೇಗೆ ಅನುಷ್ಟಾನಗೊಳಿಸಬೇಕು, ಅದಕ್ಕೆ ಸರ್ಕಾರದ ಪ್ರೋತ್ಸಾಹಕರ ಯೋಜನೆಗಳು ಏನಿವೆ, ಇತ್ಯಾದಿ ಇತ್ಯಾದಿ ಯಾವ ಯೋಜನೆಯನ್ನೂ ಪ್ರಕಟಿಸಿಲ್ಲ. ಕನಿಷ್ಟ ನಿತ್ಯ ಕೂಲಿ ಮಾಡಿಯೇ ಜೀವಿಸಬೇಕಾದ ಜನರುಗಳಿಗೆ ಅದರಲ್ಲೂ ಜನ್-ಧನ್, ಕಿಸಾನ್ ಕಾರ್ಡ್ ಇತ್ಯಾದಿ ಖಾತಾದಾರರಿಗೆ ಇಂತಿಷ್ಟು ಹಣ ಹಾಕುತ್ತೇವೆ ಮನೆಯಲ್ಲಿರಿ ಎಂಬ ಒಂದು ಕನಿಷ್ಟ ಯೋಜನೆಯನ್ನಾದರೂ ಪ್ರಕಟಿಸಬೇಕಿತ್ತಲ್ಲವೇ?!

ಒಂದೆಡೆ ಇದು ಮಹಾಯುದ್ಧ ಎಂದು ಉದ್ಘೋಷಿಸಿದ ಪ್ರಧಾನಿಗಳು, ಈ ಯುದ್ಧವನ್ನು ಎದುರಿಸಲು ಸರ್ಕಾರದ ಯೋಜನೆ, ಉಪಲಬ್ಧ ಸಾಧನ, ಆಕರ ಪರಿಕರಗಳ ಅಂಕಿಸಂಖ್ಯೆ, ಮೊದಲ ಸಾಲಿನಲ್ಲಿರುವ ಡಾಕ್ಟರರುಗಳೆಂಬ ಬ್ರಿಗೇಡಿಯರ್/ಮೇಜರರುಗಳ ಸಂಖ್ಯೆ, ನರ್ಸುಗಳೆಂಬ ಕ್ಯಾಪ್ಟನ್ನುಗಳ ಸಂಖ್ಯೆಗಳ ಮಾಹಿತಿ ಇದೆಲ್ಲವನ್ನೂ ಕೊಡದಿದ್ದರೆ ಹೇಗೆ? ಸಾಂಪ್ರದಾಯಿಕ ಯುದ್ಧವಾದರೆ ಈ ಸಂಖ್ಯಾಂಶವನ್ನು ಮುಚ್ಚಿಡಬೇಕು. ಆದರೆ ಇದು ಸಾಂಪ್ರದಾಯಿಕ ಯುದ್ಧವಲ್ಲ. ಇಲ್ಲಿ ಸಾಕಷ್ಟು ಮಾಹಿತಿಯನ್ನು ಕೊಟ್ಟರಷ್ಟೇ ಗೆಲುವು ಸಾಧ್ಯ! ಈ ಮಾಹಿತಿ ಸ್ಪಷ್ಟವಾಗಿದ್ದಷ್ಟೂ "ಚಪ್ಪಾಳೆ" ತಟ್ಟಲು ಹಿತವೆನ್ನಿಸುತ್ತದೆ.  ನೋಟ್ ಬ್ಯಾನ್, ಟ್ರಿಪಲ್ ತಲಾಖ್, ಸಿ.ಎ.ಎ. ಮುಂತಾದ ದಿಟ್ಟ ಯೋಜನೆಗಳನ್ನು ಅನುಷ್ಟಾನಗೊಳಿಸಿದ ಮೋದಿಯವರಿಗೆ ಇಂದಿನ ತುರ್ತಿನ ಸಂಗತಿ ಏಕೆ ಮೂಕವಾಗಿಸಿದೆ? ಮಹಾ ಮೂರ್ಖನ್ನೆನಿಸಿದ ಟ್ರಂಪನೇ ಇಷ್ಟೆಲ್ಲಾ ಮಾಡುತ್ತಿರುವಾಗ ವಿಶ್ವನಾಯಕನೆನಿಸಿದ ನಮ್ಮ ಹೆಮ್ಮೆಯ ಪ್ರಧಾನಿಗಳು ಶಂಖ ಊದಿ ಜಾಗಟೆ ಬಾರಿಸುವ ಕಾಲ ಜಾರಿದೆ ಎಂದೇಕೆ ಅರಿಯುತ್ತಿಲ್ಲ. ಕನಿಷ್ಟ ರಣಕಹಳೆ ಊದಿದ ನಂತರ "ಆಕ್ರಮಣ್" ಎನ್ನುವ ಉದ್ಘೋಷವನ್ನೇಕೆ ಹೊರಡಿಸುತ್ತಿಲ್ಲ!

ಇದು ಕೇವಲ "ಟಿಪ್ ಆಫ಼್ ದಿ ಐಸ್ ಬರ್ಗ್"! ಇಂದು ದೇಶಾದ್ಯಂತ ಹಬ್ಬಿದ "ಜೈವಿಕ ಯುದ್ಧ"ವೆಂಬ ಗಾಳಿಸುದ್ದಿ ಮುಂದೆಂದಾದರೂ ನಿಜವಾಗಿ ಜೈವಿಕ ಯುದ್ಧಗಳ ಕಾಲ ಬಂದರೆ ಅವುಗಳನ್ನು ಎದುರಿಸಲು ಭಾರತ ಸಿದ್ಧವಿದೆಯೇ ಎಂಬುದಕ್ಕೆ ಒಂದು ಅಳತೆಗೋಲು ಕೂಡ!

ಕೊರೋನಾ ಹಿನ್ನೆಲೆಯಲ್ಲಿ ವಿಶ್ವದ ಆಗುಹೋಗುಗಳನ್ನು ಗಮನಿಸಿದಾಗ ಭಾರತವೇಕೆ ವಿಶಿಷ್ಟವಾಗಿ ಬೇರೆಯದೇ ಆಗಿ ನಿಲ್ಲುತ್ತದೆ ಎಂದು ಹೀಗೆ ಕಾಣಸಿಗುವುದು. ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ, ಹಾಕಿಕೊಂಡಿರುವ ದಟ್ಟ ಕಡುಕಪ್ಪಿನ ಕನ್ನಡಕ ತೆಗೆದು ನೋಡಿಕೊಂಡರೆ ಸಾಕು.

No comments: