ಪ್ರಶಸ್ತಿಯ ಪ್ರಹಸನ

ನಾಲ್ಕು ತಿಂಗಳ ಹಿಂದೆ ಮೈಸೂರಿನಲ್ಲಿ ಒಂದು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಷಣ ಬಿಗಿದು ಕೂತಿದ್ದೆ. ಸಮಾರಂಭ ಮುಗಿದ ಮೇಲೆ ಹಸಿರು ಶಾಲು ಹೊದ್ದ ನಾಲ್ಕು ಜನ ತಮ್ಮನ್ನು ಅಂಬೇಡ್ಕರ್ ಹೆಸರಿನ ಸಂಘಟನೆಯವರೆಂದು ಪರಿಚಯಿಸಿಕೊಂಡು ನನ್ನ ಭಾಷಣವನ್ನು ಮತ್ತು ಅಂಬೇಡ್ಕರರ ಬಗ್ಗೆ ಮಾತನಾಡಿದುದನ್ನು ಪ್ರಶಂಸಿಸಿದರು. ನಂತರ ತಮ್ಮ ಸಂಘಟನೆಯಿಂದ ಅಂಬೇಡ್ಕರ್ ಪ್ರಶಸ್ತಿ ಗಳಿಸಿದ ಎಂಟು ಜನ ಸಾಧಕರನ್ನು ಪ್ರಶಸ್ತಿ ಪಡೆಯಲು ದೆಹಲಿಗೆ ಬೀಳ್ಕೊಡುವ ಸಮಾರಂಭವನ್ನು ಏರ್ಪಡಿಸಿದ್ದು ಅದರಲ್ಲಿ ನಿಮಗೆ "ಗಡಿಯಾಚೆಯ ಕನ್ನಡಿಗ" ಪ್ರಶಸ್ತಿ ಕೊಡುತ್ತೇವೆ, ಬರಬೇಕು ಎಂದರು. ಖುಷಿಯಿಂದ ಉಬ್ಬಿಹೋಗಿ, ಖಂಡಿತ ಬರುತ್ತೇನೆ ಎಂದೆ!

ಎರಡು ದಿನದ ನಂತರ ಫೋನ್ ಮಾಡಿದ ಅವರ ಮುಖಂಡರು ಆ ಎಂಟು ಜನ ಸಾಧಕರಿಗೆ ದೆಹಲಿಗೆ ಹೋಗಿಬರುವ ಫ್ಲೈಟ್ ಟಿಕೆಟ್ಟುಗಳನ್ನು ಕೊಡಿಸಿಬಿಡಿ ಎಂದರು. ಈ ರೀತಿಯ ಪ್ರಶಸ್ತಿಗಳ ಬಗ್ಗೆ ಕೇಳಿದ್ದೆನೇ ಹೊರತು ಅನುಭವವಿರಲಿಲ್ಲ. ಅಂತೂ ಅವರಿಗೆ ಅದಾಗದು ಎಂದು ಏನೇನೋ ಸಮಜಾಯಿಷಿ ಹೇಳಿ ತಪ್ಪಿಸಿಕೊಂಡದ್ದಾಯಿತು. ಅಂದಿನಿಂದ "ಪ್ರಶಸ್ತಿ" ಎಂದರೆ "ಶಾಸ್ತಿ" ಎಂದೇ ತಿಳಿದುಕೊಂಡಿದ್ದೇನೆ.

ಹಾಗಿದ್ದಾಗ ಇಂದು ನನ್ನ ಬೆಳೆಗಿನ ಆರೂವರೆಗೆ ಸಂವಹನ ಪ್ರಕಾಶನದ ಲೋಕಪ್ಪನವರು ಫೋನ್ ಮಾಡಿ ಒಬ್ಬರು ನಿಮ್ಮನ್ನು ಸಂಪರ್ಕಿಸಲು ಪ್ರಯತ್ನ ಮಾಡುತ್ತಿರುವರು. ನಿಮ್ಮ ಫೋನ್ ಸಿಗುತ್ತಿಲ್ಲವಂತೆ. ಹಾಗಾಗಿ ಈ ನಂಬರ್ರಿಗೆ ಫೋನ್ ಮಾಡಿ ಎಂದು ಒಂದು ನಂಬರ್ ಕೊಟ್ಟರು.

ಆ ನಂಬರ್ರಿಗೆ ಫೋನ್ ಮಾಡಿದಾಗ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀಯುತ ವಸಂತ್ ಕುಮಾರರು ಅತ್ಯಂತ ಸಭ್ಯತೆಯಿಂದ ತಮ್ಮನ್ನು ಪರಿಚಯಿಸಿಕೊಂಡು ಹುಯೆನ್ ತ್ಸಾಂಗನ ಮಹಾಪಯಣಕ್ಕೆ ಮಾನವಿಕ ಪ್ರಕಾರದಡಿಯಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡುತ್ತಿರುವ ವಿಷಯ ತಿಳಿಸಿದರು. ಪ್ರಶಸ್ತಿ ಎಂದೊಡನೆ "ಶಾಸ್ತಿ" ಎಂದುಕೊಂಡಿದ್ದ ನಾನು ಒಂದು ಕ್ಷಣ ವಿಚಲಿತಗೊಂಡರೂ "ಮಾನವಿಕ" ಎಂಬುದನ್ನು "ಮಾಳವಿಕ" ಎಂದುಕೊಂಡು ತಕ್ಷಣಕ್ಕೆ ಚಂಚಲ ಖುಷಿಗೊಂಡೆನು. ನಂತರ ಈ ಬಿಜೆಪಿಯವರದು ಏನು ಕ್ರಿಯಾಶೀಲತೆ, ತಮ್ಮ ವಕ್ತಾರೆಯ ಹೆಸರಿನಲ್ಲಿ ಆಕೆಯ ಕಲೆಯನ್ನು ಸಾಹಿತ್ಯಕ್ಕೆ ಜೋಡಿಸಿ ಆಕೆಯ ಹೆಸರು ಸ್ಥಿರವಾಗುವಂತೆ ಮಾಡಿಬಿಟ್ಟಿದ್ದಾರೆ ಎಂದು ಆಶ್ಚರ್ಯಚಕಿತನಾದೆನು!

ನಂತರ ಅದು ಮಾಳವಿಕ ಅಲ್ಲ ಮಾನವಿಕ ಎಂದು ತಿಳಿದು ಕೊಂಚ ನಿರಾಸೆಯಾದರೂ ಸಮಾಧಾನಗೊಂಡೆನು.

ಇದು ಪ್ರಶಸ್ತಿಯ ಪ್ರಹಸನ.

ಅಕಾಡೆಮಿಯ ಪ್ರಶಸ್ತಿಗಳಿಗೆ ಅರ್ಜಿ ಹಾಕಬೇಕೆಂದುಕೊಂಡಿರುವವರಿಗೆ ನಾನು ಸ್ಪಷ್ಟಪಡಿಸಲೇಬೇಕಾದ ವಿಷಯವೇನೆಂದರೆ ಇದು ಅರ್ಜಿ ಹಾಕದೆ ಸಮಿತಿ ಕೃತಿಯನ್ನು ಗುರುತಿಸಿ ನೀಡಿದ ಪ್ರಶಸ್ತಿ. ಹಾಗಾಗಿ ಇದು ಖುಷಿ ನೀಡಿದ ಸಂಗತಿ.

ನಂತರ ನನಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದ ಕಾರಣ ಶುಭಾಶಯ ಸಲ್ಲಿಸುತ್ತಾ ಅನೇಕ ಮಿತ್ರ/ಮಿತ್ರೆಯರು, ಅಕಾಡೆಮಿಯ ಆಯ್ಕೆ ಸಮಿತಿಯ ದಕ್ಷತೆ ಮತ್ತು ಅಧ್ಯಕ್ಷರ ನಡೆಯನ್ನು ಹೊಗಳುತ್ತ ಯಾವುದೇ ಗೊಂದಲ, ಓಲೈಕೆಗಳಿಲ್ಲದ ಪ್ರಶಸ್ತಿ ಪಟ್ಟಿ ಇದು ಎಂದು ಪ್ರಶಂಸಿಸಿದರು.

ಆದರೂ ಅನೇಕರು  ಪ್ರಗತಿಪರ ಟೀ(ಟೇ)ಕಾದಾರಿಗಳಿಗೆ ಯಾವುದೇ ಟೀಕೆಗೆ ಆಸ್ಪದವಿಲ್ಲದ ಕಾರಣ ಅವರಲ್ಲೇ ಪ್ರಶಸ್ತಿ ಗಳಿಸಿರುವ ಅನೇಕರನ್ನು ಈ ದುರಿತ ಸರ್ಕಾರ ಕೊಡಮಾಡಿರುವ ಪ್ರಶಸ್ತಿಗಳನ್ನು ತಿರಸ್ಕರಿಸುವಂತೆ ಓಲೈಕೆ, ಗೊಂದಲವನ್ನು ಸೃಷ್ಟಿಸದೇ ಇರಲಾರರು. ನೋಡುತ್ತಿರಿ, ಇವರಲ್ಲೇ ಕೆಲವರಾದರೂ ಅವಾರ್ಡ್ ವಾಪ್ಸಿ ವರಾತ ಶುರು ಹಚ್ಚಿಕೊಳ್ಳುತ್ತಾರೆ ಎಂದರು. 

ಈ ಕುರಿತು ಆಗಲೇ ಸದ್ದು ಶುರುವಾಗುತ್ತಿದೆ!

No comments: