ಜ್ಯಾಕ್ ವೆಲ್ಚ್ ವಿದಾಯ

ಸಮಾಜಮುಖಿ ಮಾಸಿಕದಲ್ಲಿ ನನ್ನ ಲೇಖನ:

’ಶತಮಾನದ ಆಡಳಿತದ ಗುರು’, ’ಶೇರುದಾರರ ರಕ್ಷಕ’ ಎಂದೆಲ್ಲಾ ಖ್ಯಾತರಾಗಿದ್ದ ಜಿಇ ಸಂಸ್ಥೆಯ ಮಾಜಿ ಮುಖ್ಯಸ್ಥ ಜ್ಯಾಕ್ ವೆಲ್ಚ್ ಇಂದು ಕುಸಿಯುತ್ತಿರುವ ಶೇರು ಮಾರುಕಟ್ಟೆ ಮತ್ತು ದಿಕ್ಕು ತಪ್ಪಿದ ಜಾಗತಿಕ ಆಡಳಿತ ಯಂತ್ರಗಳ ದುರಿತ ಕಾಲದಲ್ಲಿ ಕಾಲವಾಗಿ ಹೋಗಿದ್ದಾರೆ!

ಮಾರ್ಚ್ ೧ ರಂದು ಕಿಡ್ನಿ ವೈಫ಼ಲ್ಯದಿಂದ ನ್ಯೂಯಾರ್ಕಿನ ತಮ್ಮ ಮನೆಯಲ್ಲಿ ಜ್ಯಾಕ್ ತೀರಿಕೊಂಡರು.

೧೯೮೧ರಲ್ಲಿ ಜನರಲ್ ಎಲೆಕ್ಟ್ರಿಕಲ್ (ಜಿಇ) ಕಂಪೆನಿಯ ಮುಖ್ಯಸ್ಥರಾಗಿ ತಮ್ಮ ನಲವತ್ತೈದನೇ ವಯಸ್ಸಿಗೆ ಅಧಿಕಾರ ವಹಿಸಿಕೊಂಡ ಜ್ಯಾಕ್ ಅತ್ಯಂತ ಕಿರಿಯ ವಯಸ್ಸಿನ ಸಿಇಓ ಎಂಬ ಖ್ಯಾತಿಗೆ ಅಂದು ಒಳಗಾಗಿದ್ದರು. ಆ ಕಾಲದಲ್ಲಿ ಇಪ್ಪತ್ತೇಳು ಬಿಲಿಯನ್ ಡಾಲರ್ರುಗಳ ಆದಾಯದ ಜಿಇ ೨೦೦೦ದ ಇಸವಿಯ ಹೊತ್ತಿಗೆ ೧೩೦ ಬಿಲಿಯನ್ ಡಾಲರ್ ವ್ಯವಹರಿಸುವಂತೆ ಕಂಪೆನಿಯನ್ನು ಹಿಗ್ಗಿಸಿದ ಹಿರಿಮೆ ಜ್ಯಾಕ್ ವೆಲ್ಚ್ ಅವರದು. ಹೀಗೆ ಕಂಪೆನಿಯನ್ನು ಹಿಗ್ಗಿಸಲು ಅವರು ಬಳಸಿದ ಮಾರ್ಗ "ಕುಗ್ಗಿಸುವುದು" ಎಂದರೆ ನಿಮಗೆ ಆಶ್ಚರ್ಯವಾಗಬಹುದು.

ಭಾರತದ ಟಾಟಾ ಕಂಪೆನಿಯಂತೆಯೇ ಅಮೇರಿಕಾದ ಜಿಇ ಕಂಪೆನಿ ಮೊಳೆಯಿಂದ ಏರೋಪ್ಲೇನಿನ ತನಕ ಉತ್ಪಾದನೆಯಲ್ಲಿ ತೊಡಗಿರುವ ಬಹುದೊಡ್ಡ ಕಂಪೆನಿ. ಈ ಕಂಪೆನಿಯ ಪ್ಲಾಸ್ಟಿಕ್ ಉತ್ಪಾದನಾ ವಿಭಾಗದ ನೌಕರಿಯಿಂದ ಮೇಲೇರಿ ಬಂದ ಜ್ಯಾಕ್, ಆ ಪ್ಲ್ಯಾಸ್ಟಿಕ್ಕಿನಂತೆಯೇ ಬಳುಕುವ, ಬಗ್ಗುವ, ಹಿಗ್ಗುವ, ಕುಗ್ಗುವ ಫ಼್ಲೆಕ್ಸಿಬಿಲಿಟಿ, ಜಾಗತಿಕ ಕಂಪೆನಿಯಾಗಲಿ ಅಥವಾ ಏಕವ್ಯಕ್ತಿ ಒಡೆತನದ ಅಂಗಡಿ ಮುಂಗಟ್ಟು ವ್ಯವಹಾರಗಳಾಗಲಿ ಉಳಿದು ಬೆಳೆಯಲು ಅನಿವಾರ್ಯ ಎಂಬುದನ್ನು ಕಂಡುಕೊಂಡಿದ್ದರೇನೋ! ಹಾಗಾಗಿಯೇ ಬಗ್ಗದ/ಕುಗ್ಗದ/ಬಳುಕದ ಸಾಕಷ್ಟು ಕೊಬ್ಬಿನ ಜಿಇ ಉದ್ದಿಮೆಗಳನ್ನು "ರಿಪೇರಿ ಯಾ ಮಾರು ಯಾ ಮುಚ್ಚು" ತತ್ವಕ್ಕೆ ಅನ್ವಯಿಸುತ್ತ ’ಲೀನ್ ಅಂಡ್ ಮೀನ್ ಬಟ್ ಸ್ಟಿಲ್ ಎ ಮರೀನ್’ ಎಂದು ಉದ್ಘೋಷಿಸುವ ಅಮೇರಿಕನ್ ಮರೀನ್ ಸೈನಿಕರಂತೆ ಮುನ್ನುಗ್ಗಿ ತಮ್ಮ ಗುರಿಯತ್ತ ಸಾಗುತ್ತಾ ಬಂದರು. ಜಾಗತಿಕ ಮಾರುಕಟ್ಟೆಯನ್ನಷ್ಟೇ ಗಮನದಲ್ಲಿಟ್ಟುಕೊಳ್ಳದೇ ಅದಕ್ಕೆ ತಕ್ಕಂತೆ ಜಾಗತಿಕ ಉತ್ಪಾದನೆ ಕೂಡಾ ಅಮೇರಿಕನ್ ಕಂಪೆನಿಗಳ ಉತ್ಪಾದನೆಯ ಮೇಲೆ ಹೇಗೆ ದುಷ್ಪರಿಣಾಮವನ್ನುಂಟು ಮಾಡುತ್ತವೆ ಎಂಬ ಜ್ಯಾಕ್ ರ ದೂರಾಲೋಚನೆ ಜಿಇ ಬೆಳೆಯಲು ಸಹಕಾರಿಯಾಯಿತು. ಆ ದೂರಾಲೋಚನೆಯ ಫ಼ಲವಾಗಿಯೇ ಆತ ’ರಿಪೇರಿ ಯಾ ಮಾರು, ಯಾ ಮುಚ್ಚು’ ತತ್ವದಡಿ ಸಾಕಷ್ಟು ಜಿಇ ಉದ್ದಿಮೆಗಳನ್ನು ಪುನರುಜ್ಜೀವಗೊಳಿಸಿ ಅಥವಾ ಮಾರಿ ಅಲ್ಪಕಾಲದಲ್ಲೇ ಹೆಚ್ಚಿನ ಲಾಭಾಂಶದೆಡೆಗೆ ತಂದರು. ಈ ತತ್ವವನ್ನು ಕೇವಲ ಉದ್ದಿಮೆಗಳಿಗಷ್ಟೇ ಅನ್ವಯಿಸದೆ ತಮ್ಮ ಸಂಸ್ಠೆಯ ಉದ್ಯೋಗಿಗಳಿಗೂ ಅನ್ವಯಿಸಿದರು. ಅನವಶ್ಯಕ ಅನುತ್ಪಾದಕ ಮಾನವ ಸಂಪನ್ಮೂಲವನ್ನು ಕಂಡುಕೊಂಡು ಮುಲಾಜಿಲ್ಲದೇ ಕೆಲಸದಿಂದ ತೆಗೆದು ಹಾಕಿದರು. ಜ್ಯಾಕ್ ರ ನಿಷ್ಠೆಯೇನಿದ್ದರೂ ಬಂಡವಾಳ ಹಾಕಿದ ಶೇರುದಾರರ ಹಿತ ಕಾಯುವುದಾಗಿತ್ತೇ ಹೊರತು ಅನುತ್ಪಾದಕ ಉದ್ಯೋಗಿಗಳನ್ನು ರಕ್ಷಿಸುವುದಲ್ಲ. ಇದಕ್ಕಾಗಿ ಅವರನ್ನು ಸಾಕಷ್ಟು ಜನ ದ್ವೇಷಿಸುವುದೂ ಉಂಟು. ಷೇರುದಾರರ ಹಿತ ಕಾಯಲು ಕಟಿಬದ್ಧವಾಗಿದ್ದ ಇವರನ್ನು ಬಂಡವಾಳಶಾಹಿತ್ವದ ರಾಯಭಾರಿ ಎಂದು ಸಮಾಜವಾದಿಗಳು ಹೀಗಳೆದರೆ, ಕೆಲವರು ಕಮ್ಯುನಿಸ್ಟ್ ಸರ್ವಾಧಿಕಾರಿಯಂತೆ ವರ್ತಿಸುತ್ತಾನೆ ಎಂದೂ ಮೂದಲಿಸಿದ್ದರು.  ಒಟ್ಟಾರೆ ತನ್ನ ವೃತ್ತಿಗೆ ಬದ್ಧನಾಗಿ ಅನ್ನ ಕೊಟ್ಟವರ ಹಿತ ಕಾಯುವುದು ತನ್ನ ಪರಮೋಚ್ಚ ಗುರಿ ಎಂದುಕೊಂಡಿದ್ದ ಈ ಸಂಪ್ರದಾಯಿ ಕ್ಯಾಥೋಲಿಕ್ ರೈಲ್ವೆ ಕಂಡಕ್ಟರನ ಮಗ!

ಮೆಸಚುಸೆಟ್ಸ್ ರಾಜ್ಯದ ಪೀಬಡಿ ಎಂಬಲ್ಲಿ ರೋಮನ್ ಕ್ಯಾಥೊಲಿಕ್ ಕುಟುಂಬದಲ್ಲಿ ಹುಟ್ಟಿದ ಈತನ ತಂದೆ ಬಾಸ್ಟನ್-ಮೇನ್ ರೈಲಿನ ಕಂಡಕ್ಟರ್ ಆಗಿದ್ದರೆ ಈತನ ತಾಯಿ ಗೃಹಿಣಿ. ಸದಾ ಏನಾದರೂ ಹೊಸತನದ ಸಾಹಸಕ್ಕೆ ಕೈ ಹಾಕುವ ಐರಿಷ್ ಹಿನ್ನೆಲೆಯ ಈತ ಬೇಸ್ಬಾಲ್, ಫ಼ುಟ್ಬಾಲ್ ಆಡುತ್ತ ಹಾಕಿ (ಐಸ್ ಹಾಕಿ)ಯತ್ತ ಗಮನ ಹರಿಸುತ್ತ ತನ್ನ ಶಾಲೆಯ ಹಾಕಿ ಟೀಮಿಗೆ ಕ್ಯಾಪ್ಟನ್ ಕೂಡ ಆಗಿದ್ದ.  ಇತರೆಲ್ಲಾ ಅಮೇರಿಕನ್ನರಂತೆಯೇ ತನ್ನ ಬೇಸಿಗೆಯ ಶಾಲಾ ಬಿಡುವಿನಲ್ಲಿ ಪೇಪರ್ ಹಾಕುವ, ಗಾಲ್ಫ಼್ ಆಟಗಾರರ ಸಹಾಯಕ (ಕ್ಯಾಡಿ)ನಾಗಿ, ಶೂ ಅಂಗಡಿಗಳಲ್ಲಿ ಸೇಲ್ಸ್ಮನ್ ಆಗಿ ಕೆಲಸ ಮಾಡುತ್ತ ಪುಡಿಗಾಸು ಸಂಪಾದಿಸಿಕೊಳ್ಳುವುದಲ್ಲದೆ ಜೀವನಾನುಭವವನ್ನೂ ಗಳಿಸುತ್ತಿದ್ದನು. ಹೈಸ್ಕೂಲ್ ಶಿಕ್ಷಣದ ನಂತರ ಕೆಮಿಕಲ್ ಇಂಜಿನಿಯರಿಂಗಿನಲ್ಲಿ ಡಿಗ್ರಿ ಪಡದ ಜ್ಯಾಕ್ ಮುಂದೆ ಅದೇ ವಿಷಯದಲ್ಲಿ ಸ್ನಾತಕೋತ್ತರ ಮತ್ತು ಪಿಹೆಚ್ಡಿ ಪಡೆದು ಜಿಇ ಸಂಸ್ಥೆಯ ಪ್ಲಾಸ್ಟಿಕ್ ವಿಭಾಗದಲ್ಲಿ ಜ್ಯೂನಿಯರ್ ಕೆಮಿಕಲ್ ಇಂಜಿನಿಯರ್ ಆಗಿ ಕೆಲಸಕ್ಕೆ ಸೇರಿಕೊಂಡು ಮುಂದೆ ಅದೇ ಸಂಸ್ಥೆಯ ಮುಖ್ಯಸ್ಥರಾದದ್ದು ಒಂದು ಯಶೋಗಾಥೆ.

ಬಾಲ್ಯದಲ್ಲಿ ಉಗ್ಗುತ್ತಿದ್ದ ಇವನಿಗೆ ಇವನ ತಾಯಿ ಯಾವ ಕೀಳರಿಮೆಯುಂಟಾಗದಂತೆ ಪ್ರೊತ್ಸಾಹಿಸುತ್ತ "ನಿನ್ನಯ ಬುದ್ದಿವಂತ ಆಲೋಚನೆಗಳಿಗೆ ಜಗತ್ತಿನ ಯಾವುದೇ ನಾಲಿಗೆ ಸಾಟಿಯಾಗಲಾರದು. ಹಾಗಾಗಿಯೇ ನಿನ್ನ ನಾಲಿಗೆ ನಿನ್ನ ಆಲೋಚನೆಗಳಿಗೆ ಸಾಥ್ ನೀಡಲಾಗುತ್ತಿಲ್ಲ. ಹಾಗಾಗಿ ನೀನು ಉಗ್ಗುತ್ತಿರುವೆ. ಮುಂದೆ ನಿನ್ನ ನಾಲಿಗೆಗೆ ಇದು ಅಭ್ಯಾಸವಾಗಿ ನಿನ್ನ ಆಲೋಚನೆಗಳಿಗೆ ಅದು ಹೊಂದಿಕೊಂಡು ಈ ತೊಂದರೆ ಸರಿಹೋಗುತ್ತದೆ.  ಅಲ್ಲಿಯವರೆಗೆ ಅದಕ್ಕೆ ಅಭ್ಯಾಸ ನೀಡುತ್ತಿರು" ಎನ್ನುತ್ತಿದ್ದಳು.  ಆಕೆ ನೀಡಿದ ಪ್ರೋತ್ಸಾಹದಿಂದ ಆತನ ಉಗ್ಗುವಿಕೆ ಮುಂದೆ ನಿಂತೇ ಹೋಯಿತು. ಪ್ರಾಯಶಃ ಹಾಗಾಗಿಯೇ ಆತನ ಅನೇಕ ಉದ್ಘೋಷಗಳು ಆತನ ಆಲೋಚನೆಯಂತೆಯೇ ತೀಕ್ಷ್ಣವೂ, ಚೊಕ್ಕವೂ, ಮತ್ತು ಶುಭ್ರವೂ ಆಗಿ ಬಸವಣ್ಣನವರ ನುಡಿದರೆ ಮುತ್ತಿನ ಹಾರದಂತಿರಬೇಕು, ನುಡಿದರೆ ಸ್ಪಟಿಕದ ಶಲಾಕೆಯಂತಿರಬೇಕು, ನುಡಿದರೆ ಲಿಂಗ ಮೆಚ್ಚಿ ಅಹುದಹುದೆನ್ನಬೇಕೆಂಬ ವಚನದಂತೆ, ಮ್ಯಾನೇಜ್ಮೆಂಟಿನವರು ಬಯಸುವಂತೆ ಕ್ರಿಸ್ಟಲ್ ಕ್ಲಿಯರ್ ಆಗಿರುತ್ತಿದ್ದವು. ಜ್ಯಾಕ್ ವೆಲ್ಚ್ ರ ಆಡಳಿತ ಸೂತ್ರಗಳೆನ್ನುವ ಅವರ ಖ್ಯಾತ ಉದ್ಘೋಷಗಳನ್ನು ಲೇಖನದ ಕೊನೆಯಲ್ಲಿ ಕೊಡಲಾಗಿದೆ, ಗಮನಿಸಿ.

ಇನ್ನು ಇವರ ಬಾಲ್ಯದ ಹಾಕಿ ಮತ್ತು ಫ಼ುಲ್ಬಾಲ್ ಆಟಗಳು ಜ್ಯಾಕ್ ರ ಆಕ್ರಮಣಕಾರಿ ಮತ್ತು ನೇರ ಕಟು ಮಾತುಗಳಾಡುವ ಸ್ವಭಾವಗಳನ್ನು ಪ್ರಭಾವಿಸಿರಬಹುದು. ಸಕ್ಕರೆ ಲೇಪನವಿಲ್ಲದ, ಕೊಬ್ಬಿನ ಗ್ರೀಸ್ ಇಲ್ಲದ, ನೇರ, ವಿಷಯಕ್ಕೆ ಸಂಬಂಧಿಸಿದ ಮಾತು, ಕ್ರಿಯೆ, ಮತ್ತು ಕೃತಿಗಷ್ಟೇ ಜ್ಯಾಕ್ ಬೆಲೆ ಕೊಡುತ್ತಿದ್ದುದು. ಇಂದು ಅಮೇರಿಕಾದಾದ್ಯಂತ ಹಲವಾರು ಮ್ಯಾನೇಜರುರುಗಳು "ಕಟ್ ದಿ ಫ಼್ಯಾಟ್, ಗಿವ್ ಇಟ್ ಸ್ಟ್ರೇಟ್" ಎಂದು ನಾಣ್ಣುಡಿಯೆನಿಸಿರುವ ಜ್ಯಾಕ್ ನ ತತ್ವವನ್ನೇ ಪಾಲಿಸುತ್ತಿರುವರು.

ಈತನ ಯಶಸ್ವಿಗೆ ಕಾರಣೀಭೂತವಾಗಿದ್ದುದು ಸಿಕ್ಸ್ ಸಿಗ್ಮಾ ಎಂಬ ಒಂದು ತಾತ್ವಿಕ ಆಡಳಿತ ವ್ಯವಸ್ಥೆ. ೧೯೮೬ರಲ್ಲಿ ಮೋಟರೋಲಾ ಕಂಪೆನಿಯ ಬಿಲ್ ಸ್ಮಿತ್ ಎಂಬ ಇಂಜಿನಿಯರ್ ಅಭಿವೃದ್ಧಿ ಪಡಿಸಿದ್ದ ಈ ವ್ಯವಸ್ಥೆಯು ಉತ್ಪಾದನಾ ಪ್ರಕ್ರಿಯೆಯನ್ನು ಅಳೆಯುವ, ಅಭಿವೃದ್ದಿಗೊಳಿಸುವ, ಅನುತ್ಪಾದಕ ಕ್ರಿಯೆಗಳನ್ನು ಗುರುತಿಸುವ ಒಂದು ದಕ್ಷ ವ್ಯವಸ್ಥೆ. ಇದನ್ನು ಜಿಇ ಕಂಪೆನಿಯಾದ್ಯಾಂತ ಅಳವಡಿಸಿಕೊಂಡದ್ದು ಜ್ಯಾಕ್ ರ ಯಶಸ್ಸಿಗೆ ಒಂದು ಪ್ರಮುಖ ಕಾರಣ.  ಹೀಗೆ ಒಂದು ವ್ಯವಸ್ಥೆಯಿರಲಿ, ತಂತ್ರಾಂಶವಿರಲಿ, ಯಾ ಹೊರಗುತ್ತಿಗೆಯ ವ್ಯವಹಾರವಿರಲಿ ಯಾವುದು ತನ್ನ ಗುರಿಸಾಧನೆಗೆ ಸಹಕಾರಿಯೋ ಅದನ್ನು ಅಭ್ಯಸಿಸಿ ಅಳವಡಿಸಿಕೊಳ್ಳುವ ತಾಳ್ಮೆ, ಜಾಣ್ಮೆ ಆತನಲ್ಲಿದ್ದಿತು.

ಇಂದು ಸಿಕ್ಸ್ ಸಿಗ್ಮಾ ತತ್ವಗಳನ್ನು ಬಹುತೇಕ ಎಲ್ಲಾ ಕಂಪೆನಿಗಳೂ ಅಳವಡಿಸಿಕೊಂಡಿವೆ. ಸಿಕ್ಸ್ ಸಿಗ್ಮಾದ ಪ್ರಮುಖ ಉದ್ದೇಶವೇ "ಕಟ್ ದಿ ಫ಼್ಯಾಟ್, ಗಿವ್ ಇಟ್ ಸ್ಟ್ರೇಟ್" ಎಂಬುದಾಗಿದೆ. ಇದು ಒಂದು ಮೀಟಿಂಗ್ ಅನ್ನು ನಡೆಸುವ ಪ್ರಕ್ರಿಯೆಯಿಂದ ಹಿಡಿದು ಒಂದು ಪ್ರಾಜೆಕ್ಟ್ ಯಾ ಪ್ರಾಡಕ್ಟ್ ಉತ್ಪಾದನೆಯ ಎಲ್ಲಾ ಹಂತಗಳಿಗೂ ಅನ್ವಯಿಸುತ್ತ ಕೊಬ್ಬಿಲ್ಲದ, ಕಸವಿಲ್ಲದ, ಶುದ್ಧ ಉತ್ಪಾದಕತನವನ್ನು ಹೊಮ್ಮಿಸುವಲ್ಲಿ ಯಾ ಕಂಡುಕೊಳ್ಳುವಲ್ಲಿ ಅತ್ಯಂತ ಪರಿಣಾಮಕಾರಿ. ಇಂದು ಸಿಕ್ಸ್ ಸಿಗ್ಮಾ ಎಂದರೆ ಅದರ ಕತೃ ಬಿಲ್ ಸ್ಮಿತ್ ಗಿಂತಲೂ ಜ್ಯಾಕ್ ವೆಲ್ಚ್ ರನ್ನೇ ಎಲ್ಲರೂ ನೆನೆಯುವುದು. ಅಷ್ಟರ ಮಟ್ಟಿಗೆ ಸಿಕ್ಸ್ ಸಿಗ್ಮಾ, ಜ್ಯಾಕರಿಂದ ಖ್ಯಾತವಾಗಿದೆ.

ಜ್ಯಾಕ್ ರನ್ನು ’ಶತಮಾನದ ಆಡಳಿತಗಾರ’ ಎಂದು ಬಹುಪಾಲು ಜನತೆ ಒಪ್ಪಿಕೊಂಡಿದ್ದರೂ ಅಲ್ಲಲ್ಲಿ ಅಪಸ್ವರಗಳೂ ಇವೆ. ಒಂದು ಲಾಭದಾಯಕ, ಅಭಿವೃದ್ದಿಶೀಲ ಕಂಪೆನಿಯ ಮುಖ್ಯಸ್ಥನಾಗಿ ಅದನ್ನು ಯಥಾವತ್ತಾಗಿ ಅಭಿವೃದ್ಧಿ ಪಥದಲ್ಲಿ ಸಾಗಿಸುವುದು ಅಂತಹ ಕಷ್ಟದ ಕೆಲಸವಾಗಿರದೇ ಓಡುತ್ತಿರುವ ರೈಲಿಗೆ ರೈಟ್ ರೈಟ್ ಎನ್ನುವ ಕ್ಯಾಪ್ಟನ್ ಈತನಾಗಿದ್ದನು ಎಂದು ಮೂಗು ಮುರಿಯುವವರೂ ಇದ್ದಾರೆ. ಈತನ ಷೇರುದಾರರ ನಿಷ್ಟೆ, ಕಟು ಮಾತುಗಳು, ಕಠಿಣ ಕ್ರಮಗಳು ಒಬ್ಬ ದುರಹಂಕಾರಿ ಡಿಕ್ಟೇಟರ್ ಎಂಬಂತೆ ಹಲವರು ಬಿಂಬಿಸಿದ್ದಾರೆ. ಅದೇನೇ ಇದ್ದರೂ ಈತ ಮೆರೆದದ್ದು ಸ್ವಾಮಿನಿಷ್ಟೆ, ವೈಜ್ಞಾನಿಕ ಉತ್ಪಾದನಾ ತಂತ್ರ, ತಂತ್ರಜ್ಞಾನದ ಅಳವಡಿಕೆ, ಅನುತ್ಪಾದಕ ಸಂಪನ್ಮೂಲಗಳನ್ನು ಉತ್ಪಾದಕಗೊಳಿಸುವುದು ಮುಂತಾದ ಕ್ರಮಗಳೆಲ್ಲಾ ಮಾನವ ಸಹಜ ನೈತಿಕತೆಯ ವಿಚಾರಗಳು.  ಇದು ಆತನ ಕ್ಯಾಥೋಲಿಕ್ ಧರ್ಮದ ಹಿನ್ನೆಲೆಯಲ್ಲಿ ಬಂದ ಮೌಲ್ಯಗಳೋ ಅಥವಾ ಮಾನವ ಸಹಜ ನೈತಿಕ ಮೌಲ್ಯಗಳು ಕಾರಣವೋ ಗೊತ್ತಿಲ್ಲ.  ಆದರೆ ಈ ವಿಚಾರವಾಗಿ ನಾವು ನೀವೆಲ್ಲರೂ ನಮ್ಮದೇ ಒಂದು ವ್ಯವಹಾರ ಉದ್ಯೋಗಗಳಲ್ಲಿ ನೈತಿಕವಾಗಿ ಏನು ಕ್ರಮಗಳನ್ನು ಕೈಗೊಳ್ಳುತ್ತೇವೆಯೋ ಅದೇ ಕ್ರಮಗಳನ್ನು ಜ್ಯಾಕ್ ಕೈಗೊಂಡಿದ್ದ. ಈ ತತ್ವಕ್ಕೆ ಅನುತ್ಪಾದಕ ನೌಕರರನ್ನು ಕೆಲಸದಿಂದ ತೆಗೆದದ್ದೂ ಹೊರತಲ್ಲವೆಂದೇ ನನ್ನ ಭಾವನೆ.

ರಾಜಕೀಯವಾಗಿ ಶ್ರೀಮಂತರ ಪರವೆಂದೇ ಗುರುತಿಸುವ ರಿಪಬ್ಲಿಕನ್ ಪಕ್ಷದ ಪರವಿದ್ದ ಜ್ಯಾಕ್, ಜಾಗತಿಕ ತಾಪಮಾನದ ಬಗ್ಗೆ "ಬಂಡವಾಳಶಾಹಿತ್ವದ ಮೇಲೆ ಸಮಾಜವಾದ ಮಾಡಲಾಗದ ಆರೋಪಕಾರಿ ಆಕ್ರಮಣವನ್ನು, ಜಾಗತಿಕ ತಾಪಮಾನವೆಂಬುದು ಸಮೂಹ ಸನ್ನಿಯನ್ನು ಸೃಷ್ಟಿಸಿ ಪರಿಣಾಮಕಾರಿಯಾಗಿ ಮಾಡುತ್ತಿದೆ" ಎಂದು ಹೇಳಿದ್ದುದು ಗಮನಾರ್ಹ! ಹಾಗಿದ್ದರೂ ಈತ ಹಸಿರು ಉತ್ಪಾದನೆಗೆ ಪ್ರಾಮುಖ್ಯತೆಯನ್ನು ಕೊಟ್ಟದ್ದೂ ಇದೆ.

ಎಲ್ಲಾ ಸೆಲೆಬ್ರಿಟಿಗಳಂತೆಯೇ ವಿವಾದಗಳು ಇವರನ್ನೂ ಸುತ್ತಿಕೊಂಡಿವೆ. ಜ್ಯಾಕ್ ನಿವೃತ್ತಿಯ ನಂತರ ಜಿಇ ಅಧೋಗತಿಯತ್ತ ಮುಖ ಮಾಡಲು ಜ್ಯಾಕ್ ತಂದ ಕೆಲವು ನೀತಿಗಳೇ ಕಾರಣ ಎನ್ನಲಾಗುತ್ತದೆ. ಆತನ ಕಾಲದಲ್ಲಿ ಉಚ್ಚ್ರಾಯ ಸ್ಥಿತಿಯಲ್ಲಿದ್ದ ಜಿಇ ಇಂದು ಸಂಕಷ್ಟದಲ್ಲಿದೆ. ನಿವೃತ್ತಿಯ ನಂತರ ಲೇಖನ, ಪುಸ್ತಕ ಬರಹ, ಭಾಷಣ, ಬೋಧನೆಯಲ್ಲಿ ತೊಡಗಿಸಿಕೊಂಡ ಜ್ಯಾಕ್ ತನ್ನ ಪತ್ನಿ ಸೂಜಿ ವೆಲ್ಚ್ ಜೊತೆಗೂಡಿ ಸಾಕಷ್ಟು ಮ್ಯಾನೇಜ್ಮೆಂಟ್ ಕುರಿತಾದ ಪುಸ್ತಕಗಳನ್ನು  ಬರೆದಿದ್ದಾರೆ. ತಮ್ಮದೇ ಹೆಸರಿನ ಜ್ಯಾಕ್ ವೆಲ್ಚ್ ಮ್ಯಾನೇಜ್ಮೆಂಟ್ ಇನ್ಸ್ಟಿಟ್ಯೂಟ್ ಮೂಲಕ ಎಮ್.ಬಿ.ಎ. ತರಗತಿಗಳನ್ನು ಕೂಡ ನಡೆಸಿದ್ದರು.

ಒಟ್ಟಿನಲ್ಲಿ ಜ್ಯಾಕ್ ವೆಲ್ಚ್ ಇತಿಹಾಸ ಕಂಡ ಒಬ್ಬ ಅಪ್ರತಿಮ ಕಾರ್ಪೋರೇಟ್ ಆಡಳಿತಗಾರ ಎಂಬುದರಲ್ಲಿ ಅನುಮಾನವಿಲ್ಲ ಎಂದು ನನ್ನ ವೈಯಕ್ತಿಕ ಅನುಭವದ ಹಿನ್ನೆಲೆಯಲ್ಲಿ ಹೇಳಬಲ್ಲೆ. ಆತನ ಸಾಕಷ್ಟು ತತ್ವಗಳು, ನನ್ನದೇ ದಾವಣಗೆರೆಯ ಯಾ ನಿಮ್ಮ ಊರಿನ ಸಣ್ಣ ಗೂಡಂಗಡಿಯವನು ಕಾಮನ್ ಸೆನ್ಸಿನಿಂದ ಅಳವಡಿಸಿಕೊಳ್ಳುವ ಸೂತ್ರಗಳೇ ಆಗಿದ್ದವು. ಇದು ಕೇವಲ ಅಂಗಡಿ ವ್ಯವಹಾರವಲ್ಲದೆ ನಮ್ಮದೇ ಮನೆ ನಡೆಸುವ ಬಾಬತ್ತಿನಿಂದಲೂ ಸತ್ಯ. ಕಾಮನ್ ಸೆನ್ಸ್ ಎಂಬ ಸಾಮಾನ್ಯ ಜ್ಞಾನವನ್ನು ಸಾಮಾನ್ಯೀಕರಿಸುತ್ತ ಸಾಗಿದಷ್ಟೂ ನೀವು ನಾವೆಲ್ಲರೂ ಜ್ಯಾಕ್ ವೆಲ್ಚ್ ಆಗುತ್ತೇವೆ. ಪ್ರಾಯಶಃ ಆತನನ್ನು ಟೀಕಿಸುವವರ ನಿಲುವು ಕೂಡ ಅವನ ಸಾಧನೆಯಲ್ಲಿ ಗಹನವಾದುದೇನೂ ಇಲ್ಲದೆ ಅದು ಕೇವಲ ಕಾಮನ್ ಸೆನ್ಸ್ ಆಗಿತ್ತು ಎಂಬುದೇ ಆಗಿದೆಯೇನೋ! ಆದರೆ ಸಾಮಾನ್ಯ ಜ್ಞಾನವನ್ನು ಅಸಾಮಾನ್ಯವಾಗಿ ಬಳಸುವ ಛಾತಿ ಕೆಲವೇ ಕೆಲವು ಸಾಮಾನ್ಯರಲ್ಲಿರುವುದರಿಂದಲೇ ಹೈಸ್ಕೂಲಿಗೆ ಶರಣು ಹೊಡೆದ/ಹೊಡೆದಿದ್ದ ರಿಲೈಯನ್ಸ್ ನ ಧೀರೂಬಾಯಿ ಅಂಬಾನಿ, ಒರಾಕಲ್ ನ ಲ್ಯಾರಿ ಎಲ್ಲಿಸನ್, ಮೈಕ್ರೊಸಾಫ಼್ಟಿನ ಬಿಲ್ ಗೇಟ್ಸ್ ಅಲ್ಲದೇ ನಮ್ಮ ನಿಮ್ಮೂರಿನ ಶೈಕ್ಷಣಿಕ ಸಾಧನೆಯಿರದ ಅನೇಕ ಉದ್ದಿಮೆದಾರರು ಯಶಸ್ವಿಯಾಗಿದ್ದಾರೆ ಎಂದೇ ನನ್ನ ಅನಿಸಿಕೆ. ನಮ್ಮ ಮೆದುಳಿನ ಕಲ್ಪನೆಯ ಆಲೋಚನೆಗಳಿಗೆ ವಾಸ್ತವಿಕ ಹಿನ್ನೆಲೆಯಲ್ಲಿ ನಮ್ಮ ನಾಲಿಗೆ ಸ್ಪಂದಿಸುತ್ತಾ ಸಾಗಿದರೆ ಅದು ಸಂಯೋಜಿತ ಸಂಗೀತ (ಸಿಂಕ್ರೊನೈಸ್ಡ್ ಸಿಂಫ಼ೋನಿ) ಇಲ್ಲದಿದ್ದರೆ ಅದು ಉಗ್ಗುವಿಕೆ ಎಂಬುದು ಜ್ಯಾಕ್ ನ ತಾಯಿಯ ಪ್ರೊತ್ಸಾಹದ ಮಾತಿನ ಅಂತರಾಳದ ಅಂತಃಸ್ಸತ್ವವೇನೋ!

ಜ್ಯಾಕ್ ವೆಲ್ಚ್ ಉದ್ಘೋಷಗಳು:
- ಇಂದಿನ ವಾಸ್ತವವನ್ನು ಇಂದಿನಂತೆಯೇ ನೋಡು, ಅದನ್ನು ನೆನ್ನೆಯಂತಾಗಲೀ ಅಥವಾ ಅದು ಹೀಗಿರುತ್ತದೆ ಎಂಬ ನಿನ್ನ ಕಲ್ಪನೆಯಂತಲ್ಲ!
- ’ಉದ್ಯೋಗ-ಜೀವನ ಸಮತೋಲನ’ ಎಂಬುದಿಲ್ಲ. ಇರುವುದು ಉದ್ಯೋಗ ಮತ್ತು ಜೀವನವೆಂಬ ಆಯ್ಕೆ. ಆಯಾಯ ಆಯ್ಕೆಗಳು ತಮ್ಮದೇ ಆದ ಪರಿಣಾಮಗಳೊಂದಿಗೆ ಬರುತ್ತವೆ. ಆಯ್ಕೆ ನಿಮ್ಮದು.
- ನಿನ್ನ ಗುರಿಯನ್ನು ನೀನು ನಿಯಂತ್ರಿಸು, ಇಲ್ಲದಿದ್ದರೆ ಬೇರೆಯವರು ಅದನ್ನು ನಿಯಂತ್ರಿಸುತ್ತಾರೆ!
- ಯಾರೊಬ್ಬ ಒಂದು ದೂರದೃಷ್ಟಿ (ವಿಷನ್)ಯನ್ನು ಸೃಷ್ಟಿಸಿ, ಪೊರೆದು, ಎಲ್ಲರಿಗೂ ಅರ್ಥೈಸಿ ಅದನ್ನು ಸಾಕಾರಗೊಳಿಸಲು ಶ್ರಮ ಪಡುತ್ತಾನೆಯೋ ಅವನೇ ಉತ್ತಮ ನಾಯಕ!
- ಜಗತ್ತು ನಮಗಿಂತ ಹೆಚ್ಚು ಬದಲಾಗುತ್ತಿದ್ದರೆ ನಮ್ಮ ಅಂತ್ಯ ಸನಿಹವಿದೆ ಎಂದರ್ಥ!
- ಬದಲಾಗಲೇ ಬೇಕಾಗುವ ಮೊದಲೇ ಬದಲಾಗು!
- ಸುಧೀರ್ಘ ಕಾಯುವಿಕೆಗಿಂತ ಕ್ಷಿಪ್ರ ಕಾರ್ಯ ಸೂಕ್ತ !
- ಇತರರಲ್ಲಿ ಆತ್ಮವಿಶ್ವಾಸವನ್ನು ತುಂಬುವವನೇ ನಾಯಕ!
- ನಿನ್ನ ಆಯ್ಕೆಗಳಿಗೆ ಮತ್ತವುಗಳ ಪರಿಣಾಮಗಳಿಗೆ ನೀನೇ ಜವಾಬ್ದಾರ!

No comments: