ಅಗಣಿತ ಅಲೆಮಾರಿ ಕುರಿತು ಶಶಿಕಲಾ ಹೆಚ್.

 ರವಿ ಹಂಜ್ ಅವರ "ಅಗಣಿತ ಅಲೆಮಾರಿ" ಕೃತಿಯ ಕುರಿತು ಶಶಿಕಲಾರ ಒಂದು ಚಂದದ ವಿಮರ್ಶೆ..


ಕಾಡುವ  ಅಗಣಿತ ಅಲೆಮಾರಿಯ ಹೆಜ್ಜೆಗಳು



        ಚಲನಶೀಲತೆಯೇ ಜೀವಿಯ ಮೂಲಭೂತ ಲಕ್ಷಣ. ಬಹಳ ತಿರುಗಾಡುವ ಮನುಷ್ಯನಿಗೆ “ಕಾಲಾಗೇನ ನಾಯಿಗೆರಿ ಅದಾವೇನೊ!” ಎನ್ನುತ್ತಾರೆ ನಮ್ಮ ಕಡೆ. ಒಂದು ರೀತಿಯಲ್ಲಿ ಅಲೆಮಾರಿತನ ಎನ್ನುವುದು ಡಿ.ಎನ್.ಲೋಕಪ್ಪ ಅವರು ಹೇಳಿದಂತೆ ಸಹಜ, ಅನಂತ . ಈ ಅಲೆಮಾರಿತನವೇ ಬರ್ಬರ, ಅನಾಗರಿಕ ಮನುಷ್ಯನನ್ನು ಸುಸಂಸ್ಕೃತ ನಾಗರಿಕನನ್ನಾಗಿಸಿದೆ. ಜಗತ್ತಿನ ಎಲ್ಲ ನಾಗರಿಕತೆಗಳು ಕೂಡ ಬಹುಶಃ ಈ ಅಲೆಮಾರಿತನದ ಸುಂದರ ಫಲಶ್ರುತಿಗಳಾಗಿವೆ. .ಬೇಟೆಯಿಂದ ಪ್ರಾರಂಭವಾದ ಆದಿಮಾನವನ ಪಯಣ ಪಶುಪಾಲನೆಯತ್ತ ಸಾಗಿ ಮುಂದೆ ಒಕ್ಕಲುತನ , ಗುಡಿಕೈಗಾರಿಕೆಗೆ ಬಂದು ಸ್ಥಾವರಗೊಂಡಿದೆ. ಹಾಗಿದ್ದರೂ ಹೊಟ್ಟೆಪಾಡಿಗಾಗಿ ಅವನ ಅಲೆಮಾರಿತನ ನಿರಂತರವಾಗಿದೆ. ರವಿ ಹಂಜ್ ಅವರ ‘ ಅಗಣಿತ ಅಲೆಮಾರಿ ’ಯನ್ನು ಓದುವಾಗ ಮನುಷ್ಯನ ಪಯಣದ ಈ ಹಾದಿ ನಮ್ಮನ್ನು ಚಿಂತನೆಗೆ ಹಚ್ಚುತ್ತದೆ. ಪ್ರವಾಸ , ವಿಡಂಬನೆ , ಸೃಜನಶೀಲತೆ , ಇವೆಲ್ಲವುಗಳನ್ನು ಒಳಗೊಂಡ ಅಪರೂಪದ ಕೃತಿಯಿದು. ಇದನ್ನು ಲೋಕಪ್ಪ ಅವರು ಒಳ್ಳೆಯ ಅರ್ಥದಲ್ಲಿ ಶುದ್ದಭ್ರಷ್ಟ ಕೃತಿ ಎಂದು ಗುರುತಿಸಿದ್ದು ಸರಿಯಾಗಿಯೇ ಇದೆ. 

    ಮನುಷ್ಯ ಜೀವನದ  ಬಗ್ಗೆ ಸಹಜ ಕುತೂಹಲ, ಜೀವನ ಪ್ರೀತಿಯ ತುಡಿತ , ಸಮಾಜದ ಬಗ್ಗೆ ಮಿಡಿತ ಹೊಂದಿರುವ ಸಮಾನಮನಸ್ಕ  ಮೂವರು  ಅಲೆಮಾರಿ ಗೆಳೆಯರ ಪ್ರವಾಸಕಥನದಂತಿದೆ ಈ ಪುಸ್ತಕ. ಪ್ರವಾಸಕಥನವಾದರೊ ಒಬ್ಬ ವ್ಯಕ್ತಿಯ ಅನುಭವದಂತೆ ಉತ್ತಮ ಪುರುಷದಲ್ಲಿ  ಇಡಿಯಾಗಿ ನಿರೂಪಣೆಗೊಂಡಿರುತ್ತದೆ. ಆದರೆ ಇದರಲ್ಲೂ ‘ ಅಲೆಮಾರಿ ’ ವೈಶಿಷ್ಟ್ಯ ಮೆರೆಯುತ್ತದೆ. ಇದು ಒಬ್ಬ ಅಲೆಮಾರಿಯ ಕಥನವಾಗಿರದೆ ಮೂವರು ಗೆಳೆಯರ ಅನುಭವಕಥನ. ಪಡ್ಡೆಹುಡಗರ ಭಾಷೆಯಲ್ಲಿ ಹೇಳಬೇಕೆಂದರೆ ಮೂರು ಜನ ಚಡ್ಡಿ ದೋಸ್ತರ ಜಂಟಿ ಪ್ರವಾಸ ಕಥನವಾಗಿದೆ. ಗೆಳೆತನ ಯಾವಾಗಲೂ ಗಂಡಿನಲ್ಲಿ ಹೆಚ್ಚು ಆಪ್ತವಾಗಿರುತ್ತದೆ. ಹೆಣ್ಣಿನ ಕಾರಣಕ್ಕಾಗಿ ಅದು ಇನ್ನೂ ಹೆಚ್ಚು ಆಪ್ತವಾಗಿರಲೂಬಹುದು.ಆದರೆ ಸೋಜಿಗವೆಂದರೆ ಹೆಣ್ಣುಗಳ ನಡುವೆ ಇಂಥ ಗಾಢ ಸಂಬಂಧ ಸಿಗುವುದು ಅಪರೂಪ. ಇನ್ನೂ ವಿಚಿತ್ರ ಸತ್ಯವೆಂದರೆ ಗಂಡಿನ ಕಾರಣಕ್ಕಾಗಿಯೇ, ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಮನುಷ್ಯ ನಿರ್ಮಿತ ಸಾಮಾಜಿಕ ವ್ಯವಸ್ಥೆ ಹೆಣ್ಣನ್ನು ಅನಿವಾರ್ಯವಾಗಿ ಹೆಚ್ಚು ಒಂಟಿಯಾಗಿಡಲು ಪ್ರಯತ್ನಿಸಿದೆ. ಹೀಗಾಗಿ ಸೂಕ್ಷ್ಮವಾಗಿ ವಿಚಾರಿಸಿದರೆ ಹೆಣ್ಣು ಮೂಲಭೂತವಾಗಿ ಒಂಟಿಯಾದರೂ,ಅಬಲೆಯೆನಿಸಿದರೂ ಆಳದಲ್ಲಿ  ಮಾನಸಿಕವಾಗಿ ಬಹಳಷ್ಟು ಶಕ್ತಿಶಾಲಿ .ಅದೇನೇ ಇರಲಿ ಈ ಚಡ್ಡಿ ದೋಸ್ತರ ಸಮಾನ ಅಭಿರುಚಿ ,ತುಡಿತಗಳು ಒಂದು ಒಳ್ಳೆಯ ಚಿಂತನಶೀಲ ಕೃತಿಯನ್ನು ನೀಡಿವೆ. 



         ಲೀ ಚೀನಾದ ಕಮ್ಯುನಿಸ್ಟ್ ಧಾರೆಯ ಕಹಿಯುಂಡು ಬೆಳೆದ, ಪ್ರಜಾಪ್ರಭುತ್ವದತ್ತ ತುಡಿಯುವ ಸತ್ಯದ ಸಂಕೇತವಾದರೆ, ರವಿ ಊಳಿಗಮಾನ ಪ್ರಜಾಪ್ರಭುತ್ವದ ಸ್ಥಿತಪ್ರಜ್ಞ ಶಿವನಂತಿದ್ದರೆ, ಫ್ರ್ಯಾಂಕ್ ಹೆಸರಿಗೆ ತಕ್ಕಂತೆ ಇದ್ದು ಸತ್ಯ ಶಿವಗಳು ಲೀನವಾಗುವ ಸುಂದರ ಬಿಂದುವಿನಂತಿದ್ದಾರೆ. ರವಿಯವರು ಪೀಠಿಕೆಯಲ್ಲಿ ಇದನ್ನು ಹೇಳಿದ್ದು ನನಗೆ ಈ ಅರ್ಥದಲ್ಲಿ ಕಾಣಿಸುತ್ತದೆ. Of Course ಯಾರು ಸತ್ಯ ಯಾರು ಶಿವ ಯಾರು ಸುಂದರ ಎಂದು ಮೂವರು ಗೆಳೆಯರು ಮತ್ತೊಮ್ಮೆ ಅವಲೋಕಿಸಿಕೊಳ್ಳಬಹುದು.

        ಡಾ. ಮಹೇಂದ್ರಮೂರ್ತಿ ಅವರು ಕೃತಿಯ ಬಗ್ಗೆ ಆಡಿದ ಮಾತುಗಳು ಮಹತ್ವಪೂರ್ಣವಾಗಿವೆ. ಮೂರುಜನ ಗೆಳೆಯರು ಅವರವರ ದೇಶಗಳ ಪರಿಸರ , ಮಾನಸಿಕತೆಯ ಮಿನಿಯೇಚರ್ನಂತೆ ಕಾಣಿಸಿಕೊಳ್ಳುತ್ತಾರೆ. ಮುಖ್ಯವಾಗಿ ಚೀನಾ ಭಾರತಗಳ ನೇತ್ಯಾತ್ಮಕ –ಇತ್ಯಾತ್ಮಕ ನೋಟಗಳು ಇಲ್ಲಿ ಆದ್ಯತೆ ಪಡೆದಿವೆ. ಜಗ್ಗತ್ತಿನ ದೊಡ್ಡಣ್ಣ ಎಂದು ಭಾವಿಸಲ್ಪಟ್ಟ (ಅಥವಾ ತಾನೇ ಭಾವಿಸಿಕೊಂಡ) ದೇಶದ ಪ್ರತಿನಿಧಿಯಾಗಿ ಫ್ರ್ಯಾಂಕ್ ಇಲ್ಲಿ ಕಾಣಿಸಿಕೊಳ್ಳುತ್ತಾರೆ. ತೀರಾ ಸರಳ ಭಾಷೆಯಲ್ಲಿ ಹೇಳಬೇಕೆಂದರೆ, ಮೂವರು ಗೆಳೆಯರಿದ್ದಾರೆ. ಕೂಡಿ ಆಡುತ್ತ ಪರಸ್ಪರ ಒಬ್ಬರ ಮನೆಗೆ ಒಬ್ಬರು ಹೋಗಿ ಅಲ್ಲಿಯ ವಾತಾವರಣವನ್ನು ಗ್ರಹಿಸಿ ಅದನ್ನು ತಮ್ಮ ಮನೆಯ ಪರಿಸರಕ್ಕೆ ಹೋಲಿಸಿಕೊಳ್ಳುತ್ತಾರೆ. ಮನುಷ್ಯ ಜೀವನಶೈಲಿ ಸಾಮಾಜಿಕ (ಅ) ವ್ಯವಸ್ಥೆ, ಅದರೊಳಗೆ ಅರಳುವ, ಮುರುಟುವ ಮಾನವೀಯ ಸಂಬಂಧಗಳು , ಧರ್ಮ , ರಾಜಕೀಯ ವ್ಯವಸ್ಥೆ ಮತ್ತೊಂದು ಮಗದೊಂದನ್ನು ಕೆದಕಿ–ಬೆದಕಿ ನೋಡುತ್ತಾರೆ, 

      ವಿಭಿನ್ನ ಸಂಸ್ಕೃತಿಗಳನ್ನು ಹೋಲಿಸಿದಾಗ ಸಾಮಾನ್ಯವಾಗಿ ಅವು ವ್ಯತಿರಿಕ್ತವಾಗಿ ಕಂಡರೂ ಅವುಗಳ ಅನನ್ಯತೆಯಲ್ಲಿ ಒಂದು ರೀತಿಯ ಹೋಲಿಕೆ ಇದ್ದೇ ಇರುತ್ತದೆ. ಚೆಂಡು ಹೂ ಅರಳಿದಂತೆ, ತಾವರೆ ಅರಳದು. ಹಾಗಂದ ಮಾತ್ರಕ್ಕೆ ಒಂದು ಹೆಚ್ಚು ಚಂದ ಇನ್ನೋಂದು ಅಲ್ಲ ಎನ್ನಲಾಗದು. ಹೀಗೆ ಸಂಸ್ಕೃತಿಗೊಂದು ಜಾಯಮಾನ, ಮಣ್ಣಿನವಾಸನೆಯಿದೆ . ಭೂಪ್ರದೇಶ ಬದಲಾದಂತೆ ಮಣ್ಣಿನ ಗುಣ,ಹವಾಗುಣ ಎಲ್ಲ ಬದಲಾಗುತ್ತವೆ. ಆದರೂ ವಿಭಿನ್ನ ಸಂಸ್ಕೃತಿಗಳ ಚಲನೆಯಲ್ಲೊಂದು ಅಪರೂಪದ ಏಕರೂಪತೆಯಿದೆ. ಹೂಗಳ ಅರಳುವಿಕೆಯಂತೆ ಸಂಸ್ಕೃತಿ ವಿಕಸನ ಕೂಡ ಪ್ರಕೃತಿಯೊಂದಿಗೆ ನೇರವಾದ ಸಂಬಂಧ ಹೊಂದಿದೆ. ಹೀಗಾಗಿ ನಮ್ಮದು-ಅನ್ಯರದು ಎಂಬ ಪೂರ್ವಾಗ್ರಹದ ಕಣ್ಣು ಪಟ್ಟಿಯನ್ನು ಕಳಚಿದಾಗ ಮಾತ್ರ ಅವುಗಳ ಸೌಂದರ್ಯ, ಕುರೂಪಗಳೆರಡೂ ಗೋಚರವಾಗುತ್ತವೆ. ಆಳದಲ್ಲಿ ಅವುಗಳಲ್ಲಿ ಸೌಂದರ್ಯವೂ ಇಲ್ಲ, ಕುರೂಪವೂ ಇಲ್ಲ, ಅವುಗಳನ್ನು ನೋಡುವ ನಮ್ಮ ದೃಷ್ಠಿಕೋನದ ಮಿತಿಯದು . ನಾಯಿ , ಬೆಕ್ಕು , ಹುಲಿ ಮೊದಲಾದ ಪ್ರಾಣಿಗಳು ಉಚ್ಚೆಹೊಯ್ದು ತಮ್ಮ ಗಡಿಗಳನ್ನು ಗುರುತಿಸಿಕೊಂಡಂತೆ.ಮನುಷ್ಯನ ಮನಸ್ಸಿನ ದೂರದ ಮೂಲೆಯಲ್ಲಿಯೂ ಇಂತಹ ನಾವೇ ಹಾಕಿಕೊಂಡ ಗಡಿರೇಖೆಗಳು ಉಳಿದುಕೊಂಡುಬಿಟ್ಟಿವೆಯೇನೊ ಅನ್ನಿಸುತ್ತದೆ. 


     

       ಅಖಂಡ ಭೂಮಿಯನ್ನು ಮನುಷ್ಯ ನನ್ನದು–ನಿನ್ನದು ಎಂದು ಕೃತಕ ಗೆರೆಗಳಿಂದ ವಾಟ್ನಿ ಮಾಡಿಕೊಂಡಿದ್ದಾನೆ. ಈ ಕೃತಕ ಗೆರೆಗಳನ್ನು ಕ್ಷಣಿಕವಾಗಿಯಾದರೂ ಅಳಿಸಿ ನಾವು ಈ ಜಗತ್ತನ್ನು ನೋಡುವ ಕಾಲಬಂದಿದೆ. ಅಂತಹದೊಂದು ಪ್ರಯತ್ನವನ್ನು ಈ ಗೆಳೆಯರು ಈ ಕೃತಿಯಲ್ಲಿ ಮಾಡಿದ್ದಾರೆ. ಎಲ್ಲಿಯ ದಾವಣಗೆರೆ, ಎಲ್ಲಿಯ ಚೀನಾದ ಹಳ್ಳಿ ,ಎಲ್ಲಿಯ ಅಮೇರಿಕಾ ? ಮನುಷ್ಯನ ಮಹಾತ್ವಾಕಾಂಕ್ಷೆಯ ಕ್ರಾಂತಿಯುಗದ ನೆಗೆತವನ್ನು ನೋಡಿ ಆಶ್ಚರ್ಯವಾಗುತ್ತದೆ.

    ‘ ಹ್ಯೂಯೆನ್ ತ್ಸಾಂಗ್ ‘ ಎನ್ನುವ ಹೆಸರು ನಾನೂ ಪ್ರಾಥಮಿಕ ಶಾಲೆಯಲ್ಲಿ ಕಷ್ಟಪಟ್ಟು ಉಚ್ಚರಿಸಲು ಕಲಿತಿದ್ದೇನೆ. (ತ್ಯಾಂಗ್ಸ್ ಎಂದೇ ಹೆಚ್ಚಾಗಿ ಹೇಳುತ್ತಿದ್ದುದು) ಅದು ಇನ್ನೂ ತನಕ ಸರಿಯಾಗಿ ಉಚ್ಚಾರವಾಗುತ್ತಿದೆ ಎಂದು ಹೇಳಬರುವುದಿಲ್ಲ, ಈ  ಮನುಷ್ಯನ ಚಿತ್ರ ಎಷ್ಟರಮಟ್ಟಿಗೆ ನೈಜವೊ ಕಾಲ್ಪನಿಕವೊ ನನಗೆ ತಿಳಿಯದು , ಒಟ್ಟಿನಲ್ಲಿ ಸಮಾಜದ ಪುಸ್ತಕದಲ್ಲಿ ಬರುತ್ತಿದ್ದ ಈ ಚಿತ್ರ ನನ್ನನ್ನೂ ಕಾಡಿತ್ತು. ಈ ಪುರಾತನ ಅಲೆಮಾರಿಯ ಜಾಡಿನಲ್ಲಿ ಈ ಮೂವರು ಆಧುನಿಕ ಅಲೆಮಾರಿಗಳು ಹೆಜ್ಜೆಯಿಡುತ್ತ ನಮ್ಮನ್ನು ಅವರು ಅಡ್ಡಾಡಿದಲ್ಲೆಲ್ಲ ಕರೆದುಕೊಂಡು ಹೋಗಿದ್ದಾರೆ , ಭವ್ಯ-ರೋಮಾಂಚನ ತುಂಬಿದ ಹೊಸಲೋಕವೊಂದಕ್ಕೆ ಪಾದಾರ್ಪಣೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ .ಧರ್ಮ, ದೇಶಗಳ ಸೋಗಿನ ಮರೆಯಲ್ಲಿರುವ ಕಮ್ಯುನಿಸಂ, ಪ್ರಜಾಪ್ರಭುತ್ವ ಬಂಡವಾಳಶಾಹಿ ವ್ಯವಸ್ಥೆಗಳ ಒಳಿತು–ಕೆಡಕುಗಳನ್ನು ಇಲ್ಲಿ ನಿಷ್ಪಕ್ಷಪಾತವಾಗಿ ಪರಾಮರ್ಶಿಸಲಾಗಿದೆ.

    ಲೀಯ ಬಾಲ್ಯದ ಅನುಭವದಲ್ಲಿ ಕೆಂಪು ಕ್ರಾಂತಿಯ ಚೀನಾದ ಚಿತ್ರಣವಿದೆ. ಚೇರ್ಮನ್ ಅವರ ಕೆಂಪು ಪುಸ್ತಕ, ಕೆಂಪು ಯೋಧರು ಹೀಗೆ  ಎಲ್ಲವೂ ಇಲ್ಲಿ ಕೆಂಪುಮಯವಾಗಿದೆ. ಇದನ್ನು ‘ ಸಂಸ್ಕೃತಿ ಕ್ರಾಂತಿ’ ಎಂದು ಅದರ ಯಾವ ಮುಖವನ್ನು ನೋಡಿ ಕರೆಯುತ್ತಾರೆಂಬುದೇ ನನಗೆ ಅರ್ಥವಾಗಲಿಲ್ಲ.ಲೀ ತಮ್ಮ ಬಾಲ್ಯದ ನೆನಪುಗಳನ್ನು ಅತ್ಯಂತ ಖಚಿತವಾಗಿ ನೆನಪಿಟ್ಟು ದಾಖಲಿಸಿದ್ದು, ಸಾಮಾನ್ಯನೊಬ್ಬನ ದೃಷ್ಟಿಯಲ್ಲಿ ಚೀನಾದ ಚಿತ್ರಣವೆನಿಸಿದರೂ ಅದು ಐತಿಹಾಸಿಕವಾಗಿ ತುಂಬಾ ಪ್ರಮುಖವಾಗಿದೆ. ಕೋತಿತಾಜನ ಪುಸ್ತಕವನ್ನು ಲೀಗೆ ಕೊಟ್ಟ ಅವರ ಅಜ್ಜಿಯ ಚಿತ್ರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತದೆ . ಕೊನೆಗಾಲದಲ್ಲಿ ಅವರು ಹುರುಳಿ ಬೀಜವನ್ನೆಣಿಸುತ್ತ ಮೊಮ್ಮಕ್ಕಳ ಏಳಿಗೆಗಾಗಿ ತಪಿಸುವುದು ಹೃದಯವನ್ನು ತೇವಗೊಳಿಸುತ್ತದೆ. ನನಗೇಕೊ ಈ ಅಜ್ಜಿಯನ್ನು ನೋಡಿದರೆ ನಮ್ಮ ದೇಶದ ಫಣಿಯಮ್ಮನಂತಹ ಅಜ್ಜಿಯರು ನೆನಪಿಗೆ ಬರುತ್ತಾರೆ. ಒಂದು ಕಾಲದಲ್ಲಿ ಭಾರತದಲ್ಲೂ ಹೆಣ್ಣುಗಳ ಪರಿಸ್ಥಿತಿ ಹೀಗೇ ಇತ್ತಲ್ಲವೇ? ಅವರನ್ನು ಹತ್ತಿಕ್ಕಿ, ಹತ್ತಿಕ್ಕಿ, ಪುರುಷಪ್ರಧಾನ ಸಮಾಜಕ್ಕೆ ಬೇಕಾದಂತಹ, ಒಗ್ಗುವಂತಹ ಹೆಣ್ಣುಗಳನ್ನು ಬಲವಂತದಿಂದ ರೂಪಿಸಲಾಗುತ್ತಿತ್ತು. ಚಿಕ್ಕವಳಿದ್ದಾಗಲೇ ನಡುವಿಗೆ ಡಾಬು , ಕಾಲಿಗೆ ಗೆಜ್ಜೆ , ಪೈಜಣ , ಕಾಲುಂಗರ ಮುಂತಾದವುಗಳಿಂದ ಅವಳನ್ನು ಹೆಚ್ಚು ಹೆಚ್ಚು ಸಂಪ್ರದಾಯದ ಮೌಢ್ಯದಲ್ಲಿ ಹೂಳಲಾಗುತ್ತಿತ್ತು. ಹೆಣ್ಣಿನ ಶೋಷಣೆಗೆ ಕಾಲದೇಶಗಳ ಬೇಧವಿಲ್ಲವೇನೋ! ಚೀನಾದಲ್ಲಿ 

ಹೆಣ್ಣುಮಗುವಿನ ಪಾದಗಳನ್ನು ತಾವರೆಯ ಮೊಗ್ಗಿನ ಆಕಾರದಲ್ಲಿಡಲು ಶೂ ಹಾಕುವುದು , ವಯಸ್ಸಿನಲ್ಲಿ ತನಗಿಂತಲೂ ದೊಡ್ಡವನಾದ ಗಂಡನನ್ನು ಪೋಷಿಸಿ ಲೈಂಗಿಕ ಶಿಕ್ಷಣವನ್ನು ಅವಳೇ ನೀಡುವಂತೆ ವಯಸ್ಸಿನ ಅಂತರವಿಟ್ಟು ಮದುವೆ ಮಾಡುವುದು, ಕೊನೆಗೆ ಮಧ್ಯವಯಸ್ಸಿನಲ್ಲಿ ಅವನು ಇತರೇ ಹೆಣ್ಣುಗಳಿಗೆ ಆಕರ್ಷಿತನಾಗುವಂತಹ ಪರಿಸ್ಥಿತಿ ನಿರ್ಮಿಸುವುದು, ಆಮೇಲೆ ಗಂಡ ಬಿಟ್ಟ ಹೆಣ್ಣುಗಳಾಗಿ ಕೊನೆಗಾಲದಲ್ಲಿ ಲೀಯ ಅಜ್ಜಿಯಂತೆ ಹುರಳಿಬೀಜಗಳನ್ನು ಎಣಿಸುತ್ತ ಕೂರುವುದು ಇವೆಲ್ಲ ನಮ್ಮ ಫಣಿಯಮ್ಮರಂತಹ ಹೆಣ್ಣುಗಳ ಚೀನೀ ವರ್ಷನ್ ಕಥೆಗಳಂತೆ ಭಾಸವಾಗುತ್ತದೆ. ಹೀಗೆ ಎಷ್ಟೇ ಕೂಡಿ ಕಳೆದು ನೋಡಿದರೂ ಎಲ್ಲ ಧರ್ಮಗಳು ತಮ್ಮ ನೈಜ ಅಂತಃಸತ್ವ ಕಳೆದುಕೊಂಡು ಗೊಡ್ಡು ಆಚರಣೆಗಳಾದಾಗ ಅದಕ್ಕೆ ಮೊದಲ ಬಲಿಪಶು ಆಗುವುದು  ಹೆಣ್ಣೇ . ಯಾವ ಖಂಡವಾದರೇನು ಯಾವ ದೇಶವಾದರೇನು ಇದೊಂದು ವಿಷಯದಲ್ಲಿ 100%ರಷ್ಟು ಸಾಮ್ಯತೆ ಇದೆ.

        ಕನ್ ಫ್ಯೂಶಿಯನ್, ಲಾವೊತ್ಸೆಯರ ಬೆಳಕಿನಲ್ಲಿ ನಡೆದ ಚೀನಾ ಲೀ ಅವರು ಹೇಳಿದಂತೆ ಕ್ರಿಶ 1 ನೆಯ ಶತಮಾನದಿಂದ ಬೌದ್ದಧರ್ಮದತ್ತ ವಾಲಿದೆ. ತಾವೊ ಸಹಜ ಜೀವನ ಧರ್ಮ ಪ್ರಬುದ್ಧತೆಯು ಸಾಮಾನ್ಯನಿಗೆ ನಿಲುಕದಾದಾಗ ಭಾರತದ ಬುದ್ಧ ಚೀನಾದತ್ತ ಮುಖಮಾಡಿದ್ದಾನೆ. ಇದೇ ಕಾಲದಲ್ಲಿ ಭಾರತದಲ್ಲಿ ತನ್ನ ಸುವರ್ಣ ಯುಗವನ್ನು ಕಂಡ ಬೌದ್ಧಧರ್ಮ ಪ್ರಚ್ಛನ್ನ ಬೌದ್ಧರೆನಿಸಿಕೊಂಡವರಿಂದ ದಾಳಿಗೊಳಗಾಗಿ ಜಗತ್ತಿನ ಬೇರೆ ಬೇರೆ ಕಡೆ ಪಸರಿಸಿ ಆಸರೆ ಪಡೆದುಕೊಂಡಿದೆ. ಇಂದೊಂದು ರೀತಿ ಇತಿಹಾಸದ ಮರುಕಳಿಕೆ. ಕರ್ನಾಟಕದಲ್ಲಿ 12ನೆಯ ಶತಮಾನದಲ್ಲೂ ಹೀಗೇ ಆಗಿರಲಿಲ್ಲವೆ?. ಮೌಢ್ಯವನ್ನು ವಿರೋಧಿಸಿ, ಸಮಾನತೆ ಸಾರಿದ ವಚನಕಾರರನ್ನು ಪಟ್ಟಭದ್ರ ಸಂಪ್ರದಾಯಸ್ಥ ಅಧಿಕಾರ ಪ್ರಭುತ್ವ  ಬೆನ್ನಟ್ಟಿ ಕೊಲೆಗೈಯಲಿಲ್ಲವೆ! ಇತಿಹಾಸದ ಚಕ್ರದಲ್ಲಿ ಎಡ-ಬಲದ ಶಕ್ತಿಗಳು ಚಕ್ರಾಕಾರವಾಗಿ ತಿರುಗುತ್ತಿರುತ್ತವೆ.  ಈ ಭ್ರಮಣದಲ್ಲಿ ಒಮ್ಮೆ ಎಡ ಮೇಲಾದರೆ ಇನ್ನೊಮ್ಮೆ ಬಲ ಮೇಲಾಗುತ್ತದೆ. ಚೀನಾದ Yin-Yang ಪರಿಕಲ್ಪನೆ ಕೂಡ ಇದನ್ನೇ ಹೇಳುವುದಿಲ್ಲವೆ?.

    ಒಂದುಕಾಲದಲ್ಲಿ ಭಾರತದಿಂದ ಹೊರದೂಡಲ್ಪಟ್ಟ ಬೌಧ್ಧಧರ್ಮಿಯರು ಚೀನಾಕ್ಕೆ ಹೋಗಲಿಲ್ಲವೆ? ಹ್ಯೂಯೆನ್ ತ್ಯಾಂಗ್ ನಂತಹ ಅಲೆಮಾರಿ ಪ್ರವಾಸಿಗರು ಬುದ್ದನನ್ನು (ವಿಚಾರಧಾರೆಯನ್ನು) ಚೀನಾಕ್ಕೆ ಕೊಂಡೊಯ್ಯಲಿಲ್ಲವೇ? ಚೀನಾದಿಂದ ನೆಲೆಗೆಟ್ಟು ಟಿಬೆಟಿನ ದಲೈಲಾಮಾ ಭಾರತದಲ್ಲಿ ಆಶ್ರಯ ಪಡೆಯಲಿಲ್ಲವೇ?. ಮುಂದೊಂದು ದಿನ ಇದು ಮರುಕಳಿಸಬಹುದು . ಹಿಂಸೆಯ ತಾರಕ ಸ್ಥಿತಿ ಮುಟ್ಟಿರುವ ಚೀನ ‘ಕೋವಿಡ್-19’ ರ ಅಡುಗೆ ಮನೆ ಎಂಬ ಅಪಖ್ಯಾತಿ ಗಳಿಸಿದ್ದು ನಿಜವೊ-ಸುಳ್ಳೊ ಎಂಬುದು ಎರಡನೆಯ ಸಂಗತಿ. ಆದರೆ ಮತ್ತೊಮ್ಮೆ ಕನ್ ಫ್ಯೂಶಿಯಸ್, ಲಾವೊತ್ಸೆ, ಬುದ್ದರ ವಿಚಾರಧಾರೆಗಳು ಚೀನದಲ್ಲಿ ಪ್ರವರ್ಧಮಾನಕ್ಕೆ ಬಂದು ಅಲ್ಲಿ ಮತ್ತೊಮ್ಮೆ ಮಾವೊಪೂರ್ವ ಸಂಸ್ಕೃತಿ ಮುನ್ನಲೆಗೆ ಬರಬಹುದು ,



 ಬೌದ್ದ ಭಿಕ್ಷು-ಭಿಕ್ಷುಣಿಯರನ್ನು ಒತ್ತಾಯ ಪೂರ್ವಕವಾಗಿ ಸಂಸಾರ ಬಂಧನಕ್ಕೆ ತೊಡಗಿಸಬಹುದು. ಲೀ ಅವರ ಅಜ್ಜಿಯಂತೆ ಚೀನಾದ ಮುಂದಿನ ಅಜ್ಜಿಯರಿಗೆ ಹುರಳಿಕಾಳುಗಳನ್ನು ಎಣಿಸುತ್ತ ರಾತ್ರಿ ಕಳೆಯುವುದರ ಬದಲಾಗಿ ಬುದ್ದನನ್ನು ಸಾಲಂಕೃತವಾಗಿ ಆರಾಧಿಸುವ, ಧ್ಯಾನಿಸುವ ಭಾಗ್ಯ ಯಾಕೆ 

ಬರಬಾರದು ?, ಬೆಳ್ಳಿಕೂದಲಿನ ಅಜ್ಜಿ ತನ್ನ ಮೊಮ್ಮಗನಿಗೆ ರಾತ್ರಿ ತಥಾಗತನ ಕಥೆಗಳನ್ನು ಹೇಳುತ್ತ ಮಲಗಿಸುವ ಕಾಲ ಕೂಡ ಬರಬಹುದು .

     ಲೀ ಅವರು ಭಾರತದ ಪ್ರಜಾಪ್ರಭುತ್ವವನ್ನು ವಿಡಂಬನಾ ದೃಷ್ಟಿಯಿಂದ ನೋಡುವಲ್ಲಿ  ಅವರ ಪೂರ್ವಾಗ್ರಹವಿದೆ. ಅದೇ ಫ್ರ್ಯಾಂಕ್ ಅವರ ದೃಷ್ಟಿಕೋನ ದೊಡ್ಡಣ್ಣನಂತೆ ಪ್ರಬುದ್ಧವಾಗಿದೆ. ನಾವು ,  ನಮ್ಮ ದೇಶದ ಭೂತ, ವರ್ತಮಾನ ಭವಿಷ್ಯಗಳೆಲ್ಲ ನಮ್ಮ ಹಿಡಿತಕ್ಕೆ ಸಿಗದ ಯಾವುದೋ ಒಂದು ಸೂತ್ರಧಾರ ಶಕ್ತಿ (ಪ್ರಕೃತಿ ಎನ್ನಬಹುದೇ?) ಯಿಂದ ನಿಯಂತ್ರಿಸಲ್ಪಡುತ್ತವೆ , ಅದನ್ನು  ನಾವು ಕಂಡುಕೊಳ್ಳಬೇಕಿದೆ. ಅಲ್ಲಿಯವರೆಗೂ ಬುದ್ಧ ಭಾರತ-ಚೀನಾ ಗಡಿಯಲ್ಲಿ ಮಗ್ಗಲು ಬದಲಿಸುತ್ತ ಮಲಗಿ ಮಂದಹಾಸ ಬೀರುತ್ತಿರಬೇಕಾಗುವುದೇನೊ!. ಚೀನಾದಲ್ಲಿ ಪಗೋಡದ ಪಿತಾಮಹ ಜುಯೆನ್ಜಾಂಗ್ ಬೇರೆ ರೂಪದಲ್ಲಿ ಮತ್ತೆ ಬರಬಹುದೇನೊ ಯಾರು ಬಲ್ಲರು? ರವಿ ಅವರು ಕರೆದಿರುವ ‘ ಅ ಡಿವೈನ್ ಸೋಲ್ ‘ ಫುನೆಂಗ್ ಹೇಳುವಂತೆ ಮನುಕುಲದ ಈ ಹಿಂಸೆ , ಬರ್ಬರತೆ ಅಜ್ಞಾನ ಎಲ್ಲವೂ ವಿಸ್ಮೃತಿ ಭ್ರಾಂತಿಗಳಲ್ಲ.  ಭಗವಾನ ಬುದ್ಧನು ಹೇಳಿರುವಂತೆ ‘ಕರ್ಮಫಲ’ ಗಳೇ ಯಾಕಾಗಿರಬಾರದು? ಕಾಲ-ದೇಶ-ಧರ್ಮಗಳೆಂಬ ಹುಸಿ ಭ್ರಮೆಗಳ ಪೊರೆ ಮನುಷ್ಯನ ಕಣ್ಣಿನಿಂದ ಯಾವಾಗ ಕಳಚಿ ಬೀಳುತ್ತದೆಯೋ ಅವಾಗಲೇ ಎಲ್ಲೆಡೆ ಶಾಂತಿ ಸ್ಥಾಪಿತವಾದೀತು. ಈ ಆವಾಂತರಗಳನ್ನೆಲ್ಲ ಮತ್ತೆ ತೊಡೆದು ಹಾಕಲು ಬುದ್ದನ ಜನ್ಮಸ್ಥಳದಲ್ಲಿ ಈಗಿರುವ ರೋಗವನ್ನು ಗುಣಪಡಿಸಲು ಮತ್ತೆ ಬುದ್ಧ ಹುಟ್ಟಿ ಬರಲು ಬುದ್ಧನಿಗೇನು ಬ್ಯಾರೆ ಕ್ಯಾಮೆ ಇಲ್ಲವೆ? ಮತ್ತೆ ಮತ್ತೆ ಈ ಅರ್ಥಹೀನ ಚಕ್ರದಲ್ಲಿ ಬುದ್ಧ ಸಿಲುಕಿಯಾನೆ?ಅದರ ಬದಲಾಗಿ ಬುದ್ಧನ ಬೆಳಕಿನಲ್ಲಿ ಜಗತ್ತು ನಡೆಯಬೇಕಾದುದೇ ಸರಿಯಾದ ಕ್ರಮ.

    ಫುನೆಂಗ್  ಹೇಳುವಂತೆ ಬುದ್ಧನ ಸಂದೇಶಗಳನ್ನು ಅವನ ಪ್ರತಿಮೆ ಪಗೋಡಗಳಿಲ್ಲದೆಯೂ ಸಾರಬಹುದು. ಈಗಿರುವ ಪಗೋಡಾಕ್ಕಿಂತ  ಉನ್ನತವಾದ ಪಗೋಡವನ್ನು ಕಟ್ಟಲಿ ಎಂಬುದು ಬುದ್ದನ ಅನುಗ್ರಹವಾಗಿರಬಹುದು ಎನ್ನುವ ಅರಿವನ್ನು ಮೂಡಿಸಿದ್ದೇ ಚೇರ್ಮನ್ ಮಾವೊ ಅವರ ಸಂಸ್ಕೃತಿ ಕ್ರಾಂತಿ ಎಂಬ ಪಾರಮಾರ್ಥಿಕ ಸತ್ಯ ! ಎಂದು ಹೇಳುವಲ್ಲಿ ಫುನೆಂಗ್ ಅವರ ದೃಷ್ಟಿ ಎಷ್ಟು ಡಿವೈನ್ , ಪ್ರಬುದ್ದ, ಪರಿಪಕ್ವ  ಎನಿಸುತ್ತದೆ.

   ಮಹಿಳಾ ಶೋಷಣೆಯೆಂಬುದನ್ನು ಒಂದು ಪ್ರತ್ಯೇಕ ಅಧ್ಯಾಯದಲ್ಲಿ ಅಲೆಮಾರಿ ಚರ್ಚಿಸಿದೆ. ಅದು ರವಿ ಅವರು ಅವರ ಗೆಳೆಯರು ಕೂಡಿ ನೋಡಿದ ಸದ್ಯದ ಭಾರತದ ಪರಿಸ್ಥಿತಿಯನ್ನು ಮಾತ್ರ ಚರ್ಚಿಸುತ್ತದೆ. ನಾನು ಇಡೀ ಅಲೆಮಾರಿಯಲ್ಲಿಯ ಹೆಜ್ಜೆಗಳಲ್ಲಿ ಮೂಡಿರುವ ಹೆಣ್ಣಿನ ಶೋಷಣೆಯ ಚಿತ್ರವನ್ನು ಕಾಣಲು ಪ್ರಯತ್ನಿಸುತ್ತೇನೆ. ಏಕೆಂದರೆ ಚೀನಾ ಇರಲಿ, ಭಾರತ ಇರಲಿ ಅಮೆರಿಕಾ ಇರಲಿ 

ಹೆಣ್ಣು ಹೆಣ್ಣೇ. ಹೆಣ್ಣಿನ ಶೋಷಣೆಯ ಸ್ವರೂಪ ಬದಲಾಗಬಹುದೇ ಹೊರತು ಶೋಷಣೆಯಂತೂ ಇದ್ದೇ ಇರುತ್ತದೆ. ಒಂದು ಕಾಲದ ಈ ಶೋಷಣೆಗೆ ಸೇಡಿನ ರೂಪವಾಗಿಯೇ ಇಂದಿನ ಮಹಿಳಾಪರ ಕಾನೂನುಗಳು ಏಕೆ ರೂಪಿತವಾಗಿರಬಾರದು? ಹೀಗೂ ನಾವು ಯೋಚಿಸಬಹುದಲ್ಲವೆ? ಚೀನಾದ ಸಂಸ್ಕೃತಿಕ್ರಾಂತಿಯಲ್ಲಿ ಬೌದ್ದ ಭಿಕ್ಷುಣಿಯರು ಆತ್ಮಹತ್ಯೆ ಮಾಡಿಕೊಂಡರೆಂದು ಫುನೆಂಗ್ ಹೇಳಿರುವುದು ಸತ್ಯವಾದರೆ, ಚೀನಾದ ಮಾಯಾಂಗನೆಯೊಬ್ಬಳು ಫ್ರ್ಯಾಂಕ್ ಗೆ ತನ್ನ ಖೊಟ್ಟಿ ಕನ್ಯತ್ವವನ್ನು ಧಾರೆಯೆರೆದೆನೆಂದು ಹೇಳಿ ಫೂಲ್ ಮಾಡಿ ಹೋಗುವುದು ಇನ್ನೊಂದು ಕುಹಕ ಸತ್ಯವೇಕೆ ಆಗಿರಬಾರದು? ಕನ್ಯತ್ವವನ್ನು ಮೊದಲು ಛೇದಿಸಿದೆನೆಂಬ ಗಂಡಿನ ಅಹಂಕಾರವೇ ನಗೆ ಪಾಟಲಿನದು. ಕೆಲವರಂತೂ ಸಂಶೋಧನಾ ಕ್ಷೇತ್ರದ ಬರವಣಿಗೆಯಲ್ಲೂ ‘ಕನ್ಯೆ ನೆಲ’’ ಎಂಬ ಪದವನ್ನು ಬಳಸಿದ್ದನ್ನು ನೋಡಿ ನಗು ಬರುತ್ತದೆ. ಗಂಡಸಿನ ಕೌಮಾರ್ಯವನ್ನು ಕಳಚುವ ಹೆಣ್ಣಿಗೇಕೆ ಈ ಅಹಂ ಬರುವುದಿಲ್ಲ ಎಂಬುದು ಕುಚೋದ್ಯ . ಚೀನಾದಲ್ಲಿ ಹಿಂದೆ ಹೆಣ್ಣೇ ತನಗಿಂತ ಚಿಕ್ಕವಯಸ್ಸಿನ ಗಂಡನಿಗೆ ಲೈಂಗಿಕ ತರಬೇತಿ ನೀಡಬೇಕಿತ್ತಲ್ಲವೇ? ಆವಾಗ ಅವಳು ಹೆಮ್ಮ ಪಡಬೇಕಿತ್ತಲ್ಲ, ಆದರೆ ಹೆಮ್ಮೆ ಪಡುವುದಿರಲಿ ಅವಳ ಪಾಡೇ ಬೇರೆ. ಯಾಕೆ ಈ ಅಸಮಾನತೆ? ಗಂಡು –ಹೆಣ್ಣುಗಳೆರಡೂ ಸಮಾನ ಆತ್ಮಗಳು ಎಂದು ಬೋಧಿಸುವ ಪರಿಪೂರ್ಣ ಧರ್ಮ ಯಾವಾಗ ಅವತರಿಸೀತು? ಅಥವಾ ಮಾನವನ ವಿವೇಚನೆ ಯಾವಾಗ ಪ್ರಬುದ್ಧವಾದೀತು?


      ಕೊನೆಯ ಕನಸೊ-ನನಸೊ ಎಂಬ ಅಧ್ಯಾಯ ನಿಜವಾಗಲೂ ಉಪಸಂಹಾರವಾಗಿದೆ, ಲೀ ಗೆ ಅವರ ಅಜ್ಜಿಯ ಹುರುಳಿಕಾಳಿನ ಧ್ಯಾನ ಒಂದು ದಿವ್ಯ ಬೆಳಕನ್ನು ನೀಡಿದೆ. ಲೀ ಗೆ ಕೇಸರಿ ಕ್ರಾಂತಿಯ ಕನಸು ಬೀಳಬಹುದಾದರೆ ರವಿಗೆ ಕೆಂಪುಕ್ರಾಂತಿಯ ಕನಸು ಬೀಳಬಾರದೇಕೆ? ಫ್ರೈಡ್ ಹೇಳವಂತೆ ಮನುಷ್ಯನ ಮೆದುಳಿನಲ್ಲಿ ಇದ್, ಇಗೊ, ಸೂಪರ್ ಇಗೊ ಇವೆ. ಭೌತಿಕ ಜಗತ್ತಿನಲ್ಲಿ ಭೂತ, ವರ್ತಮಾನ, ಭವಿಷ್ಯಗಳಿವೆ. ಈ ಮೂರನ್ನೂ ಎಚ್ಚರದಿಂದ ಗಮನಿಸಿದರೆ ನಮ್ಮ ಭೂತವನ್ನು ನಾವು ಕಂಡು, ನಮ್ಮ ಭವಷ್ಯವನ್ನು ನಮಗೆ ಬೇಕಾದಂತೆ ರೂಪಿಸಿಕೊಳ್ಳಲು ವರ್ತಮಾನದಲ್ಲಿ ಜೀವಿಸಬಹುದು. ಇದು ಕನಸೊ-ನನಸೊ ಮುಖ್ಯವಲ್ಲ ಮಾವೊ,-ಮಾಮೊ ಇಲ್ಲಿ ಮುಖ್ಯರಲ್ಲ. ಬುದ್ದನು ಹೇಳಿರುವಂತೆ ಪ್ರಜ್ಞೆಯನ್ನು ಎಚ್ಚರಗೊಳಿಸಬೇಕಿದೆ. ಬುದ್ಧನ ತತ್ವಗಳನ್ನು ಬದುಕಿದ ಅಶೋಕನ ‘ನೀಲಿ ಚಕ್ರ’ ಭಾರತದ ಧ್ವಜದಲ್ಲಿ ಚಿತ್ರಿತವಾಗಿದೆ. ಅದು ಅಲ್ಲಿ ಸುತ್ತುವುದಿಲ್ಲ. ಆದರೆ ನಿಜವಾದ ಅರ್ಥದಲ್ಲಿ ಇಡೀ ಬ್ರಹ್ಮಾಂಡದಲ್ಲಿ ಸುತ್ತುತ್ತ ಏನನ್ನೋ  ಸೂಚ್ಯವಾಗಿ ಹೇಳುತ್ತಿದೆಯೆನಿಸುತ್ತದೆ. 

    ಹಿಂದಿಯ ‘ಚಕ್ರ’ ಸಿನಿಮಾದಲ್ಲಿ ಲೂಕಾ ಎಂಬ ಪಾತ್ರದಲ್ಲಿ ಕಾಣಿಸಿಕೊಂಡ ನಸೀರುದ್ದೀನ್ ಶಹಾನ ಬಾಯಲ್ಲಿ ಒಂದು ಅತ್ಯಮೂಲ್ಯ ಮಾತು ಬರುತ್ತದೆ. ಕೊಳಗೇರಿಯ ಪೋಕರಿ ಗಂಡಾಗಿ ಎಲ್ಲ ಹಲಕಾ ಕೆಲಸಗಳನ್ನು ಮಾಡಿಯೂ ಅವನೊಬ್ಬ ‘ನಿಷ್ಕಲ್ಮಶ ಆತ್ಮ’ನಾಗಿ ಚಿತ್ರಿಸಲ್ಪಟ್ಟಿದ್ದಾನೆ. ಅವನು ಒಬ್ಬ ಸಣ್ಣ ಪೋಕರಿ ಹುಡುಗನಿಗೆ ಹೇಳುತ್ತಾನೆ. 

‘‘ಸಾರಾ ಚಕ್ಕರ್ ದೋ ಚೀಜೊ ಕಾ ಹೈ , ಏಕ ಪೇಟ ಕಾ ಔರ ದೂಸರಾ ಪೇಟಕೆ ನೀಚೆ ಕಾ “  .  ಅವನು ಒಬ್ಬ ಜ್ಞಾನಿಯಾಗಿಯೇ ನನಗೆ ಕಾಣುತ್ತಾನೆ. ಭಾರತ-ಚೀನಾ-ಅಮೇರಿಕಾ ಮತ್ತಾವುದೇ ದೇಶವಿರಲಿ ಸೂರ್ಯ-ಚಂದ್ರರು ಒಬ್ಬರೇ ಇರುವಂತೆ ಸತ್ಯ ಕೂಡ ಒಂದೇ ಇರುತ್ತದೆ. ಈ ಸತ್ಯ ಕೂಡ ಮಾಧ್ಯಮಿಕಾ ಪಂಥ ಹೇಳುವಂತೆ 'ಇದೆ ಎಂದುಕೊಂಡರೆ ಇದೆ. ಇಲ್ಲ ಎಂದುಕೊಂಡರೆ ಇಲ್ಲ' .  

      ಮನುಷ್ಯ ಬುದ್ಧಿಯಿಂದ ಎಷ್ಟೆಲ್ಲ ಸಿದ್ಧಾಂತಗಳನ್ನು ಹೆಣೆದಿದ್ದಾನೆ ಆದರೆ ಮನುಷ್ಯ ಮೊದಲು ಆಮೇಲೆ ಸಿದ್ದಾಂತ ಎಂಬುದನ್ನು ಮರೆತು ಹೆಣೆದ  ಸಿದ್ದಾಂತಗಳಲ್ಲಿ “ತೆರಣಿಯ ಹುಳು ತನ್ನ ಸ್ನೇಹದಿಂದ ಮನೆಯ ಮಾಡಿ ತನ್ನ ನೂಲು ತನಗೆ ಸುತ್ತಿ ಸಾವಂತೆ’ ಎಂದು ಅಕ್ಕ ಹೇಳುವಂತೆ ಸಾವನ್ನಪ್ಪುತ್ತಾನೆ . ಇದು ಅಗಬಾರದು.

     ದೇಶ,ಭಾಷೆಯ ಗಡಿಗಳನ್ನು ಮೀರಿ ಗೆಳೆತನ ಮಾಡಿ ಇಂತಹ ಮೌಲಿಕ ಗ್ರಂಥವನ್ನು ನೀಡಿದ ಅಲೆಮಾರಿ ಗೆಳೆಯರಿಗೆ ಕೃತಜ್ಞತೆಗಳು ಈ ಪುಸ್ತಕ ನನಗೆ ಸಿಗುವಂತಾಗಿ ನಾನು ನನ್ನ ಬುದ್ಧಿಗಂಟಿದ ಧೂಳನ್ನು ಕೊಡಹಲು ಅವಕಾಶ ಸಿಗುವಲ್ಲಿ ಆ ಬುದ್ಧನ ಕರುಣೆಯ ಬೆಳಕಿದೆ ಎಂದು ನಾನೂ ಫುನೆಂಗರ ಹಾಗೆ ಅಂದುಕೊಳ್ಳುತ್ತೇನೆ.ಈ ಪುಸ್ತಕವನ್ನು ವಿವಿಧ ದೇಶಗಳ ಎಲ್ಲ ಪ್ರಜ್ಞಾವಂತರೂ ಓದಬೇಕು .ಬರೀ ಓದದೇ ಸುಂದರ ಮಾನವೀಯತೆಯ ಅಂತಃಕರಣ ಜಾಗೃತಗೊಳಿಸಿಕೊಳ್ಳಲು ಮೊದಲಾಗಬೇಕು. ಅಲೆಮಾರಿ ಗೆಳೆಯರಿಗೆ ಶುಭವಾಗಲಿ.

                                                                       H .ಶಶಿಕಲಾ        

ಪೂರ್ವಾಗ್ರಗಳ ಪೂರ್ವಾಪರ

 ಪೂರ್ವಾಗ್ರಹಗಳ ಪೂರ್ವಾಪರ


ಮಾನ್ಯ ರೇಣುಕಾ ರೂಪಾ ಎಂಬ ದ್ವಿ ಸ್ತ್ರೀಲಿಂಗ ನಾಮಧಾರಿ ಪುಲ್ಲಿಂಗದ(?) ಉಪನ್ಯಾಸಕರೋರ್ವರು ರವಿ ಹಂಜ್ ಅಂತಹ ಬಂಡವಾಳಶಾಹಿ ಭಕ್ತರ ಕೃತಿಗಳಿಂದ ಕನ್ನಡಿಗರಿಗೆ ಏನು ಲಾಭ ಎಂದು ತಮ್ಮ ಪಂಥಭಕ್ತಿಯ ಉನ್ಮಾದದಲ್ಲಿ ಪ್ರಶ್ನಿಸಿದ್ದಾರೆ. ನನ್ನ ಮಹಾಪಯಣ ಕೃತಿಯ ಮುನ್ನುಡಿ ಫೇಕ್ ಎಂದು ಇತ್ತೀಚೆಗೆ ಅಂಗಭಂಗಕ್ಕೊಳಗಾದ ಇವರು ಈಗ ಅವರ ಅಲ್ಲದ ಗುರುಗಳನ್ನು ಆವಾಹಿಸಿಕೊಂಡು ಅಲವತ್ತುಕೊಳ್ಳುತ್ತಿದ್ದಾರೆ.


ಇರಲಿ ಇದು ಕೇವಲ ರೇಣುಕಾ ರೂಪಾರ ಸಮಸ್ಯೆಯಲ್ಲ. ಇದು ಇಂದಿನ ದುರಿತ ಕಾಲದ ಅನೇಕ ಸಾಹಿತಿ ಗುರುಗಳ ಬಹುಪರಾಕು ಶಿಷ್ಯರ ಪರಿಸ್ಥಿತಿ. ಹಾಗೆಂದು ಇವರನ್ನು ಸಾಮಾನ್ಯರು ಎಂದು ಪರಿಗಣಿಸದಿರಿ. ಇವರು ಕನ್ನಡ ಎಂ.ಎ ಮಾಡಿದರೆ ಇಂಜಿನಿಯರಿಂಗಿನ ಎಲ್ಲಾ ವಿಭಾಗಗಳಲ್ಲದೆ, ವೈದ್ಯಕೀಯ, ಜಾಗತಿಕ ಇತಿಹಾಸ/ವಿದ್ಯಾಮಾನ/ಭಾಷಾಜ್ಞಾನ/ರಾಜಕೀಯ, ಸಮಾಜಶಾಸ್ತ್ರ, ಖಗೋಳ, ಭೂಗೋಳ, ಸಾಗರಾಳವಲ್ಲದೆ ಎಲ್ಲಾ ಜ್ಞಾನಗಳಲ್ಲಿ ಪರಿಣಿತಿ ಹೊಂದಿ ಯಾರು ಹೂಸಿದರೆ ಏನನ್ನು ಎಲ್ಲೆಲ್ಲಿ ತಿಂದಿದ್ದರು ಎಂದು ತಿಳಿಸುವಷ್ಟು ಅಪರಿಮಿತ ಬುದ್ಧಿವಂತಿಕೆಯನ್ನು ಪಡೆಯುವರು. 


ಇಂತಹ ಎಂ.ಎ ಪಡೆಯದೆ ಕೇವಲ ಕನ್ನಡದಲ್ಲಿ ಮಾತ್ರ ಎಂ.ಎ ಪಡೆದವರು ಇದಕ್ಕೆ ವರ್ಜ್ಯ! ಏಕೆಂದರೆ ಅವರು ವಿಶೇಷ ಚೇತನರಾಗಿರುವುದಿಲ್ಲ. ಹಾಗಾಗಿ ಇಂತಹ ಜ್ಞಾನಾರ್ಜನೆಯನ್ನು ವಿಶೇಷ ಚೇತನರಿಗೆ ವಿಶೇಷವಾಗಿ ಕರುಣಿಸಿದವರೇ ಇವರ ಆರಾಧ್ಯ ದೈವಗಳಾದ ಸಾಹಿತಿ ಸಂಶೋಧಕ ವಿಶ್ವವಿದ್ಯಾಲಯಗಳ ಪ್ರೊಫೆಸರರುಗಳು!


ಈ ಗುರುಶಿಷ್ಯಂದಿರ ಅಪರಿಮಿತ ಅಣಿಮು(ಮ)ತ್ತಿನ ಮಾತುಗಳು ನಿಮಗೆ ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚಿನವರೆಗೆ ಸಾಕಷ್ಟು ಸಿಗುತ್ತಿದ್ದವು. ಆದರೆ ಇತ್ತೀಚೆಗೆ ತುರ್ತುಪರಿಸ್ಥಿತಿ ಹೇರಿರುವ ಸರ್ಕಾರದ ದೆಸೆಯಿಂದ ಈ ಸರ್ಕಾರಿ ನೌಕರರು ತಕ್ಕಮಟ್ಟಿಗೆ ಭೂಗತರಾಗಿದ್ದಾರೆ. ತೇಜಸ್ವಿಯವರ ಕೃತಿಗಳ ಪ್ಯಾರಾಗಳನ್ನು ಮೊನ್ನೆಯಿಂದ ಓದುತ್ತಿರುವ ನಿಮ್ಮ ಮನದಲ್ಲಿ "ಪ್ರೊಫೆಸರ್ ಗಂಗೂಲಿ" ಹಾದು ಹೋದರೆ ಅದಕ್ಕೆ ನೀವೇ ಜವಾಬ್ದಾರರು!


ಮಾತೆತ್ತಿದರೆ ಸಮಾಜವಾದ, ಕಮ್ಯುನಿಸ್ಟ್, ಬದ್ಧತೆ ಮಾತನಾಡುವ ಶಿಷ್ಯ ಕೋಟಿಯ ಮಹಾನ್ ಗುರುಗಳೆಲ್ಲರೂ ವಿಶ್ವವಿದ್ಯಾಲಯ, ಕಾಲೇಜುಗಳಲ್ಲಿ ಪ್ರೊಫೆಸರರುಗಳಾಗಿದ್ದರು/ದ್ದಾರೆ. ಸರ್ಕಾರ ಆ ಉದ್ಯೋಗದಲ್ಲಿರುವವರಿಗೆ ಲಕ್ಷಗಟ್ಟಲೆ ಸಂಬಳ, ಸಂಶೋಧನೆ ಮಾಡಲು ಅನುದಾನ ಮತ್ತು ಸಹಾಯ ಮಾಡಲು ಸ್ನಾತಕೋತ್ತರ, ಪಿಹೆಚ್.ಡಿ, ಪೋಸ್ಟ್ ಡಾಕ್ಟೊರಲ್ ವಿದ್ಯಾರ್ಥಿಗಳ ಯೋಧರನ್ನೇ ಒದಗಿಸುತ್ತದೆ. ಇಂತಹ ಎಲ್ಲಾ ಸವಲತ್ತು ಪಡೆದು ನಡೆಸಿದ ಸಂಶೋಧನೆಗಳ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವ ಈ "ಸಮಾಜವಾದಿ"ಗಳು ಅವೇ ಸಂಶೋಧನೆಗಳನ್ನೇ ಬಂಡವಾಳವಾಗಿಸಿಕೊಂಡು ಖಾಸಗಿಯಾಗಿ ರಾಯಧನ ಪಡೆದು ಪ್ರಕಟಿಸಿ ಪ್ರಕಾಶಿಸುವುದು ಎಷ್ಟು ಸರಿ?


ಹಾಗೆ ಪ್ರಕಾಶಿಸುವುದು ಬಂಡವಾಳಶಾಹಿತ್ವವೇ ಸಮಾಜವಾದವೇ? ಅಥವಾ ಕಮ್ಯುನಿಸ್ಟ್ ಸಿದ್ಧಾಂತವೇ? ಬಂಡವಾಳಶಾಹಿ ಅಂಬಾನಿ ಅದಾನಿಯರ ಪ್ರಶ್ನಿಸುವ ನೈತಿಕತೆ ಇವರಿಗಿದೆಯೇ?


ಗುಂಡು ತುಂಡಿಗೆ ಗುರುಗಳು ಶಿಷ್ಯರನ್ನು ಜೊತೆಗೆ ಕೂರಿಸಿಕೊಂಡು ಅದಕ್ಕೆ "ಸಮಾನತೆ"ಯ ಮೆರುಗು ಕೊಟ್ಟು ತಮ್ಮ ಪಲ್ಲಂಗ ಪುರಾಣ ಊದಿದರೆ ಅದು ಮಹಿಳಾ ಸ್ವಾತಂತ್ರ್ಯದ ಹೊಸ ವ್ಯಾಖ್ಯಾನ! ಪಿಹೆಚ್.ಡಿ ಮಾಡಲು ಬಂದು ಅರ್ಧಕ್ಕೆ ಬಿಟ್ಟು ಹೋದ ಮಹಿಳೆಯರ ಸಂಖ್ಯೆ, ಇವರು ವಿಮೋಚನೆಗೊಳಿಸಿದ ಮಹಿಳಾ ವಿಮೋಚನೆಯ ಅಭಿಯಾನ!


ಇರಲಿ, ನಾನೊಬ್ಬ ಬಂಡವಾಳಶಾಹಿ! ನನ್ನ ಕೃತಿಗಳನ್ನು ಕನ್ನಡಿಗರು ಏಕೆ ಓದಬೇಕು? ಅದರಿಂದ ಏನು ಲಾಭ ಎಂದು ನನ್ನನ್ನು "ಆರಾಧಿ"ಸುವ ಈ ಗುಂಪಿಗೆ ನಾನು ಸ್ವಲ್ಪವೇ ಸ್ವಲ್ಪ ಬಂಡವಾಳದ ಲೆಕ್ಕಾಚಾರ ಹೇಳಿಕೊಡುತ್ತೇನೆ.


ಪ್ರಕಟಗೊಳ್ಳುತ್ತಿರುವ ಇತ್ತೀಚಿನ ಕನ್ನಡ ಪುಸ್ತಕಗಳು ಮಾರಾಟವಾಗುವ ಸಂಖ್ಯೆ ಶೋಚನೀಯ. ಇಪ್ಪತ್ತೈದು ಸಾವಿರ ಪುಸ್ತಕಗಳನ್ನು ನೂರು ರೂಪಾಯಿಗೊಂದರಂತೆ ಮಾರಿ, ಹದಿನೈದು ಪರ್ಸೆಂಟ್ ರಾಯಧನ ಗಳಿಸಿದರೆ ಸಿಗುವುದು ಮೂರುಮುಕ್ಕಾಲು ಲಕ್ಷ! 


ಯಾವುದೇ ಒಂದು ಸಂಶೋಧನೆಗೆ ಸಂಪನ್ಮೂಲಗಳನ್ನು ಒಟ್ಟುಗೂಡಿಸಲು ತಿರುಗಾಡಿ ವ್ಯಯಿಸುವ ಹಣ, ಸುಮಾರು ಐದು ಲಕ್ಷಕ್ಕೂ ಹೆಚ್ಚು.  ಸಂಶೋಧನಾ ತಂಡಗಳ ಸ್ವರೂಪದ  ಸಂಶೋಧನೆಗಳಾದರೆ ಇನ್ನೂ ಅಧಿಕ. ಅದರಲ್ಲಿಯೂ ಆ ಸಂಶೋಧನೆಗಳು ನನ್ನ  ಹುಯೆನ್ ತ್ಸಾಂಗನ ಮಹಾಪಯಣ, ಅಗಣಿತ ಅಲೆಮಾರಿ, ಭಾರತ ಒಂದು ಮರುಶೋಧನೆ ಯಂತಹ ಅಂತರರಾಷ್ಟ್ರೀಯ ವಿಷಯ ವಸ್ತುಗಳಿದ್ದರೆ ಇನ್ನೂ ಹೆಚ್ಚು!


ಸರ್ಕಾರಿ ಅನುದಾನಗಳಿಲ್ಲದೆ ಈ ರೀತಿಯ ಪುಸ್ತಕಗಳು ಕಷ್ಟ!


ಆದರೆ  ನನ್ನೆಲ್ಲಾ ಸಂಶೋಧನೆಗಳು ನನ್ನ ಅರಿವಿನ ಪರಿಧಿಯನ್ನು ವಿಸ್ತರಿಸಿಕೊಳ್ಳುವ ವೈಯಕ್ತಿಕ ಮೂಲೋದ್ದೇಶದ ಕಾರಣ ಇಲ್ಲಿ ಹಣ ಗೌಣ. 


ಹೌದು, ನಾನೊಬ್ಬ ಹಣ ಗೌಣವೆನ್ನುವ ಬಂಡವಾಳಶಾಹಿ!  


ಹೀಗೆ ನಾನು ವೈಯಕ್ತಿಕವಾಗಿ ಬಂಡವಾಳ ವ್ಯಯಿಸಿ ಕಂಡುಕೊಂಡ ಆ ಅರಿವನ್ನು ಸಮಾಜಕ್ಕೆ ಹಂಚಲು ಪುಸ್ತಕವಾಗಿಸಿದಾಗ, ಅಂತಹುದೇ ಲಾಭಾಂಶವನ್ನು ಬಯಸದೇ ಬಂಡವಾಳ ವ್ಯಯಿಸಿದ ಪ್ರಕಾಶನ ಸಂಸ್ಥೆಗಳು ನನ್ನ ಕೃತಿಗಳನ್ನು ಪ್ರಕಟಿಸಿದವು. ಇದರಲ್ಲಿ ಯಾವುದೇ ರಾಯಧನವಿಲ್ಲ. ಪದಕ್ಕೆರಡು ರೂಪಾಯಿ ಬಿಡಿ, ಇಡೀ ಪುಸ್ತಕಕ್ಕೆ ಒಂದು ರೂಪಾಯಿಯಿಲ್ಲ. 


ಈಗ ಹೇಳಿ ಕನ್ನಡಿಗರು ಏಕೆ ನನ್ನಂತಹ ಬಂಡವಾಳಶಾಹಿಯ ಕೃತಿಗಳನ್ನು ಓದಿ ಏನು ಲಾಭ? "ಅರಿವೇ ಗುರು" ಎಂಬುದು ಒಂದು ವಿಶ್ವವಿದ್ಯಾಲಯದ ಲಾಂಛನ. 


ಲಾಂಛನ ಮರೆತ ಈ ಸ್ನಾತಕಿ, ಸ್ನಾತಕೋತ್ತರಿಗಳು ಹಾಡುವುದು ಅದೇ ವಿಶ್ವವಿದ್ಯಾಲಯದ ಊರಿನ ಕವಿಗಳ ಪದ್ಯ "ಕುರುಡು ಕಾಂಚಾಣ!"


ಕನ್ನಡ ಎಂ.ಎ ಮಾಡಿ (ಕನ್ನಡ ಎಂ.ಎ. ಮಾಡಿ ಕೇವಲ ಕನ್ನಡ ಕಲಿತು ಕನ್ನಡ ಸೇವೆ ಮಾಡುತ್ತಿರುವವರು ದಯವಿಟ್ಟು ಕ್ಷಮಿಸಿ. ನೀವು ಇದಕ್ಕೆ ಹೊರತು!) ಸಕಲಕಲಾಪಾರಂಗತರಾಗಿರುವ ಸಮಾಜವಾದಿ, ಸಾಕ್ಷಿಪ್ರಜ್ಞೆ, ಆತ್ಮಸಾಕ್ಷಿ, ಬದ್ಧತೆ, ಸಿದ್ಧಾಂತ, ಚಿಂತನಶೀಲ, ವೈಚಾರಿಕ, ಬಹುತ್ವಗಳ ಪೂರ್ವಾಗ್ರಹಗಳ ಪೂರ್ವ ಗ್ರಹದ ಈ ಮಂದಿ ಪಶ್ಚಿಮ ಗ್ರಹದ ಆದರೆ ಪೂರ್ವಾಪರದ ನನಗೆ ಕೊಡುತ್ತಿರುವ ಪ್ರಚಾರಕ್ಕೆ ಚಿರಋಣಿ!


ಈ ಬಂಡವಾಳಶಾಹಿಯ ಎಲ್ಲಾ ಕೃತಿಗಳೂ ಮುದ್ರಿತ ಮತ್ತು ಇ-ಪುಸ್ತಕ ರೂಪದಲ್ಲಿ ಋತುಮಾನದಲ್ಲಿ ಲಭ್ಯ. ಹಾಂ ನೆನಪಿಡಿ, ನನ್ನ ಕೃತಿ 100% satisfaction guaranteed ಒಟ್ಟಿಗೆ ಬರುತ್ತದೆ. ಮೇಲಿನವರ ಸಾಕ್ಷಿಪ್ರಜ್ಞೆ, ಆತ್ಮಸಾಕ್ಷಿಗಳಿರದೆ ಸಹಜ ಮಾನವ ಕುತೂಹಲವಿದ್ದೂ ನಿಮಗೆ ತೃಪ್ತಿಯಾಗಲಿಲ್ಲವೆಂದರೆ ನನ್ನ ಮುಂದಿನ ಕೃತಿ ಉಚಿತ.


https://play.google.com/store/apps/details?id=ruthumana.app


#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ

ಮೇಕಿಂಗ್ ಆಫ್ ಹುಯೆನ್ ತ್ಸಾಂಗ್

 ನಮಸ್ಕಾರ,


ಭಾರತೀಯರಾದ ನಿಮಗೊಬ್ಬ ಚೀನಿ ಸಹೋದ್ಯೋಗಿ ಸಿಗುತ್ತಾನೆ ಎಂದಿಟ್ಟುಕೊಳ್ಳಿ. ಆಗ ನಿಮ್ಮ ಅವನ ಬಗ್ಗೆ ಇರುವ ಸಮಾನ ವಿಷಯ ಎಂದರೆ ಜನಸಂಖ್ಯೆ, ಇಂಡೋ ಚೈನಾ ಯುದ್ಧ, ಕಮ್ಯುನಿಸಂ, ಬಿಟ್ಟರೆ ಹುಯೆನ್ ತ್ಸಾಂಗ್! ಹಾಗಾಗಿ ಹುಯೆನ್ ತ್ಸಾಂಗ್ ಬಗ್ಗೆ ಅವನು ಗೊತ್ತಾ, ಓದಿದ್ದೀಯಾ ಇತ್ಯಾದಿ ಮಾತನಾಡುತ್ತೀರಿ.

ಆ ರೀತಿಯಾಗಿ ಆರಂಭಗೊಂಡ ನನ್ನ ಮೇಜುವಾನಿ ಸಂಭಾಷಣೆ ಪುಸ್ತಕವಾಗಿದೆ.


ನಂತರ ಭಾರತದ ಹುಯೆನ್ ತ್ಸಾಂಗ್ ನೇ ಚೀನಾದ ಝುಎನ್ ಜಿಯಂಗ್ ಎಂದು ಅರಿಯಲು ಒಂದು ತಿಂಗಳು ಬೇಕಾಯಿತು. ನಂತರ ಚೀನೀ ದೃಷ್ಟಾಂತ, ಕಾರ್ಟೂನಗಳು, ಮ್ಯೂಸಿಯಂ ದಾಖಲೆ, ಸಂಗ್ರಹ, ಫೋಟೋಗಳನ್ನೆಲ್ಲ ವಿಂಗಡಿಸಿ ವಿಶ್ಲೇಷಿಸುತ್ತ ನಡೆಯಬೇಕಿತ್ತು. ಕಾರ್ಟೂನ್ ಪ್ರಕಾರ ಈತನಿಗೆ ಮಂಗವೊಂದು ಸಹಾಯ ಮಾಡಿದಂತೆ ಚಿತ್ರಿಸಿ ರಾಮನ ಮಾಡಿದ್ದರು! ಹನುಮಂತ ರಾಮನಿಗೆ ಸಮುದ್ರ ದಾಟಲು ಸಹಾಯಿಸಿದ ರಾಮಾಯಣದಂತೆ, ಕೋತಿಯೊಂದು ಇವನಿಗೆ ಮರುಭೂಮಿ ದಾಟಲು ಸಹಾಯಿಸಿದಂತೆ. 


ಆದರೆ ಯಾವಾಗ ಈ ಚೀನೀ ಯಾತ್ರಿಕ ಭಾರತದ ಇತಿಹಾಸಕ್ಕೆ ಅನಿವಾರ್ಯವೆನ್ನುವಷ್ಟು ಪ್ರಮುಖನೆನಿಸಿದನೋ ಆಗ ಈತನ ಬಗ್ಗೆ, ಈತ ದಾಖಲಿಸಿದ ಭಾರತದ ಇತಿಹಾಸದ ಬಗ್ಗೆ ಕುತೂಹಲಕ್ಕಿಂತ ಸಂಶಯ ಮೂಡಿತು.  ಈ ಸಂಶಯಕ್ಕೆ ಕಾರಣ, ಚೀನಿಯರೊಂದಿಗಿನ ನನ್ನ ವೃತ್ತಿನಿರತ ಅನುಭವ, ಅವರ ಅನ್ಯಭಾಷಾ ಜ್ಞಾನದ ಅರಿವು, ಮತ್ತು  ಚೀನೀಯರ "ತಳ್ಳು" ಪ್ರವೃತ್ತಿಯ ನಿಕಟ ಪರಿಚಯ . ಈ ತಳ್ಳುವ ಪ್ರವೃತ್ತಿ ಭಾರತೀಯರನ್ನೊಳಗೊಂಡಂತೆ ಎಲ್ಲಾ ಏಷಿಯನ್ನರಲ್ಲಿಯೂ ಇದೆ. ಚೀನೀ ರೆಸ್ಟೋರೆಂಟುಗಳಲ್ಲಿ ನಿಮಗೆ ತಂದಿಟ್ಟ ಊಟತಿಂಡಿಯ ಬಗ್ಗೆ ಅನುಮಾನ ಮೂಡಿ ಇದು ಸಸ್ಯಾಹಾರವೇ ಎಂದು ಕೇಳಿದರೆ ಹಿಂದುಮುಂದು ನೋಡದೆ "ಹೌ"ದೆನ್ನುತ್ತಾರೆ. ಒಟ್ಟಾರೆ ಕೊಟ್ಟ, ಮಾರಿದ ವಸ್ತು ಹಿಂದಕ್ಕೆ ಬರಬಾರದು ಎಂಬ ತಳ್ಳುವ ಉದ್ದೇಶದಿಂದ ಕೇಳಿದ್ದಕ್ಕೆಲ್ಲ "ಹೌ"ದೆನ್ನುತ್ತಾರೆ!


ನನ್ನ ಕ್ಲೀಷಾ ಪ್ರವೃತ್ತಿ ಇವನ ಇತಿಹಾಸವನ್ನು ಕೆದಕುವಂತೆ ಮಾಡಿತು. ಮೇಲ್ನೋಟಕ್ಕೆ ಈತ ಇತರೆ ಚೀನಿಯರಂತೆ ತಳ್ಳು ಪ್ರವೃತ್ತಿಯವನಾಗಿರಲಿಲ್ಲವೆಂದು ತಿಳಿಯಿತು. ನಂತರ ಕೆದಕಿದಷ್ಟೂ ಈತನ ನಿಖರತೆ, ಪ್ರಖರತೆ, ಸ್ಪಷ್ಟತೆ ಕಾಣುತ್ತಾ ಸಾಗಿ ಪುಸ್ತಕವಾಯಿತು. 


ಬಿಗ್ ಡೇಟಾ, ಬಿಸಿನೆಸ್ ಇಂಟೆಲಿಜೆನ್ಸ್, ಮಷಿನ್ ಲರ್ನ್ನಿಂಗ್ ಎನ್ನುವ ನನಗೆ, ಸಮುದ್ರಮಥನದಿಂದ ಅಮೃತ ಸೃಷ್ಟಿಯಾಯಿತೆಂಬುವ ಪೌರಾಣಿಕ ಕತೆ ಪ್ರಪ್ರಥಮ ಮಾಹಿತಿ ತಂತ್ರಜ್ಞಾನದ ವಿಶ್ಲೇಷಣೆಯ ದೃಷ್ಟಾಂತ ಸೂಚಿಯಾದರೆ, ಹುಯೆನ್ ತ್ಸಾಂಗ್ ಅಗಣಿತ ಮಾಹಿತಿಯನ್ನು ಮಥಿಸಿ, ಭಾರತದ ಇತಿಹಾಸದ ಉಪಯುಕ್ತ ನಿಖರ ಮಾಹಿತಿಯನ್ನು ನೀಡಿ ಮಾಹಿತಿ ವಿಶ್ಲೇಷಣೆಯನ್ನು ಸಾಕಾರಗೊಳಿಸಿದ ಆದಿಪುರುಷನೆನಿಸುತ್ತಾನೆ.


ಹಾಗಾಗಿ ಈತ ಕೇವಲ ಒಬ್ಬ ಬೌದ್ಧಭಿಕ್ಷು, ಸಾಹಸಿ, ವಿದ್ವಾಂಸ, ರಾಜತಾಂತ್ರಿಕ, ಸಂಚಾರಿಯಲ್ಲದೆ ಮಾಹಿತಿ ವಿಶ್ಲೇಷಣೆಯ ಪಿತಾಮಹನೂ ಎನಿಸುತ್ತಾನೆ. ಚಾರ್ಲ್ಸ್ ಬ್ಯಾಬೇಜ್ ಕಂಪ್ಯೂಟರ್ ಪಿತಾಮಹನೆನ್ನಿಸಿದರೆ, ಹುಯೆನ್ ತ್ಸಾಂಗ್ ಮಾಹಿತಿ ವಿಶ್ಲೇಷಣೆಯ ಪಿತಾಮಹ!!!


ಇನ್ನು ಇಪ್ಪತ್ತೈದು ಸಾವಿರ ಪುಸ್ತಕಗಳನ್ನು ನೂರು ರೂಪಾಯಿಗೊಂದರಂತೆ ಮಾರಿ, ಹದಿನೈದು ಪರ್ಸೆಂಟ್ ರಾಯಧನ ಗಳಿಸಿದರೆ ಸಿಗುವುದು ಮೂರುಮುಕ್ಕಾಲು ಲಕ್ಷ! ಯಾವುದೇ ಒಂದು ಸಂಶೋಧನೆಗೆ ಸಂಪನ್ಮೂಲಗಳನ್ನು ಒಟ್ಟುಗೂಡಿಸಲು ತಿರುಗಾಡಿ ವ್ಯಯಿಸುವ ಹಣ, ಶ್ರಮ ಸುಮಾರು ಐದು ಲಕ್ಷಕ್ಕೂ ಹೆಚ್ಚು. ಅದರಲ್ಲಿಯೂ ಸಂಶೋಧನೆ, ಹುಯೆನ್ ತ್ಸಾಂಗನಂತಹ ಅಂತರರಾಷ್ಟ್ರೀಯ ವ್ಯಕ್ತಿ ವಿಷಯವಾಗಿದ್ದರೆ ಇನ್ನೂ ಹೆಚ್ಚು!  

ಸರ್ಕಾರಿ ಅನುದಾನಗಳಿಲ್ಲದೆ ಈ ರೀತಿಯ ಪುಸ್ತಕ ಕಷ್ಟ.


ಆದರೆ ಇದು ನನ್ನ ಅರಿವಿನ ಪರಿಧಿಯ ವಿಸ್ತರಿಸಿಕೊಳ್ಳುವ ವೈಯಕ್ತಿಕ ಮೂಲೋದ್ದೇಶದ  ಕಾರಣ ಇಲ್ಲಿ ಹಣ ಗೌಣ.  ನಾನು ಕಂಡುಕೊಂಡ ಆ ಅರಿವನ್ನು ಸಮಾಜಕ್ಕೆ ಹಂಚಲು ಪುಸ್ತಕವಾಗಿಸಿದಾಗ, ಅದೇ ಸಾಮಾಜಿಕ ಕಳಕಳಿಯ, ಚಿಂತನೆಗಳನ್ನು ಮೀರಿದ ವೈಚಾರಿಕತೆಯ ಸಮಾಜಮುಖಿ ಬಳಗ ಪ್ರಕಟಿಸಲು ಉತ್ಸಾಹ ತೋರಿತು. 


ಇಂದು ಸಿದ್ಧಾಂತ ಬದ್ಧ ಕರ್ನಾಟಕದ ಕನ್ನಡದಲ್ಲಿ ಸಿದ್ಧಾಂತಕ್ಕೆ ಜೋಡಣೆಯಾದ, ಲಿಯೋ ಟಾಲ್ಸ್ಟಾಯ್, ಲೆನಿನ್, ಚೆ ಗುವೆರಾ ಮುಂತಾದವರ ಬಗ್ಗೆ ಅನೇಕ ಪುಸ್ತಕಗಳಿವೆ. ಆದರೆ ಭಾರತದ ಇತಿಹಾಸದ ಅನಿವಾರ್ಯನಾದ, ಸಿದ್ಧಾಂತಕ್ಕೆ ಅನ್ವಯಿಸದ ಹುಯೆನ್ ತ್ಸಾಂಗ್ ಬಗ್ಗೆ ಎಷ್ಟು ಪುಸ್ತಕಗಳಿವೆ? 


ಇನ್ನು ಏಳನೇ ಶತಮಾನದ ಅಂದಿನ ಚೀನಾ/ಭಾರತಕ್ಕೂ ಇಂದಿನ ಇಪ್ಪತ್ತೊಂದನೇ ಶತಮಾನದ ಆ ದೇಶಗಳಿಗೂ ವ್ಯತ್ಯಾಸವಿದೆಯೇ?  


ಆಗಿನಿಂದಲೂ ಚೈನಾದಲ್ಲಿ ಚಕ್ರಾಧಿಪತ್ಯ. ಈಗಲೂ ಚುನಾಯಿತ ಚಕ್ರಾಧಿಪತ್ಯ!

ಅಂದು ಭಾರತದಲ್ಲಿ ರಾಜರು, ಸರದಾರರು, ಸಾಮಂತರು, ಪಾಳೆಗಾರರು. ಈಗಲೂ ಚುನಾಯಿತ ರಾಜರ, ಸಾಮಂತರ, ಪಾಳೆಗಾರರ ಊಳಿಗಮಾನ್ಯ, ಚುನಾಯಿತ ಊಳಿಗಮಾನ್ಯ Elected feudalism! 


ಇನ್ನು ಸಿದ್ದಾಂತಗಳ ಮೀರಿದ ವೈಚಾರಿಕ ಚಿಂತನೆಯ ಕಾಡುಸಿದ್ದರಾದ ನನ್ನ ಮತ್ತು ಸಮಾಜಮುಖಿ ಬಳಗದ ಒಂದು axis of civil ಏರ್ಪಟ್ಟು ಹುಯೆನ್ ತ್ಸಾಂಗ್ ಪುಸ್ತಕ ಇಂದು ಬಿಡುಗಡೆಗೊಂಡಿದೆ.


ನಿಮ್ಮ ಪ್ರೋತ್ಸಾಹ ನಮಗಿರಲಿ. 


ಧನ್ಯವಾದಗಳು.