ಮೋದಿ ಮತ್ತು ಭ್ರಷ್ಟಾಚಾರ

 ನನ್ನ ತೋಟದ ತೆಂಗು ಮತ್ತು ಗೋಡಂಬಿ ಗಿಡಗಳ ನಡುವೆ ಕೃಷಿ ಕೆಲಸಕ್ಕೆ ಮಿನಿ ಟ್ರಾಕ್ಟರ್ ಬೇಕಿತ್ತು. ಹಾಗಾಗಿ ಒಂದು ಹೊಸ ಟ್ರಾಕ್ಟರ್ ಖರೀದಿಸಿದೆ. ಡೀಲರ್ ಅದನ್ನು ರಿಜಿಸ್ಟರ್ ಮಾಡಿಸಲು ನಾನು ಕೃಷಿ ಜಮೀನಿನ ಮಾಲೀಕ ಎಂಬ ಬೊನಫೈಡ್ ಸರ್ಟಿಫಿಕೇಟ್ ಬೇಕು. ಇಲ್ಲದಿದ್ದರೆ ಕಮರ್ಷಿಯಲ್ ವಾಹನವಾಗಿ ರಿಜಿಸ್ಟರ್ ಆಗುತ್ತದೆ ಎಂದ. ಟ್ರಾಕ್ಟರ್ ಕೊಳ್ಳುವ ಕೃಷಿಕ ತನ್ನ ಒಡೆತನದ ಜಮೀನಿನ ಪಹಣಿಯನ್ನು ಗ್ರಾಮಲೆಕ್ಕಿಗನಿಗೆ ತೋರಿಸಿ ಈ ಸರ್ಟಿಫಿಕೇಟ್ ಪಡೆಯಬೇಕಿತ್ತು. ಇಲ್ಲಿ ಪ್ರಶ್ನೆ ಏನೆಂದರೆ ಪಹಣಿ ಎಂಬ ದಾಖಲೆಯೇ ಕೃಷಿ ಜಮೀನಿನ ಮಾಲೀಕ ಎಂದು ಸಾಬೀತು ಪಡಿಸುವ ದಾಖಲೆಯಾಗಿದ್ದು ಮತ್ತದನ್ನು ಇದೇ ಗ್ರಾಮಲೆಕ್ಕಿಗನ ಕಛೇರಿಯೇ ಕೊಟ್ಟಿರುತ್ತದೆ. ಹಾಗಿದ್ದಾಗ ಈ ಬೊನಫೈಡ್ ಎಂಬ ಮತ್ತೊಂದು ಪದರ ಏಕೆ? 

ಅಧಿಕಾರಶಾಹಿಯ ಒಂದು ಸ್ಯಾಂಪಲ್ ಹೀಗೆ ನನ್ನ ಅನುಭವವಾಯಿತು. ಐನೂರು ಕಕ್ಕದೆ, ಗ್ರಾಮಲೆಕ್ಕಿಗನೆಂಬೋ ಅಧಿಕಾರಶಾಹಿಯ ಮುಂದೆ ಸೊಂಟ ಬಗ್ಗಿಸದೆ ಇದು ಲಭ್ಯವಾಗದು.

ನಮ್ಮ ಮನೆಯಲ್ಲಿ ಎರಡು ಕಾರುಗಳಿವೆ. ಅದರಲ್ಲಿ ಒಂದು ಆಟೊಮ್ಯಾಟಿಕ್ ಟ್ರಾನ್ಸ್ಮಿಷನ್. ಅದನ್ನು ನಾನು ಭಾರತಕ್ಕೆ ಬಂದಾಗ ಮಾತ್ರ ಓಡಿಸುವುದು ಬಿಟ್ಟರೆ ಮತ್ಯಾರೂ ಉಪಯೋಗಿಸುವುದಿಲ್ಲ. ಕಳೆದ ವರ್ಷ ಸರ್ವಿಸ್ ಮಾಡಿಸಿ ಎಮಿಷನ್ ಟೆಸ್ಟ್ ಮಾಡಿಸಿ ಇಟ್ಟು ಬಂದಿದ್ದನ್ನು ಆಗಾಗ್ಗೆ ಸ್ಟಾರ್ಟ್ ಮಾಡಿ ಒಂದೈವತ್ತು ಮೈಲಿ ಓಡಿಸಿದ್ದು ಬಿಟ್ಟರೆ ಮತ್ತೆ ಅದನ್ನು ಮನೆಯಲ್ಲಿ ಬಳಸಿರಲಿಲ್ಲ.

ಮೊನ್ನೆ ಬಂದಾಗ ಅದನ್ನು ತೆಗೆದುಕೊಂಡು ದಾವಣಗೆರೆ ನಗರ ಪ್ರದಕ್ಷಿಣೆಗೆ ಹೊರಟೆ. ನನ್ನ ಬೆಂಗಳೂರು ನಂಬರ್ ಪ್ಲೇಟ್ ನೋಡಿ ಪೊಲೀಸ್ ಕೈ ಹಾಕಿಯೇ ಬಿಟ್ಟ. 

ಲೈಸೆನ್ಸ್, ರಿಜಿಸ್ಟ್ರೇಷನ್, ಇನ್ಸುರೆನ್ಸ್, ಎಮಿಷನ್ ಎಲ್ಲಾ ಆತನ ಕೈಗಿಟ್ಟೆ. 


"ಎಮಿಷನ್ ಎಕ್ಸ್ಪೈರಿ ಆಗೇತಲ್ಲ ಸಾ" ಎಂದ. 

"ಹೌದ! ಸಾರಿ, ಈಗಷ್ಟೇ ಗಾಡಿ ಹೊರಗ ತಗದಿನಿ, ಒಂದು ವರ್ಷದ ಮ್ಯಾಲ. ಬೇಕಾರ ಎಮಿಷನ್ ರಿಪೋರ್ಟ್ ಮೇಲಿರೋ ಮೈಲೇಜು ಮತ್ತ ಗಾಡಿ ಮೈಲೇಜ್ ನೋಡ್ರಿ. ಓಡಿಯೇ ಇಲ್ಲ ಗಾಡಿ! ಈಗ ಎಮಿಷನ್ ಮಾಡಿಸ್ತೀನಿ ತಗಳ್ರಿ ಹಂಗಾರ" ಎಂದೆ.

"ಅಯ್ಯೋ ಹೌದಲ್ಲ ಸಾ. ಇದು ಭಾಳ ಫೈನ್ ಅಕ್ಕತಿ. ಒಂದು ಕೆಲ್ಸ ಮಾಡ್ರಿ. ಐನೂರು ರೂಪಾಯಿ ಕೊಡ್ರಿ. ಇದ್ದುದ್ದರಾಗ ಒಂದು ಕಡಿಮಿ ಫೈನಿಂದು ರಸೀದಿ ಹರಿತನಿ" ಎಂದು ಐನೂರು ತೆಗೆದುಕೊಂಡು ಎಕ್ಸ್ಟ್ರಾ ಪ್ಯಾಸೆಂಜರ್ ಎಂದು ಇನ್ನೂರಕ್ಕೆ ರಸೀದಿ ಹರಿದುಕೊಟ್ಟ.

ಅಷ್ಟರ ಮಟ್ಟಿಗೆ ಪೊಲೀಸರು ಸ್ನೇಹಮಯಿಯಾಗಿದ್ದಾರೆ. 

ನಾ ಖಾವುಂಗ, ನಾ ಖಾನೇ ದುಂಗಾ ಮತ್ತು 

ಸಬ್ ಕಾ ಸಾಥ್, ಸಬ್ ಕೆ ವಿಕಾಸ್ ಎಂಬ

ಎಂಬ ಬಿಜೆಪಿ ಧುರೀಣನ ಮಂತ್ರ, 

ಕಾಂಗ್ರೆಸ್ಸಿನ ಸರ್ವರಿಗೂ ಸಮಪಾಲು ಎಂಬ ಬೀಜಮಂತ್ರ, live and let live ಎಂಬ ಸಮಾಜವಾದದ ತಂತ್ರಗಳು ಜಂಟೀ ಮಂತ್ರವಾಗಿ ಜನರು ಅಳವಡಿಸಿಕೊಂಡಿದ್ದರು. ಇದರಿಂದ ನಾನೇಕೆ ಹೊರಗಿರಲಿ ಎಂದು ಸುಮ್ಮನಾದೆ.

ನಂತರ ಹತ್ತಿರದ ಎಮಿಷನ್ ಪರೀಕ್ಷಾ ಕೇಂದ್ರಕ್ಕೆ ತೆರಳಿ ಮ್ಯಾಕ್ಸಿಮಮ್ ಎಷ್ಟು ಸಾಧ್ಯವೋ ಅಷ್ಟಕ್ಕೇ ನವೀಕರಿಸಿ ಕೊಡಿ ಎಂದೆ. ಅದಕ್ಕೆ ಆತ ಆರು ತಿಂಗಳು ಇಲ್ಲ ಒಂದು ವರ್ಷ ಅಷ್ಟೇ ಇರುವುದು ಎಂದ. ಸರಿ ಎಂದು ಒಂದು ವರ್ಷಕ್ಕೆ ನವೀಕರಿಸಿಕೊಂಡೆ.

ಈ ಎಮಿಷನ್ ನಿಯಮ ಮಾಡುವವರು ನಿಯಮ ರೂಪಿಸುವ ಮುನ್ನ ಸಮಯ, ಮೈಲೇಜು, ಮಾಡೆಲ್(ವರ್ಷ), ಎಂಜಿನ್ (ಪೆಟ್ರೋಲೇ, ಡೀಸೆಲ್ಲೇ) ಮತ್ತಿತರೆ ಆಯಾಮಗಳನ್ನೇಕೆ ಪರಿಗಣಿಸುವುದಿಲ್ಲ!? ಆ ಆಯಾಮಗಳು ಮತ್ತು ಎಮಿಷನ್ ಫಲಿತಾಂಶದ ಶ್ರೇಣಿಯ ಮೇಲೆ ಆರು ತಿಂಗಳು, ಒಂದು ವರ್ಷ, ಎರಡು ವರ್ಷ ಹೀಗೆ ನವೀಕರಿಸುವ ಶ್ರೇಣಿಯನ್ನು ಆಯೋಜಿಸಬಹುದಲ್ಲವೇ!

ಇಲ್ಲ. ಹಾಗಾಗಿಬಿಟ್ಟರೆ ಜನ ಸೊಂಟ ಬಗ್ಗಿಸಿ, ಡೊಗ್ಗು ಸಲಾಮು ಹೊಡೆದು ಮೇಲೆ ಲಂಚ ಕೊಡದೆ, ದಂಡ ಕಟ್ಟದೆ ಸರ್ವತಂತ್ರ ಸ್ವತಂತ್ರರಾಗಿರಲು ಭಾರತವೇನು ಸರ್ವತಂತ್ರ ಸ್ವತಂತ್ರ ರಾಷ್ಟ್ರವೇ? ಕಮ್ಯುನಿಸ್ಟ್ ಅಲ್ಲದಿದ್ದರೂ ಕೆಂಪುಪಟ್ಟಿ ಆಡಳಿತವೇ ಭಾರತೀಯ ಪ್ರಜಾಪ್ರಭುತ್ವವಾಗಿದೆಯಲ್ಲವೇ!

ಮೋದಿ ಬಂದ ಮೇಲೆ ನಿಯಮಗಳೆಲ್ಲವೂ ಸರಳವಾಗಿ, ಭ್ರಷ್ಟಾಚಾರ ಇಲ್ಲವೇ ಇಲ್ಲ ಎಂಬಂತಾಗಿದೆ ಎಂಬುದನ್ನು ನಾನೂ ನಂಬಿ ತೇಲುತ್ತಿದ್ದೆ. ಮೇಲಿನ ನನ್ನ ಶ್ರೀಸಾಮಾನ್ಯನ ಎರಡು ಅನುಭವಗಳು ಮೋದಿ ಸರಳೀಕರಿಸಿದ್ದು ಏನನ್ನು, ಯಾರಿಗೆ ಎಂಬ ಪ್ರಶ್ನೆಯೊಂದಿಗೆ "ಯಾರಿಗೆ ಬಂತು, ಎಲ್ಲಿಗೆ ಬಂತು 47ರ ಸ್ವಾತಂತ್ರ್ಯ?" ಎಂಬ ಹಳೆಯ ಪ್ರಶ್ನೆಯನ್ನು ನವನವೀಕರಿಸಿತು. 

ಉಳಿದಂತೆ ಮೋದಿ ಕಂ ಕೊರೋನಾ ಕಾಲದ ಆಸ್ಪತ್ರೆಗಳ ಶೋಷಣೆ, ಭ್ರಷ್ಟಾಚಾರ ಜಗಜ್ಜಾಹೀರೇ ಆಗಿದೆ.

ಒಟ್ಟಿನಲ್ಲಿ ಹರ ಹರ ಮೋದಿ, ಭರ ಭರ ಭೇ...!

ಹಾಂ, ಉಚ್ಚೆ ಹುಯ್ದು ಹುಲುಸಾಗಿ ತೋಟ ಬೆಳೆಸಿದ್ದ ಮಾನ್ಯ ಗಧಕರಿಯವರು ಈಗ ಉಚ್ಚೆ ಹುಯ್ದು ಎಮಿಷನ್ ಇಲ್ಲದಂತೆ ಓಡುವ ಗಾಡಿಯ ಆವಿಷ್ಕಾರದಲ್ಲಿದ್ದಾರಂತೆ. (ಪರ್ಯಾಯ ಸರ್ವಿಸ್ ರಸ್ತೆಯಿಲ್ಲದೆ ದಶಕಗಳಿಂದ ಟೋಲ್ ವಸೂಲಿ ಮಾಡುತ್ತಿರುವ ಹೆದ್ದಾರಿ ದರೋಡೆಕೋರರಿಗೆ ಇವರೇ ಸ್ಪೀಡ್ ಪಾಸ್ ಕಡ್ಡಾಯಗೊಳಿಸುವ ಮೂಲಕ ದರೋಡೆಗೆ ಹೆಚ್ಚಿನ ಬಲ ತಂದುಕೊಟ್ಟಿದ್ದಾರೆ).

ಇದಕ್ಕೆ ಪ್ರತಿಸ್ಪರ್ಧಿಯಾಗಿ ಬಾಬಾರವರು ಗೋಮೂತ್ರದಿಂದ ಪದೋನ್ನತಿ ಪಡೆದು ಪೆಟ್ರೋಲ್ ಬದಲು ಮನುಜಮೂತ್ರದಿಂದ ಓಡುವ ಗಾಡಿಗಳ ಆವಿಷ್ಕಾರದಲ್ಲಿ ತೊಡಗಿರಬಹುದೇನೋ!

ಒಟ್ಟಿನಲ್ಲಿ ಮೂತ್ರ, ಭೇ... ಹುಲಿಗ್ಯೋ, ಹುಲಿಗ್ಯೋ!

ಕೋಡಗನ್ನ ಕೋಳಿ ನುಂಗಿತ್ತಾ ನೋಡವ್ವ ತಂಗಿ... ಎಂಬ ಈ ಕಾಲವನ್ನು ಶರೀಫ ಅಂದೇ ಕಾಲಜ್ಞಾನಿಯಾಗಿ ಹಾಡಿದ್ದ.

#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ

No comments: