ಬೌದ್ಧಿಕ ತಾಲಿಬಾನ್!

 ತರ್ಕ, ತುಲನೆ, ವಿಶ್ಲೇಷಣೆ, ವಾಕ್ ಸ್ವಾತಂತ್ರ್ಯ, ಮತ್ತು ವಿಡಂಬನೆಗಳು ಭಾರತದಲ್ಲಿ ವಿರಳವಾಗುತ್ತಿವೆ. ಈಗಿರುವುದು ಅತ್ಯುಗ್ರ ಎಡಬಲವಾದ!


ಉರ್ದು ಕವಿ ಮುನಾವರ್ ರಾಣಾ ಎಂಬುವವರಿಗೆ ತಾಲಿಬಾನ್ ಕುರಿತು ಕೇಳಿದಾಗ ವಾಲ್ಮೀಕಿ ಸಹ ರಾಮಾಯಣ ಬರೆದು ದೇವನಾಗುವ ಮುನ್ನ ಡಕಾಯಿತನಾಗಿದ್ದ ಎಂಬ ಸದಾಶಯದ ಮಾತುಗಳಾಡಿ ವಾಲ್ಮೀಕಿ ಸಮಾಜದ ಭಾವನೆಗಳಿಗೆ ಧಕ್ಕೆ ತಂದಿದ್ದಾರೆಂದು ಮಧ್ಯಪ್ರದೇಶದ ಬಿಜೆಪಿ ನಾಯಕನಿಂದ ಕೇಸು ಜಡಿಸಿಕೊಂಡಿದ್ದಾರೆ. 


ಕೇಂದ್ರ ಮಂತ್ರಿ ರಾಣೆಯವರು ಸ್ವಾತಂತ್ರ್ಯ ಸಿಕ್ಕು ಎಷ್ಟು ವರ್ಷಗಳಾದವೆಂದು ಅರಿಯದ ಶಿವಸೇನಾ ಮುಖ್ಯಸ್ಥನ ಕೆನ್ನೆಗೆ ಬಾರಿಸುತ್ತಿದ್ದೆ ಎಂದು ಭಾಷಣ ಮಾಡಿ ಮಹಾರಾಷ್ಟ್ರ ಪೊಲೀಸರಿಂದ ಕೇಸು ಜಡಿಸಿಕೊಂಡಿದ್ದಾರೆ.


ಖುದ್ದು ನಾನು ಸಹ ಮದಕರಿ ನಾಯಕನ ಬಗ್ಗೆ ಹೀಗೊಂದು ಪ್ರತೀತಿಯಿದೆ, ಪೂರಕ ಮಾಹಿತಿಯಿದ್ದರೆ ಕೊಡಿ ಎಂದು ಕೇಳಿ ಕರ್ನಾಟಕ ಪೊಲೀಸರಿಂದ FIR ಜಡಿಸಿಕೊಂಡಿದ್ದೇನೆ. 


ಹೀಗೆಯೇ ಸದಾಶಯದ ಮಾತನಾಡಿದ ರಶೀದ್ ಅವರ ಮೇಲೆ ಎಡಪಂಥೀಯ ಅತ್ಯುಗ್ರರು ಅತ್ಯುಗ್ರವಾಗಿ ಕರ್ನಾಟಕದಾದ್ಯಂತ ಹರಿಹಾಯ್ದಿದ್ದಾರೆ.  ಅಷ್ಟಕ್ಕೇ ತಪರಾಕಿ ತಟ್ಟಲು ಅವಕಾಶ ಸಿಕ್ಕಿತೆಂದು ರಶೀದ್ ನಮ್ಮವರೆಂದು ಬಲಪಂಥೀಯರು ಕ್ಲಬ್ ಹೌಸಿಗೆ ಕರೆಸಿ ಆದರಿಸಿದ್ದಾರೆ.


ಇತ್ತ "ಬೆಂಕಿ ಬಿದ್ದು ಬಾಯಿ ಬಡಿದುಕೊಳ್ಳುತ್ತಿರುವ ಬಲಪಂಥೀಯ ನಾಯಿಗಳು" ಎಂಬ ಅತ್ಯುಗ್ರ ಕೀಳು ಶೀರ್ಷಿಕೆ ಯ ವಿಷಯದ ಬಗ್ಗೆ ಕ್ಲಬ್ ಹೌಸ್ನಲ್ಲಿ ದಿಲ್ಲಿಯ ಪ್ರತಿಷ್ಠಿತ ವಿಶ್ವವಿದ್ಯಾಲಯದ ನಿವೃತ್ತ ಪ್ರೊಫೆಸರರು ಭಾಗವಹಿಸಿದ್ದಾರೆ.


ಈ ಎಲ್ಲಾ ಸಂಗತಿಗಳನ್ನು ಗಮನಿಸಿದರೆ ಅಫ್ಘಾನಿಸ್ತಾನದ್ದು ಭೌತಿಕ ತಾಲಿಬಾನ್, ಭಾರತದ್ದು ಬೌದ್ಧಿಕ ತಾಲಿಬಾನ್ ಎನಿಸುವುದಿಲ್ಲವೇ?!


#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ

ಮದಕರಿ ನಾಯಕ

 "ಚಿತ್ರದುರ್ಗದ ಜನತೆ 'ಮದಕರಿ ನಾಯಕ' ಎಂದ ಕೂಡಲೇ ನೆನೆಸಿಕೊಳ್ಳುವುದು ಈ ಕೊನೆಯ ದೊರೆಯನ್ನೇ. ಆತನಲ್ಲದೆ ಬೇರೆ ಯಾರೂ ನೆನಪಿಗೆ ಬರುವುದಿಲ್ಲ. ಅದಕ್ಕೆ ಕಾರಣ - ಆತನ ಜೀವನದ ದುರಂತ ಮತ್ತು ಆತನ ಶೌರ್ಯ, ಸಾಹಸ, ಕ್ರೌರ್ಯ, "ಕಾಮ ಲೋಲುಪತೆ'ಯ ಬಗ್ಗೆ ಜನಜನಿತವಾಗಿರುವ ಹಲವಾರು ದಂತಕತೆಗಳು, ನಾಡಹಾಡುಗಳು."

"ಕಿರಿಯ ಮದಕರಿನಾಯಕನ ಬಗ್ಗೆ ಜನತೆಯಲ್ಲಿ ಪ್ರಚಲಿತವಾಗಿದ್ದ, ತಮಗೆ ತಿಳಿದಿದ್ದ ಕತೆಗಳನ್ನೆಲ್ಲಾ ಹೇಳಿದ ಭದ್ರಾವತಿಯ ಸಿ. ಪರುಶುರಾಮನಾಯಕರು 'ಕಡೆ ಮದಕರಿನಾಯಕ ಅತಿಸಾಹಸಿ, ಅತಿಕ್ರೂರಿ, ಅತಿಮದಾಂಧ, ಅತಿಕಾಮಿ. ಇಂಥವನ ಬಗ್ಗೆ ನೀವು ಹೇಗೆ ಬರೆಯುತ್ತೀರಿ? ಹೈದರಾಲಿ ದೈವಾಂಶಸಂಭೂತ. ಆತನಿಗೆ ಶ್ರೀರಂಗಪಟ್ಟಣದ ಶ್ರೀರಂಗನಾಥನ ಅನುಗ್ರಹವೇ ಅಲ್ಲದೆ, ದುರ್ಗದ ಶ್ರೀ ಉತ್ಸವಾಂಬೆಯೂ ಒಲಿದಿದ್ದಳು. ರಾಜಗುರುಗಳಾದ ಮರುಘರಾಜೇಂದ್ರಸ್ವಾಮಿಗಳ ಆಶೀರ್ವಾದವೂ ಹೈದರಾಲಿಗಿತ್ತು. ನಮ್ಮ ನಾಯಕ ದೈವಕೃಪೆ, ಗುರುವಿನ ಅನುಗ್ರಹ ಎರಡನ್ನೂ ಕಳೆದುಕೊಂಡ ನತದೃಷ್ಟ. ಅಂಥವನನ್ನು ನೀವು ಹೇಗೆ ಚಿತ್ರಿಸುತ್ತೀರಿ?' ಎಂದು ತಮ್ಮ ಕುತೂಹಲವನ್ನು ಸವಾಲಾಗಿಸಿ ನನ್ನ ಮುಂದಿಟ್ಟರು."
"ಮದಕರಿನಾಯಕನ ಸಾಕಷ್ಟು ಮಾಹಿತಿ ತಿಳಿದ ಟಿ. ಎನ್. ಗಂಡುಗಲಿಯೂ ಇದೇ ರಾಗವನ್ನು ಎಳೆದರು. ಚಿತ್ರದುರ್ಗದ ಇತಿಹಾಸ ರಚನೆಗೆ ಲಭ್ಯವಾಗಿರುವ ಏಕೈಕ ಆಕರ ಗ್ರಂಥ ದಿವಂಗತ ಶ್ರೀ ಎಂ. ಎಸ್. ಪುಟ್ಟಣ್ಣನವರ 'ಚಿತ್ರದುರ್ಗದ ಪಾಳೆಯಗಾರರು' ಕೂಡ ಸ್ಥೂಲವಾಗಿ ಇದೇ ಭಾವನೆಯನ್ನು ಪುಷ್ಟೀಕರಿಸಿತು.
1982ರಲ್ಲಿ ತ.ರಾ.ಸು ಅವರು ತಮ್ಮ "ದುರ್ಗಾಸ್ತಮಾನ"ದಲ್ಲಿ ಹೀಗೆ ಬರೆದಿದ್ದನ್ನು ಅಂದು ಆನೆಯ ಮೇಲೆ ಮೆರವಣಿಗೆ ಮಾಡಿದ್ದ ಜನ, ಇಂದು ರಾಗ-ದ್ವೇಷಗಳಿಂದ ಇತಿಹಾಸ ಸಂಶೋಧನೆಗಳನ್ನೇ ನಿಲ್ಲಿಸುವಷ್ಟು ಜಾತೀಯತೆಯ ವಿಷಕ್ಕೆ ಬಲಿಯಾಗಿದ್ದಾರೆ ಎಂದರೆ ದೇಶ ಎತ್ತ ಸಾಗುತ್ತಿದೆ ಎಂದು ಯೋಚಿಸಲೇಬೇಕಾದ ದುರಿತ ಕಾಲವಿದು!
ಒಟ್ಟಾರೆ, ಈ ಅಭಿಮಾನ, ಗೌರವ, ಹೆಮ್ಮೆಗೆ ಪಾತ್ರರಾದವರು ಚಿತ್ರದುರ್ಗದ ಮದಕರಿ ನಾಯಕನ ಪೂರ್ವಜ ದೊರೆಗಳೇ ಹೊರತು ಮದಕರಿನಾಯಕನಲ್ಲ ಎಂದು ತ.ರಾ.ಸು. ಅವರ ದುರ್ಗದ ಕುರಿತಾದ ಎಲ್ಲಾ ಐತಿಹಾಸಿಕ ಕಾದಂಬರಿಗಳನ್ನು ಓದಿದಾಗ ಅರಿವಾಗುತ್ತದೆ. ನಿಸ್ಸಂಶಯವಾಗಿ ಮದಕರಿನಾಯಕ ಒಬ್ಬ ನತದೃಷ್ಟ ದುರಂತ ನಾಯಕ!
ಮೇಲಿನ ಮೂರನೇ ಪ್ಯಾರಾದಲ್ಲಿರುವ ಗಂಡುಗಲಿಯವರು ದುರ್ಗದ ನಾಯಕರ ವಂಶಜರು ಎಂಬುದು ಗಮನಾರ್ಹ ಸಂಗತಿ! ಅವರಲ್ಲಿಯೂ ತಮ್ಮ ವಂಶದ ಮದಕರಿಯ ಮುನ್ನಾ ಪೂರ್ವಜರ ಬಗ್ಗೆ ಅಭಿಮಾನ ಹೆಮ್ಮೆ ಮತ್ತು ಮದಕರಿನಾಯಕನ ಕುರಿತಾದ ಸತ್ಯ ಸಂಗತಿಯ ಬಗ್ಗೆ ಕಳಕಳಿಯಿತ್ತೇ ಹೊರತು ಹುಸಿ ಪ್ರೌಢಿಮೆಯಲ್ಲ ಎಂಬುದು ಮತ್ತಷ್ಟು ಕಳಕಳಿಯ ಸಂಗತಿ.
ಕೇವಲ ಜಾತಿಯಿಂದ ಮದಕರಿನಾಯಕನನ್ನು ಬಲ್ಲ ಇಂದಿನ ಯುವಪೀಳಿಗೆ ಇತಿಹಾಸವನ್ನು ಅರಿಯಲು ಕಿಂಚಿತ್ತೂ ಆಸಕ್ತಿ ತೋರದೆ ಕಾಲರ್ ಎತ್ತಿ "ಜಾತಿಮದ-ಕರಿ"ಗಳಾಗಿರುವುದು ಭಾರತದ ಪ್ರಗತಿಯ ಸಂಕೇತ! ಅಫ್ಘಾನಿಸ್ತಾನದ ತಾಲಿಬಾನಿ ಪ್ರಗತಿ ಎನಿಸಿದರೆ ಅದು ನಮ್ಮ ದೃಷ್ಟಿ ದೋಷ. ಪೆಟ್ಟಿಗೆ ಸಿದ್ದೇಶ್ವರನು ಇನ್ನೂ ಪೆಟ್ಟಿಗೆ ಬಿಟ್ಟು ಹೊರಬರಲು ಇದು ತಕ್ಕ ಸಮಯವಲ್ಲ, ಇಂದಿನ ಮಾಹಿತಿ ತಂತ್ರಜ್ಞಾನದ ಇಪ್ಪತ್ತೊಂದನೇ ಶತಮಾನದಲ್ಲೂ!
ಅಷ್ಟೇ ಅಲ್ಲದೆ ಎಸ್ಪಿ ಮತ್ತು ಸೈಬರ್ ಕ್ರೈಮ್ ಸರ್ಕಲ್ ಇನ್ಸ್ಪೆಕ್ಟರ್ ನಮ್ಮ ಜಾತಿಯವರೆ ಎಂಬ ಗೊಡ್ಡು ಬೆದರಿಕೆ ಪ್ರಪಂಚದ ಬಹುದೊಡ್ಡ ಪ್ರಜಾಪ್ರಭುತ್ವದಲ್ಲಿ!

ಸಮಾಜವಾದಿ_ಕಂಡ_ಪ್ರಜಾಪ್ರಭುತ್ವದ_ಕನಸು

 #ಸಮಾಜವಾದಿ_ಕಂಡ_ಪ್ರಜಾಪ್ರಭುತ್ವದ_ಕನಸು!!


#ರವಿ_ಹಂಜ್ ಅವರ ಪ್ರವಾಸ ಕಥನ #ಅಗಣಿತ_ಅಲೆಮಾರಿ


ಕನ್ನಡ ಸಾಹಿತ್ಯದಲ್ಲಿ ಪ್ರವಾಸ ಸಾಹಿತ್ಯ ಪ್ರಕಾರಕ್ಕೆ ದೊಡ್ಡ ಇತಿಹಾಸವೇ ಇದೆ. ನಮ್ಮದಲ್ಲದ ನೆಲ, ಜಲ, ಸಂಸ್ಕೃತಿ ಮತ್ತು ಜನಪದಗಳ ನಿಕಟ ದರ್ಶನ ಮಾಡಿಸುವ ಪ್ರವಾಸ ಕೃತಿಗಳು ಹೇರಳವಲ್ಲದಿದ್ದರೂ ಅಲ್ಪ ಸಂಖ್ಯೆಯಲ್ಲೇ ಗಮನಾರ್ಹ. ಧಾರ್ಮಿಕ ಮನೋಭಾವದ ಭಾರತೀಯರಿಗೆ ತೀರ್ಥಯಾತ್ರೆಯೇ ಪ್ರವಾಸ ಎನ್ನಿಸುವುದರಿಂದ ಹಲವು ಅಂತರ್ ರಾಜ್ಯ, ಅಂತರ್ ದೇಶೀಯ ಪ್ರವಾಸಗಳಲ್ಲಿ ಬಹುತೇಕ ಗುಡಿ ಗುಂಡಾರಗಳ ವಿವರಗಳೇ ಹೆಚ್ಚು. ಅವನ್ನು ಹೊರತುಪಡಿಸಿದರೆ ಕನ್ನಡಕ್ಕೆ ದಕ್ಕಿದ ಹೊರ ದೇಶದ ಪ್ರವಾಸ ಕಥನವೆಂದರೆ ಅದು 'ಅಮೇರಿಕೆ'ಯ ಕುರಿತದ್ದು. ಅಮೇರಿಕೆಯ ಬಗ್ಗೆ ಮೂರು ತಲೆಮಾರುಗಳ ಪ್ರವಾಸಾನುಭವ ಮತ್ತು ಗ್ರಹಿಕೆ ಲಭ್ಯವಿವೆ. ಗೊರೂರು ರಾಮಸ್ವಾಮಿ ಅಯ್ಯಂಗಾರ್, ಪ್ರಭುಶಂಕರ, ಮೂರ್ತಿ ರಾಯರು, ಕೃಷ್ಣಾನಂದ ಕಾಮತರಿಂದ ಮೊದಲ್ಗೊಂಡು ಈಚಿನ ವರೆಗಿನ ಪ್ರವಾಸ ಕಥನಗಳು ಅಮೇರಿಕದ ವಾಸ್ತು ಬೆರಗು, ವಾಹನ ದಟ್ಟಣೆ, ನಯಾಗರ ಜಲಪಾತದಂತಹ ಬೆರಗುಗಳನ್ನು ಪರಿಚಯಿಸಿವೆ. ಈ ಸಾಫ್ಟ್‌ವೇರ್ ಕಾಲದಲ್ಲಿ ಭಾರತದ ಕಿರಿಯ ತಲೆಮಾರು ಅಮೇರಿಕೆಯನ್ನು ತಮ್ಮ ಔದ್ಯೋಗಿಕ ಆಡುಂಬೊಲ ಮಾಡಿಕೊಂಡಿರುವಾಗ ಅವರ ಬಸಿರು ಬಾಣಂತನಗಳ ಭಾರತೀಯತೆಗಾಗಿ ಅಮೇರಿಕೆಯನ್ನು ಎಡತಾಕುವ ಅವರ ಅಪ್ಪಮ್ಮಂದಿರು ತಮ್ಮ ಪ್ರವಾಸಾನುಭವಗಳನ್ನು ದಾಖಲಿಸಿರುವುದು ಅತ್ಯಲ್ಪ!


ಧಾರ್ಮಿಕ ಕಾರಣಗಳಿಲ್ಲದ ಒಳ ನಾಡಿನ ಪ್ರವಾಸ ಕಥನಗಳನ್ನು ಅಕಾಡೆಮಿಗಳು ಸಾಂಸ್ಕೃತಿಕ ಅನುಸಂಧಾನದ ನೆಲೆಯಲ್ಲಿ ಪ್ರೋತ್ಸಾಹಿಸಿದ್ದರೂ ಅವು ದಿನಚರಿಗಳ ದಾಖಲೀಕರಣವಾಗಿರುವುದೇ ಹೆಚ್ಚು! ಶೈಕ್ಷಣಿಕ ಮತ್ತು ಸಮಾಜಶಾಸ್ತ್ರೀಯ ಅಧ್ಯಯನದಂತೆ ಭಾಸವಾಗುವ ರಹಮತ್ ತರೀಕೆಯವರ 'ನಾಡ ಸುತ್ತಾಟ'ದಂತಹ ಗ್ರಹಿಕೆಗಳು ಅತ್ಯಪರೂಪ. ಇಂತಹ ಕೃತಿಗಳಲ್ಲಿಯೂ ಧಾರ್ಮಿಕ ಪ್ರತ್ಯೇಕತೆಯ ಕಾರಣದಿಂದ  ಒಳ ಹೋಗಲಾಗದ, ಮುಕ್ತವಾಗಿ ಗ್ರಹಿಸಿಯೂ ಢಾಳಾಗಿ ವ್ಯಕ್ತಪಡಿಸಲಾಗದ ಸಹಜ ಹಿಂಜರಿಕೆಗಳಿಂದ ವಾಸ್ತವದ ದಾಖಲೀಕರಣ ತೀರಾ ವಿರಳ.


ಇಂತಹ ದುರ್ಲಭಗಳ ಕಾಲದಲ್ಲಿ ಥಟ್ಟನೇ ಗಮನ ಸೆಳೆದು ಗಬಕ್ಕನೇ ಓದಿಸಿಕೊಂಡದ್ದು #ರವಿ_ಹಂಜ್ ಅವರ #ಅಗಣಿತ_ಅಲೆಮಾರಿ ಕೃತಿ. ಈಗಾಗಲೇ ಚೀನಿ ಪ್ರವಾಸಿ ಹುಯೆನತ್ಸಾಂಗನ ಮಹಾ ಪ್ರವಾಸದ ಬಗ್ಗೆ ಬರೆದು ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಗುರುತಿಸಲ್ಪಟ್ಟ ರವಿ ಹಂಜ್ ಮೂಲತಃ ಕನ್ನಡದವರು, ನಮ್ಮವರು ಅಷ್ಟೇ ಅಲ್ಲ ನನ್ನ ಊರು ದಾವಣಗೆರೆಯವರು. ಭಾರತದಿಂದ ಮಾನಸಿಕವಾಗಿಯೂ ಸುದೂರದಲ್ಲಿ ನಿಂತು ದೇಶದ ವರ್ತಮಾನವನ್ನು ನಿರಂತರ ಗಮನಿಸಿ ಪ್ರತಿಕ್ರಿಯಿಸುವ ಅವರು ಉಪಯೋಗಿಸುವ 'ಹುಚ್ಚಾಸ್ಪತ್ರೆ' ಮತ್ತು 'ಕಮಂಗೀಪುರ' ಎಂಬ ಹ್ಯಾಷ್ ಟ್ಯಾಗ್ ಗಳ ಬಗ್ಗೆ ತಕರಾರು ತೆಗೆದೇ ಜಗಳವಾಡುತ್ತಾ ಸ್ನೇಹಿತನಾದವನು ನಾನು.‌ ಅವರು ಬಳಸುವ ಹ್ಯಾಷ್ ಟ್ಯಾಗಿನ ಸಕಾರಣ ಈ ಕೃತಿಯಲ್ಲಿ ಲಭ್ಯವಿದೆ!


ತನ್ನನ್ನೇ ತಾನು ದೂರ ನಿಂತು ನೋಡುವ ತಂತ್ರವಾಗಿ ಎ ಕೆ ರಾಮಾನುಜನ್ನರ ಆತ್ಮ ಕತೆ "ಮತ್ತೊಬ್ಬನ ಆತ್ಮ ಕತೆ" ಪರಿಚಯವಿರುವ ಕನ್ನಡಕ್ಕೆ ಅಂತಹುದೇ ತಂತ್ರದ ಪ್ರವಾಸ ಕಥನವನ್ನು ರವಿ ಕೊಟ್ಟಿದ್ದಾರೆ.‌ ಇದು ರವಿಯವರೇ ಬರೆದ ಕಥನವಾದರೂ ಇದರ ನಿರೂಪಕ "ವೂಶಿಯಾನ್ ಡಿ ಲ್ಯುಲಾಂಗ್ಟ" ಎಂಬ ಚೀನಿ! ಹಾಗಾಗಿ ಈ ಕಥನದಲ್ಲಿ ಸಹ ಪ್ರವಾಸಿಯಾಗಿರುವ ರವಿಯವರಿಗೆ ಮುಕ್ತವಾಗಿ ಗ್ರಹಿಸುವ, ಯಾವುದೇ ಹಿಂಜರಿಕೆಯಿಲ್ಲದೇ ಮಾತುಗಳನ್ನು ದಾಖಲಿಸುವ ಅವಕಾಶವೊಂದು ತಾನೇ ತಾನಾಗಿ ಲಭ್ಯವಾಗಿದೆ!


ಕಮ್ಯುನಿಸ್ಟ್ ಆಡಳಿತದ ಮತ್ತು ಮಾವೋ ಅವರ ಸಾಂಸ್ಕೃತಿಕ ಕ್ರಾಂತಿಯ ದಿನಗಳ ಚೀನಾದಲ್ಲಿ ಬೆಳೆದ ಈ ಕೃತಿಯ ನಿರೂಪಕ ವೂಶಿಯಾನ್…… ಯಾನೆ ಲೀ, ಅನಿವಾಸಿ ಭಾರತೀಯ ರವಿ ಮತ್ತಿವರ ಅಮೇರಿಕನ್ ಗೆಳೆಯ ಫ್ರ್ಯಾಂಕ್ ಮೂವರೂ ಭಿನ್ನ ಪ್ರದೇಶ ಮತ್ತು ಸಂಸ್ಕೃತಿಯ ಹಿನ್ನೆಲೆಯಿಂದ ಬಂದವರಾದರೂ ಮೂವರು ಸಮಾಜವಾದಿಗಳು. ಮದ್ಯ, ಮಾಂಸ, ಮತ್ಸ್ಯ, ಮಾನಿನಿ ಮತ್ತು ಮೈಥುನಗಳಂತಹ ಪಂಚ'ಮ'ಗಳ ಬಗ್ಗೆ ಸಮಾನಾಸಕ್ತಿ ಹೊಂದಿರುವ ಇವರೆಲ್ಲಾ ಎಕ್ಸಾಟಿಕ್ ಮತ್ತು ಎರೋಟಿಕ್ ಗಳಲ್ಲೇ ಕಳೆದು ಹೋಗದೇ ರವಿಯ ಆಸಕ್ತಿ ಮತ್ತು ಕುತೂಹಲವಾದ ಹುಯೆನತ್ಸಾಂಗನ ಮಹಾ ಪ್ರವಾಸದ ನೆಲೆಗಳನ್ನು ಸಂದರ್ಶಿಸಲು ಬಯಸುವುದೇ ಈ ಪ್ರವಾಸಕ್ಕೆ ಕಾರಣ.‌


ವರ್ಗ ಹಿತಾಸಕ್ತಿಯ ಅಪ್ಲೈಡ್ ರಾಜಕೀಯ ಅರ್ಥಶಾಸ್ತ್ರವಾದ ಮಾರ್ಕ್ಸ್ ವಾದವನ್ನು ಸಾಮಾಜಿಕವಾಗಿ ಅನುಷ್ಠಾನಗೊಳಿಸುವಲ್ಲಿ ಆದ ತೊಡಕುಗಳು, ಅದರಿಂದಾದ ನಷ್ಟಗಳು, ಸಾಮಾಜಿಕ ಬದುಕಿನ ನಂಬುಗೆ, ರೀತಿ ರಿವಾಜುಗಳ ನೆಲೆ ಹಿನ್ನೆಲೆ, ತನ್ನ ಕರ್ಮಠತೆಯನ್ನು ಕಳಚಿಕೊಂಡು ಬೃಹತ್ ಉತ್ಪಾದಕ ದೇಶವಾಗಿ ಬದಲಾದ ಚೀನಾದ ಈಗಿನ ಪರಿ,.... ರಾಜಕೀಯ ಸ್ವಾತಂತ್ರ್ಯ ಸಿಕ್ಕರೂ ಮೂಲ ಗಣತಂತ್ರದಿಂದ ದೂರವಾದ ಫ್ಯೂಡಲ್ ಪ್ರಜಾಪ್ರಭುತ್ವದ ಪರಿ, ಎರಡೂ ಸಿದ್ಧಾಂತಗಳ ನೆರವಿನಿಂದ ನಡೆಯುತ್ತಿರುವ ಸರ್ವಾಧಿಕಾರದ ರಾಜಕೀಯ…. ಧಾರ್ಮಿಕ ನಂಬುಗೆ ಮತ್ತು ಭಾವುಕತೆಗಳನ್ನೇ ಉಪಯೋಗಿಸಿಕೊಂಡು ದೋಚುವ ಸಾಮಾಜಿಕ ಹುನ್ನಾರಗಳು, ಭಾರತದಲ್ಲಿ ಸರ್ವಮಾನ್ಯವಾಗಿರುವ ಭ್ರಷ್ಟಾಚಾರ, ಲೈಂಗಿಕ ಶಿಕ್ಷಣದ ಕೊರತೆ ಮತ್ತು ಜನಸಂಖ್ಯಾ ಸ್ಪೋಟ….. ಎಷ್ಟೆಲ್ಲಾ ನೆಲೆಗಳನ್ನು ದರ್ಶಿಸಿ ಪರಿಚಯಿಸಿದೆ ಈ ಪ್ರವಾಸ ಕಥನ!!!


ನವಿರು ಹಾಸ್ಯದ ಪ್ರಬಂಧದಂತಿರುವ ನಿರೂಪಣೆ, ಮುಚ್ಚು ಮರೆ ಇಲ್ಲದ ಮುಕ್ತತೆಯ ಅಭಿವ್ಯಕ್ತಿ, ಹಿಂಜರಿಕೆಯಿಲ್ಲದೆ ಮುಖವಾಡ ಧರಿಸದೇ ವ್ಯಕ್ತವಾಗುವ ಖಾಸಗಿ ಅನುಭವಗಳು ಈ ಪ್ರವಾಸ ಕಥನವನ್ನು ಮತ್ತೆ ಮತ್ತೆ ಓದುವಂತೆ, ಚಿಂತಿಸುವಂತೆ ಮಾಡಿದೆ. ಸನಾತನತೆಯ ಯಥಾ ಸ್ಥಿತಿವಾದಿಗಳಿಗೆ ಮಾತ್ರ'ಮಜಾವಾದ'ದಂತೆ ಕಾಣಿಸುವ, ಈ ಸಮಾಜವಾದಿಯ ಪ್ರಜಾಪ್ರಭುತ್ವದ ಕನಸು ನಮ್ಮೊಳಗೂ ಮೊಳಕೆಯೊಡೆಯುವುದೇ ವಿಸ್ಮಯ!

ಡಾ. ಆನಂದ್ ಋಗ್ವೇದಿ

ದಾವಣಗೆರೆ

ನಾಳೆ ಯಾರಿಗೆ ಬೇಕು, ರಾತ್ರಿ ಇನ್ನೂ ಇದೆ!

 

ಇದು ಮತ್ತೊಂದು ಖ್ಯಾತ ಸಾಫ್ಟ್ ರಾಕ್ ಹಾಡಿನ ಅನುವಾದ. ಮೂಲ ಯಾವುದೆಂದು ಹೇಳಿ ನೋಡೋಣ.

ಗೊತ್ತು ಸಮಯವಾಗಿಹುದೆಂದು ನೀನು ದಣಿದಿರುವೆಯೆಂದು. 

ಗೊತ್ತು ನಿನ್ನ ಆಲೋಚನೆಗಳಲ್ಲಿ ನಾನಿಲ್ಲವೆಂದು! ಆದರೂ ಇದ್ದೇವೆ ಜೊತೆಯಾಗಿ ನಾವಿನ್ನೂ ಇಲ್ಲಿ,  ಪರಸ್ಪರ ಏಕಾಂಗಿಯಾಗಿ ಎಲ್ಲರಿಂದ ಎಲ್ಲದರಿಂದ ದೂರವಿರುವ ತಾಣವು ಇದೆಂದು.

ಚಿಂತಿಸದಿರು ಹುಡುಗಿ, ಯಾರೂ ಚಿಂತಿಸರು ನಾವು ಎಲ್ಲೆಂದು!

ನಾಳೆ ಯಾರಿಗೆ ಬೇಕು, ರಾತ್ರಿ ಇನ್ನೂ ಇದೆ, ಮತ್ತದು ನಮ್ಮದೇ ಗೆಳತಿ! 

ಆಗಸದೆ ತುಂಬು ನಕ್ಷತ್ರಗಳ ನೋಡುತ್ತ ಇರಲಾರೆಯಾ ತೋರುತ್ತ ಪ್ರೀತಿ?

ಅಂತರಾಳದೆ ನಾನು ಸದಾ ಒಂಟಿಯಾಗಿರುವೆ

ಭರವಸೆಗಳ ಸವೆಸುತ್ತ ಪ್ರೀತಿಯ ಹುಡುಕುತ್ತ.

ಹೌದು ಹುಡುಕುತ್ತಲೇ ಇರುವೆ ಮತ್ತದನು ನಾಳೆ

ಇಂದು ನೀ ಸಿಕ್ಕಿದರೂ, ಚಂಚಲನು ನಾ ಬಾಲೆ.

ಇಗೋ ಹೇಳುವುದ ಹೇಳಿದ್ದೇನೆ, ನೀನೇನ ಹೇಳ್ವೆ!

ನಾಳೆ ಯಾರಿಗೆ ಬೇಕು, ರಾತ್ರಿ ಇನ್ನೂ ಇದೆ, ಮತ್ತದು ನಮ್ಮದೇ ಗೆಳತಿ! 

ಆಗಸದೆ ತುಂಬು ನಕ್ಷತ್ರಗಳ ನೋಡುತ್ತ

ಸವೆಸಲಾರೆಯಾ ಹುಡುಗಿ ಇಂದಿನ ಸಹಬಾಳ್ವೆ!

ಗೊತ್ತು ಸಮಯವಾಗಿಹುದೆಂದು ನೀನು ದಣಿದಿರುವೆಯೆಂದು. ಗೊತ್ತು ನಿನ್ನ ಆಲೋಚನೆಗಳಲ್ಲಿ ನಾನಿಲ್ಲವೆಂದು, ಆದರೂ ಇದ್ದೇವೆ ನಾವಿನ್ನು ಇಲ್ಲಿ ಜೊತೆಯಾಗಿ ಪರಸ್ಪರ ಏಕಾಂಗಿಯಾಗಿ!

ನಾಳೆ ಯಾರಿಗೆ ಬೇಕು, ರಾತ್ರಿ ಇನ್ನೂ ಇದೆ,

ಮತ್ತದು ನಮ್ಮದೇ ಗೆಳತಿ!

ಕೈ ಹಿಡಿದು ಬಾ ಗೆಳತಿ ಅದನು ಅನಂತವಾಗಿಸೋಣ ದೀಪವಾರಿಸಿ ನಕ್ಷತ್ರಗಳಡಿ ಪ್ರೀತಿ ಬೆಳೆಸೋಣ

ಭರವಸೆಗಳ ಜೊತೆಯಾಗಿ ಸವೆಸೋಣ!

ಭಾವಾನುವಾದ: ರವಿ ಹಂಜ್