"ಚಿತ್ರದುರ್ಗದ ಜನತೆ 'ಮದಕರಿ ನಾಯಕ' ಎಂದ ಕೂಡಲೇ ನೆನೆಸಿಕೊಳ್ಳುವುದು ಈ ಕೊನೆಯ ದೊರೆಯನ್ನೇ. ಆತನಲ್ಲದೆ ಬೇರೆ ಯಾರೂ ನೆನಪಿಗೆ ಬರುವುದಿಲ್ಲ. ಅದಕ್ಕೆ ಕಾರಣ - ಆತನ ಜೀವನದ ದುರಂತ ಮತ್ತು ಆತನ ಶೌರ್ಯ, ಸಾಹಸ, ಕ್ರೌರ್ಯ, "ಕಾಮ ಲೋಲುಪತೆ'ಯ ಬಗ್ಗೆ ಜನಜನಿತವಾಗಿರುವ ಹಲವಾರು ದಂತಕತೆಗಳು, ನಾಡಹಾಡುಗಳು."
"ಕಿರಿಯ ಮದಕರಿನಾಯಕನ ಬಗ್ಗೆ ಜನತೆಯಲ್ಲಿ ಪ್ರಚಲಿತವಾಗಿದ್ದ, ತಮಗೆ ತಿಳಿದಿದ್ದ ಕತೆಗಳನ್ನೆಲ್ಲಾ ಹೇಳಿದ ಭದ್ರಾವತಿಯ ಸಿ. ಪರುಶುರಾಮನಾಯಕರು 'ಕಡೆ ಮದಕರಿನಾಯಕ ಅತಿಸಾಹಸಿ, ಅತಿಕ್ರೂರಿ, ಅತಿಮದಾಂಧ, ಅತಿಕಾಮಿ. ಇಂಥವನ ಬಗ್ಗೆ ನೀವು ಹೇಗೆ ಬರೆಯುತ್ತೀರಿ? ಹೈದರಾಲಿ ದೈವಾಂಶಸಂಭೂತ. ಆತನಿಗೆ ಶ್ರೀರಂಗಪಟ್ಟಣದ ಶ್ರೀರಂಗನಾಥನ ಅನುಗ್ರಹವೇ ಅಲ್ಲದೆ, ದುರ್ಗದ ಶ್ರೀ ಉತ್ಸವಾಂಬೆಯೂ ಒಲಿದಿದ್ದಳು. ರಾಜಗುರುಗಳಾದ ಮರುಘರಾಜೇಂದ್ರಸ್ವಾಮಿಗಳ ಆಶೀರ್ವಾದವೂ ಹೈದರಾಲಿಗಿತ್ತು. ನಮ್ಮ ನಾಯಕ ದೈವಕೃಪೆ, ಗುರುವಿನ ಅನುಗ್ರಹ ಎರಡನ್ನೂ ಕಳೆದುಕೊಂಡ ನತದೃಷ್ಟ. ಅಂಥವನನ್ನು ನೀವು ಹೇಗೆ ಚಿತ್ರಿಸುತ್ತೀರಿ?' ಎಂದು ತಮ್ಮ ಕುತೂಹಲವನ್ನು ಸವಾಲಾಗಿಸಿ ನನ್ನ ಮುಂದಿಟ್ಟರು."
"ಮದಕರಿನಾಯಕನ ಸಾಕಷ್ಟು ಮಾಹಿತಿ ತಿಳಿದ ಟಿ. ಎನ್. ಗಂಡುಗಲಿಯೂ ಇದೇ ರಾಗವನ್ನು ಎಳೆದರು. ಚಿತ್ರದುರ್ಗದ ಇತಿಹಾಸ ರಚನೆಗೆ ಲಭ್ಯವಾಗಿರುವ ಏಕೈಕ ಆಕರ ಗ್ರಂಥ ದಿವಂಗತ ಶ್ರೀ ಎಂ. ಎಸ್. ಪುಟ್ಟಣ್ಣನವರ 'ಚಿತ್ರದುರ್ಗದ ಪಾಳೆಯಗಾರರು' ಕೂಡ ಸ್ಥೂಲವಾಗಿ ಇದೇ ಭಾವನೆಯನ್ನು ಪುಷ್ಟೀಕರಿಸಿತು.
1982ರಲ್ಲಿ ತ.ರಾ.ಸು ಅವರು ತಮ್ಮ "ದುರ್ಗಾಸ್ತಮಾನ"ದಲ್ಲಿ ಹೀಗೆ ಬರೆದಿದ್ದನ್ನು ಅಂದು ಆನೆಯ ಮೇಲೆ ಮೆರವಣಿಗೆ ಮಾಡಿದ್ದ ಜನ, ಇಂದು ರಾಗ-ದ್ವೇಷಗಳಿಂದ ಇತಿಹಾಸ ಸಂಶೋಧನೆಗಳನ್ನೇ ನಿಲ್ಲಿಸುವಷ್ಟು ಜಾತೀಯತೆಯ ವಿಷಕ್ಕೆ ಬಲಿಯಾಗಿದ್ದಾರೆ ಎಂದರೆ ದೇಶ ಎತ್ತ ಸಾಗುತ್ತಿದೆ ಎಂದು ಯೋಚಿಸಲೇಬೇಕಾದ ದುರಿತ ಕಾಲವಿದು!
ಒಟ್ಟಾರೆ, ಈ ಅಭಿಮಾನ, ಗೌರವ, ಹೆಮ್ಮೆಗೆ ಪಾತ್ರರಾದವರು ಚಿತ್ರದುರ್ಗದ ಮದಕರಿ ನಾಯಕನ ಪೂರ್ವಜ ದೊರೆಗಳೇ ಹೊರತು ಮದಕರಿನಾಯಕನಲ್ಲ ಎಂದು ತ.ರಾ.ಸು. ಅವರ ದುರ್ಗದ ಕುರಿತಾದ ಎಲ್ಲಾ ಐತಿಹಾಸಿಕ ಕಾದಂಬರಿಗಳನ್ನು ಓದಿದಾಗ ಅರಿವಾಗುತ್ತದೆ. ನಿಸ್ಸಂಶಯವಾಗಿ ಮದಕರಿನಾಯಕ ಒಬ್ಬ ನತದೃಷ್ಟ ದುರಂತ ನಾಯಕ!
ಮೇಲಿನ ಮೂರನೇ ಪ್ಯಾರಾದಲ್ಲಿರುವ ಗಂಡುಗಲಿಯವರು ದುರ್ಗದ ನಾಯಕರ ವಂಶಜರು ಎಂಬುದು ಗಮನಾರ್ಹ ಸಂಗತಿ! ಅವರಲ್ಲಿಯೂ ತಮ್ಮ ವಂಶದ ಮದಕರಿಯ ಮುನ್ನಾ ಪೂರ್ವಜರ ಬಗ್ಗೆ ಅಭಿಮಾನ ಹೆಮ್ಮೆ ಮತ್ತು ಮದಕರಿನಾಯಕನ ಕುರಿತಾದ ಸತ್ಯ ಸಂಗತಿಯ ಬಗ್ಗೆ ಕಳಕಳಿಯಿತ್ತೇ ಹೊರತು ಹುಸಿ ಪ್ರೌಢಿಮೆಯಲ್ಲ ಎಂಬುದು ಮತ್ತಷ್ಟು ಕಳಕಳಿಯ ಸಂಗತಿ.
ಕೇವಲ ಜಾತಿಯಿಂದ ಮದಕರಿನಾಯಕನನ್ನು ಬಲ್ಲ ಇಂದಿನ ಯುವಪೀಳಿಗೆ ಇತಿಹಾಸವನ್ನು ಅರಿಯಲು ಕಿಂಚಿತ್ತೂ ಆಸಕ್ತಿ ತೋರದೆ ಕಾಲರ್ ಎತ್ತಿ "ಜಾತಿಮದ-ಕರಿ"ಗಳಾಗಿರುವುದು ಭಾರತದ ಪ್ರಗತಿಯ ಸಂಕೇತ! ಅಫ್ಘಾನಿಸ್ತಾನದ ತಾಲಿಬಾನಿ ಪ್ರಗತಿ ಎನಿಸಿದರೆ ಅದು ನಮ್ಮ ದೃಷ್ಟಿ ದೋಷ. ಪೆಟ್ಟಿಗೆ ಸಿದ್ದೇಶ್ವರನು ಇನ್ನೂ ಪೆಟ್ಟಿಗೆ ಬಿಟ್ಟು ಹೊರಬರಲು ಇದು ತಕ್ಕ ಸಮಯವಲ್ಲ, ಇಂದಿನ ಮಾಹಿತಿ ತಂತ್ರಜ್ಞಾನದ ಇಪ್ಪತ್ತೊಂದನೇ ಶತಮಾನದಲ್ಲೂ!
ಅಷ್ಟೇ ಅಲ್ಲದೆ ಎಸ್ಪಿ ಮತ್ತು ಸೈಬರ್ ಕ್ರೈಮ್ ಸರ್ಕಲ್ ಇನ್ಸ್ಪೆಕ್ಟರ್ ನಮ್ಮ ಜಾತಿಯವರೆ ಎಂಬ ಗೊಡ್ಡು ಬೆದರಿಕೆ ಪ್ರಪಂಚದ ಬಹುದೊಡ್ಡ ಪ್ರಜಾಪ್ರಭುತ್ವದಲ್ಲಿ!
No comments:
Post a Comment