ಓ'ಹೇರ್!

 ಓ'ಹೇರ್ ಎಂಬುದು ನನ್ನ ಇನ್ನೊಂದು ಮನೆಯೇ ಆಗಿದ್ದ ಶಿಕಾಗೋದ ವಿಮಾನ ನಿಲ್ದಾಣ. ಕನ್ನಡದ ಬಹುಪಾಲು ಅಗ್ರ ಸಾಹಿತಿಗಳು ತಮ್ಮ ಮಕ್ಕಳ ಬಾಣಂತನ ಮಾಡಲು, ಮೊಮ್ಮಕ್ಕಳ ಆಡಿಸಲು ಬಂದವರು ತಮ್ಮ ಬ(ಕೆ)ರೆಯುವ instinct ಅನ್ನು ತಡೆದುಕೊಳ್ಳಲಾಗದೆ ಇದನ್ನು "ಒಹಾರೆ" ಎಂದು ಬಣ್ಣಿಸಿ ನಾನಿದನ್ನು ಓ'ಹೇರ್ ಎಂದರೆ "ಏಯ್, ಇವನ್ಯಾವನ್ಲಾ 'ಶಾ' ನನ್ಮಗ ಇದನ್ನ 'ಶಾ' ಅಂತವ್ನೆ!" ಎಂದು ಸಮಸ್ತ ಕನ್ನಡಿಗರೂ ಕೆಕ್ಕರಿಸಿ ತಮ್ಮ ಒಂದೊಂದು ಹೇರ್ ಕಿತ್ತು ಅಕ್ಷರಶಃ ನನ್ನನ್ನು ನಿವಾಳಿಸಿ ಒಗೆಯುವಂತೆ ಮಾಡಿಬಿಟ್ಟಿದ್ದಾರೆ.


ಇರಲಿ, ಏರ್ ಫೋರ್ಸಿನ ಧೀರನ ಹೆಸರು ಹೊತ್ತ ಇದು ಒಂದೊಮ್ಮೆ ವಿಶ್ವದ ಅತಿ ದೊಡ್ಡ ಮತ್ತು ಅತ್ಯಂತ ವಿಮಾನ-ನಿಭಿಡ ವಿಮಾನ ನಿಲ್ದಾಣವಾಗಿತ್ತು. ಈಗ ಆ ದಾಖಲಾತಿಗೆ ಪೈಪೋಟಿಗಳು ಇವೆ. ಎಲ್ಲರೂ ಅವರವರ ದೇಶದ್ದೇ ಅಥವಾ ಪಟ್ಟಣದ್ದೇ ಘನವಾದದ್ದು ಎನ್ನುತ್ತಾರೆ. ನಾನು ಆಕಾಶ-ಭೂಮಿಗಳ ಒಂದು ಮಾಡುವಂತೆ ವಿಮಾನಗಳಲ್ಲಿ ಕುಳಿತು ಮತ್ತು ನನ್ನ ಮನೆಯ ಹಿಂಭಾಗ ಕುಳಿತು ಆಕಾಶದಲ್ಲಿ ಒಂದರ ಹಿಂದೆ ಒಂದರಂತೆ ನಿಮಿಷಕ್ಕೊಂದು ವಿಮಾನಗಳು ಓ'ಹೇರ್ ಅತ್ತ ಸಾಗುವುದನ್ನು ನೋಡಿ ಇದು ನನ್ನ ಅತ್ಯಂತ ನಿಭಿಡ ಏರ್ ಪೋರ್ಟ್ ಎಂದು ಹೆಮ್ಮೆಯಲ್ಲದೆ ಸಾಕಷ್ಟು ಗರ್ವ ಪಡುತ್ತಿದ್ದೆ. 


ಪ್ರತಿ ಸೋಮವಾರ ಬೆಳಗಿನ ಜಾವ ಇಲ್ಲಿಂದ ಎಲ್ಲೆಲ್ಲಿಗೋ ಹಾರಿ ಮತ್ತು ಪ್ರತಿ ಗುರುವಾರ ದಶಕಗಳ ಕಾಲ ಶಂಭೂಲಿಂಗನ ವೃತದಂತೆ ಬಂದಿಳಿಯುತ್ತಿದ್ದೆ. ಪ್ರತಿ ಸೋಮವಾರ ನನ್ನ ಫ್ಲೈಟಿನ ಕೇವಲ ಒಂದು ಗಂಟೆ ಮುಂಚೆ ಮನೆ ಬಿಟ್ಟು ವಿಮಾನ ಬಾಗಿಲು ಮುಚ್ಚುವ ಮುನ್ನ ಎಲ್ಲಾ ಅಡೆತಡೆಗಳನ್ನು ನಿವಾರಿಸಿ ಒಳ ಸೇರುತ್ತಿದ್ದೆ. ಅಷ್ಟೊಂದು ದಕ್ಷ ಏರ್ ಪೋರ್ಟ್ ಇದಾಗಿತ್ತು, ಈವರೆಗೆ ಒಮ್ಮೆಯೂ ಫ್ಲೈಟ್ ಮಿಸ್ ಮಾಡಿಲ್ಲ ಎಂಬುದು ನನ್ನ ವೈಯಕ್ತಿಕ ದಾಖಲೆ! ಹಾಗೆಯೇ ಗುರುವಾರಗಳಂದು ಇಳಿದ ಐದೇ ನಿಮಿಷದಲ್ಲಿ ಏರ್ ಪೋರ್ಟಿನಿಂದ ಹೊರಬಿದ್ದು ಲಿಮೋ ಹತ್ತಿ ಇಪ್ಪತ್ತೈದು ನಿಮಿಷಗಳಲ್ಲಿ ಮನೆ ಸೇರುತ್ತಿದ್ದೆ. ಅಷ್ಟೊಂದು ದಕ್ಷ ಈ ವ್ಯವಸ್ಥೆ. ಬಹುಶಃ ಜ್ಯಾಕ್ ವೆಲ್ಚ್ ನ ದಕ್ಷತೆಯ ಬ್ಲ್ಯಾಕ್ ಬೆಲ್ಟ್ ದಾಟಿ ಇನ್ಯಾವುದೋ ಬೆಲ್ಟ್ ಪಡೆದಿದೆ ಏನೋ ಈ ಓ'ಹೇರ್!!


 ಆದರೆ ಇಲ್ಲಿ ಸಾಕಷ್ಟು ವಿಮಾನಗಳು ವಿಳಂಬವಾಗುವುದಕ್ಕೆ ಇದು ಸಂಬಂಧವಿಲ್ಲ. ಅದೇನಿದ್ದರೂ ಹವಾಮಾನ, ಏರ್ ಲೈನುಗಳ ಸಿಬ್ಬಂದಿ ಮತ್ತಿತರೆ ತಾಂತ್ರಿಕ ತೊಡಕುಗಳಿಂದ ಮಾತ್ರ ಎಂದೇ ನಾನು ವಾದಿಸಿ ಓ'ಹೇರ್ ಅನ್ನು ತೆಗಳುವ ನನ್ನ ಇತರೆ ಸಹಪಯಣಿಗರ ಬಾಯಿ ಮುಚ್ಚಿಸುತ್ತಿದ್ದೆ. ಇಂತಪ್ಪ ಓ'ಹೇರ್ ಮತ್ತು ನನ್ನ ಸಂಬಂಧಕ್ಕೆ ಕೊರೋನಾ ಕೊಳ್ಳಿ ಇಟ್ಟುಬಿಟ್ಟಿತು! 


ಕೊರೋನಾದ ಈ ದುರಿತ ಕಾಲದಲ್ಲಿ ಕೇವಲ ಎರಡು ಭಾರಿ ಭಾರತಕ್ಕೆ ಅಂತರರಾಷ್ಟ್ರೀಯ ಪ್ರವಾಸ ಬಿಟ್ಟರೆ ಒಂದೇ ಒಂದು ದೇಶೀಯ ಪ್ರವಾಸ ಕೈಗೊಂಡಿರಲಿಲ್ಲ. ಈ ದೇಶೀಯ ಟರ್ಮಿನಲ್ಲೇ ನನ್ನ ಆಪ್ತ, ಅಂತರರಾಷ್ಟ್ರೀಯ ನೆಂಟರಿದ್ದಂತೆ. ಹಾಗಾಗಿ ಆ ಟರ್ಮಿನಲ್ಲಿನ ನನ್ನ ಭೇಟಿ ಅಂತಹ ಆಪ್ತತೆ ಮೂಡಿಸುವುದಿಲ್ಲ. ಅಂತಹ ಆಪ್ತ ದೇಶೀ ಟರ್ಮಿನಲ್ಲಿಗೆ ನೆನ್ನೆ ಭೇಟಿ ಕೊಟ್ಟೇ ಬಿಟ್ಟೆ. ಇದರಿಂದ ಸಂಭ್ರಮಗೊಂಡ ಓ'ಹೇರ್ 'ಬಂದೆಯ ಪ್ರೇಮದ ಸಿರಿಯಾಗಿ' ಎಂದು ನನ್ನ ಫ್ಲೈಟನ್ನು ಒಂದೂವರೆಯಿಂದ ನಾಲ್ಕೂವರೆಗೆ ದಬ್ಬಿಸಿ ಅಲ್ಲಿಯೇ ಪ್ರೀತಿಯಿಂದ ಕೂರಿಸಿಕೊಂಡಿತು. ಹತ್ತು ಹಲವಾರು ಏರ್ ಲೈನುಗಳ ನಾಲ್ಕು ದೇಶೀ ಟರ್ಮಿನಲ್ಲುಗಳಲ್ಲಿಯೂ ಊರುಗಳಲ್ಲಿನ ಹಲವಾರು ಗಲ್ಲಿ, ವೃತ್ತಗಳಿದ್ದಂತೆ ಗಲ್ಲಿ, ವೃತ್ತ, ಫುಡ್ ಕೋರ್ಟುಗಳಿವೆ. ನಾನಿದ್ದ ಯುನೈಟೆಡ್ ಟರ್ಮಿನಲ್ಲಿನ ಬಿ ಗಲ್ಲಿಗಳ ಕಾಫಿ, ಬಿಯರ್ ದುಖಾನುಗಳ ಮೈದಡವಿ ಬೈ ಬೈ ಓ'ಹೇರ್ ಎಂದರೆ ಓ'ಹೇರ್ ನಸುನಕ್ಕು "ಬಿಟ್ಟು ಹೊರಟೆಯಾ, ಇರು ಮಾಡುತ್ತೇನೆ" ಎಂದಿತು. ನನ್ನ ವಿಮಾನ ಹಾರಲು ಸಿದ್ಧವಾಗಿ ಸದಾ ರಾಜಕುಮಾರ್ ಸಿನೆಮಾ ಕ್ಯೂನಂತಿರುವ ಅಲ್ಲಿನ ಹಾರುವ ಸಾಲಿನಲ್ಲಿ ನಿಂತಿತು. 


ಇತ್ತ ಮೊದಲೇ ಮೂರು ತಾಸು ವಿಳಂಬದಲ್ಲಿ ಸಾಕಷ್ಟು ತಮ್ಮ ಕೆಲಸದ ಅವಧಿ ಕಳೆದಿದ್ದ ಸಿಬ್ಬಂದಿಗೆ ಮತ್ತೊಂದು ತಾಸಿನ ಈ ಕ್ಯೂ ಅವರ ಶಿಫ್ಟ್ ಅನ್ನೇ ಮುಗಿಸಿ ಅವರು ವಿಮಾನವನ್ನು ವಾಪಸ್ ಗೇಟಿಗೆ ತಂದು ತರುಬಿ ಹೊಸ ಶಿಫ್ಟಿನ ತುರುಬಿಣಿಯರು ಬರುತ್ತಾರೆ ಎನ್ನುತ್ತ ಮರೆಯದೆ 'ಹ್ಯಾಪಿ ಜರ್ನಿ' ಹೇಳಿ ನಡೆದರು. ಅಂತೂ ಇಂತೂ ಹೊಸ ತುರುಬಿಣಿಯರು ಬಂದು ನಾನು ಆಕಾಶಕ್ಕೆ ಚಿಮ್ಮಿದಾಗ ಸರಿಯಾಗಿ ರಾತ್ರಿ ಎಂಟು ಗಂಟೆ ಎರಡು ನಿಮಿಷ! ಓ'ಹೇರ್ ಅಂತೂ ನನ್ನ ಎರಡು ವರ್ಷದ  ಗೈರಿಗೆ ಸರಿಯಾಗಿ ಗೇರು ಹಾಕಿ ಸೇಡು ತೀರಿಸಿಕೊಂಡಿತು.


ಇತಿಹಿ ಓ'ಹೇರ್ ಪ್ರಕರಣಹ!


ಇನ್ನು ನಾನು ಬಂದಿಳಿದ ಊರಿನಲ್ಲಿ ನಾನಿರಬೇಕಾದ ಗೆಸ್ಟ್ ಹೌಸ್ ಸೇರಿದಾಗ ಮೂರು ಗಂಟೆಯ ಬೆಳಗು. ಮಲಗಿ ಅರ್ಧ ಗಂಟೆಯೂ ಆಗಿರಲಿಲ್ಲ, "ಕ್ಕೊಕ್ಕೊಕ್ಕೋ ಕೊಕ್ಕರೂ ಕ್ಕೊ" ಎಂದು ಕೋಳಿ ಕೂಗಿದಂತೆ ಕೇಳಿತು. 'ಛೇ ಕನಸಿರಬೇಕು' ಎಂದುಕೊಂಡು ಮಗ್ಗಲು ಬದಲಿಸಿದರೆ ಮತ್ತದೇ "ಕ್ಕೊಕ್ಕೊಕ್ಕೋ ಕೊಕ್ಕರೂ ಕ್ಕೊ!" ಯಾವುದೋ ಅಲಾರಂ ಇರಬೇಕು ಎಂದುಕೊಂಡು ಅದು ಹಲವಾರು ಬಾರಿ ಕೇಳಿದರೂ ನಿರ್ಲಕ್ಷಿಸಿ ಮಲಗಿದೆ. ಬೆಳಿಗ್ಗೆ ಎದ್ದು ಬಾಗಿಲು ತೆಗೆದಾಗ ಈ ದೃಶ್ಯ!


ನಾನೆಲ್ಲಿರಬಹುದು?! ಹೇಳಿ, ಈಗ ನಿಮ್ಮ ಸರದಿ.

No comments: