Man cave rampants

 ಈ ದಿನ ಮನೆಯಲ್ಲಿ ಯಾರೂ ಇರಲಿಲ್ಲದೇ ನನ್ನೆಲ್ಲಾ man cave instinctಗಳು ಉಕ್ಕಿಬಂದವು. Oban ವ್ಹಿಸ್ಕಿಯ ಭಿರಡೆಯನ್ನು Enfield ರೈಫಲ್ ಬುಲೆಟ್ಟಿನ ಕೊಬ್ಬು ಸವರಿದ ಬತ್ತಿಯನ್ನು ಹಲ್ಲಿನಿಂದ ಕಿತ್ತೆಸೆವಂತೆ ಕಿತ್ತೆಸೆದು ಹುರಿದ ಕೋಳಿ ತುಂಡು, ಮಲಬಾರ್ ಚಕ್ಕುಲಿ, ಅಜ್ಜಂಪುರದ ಖಾರಸೇವು, ನಾನೇ ಬೆಳೆದು ಕರಿದ ಗೋಡಂಬಿ ಇಟ್ಟುಕೊಂಡು ನನ್ನ ಪ್ರೀತಿಯ ಹೆಲೆನ್ ಕ್ಯಾಬರೆ ಹಾಡುಗಳನ್ನು ಹಾಕಿಕೊಂಡು ಆತ್ಮದ ಮರುಮರುಮರುಶೋಧನೆಯ ಶುಭಾರಂಭವನ್ನು ಸ್ವಾತಂತ್ರ್ಯದ ಕಿಡಿಯೊಂದಿಗೆ ಉದ್ಘಾಟಿಸಿಯೇಬಿಟ್ಟೆ.


ಪೆಗ್ಗೊಂದು ಖಾಲಿಯಾದಂತೆ ಹೆಲೆನ್ನಳ ಶಾಸ್ತ್ರೀಯ ಕ್ಯಾಬರೆ ಏರುತ್ತಿರುವ ಒಬಾನಿನ ನಶೆಗೆ ಮತ್ತು ಯೌವ್ವನದ ಬಿರುಸಿಗೆ ಹೊಂದುತ್ತಿಲ್ಲವೆನಿಸಿ ಆಕೆಯ ಸಾಕುಪುತ್ರನ ಪ್ರಿಯತಮೆಯಾಗಿದ್ದ ಕತ್ತರಿ ಆಡಿಸದ ಕತ್ರೀನಾಳ ಶೀಲಾ ಕಿ ಜವಾನಿಗೆ ಬದಲಿಸಿದೆ. ಆಕೆಯ ಹಾವಭಾವ ನನ್ನ ಅಪ್ಪಟ ಹಳೇಪೇಟೆ ಪ್ರತಿಭೆ ಬಾಲ್ಯ ಸ್ನೇಹಿತೆ ಕರಿಬಸ್ಸಿಯನ್ನು ನೆನಪಿಸಿ ಹಗೆದಿಬ್ಬಕ್ಕೆ ಸೆಳೆದೊಯ್ಯಿತು. ಅಲ್ಲಿ ಕರಿಬಸ್ಸಿ ಕಾಣದೆ ಚಡಪಡಿಸಿ ಹಾಗೆಯೇ ಗಾಂಧಿನಗರ, ಅಜಾದ್ ನಗರ ಸುತ್ತಿಸತೊಡಗಿತು.


ಇತ್ತ ನನ್ನ ಪ್ಲೇ ಲಿಸ್ಟ್ ಅದನ್ನು ಅರಿತಂತೆ ರೇಶ್ಮಾಳ "ಲಂಬೀ ಜುದಾಯಿ...ಪ್ಯಾರ್ ಓ ರಬ್ಬಾ.. ಬಡೀ ಲಂಬೀ ಜುದಾಯಿ. ಪಂಛೀ ಬಿಚಡ್ ಗಯೇ ಮಿಲನೇ ಸೇ ಪೆಹಲೇ..." ಎಂದು ಒಂದು ಲಂಬೀ ನಿಟ್ಟುಸಿರಿಡಿಬಿಟ್ಟಿತು!


ಆ ನಿಟ್ಟುಸಿರು ತಥ್ ಎನಿಸಿ ನಮ್ಮತ್ತೆಯನ್ನು ವರಿಸಿ ಮಾವನಾಗಬೇಕಿದ್ದ ಬಸವರಾಜ ರಾಜಗುರು ತಪ್ಪಿ ಪಾಕಿಸ್ತಾನದ ಹಾರ್ಟ್ ಥ್ರೊಬ್ ಮಾವನಾಗಿದ್ದು ನೆನಪಾಗಿ ಸೀದಾ ನನ್ನನ್ನು ರೇಶ್ಮಾಳ ಪಾಕಿಸ್ತಾನಕ್ಕೆ ತಂದು ನಿಲ್ಲಿಸಿತು.


ಅಲೆಕ್ಸಾ ಚಕ್ಕನೆ "ಎನ್ನ ಕಾಯವ ದಂಡಿಗೆಯ ಮಾಡಯ್ಯಾ,

ಎನ್ನ ಶಿರವ ಸೋರೆಯ ಮಾಡಯ್ಯಾ,

ಎನ್ನ ನರವ ತಂತಿಯ ಮಾಡಯ್ಯಾ,

ಎನ್ನ ಬೆರಳ ಕಡ್ಡಿಯ ಮಾಡಿ,

ಬತ್ತೀಸ ರಾಗವ ಪಾಡಯ್ಯಾ, ಉರದಲೊತ್ತಿ ಬಾರಿಸು,

ಕೂಡಲಸಂಗಮದೇವಾ" ಎಂದು ನನ್ನ ಮಾವನ ವಚನವನ್ನು ಆರ್ದ್ರ್ಯವಾಗಿ ಹಾಡಿಸಿ ಬಿಟ್ಟಳು. 


ಎತ್ತಣ ಆರ್ದ್ರ್ಯವಾಗಿ ಹೆಡೆಯಾಡಿಸುವ ಮರಳುಗಾಡಿನ ನಾಗರ ರೇಶ್ಮಾ, ಎತ್ತಣ ಬುಸುಗುಡುವ ಬರ್ಮೀಸ್ ಪೈಥಾನ್ ಬ್ಯುಟಿ ಹೆಲೆನ್, ಎತ್ತಣ ಕೂಡಲಸಂಗಮದೇವಾ..ಹೇ ದೇವಾ! ಎಂದು ಒಬಾನ್ ಅನ್ನು ನೇರ ಗಂಟಲಿಗೆ ಸುರಿದುಕೊಂಡೆ. ಒಬಾನ್ ನನ್ನ ಗಂಟಲನ್ನು ಸುಟ್ಟಂತಾಗಿ ಮತ್ತೆ ಬಾಲ್ಯದ ಕದಿರಾರುಷ್ಠ ಎಂಬ ಆಯುರ್ವೇದ ಔಷಧಿಯನ್ನು ನೆನಪಿಸಿತು. ಅದನ್ನು ಕುಡಿಯಲೇಬೇಕೆಂದು ತಾಕೀತು ಮಾಡಿದ್ದ ನಮ್ಮ ಅಪ್ಪಾಜಿಯ ಹಿಟ್ಲರ್ ಮುಖ ಹಾಗೆಯೇ ಮನಃಪಟಲದಲ್ಲಿ ಮೂಡುತ್ತಿದ್ದಂತೆಯೇ ಅಲೆಕ್ಸಾ "Boss, its butter time!" ಎಂದು ಬಾಳಪ್ಪ ಹುಕ್ಕೇರಿಯನ್ನು ಎಳೆದು ತಂದು "ನಾ ಸಂತಿಗೆ ಹೋಗೀನಿ ಆಕಿ ತಂದಿದ್ದಳೋ ಬೆಣ್ಣಿ..." ಎಂದು ಶುರು ಹಚ್ಚಿಸಿದಳು. ಬಾಳಜ್ಜ ಬಲು ಹುಕಿಯಿಂದ ಬೆಣ್ಣಿಯವಳನ್ನು ಬಣ್ಣಿಸತೊಡಗಿದ!


ಬೆಣ್ಣಿ ಒಡೆದು ತೋರ್ಸುಎನ್ನುತ್ತಾ ನಮ್ಮ ಅಪ್ಪಾಜಿ ಬೆಣ್ಣಿಯವಳು ಬೆಣ್ಣೆ ಉಂಡೆಯನ್ನು ಮುರಿದು ಒಳಗೆ ಮೈದಾ ಹಿಟ್ಟಿನುಂಡೆಯ ಕಲಬೆರಕೆ ಇಲ್ಲವೆಂಬುದನ್ನು ಖಾತ್ರಿ ಪಡಿಸಿದ ನಂತರ ಕೊಂಚವೇ ಕೊಂಚ ಬೆಣ್ಣೆಯನ್ನು ಕಿರು ಬೆರಳಿಂದ ಎತ್ತಿಕೊಂಡು ಮುಂಗೈಗೆ ಸವರಿಕೊಂಡು ಘಮ್ಮನೆ ಮೂಸಿ ಕ್ವಾಲಿಟಿ ಪಾಸು ಮಾಡಿದ ನಂತರವೇ ನಾನು ಹಿಡಿದಿರುತ್ತಿದ್ದ ಡಬ್ಬಿಗೆ ಬೆಣ್ಣೆ ಬೀಳುತ್ತಿತ್ತು. ಬೆಣ್ಣೆ ತೋರಿಸುವ ವೇಳೆಯಲ್ಲಿ ಬೆಣ್ಣೆ ಮಹಿಳೆ ಕುಬುಸದೊಳಗಿನ ತನ್ನ ಸೀಳಿನ ಬೆಣ್ಣೆಯುಂಡೆಗಳನ್ನೇನಾದರೂ ತೋರಿಸಿಬಿಟ್ಟರೆ ಬೆಣ್ಣೆ ಕೂಡಲೇ ನಪಾಸಾಗಿಬಿಡುತ್ತಿತ್ತು. ಅಂತಹ ಮಡಿವಂತರು ನಮ್ಮ ಪಿತಾಮಹರು! ಘಮ್ಮೆನ್ನುವ ಬೆಣ್ಣೆ ಶಿವಮೊಗ್ಗದ ನಮ್ಮಜ್ಜಿ ಪಕ್ಕದ ಮನೆಯಲ್ಲಿದ್ದ ಬೆಣ್ಣೆಯಂತಹ ಪಾಪು ಎಂಬ ನನ್ನ ಆ ದಿನಗಳ ಕ್ರಶ್ ಅನ್ನು ಆವರಿಸಿಬಿಟ್ಟಿತು.


ಶಿವಮೊಗ್ಗೆಯ ರಾಮಣ್ಣ ಶೆಟ್ಟಿ ಪಾರ್ಕಿನ ಗಣಪತಿ ಹಬ್ಬದ ಆರ್ಕೆಸ್ತ್ರಾದಲ್ಲಿ ಅನಂತಸ್ವಾಮಿಗಳ "ನೋಡಿದ್ರಾ ನಮ್ ನಂಜಿನಾವ, ನಮ್ ಗಜನಿಂಬೆ ನಂಜೀನವಾ..ಅವ್ಳ್ ನಕ್ರೆ ಗುಂಡ್ಗೇ ಗುಡುಗತೈತೆ ಜುಂ ಜುಂ ಜುಂ" ಎಂದು ಪಾಪು ನನ್ಗೆ ಜುಂ ಜುಂ ಎಂದು ಬಿಸಿಯೇರಿಸಿಬಿಟ್ಟಳು. ನಂಜಿ ಗೆಪ್ತಿ, ಪಾಪು ಜುಂ ಜುಂ, ಒಬಾನ್ ಗುಂ ಗುಂ ನಂಗೆ "ಬ್ರಹ್ಮ ನಿಂಗೆ ಜೋಡಿಸ್ತೀನಿ ಎಂಡ ಮುಟ್ಟಿದ್ ಕೈನ" ಎಂಬ ಅನಂತಸ್ವಾಮಿಗಳ ಮತ್ತೊಂದು ಗುಂಗು ಹತ್ತಿಸಿತು. ಆ ಗುಂಗಿನಲ್ಲಿ ನಮ್ಮಜ್ಜಿ ಸ್ನೇಹಿತೆ ಫಾತಿಮಾ ಬೇಗಂ ನೆನಪಾಗಿ ಅವರ ಮನೆಯಲ್ಲಿ ಕುತೂಹಲದಿಂದ ಕೇಳುತ್ತಿದ್ದ ಅಜೀಜ್ ನಜಾನ್ ನ  "ಜೂಮ್ ಬರಾಬರ್ ಜೂಮ್ ಶರಾಬಿ" ನೆನಪಾಗಿ "ಅಲೆಕ್ಸಾsss" ಎಂದೊಡನೆ ಅಜೀಜ್ ಎದ್ದುಬಿದ್ದು ಜೂಮ್ ಜೂಮ್ ಎನ್ನತೊಡಗಿದ. ಅವನ ಜೂಮ್ ಜೂಮ್ ಗೆ ಮನಸ್ಸು ಹಾಗೆಯೇ ತಲೆತಲಾಂತರದ ಹಿಂದಿನ ಬಿಜಾಪುರಿ ಬೇಗಂಗಳೊಟ್ಟಿಗೆ ಬಾರಾ ಕಮಾನಿನಲ್ಲಿ "ಪ್ಯಾರ್ ಗೆ ಆಗಬುಟ್ಟೈತೆ" ಎಂದು ಸೊಂಟ ತಿರುಗಿಸತೊಡಗಿದೆ.


ಅಷ್ಟೊತ್ತಿಗೆ ಒಬಾನ್ ಖಾಲಿಯಾಗಿ ತಲೆ ದಿಮ್ಮೆನ್ನುತ್ತಾ

ಮಾಜಿ-ಭಾವಿ ಮಾವ ರಾಜಗುರುಗಳು "ಎನಗಿಂತ ಕಿರಿಯರಿಲ್ಲಯ್ಯಾ, ಶಿವಭಕ್ತರಿಗಿಂತ ಹಿರಿಯರಿಲ್ಲಯ್ಯಾ....ನಿಮ್ಮ ಪಾದಸಾಕ್ಷಿ ಎನಗೆ ಕೂಡಲಸಂಗಮದೇವಾ ಎನಗೆ ದಿವ್ಯವಿದು" ಎಂದು ಹಾಡುತ್ತಾ "ಮಡಕೆಯ ಮಾಡುವರೆ ಮಣ್ಣೆ ಮೊದಲು, ತೊಡುಗೆಯ ಮಾಡುವರೆ ಹೊನ್ನೇ ಮೊದಲು

ಶಿವಪಥ ಅರಿದೊಡೆ ಗುರುಪಥ ಮೊದಲು

ಪ್ರಸಾಧಪಥ ಅರಿದೊಡೆ ತೀರ್ಥಪಥ ಮೊದಲು" ಎಂದು ಎನ್ನ ಮನವನ್ನು ಮತ್ತೊಂದು ಒಬಾನೋ ಹುಡುಕತೊಡಗಿಸಿತು. ಇನ್ನೂ ಹುಡುಕುತ್ತಿರುವ ಆ ಇನ್ನೊಂದು ಒಬಾನ್ ನನಗೆ ಸಿಕ್ಕಿಲ್ಲ. ಬನ್ನಿ, ಜೊತೆಗೂಡಿ ತೀರ್ಥಪಥ ಹಿಡಿದು ಶಿವಪಥ ಕಂಡುಕೊಳ್ಳೋಣ!

No comments: