ತಿರುಗಿ ನೋಡು
ಆಗೊಮ್ಮೆ ಈಗೊಮ್ಮೆ ಕಾಡುತ್ತದೆ ಒಂಟಿತನ ಒಮ್ಮೊಮ್ಮೆ,
ನೀನೆಂದು ಬರಲಾರೆ ಎಂದು ಗೊತ್ತಿದ್ದು.
ತಿರುಗಿ ನೋಡು
ಆಗೊಮ್ಮೆ ಈಗೊಮ್ಮೆ ಬೇಸರವಾಗುತ್ತದೆ ಒಮ್ಮೊಮ್ಮೆ,
ನನ್ನ ಹನಿಯುವ ಕಣ್ಣೀರ ಟಪಟಪ ಸದ್ದಿಗೂ.
ತಿರುಗಿ ನೋಡು
ಆಗೊಮ್ಮೆ ಈಗೊಮ್ಮೆ ತಳಮಳಗೊಳ್ಳುತ್ತೇನೆ ಒಮ್ಮೊಮ್ಮೆ,
ನನ್ನೆಲ್ಲಾ ಹರುಷದ ವರುಷಗಳು ಕಳೆದುಹೋದವೆಂದು.
ತಿರುಗಿ ನೋಡು
ಆಗೊಮ್ಮೆ ಈಗೊಮ್ಮೆ ಭಯವಾಗುತ್ತದೆ ಕತ್ತಲಲ್ಲೊಮ್ಮೊಮ್ಮೆ,
ಆಗೆಲ್ಲ ನಿನ್ನ ಕಣ್ಣ ಮಿಂಚು ದಾರಿದೀಪವಾಗುವುದೆಂದು.
ತಿರುಗಿ ನೋಡು,
ತಿರುಗಿ ನೋಡು ಬೆರಗುಗಣ್ಣೆ!
ಆಗೊಮ್ಮೆ ಈಗೊಮ್ಮೆ ಬೀಳುತ್ತಲೇ ಇರುವೆ ಬೀಳುತ್ತಲೇ ಇರುವೆ ಹೆಜ್ಜೆಗೊಮ್ಮೊಮ್ಮೆ, ಹಿಡಿದೆತ್ತಲು ಬಾರೆಯಾ ನೀನೊಮ್ಮೆ.
ಬೇಕಿದೆ ಪ್ರತಿಕ್ಷಣವೂ ನಿನ್ನೊಲುಮೆ
ಎಂದೆಂದಿಗೂ ನೀನೆನ್ನ ಪ್ರೇಮದಾ ಚಿಲುಮೆ
ಅರಿಯದಾಗಿರುವೆ ಏಕೆ ಈ ಅರಿಮೆ!
ತಿರುಗಿ ನೋಡು
ನಮ್ಮ ನಡುವಿನ ನಲುಮೆ, ಬೇಡ ಪ್ರತಿಷ್ಠೆಯ ಗರಿಮೆ.
ಜೊತೆಯಾಗಿ ಸಾಗೋಣ, ಸರಿಯಾದುದ ಮಾಡೋಣ
ಒಬ್ಬರಿಗೊಬ್ಬರು ನೆರಳಾಗಿ ಅನಂತದಲ್ಲೂ ಕೈಹಿಡಿದು ಅನಿಕೇತನವಾಗೋಣ.
ತಿರುಗಿ ನೋಡು
ಬಿಟ್ಟಿರಲಾಗುತ್ತಿಲ್ಲ ನಿನ್ನ ಪ್ರಿಯೆ
ಮಧುಬನದ ಪೌರ್ಣಮಿಯ ನಿಶೆ
ತುಂಬಿದೆ ಈ ಬಟ್ಟಲಲಿ ನಿನ್ನದೇ ನಶೆ
ಆರಂಭಿಸೋಣ ಮತ್ತೊಮ್ಮೆ ಎಸೆ ನಿನ್ನ ಪಾಶೆ
ಕೊರಳೆತ್ತಿ ಒರಲುತ್ತಿರುವೆ ನೀ ಎನ್ನ ದಿಶೆ!
ತಿರುಗಿ ನೋಡು
ಆಗೊಮ್ಮೆ ಈಗೊಮ್ಮೆ ಬೀಳುತ್ತಿದ್ದೆ ನಿನ್ನ ಪ್ರೇಮದಲಿ ಪ್ರತಿಬಾರಿಯೊಮ್ಮೊಮ್ಮೆ,
ಈಗ ಬೀಳುತ್ತಿರುವೆ ಚೂರು ಚೂರಾಗಿ ಎಂದೆಮ್ಮೆ.
ತಿರುಗಿ ನೋಡು
ಮಾಡಲಾಗದೆ ಏನೊಂದು ಗ್ರಹಣಗೊಂಡಿರುವುದು
ಬಾಳ ಬೆಳಕು ಎಂದೆಂದೂ.
ತಿರುಗಿ ನೋಡು ಬೆರಗುಗಣ್ಣೆ,
ಸಂಪೂರ್ಣ ಕತ್ತಲಾವರಿಸಿ ಗ್ರಹಣಗೊಂಡ ಹೃದಯದಲ್ಲೊಂದು ಮಿಂಚ ಹರಿಸೊಮ್ಮೆ
ಬೇಕಿರುವೆ ನೀನು ಎಂದಿಗಿಂತಲೂ ಈಗೊಮ್ಮೆ.
ತಿರುಗಿ ನೋಡು
ಜೊತೆಯಾಗಿ ಸಾಗೋಣ, ಸರಿಯಾದುದ ಮಾಡೋಣ
ಒಬ್ಬರಿಗೊಬ್ಬರು ನೆರಳಾಗಿ ಅನಂತದಲೂ ಅನಿಕೇತನವಾಗೋಣ.
ಹೃದಯಕ್ಕ್ಹಿಡಿದ ಗ್ರಹಣವ ಬಿಡಿಸೋಣ
ತಿರುಗಿ ನೋಡು ತಿರುಗಿ ನೋಡು ತಿರುಗಿ ನೋಡು ಬೆರಗುಗಣ್ಣೆ!
ಗ್ರಹಣವ ಬಿಡಿಸೋಣ, ಗ್ರಹಣವ ಬಿಡಿಸೋಣ, ಗ್ರಹಣವ ಬಿಡಿಸೋಣ. ಅನಂತವ ಸೇರೋಣ!
No comments:
Post a Comment