ವಿಶ್ವವಾಣಿ ಬಸವ ಮಂಟಪ - ವೀರಶೈವ ವಿಪ್ಲವಕ್ಕೆ ಬರೆದ ಮುನ್ನುಡಿಯೇ?!

 ಲಿಂಗಾಯತ ಪ್ರತ್ಯೇಕ ಧರ್ಮದ ಕೂಗಿನವರ ಹಿಂದಿನ ಧೀಶಕ್ತಿ ಎಂತಹ ಬಾಲಿಶ ಎಂದು ಈ ಹಿಂದೆ ತೋರಿದ್ದೇನಷ್ಟೇ. ಅವರ ಬಾಲಿಶ ಅಂಶಗಳನ್ನು ಇನ್ನಷ್ಟು ಆಳವಾಗಿ ತೋರುವ ಮುನ್ನ ಇತಿಹಾಸದ ವಾಸ್ತವಾಂಶವನ್ನು ತೆರೆದಿಡುವುದು ಅತ್ಯಗತ್ಯ. ಒಂದು ಧರ್ಮದ ಪರಿಗಣನೆಯನ್ನು ಇಂದಿನ ಇಪ್ಪತ್ತೊಂದನೇ ಶತಮಾನದ ನ್ಯಾಯಾಂಗವು ಒಪ್ಪುವಂತಹ ವಾದವನ್ನು  ದಾಖಲೆಯುಕ್ತ ಸಾಮಾನ್ಯಜ್ಞಾನದ ಪರಿಧಿಯಲ್ಲಿ ಮಂಡಿಸಬೇಕು. ಕೇವಲ ನಮ್ಮ ಪರವಾಗಿ ಬುದ್ಧಿಜೀವಿಗಳಿದ್ದಾರೆ, ಸಂಶೋಧಕರಿದ್ದಾರೆ, ನಿವೃತ್ತ ಸರ್ಕಾರಿಯಂತ್ರದ ನಿಯಂತ್ರಕರಿದ್ದಾರೆ, ರಾಜಕಾರಣಿಗಳಿದ್ದಾರೆ, ಅವರಿದ್ದಾರೆ ಇವರಿದ್ದಾರೆ ಎನ್ನುವ ಹುಂಬತನದ ಕೂಪದಾಚೆ ಆಲೋಚಿಸಬೇಕು. ಅಂತಹ ಒಂದು ಕಣ್ಣು ತೆರೆಸುವ ಮತ್ತು ಸಮಾಜವನ್ನು ಒಂದುಗೂಡಿಸುವ ಪ್ರಯತ್ನ ವಿಶ್ವವಾಣಿಯದು. ಆ ಘನ ಉದ್ದೇಶದ ನಿಟ್ಟಿನಲ್ಲಿ ವೀರಶೈವದ ಎಲ್ಲಾ ಆಕರಮೂಲಗಳನ್ನು ತೆರೆದಿಟ್ಟು ತಾರ್ಕಿಕವಾಗಿ ವಿಶ್ಲೇಷಿಸುವ ಪ್ರಯತ್ನವಿದು.


ಹನ್ನೆರಡನೇ ಶತಮಾನದಲ್ಲಿ ರಚಿಸಲಾಗಿದೆ ಎನ್ನುವ ವೀರಶೈವ ವಚನ ಸಾಹಿತ್ಯದ ಸಂಗ್ರಹಕಾರ್ಯ ಹದಿನೈದನೇ ಶತಮಾನದ ಪ್ರೌಢದೇವರಾಯನ ಕಾಲದಲ್ಲಿ ಆರಂಭವಾಯಿತು ಎಂದು ಇತಿಹಾಸಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಇವುಗಳನ್ನು ಹನ್ನೆರಡನೇ ಶತಮಾನದಲ್ಲಿಯೇ ಶರಣರು ರಚಿಸಿದ್ದರು ಎಂಬುದು ಪ್ರಶ್ನಾರ್ಹ ಎಂದು ಸಾಕಷ್ಟು ಸಂಶೋಧಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಅದೇ ರೀತಿ ಸಿದ್ಧಾಂತ ಶಿಖಾಮಣಿಯನ್ನು ಒಂದನೇ ಅಥವಾ ಏಳನೇ ಶತಮಾನದಲ್ಲಿ ರಚಿಸಿದ್ದಾರೆ ಎನ್ನುವುದೂ ಸಹ. ಆಗಲೇ ಇದ್ದ ವಚನಗಳ ಆಧಾರವಾಗಿ 'ಶೂನ್ಯಸಂಪಾದನೆ'ಯ ಮೊದಲ ಸಂಕಥನವನ್ನು ಶಿವಗಣಪ್ರಸಾದಿ ಮಹದೇವಯ್ಯ ಹದಿನೈದನೇ ಶತಮಾನದ ಆರಂಭದಲ್ಲಿ ರಚಿಸಿದ್ದರೆ, ಆಗಲೇ ಸಂಸ್ಕೃತದಲ್ಲಿದ್ದ ಸಿದ್ಧಾಂತ ಶಿಖಾಮಣಿಗೆ ಇದೇ ಹದಿನೈದನೇ ಶತಮಾನದಲ್ಲಿದ್ದ ಗೊರಕೋಡು ಉಜ್ಜನೀಶನು ಕರ್ಣಾಟ ಭಾಷಾ ಟೀಕಾವನ್ನು ರಚಿಸಿದ್ದಾನೆ. ಅಂದರೆ ಕನ್ನಡಕ್ಕೆ ತರ್ಜುಮೆ ಮಾಡಿದ್ದಾನೆ. ಸಮಗ್ರವಾಗಿ ಹದಿನೈದನೇ ಶತಮಾನದ ಈ ಕಾಲಘಟ್ಟವು ವೀರಶೈವದ ಧ್ರುವೀಕರಣದ ಸಮಯ ಎಂದು ಸ್ಪಷ್ಟವಾಗುತ್ತದೆ. ಇನ್ನು ಸಂಸ್ಕೃತದಲ್ಲಿದ್ಧ ’ಶಕ್ತಿವಿಶಿಷ್ಟಾದ್ವೈತ’ಕ್ಕೆ ವೀರಶೈವ ಆಚಾರ್ಯನಾದ ಶ್ರೀಪತಿ ಪಂಡಿತಾರಾಧ್ಯನು ಹನ್ನೊಂದನೇ ಶತಮಾನದಲ್ಲಿ 'ಶ್ರೀಕರ ಭಾಷ್ಯ' ವನ್ನು ರಚಿಸಿದ್ದಾನೆನ್ನುವ ಊಹೆಯಿದ್ದರೂ ಶ್ರೀಪತಿ ಪಂಡಿತಾರಾಧ್ಯ ಹನ್ನೊಂದನೇ ಶತಮಾನದಲ್ಲಿ ಇದ್ದನೆನ್ನುವುದಕ್ಕೆ ಪುರಾವೆಗಳಿವೆ. ಹಾಗಾಗಿ ಸದ್ಯದ ಸಾಹಿತ್ಯಿಕ ಆಕರಗಳ ದೃಷ್ಟಿಯಿಂದ 'ಶಕ್ತಿವಿಶಿಷ್ಟಾದ್ವೈತ'ವು ಈ ಮೂರರಲ್ಲಿ ಪ್ರಾಚೀನ ಎನಿಸುತ್ತದೆ. ಇದಿಷ್ಟು ವೀರಶೈವ ಗ್ರಂಥೇತಿಹಾಸದ ಇತಿಹಾಸಜ್ಞ-ಮಾನ್ಯ ಮಾಹಿತಿ.


ಇನ್ನುಳಿದಂತೆ ಲಿಂಗಾಯತ ಪ್ರತ್ಯೇಕ ಕೂಗಿಗರು ಅಪಹರಿಸಿರುವ ಬಸವಣ್ಣನ ಕುರಿತಾಗಿ ೧೨ನೆಯ ಶತಮಾನದಲ್ಲಿ ಪಾಲ್ಕುರಿಕೆ ಸೋಮನಾಥನು 'ಬಸವ"ಪುರಾಣ"' ರಚಿಸಿದ್ದಾನೆ.  ಹಾಗೆಯೇ ಪ್ರತ್ಯೇಕ ಕೂಗಿಗರು ತಮ್ಮ ಬದ್ಧ ಶತ್ರುಗಳು ಎಂದು ಪರಿಗಣಿಸಿರುವ ಪಂಚಾಚಾರ್ಯರ 

ಪಂಡಿತಾರಾಧ್ಯನ ಕುರಿತಾದ 'ಪಂಡಿತಾರಾಧ್ಯ "ಚರಿತ್ರೆ"'ಯನ್ನೂ ಸೋಮನಾಥನು ರಚಿಸಿದ್ದಾನೆ. ಅದೇ ರೀತಿ ಹರಿಹರನು ಸಹ ಪ್ರತ್ಯೇಕ ಕೂಗಿಗರ ಆದ್ಯದೈವ ಮತ್ತು ಬದ್ಧಶತ್ರುಗಳ ನಡುವೆ ಭೇದವೆಣಿಸದೆ 'ಬಸವರಾಜದೇವರ "ರಗಳೆ"', `ರೇವಣಸಿದ್ದ ರಗಳೆ', 'ಏಕಾಂತರಾಮಯ್ಯನ ರಗಳೆ'ಗಳನ್ನೂ ರಚಿಸಿದ್ದಾನೆ. ಒಟ್ಟಾರೆ ಪುರಾಣ, ಚರಿತ್ರೆ, ರಗಳೆ ಎಂಬ ಈ ಮೂರು ವಿಧದ ಪದಗಳು ವೀರಶೈವದ ಮುಂಬರುವ ಶತಮಾನಗಳಾಚೆಯ ವಿಪ್ಲವಕ್ಕೆ ಮುನ್ನುಡಿ ಬರೆದಂತಿವೆ.


ಇನ್ನು ಶೂನ್ಯ ಸಂಪಾದನೆಯನ್ನು ವೀರಶೈವರ ಕೈಪಿಡಿಯಾಗಿಸಲು ಪಣತೊಟ್ಟಂತೆ ಸಂಪಾದಕರಾದ ಶಿವಗಣಪ್ರಸಾದಿ ಮಹದೇವಯ್ಯ, ನಂತರದ ಹಲಗೆಯಾರ್ಯ, ಸಿದ್ಧಲಿಂಗ ಯತಿ, ಸಿದ್ಧವೀರಣ್ಣೊಡೆಯ ಎಲ್ಲರೂ ವಚನಗಳನ್ನು ತಮ್ಮಿಷ್ಟಕ್ಕೆ ತಕ್ಕಂತೆ ತಿದ್ದಿದ್ದಾರೆ ಎಂದು ಸಂಶೋಧಕರಾದ ಎಲ್. ಬಸವರಾಜು ಆರೋಪಿಸಿದ್ದಾರೆ. ಅಂದರೆ ಪ್ರತಿಯೊಬ್ಬ ಸಂಪಾದಕನೂ ಉದ್ದೇಶಪೂರ್ವಕವಾಗಿ ಈ ಸಂಪಾದನೆಯನ್ನು ಹೆಚ್ಚು ಹೆಚ್ಚು ಆಕರ್ಷಕಗೊಳಿಸಿದ್ದಾರೆ. ಉದಾಹರಣೆಗೆ ಪ್ರಥಮ ಶೂನ್ಯಸಂಪಾದನೆಯಲ್ಲಿರುವ, "ಮಹಾದೇವಿಯಕ್ಕಗಳು ಕಲ್ಯಾಣದ ದಾರಿಯಲ್ಲಿದ್ದಾಗ (ಆಕೆಯನ್ನು) ಕಿನ್ನರಯ್ಯನು ಹರುಷಿಸಿ (ಪರುಷಿಸಿ/ಸ್ಪರ್ಶಿಸಿ) ನೋಡಲು ಅಕ್ಕಗಳು ಅಂತರಂಗದ ಜ್ಞಾನಾಗ್ನಿಯೊಳ್ ಕಾಮನ ಭಸ್ಮಮಂ ಮಾಡಿತೋರಿದರೆಂಬ" ಪ್ರಸಂಗವನ್ನು  ಹಲಗೆಯಾರ್ಯನು ತನ್ನ ದ್ವಿತೀಯ ಸಂಪಾದನೆಯಲ್ಲಿ, "ಯೋನಿಯೊಳ್ ಅಂಗುಲಿಪ್ರವೇಶಂ" ಮಾಡಿ ಕಿನ್ನರಯ್ಯನು ಮಹಾದೇವಿಯನ್ನು ಪರೀಕ್ಷಿಸಿದ್ದನು ಎಂದಿದ್ದಾನೆ. ಇದನ್ನು ಬಸವರಾಜುರವರು ಹಲಗೆಯಾರ್ಯನನ್ನು 'ತೆವಲನ್ನು ತೀರಿಸಿಕೊಂಡ ಪಾಠಪೀಡಕನು' ಎಂದು ಖಂಡಿಸಿದ್ದಾರೆ. ಇಲ್ಲಿ ಹಲಗೆಯಾರ್ಯನು ಸೂಚ್ಯರೂಪಕ ಮೂಲಪಾಠವಾಗಿದ್ದುದನ್ನು ವಾಚ್ಯವಾಸ್ತವವಾಗಿ ವಿಸ್ತರಿಸಿ ಹೇಳಿದ್ದಾನೋ ಅಥವಾ ಬಸವರಾಜು ಅವರ ಮಡಿವಂತಿಕೆಯ ಚಿಂತನೆ ಅವರಿಗೆ ಹೀಗೆನ್ನಿಸುವಂತೆ ಮಾಡಿತೋ ಎಂಬ ಸಂಶೋಧಕ ಜಿಜ್ಞಾಸೆ ಕಾಡುತ್ತದೆ. ಹಾಗಾಗಿ ಇದನ್ನು ಸಂಶೋಧಿಸಿದಾಗ ಅಂದಿನ ಕಾಲಘಟ್ಟದಲ್ಲಿ ಕನ್ಯತ್ವವನ್ನು ಪರೀಕ್ಷಿಸುವವರು ಸಹ ಇಂತಹ "ಯೋನಿಯೊಳ್ ಅಂಗುಲಿಪ್ರವೇಶಂ" ಮಾಡಿ ಪರೀಕ್ಷಿಸುತ್ತಿದ್ದದ್ದು ಸಾಮಾನ್ಯ ಸಂಗತಿ ಎಂದು ಇತಿಹಾಸ ತಿಳಿಸುತ್ತದೆ. ಆ ಕಾಲಮಾನದ ಕ್ರಿಶ್ಚಿಯನ್ ಸನ್ಯಾಸಿಗಳು ತಮ್ಮ ಸನ್ಯಾಸಿನಿಯರ ಆತ್ಮಶುದ್ಧಿಯ ಪಾವಿತ್ರ್ಯತೆಯನ್ನು ಇಂತಹ ದೈಹಿಕ ಪರೀಕ್ಷೆಗೊಳಗಾಗಿಸುತ್ತಿದ್ದ ಅನೇಕ ಕತೆಗಳು ಇವೆ. ಕ್ರಿಸ್ತಶಕ ಹದಿಮೂರನೇ ಶತಮಾನದ ಜೇಕಬಸ್ ಡಿ ವೊರೇಗನ್ ಸಂಗ್ರಹಿಸಿರುವ "ಗೋಲ್ಡನ್ ಲೆಜೆಂಡ್" ಕೃತಿಯಲ್ಲಿ ಬರುವ 'ಅಂಟಿಯಾಕ್ ಕನ್ಯೆ' ಎಂದು ಖ್ಯಾತವಾಗಿರುವ ಕತೆಯ ಅತ್ಯಂತ ಸುಂದರ ಸನ್ಯಾಸಿನಿಗೆ ಚರ್ಚಿನ ಸಹ ಸನ್ಯಾಸಿಗಳು, "ಆಕೆ ತನ್ನ ಆತ್ಮಶುದ್ದಿಯ ಪಾವಿತ್ರ್ಯತೆಯನ್ನು ಸಾಬೀತು ಪಡಿಸಲು ಒಂದು ವೇಶ್ಯಾಗೃಹದಲ್ಲಿ ಎಲ್ಲಾ ರೀತಿಯ ಲೈಂಗಿಕ ಅನುಭವಗಳಿಗೊಳಗಾಗಿಯೂ ಕಾಮದ ಹಂಗನ್ನು ಹೊಂದದೆ ಆತ್ಮಶುದ್ಧಿಯನ್ನು ಕಾಪಾಡಿಕೊಂಡರೆ ಆಕೆಯನ್ನು ಸೇರಿಸಬಹುದು. ಇಲ್ಲದಿದ್ದರೆ ಆಕೆ ಅನ್ಯಧರ್ಮಕ್ಕೆ ಹೋಗಲಿ" ಎಂದು ಸವಾಲು ಹಾಕುತ್ತಾರೆ. "ದೈಹಿಕವಾಗಿ ಹಾದರವನ್ನು ಮಾಡಿಯೇನೆ ವಿನಃ ಆತ್ಮದಲ್ಲಿ ಬೇರೆ ದೇವರ ನೆನೆಯೆನು" ಎಂದು ಆ ಸನ್ಯಾಸಿನಿ ವೇಶ್ಯಾವಾಟಿಕೆಗೆ ಸೇರಿ ಕನ್ಯತ್ವವನ್ನು ಕಳೆದುಕೊಂಡು ತನ್ನ ಆತ್ಮಶುದ್ದಿಯನ್ನು ಮೆರೆಯುತ್ತಾಳೆ. ಇಂತಹ ಅನೇಕ ಕ್ರೈಸ್ತ ಸನ್ಯಾಸಿನಿಯರ ಕತೆಗಳಿವೆ.  ಭಾರತದಲ್ಲೂ ಮಹಿಳೆಗ ತನ್ನ ಪಾವಿತ್ರ್ಯತೆಯನ್ನು ಸಾಬೀತುಪಡಿಸಬೇಕಾದಂತಹ ಪರಿಸ್ಥಿತಿಯ ಕತೆಗಳು ಸಾಕಷ್ಟಿವೆ. ಅಗ್ನಿಪ್ರವೇಶಕ್ಕೊಳಗಾದ ರಾಮಾಯಣದ ಸೀತೆ ಅದಕ್ಕೊಂದು ಉದಾಹರಣೆ. ಇಂತಹ ಸನ್ನಿವೇಶ ಮಹಾದೇವಿಗೆ ಬಂದಿತ್ತು ಎಂದು ವಚನಗಳೇ ತಿಳಿಸುತ್ತವೆ. ಯಾವ ಪುರುಷಹಂಗಿನ ಧರ್ಮಪತ್ನಿಯೂ ಅಲ್ಲದ ಇತ್ತ ಪುಣ್ಯಸ್ತ್ರೀಯೂ ಅಲ್ಲದ ಆಧ್ಯಾತ್ಮನಿರತ ಬ್ರಹ್ಮಚಾರಿಣಿ ಮಹಿಳೆಯನ್ನು ಪರೀಕ್ಷಿಸದೆ ಒಪ್ಪದ ಪುರುಷಾಧಿಪತ್ಯದ ಹಂಗಿಗೆ ಯಾವ ಶರಣನೂ ಹೊರತಾಗಿರಲಿಲ್ಲ. ಮಹಿಳೆಯರಿಗೆ ಸಮಾನಹಕ್ಕು ಕೊಟ್ಟದ್ದು ಶರಣ ಚಳವಳಿ ಎನ್ನುವ ಆವೇಶದ ಭಾವನಾತ್ಮಕ ಭಾಷಣವೀರರು ಇಂತಹ ಕಪ್ಪುಚುಕ್ಕೆಯನ್ನು ಸದಾ ನೆನಪಿಟ್ಟುಕೊಳ್ಳಬೇಕು.

ಅಂದ ಹಾಗೆ ಭಾರತದ ನ್ಯಾಯಾಂಗದಡಿಯಲ್ಲಿ ಮೊನ್ನೆಮೊನ್ನೆವರೆಗೆ ಅತ್ಯಾಚಾರ ದೃಢೀಕರಣವನ್ನು ಸಂತ್ರಸ್ತೆಯ "ಯೋನಿಯೊಳ್ ಅಂಗುಲಿಪ್ರವೇಶಂ" ಮಾಡಿಯೇ ನಿರ್ಧರಿಸುತ್ತಿದ್ದರು.


ಇಂತಹ ವಾಚ್ಯವಾಸ್ತವಾಂಶಗಳು ಹಲಗೆಯಾರ್ಯನ ಸಂಪಾದನೆಯ ವಿಶೇಷ! ಒಟ್ಟಾರೆ ಶೂನ್ಯಸಂಪಾದನೆಯು ವಚನಗಳ ಆಧಾರದಲ್ಲಿ ಕಟ್ಟಿದ ಒಂದು ಕಾಲ್ಪನಿಕ ಸಂಕಥನ. ರಾಮಾಯಣವನ್ನು ಹೇಗೆ ತಮ್ಮ ತಮ್ಮ ಕಲ್ಪನೆಗೆ ಸಿದ್ಧಾಂತಕ್ಕೆ ಸಾಕಷ್ಟು ಕವಿಗಳು ಕಾವ್ಯವನ್ನು, ಸಾಹಿತಿಗಳು, ಸಮಾಜವಾದಿಗಳು, ಬುಡಕಟ್ಟು ಜನಾಂಗದವರು, ಕಮ್ಯೂನಿಸ್ಟ್ ನಾಸ್ತಿಕರು ಗದ್ಯವನ್ನು ಕಟ್ಟಿರುವರೋ ಅದೇ ರೀತಿಯಲ್ಲಿ ವಚನಗಳಾಧರಿತ ಶೂನ್ಯಸಂಪಾದನೆಯ ನಾಲ್ಕು ಆವೃತ್ತಿಗಳು ಎಂದುಕೊಳ್ಳಬಹುದು. 


ಇನ್ನು ಈ ಶೂನ್ಯ ಸಂಪಾದನೆಗಳಲ್ಲಿ ಗಮನಿಸಬೇಕಾದ ಅಂಶವೇನೆಂದರೆ ಈ ಎಲ್ಲಾ ಸಂಪಾದಕರೂ ತಮ್ಮ ನೆಚ್ಚಿನ ಸಾಮಾಜಿಕ ನಾಯಕರನ್ನು ಕೈಲಾಸಗಣಂಗಳಾಗಿಸಿ ಪುರಾಣಪುರುಷರನ್ನಾಗಿಸಿರುವುದು! ಅಲ್ಲಿಗೆ ವಚನಗಳು ಮತ್ತು ವಚನಕಾರರು ಪೌರಾಣಿಕವೆನಿಸಿ ಅವರ/ಅವುಗಳ ಅಸ್ತಿತ್ವ ಅತ್ಯಂತ ಅನುಮಾನಾಸ್ಪದ ಎನಿಸಿಬಿಡುತ್ತದೆ. ಇದಕ್ಕೆ ತಕ್ಕಂತೆ ಶೂನ್ಯಸಂಪಾದನೆ ಕೃತಿಯ ಬಗ್ಗೆ ಮತ್ತು ಬಸವಣ್ಣನ ಬಗ್ಗೆ ಮಂಟೇಸ್ವಾಮಿ, ಕೊಡೇಕಲ್ ಬಸವಣ್ಣ ಮುಂತಾದ ನಂತರದ ತತ್ವಪುರುಷರು ವ್ಯಂಗ್ಯವಾಡಿದ್ದಾರಲ್ಲದೆ ಇಂದಿನ ಆಧುನಿಕ ಶರಣರು ಸಹ ಇದು "ಸಂದೇಹ ಸಂಪಾದನೆ" ಎಂದಿದ್ದಾರೆ. ಇಷ್ಟೆಲ್ಲದರ ನಡುವೆ ಆಧುನಿಕ ಕವಿಗಳ/ಸಂಶೋಧಕರ ನವಿರು ಭಾವನೆ, ವಚನಗಳ ಕಾವ್ಯಮಯ ಮೋಹಕತೆ, ಕಮ್ಯೂನಿಸ್ಟ್ ಒಲವು, ಆಧುನಿಕತೆಯ ಆಕರ್ಷಣೆಗಳು ವಚನಗಳನ್ನು ಸಿದ್ಧಾಂತಗಳನ್ನಾಗಿಸಿ ಬಸವಣ್ಣನನ್ನು ಲೆನಿನ್, ಸ್ಟಾಲಿನ್, ಐನ್ಸ್ಟೀನ್ ಎಂದು ಸಮೀಕರಿಸಿ ಬಸವಣ್ಣನೇ ವೀರಶೈವ ಮತಸ್ಥಾಪಕ, ವಚನಗಳ ಕಟ್ಟೇ ಧಾರ್ಮಿಕ ಗ್ರಂಥ ಎಂದು ಸಮಾಜವನ್ನು ಸಮ್ಮೋಹಿಸಿರುವುದು ಸಹ ಶೂನ್ಯಸಂಪಾದನೆಯ ಮುಂದುವರಿದ ಒಂದು ಸುಂದರ ಸಂಕಥನ ಉರ್ಫ್ ಸಂದೇಹ ಸಂಕಥನ.


ಈಗ ಅನುಭವ ಮಂಟಪದ ಚರ್ಚಾದಾಖಲೆಯ ವಚನಗಳ ಆಧಾರದ ಮೇಲೆ ಸೃಷ್ಟಿಸಿದ ಭಾವಾವೇಶದ ಸಂಶೋಧಕ ಪಿತಾಮಹರ ಸಂಶೋಧನಾ ಸಂಕಥನಗಳಲ್ಲಿ, ಹುಸಿ ಸಮಾಜವಾದಿಗಳ ನಿರ್ವಚನಗಳಲ್ಲಿ ಸೃಜಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಕಥನವನ್ನು ಬದಿಗಿಟ್ಟು ಪ್ರಾಗೈತಿಹಾಸಿಕ, ಪ್ರಾಕ್ತನ, ಶಾಸನ, ಮಾನವಿಕ, ಸಾಮಾಜಿಕ, ಮನಸ್ವಿಕ, ವೈಜ್ಞಾನಿಕ ಅಂಶಗಳಿಂದ ಮತ್ತಷ್ಟು ಆಳವಾಗಿ ನೋಡಿದಾಗ, ವೀರಶೈವದ ಮೂಲವನ್ನು ಆರ್ಯರಿಗಿಂತ ಮೊದಲು ಭಾರತಕ್ಕೆ ವಲಸೆ ಬಂದ ಪೂರ್ವ ಆಫ್ರಿಕಾ ಜನರಿಂದ ಹರಿದುಬಂದ ಲಿಂಗಾರಾಧನೆಯೆನ್ನಬಹುದು. ಈ ಮೂಲನಿವಾಸಿಗಳ ಲಿಂಗಾರಾಧನೆಯೇ ವೇದಗಳಲ್ಲಿ ರುದ್ರಾರಾಧನೆಯಾಯಿತು ಎಂದು ಇತಿಹಾಸಜ್ಞರು ಅಭಿಪ್ರಾಯ ಮಂಡಿಸಿದ್ದಾರೆ. ಈ ವಾದವನ್ನು ಪುರಸ್ಕರಿಸಲು ಪೂರಕವಾಗಿ ಬ್ರಿಟಿಷ್ ಭಾರತದ ಪುರಾತತ್ವ ಇಲಾಖೆಯ ಡೈರೆಕ್ಟರ್ ಜನರಲ್ ಆಗಿದ್ದ ಇತಿಹಾಸಜ್ಞ ಸರ್ ಜಾನ್ ಮಾರ್ಷಲ್ ತಮ್ಮ "ಮೊಹೆಂಜೋದಾರೋ ಅಂಡ್ ದಿ ಇಂಡಸ್ ಸಿವಿಲೈಜೇಶನ್" ಸಂಶೋಧನ ಗ್ರಂಥದಲ್ಲಿ "ಕಲ್ಲಿನಿಂದ ಮಾಡಿದ ಸಣ್ಣ ಲಿಂಗಾಕೃತಿಗಳು ಮೊಹೆಂಜೋ-ದಾರೋ ಉತ್ಖನನದ ಸಮಯದಲ್ಲಿ ಸಿಕ್ಕಿದ್ದು, ಶೈವರಾಧನೆ ಅಥವಾ ಲಿಂಗಾರಾಧನೆಯು ಈ ಕಾಲದಲ್ಲಿಯೂ ಪ್ರಚಲಿತವಿತ್ತೆಂದು ಸಾಕ್ಷ್ಯವನ್ನು ನೀಡುತ್ತವೆ. ಇಲ್ಲಿ ದೊರೆತ ಸಣ್ಣ ಲಿಂಗಾಕೃತಿಗಳು ದಕ್ಷಿಣ ಭಾರತದಲ್ಲಿನ ಇಂದಿನ ವೀರಶೈವರು ಕೊರಳಿಗೆ ಕಟ್ಟಿಕೊಂಡಿರುವ ಕರಂಡದಲ್ಲಿ ಇಟ್ಟುಕೊಳ್ಳುವ ಲಿಂಗಗಳಷ್ಟು ಚಿಕ್ಕದಿವೆ" ಎಂದಿದ್ದಾರೆ. ಆಸಕ್ತರು ಈ ಗ್ರಂಥವನ್ನು ಪರಿಶೀಲಿಸಬಹುದು. ಒಂದು ವೇಳೆ ಈ ಗ್ರಂಥವು ಅನುಪಲಬ್ಧವಾಗಿದ್ದರೆ ಹಂಪಿ ಕನ್ನಡ ವಿಶ್ವವಿದ್ಯಾಲಯವು ಪ್ರಕಟಿಸಿರುವ ಸಂಶೋಧಕರಾದ ಆರ್. ಸಿ. ಹಿರೇಮಠ ಅವರ "ಮಹಾಯಾತ್ರೆ" ಕೃತಿಯನ್ನು ಪರಿಶೀಲಿಸಬಹುದು. ಅವರು ತಮ್ಮ ಈ ಕೃತಿಯಲ್ಲಿ ಸರ್ ಜಾನ್ ಮಾರ್ಷಲ್ ಅವರ ಗ್ರಂಥವನ್ನು ಉಲ್ಲೇಖಿಸುತ್ತ ತಮ್ಮ ಸಂಶೋಧನೆಯ ಇನ್ನಷ್ಟು ಪೂರಕ ವಿಷಯಗಳನ್ನು ಮಂಡಿಸಿದ್ದಾರೆ. ಇದೇ ರೀತಿ ಸಾಹಿತಿ ಜೆ. ರುದ್ರಪ್ಪನವರು ’ಶೈವಮತ’ ಎಂಬ ತಮ್ಮ ಲೇಖನದಲ್ಲಿ ಸಹ ಸರ್ ಜಾನ್ ಮಾರ್ಷಲ್ ಅವರ ಗ್ರಂಥವನ್ನು ಆಕರವಾಗಿ ಉಲ್ಲೇಖಿಸಿದ್ದಾರೆ. ಇವರ ಈ ಲೇಖನವು ಅ.ನ.ಕೃ. ಸಂಪಾದಿಸಿರುವ ’ಭಾರತೀಯ ಸಂಸ್ಕೃತಿ ದರ್ಶನ’ ಕೃತಿಯಲ್ಲಿ ಒಂದು ಅಧ್ಯಾಯವಾಗಿದೆ (ಪುಟ ೨೧೬).


ಮೊಹೆಂಜೋ-ದಾರೋ ಉತ್ಖನನದಲ್ಲಿ ದೊರೆತ ಈ ಲಿಂಗಗಳು ಲಿಂಗಗಳಾಗಿದ್ದರೂ ಅವುಗಳ ಕೆಳಗಿನ ಪೀಠ ಯೋನಿಪೀಠ ಎಂದು ಹೇಳಲಾಗದು ಎಂದು ಆರ್ಥರ್ ಬಾಶಂ ತಮ್ಮ ಸಂದೇಹವನ್ನು ವ್ಯಕ್ತಪಡಿಸಿದ್ದರು. ಆದರೆ ಇದಕ್ಕೆ ಬ್ರಿಟಿಷ್ ಭಾರತದ ಮತ್ತೀರ್ವ ಉತ್ಖನನ ಸಂಶೋಧಕರಾದ ಜೋನ್ಸ್ ಮತ್ತು ರಾಯನ್, ಹರಪ್ಪಾ ಮತ್ತು ಮೊಹೆಂಜೋ-ದಾರೋದಲ್ಲಿ ತಮಗೆ ಯೋನಿಪೀಠದ ಮೇಲಿರುವ ಲಿಂಗಗಳೇ ಸಿಕ್ಕಿರುವುದು ಎಂದು ಸ್ಪಷ್ಟಪಡಿಸಿದ್ದಾರೆ. ಭಾರತ ಇತಿಹಾಸಜ್ಞೆ ವೆಂಡಿ ಡೋನಿಗರ್ ಸಿಂಧೂ ಕಣಿವೆ ನಾಗರೀಕತೆಯು ಬಳಸುತ್ತಿದ್ದ ಮೊಹರುಗಳಲ್ಲಿ ಒಂದಾದ ಪಶುಪತಿ ಮೊಹರಿನಲ್ಲಿರುವ ಲಿಂಗಾಕೃತಿಯನ್ನು ತೋರಿ ಇಲ್ಲಿ ಸಿಕ್ಕ ಪಳೆಯುಳಿಕೆಗಳು ಲಿಂಗಗಳೇ ಎಂದಿದ್ದಾರೆ. ಒಟ್ಟಾರೆ ಈ ಎಲ್ಲಾ ಉತ್ಖನನಗಳು ಮತ್ತು ಸಂಶೋಧನೆಗಳು ಲಿಂಗಾರಾಧನೆಯು ಸಿಂಧೂ ನಾಗರೀಕತೆಯ ಭಾಗವಾಗಿದೆ ಎಂದು ಪ್ರತಿಪಾದಿಸಿವೆ. ಹಾಗಾಗಿ ಲಿಂಗಾರಾಧನೆಯು ಭಾರತದಲ್ಲಿ ಆರ್ಯನ್ ವಲಸಿಗರು ಬರುವ ಮುಂಚಿನಿಂದಲೂ ಇದ್ದ ಮೂಲ ಸಂಸ್ಕೃತಿಯೆನ್ನಬಹುದು.


ಅಲ್ಲಿಗೆ ಮೂಲನಿವಾಸೀ ಪಶುಪಾಲಕರ ಪಶುಪತಿಗೂ ಹರಪ್ಪಾ ಮೊಹೆಂಜೋ-ದಾರೊ ಮೊಹರಿಗೂ ನೇರ ಸಂಬಂಧವಲ್ಲದೆ ಲಿಂಗ ಯಾನೆ ಶೈವಕ್ಕೆ ಸಹ ಪುರಾವೆಯನ್ನು ಸ್ಥಾಪಿಸುತ್ತದೆ. ಈ ಪಶುಪತಿಯ ಆರಾಧಕರೇ ಮುಂದೆ ಪಾಶುಪತರೆಂದು ಕರೆಯಲ್ಪಟ್ಟರು. ಸರ್ ಜಾನ್ ಮಾರ್ಷಲ್ ಅವರು ಸಣ್ಣ ಲಿಂಗಾಕೃತಿಗಳನ್ನು ಶೈವಿಗರು ತಮ್ಮ ಕೊರಳಿಗೆ ಅಥವಾ ತೋಳಿಗೆ ಕಟ್ಟಿಕೊಂಡು ತಿರುಗುವ 'ಜಂಗಮ' ಸಂಸ್ಕೃತಿಯವರು ಎಂದಿದ್ದಾರೆ. ಆ ಜಂಗಮ ಸಂಸ್ಕೃತಿಯು ಬೌದ್ಧರ ಮೇಲೆ ಸಾಕಷ್ಟು ಪ್ರಭಾವ ಬೀರಿತ್ತು. ಆ ಪ್ರಭಾವದಿಂದಲೇ ಬೌದ್ಧರು ಬುದ್ಧನ ಅಥವಾ ನಂತರದ ಬೌದ್ಧಗುರುಗಳ ಜೈವಿಕ ಪಳೆಯುಳಿಕೆಗಳಾದ ಹಲ್ಲು, ಮೂಳೆ, ಕೂದಲುಗಳನ್ನೋ ಕರಂಡಕಗಳಲ್ಲಿಟ್ಟು ಪೂಜಿಸುತ್ತಿದ್ದರು ಮತ್ತು ತಮ್ಮೊಟ್ಟಿಗೆ ದೇಶಾಂತರದಲ್ಲಿ ತೆಗೆದುಕೊಂಡು ಹೋಗುತ್ತಿದ್ದರು. ಮುಂದೆ ಸ್ತೂಪಗಳನ್ನು ಕಟ್ಟಲು ತೊಡಗಿದಾಗ ಆ ಸ್ತೂಪಗಳಲ್ಲಿ ಈ ಕರಂಡಕಗಳನ್ನು ಸ್ಥಾವರಗೊಳಿಸಲಾರಂಭಿಸಿದರು. ಆ ಕರಂಡಕಗಳ ಸಂಸ್ಕೃತಿಯಿಂದ ಪ್ರಭಾವಿತರಾಗಿ ಶೈವರು ತೋಳು ಕೊರಳಿಗೆ ಕಟ್ಟಿಕೊಳ್ಳುತ್ತಿದ್ದ ತಮ್ಮ ಲಿಂಗಗಳನ್ನು ಇಂತಹ ಕರಂಡಕಗಳಲ್ಲಿಟ್ಟು ಅವುಗಳನ್ನು ತೋಳು ಕೊರಳಿಗೆ ಕಟ್ಟಿಕೊಳ್ಳಲಾರಂಭಿಸಿರಬೇಕು ಅಥವಾ ಬೌದ್ಧರೇ ಶೈವಿಗರ ಈ ಪದ್ಧತಿಯನ್ನು ಅಳವಡಿಸಿಕೊಂಡಿರಲೂಬಹುದು. ಪುನರ್ಜನ್ಮದಲ್ಲಿ ನಂಬಿಕೆಯಿರದ ಬೌದ್ಧರು ನಿರ್ವಾಣ ಹೊಂದಿದ ಜೀವಿಗಳ ಭೌತಿಕ ಪಳೆಯುಳಿಕೆಗಳಾದ ಹಲ್ಲು, ಕೂದಲು, ಮೂಳೆಗಳನ್ನು ಕರಂಡಕದಲ್ಲಿಟ್ಟು ಪೂಜಿಸಿದರೆ, ಪಾಶುಪತರು ತಮ್ಮ ಆತ್ಮವನ್ನೇ ಲಿಂಗದ ರೂಪವಾಗಿಸಿಟ್ಟು ಪೂಜಿಸುತ್ತಿದ್ದರು. ಕ್ರಿ. ಶ. ೧೨೭ ರಲ್ಲಿ ಕಾನಿಷ್ಕನ ಪಟ್ಟಾಭಿಷೇಕದ ಪ್ರಥಮ ವಾರ್ಷಿಕೋತ್ಸವದಲ್ಲಿ ರಚಿಸಿದ ಕರಂಡಕದ ಆಕಾರದಂತೆಯೇ ಶೈವಿಗರ ಲಿಂಗವಿಡುವ ಕರಂಡಕ ಯಾನೆ ಕರಡಿಗೆಯ ಆಕಾರವಿದೆ. ಹೀಗೆ ಪರಸ್ಪರ ಪ್ರಭಾವಿಸುವ ಹಿಂದೂ ಸಂಸ್ಕೃತಿಯಿಂದಲೇ ಬೌದ್ಧ, ಜೈನ, ಪಾಶುಪತಗಳು ಒಂದೇ ಸಂಸ್ಕೃತಿಯ ಕವಲುಗಳು ಎನಿಸುವುದು. ಕಾನಿಷ್ಕನ ಈ ಕರಂಡಕವು ಇಂದು ಪಾಕಿಸ್ತಾನದ ಪೇಶಾವರ್ ವಸ್ತುಸಂಗ್ರಹಾಲಯದಲ್ಲಿದೆ.


ಸಾಮಾಜಿಕ ವಿಕಾಸ: 


ಮುಂದಿನ ಮಾನವ ವಿಕಾಸದ ವಿವಿಧ ಕಾಲಘಟ್ಟಗಳಲ್ಲಿ ಈ ಶೈವರು ಕಾಲನುಕ್ರಮವಾಗಿ ಅತಿಮಾರ್ಗಿಗಳು, ಮತ್ತು ಮಂತ್ರಮಾರ್ಗಿಗಳು ಎಂದು ವಿಭಜನೆಗೊಂಡರು. ಮಂತ್ರಮಾರ್ಗಿಗಳು ನಿಗೂಢವಾಗಿರುತ್ತಿದ್ದರು. ತಮ್ಮ ಸ್ವಂತ ಸುಖಲೋಲುಪತೆ ಅವರ ಗುರಿಯಾಗಿತ್ತು. ಮಂತ್ರಮಾರ್ಗಿಗಳಲ್ಲಿನ ಪಂಗಡಗಳು ಕಾಪಾಲಿಕ ಮತ್ತು ಅಘೋರಿ. ಈ ಪಂಥಗಳ ನಿಗೂಢತೆ, ಸಮಾಜ ವಿಕ್ಷಿಪ್ತತೆಯನ್ನು ಈಗಲೂ ಕಾಣಬಹುದು. ಆದರೆ ಅತಿಮಾರ್ಗಿಗಳು ಇದಕ್ಕೆ ವ್ಯತಿರಿಕ್ತವಾಗಿ ಜನಾನುರಾಗಿಗಳು, ಸಮಾಜಮುಖಿಗಳು ಮತ್ತು ಸದಾ ಸಂಚಾರಿಗಳು. ಶೈವಧರ್ಮ ಪ್ರಸಾರ ಇವರ ಗುರಿ. ಇವರು ಒಂದು ನಿಶ್ಚಿತ ಸಮಾಜ ವ್ಯವಸ್ಥೆಯನ್ನು ಸಂಘಟಿಸಿ, ಅದನ್ನು ವಿಕಸಿತಗೊಳಿಸುತ್ತ ನಡೆದರು. ತಾವು ಎಲ್ಲೆಲ್ಲಿ ಸಂಚರಿಸುತ್ತಾ ಹೋದರೋ ಅಲ್ಲೆಲ್ಲ ಅತಿಮಾರ್ಗಿಗಳು ಮಠಗಳನ್ನು ಕಟ್ಟುತ್ತಾ ನಡೆದರು. ಮತ್ತದೇ ಶೈವ-ಬೌದ್ಧರ ಕರಂಡಕ-ಕರಡಿಗೆ ಚಿಂತನೆಯ ಕೊಡುಕೊಳ್ಳುವಿಕೆಯಂತೆ ಮಠಗಳನ್ನು ಕಟ್ಟುವ ಚಿಂತನೆ ಸಹ ಪರಸ್ಪರ ಅಳವಡಿಕೆಯಾಗಿರುವುದು ಕುತೂಹಲಕರ.


ಕಾಲಾನುಕ್ರಮದಲ್ಲಿ ಈ ಅತಿಮಾರ್ಗಿಗಳು ಅಧಿಕೃತವಾಗಿ ಪಾಶುಪತ, ಲಾಕುಳ, ಮತ್ತು ಕಾಳಾಮುಖರೆಂದು ಕರೆಯಲ್ಪಟ್ಟರು. ಬ್ರಿಟಿಷ್ ವಿದ್ವಾಂಸ ಗ್ಯಾವಿನ್ ಫ್ಲಡ್ ನ "ಅನ್ ಇಂಟ್ರೊಡಕ್ಷನ್ ಟು ಹಿಂದೂಯಿಸಂ" ಸಂಶೋಧನಾ ಕೃತಿಯ ಪ್ರಕಾರ ಕ್ರಿ.ಶ. ಒಂದನೇ ಶತಮಾನದಲ್ಲೇ ಅತಿಮಾರ್ಗಿಗಳು ಕಾಳಾಮುಖ ಪಾಶುಪತರೆಂದು ಗುರುತಿಸಲ್ಪಟ್ಟಿದ್ದರು. ಈ ಸಂಚಾರಿ ಜಂಗಮರು ತಮ್ಮದೇ ಆದ ಒಂದು ವಲಸೆಯ ಪರಿಯನ್ನು ಅಳವಡಿಸಿಕೊಂಡಿದ್ದರು. ತಾವು ಪ್ರತಿಸಾರಿ ಸಂಚರಿಸುವ ಸ್ಥಳಗಳಲ್ಲಿ ಮಠಗಳನ್ನು ನಿರ್ಮಿಸಿಕೊಂಡು ಅಲ್ಲಲ್ಲೇ ನಿರ್ದಿಷ್ಟ ಕಾಲ ಬೀಡುಬಿಡುತ್ತಿದ್ದರು. ಈ ಮಠಗಳು ಶೈವಪಂಥದ ಶಾಲೆಗಳಂತೆ ಕಾರ್ಯ ನಿರ್ವಹಿಸುತ್ತಿದ್ದವು ಎಂದು ಡೇವಿಡ್ ಲೊರೆಂಜೆನ್ ತಮ್ಮ "ದಿ ಕಾಪಾಲಿಕಾಸ್ ಅಂಡ್ ಕಾಳಾಮುಖಾಸ್: ಟು ಲಾಸ್ಟ್ ಶೈವೈಟ್ ಸೆಕ್ಟ್ಸ್" ಸಂಶೋಧನ ಕೃತಿಯಲ್ಲಿ ವಿವರಿಸಿದ್ದಾರೆ.


ಕಾಲಕ್ಕನುಗುಣವಾಗಿ ಮಾನವಸಮಾಜ ವಿಕಾಸಗೊಂಡಂತೆ (ಅಲೆಮಾರಿತನದಿಂದ ನೆಲೆಮಾರಿಗಳಾದಂತೆ) ಜಂಗಮ ಕಾಳಾಮುಖರಲ್ಲಿ ಕೆಲವರು ಒಂದೆಡೆ ನೆಲೆ ನಿಲ್ಲಬಯಸಿರಬಹುದು. ಈ ರೀತಿ ನೆಲೆ ನಿಂತವರನ್ನೇ ಅವರವರ ಕಾಯಕಗಳಿಂದ ಗುರುತಿಸಿ ಒಕ್ಕಲಿಗ, ಗಾಣಿಗ, ಅಗಸ, ಕ್ಷೌರಿಕ, ಚಮ್ಮಾರ, ಕಮ್ಮಾರ, ಕುಂಬಾರ, ಗುಡಿಕಾರ, ಅಕ್ಕಸಾಲಿ ಮತ್ತಿತರೆಯಾಗಿ ಕರೆಯಲ್ಪಟ್ಟರು. ಈ ರೀತಿಯ ವಿಕಾಸವು ಕೇವಲ ಭಾರತದಲ್ಲಷ್ಟೇ ಅಲ್ಲದೆ ಮಾನವಜನಾಂಗವು ಎಲ್ಲೆಲ್ಲಿ ಇದ್ದಿತೋ ಅಲ್ಲೆಲ್ಲಾ ಜಾಗತಿಕವಾಗಿ ಆಗಿದೆ. ಉದ್ಯೋಗಗಳು ಯಾ ವೃತ್ತಿಗಳು ವರ್ಣಗಳ ವಿಶಾಲಾರ್ಥದೊಳಗೇ ವಿಂಗಡಗೊಂಡು ವೃತ್ತಿಜಾತಿಗಳಾಗಿ ರೂಪುಗೊಳ್ಳುತ್ತಾ ಸಾಗಿದವು. ಏಕೆಂದರೆ ಸಾಕಷ್ಟು ಭಾರತೀಯ ಜಾತಿಗಳು ಕುಶಲಕರ್ಮ ಯಾ ವೃತ್ತಿಗಳೊಂದಿಗೆ ಸಂಯೋಗಗೊಂಡಿವೆ. ಅದೇ ರೀತಿ ಇತರೆ ನಾಗರೀಕತೆಗಳಲ್ಲಿ ಈ ವೃತ್ತಿಗಳು ಕುಲನಾಮವಾದವು. ಪುರೋಹಿತ-ಪ್ರೀಸ್ಟ್, ವೈಶ್ಯ-ಮರ್ಚಂಟ್/ಸ್ಮಿತ್, ಕ್ಷತ್ರಿಯ-ವಾರಿಯರ್, ಕುರುಬ-ಶೆಪರ್ಡ್, ಚಮ್ಮಾರ-ಶುಮಾಕರ್, ಮಠ-ಮೊನ್ಯಾಸ್ಟ್ರಿ, ಮಾಲಿ-ಗಾರ್ಡನರ್, ಕಮ್ಮತ-ಫಾರ್ಮರ್/ಫೌಲ್ಕನರ್/ಗ್ರೋವರ್, ಬಡಿಗೇರ್-ವುಡ್ಮನ್/ವುಡ್ಸ್ಮಿತ್, ಈಡಿಗ-ಬ್ರ್ಯೂವರ್, ಗಾರೆ-ಮೇಸನ್ ಮುಂತಾದವು. ಈ ರೀತಿಯ ಕುಲನಾಮಗಳು ಕೇವಲ ಬ್ರಿಟಿಷರಲ್ಲದೇ ಸ್ಪ್ಯಾನಿಷ್, ಪೋರ್ಚುಗೀಸ್, ಆಫ಼್ರಿಕಾ, ಅರೇಬಿಯಾ ಮುಂತಾದೆಡೆಯೆಲ್ಲ ವಿಕಾಸಗೊಂಡಿವೆ. ಅದೇ ರೀತಿ ಮಾತಾಪಿತೃನಾಮವನ್ನು ಕುಲನಾಮವಾಗಿಸಿದ ಕಮಲಕ್ಕನವರ್, ವಿರೂಪಣ್ಣಾವರ್ ಎಂಬುವು ಜಾಗತಿಕವಾಗಿ ಮೆಕ್ ಡಾನಲ್ಡ್/ಡಾನಾಲ್ಡಸ್ಕಿ/ಲೌರಾನ್ಸ್ಕಿಯಾದರೆ, ಮೂಲಸ್ಥಳಗಳ ಕುಲನಾಮಗಳು ಹುಬ್ಳೀಕರ್, ಮೈಸೂರುಮಠ, ಲಾಹೋರಿ, ಬಿಹಾರಿ ಮುಂತಾದವು. ಒಟ್ಟಾರೆ ಉದ್ಯೋಗ ಯಾ ಮಾತಾಪಿತ ಯಾ ಮೂಲಸ್ಥಳಗಳು ಜನಾಂಗೀಯ ಗುರುತಿನ ಸ್ಥಾನ ಗಳಿಸಿದವು. ನಾಗರೀಕತೆಗಳ ಜಾಗತೀಕರಣ ಮಾನವ ವಿಕಾಸದೊಂದಿಗೇ ಬೆಸೆದುಕೊಂಡಿದ್ದಿತು. ಜಾಗತೀಕರಣವನ್ನು ವಿರೋಧಿಸುವವರು ಮಾನವವಿಕಾಸ ಮತ್ತು ಇತಿಹಾಸವನ್ನು ಅರಿಯಬೇಕು. ಏಕೆಂದರೆ ಇತಿಹಾಸ ಎಲ್ಲಾ ನಾಗರೀಕತೆಗಳ ಮೂಲ. ಇತಿಹಾಸವಿಲ್ಲದೆ ನಾಗರೀಕತೆ ಇಲ್ಲ. ವಿದೇಶಿ ನಾಗರೀಕತೆಗಳಲ್ಲಿ ಹುಟ್ಟಿನಿಂದ ಕುಲನಾಮವಿಟ್ಟುಕೊಳ್ಳುವ ಪದ್ದತಿ ಇದ್ದಿತೇ ಹೊರತು, ಅದೇ ವೃತ್ತಿಯಲ್ಲೇ ಇರಬೇಕೆಂಬ ನಿಯಮವೇನೂ ಇರಲಿಲ್ಲ. ಅಂತೆಯೇ ಹಿಂದೂ ಸಂಸ್ಕೃತಿಯಲ್ಲಿ ಕೂಡ ಹುಟ್ಟು ಏನಾಗಿದ್ದರೂ ವೃತ್ತಿಯು ವರ್ಣವನ್ನು ನಿರ್ಧರಿಸುತ್ತಿದ್ದಿತು. ಕ್ರಮೇಣ ವೃತ್ತಿಗಳು ಜಾತಿಯೆಂದು ಗುರುತಿಸಿಕೊಳ್ಳುತ್ತ ಸಾಗಿದರೂ, ಅದೇ ವೃತ್ತಿಗಳಲ್ಲೇ ತೊಡಗಿಕೊಳ್ಳಬೇಕೆಂಬ ನಿಯಮಗಳೇನೂ ಇರಲಿಲ್ಲ. ಹೀಗೆ ಸಮಾಜದ ವಿಕಾಸಕ್ಕನುಗುಣವಾಗಿ ವೃತ್ತಿಗಳಿಂದ ವ್ಯಕ್ತಿಗಳು ಗುರುತಿಸಿಕೊಳ್ಳಲಾರಂಭಿಸಿ ಭಾರತದಲ್ಲಿ ಜಾತಿವಿಕಾಸಕ್ಕೆ ಮುನ್ನುಡಿಯಾಯಿತು. ಕಾಳಾಮುಖ ಸಹ ಇದಕ್ಕೆ ಹೊರತಾಗಿರಲಿಲ್ಲ. ವೃತ್ತಿಯೇತರವಾಗಿ ಕಾಳಾಮುಖರೆಲ್ಲರೂ ಒಂದೇ ಆಗಿದ್ದರು. 


ತಾತ್ವಿಕ ವಿಕಾಸ: 


ಇನ್ನು ಶೈವದ ಲಕುಲೀಶ ಎಂದರೆ ಒಂದು ಲಾಕುಲ (ಕೂಟ)ದ ಮುಖಂಡನೇ ಈಶ ಅಥವಾ ದೊಣ್ಣೆ(ತ್ರಿಶೂಲ)ಯನ್ನು ಹಿಡಿದವ ಎಂದು ಸಂಶೋಧಕರು ಗುರುತಿಸಿದ್ದಾರೆ.  ಸಂಶೋಧಕ ಹೆಚ್.ಹೆಚ್. ಡ್ಯಾನಿಯಲ್ ಇಂಗಲ್ಸ್ ಅರವತ್ತರ ದಶಕದಲ್ಲೇ ಹರ್ಕ್ಯೂಲಿಸ್ ಮತ್ತು ಲಕುಲೀಶ ಪದಗಳ ಮತ್ತವುಗಳ ಶಬ್ದಾರ್ಥದ ಸಾಮ್ಯತೆಯ ಮೇಲೆ ಎರಡೂ ಒಂದೇ ಎಂಬ ಅನುಮಾನವನ್ನು ವ್ಯಕ್ತಪಡಿಸಿದ್ದಾರಲ್ಲದೆ ಗ್ರೀಕ್ ಸಿನಿಕರಿಗೂ ಮತ್ತು ಪಾಶುಪತರಿಗೂ ಇರುವ ತಾತ್ವಿಕ ಸಾಮ್ಯತೆಯನ್ನು ಗುರುತಿಸುತ್ತಾರೆ. ಹಿಂದೂಗಳ ಮೇಲೆ ಗ್ರೀಕರ ಪ್ರಭಾವವಿದ್ದಂತೆ ಲಕುಲೀಶನ ಪ್ರಭಾವ ಗ್ರೀಕ್ ಸಂಸ್ಕೃತಿಯ ಮೇಲಾಗಿ ಹರ್ಕ್ಯೂಲಿಸ್ ಅನಾವರಣಗೊಂಡಿರಬಹುದು ಎಂದು ತಮ್ಮ ವಾದವನ್ನು ಮಂಡಿಸಿದ್ದಾರೆ.  ಇದಕ್ಕೆ ಪೂರಕವಾಗಿ ಹೂಣರು ತಮ್ಮ ನಾಣ್ಯಗಳ ಮೇಲೆ ಹರ್ಕ್ಯೂಲಿಸ್ ತೆಗೆದು ಶಿವನನ್ನು ಟಂಕಿಸಿದ ಉದಾಹರಣೆಯನ್ನು ಕೊಟ್ಟು ತಮ್ಮ ವಾದವನ್ನು ಸಮರ್ಥಿಸಿಕೊಂಡಿದ್ದಾರೆ. ಹೆಚ್ಚಿನ ಓದಿಗೆ ಹಾರ್ವರ್ಡ್ ಥಿಯಾಲಾಜಿಕಲ್ ರಿವ್ಯೂ ೧೯೬೨ ರಲ್ಲಿ ಪ್ರಕಟಿಸಿರುವ "ಸಿನಿಕ್ಸ್ ಅಂಡ್ ಪಾಶುಪತಾಸ್: ದಿ ಸೀಕಿಂಗ್ ಆಫ್ ಡಿಸ್ಹಾನರ್" ಲೇಖನವನ್ನು ಗಮನಿಸಬಹುದು.


ಅದಲ್ಲದೆ ಭಾರತೀಯ ತರ್ಕಶಾಸ್ತ್ರವಾದ "ನ್ಯಾಯ ಸೂತ್ರ"ವನ್ನು ರಚಿಸಿದ ಗೌತಮ ಸಹ ಭರೂಚದಲ್ಲಿ ವಾಸವಿದ್ದು ಅಲ್ಲಿದ್ದ ಗ್ರೀಕರ ಸಿನಿಕ್ ಪಂಥದಿಂದ ಪ್ರಭಾವಿತಗೊಂಡಿರಬಹುದು ಎಂದು ಫರ್ರಾಂಡ್ ಸಾಯ್ರ್ ತಮ್ಮ ೧೯೩೮ ರಲ್ಲಿ ಪ್ರಕಟಿಸಿದ "ಡೈಯೋಜೀನ್ಸ್ ಆಫ್ ಸಿನೋಪ್: ಎ ಸ್ಟಡಿ ಆಫ್ ಗ್ರೀಕ್ ಸಿನಿಸಿಸಂ" ಕೃತಿಯಲ್ಲಿ ಹೇಳಿದ್ದಾರೆ.  ಈ ಭರೂಚ ಪ್ರದೇಶವೇ ಲಕುಲೀಶರ ಆಡುಂಬೋಲ ಸಹ ಆಗಿತ್ತು. ಅದಲ್ಲದೆ ಕಾಳಾಮುಖ ಮತ್ತು ಪಾಶುಪತಗಳೆರಡೂ ನ್ಯಾಯ ಮತ್ತು ವೈಶೇಷಿಕ ಆಧ್ಯಾತ್ಮಿಕತೆಗೆ ಹೆಚ್ಚು ಹತ್ತಿರವಿದ್ದವು ಎಂದು ಈಗಾಗಲೇ ಸಾಕಷ್ಟು ಸಂಶೋಧನೆಗಳು ಸಾಬೀತುಪಡಿಸಿವೆ.


ಸಂಶೋಧಕರಾದ ಎಸ್.ಎನ್. ದಾಸ್ "ಹಿಸ್ಟರಿ ಆಫ್ ಇಂಡಿಯನ್ ಫಿಲಾಸಫಿ" ಕೃತಿಯಲ್ಲಿ ಕಾಳಾಮುಖ ಯಾ ಪಾಶುಪತದ ಹರದತ್ತನ "ಪಾಶುಪತ ಗಣಕಾರಿಕಾ"ವೇ ಪರಿಷ್ಕೃತಗೊಂಡು "ಸಿದ್ಧಾಂತ ಶಿಖಾಮಣಿ" ಆಗಿದೆ ಎಂದಿದ್ದಾರೆ. ಕಾಳಾಮುಖರ ಬೊಂತೇಯಮುನಿ "ಕರ್ತೃ"ವು ನಿರಾಕಾರನೂ ನಿರಾಮಯನೂ ಆಗಿದ್ದಾನೆ ಎಂದಿದ್ದಾನೆ.  ಬೊಂತೇಯಮುನಿಯ ಸ್ಥಾವರ-ಕರ್ತೃ-ವಾದವು ಪಾಶುಪತದಲ್ಲಿ "ಕಾರ್ಯಕಾರಣ ಸ್ಥಾವರ" ಅಂದರೆ ಲೌಕಿಕ ಪ್ರಪಂಚದ ಕಾರಣ ಸ್ಥಾವರ ಬೇಕು ಎಂದಾಗಿದೆ. ಇನ್ನು ಕರ್ತೃ, ಸ್ಥಾವರ, ನಿರಾಕಾರ, ನಿರಾಮಯಗಳು ವಚನಗಳಲ್ಲಿ ಹಾಸುಹೊಕ್ಕಾಗಿವೆ.  ಈ  ಪಂಥಗಳು ತರ್ಕಶಾಸ್ತ್ರ, ಯೋಗ, ತಂತ್ರವನ್ನು ತಮ್ಮ ಆಧ್ಯಾತ್ಮಿಕ ತತ್ವಗಳಲ್ಲಿ ಅಳವಡಿಸಿಕೊಂಡಿವೆ. ತಾಂತ್ರಿಕ ಕುಂಡಲಿನೀ ಕ್ರಿಯೆಯ ವರ್ಣನೆಯನ್ನು ಅಲ್ಲಮನಲ್ಲದೇ ಅಕ್ಕಮಹಾದೇವಿ ಚೆನ್ನಬಸವಣ್ಣ ಮತ್ತಿತರೆ ವಚನಕಾರರ ವಚನಗಳಲ್ಲಿ ಕಾಣಬಹುದು. ಹೀಗೆ "ಸಿದ್ಧಾಂತ ಶಿಖಾಮಣಿ" ಗ್ರಂಥಕ್ಕೆ ಐತಿಹಾಸಿಕ ಪುರಾವೆಯ ಬೆಂಬಲ ಸಿಗುತ್ತದೆ.


ಇನ್ನು ’ಶಕ್ತಿವಿಶಿಷ್ಟಾದ್ವೈತ’ದ "ಶಕ್ತಿ" ಎಂಬುದು ಕಾಳಾಮುಖರ ಛಾಪಾಗಿತ್ತು. ಕರ್ಣಾಟ ಸಾಮ್ರಾಜ್ಯಸ್ಥಾಪನೆಗೆ ಮಾರ್ಗದರ್ಶನ ನೀಡಿದ್ದ ಕ್ರಿಯಾ'ಶಕ್ತಿ', ಹೊಂಬಳದಲ್ಲಿನ ಕ್ರಿ.ಶ. ೧೧೮೯ ರ ದತ್ತಿ ಶಾಸನದಲ್ಲಿನ ರುದ್ರ'ಶಕ್ತಿ', ಬಳ್ಳಿಗಾವೆ ಕೇದಾರೇಶ್ವರ ದೇವಸ್ಥಾನದ ಶಾಸನಲ್ಲಿರುವ ಕೇದಾರ'ಶಕ್ತಿ', ವಾಮ'ಶಕ್ತಿ', ಜ್ಞಾನ'ಶಕ್ತಿ' ಹೀಗೆ ಕಾಳಾಮುಖ ಸಾಧಕರ ಶಕ್ತಿ ಪಟ್ಟಿ ಬೆಳೆಯುತ್ತದೆ. ಈ ಎಲ್ಲಾ 'ಶಕ್ತಿ'ಗಳನ್ನು ಶಾಸನಗಳಲ್ಲಿ ಜಂಗಮ, ಲಿಂಗಾವತಾರ ಎಂದೂ ಕರೆಯಲಾಗಿದೆ. "ಜಂಗಮವೇ ಲಿಂಗವೆಂದರಿಯದವರ ತೋರದಿರು" ಎಂದು ವಚನಕಾರರೇ ಜಂಗಮವನ್ನು ಮಾನ್ಯ ಮಾಡಿದ್ದಾರೆ. ಬಿಜ್ಜಳರಾಯಚರಿತಗಳಲ್ಲಿ ಬಸವಣ್ಣನು ಮತಪ್ರಚಾರಕ್ಕಾಗಿ ಜಂಗಮರಿಗೆ ಸಾಕಷ್ಟು ಹಣವನ್ನು ಚೆಲ್ಲಿ ಕೋಶವನ್ನು ಖಾಲಿ ಮಾಡಿದ್ದನು ಎಂದಿದೆ. ಈ ಹಿನ್ನೆಲೆಯಲ್ಲಿ "ಮತಪ್ರಚಾರಕ್ಕಾಗಿ ಕೋಶ" ಎಂಬ ಇಂದಿನ ಪ್ರಜಾಪ್ರಭುತ್ವದ ಬುನಾದಿಯ ಅಳವಡಿಕೆಯು ಸಹ ಪ್ರಪಂಚದ ಪ್ರಥಮ ಸಂಸತ್ತಿನಲ್ಲೇ ಕಂಡುಕೊಂಡ ನಿಯಮವಿರಬಹುದೇ ಎಂಬ ಕುಚೋದ್ಯ ಸಂಕಥನ ಮನದಲ್ಲಿ ಸುಳಿದರೆ ಅದು ತಪ್ಪಲ್ಲ.


"ಕಾಳಾಮುಖ ಸಂಪ್ರದಾಯದ ಗುರುಗಳು ನ್ಯಾಯ ಮತ್ತು ವೈಶೇಷಿಕ ತತ್ವಶಾಸ್ತ್ರಗಳಲ್ಲಿ ವಿಶೇಷ ಪರಿಣಿತರಾಗಿದ್ದರು. ಅವರು ತಮ್ಮ ಹೆಸರುಗಳ ಕೊನೆಯಲ್ಲಿ ‘ಪಂಡಿತ’, ‘ಪಂಡಿತದೇವ’ ಎಂಬ ವಿಶೇಷಣಗಳನ್ನು ಹಚ್ಚಿಕೊಳ್ಳುವುದು ವಾಡಿಕೆ. ಅವರು ಸಂಸ್ಕೃತದಲ್ಲಿ ಉದ್ದಾಮ ಪಂಡಿತರಾಗಿರುತ್ತಿದ್ದರು. ಮಠ-ಮಂದಿರಗಳಿಗೆ ಅಧಿಪತಿಗಳಾಗಿರುತ್ತಿದ್ದರು. ಅವರು ಉಳಿದ ವೈದಿಕ ಪುರೋಹಿತರಂತೆ ಇರಲಿಲ್ಲ. ಅವರು ಆಜೀವ ಬ್ರಹ್ಮಚಾರಿಗಳಾಗಿರುತ್ತಿದ್ದರು. ‘ಪರಮ ನೈಷ್ಠಿಕರೆಂದೂ, ತಪೋಧನ’ರೆಂದೂ ಪ್ರಸಿದ್ಧಿ ಪಡೆದಿದ್ದರು. ಅಪವಾದಕ್ಕೆ ಕೆಲವರು ಸಂಸಾರಿಗಳಾಗಿದ್ದರೆಂದೂ ತಿಳಿದು ಬರುತ್ತದೆ. ಲಭ್ಯವಿದ್ದ ಬಸವಪೂರ್ವ ಶಾಸನಗಳಲ್ಲಿ ಅವರಿಗೆ "ಮಾಹೇಶ್ವರ"ರೆಂದು,‘ಜಂಗಮ’ರೆಂದು ಕರೆಯಲಾಗಿದೆ. ಬಸವಣ್ಣನವರು ತಮ್ಮ ವಚನಗಳಲ್ಲಿ ಬಳಸಿದ ‘ಜಂಗಮರು’ ಎಂಬ ಪದವು ಈ ಕಾಳಾಮುಖ ಜಂಗಮರನ್ನೇ ನಿರ್ದೇಶಿಸುತ್ತದೆ. ಸಮಾಜ ಸುಧಾರಣೆಯ ಕಳಕಳಿಯುಳ್ಳವರಾದ ಕಾಳಾಮುಖರು (ಜಂಗಮರು) ಬಸವಣ್ಣನವರ ಪೂರ್ವದಲ್ಲಿ ಸಂಘಟಿತರಾಗಿದ್ದರು. ಬಸವಣ್ಣನವರ ಸಮಾಜ ಸುಧಾರಣೆಯಲ್ಲಿ ಇವರು ಸಹಕರಿಸಿದರು (ಪುಟ-241). ಬಸವಣ್ಣನವರ ಪೂರ್ವದಲ್ಲಿ ಮತ್ತು ತದನಂತರ ಕೆಲವು ವರುಷ ಕಾಳಾಮುಖರು ಕರ್ನಾಟಕದ ಉತ್ತರ ಭಾಗದಲ್ಲಿ ಅತ್ಯಂತ ಪ್ರಭಾವಶಾಲಿಗಳಾಗಿದ್ದರು. ಶಿವಮೊಗ್ಗ, ಧಾರವಾಡ, ಬೆಳಗಾವಿ ಜಿಲ್ಲೆಗಳಲ್ಲೂ, ಆಂಧ್ರಪ್ರದೇಶದ ಉಸ್ಮಾನಾಬಾದ್ ಜಿಲ್ಲೆಯಲ್ಲೂ ಅವರ ಮಠಗಳಿದ್ದವು. ಶಾಸನಗಳ ಆಧಾರದ ಮೇಲೆ ಹೇಳುವುದಾದರೆ ಕ್ರಿ.ಶ 1250ರ ಹೊತ್ತಿಗೆ ಕಾಳಾಮುಖರ ಎಲ್ಲ ಮಠಗಳು ವೀರಶೈವ ಮಠಗಳಾಗಿ ಪರಿವರ್ತಿತವಾದದ್ದು ಸ್ಪಷ್ಟವಾಗಿ ತಿಳಿದು ಬರುತ್ತದೆ (ಪುಟ-239)." ಎಂದು ಡೇವಿಡ್ ಲೋರೆಂಜನ್ ಸ್ಪಷ್ಟವಾಗಿ ದಾಖಲೆ ಸಮೇತ ತಮ್ಮ "ದಿ ಕಾಪಾಲಿಕಾಸ್ ಅಂಡ್ ಕಾಳಾಮುಖಾಸ್: ಟು ಲಾಸ್ಟ್ ಶೈವೈಟ್ ಸೆಕ್ಟ್ಸ್" ಸಂಶೋಧನ ಕೃತಿಯಲ್ಲಿ ವಿವರಿಸಿದ್ದಾರೆ. 


ವಿಸ್ತರಣೆ: 


ಪಂಥ ವಿಸ್ತರಣೆಯು ಅಂದಿನ ಎಲ್ಲಾ ಪಂಥಗಳ ಗುರಿಯಾಗಿದ್ದಂತೆಯೇ ಕಾಳಾಮುಖರ ಪ್ರಮುಖ ಗುರಿಯೂ ಪಂಥ ವಿಸ್ತರಣೆಯಾಗಿತ್ತು. ಅಂದಿನ ಸಾಕಷ್ಟು ಶೈವಪ್ರಭುತ್ವಗಳ (ಅದರಲ್ಲೂ ದಕ್ಷಿಣ ಭಾರತದ) ಆಧಿಪತ್ಯ ವಿಸ್ತರಣೆಯಲ್ಲಿ ಕಾಳಾಮುಖರು ತಮ್ಮದೇ ಆದ ರೀತಿಯಲ್ಲಿ ಸಾಕಷ್ಟು ಸೇವೆಯನ್ನು ಸಲ್ಲಿಸಿದ್ದಾರೆ. ಯುದ್ಧಗಳಲ್ಲಿ ನೇರವಾಗಿ ಮತ್ತು ಪರೋಕ್ಷವಾಗಿ ವೀರೋಚಿತವಾಗಿ ಭಾಗವಹಿಸಿದ್ದಾರೆ. ರಾಜಗುರುಗಳೆಂದೂ ಮಾನ್ಯತೆ ಪಡೆದಿದ್ದಾರೆ. ಕಾಳಾಮುಖರು ತಮ್ಮ ಪಂಥವಿಸ್ತರಣೆಗೆ ಆಕ್ರಮಣಕಾರಿ ಪದ್ಧತಿಯನ್ನು ತುಸು ಹೆಚ್ಚಾಗಿಯೇ ಅನುಸರಿಸುತ್ತಿದ್ದರು. ಇದರಲ್ಲಿ ಬಹುಮುಖ್ಯವಾಗಿ ಸವಾಲುವಾದ, ಮತ್ತು ದಂಡನೆ ತಂತ್ರಗಳು ಪ್ರಮುಖವಾಗಿದ್ದವು. ಶೈವರಲ್ಲದವರಿಗೆ ಈ ಕಾಳಾಮುಖ ಶೈವರು ತಮ್ಮ ದೇವರುಗಳಿಗೆ ತಮ್ಮ ದೇಹದ ಅಂಗಾಂಗಗಳನ್ನು ಅರ್ಪಿಸುವ ಸವಾಲನ್ನು ಹಾಕುತ್ತಿದ್ದರು. ನಾವು ನಮ್ಮ ಕೈ, ಕಾಲು, ತಲೆಗಳನ್ನು ಶಿವನಿಗೆ ಅರ್ಪಿಸುವೆವು. ನೀವು ಕೂಡ ನಿಮ್ಮ ನಿಮ್ಮ ದೇವರುಗಳಿಗೆ ನಿಮ್ಮ ಅಂಗಾಂಗಗಳನ್ನು ಅರ್ಪಿಸಿ ಇಲ್ಲವೇ ಶೈವತ್ವವನ್ನು ಒಪ್ಪಿ ಎಂದು ಶೈವತ್ವವನ್ನು ಬಲವಂತವಾಗಿ ಹೇರುತ್ತಿದ್ದರು. ಏಳನೇ ಶತಮಾನದಲ್ಲಿ ಬಂದಿದ್ದ ಚೀನಿ ಯಾತ್ರಿಕ ಹುಯೆನ್ ತ್ಸಾಂಗ್ ಸಹ ಇಂತಹ ಕಾಳಾಮುಖನೊಬ್ಬ ತನಗೆ ಸವಾಲು ಹಾಕಿ ಸೋತಿದ್ದನೆಂದು ದಾಖಲಿಸಿದ್ದಾನೆ.  ಈಗಲೂ ಈ ಸವಾಲುವಾದದ ಕೈ ಕತ್ತರಿಸಿಕೊಳ್ಳುತ್ತಿರುವ, ತಲೆ ಕತ್ತರಿಸಿಕೊಳ್ಳುತ್ತಿರುವ ಮೂರ್ತಸ್ವರೂಪಗಳನ್ನು ಶ್ರೀಶೈಲದ ದೇವಸ್ಥಾನವಲ್ಲದೆ ಅನೇಕ ಶೈವ ಪರಂಪರೆಯ ಗುಡಿಗಳ ಸುತ್ತಲೂ ನೋಡಬಹುದು. ಹಾವೇರಿ ಜಿಲ್ಲೆಯ ಅಬಲೂರಿನ ಬ್ರಹ್ಮೇಶ್ವರ ದೇವಸ್ಥಾನದಲ್ಲಿ ಕೆತ್ತಿರುವ ಏಕಾಂತರಾಮನು ಜೈನರಿಗೆ ಸವಾಲೊಡ್ಡಿ ತನ್ನ ಶಿರಚ್ಛೇದ ಮಾಡಿಕೊಂಡು ಸವಾಲು ಗೆದ್ದ ಕತೆಯ ಶಿಲ್ಪ ಮತ್ತು ಶಾಸನ ಕಾಳಾಮುಖ-ವೀರಶೈವ-ಲಿಂಗಾಯತದ ಪ್ರಮುಖ ಕೊಂಡಿಯಾಗಿದೆ. ಅಬಲೂರಿನ ಬ್ರಹ್ಮೇಶ್ವರ ದೇವಸ್ಥಾನವು ಕಾಳಾಮುಖ ಆಚಾರ್ಯನ ಮೂರನೇ ಕೊನೆಯ ಸಂತತಿಯ ಅಧಿಕಾರದಲ್ಲಿತ್ತು ಎಂದು ಅಲ್ಲಿನ ಶಾಸನವೇ ತಿಳಿಸುತ್ತದೆ. ಅಬಲೂರು ಶಾಸನ ಮತ್ತು ಚೆನ್ನಬಸವ ಪುರಾಣದಲ್ಲಿ ಬಂದಿರುವ ಏಕಾಂತರಾಮಯ್ಯನೇ ಏಕೋರಾಮರಾಧ್ಯ ಎನ್ನಲಾಗಿದೆ! ಶರಣ ಚಳವಳಿಯ ವಚನಗಳಲ್ಲಿಯೂ ಈ ಸವಾಲುವಾದ ಅತ್ಯಂತ ಢಾಳಾಗಿ ಕಾಣಸಿಗುತ್ತದೆ. ಇತಿಹಾಸದ ಅನೇಕ ಶೈವ ಪರಂಪರೆಯ ಪ್ರಭುತ್ವಗಳು ಈ ಕಾಳಾಮುಖ ಶೈವರಿಂದ ಸಾಕಷ್ಟು ಸಹಾಯವನ್ನು ಪಡೆದಿದ್ದಾರೆ. ಚೋಳರು ಇವರ ಗೌರವಾರ್ಥವಾಗಿ ಒಂದು ನೌಕೆಗೆ ಕಾಳಾಮುಖ ಎಂದು ಹೆಸರಿಸಿದ್ದರು ಎನ್ನಲಾಗುತ್ತದೆ. ಇತ್ತೀಚಿನ ಮಣಿರತ್ನಂ ಚಿತ್ರವಾಹಿನಿ "ಪೊನ್ನಿಯಿನ್ ಸೆಲ್ವನ್೧/೨" ಬರುವ ಕಾಳಾಮುಖ ಪಾತ್ರಗಳನ್ನು ಈ ಹಿನ್ನೆಲೆಯಲ್ಲಿ ಗಮನಿಸಬಹುದು. ಇದು ಅಂದು ಪ್ರತಿಯೊಂದು ಮತಪಂಥಗಳು ತಮ್ಮ ತಮ್ಮ ಪಂಥವನ್ನು ಉಳಿಸಿಕೊಳ್ಳಲು ಮಾಡಲೇಬೇಕಿದ್ದ ಧರ್ಮಯುದ್ಧವಾಗಿತ್ತು. ಇದು ಕೇವಲ ವೀರಶೈವ ಪಂಥವಲ್ಲದೆ ಹಿಂದೂ, ಜೈನ, ಬೌದ್ಧ, ವೈಷ್ಣವ ಮತ್ತೆಲ್ಲಾ ಪಂಥಗಳೂ ಹೀಗೆ ಪಂಥ ಶ್ರೇಷ್ಠತೆಯ ಯುದ್ಧದಲ್ಲಿ ಅಸ್ತಿತ್ವಕ್ಕಾಗಿ, ಅಸ್ಮಿತೆಗಾಗಿ ಹೋರಾಡತೊಡಗಿದ್ದವು ಎಂಬುದು ಭಾರತದ ಇತಿಹಾಸದಾದ್ಯಂತ ಮೇಲ್ನೋಟಕ್ಕೇ ಕಾಣುವ ಐತಿಹಾಸಿಕ ಸತ್ಯ.


- ರವಿ ಹಂಜ್

ವಿಶ್ವವಾಣಿ ಬಸವ ಮಂಟಪ - ವಚನ ಚಳವಳಿಯ ಕೆಂಪೀಕರಣ!

 ನಾಡಿನ ಒಂದು ಬುದ್ಧಿಜೀವಿ ವಲಯವು ವ್ಯವಸ್ಥಿತವಾಗಿ ವಚನ ಚಳುವಳಿಯನ್ನು ಹೇಗೆ ಸಂಶೋಧನಾ ನೆಲೆಯಲ್ಲಿ ಮಾರ್ಪಡಿಸಿ ತಮ್ಮ ಸಮಾಜವಾದಿ ಸಿದ್ಧಾಂತಕ್ಕೆ ತಕ್ಕಂತೆ ಬಿತ್ತಿ ಬೆಳೆಸಿ ಸಮಗ್ರ ವೀರಶೈವವನ್ನು ವಿಭಜಿಸಿ ಲಿಂಗಾಯತ ಪ್ರತ್ಯೇಕ ಧರ್ಮ ಎನ್ನುವ ಘಟ್ಟಕ್ಕೆ ತಂದರು ಎಂದು ಹಿಂದಿನ ಲೇಖನಗಳಲ್ಲಿ ಮಾನ್ಯ ಕಲಬುರ್ಗಿಯವರ ಲೋಕಮಾನ್ಯ ಸಂಶೋಧನೆಗಳ ತಪ್ಪುಗಳ ಮೂಲಕ ತೋರಿಸಿದ್ದೆನಷ್ಟೇ! ಈಗ ಸಾಮಾಜಿಕ ಸೃಜನಾತ್ಮಕ ಲೇಖನಗಳ ಮೂಲಕ ಕಮ್ಯುನಿಸ್ಟ್ ಪ್ರಣೀತರು ವಚನ ಚಳುವಳಿಯನ್ನು ಹೇಗೆ ತಮ್ಮ ಸಿದ್ಧಾಂತಕ್ಕೆ ನೇರವಾಗಿ ಹೊಸೆದು ಬೆಸೆಯುತ್ತಾರೆ ಎಂಬ ಒಂದು ನೇರ ಉದಾಹರಣೆಯನ್ನು ನೋಡೋಣ.


ಜೂನ್ ೭, ೨೦೧೫ ರಂದು ಪ್ರಜಾವಾಣಿಯ "ಅಮೃತವಾಕ್ಕು" ಅಂಕಣದಲ್ಲಿ ಎಸ್. ಜಿ. ಸಿದ್ದರಾಮಯ್ಯ ಅವರ "ಪುಣ್ಯ ಸ್ತ್ರೀಯರು" ಎಂಬ ಲೇಖನವಿದೆ. ಈ ಲೇಖನದಲ್ಲಿ ಎಸ್. ಜಿ. ಸಿದ್ದರಾಮಯ್ಯನವರು, ".....ಕ್ಯೂಬಾಕ್ಕೆ ಸ್ವಾತಂತ್ರ ಬರುವ ಮುನ್ನ ಅದು ಅಮೆರಿಕದ ವಸಾಹತು ಆಗಿತ್ತು. ಅಮೆರಿಕ ಅದನ್ನು ಜೂಜಿನ ಅಡ್ಡೆಯಾಗಿ, ವೇಶ್ಯಾವಾಟಿಕೆಯ ಮಾರುಕಟ್ಟೆಯಾಗಿ, ಕ್ಯಾಸಿನೋವಾಗಿ ಬೆಳೆಸಿತ್ತು. ಅಮೆರಿಕದ ಈ ದಬ್ಬಾಳಿಕೆಯ ವಿರುದ್ಧ ಹೋರಾಡಿದ ಕ್ಯಾಸ್ಟ್ರೋಗೆ ತನ್ನ ನಾಡು ಸ್ವಾತಂತ್ರ್ಯ ಪಡೆದ ಮೇಲೆ ಪರಿಹರಿಸಬೇಕಾದ ಭೀಕರ ಸಮಸ್ಯೆಗಳು ಎದುರಿಗಿದ್ದವು. ಅದರಲ್ಲಿ ಬಹಳ ಪ್ರಮುಖವಾದುದು ವೇಶ್ಯಾವೃತ್ತಿಯಿಂದ ಬದುಕು ಕಳೆದುಕೊಂಡಿದ್ದ ಅಪಾರ ಸಂಖ್ಯೆಯ ಹೆಣ್ಣುಮಕ್ಕಳ ಸಮಸ್ಯೆ. ಕ್ಯಾಸ್ಟ್ರೋ ಅಧಿಕಾರ ವಹಿಸಿಕೊಂಡ ತಕ್ಷಣ ತನ್ನ ಜೊತೆ ಹೋರಾಟದಲ್ಲಿ ತೊಡಗಿದ್ದ ಯುವಕರಿಗೆ ಕೊಟ್ಟ ಕರೆಯೆಂದರೆ ತನ್ನ ನಾಡಿನ ಈ ಬಗೆಯ ಹೆಣ್ಣುಮಕ್ಕಳನ್ನು ಮದುವೆಯಾಗಿ ನಾಡಿನಲ್ಲಿ ಕೌಟುಂಬಿಕ ಜೀವನ ಸುಖಸಂತೋಷದಲ್ಲಿ ಬೆಳೆಯುವಂತಾಗಬೇಕು, ಅದಕ್ಕೆ ಸಹಕರಿಸಿ ಎಂದು ಕರೆ ನೀಡಿದ. ಕ್ಯಾಸ್ಟ್ರೋನ ಮಾತುಗಳಿಗೆ ಬೆಲೆಕೊಟ್ಟ ಹೋರಾಟಗಾರ ಯುವಕರು ವೇಶ್ಯಾವಾಟಿಕೆಯ ಹೆಣ್ಣುಮಕ್ಕಳಿಗೆ ಬಾಳುಕೊಟ್ಟರು. ಅಲ್ಲಿಂದ ಮೊದಲಾದಂತೆ ಕ್ಯೂಬಾದಲ್ಲಿ ಆದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಬದಲಾವಣೆಗಳ ಬೆಳವಣಿಗೆ ಜಗತ್ತಿನ ಅಚ್ಚರಿಗೆ ಕಾರಣವಾದ ಬಹುದೊಡ್ಡ ಕ್ರಿಯೆ. ಈಗ ಕ್ಯೂಬಾ ಸ್ವಾಭಿಮಾನದಿಂದ ತಲೆ ಎತ್ತಿ ಬೆಳೆದು ಅಮೆರಿಕೆಗೆ ಸವಾಲು ಹಾಕುತ್ತಿರುವ ಒಂದು ಧೀಮಂತ ರಾಷ್ಟ್ರ. ಈ ಚಾರಿತ್ರಿಕ ಘಟನೆ ಓದಿದಾಗ ನನಗೆ ಥಟ್ಟನೆ ಪಣ್ಯಸ್ತ್ರೀಯರಿಗೆ ಕೊಂಬು ಬಂದು ಪುಣ್ಯಸ್ತ್ರೀಯರಾಗಿರುವ ೧೨ನೇ ಶತಮಾನದ ಚಾರಿತ್ರಿಕ ಸಂಗತಿ ಮಿಂಚಿನಂತೆ ಭಾಸವಾಗಿ ಚಿಂತನೆಗೆ ಹಚ್ಚಿತು. ಹನ್ನೆರಡನೆ ಶತಮಾನದ ಚಳವಳಿ ಜಗತ್ತಿನ ಯಾವುದೇ ಮೂಲೆಯಲ್ಲೂ ನಡೆದಿರುವ ಪರಿಯ ಒಂದು ಸಾಮಾಜಿಕ ಕ್ರಾಂತಿ. ಈ ಕ್ರಾಂತಿಯಲ್ಲಿ ಎಲ್ಲ ಕಾಯಕ ಮೂಲದವರು ಭಾಗವಹಿಸಿದ್ದರು. ವೇಶ್ಯಾವೃತ್ತಿಯ ಹೆಣ್ಣುಮಕ್ಕಳೂ ಭಾಗವಹಿಸಿದ್ದರು. ಅದಕ್ಕೆ ಅಕ್ಕಮ್ಮ, ಸೂಳೆ ಸಂಕವ್ವ ಮೊದಲಾದವರು ಉದಾಹರಣೆಗೆ ಸಿಗುತ್ತಾರೆ. ಇಂಥ ಮೂಲದ ಹೆಣ್ಣುಮಕ್ಕಳಿಗೆ ಸಂಸಾರದ ಹೊಸಜೀವನ ಕೊಟ್ಟ ಸಾಮಾಜಿಕ ಕ್ರಾಂತಿ ಅಲ್ಲಿ ಜರುಗಿದೆ. ಪಣ್ಯದ ಮಹಿಳೆಯನ್ನು ತಮ್ಮ ಬಾಳಿನ ಪುಣ್ಯದ ಮಡದಿಯನ್ನಾಗಿ ಮಾಡಿಕೊಂಡ ಮಹಾಂತರು ಆ ಶರಣಮಹನೀಯರು......" ಎನ್ನುತ್ತಾರೆ.


ಬಸವಣ್ಣನ ಕಾಲದ ಮೂವರನ್ನು ಹೊರತು ಪಡಿಸಿ ಶರಣರೆಲ್ಲರೂ ಸಂಸಾರಿಗಳು. ಈ ಮೂವರಲ್ಲಿ ಅಲ್ಪಕಾಲ ವಿವಾಹಿತರೆನಿಸಿದ್ದ ಅಲ್ಲಮ, ಮಹಾದೇವಿಯರು ನಂತರ ಬ್ರಹ್ಮಚರ್ಯವನ್ನು ಅಪ್ಪಿಕೊಂಡರು. ಚೆನ್ನಬಸವಣ್ಣ ಮೊದಲಿನಿಂದಲೂ ಬ್ರಹ್ಮಚಾರಿಯೇ ಆಗಿದ್ದ. ಇವರ ಬ್ರಹ್ಮಚರ್ಯಕ್ಕೆ ಕಾರಣ ಈ ಮೂವರೂ ಕಾಳಾಮುಖ ಪರಂಪರೆಯ ವೀರಶೈವದ ಪರಮಸಾಧಕರಾಗಿದ್ದುದು. ಉಳಿದೆಲ್ಲಾ ಶರಣರು ವಿವಾಹಿತರಾಗಿದ್ದು ಅವರಲ್ಲಿ ಕೆಲವರು ಪುಣ್ಯಸ್ತ್ರೀಯರನ್ನೂ ಹೊಂದಿದ್ದರು. ಇಲ್ಲಿ ಪಣ್ಯಸ್ತ್ರೀ ಎಂಬುದು ಪುಣ್ಯಸ್ತ್ರೀ ಎಂದಾಗಿದೆ. ಪಣ್ಯ ಎಂದರೆ ಹಣಕ್ಕೆ ಕೊಳ್ಳಲ್ಪಟ್ಟ ವಸ್ತು. ಅಂದಿನ ಸಾಮಾಜಿಕ ಸನ್ನಿವೇಶದಲ್ಲಿ ವೇಶ್ಯಾವೃತ್ತಿ ಕೀಳು ಎಂಬ ಇಂದಿನ ಅಭಿಪ್ರಾಯದಂತೆ ಅಭಿಪ್ರಾಯವೇನೂ ಇರಲಿಲ್ಲವೆಂದು ಭಾರತೀಯ ಇತಿಹಾಸವನ್ನು ಸಮಗ್ರವಾಗಿ ಅವಲೋಕಿಸಿದಾಗ ಕಂಡುಬರುತ್ತದೆ.  ಕ್ರಿ.ಪೂ. ಐದನೇ ಶತಮಾನದ ನಗರವಧು (ದೇವದಾಸಿ ಪರಂಪರೆ) ಅಮ್ರಪಾಲಿ ಭಾರತದ ಸರ್ವಶ್ರೇಷ್ಠ ಅಗ್ರಗಣ್ಯ ನರ್ತಕಿಯಷ್ಟೇ ಅಲ್ಲದೆ ಬೌದ್ಧಧರ್ಮದ ಆಧ್ಯಾತ್ಮಿಕ ಉನ್ನತಿಯನ್ನು ಸಾಧಿಸಿ ನಿರ್ವಾಣವನ್ನು ಹೊಂದಿದ ಮಹಿಳೆಯಾಗಿ ಚಿರಸ್ಥಾಯಿಯಾಗಿದ್ದಾಳೆ. ಬಿಂಬಿಸಾರ ಮತ್ತು ಅಮ್ರಪಾಲಿಯ ಪ್ರೇಮಕಥೆಯೂ ಅಷ್ಟೇ ಚಿರಸ್ಥಾಯಿಯಾಗಿದೆ. ಈಕೆಯ ಕುರಿತು ಶತಶತಮಾನಗಳಿಂದ ಸಾಕಷ್ಟು ಸಾಹಿತ್ಯ ಸೃಷ್ಟಿಯಾಗಿರುವುದಲ್ಲದೆ ಈಗಲೂ ಸೃಷ್ಟಿಯಾಗುತ್ತಿದೆ. ಅಮ್ರಪಾಲಿ ಸಿನೆಮಾವನ್ನು ಸಹ ಇಲ್ಲಿ ನೆನಪಿಸಿಕೊಳ್ಳಬಹುದು. ಅದೇ ರೀತಿ ಖ್ಯಾತ ಸಂಸ್ಕೃತ ಕಾವ್ಯ 'ಮೃಚ್ಛಕಟಿಕಾ'ದ ನಾಯಕಿ ಕ್ರಿ. ಪೂ. ಎರಡನೇ ಶತಮಾನದಲ್ಲಿದ್ದ ವಸಂತಸೇನಾ, ಮತ್ತು ಕ್ರಿ.ಶ. ಐದನೇ ಶತಮಾನದ ಇಳಂಗೋ ಅಡಿಗಳ್ ರಚಿಸಿರುವ ತಮಿಳಿನ ಖ್ಯಾತ ಕಾವ್ಯ ಸಿಲಪ್ಪಧಿಕಾರಮ್ ನ ಮಾಧವಿ ಸಹ ಅಮ್ರಪಾಲಿಯಷ್ಟೇ ಖ್ಯಾತ ನಗರವಧುಗಳು.


ದಕ್ಷಿಣ ಭಾರತದ  ತಮಿಳುನಾಡಿನ ಕಾಂಚೀಪುರಂ, ಈರೋಡುಗಳಲ್ಲದೆ ಆಂಧ್ರ, ತೆಲಂಗಾಣ, ಕರ್ನಾಟಕದ ರೇಷ್ಮೆ ನೇಯ್ಗೆಯು ಪ್ರವರ್ಧಮಾನಕ್ಕೆ ಬಂದದ್ದೇ ಅಲ್ಲಿನ ದೇವದಾಸಿಯರ ಅಂಗವಸ್ತ್ರ, ಸೀರೆಗಳನ್ನು ನೇಯುವುದರೊಂದಿಗೆ! ಅದೇ ರೀತಿ ಮಧ್ಯಪ್ರದೇಶದ ಚಂದೇರಿ ನೇಕಾರರು ಸಹ ಇದೇ ರೀತಿ ಪ್ರವರ್ಧಮಾನಕ್ಕೆ ಬಂದವೆಂದು ಸಂಶೋಧನೆಗಳು ತಿಳಿಸುತ್ತವೆ. ಹೀಗೆ ವೇಶ್ಯೆಯರೆನ್ನುವ ಎಲ್ಲಾ ಜಾತಿಯ ಕಲಾವಿದೆಯರನ್ನೊಳಗೊಂಡ ಪರಂಪರೆಯು ಸಾಂಸ್ಕೃತಿಕವಾಗಿಯಷ್ಟೇ ಅಲ್ಲದೆ ಅಂದಿನ ಆರ್ಥಿಕತೆಗೂ ಪರೋಕ್ಷವಾಗಿ ನೆಲೆಯೊದಗಿಸಿದ್ದಿತು. ಈ ಪದ್ಧತಿಯಲ್ಲಿ ಎಲ್ಲಾ ಜನಾಂಗದ ಜಾತಿಯ ಮಹಿಳೆಯರಿದ್ದು ಇದೊಂದು ಜಾತ್ಯಾತೀತ ವ್ಯವಸ್ಥೆಯಾಗಿತ್ತು ಎಂಬುದು ಮತ್ತೊಂದು ಗಮನಾರ್ಹ ಸಂಗತಿ. 


ರಾಜನಾದವನ ಪಟ್ಟದರಾಣಿಯಾಗಲು ಕ್ಷತ್ರಿಯಳೇ ಆಗಿರಬೇಕೆಂಬ ನಿಯಮವಿದ್ದರೂ ಅದನ್ನು ಮೀರಿ ಹೊಯ್ಸಳರ ವಿಷ್ಣುವರ್ಧನನ ರಾಣಿಯಾದ ನಾಟ್ಯರಾಣಿ ಶಾಂತಲೆ, ಕರ್ನಾಟಕ ಸಾಮ್ರಾಜ್ಯದ ವಿಜಯನಗರದ ಕೃಷ್ಣದೇವರಾಯನ ಪತ್ನಿ ನೃತ್ಯಗಾತಿ ಚೆನ್ನಾದೇವಿಯರ ಉದಾಹರಣೆಗಳೂ ಇವೆಯೆಂದರೆ ನೃತ್ಯಗಾತಿಯರ ಗೌರವಾದರಗಳು ಹೇಗಿದ್ದವು ಎಂದು ಊಹಿಸಿಕೊಳ್ಳಬಹುದು. 


ಕ್ರಿ.ಶ. ಆರನೇ ಶತಮಾನದಿಂದ ಕ್ರಿ. ಶ. ಹದಿಮೂರನೇ ಶತಮಾನದವರೆಗೂ ದೇವದಾಸಿಯರು ಸಮಾಜದಲ್ಲಿ ಅತ್ಯಂತ ಉನ್ನತ ಸ್ಥಾನಮಾನಗಳನ್ನು ಹೊಂದಿ ಘನತೆ ಗೌರವಗಳಿಗೆ ಪಾತ್ರರಾಗಿದ್ದರು. ನೃತ್ಯ, ಸಂಗೀತ, ಅಭಿನಯ ಮುಂತಾದ ಲಲಿತಕಲೆಗಳ ರಕ್ಷಕರೆನಿಸಿ ರಾಜಾಶ್ರಯ ಹೊಂದಿ ದಾನದತ್ತಿಗಳನ್ನು ಪಡೆಯುವುದರೊಂದಿಗೆ ಸಾಕಷ್ಟು ಸಮಾಜಮುಖಿ ಕಾರ್ಯಗಳನ್ನು ಸಹ ಕೈಗೊಂಡಿದ್ದರು. ಈ ಸಮಾಜಮುಖಿ ಕಾರ್ಯಗಳಲ್ಲಿ ನೀರಿಗೆ ಸಂಬಂಧಿಸಿದ ಕಾರ್ಯಗಳು ಇಂದಿಗೂ ಅಲ್ಲಲ್ಲಿ ಸಾಕಷ್ಟು ಕಾಣುತ್ತವೆ.  ದಾವಣಗೆರೆ ಸಮೀಪದ "ಸೂಳೆಕೆರೆ"ಯಿರಬಹುದು, ಕರ್ನಾಟಕದಾದ್ಯಂತ ಅಲ್ಲಲ್ಲಿ ಕೇಳಿಬರುವ "ಸೂಳೆಬಾವಿ"ಗಳು, "ಸೂಳೆಕಟ್ಟೆ"ಗಳು, "ಸೂಳೆಹೊಂಡ"ಗಳು... ಹೀಗೆ ಅನೇಕ ದೇವದಾಸಿಯರ ಸಮಾಜಮುಖಿ ಕಾರ್ಯಗಳ ನಿದರ್ಶನಗಳಿವೆ. ಇದೇ ರೀತಿಯ ಐತಿಹ್ಯಗಳು ಇಡೀ ಭಾರತದಾದ್ಯಂತ ಇವೆ.


ಕ್ರಿ. ಶ. ೧೫೨೦-೨೧ ರಲ್ಲಿ ವಿಜಯನಗರಕ್ಕೆ ಭೇಟಿ ಕೊಟ್ಟಿದ್ದ ಪೋರ್ಚುಗಲ್ ಯಾತ್ರಿಕ ಡೊಮಿಂಗೋ ಪಾಯಿಸ್, "...ಇಲ್ಲಿ ದೇವಸ್ಥಾನಗಳಿಗೆ ಸೇರಿದ ಹೆಂಗಸರಿರುತ್ತಾರೆ. ಚೆಲ್ಲು ಸ್ವಭಾವದ, ಸ್ವಚ್ಛಂದವಾಗಿರುವ ಇವರು ನಗರದ ಪ್ರಮುಖ ಮತ್ತು ಅತ್ಯುತ್ತಮವಾದ ಸಾಲಿನಲ್ಲಿರುವ ಮನೆಗಳಲ್ಲಿ ನೆಲೆಸಿರುತ್ತಾರೆ. ಈ ಮಹಿಳೆಯರು ಅತ್ಯಂತ ಗೌರವಾನ್ವಿತರಾಗಿದ್ದು ಅವರಲ್ಲಿ ಹಲವರು ಸೈನ್ಯದ ಸರದಾರರ ಉಪಪತ್ನಿಯರಾಗಿರುವರು. ಇವರಲ್ಲಿಗೆ ಯಾವುದೇ ಕುಲೀನ ಮನೆತನದ ವ್ಯಕ್ತಿ ಯಾವುದೇ ಪಾಪಪ್ರಜ್ಞೆ ಇಲ್ಲದೇ, ಅಪಹಾಸ್ಯಕ್ಕೀಡಾಗದೆ ಹೋಗಿಬರಬಹುದು. ಈ ಹೆಂಗಸರು ಕೂಡಾ ರಾಜನ ಆಸ್ಥಾನಕ್ಕೆ ರಾಣಿಯರ ಉಪಸ್ಥಿತಿಯಲ್ಲಿಯೂ ಕೂಡ ಯಾವಾಗ ಬೇಕಾದರೂ ಹೋಗಿಬರುತ್ತಾರೆ. ಇವರನ್ನು ಯಾರೂ ತಡೆಯುವುದಿಲ್ಲ. ರಾಜನೊಂದಿಗೆ ಕುಳಿತು ತಾಂಬೂಲವನ್ನು ಹಾಕಿಕೊಂಡು ಬರುತ್ತಾರೆ. ಯಾವುದೇ ಶ್ರೇಣಿಯ ಇತರೆ ವ್ಯಕ್ತಿ ಈ ರೀತಿ ರಾಜನೊಂದಿಗೆ ಕುಳಿತು ತಾಂಬೂಲವನ್ನು ಹಾಕಿಕೊಳ್ಳುವಷ್ಟು ಅಧಿಕಾರ ಯಾ ಧೈರ್ಯವನ್ನಾಗಲೀ ಹೊಂದಿರುವುದಿಲ್ಲ" ಎಂದು ದಾಖಲಿಸಿದ್ದಾನೆ.


ಇದೇ ಯಾದಿಯಲ್ಲಿ ಹಣ ಕೊಟ್ಟು ಪಡೆದುಕೊಂಡ ಮಹಿಳೆಯರನ್ನು ಪಣ್ಯಸ್ತ್ರೀ ಎನ್ನುತ್ತಿದ್ದರು. ಪಣ್ಯ ಎನ್ನುವುದು ಅಪಭ್ರಂಶಗೊಂಡೋ ಅಥವಾ ಗೌರವದ ಹೊದಿಕೆಯನ್ನು ಹೊದಿಸಿಯೋ ಪುಣ್ಯ ಎಂದಾಗಿದೆ. ಇಂದು ಕೆಲವು ಗುಡಿಗಳಲ್ಲಿರುವ ಲಜ್ಜಾಗೌರಿ ವಿಗ್ರಹಗಳಿಗೆ ಸೀರೆ ತೊಡಿಸಿದ್ದಾರಲ್ಲ, ಹಾಗೆ! ಇದಿಷ್ಟು ಅಂದಿನ ಭಾರತೀಯ ವೇಶ್ಯೆಯರ ಗೌರವಯುತ ಬದುಕಿನ ಇತಿಹಾಸ. ಇಂತಹ ಉದಾರ ಸಂಸ್ಕೃತಿಯ ಐತಿಹಾಸಿಕ ಭಾರತದಲ್ಲಿ ವೇಶ್ಯೆಯರಿಗೆ ಯಾವ ಶರಣನೂ "ಬಾಳು ಕೊಡುವ" ಭಿಕ್ಷೆಯ ಹಂಗಿರಲಿಲ್ಲ. ಇದೇ ರೀತಿ ಕ್ಯೂಬಾ ಅಲ್ಲದೆ ಪಾಶ್ಚಿಮಾತ್ಯ ರಾಷ್ಟ್ರಗಳ ಸಂಸ್ಕೃತಿಯಲ್ಲಿಯೂ ವೇಶ್ಯೆಯರನ್ನು ಮದುವೆಯಾಗುವುದು ಸಾಮಾನ್ಯ ಸಂಗತಿಯೇ ಹೊರತು ಭಾರತೀಯ ಚಿಂತಕರು ಚಿಂತಿಸುವಂತೆ, "ಬಾಳು ಕೊಡುವುದು" ಎಂಬ ಪಟ್ಟು ಪೀತಾಂಬರದಲ್ಲಿ ಸುತ್ತಿಟ್ಟ ಚಿಂತನೆಯ ಜೀವನಭಿಕ್ಷೆ ಆಗಿರಲಿಲ್ಲ.


ಇನ್ನು ಫಿಡೆಲ್ ಕ್ಯಾಸ್ಟ್ರೋ ಕಟ್ಟಿದ ಧೀಮಂತ ರಾಷ್ಟ್ರದ ಆಡಳಿತದಲ್ಲಿ ಆದ ಅಕ್ರಮ, ಅನ್ಯಾಯ, ಜನಾಂಗೀಯ ಕಣ್ಮರೆ, ಮಾನವ ಹಕ್ಕುಗಳ ಹತ್ತಿಕ್ಕುವಿಕೆ, ಸಾಮಾನ್ಯ ಕ್ಯೂಬನ್ನರು ಸಮುದ್ರಕ್ಕೆ ಹಾರಿ ಅಮೆರಿಕೆಯ ಫ್ಲೋರಿಡಾ ತೀರವನ್ನು ಸೇರಲು ನಿತ್ಯವೂ ಪ್ರಯತ್ನಿಸಿ ಸಾಯುತ್ತಿರುವುದು...ಮುಂತಾದ ಎಲ್ಲಾ ಧೀಮಂತ ವಿಚಾರಗಳನ್ನು ಬದಿಗಿಟ್ಟು ಕೇವಲ ಪುಣ್ಯಸ್ತ್ರೀಯರಿಗೆ "ಬಾಳು ಕೊಡುವ" ಉದಾರತೆಯ ಕುರಿತು ನೋಡೋಣ. ೧೯೫೩ ರ ಕ್ಯಾಸ್ಟ್ರೋನ ವಿಖ್ಯಾತ ಭಾಷಣ, "ಇತಿಹಾಸ ನನ್ನನ್ನು ನಿರಪರಾಧಿ ಎಂದು ದಾಖಲಿಸಲಿದೆ" ಯಿಂದ ಹಿಡಿದು ಆತ ಸಾಯುವತನಕ ಮಾಡಿದ ಯಾವ ಭಾಷಣಗಳಲ್ಲಿಯೂ ವೇಶ್ಯೆಯರಿಗೆ "ಬಾಳು ಕೊಡಿ" ಎಂದು ತನ್ನ ಬೆಂಬಲಿಗರಿಗೆ ಕರೆ ನೀಡಿದ ಸಾರ್ವಜನಿಕ ದಾಖಲೆಗಳಿಲ್ಲ. ಏಕೆಂದರೆ ವೇಶ್ಯಾವಾಟಿಕೆ ಎನ್ನುವುದು ಅನೈತಿಕ ಎಂಬ ಪಾಪಪ್ರಜ್ಞೆ ಇರದ ಕ್ಯೂಬನ್ನರಿಗೆ ಇಂತಹ ಕರೆಯ ಅಗತ್ಯವೇ ಇರಲಿಲ್ಲ. ಫಿಡೆಲ್ ಕ್ಯಾಸ್ಟ್ರೋ ಅಧಿಕಾರ ವಹಿಸಿಕೊಂಡ ಆರಂಭಶೂರತ್ವದಲ್ಲಿ ಜೂಜು, ವೇಶ್ಯಾವಾಟಿಕೆಗಳನ್ನು ರಾಜಕೀಯ ಕಾರಣಗಳಿಗಾಗಿ ನಿಲ್ಲಿಸಿದರೂ ಮುಂದೆ ಕಮ್ಯೂನಿಸ್ಟ್ ಆಡಳಿತದ ಆರ್ಥಿಕ ಹೊಡೆತದ ತತ್ತರದಲ್ಲಿ ಇವೆಲ್ಲವೂ ಅಬ್ಬರದಿಂದ ಮರುಸ್ಥಾಪಿತವಾಗಿದ್ದವು ಎನ್ನುವುದು ಜಾಗತಿಕ ಸತ್ಯ! ಕ್ಯಾಸ್ಟ್ರೋನ ಕ್ಯೂಬಾದಲ್ಲಿ ವೇಶ್ಯಾವಾಟಿಕೆ ಈಗಲೂ ಕಾನೂನುಬಾಹಿರವಲ್ಲ. ತಲೆಹಿಡುಕತನ, ಪೋರ್ನೋಗ್ರಫಿ, ವೇಶ್ಯಾವಾಟಿಕೆಗೆ ಅಪ್ರಾಪ್ತರ ಬಳಕೆಗೆ ಕಾನೂನಿನ ನಿಯಂತ್ರಣ ಇದೆಯೇ ಹೊರತು ವೇಶ್ಯೆಯರು ನೇರವಾಗಿ ದಂಧೆ ಮಾಡಲು ಯಾವ ನಿಯಂತ್ರಣವೂ ಇರಲಿಲ್ಲ, ಇಲ್ಲ! ನಂಬಿಕೆ ಇರದವರು ಅಲ್ಲಿಗೆ ಪ್ರವಾಸ ಹೋಗಿ ಕಂಡುಕೊಳ್ಳಬಹುದು.


ಮೇ ೧, ೨೦೦೧ ರ ರಾಯಿಟರ್ಸ್ ವರದಿಯ ಪ್ರಕಾರ ಬ್ರೆಜಿಲ್ ದೇಶದ ಸಂದರ್ಶನವೊಂದರಲ್ಲಿ ಕೇಳಿದ, "ಕ್ಯೂಬಾದ ಕೆಲವು ಕಾಲೇಜು ತರುಣಿಯರು ಬೆಲೆವೆಣ್ಣುಗಳಾಗಿ ಕೆಲಸ ಮಾಡುತ್ತಾರಂತೆ, ಹೌದೆ?" ಎಂಬ ಪ್ರಶ್ನೆಗೆ ಕ್ಯೂಬಾ ಅಧ್ಯಕ್ಷ ಫಿಡೆಲ್ ಕ್ಯಾಸ್ಟ್ರೋ ಹೆಮ್ಮೆಯಿಂದ, "ನಮ್ಮ ದೇಶದ ಬೆಲೆವೆಣ್ಣುಗಳೂ ಅತ್ಯಂತ ಸುಶಿಕ್ಷಿತರಾಗಿರುತ್ತಾರೆ ಎಂಬುದಕ್ಕೆ ನಿಮ್ಮ ಪ್ರಶ್ನೆಯೇ ನಮ್ಮ ಶಿಕ್ಷಣ ವ್ಯವಸ್ಥೆಯ ಪ್ರಗತಿಯ ಮಾಪಕ" ಎಂದು ಉತ್ತರಿಸಿದ್ದಾನೆ! ಮುಂದೆ ೨೦೦೪ರಲ್ಲಿ ಜಾರ್ಜ್ ಬುಷ್, "ಕ್ಯಾಸ್ಟ್ರೋ ಹೆಮ್ಮೆಯಿಂದ ಜಗತ್ತಿನಲ್ಲಿ ಅತ್ಯಂತ ಶುದ್ಧ ಸುಶಿಕ್ಷಿತ ವೇಶ್ಯೆಯರು ಇರುವುದು ನನ್ನ ಕ್ಯೂಬಾದಲ್ಲಿ ಎಂದ ನೀತಿಗೆಟ್ಟವನು" ಎಂದದ್ದು. "ನಾನು ಹಾಗೆ ಹೇಳಿಯೇ ಇಲ್ಲ" ಎಂದು ಕ್ಯಾಸ್ಟ್ರೋ ಅಲ್ಲಗಳೆದದ್ದು ಎಲ್ಲವೂ ಬಹುದೊಡ್ಡ ಸುದ್ದಿಯಾಗಿತ್ತು.


ಜನಸಾಮಾನ್ಯರ ಸ್ವಾತಂತ್ರ್ಯವಲ್ಲದೆ ಎಲ್ಲಾ ಮೂಲಭೂತ ಹಕ್ಕುಗಳನ್ನು ನಿಗ್ರಹಿಸಿ ಸತತವಾಗಿ ಸರ್ವಾಧಿಕಾರ ನಡೆಸಿದ ವ್ಯಕ್ತಿ ಫಿಡೆಲ್ ಕ್ಯಾಸ್ಟ್ರೋ. ಆತನ ಆಡಳಿತದಲ್ಲಿ ಕೇವಲ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿದರೂ ಉದ್ಯೋಗಗಳಿಲ್ಲದೆ ಕ್ಯೂಬನ್ನರು ಪಡೆದ ಶಿಕ್ಷಣ ವ್ಯರ್ಥವಾಗಿ ಜನರು ಸದಾ ಸುವ್ಯಕ್ತ ಭಯದ ವಾತಾವರಣದಲ್ಲಿ ಜೀವಿಸುತ್ತಿರುವಂತಾಗಿತ್ತು. ಸರ್ಕಾರದ ನೀತಿಯ ಬಗ್ಗೆ ಯಾರಾದರೂ ಪಿಸುಮಾತಿನಲ್ಲಿ ಮಾತನಾಡಿದರೂ ಕಣ್ಮರೆಯಾಗುತ್ತಿದ್ದರು. ಇಷ್ಟೆಲ್ಲಾ ಸರ್ವಾಧಿಕಾರ ಮೆರೆದ ಫಿಡೆಲ್ ಕಡೆಗೆ ಅಧಿಕಾರವನ್ನು ಹಸ್ತಾಂತರಿಸಿದ್ದು ತನ್ನ ತಮ್ಮ ರಾವುಲ್ ನಿಗೆ ಹೊರತು ಇನ್ನಾವ ಸಮಾಜವಾದಿ ಸಂಕುಲದ ಹೋರಾಟಗಾರನಿಗಲ್ಲ! ಈ ಸಮಸಮಾಜವಾದಿಯ ಒಟ್ಟಾರೆ ವೈಯಕ್ತಿಕ ಆಸ್ತಿಯ ಮೊತ್ತ ಎಂಟೂವರೆ ಸಾವಿರ ಕೋಟಿ ರೂಪಾಯಿಗಿಂತ ಅಧಿಕ. ಈತ "ಬಾಳು ಕೊಡುವುದ"ರಲ್ಲಿ ಅತ್ಯಂತ ಸಮಾಜವಾದಿಯಾಗಿ ಅಗಣಿತ ಪುಣ್ಯಸ್ತ್ರೀಯರಿಗೆ ಬಾಳುಕೊಟ್ಟು ಕ್ಯೂಬಾದ "ಕಾಮದ ಲಾಂಛನ" ಎಂಬ ಹೆಸರು ಗಳಿಸಿದ್ದ. ಈ ಎಲ್ಲಾ ವಿವರಗಳನ್ನು ಕ್ಯಾಸ್ಟ್ರೋನ ಅಂಗರಕ್ಷಕನಾಗಿದ್ದ ಯುವಾನ್ ರೆನಾಲ್ದೋ ಸಾಂಚೇಜ್ ಬರೆದಿರುವ "ದಿ ಡಬಲ್ ಲೈಫ್ ಆಫ್ ಫಿಡೆಲ್ ಕ್ಯಾಸ್ಟ್ರೋ" ಕೃತಿಯಲ್ಲಿ ಓದಬಹುದು. ಇಂತಪ್ಪ ದಮನಕಾರಿ ಕ್ಯಾಸ್ಟ್ರೋ ಅದ್ಯಾವ ಸ್ವರ್ಗಸದೃಶ "ಧೀಮಂತ ರಾಷ್ಟ್ರ" ಕಟ್ಟಿದ್ದನೋ ಜಗತ್ತಂತೂ ಕಂಡಿಲ್ಲ. ಇದಿಷ್ಟು ಇಡೀ ಪ್ರಪಂಚ ಬಲ್ಲ ಕ್ಯೂಬಾ, ಕ್ಯಾಸ್ಟ್ರೋ, ಪಣ್ಯಸ್ತ್ರೀ, ಬಾಳು, ಗೋಳು!


ಇದೇ ರೀತಿ ಉತ್ತರ ಕೊರಿಯಾ, ಚೈನಾ, ರಷ್ಯಾದ ಕಮ್ಯೂನಿಸ್ಟ್ ಆಡಳಿತದ ಸರ್ವಾಧಿಕಾರಿಗಳ ಇತಿಹಾಸವೂ ಇದೆ. ಒಂದೊಮ್ಮೆ ಸಂಯುಕ್ತ ಸಮಾಜವಾದಿ ಆಡಳಿತದಲ್ಲಿದ್ದ ಸೋವಿಯತ್ ರಾಷ್ಟ್ರಗಳ ಹೆಣ್ಣುಗಳು ಈಗ ಬೆಂಗಳೂರಿಗೂ ಬಂದು ಬೆಲೆವೆಣ್ಣುಗಳಾಗಿ ಚಟುವಟಿಕೆ ನಡೆಸುತ್ತಿರುವುದು ಆ ದೇಶಗಳ ಆರ್ಥಿಕತೆಯನ್ನು ಕಮ್ಯೂನಿಸ್ಟ್ ವ್ಯವಸ್ಥೆ ಎಷ್ಟರ ಮಟ್ಟಿಗೆ ಹದಗೆಡಿಸಿತ್ತು ಎಂಬುದಕ್ಕೆ ಜೀವಂತ ಸಾಕ್ಷಿಯಾಗಿದೆ. ವಾಸ್ತವ ಹೀಗಿರುವಾಗ ಭಾರತೀಯ ಸಮಾಜವಾದಿ ಚಿಂತಕರ, "ಬಾಳು ಕೊಡುವುದು...?!?" ಒಂದು ಸುಂದರ ಸೃಜನಶೀಲ ಪಣ್ಯವಿಲ್ಲದ ಸುಸ್ವಪ್ನಸ್ಖಲನ ಎನ್ನಬಹುದು.


ಭಾರತೀಯ ಶೈಕ್ಷಣಿಕ ವ್ಯವಸ್ಥೆಯಲ್ಲಿ ಒಂದು ಗುಂಪು ಪ್ರಬಲರಾಗಿ ಸಮಾಜವಾದಿ ಸಮ್ಮೋಹನಕೊಳಗಾಗಿ ಹೀಗೆ ಕಟ್ಟಿದ ಇಂತಹ ಸೃಜನಶೀಲ ಸುಸ್ವಪ್ನ ಸಂಕಥನಗಳು ಅನೇಕ. ಇಂತಹ ಸುಸ್ವಪ್ನಸ್ಖಲನಕ್ಕೆ ತೊಟ್ಟಿಲು ಕಟ್ಟಿ ಜೋಗುಳ ಹಾಡಿದ್ದು ಮಾತ್ರ ಕರ್ನಾಟಕದ ಧೀಮಂತ ಸಮಾಜವಾದಿ ನಾಯಕನಲ್ಲದೆ ಬುದ್ಧಿಜೀವಿಗಳು, ಚಿಂತಕರು, ವಿರಕ್ತರು, ಪ್ರಗತಿಪರ ಮಹಿಳೆಯರು ಮತ್ತು ಅಸಂಖ್ಯಾತ ಮುಗ್ಧ ಸಾಮಾನ್ಯರು! ಸಂಶೋಧನಾ ಪಿತಾಮಹರ ಸಹಾಯದೊಂದಿಗೆ ಈ ಚಿಂತಕರ ಪ್ರಥಮ ಸಾಲಿನ ಮಹನೀಯರು ಕಟ್ಟಿದ ವಚನ ಚಳವಳಿಯ ಸಮಾಜವಾದಿ ಸಂಕಥನದ ಪರಿಧಿಯೊಳಗೆ ನನ್ನಂತಹ ಒಬ್ಬ ಅತಿ ಸಾಮಾನ್ಯ ಅನಿವಾಸಿ ಬಿಕನಾಸಿ ಬೇವರ್ಸಿ ಕುತೂಹಲಿಯು ಹೊಕ್ಕು ಚಿಟಿಕೆ ಹೊಡೆದಷ್ಟು ಸುಲಭವಾಗಿ ಅವರ ಸಂಕಥನಗಳನ್ನು ಛಿದ್ರಗೊಳಿಸುತ್ತಾನೆ ಎಂದರೆ ಇವರ ಗುಂಪಿನ ಎರಡನೇ, ಮೂರನೇ...ಹತ್ತನೇ ಸಾಲಿನವರ ಉಳಿದ ಸಂಕಥನಗಳು ಎಷ್ಟು ಗಟ್ಟಿ ಇದ್ದಾವು?


ಹೀಗೆ ಒಂದು ಬಹುಮಹತ್ವದ ಪಂಥವನ್ನು ವ್ಯವಸ್ಥಿತವಾಗಿ ವಿಭಜಿಸಿ ಸರ್ಕಾರಿ ಅನುದಾನದ ಸಂಪನ್ಮೂಲಗಳನ್ನು ಬಳಸಿಕೊಂಡು ವಚನ ಚಳವಳಿಯನ್ನು ತಿರುಚಿ ಕಮ್ಯೂನಿಸ್ಟ್ ಸಿದ್ಧಾಂತಕ್ಕೆ ವ್ಯಾಖ್ಯಾನಿಸಿರುವ ಈ ಗುಂಪಿಗೆ ಬೇರೆಯವರು ವಚನಗಳನ್ನು ವ್ಯಾಖ್ಯಾನಿಸಬೇಡಿ ಎನ್ನುವ ಯಾವ ನೈತಿಕ ಹಕ್ಕಿದೆ?!?  ಈ ಗುಂಪಿನ ಹಿರಿಕಿರಿಯ ಚಿಂತಕರ ವಚನ-ಸಮಾಜವಾದ ಸಮೀಕರಣದ ಅನೇಕ ಲೇಖನಗಳನ್ನು ಪ್ರಜಾವಾಣಿಯ ಹಳೆಯೊಟ್ಟು (ಆರ್ಕೈವ್)ಲ್ಲಷ್ಟೇ  ಅಲ್ಲದೆ ನಾಡಿನ ಎಲ್ಲಾ ದಿನಪತ್ರಿಕೆ, ಸಾಪ್ತಾಹಿಕ, ಮಾಸಿಕ ಪತ್ರಿಕೆಗಳ ಹಳೆಯೊಟ್ಟುಗಳಲ್ಲಿ ಆಸಕ್ತರು ಹುಡುಕಿ ಓದಬಹುದು.


ದುಡಿಯುವ ಕಾರ್ಮಿಕ ಶಕ್ತಿಯನ್ನು ಬಳಸಿಕೊಂಡು ಅಧಿಕಾರ ಪಡೆದು ಸ್ಟಾಲಿನ್ ಸೃಷ್ಟಿಸಿದ ಹಾಲೋಡಮಾರ್ ಅಂತಹ ನರಮೇಧದಲ್ಲಿ ಸತ್ತವರು ಮೂರೂವರೆ ಕೋಟಿಯಿಂದ ಐದು ಕೋಟಿ. ಈ ನರಮೇಧದ ಸಮಯದಲ್ಲಿ ಹಸಿವಿನಿಂದ ಜನ ಒಬ್ಬರನೊಬ್ಬರು ಕೊಂದು ತಿಂದ ನರಭಕ್ಷಕ ಘಟನೆಗಳ ಉದಾಹರಣೆಗಳು ಸಾಕಷ್ಟಿವೆ. ಅದೇ ರೀತಿ ಕಮ್ಯೂನಿಸ್ಟ್ ಮಾವೋ ನಡೆಸಿದ ಸಂಸ್ಕೃತಿ ಕ್ರಾಂತಿಯಲ್ಲಿ ನಾಲ್ಕೂವರೆ ಕೋಟಿಯಿಂದ ಏಳೂವರೆ ಕೋಟಿ "ಅಸಹಜ" ಸಾವುಗಳಾಗಿವೆ. ಆದರೆ ಫ್ಯಾಸಿಸ್ಟ್ ಗೋಬೆಲ್ಸ್ ನರಮೇಧಿ ಸ್ಟಾಲಿನ್, ಲೆನಿನ್ ಅವರ ಹೆಸರನ್ನು ತಮ್ಮ ಮಕ್ಕಳಿಗೆ ಹೆಸರಿಟ್ಟ ಭಾರತೀಯ ಕಮ್ಯೂನಿಸ್ಟರು ಇಂದು ಇಟ್ಟಿಗೆ ಹೊರುವ, ಗುದ್ದಲಿ ಹಿಡಿದ, ಸುತ್ತಿಗೆ ಎತ್ತಿದ ಕಾರ್ಮಿಕರ ಫೋಟೋ ಹಾಕಿ ಕಾಲರ್ ಎತ್ತಿ ಸಂಭ್ರಮಿಸುತ್ತಾರೆಯೇ ಹೊರತು ಎಂದಾದರೂ ತಮ್ಮ ಆರಾಧ್ಯದೈವಗಳು ಮಾಡಿದ ನರಮೇಧದ ಬಗ್ಗೆ ಪಾಪಪ್ರಜ್ಞೆ ತೋರಿದ್ದಾರೆಯೇ?!?! ಮಾತೆತ್ತಿದರೆ ಬುದ್ಧ ಬಸವ ಅಂಬೇಡ್ಕರ್ ಎನ್ನುವ ಈ ಗುಂಪು ತಮ್ಮ ಸಿದ್ಧಾಂತದ ಮಾವೋ ನಡೆಸಿದ ಬೌದ್ಧ ಧರ್ಮೀಯರ ನರಹತ್ಯೆ ಬಗ್ಗೆ ಎಂದೂ ಆತ್ಮಸಾಕ್ಷಿಯಿಂದ ಮಾತನಾಡುವುದಿಲ್ಲ. ಕೇಳಿದರೆ ನಮಗೆ ಆತ್ಮದಲ್ಲಿ ನಂಬಿಕೆಯಿಲ್ಲ ಎಂಬ ಸಮಾಜವಾದಿ ಉತ್ತರ ಕೊಡುತ್ತಾರೆ. ಆತ್ಮದಲ್ಲಿ ನಂಬಿಕೆಯಿರದ ಇವರು ಮತ್ತೇಕೆ ಆತ್ಮಲಿಂಗದ ಬಸವಣ್ಣನನ್ನು ಜಪಿಸುತ್ತಾರೆ? ಸಂವಿಧಾನಗಳು ಉಸಿರಾಡುವ ಜೀವಂತ ದಸ್ತಾವೇಜುಗಳು, ಚಲನಶೀಲ ಬದಲಾವಣೆ ಜಗದ ನಿಯಮ ಎನ್ನುವ ಅಂಬೇಡ್ಕರ್ ತತ್ವವನ್ನು ಗಾಳಿಗೆ ತೂರಿ ಸಂವಿಧಾನ ಎಂಬುದು ತಿದ್ದಬಾರದ ಧಾರ್ಮಿಕ ಗ್ರಂಥ ಎಂಬಂತೆ ಬೌದ್ಧಿಕ ದಬ್ಬಾಳಿಕೆ ನಡೆಸುತ್ತಾರೆ. ಹೀಗೆ ತಮ್ಮ ಚಿಂತನೆಯಲ್ಲಿಯೇ ಸ್ಪಷ್ಟತೆ ಇರದ, ತಮ್ಮ ಆಪ್ತ ಅಫೀಮಿನ ನಶೆಯ ಕಮ್ಯೂನಿಸ್ಟ್ ಸಮಾಜವಾದದ ನೂರು ವರ್ಷಗಳ ಇತಿಹಾಸವನ್ನೇ ಸರಿಯಾಗಿ ಅರಿಯದ ಈ ಭಾರತದ ಮಂಚೂಣಿ ಸಮಾಜವಾದಿ ಚಿಂತಕರು ಹನ್ನೆರಡನೇ ಶತಮಾನದ ವಚನ ಚಳವಳಿಯ ಇತಿಹಾಸವನ್ನು ಅರಿಯಬಲ್ಲರೆ?


ಭಾರತದ ಭವ್ಯ ಪರಂಪರೆ, ಇತಿಹಾಸ, ಉದಾರತೆಯನ್ನು ತಾವು ನಂಬಿದ ಸಿದ್ಧಾಂತಕ್ಕೆ ಅಥವಾ ತಮ್ಮ ಸೀಮಿತ ತಿಳಿವಳಿಕೆಗೆ ಹೀಗೆ ವ್ಯವಸ್ಥಿತವಾಗಿ ತಿರುತಿರುಚಿ ಒಂದು ತಲೆಮಾರನ್ನೇ ತಲೆಮಾಸಿದವರನ್ನಾಗಿ ಮಾಡಲಾಗಿದೆ. ಇದನ್ನು ಸರಿಪಡಿಸಬೇಕಾದ ಇಡೀ ಶೈಕ್ಷಣಿಕ ವಲಯ ಇವರ ಪುಂಗಿಯ ನಾದಕ್ಕೆ ತಲೆದೂಗುತ್ತಿದೆ. ಲಿಂಗಾಯತ ಸಂಸ್ಕೃತಿಯನ್ನು ಕಾಪಾಡಲೆಂದೇ ಪಟ್ಟಗಟ್ಟಿದ ಮಠಾಧೀಶರು ಈ ಗುಂಪು ಕೊಡಮಾಡುವ ಬಿರುದು, ಪಾರಿತೋಷಕ, ಗೌರವ ಡಾಕ್ಟರೇಟುಗಳಿಗೆ, ವೈಚಾರಿಕ ಬೆಡಗಿಗೆ ಬಲಿಯಾಗಿ ಕರ್ತವ್ಯವಿಮುಖರಾಗಿ ವೀರಶೈವ ಬೇರೆ, ಲಿಂಗಾಯತ ಬೇರೆ ಎನ್ನುತ್ತಿದ್ದಾರೆ. ತತ್ವಜ್ಞಾನವನ್ನು ಬಿಟ್ಟು ಹುಸಿ ಸಮಾಜವಾದ ಜಪಿಸುತ್ತಿದ್ದಾರೆ. ಬಸವಣ್ಣ ವಿಶ್ವದ ಮೊದಲ ಸಮಾಜವಾದಿ ಎನ್ನುವ ಎರವಲು ಹೇಳಿಕೆ ನೀಡುತ್ತ ಸಂಪತ್ತನ್ನು ಕ್ರೋಢೀಕರಿಸುತ್ತಾರೆ. ಅನ್ಯರಿಗೆ ಅಸಹ್ಯ ಪಡಬೇಡ ಎನ್ನುತ್ತ ತಮ್ಮದೇ ಮೂಲದ ವೀರಶೈವಕ್ಕೆ ವಿಷಕಾರುತ್ತಾರೆ. ತಾವು ಕುಳಿತ ಪೀಠದ ಮಠಗಳು ಒಂದೊಮ್ಮೆ ಕಾಳಾಮುಖ ವೀರಶೈವವೇ ಕಟ್ಟಿದ ಮಠಗಳಾಗಿದ್ದವು ಎಂಬ ತಮ್ಮ ಬುಡದ ಸತ್ಯವನ್ನೇ ಮರೆತಿರುವ ಇವರು ಅಲ್ಲಮ ಚೆನ್ನಬಸವಣ್ಣ ಮಹಾದೇವಿಯರ ಯೋಗಾಚಾರ ಸಾಧನೆಯಂತೆ ಒಬ್ಬರೇ ಒಬ್ಬ ಪೀಠಾಧಿಪತಿಗಳು ಶಿವಯೋಗದಲ್ಲಿ ಆಂತರಿಕ ಜಾಗೃತಿಯನ್ನು ಮೂಡಿಸಿಕೊಂಡಿರುವರೆ?!? ಅಂದ ಹಾಗೆ ಮಠಗಳ ಇತಿಹಾಸದ ಬಗ್ಗೆ ಅನುಮಾನವಿರುವವರು ಡೇವಿಡ್ ಲೊರೆಂಜನ್ ಅವರು ಸ್ಪಷ್ಟವಾಗಿ ಶಾಸನಗಳ ದಾಖಲೆ ಸಮೇತ ಪ್ರತಿಪಾದಿಸಿರುವ "ದಿ ಕಾಪಾಲಿಕಾಸ್ ಅಂಡ್ ಕಾಳಾಮುಖಾಸ್: ಟು ಲಾಸ್ಟ್ ಶೈವೈಟ್ ಸೆಕ್ಟ್ಸ್" ಕೃತಿಯನ್ನು ಪರಾಂಭರಿಸಬಹುದು.


ಒಟ್ಟಾರೆ, ಇಂತಹ ಶಿಥಿಲ ಸಂಕಥನಕ್ಕೆ ಮಾರುಹೋಗಿ ಓರ್ವ ಘನವೆತ್ತ ರಾಜ್ಯದ ಮುಖ್ಯಮಂತ್ರಿ ವೀರಶೈವ  ಲಿಂಗಾಯತ ಬೇರೆ ಬೇರೆಯೇ ಎಂಬ "ಸತ್ಯ"ಶೋಧನೆ ಮಾಡಿ ಎಂದು ಸಮಿತಿ ರಚಿಸಿದ್ದರು. ಅದಕ್ಕೆ ಓರ್ವ ನಿವೃತ್ತ ನ್ಯಾಯಾಧೀಶರನ್ನು ಅಧ್ಯಕ್ಷರನ್ನಾಗಿ ಮಾಡಿ, "ಪುಣ್ಯ ಸ್ತ್ರೀ" ಲೇಖನದ ಕರ್ತೃ ಶ್ರೀ ಎಸ್. ಜಿ. ಸಿದ್ದರಾಮಯ್ಯನವರನ್ನೂ ಒಳಗೊಂಡು ಹಲವಾರು ಸಂಶೋಧಕ ಸಾಹಿತಿ ಪ್ರೊಫೆಸರರುಗಳು ಮತ್ತು ವೈಚಾರಿಕ ಪತ್ರಕರ್ತರನ್ನೊಳಗೊಂಡ ಸದಸ್ಯರನ್ನು ನೇಮಿಸಿದ್ದರು. ಈ ಎಲ್ಲಾ ಸದಸ್ಯರು ವೀರಶೈವ ಲಿಂಗಾಯತರಾಗಿರದೆ, ಸಿದ್ಧಾಂತ ಶಿಖಾಮಣಿ, ಕರಣ ಹಸುಗೆ, ಮಿಶ್ರಾರ್ಪಣ, ಮಂತ್ರಗೋಪ್ಯಗಳ ಎರಡು ಪುಟಗಳನ್ನೂ ಓದಿರದ ಮತ್ತದೇ ಕಮ್ಯೂನಿಸ್ಟ್ ಪ್ರಣೀತರಾಗಿ ವಚನಗಳನ್ನು "ಕೆಂಪೀಕರಣ"ಗೊಳಿಸಿರುವ ಸಮಾಜವಾದಿಗಳೇ ಅಲ್ಲದೆ ಆ ಮುಖ್ಯಮಂತ್ರಿಗಳ ಖಾಸಗಿ ದರ್ಬಾರಿನ ಆಸ್ಥಾನ ಪಂಡಿತರೂ ಆಗಿದ್ದರು ಎಂಬುದು 'ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದಂತೆ' ಎನ್ನುವ ಜಾಣ್ಣುಡಿಗೆ ತಕ್ಕಂತಿದ್ದರು. ಇನ್ನು ಈ ಸಾಕ್ಷಿಪ್ರಜ್ಞೆ ಗುತ್ತಿಗೆದಾರರ ವಾದವನ್ನು ಪುರಾವೆ ಸಮೇತ ತಪ್ಪೆಂದು ಯಾರಾದರೂ ಪ್ರಶ್ನಿಸಿದರೆ ಇವರು ತಕ್ಷಣಕ್ಕೆ ಪ್ರತಿವಾದಿಯ ಜಾತಿಯನ್ನು ಸಂಶೋಧಿಸಿ, "ಇವ ಪಂಪೀ, ಇವ ಚಡ್ಡಿ, ಇವ ಮಜ್ಜಿಗೆಹುಳಿ, ಇವ ತಂಬುಳಿ, ಇವ ಹೋಳಿಗೆ, ಇವ ಹಿಂದೂವಾದಿ, ಇವ ಪದ್ಮಪ್ರಿಯ, ಬಂಡವಾಳಶಾಹಿ..." ಇತ್ಯಾದಿಯಾಗಿ ಇವನಾರವ ಇವನಾರವ ಎಂದು ಬಡಬಡಿಸುತ್ತಾರೆ. ಅದರಲ್ಲೂ ಪ್ರತಿವಾದಿ ದಲಿತನಾಗಿದ್ದರಂತೂ, "ಸಃ ಬ್ರಾಹ್ಮಣ-ಪ್ರಸೂತ ದಲಿತಸ್ಯಹ!" ಎಂದು ಅವರದೇ ಸಂಸ್ಕೃತದಲ್ಲಿ ತೆಗಳುತ್ತ "ನಮ್ಮ ಸಮಾಜವಾದಿ ವಚನಗಳ ಬುಡವನ್ನು ಮುಟ್ಟಿ ಮೈಲಿಗೆ ಮಾಡಿಬಿಟ್ಟಿದ್ದಾನೆ" ಎಂದು ಅವನಿಂದ ಎಲ್ಲಾ ವಿಶ್ವವಿದ್ಯಾಲಯ, ಪ್ರಕಾಶನ, ಪತ್ರಿಕೆ, ಪ್ರಶಸ್ತಿಗಳ ಶುದ್ಧ ಮಡಿಯನ್ನು ಕಾಪಾಡಲು ಪಣತೊಟ್ಟು ಅವನನ್ನು ಬಹಿಷ್ಕರಿಸುತ್ತಾರೆಯೇ ಹೊರತು ತಾರ್ಕಿಕ ವಾದಮಂಡನೆಯನ್ನಲ್ಲ.  ಈ ಸಂಕಥನಗಳನ್ನು ಈವರೆಗೆ ಯಾವುದೇ ವಿಶ್ವವಿದ್ಯಾಲಯದ ಸತ್ಯಶೋಧನಿರತ ಪ್ರೊಫೆಸರರು, ಸಂಶೋಧಕರು ಪ್ರಶ್ನಿಸದಂತೆ, ಅವರ ದನಿಯನ್ನು ಉಡುಗಿಸಲಾಗಿದೆಯೋ, ಸಮ್ಮೋಹಗೊಳಿಸಲಾಗಿದೆಯೋ ಎಂಬುದು ಸಂಶೋಧನಾರ್ಹ. ಇದಿಷ್ಟು ಇವರ ಸಿದ್ಧಮಾದರಿಯ ಜಾತ್ಯಾತೀತ ಉದಾರ ಸಿದ್ಧಾಂತ ಎಂಬುದು 'ಒತ್ತುಕೊಟ್ಟು ಪ್ರಕಾಶಿಸುವಂತೆ ಮಾಡಿ' ಗಮನದಲ್ಲಿರಿಸಿಕೊಳ್ಳಬೇಕಾದ ಪ್ರಮುಖ ಅಂಶ.  ಸದಾ ಶುದ್ಧ ಶ್ವೇತ ಮತ್ತು ಖಾವಿ ಕೇಸರಿಯೇ ಇದ್ದ/ಇರುವ/ಇರಲಿರುವ ಇವರಿಂದ "ಕೆಂಪೀಕರಣ"ಗೊಂಡಿರುವ ಲಿಂಗಾಯತಕ್ಕೆ ಯಾರಾದರೂ ಲಿಂಗಾಯತದ ಮೂಲಬಣ್ಣ ತೋರಿಸಿದಾಕ್ಷಣ ಈ ಚಿಂತಕ ಚೇತನರು 'ಕೇಸರೀಕರಣ ಕೇಸರೀಕರಣ ಮುಟ್ಟುಗೋಲು ಮುಟ್ಟುಗೋಲು' ಎಂದು ಬಾಯಿ ಬಾಯಿ ಬಡಿದುಕೊಳ್ಳುತ್ತಾರೆ. ವಿಪರ್ಯಾಸವೆಂದರೆ ಇವರೊಂದಿಗೆ ಶುದ್ಧ ಶ್ವೇತಧಾರಿ ಶರಣೆಯರು, ಖಾವಿಧಾರಿ ವಿರಕ್ತರು ತಾವು ತೊಟ್ಟ ದಿರಿಸಿನ ಬಣ್ಣವನ್ನೇ ಮರೆತು 'ಕೇಸರೀಕರಣ ಕೇಸರೀಕರಣ ಮುಟ್ಟುಗೋಲು ಮುಟ್ಟುಗೋಲು' ಎಂದು ದನಿಗೂಡಿಸಿ ಕೋರಸ್ ಹಾಡುತ್ತಾರೆ!


ಹೀಗೆ ಭಾರತದ ತಲೆಮಾಸಿದ ಈ ನವ್ಯ ತಲೆಮಾರಿನ ವೈಚಾರಿಕ ಸಂಕಥನಗಳ ಮೌಢ್ಯದ ಚಿಂತನೆಯನ್ನು ಕೇಳಿ, ಘನವೆತ್ತ ಪ್ರಜಾಪ್ರಭುತ್ವ ಸರ್ಕಾರದ ಮುಖ್ಯಸ್ಥ ಮುಖ್ಯಮಂತ್ರಿಗಳೊಬ್ಬರು ಸಮಿತಿ ರಚಿಸಿದ್ದರು ಎಂಬ ಸುದ್ದಿಯನ್ನು ಓದಿ ಇಂದಿನ ಇಪ್ಪತ್ತೊಂದನೇ ಶತಮಾನದ ಬೆರಳ ತುದಿಯ ಮಾಹಿತಿ ತಂತ್ರಜ್ಞಾನದ ಜಾಗತಿಕ ಜಗತ್ತು ಅಂಡು ತಟ್ಟಿಕೊಂಡು ಕೇಕೆ ಹಾಕುತ್ತಾ ಮಾಡುತ್ತಿರುವ ನಾಡಿನ ಅಪಹಾಸ್ಯದ ಮೌಲ್ಯ, ಅತ್ಯಮೂಲ್ಯ!!!


Let's separate the hype from the reality! 


- ರವಿ ಹಂಜ್

ವಿಶ್ವವಾಣಿ ಬಸವ ಮಂಟಪ - ವೀರಶೈವ ಲಿಂಗಾಯತ ಪದೋತ್ಪತ್ತಿ ಸುತ್ತ

 ಗ್ರಂಥೇತಿಹಾಸದ ಪ್ರಕಾರವಾಗಿ ವೀರಶೈವ ಪದವು ವೇದವ್ಯಾಸರು ಬರೆದಿರುವರೆನ್ನುವ ಸ್ಕಂದ ಪುರಾಣದಲ್ಲಿ, "ಯೋ ಹಸ್ತಪೀಠೇ ನಿಜಮಿಷ್ಟಲಿಂಗಂ ವಿನ್ಯಸ್ಯ ತಲ್ಲೀನಮನಃ ಪ್ರಚಾರಃ ಬಾಹ್ಯಕ್ರಿಯಾಸಂಕುಲನಿಸ್ಠಹಾತ್ಮಾ| ಸಂಪೂಜಯತ್ತಂಗ ಸ ವೀರಶೈವಂ|" 

ಎಂಬ ಶ್ಲೋಕದಲ್ಲಿ ಬರುತ್ತದೆ. ಈ ಶ್ಲೋಕದ ಅರ್ಥ, "ಯಾರು ತನ್ನ ಹಸ್ತಪೀಠದಲ್ಲಿ ಇಷ್ಟಲಿಂಗವನ್ನಿಟ್ಟು ತನ್ನ ಮನಸ್ಸನ್ನು ನೆಲೆಗೊಳಿಸಿ ಬಾಹ್ಯ ಕ್ರಿಯೆಗಳನ್ನು ದೂರಮಾಡಿ ಶ್ರದ್ಧೆಯಿಂದ ಪೂಜಿಸುವನೋ ಅವನೇ ವೀರಶೈವ" ಎಂದಾಗುತ್ತದೆ. ಸ್ಕಂದ ಪುರಾಣವನ್ನು ಬಹಳಷ್ಟು ಶತಮಾನಗಳ ಹಿಂದೆಯೇ ಬರೆದಿದೆ ಎನ್ನಲಾದರೂ ಇತಿಹಾಸತಜ್ಞರು ಲಭ್ಯ ಪುರಾವೆಗಳ ಪ್ರಕಾರ ಕ್ರಿ.ಶ. ಎಂಟನೇ ಶತಮಾನ ಎಂದು ಮಾನ್ಯ ಮಾಡಿದ್ದಾರೆ. ಹಾಗಾಗಿ ಗ್ರಂಥೇತಿಹಾಸಿಕವಾಗಿ ವೀರಶೈವ ಪದವು ಎಂಟನೇ ಶತಮಾನದಲ್ಲಿ ಇದ್ದಿತು ಎನ್ನಬಹುದು. ವಚನಕಾರ ಸಿದ್ಧವೀರ ದೇಶಿಕೇಂದ್ರನು ತನ್ನ ವಚನದಲ್ಲಿ ಸ್ಕಂದ ಪುರಾಣವನ್ನು ಹೀಗೆ ಉಲ್ಲೇಖಿಸಿದ್ದಾನೆ.


"ವ್ಯಾಸನುಸುರ್ದ ಸ್ಕಂದಪುರಾಣದಲ್ಲಿಯ

ಶ್ರೀಶೈಲಕಲ್ಪ ನೋಳ್ಪುದಯ್ಯಾ.

ಅಲ್ಲಿ ಸಿದ್ಧಸಾಧಕರ ಸನ್ನಿದ್ಥಿಯಿಂದರಿಯಬಹುದಯ್ಯಾ.

ಮಾಡಿದನೊಬ್ಬ ಪೂರ್ವದಲ್ಲಿ ಗೋರಕ್ಷ

ಮಾಡಿದನೊಬ್ಬ ಮತ್ಸ್ಯೀಂದ್ರನಾಥ,

ಮಾಡಿದರೆಮ್ಮ ವಂಶದ ಶ್ರೀಗುರುಶಾಂತದೇವರು.

ಇದು ಕಾರಣ,

ಯೋಗದ ಭೇದ ಯೋಗಿಗಳಂತರಂಗದಿಂದರಿತಡೆ

ಯೋಗಸಿದ್ಧಿ ಸತ್ಯ ಸತ್ಯ,

ಶ್ರೀಗುರು ತೋಂಟದಸಿದ್ಧಲಿಂಗೇಶ್ವರ."


ಸ್ಕಂದ ಪುರಾಣದಲ್ಲಿ "ಶಿವಾಶ್ರಿತೇಷು ತೇ ಶೈನಾ ಜ್ಞಾನಯಜ್ಞ ರತಾ ನರಾಃ | ಮಾಹೇಶ್ವರಾಃ ಸಮಾಖ್ಯಾ ತಾಃ ಕರ್ಮಯಜ್ಜ ರತಾ ಭುವಿ|" ಎಂಬ ಮತ್ತೊಂದು ಶ್ಲೋಕವಿದೆ. ಅರ್ಥಾತ್ ವೀರಶೈವ ಮಾಹೇಶ್ವರರು ಜ್ಞಾನಯಜ್ಞದಲ್ಲಿ, ಕರ್ಮಯಜ್ಞದಲ್ಲಿ ರತರಾಗಿರುವವರು ಎಂದು. ಇವೇ ಶ್ಲೋಕಗಳು ಸಿದ್ಧಾಂತ ಶಿಖಾಮಣಿಯಲ್ಲಿಯೂ ಇವೆ. ವೀರಶೈವ ಪದದ ನಿವೇಚನೆಯನ್ನು "ವಿ ಎಂದರೆ ವಿದ್ಯಾ, "ರ ಎಂದರೆ ರಮಿಸುವುದು; ವೀರಶೈವ ಎಂದರೆ ಶೈವನಿದ್ಯೆಯಲ್ಲಿ ರತನಾದವನು ಎಂದು ಪಂಡಿತರುಗಳು ನಿರ್ವಚಿಸಿದ್ದಾರೆ. ಶಾಸನಗಳಲ್ಲಿ ವೀರಶೈವ ಪದವು ಮೊದಲಬಾರಿಗೆ ಕಂಡುಬರುವುದು ಕ್ರಿಶ. ೧೨೬೧ನೆಯ ಇಸವಿಯ ಮಲ್ಕಾಪುರ ಶಾಸನದಲ್ಲಿ. ಇದರಲ್ಲಿ ಚೋಳಮಾಳವರಾಜರ ಗುರುವೂ, ವೀರಶೈವ ಕಾಕತೀಯರಾಜ “ಗಣಪರಿಕ್ಷ್ಮಾಪಾಲ ದೀಕ್ಷಾ ಗುರು'ವೂ “ಕಳಚುರಿಕ್ಷ್ಮಾಪಾಲದೀಕ್ಷಾಗುರು'ವೂ ಆದ ವಿಶ್ವೇಶ್ವರ ಶಿವಾಚಾರ್ಯನು “ಮಹೀಸುರ'ನೆಂದೂ ವೀರಶೈವಾಚಾರ್ಯನೆಂದೂ ಉಲ್ಲೇಖನಾಗಿದ್ದಾನೆ. ಮಲ್ಕಾಪುರ ಶಾಸವದಂತೆ ವಿಶ್ವೇಶ್ವರ ಶಿವಾಚಾರ್ಯನೇ ವೀರಶೈವ ಕಾಕತೀಯ ಚಕ್ರವರ್ತಿ ಗಣಪತಿಗೆ ದೀಕ್ಷಾ ಗುರುವಾಗಿರುವಂತೆ ಕಳಚುರಿಕ್ಷ್ಮಾಪಾಲನಿಗೂ ದೀಕ್ಷಾ ಗುರುವಾಗಿದ್ದನು. ಖ್ಯಾತ ಕಾಕತೀಯ ರಾಣಿ ರುದ್ರಮದೇವಿ ಇದೇ ಗಣಪತಿಯ ಮಗಳು ಎಂಬುದು ಉಲ್ಲೇಖಾರ್ಹ. ಪಾಲ್ಕುರಿಕಿ ಸೋಮನಾಥನು ಸಹ ತನ್ನ "ಚಾತುರ್ವೇದ ಸಾರಂ" ಗ್ರಂಥದಲ್ಲಿ ಹರಿಯು ಶಿವನಿಗೆ ಭಕ್ತಿ ಪರವಶನಾಗಿ ತನ್ನ ಕಣ್ಣುಗಳನ್ನು ಅರ್ಪಿಸಿದ ಎಂದು ವರ್ಣಿಸುತ್ತ ವೀರಶೈವ ಎಂಬ ಪದದಿಂದ ಶೈವರನ್ನು ಕರೆದಿದ್ದಾನೆ. ಕಾಳಾಮುಖರು ಯಾನೆ ಮಹೇಶ್ವರರು ಯಾನೆ ಜಂಗಮರು ಯಾನೆ ಶಕ್ತಿಗಳು ಯಾನೆ ವೀರರು ಅವರ ಪಂಥ ವಿರೋಧಿಗಳಿಗೆ ಒಡ್ಡುತ್ತಿದ್ದ ಕಠೋರ ಸವಾಲುಗಳ ವೀರತ್ವದ ಕಾರಣಗಳಿಂದಾಗಿ ವೀರಶೈವ ಪದ ಹೆಚ್ಚು ಪರಿಣಾಮಕಾರಿಯಾಗಿ ಬಳಕೆಗೆ ಬಂದಿದೆ ಎನಿಸುತ್ತದೆ.


ವೀರಶೈವ ಪದದ ಪ್ರಾಚೀನತೆಯನ್ನು ಶ್ರೀ ಶಂ.ಬಾ. ಜೋಷಿಯವರು ಸಹ ವೇದಗಳ ಕಾಲಕ್ಕೆ ಒಯ್ಯುವರು. "ಶಿವರಹಸ್ಯ'ವೆಂಬ ಅವರ ಕೃತಿಯಲ್ಲಿ, “ನನಗೆ ತಿಳಿದಮಟ್ಟಿಗೆ ವೀರಶೈವ ಶಬ್ದದ ಮೂಲವು ಋಗ್ವೇದದಲ್ಲಿದೆ. ರುದ್ರನು ವೃಷಭನು, ಎಂದರೆ ವೀರನು. ಆದುದರಿಂದ ಆತನ ಉಪಾಸಕರೂ ವೀರರು; ಅದರಿಂದ ಈ ಹೆಸರು. ಹೀಗೆ ಬರಿಯ ತರ್ಕದಿಂದ ಇದನ್ನು ಎಣಿಕೆ ಹಾಕಬೇಕಾದುದಿಲ್ಲ.


ಇಮಾ ರುದ್ರಾಯ ತವಸೇ ಕಪರ್ದಿನೇ ಕ್ಷಯದ್ದೀರಾಯ ಪ್ರಭರಾಮಹೇ ಮತಿಃ ।

ಯಥಾ ಶಮಸದ್ವಿಷದೇ ಚತುಸ್ಪದೇ ವಿಶ್ವಂ ಪುಷ್ಪಂ ಗ್ರಾಮೇ ಅಸ್ಮಿನ್ನನಾತುರಂ ॥ 


ಬಲಿಷ್ಟನೂ, ಜಟಾಧಾರಿಯೂ, ವೀರಪುತ್ರರನ್ನುಳ್ಳವನೂ ಆದ ರುದ್ರನನ್ನು ಕೊಂಡಾಡುವ; ಅದರಿಂದ ಈ ಊರಿನಲ್ಲಿ ಎರಡು ಕಾಲಿನವರ ಹಾಗೂ ನಾಲ್ಕು ಕಾಲಿನವರ ಕಲ್ಯಾಣವಾಗಿ ಎಲ್ಲರೂ ನಿರೋಗಿಗಳೂ ಪುಷ್ಠರೂ ಆಗುವರು. ಇದರ ಮುಂದಿನ ಮಂತ್ರದಲ್ಲಿಯೂ, ಬೇರೆ ಮಂಡಲಗಳಲ್ಲಿಯೂ ರುದ್ರಶಿವನು ವೀರರ ತಂದೆ, ವೀರರ ಒಡೆಯ ಎಂಬ ಮಾತುಗಳು ಅಲ್ಲಲ್ಲಿ ಬಂದಿವೆ. ಶಿವ (ರುದ್ರ) ನ ಪುತ್ರರು (ಶಿವಪುತ್ರರು) ಎಂದು ಗೌರವದಿಂದ ಹೇಳಿಕೊಳ್ಳುವ ಮತ್ತು ಆ ಬಗೆಯಾದ ದೃಢಶ್ರದ್ಧೆಯಿರುವ ಶಿವಭಕ್ತರಿಗೆ ಮಾತ್ರವಲ್ಲದೆ, ಬೇರೆ ಇನ್ನಾರಿಗೂ ವೀರ (ಶೈವ) ಎಂಬ ಹೆಸರು ಸಮರ್ಪಕವಾಗಲಾರದು. ಕರ್ನಾಟಕದಲ್ಲಿಯೇ ಈ ವೀರರು ರುದ್ರನ ಅನುಯಾಯಿಗಳಾದ ರುದ್ರೀಯರು ಇರುತ್ತಿರುವುದರಿಂದ ಈ ನಾಡಿನ ಜನಾಂಗಗಳ ವೇದಕಾಲದ ಐತಿಹ್ಯವನ್ನು ಅರಿತುಕೊಳ್ಳಲು ಈ ಶಬ್ದವು ಬಹಳ ಉಪಯುಕ್ತವಾಗಿದೆ. ವೀರ ಬಣಂಜುಗಳು, ವೀರ ಪಂಚಾಳರು ಎಲ್ಲರೂ ರುದ್ರೀಯರೇ" ಎಂದಿದ್ದಾರೆ.


ಜೋಷಿಯವರು ತಿಳಿಸಿರುವ ವೃಷಭನನ್ನೇ ಹರಿಹರನು ಶಾಪಗ್ರಸ್ತನನ್ನಾಗಿಸಿ ಧರೆಯಲ್ಲಿ ಬಸವಣ್ಣನಾಗಿ ತನ್ನ ರಗಳೆಯಲ್ಲಿ ಸೃಜಿಸಿರುವುದು ಮತ್ತು ಸೋಮನಾಥನು ತನ್ನ ಪುರಾಣದಲ್ಲಿ ವರ್ಣಿಸಿರುವುದು. ಬಸವಣ್ಣನೂ ತನ್ನ ಕೆಳಗಿನ ವಚನದಲ್ಲಿ ಅವತಾರಗಳನ್ನು ಹೀಗೆ ಖುದ್ದು ಅನುಮೋದಿಸಿದ್ದಾನೆ:


ಅಯ್ಯಾ, ಏಳೇಳು ಜನ್ಮದಲ್ಲಿ ಶಿವಭಕ್ತನಾಗಿ ಬಾರದಿರ್ದಡೆ

ನಿಮ್ಮಾಣೆ, ನಿಮ್ಮ ಪ್ರಮಥರಾಣೆ !

ನಿಮ್ಮ ಪ್ರಸಾದಕ್ಕಲ್ಲದೆ ಬಾಯ್ದೆರೆಯೆನಯ್ಯಾ.

ಪ್ರಥಮಭವಾಂತರದಲ್ಲಿ

ಶಿಲಾದನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು

ನಿಮ್ಮ ಭೃತ್ಯನ ಮಾಡಿ ಎನನ್ನಿರಿಸಿಕೊಂಡಿರ್ದಿರಯ್ಯಾ.

ಎರಡನೆಯ ಭವಾಂತರದಲ್ಲಿ

ಸ್ಕಂದನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು

ನಿಮ್ಮ ಕಾರುಣ್ಯವ ಮಾಡಿರಿಸಿಕೊಂಡಿರ್ದಿರಯ್ಯಾ.

ಮೂರನೆಯ ಭವಾಂತರದಲ್ಲಿ

ನೀಲಲೋಹಿತನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು

ನಿಮ್ಮ ಲೀಲಾವಿನೋದದಿಂದಿರಿಸಿಕೊಂಡಿರ್ದಿರಯ್ಯಾ.

ನಾಲ್ಕನೆಯ ಭವಾಂತರದಲ್ಲಿ

ಮನೋಹರನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು

ನಿಮ್ಮ ಮನಃಪ್ರೇರಕನಾಗಲೆಂದಿರಿಸಿಕೊಂಡಿರ್ದಿರಯ್ಯಾ.

ಐದನೆಯ ಭವಾಂತರದಲ್ಲಿ

ಕಾಲಲೋಚನನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು

ಸರ್ವಕಾಲಸಂಹಾರವ ಮಾಡಿಸುತ್ತಿರ್ದಿರಯ್ಯಾ.

ಆರನೆಯ ಭವಾಂತರದಲ್ಲಿ

ವೃಷಭನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು

ನಿಮಗೇರಲು ವಾಹನವಾಗಲೆಂದಿರಿಸಿಕೊಂಡಿರ್ದಿರಯ್ಯಾ.

ಏಳನೆಯ ಭವಾಂತರದಲ್ಲಿ

ಬಸವದಣ್ಣಾಯಕನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು

ನಿಮ್ಮ ಒಕ್ಕುದ ಮಿಕ್ಕುದಕ್ಕೆ ಯೋಗ್ಯನಾಗಲೆಂದಿರಿಸಿಕೊಂಡಿರ್ದಿರಯ್ಯಾ.

ಇದು ಕಾರಣ ಕೂಡಲಸಂಗಮದೇವಾ,

ನೀವು ಬರಿಸಿದ ಭವಾಂತರದಲ್ಲಿ ನಾನು ಬರುತಿರ್ದೆನಯ್ಯಾ.


ಇನ್ನು ಶಂಬಾರವರು ಹೆಸರಿಸಿರುವ ವೀರಬಣಂಜುಗಳೇ ವೀರಶೈವ ಬಣಜಿಗರು ಮತ್ತು ವೀರಪಂಚಾಳರೇ ವೀರಶೈವ ಪಂಚಮಸಾಲಿಗಳು ಎನ್ನಬಹುದು. ವಿಕಾಸಪಥದ ಹಾದಿಯಲ್ಲಿ ಕೃಷಿಯಲ್ಲಿ ತೊಡಗಿದ್ದ ವೀರಪಂಚಾಳರಲ್ಲಿ ಸಾಕಷ್ಟು ಜನರು ಕುಶಲಕರ್ಮಿಗಳಾದರು. ಈ ಕುಶಲಕರ್ಮಿಗಳಾಗಿದ್ದ ವೀರಪಂಚಾಳರ ಕಾರಣವಾಗಿಯೇ ಕಾಳಾಮುಖರು ದಕ್ಷಿಣಾಚಾರ ಎಂಬ ಶಿಲ್ಪಕಲಾ ವಾಸ್ತುಶಾಸ್ತ್ರವನ್ನು ರಚಿಸಿದ್ದರು. ಈ ದಕ್ಷಿಣಾಚಾರ ಪದವೇ ದಕ್ಕನಾಚಾರ/ಜಕ್ಕನಾಚಾರ ಎಂದು ಅಪಭ್ರಂಶಗೊಂಡು ಸಂಕಥನಗಳ ಮೂಲಕ ವಾಸ್ತುಶಾಸ್ತ್ರವು ವ್ಯಕ್ತಿರೂಪದ ಜಕಣಾಚಾರಿ ಆಗಿದೆ. ನಮ್ಮ ಪ್ರಭೃತಿ ಪ್ರಭಾವಶಾಲಿ ಸಂಶೋಧಕರ ದೆಸೆಯಿಂದ ಸರ್ಕಾರ ಜಕಣಾಚಾರಿಯ ಹುಟ್ಟಿದ ದಿನವನ್ನು ಸೃಷ್ಟಿಸಿ ಜಯಂತಿ ಘೋಷಿಸಿದೆ. ಈ ಬಗ್ಗೆ ಆಸಕ್ತರು ಖ್ಯಾತ ಇತಿಹಾಸಜ್ಞರಾದ ವಸುಂಧರಾ ಫಿಲಿಯೋಜಾ ಅವರ ಕೃತಿಗಳನ್ನು ಗಮನಿಸಬಹುದು. "ಲಕ್ಕುಂಡಿಯಲ್ಲಿರುವ ದೇವಸ್ಥಾನಗಳ ಆವರಣಗಳು ಈ ಕಾಳಾಮುಖ ದಕ್ಷಿಣಾಚಾರದ ವಾಸ್ತುಶಿಲ್ಪದ ಶಾಲೆಗಳಾಗಿದ್ದವು. ಇಲ್ಲಿ ನಿರ್ಮಿಸಿದ ಸಣ್ಣ ಗಾತ್ರದ ಆಕೃತಿಗಳ ದೊಡ್ಡ ಪ್ರತಿಕೃತಿಗಳೇ ಹಳೇಬೀಡು, ಬೇಲೂರು ಮುಂತಾದ ಕಡೆ ಕೆತ್ತಲ್ಪಟ್ಟಿರುವುದು" ಎಂದು ಪುರಾತತ್ವ ಸ್ಮಾರಕಗಳ ಬಗ್ಗೆ ಅಪಾರ ಜ್ಞಾನ ಹೊಂದಿರುವ ಗದಗಿನ ಅಬ್ದುಲ್ ರಜಾಕ್ ದಸ್ತಗೀರ್ ಸಾಬ್ ಕಟ್ಟಿಮನಿ ಮಾಹಿತಿ ನೀಡಿದ್ದಾರೆ. ಡೇವಿಡ್ ಲೊರೆಂಜನ್ ಅಲ್ಲದೆ ಅನೇಕ ಸಂಶೋಧಕರ ಜೊತೆ ಕೆಲಸ ಮಾಡಿರುವ ಖ್ಯಾತಿ ಇವರದು.


ಇನ್ನು ವೀರಶೈವ, ಪೂರ್ವಕಾಲೀನ/ಹಿರಿಯಕಾಲೀನ ವಚನಕಾರರು, ಮತ್ತು ಬಸವಕಾಲೀನ ವಚನಕಾರರು ಹೆಚ್ಚಿನ ಪ್ರವರ್ಧಮಾನಕ್ಕೆ ಬಂದದ್ದು ಭಕ್ತಿಪಂಥದ ಕ್ರಾಂತಿಯ ಅಲೆಯಲ್ಲಿ! ಜೈನರ ಪ್ರಾಬಲ್ಯದ ವಿರುದ್ಧ ಹೋರಾಡಿ ಶೈವಪಂಥವನ್ನು ಹೇರಿದ್ದು ಈ ಎಲ್ಲಾ ವಚನಕಾರರ ಸಮಾನ ಸಿದ್ಧಾಂತ. ಭಕ್ತಿಪಂಥದ ಭಾಗವಾಗಿ ವೀರಶೈವರ ರೇಣುಕರು ಉದ್ಭವವಾದರು ಎನ್ನುವ ಕೊಲ್ಲಿಪಾಕಿ (ಇಂದಿನ ಕೊಳನುಪಾಕ) ಜೈನರ ಒಂದು ಪ್ರಮುಖ ಸ್ಥಳ. ಅಂದಿನ ವೀರಶೈವರು ಜೈನರೊಟ್ಟಿಗೆ ಹೋರಾಡಿ ಕೊಲ್ಲಿಪಾಕಿಯನ್ನು ತಮ್ಮ ಕೈವಶಮಾಡಿಕೊಂಡಿದ್ದರು. ಈ ರೇಣುಕರ ಸಮಕಾಲೀನರೆನ್ನಬಹುದಾದ ಪೂರ್ವಕಾಲೀನ ಶರಣರಾದ ಓಹಿಲ, ಉದ್ಭಟ, ಕೆಂಭಾವಿ ಭೋಗಯ್ಯ, ಕೊಂಡಗುಳಿ ಕೇಶಿರಾಜ, ಡೋಹರಕಕ್ಕಯ್ಯರನ್ನು ಜೇಡರ ದಾಸಿಮಯ್ಯ (ಕ್ರಿ.ಶ ೯೮೦-ಕ್ರಿ.ಶ. ೧೦೪೦) ತನ್ನ ವಚನಗಳಲ್ಲಿ ಕೊಂಡಾಡಿದ್ದಾನೆ. ಇದರಲ್ಲಿ ಓಹಿಲ ಮತ್ತು ಉದ್ಭಟರಿಬ್ಬರೂ ಸೌರಾಷ್ಟ್ರದವರೆನ್ನಲಾಗಿದೆ. ಈ ಸೌರಾಷ್ಟ್ರ ಮೂಲದ ಕೆಲ ಶೈವರು ಮುಂದೆ ವೀರಶೈವತ್ವದ ಕೆಲ ನವಸಂಪ್ರದಾಯಗಳನ್ನು ಪ್ರಮುಖವಾಗಿ ಸಸ್ಯಾಹಾರವನ್ನು ಒಪ್ಪದೇ ತಮ್ಮದೇ ಒಂದು ಭಾಗವಾಗಿ ಈಗಲೂ ತಮಿಳುನಾಡಿನ ಹಲವೆಡೆ ಸೌರಾಷ್ಟ್ರ ಪಾಶುಪತರಾಗಿ ಕಾಣಸಿಗುತ್ತಾರೆ. ಹಾಗಾಗಿಯೇ ಬಸವಣ್ಣನು ಮಾಂಸಾಹಾರಿ ಪಾಶುಪತರನ್ನು ಕಾಪಾಲಿಕರನ್ನು ಒಳಗೊಳ್ಳುವ ಈ ವಚನವನ್ನು ರಚಿಸಿದ್ದಾನೆ ಎನಿಸುತ್ತದೆ:


'ಎಡದ ಕೈಯಲಿ ಕತ್ತಿ, ಬಲದ ಕೈಯಲಿ ಮಾಂಸ,

ಬಾಯಲಿ ಸುರೆಯ ಗಡಿಗೆ, ಕೊರಳಲಿ ದೇವರಿರಲು

ಅವರ ಲಿಂಗನೆಂಬೆ, ಸಂಗನೆಂಬೆ,

ಕೂಡಲಸಂಗಮದೇವಾ, ಅವರ ಮುಖಲಿಂಗಿಗಳೆಂಬೆನು.'


ಕೊಲ್ಲಿಪಾಕಿಯ ರೇಣುಕರ ಉದ್ಭವದ ಹಿನ್ನೆಲೆಯಲ್ಲಿ ರಸ್ತಾಪುರ ಭೀಮಕವಿಯ ’ಹಾಲುಮತೋತ್ತೇಜಕ ಪುರಾಣ’ದ ಎರಡನೇ ಸಂಧಿಯಲ್ಲಿ ರೇವಣಸಿದ್ದೇಶ್ವರ ಚರಿತ್ರೆಯ ಕುರಿತ ಮಾಹಿತಿ ಹೀಗಿದೆ. "ಕೊಲ್ಲಿಪಾಕಿಯ ಸೋಮಲಿಂಗದಿಂದ ಉದಯಿಸಿದ ರೇವಣಸಿದ್ಧರು ಭಕ್ತರನ್ನು ಉದ್ಧರಿಸಲು ಶಾಂತಮುತ್ತಯ್ಯ ಎಂಬುವವರಿಗೆ ಲಿಂಗದೀಕ್ಷೆಯನ್ನು ಕೊಡುತ್ತಾರೆ. ಇಲ್ಲಿ ರೇವಣಸಿದ್ಧರು ಲೀಲೆಗಳನ್ನು ತೋರುತ್ತಾ ಸರೂರು ಗ್ರಾಮಕ್ಕೆ ಬಂದು ಕುರುಬರ ಮನೆತನದಲ್ಲಿ ಜನಿಸಿದ ಶಾಂತಮುತ್ತಯ್ಯನಿಗೆ ‘ಸಿದ್ಧಿಸಲಿ ನೀನಂದ ನುಡಿಗಳು ಭೂಮಿಯಲ್ಲಿ’ ಎಂದು ಆರ್ಶೀವಾದ ಮಾಡಿ ಲಿಂಗದೀಕ್ಷೆಯನ್ನು ನೀಡಿ ಹಾಲುಮತಕ್ಕೆ ಅಧ್ಯಕ್ಷನನ್ನಾಗಿಸುವನು." ಇದು ಈ ಪುರಾಣದಲ್ಲಿರುವ ಅಂಶ. ಮೌಖಿಕ ಕಥಾನಕದ ಆಧಾರವಾಗಿ ಈ ಪುರಾಣವನ್ನು ಬರೆಯಲಾಗಿದೆ ಎಂದು ತಿಳಿದುಬಂದಿದೆ. (ಎಫ್.ಟಿ. ಹಳ್ಳಿಕೇರಿ (ಸಂ), ರಸ್ತಾಪುರ ಭೀಮಕವಿಯ ಹಾಲುಮತೋತ್ತೇಜಕ ಪುರಾಣ, ಕನ್ನಡ ವಿಶ್ವವಿದ್ಯಾಲಯ ಹಂಪಿ, ವಿದ್ಯಾರಣ್ಯ, ೨೦೦೮.)


ಈ ಪುರಾಣದ ಪ್ರಕಾರ ಕೊಲ್ಲಿಪಾಕಿಯಲ್ಲಿ ಸೋಮನಾಥಲಿಂಗದಿಂದ ಉದ್ಭವಗೊಂಡ ಅವತಾರ ಪುರುಷ ರೇವಣಸಿದ್ದೇಶ್ವರರು ಪಶುಪಾಲಕ ಹಾಲುಮತ (ಕುರುಬ) ಹಿನ್ನೆಲೆಯವರು. ಪೌರಾಣಿಕ ಕಥನದಲ್ಲಿ ಉದ್ಭವಿಸಿವವರು ಇಂತಹ ಕುಲದವರೇ ಎನ್ನುವುದು ಮತ್ತು ಪ್ರಶ್ನಿಸುವುದು ತಾರ್ಕಿಕವಲ್ಲ. ಹಾಗೆಯೇ ಇದರಲ್ಲಿನ ಕಾಲಮಾನಗಳು ಮತ್ತು ಪವಾಡದ ಕತೆಗಳನ್ನು ಐತಿಹಾಸಿಕ ದಾಖಲೆಯನ್ನಾಗಿ ಪರಿಗಣಿಸುವುದೂ ಅಲ್ಲ. ಈ ಪುರಾಣಕ್ಕೆ ಪೂರಕವಾದ ಐತಿಹಾಸಿಕ ಪುರಾವೆಗಳಿದ್ದರೆ ಆಗ ತಾಳೆಹಾಕಿ ವಿಶ್ಲೇಷಿಸಿ ಪವಾಡವಲ್ಲದ ಮಾಹಿತಿಯನ್ನು ಪರಿಗಣಿಸಬಹುದು. ಹಾಗಾಗಿ ಈ ಪೌರಾಣಿಕ ಕತೆಯಿಂದ ಗ್ರಹಿಸಬೇಕಾದ ಏಕಾಂಶವೆಂದರೆ ಪಶುಪಾಲಕರು (ಕುರುಬರು) ಸಹ ವೀರಶೈವ ಪಂಥದ ಕ್ರಾಂತಿಯ ಪ್ರಮುಖ ಭಾಗವಾಗಿದ್ದಲ್ಲದೆ ಮಹತ್ವದ ಗುರುಸ್ಥಾನವನ್ನು ಪಡೆದಿದ್ದರು ಎಂಬುದು! ಸಂಶೋಧನ ಹಿನ್ನೆಲೆಯಲ್ಲಿ ಪಾಶುಪತದ ಆಚರಣೆಯ ಪಶುಪಾಲಕ ಹಾಲುಮತಸ್ಥರಿಗೆ ವೀರಶೈವ ಪಂಥ ಸ್ವಾಭಾವಿಕವಾಗಿ ಬೇರೆಯದೆಂದು ಎನಿಸಿರಲೇ ಇಲ್ಲ. ಮುಂದೆ ಯಾವಾಗ ವೃತ್ತಿಗಳೇ ಜಾತಿಗಳಾದವೋ ಆಗ ಇವರು ಜಾತೀಯವಾಗಿ ಕುರುಬರೆನ್ನಿಸಿಕೊಂಡು ಗುರುತಿಸಿಕೊಂಡಿರಬಹುದು. ಅದೇ ರೀತಿ ’ಹುಟ್ಟಿನಿಂದ ಜಾತಿ’ ನೀತಿಯ ಕಾರಣ ಶಾಶ್ವತವಾಗಿ ಕುರುಬರೆಂಬ ಜಾತಿಗೆ ಸೀಮಿತಗೊಂಡು ವೀರಶೈವದಿಂದ ಹೊರಗುಳಿದಿರಬಹುದೆಂದು ಊಹಿಸಬಹುದು. ಉತ್ತರ ಕರ್ನಾಟಕದಲ್ಲಿ ಬಹಳಷ್ಟು ಕುರುಬರು ಈಗಲೂ ಸಸ್ಯಾಹಾರಿಗಳು ಎಂಬುದು ಇಲ್ಲಿ ಗಮನಿಸಬೇಕಾದ ಪೂರಕ ಅಂಶ. ಅಂತೆಯೇ ತಮ್ಮ ಸನಾತನ ಶೈವ ಪರಂಪರೆಯ ಕುರುಹಾಗಿ ಒಡೆಯರ್ ಎಂಬ ಹಾಲುಮತ ಜಂಗಮರು ಇಂದಿಗೂ ಕರಡಿಗೆ ಧರಿಸಿ ಶಿವಪೂಜಾ ನಿರತರಾಗಿದ್ದಾರೆ. ದಾವಣಗೆರೆಯ ಸಂಸದರಾಗಿದ್ದ ದಿವಂಗತ ಚೆನ್ನಯ್ಯ ಒಡೆಯರ್ ಅಂತಹ ಹಾಲುಮತ ಜಂಗಮ ಪರಂಪರೆಯವರಾಗಿದ್ದರು. 'ಹುಟ್ಟಿನಿಂದ ಜಾತಿ' ನೀತಿಯ ಕಾರಣವಾಗಿಯೇ ಕುಶಲಕರ್ಮಿ ಪಂಚಾಳರು ಕುರುಬರಂತೆಯೇ ವಿಶ್ವಕರ್ಮಿಗಳಾಗಿ ವೀರಶೈವದ ಹೊರಗುಳಿದರೆ ಕೃಷಿಕ ಪಂಚಮಸಾಲಿಗಳು ವೀರಶೈವದ ಒಳಗುಳಿದರು. ಈ ಬಗ್ಗೆ ಖ್ಯಾತ ಸಾಗರದಾಳದ ಉತ್ಖನನಜ್ಞರು ಮತ್ತು ಶಿಲ್ಪಕಲಾ ತಜ್ಞರೂ ಆದ ಗುಡಿಗಾರ್ ಪುಟ್ಟಸ್ವಾಮಿಯವರು ಚರ್ಚೆಯೊಂದರಲ್ಲಿ ಬೆಳಕು ಚೆಲ್ಲಿದ್ದರು.


’ಹಾಲುಮತೋತ್ತೇಜಕ ಪುರಾಣ’ದ ಪೌರಾಣಿಕ ಕತೆಯಲ್ಲದೆ ಕಪಟರಾಳ ಕೃಷ್ಣರಾಯರ "ಕರ್ನಾಟಕ ಲಾಕುಳಶೈವ ಇತಿಹಾಸ"ದ ಪುಟ ೮೫ರಲ್ಲಿ ಲೇಖಕರು "ಮಾಧವಾಚಾರ್ಯನ ಸರ್ವದರ್ಶನ ಸಂಗ್ರಹದಲ್ಲಿ ಮಾಹೇಶ್ವರ ದರ್ಶನಗಳಲ್ಲೊಂದಾದ ಶೈವಮತವನ್ನು ಹೇಳಿದೆ. ಅದರಲ್ಲಿ ಪಶುಗಳಲ್ಲಿ ಮೂರು ಭೇದಗಳು, ೧. ವಿಜ್ಞಾನಕಲ, ೨.ಪ್ರಯಾಯಕಲ, ೩. ಸಕಲ. ವಿಜ್ಞಾನಕಲರು ಮಲಯುಕ್ತರು, ಪ್ರಯಾಯಕಲರು ಮಲಕರ್ಮಯುಕ್ತರು, ಮತ್ತು ಸಕಲರು ಮಲಮಾಯ ಕರ್ಮಯುಕ್ತರು. ಇವುಗಳಲ್ಲಿ ಮೊದಲನೇ ವರ್ಗದ ವಿಜ್ಞಾನಕಲದಲ್ಲಿ ಪುನಃ ಎರಡು ಬಗೆ - ಸಮಾಪ್ತಕಲುಷರು ಮತ್ತು ಅಸಮಾಪ್ತಕಲುಷರು. ಸಮಾಪ್ತಕಲುಷರೇ ಪರಮೇಶ್ವರನ ಕೃಪೆಯಿಂದ ವಿದ್ಯೇಶ್ವರ ಪದವಿಗೆ ಬರುವರು. ಅಸಮಾಪ್ತಕಲುಷರು ಮಂತ್ರಗಳಾಗುವರು. ಈ ಮಂತ್ರಗಳು ಏಳು ಕೋಟಿಗಳು. ಮಂತ್ರೇಶ್ವರರು ಏಳು ಕೋಟಿ ಕೋಟಿಗಳು. ಅಂತೆಯೇ ಈ ಮತಕ್ಕೆ ಎಕ್ಕೋಟಿಸಮಯವೆಂದು ಹೆಸರು. ಇಂದಿಗೂ ಕರ್ನಾಟಕದಲ್ಲಿ ಮೈಲಾರನ ಒಕ್ಕಲಿನವರು "ಏಳು ಕೋಟಿ ಏಳು ಕೋಟಿ ಉಘೇ ಚಾಂಗು ಭಲೇ" ಎಂದು ಶಿವನ ಜಯಘೋಷ ಮಾಡುತ್ತಾರೆ. ಇದುವೇ ಪೂರ್ವದ ಲಾಕುಳಸಿದ್ಧಾಂತವಿದ್ದಂತೆ ತೋರುವುದು. ಶಾಸನಗಳಲ್ಲಿ ಇದನ್ನು ಎಕ್ಕೋಟಿ ಸಮಯವೆಂದು ಕರೆಯಲಾಗಿದೆ. ಸರ್ವದರ್ಶನಕಾರನ ಮಾಹೇಶ್ವರರಲ್ಲಿಯ ಶೈವಸಿದ್ಧಾಂತವೂ ಇದೇ. ಈ ಸಿದ್ಧಾಂತವೇ ಮುಂದೆ ಶ್ರೀಕಂಠ ಶಿವಾಚಾರ್ಯನಿಂದ ನಿರೂಪಿಸಲ್ಪಟ್ಟ ಶಕ್ತಿವಿಶಿಷ್ಟಾದ್ವೈತದಲ್ಲಿ ಪರಿಣಾಮವಾಯಿತೆಂದು ಡಾ. ಭಂಡಾರ್ಕರರು ಅಭಿಪ್ರಾಯಪಟ್ಟಿದ್ದಾರೆ" ಎನ್ನುತ್ತಾರೆ.


ಕಾಳಾಮುಖ-ವೀರಶೈವರನ್ನು ಬೆಸೆಯುವ ವೀರ ಮಾಹೇಶ್ವರ, ಜಂಗಮ, ವೀರಬಣಂಜು, ವೀರಪಂಚಾಳ ಪದಗಳ ಜೊತೆಜೊತೆಗೆ ವೀರಶೈವ, ಲಿಂಗಿ, ಲಿಂಗಾಯತ ಮೊದಲಾದ ಹೆಸರುಗಳಿಂದ ಈ ಮತದವರನ್ನು ವ್ಯಾಸನ ಕಾಲದಿಂದಲೂ ಕರೆಯುತ್ತಿದ್ದರು. ವೀರಶೈವ, ವೀರಮಾಹೇಶ್ವರ, ಮಾಹೇಶ್ವರ, ವೀರಬಣಂಜು, ವೀರಪಂಚಾಳ ಎಂಬ ಹೆಸರುಗಳನ್ನು ಬಹುಮಟ್ಟಿಗೆ ಗ್ರಂಥಗಳಲ್ಲಿ ಉಪಯೋಗಿಸಲ್ಪಟ್ಟರೆ ಜಂಗಮ, ಲಿಂಗಿ, ಲಿಂಗಿ ಬ್ರಾಹ್ಮಣ, ಲಿಂಗವಂತ, ಲಿಂಗಾಯತವೆಂಬ ಪದಗಳು ಜನಸಾಮಾನ್ಯರಿಂದ ಉಪಯೋಗಿಸಲ್ಪಡುತ್ತಿದ್ದವು. ಈ ಹಿನ್ನೆಲೆಯಲ್ಲಿ ಸಿದ್ದಗಂಗಾ ಮಠವು 'ಪಟ್ಟಣಗಳಲ್ಲಿ ವೀರಶೈವ ಎನ್ನುತ್ತಾರೆ, ಹಳ್ಳಿಗಳಲ್ಲಿ ಲಿಂಗಾಯತ ಎನ್ನುತ್ತಾರೆ. ಎರಡೂ ಒಂದೇ' ಎಂದು ಕೆಲವು ವರ್ಷಗಳ ಹಿಂದೆ ವೀರಶೈವ ಬೇರೆ ಲಿಂಗಾಯತ ಬೇರೆ ಎಂಬ ಅಭಿಪ್ರಾಯ ಭುಗಿಲೆದ್ದಾಗ ಹೇಳಿಕೆ ನೀಡಿದ್ದನ್ನು ಇಲ್ಲಿ ಸಾಂದರ್ಭಿಕವಾಗಿ ನೆನಪಿಸಿಕೊಳ್ಳಬಹುದು. ಶಿವಜ್ಞಾನಿ ವಿದ್ಯಾಪಾರಾಂಗತರಾದ ವೀರಶೈವಿಗರನ್ನು ಜನಸಾಮಾನ್ಯರು ಇವರೂ ಬ್ರಹ್ಮಜ್ಞಾನಿ ವಿದ್ಯಾಪಾರಾಂಗತರಾದ ಬ್ರಾಹ್ಮಣರೇ ಆಗಿದ್ದಾರೆ ಎಂದು ವರ್ಣಾಶ್ರಮದ ಪ್ರಕಾರ ಸಮೀಕರಿಸಿ ವೀರಶೈವರನ್ನು "ಲಿಂಗಿ ಬ್ರಾಹ್ಮಣ"ರು ಎನ್ನುತ್ತಿದ್ದರು. ಇಂತಹ ವರ್ಣಾಶ್ರಮ ಸಮೀಕರಣದಲ್ಲಿ ಬೌದ್ಧ ಸನ್ಯಾಸಿಗಳನ್ನೂ ಬ್ರಾಹ್ಮಣರೆಂದೇ ಸಾಮಾನ್ಯರು ಪರಿಗಣಿಸಿದ್ದರು. ಈ ಲಿಂಗಿ ಬ್ರಾಹ್ಮಣ ಎನ್ನುವುದೇ ಲಿಂಗಿಯತಿಯಾಗಿ ಲಿಂಗಾಯತಿ/ತವಾಯಿತು. ದೇಶದ ತುಂಬೆಲ್ಲಾ ನಾಮಪದಗಳು ಹೇಗೆ ನಿಷ್ಪತ್ತಿಗೊಂಡವೋ (ಅಪಭ್ರಂಶಗೊಂಡೋ ಆಡುಮಾತಿಗೆ ಸಿಲುಕಿಯೋ) ಹಾಗೆಯೇ "ಲಿಂಗಾಯತ" ಪದದ ವ್ಯುತ್ಪತ್ತಿ "ಲಿಂಗಿ ಬ್ರಾಹ್ಮಣ" ಪದದಿಂದಲೇ ಆಯಿತು ಎನ್ನಬಹುದು. ಆದರೆ ಇಂತಹ ಸಾಮಾನ್ಯ ಭಾಷಾ ಬೆಳವಣಿಗೆಯ ಪದೋತ್ಪತ್ತಿಯನ್ನು ಕನ್ನಡದಲ್ಲಿ ಸ್ನಾತಕೋತ್ತರ, ಪಿಹೆಚ್ಡಿ, ಪೋಸ್ಟ್ ಡಾಕ್ಟೋರಲ್ ಪದವಿ ಪಡೆದು ಸಂಶೋಧನೆ ಮಾಡಿರುವ ಪಂಡಿತರೇ ಪ್ರಭೃತಿ ಕಾಮಾಲೆಗೊಳಗಾಗಿ "ಕಲ್ಬುರ್ಗಿ ನಾಥ ಪ್ರಮೇಯ"ದನ್ವಯ ಲಿಂಗಿ ಬ್ರಾಹ್ಮಣ ಎಂದರೆ ಇಂದಿನ ವರ್ತಮಾನದ ಬ್ರಾಹ್ಮಣ ಜಾತಿಗೆ ಸಮೀಕರಿಸಿ "ಷರಾ" ಬರೆದು ಜನಸಾಮಾನ್ಯರನ್ನು ವಿಸ್ಮೃತಿಗೆ ನೂಕಿದ್ದಾರೆ. ವಿಪರ್ಯಾಸವೆಂದರೆ ಇವರ ಅಂತರಂಗವೇ ಅವಧೂತ ಸದೃಶವಾಗಿ ಇವರ ಒಂದು ಕೃತಿಯ ಹೆಸರನ್ನು "ಸಂಸ್ಕೃತಿ ವಿಕೃತಿ" ಎಂದಾಗಿಸಿದೆ.


ಈ “ಲಿಂಗಾಯತ” ಪದವನ್ನು ಪಂಡಿತರು ನಾನಾ ರೀತಿಯಲ್ಲಿ ನಿರ್ವಚಿಸುತ್ತಾರೆ. ಬಾಗಾಯತ, ಪಂಚಾಯತ ಮೊದಲಾದ ಪದಗಳಂತೆ ಇದೂ ಒಂದು ಪದ ಎನ್ನುತ್ತಾರೆ. ಆದರೆ ಆಯತ, ಸ್ವಾಯತ, ಸನ್ನಿಹಿತವೆಂಬ ಪದಗಳು ವಚನಕಾರರಲ್ಲಿ ವಿಶೇಷಾರ್ಥದಲ್ಲಿ ಉಪಯೋಗಿಸಲ್ಪಟ್ಟವೆ. ವ್ಯಾಸನ ಸ್ಕಂದಪುರಾಣದಲ್ಲಿ ತಿಳಿಸಿದ ವೀರಶೈವ ಇಷ್ಟಲಿಂಗಾರ್ಚನೆಯ ಕ್ರಮಕ್ಕನುಗುಣವಾಗಿ ಶಿಷ್ಯನ ಚಿತ್ಕಲೆಯನ್ನು ಲಿಂಗದಲ್ಲಿ ವಿಧ್ಯುಕ್ತಕ್ರಮದಿಂದ ಆಹ್ವಾನಿಸಿ ಗುರುವು ಶಿಷ್ಯನಿಗೆ ಆ ಲಿಂಗದ ಸಂಬಂಧವನ್ನುಂಟುಮಾಡಿದಾಗ ಆತನು ಲಿಂಗಾಯತನಾಗುವನು; ಇದು ಆಯತ. ಅವನು ಪ್ರಾಣಲಿಂಗಾನುಸಂಧಾನನನ್ನು ಮಾಡಬಲ್ಲವನಾಗಲು ಲಿಂಗವು ಸ್ವಾಯತವಾಗುವುದು; ಅವನು ಭಾವಲಿಂಗಾನುಸಂಧಾನವನ್ನು ಮಾಡಲು ಬಲ್ಲವನಾಗಲು ಲಿಂಗವು ಸನ್ನಿಹಿತವಾಗುವುದು. 


ಹೀಗೆ ಎಲ್ಲಾ ಐತಿಹಾಸಿಕ, ಪೌರಾಣಿಕ ಮತ್ತು ಸಾಮಾಜಿಕ ಸಾಕ್ಷ್ಯಗಳು ಆಕರ ಗ್ರಂಥಗಳು ಪಾಶುಪತ-ಲಾಕುಳ-ಕಾಳಾಮುಖ-ವೀರಶೈವ-ಲಿಂಗಾಯತಗಳು ಒಂದೇ ಎಂದು ಪುರಾವೆ ಕೊಡುತ್ತಾ ಸಾಗಿಬಂದಿವೆ. ಪಶುಪತಿ ಅಂದರೆ ನಾನು ಪಶು (ಭಕ್ತ). ನನ್ನ ಪತಿ (ಒಡೆಯ) ಆ ಶಿವ ಎಂಬ ಪಾಶುಪತಾರ್ಥವೇ ವೀರಶೈವ ಶರಣ ಲಿಂಗಾಯತರ "ಶರಣಸತಿ-ಲಿಂಗಪತಿ"ಯಾಗಿದೆ. ಈ ಎಲ್ಲಾ ಹಿನ್ನೆಲೆಯಲ್ಲಿ ಕ್ರಿಸ್ತಪೂರ್ವದ ಮೊಹೆಂಜೋ-ದಾರೋ ಕಾಲದಿಂದಲೂ ಶೈವಪಥ ಆಚರಣೆಯಲ್ಲಿದ್ದು ಮತ್ತು ಇತಿಹಾಸದುದ್ದಕ್ಕೂ ತಾನು ಸಾಗಿಬಂದ ಪಥದ ಗುರುತನ್ನು ಢಾಳಾಗಿ ತೋರುತ್ತ ಸಂಶೋಧನೆಗಳಿಗೆ ಸಾಕ್ಷ್ಯವನ್ನು ಕೊಟ್ಟಿದೆ. ಹಾಗಾಗಿ ರೇಣುಕರಾಗಲಿ ಬಸವಣ್ಣನಾಗಲಿ ಈ ಪಥದಲ್ಲಿ ಸಾಗಿದ ಸಹಸ್ರಾರು ಶಿವಪಥಿಗಳಂತೆ ಪಂಥ ಪರಿಚಾರಕರೇ ಹೊರತು ಸಂತ ಸಂಸ್ಥಾಪಕರಲ್ಲ! 


ಕಾಳಾಮುಖಿ ಏಕಾಂತರಾಮಯ್ಯನನ್ನು, ಶಕ್ತಿವಿಶಿಷ್ಟಾದ್ವೈತಕ್ಕೆ ಭಾಷ್ಯ ಬರೆದ ಶ್ರೀಪತಿ ಪಂಡಿತಾರಾಧ್ಯರನ್ನು, ರೇಣುಕರನ್ನು, ರೇವಣಸಿದ್ಧರನ್ನಲ್ಲದೆ ಸಮಗ್ರವಾಗಿ ಕಾಳಾಮುಖ-ವೀರಶೈವ-ಲಿಂಗಾಯತದ ಎಲ್ಲಾ ಮಹಾಪುರುಷರನ್ನು ಒಕ್ಕೂಡಿಸಿಕೊಂಡು ಬರೆದ ಕೆಳಗಿನ ಈ ವಚನಗಳು ಈ ನಿಟ್ಟಿನಲ್ಲಿ ಇವೆಲ್ಲವೂ ಒಂದೇ ಒಂದೇ ಒಂದೇ ಎಂದು ಸಾರಿ ಸಾರಿ ಎತ್ತಿ ಹಿಡಿಯುತ್ತವೆ.


'ಬಸವಣ್ಣನೆನ್ನ ಅಂಗ, ಮಡಿವಾಳನೆನ್ನ ಮನ,

ಪ್ರಭುವೆನ್ನ ಪ್ರಾಣ, ಚನ್ನಬಸವನೆನ್ನ ಕರಸ್ಥಲದ ಲಿಂಗ,

ಘಟ್ಟಿವಾಳನೆನ್ನ ಭಾವ, ಸೊಡ್ಡಳಬಾಚರಸರೆನ್ನ ಅರಿವು,

ಮಹಾದೇವಿಯಕ್ಕನೆನ್ನ ಜ್ಞಾನ, ಮುಕ್ತಾಯಕ್ಕನೆನ್ನ ಅಕ್ಕರು,

ಸತ್ಯಕ್ಕನೆನ್ನ ಯುಕ್ತಿ, ನಿಂಬಿಯಕ್ಕನೆನ್ನ ನಿಶ್ಚಯ,

ಅಲ್ಲಾಳಿಯಕ್ಕನೆನ್ನ ಸಮತೆ, ಅನುಮಿಷನೆನ್ನ ನಿಶ್ಚಲ,

ನಿಜಗುಣನೆನ್ನ ಕ್ಷಮೆ, ರೇವಣಸಿದ್ಧಯ್ಯದೇವರೆನ್ನ ನೇತ್ರ,

ಸಿದ್ಧರಾಮತಂದೆಗಳೆನ್ನ ನೇತ್ರದ ದೃಕ್ಕು,

ಮರುಳುಸಿದ್ಧಯ್ಯದೇವರೆನ್ನ ಶ್ರೋತೃ,

ಪಂಡಿತಾರಾಧ್ಯರೆನ್ನ ಜಿಹ್ವೆ, ಏಕೋರಾಮಯ್ಯಗಳೆನ್ನ ನಾಸಿಕ,

ಅಸಂಖ್ಯಾತರೆನ್ನ ಅವಯವಂಗಳು, ಪುರಾತರೆನ್ನ ಪುಣ್ಯದ ಪುಂಜ,

ಏಳುನೂರೆಪ್ಪತ್ತು ಅಮರಗಣಂಗಳೆನ್ನ ಗತಿಮತಿ ಚೈತನ್ಯ,

ಸೌರಾಷ್ಟ್ರ ಸೋಮೇಶ್ವರಾ, ಆ ನಿಮ್ಮ ಶರಣರ ಪಡಿದೊತ್ತಯ್ಯಾ'

(ಸಮಗ್ರ ವಚನ ಸಂಪುಟ: ೬ ವಚನದ ಸಂಖ್ಯೆ: ೧೦೩೪)

***

'ಬಸವಣ್ಣನ ಭಕ್ತಿಸ್ಥಲ, ಮಡಿವಾಳ ಮಾಚಣ್ಣನ ಮಾಹೇಶ್ವರಸ್ಥಲ,

ಘಟ್ಟಿವಾಳ ಮುದ್ದಣ್ಣನ ಪ್ರಸಾದಿಸ್ಥಲ, ಚನ್ನಬಸವಣ್ಣನ ಪ್ರಾಣಲಿಂಗಿಸ್ಥಲ,

ಪ್ರಭುವಿನ ಶರಣಸ್ಥಲ, ಸೊಡ್ಡಳ ಬಾಚರಸರ ಐಕ್ಯಸ್ಥಲ,

ಅಜಗಣ್ಣನ ಆರೂಢ, ನಿಜಗುಣನ ಬೆರಗು,

ಅನುಮಿಷನ ನಿಶ್ಚಲ, ಮಹದೇವಿಯಕ್ಕನ ಜ್ಞಾನ,

ನಿಂಬಿಯಕ್ಕನ ನಿಶ್ಚಯ, ಮುಕ್ತಾಯಕ್ಕನ ಅಕ್ಕರು,

ಸತ್ಯಕ್ಕನ ಯುಕ್ತಿ, ಅಲ್ಲಾಳಿಯಕ್ಕನ ಸಮತೆ,

ರೇವಣಸಿದ್ಧಯ್ಯದೇವರ ನಿಷ್ಠೆ, ಸಿದ್ಧರಾಮತಂದೆಗಳ ಮಹಿಮೆ,

ಮರುಳಸಿದ್ಧಯ್ಯದೇವರ ಅದೃಷ್ಟ ಪ್ರಸಾದನಿಷ್ಠೆ,

ಏಕೋರಾಮಯ್ಯಗಳ ಆಚಾರನಿಷ್ಠೆ,

ಪಂಡಿತಾರಾಧ್ಯರ ಸ್ವಯಂಪಾಕ,

ಮುಗ್ಧಸಂಗಯ್ಯ, ಮೈದುನ ರಾಮಣ್ಣ, ಬೇಡರ ಕಣ್ಣಪ್ಪ,

ಕೋಳೂರ ಕೊಡಗೂಸು, ತಿರುನೀಲಕ್ಕರು,

ರುದ್ರಪಶುಪತಿಗಳು, ದೀಪದ ಕಲಿಯಾರ ಮುಗ್ಧಭಕ್ತಿ

ನಿಮ್ಮೊಳೆನಗೆಂದಪ್ಪುದೊ ಸೌರಾಷ್ಟ್ರ ಸೋಮೇಶ್ವರಾ'

(ಸಮಗ್ರ ವಚನ ಸಂಪುಟ: ೬ ವಚನದ ಸಂಖ್ಯೆ: ೧೦೩೩)

***

ನಂದೀಶ್ವರ, ಭೃಂಗೀಶ್ವರ, ವೀರಭದ್ರ,

ದಾರುಕ, ರೇಣುಕ, ಶಂಖುಕರ್ಣ, ಗೋಕರ್ಣ,

ಏಕಾಕ್ಷರ, ತ್ರಯಕ್ಷರ, ಪಂಚಾಕ್ಷರ, ಷಡಕ್ಷರ,

ಸದಾಶಿವ, ಈಶ್ವರ, ಮಹೇಶ್ವರ, ರುದ್ರ,

ಘಂಟಾಕರ್ಣ, ಗಜಕರ್ಣ,

ಏಕಮುಖ, ದ್ವಿಮುಖ, ತ್ರಿಮುಖ, ಚತುರ್ಮುಖ, ಪಂಚಮುಖ,

ಷಣ್ಮುಖ, ಶತಮುಖ, ಸಹಸ್ರಮುಖ ಮೊದಲಾದ

ಗಣಾಧೀಶ್ವರರು ಇವರು,

ನಿತ್ಯಪರಿಪೂರ್ಣವಹಂಥ ಪರಶಿವತತ್ವದಲ್ಲಿ

ಜ್ಯೋತಿಯಿಂದ ಜ್ಯೋತಿ ಉದಿಸಿದಂತೆ ಉದಯಿಸಿದ

ಶುದ್ಧ ಚಿದ್ರೂಪರಪ್ಪ ಪ್ರಮಥರು.

ಅನಾದಿಮುಕ್ತರಲ್ಲ, ಅವಾಂತರಮುಕ್ತರೆಂಬ ನಾಯ ನಾಲಗೆಯ

ಹದಿನೆಂಟು ಜಾತಿಯ ಕೆರಹಿನಟ್ಟಿಗೆ ಸರಿಯೆಂಬೆ.

ಆ ಶ್ವಾನಜ್ಞಾನಿಗಳಪ್ಪವರ ಶೈವಪಶುಮತವಂತಿರಲಿ,

ಅವರಾಗಮವಂತಿರಲಿ.

ನಿಮ್ಮ ಶರಣರಿಗೆ, ನಿಮಗೆ, ಬೇರೆ ಮಾಡಿ ಸಂಕಲ್ಪಿಸಿ ನುಡಿವ

ಅಜ್ಞಾನಿ ಹೊಲೆಯರ ಎನಗೊಮ್ಮೆ ತೋರದಿರಯ್ಯಾ,

ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.

ಸಮಗ್ರ ವಚನ ಸಂಪುಟ: 11 ವಚನದ ಸಂಖ್ಯೆ: 55


ವೀರಶೈವ-ಲಿಂಗಾಯತ ಒಂದೇ ಎನ್ನುವ ಅಭಿಪ್ರಾಯದ ಇಂತಹ ಎಲ್ಲಾ ವಚನಗಳು ಕಲಬುರ್ಗಿಯವರ ನಾಲಿಗೆಗೆ ರುಚಿಸದ ಕಾರಣ ಇವುಗಳನ್ನು "ಪ್ರಕ್ಷೇಪ" ಎಂದು ಕರೆದಿದ್ದಾರೆ ಎನ್ನುವುದು ಇಲ್ಲಿ ಮತ್ತೊಂದು ತೌಲನಿಕ ಅಧ್ಯಯನದ ಸಂಶೋಧನಾರ್ಹ ಸಂಗತಿ. 


ಇನ್ನು ಅಲ್ಲಮ ತನ್ನ ವಚನದಲ್ಲಿ ಕೈ, ಕೊರಳು, ತಲೆಯಲ್ಲಿ ಲಿಂಗ ಕಟ್ಟುವವರೆಲ್ಲ ತನ್ನ ಆದ್ಯರೇ ಎಂದಿದ್ದಾನೆ,


ಕೈಯಲ್ಲಿ ಕಟ್ಟುವರು ಕೊರಳಲ್ಲಿ ಕಟ್ಟುವರು,

ಮೈಯಲ್ಲಿ ಕಟ್ಟುವರು ಮಂಡೆಯಲ್ಲಿ ಕಟ್ಟುವರು,

ಮನದಲ್ಲಿ ಲಿಂಗವ ಕಟ್ಟರಾಗಿ!

ಆದ್ಯರು ಹೋದರೆಂದು ವಾಯಕ್ಕೆ ಸಾವರು.

ಸಾವುದು ವಿಚಾರವೆ ಗುಹೇಶ್ವರಾ?

(ಸಮಗ್ರ ವಚನ ಸಂಪುಟ: 2 ವಚನದ ಸಂಖ್ಯೆ: 1140)


ಇದಿಷ್ಟು ಕಾಳಾಮುಖ-ವೀರಶೈವ-ಲಿಂಗಾಯತದ ಶತಶತಮಾನಗಳ ಅನುಸಂಧಾನಿ ರೂಪಾಂತರ. ಹಾಗಾಗಿಯೇ ಈಗ ಬಿಡುಗಡೆಯಾಗಬೇಕಿರುವ ಸಿದ್ದರಾಮಯ್ಯನವರ ಜಾತಿ ಜನಗಣತಿಯಲ್ಲಾಗಲಿ ಅಥವಾ ಹಿಂದಿನ ಯಾವುದೇ ಜನಗಣತಿಗಳಲ್ಲಾಗಲಿ ಒಬ್ಬನೇ ಒಬ್ಬ ವ್ಯಕ್ತಿ ತಾನು ಕಾಳಾಮುಖನೆಂದು ನೋಂದಾಯಿಸಿಕೊಂಡಿಲ್ಲ. ಇದಕ್ಕಿಂತ ಬಹುದೊಡ್ಡ ಪುರಾವೆಯನ್ನು ಇನ್ಯಾವುದೇ ಸಂಶೋಧಕ, ಸಂಸ್ಕೃತಿ ಚಿಂತಕ, ಮಾಜಿ ಹಾಲಿ ಸರ್ಕಾರಿ ಸೇವಕ, ಆಡಳಿತ ನಿಯಂತ್ರಕ, ನ್ಯಾಯ ನಿರ್ಣಾಯಕ, ಚೊಕ್ಕ ಪತ್ರಕರ್ತ, ಸಮಾಜವಾದಿ ನಾಯಕರ ಭೋಜನಶಾಲೆಯ ವಿದೂಷಕ ಅಥವಾ ಆ ಸಾಕ್ಷಾತ್ ಲಿಂಗರೂಪಿ ಪರಶಿವನೇ ಅಂಗರೂಪವೆತ್ತಿ ಬಂದರೂ ಕೊಡಲಾರ!


ಇದು ಸವಾಲುವಾದದ ಕಾಳಾಮುಖದ ಪಾರಂಪರಿಕ ಸವಾಲು.


- ರವಿ ಹಂಜ್