ವಿಶ್ವವಾಣಿ ಬಸವ ಮಂಟಪ - ವೀರಶೈವ ವಿಪ್ಲವಕ್ಕೆ ಬರೆದ ಮುನ್ನುಡಿಯೇ?!

 ಲಿಂಗಾಯತ ಪ್ರತ್ಯೇಕ ಧರ್ಮದ ಕೂಗಿನವರ ಹಿಂದಿನ ಧೀಶಕ್ತಿ ಎಂತಹ ಬಾಲಿಶ ಎಂದು ಈ ಹಿಂದೆ ತೋರಿದ್ದೇನಷ್ಟೇ. ಅವರ ಬಾಲಿಶ ಅಂಶಗಳನ್ನು ಇನ್ನಷ್ಟು ಆಳವಾಗಿ ತೋರುವ ಮುನ್ನ ಇತಿಹಾಸದ ವಾಸ್ತವಾಂಶವನ್ನು ತೆರೆದಿಡುವುದು ಅತ್ಯಗತ್ಯ. ಒಂದು ಧರ್ಮದ ಪರಿಗಣನೆಯನ್ನು ಇಂದಿನ ಇಪ್ಪತ್ತೊಂದನೇ ಶತಮಾನದ ನ್ಯಾಯಾಂಗವು ಒಪ್ಪುವಂತಹ ವಾದವನ್ನು  ದಾಖಲೆಯುಕ್ತ ಸಾಮಾನ್ಯಜ್ಞಾನದ ಪರಿಧಿಯಲ್ಲಿ ಮಂಡಿಸಬೇಕು. ಕೇವಲ ನಮ್ಮ ಪರವಾಗಿ ಬುದ್ಧಿಜೀವಿಗಳಿದ್ದಾರೆ, ಸಂಶೋಧಕರಿದ್ದಾರೆ, ನಿವೃತ್ತ ಸರ್ಕಾರಿಯಂತ್ರದ ನಿಯಂತ್ರಕರಿದ್ದಾರೆ, ರಾಜಕಾರಣಿಗಳಿದ್ದಾರೆ, ಅವರಿದ್ದಾರೆ ಇವರಿದ್ದಾರೆ ಎನ್ನುವ ಹುಂಬತನದ ಕೂಪದಾಚೆ ಆಲೋಚಿಸಬೇಕು. ಅಂತಹ ಒಂದು ಕಣ್ಣು ತೆರೆಸುವ ಮತ್ತು ಸಮಾಜವನ್ನು ಒಂದುಗೂಡಿಸುವ ಪ್ರಯತ್ನ ವಿಶ್ವವಾಣಿಯದು. ಆ ಘನ ಉದ್ದೇಶದ ನಿಟ್ಟಿನಲ್ಲಿ ವೀರಶೈವದ ಎಲ್ಲಾ ಆಕರಮೂಲಗಳನ್ನು ತೆರೆದಿಟ್ಟು ತಾರ್ಕಿಕವಾಗಿ ವಿಶ್ಲೇಷಿಸುವ ಪ್ರಯತ್ನವಿದು.


ಹನ್ನೆರಡನೇ ಶತಮಾನದಲ್ಲಿ ರಚಿಸಲಾಗಿದೆ ಎನ್ನುವ ವೀರಶೈವ ವಚನ ಸಾಹಿತ್ಯದ ಸಂಗ್ರಹಕಾರ್ಯ ಹದಿನೈದನೇ ಶತಮಾನದ ಪ್ರೌಢದೇವರಾಯನ ಕಾಲದಲ್ಲಿ ಆರಂಭವಾಯಿತು ಎಂದು ಇತಿಹಾಸಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಇವುಗಳನ್ನು ಹನ್ನೆರಡನೇ ಶತಮಾನದಲ್ಲಿಯೇ ಶರಣರು ರಚಿಸಿದ್ದರು ಎಂಬುದು ಪ್ರಶ್ನಾರ್ಹ ಎಂದು ಸಾಕಷ್ಟು ಸಂಶೋಧಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಅದೇ ರೀತಿ ಸಿದ್ಧಾಂತ ಶಿಖಾಮಣಿಯನ್ನು ಒಂದನೇ ಅಥವಾ ಏಳನೇ ಶತಮಾನದಲ್ಲಿ ರಚಿಸಿದ್ದಾರೆ ಎನ್ನುವುದೂ ಸಹ. ಆಗಲೇ ಇದ್ದ ವಚನಗಳ ಆಧಾರವಾಗಿ 'ಶೂನ್ಯಸಂಪಾದನೆ'ಯ ಮೊದಲ ಸಂಕಥನವನ್ನು ಶಿವಗಣಪ್ರಸಾದಿ ಮಹದೇವಯ್ಯ ಹದಿನೈದನೇ ಶತಮಾನದ ಆರಂಭದಲ್ಲಿ ರಚಿಸಿದ್ದರೆ, ಆಗಲೇ ಸಂಸ್ಕೃತದಲ್ಲಿದ್ದ ಸಿದ್ಧಾಂತ ಶಿಖಾಮಣಿಗೆ ಇದೇ ಹದಿನೈದನೇ ಶತಮಾನದಲ್ಲಿದ್ದ ಗೊರಕೋಡು ಉಜ್ಜನೀಶನು ಕರ್ಣಾಟ ಭಾಷಾ ಟೀಕಾವನ್ನು ರಚಿಸಿದ್ದಾನೆ. ಅಂದರೆ ಕನ್ನಡಕ್ಕೆ ತರ್ಜುಮೆ ಮಾಡಿದ್ದಾನೆ. ಸಮಗ್ರವಾಗಿ ಹದಿನೈದನೇ ಶತಮಾನದ ಈ ಕಾಲಘಟ್ಟವು ವೀರಶೈವದ ಧ್ರುವೀಕರಣದ ಸಮಯ ಎಂದು ಸ್ಪಷ್ಟವಾಗುತ್ತದೆ. ಇನ್ನು ಸಂಸ್ಕೃತದಲ್ಲಿದ್ಧ ’ಶಕ್ತಿವಿಶಿಷ್ಟಾದ್ವೈತ’ಕ್ಕೆ ವೀರಶೈವ ಆಚಾರ್ಯನಾದ ಶ್ರೀಪತಿ ಪಂಡಿತಾರಾಧ್ಯನು ಹನ್ನೊಂದನೇ ಶತಮಾನದಲ್ಲಿ 'ಶ್ರೀಕರ ಭಾಷ್ಯ' ವನ್ನು ರಚಿಸಿದ್ದಾನೆನ್ನುವ ಊಹೆಯಿದ್ದರೂ ಶ್ರೀಪತಿ ಪಂಡಿತಾರಾಧ್ಯ ಹನ್ನೊಂದನೇ ಶತಮಾನದಲ್ಲಿ ಇದ್ದನೆನ್ನುವುದಕ್ಕೆ ಪುರಾವೆಗಳಿವೆ. ಹಾಗಾಗಿ ಸದ್ಯದ ಸಾಹಿತ್ಯಿಕ ಆಕರಗಳ ದೃಷ್ಟಿಯಿಂದ 'ಶಕ್ತಿವಿಶಿಷ್ಟಾದ್ವೈತ'ವು ಈ ಮೂರರಲ್ಲಿ ಪ್ರಾಚೀನ ಎನಿಸುತ್ತದೆ. ಇದಿಷ್ಟು ವೀರಶೈವ ಗ್ರಂಥೇತಿಹಾಸದ ಇತಿಹಾಸಜ್ಞ-ಮಾನ್ಯ ಮಾಹಿತಿ.


ಇನ್ನುಳಿದಂತೆ ಲಿಂಗಾಯತ ಪ್ರತ್ಯೇಕ ಕೂಗಿಗರು ಅಪಹರಿಸಿರುವ ಬಸವಣ್ಣನ ಕುರಿತಾಗಿ ೧೨ನೆಯ ಶತಮಾನದಲ್ಲಿ ಪಾಲ್ಕುರಿಕೆ ಸೋಮನಾಥನು 'ಬಸವ"ಪುರಾಣ"' ರಚಿಸಿದ್ದಾನೆ.  ಹಾಗೆಯೇ ಪ್ರತ್ಯೇಕ ಕೂಗಿಗರು ತಮ್ಮ ಬದ್ಧ ಶತ್ರುಗಳು ಎಂದು ಪರಿಗಣಿಸಿರುವ ಪಂಚಾಚಾರ್ಯರ 

ಪಂಡಿತಾರಾಧ್ಯನ ಕುರಿತಾದ 'ಪಂಡಿತಾರಾಧ್ಯ "ಚರಿತ್ರೆ"'ಯನ್ನೂ ಸೋಮನಾಥನು ರಚಿಸಿದ್ದಾನೆ. ಅದೇ ರೀತಿ ಹರಿಹರನು ಸಹ ಪ್ರತ್ಯೇಕ ಕೂಗಿಗರ ಆದ್ಯದೈವ ಮತ್ತು ಬದ್ಧಶತ್ರುಗಳ ನಡುವೆ ಭೇದವೆಣಿಸದೆ 'ಬಸವರಾಜದೇವರ "ರಗಳೆ"', `ರೇವಣಸಿದ್ದ ರಗಳೆ', 'ಏಕಾಂತರಾಮಯ್ಯನ ರಗಳೆ'ಗಳನ್ನೂ ರಚಿಸಿದ್ದಾನೆ. ಒಟ್ಟಾರೆ ಪುರಾಣ, ಚರಿತ್ರೆ, ರಗಳೆ ಎಂಬ ಈ ಮೂರು ವಿಧದ ಪದಗಳು ವೀರಶೈವದ ಮುಂಬರುವ ಶತಮಾನಗಳಾಚೆಯ ವಿಪ್ಲವಕ್ಕೆ ಮುನ್ನುಡಿ ಬರೆದಂತಿವೆ.


ಇನ್ನು ಶೂನ್ಯ ಸಂಪಾದನೆಯನ್ನು ವೀರಶೈವರ ಕೈಪಿಡಿಯಾಗಿಸಲು ಪಣತೊಟ್ಟಂತೆ ಸಂಪಾದಕರಾದ ಶಿವಗಣಪ್ರಸಾದಿ ಮಹದೇವಯ್ಯ, ನಂತರದ ಹಲಗೆಯಾರ್ಯ, ಸಿದ್ಧಲಿಂಗ ಯತಿ, ಸಿದ್ಧವೀರಣ್ಣೊಡೆಯ ಎಲ್ಲರೂ ವಚನಗಳನ್ನು ತಮ್ಮಿಷ್ಟಕ್ಕೆ ತಕ್ಕಂತೆ ತಿದ್ದಿದ್ದಾರೆ ಎಂದು ಸಂಶೋಧಕರಾದ ಎಲ್. ಬಸವರಾಜು ಆರೋಪಿಸಿದ್ದಾರೆ. ಅಂದರೆ ಪ್ರತಿಯೊಬ್ಬ ಸಂಪಾದಕನೂ ಉದ್ದೇಶಪೂರ್ವಕವಾಗಿ ಈ ಸಂಪಾದನೆಯನ್ನು ಹೆಚ್ಚು ಹೆಚ್ಚು ಆಕರ್ಷಕಗೊಳಿಸಿದ್ದಾರೆ. ಉದಾಹರಣೆಗೆ ಪ್ರಥಮ ಶೂನ್ಯಸಂಪಾದನೆಯಲ್ಲಿರುವ, "ಮಹಾದೇವಿಯಕ್ಕಗಳು ಕಲ್ಯಾಣದ ದಾರಿಯಲ್ಲಿದ್ದಾಗ (ಆಕೆಯನ್ನು) ಕಿನ್ನರಯ್ಯನು ಹರುಷಿಸಿ (ಪರುಷಿಸಿ/ಸ್ಪರ್ಶಿಸಿ) ನೋಡಲು ಅಕ್ಕಗಳು ಅಂತರಂಗದ ಜ್ಞಾನಾಗ್ನಿಯೊಳ್ ಕಾಮನ ಭಸ್ಮಮಂ ಮಾಡಿತೋರಿದರೆಂಬ" ಪ್ರಸಂಗವನ್ನು  ಹಲಗೆಯಾರ್ಯನು ತನ್ನ ದ್ವಿತೀಯ ಸಂಪಾದನೆಯಲ್ಲಿ, "ಯೋನಿಯೊಳ್ ಅಂಗುಲಿಪ್ರವೇಶಂ" ಮಾಡಿ ಕಿನ್ನರಯ್ಯನು ಮಹಾದೇವಿಯನ್ನು ಪರೀಕ್ಷಿಸಿದ್ದನು ಎಂದಿದ್ದಾನೆ. ಇದನ್ನು ಬಸವರಾಜುರವರು ಹಲಗೆಯಾರ್ಯನನ್ನು 'ತೆವಲನ್ನು ತೀರಿಸಿಕೊಂಡ ಪಾಠಪೀಡಕನು' ಎಂದು ಖಂಡಿಸಿದ್ದಾರೆ. ಇಲ್ಲಿ ಹಲಗೆಯಾರ್ಯನು ಸೂಚ್ಯರೂಪಕ ಮೂಲಪಾಠವಾಗಿದ್ದುದನ್ನು ವಾಚ್ಯವಾಸ್ತವವಾಗಿ ವಿಸ್ತರಿಸಿ ಹೇಳಿದ್ದಾನೋ ಅಥವಾ ಬಸವರಾಜು ಅವರ ಮಡಿವಂತಿಕೆಯ ಚಿಂತನೆ ಅವರಿಗೆ ಹೀಗೆನ್ನಿಸುವಂತೆ ಮಾಡಿತೋ ಎಂಬ ಸಂಶೋಧಕ ಜಿಜ್ಞಾಸೆ ಕಾಡುತ್ತದೆ. ಹಾಗಾಗಿ ಇದನ್ನು ಸಂಶೋಧಿಸಿದಾಗ ಅಂದಿನ ಕಾಲಘಟ್ಟದಲ್ಲಿ ಕನ್ಯತ್ವವನ್ನು ಪರೀಕ್ಷಿಸುವವರು ಸಹ ಇಂತಹ "ಯೋನಿಯೊಳ್ ಅಂಗುಲಿಪ್ರವೇಶಂ" ಮಾಡಿ ಪರೀಕ್ಷಿಸುತ್ತಿದ್ದದ್ದು ಸಾಮಾನ್ಯ ಸಂಗತಿ ಎಂದು ಇತಿಹಾಸ ತಿಳಿಸುತ್ತದೆ. ಆ ಕಾಲಮಾನದ ಕ್ರಿಶ್ಚಿಯನ್ ಸನ್ಯಾಸಿಗಳು ತಮ್ಮ ಸನ್ಯಾಸಿನಿಯರ ಆತ್ಮಶುದ್ಧಿಯ ಪಾವಿತ್ರ್ಯತೆಯನ್ನು ಇಂತಹ ದೈಹಿಕ ಪರೀಕ್ಷೆಗೊಳಗಾಗಿಸುತ್ತಿದ್ದ ಅನೇಕ ಕತೆಗಳು ಇವೆ. ಕ್ರಿಸ್ತಶಕ ಹದಿಮೂರನೇ ಶತಮಾನದ ಜೇಕಬಸ್ ಡಿ ವೊರೇಗನ್ ಸಂಗ್ರಹಿಸಿರುವ "ಗೋಲ್ಡನ್ ಲೆಜೆಂಡ್" ಕೃತಿಯಲ್ಲಿ ಬರುವ 'ಅಂಟಿಯಾಕ್ ಕನ್ಯೆ' ಎಂದು ಖ್ಯಾತವಾಗಿರುವ ಕತೆಯ ಅತ್ಯಂತ ಸುಂದರ ಸನ್ಯಾಸಿನಿಗೆ ಚರ್ಚಿನ ಸಹ ಸನ್ಯಾಸಿಗಳು, "ಆಕೆ ತನ್ನ ಆತ್ಮಶುದ್ದಿಯ ಪಾವಿತ್ರ್ಯತೆಯನ್ನು ಸಾಬೀತು ಪಡಿಸಲು ಒಂದು ವೇಶ್ಯಾಗೃಹದಲ್ಲಿ ಎಲ್ಲಾ ರೀತಿಯ ಲೈಂಗಿಕ ಅನುಭವಗಳಿಗೊಳಗಾಗಿಯೂ ಕಾಮದ ಹಂಗನ್ನು ಹೊಂದದೆ ಆತ್ಮಶುದ್ಧಿಯನ್ನು ಕಾಪಾಡಿಕೊಂಡರೆ ಆಕೆಯನ್ನು ಸೇರಿಸಬಹುದು. ಇಲ್ಲದಿದ್ದರೆ ಆಕೆ ಅನ್ಯಧರ್ಮಕ್ಕೆ ಹೋಗಲಿ" ಎಂದು ಸವಾಲು ಹಾಕುತ್ತಾರೆ. "ದೈಹಿಕವಾಗಿ ಹಾದರವನ್ನು ಮಾಡಿಯೇನೆ ವಿನಃ ಆತ್ಮದಲ್ಲಿ ಬೇರೆ ದೇವರ ನೆನೆಯೆನು" ಎಂದು ಆ ಸನ್ಯಾಸಿನಿ ವೇಶ್ಯಾವಾಟಿಕೆಗೆ ಸೇರಿ ಕನ್ಯತ್ವವನ್ನು ಕಳೆದುಕೊಂಡು ತನ್ನ ಆತ್ಮಶುದ್ದಿಯನ್ನು ಮೆರೆಯುತ್ತಾಳೆ. ಇಂತಹ ಅನೇಕ ಕ್ರೈಸ್ತ ಸನ್ಯಾಸಿನಿಯರ ಕತೆಗಳಿವೆ.  ಭಾರತದಲ್ಲೂ ಮಹಿಳೆಗ ತನ್ನ ಪಾವಿತ್ರ್ಯತೆಯನ್ನು ಸಾಬೀತುಪಡಿಸಬೇಕಾದಂತಹ ಪರಿಸ್ಥಿತಿಯ ಕತೆಗಳು ಸಾಕಷ್ಟಿವೆ. ಅಗ್ನಿಪ್ರವೇಶಕ್ಕೊಳಗಾದ ರಾಮಾಯಣದ ಸೀತೆ ಅದಕ್ಕೊಂದು ಉದಾಹರಣೆ. ಇಂತಹ ಸನ್ನಿವೇಶ ಮಹಾದೇವಿಗೆ ಬಂದಿತ್ತು ಎಂದು ವಚನಗಳೇ ತಿಳಿಸುತ್ತವೆ. ಯಾವ ಪುರುಷಹಂಗಿನ ಧರ್ಮಪತ್ನಿಯೂ ಅಲ್ಲದ ಇತ್ತ ಪುಣ್ಯಸ್ತ್ರೀಯೂ ಅಲ್ಲದ ಆಧ್ಯಾತ್ಮನಿರತ ಬ್ರಹ್ಮಚಾರಿಣಿ ಮಹಿಳೆಯನ್ನು ಪರೀಕ್ಷಿಸದೆ ಒಪ್ಪದ ಪುರುಷಾಧಿಪತ್ಯದ ಹಂಗಿಗೆ ಯಾವ ಶರಣನೂ ಹೊರತಾಗಿರಲಿಲ್ಲ. ಮಹಿಳೆಯರಿಗೆ ಸಮಾನಹಕ್ಕು ಕೊಟ್ಟದ್ದು ಶರಣ ಚಳವಳಿ ಎನ್ನುವ ಆವೇಶದ ಭಾವನಾತ್ಮಕ ಭಾಷಣವೀರರು ಇಂತಹ ಕಪ್ಪುಚುಕ್ಕೆಯನ್ನು ಸದಾ ನೆನಪಿಟ್ಟುಕೊಳ್ಳಬೇಕು.

ಅಂದ ಹಾಗೆ ಭಾರತದ ನ್ಯಾಯಾಂಗದಡಿಯಲ್ಲಿ ಮೊನ್ನೆಮೊನ್ನೆವರೆಗೆ ಅತ್ಯಾಚಾರ ದೃಢೀಕರಣವನ್ನು ಸಂತ್ರಸ್ತೆಯ "ಯೋನಿಯೊಳ್ ಅಂಗುಲಿಪ್ರವೇಶಂ" ಮಾಡಿಯೇ ನಿರ್ಧರಿಸುತ್ತಿದ್ದರು.


ಇಂತಹ ವಾಚ್ಯವಾಸ್ತವಾಂಶಗಳು ಹಲಗೆಯಾರ್ಯನ ಸಂಪಾದನೆಯ ವಿಶೇಷ! ಒಟ್ಟಾರೆ ಶೂನ್ಯಸಂಪಾದನೆಯು ವಚನಗಳ ಆಧಾರದಲ್ಲಿ ಕಟ್ಟಿದ ಒಂದು ಕಾಲ್ಪನಿಕ ಸಂಕಥನ. ರಾಮಾಯಣವನ್ನು ಹೇಗೆ ತಮ್ಮ ತಮ್ಮ ಕಲ್ಪನೆಗೆ ಸಿದ್ಧಾಂತಕ್ಕೆ ಸಾಕಷ್ಟು ಕವಿಗಳು ಕಾವ್ಯವನ್ನು, ಸಾಹಿತಿಗಳು, ಸಮಾಜವಾದಿಗಳು, ಬುಡಕಟ್ಟು ಜನಾಂಗದವರು, ಕಮ್ಯೂನಿಸ್ಟ್ ನಾಸ್ತಿಕರು ಗದ್ಯವನ್ನು ಕಟ್ಟಿರುವರೋ ಅದೇ ರೀತಿಯಲ್ಲಿ ವಚನಗಳಾಧರಿತ ಶೂನ್ಯಸಂಪಾದನೆಯ ನಾಲ್ಕು ಆವೃತ್ತಿಗಳು ಎಂದುಕೊಳ್ಳಬಹುದು. 


ಇನ್ನು ಈ ಶೂನ್ಯ ಸಂಪಾದನೆಗಳಲ್ಲಿ ಗಮನಿಸಬೇಕಾದ ಅಂಶವೇನೆಂದರೆ ಈ ಎಲ್ಲಾ ಸಂಪಾದಕರೂ ತಮ್ಮ ನೆಚ್ಚಿನ ಸಾಮಾಜಿಕ ನಾಯಕರನ್ನು ಕೈಲಾಸಗಣಂಗಳಾಗಿಸಿ ಪುರಾಣಪುರುಷರನ್ನಾಗಿಸಿರುವುದು! ಅಲ್ಲಿಗೆ ವಚನಗಳು ಮತ್ತು ವಚನಕಾರರು ಪೌರಾಣಿಕವೆನಿಸಿ ಅವರ/ಅವುಗಳ ಅಸ್ತಿತ್ವ ಅತ್ಯಂತ ಅನುಮಾನಾಸ್ಪದ ಎನಿಸಿಬಿಡುತ್ತದೆ. ಇದಕ್ಕೆ ತಕ್ಕಂತೆ ಶೂನ್ಯಸಂಪಾದನೆ ಕೃತಿಯ ಬಗ್ಗೆ ಮತ್ತು ಬಸವಣ್ಣನ ಬಗ್ಗೆ ಮಂಟೇಸ್ವಾಮಿ, ಕೊಡೇಕಲ್ ಬಸವಣ್ಣ ಮುಂತಾದ ನಂತರದ ತತ್ವಪುರುಷರು ವ್ಯಂಗ್ಯವಾಡಿದ್ದಾರಲ್ಲದೆ ಇಂದಿನ ಆಧುನಿಕ ಶರಣರು ಸಹ ಇದು "ಸಂದೇಹ ಸಂಪಾದನೆ" ಎಂದಿದ್ದಾರೆ. ಇಷ್ಟೆಲ್ಲದರ ನಡುವೆ ಆಧುನಿಕ ಕವಿಗಳ/ಸಂಶೋಧಕರ ನವಿರು ಭಾವನೆ, ವಚನಗಳ ಕಾವ್ಯಮಯ ಮೋಹಕತೆ, ಕಮ್ಯೂನಿಸ್ಟ್ ಒಲವು, ಆಧುನಿಕತೆಯ ಆಕರ್ಷಣೆಗಳು ವಚನಗಳನ್ನು ಸಿದ್ಧಾಂತಗಳನ್ನಾಗಿಸಿ ಬಸವಣ್ಣನನ್ನು ಲೆನಿನ್, ಸ್ಟಾಲಿನ್, ಐನ್ಸ್ಟೀನ್ ಎಂದು ಸಮೀಕರಿಸಿ ಬಸವಣ್ಣನೇ ವೀರಶೈವ ಮತಸ್ಥಾಪಕ, ವಚನಗಳ ಕಟ್ಟೇ ಧಾರ್ಮಿಕ ಗ್ರಂಥ ಎಂದು ಸಮಾಜವನ್ನು ಸಮ್ಮೋಹಿಸಿರುವುದು ಸಹ ಶೂನ್ಯಸಂಪಾದನೆಯ ಮುಂದುವರಿದ ಒಂದು ಸುಂದರ ಸಂಕಥನ ಉರ್ಫ್ ಸಂದೇಹ ಸಂಕಥನ.


ಈಗ ಅನುಭವ ಮಂಟಪದ ಚರ್ಚಾದಾಖಲೆಯ ವಚನಗಳ ಆಧಾರದ ಮೇಲೆ ಸೃಷ್ಟಿಸಿದ ಭಾವಾವೇಶದ ಸಂಶೋಧಕ ಪಿತಾಮಹರ ಸಂಶೋಧನಾ ಸಂಕಥನಗಳಲ್ಲಿ, ಹುಸಿ ಸಮಾಜವಾದಿಗಳ ನಿರ್ವಚನಗಳಲ್ಲಿ ಸೃಜಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಕಥನವನ್ನು ಬದಿಗಿಟ್ಟು ಪ್ರಾಗೈತಿಹಾಸಿಕ, ಪ್ರಾಕ್ತನ, ಶಾಸನ, ಮಾನವಿಕ, ಸಾಮಾಜಿಕ, ಮನಸ್ವಿಕ, ವೈಜ್ಞಾನಿಕ ಅಂಶಗಳಿಂದ ಮತ್ತಷ್ಟು ಆಳವಾಗಿ ನೋಡಿದಾಗ, ವೀರಶೈವದ ಮೂಲವನ್ನು ಆರ್ಯರಿಗಿಂತ ಮೊದಲು ಭಾರತಕ್ಕೆ ವಲಸೆ ಬಂದ ಪೂರ್ವ ಆಫ್ರಿಕಾ ಜನರಿಂದ ಹರಿದುಬಂದ ಲಿಂಗಾರಾಧನೆಯೆನ್ನಬಹುದು. ಈ ಮೂಲನಿವಾಸಿಗಳ ಲಿಂಗಾರಾಧನೆಯೇ ವೇದಗಳಲ್ಲಿ ರುದ್ರಾರಾಧನೆಯಾಯಿತು ಎಂದು ಇತಿಹಾಸಜ್ಞರು ಅಭಿಪ್ರಾಯ ಮಂಡಿಸಿದ್ದಾರೆ. ಈ ವಾದವನ್ನು ಪುರಸ್ಕರಿಸಲು ಪೂರಕವಾಗಿ ಬ್ರಿಟಿಷ್ ಭಾರತದ ಪುರಾತತ್ವ ಇಲಾಖೆಯ ಡೈರೆಕ್ಟರ್ ಜನರಲ್ ಆಗಿದ್ದ ಇತಿಹಾಸಜ್ಞ ಸರ್ ಜಾನ್ ಮಾರ್ಷಲ್ ತಮ್ಮ "ಮೊಹೆಂಜೋದಾರೋ ಅಂಡ್ ದಿ ಇಂಡಸ್ ಸಿವಿಲೈಜೇಶನ್" ಸಂಶೋಧನ ಗ್ರಂಥದಲ್ಲಿ "ಕಲ್ಲಿನಿಂದ ಮಾಡಿದ ಸಣ್ಣ ಲಿಂಗಾಕೃತಿಗಳು ಮೊಹೆಂಜೋ-ದಾರೋ ಉತ್ಖನನದ ಸಮಯದಲ್ಲಿ ಸಿಕ್ಕಿದ್ದು, ಶೈವರಾಧನೆ ಅಥವಾ ಲಿಂಗಾರಾಧನೆಯು ಈ ಕಾಲದಲ್ಲಿಯೂ ಪ್ರಚಲಿತವಿತ್ತೆಂದು ಸಾಕ್ಷ್ಯವನ್ನು ನೀಡುತ್ತವೆ. ಇಲ್ಲಿ ದೊರೆತ ಸಣ್ಣ ಲಿಂಗಾಕೃತಿಗಳು ದಕ್ಷಿಣ ಭಾರತದಲ್ಲಿನ ಇಂದಿನ ವೀರಶೈವರು ಕೊರಳಿಗೆ ಕಟ್ಟಿಕೊಂಡಿರುವ ಕರಂಡದಲ್ಲಿ ಇಟ್ಟುಕೊಳ್ಳುವ ಲಿಂಗಗಳಷ್ಟು ಚಿಕ್ಕದಿವೆ" ಎಂದಿದ್ದಾರೆ. ಆಸಕ್ತರು ಈ ಗ್ರಂಥವನ್ನು ಪರಿಶೀಲಿಸಬಹುದು. ಒಂದು ವೇಳೆ ಈ ಗ್ರಂಥವು ಅನುಪಲಬ್ಧವಾಗಿದ್ದರೆ ಹಂಪಿ ಕನ್ನಡ ವಿಶ್ವವಿದ್ಯಾಲಯವು ಪ್ರಕಟಿಸಿರುವ ಸಂಶೋಧಕರಾದ ಆರ್. ಸಿ. ಹಿರೇಮಠ ಅವರ "ಮಹಾಯಾತ್ರೆ" ಕೃತಿಯನ್ನು ಪರಿಶೀಲಿಸಬಹುದು. ಅವರು ತಮ್ಮ ಈ ಕೃತಿಯಲ್ಲಿ ಸರ್ ಜಾನ್ ಮಾರ್ಷಲ್ ಅವರ ಗ್ರಂಥವನ್ನು ಉಲ್ಲೇಖಿಸುತ್ತ ತಮ್ಮ ಸಂಶೋಧನೆಯ ಇನ್ನಷ್ಟು ಪೂರಕ ವಿಷಯಗಳನ್ನು ಮಂಡಿಸಿದ್ದಾರೆ. ಇದೇ ರೀತಿ ಸಾಹಿತಿ ಜೆ. ರುದ್ರಪ್ಪನವರು ’ಶೈವಮತ’ ಎಂಬ ತಮ್ಮ ಲೇಖನದಲ್ಲಿ ಸಹ ಸರ್ ಜಾನ್ ಮಾರ್ಷಲ್ ಅವರ ಗ್ರಂಥವನ್ನು ಆಕರವಾಗಿ ಉಲ್ಲೇಖಿಸಿದ್ದಾರೆ. ಇವರ ಈ ಲೇಖನವು ಅ.ನ.ಕೃ. ಸಂಪಾದಿಸಿರುವ ’ಭಾರತೀಯ ಸಂಸ್ಕೃತಿ ದರ್ಶನ’ ಕೃತಿಯಲ್ಲಿ ಒಂದು ಅಧ್ಯಾಯವಾಗಿದೆ (ಪುಟ ೨೧೬).


ಮೊಹೆಂಜೋ-ದಾರೋ ಉತ್ಖನನದಲ್ಲಿ ದೊರೆತ ಈ ಲಿಂಗಗಳು ಲಿಂಗಗಳಾಗಿದ್ದರೂ ಅವುಗಳ ಕೆಳಗಿನ ಪೀಠ ಯೋನಿಪೀಠ ಎಂದು ಹೇಳಲಾಗದು ಎಂದು ಆರ್ಥರ್ ಬಾಶಂ ತಮ್ಮ ಸಂದೇಹವನ್ನು ವ್ಯಕ್ತಪಡಿಸಿದ್ದರು. ಆದರೆ ಇದಕ್ಕೆ ಬ್ರಿಟಿಷ್ ಭಾರತದ ಮತ್ತೀರ್ವ ಉತ್ಖನನ ಸಂಶೋಧಕರಾದ ಜೋನ್ಸ್ ಮತ್ತು ರಾಯನ್, ಹರಪ್ಪಾ ಮತ್ತು ಮೊಹೆಂಜೋ-ದಾರೋದಲ್ಲಿ ತಮಗೆ ಯೋನಿಪೀಠದ ಮೇಲಿರುವ ಲಿಂಗಗಳೇ ಸಿಕ್ಕಿರುವುದು ಎಂದು ಸ್ಪಷ್ಟಪಡಿಸಿದ್ದಾರೆ. ಭಾರತ ಇತಿಹಾಸಜ್ಞೆ ವೆಂಡಿ ಡೋನಿಗರ್ ಸಿಂಧೂ ಕಣಿವೆ ನಾಗರೀಕತೆಯು ಬಳಸುತ್ತಿದ್ದ ಮೊಹರುಗಳಲ್ಲಿ ಒಂದಾದ ಪಶುಪತಿ ಮೊಹರಿನಲ್ಲಿರುವ ಲಿಂಗಾಕೃತಿಯನ್ನು ತೋರಿ ಇಲ್ಲಿ ಸಿಕ್ಕ ಪಳೆಯುಳಿಕೆಗಳು ಲಿಂಗಗಳೇ ಎಂದಿದ್ದಾರೆ. ಒಟ್ಟಾರೆ ಈ ಎಲ್ಲಾ ಉತ್ಖನನಗಳು ಮತ್ತು ಸಂಶೋಧನೆಗಳು ಲಿಂಗಾರಾಧನೆಯು ಸಿಂಧೂ ನಾಗರೀಕತೆಯ ಭಾಗವಾಗಿದೆ ಎಂದು ಪ್ರತಿಪಾದಿಸಿವೆ. ಹಾಗಾಗಿ ಲಿಂಗಾರಾಧನೆಯು ಭಾರತದಲ್ಲಿ ಆರ್ಯನ್ ವಲಸಿಗರು ಬರುವ ಮುಂಚಿನಿಂದಲೂ ಇದ್ದ ಮೂಲ ಸಂಸ್ಕೃತಿಯೆನ್ನಬಹುದು.


ಅಲ್ಲಿಗೆ ಮೂಲನಿವಾಸೀ ಪಶುಪಾಲಕರ ಪಶುಪತಿಗೂ ಹರಪ್ಪಾ ಮೊಹೆಂಜೋ-ದಾರೊ ಮೊಹರಿಗೂ ನೇರ ಸಂಬಂಧವಲ್ಲದೆ ಲಿಂಗ ಯಾನೆ ಶೈವಕ್ಕೆ ಸಹ ಪುರಾವೆಯನ್ನು ಸ್ಥಾಪಿಸುತ್ತದೆ. ಈ ಪಶುಪತಿಯ ಆರಾಧಕರೇ ಮುಂದೆ ಪಾಶುಪತರೆಂದು ಕರೆಯಲ್ಪಟ್ಟರು. ಸರ್ ಜಾನ್ ಮಾರ್ಷಲ್ ಅವರು ಸಣ್ಣ ಲಿಂಗಾಕೃತಿಗಳನ್ನು ಶೈವಿಗರು ತಮ್ಮ ಕೊರಳಿಗೆ ಅಥವಾ ತೋಳಿಗೆ ಕಟ್ಟಿಕೊಂಡು ತಿರುಗುವ 'ಜಂಗಮ' ಸಂಸ್ಕೃತಿಯವರು ಎಂದಿದ್ದಾರೆ. ಆ ಜಂಗಮ ಸಂಸ್ಕೃತಿಯು ಬೌದ್ಧರ ಮೇಲೆ ಸಾಕಷ್ಟು ಪ್ರಭಾವ ಬೀರಿತ್ತು. ಆ ಪ್ರಭಾವದಿಂದಲೇ ಬೌದ್ಧರು ಬುದ್ಧನ ಅಥವಾ ನಂತರದ ಬೌದ್ಧಗುರುಗಳ ಜೈವಿಕ ಪಳೆಯುಳಿಕೆಗಳಾದ ಹಲ್ಲು, ಮೂಳೆ, ಕೂದಲುಗಳನ್ನೋ ಕರಂಡಕಗಳಲ್ಲಿಟ್ಟು ಪೂಜಿಸುತ್ತಿದ್ದರು ಮತ್ತು ತಮ್ಮೊಟ್ಟಿಗೆ ದೇಶಾಂತರದಲ್ಲಿ ತೆಗೆದುಕೊಂಡು ಹೋಗುತ್ತಿದ್ದರು. ಮುಂದೆ ಸ್ತೂಪಗಳನ್ನು ಕಟ್ಟಲು ತೊಡಗಿದಾಗ ಆ ಸ್ತೂಪಗಳಲ್ಲಿ ಈ ಕರಂಡಕಗಳನ್ನು ಸ್ಥಾವರಗೊಳಿಸಲಾರಂಭಿಸಿದರು. ಆ ಕರಂಡಕಗಳ ಸಂಸ್ಕೃತಿಯಿಂದ ಪ್ರಭಾವಿತರಾಗಿ ಶೈವರು ತೋಳು ಕೊರಳಿಗೆ ಕಟ್ಟಿಕೊಳ್ಳುತ್ತಿದ್ದ ತಮ್ಮ ಲಿಂಗಗಳನ್ನು ಇಂತಹ ಕರಂಡಕಗಳಲ್ಲಿಟ್ಟು ಅವುಗಳನ್ನು ತೋಳು ಕೊರಳಿಗೆ ಕಟ್ಟಿಕೊಳ್ಳಲಾರಂಭಿಸಿರಬೇಕು ಅಥವಾ ಬೌದ್ಧರೇ ಶೈವಿಗರ ಈ ಪದ್ಧತಿಯನ್ನು ಅಳವಡಿಸಿಕೊಂಡಿರಲೂಬಹುದು. ಪುನರ್ಜನ್ಮದಲ್ಲಿ ನಂಬಿಕೆಯಿರದ ಬೌದ್ಧರು ನಿರ್ವಾಣ ಹೊಂದಿದ ಜೀವಿಗಳ ಭೌತಿಕ ಪಳೆಯುಳಿಕೆಗಳಾದ ಹಲ್ಲು, ಕೂದಲು, ಮೂಳೆಗಳನ್ನು ಕರಂಡಕದಲ್ಲಿಟ್ಟು ಪೂಜಿಸಿದರೆ, ಪಾಶುಪತರು ತಮ್ಮ ಆತ್ಮವನ್ನೇ ಲಿಂಗದ ರೂಪವಾಗಿಸಿಟ್ಟು ಪೂಜಿಸುತ್ತಿದ್ದರು. ಕ್ರಿ. ಶ. ೧೨೭ ರಲ್ಲಿ ಕಾನಿಷ್ಕನ ಪಟ್ಟಾಭಿಷೇಕದ ಪ್ರಥಮ ವಾರ್ಷಿಕೋತ್ಸವದಲ್ಲಿ ರಚಿಸಿದ ಕರಂಡಕದ ಆಕಾರದಂತೆಯೇ ಶೈವಿಗರ ಲಿಂಗವಿಡುವ ಕರಂಡಕ ಯಾನೆ ಕರಡಿಗೆಯ ಆಕಾರವಿದೆ. ಹೀಗೆ ಪರಸ್ಪರ ಪ್ರಭಾವಿಸುವ ಹಿಂದೂ ಸಂಸ್ಕೃತಿಯಿಂದಲೇ ಬೌದ್ಧ, ಜೈನ, ಪಾಶುಪತಗಳು ಒಂದೇ ಸಂಸ್ಕೃತಿಯ ಕವಲುಗಳು ಎನಿಸುವುದು. ಕಾನಿಷ್ಕನ ಈ ಕರಂಡಕವು ಇಂದು ಪಾಕಿಸ್ತಾನದ ಪೇಶಾವರ್ ವಸ್ತುಸಂಗ್ರಹಾಲಯದಲ್ಲಿದೆ.


ಸಾಮಾಜಿಕ ವಿಕಾಸ: 


ಮುಂದಿನ ಮಾನವ ವಿಕಾಸದ ವಿವಿಧ ಕಾಲಘಟ್ಟಗಳಲ್ಲಿ ಈ ಶೈವರು ಕಾಲನುಕ್ರಮವಾಗಿ ಅತಿಮಾರ್ಗಿಗಳು, ಮತ್ತು ಮಂತ್ರಮಾರ್ಗಿಗಳು ಎಂದು ವಿಭಜನೆಗೊಂಡರು. ಮಂತ್ರಮಾರ್ಗಿಗಳು ನಿಗೂಢವಾಗಿರುತ್ತಿದ್ದರು. ತಮ್ಮ ಸ್ವಂತ ಸುಖಲೋಲುಪತೆ ಅವರ ಗುರಿಯಾಗಿತ್ತು. ಮಂತ್ರಮಾರ್ಗಿಗಳಲ್ಲಿನ ಪಂಗಡಗಳು ಕಾಪಾಲಿಕ ಮತ್ತು ಅಘೋರಿ. ಈ ಪಂಥಗಳ ನಿಗೂಢತೆ, ಸಮಾಜ ವಿಕ್ಷಿಪ್ತತೆಯನ್ನು ಈಗಲೂ ಕಾಣಬಹುದು. ಆದರೆ ಅತಿಮಾರ್ಗಿಗಳು ಇದಕ್ಕೆ ವ್ಯತಿರಿಕ್ತವಾಗಿ ಜನಾನುರಾಗಿಗಳು, ಸಮಾಜಮುಖಿಗಳು ಮತ್ತು ಸದಾ ಸಂಚಾರಿಗಳು. ಶೈವಧರ್ಮ ಪ್ರಸಾರ ಇವರ ಗುರಿ. ಇವರು ಒಂದು ನಿಶ್ಚಿತ ಸಮಾಜ ವ್ಯವಸ್ಥೆಯನ್ನು ಸಂಘಟಿಸಿ, ಅದನ್ನು ವಿಕಸಿತಗೊಳಿಸುತ್ತ ನಡೆದರು. ತಾವು ಎಲ್ಲೆಲ್ಲಿ ಸಂಚರಿಸುತ್ತಾ ಹೋದರೋ ಅಲ್ಲೆಲ್ಲ ಅತಿಮಾರ್ಗಿಗಳು ಮಠಗಳನ್ನು ಕಟ್ಟುತ್ತಾ ನಡೆದರು. ಮತ್ತದೇ ಶೈವ-ಬೌದ್ಧರ ಕರಂಡಕ-ಕರಡಿಗೆ ಚಿಂತನೆಯ ಕೊಡುಕೊಳ್ಳುವಿಕೆಯಂತೆ ಮಠಗಳನ್ನು ಕಟ್ಟುವ ಚಿಂತನೆ ಸಹ ಪರಸ್ಪರ ಅಳವಡಿಕೆಯಾಗಿರುವುದು ಕುತೂಹಲಕರ.


ಕಾಲಾನುಕ್ರಮದಲ್ಲಿ ಈ ಅತಿಮಾರ್ಗಿಗಳು ಅಧಿಕೃತವಾಗಿ ಪಾಶುಪತ, ಲಾಕುಳ, ಮತ್ತು ಕಾಳಾಮುಖರೆಂದು ಕರೆಯಲ್ಪಟ್ಟರು. ಬ್ರಿಟಿಷ್ ವಿದ್ವಾಂಸ ಗ್ಯಾವಿನ್ ಫ್ಲಡ್ ನ "ಅನ್ ಇಂಟ್ರೊಡಕ್ಷನ್ ಟು ಹಿಂದೂಯಿಸಂ" ಸಂಶೋಧನಾ ಕೃತಿಯ ಪ್ರಕಾರ ಕ್ರಿ.ಶ. ಒಂದನೇ ಶತಮಾನದಲ್ಲೇ ಅತಿಮಾರ್ಗಿಗಳು ಕಾಳಾಮುಖ ಪಾಶುಪತರೆಂದು ಗುರುತಿಸಲ್ಪಟ್ಟಿದ್ದರು. ಈ ಸಂಚಾರಿ ಜಂಗಮರು ತಮ್ಮದೇ ಆದ ಒಂದು ವಲಸೆಯ ಪರಿಯನ್ನು ಅಳವಡಿಸಿಕೊಂಡಿದ್ದರು. ತಾವು ಪ್ರತಿಸಾರಿ ಸಂಚರಿಸುವ ಸ್ಥಳಗಳಲ್ಲಿ ಮಠಗಳನ್ನು ನಿರ್ಮಿಸಿಕೊಂಡು ಅಲ್ಲಲ್ಲೇ ನಿರ್ದಿಷ್ಟ ಕಾಲ ಬೀಡುಬಿಡುತ್ತಿದ್ದರು. ಈ ಮಠಗಳು ಶೈವಪಂಥದ ಶಾಲೆಗಳಂತೆ ಕಾರ್ಯ ನಿರ್ವಹಿಸುತ್ತಿದ್ದವು ಎಂದು ಡೇವಿಡ್ ಲೊರೆಂಜೆನ್ ತಮ್ಮ "ದಿ ಕಾಪಾಲಿಕಾಸ್ ಅಂಡ್ ಕಾಳಾಮುಖಾಸ್: ಟು ಲಾಸ್ಟ್ ಶೈವೈಟ್ ಸೆಕ್ಟ್ಸ್" ಸಂಶೋಧನ ಕೃತಿಯಲ್ಲಿ ವಿವರಿಸಿದ್ದಾರೆ.


ಕಾಲಕ್ಕನುಗುಣವಾಗಿ ಮಾನವಸಮಾಜ ವಿಕಾಸಗೊಂಡಂತೆ (ಅಲೆಮಾರಿತನದಿಂದ ನೆಲೆಮಾರಿಗಳಾದಂತೆ) ಜಂಗಮ ಕಾಳಾಮುಖರಲ್ಲಿ ಕೆಲವರು ಒಂದೆಡೆ ನೆಲೆ ನಿಲ್ಲಬಯಸಿರಬಹುದು. ಈ ರೀತಿ ನೆಲೆ ನಿಂತವರನ್ನೇ ಅವರವರ ಕಾಯಕಗಳಿಂದ ಗುರುತಿಸಿ ಒಕ್ಕಲಿಗ, ಗಾಣಿಗ, ಅಗಸ, ಕ್ಷೌರಿಕ, ಚಮ್ಮಾರ, ಕಮ್ಮಾರ, ಕುಂಬಾರ, ಗುಡಿಕಾರ, ಅಕ್ಕಸಾಲಿ ಮತ್ತಿತರೆಯಾಗಿ ಕರೆಯಲ್ಪಟ್ಟರು. ಈ ರೀತಿಯ ವಿಕಾಸವು ಕೇವಲ ಭಾರತದಲ್ಲಷ್ಟೇ ಅಲ್ಲದೆ ಮಾನವಜನಾಂಗವು ಎಲ್ಲೆಲ್ಲಿ ಇದ್ದಿತೋ ಅಲ್ಲೆಲ್ಲಾ ಜಾಗತಿಕವಾಗಿ ಆಗಿದೆ. ಉದ್ಯೋಗಗಳು ಯಾ ವೃತ್ತಿಗಳು ವರ್ಣಗಳ ವಿಶಾಲಾರ್ಥದೊಳಗೇ ವಿಂಗಡಗೊಂಡು ವೃತ್ತಿಜಾತಿಗಳಾಗಿ ರೂಪುಗೊಳ್ಳುತ್ತಾ ಸಾಗಿದವು. ಏಕೆಂದರೆ ಸಾಕಷ್ಟು ಭಾರತೀಯ ಜಾತಿಗಳು ಕುಶಲಕರ್ಮ ಯಾ ವೃತ್ತಿಗಳೊಂದಿಗೆ ಸಂಯೋಗಗೊಂಡಿವೆ. ಅದೇ ರೀತಿ ಇತರೆ ನಾಗರೀಕತೆಗಳಲ್ಲಿ ಈ ವೃತ್ತಿಗಳು ಕುಲನಾಮವಾದವು. ಪುರೋಹಿತ-ಪ್ರೀಸ್ಟ್, ವೈಶ್ಯ-ಮರ್ಚಂಟ್/ಸ್ಮಿತ್, ಕ್ಷತ್ರಿಯ-ವಾರಿಯರ್, ಕುರುಬ-ಶೆಪರ್ಡ್, ಚಮ್ಮಾರ-ಶುಮಾಕರ್, ಮಠ-ಮೊನ್ಯಾಸ್ಟ್ರಿ, ಮಾಲಿ-ಗಾರ್ಡನರ್, ಕಮ್ಮತ-ಫಾರ್ಮರ್/ಫೌಲ್ಕನರ್/ಗ್ರೋವರ್, ಬಡಿಗೇರ್-ವುಡ್ಮನ್/ವುಡ್ಸ್ಮಿತ್, ಈಡಿಗ-ಬ್ರ್ಯೂವರ್, ಗಾರೆ-ಮೇಸನ್ ಮುಂತಾದವು. ಈ ರೀತಿಯ ಕುಲನಾಮಗಳು ಕೇವಲ ಬ್ರಿಟಿಷರಲ್ಲದೇ ಸ್ಪ್ಯಾನಿಷ್, ಪೋರ್ಚುಗೀಸ್, ಆಫ಼್ರಿಕಾ, ಅರೇಬಿಯಾ ಮುಂತಾದೆಡೆಯೆಲ್ಲ ವಿಕಾಸಗೊಂಡಿವೆ. ಅದೇ ರೀತಿ ಮಾತಾಪಿತೃನಾಮವನ್ನು ಕುಲನಾಮವಾಗಿಸಿದ ಕಮಲಕ್ಕನವರ್, ವಿರೂಪಣ್ಣಾವರ್ ಎಂಬುವು ಜಾಗತಿಕವಾಗಿ ಮೆಕ್ ಡಾನಲ್ಡ್/ಡಾನಾಲ್ಡಸ್ಕಿ/ಲೌರಾನ್ಸ್ಕಿಯಾದರೆ, ಮೂಲಸ್ಥಳಗಳ ಕುಲನಾಮಗಳು ಹುಬ್ಳೀಕರ್, ಮೈಸೂರುಮಠ, ಲಾಹೋರಿ, ಬಿಹಾರಿ ಮುಂತಾದವು. ಒಟ್ಟಾರೆ ಉದ್ಯೋಗ ಯಾ ಮಾತಾಪಿತ ಯಾ ಮೂಲಸ್ಥಳಗಳು ಜನಾಂಗೀಯ ಗುರುತಿನ ಸ್ಥಾನ ಗಳಿಸಿದವು. ನಾಗರೀಕತೆಗಳ ಜಾಗತೀಕರಣ ಮಾನವ ವಿಕಾಸದೊಂದಿಗೇ ಬೆಸೆದುಕೊಂಡಿದ್ದಿತು. ಜಾಗತೀಕರಣವನ್ನು ವಿರೋಧಿಸುವವರು ಮಾನವವಿಕಾಸ ಮತ್ತು ಇತಿಹಾಸವನ್ನು ಅರಿಯಬೇಕು. ಏಕೆಂದರೆ ಇತಿಹಾಸ ಎಲ್ಲಾ ನಾಗರೀಕತೆಗಳ ಮೂಲ. ಇತಿಹಾಸವಿಲ್ಲದೆ ನಾಗರೀಕತೆ ಇಲ್ಲ. ವಿದೇಶಿ ನಾಗರೀಕತೆಗಳಲ್ಲಿ ಹುಟ್ಟಿನಿಂದ ಕುಲನಾಮವಿಟ್ಟುಕೊಳ್ಳುವ ಪದ್ದತಿ ಇದ್ದಿತೇ ಹೊರತು, ಅದೇ ವೃತ್ತಿಯಲ್ಲೇ ಇರಬೇಕೆಂಬ ನಿಯಮವೇನೂ ಇರಲಿಲ್ಲ. ಅಂತೆಯೇ ಹಿಂದೂ ಸಂಸ್ಕೃತಿಯಲ್ಲಿ ಕೂಡ ಹುಟ್ಟು ಏನಾಗಿದ್ದರೂ ವೃತ್ತಿಯು ವರ್ಣವನ್ನು ನಿರ್ಧರಿಸುತ್ತಿದ್ದಿತು. ಕ್ರಮೇಣ ವೃತ್ತಿಗಳು ಜಾತಿಯೆಂದು ಗುರುತಿಸಿಕೊಳ್ಳುತ್ತ ಸಾಗಿದರೂ, ಅದೇ ವೃತ್ತಿಗಳಲ್ಲೇ ತೊಡಗಿಕೊಳ್ಳಬೇಕೆಂಬ ನಿಯಮಗಳೇನೂ ಇರಲಿಲ್ಲ. ಹೀಗೆ ಸಮಾಜದ ವಿಕಾಸಕ್ಕನುಗುಣವಾಗಿ ವೃತ್ತಿಗಳಿಂದ ವ್ಯಕ್ತಿಗಳು ಗುರುತಿಸಿಕೊಳ್ಳಲಾರಂಭಿಸಿ ಭಾರತದಲ್ಲಿ ಜಾತಿವಿಕಾಸಕ್ಕೆ ಮುನ್ನುಡಿಯಾಯಿತು. ಕಾಳಾಮುಖ ಸಹ ಇದಕ್ಕೆ ಹೊರತಾಗಿರಲಿಲ್ಲ. ವೃತ್ತಿಯೇತರವಾಗಿ ಕಾಳಾಮುಖರೆಲ್ಲರೂ ಒಂದೇ ಆಗಿದ್ದರು. 


ತಾತ್ವಿಕ ವಿಕಾಸ: 


ಇನ್ನು ಶೈವದ ಲಕುಲೀಶ ಎಂದರೆ ಒಂದು ಲಾಕುಲ (ಕೂಟ)ದ ಮುಖಂಡನೇ ಈಶ ಅಥವಾ ದೊಣ್ಣೆ(ತ್ರಿಶೂಲ)ಯನ್ನು ಹಿಡಿದವ ಎಂದು ಸಂಶೋಧಕರು ಗುರುತಿಸಿದ್ದಾರೆ.  ಸಂಶೋಧಕ ಹೆಚ್.ಹೆಚ್. ಡ್ಯಾನಿಯಲ್ ಇಂಗಲ್ಸ್ ಅರವತ್ತರ ದಶಕದಲ್ಲೇ ಹರ್ಕ್ಯೂಲಿಸ್ ಮತ್ತು ಲಕುಲೀಶ ಪದಗಳ ಮತ್ತವುಗಳ ಶಬ್ದಾರ್ಥದ ಸಾಮ್ಯತೆಯ ಮೇಲೆ ಎರಡೂ ಒಂದೇ ಎಂಬ ಅನುಮಾನವನ್ನು ವ್ಯಕ್ತಪಡಿಸಿದ್ದಾರಲ್ಲದೆ ಗ್ರೀಕ್ ಸಿನಿಕರಿಗೂ ಮತ್ತು ಪಾಶುಪತರಿಗೂ ಇರುವ ತಾತ್ವಿಕ ಸಾಮ್ಯತೆಯನ್ನು ಗುರುತಿಸುತ್ತಾರೆ. ಹಿಂದೂಗಳ ಮೇಲೆ ಗ್ರೀಕರ ಪ್ರಭಾವವಿದ್ದಂತೆ ಲಕುಲೀಶನ ಪ್ರಭಾವ ಗ್ರೀಕ್ ಸಂಸ್ಕೃತಿಯ ಮೇಲಾಗಿ ಹರ್ಕ್ಯೂಲಿಸ್ ಅನಾವರಣಗೊಂಡಿರಬಹುದು ಎಂದು ತಮ್ಮ ವಾದವನ್ನು ಮಂಡಿಸಿದ್ದಾರೆ.  ಇದಕ್ಕೆ ಪೂರಕವಾಗಿ ಹೂಣರು ತಮ್ಮ ನಾಣ್ಯಗಳ ಮೇಲೆ ಹರ್ಕ್ಯೂಲಿಸ್ ತೆಗೆದು ಶಿವನನ್ನು ಟಂಕಿಸಿದ ಉದಾಹರಣೆಯನ್ನು ಕೊಟ್ಟು ತಮ್ಮ ವಾದವನ್ನು ಸಮರ್ಥಿಸಿಕೊಂಡಿದ್ದಾರೆ. ಹೆಚ್ಚಿನ ಓದಿಗೆ ಹಾರ್ವರ್ಡ್ ಥಿಯಾಲಾಜಿಕಲ್ ರಿವ್ಯೂ ೧೯೬೨ ರಲ್ಲಿ ಪ್ರಕಟಿಸಿರುವ "ಸಿನಿಕ್ಸ್ ಅಂಡ್ ಪಾಶುಪತಾಸ್: ದಿ ಸೀಕಿಂಗ್ ಆಫ್ ಡಿಸ್ಹಾನರ್" ಲೇಖನವನ್ನು ಗಮನಿಸಬಹುದು.


ಅದಲ್ಲದೆ ಭಾರತೀಯ ತರ್ಕಶಾಸ್ತ್ರವಾದ "ನ್ಯಾಯ ಸೂತ್ರ"ವನ್ನು ರಚಿಸಿದ ಗೌತಮ ಸಹ ಭರೂಚದಲ್ಲಿ ವಾಸವಿದ್ದು ಅಲ್ಲಿದ್ದ ಗ್ರೀಕರ ಸಿನಿಕ್ ಪಂಥದಿಂದ ಪ್ರಭಾವಿತಗೊಂಡಿರಬಹುದು ಎಂದು ಫರ್ರಾಂಡ್ ಸಾಯ್ರ್ ತಮ್ಮ ೧೯೩೮ ರಲ್ಲಿ ಪ್ರಕಟಿಸಿದ "ಡೈಯೋಜೀನ್ಸ್ ಆಫ್ ಸಿನೋಪ್: ಎ ಸ್ಟಡಿ ಆಫ್ ಗ್ರೀಕ್ ಸಿನಿಸಿಸಂ" ಕೃತಿಯಲ್ಲಿ ಹೇಳಿದ್ದಾರೆ.  ಈ ಭರೂಚ ಪ್ರದೇಶವೇ ಲಕುಲೀಶರ ಆಡುಂಬೋಲ ಸಹ ಆಗಿತ್ತು. ಅದಲ್ಲದೆ ಕಾಳಾಮುಖ ಮತ್ತು ಪಾಶುಪತಗಳೆರಡೂ ನ್ಯಾಯ ಮತ್ತು ವೈಶೇಷಿಕ ಆಧ್ಯಾತ್ಮಿಕತೆಗೆ ಹೆಚ್ಚು ಹತ್ತಿರವಿದ್ದವು ಎಂದು ಈಗಾಗಲೇ ಸಾಕಷ್ಟು ಸಂಶೋಧನೆಗಳು ಸಾಬೀತುಪಡಿಸಿವೆ.


ಸಂಶೋಧಕರಾದ ಎಸ್.ಎನ್. ದಾಸ್ "ಹಿಸ್ಟರಿ ಆಫ್ ಇಂಡಿಯನ್ ಫಿಲಾಸಫಿ" ಕೃತಿಯಲ್ಲಿ ಕಾಳಾಮುಖ ಯಾ ಪಾಶುಪತದ ಹರದತ್ತನ "ಪಾಶುಪತ ಗಣಕಾರಿಕಾ"ವೇ ಪರಿಷ್ಕೃತಗೊಂಡು "ಸಿದ್ಧಾಂತ ಶಿಖಾಮಣಿ" ಆಗಿದೆ ಎಂದಿದ್ದಾರೆ. ಕಾಳಾಮುಖರ ಬೊಂತೇಯಮುನಿ "ಕರ್ತೃ"ವು ನಿರಾಕಾರನೂ ನಿರಾಮಯನೂ ಆಗಿದ್ದಾನೆ ಎಂದಿದ್ದಾನೆ.  ಬೊಂತೇಯಮುನಿಯ ಸ್ಥಾವರ-ಕರ್ತೃ-ವಾದವು ಪಾಶುಪತದಲ್ಲಿ "ಕಾರ್ಯಕಾರಣ ಸ್ಥಾವರ" ಅಂದರೆ ಲೌಕಿಕ ಪ್ರಪಂಚದ ಕಾರಣ ಸ್ಥಾವರ ಬೇಕು ಎಂದಾಗಿದೆ. ಇನ್ನು ಕರ್ತೃ, ಸ್ಥಾವರ, ನಿರಾಕಾರ, ನಿರಾಮಯಗಳು ವಚನಗಳಲ್ಲಿ ಹಾಸುಹೊಕ್ಕಾಗಿವೆ.  ಈ  ಪಂಥಗಳು ತರ್ಕಶಾಸ್ತ್ರ, ಯೋಗ, ತಂತ್ರವನ್ನು ತಮ್ಮ ಆಧ್ಯಾತ್ಮಿಕ ತತ್ವಗಳಲ್ಲಿ ಅಳವಡಿಸಿಕೊಂಡಿವೆ. ತಾಂತ್ರಿಕ ಕುಂಡಲಿನೀ ಕ್ರಿಯೆಯ ವರ್ಣನೆಯನ್ನು ಅಲ್ಲಮನಲ್ಲದೇ ಅಕ್ಕಮಹಾದೇವಿ ಚೆನ್ನಬಸವಣ್ಣ ಮತ್ತಿತರೆ ವಚನಕಾರರ ವಚನಗಳಲ್ಲಿ ಕಾಣಬಹುದು. ಹೀಗೆ "ಸಿದ್ಧಾಂತ ಶಿಖಾಮಣಿ" ಗ್ರಂಥಕ್ಕೆ ಐತಿಹಾಸಿಕ ಪುರಾವೆಯ ಬೆಂಬಲ ಸಿಗುತ್ತದೆ.


ಇನ್ನು ’ಶಕ್ತಿವಿಶಿಷ್ಟಾದ್ವೈತ’ದ "ಶಕ್ತಿ" ಎಂಬುದು ಕಾಳಾಮುಖರ ಛಾಪಾಗಿತ್ತು. ಕರ್ಣಾಟ ಸಾಮ್ರಾಜ್ಯಸ್ಥಾಪನೆಗೆ ಮಾರ್ಗದರ್ಶನ ನೀಡಿದ್ದ ಕ್ರಿಯಾ'ಶಕ್ತಿ', ಹೊಂಬಳದಲ್ಲಿನ ಕ್ರಿ.ಶ. ೧೧೮೯ ರ ದತ್ತಿ ಶಾಸನದಲ್ಲಿನ ರುದ್ರ'ಶಕ್ತಿ', ಬಳ್ಳಿಗಾವೆ ಕೇದಾರೇಶ್ವರ ದೇವಸ್ಥಾನದ ಶಾಸನಲ್ಲಿರುವ ಕೇದಾರ'ಶಕ್ತಿ', ವಾಮ'ಶಕ್ತಿ', ಜ್ಞಾನ'ಶಕ್ತಿ' ಹೀಗೆ ಕಾಳಾಮುಖ ಸಾಧಕರ ಶಕ್ತಿ ಪಟ್ಟಿ ಬೆಳೆಯುತ್ತದೆ. ಈ ಎಲ್ಲಾ 'ಶಕ್ತಿ'ಗಳನ್ನು ಶಾಸನಗಳಲ್ಲಿ ಜಂಗಮ, ಲಿಂಗಾವತಾರ ಎಂದೂ ಕರೆಯಲಾಗಿದೆ. "ಜಂಗಮವೇ ಲಿಂಗವೆಂದರಿಯದವರ ತೋರದಿರು" ಎಂದು ವಚನಕಾರರೇ ಜಂಗಮವನ್ನು ಮಾನ್ಯ ಮಾಡಿದ್ದಾರೆ. ಬಿಜ್ಜಳರಾಯಚರಿತಗಳಲ್ಲಿ ಬಸವಣ್ಣನು ಮತಪ್ರಚಾರಕ್ಕಾಗಿ ಜಂಗಮರಿಗೆ ಸಾಕಷ್ಟು ಹಣವನ್ನು ಚೆಲ್ಲಿ ಕೋಶವನ್ನು ಖಾಲಿ ಮಾಡಿದ್ದನು ಎಂದಿದೆ. ಈ ಹಿನ್ನೆಲೆಯಲ್ಲಿ "ಮತಪ್ರಚಾರಕ್ಕಾಗಿ ಕೋಶ" ಎಂಬ ಇಂದಿನ ಪ್ರಜಾಪ್ರಭುತ್ವದ ಬುನಾದಿಯ ಅಳವಡಿಕೆಯು ಸಹ ಪ್ರಪಂಚದ ಪ್ರಥಮ ಸಂಸತ್ತಿನಲ್ಲೇ ಕಂಡುಕೊಂಡ ನಿಯಮವಿರಬಹುದೇ ಎಂಬ ಕುಚೋದ್ಯ ಸಂಕಥನ ಮನದಲ್ಲಿ ಸುಳಿದರೆ ಅದು ತಪ್ಪಲ್ಲ.


"ಕಾಳಾಮುಖ ಸಂಪ್ರದಾಯದ ಗುರುಗಳು ನ್ಯಾಯ ಮತ್ತು ವೈಶೇಷಿಕ ತತ್ವಶಾಸ್ತ್ರಗಳಲ್ಲಿ ವಿಶೇಷ ಪರಿಣಿತರಾಗಿದ್ದರು. ಅವರು ತಮ್ಮ ಹೆಸರುಗಳ ಕೊನೆಯಲ್ಲಿ ‘ಪಂಡಿತ’, ‘ಪಂಡಿತದೇವ’ ಎಂಬ ವಿಶೇಷಣಗಳನ್ನು ಹಚ್ಚಿಕೊಳ್ಳುವುದು ವಾಡಿಕೆ. ಅವರು ಸಂಸ್ಕೃತದಲ್ಲಿ ಉದ್ದಾಮ ಪಂಡಿತರಾಗಿರುತ್ತಿದ್ದರು. ಮಠ-ಮಂದಿರಗಳಿಗೆ ಅಧಿಪತಿಗಳಾಗಿರುತ್ತಿದ್ದರು. ಅವರು ಉಳಿದ ವೈದಿಕ ಪುರೋಹಿತರಂತೆ ಇರಲಿಲ್ಲ. ಅವರು ಆಜೀವ ಬ್ರಹ್ಮಚಾರಿಗಳಾಗಿರುತ್ತಿದ್ದರು. ‘ಪರಮ ನೈಷ್ಠಿಕರೆಂದೂ, ತಪೋಧನ’ರೆಂದೂ ಪ್ರಸಿದ್ಧಿ ಪಡೆದಿದ್ದರು. ಅಪವಾದಕ್ಕೆ ಕೆಲವರು ಸಂಸಾರಿಗಳಾಗಿದ್ದರೆಂದೂ ತಿಳಿದು ಬರುತ್ತದೆ. ಲಭ್ಯವಿದ್ದ ಬಸವಪೂರ್ವ ಶಾಸನಗಳಲ್ಲಿ ಅವರಿಗೆ "ಮಾಹೇಶ್ವರ"ರೆಂದು,‘ಜಂಗಮ’ರೆಂದು ಕರೆಯಲಾಗಿದೆ. ಬಸವಣ್ಣನವರು ತಮ್ಮ ವಚನಗಳಲ್ಲಿ ಬಳಸಿದ ‘ಜಂಗಮರು’ ಎಂಬ ಪದವು ಈ ಕಾಳಾಮುಖ ಜಂಗಮರನ್ನೇ ನಿರ್ದೇಶಿಸುತ್ತದೆ. ಸಮಾಜ ಸುಧಾರಣೆಯ ಕಳಕಳಿಯುಳ್ಳವರಾದ ಕಾಳಾಮುಖರು (ಜಂಗಮರು) ಬಸವಣ್ಣನವರ ಪೂರ್ವದಲ್ಲಿ ಸಂಘಟಿತರಾಗಿದ್ದರು. ಬಸವಣ್ಣನವರ ಸಮಾಜ ಸುಧಾರಣೆಯಲ್ಲಿ ಇವರು ಸಹಕರಿಸಿದರು (ಪುಟ-241). ಬಸವಣ್ಣನವರ ಪೂರ್ವದಲ್ಲಿ ಮತ್ತು ತದನಂತರ ಕೆಲವು ವರುಷ ಕಾಳಾಮುಖರು ಕರ್ನಾಟಕದ ಉತ್ತರ ಭಾಗದಲ್ಲಿ ಅತ್ಯಂತ ಪ್ರಭಾವಶಾಲಿಗಳಾಗಿದ್ದರು. ಶಿವಮೊಗ್ಗ, ಧಾರವಾಡ, ಬೆಳಗಾವಿ ಜಿಲ್ಲೆಗಳಲ್ಲೂ, ಆಂಧ್ರಪ್ರದೇಶದ ಉಸ್ಮಾನಾಬಾದ್ ಜಿಲ್ಲೆಯಲ್ಲೂ ಅವರ ಮಠಗಳಿದ್ದವು. ಶಾಸನಗಳ ಆಧಾರದ ಮೇಲೆ ಹೇಳುವುದಾದರೆ ಕ್ರಿ.ಶ 1250ರ ಹೊತ್ತಿಗೆ ಕಾಳಾಮುಖರ ಎಲ್ಲ ಮಠಗಳು ವೀರಶೈವ ಮಠಗಳಾಗಿ ಪರಿವರ್ತಿತವಾದದ್ದು ಸ್ಪಷ್ಟವಾಗಿ ತಿಳಿದು ಬರುತ್ತದೆ (ಪುಟ-239)." ಎಂದು ಡೇವಿಡ್ ಲೋರೆಂಜನ್ ಸ್ಪಷ್ಟವಾಗಿ ದಾಖಲೆ ಸಮೇತ ತಮ್ಮ "ದಿ ಕಾಪಾಲಿಕಾಸ್ ಅಂಡ್ ಕಾಳಾಮುಖಾಸ್: ಟು ಲಾಸ್ಟ್ ಶೈವೈಟ್ ಸೆಕ್ಟ್ಸ್" ಸಂಶೋಧನ ಕೃತಿಯಲ್ಲಿ ವಿವರಿಸಿದ್ದಾರೆ. 


ವಿಸ್ತರಣೆ: 


ಪಂಥ ವಿಸ್ತರಣೆಯು ಅಂದಿನ ಎಲ್ಲಾ ಪಂಥಗಳ ಗುರಿಯಾಗಿದ್ದಂತೆಯೇ ಕಾಳಾಮುಖರ ಪ್ರಮುಖ ಗುರಿಯೂ ಪಂಥ ವಿಸ್ತರಣೆಯಾಗಿತ್ತು. ಅಂದಿನ ಸಾಕಷ್ಟು ಶೈವಪ್ರಭುತ್ವಗಳ (ಅದರಲ್ಲೂ ದಕ್ಷಿಣ ಭಾರತದ) ಆಧಿಪತ್ಯ ವಿಸ್ತರಣೆಯಲ್ಲಿ ಕಾಳಾಮುಖರು ತಮ್ಮದೇ ಆದ ರೀತಿಯಲ್ಲಿ ಸಾಕಷ್ಟು ಸೇವೆಯನ್ನು ಸಲ್ಲಿಸಿದ್ದಾರೆ. ಯುದ್ಧಗಳಲ್ಲಿ ನೇರವಾಗಿ ಮತ್ತು ಪರೋಕ್ಷವಾಗಿ ವೀರೋಚಿತವಾಗಿ ಭಾಗವಹಿಸಿದ್ದಾರೆ. ರಾಜಗುರುಗಳೆಂದೂ ಮಾನ್ಯತೆ ಪಡೆದಿದ್ದಾರೆ. ಕಾಳಾಮುಖರು ತಮ್ಮ ಪಂಥವಿಸ್ತರಣೆಗೆ ಆಕ್ರಮಣಕಾರಿ ಪದ್ಧತಿಯನ್ನು ತುಸು ಹೆಚ್ಚಾಗಿಯೇ ಅನುಸರಿಸುತ್ತಿದ್ದರು. ಇದರಲ್ಲಿ ಬಹುಮುಖ್ಯವಾಗಿ ಸವಾಲುವಾದ, ಮತ್ತು ದಂಡನೆ ತಂತ್ರಗಳು ಪ್ರಮುಖವಾಗಿದ್ದವು. ಶೈವರಲ್ಲದವರಿಗೆ ಈ ಕಾಳಾಮುಖ ಶೈವರು ತಮ್ಮ ದೇವರುಗಳಿಗೆ ತಮ್ಮ ದೇಹದ ಅಂಗಾಂಗಗಳನ್ನು ಅರ್ಪಿಸುವ ಸವಾಲನ್ನು ಹಾಕುತ್ತಿದ್ದರು. ನಾವು ನಮ್ಮ ಕೈ, ಕಾಲು, ತಲೆಗಳನ್ನು ಶಿವನಿಗೆ ಅರ್ಪಿಸುವೆವು. ನೀವು ಕೂಡ ನಿಮ್ಮ ನಿಮ್ಮ ದೇವರುಗಳಿಗೆ ನಿಮ್ಮ ಅಂಗಾಂಗಗಳನ್ನು ಅರ್ಪಿಸಿ ಇಲ್ಲವೇ ಶೈವತ್ವವನ್ನು ಒಪ್ಪಿ ಎಂದು ಶೈವತ್ವವನ್ನು ಬಲವಂತವಾಗಿ ಹೇರುತ್ತಿದ್ದರು. ಏಳನೇ ಶತಮಾನದಲ್ಲಿ ಬಂದಿದ್ದ ಚೀನಿ ಯಾತ್ರಿಕ ಹುಯೆನ್ ತ್ಸಾಂಗ್ ಸಹ ಇಂತಹ ಕಾಳಾಮುಖನೊಬ್ಬ ತನಗೆ ಸವಾಲು ಹಾಕಿ ಸೋತಿದ್ದನೆಂದು ದಾಖಲಿಸಿದ್ದಾನೆ.  ಈಗಲೂ ಈ ಸವಾಲುವಾದದ ಕೈ ಕತ್ತರಿಸಿಕೊಳ್ಳುತ್ತಿರುವ, ತಲೆ ಕತ್ತರಿಸಿಕೊಳ್ಳುತ್ತಿರುವ ಮೂರ್ತಸ್ವರೂಪಗಳನ್ನು ಶ್ರೀಶೈಲದ ದೇವಸ್ಥಾನವಲ್ಲದೆ ಅನೇಕ ಶೈವ ಪರಂಪರೆಯ ಗುಡಿಗಳ ಸುತ್ತಲೂ ನೋಡಬಹುದು. ಹಾವೇರಿ ಜಿಲ್ಲೆಯ ಅಬಲೂರಿನ ಬ್ರಹ್ಮೇಶ್ವರ ದೇವಸ್ಥಾನದಲ್ಲಿ ಕೆತ್ತಿರುವ ಏಕಾಂತರಾಮನು ಜೈನರಿಗೆ ಸವಾಲೊಡ್ಡಿ ತನ್ನ ಶಿರಚ್ಛೇದ ಮಾಡಿಕೊಂಡು ಸವಾಲು ಗೆದ್ದ ಕತೆಯ ಶಿಲ್ಪ ಮತ್ತು ಶಾಸನ ಕಾಳಾಮುಖ-ವೀರಶೈವ-ಲಿಂಗಾಯತದ ಪ್ರಮುಖ ಕೊಂಡಿಯಾಗಿದೆ. ಅಬಲೂರಿನ ಬ್ರಹ್ಮೇಶ್ವರ ದೇವಸ್ಥಾನವು ಕಾಳಾಮುಖ ಆಚಾರ್ಯನ ಮೂರನೇ ಕೊನೆಯ ಸಂತತಿಯ ಅಧಿಕಾರದಲ್ಲಿತ್ತು ಎಂದು ಅಲ್ಲಿನ ಶಾಸನವೇ ತಿಳಿಸುತ್ತದೆ. ಅಬಲೂರು ಶಾಸನ ಮತ್ತು ಚೆನ್ನಬಸವ ಪುರಾಣದಲ್ಲಿ ಬಂದಿರುವ ಏಕಾಂತರಾಮಯ್ಯನೇ ಏಕೋರಾಮರಾಧ್ಯ ಎನ್ನಲಾಗಿದೆ! ಶರಣ ಚಳವಳಿಯ ವಚನಗಳಲ್ಲಿಯೂ ಈ ಸವಾಲುವಾದ ಅತ್ಯಂತ ಢಾಳಾಗಿ ಕಾಣಸಿಗುತ್ತದೆ. ಇತಿಹಾಸದ ಅನೇಕ ಶೈವ ಪರಂಪರೆಯ ಪ್ರಭುತ್ವಗಳು ಈ ಕಾಳಾಮುಖ ಶೈವರಿಂದ ಸಾಕಷ್ಟು ಸಹಾಯವನ್ನು ಪಡೆದಿದ್ದಾರೆ. ಚೋಳರು ಇವರ ಗೌರವಾರ್ಥವಾಗಿ ಒಂದು ನೌಕೆಗೆ ಕಾಳಾಮುಖ ಎಂದು ಹೆಸರಿಸಿದ್ದರು ಎನ್ನಲಾಗುತ್ತದೆ. ಇತ್ತೀಚಿನ ಮಣಿರತ್ನಂ ಚಿತ್ರವಾಹಿನಿ "ಪೊನ್ನಿಯಿನ್ ಸೆಲ್ವನ್೧/೨" ಬರುವ ಕಾಳಾಮುಖ ಪಾತ್ರಗಳನ್ನು ಈ ಹಿನ್ನೆಲೆಯಲ್ಲಿ ಗಮನಿಸಬಹುದು. ಇದು ಅಂದು ಪ್ರತಿಯೊಂದು ಮತಪಂಥಗಳು ತಮ್ಮ ತಮ್ಮ ಪಂಥವನ್ನು ಉಳಿಸಿಕೊಳ್ಳಲು ಮಾಡಲೇಬೇಕಿದ್ದ ಧರ್ಮಯುದ್ಧವಾಗಿತ್ತು. ಇದು ಕೇವಲ ವೀರಶೈವ ಪಂಥವಲ್ಲದೆ ಹಿಂದೂ, ಜೈನ, ಬೌದ್ಧ, ವೈಷ್ಣವ ಮತ್ತೆಲ್ಲಾ ಪಂಥಗಳೂ ಹೀಗೆ ಪಂಥ ಶ್ರೇಷ್ಠತೆಯ ಯುದ್ಧದಲ್ಲಿ ಅಸ್ತಿತ್ವಕ್ಕಾಗಿ, ಅಸ್ಮಿತೆಗಾಗಿ ಹೋರಾಡತೊಡಗಿದ್ದವು ಎಂಬುದು ಭಾರತದ ಇತಿಹಾಸದಾದ್ಯಂತ ಮೇಲ್ನೋಟಕ್ಕೇ ಕಾಣುವ ಐತಿಹಾಸಿಕ ಸತ್ಯ.


- ರವಿ ಹಂಜ್

No comments: