ನಾಡಿನ ಒಂದು ಬುದ್ಧಿಜೀವಿ ವಲಯವು ವ್ಯವಸ್ಥಿತವಾಗಿ ವಚನ ಚಳುವಳಿಯನ್ನು ಹೇಗೆ ಸಂಶೋಧನಾ ನೆಲೆಯಲ್ಲಿ ಮಾರ್ಪಡಿಸಿ ತಮ್ಮ ಸಮಾಜವಾದಿ ಸಿದ್ಧಾಂತಕ್ಕೆ ತಕ್ಕಂತೆ ಬಿತ್ತಿ ಬೆಳೆಸಿ ಸಮಗ್ರ ವೀರಶೈವವನ್ನು ವಿಭಜಿಸಿ ಲಿಂಗಾಯತ ಪ್ರತ್ಯೇಕ ಧರ್ಮ ಎನ್ನುವ ಘಟ್ಟಕ್ಕೆ ತಂದರು ಎಂದು ಹಿಂದಿನ ಲೇಖನಗಳಲ್ಲಿ ಮಾನ್ಯ ಕಲಬುರ್ಗಿಯವರ ಲೋಕಮಾನ್ಯ ಸಂಶೋಧನೆಗಳ ತಪ್ಪುಗಳ ಮೂಲಕ ತೋರಿಸಿದ್ದೆನಷ್ಟೇ! ಈಗ ಸಾಮಾಜಿಕ ಸೃಜನಾತ್ಮಕ ಲೇಖನಗಳ ಮೂಲಕ ಕಮ್ಯುನಿಸ್ಟ್ ಪ್ರಣೀತರು ವಚನ ಚಳುವಳಿಯನ್ನು ಹೇಗೆ ತಮ್ಮ ಸಿದ್ಧಾಂತಕ್ಕೆ ನೇರವಾಗಿ ಹೊಸೆದು ಬೆಸೆಯುತ್ತಾರೆ ಎಂಬ ಒಂದು ನೇರ ಉದಾಹರಣೆಯನ್ನು ನೋಡೋಣ.
ಜೂನ್ ೭, ೨೦೧೫ ರಂದು ಪ್ರಜಾವಾಣಿಯ "ಅಮೃತವಾಕ್ಕು" ಅಂಕಣದಲ್ಲಿ ಎಸ್. ಜಿ. ಸಿದ್ದರಾಮಯ್ಯ ಅವರ "ಪುಣ್ಯ ಸ್ತ್ರೀಯರು" ಎಂಬ ಲೇಖನವಿದೆ. ಈ ಲೇಖನದಲ್ಲಿ ಎಸ್. ಜಿ. ಸಿದ್ದರಾಮಯ್ಯನವರು, ".....ಕ್ಯೂಬಾಕ್ಕೆ ಸ್ವಾತಂತ್ರ ಬರುವ ಮುನ್ನ ಅದು ಅಮೆರಿಕದ ವಸಾಹತು ಆಗಿತ್ತು. ಅಮೆರಿಕ ಅದನ್ನು ಜೂಜಿನ ಅಡ್ಡೆಯಾಗಿ, ವೇಶ್ಯಾವಾಟಿಕೆಯ ಮಾರುಕಟ್ಟೆಯಾಗಿ, ಕ್ಯಾಸಿನೋವಾಗಿ ಬೆಳೆಸಿತ್ತು. ಅಮೆರಿಕದ ಈ ದಬ್ಬಾಳಿಕೆಯ ವಿರುದ್ಧ ಹೋರಾಡಿದ ಕ್ಯಾಸ್ಟ್ರೋಗೆ ತನ್ನ ನಾಡು ಸ್ವಾತಂತ್ರ್ಯ ಪಡೆದ ಮೇಲೆ ಪರಿಹರಿಸಬೇಕಾದ ಭೀಕರ ಸಮಸ್ಯೆಗಳು ಎದುರಿಗಿದ್ದವು. ಅದರಲ್ಲಿ ಬಹಳ ಪ್ರಮುಖವಾದುದು ವೇಶ್ಯಾವೃತ್ತಿಯಿಂದ ಬದುಕು ಕಳೆದುಕೊಂಡಿದ್ದ ಅಪಾರ ಸಂಖ್ಯೆಯ ಹೆಣ್ಣುಮಕ್ಕಳ ಸಮಸ್ಯೆ. ಕ್ಯಾಸ್ಟ್ರೋ ಅಧಿಕಾರ ವಹಿಸಿಕೊಂಡ ತಕ್ಷಣ ತನ್ನ ಜೊತೆ ಹೋರಾಟದಲ್ಲಿ ತೊಡಗಿದ್ದ ಯುವಕರಿಗೆ ಕೊಟ್ಟ ಕರೆಯೆಂದರೆ ತನ್ನ ನಾಡಿನ ಈ ಬಗೆಯ ಹೆಣ್ಣುಮಕ್ಕಳನ್ನು ಮದುವೆಯಾಗಿ ನಾಡಿನಲ್ಲಿ ಕೌಟುಂಬಿಕ ಜೀವನ ಸುಖಸಂತೋಷದಲ್ಲಿ ಬೆಳೆಯುವಂತಾಗಬೇಕು, ಅದಕ್ಕೆ ಸಹಕರಿಸಿ ಎಂದು ಕರೆ ನೀಡಿದ. ಕ್ಯಾಸ್ಟ್ರೋನ ಮಾತುಗಳಿಗೆ ಬೆಲೆಕೊಟ್ಟ ಹೋರಾಟಗಾರ ಯುವಕರು ವೇಶ್ಯಾವಾಟಿಕೆಯ ಹೆಣ್ಣುಮಕ್ಕಳಿಗೆ ಬಾಳುಕೊಟ್ಟರು. ಅಲ್ಲಿಂದ ಮೊದಲಾದಂತೆ ಕ್ಯೂಬಾದಲ್ಲಿ ಆದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಬದಲಾವಣೆಗಳ ಬೆಳವಣಿಗೆ ಜಗತ್ತಿನ ಅಚ್ಚರಿಗೆ ಕಾರಣವಾದ ಬಹುದೊಡ್ಡ ಕ್ರಿಯೆ. ಈಗ ಕ್ಯೂಬಾ ಸ್ವಾಭಿಮಾನದಿಂದ ತಲೆ ಎತ್ತಿ ಬೆಳೆದು ಅಮೆರಿಕೆಗೆ ಸವಾಲು ಹಾಕುತ್ತಿರುವ ಒಂದು ಧೀಮಂತ ರಾಷ್ಟ್ರ. ಈ ಚಾರಿತ್ರಿಕ ಘಟನೆ ಓದಿದಾಗ ನನಗೆ ಥಟ್ಟನೆ ಪಣ್ಯಸ್ತ್ರೀಯರಿಗೆ ಕೊಂಬು ಬಂದು ಪುಣ್ಯಸ್ತ್ರೀಯರಾಗಿರುವ ೧೨ನೇ ಶತಮಾನದ ಚಾರಿತ್ರಿಕ ಸಂಗತಿ ಮಿಂಚಿನಂತೆ ಭಾಸವಾಗಿ ಚಿಂತನೆಗೆ ಹಚ್ಚಿತು. ಹನ್ನೆರಡನೆ ಶತಮಾನದ ಚಳವಳಿ ಜಗತ್ತಿನ ಯಾವುದೇ ಮೂಲೆಯಲ್ಲೂ ನಡೆದಿರುವ ಪರಿಯ ಒಂದು ಸಾಮಾಜಿಕ ಕ್ರಾಂತಿ. ಈ ಕ್ರಾಂತಿಯಲ್ಲಿ ಎಲ್ಲ ಕಾಯಕ ಮೂಲದವರು ಭಾಗವಹಿಸಿದ್ದರು. ವೇಶ್ಯಾವೃತ್ತಿಯ ಹೆಣ್ಣುಮಕ್ಕಳೂ ಭಾಗವಹಿಸಿದ್ದರು. ಅದಕ್ಕೆ ಅಕ್ಕಮ್ಮ, ಸೂಳೆ ಸಂಕವ್ವ ಮೊದಲಾದವರು ಉದಾಹರಣೆಗೆ ಸಿಗುತ್ತಾರೆ. ಇಂಥ ಮೂಲದ ಹೆಣ್ಣುಮಕ್ಕಳಿಗೆ ಸಂಸಾರದ ಹೊಸಜೀವನ ಕೊಟ್ಟ ಸಾಮಾಜಿಕ ಕ್ರಾಂತಿ ಅಲ್ಲಿ ಜರುಗಿದೆ. ಪಣ್ಯದ ಮಹಿಳೆಯನ್ನು ತಮ್ಮ ಬಾಳಿನ ಪುಣ್ಯದ ಮಡದಿಯನ್ನಾಗಿ ಮಾಡಿಕೊಂಡ ಮಹಾಂತರು ಆ ಶರಣಮಹನೀಯರು......" ಎನ್ನುತ್ತಾರೆ.
ಬಸವಣ್ಣನ ಕಾಲದ ಮೂವರನ್ನು ಹೊರತು ಪಡಿಸಿ ಶರಣರೆಲ್ಲರೂ ಸಂಸಾರಿಗಳು. ಈ ಮೂವರಲ್ಲಿ ಅಲ್ಪಕಾಲ ವಿವಾಹಿತರೆನಿಸಿದ್ದ ಅಲ್ಲಮ, ಮಹಾದೇವಿಯರು ನಂತರ ಬ್ರಹ್ಮಚರ್ಯವನ್ನು ಅಪ್ಪಿಕೊಂಡರು. ಚೆನ್ನಬಸವಣ್ಣ ಮೊದಲಿನಿಂದಲೂ ಬ್ರಹ್ಮಚಾರಿಯೇ ಆಗಿದ್ದ. ಇವರ ಬ್ರಹ್ಮಚರ್ಯಕ್ಕೆ ಕಾರಣ ಈ ಮೂವರೂ ಕಾಳಾಮುಖ ಪರಂಪರೆಯ ವೀರಶೈವದ ಪರಮಸಾಧಕರಾಗಿದ್ದುದು. ಉಳಿದೆಲ್ಲಾ ಶರಣರು ವಿವಾಹಿತರಾಗಿದ್ದು ಅವರಲ್ಲಿ ಕೆಲವರು ಪುಣ್ಯಸ್ತ್ರೀಯರನ್ನೂ ಹೊಂದಿದ್ದರು. ಇಲ್ಲಿ ಪಣ್ಯಸ್ತ್ರೀ ಎಂಬುದು ಪುಣ್ಯಸ್ತ್ರೀ ಎಂದಾಗಿದೆ. ಪಣ್ಯ ಎಂದರೆ ಹಣಕ್ಕೆ ಕೊಳ್ಳಲ್ಪಟ್ಟ ವಸ್ತು. ಅಂದಿನ ಸಾಮಾಜಿಕ ಸನ್ನಿವೇಶದಲ್ಲಿ ವೇಶ್ಯಾವೃತ್ತಿ ಕೀಳು ಎಂಬ ಇಂದಿನ ಅಭಿಪ್ರಾಯದಂತೆ ಅಭಿಪ್ರಾಯವೇನೂ ಇರಲಿಲ್ಲವೆಂದು ಭಾರತೀಯ ಇತಿಹಾಸವನ್ನು ಸಮಗ್ರವಾಗಿ ಅವಲೋಕಿಸಿದಾಗ ಕಂಡುಬರುತ್ತದೆ. ಕ್ರಿ.ಪೂ. ಐದನೇ ಶತಮಾನದ ನಗರವಧು (ದೇವದಾಸಿ ಪರಂಪರೆ) ಅಮ್ರಪಾಲಿ ಭಾರತದ ಸರ್ವಶ್ರೇಷ್ಠ ಅಗ್ರಗಣ್ಯ ನರ್ತಕಿಯಷ್ಟೇ ಅಲ್ಲದೆ ಬೌದ್ಧಧರ್ಮದ ಆಧ್ಯಾತ್ಮಿಕ ಉನ್ನತಿಯನ್ನು ಸಾಧಿಸಿ ನಿರ್ವಾಣವನ್ನು ಹೊಂದಿದ ಮಹಿಳೆಯಾಗಿ ಚಿರಸ್ಥಾಯಿಯಾಗಿದ್ದಾಳೆ. ಬಿಂಬಿಸಾರ ಮತ್ತು ಅಮ್ರಪಾಲಿಯ ಪ್ರೇಮಕಥೆಯೂ ಅಷ್ಟೇ ಚಿರಸ್ಥಾಯಿಯಾಗಿದೆ. ಈಕೆಯ ಕುರಿತು ಶತಶತಮಾನಗಳಿಂದ ಸಾಕಷ್ಟು ಸಾಹಿತ್ಯ ಸೃಷ್ಟಿಯಾಗಿರುವುದಲ್ಲದೆ ಈಗಲೂ ಸೃಷ್ಟಿಯಾಗುತ್ತಿದೆ. ಅಮ್ರಪಾಲಿ ಸಿನೆಮಾವನ್ನು ಸಹ ಇಲ್ಲಿ ನೆನಪಿಸಿಕೊಳ್ಳಬಹುದು. ಅದೇ ರೀತಿ ಖ್ಯಾತ ಸಂಸ್ಕೃತ ಕಾವ್ಯ 'ಮೃಚ್ಛಕಟಿಕಾ'ದ ನಾಯಕಿ ಕ್ರಿ. ಪೂ. ಎರಡನೇ ಶತಮಾನದಲ್ಲಿದ್ದ ವಸಂತಸೇನಾ, ಮತ್ತು ಕ್ರಿ.ಶ. ಐದನೇ ಶತಮಾನದ ಇಳಂಗೋ ಅಡಿಗಳ್ ರಚಿಸಿರುವ ತಮಿಳಿನ ಖ್ಯಾತ ಕಾವ್ಯ ಸಿಲಪ್ಪಧಿಕಾರಮ್ ನ ಮಾಧವಿ ಸಹ ಅಮ್ರಪಾಲಿಯಷ್ಟೇ ಖ್ಯಾತ ನಗರವಧುಗಳು.
ದಕ್ಷಿಣ ಭಾರತದ ತಮಿಳುನಾಡಿನ ಕಾಂಚೀಪುರಂ, ಈರೋಡುಗಳಲ್ಲದೆ ಆಂಧ್ರ, ತೆಲಂಗಾಣ, ಕರ್ನಾಟಕದ ರೇಷ್ಮೆ ನೇಯ್ಗೆಯು ಪ್ರವರ್ಧಮಾನಕ್ಕೆ ಬಂದದ್ದೇ ಅಲ್ಲಿನ ದೇವದಾಸಿಯರ ಅಂಗವಸ್ತ್ರ, ಸೀರೆಗಳನ್ನು ನೇಯುವುದರೊಂದಿಗೆ! ಅದೇ ರೀತಿ ಮಧ್ಯಪ್ರದೇಶದ ಚಂದೇರಿ ನೇಕಾರರು ಸಹ ಇದೇ ರೀತಿ ಪ್ರವರ್ಧಮಾನಕ್ಕೆ ಬಂದವೆಂದು ಸಂಶೋಧನೆಗಳು ತಿಳಿಸುತ್ತವೆ. ಹೀಗೆ ವೇಶ್ಯೆಯರೆನ್ನುವ ಎಲ್ಲಾ ಜಾತಿಯ ಕಲಾವಿದೆಯರನ್ನೊಳಗೊಂಡ ಪರಂಪರೆಯು ಸಾಂಸ್ಕೃತಿಕವಾಗಿಯಷ್ಟೇ ಅಲ್ಲದೆ ಅಂದಿನ ಆರ್ಥಿಕತೆಗೂ ಪರೋಕ್ಷವಾಗಿ ನೆಲೆಯೊದಗಿಸಿದ್ದಿತು. ಈ ಪದ್ಧತಿಯಲ್ಲಿ ಎಲ್ಲಾ ಜನಾಂಗದ ಜಾತಿಯ ಮಹಿಳೆಯರಿದ್ದು ಇದೊಂದು ಜಾತ್ಯಾತೀತ ವ್ಯವಸ್ಥೆಯಾಗಿತ್ತು ಎಂಬುದು ಮತ್ತೊಂದು ಗಮನಾರ್ಹ ಸಂಗತಿ.
ರಾಜನಾದವನ ಪಟ್ಟದರಾಣಿಯಾಗಲು ಕ್ಷತ್ರಿಯಳೇ ಆಗಿರಬೇಕೆಂಬ ನಿಯಮವಿದ್ದರೂ ಅದನ್ನು ಮೀರಿ ಹೊಯ್ಸಳರ ವಿಷ್ಣುವರ್ಧನನ ರಾಣಿಯಾದ ನಾಟ್ಯರಾಣಿ ಶಾಂತಲೆ, ಕರ್ನಾಟಕ ಸಾಮ್ರಾಜ್ಯದ ವಿಜಯನಗರದ ಕೃಷ್ಣದೇವರಾಯನ ಪತ್ನಿ ನೃತ್ಯಗಾತಿ ಚೆನ್ನಾದೇವಿಯರ ಉದಾಹರಣೆಗಳೂ ಇವೆಯೆಂದರೆ ನೃತ್ಯಗಾತಿಯರ ಗೌರವಾದರಗಳು ಹೇಗಿದ್ದವು ಎಂದು ಊಹಿಸಿಕೊಳ್ಳಬಹುದು.
ಕ್ರಿ.ಶ. ಆರನೇ ಶತಮಾನದಿಂದ ಕ್ರಿ. ಶ. ಹದಿಮೂರನೇ ಶತಮಾನದವರೆಗೂ ದೇವದಾಸಿಯರು ಸಮಾಜದಲ್ಲಿ ಅತ್ಯಂತ ಉನ್ನತ ಸ್ಥಾನಮಾನಗಳನ್ನು ಹೊಂದಿ ಘನತೆ ಗೌರವಗಳಿಗೆ ಪಾತ್ರರಾಗಿದ್ದರು. ನೃತ್ಯ, ಸಂಗೀತ, ಅಭಿನಯ ಮುಂತಾದ ಲಲಿತಕಲೆಗಳ ರಕ್ಷಕರೆನಿಸಿ ರಾಜಾಶ್ರಯ ಹೊಂದಿ ದಾನದತ್ತಿಗಳನ್ನು ಪಡೆಯುವುದರೊಂದಿಗೆ ಸಾಕಷ್ಟು ಸಮಾಜಮುಖಿ ಕಾರ್ಯಗಳನ್ನು ಸಹ ಕೈಗೊಂಡಿದ್ದರು. ಈ ಸಮಾಜಮುಖಿ ಕಾರ್ಯಗಳಲ್ಲಿ ನೀರಿಗೆ ಸಂಬಂಧಿಸಿದ ಕಾರ್ಯಗಳು ಇಂದಿಗೂ ಅಲ್ಲಲ್ಲಿ ಸಾಕಷ್ಟು ಕಾಣುತ್ತವೆ. ದಾವಣಗೆರೆ ಸಮೀಪದ "ಸೂಳೆಕೆರೆ"ಯಿರಬಹುದು, ಕರ್ನಾಟಕದಾದ್ಯಂತ ಅಲ್ಲಲ್ಲಿ ಕೇಳಿಬರುವ "ಸೂಳೆಬಾವಿ"ಗಳು, "ಸೂಳೆಕಟ್ಟೆ"ಗಳು, "ಸೂಳೆಹೊಂಡ"ಗಳು... ಹೀಗೆ ಅನೇಕ ದೇವದಾಸಿಯರ ಸಮಾಜಮುಖಿ ಕಾರ್ಯಗಳ ನಿದರ್ಶನಗಳಿವೆ. ಇದೇ ರೀತಿಯ ಐತಿಹ್ಯಗಳು ಇಡೀ ಭಾರತದಾದ್ಯಂತ ಇವೆ.
ಕ್ರಿ. ಶ. ೧೫೨೦-೨೧ ರಲ್ಲಿ ವಿಜಯನಗರಕ್ಕೆ ಭೇಟಿ ಕೊಟ್ಟಿದ್ದ ಪೋರ್ಚುಗಲ್ ಯಾತ್ರಿಕ ಡೊಮಿಂಗೋ ಪಾಯಿಸ್, "...ಇಲ್ಲಿ ದೇವಸ್ಥಾನಗಳಿಗೆ ಸೇರಿದ ಹೆಂಗಸರಿರುತ್ತಾರೆ. ಚೆಲ್ಲು ಸ್ವಭಾವದ, ಸ್ವಚ್ಛಂದವಾಗಿರುವ ಇವರು ನಗರದ ಪ್ರಮುಖ ಮತ್ತು ಅತ್ಯುತ್ತಮವಾದ ಸಾಲಿನಲ್ಲಿರುವ ಮನೆಗಳಲ್ಲಿ ನೆಲೆಸಿರುತ್ತಾರೆ. ಈ ಮಹಿಳೆಯರು ಅತ್ಯಂತ ಗೌರವಾನ್ವಿತರಾಗಿದ್ದು ಅವರಲ್ಲಿ ಹಲವರು ಸೈನ್ಯದ ಸರದಾರರ ಉಪಪತ್ನಿಯರಾಗಿರುವರು. ಇವರಲ್ಲಿಗೆ ಯಾವುದೇ ಕುಲೀನ ಮನೆತನದ ವ್ಯಕ್ತಿ ಯಾವುದೇ ಪಾಪಪ್ರಜ್ಞೆ ಇಲ್ಲದೇ, ಅಪಹಾಸ್ಯಕ್ಕೀಡಾಗದೆ ಹೋಗಿಬರಬಹುದು. ಈ ಹೆಂಗಸರು ಕೂಡಾ ರಾಜನ ಆಸ್ಥಾನಕ್ಕೆ ರಾಣಿಯರ ಉಪಸ್ಥಿತಿಯಲ್ಲಿಯೂ ಕೂಡ ಯಾವಾಗ ಬೇಕಾದರೂ ಹೋಗಿಬರುತ್ತಾರೆ. ಇವರನ್ನು ಯಾರೂ ತಡೆಯುವುದಿಲ್ಲ. ರಾಜನೊಂದಿಗೆ ಕುಳಿತು ತಾಂಬೂಲವನ್ನು ಹಾಕಿಕೊಂಡು ಬರುತ್ತಾರೆ. ಯಾವುದೇ ಶ್ರೇಣಿಯ ಇತರೆ ವ್ಯಕ್ತಿ ಈ ರೀತಿ ರಾಜನೊಂದಿಗೆ ಕುಳಿತು ತಾಂಬೂಲವನ್ನು ಹಾಕಿಕೊಳ್ಳುವಷ್ಟು ಅಧಿಕಾರ ಯಾ ಧೈರ್ಯವನ್ನಾಗಲೀ ಹೊಂದಿರುವುದಿಲ್ಲ" ಎಂದು ದಾಖಲಿಸಿದ್ದಾನೆ.
ಇದೇ ಯಾದಿಯಲ್ಲಿ ಹಣ ಕೊಟ್ಟು ಪಡೆದುಕೊಂಡ ಮಹಿಳೆಯರನ್ನು ಪಣ್ಯಸ್ತ್ರೀ ಎನ್ನುತ್ತಿದ್ದರು. ಪಣ್ಯ ಎನ್ನುವುದು ಅಪಭ್ರಂಶಗೊಂಡೋ ಅಥವಾ ಗೌರವದ ಹೊದಿಕೆಯನ್ನು ಹೊದಿಸಿಯೋ ಪುಣ್ಯ ಎಂದಾಗಿದೆ. ಇಂದು ಕೆಲವು ಗುಡಿಗಳಲ್ಲಿರುವ ಲಜ್ಜಾಗೌರಿ ವಿಗ್ರಹಗಳಿಗೆ ಸೀರೆ ತೊಡಿಸಿದ್ದಾರಲ್ಲ, ಹಾಗೆ! ಇದಿಷ್ಟು ಅಂದಿನ ಭಾರತೀಯ ವೇಶ್ಯೆಯರ ಗೌರವಯುತ ಬದುಕಿನ ಇತಿಹಾಸ. ಇಂತಹ ಉದಾರ ಸಂಸ್ಕೃತಿಯ ಐತಿಹಾಸಿಕ ಭಾರತದಲ್ಲಿ ವೇಶ್ಯೆಯರಿಗೆ ಯಾವ ಶರಣನೂ "ಬಾಳು ಕೊಡುವ" ಭಿಕ್ಷೆಯ ಹಂಗಿರಲಿಲ್ಲ. ಇದೇ ರೀತಿ ಕ್ಯೂಬಾ ಅಲ್ಲದೆ ಪಾಶ್ಚಿಮಾತ್ಯ ರಾಷ್ಟ್ರಗಳ ಸಂಸ್ಕೃತಿಯಲ್ಲಿಯೂ ವೇಶ್ಯೆಯರನ್ನು ಮದುವೆಯಾಗುವುದು ಸಾಮಾನ್ಯ ಸಂಗತಿಯೇ ಹೊರತು ಭಾರತೀಯ ಚಿಂತಕರು ಚಿಂತಿಸುವಂತೆ, "ಬಾಳು ಕೊಡುವುದು" ಎಂಬ ಪಟ್ಟು ಪೀತಾಂಬರದಲ್ಲಿ ಸುತ್ತಿಟ್ಟ ಚಿಂತನೆಯ ಜೀವನಭಿಕ್ಷೆ ಆಗಿರಲಿಲ್ಲ.
ಇನ್ನು ಫಿಡೆಲ್ ಕ್ಯಾಸ್ಟ್ರೋ ಕಟ್ಟಿದ ಧೀಮಂತ ರಾಷ್ಟ್ರದ ಆಡಳಿತದಲ್ಲಿ ಆದ ಅಕ್ರಮ, ಅನ್ಯಾಯ, ಜನಾಂಗೀಯ ಕಣ್ಮರೆ, ಮಾನವ ಹಕ್ಕುಗಳ ಹತ್ತಿಕ್ಕುವಿಕೆ, ಸಾಮಾನ್ಯ ಕ್ಯೂಬನ್ನರು ಸಮುದ್ರಕ್ಕೆ ಹಾರಿ ಅಮೆರಿಕೆಯ ಫ್ಲೋರಿಡಾ ತೀರವನ್ನು ಸೇರಲು ನಿತ್ಯವೂ ಪ್ರಯತ್ನಿಸಿ ಸಾಯುತ್ತಿರುವುದು...ಮುಂತಾದ ಎಲ್ಲಾ ಧೀಮಂತ ವಿಚಾರಗಳನ್ನು ಬದಿಗಿಟ್ಟು ಕೇವಲ ಪುಣ್ಯಸ್ತ್ರೀಯರಿಗೆ "ಬಾಳು ಕೊಡುವ" ಉದಾರತೆಯ ಕುರಿತು ನೋಡೋಣ. ೧೯೫೩ ರ ಕ್ಯಾಸ್ಟ್ರೋನ ವಿಖ್ಯಾತ ಭಾಷಣ, "ಇತಿಹಾಸ ನನ್ನನ್ನು ನಿರಪರಾಧಿ ಎಂದು ದಾಖಲಿಸಲಿದೆ" ಯಿಂದ ಹಿಡಿದು ಆತ ಸಾಯುವತನಕ ಮಾಡಿದ ಯಾವ ಭಾಷಣಗಳಲ್ಲಿಯೂ ವೇಶ್ಯೆಯರಿಗೆ "ಬಾಳು ಕೊಡಿ" ಎಂದು ತನ್ನ ಬೆಂಬಲಿಗರಿಗೆ ಕರೆ ನೀಡಿದ ಸಾರ್ವಜನಿಕ ದಾಖಲೆಗಳಿಲ್ಲ. ಏಕೆಂದರೆ ವೇಶ್ಯಾವಾಟಿಕೆ ಎನ್ನುವುದು ಅನೈತಿಕ ಎಂಬ ಪಾಪಪ್ರಜ್ಞೆ ಇರದ ಕ್ಯೂಬನ್ನರಿಗೆ ಇಂತಹ ಕರೆಯ ಅಗತ್ಯವೇ ಇರಲಿಲ್ಲ. ಫಿಡೆಲ್ ಕ್ಯಾಸ್ಟ್ರೋ ಅಧಿಕಾರ ವಹಿಸಿಕೊಂಡ ಆರಂಭಶೂರತ್ವದಲ್ಲಿ ಜೂಜು, ವೇಶ್ಯಾವಾಟಿಕೆಗಳನ್ನು ರಾಜಕೀಯ ಕಾರಣಗಳಿಗಾಗಿ ನಿಲ್ಲಿಸಿದರೂ ಮುಂದೆ ಕಮ್ಯೂನಿಸ್ಟ್ ಆಡಳಿತದ ಆರ್ಥಿಕ ಹೊಡೆತದ ತತ್ತರದಲ್ಲಿ ಇವೆಲ್ಲವೂ ಅಬ್ಬರದಿಂದ ಮರುಸ್ಥಾಪಿತವಾಗಿದ್ದವು ಎನ್ನುವುದು ಜಾಗತಿಕ ಸತ್ಯ! ಕ್ಯಾಸ್ಟ್ರೋನ ಕ್ಯೂಬಾದಲ್ಲಿ ವೇಶ್ಯಾವಾಟಿಕೆ ಈಗಲೂ ಕಾನೂನುಬಾಹಿರವಲ್ಲ. ತಲೆಹಿಡುಕತನ, ಪೋರ್ನೋಗ್ರಫಿ, ವೇಶ್ಯಾವಾಟಿಕೆಗೆ ಅಪ್ರಾಪ್ತರ ಬಳಕೆಗೆ ಕಾನೂನಿನ ನಿಯಂತ್ರಣ ಇದೆಯೇ ಹೊರತು ವೇಶ್ಯೆಯರು ನೇರವಾಗಿ ದಂಧೆ ಮಾಡಲು ಯಾವ ನಿಯಂತ್ರಣವೂ ಇರಲಿಲ್ಲ, ಇಲ್ಲ! ನಂಬಿಕೆ ಇರದವರು ಅಲ್ಲಿಗೆ ಪ್ರವಾಸ ಹೋಗಿ ಕಂಡುಕೊಳ್ಳಬಹುದು.
ಮೇ ೧, ೨೦೦೧ ರ ರಾಯಿಟರ್ಸ್ ವರದಿಯ ಪ್ರಕಾರ ಬ್ರೆಜಿಲ್ ದೇಶದ ಸಂದರ್ಶನವೊಂದರಲ್ಲಿ ಕೇಳಿದ, "ಕ್ಯೂಬಾದ ಕೆಲವು ಕಾಲೇಜು ತರುಣಿಯರು ಬೆಲೆವೆಣ್ಣುಗಳಾಗಿ ಕೆಲಸ ಮಾಡುತ್ತಾರಂತೆ, ಹೌದೆ?" ಎಂಬ ಪ್ರಶ್ನೆಗೆ ಕ್ಯೂಬಾ ಅಧ್ಯಕ್ಷ ಫಿಡೆಲ್ ಕ್ಯಾಸ್ಟ್ರೋ ಹೆಮ್ಮೆಯಿಂದ, "ನಮ್ಮ ದೇಶದ ಬೆಲೆವೆಣ್ಣುಗಳೂ ಅತ್ಯಂತ ಸುಶಿಕ್ಷಿತರಾಗಿರುತ್ತಾರೆ ಎಂಬುದಕ್ಕೆ ನಿಮ್ಮ ಪ್ರಶ್ನೆಯೇ ನಮ್ಮ ಶಿಕ್ಷಣ ವ್ಯವಸ್ಥೆಯ ಪ್ರಗತಿಯ ಮಾಪಕ" ಎಂದು ಉತ್ತರಿಸಿದ್ದಾನೆ! ಮುಂದೆ ೨೦೦೪ರಲ್ಲಿ ಜಾರ್ಜ್ ಬುಷ್, "ಕ್ಯಾಸ್ಟ್ರೋ ಹೆಮ್ಮೆಯಿಂದ ಜಗತ್ತಿನಲ್ಲಿ ಅತ್ಯಂತ ಶುದ್ಧ ಸುಶಿಕ್ಷಿತ ವೇಶ್ಯೆಯರು ಇರುವುದು ನನ್ನ ಕ್ಯೂಬಾದಲ್ಲಿ ಎಂದ ನೀತಿಗೆಟ್ಟವನು" ಎಂದದ್ದು. "ನಾನು ಹಾಗೆ ಹೇಳಿಯೇ ಇಲ್ಲ" ಎಂದು ಕ್ಯಾಸ್ಟ್ರೋ ಅಲ್ಲಗಳೆದದ್ದು ಎಲ್ಲವೂ ಬಹುದೊಡ್ಡ ಸುದ್ದಿಯಾಗಿತ್ತು.
ಜನಸಾಮಾನ್ಯರ ಸ್ವಾತಂತ್ರ್ಯವಲ್ಲದೆ ಎಲ್ಲಾ ಮೂಲಭೂತ ಹಕ್ಕುಗಳನ್ನು ನಿಗ್ರಹಿಸಿ ಸತತವಾಗಿ ಸರ್ವಾಧಿಕಾರ ನಡೆಸಿದ ವ್ಯಕ್ತಿ ಫಿಡೆಲ್ ಕ್ಯಾಸ್ಟ್ರೋ. ಆತನ ಆಡಳಿತದಲ್ಲಿ ಕೇವಲ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿದರೂ ಉದ್ಯೋಗಗಳಿಲ್ಲದೆ ಕ್ಯೂಬನ್ನರು ಪಡೆದ ಶಿಕ್ಷಣ ವ್ಯರ್ಥವಾಗಿ ಜನರು ಸದಾ ಸುವ್ಯಕ್ತ ಭಯದ ವಾತಾವರಣದಲ್ಲಿ ಜೀವಿಸುತ್ತಿರುವಂತಾಗಿತ್ತು. ಸರ್ಕಾರದ ನೀತಿಯ ಬಗ್ಗೆ ಯಾರಾದರೂ ಪಿಸುಮಾತಿನಲ್ಲಿ ಮಾತನಾಡಿದರೂ ಕಣ್ಮರೆಯಾಗುತ್ತಿದ್ದರು. ಇಷ್ಟೆಲ್ಲಾ ಸರ್ವಾಧಿಕಾರ ಮೆರೆದ ಫಿಡೆಲ್ ಕಡೆಗೆ ಅಧಿಕಾರವನ್ನು ಹಸ್ತಾಂತರಿಸಿದ್ದು ತನ್ನ ತಮ್ಮ ರಾವುಲ್ ನಿಗೆ ಹೊರತು ಇನ್ನಾವ ಸಮಾಜವಾದಿ ಸಂಕುಲದ ಹೋರಾಟಗಾರನಿಗಲ್ಲ! ಈ ಸಮಸಮಾಜವಾದಿಯ ಒಟ್ಟಾರೆ ವೈಯಕ್ತಿಕ ಆಸ್ತಿಯ ಮೊತ್ತ ಎಂಟೂವರೆ ಸಾವಿರ ಕೋಟಿ ರೂಪಾಯಿಗಿಂತ ಅಧಿಕ. ಈತ "ಬಾಳು ಕೊಡುವುದ"ರಲ್ಲಿ ಅತ್ಯಂತ ಸಮಾಜವಾದಿಯಾಗಿ ಅಗಣಿತ ಪುಣ್ಯಸ್ತ್ರೀಯರಿಗೆ ಬಾಳುಕೊಟ್ಟು ಕ್ಯೂಬಾದ "ಕಾಮದ ಲಾಂಛನ" ಎಂಬ ಹೆಸರು ಗಳಿಸಿದ್ದ. ಈ ಎಲ್ಲಾ ವಿವರಗಳನ್ನು ಕ್ಯಾಸ್ಟ್ರೋನ ಅಂಗರಕ್ಷಕನಾಗಿದ್ದ ಯುವಾನ್ ರೆನಾಲ್ದೋ ಸಾಂಚೇಜ್ ಬರೆದಿರುವ "ದಿ ಡಬಲ್ ಲೈಫ್ ಆಫ್ ಫಿಡೆಲ್ ಕ್ಯಾಸ್ಟ್ರೋ" ಕೃತಿಯಲ್ಲಿ ಓದಬಹುದು. ಇಂತಪ್ಪ ದಮನಕಾರಿ ಕ್ಯಾಸ್ಟ್ರೋ ಅದ್ಯಾವ ಸ್ವರ್ಗಸದೃಶ "ಧೀಮಂತ ರಾಷ್ಟ್ರ" ಕಟ್ಟಿದ್ದನೋ ಜಗತ್ತಂತೂ ಕಂಡಿಲ್ಲ. ಇದಿಷ್ಟು ಇಡೀ ಪ್ರಪಂಚ ಬಲ್ಲ ಕ್ಯೂಬಾ, ಕ್ಯಾಸ್ಟ್ರೋ, ಪಣ್ಯಸ್ತ್ರೀ, ಬಾಳು, ಗೋಳು!
ಇದೇ ರೀತಿ ಉತ್ತರ ಕೊರಿಯಾ, ಚೈನಾ, ರಷ್ಯಾದ ಕಮ್ಯೂನಿಸ್ಟ್ ಆಡಳಿತದ ಸರ್ವಾಧಿಕಾರಿಗಳ ಇತಿಹಾಸವೂ ಇದೆ. ಒಂದೊಮ್ಮೆ ಸಂಯುಕ್ತ ಸಮಾಜವಾದಿ ಆಡಳಿತದಲ್ಲಿದ್ದ ಸೋವಿಯತ್ ರಾಷ್ಟ್ರಗಳ ಹೆಣ್ಣುಗಳು ಈಗ ಬೆಂಗಳೂರಿಗೂ ಬಂದು ಬೆಲೆವೆಣ್ಣುಗಳಾಗಿ ಚಟುವಟಿಕೆ ನಡೆಸುತ್ತಿರುವುದು ಆ ದೇಶಗಳ ಆರ್ಥಿಕತೆಯನ್ನು ಕಮ್ಯೂನಿಸ್ಟ್ ವ್ಯವಸ್ಥೆ ಎಷ್ಟರ ಮಟ್ಟಿಗೆ ಹದಗೆಡಿಸಿತ್ತು ಎಂಬುದಕ್ಕೆ ಜೀವಂತ ಸಾಕ್ಷಿಯಾಗಿದೆ. ವಾಸ್ತವ ಹೀಗಿರುವಾಗ ಭಾರತೀಯ ಸಮಾಜವಾದಿ ಚಿಂತಕರ, "ಬಾಳು ಕೊಡುವುದು...?!?" ಒಂದು ಸುಂದರ ಸೃಜನಶೀಲ ಪಣ್ಯವಿಲ್ಲದ ಸುಸ್ವಪ್ನಸ್ಖಲನ ಎನ್ನಬಹುದು.
ಭಾರತೀಯ ಶೈಕ್ಷಣಿಕ ವ್ಯವಸ್ಥೆಯಲ್ಲಿ ಒಂದು ಗುಂಪು ಪ್ರಬಲರಾಗಿ ಸಮಾಜವಾದಿ ಸಮ್ಮೋಹನಕೊಳಗಾಗಿ ಹೀಗೆ ಕಟ್ಟಿದ ಇಂತಹ ಸೃಜನಶೀಲ ಸುಸ್ವಪ್ನ ಸಂಕಥನಗಳು ಅನೇಕ. ಇಂತಹ ಸುಸ್ವಪ್ನಸ್ಖಲನಕ್ಕೆ ತೊಟ್ಟಿಲು ಕಟ್ಟಿ ಜೋಗುಳ ಹಾಡಿದ್ದು ಮಾತ್ರ ಕರ್ನಾಟಕದ ಧೀಮಂತ ಸಮಾಜವಾದಿ ನಾಯಕನಲ್ಲದೆ ಬುದ್ಧಿಜೀವಿಗಳು, ಚಿಂತಕರು, ವಿರಕ್ತರು, ಪ್ರಗತಿಪರ ಮಹಿಳೆಯರು ಮತ್ತು ಅಸಂಖ್ಯಾತ ಮುಗ್ಧ ಸಾಮಾನ್ಯರು! ಸಂಶೋಧನಾ ಪಿತಾಮಹರ ಸಹಾಯದೊಂದಿಗೆ ಈ ಚಿಂತಕರ ಪ್ರಥಮ ಸಾಲಿನ ಮಹನೀಯರು ಕಟ್ಟಿದ ವಚನ ಚಳವಳಿಯ ಸಮಾಜವಾದಿ ಸಂಕಥನದ ಪರಿಧಿಯೊಳಗೆ ನನ್ನಂತಹ ಒಬ್ಬ ಅತಿ ಸಾಮಾನ್ಯ ಅನಿವಾಸಿ ಬಿಕನಾಸಿ ಬೇವರ್ಸಿ ಕುತೂಹಲಿಯು ಹೊಕ್ಕು ಚಿಟಿಕೆ ಹೊಡೆದಷ್ಟು ಸುಲಭವಾಗಿ ಅವರ ಸಂಕಥನಗಳನ್ನು ಛಿದ್ರಗೊಳಿಸುತ್ತಾನೆ ಎಂದರೆ ಇವರ ಗುಂಪಿನ ಎರಡನೇ, ಮೂರನೇ...ಹತ್ತನೇ ಸಾಲಿನವರ ಉಳಿದ ಸಂಕಥನಗಳು ಎಷ್ಟು ಗಟ್ಟಿ ಇದ್ದಾವು?
ಹೀಗೆ ಒಂದು ಬಹುಮಹತ್ವದ ಪಂಥವನ್ನು ವ್ಯವಸ್ಥಿತವಾಗಿ ವಿಭಜಿಸಿ ಸರ್ಕಾರಿ ಅನುದಾನದ ಸಂಪನ್ಮೂಲಗಳನ್ನು ಬಳಸಿಕೊಂಡು ವಚನ ಚಳವಳಿಯನ್ನು ತಿರುಚಿ ಕಮ್ಯೂನಿಸ್ಟ್ ಸಿದ್ಧಾಂತಕ್ಕೆ ವ್ಯಾಖ್ಯಾನಿಸಿರುವ ಈ ಗುಂಪಿಗೆ ಬೇರೆಯವರು ವಚನಗಳನ್ನು ವ್ಯಾಖ್ಯಾನಿಸಬೇಡಿ ಎನ್ನುವ ಯಾವ ನೈತಿಕ ಹಕ್ಕಿದೆ?!? ಈ ಗುಂಪಿನ ಹಿರಿಕಿರಿಯ ಚಿಂತಕರ ವಚನ-ಸಮಾಜವಾದ ಸಮೀಕರಣದ ಅನೇಕ ಲೇಖನಗಳನ್ನು ಪ್ರಜಾವಾಣಿಯ ಹಳೆಯೊಟ್ಟು (ಆರ್ಕೈವ್)ಲ್ಲಷ್ಟೇ ಅಲ್ಲದೆ ನಾಡಿನ ಎಲ್ಲಾ ದಿನಪತ್ರಿಕೆ, ಸಾಪ್ತಾಹಿಕ, ಮಾಸಿಕ ಪತ್ರಿಕೆಗಳ ಹಳೆಯೊಟ್ಟುಗಳಲ್ಲಿ ಆಸಕ್ತರು ಹುಡುಕಿ ಓದಬಹುದು.
ದುಡಿಯುವ ಕಾರ್ಮಿಕ ಶಕ್ತಿಯನ್ನು ಬಳಸಿಕೊಂಡು ಅಧಿಕಾರ ಪಡೆದು ಸ್ಟಾಲಿನ್ ಸೃಷ್ಟಿಸಿದ ಹಾಲೋಡಮಾರ್ ಅಂತಹ ನರಮೇಧದಲ್ಲಿ ಸತ್ತವರು ಮೂರೂವರೆ ಕೋಟಿಯಿಂದ ಐದು ಕೋಟಿ. ಈ ನರಮೇಧದ ಸಮಯದಲ್ಲಿ ಹಸಿವಿನಿಂದ ಜನ ಒಬ್ಬರನೊಬ್ಬರು ಕೊಂದು ತಿಂದ ನರಭಕ್ಷಕ ಘಟನೆಗಳ ಉದಾಹರಣೆಗಳು ಸಾಕಷ್ಟಿವೆ. ಅದೇ ರೀತಿ ಕಮ್ಯೂನಿಸ್ಟ್ ಮಾವೋ ನಡೆಸಿದ ಸಂಸ್ಕೃತಿ ಕ್ರಾಂತಿಯಲ್ಲಿ ನಾಲ್ಕೂವರೆ ಕೋಟಿಯಿಂದ ಏಳೂವರೆ ಕೋಟಿ "ಅಸಹಜ" ಸಾವುಗಳಾಗಿವೆ. ಆದರೆ ಫ್ಯಾಸಿಸ್ಟ್ ಗೋಬೆಲ್ಸ್ ನರಮೇಧಿ ಸ್ಟಾಲಿನ್, ಲೆನಿನ್ ಅವರ ಹೆಸರನ್ನು ತಮ್ಮ ಮಕ್ಕಳಿಗೆ ಹೆಸರಿಟ್ಟ ಭಾರತೀಯ ಕಮ್ಯೂನಿಸ್ಟರು ಇಂದು ಇಟ್ಟಿಗೆ ಹೊರುವ, ಗುದ್ದಲಿ ಹಿಡಿದ, ಸುತ್ತಿಗೆ ಎತ್ತಿದ ಕಾರ್ಮಿಕರ ಫೋಟೋ ಹಾಕಿ ಕಾಲರ್ ಎತ್ತಿ ಸಂಭ್ರಮಿಸುತ್ತಾರೆಯೇ ಹೊರತು ಎಂದಾದರೂ ತಮ್ಮ ಆರಾಧ್ಯದೈವಗಳು ಮಾಡಿದ ನರಮೇಧದ ಬಗ್ಗೆ ಪಾಪಪ್ರಜ್ಞೆ ತೋರಿದ್ದಾರೆಯೇ?!?! ಮಾತೆತ್ತಿದರೆ ಬುದ್ಧ ಬಸವ ಅಂಬೇಡ್ಕರ್ ಎನ್ನುವ ಈ ಗುಂಪು ತಮ್ಮ ಸಿದ್ಧಾಂತದ ಮಾವೋ ನಡೆಸಿದ ಬೌದ್ಧ ಧರ್ಮೀಯರ ನರಹತ್ಯೆ ಬಗ್ಗೆ ಎಂದೂ ಆತ್ಮಸಾಕ್ಷಿಯಿಂದ ಮಾತನಾಡುವುದಿಲ್ಲ. ಕೇಳಿದರೆ ನಮಗೆ ಆತ್ಮದಲ್ಲಿ ನಂಬಿಕೆಯಿಲ್ಲ ಎಂಬ ಸಮಾಜವಾದಿ ಉತ್ತರ ಕೊಡುತ್ತಾರೆ. ಆತ್ಮದಲ್ಲಿ ನಂಬಿಕೆಯಿರದ ಇವರು ಮತ್ತೇಕೆ ಆತ್ಮಲಿಂಗದ ಬಸವಣ್ಣನನ್ನು ಜಪಿಸುತ್ತಾರೆ? ಸಂವಿಧಾನಗಳು ಉಸಿರಾಡುವ ಜೀವಂತ ದಸ್ತಾವೇಜುಗಳು, ಚಲನಶೀಲ ಬದಲಾವಣೆ ಜಗದ ನಿಯಮ ಎನ್ನುವ ಅಂಬೇಡ್ಕರ್ ತತ್ವವನ್ನು ಗಾಳಿಗೆ ತೂರಿ ಸಂವಿಧಾನ ಎಂಬುದು ತಿದ್ದಬಾರದ ಧಾರ್ಮಿಕ ಗ್ರಂಥ ಎಂಬಂತೆ ಬೌದ್ಧಿಕ ದಬ್ಬಾಳಿಕೆ ನಡೆಸುತ್ತಾರೆ. ಹೀಗೆ ತಮ್ಮ ಚಿಂತನೆಯಲ್ಲಿಯೇ ಸ್ಪಷ್ಟತೆ ಇರದ, ತಮ್ಮ ಆಪ್ತ ಅಫೀಮಿನ ನಶೆಯ ಕಮ್ಯೂನಿಸ್ಟ್ ಸಮಾಜವಾದದ ನೂರು ವರ್ಷಗಳ ಇತಿಹಾಸವನ್ನೇ ಸರಿಯಾಗಿ ಅರಿಯದ ಈ ಭಾರತದ ಮಂಚೂಣಿ ಸಮಾಜವಾದಿ ಚಿಂತಕರು ಹನ್ನೆರಡನೇ ಶತಮಾನದ ವಚನ ಚಳವಳಿಯ ಇತಿಹಾಸವನ್ನು ಅರಿಯಬಲ್ಲರೆ?
ಭಾರತದ ಭವ್ಯ ಪರಂಪರೆ, ಇತಿಹಾಸ, ಉದಾರತೆಯನ್ನು ತಾವು ನಂಬಿದ ಸಿದ್ಧಾಂತಕ್ಕೆ ಅಥವಾ ತಮ್ಮ ಸೀಮಿತ ತಿಳಿವಳಿಕೆಗೆ ಹೀಗೆ ವ್ಯವಸ್ಥಿತವಾಗಿ ತಿರುತಿರುಚಿ ಒಂದು ತಲೆಮಾರನ್ನೇ ತಲೆಮಾಸಿದವರನ್ನಾಗಿ ಮಾಡಲಾಗಿದೆ. ಇದನ್ನು ಸರಿಪಡಿಸಬೇಕಾದ ಇಡೀ ಶೈಕ್ಷಣಿಕ ವಲಯ ಇವರ ಪುಂಗಿಯ ನಾದಕ್ಕೆ ತಲೆದೂಗುತ್ತಿದೆ. ಲಿಂಗಾಯತ ಸಂಸ್ಕೃತಿಯನ್ನು ಕಾಪಾಡಲೆಂದೇ ಪಟ್ಟಗಟ್ಟಿದ ಮಠಾಧೀಶರು ಈ ಗುಂಪು ಕೊಡಮಾಡುವ ಬಿರುದು, ಪಾರಿತೋಷಕ, ಗೌರವ ಡಾಕ್ಟರೇಟುಗಳಿಗೆ, ವೈಚಾರಿಕ ಬೆಡಗಿಗೆ ಬಲಿಯಾಗಿ ಕರ್ತವ್ಯವಿಮುಖರಾಗಿ ವೀರಶೈವ ಬೇರೆ, ಲಿಂಗಾಯತ ಬೇರೆ ಎನ್ನುತ್ತಿದ್ದಾರೆ. ತತ್ವಜ್ಞಾನವನ್ನು ಬಿಟ್ಟು ಹುಸಿ ಸಮಾಜವಾದ ಜಪಿಸುತ್ತಿದ್ದಾರೆ. ಬಸವಣ್ಣ ವಿಶ್ವದ ಮೊದಲ ಸಮಾಜವಾದಿ ಎನ್ನುವ ಎರವಲು ಹೇಳಿಕೆ ನೀಡುತ್ತ ಸಂಪತ್ತನ್ನು ಕ್ರೋಢೀಕರಿಸುತ್ತಾರೆ. ಅನ್ಯರಿಗೆ ಅಸಹ್ಯ ಪಡಬೇಡ ಎನ್ನುತ್ತ ತಮ್ಮದೇ ಮೂಲದ ವೀರಶೈವಕ್ಕೆ ವಿಷಕಾರುತ್ತಾರೆ. ತಾವು ಕುಳಿತ ಪೀಠದ ಮಠಗಳು ಒಂದೊಮ್ಮೆ ಕಾಳಾಮುಖ ವೀರಶೈವವೇ ಕಟ್ಟಿದ ಮಠಗಳಾಗಿದ್ದವು ಎಂಬ ತಮ್ಮ ಬುಡದ ಸತ್ಯವನ್ನೇ ಮರೆತಿರುವ ಇವರು ಅಲ್ಲಮ ಚೆನ್ನಬಸವಣ್ಣ ಮಹಾದೇವಿಯರ ಯೋಗಾಚಾರ ಸಾಧನೆಯಂತೆ ಒಬ್ಬರೇ ಒಬ್ಬ ಪೀಠಾಧಿಪತಿಗಳು ಶಿವಯೋಗದಲ್ಲಿ ಆಂತರಿಕ ಜಾಗೃತಿಯನ್ನು ಮೂಡಿಸಿಕೊಂಡಿರುವರೆ?!? ಅಂದ ಹಾಗೆ ಮಠಗಳ ಇತಿಹಾಸದ ಬಗ್ಗೆ ಅನುಮಾನವಿರುವವರು ಡೇವಿಡ್ ಲೊರೆಂಜನ್ ಅವರು ಸ್ಪಷ್ಟವಾಗಿ ಶಾಸನಗಳ ದಾಖಲೆ ಸಮೇತ ಪ್ರತಿಪಾದಿಸಿರುವ "ದಿ ಕಾಪಾಲಿಕಾಸ್ ಅಂಡ್ ಕಾಳಾಮುಖಾಸ್: ಟು ಲಾಸ್ಟ್ ಶೈವೈಟ್ ಸೆಕ್ಟ್ಸ್" ಕೃತಿಯನ್ನು ಪರಾಂಭರಿಸಬಹುದು.
ಒಟ್ಟಾರೆ, ಇಂತಹ ಶಿಥಿಲ ಸಂಕಥನಕ್ಕೆ ಮಾರುಹೋಗಿ ಓರ್ವ ಘನವೆತ್ತ ರಾಜ್ಯದ ಮುಖ್ಯಮಂತ್ರಿ ವೀರಶೈವ ಲಿಂಗಾಯತ ಬೇರೆ ಬೇರೆಯೇ ಎಂಬ "ಸತ್ಯ"ಶೋಧನೆ ಮಾಡಿ ಎಂದು ಸಮಿತಿ ರಚಿಸಿದ್ದರು. ಅದಕ್ಕೆ ಓರ್ವ ನಿವೃತ್ತ ನ್ಯಾಯಾಧೀಶರನ್ನು ಅಧ್ಯಕ್ಷರನ್ನಾಗಿ ಮಾಡಿ, "ಪುಣ್ಯ ಸ್ತ್ರೀ" ಲೇಖನದ ಕರ್ತೃ ಶ್ರೀ ಎಸ್. ಜಿ. ಸಿದ್ದರಾಮಯ್ಯನವರನ್ನೂ ಒಳಗೊಂಡು ಹಲವಾರು ಸಂಶೋಧಕ ಸಾಹಿತಿ ಪ್ರೊಫೆಸರರುಗಳು ಮತ್ತು ವೈಚಾರಿಕ ಪತ್ರಕರ್ತರನ್ನೊಳಗೊಂಡ ಸದಸ್ಯರನ್ನು ನೇಮಿಸಿದ್ದರು. ಈ ಎಲ್ಲಾ ಸದಸ್ಯರು ವೀರಶೈವ ಲಿಂಗಾಯತರಾಗಿರದೆ, ಸಿದ್ಧಾಂತ ಶಿಖಾಮಣಿ, ಕರಣ ಹಸುಗೆ, ಮಿಶ್ರಾರ್ಪಣ, ಮಂತ್ರಗೋಪ್ಯಗಳ ಎರಡು ಪುಟಗಳನ್ನೂ ಓದಿರದ ಮತ್ತದೇ ಕಮ್ಯೂನಿಸ್ಟ್ ಪ್ರಣೀತರಾಗಿ ವಚನಗಳನ್ನು "ಕೆಂಪೀಕರಣ"ಗೊಳಿಸಿರುವ ಸಮಾಜವಾದಿಗಳೇ ಅಲ್ಲದೆ ಆ ಮುಖ್ಯಮಂತ್ರಿಗಳ ಖಾಸಗಿ ದರ್ಬಾರಿನ ಆಸ್ಥಾನ ಪಂಡಿತರೂ ಆಗಿದ್ದರು ಎಂಬುದು 'ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದಂತೆ' ಎನ್ನುವ ಜಾಣ್ಣುಡಿಗೆ ತಕ್ಕಂತಿದ್ದರು. ಇನ್ನು ಈ ಸಾಕ್ಷಿಪ್ರಜ್ಞೆ ಗುತ್ತಿಗೆದಾರರ ವಾದವನ್ನು ಪುರಾವೆ ಸಮೇತ ತಪ್ಪೆಂದು ಯಾರಾದರೂ ಪ್ರಶ್ನಿಸಿದರೆ ಇವರು ತಕ್ಷಣಕ್ಕೆ ಪ್ರತಿವಾದಿಯ ಜಾತಿಯನ್ನು ಸಂಶೋಧಿಸಿ, "ಇವ ಪಂಪೀ, ಇವ ಚಡ್ಡಿ, ಇವ ಮಜ್ಜಿಗೆಹುಳಿ, ಇವ ತಂಬುಳಿ, ಇವ ಹೋಳಿಗೆ, ಇವ ಹಿಂದೂವಾದಿ, ಇವ ಪದ್ಮಪ್ರಿಯ, ಬಂಡವಾಳಶಾಹಿ..." ಇತ್ಯಾದಿಯಾಗಿ ಇವನಾರವ ಇವನಾರವ ಎಂದು ಬಡಬಡಿಸುತ್ತಾರೆ. ಅದರಲ್ಲೂ ಪ್ರತಿವಾದಿ ದಲಿತನಾಗಿದ್ದರಂತೂ, "ಸಃ ಬ್ರಾಹ್ಮಣ-ಪ್ರಸೂತ ದಲಿತಸ್ಯಹ!" ಎಂದು ಅವರದೇ ಸಂಸ್ಕೃತದಲ್ಲಿ ತೆಗಳುತ್ತ "ನಮ್ಮ ಸಮಾಜವಾದಿ ವಚನಗಳ ಬುಡವನ್ನು ಮುಟ್ಟಿ ಮೈಲಿಗೆ ಮಾಡಿಬಿಟ್ಟಿದ್ದಾನೆ" ಎಂದು ಅವನಿಂದ ಎಲ್ಲಾ ವಿಶ್ವವಿದ್ಯಾಲಯ, ಪ್ರಕಾಶನ, ಪತ್ರಿಕೆ, ಪ್ರಶಸ್ತಿಗಳ ಶುದ್ಧ ಮಡಿಯನ್ನು ಕಾಪಾಡಲು ಪಣತೊಟ್ಟು ಅವನನ್ನು ಬಹಿಷ್ಕರಿಸುತ್ತಾರೆಯೇ ಹೊರತು ತಾರ್ಕಿಕ ವಾದಮಂಡನೆಯನ್ನಲ್ಲ. ಈ ಸಂಕಥನಗಳನ್ನು ಈವರೆಗೆ ಯಾವುದೇ ವಿಶ್ವವಿದ್ಯಾಲಯದ ಸತ್ಯಶೋಧನಿರತ ಪ್ರೊಫೆಸರರು, ಸಂಶೋಧಕರು ಪ್ರಶ್ನಿಸದಂತೆ, ಅವರ ದನಿಯನ್ನು ಉಡುಗಿಸಲಾಗಿದೆಯೋ, ಸಮ್ಮೋಹಗೊಳಿಸಲಾಗಿದೆಯೋ ಎಂಬುದು ಸಂಶೋಧನಾರ್ಹ. ಇದಿಷ್ಟು ಇವರ ಸಿದ್ಧಮಾದರಿಯ ಜಾತ್ಯಾತೀತ ಉದಾರ ಸಿದ್ಧಾಂತ ಎಂಬುದು 'ಒತ್ತುಕೊಟ್ಟು ಪ್ರಕಾಶಿಸುವಂತೆ ಮಾಡಿ' ಗಮನದಲ್ಲಿರಿಸಿಕೊಳ್ಳಬೇಕಾದ ಪ್ರಮುಖ ಅಂಶ. ಸದಾ ಶುದ್ಧ ಶ್ವೇತ ಮತ್ತು ಖಾವಿ ಕೇಸರಿಯೇ ಇದ್ದ/ಇರುವ/ಇರಲಿರುವ ಇವರಿಂದ "ಕೆಂಪೀಕರಣ"ಗೊಂಡಿರುವ ಲಿಂಗಾಯತಕ್ಕೆ ಯಾರಾದರೂ ಲಿಂಗಾಯತದ ಮೂಲಬಣ್ಣ ತೋರಿಸಿದಾಕ್ಷಣ ಈ ಚಿಂತಕ ಚೇತನರು 'ಕೇಸರೀಕರಣ ಕೇಸರೀಕರಣ ಮುಟ್ಟುಗೋಲು ಮುಟ್ಟುಗೋಲು' ಎಂದು ಬಾಯಿ ಬಾಯಿ ಬಡಿದುಕೊಳ್ಳುತ್ತಾರೆ. ವಿಪರ್ಯಾಸವೆಂದರೆ ಇವರೊಂದಿಗೆ ಶುದ್ಧ ಶ್ವೇತಧಾರಿ ಶರಣೆಯರು, ಖಾವಿಧಾರಿ ವಿರಕ್ತರು ತಾವು ತೊಟ್ಟ ದಿರಿಸಿನ ಬಣ್ಣವನ್ನೇ ಮರೆತು 'ಕೇಸರೀಕರಣ ಕೇಸರೀಕರಣ ಮುಟ್ಟುಗೋಲು ಮುಟ್ಟುಗೋಲು' ಎಂದು ದನಿಗೂಡಿಸಿ ಕೋರಸ್ ಹಾಡುತ್ತಾರೆ!
ಹೀಗೆ ಭಾರತದ ತಲೆಮಾಸಿದ ಈ ನವ್ಯ ತಲೆಮಾರಿನ ವೈಚಾರಿಕ ಸಂಕಥನಗಳ ಮೌಢ್ಯದ ಚಿಂತನೆಯನ್ನು ಕೇಳಿ, ಘನವೆತ್ತ ಪ್ರಜಾಪ್ರಭುತ್ವ ಸರ್ಕಾರದ ಮುಖ್ಯಸ್ಥ ಮುಖ್ಯಮಂತ್ರಿಗಳೊಬ್ಬರು ಸಮಿತಿ ರಚಿಸಿದ್ದರು ಎಂಬ ಸುದ್ದಿಯನ್ನು ಓದಿ ಇಂದಿನ ಇಪ್ಪತ್ತೊಂದನೇ ಶತಮಾನದ ಬೆರಳ ತುದಿಯ ಮಾಹಿತಿ ತಂತ್ರಜ್ಞಾನದ ಜಾಗತಿಕ ಜಗತ್ತು ಅಂಡು ತಟ್ಟಿಕೊಂಡು ಕೇಕೆ ಹಾಕುತ್ತಾ ಮಾಡುತ್ತಿರುವ ನಾಡಿನ ಅಪಹಾಸ್ಯದ ಮೌಲ್ಯ, ಅತ್ಯಮೂಲ್ಯ!!!
Let's separate the hype from the reality!
- ರವಿ ಹಂಜ್
No comments:
Post a Comment