ಸುಮಾರು ಹದಿನೈದು ವರ್ಷಗಳ ಹಿಂದೆ ತಂತ್ರಜ್ಞರ ಉದ್ಯೋಗ ನಗರಿಯಾದ ಬೆಂಗಳೂರಿಗೆ ನಾನು ಆಗಷ್ಟೇ ಬಂದು ಸೇರಿದ್ದೆ. ನನ್ನ ರೂಮಿನ ಪಕ್ಕದ ಕಟ್ಟಡದ ಮಾಲೀಕರ ಮಗ ಆಗಷ್ಟೇ ಪಿ.ಯು.ಸಿ.ಗೆ ಸೇರಿದ್ದ. ಅವನು ಅವನ ಸ್ನೇಹಿತನಾದ ದರ್ಶನ್ ಎಂಬುವನೂ ನನ್ನನ್ನು ಒಂದು ರೀತಿಯಲ್ಲಿ ಹಿರಿಯ ಸ್ನೇಹಿತನಂತೆ ಕಾಣುತ್ತಿದ್ದರು. ಆಗಷ್ಟೇ ಬಾಲ್ಯದ ಪೊರೆ ಕಳಚಿ ಹದಿಹರೆಯಕ್ಕೆ ಕಾಲಿಡುತ್ತಿದ್ದ ಆ ಹುಡುಗರು ಮುಕ್ತವಾಗಿ ಹರ್‍ಅಟಲು, ಸಲಹೆ ಪಡೆಯಲು ನನ್ನನ್ನು ನಂಬಿದ್ದರು. ಸಾಧಾರಣವಾಗಿ ಇತರೆ ಹದಿಹರೆಯದ ಹುಡುಗರಂತೆಯೇ ಇದ್ದ ಈ ಹುಡುಗರು ಎರಡನೇ ಪಿ.ಯು.ಸಿಗೆ ಬರುವಲ್ಲಿಗೆ ಆಧ್ಯಾತ್ಮ, ದೇವರು, ತತ್ವಚಿಂತನೆಯಂತಹ ವಿಷಯಗಳನ್ನೆತ್ತಿ ನನ್ನೊಂದಿಗೆ ಸಂವಾದದಲ್ಲಿ ತೊಡಗುತ್ತ ನನ್ನನ್ನು ಇಸ್ಕಾನ್ ಗೆ ಬನ್ನಿ ಎನ್ನಲಾರಂಭಿಸಿದರು. ಸಾಮಾನ್ಯವಾಗಿ ಕದ್ದು ಬಿಯರ್ ಹೀರುವ, ಸಿಗರೇಟ್ ಸೇದುವ ಅಥವಾ ಆ ಹುಡುಗಿ ಈ ಹುಡುಗಿ, ಲವ್ವು ಎಂದು ಇತರೆ ಹದಿಹರೆಯದವರಂತೆ ಹರಟಬೇಕಿದ್ದ ಆ ಹುಡುಗರು ಈ ರೀತಿ ಆಧ್ಯಾತ್ಮಿಕ ವಿಷಯಗಳನ್ನೆತ್ತಿ ಸಂವಾದದಲ್ಲಿ ತೊಡಗುವುದು ಕೊಂಚ ಅಭಾಸವೆನಿಸಿತು. ಆದರೆ ಅವರ ಪೋಷಕರು ನಮ್ಮ ಹುಡುಗರು ಇತರೆಯವರಂತೆ ಕಾಲೇಜು ಕನ್ಯೆಯರಲ್ಲಿ ಅನುರಕ್ತರಾಗದೆ ದೇವರಲ್ಲಿ ಅನುರಕ್ತರಾಗಿರುವುದು ತಮ್ಮ ಪೂರ್ವಜನ್ಮದ ಪುಣ್ಯವೇ ಎಂದು ನನ್ನೊಂದಿಗೆ ಕೊಚ್ಚಿಕೊಳ್ಳತೊಡಗಿದರು.
ಈ ಹುಡುಗರೊಂದಿಗೆ ತರ್ಕಿಸುತ್ತ ನನಗೆ ಅವರುಗಳಿಗೆ ವ್ಯವಸ್ಥಿತವಾಗಿ "ಬ್ರೇನ್ ವಾಷ್" ಆಗುತ್ತಿರುವುದು ಮನದಟ್ಟಾಯಿತು. ಇವರನ್ನು ಕೊಂಚ ಪ್ರಾಕ್ಟಿಕಲ್ ದಾರಿಗೆ ತರೋಣವೆಂದು ನಾನೂ ಕೂಡ ಈ ಹುಡುಗರ ವಾದವನ್ನು ಕೊಂಚ ಆಸಕ್ತಿಯಿಂದ ಆಲಿಸತೊಡಗಿದೆನು. ಹಾಗೆಯೇ ಅವರ ಇಸ್ಕಾನ್ ಗುರುಗಳ ಭೋಧನೆಯ ಕೆಲ ಹುಳುಕುಗಳನ್ನೆತ್ತಿ ಪ್ರಶ್ನಿಸಿದಾಗ ಅವಾಕ್ಕಾಗುತ್ತಿದ್ದ ಆ ಹುಡುಗರು ಮಾರನೇ ದಿನ, ಬಹುಶಃ ಅವರ ಗುರೂಜಿಗೆ ನಾನು ಹಾಕಿದ ಪ್ರಶ್ನೆಗಳನ್ನು ಹಾಕಿ ಉತ್ತರ ಪಡೆದುಕೊಂಡು ಬಂದು ಮತ್ತ ನನ್ನೊಂದಿಗೆ ವಾದದಲ್ಲಿ ತೊಡಗುತ್ತಿದ್ದರು. ಒಟ್ಟಾರೆ ಅವರ ತತ್ವಗಳು ಬದುಕು ನಶ್ವರ; ಜಗದೆಲ್ಲಾ ನೋವುಗಳಿಗೆ ಲೌಕಿಕ ಆಸೆಗಳೇ ಮೂಲ; ಮುಕ್ತಿಗೆ ಕೃಷ್ಣನೇ ದಾರಿ ಎಂದೆಲ್ಲಾ ಆಗಿರುತ್ತಿದ್ದವು. ನಾನು ಅವರ ತತ್ವಗಳನ್ನು ಒಂದೆಡೆ ಒಪ್ಪಿಕೊಳ್ಳುತ್ತ ಮತ್ತೊಂದೆಡೆ ಕೃಷ್ಣ ಸಾವಿರ ಗೋಪಿಕಾ ಸ್ತ್ರೀಯರನ್ನು ತಾನಿಟ್ಟುಕೊಂಡು ಅವನ ಭಕ್ತರಿಗೆ ಕೇವಲ ಸಂತಾನೋತ್ಪತ್ತಿ ಕಾಲದಲ್ಲಿ ಮಾತ್ರ ಕಾಮಿಸಿ ಅನ್ಯ ಕಾಲದಲ್ಲಿ ವರ್ಜಿಸಿ ಎನ್ನುವುದು ಹೇಗೆ ನ್ಯಾಯವೆಂದೋ ಅಥವಾ ಅವರ ಗುರುಗಳು ಹೇಳುವ "ಬುದ್ಧಿವಂತ ಮಾನವ ಪ್ರಾಣಿಗಳಂತೆ ಬದುಕದೆ ನಿಯಮಬದ್ಧವಾಗಿ ಬದುಕಬೇಕು" ಎಂಬುದನ್ನೇ ಪ್ರಾಣಿಗಳು ಸಂತಾನೋತ್ಪತ್ತಿಗಾಗಿ ಮಾತ್ರ ಕಾಮಕ್ರೀಡೆಯಲ್ಲಿ ತೊಡಗಿದರೆ ಬುದ್ದಿವಂತ ಮಾನವ ನಿತ್ಯವೂ ಆ ಕಾರ್ಯದಲ್ಲಿ ತೊಡಗುವುದು ಆರೋಗ್ಯಕರ ಸಮಾಜ ನಿರ್ಮಾಣಕ್ಕಾಗಿ. ನಿಮ್ಮ ಗುರುಗಳು ಏನೆಲ್ಲಾ ಮಾಡಿ ಸಮಾಧಿ ಮುಕ್ತಿಯನ್ನು ಹೊಂದುತ್ತಾರೋ ಅದರ ಅನುಭವವನ್ನು ಜನಸಾಮಾನ್ಯ ಕಾಮಿಸಿ ಕ್ಷಣಿಕವಾದರೂ ನಿತ್ಯವೂ ಆ ಸಮಾಧಿಯ ಅನುಭವವನ್ನು ಅನುಭವಿಸುತ್ತಾನೆ ಎನ್ನುತ್ತ ಅವರ ಗುರುಗಳ ತತ್ವಗಳೇ ಒಂದಕ್ಕೊಂದು ಅಭಾಸವಾಗಿವೆ ಎಂದು ಅವರ ಅಂದಿನ ಇಸ್ಕಾನ್ ’ಬ್ರೇನ್ ವಾಷ್’ ಅನ್ನು ಅಳಿಸಿಬಿಡುತ್ತಿದ್ದೆ. ಮಗದೊಮ್ಮೆ "ಈರುಳ್ಳಿ / ಬೆಳ್ಳುಳ್ಳಿಯಂತೆ ಕಟು ವಾಸನೆಯಿರುವ ಎಲ್ಲಾ ತರಕಾರಿ ಆಹಾರ ಪದಾರ್ಥಗಳನ್ನು ತಿಂದರೆ ನಮ್ಮಲ್ಲಿ ಆ ಕಟು ವಾಸನೆಯ ಗುಣಗಳು ಸೇರುತ್ತವೆ. ಆವುಗಳನ್ನು ವರ್ಜಿಸಿ" ಎಂಬ ಇಸ್ಕಾನಿನ ಪಥ್ಯವನ್ನು ನಾನು ಆ ಆಹಾರ ಸಾಮಗ್ರಿಗಳು ಮನುಷ್ಯನನ್ನು ಎಲ್ಲಾ ಸಂಕಷ್ಟಗಳನ್ನೂ ದೈಹಿಕವಾಗಿ, ಮಾನಸಿಕವಾಗಿ ಸಹಿಸುವಷ್ಟು ಕಟುವಾಗಿ ಮಾಡುತ್ತವೆ ಎಂದೇಕೆ ಹೇಳಬಾರದು ಎಂದು ಕಾಲೆಳೆದು ದಿಕ್ಕೆಡಿಸಿ ಈರುಳ್ಳಿ ಬೋಂಡ ತಿನ್ನಿಸುತ್ತಿದ್ದೆನು. ಹೀಗೆಯೇ ಸುಮಾರು ತಿಂಗಳುಗಳು ಕಳೆದವು. ನಾನು ನನ್ನ ಕೆಲಸ, ಸ್ನೇಹಿತರು ಮತ್ತಿತರೆ ಸಾಮಾಜಿಕ ಲೋಕದಲ್ಲಿ ಕಳೆದು ಹೋಗಿ, ಹಲವಾರು ತಿಂಗಳುಗಳವರೆಗೆ ಈ ಹುಡುಗರೊಂದಿಗೆ ಸಂವಾದದಲ್ಲಿ ತೊಡಗಲು ಸಾಧ್ಯವಾಗಿರಲಿಲ್ಲ.
ಒಮ್ಮೆ ಸಾಯಂಕಾಲ ನಾನು ಆಫೀಸಿನಿಂದ ಬಂದು ನನ್ನ ಹೀರೋ ಪುಕ್ ನಿಲ್ಲಿಸಿದೊಡನೆ ನನ್ನ ರೂಮಿನ ಪಕ್ಕದ ಮಾಲೀಕರು ನನ್ನಲ್ಲಿಗೆ ಬಂದು ತಮ್ಮ ಮಗನೂ ಮತ್ತವನ ಸ್ನೇಹಿತ ದರ್ಶನನೂ ಇಸ್ಕಾನಿನ ಫುಲ್ ಟೈಮ್ ಸನ್ಯಾಸಿಗಳಾಗುತ್ತೇವೆಂದು ಹೋಗಿದ್ದಾರೆಂದೂ ಅವರಿಗೆ ಹೇಗಾದರೂ ಕನ್ವಿನ್ಸ್ ಮಾಡಿ ಕರೆತನ್ನಿರೆಂದೂ ಅಳುತ್ತ ಗೋಗರೆದರು. ನಾನು ಅವರನ್ನು ಸಮಾಧಾನಿಸಿ ’ನಡೀರಿ ಹೋಗಿ ಕರೆದುಕೊಂಡು ಬರೋಣ’ ಎಂದು ಅವರನ್ನು ಕರೆದುಕೊಂಡು ರಾಜಾಜಿ ನಗರದಲ್ಲಿ ಆಗಷ್ಟೆ ಚಿಕ್ಕದಾಗಿ ತಲೆಯೆತ್ತಿದ್ದ ಇಸ್ಕಾನ್ ಸಂಸ್ಥೆಗೆ ಹೋದೆನು. ಅಲ್ಲಿ ಈ ಹುಡುಗರಂತೆಯೇ ಹದಿಹರೆಯದಲ್ಲಿ "ಬ್ರೇನ್ ವಾಷ್"ಗೊಳಪಟ್ಟು ಸನ್ಯಾಸಿಗಳಾದ ಓರ್ವ ಗುರುವಿನೊಂದಿಗೆ ವಾದಿಸಿ, ಕೊನೆಗೆ ಕಾನೂನು ಸಮರ ಇಲ್ಲವೇ ದಾದಾಗಿರಿಗಳನ್ನು ಬಳಸಲು ಕೂಡ ನಾನು ಹೇಸುವುದಿಲ್ಲವೆಂದು ಬೆದರಿಸಿದ ಮೇಲೆ ಅವರ ಮಗನನ್ನು ನಮ್ಮೊಂದಿಗೆ ಕಳುಹಿಸಿದರು. ಆದರೆ ಎರಡು ದಿನಗಳ ಹಿಂದಷ್ಟೇ ಹದಿನೆಂಟು ದಾಟಿ ವಯಸ್ಕನಾಗಿದ್ದ ದರ್ಶನ್, ಅಲ್ಲಿಯೇ ಉಳಿದುಕೊಂಡ. ಅದಾದ ಕೆಲವೆರಡು ತಿಂಗಳುಗಳ ನಂತರ ಮೆಜೆಸ್ಟಿಕ್ಕಿನ ಜನತಾ ಬಜಾರ್ ಮುಂದೆ ಬೋಳಿಸಿದ ತಲೆಯ, ಕಾವಿ ಪಂಚೆ ಜುಬ್ಬಾ ತೊಟ್ಟ, ಹಣೆ ಕಣ್ಣುಗಳ ಆಜೂಬಾಜು ಗಂಧಮುದ್ರೆಗಳನ್ನೊತ್ತಿಕೊಂಡ ಯುವ ಸನ್ಯಾಸಿ ದರ್ಶನ್ ಇಸ್ಕಾನ್ ಪ್ರಭುಪಾದರ ಪುಸ್ತಕಗಳನ್ನು ಮಾರುತ್ತಿದ್ದುದನ್ನು ನೋಡಿದೆ. ಅದೇ ಕೊನೇ ಮತ್ತೆ ದರ್ಶನನ ದರ್ಶನ ನಾನಗಾಗಿಲ್ಲ. ಬಹುಶಃ ಇಸ್ಕಾನಿನ ಅಡುಗೆ ಕೋಣೆಯಲ್ಲಿ ’ಸರ್ಕಾರಿ ಶಾಲಾಮಕ್ಕಳ ಬಿಸಿಯೂಟ’ದ ಉಸ್ತುವಾರಿ ನೋಡಿಕೊಳ್ಳುತ್ತ, ಕೃಷ್ಣಜಪದಲ್ಲಿ ತೊಡಗಿರಬಹುದು! ಇಲ್ಲಾ ಬೆಂಗಳೂರಿನ ಯಾವುದಾದರೂ ಜನನಿಬಿಡ ಜಾಗದಲ್ಲಿ ಇಸ್ಕಾನ್ ಪುಸ್ತಕಗಳನ್ನು ಮಾರುತ್ತಿರಬಹುದು.
ಇತ್ತೀಚೆಗೆ ನೀವೆಲ್ಲರೂ ಹೊನ್ನಾಳಿ, ಹುಬ್ಬಳ್ಳಿಯ ಹದಿಹರೆಯದ ಸಿಮಿ ಕಾರ್ಯಕರ್ತರು / ಉಗ್ರಗಾಮಿಗಳ ಬಗ್ಗೆ ಓದಿದ್ದೀರಷ್ಟೆ! ಈಗಷ್ಟೇ ಬಾಲ್ಯದಿಂದ ಹದಿಹರೆಯಕ್ಕೆ ಕಾಲಿಡುತ್ತಿದ್ದ ಈ ಹುಡುಗರು ಕೂಡಾ ದೇವರ ಹೆಸರಿನಲ್ಲಿ, ಧರ್ಮದ ಹೆಸರಿನಲ್ಲಿ ದರ್ಶನನಂತೆಯೇ "ಬ್ರೇನ್ ವಾಷ್"ಗೆ ಒಳಪಟ್ಟಿದ್ದಾರೆ. ಇಸ್ಕಾನ್ ಗುರು "ಲೌಕಿಕ ವಾಂಛೆಯೇ ಜಗದ ಕಷ್ಟಗಳಿಗೆ ಮೂಲ. ಇದೆಲ್ಲವನ್ನು ತೊರೆದು ಅಲೌಕಿಕದೆಡೆಗೆ ನಡೆಯಲು ಕೃಷ್ಣಜಪ ಮಾಡಿ"ರೆಂದು ಜಗದ ಅನುಭವವೇ ಇಲ್ಲದ ಅಮಾಯಕರುಗಳನ್ನು ಕಷ್ಟಾನುಕಷ್ಟಗಳನ್ನನುಭವಿಸಿದ ಸಂಸಾರಿಕರನ್ನೂ ಮೀರಿಸಿ ಸನ್ಯಾಸತ್ವ ತೊಡಿಸಿ ಆಧ್ಯಾತ್ಮದೆಡೆಗೆ ಕಳುಹಿಸಿದ್ದರೆ, ಸಿಮಿಯ ಮೌಲ್ವಿ "ಹೂಸುವ, ಉಚ್ಚೆ ಹುಯ್ಯುವ ಲೌಕಿಕ ಕನ್ಯೆಯರೇಕೆ? ಅಲೌಕಿಕದಲ್ಲಿ ದೇವರು ನಿಮಗಾಗಿ ಒಂದಲ್ಲ ಎರಡಲ್ಲ ಎಪ್ಪತ್ತೆರಡು ಹೂಸದ, ಬೆವರದ, ಸುವಾಸಿತ ಸದಾ ಅಕ್ಷತಕನ್ಯೆಯರಾದ ಹೂರಿಯಹ್ ಕನ್ಯೆಯರನ್ನು ಇಟ್ಟಿದ್ದಾರೆ. ಅವರತ್ತ ಮುಖ ಮಾಡಿ" ಎಂದು ಅಲೌಕಿಕತೆಯಲ್ಲಿ ಲೌಕಿಕ ರಸಗಳು ಇನ್ನೂ ಅದ್ಭುತವಾಗಿವೆ ಎಂದು ತೋರಿಸುತ್ತಾರೆ. ಬಹುಶಃ ಪಾರಮಾರ್ಥಿಕ ಸುಖವನ್ನು ಕಲ್ಪಿಸಿಕೊಳ್ಳದ ಯುವಕರಿಗೆ ಲೌಕಿಕತೆಯ ಈ ರೂಪದಲ್ಲಿ ಅಲೌಕಿಕತೆಯನ್ನು ಪರಿಚಯಿಸುವ ಪರಿ ಇದಾಗಿದೆಯೇನೋ?
ಏನಾದರೂ ಸಾಧನೆಯನ್ನೋ, ಕ್ರಾಂತಿಯನ್ನೋ ತೀವ್ರವಾಗಿ ಮಾಡಿಬಿಡಬೇಕೆನ್ನುವ ಹದಿಹರೆಯದ ಹುಮ್ಮಸ್ಸಿನಲ್ಲಿ ಕೆಲವರು ಪ್ರೇಮಿಸುವುದು, ಕದ್ದು ಕುಡಿಯುವುದು ಇವುಗಳನ್ನೇ ಕ್ರಾಂತಿಯೆಂದುಕೊಂಡರೆ ಕೆಲವರಿಗೆ ಈ ಪಂಥೀಯರುಗಳ ಭೋಧನೆ ಅಪ್ಯಾಯಮಾನವೆನಿಸಿಬಿಡುತ್ತದೆ. ಹಾಗಾಗಿಯೇ ನಮ್ಮಲ್ಲಿ ಸಾವಿರಾರು ಸಿನಿಮಾಗಳು ಪ್ರೇಮ, ಇಲ್ಲಾ ರೌಡಿಯಿಸಂ ಈ ಎರಡನ್ನೇ ಪ್ರಮುಖವಾಗಿ ಮಾಡಿಕೊಂಡು ಅಥವಾ ಎರಡನ್ನೂ ಕಲಸಿಕೊಂಡು ತಯಾರಾಗುತ್ತಿರುವುದು ಮತ್ತು ಸೂಪರ್ ಹಿಟ್ ಆಗುತ್ತಿರುವುದು!
ಇರಲಿ, ಒಟ್ಟಾರೆ ಈ ಪಂಥೀಯವಾದಿಗಳು ಆಗಷ್ಟೆ ಪೊರೆ ಕಳಚಿ ತರುಣಾವಸ್ಥೆಗೆ ಕಾಲಿಡುತ್ತಿರುವ ಅಮಾಯಕ ಮಿಕಗಳನ್ನು ಸರಳವಾಗಿ ತಮ್ಮ ಬಲೆಗೆ ಹಾಕಿಕೊಳ್ಳುತ್ತಾರೆ. ತಮ್ಮ ತಮ್ಮ ನಂಬಿಕೆ, ಉದ್ದೇಶಗಳನ್ನು ಈ ಯುವ ಪೀಳಿಗೆಯ ಮೇಲೆ ಹೇರಿ, ಬೆಳೆದು ಬಾಳು ಬೆಳಗಿಸಿಕೊಳ್ಳಬೇಕಾದ ಈ ಯುವ ದೀವಿಗೆಗಳನ್ನು ಉರಿಯುವ ಮೊದಲೇ ನಂದಿಸುತ್ತಿದ್ದಾರೆ. ಇದಕ್ಕೆ ಯಾವುದೇ ಪಂಥೀಯ ಸಂಘಟನೆಗಳು ಹೊರತಾಗಿಲ್ಲ. ಅದು ಅಲ್ ಖೈದಾ, ಸಿಮಿ, ಲಷ್ಕರ್-ಇ-ತೌಯಿಬಾ, ಇಸ್ಕಾನ್, ಬ್ಲ್ಯಾಕ್ ಟ್ರೆಂಚ್ ಕೋಟ್, ಹಿಪ್ಪಿ, ನಕ್ಸಲ್, ಎಡಪಂಥೀಯ, ಬಲಪಂಥೀಯ ಅಥವಾ ಇನ್ನಾವುದೇ "ಕಲ್ಟ್" ಮಾದರಿಯ ಪಂಥೀಯರಾಗಿರಬಹುದು. ಯಾವುದೋ ಕಾಲದ ತತ್ವಕ್ಕೆ ಜೋತುಬಿದ್ದು, ಆ ತತ್ವಗಳು ವರ್ತಮಾನ ಕಾಲಘಟ್ಟದಲ್ಲಿ ಅಸಹಜ ಅಭಾಸವಾಗಿ ಅಪ್ರಸ್ತುತವಾಗಿದ್ದರೂ ಅದರ ಪರಿವೆಯಿಲ್ಲದೇ ಗತ ಲೋಕದ ಆ ಕಾಲದ ಭ್ರಮಾಲೋಕದಲ್ಲಿ ತೇಲುತ್ತಿರುವ ಈ ಹುಚ್ಚರ ಸಂಘಟನೆಗಳು ನಮ್ಮ ಇಂದಿನ ಯುವಶಕ್ತಿಯನ್ನು ಆಕರ್ಷಿಸುತ್ತಿರುವುದು ಸಾಮಾಜಿಕ ದುರಂತ!
ಈ ಅಮಾಯಕ ಯುವಕರ ತಲೆ ಸವರಿ ಇಸ್ಕಾನ್ ನಂತಹ ಸಂಘಗಳು ಮೆಜೆಸ್ಟಿಕ್ ನಲ್ಲಿ ಪುಸ್ತಕ ಮಾರಿಸುತ್ತ ಅವರನ್ನು ಸಮಾಜದೊಳಗಿದ್ದೂ ಖೈದಿಗಳಂತೆ ಬಾಳಿಸಬಹುದು; ಸಿಮಿಯಂತಹ ಸಂಘಗಳು ಆ ಯುವಕರಿಂದ ಮೆಜೆಸ್ಟಿಕ್ ನಂತಹ ಜನನಿಬಿಡ ಸ್ಥಳಗಳಲ್ಲಿ ಬಾಂಬ್ ಹಾಕಿಸಿ ಅವರನ್ನು ಹೂರಿ ಕನ್ಯೆಯರೊಂದಿಗೆ ವಿಹಾರಕ್ಕೋ ಅಥವಾ ಅವರು ಹೌಹಾರುವಂತಹ ಬಳ್ಳಾರಿ ಬಂದೀಖಾನೆಗೋ ಕಳುಹಿಸಬಹುದು; ಅಥವಾ ನಕ್ಸಲ್ ಸಂಘಟನೆಗಳಂಥಹ ಸಂಘಟನೆಗಳು ಈ ಯುವಕರುಗಳ "ಲಾಲ್ ಸಲಾಮ್" ಚರಮಗೀತೆ ಹಾಡಬಹುದು; ಒಟ್ಟಾರೆ ಹದಿಹರೆಯದ ಪ್ರಬಲ ಯುವಶಕ್ತಿಯನ್ನು ಈ ಸಂಘಟನೆಗಳು ನಾಶಮಾಡುತ್ತಿವೆ. ದೇವರ ಅನುಯಾಯಿಗಳಾಗಿಯೋ ಅಥವಾ ತತ್ವಸಿದ್ಧಾಂತವೇ ದೇವರೆನ್ನುವ ಪಂಥಿಗಳಾಗಿಯೋ ಈ ಎಲ್ಲಾ ಸಂಘಟನೆಗಳು ತಾವು ನಂಬಿದ ದೇವರುಗಳ ಸೃಷ್ಟಿಯನ್ನು ದೇವರುಗಳ ಹೆಸರಿನಲ್ಲಿಯೇ ನಾಶಮಾಡುತ್ತಿರುವುದು ಆ ದೇವರುಗಳ ವಿಪರ್ಯಾಸ!
ಕೆಲವು ಸಮಾಜದ ಕಾನೂನಿನ ದೃಷ್ಟಿಯಲ್ಲಿ ಸಮಾಜಘಾತುಕವೆನಿಸಿಕೊಳ್ಳಬಹುದು. ಇನ್ನು ಕೆಲವು ಕಾನೂನಿನ ಪರಿಧಿಯಲ್ಲಿಯೇ ಗೌರವಾನ್ವಿತವೆನಿಸಬಹುದು, ಅಷ್ಟೇ ವ್ಯತ್ಯಾಸ.
ಒಟ್ಟಾರೆ ದರ್ಶನ್ ಖಾವಿ ತೊಟ್ಟು ಹಾದಿ ಬದಿಯಲ್ಲಿ ಪುಸ್ತಕ ಮಾರಿದರೆ, ಕಫೀಲ ಕಾಣದ ಲೋಕದಲ್ಲಿ ಎಪ್ಪತ್ತೆರಡು ಹೂರಿ ಕನ್ಯೆಯರೊಂದಿಗೆ ವಿಹರಿಸುತ್ತಿದ್ದಾನೆ! ದರ್ಶನ್, ಕಫೀಲ್ ರಂತಹ ಅದೆಷ್ಟೋ ಮಕ್ಕಳನ್ನು ಕಳೆದುಕೊಂಡ ಭಾರತಮಾತೆಯ ಕಣ್ಣೊರೆಸಬೇಕಾದ ನಾಯಕರುಗಳಿಂದು ಅವಳ ಮೇಲಿನ ಅಧಿಕಾರದ ಹಂಚಿಕೆಯ ಹೊಂಚು ಹಾಕುತ್ತಿದ್ದಾರೆ.
ಅಣಕ:
ಈ ಸಾರಿಯ ಲೇಖನ ಯುವಕರಿಗೆ ಸಂಬಂಧಿಸಿದ ಲೇಖನವಾದುದರಿಂದ ಮತ್ತು ಅನೇಕರು ನನ್ನನ್ನು ಯಾಕೆ ತಂಪು ಕನ್ನಡಕವನ್ನು ಆದಷ್ಟೂ ಧರಿಸಿರುತ್ತೀಯಾ? ಎಂದು ಕೇಳುವುದಕ್ಕೆ ತುಂಟ ಉತ್ತರವಾಗಿ ಈ ಅಣಕವನ್ನು ಸ್ವಲ್ಪ ಚಿತ್ರಮಯವಾಗಿ ಕೊಟ್ಟಿದ್ದೇನೆ. ದಯಮಾಡಿ ಕೆಳಗಿನ ಚಿತ್ರವನ್ನು ಪರಾಂಭರಿಸಿ ನನ್ನ ಕನ್ನಡಕದ ಹಿಂದಿನ ಕಣ್ಣುಗಳು, ಆರೋಗ್ಯವಂತ ಯುವಕರಂತೆ ಏನು ಮಾಡುತ್ತಿರುತ್ತವೆ ಎಂಬುದನ್ನು ಕಂಡುಕೊಳ್ಳಿ.

ಹಾಂ! ಹೀಗೆ ಕನ್ನಡಕ ಧರಿಸುವುದು ನಾನೊಬ್ಬನೇ ಅಲ್ಲ ಸ್ವಾಮೀ, ಹಾಲಿವುಡ್ ನಟರುಗಳಿಂದ ಹಿಡಿದು, ದಿವಂಗತರಾಗಿರುವ ಎಂಜಿಆರ್, ಗುಂಡೂರಾವ್ ಅಲ್ಲದೆ ಇನ್ನೂ ಚಿರಂಜೀವಿಗಳಾಗಿರುವ ಕರುಣಾನಿಧಿ, ಬಾಲಿವುಡ್ ನಟರಾದಿಯಾಗಿ ಅನೇಕರು ಸಾರ್ವತ್ರಿಕವಾಗಿರುವಾಗಿ ತಂಪು ಕನ್ನಡಕ ಧರಿಸುತ್ತಾರೆ.
ಗಂಡಸರು ಯಾಕೆ ಹೀಗೆ ಸನ್ ಗ್ಲಾಸ್ ಹಾಕಿಕೊಳ್ಳುತ್ತಾರೆ ಎಂಬುದಕ್ಕೆ ಚಿತ್ರ ಮುಖೇನ ಉತ್ತರಿಸಿದ್ದೇನೆ. ಹೆಂಗಸರು ಯಾಕೆ ಸನ್ ಗ್ಲಾಸ್ ಧರಿಸುತ್ತಾರೆಂಬುದುರ ಬಗ್ಗೆ ನೀವು ಹೇಳಬೇಕು!