ಬಸವ ಜಯಂತಿ ೨೦೨೪

 ಅನ್ಯಾಯದ ವಿರುದ್ಧ ಜಗತ್ತಿನಾದ್ಯಂತ ಜನಸಾಮಾನ್ಯರು ಒಂದು ಕಾಲಘಟ್ಟದಲ್ಲಿ ಸಂಘಟಿತರಾಗಿ ಎದ್ದು ನಿಂತದ್ದು ಧರ್ಮದ ಛಾಯೆಯಲ್ಲಿ! ಭಾರತ ಜನನಿಯ ಭಕ್ತಿಪಂಥವೂ, ತನುಜಾತೆ ಕರ್ನಾಟಕದ ವಚನ ಚಳುವಳಿಯೂ ಇದಕ್ಕೆ ಹೊರತಾಗಿರಲಿಲ್ಲ.

ಹಾಗಾಗಿಯೇ ಕಾರ್ಲ್ ಮಾರ್ಕ್ಸ್ ಹೇಳಿದ್ದು: "ಧರ್ಮ ಎಂಬುದು ಸಾಮಾನ್ಯರ ಅಫೀಮು. ಅದು ಭರವಸೆಯೇ ಇಲ್ಲದವರ ಭರವಸೆಯಾಗಿ, ಬೇಗುದಿಗರ ಬೇಗುದಿಯಾಗಿ, ಆತ್ಮಚೈತನ್ಯವಿಲ್ಲದವರ ಆತ್ಮವಾಗಿದೆ;

ಅದನ್ನು ನೀವು ಬದಲಿಸಬೇಕೆಂದು ಆಲೋಚಿಸುವುದಾದರೆ ಅದರ ಪರ್ಯಾಯವು ಸಹ ಜನರಿಗೆ ಧರ್ಮ ನೀಡಿರುವ ಭರವಸೆಯನ್ನೇ ನೀಡಬೇಕಾಗುತ್ತದೆ."

ಇಲ್ಲಿ ಇಲ್ಲದ ಆದರೆ ಇರಲೇಬೇಕಾದ ಎಚ್ಚರಿಕೆಯನ್ನು ನಾವು ಇತಿಹಾಸದಿಂದ ಕಲಿಯಬಹುದು! ಅದು, ಜನರ ಅಂತಹ ಭರವಸೆಗೆ ಕಿಂಚಿತ್ ಮುಕ್ಕಾದರೂ....ದಾರುಣ ಸೋಲು ಕಟ್ಟಿಟ್ಟ ಬುತ್ತಿ, ಎಂಬುದು.

ಇಂತಹ ಯಾವ ವಚನ ಚಳುವಳಿಯ ಪೂರ್ವಾರ್ಧದಲ್ಲಿ ಹಿರಿಯರನ್ನು, ಪುರಾತನರನ್ನು ವಚನಕಾರರು ಹಾಡಿ ಹೊಗಳಿದ್ದರೋ ಅದೇ ಹಿರಿಯರನ್ನು, ಪುರಾತನರನ್ನು ವಚನ ಚಳುವಳಿಯ ಉತ್ತರಾರ್ಧದಲ್ಲಿ ಭ್ರಮನಿರಸನಗೊಂಡು ಹೀನಾಯವಾಗಿ ಹೀಯಾಳಿಸಿದ್ದಾರೆ. ಅದೇ ರೀತಿ ಕಲ್ಯಾಣ ಕ್ರಾಂತಿಯ ನಂತರ ಕೂಡ ಬಸವಭ್ರಮನಿರಸನಗೊಂಡು ಮಾಚಿದೇವನಲ್ಲದೆ ಇನ್ನೂ ಹಲವು ವಚನಕಾರರು ಇಂತಹ ಕೆಲವು ವಚನಗಳನ್ನು ರಚಿಸಿದ್ದಾರೆ.

ಬಸವಾಧಿಪತ್ಯದಿಂದ ಬಸವಧಃಪತನದ ಸೋಪಾನುಪಾತವನ್ನು ಮಾಚಿದೇವನ ಈ ಎರಡು ವಚನಗಳು ಕಟ್ಟಿಕೊಡುತ್ತವೆ.

೧. 

ಅರಿದಲ್ಲದೆ ಗುರುವ ಕಾಣಬಾರದು.

ಅರಿದಲ್ಲದೆ ಲಿಂಗವ ಕಾಣಬಾರದು.

ಅರಿದಲ್ಲದೆ ಜಂಗಮವ ಕಾಣಬಾರದು.

ಇಂತೀ ತ್ರಿವಿಧವು, ಬಸವಣ್ಣನ ಕೃಪೆಯಿಂದ

ಎನಗೆ ಸ್ವಾಯತವಾಯಿತ್ತಾಗಿ,

ಭಿನ್ನವಿಲ್ಲ ಕಾಣಾ ಕಲಿದೇವರದೇವ.

೨.

ಹಣದಾಸೆಗೆ ಹದಿನೆಂಟುಜಾತಿಯ ಭಕ್ತರ ಮಾಡಿ,

ಲಿಂಗವ ಕೊಟ್ಟು ಲಿಂಗದ್ರೋಹಿಯಾದ.

ಪ್ರಸಾದವ ನೀಡಿ ಪ್ರಸಾದದ್ರೋಹಿಯಾದ.

ಪಂಚಾಕ್ಷರಿಯ ಹೇಳಿ ಪಂಚಮಹಾಪಾತಕಕ್ಕೊಳಗಾದ.

ಇಂತೀ ಹೊನ್ನ ಹಂದಿಯ ಕೊಂದು,

ಬಿನ್ನಾಣದಲ್ಲಿ ಕಡಿದುತಿಂಬ ಕುನ್ನಿಗಳನೇನೆಂಬೆನಯ್ಯಾ,

ಕಲಿದೇವರದೇವ.

"ದ್ರೋಹಿಯಾದ", "ಮಹಾಪಾತಕಕ್ಕೊಳಗಾದ" ಎಂಬ ಏಕವಚನದ ಪದಗಳು ಇಲ್ಲಿ ಒಬ್ಬನೇ ಒಬ್ಬ ವ್ಯಕ್ತಿಯ ಕುರಿತಾಗಿವೆ. 

ಕಾರ್ಲ್ ಮಾರ್ಕ್ಸ್ ಮಾತಿನ ಒಂದು ವಾಕ್ಯವನ್ನು ಮಾತ್ರ ಹೆಕ್ಕಿದ ಬುದ್ಧಿವಂತರಂತೆಯೇ ವಚನಗಳು ಸಹ ಅವರವರ ಅನುಕೂಲಕ್ಕೆ ಹೆಕ್ಕಲ್ಪಟ್ಟಿವೆ. 

ಇತಿ ಬಸವರಾಜಕಾರಣ ಸಂಪ್ರತಿ!

ರಜೆಯ ಮಜೆಯ ಶುಭಾಶಯಗಳು!

- ರವಿ ಹಂಜ್ 

ಕಮ್ಯೂನಿಸ್ಟ್ ನರಮೇಧ

 ಕಾರ್ಮಿಕ ಶಕ್ತಿಯನ್ನು ಬಳಸಿಕೊಂಡು ಅಧಿಕಾರ ಪಡೆದು ಸ್ಟಾಲಿನ್ ಸೃಷ್ಟಿಸಿದ ಹಾಲೋಡಮಾರ್ ಅಂತಹ ನರಮೇಧದಲ್ಲಿ ಸತ್ತವರು ಮೂರೂವರೆ ಕೋಟಿಯಿಂದ ಐದು ಕೋಟಿ. ಹಸಿವಿನಿಂದ ಜನ ಒಬ್ಬರನೊಬ್ಬರು ಕೊಂದು ತಿಂದ ನರಭಕ್ಷಕ ಘಟನೆಗಳ ಉದಾಹರಣೆಗಳು ಸಾಕಷ್ಟಿವೆ.


ಕಮ್ಯೂನಿಸ್ಟ್ ಮಾವೋ ನಡೆಸಿದ ಸಂಸ್ಕೃತಿ ಕ್ರಾಂತಿಯಲ್ಲಿ ನಾಲ್ಕೂವರೆ ಕೋಟಿಯಿಂದ ಏಳುವರೆ ಕೋಟಿ ಅಸಹಜ ಸಾವುಗಳಾಗಿವೆ.


ಅದೇ ಹಿಟ್ಲರ್ ನಡೆಸಿದ ನರಮೇಧದಲ್ಲಿ ಸತ್ತವರು ಅರವತ್ತು ಲಕ್ಷ. ಜರ್ಮನ್ನರು ಈಗಲೂ ತಾವು ಜರ್ಮನ್ ಆಗಿ ಹಿಟ್ಲರ್ ನರಮೇಧವನ್ನು ತಮ್ಮ ಪಾಪವೆಂದು ತಲೆ ಮೇಲೆ ಹೊತ್ತು ಪಾಪಪ್ರಜ್ಞೆ ತೋರುತ್ತಾರೆ.


ಆದರೆ ಫ್ಯಾಸಿಸ್ಟ್ ಗೋಬೆಲ್ಸ್ ನರಮೇಧಿ ಸ್ಟಾಲಿನ್, ಲೆನಿನ್ ಹೆಸರನ್ನು ತಮ್ಮ ಮಕ್ಕಳಿಗೆ ಹೆಸರಿಟ್ಟ ಭಾರತೀಯ ಕಮ್ಯೂನಿಸ್ಟರು ಇಂದು ಇಟ್ಟಿಗೆ ಹೊರುವ, ಗುದ್ದಲಿ ಹಿಡಿದ, ಸುತ್ತಿಗೆ ಎತ್ತಿದ ಕಾರ್ಮಿಕರ ಫೋಟೋ ಹಾಕಿ ಕಾಲರ್ ಎತ್ತಿ ಸಂಭ್ರಮಿಸುತ್ತಾರೆಯೇ ಹೊರತು ಎಂದಾದರೂ ಪಾಪಪ್ರಜ್ಞೆ ತೋರಿದ್ದಾರೆಯೇ?!?!


ಆಷಾಢಭೂತಿ ಕಮ್ಯೂನಿಸ್ಟರನ್ನು ಎಲ್ಲಿಡಬೇಕೋ ಅಲ್ಲಿಟ್ಟು ಕಾಯಕದಿನವನ್ನು ಆಚರಿಸೋಣ.


#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ