ಕೊಟ್ಟದ್ದು ಸ್ವಾತಂತ್ರ್ಯ, ಗಳಿಸಿದ್ದು ಭ್ರಷ್ಟಾಚಾರ.

ಇತ್ತೀಚೆಗೆ ದಾವಣಗೆರೆಯ ಒಂದು ಸೊಸೈಟಿಯ ಒಬ್ಬ ಸಾಮಾನ್ಯ ಮೇಲ್ವಿಚಾರಕ ’ಸಹಕಾರಿ ಶ್ರೇಷ್ಠ’ ನಾಗಿದ್ದರ ಬಗ್ಗೆ ಬರೆದಿದ್ದೆ. ಸ್ವತಂತ್ರ್ಯ ಭಾರತದಲ್ಲಿ ಇದೇನು ಬೆಚ್ಚಿಬೀಳಿಸುವ ಮಹತ್ವದ ಸಂಗತಿಯೇನಲ್ಲ. ಸ್ವಾತಂತ್ರ್ಯ ಭಾರತದ ಅರವತ್ತು ವರ್ಷಗಳಲ್ಲಿ ಘಟಿಸಿದ ಅನೇಕ ಪವಾಡ ಸದೃಶ ಅಸಂಖ್ಯಾತ ಘಟನೆಗಳಲ್ಲಿ ಭಾರತದ ದಾವಣಗೆರೆಯೆಂಬ ಅಸಂಖ್ಯಾತ ನಗರಗಳಲ್ಲಿ ಸಂಭವಿಸಬಹುದಾದ, ಸಂಭವಿಸಿದ ಸಂಗತಿಗಳಲ್ಲಿ ಅತಿ ಸಾಮಾನ್ಯ ಸಂಗತಿ ಇದಾಗಿತ್ತು.

ಭಾರತದ ಒಬ್ಬ ಬಡ ಮೇಷ್ಟ್ರೊಬ್ಬರ ಮಗನೊಬ್ಬ ಭವ್ಯ ಭಾರತದ ಪ್ರಧಾನಿಯಾಗಿ ಮೆರೆದಿದಿರುವ ಸಾಹಸದ ಇದಿರು, ಯಾಕೋ ಆವರ ದಿನದ ಇಪ್ಪತ್ನಾಲ್ಕು ಗಂಟೆಯೂ ರಾಜಕೀಯವನ್ನೆ ಮಾಡಿ ಮತ್ತಿನ್ಯಾವ ವೃತ್ತಿಯನ್ನು ಮಾಡದೆ ಕೋಟ್ಯಾನುಕೋಟಿ ರೂಪಾಯಿಗಳ ಮೊತ್ತದ ಐಶ್ವರ್ಯ ಶೇಖರಣೆಯ ಸಾಹಸದ ಮುಂದೆ ಅವರ ಭಾರತ ಪ್ರಧಾನಿ ಹುದ್ದೆಯ ಸಂಗತಿ ಅತೀ ಗೌಣವೆನಿಸುತ್ತದೆ. ಅಷ್ಟೆ ಅಲ್ಲದೆ ಈ ಮಾಜಿ ಪ್ರಧಾನಿಯ ಜನಸೇವೆಯ ಕೂಗಿಗೆ ಓಗೊಟ್ಟು ಪೊಲೀಸ್ ಕನಿಷ್ಟಬಿಲ್ಲೆಯಾಗಿದ್ದ, ಉದ್ಯೋಗವಲ್ಲದೆ ಇನ್ಯಾವ ಪೂರ್ವಾಜಿತ ಆಸ್ತಿಯೂ ಇಲ್ಲದ ವ್ಯಕ್ತಿಯೋರ್ವರು ಜನಸೇವೆಯ ಕೈಂಕರ್ಯಕ್ಕೆ ಧುಮುಕಿ ಕೇವಲ ಹದಿನೈದು ವರ್ಷಗಳ ಅವಧಿಯಲ್ಲಿ ತೊಂಬತ್ತು ಕೋಟಿಗಳಿಗೂ ಮೀರಿ ಆಸ್ತಿಯನ್ನು ಗಳಿಸಿರುವುದರ ಮುಂದೆ ದಾವಣಗೆರೆಯಂತಹ ಸಾಮಾನ್ಯ ನಗರದ ಅತೀ ಸಾಮಾನ್ಯ ನ್ಯಾಯಬೆಲೆಯಂಗಡಿಯ ಗುಮಾಸ್ತನ ಅವಾರ್ಡು ಅತಿ ನಿಕೃಷ್ಟವೆನಿಸುತ್ತದೆ. ಅದಾವ ರಾಜಕಾರಣಿಯ ಕಳ್ಳ ವ್ಯವಹಾರಕ್ಕೆ ಸಕ್ಕರೆ, ಗೋಧಿಗಳನ್ನು ಪೂರೈಸಿದ್ದನೋ ಈ ಮಹಾಶಯ ಅದಕ್ಕೆ ಪ್ರತಿಫಲವಾಗಿ ಈ ಅವಾರ್ಡನ್ನು ಕೊಡಮಾಡಿಸಿರಬಹುದು. ಈ ಸುಧೀರ್ಘ ಅರವತ್ತು ವರ್ಷಗಳಲ್ಲಿ ಭಾರತದಲ್ಲಿ ಬೆಳೆದಿರುವ ಭ್ರಷ್ಟಾಚಾರದ ಬೇರುಗಳು ಎಂತಹ ಕೆಳಮಟ್ಟದಲ್ಲಿಯು ಹಬ್ಬಿರುವುದಕ್ಕೆ ಇದೇ ಸಾಕ್ಷಿ. ಇದನ್ನು ಯಾರು ಹೇಗೆ ಬೆಳೆಸಿದರೆಂಬುದು ಸಾರ್ವಜನಿಕ ಸತ್ಯವೇ ಆಗಿದೆ.

ಸಂತೋಷದ ಸಾಮರಸ್ಯದ ಸಂಗತಿಯೆಂದರೆ ಭ್ರಷ್ಟಾಚಾರವು ಪಕ್ಷಾತೀತವಾಗಿ, ಜಾತ್ಯಾತೀತವಾಗಿ, ಜವಾನನಿಂದ ದಿವಾನನವರೆಗೂ ಯಾವುದೇ ಭೇದಭಾವವಿಲ್ಲದೆ ಭಾರತದ ಸಾಮರಸ್ಯವನ್ನು ಒಂದುಗೂಡಿಸಿದೆ. ಉದಾಹರಣೆಗೆ ಈ ಮುಂಚೆ ತರ್ಕಿಸಿದ ಜಾತ್ಯಾತೀತ ಪೊಲೀಸ್ ಕನಿಷ್ಟಬಿಲ್ಲೆಯಲ್ಲದೆ ಭಾರತದ ಮೊದಲ ಪ್ರಧಾನಿಯ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಪಟ್ಟದ ಪ್ರಬಲ ಆಕಾಂಕ್ಷಿಯಾದ, ಒಂದಾನೊಂದು ಕಾಲದಲ್ಲಿ (ಛೇ, ಛೇ, ಒಂದಾನೊಂದು ಕಾಲವೆನ್ನಲು ಇದೇನು ಶತಮಾನದಷ್ಟು ಹಳೆಯ ಸಂಗತಿಯೇನಲ್ಲ) ರಾಜಕೀಯ ನಾಯಕರುಗಳ ಸಭೆಗೆ ಕರ್ನಾಟಕದ ರಾಜಧಾನಿಯಲ್ಲಿ ಜನರನ್ನು ಸೇರಿಸುತ್ತಿದ್ದ ಪುಂಡನೋರ್ವನೂ ಅಷ್ಟೇ ಜಾತ್ಯಾತೀತವಾಗಿ, ಪಕ್ಷಾತೀತವಾಗಿ ಸಮಾನಮನಸ್ಕನಾಗಿ ಬೆಳೆದಿದ್ದಾನೆ.

ಇದೆಲ್ಲವನ್ನೂ ಪ್ರಶ್ನಿಸದೆ ಮತದಾರನೂ ತನ್ನ ಸೀರೆ, ಪಂಚೆ, ಸಾರಾಯಿ (ಅಲ್ಲಲ್ಲ, ಇನ್ನು ಮೇಲೆ ಬರೀ ವರ್ಣಮಯ ಸೋಮರಸ) ಇತ್ಯಾದಿ ಅನುಕೂಲಗಳಿಗನುಗುಣವಾಗಿ ಜಾತ್ಯಾತೀತ ಮತ್ತು ಪಕ್ಷಾತೀತನಾಗಿ ಸಮನ್ವಯವನ್ನು ಮೆರೆಯುತ್ತ ವೈವಿಧ್ಯತೆಯಲ್ಲಿ ಏಕತೆಯನ್ನು ಮೆರೆದಿದ್ದಾನೆ.

ಒಟ್ಟಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದು ೬೦ ವರ್ಷಗಳಾದವೋ ಇಲ್ಲವೋ ಭ್ರಷ್ಟಾಚಾರವಂತೂ ಷಷ್ಟ್ಯಾಭ್ದಿಯನ್ನು ಭವ್ಯವಾಗಿ ನಿತ್ಯವೂ ಆಚರಿಸಿಕೊಳ್ಳುತ್ತಿದೆ.

ವಿನೋದ:

ಇತ್ತೀಚೆಗೆ ಸಚಿವ ರೇವಣ್ಣನವರು ತಮ್ಮ ಹಾಸನದಲ್ಲಿ ಸರ್ಕಾರಿ ಅಧಿಕಾರಿಗಳ ಸಭೆಯನ್ನು ನಡೆಸುತ್ತಿದ್ದಾಗ ಅಲ್ಲಿನ ಸಬ್ ರಿಜಿಸ್ಟ್ರಾರ್ ಓರ್ವರು ಯಾವುದೋ ವಿಷಯಕ್ಕೆ ನಮ್ಮ ಹಾಸನ ಜಿಲ್ಲೆಯಲ್ಲಿ ವರ್ಷದಲ್ಲಿ ಒಂದು ಲಕ್ಷಕ್ಕೂ ಮೀರಿದ ಜನರು ಇಮಾನ (ಚಟ್ಟ) ಯಾನ ಕೈಗೊಳ್ಳುತ್ತಾರೆಂದು ಹಾಸ್ಯವಾಗಿ ಹೇಳಿದರು. ಅದನ್ನು ಕೇಳಿದ ಸಚಿವರು ’ಅರೆ, ಈ ವಿಷಯವನ್ನು ಇಷ್ಟು ದಿನ ನನ್ನ ಗಮನಕ್ಕೆ ಏಕೆ ತರಲಿಲ್ಲ’ ವೆಂದು ಕೂಡಲೆ ತಮ್ಮ ಮುಖ್ಯಮಂತ್ರಿ ಸಹೋದರರ ಕೈಯಲ್ಲಿ ಹೊಚ್ಚ ಹೊಸ ಸಾವಿರಾರು ಕೋಟಿ ರೂಪಾಯಿಗಳ ವೆಚ್ಚದ ವಿಮಾನ ನಿಲ್ದಾಣಕ್ಕೆ ಶಂಕುಸ್ಥಾಪನೆಯನ್ನು ನೆರವೇರಿಸಿಬಿಟ್ಟರು. ಪಾಪ, ಈಗ ಬಡ ಬೋರೇಗೌಡರು ತಮ್ಮ ಅಂತಿಮಯಾತ್ರೆಯ ಇಮಾನಯಾನ ಮಾಡುವ ಮುನ್ನ ತಮ್ಮ ಜಮೀನುಗಳನ್ನು ಮಾರಿಕೊಂಡು ಒಮ್ಮೆ ರೇವಣ್ಣನ ವಿಮಾನನಿಲ್ದಾಣವನ್ನು ಉಪಯೋಗಿಸಲು ವಿಮಾನಯಾನವನ್ನು ಮಾಡಬೇಕಾದ ಪರಿಸ್ಥಿತಿ ಬಂದೊದಗಲಿದೆ.
ರವಿ ಹಂಜ್

No comments: