ಲಂಕೇಶ್ ಪತ್ರಿಕೆಯ "ಸಾಫ್ಟ್ ವೇರ್ ಮರ್ಡರ್!" ಒಂದು ಅವಲೋಕನ.

ಹೀಗೊಂದು ಶೀರ್ಷಿಕೆಯ ವರದಿಯನ್ನು "ಲಂಕೇಶ್ ಪತ್ರಿಕೆ"ಯಲ್ಲಿ ಓದಿದೆ. ಇಲ್ಲಿದೆ ಅದರ ಕೊಂಡಿ, http://www.ourkarnataka.com/lankesh/smurder1.htm. ಈ ವರದಿಯಲ್ಲಿ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಒಂದು ಸಾಫ್ಟ್ ವೇರ್ ಎಂಜಿನಿಯರ್ ಜೋಡಿಯ ಕೊಲೆ ಮತ್ತು ಆತ್ಮಹತ್ಯೆಯನ್ನು ವಿಶ್ಲೇಷಿಸಲಾಗಿದೆ. ಚುಟುಕಾಗಿ ಹೇಳುವುದಾದರೆ ಇದೊಂದು ಯುವಜೋಡಿ ಪ್ರೇಮಪಾಶದಲ್ಲಿ ಬಿದ್ದು, ನಂತರ ಪರಸ್ಪರ ಆಸಕ್ತಿ ಕಳೆದುಕೊಂಡೋ ಇನ್ನೇನೋ ಕಾರಣಾಂತರವಾಗಿ, ಗಂಡ ಹೆಂಡತಿಯ ಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡುದುದನ್ನು ಹಿಡಿದು ಐ.ಟಿ. ರಂಗವನ್ನು ವಿಶ್ಲೇಷಿಸುದುದೇ ಆಗಿದೆ.

ಈ ವರದಿಗಾರರು ಐ.ಟಿ. ರಂಗವನ್ನು ಒಂದು ಸಾಮಾಜಿಕ ಪಿಡುಗೆನ್ನುವಂತೆ ಚಿತ್ರಿಸುತ್ತ ಇದು ಇಂದಿನ ಯುವಜನಾಂಗಕ್ಕೆ ತಟ್ಟಿದ ಶಾಪವೆಂದೇ ಪ್ರತಿಪಾದಿಸುತ್ತಾರೆ. ಇವರ ಪ್ರಕಾರ ಐ.ಟಿ. ರಂಗದ ಪಾಳಿಯ ಕೆಲಸ, ಕೆಲಸದ ಅವಧಿ, ಈ ಕೆಲಸಗಾರರ ಮೇಲೆ ತೀವ್ರ ಒತ್ತಡವನ್ನು ತಂದು ಅವರ ಆರೋಗ್ಯ, ಅದರಲ್ಲೂ "ಹೆಲ್ತ್ ಆಫ್ ಸೆಕ್ಸ್" ಕೆಟ್ಟುಹೋಗುತ್ತದಂತೆ. ಅಲ್ಲಾ ನಮ್ಮಲ್ಲಿ ಅನಾದಿಕಾಲದಿಂದಲೂ ರಾತ್ರಿ ಪಾಳಿಯ ಕೆಲಸಗಳಿರಲಿಲ್ಲವೇ? ನನಗೆ ತಿಳಿದ ಮಟ್ಟಿಗೆ ಭಾರತದಲ್ಲಿನ ಪ್ರತಿಯೊಂದು ತಯಾರಿಕಾ ಘಟಕದ ಫ್ಯಾಕ್ಟರಿಗಳು, ದಿನಪತ್ರಿಕೆ ಸಿಬ್ಬಂದಿ, ಪೊಲೀಸ್ ಇನ್ನೂ ಅನೇಕ ರಂಗಗಳಲ್ಲಿ ರಾತ್ರಿ ಪಾಳಿಯಿದೆ. ಇದೇನು ಐ.ಟಿ. ರಂಗ ಹೊಸದಾಗಿ ಭಾರತಕ್ಕೆ ತಂದಿದ್ದಲ್ಲ ಅಲ್ಲವೇ?

ಈ ವರದಿಯ ಪ್ರಕಾರ ಸತತವಾಗಿ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವುದರಿಂದ ನಪುಂಸಕತ್ವ ಬರುತ್ತದೆಂಬುದು ಸಾಬೀತಾಗಿದೆಯೆಂದಿದ್ದಾರೆ. ಸಾಬೀತಾಗಿರುವುದು ಲ್ಯಾಪ್ ಟಾಪ್ ಅನ್ನು ತೊಡೆಯ ಮೇಲಿಟ್ಟುಕೊಂಡು ಬಹುಕಾಲ ಕೆಲಸ ಮಾಡುವುದು ವೀರ್ಯಾಣುಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ ಎಂಬುದು. ನನಗೆ ತಿಳಿದ ಮಟ್ಟಿಗೆ ಈ ಆಫೀಸುಗಳಲ್ಲಿ ಡೆಸ್ಕ್ ಟಾಪ್ ಗಳಿರುತ್ತವೆ. ಒಂದು ವೇಳೆ ಲ್ಯಾಪ್ ಟಾಪ್ ಗಳನ್ನೇ ಕೊಟ್ಟಿದ್ದರೂ ಅವುಗಳನ್ನು ಕ್ಯೂಬಿಕಲ್ಲುಗಳ ಡೆಸ್ಕ್ ಮೇಲಿಟ್ಟುಕೊಳ್ಳದೇ ಅದ್ಯಾವ ಮೂರ್ಖ ತೊಡೆಯ ಮೇಲೆ ಇಟ್ಟುಕೊಳ್ಳುತ್ತಾನೋ ಅದರಲ್ಲೂ ಈ ವರದಿಗಾರರು ತಿಳಿಸಿರುವಂತೆ ಪಕ್ಕದ ಸಹೋದ್ಯೋಗೀ ಲಲನೆ ತೊಡೆಯ ಮೇಲಿರುವಾಗ!

ಇನ್ನು ಈ ವರದಿಯ ಪ್ರಕಾರ ಸಾಫ್ಟ್ ವೇರ್ ಕಂಪೆನಿಗಳಲ್ಲಿನ ಸಿಬ್ಬಂದಿಗಳು ತಮ್ಮ ಸಹೋದ್ಯೋಗಿಗಳೊಂದಿಗೆ ತಮ್ಮತಮ್ಮ ಕ್ಯೂಬಿಕಲ್ಲುಗಳಲ್ಲೇ ಕಾಮಿಸುತ್ತಾರಂತೆ! ಅದಕ್ಕೆ ಪೂರಕವಾಗಿ ಈ ಕಂಪೆನಿಗಳು ಟಾಯ್ಲೆಟ್ಟುಗಳಲ್ಲಿ ಕಾಂಡೋಂ ಇಟ್ಟು ಸಹಕರಿಸುತ್ತಾರಂತೆ. ಅಲ್ಲಾ, ನಾನು ಕೂಡ ಕಳೆದ ಹದಿನಾರು ವರ್ಷಗಳಿಂದ ಈ ರಂಗದಲ್ಲಿದ್ದೇನೆ, ತಕ್ಕಷ್ಟು ಮಟ್ಟಿಗೆ ಸ್ಪುರದ್ರೂಪಿಯೂ, ಹುಡುಗಿಯರನ್ನು ಸೆಳೆಯಬಲ್ಲ ಚತುರನೂ, ತುಂಟನೂ ಆಗಿ ಕನ್ನಡ ಸಿನೆಮಾಗಳ ನಾಯಕರುಗಳಿಗಿಂತ ಒಂದು ಕೈ ಮೇಲಾಗಿಯೇ ಇದ್ದೇನೆ. ಆದರೂ ನನಗಾವ ಸಹೋದ್ಯೋಗಿ ಈ ರೀತಿಯಾಗಿ ಆಟವಾಡಲು ಸಿಕ್ಕಿಲ್ಲ! ಅದನ್ನು ಬಿಡಿ, ನಾನು ಕೂಡ ಸಾಕಷ್ಟು ಕಂಪೆನಿಗಳನ್ನು ಬದಲಾಯಿಸಿದ್ದೇನೆ. ಆದರೆ ಇದುವರೆಗೂ ಒಂದೂ ಕಂಪೆನಿಯ ಟಾಯ್ಲೆಟ್ಟಿನಲ್ಲೂ ಕಾಂಡೋಂ ನೋಡಿಲ್ಲ.

ಐ.ಟಿ. ಕಂಪೆನಿಗಳು ಏರ್ಪಡಿಸುವ ಕಂಪೆನಿ ಪಾರ್ಟಿಗಳನ್ನು ಕಾಮಕೂಟಗಳಾಗಿಯೂ, ವೃತ್ತಿಪರ ವ್ಯಕ್ತಿತ್ವ ವಿಕಾಸನಾ ಶಿಬಿರದಂತಹ ಟ್ರೈನಿಂಗ್ ಗಳನ್ನು (ವರ್ಕ್ / ಲೈಫ್ ಬ್ಯಾಲೆನ್ಸ್), ಈ ನೌಕರಿಯು ತರುವ ಮಾನಸಿಕ ಒತ್ತಡ/ಪ್ರತಿಕೂಲಗಳಿಗೆ ಅಡ್ಜೆಸ್ಟ್ ಆಗುವ ಮಾನಸಿಕ ಕೌನ್ಸೆಲಿಂಗ್ ಎಂದೂ ಅಭಿಪ್ರಾಯಿಸಿ ವರದಿಸಿದ್ದಾರೆ. ಆಲ್ಲಾ ಈ ರೀತಿಯ ಫ್ಯಾಮಿಲಿ ಕೌನ್ಸೆಲಿಂಗ್, ಸೈಕಿಯಾಟ್ರಿ ಕೌನ್ಸೆಲಿಂಗ್ ಗಳಂತಹ ಸೌಲಭ್ಯಗಳೂ ಈ ಹಿಂದೆಯೇ ಅನೇಕ ಫ್ಯಾಕ್ಟರಿಗಳಲ್ಲಿ ಇದ್ದವು. ಈ ಸೌಲಭ್ಯಗಳಲ್ಲಿ ಕೆಲವನ್ನು ಕಾರ್ಮಿಕ ಕಲ್ಯಾಣ ಇಲಾಖೆ ನಿರ್ದೇಶಿಸಿದರೆ, ಕೆಲವನ್ನು ಆಯಾಯ ಕಂಪೆನಿಗಳೇ ಮುಂದಾಗಿ ಒದಗಿಸುತ್ತವೆ. ಇನ್ನು ಈ ವರದಿಗಾರರು ಹೇಳುವಂತಹ ಆಧುನಿಕ ವಾತ್ಸಾಯನ ಸೂತ್ರಗಳನ್ನು ಕೇವಲ ಟೆಕ್ಕಿಗಳೇ ಅಲ್ಲದೆ ಬೆಂಗಳೂರಿನ ಎಲ್ಲಾ ರಂಗದ ಯುವಪೀಳಿಗೆ ಪ್ರಯೋಗಿಸುತ್ತಿದೆ. ಈ ರೀತಿಯ ಪ್ರಯೋಗಗಳಲ್ಲಿ ಹದಿಹರೆಯದ ಯುವಜನಾಂಗವನ್ನು ಬಿಡಿ, ಹೊನ್ನಾಳಿಯ ಮಾಜಿ ಶಾಸಕ ರೇಣುಕಾಚಾರ್ಯರು ಕನ್ನಡ ಸೀರಿಯಲ್ ಮಾದರಿ ಮಾಡಿ ತೋರಿಸಿದ್ದಾರೆ!

ಇನ್ನೂ ಐ.ಟಿ ರಂಗದವರು ವಾಸ್ತವಿಕವಾಗಿ ಈ ರೀತಿ ಇರುವರೇ ಎಂಬುದನ್ನು ನಾವುಗಳು ಅವಲೋಕಿಸೋಣ. ನಾನು ನೋಡಿದ ಹಾಗೆ ಬಹುಪಾಲು ಸಾಫ್ಟ್ ವೇರ್ ಇಂಜಿನಯರರುಗಳು ಗಾಂಧಿಯಂಥವರು! ಕೆಲ ಸಾಫ್ಪ್ ವೇರ್ ಇಂಜಿನಿಯರರುಗಳು ತಂಡಗಳನ್ನು ಕಟ್ಟಿಕೊಂಡು ಪರಿಸರ ಸಂರಕ್ಷಣೆ, ಜನ ಜಾಗೃತಿಯಂಥಹ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹಾಗಾಗಿಯೇ ನೀವು ಒಮ್ಮೊಮ್ಮೆ ಈ ಐ.ಟಿ. ಜನ ಮುತ್ತೆತ್ತಿಯ ಪರಿಸರವನ್ನು ಗುಡಿಸಿದ್ದು, ಅಲಸೂರು ಕೆರೆಯನ್ನು ಶುದ್ಧಿಗೊಳಿಸಿದ್ದು, ಮಡಿವಾಳ ಕೆರೆಯ ಪರಿಸರವನ್ನು ಗುಡಿಸಿದ್ದು ಮುಂತಾದ ಸುದ್ದಿಗಳನ್ನು ಓದುತ್ತಿರುತ್ತೀರಿ. ಅದರಲ್ಲೂ ಕನ್ನಡಿಗ ಐ.ಟಿ. ಮಂದಿಯಂತೂ ಕನ್ನಡ ಹೋರಾಟಗಳಿಗೆ ಪರೋಕ್ಷವಾಗಿ ಬ್ಲಾಗುಗಳು, ಕನ್ನಡ ಇಂಟರ್ ನೆಟ್ ಸೈಟುಗಳು, ಉಚಿತ ತಾಂತ್ರಿಕ ನೆರವು............ಇನ್ನೂ ಬೆಳೆಯುತ್ತದೆ ಲಿಸ್ಟು. ಅದರಲ್ಲೂ "ಬರಹ" ಕನ್ನಡ ತಂತ್ರಾಂಶವನ್ನು ರಚಿಸಿ, ಉಚಿತವಾಗಿ ಹಂಚುತ್ತಿರುವ ಶೇಷಾದ್ರಿ ವಾಸು ಅವರನ್ನು ಗುರುತಿಸಿ ಎಂದಾದರೂ ಪತ್ರಕರ್ತರಾಗಲೀ, ರಾಜಕಾರಣಿಗಳಾಗಲೀ ಸನ್ಮಾನಿಸಿದ್ದಾರೆಯೇ? ಕನ್ನಡದಲ್ಲಿರುವ ಸುಮಾರು ಆರುನೂರರಷ್ಟು ಬ್ಲಾಗುಗಳಲ್ಲಿ ಪ್ರಬುದ್ಧ ಕನ್ನಡ ಅರಳುತ್ತಿದೆ. ನನ್ನ ಅನಿಸಿಕೆಯ ಪ್ರಕಾರ ಇದರಲ್ಲಿ ೫೦% ಐ.ಟಿ.ಗಳೇ ಎಂದುಕೊಳ್ಳುತ್ತೇನೆ. ಮುಂದೆ ಬಂದರೆ ಹಾಯದ, ಹಿಂದೆ ಬಂದರೆ ಒದೆಯದ ಈ ಸುಸಂಸ್ಕೃತ ಐ.ಟಿ. ಗಳ ನೆಪವೊಡ್ಡಿ, ಅದರಲ್ಲೂ ಬೆಂಗಳೂರಿನ ಜನಸಂಖ್ಯೆಯ ಕೇವಲ ೪% ಇರುವ ಈ ಐ.ಟಿ. ಯವರ ನೆಪಮಾಡಿ ಬೆಂಗಳೂರನ್ನು ತುಟ್ಟಿಯಾಗಿಸಿದ್ದು....ಇದಕ್ಕೆಲ್ಲಾ ಕಾರಣರಾರು?

ಒಟ್ಟಾರೆ, ಪ್ರಾಮಾಣಿಕ ಸಂಪಾದನೆಯ ಈ ಐ.ಟಿ.ಯವರನ್ನು ಈ ವರದಿ ಸಂಪೂರ್ಣವಾಗಿ ನೀತಿಗೆಟ್ಟು ಅಧೋಗತಿಯಲ್ಲಿರುವ ಯಾವುದೋ ಇನ್ನೊಂದು ಪ್ರಾಣಿ ಪ್ರಭೇಧದಂತೆ ಅರ್ಥೈಸಲಾಗಿದೆ.

ಎಲ್ಲಾ ರಂಗಗಳಲ್ಲಿರುವಂತೆಯೇ ಇಲ್ಲೂ ಕೆಲವು ಹೊರತುಗಳಿರಬಹುದು. ಬೆಂಗಳೂರಿನ ಅಧೋಗತಿಗೆ ಅವುಗಳೇ ಕಾರಣವಲ್ಲ. ಸಾಮಾನ್ಯ ಜನತೆಗೆ ಇತರೆ ಉದ್ಯೋಗಗಳಷ್ಟು ಸರಳವಾಗಿ ಈ ಸಾಫ್ಟ್ ವೇರ್ ಪ್ರೋಗ್ರ್ಯಾಮ್ ಉದ್ಯೋಗ ಎಂಬುದು ಅರ್ಥವಾಗದುದೋ, ಅಥವಾ ಅದನ್ನು ಅರ್ಥೈಸಲು ಕ್ಲಿಷ್ಟವೆನಿಸುವುದೋ ಒಟ್ಟಾರೆ ಅದೊಂದು ಕುತೂಹಲಕರ ಉದ್ಯೋಗವೆನಿಸಿದೆ. ಆ ಒಂದು ರೀತಿಯ ಕುತೂಹಲವನ್ನು, ಈ ರೀತಿಯ ಶೋಷಕ ಲೇಖನಗಳು ರೋಚಕಗೊಳಿಸುತ್ತಿವೆ.

ಹಾಗಂತ ಈ ಐ.ಟಿ.ಮಂದಿಯಿಂದ ಏನೂ ಅನರ್ಥವೇ ಆಗಿಲ್ಲವೇ? ಆಗಿದೆ. ಕಾಫಿಗೆ ರೂ.೨೫, ದೋಸೆಗೆ ರೂ.೧೦೦, ಕೊಡಗಿನ ಮನೆಗಳಲ್ಲಿ ಉಳಿಯಲು ಪಂಚತಾರಾ ಹೋಟೇಲುಗಳ ದರ ಕೊಡುವುದು........ಒಟ್ಟಾರೆ ಬೆಲೆಯೇರಿಕೆಗೆ ಇವರ ಕೊಡುಗೆ ಅಲ್ಪಮಟ್ಟಿಗೆ ಇದ್ದರೂ ಅದು ಕೂಡಾ ಹೋರಾಟ ಗುಣವಿಲ್ಲದ ಇವರುಗಳ ಶೋಷಣೆಯೇ ಆಗಿದೆ. ಬೆಲೆಯೇರಿಸಿ ಜೇಬು ತುಂಬಿಸಿಕೊಳ್ಳುವ ಹೋಟೆಲ್ ಮಾಲೀಕರು, ಎಸ್ಸೆಸ್ಸೆಲ್ಸಿ ಫೇಲಾಗಿ ಮನೆ ಬ್ರ್‍ಓಕರುಗಳಾಗಿ ಝಣ ಝಣ ರೂಪಾಯಿ ಎಣಿಸುವ ರಿಯಲ್ ಎಸ್ಟೇಟ್ ಧಂಧೆಯವರು, ತಮ್ಮ ತಮ್ಮ ಮನೆಯನ್ನೇ ಹೋಂಸ್ಟೇಗಳಾಗಿಸಿಕೊಂಡಿರುವ ಕಾಫೀ ಬೆಳೆಗಾರರೂ ಪ್ರತಿಯೊಬ್ಬರೂ ಈ ಐ.ಟಿ ಮಂದಿಯನ್ನು ಶೋಷಿಸುವವರೇ.

ಇನ್ನೂ ನೇರ ವಿಚಾರಕ್ಕೆ ಬಂದರೆ ಈ ವರದಿಗಾರರ ಪ್ರಕಾರ ಐ.ಟಿ. ಹಾದರಕ್ಕೆ ಹಾಸುಗಲ್ಲಾಗಿದೆ ಎಂಬುದು. ಅಲ್ಲಾ ಈ ರೀತಿಯ ಕೊಲೆ/ಆತ್ಮಹತ್ಯೆಯ ತ್ರಿಕೋನ ಪ್ರೇಮಗಳ ಕಥೆ ಯಾವ ರಂಗದಲ್ಲಿಲ್ಲ. ಹಾದರ ಶಿಲಾಯುಗದ ಕಾಲದಿಂದ ಇಂದಿನ ಐ.ಟಿ ಯುಗದವರೆಗೆ ಹಾಸುಹೊಕ್ಕಾಗಿದೆ. ನಮ್ಮ ಜನಪದದ ಜೋಕುಮಾರಸ್ವಾಮಿ ಕತೆಯಿಂದ ಇಂದಿನ ಪತಿ, ಪತ್ನಿ ಔರ್ ವೋ ರೀತಿಯ ಸಿನಿಮಾ ಕತೆಗಳವರೆಗೆ, ಆಫ್ರಿಕಾದಿಂದ ಅಮೇರಿಕಾವರೆಗೆ, ಯೇಸು-ಮೇರಿ ಮ್ಯಾಡಲೈನ್ ರಿಂದ, ಗಾಂಧಿ-ಸಾವಿತ್ರಿದೇವಿ (ಫ್ರೆಂಚ್ ಮಹಿಳೆ), ನೆಹರೂ-ಎಡ್ವಿನಾರವರೆಗೆ, ಇಂದಿನ ಎಷ್ಟೋ ಮಠಮಾನ್ಯ / ಚರ್ಚುಗಳವರೆಗೆ ಇದು ಗುಪ್ತಗಾಮಿನಿಯಾಗಿ ಹರಿದಿದೆ. ಎಲ್ಲೆಲ್ಲಿ ಮನುಜರಿರುವರೋ ಅಲ್ಲೆಲ್ಲಾ ಹಾದರ ಹಾಸುಹೊಕ್ಕಾಗಿದೆ.

ಅಷ್ಟೆಲ್ಲಾ ಏಕೆ ಈ ವರದಿಗಾರರ ಪತ್ರಿಕೆಯ ಸಂಸ್ಥಾಪಕರಾದ ಲಂಕೇಶ್ ಕೂಡ ತಮ್ಮ ಪಲ್ಲಂಗ ಪುರಾಣಗಳನ್ನು ಜಿಮ್ ಕಾರ್ಬೆಟ್ ನ ಸಾಹಸಗಳಂತೆ ಹೇಳಿಕೊಂಡಿಲ್ಲವೇ? ಐ.ಟಿ. ಯವರು ಮಾಡಿದರೆ ಅದು ಹಾದರ, ಪತ್ರಕರ್ತರೂ/ಸಾಹಿತಿಗಳೂ ಮಾಡಿದರೆ ಅದು ಅಡ್ವೆಂಚರ್ರೇ? ಇನ್ನು ಲಿವಿಂಗ್ ಟುಗೆದರ್ ವಿಚಾರಕ್ಕೆ ಬರುವುದಾದರೆ ಹಿಂದೆ ಸ್ವಯಂವರಗಳಿರುತ್ತಿದ್ದವು. ಕಾಲ ಬದಲಾದಂತೆ ಜೀವನ ಶೈಲಿ ಬದಲಾಗುತ್ತಾ ನಡೆಯುತ್ತದೆ. ಆದರೆ ಈ ರೀತಿಯ ಲಿವಿಂಗ್ ಟುಗೆದರ್ ಗೆ ಒಗ್ಗುವ ಜೋಡಿಯ ಪ್ರಬುದ್ಧತೆಯ ಕುರಿತು ಚರ್ಚಿಸಿದರೆ ಒಪ್ಪಬಹುದು. ಐ.ಟಿ. ಭಾರತಕ್ಕೆ ಬರುವ ಬಹು ಮುಂಚೆಯೇ "ಪತ್ರಕರ್ತೆ" ಶೋಭಾ ಡೇ ಈ "ಲಿವಿಂಗ್ ಟುಗೆದರ್" ಅಳವಡಿಸಿಕೊಂಡಿದ್ದರು! ಆ ರೀತಿಯ ಪ್ರಬುದ್ಧತೆ ಇರುವುದರಿಂದಲೇ "ಲಂಕೇಶರ ಪುತ್ರಿಯ ಲಿವಿಂಗ್ ಟುಗೆದರ್" ಕುರಿತು ಯಾರೂ ಕೆದಕಿಲ್ಲ. ಅದು ಅವರ ವೈಯುಕ್ತಿಕ ಆಯ್ಕೆ. ಅದನ್ನು ಗೌರವಿಸಬೇಕಾದ್ದು ನಮ್ಮೆಲ್ಲರ ಕರ್ತವ್ಯ. ಹಾಗೆ ಸಮಾಜಮುಖಿಯಾಗಿ ಚರ್ಚಿಸುವುದಾದರೆ ಅದನ್ನು ತಂದವರು ಐ.ಟಿ.ಯವರಲ್ಲ ಎಂಬ ಒಂದೇ ಕಾರಣಕ್ಕಾಗಿ ಈ ವಿಷಯವನ್ನು ಎತ್ತಿದ್ದೇನೆಯೇ ಹೊರತು ಯಾವುದೇ ಅಗೌರವದಿಂದಲ್ಲ.

ಸ್ವೇಚ್ಚಾಚಾರೀ ಕುಟುಂಬ ಹಿನ್ನೆಲೆಯ, ಚಾಕೋಲೇಟ್ ಸಂಸ್ಕೃತಿಯ, ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತದ್ದಕ್ಕೇ ತಾವುಗಳು ವಿದೇಶೀ ತಳಿಗಳೆಂದುಕೊಳ್ಳುವ, ವಿದ್ಯಾಭ್ಯಾಸ ಅರ್ಧದಲ್ಲೇ ಮೊಟಕುಗೊಳಿಸಿ ಹಾಯ್ಡಾ/ಬಾಯ್ಡಾ ಎಂಬ ಸಂಸ್ಕೃತಿಯ ಕೆಲ ಕಾಲ್ ಸೆಂಟರ್ ಉದ್ಯೋಗಿಗಳು ಈ ವರದಿಯಲ್ಲಿ ವರ್ಣಿಸಿದ ಮಾದರಿ (ಕಛೇರಿಯ ಹೊರಗೆ) ಇದ್ದರೂ ಇರಬಹುದು. ಈ ರೀತಿ ಹಿನ್ನೆಲೆಯ ಯುವ ಪೀಳಿಗೆ ಯಾವ ರಂಗದಲ್ಲಿದ್ದರೂ ಈ ರೀತಿಯ ಸಂಗತಿಗಳು ನಡೆಯುತ್ತವೆ ಮತ್ತು ನಡೆಯುವ ಸಾಧ್ಯತೆಗಳಿರುತ್ತವೆ. ಇದು ಇಂದಿನ ಪ್ರತಿಷ್ಟಿತ ಹೈಸ್ಕೂಲ್ / ಕಾಲೇಜುಗಳಿಂದ ಹಿಡಿದು ಹಳ್ಳಿಯ ಶಾಲೆ ಕಾಲೇಜುಗಳಲ್ಲೂ ಆಗುತ್ತಿದೆ. ಪ್ರತಿಷ್ಟಿತರು ಕೆಫೆ ಡೇ / ಸಿನಿಮಾ ಹಾಲ್ ಗಳನ್ನು ಬಳಸಿದರೆ ಗ್ರಾಮೀಣ ಪ್ರದೇಶದವರು ಗುಡ್ಡ ತೋಪುಗಳನ್ನೋ, ಹುಲ್ಲಿನ ಬಣವೆಗಳನ್ನೋ ಆಯ್ದುಕೊಳ್ಳುತ್ತಾರೆ. ಎಲ್ಲೆಲ್ಲಿ ಹದಿಹರೆಯದ ಬೆಂಕಿ / ಬೆಣ್ಣೆಗಳಿರುವವೋ ಅಲ್ಲೆಲ್ಲಾ ತುಪ್ಪ ತಯಾರಾಗುತ್ತಿರುತ್ತದೆ. ಇದು ಐ.ಟಿಯಲ್ಲೇ ಆಗಬೇಕೆಂದೇನೂ ಇಲ್ಲ. ಹಾಗೊಂದು ವೇಳೆ ಇದು ಐ.ಟಿ.ಯಿಂದಲೇ ಎನಿಸಿದರೆ, ನಾವೊಂದು ಸಮೀಕ್ಷೆಯನ್ನು ನಡೆಸಿ, ಅದರಲ್ಲಿ ಐ.ಟಿ. ದಿಗ್ಗಜರಾದ ನಾರಾಯಣಮೂರ್ತಿಯವರಲ್ಲಿ ಮತ್ತು ಬರಹಗಾರರ ದಿಗ್ಗಜರಾದ ಲಂಕೇಶರಲ್ಲಿ ಯಾರು ಈ ರೀತಿಯ ತುಂಟಾಟಗಳನ್ನು ಮಾಡುವಂಥಹ ವ್ಯಕ್ತಿತ್ವದವರೆಂದು ಕೇಳಿದರೆ, ಲಂಕೇಶರಿಗೇ ೧೦೦% ಮತಗಳು ಬೀಳುತ್ತವೆ.

ಕನ್ನಡ ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿ ಒಂದು ವಿಶಿಷ್ಟ ಛಾಯೆಯನ್ನು ಮೂಡಿಸಿ, ಧೀಮಂತ ಪತ್ರಕರ್ತರೆನಿಸಿಕೊಂಡ ಲಂಕೇಶರ ಪತ್ರಿಕೆಯಲ್ಲಿ ಈ ಮಟ್ಟದ ವರದಿಗಳು ಬರುತ್ತಿರುವುದು ದುರಂತವೇ ಸರಿ.

ಅಣಕ:

ಒಬ್ಬ ತನ್ನ ಮನೆಯಲ್ಲಿ ಮನೆಗೆಲಸಕ್ಕೆ ಬರುವ ಹೆಂಗಸೊಬ್ಬಳು ಎರ್‍ಅಡು ಸಾವಿರ ಸಾಲವನ್ನು ಕೇಳಿದಾಗ "ತಾನು ಅವಳು ಮಾಡುವ ಕೆಲಸಕ್ಕೆ ತಿಂಗಳು ತಿಂಗಳು ಸಮಯಕ್ಕೆ ಸರಿಯಾಗಿ ಸಂಬಳವನ್ನು ಮಾತ್ರ ಕೊಡುವುದಾಗಿಯೂ ಸಾಲವನ್ನು ಕೊಡುವುದಿಲ್ಲ" ಎಂದು ಹೇಳಿದನು. ಇದರಿಂದ ಕುಪಿತಗೊಂಡ ಆ ಹೆಂಗಸು ತನ್ನ ಕೆಲಸ ಮುಗಿಸಿ ನೇರ ಪೊಲೀಸ್ ಠಾಣೆಗೆ ಹೋಗಿ ತನ್ನ ಮನೆಗೆಲಸದ ಮಾಲೀಕ ತನ್ನನ್ನು ಬಲಾತ್ಕರಿಸಲು ಯತ್ನಿಸಿದನೆಂದು ದೂರು ಕೊಟ್ಟಳು. ಸರಿ, ಆ ಠಾಣಾ ಇನ್ಸ್ಪೆಕ್ಟರ್ ಕೂಡಲೇ ಟಿ.ವಿ. ೯ ಕ್ಕೆ ಫೊನಾಯಿಸಿ, ತನ್ನೊಡನೆ ವಿಚಾರಣೆಗೆ ಕರೆದೊಯ್ದ.

ಡೋರ್ ಬೆಲ್ ಸದ್ದು ಕೇಳಿ ಮನೆಬಾಗಿಲು ತೆಗೆದ ಆ ಮನೆ ಮಾಲೀಕ, ಪೊಲೀಸ್, ವಿಡಿಯೋ ಕ್ಯಾಮೆರಾಗಳನ್ನು ನೋಡಿ ಹೌಹಾರಿದ. ಆ ಟಿ.ವಿ. ಛಾನೆಲ್ಲಿನವರು ಆ ಮಹಿಳೆಯನ್ನು ನಾಯಕಿಯಂತೆ ಚಿತ್ರಿಸಿ, ಆ ಬಡಪಾಯಿಯನ್ನು ಸ್ತ್ರೀ ಪೀಡಕ, ಕಾಮಪಿಪಾಸು ಎಂದೆಲ್ಲಾ ಅಭಿಪ್ರಾಯಿಸುತ್ತ, ತಮಗೆ ಆ ವ್ಯಕ್ತಿಯ ಹಿನ್ನೆಲೆ ಬಹುಕಾಲದಿಂದ ಚಿರಪರಿಚಿತವೇನೋ ಎಂಬಂತೆ ಚಿತ್ರಿಸಿದರು. ಕಡೆಗೆ ಎರಡು ಸಾವಿರ ಸಾಲಕ್ಕೆ ಕಳೆದುಕೊಳ್ಳುವುದು ಎರಡು ಲಕ್ಷಕ್ಕೆ ಸೆಟ್ಲ್ ಆಯಿತು! ಆದರೂ ಈ ಟಿ.ವಿ. ಪತ್ರಕರ್ತರ ದೆಸೆಯಿಂದಾಗಿ ದೊರೆತ ಕುಖ್ಯಾತಿ ಅವನನ್ನು ಮಾನಸಿಕ ಅಸ್ವಸ್ಥನನ್ನಾಗಿಸಿತು!

ಸರಿಯಾದ ಪ್ರೈವಸಿ ಕಾನೂನುಗಳ ಲಂಗುಲಗಾಮಿಲ್ಲದ ಭಾರತದಲ್ಲಿ ಈ ರೀತಿಯ ವಿಡಿಯೋ, ಮೊಬೈಲ್ ತಂತ್ರಜ್ಞಾನ "ಮಂಗನ ಕೈಯಲ್ಲಿ ಮಾಣಿಕ್ಯ" ಎಂಬಂತಿದೆ. ಸ್ವೇಚ್ಚಾಚಾರೀ ಲಂಪಟರೇ ಇಂದು ಪತ್ರಕರ್ತರಾಗುತ್ತಿರುವುದು!!!

ಕರ್ನಾಟಕದಲ್ಲೊಂದು ಗಾಂಧಿಪಕ್ಷ, ಹೊಳಲ್ಕೆರೆಯಲ್ಲೊಬ್ಬ ಆಧುನಿಕ ಗಾಂಧಿ!

ಅಂತೂ ಇಂತೂ ಕರ್ನಾಟಕಕ್ಕೆ ಮತ್ತೊಂದು ಚುನಾವಣೆ ಬಂದಿದೆ. ಜೆಡಿಎಸ್ ನಿಂದ ಧೃತರಾಷ್ಟ್ರ, ಕಾಂಗ್ರೆಸ್ಸಿನಿಂದ ಕೃಷ್ಣ ಸದ್ದು ಮಾಡುತ್ತಿದ್ದರೆ, ಬಿಜೆಪಿ ಯಥಾಪ್ರಕಾರ ವಚನಭ್ರಷ್ಟತೆಯ ಸದ್ದು ಮಾಡುತ್ತಿದ್ದರೂ ಅದಕ್ಕಿಂತ ಹೆಚ್ಚಾಗಿ ಅವರ ಪಕ್ಷದ ದ್ರೌಪದಿಯದೇ ಇತ್ತೀಚೆಗೆ ಹೆಚ್ಚು ಸದ್ದು ಕೇಳುತ್ತಿದೆ.

ಮೊನ್ನೆ ನನ್ನ ಬೆಂಗಳೂರಿನಲ್ಲಿರುವ ಸ್ನೇಹಿತನೊಬ್ಬ ಹೀಗೆಯೇ ಹರಟುತ್ತ "ಈ ರಾಜಕಾರಣಿಗಳು ಏನೇನು ತಿನ್ನಲು ಸಾಧ್ಯವೋ ಅದನ್ನೆಲ್ಲಾ ತಿಂದಾಗಿದೆ. ಕರ್ನಾಟಕದ ನೆಲವನ್ನೆಲ್ಲಾ ತಿಂದು, ನದಿ/ಕೆರೆ/ಡ್ಯಾಂಗಳನ್ನೆಲ್ಲಾ ಕುಡಿದು ಹೊಟ್ಟೆ ಕೆಟ್ಟು ಹೂಸಿಸುತ್ತ ಜನಸಾಮಾನ್ಯರಿಗೆ ಉಸಿರಾಡಲು ಶುದ್ಧ ಗಾಳಿಯೂ ಇಲ್ಲದೆ ಅಪಾಯವಾಯುವನ್ನು ಎಲ್ಲೆಡೆ ಪಸರಿಸಿದ್ದಾರೆ. ಇನ್ನು ಜನರನ್ನು ಮುಕ್ಕುವುದಷ್ಟೇ ಬಾಕಿಯಿರುವುದು. ಜನರನ್ನು ತಿನ್ನಲು ಈ ರಾಜಕಾರಣಿಗಳ ಹಲ್ಲುಗಳು ಕಟಕಟವೆನ್ನುತ್ತಿದ್ದರೂ ಕ್ರಾಂತಿಯಾದೀತೆಂದು ಹೇಗೋ ಆ ತೀಟೆಯನ್ನು ತಡೆದುಕೊಂಡಿರುವರು. ಇಂತಹ ರಾಜಕಾರಣಿಗಳಿಂದ ತುಂಬಿದ ಭಾರತದ ಭವಿಷ್ಯ, ಮುಂದಿನ ಜನಾಂಗದಲ್ಲಿ ಹೇಗಿರುತ್ತದೋ?" ಎಂದು ವಿಷಾದ ವ್ಯಕ್ತಪಡಿಸಿದನು.

ಯೋಚಿಸಿ ನೋಡಿ, ಈಗ ನಡೆಯುತ್ತಿರುವ ಚುನಾವಣೆಗಳನ್ನು, ಅಭ್ಯರ್ಥಿಗಳನ್ನು ನೆನೆಸಿಕೊಂಡರೆ ಅಸಹ್ಯವಾಗುತ್ತದೆ. ಈ ರಾಜಕಾರಣಿಗಳ ಮೇಲಿನ ಅಸಹ್ಯ ಎಲ್ಲಿ ಭಾರತದ ಮೇಲೆಯೇ ಅಸಹ್ಯ ಹುಟ್ಟಿಸುತ್ತದೋ ಎಂದು ದಿಗಿಲಾಗುತ್ತದೆ! ಪ್ರತಿ ಚುನಾವಣೆಗಳಲ್ಲಿಯೂ ಬಾಲಬಡುಕರು, ನೆಲಗಳ್ಳರು, ರ್‍ಔಡಿಗಳು, ದಗಾಕೋರರು ಪಕ್ಷಾತೀತವಾಗಿ ಅಲ್ಲಲ್ಲಿ ಇರುತ್ತಿದ್ದರೆ, ಈ ಬಾರಿ ಅವರುಗಳೇ ವಿಜೃಂಭಿಸುತ್ತಿದ್ದಾರೆ. ಭಾರತದ ಪ್ರಜೆಗಳೂ ಈ ಜನನಾಯಕರುಗಳಂತೆಯೇ ಭ್ರಷ್ಟರಾಗುತ್ತ ದೇಶ ಅಧಃಪತನದತ್ತ ದಾಪುಗಾಲಿಡುತ್ತಿದೆ ಎಂದೇ ಅನಿಸುತ್ತದೆ. ಇದು ಎಂದಾದರೂ ಬದಲಾದೀತೇ?

ನಾನೊಬ್ಬ ಆಶಾಜೀವಿ, ಹಾಗಾಗಿ ಭಾರತದ ಈ ರಾಜಕೀಯ ಗಾಢಾಂಧಕಾರದಲ್ಲಿ ಸಣ್ಣ ಬೆಳಕಿನ ಅಸ್ಪಷ್ಟ ರೇಖೆ ಕಂಡುಬಂದರೂ ಅದೊಂದು ಮಹಾ ಬದಲಾವಣೆಯ ಆರಂಭವೆಂದೇ ಅಂದುಕೊಳ್ಳುತ್ತೇನೆ. ನಮ್ಮ ನಿಮ್ಮಂಥ ಯಾವುದೇ ದೇಶಪ್ರೇಮಿಯು ಕೂಡಾ ಹೀಗೆಯೇ ಅಂದುಕೊಳ್ಳಬೇಕು. ಆ ಭರವಸೆಯ ಸಣ್ಣ ಆಶಾಕಿರಣ ಈ ಬಾರಿಯ ಕರ್ನಾಟಕದ ಚುನಾವಣೆಯಲ್ಲಿ ಕಾಣಿಸುತ್ತಿದೆ.

ಗಾಂಧಿತತ್ವಗಳನ್ನು ಮತ್ತೆ ಅರ್ಥಪೂರ್ಣವಾಗಿ ರಾಜಕೀಯದಲ್ಲಿ ಅನುಷ್ಟಾನಗೊಳಿಸುವ ಮಹಾಭಿಲಾಷೆಯಿಂದ ಮಹಿಮಾ ಪಟೇಲ್ ಸ್ವರ್ಣಯುಗವನ್ನು ಆರಂಭಿಸಿದ್ದಾರೆ. ಸತ್ಯ, ನಿಷ್ಟೆ, ರಾಷ್ಟ್ರ್‍ಅಪ್ರೇಮ, ಪ್ರಾಮಾಣಿಕತೆಯ ತತ್ವಗಳೊಂದಿಗೆ ಆಧ್ಯಾತ್ಮದ ಚಿಂತನೆಯನ್ನೂ ಒಗ್ಗೂಡಿಸಿಕೊಂಡು ರಾಜಕೀಯ ಕ್ರಾಂತಿಯನ್ನು ಮಾಡುವತ್ತ ಒಂದು ಅತೀ ಸಣ್ಣ ಹೆಜ್ಜೆಯನ್ನಿರಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಹೆಂಡ/ಹಣ ಹಂಚದೆ ಚುನಾವಣೆಯನ್ನು ನಡೆಸಿದ ಇವರು, ಈ ಬಾರಿ ತಮ್ಮ ತತ್ವಗಳಿಗೆ ಪಕ್ಷದ ರೂಪ ಕೊಟ್ಟು ತಾವಿಟ್ಟ ಚಿಕ್ಕ ಹೆಜ್ಜೆಯನ್ನು ಭಧ್ರ ಹೆಜ್ಜೆಯಾಗಿಸುವತ್ತ ತಮ್ಮ ಚಿತ್ತವನ್ನು ನೆಟ್ಟಂತಿದೆ. ಈ ಹಿಂದೆ ಇವರೂ ಕೂಡ ಇತರೆ ರಾಜಕಾರಣಿಗಳಂತೆಯೇ ಇದ್ದು, ಕಳೆದ ಚುನಾವಣೆಯ ಕಾಲದಿಂದ ಮನಪರಿವರ್ತಿತರಾದಂತಿರುವ ಇವರು ಒಂದು ನವ್ಯ ಕ್ರಾಂತಿಯ ಹರಿಕಾರರಾಗುತ್ತಾರೋ ಅಥವಾ "ದೆವ್ವದ ಬಾಯಲ್ಲಿ ಭಗವದ್ಗೀತೆ" ಎನ್ನುವಂತಾಗುತ್ತಾರೋ ಕಾಲವೇ ಬಲ್ಲದು.

ಇರಲಿ, ನನ್ನ ಆಶಾಕಿರಣಕ್ಕೆ ಇನ್ನೂ ಒಂದು ಕಾರಣವಿದೆ! ನಮ್ಮ ನಿಮ್ಮಂತೆಯೇ ಅಪಾರ ದೇಶಪ್ರೇಮಿಯಾದ, ನೈತಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ, ಭಾರತಕ್ಕಾಗಿ ತುಡಿಯುವ, ಸಾರ್ವಜನಿಕ ಸೇವೆಯಲ್ಲಿ ಪ್ರಾಮಾಣಿಕತೆಯನ್ನು ಬಯಸುವ, ಶ್ರೀಸಾಮಾನ್ಯನ ಹಕ್ಕುಗಳನ್ನು ಕಾಪಾಡುವ, ಮಾನವೀಯತೆಯನ್ನು ಕಾಪಾಡುವ, ಕನ್ನಡ ನಾಡು-ನುಡಿಗಾಗಿ ಮಿಡಿಯುವ ಓರ್ವ ಯುವಕ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಅಂತರರಾಷ್ಟ್ರ್‍ಈಯ ರಾಜನೈತಿಕತೆಯಲ್ಲಿ ಎಂ.ಫಿಲ್ ಪಡೆದು, ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯ ಕುರಿತು ಕೊರಿಯಾದ ಯೂನಿವರ್ಸಿಟಿಯೊಂದರಿಂದ ಪಿ.ಹೆಚ್.ಡಿ ಪಡೆದಿರುವ, ದಕ್ಷಿಣ ಕೊರಿಯಾದಲ್ಲಿ ಉದ್ಯೋಗದಲ್ಲಿದ್ದ, http://www.ourkarnataka.com/ ನಲ್ಲಿ, ಮತ್ತು ಕೊರಿಯಾ ಪತ್ರಿಕೆಗಳಲ್ಲಿ ಇಂಗ್ಲಿಷ್ ಅಂಕಣಕಾರರಾಗಿದ್ದ ಆದರ್ಶವಾದಿ ಯುವಕ ಶ್ರೀ. ತಿಪಟೂರು ಚಂದ್ರಶೇಖರ್ ಅವರು ಹೊಳಲ್ಕೆರೆ ಕ್ಷೇತ್ರದಿಂದ ಈ ಬಾರಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಅಂದು ಗಾಂಧೀಜಿಯವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ವಾಪಸ್ಸಾದರೆ, ಈ ನಮ್ಮ ಚಂದ್ರಶೇಖರ್ ತಮ್ಮ ದಕ್ಷಿಣ ಕೊರಿಯಾ ಉದ್ಯೋಗವನ್ನು ತೊರೆದು ಭಾರತಕ್ಕೆ ವಾಪಸ್ಸಾಗಿದ್ದಾರೆ. ಕಳೆದ ನಾಲ್ಕು ತಿಂಗಳುಗಳಿಂದ ಕ್ಷೇತ್ರದಲ್ಲಿ ಅಡ್ಡಾಡಿ ತಮ್ಮ ಉದ್ದೇಶವನ್ನು ಜನರಿಗೆ ತಿಳಿಸುತ್ತಿದ್ದಾರೆ. ಇವರ ಉದ್ದೇಶವನ್ನು ಕೇಳಿ ಜನ ನಗಾಡಿ ಅನುಕಂಪ ಸೂಚಿಸಿದರೂ ಲೆಕ್ಕಿಸದೆ ಛಲದಿಂದಿದ್ದಾರೆ. ಅಂದು ಗಾಂಧೀಜಿಯವರು ಬ್ರಿಟಿಷರ ವಿರುದ್ಧ ಭಾರತದ ಸ್ವಾತಂತ್ರ್ಯಕ್ಕೆ ಹೋರಾಡಿದರೆ, ಈ ಚಂದ್ರಶೇಖರರು ನೈತಿಕ ಮೌಲ್ಯಗಳ ಸ್ವಾತಂತ್ರ್ಯಕ್ಕಾಗಿ ನಮ್ಮೊಳಗಿನ ರಕ್ತಬೀಜಾಸುರರ ವಿರುದ್ಧ ಹೋರಾಡಲಿದ್ದಾರೆ. ಸತ್ಯ, ನಿಷ್ಟೆ, ರಾಷ್ಟ್ರಭಕ್ತಿ, ಪ್ರಾಮಾಣಿಕತೆ ಈ ಎಲ್ಲಾ ಜನಸಾಮಾನ್ಯ ಗುಣಗಳ ಈ ಆದರ್ಶ ಯುವಕ, ಜನಸಾಮಾನ್ಯರಿಗೆ ಒಂದು ನೀತಿಬದ್ಧ ಪ್ರಾಮಾಣಿಕ ಚುನಾವಣೆಯ ಅರಿವು ಮೂಡಿಸಲು ಈ ಸಾಹಸಕ್ಕೆ ಕೈಹಾಕಿದ್ದಾರೆ. ಅಂದಹಾಗೆ ಈ ಚಂದ್ರಶೇಖರ್ ಇತರೆ ಎನ್ನಾರೈಗಳಂತೆ/ಆದರ್ಶ ಯುವಕರಂತೆ ಚುನಾವಣಾ ಕಾಲಕ್ಕೆ ಟೆಂಪರರಿಯಾಗಿ ಬಂದು ಸುದ್ದಿ ಮಾಡಿ ಮರೆಯಾಗುವಂತೆ ಇವರು ಭಾರತ ಪ್ರವೇಶ ಮಾಡುತ್ತಿಲ್ಲ! ತಮ್ಮ ಹೋರಾಟವನ್ನು ಚುನಾವಣೆಯಿಲ್ಲದ ಕಾಲಕ್ಕೂ ನಿರಂತರವಾಗಿ ಮುಂದುವರಿಸುವ ಉದ್ದೇಶದಿಂದ ಪರ್ಮನೆಂಟಾಗಿ ಹಿಂದಿರುಗಿದ್ದಾರೆ!

ಇವರ ಈ ಸಾಹಸಕ್ಕೆ ಹೊಳಲ್ಕೆರೆಯೇ ಏಕೆ? ಸಾಮಾನ್ಯವಾಗಿ ವಿದ್ಯಾವಂತರು ಹೆಚ್ಚಿರುವ ಬೆಂಗಳೂರಿನ ಯಾವುದಾದರೂ ಒಂದು ಕ್ಶೇತ್ರದಲ್ಲಿ ಇವರು ನಿಲ್ಲಬಹುದಿತ್ತು. ಅಲ್ಲದೇ ಅಲ್ಲಿನ ವಿದ್ಯಾವಂತರ ಬೆಂಬಲದಿಂದ ಗೆಲ್ಲುವ ಪ್ರಯತ್ನವನ್ನೂ ಮಾಡಬಹುದಿತ್ತು. ಆದರೆ ಬೆಂಗಳೂರಿನಂಥ ಪಟ್ಟಣಗಳು ಭಾರತವನ್ನು ಪ್ರತಿನಿಧಿಸುವುದಿಲ್ಲ. ಕರ್ನಾಟಕದ ಬೆಂಗಳೂರು ಆಗಲೇ ಸಿಂಗಾಪುರವನ್ನು, ಅಮೇರಿಕಾದ ಸಿಲಿಕಾನ್ ವ್ಯಾಲಿಯನ್ನೂ ಪ್ರತಿನಿಧಿಸುತ್ತಿದೆ! ಆದುದರಿಂದ ಪ್ರಸ್ತುತ ಕರ್ನಾಟಕವನ್ನು/ ಭಾರತವನ್ನು ಪ್ರತಿನಿಧಿಸಬಲ್ಲ, ಸಾಕಷ್ಟು ಹಳ್ಳಿಗಳನ್ನೊಳಗೊಂಡ ಹೊಳಲ್ಕೆರೆ ಕ್ಷೇತ್ರ, ಇವರ ಪ್ರಯೋಗಕ್ಕೆ ತಕ್ಕ ಸ್ಥಳವಾಗಿದೆ. ಚುನಾವಣಾ ಆಯೋಗದ ಮಿತಿಯಲ್ಲಿ ಚುನಾವಣಾ ವೆಚ್ಚ ಮತ್ತು ಪ್ರಚಾರ ಮಾಡುವ ಇವರು ಪ್ಲಾಸ್ಟಿಕ್ ಬಳಸದೆ, ಪರಿಸರವನ್ನು ಕೆಡಿಸದೆ, ಪೊಳ್ಳು ಆಶ್ವಾಸನೆಗಳನ್ನು ನೀಡದೆ, ಹಣ/ಹೆಂಡಗಳಿಲ್ಲದೆ, ಕ್ಷೇತ್ರದ ಸಮಸ್ಯೆಗಳನ್ನು ಪ್ರತಿನಿಧಿಸಿ, ಪರಿಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳುತ್ತ, ಗಾಂಧಿತತ್ವ, ಆದರ್ಶ, ಪ್ರಾಮಾಣಿಕತೆಯ ಮೌಲ್ಯಗಳಿಗೆ ನಿಷ್ಟರಾಗಿರುವ ಜನಪ್ರತಿನಿಧಿಯಾಗಿರುವುದಕ್ಕೆ ಬದ್ಧರಾಗಿದ್ದಾರೆ. ಇವರ ಆದರ್ಶಪಾಲನೆಯನ್ನು ವೈಯುಕ್ತಿಕವಾಗಿ ಬಲ್ಲ ನಾನು ಇವರ ಈ ಪ್ರಯತ್ನಕ್ಕೆ/ ಚುನಾವಣಾ ವೆಚ್ಚಕ್ಕೆ ಒಂದು ಕಿರು ವಂತಿಗೆಯನ್ನು ಕೊಡುತ್ತಿದ್ದೇನೆ. ಈ ಒಂದು ನೈತಿಕ ಬದಲಾವಣೆ/ಬದ್ಧತೆಯ ಬೆಂಬಲಕ್ಕೆ ಸಹಕರಿಸಲು ಬಯಸುವ ಓದುಗರು ನೇರವಾಗಿ ತಿಪಟೂರು ಚಂದ್ರಶೇಖರ್ ಅವರನ್ನು ಇಮೈಲ್ ಮುಖಾಂತರ ತಮ್ಮ ಅಭಿಪ್ರಾಯ, ವಂತಿಗೆಯನ್ನು ಕಳುಹಿಸುವ ರೀತಿಗಳನ್ನು ತಿಳಿದುಕೊಳ್ಳಲು ಸಂಪರ್ಕಿಸಬಹುದು. ಅವರ ಇಮೈಲ್ ವಿಳಾಸ hoysalatiptur@hotmail.com ಮತ್ತು ಅವರ ಮೊಬೈಲ್ ಸಂಖ್ಯೆ: ೯೯೦೨೧೪೫೫೩೦ (9902145530).

ಅಂದಹಾಗೆ ಚಂದ್ರಶೇಖರ್ ಅವರು ಸಮಾನ ಮನಸ್ಕರಾದ ಮಹಿಮಾ ಪಟೇಲರ ಸ್ವರ್ಣಯುಗ ಪಕ್ಷದಿಂದ ಹೊಳಲ್ಕೆರೆಯ ಚುನಾವಣಾ ಕಣದಲ್ಲಿದ್ದಾರೆ. ತಮ್ಮ ತತ್ವ/ಆದರ್ಶಗಳಿಗೆ ಒಂದೇ ಒಂದು ಓಟು ಬಿದ್ದರೂ ಅದೇ ಮಹಾಪ್ರಸಾದವೆಂದುಕೊಳ್ಳುತ್ತೇನೆ ಎನ್ನುತ್ತಾರೆ.

ಇನ್ನು ಈ ಹೊಳಲ್ಕೆರೆ ಕ್ಷೇತ್ರವನ್ನು ಗಮನಿಸೋಣ. ಈಗ ಮೀಸಲು ಕ್ಷೇತ್ರವಾಗಿರುವ ಹೊಳಲ್ಕೆರೆಯಲ್ಲಿ ಎಲ್ಲಾ ಪಕ್ಷಗಳ ಅಭ್ಯರ್ಥಿಗಳೂ ಭರಮಸಾಗರ ಮೀಸಲು ಕ್ಷೇತ್ರದಿಂದ ವಲಸೆಗೈದವರು. ಈ ಕ್ಷೇತ್ರದಲ್ಲಿ ಯಾವುದೇ ಪಕ್ಷಗಳಿಗಿಂತ ಎರಡು ಮಠಗಳು ಚುನಾವಣೆಯನ್ನು ನಿರ್ಧರಿಸುತ್ತವೆ ಎಂದರೆ ನಿಮಗಾಶ್ಚರ್ಯವಾಗಬಹುದು. ಹೌದು, ಇಲ್ಲಿ ನಡೆಯುವುದು, ವೀರಶೈವ ವಿರಕ್ತ ಪರಂಪರೆಯ ಚಿತ್ರದುರ್ಗದ ಮುರುಘಾಮಠ ಮತ್ತು ವೀರಶೈವ ಸಾಧು ಧರ್ಮದ ತರಳಬಾಳು ಮಠಗಳ ಹುಕುಂ.

ಈ ಎರಡೂ ಮಠಗಳ ಮಠಾಧೀಶರು, ತಾವುಗಳು ಮಠಾಧಿಪತಿಗಳೆನಿಸಿಕೊಳ್ಳುವುದಕ್ಕಿಂತ ಸಮಾಜಸುಧಾರಕರೆನ್ನಿಸಿಕೊಳ್ಳಲು ಬಯಸುತ್ತೇವೆ ಎಂದು ಆಗಾಗ್ಗೆ ಅಭಿಪ್ರಾಯಿಸುತ್ತಿರುತ್ತಾರೆ. ಹಾಗೆಯೇ ಸಮಾಜಸುಧಾರಣೆಗಾಗಿ ಮುರುಘಾಮಠವು ವಿಧವಾ ವಿವಾಹ, ಅನಾಥಮಕ್ಕಳ ಪಾಲನೆ, ಅಬಲರಿಗೆ ಗುರುಪೀಠ ಸಂಸ್ಥಾಪನೆ, ವೈಚಾರಿಕತೆಗಳ ಹರಿಕಾರರಿಗೆ ’ಬಸವಶ್ರೀ’ ಪ್ರಶಸ್ತಿ ಸ್ಥಾಪನೆ, ಮುಂತಾದವುಗಳನ್ನು ಮಾಡುತ್ತಿದ್ದರೆ, ತರಳಬಾಳು ಮಠವೂ ಕೂಡ ಸಾರಾಯಿಮುಕ್ತ ಗ್ರಾಮ, ರಂಗ ಚಟುವಟಿಕೆ, ಕಂಪ್ಯೂಟರ್ ಕ್ರಾಂತಿ, ವಿದ್ಯಾರಂಗಗಳಲ್ಲಿ ಸೇವೆ ಸಲ್ಲಿಸುತ್ತಿದೆ. ಎರಡೂ ಮಠಗಳೂ ಬಸವತತ್ವ ಮತ್ತು ವಚನ ಸಾಹಿತ್ಯಕ್ಕೆ ಮಹತ್ವ ಕೊಟ್ಟಿವೆ. ನಾನೂ ಕೂಡ ವಚನ ಸಾಹಿತ್ಯ ಪ್ರಿಯನಾದುದರಿಂದ ಇಲ್ಲಿ ಸಾಂದರ್ಭಿಕವಾಗಿ ಕೆಲವು ವಚನಗಳನ್ನು ಬಳಸಿದ್ದೇನೆ. ನಾನು ನನ್ನ ವಾರದ ವಿಮಾನಯಾತ್ರೆಯಲ್ಲಿ ಎಲ್.ಬಸವರಾಜು ಅವರು ಸಂಪಾದಿಸಿರುವ "ಅಲ್ಲಮನ ವಚನ ಚಂದ್ರಿಕೆ"ಯನ್ನು ಆಗಾಗ್ಗೆ ಓದುತ್ತೇನೆ. ವಿಮಾನ ಹಾರಾಟದಲ್ಲಿದ್ದಾಗ (ಏರ್ ಬೋರ್ನ್), ರೆಡ್ ವೈನ್ ಕುಡಿಯುತ್ತ ಅಲ್ಲಮನನ್ನು ಓದುತ್ತಿದ್ದರೆ ಅದರ ಅನುಭವವೇ ಬೇರೆ! ಅದರಲ್ಲೂ ಫಸ್ಟ್ ಕ್ಲಾಸಿಗೆ ಅಪ್ಗ್ರೇಡ್ ಅಗಿ, ಕಿಟಕಿಯ ಪಕ್ಕದ ಸೀಟು ದೊರೆತು, ಹೊರಗಡೆ ಮೋಡಗಳ ರಾಶಿ ತುಂಬಿ, "ಕಾಯಗುಣವಳಿದು ಮಾಯಾಜ್ಯೋತಿ ವಾಯುವ ಕೂಡುವ ಮುನ್ನ........" ಎಂದು ಓದುತ್ತಿದ್ದರಂತೂ ಅದರ ಮಜಾ ಇನ್ನೂ ಚೆನ್ನ! ಹಾಂ, ಚಿತ್ರದುರ್ಗದ ಶ್ರೀಗಳು ತಮ್ಮ ಧರ್ಮದ ಭಕ್ತರ ಇಮಾನಯಾತ್ರೆಯ (ಅಂತಿಮಯಾತ್ರೆ) ವಾಹನದಲ್ಲಿ ಕೂಡ ವಚನಗಳ ಕ್ಯಾಸೆಟ್ ಹಾಕಿಸುವ ವ್ಯವಸ್ಥೆ ಮಾಡಿದ್ದಾರಂತೆ. ಮೃತರ ಆತ್ಮ ವಾಯುವಿನಲ್ಲಿ ಲೀನವಾಗಿ, ಆಕಾಶದಲ್ಲಿ ತೇಲುತ್ತ ಆ ವಚನ ವಾಚನವನ್ನು ಅನುಭವಿಸಬಹುದಾದಂತಹ ಒಂದು ಅದ್ಭುತ ವಿಲಕ್ಷಣ ರಸಾನುಭವ, ನನಗೆ ಪ್ರತಿವಾರವೂ ಆಗುತ್ತದೆ! ನಾನು ನನ್ನ ಉದ್ಯೋಗಕ್ಕೆ/ಅಮೇರಿಕಾಕ್ಕೆ ಸದಾ ಋಣಿಯಾಗಿರಬೇಕು, ಪ್ರತಿ ವಾರವೂ ನನ್ನನ್ನು ಶಿಕಾಗೋನಿಂದ ನ್ಯೂಯಾರ್ಕ್/ ನ್ಯೂಯಾರ್ಕ್ ನಿಂದ ಶಿಕಾಗೋ ಸುತ್ತಿಸುತ್ತ ಬದುಕಿರುವಾಗಲೇ ನನಗೆ ಈ ಅನುಭಾವವನ್ನು ಕಂಡುಕೊಳ್ಳಲು ಅವಕಾಶವನ್ನು ನೀಡಿರುವುದಕ್ಕೆ!

ಕ್ಷಮಿಸಿ, ವಚನವೆಂದೊಡನೆಯೇ ನನ್ನ ಬರವಣಿಗೆಯ ರಚನಕ್ರಿಯೆ ದಾರಿ ತಪ್ಪುತ್ತದೆ! ಇರಲಿ, ಈಗಿನ ಚುನಾವಣೆಯಲ್ಲಿ ಈ ವಿರಕ್ತ ಬ್ರಹ್ಮಚಾರೀ ಸಾಧು ಸನ್ಯಾಸೀ ಸಮಾಜಸುಧಾರಕರು ಪ್ರತಿಪಾದಿಸುವ ಮತ್ತು ಭೋಧಿಸುವ ತತ್ವ, ನಿಷ್ಟೆ, ಪ್ರಾಮಾಣಿಕತೆ, ವೈಚಾರಿಕತೆ, ದೇಶಭಕ್ತಿಯಂತಹ ನೈತಿಕ ಮೌಲ್ಯಗಳ ಆದರ್ಶಗಳನ್ನು ಹೊಂದಿರುವ ಮೂವತ್ತೇಳರ ಹರೆಯದ ಈ ಯುವಕನನ್ನು, ಈ ಈರ್ವ ಮಠಾಧೀಶರು ಸಾರ್ವಜನಿಕವಾಗಿ ಬೆಂಬಲಿಸುವರೇ ನೋಡಬೇಕು!

ಹಾಂ! ಅಂದ ಹಾಗೆ ಈ ಮಠಾಧೀಶ್ವರರಿಗೆ ತಮ್ಮ ತಮ್ಮ ಜಾತಿಯ ಅಭ್ಯರ್ಥಿಗಳನ್ನು ಬೆಂಬಲಿಸಬೇಕೆಂಬ ಧರ್ಮ ಸಂಕಟವೂ ಇಲ್ಲ. ಏಕೆಂದರೆ ಇದು ಮೀಸಲು ಕ್ಷೇತ್ರ! ಈ ಯಾವ ಕಟ್ಟುನಿಟ್ಟುಗಳಿಲ್ಲದೆ, ಈ ಮಠಾಧೀಶ್ವರರುಗಳು ತಮ್ಮ ತಮ್ಮ ಆಶೀರ್ವಚನಗಳಲ್ಲಿ ಚಂದ್ರಶೇಖರರನ್ನು ಬೆಂಬಲಿಸಿ ನೈತಿಕತೆಯ ಘನತೆಯನ್ನು ಉದ್ಧರಿಸುತ್ತಾರೆಂದು ಆಶಿಸುವೆ. ಇನ್ನೊಂದು ತಿಂಗಳಿನಲ್ಲಿಯೇ ತಿಳಿಯುವುದು "ಒಲೆ ಹತ್ತಿ ಉರಿದಡೆ ನಿಲಲುಬಹುದು, ಧರೆ ಹತ್ತಿ ಉರಿದೊಡೆ ನಿಲಬಹುದೇ, ಏರಿ ನೀರುಂಬಡೆ, ಬೇಲಿ ಕೈಯ ಮೇವಡೆ, ನಾರಿ ತನ್ನ ಮನೆಯಲ್ಲಿ ಕಳುವಡೆ, ತಾಯ ಮೊಲೆವಾಲು ನಂಜಾಗಿ ಕೊಲುವಡೆ ಇನ್ನಾರಿಗೆ ದೂರುವೆ ತಂದೆ ಕೂಡಲಸಂಗಮದೇವ? ನೀ ಹುಟ್ಟಿಸಿ ಜೀವನ ಭವದುಖಿಃಯ ಮಾಡಿದ ಬಳಿಕ, ಬಿಡಿಸುವರುಂಟಾರು?" ಎಂದು!

ಒಟ್ಟಿನಲ್ಲಿ ಚಂದ್ರಶೇಖರರ ಈ ಪ್ರಯತ್ನಕ್ಕೆ ದೊರಕುವ ಮತ, ಗಾಂಧೀ ದೇಶ; ಸುಸಂಸ್ಕೃತ ದೇಶ; ತತ್ವನಿಷ್ಟೆಗಳ ದೇಶ; ಮೌಲ್ಯಾಧಾರಿತ ರಾಜಕಾರಣದ ದೇಶ; ಇನ್ನೂ ಏನೇನೋ ಅಲಂಕಾರಿಕ ಶಬ್ಧ/ವರ್ಣನೆಗಳಿಂದ ಹಾಡಿ ಹೊಗಳುವುದರ ನಿಜ ಮಾನದಂಡವಾಗುತ್ತದೆ ಎಂದುಕೊಂಡಿದ್ದೇನೆ. ಇಲ್ಲಿ ಇವರು ಠೇವಣಿ ಕಳೆದುಕೊಂಡರೆ ಅದು ಭಾರತೀಯ ಮೌಲ್ಯಗಳ ಠೇವಣಿಯಾಗುತ್ತದೆ. ಇಲ್ಲಿ ಚಂದ್ರಶೇಖರರೇನಾದರೂ ಗೆದ್ದರೆ, "ಹುಲಿಯ ಬೆನ್ನಲ್ಲಿ ಒಂದು ಹುಲ್ಲೆ ಹೋಗಿ ಮೇದು ಬಂದೆನೆಂದರೆ-ಅದ ಕಂಡು ಬೆರಗಾದೆ! ರಕ್ಕಸಿಯ ಮನೆಗೆ ಹೋಗಿ ನಿದ್ದೆಗಯ್ದು ಬಂದೆನೆಂದರೆ-ಅದ ಕಂಡು ಬೆರಗಾದೆ! ಜವನ ಮನೆಗೆ ಹೋಗಿ ಸಾಯದೆ ಬದುಕಿ ಬಂದೆನೆಂದರೆ-ಅದ ಕಂಡು ಬೆರಗಾದೆ! ಗುಹೇಶ್ವರ" ಎಂದು ಅಲ್ಲಮನು ಬೆರಗಾದಂತೆ ನಾನು ಬೆಕ್ಕಸ ಬೆರಗಾಗುವೆ! ಏಕೆಂದರೆ ಭವ್ಯ ಸ್ವತಂತ್ರ ಭಾರತದಲ್ಲಿ "ಆಸೆಗೆ ಸತ್ತುದು ಕೋಟಿ, ಆಮಿಷಕ್ಕೆ ಸತ್ತುದು ಕೋಟಿ, ಹೆಣ್ಣು-ಹೊನ್ನು-ಮಣ್ಣೆಂದು ಸತ್ತುದು ಕೋಟಿ, ಗುಹೇಶ್ವರ, ನಿಮಗಾಗಿ ಸತ್ತವನಾರನೂ ಕಾಣೆ" ಎಂಬಂತೆ ನಮ್ಮ ಹೆಮ್ಮೆಯ ಯೋಧರನ್ನು ಬಿಟ್ಟರೆ ದೇಶಕ್ಕಾಗಿ ಮತ್ಯಾರೂ ಸತ್ತುದನ್ನು ನಾ ಕಾಣೆ!

ಅಣಕ:

ನಮ್ಮ ವಚನಕಾರರು ಪ್ರಾಪಂಚಿಕ/ಪಾರಮಾರ್ಥಿಕ, ಲೌಕಿಕ/ಅಲೌಕಿಕ, ಮೂರ್ತ/ಅಮೂರ್ತಗಳನ್ನು ಸಾಮಾನ್ಯಭಾಷೆಯಲ್ಲಿ ಅಸಾಮಾನ್ಯವಾಗಿ ಹಿಡಿದಿಟ್ಟಿದ್ದಾರೆ. ಇವರ ಈ ಸರಳತೆಯೇ ಇವರುಗಳ ಕುರಿತಾದ ಎಲ್ಲಾ ವಿವಾದಗಳಿಗೆ ಕಾರಣವೆನಿಸುತ್ತದೆ. ಇವರುಗಳೂ ಕೂಡ ರನ್ನ, ಅಮೋಘವರ್ಷ, ಪಂಪ, ಕುಮಾರವ್ಯಾಸರಂತೆ ಕಬ್ಬಿಣದ ಕಡಲೆ ಕನ್ನಡದಲ್ಲಿ ತಮ್ಮ ಆಲೋಚನೆಗಳನ್ನು ಹರಿಯ ಬಿಟ್ಟಿದ್ದರೆ, ಅದನ್ಯಾವ ರಾಜಕಾರಣೀ ಪಂಡಿತನೂ ಓದಿ ವಿವಾದಗಳನ್ನು ಸೃಷ್ಟಿಸುತ್ತಿರಲಿಲ್ಲವೆನೋ? ಈ ವಚನಗಳು ಎಷ್ಟು ಸರಳವೆಂದರೆ, ನನ್ನ ಪೋಲೀ ಸ್ನೇಹಿತರುಗಳು ಕೂಡ ಬಸವ, ಅಲ್ಲಮ, ಮತ್ತು ಅಕ್ಕನ ಕುರಿತು ಒಂದು ಪೋಲೀ ವಿವಾದವನ್ನು ತೇಲಿಸಿದ್ದಾರೆ. ಆ ಪೋಲೀ ವಿವಾದವನ್ನು ಕೇಳಿರುವಿರಾ? ಹೀಗಿದೆ ನೋಡಿ ಅದು...

ಅಕ್ಕಮಹಾದೇವಿಯ ವಚನದ "ಚೆನ್ನ ಮಲ್ಲಿಕಾರ್ಜುನ" ಎಂಬ ಅಂಕಿತವನ್ನು ಪುಲ್ಲಿಂಗಕ್ಕೂ, ಅಲ್ಲಮಪ್ರಭುವಿನ "ಗುಹೇಶ್ವರ" ಎಂಬ ಅಂಕಿತವನ್ನು ಸ್ತ್ರೀಲಿಂಗಕ್ಕೂ ಮತ್ತು ಗುರು ಬಸವಣ್ಣನ "ಕೂಡಲಸಂಗಮದೇವ" ಎಂಬ ಅಂಕಿತವನ್ನು ಮಿಲನ ಮಹೋತ್ಸವಕ್ಕೂ ಹೋಲಿಸುತ್ತ, ನನ್ನ ಪೋಲೀ ಲಿಂಗಿಗಳು ವಚನಗಳ ಸಾರವನ್ನು ರಜನೀಶರ "ಸಂಭೋಗದಿಂದ ಸಮಾಧಿ" ತತ್ವದೊಂದಿಗೆ ಸಮೀಕರಿಸುತ್ತಾರೆ! ನನ್ನ ಇನ್ನೊಬ್ಬ ಪೋಲೀ ಸ್ನೇಹಿತ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ "ನೋಟದ ಭಕ್ತಿ ಬಸವನಿಂದಾಯಿತ್ತು, ಕೂಟದ ಜ್ಞಾನ ಬಸವನಿಂದಾಗಿತ್ತು ಕಾಣಾ" ಎಂಬ ಮಡಿವಾಳ ಮಾಚಿದೇವನ ವಚನವನ್ನು ಆಧಾರವಾಗಿಟ್ಟುಕೊಂಡು, ಬಂಜಗೆರೆ ಜಯಪ್ರಕಾಶರ ಪಂಡಿತ ಕೀಟಲೆ ತರ್ಕವನ್ನು ಪ್ರಯೋಗಿಸಿ, ಬಸವಣ್ಣನಿಗೂ ಮಾಚಯ್ಯನಿಗೂ ಸಂಬಂಧವನ್ನು ಕಲ್ಪಿಸುತ್ತಾನೆ!!! ಇದು ವಚನಗಳ ಸರಳತೆಯ ಶೋಷಣೆಯ ಪರಮಾವಧಿ! ಅದನ್ನೇ ಬಂಜಗೆರೆಯಂತಹ ಕೀಟಲೆ ಪಂಡಿತರು ಮಾಡಿದ್ದುದು. ಆದರೆ ಓಲೈಕೆಯ ಭರಕ್ಕೆ ಮೌಲ್ಯಗಳು ಮಣ್ಣುಪಾಲಾಗಿರುವ ಭಾರತದಲ್ಲಿ, ಇಂತಹ ಪರಮಾವಧೀ ಶೋಷಣೆಗಳೇ ವಿಜೃಂಭಿಸುತ್ತಿರುವುದು ಭಾರತದ ಸಾಂಸ್ಕೃತಿಕ/ಸಾಹಿತ್ಯಿಕ/ಐತಿಹಾಸಿಕ ದುರಂತ!

ಹೊಗೇನಕಲ್, ಹಾಲಿವುಡ್ ಲಲನೆಯರು, ಸ್ಯಾಂಡಲ್ ವುಡ್ ಧೀರರು!

ಈಗಷ್ಟೇ ಹೊಗೇನಕಲ್ ಹೊಗೆ ಆರಿದೆ. ಇದು ಬಿರುಗಾಳಿ ಬೀಸುವ ಮುಂಚಿನ ನಿಶ್ಯಬ್ದವಿದ್ದರೂ ಇರಬಹುದು. ಒಟ್ಟಿನಲ್ಲಿ ಇದು ಹಲವಾರು ಜನರ ಬಣ್ಣವನ್ನು ಬಯಲು ಮಾಡಿದೆ. ಆದರೆ ಅದನ್ನು ಗಮನಿಸಿದವರು ಬಹಳ ಕಡಿಮೆಯೇ ಅನ್ನಬಹುದು.

ಕ.ರ.ವೇ. ಸಣ್ಣದಾಗಿ ಆರಂಭಿಸಿದ ಈ ಆಂದೋಲನ ಚುನಾವಣೆ ಮುಂದಾಲೋಚನೆಯ ರಂಗೇರಿಸಿಕೊಂಡು ಉಗ್ರ ಹೋರಾಟದ ಸ್ವರೂಪವನ್ನು ಪಡೆದು, ಇನ್ನೇನು ಸಾಕಷ್ಟು ಬಂದ್, ಲೂಟಿ, ಕಂಡಲ್ಲಿ ಗುಂಡು ಮುಂತಾದವುಗಳು ಜರುಗುತ್ತವೇ ಎಂದುಕೊಳ್ಳುತ್ತಿದ್ದಂತೆಯೇ ಅದ್ಯಾವುದಿಲ್ಲದೆ ಸದ್ಯಕ್ಕೆ ತಣ್ಣಗಾಗಿದೆ. ಇದು ಕನ್ನಡಿಗರ ಹೋರಾಟದ ಫಲವೋ, ಮುದಿ ಕಲೈನ್ಯಾರ್ (ತಮಿಳರು ಕರುಣಾನಿಧಿಯವರನ್ನು ಕರೆಯುವುದು ಹೀಗೆ) ಅರುಳುಮರುಳೋ ತತ್ಕಾಲಿಕವಾಗಿ ತಡೆಯೊಡ್ಡಿದೆ. ಆದರೂ ಈ ಹೋರಾಟ ಸಾಕಷ್ಟು ಸಿನಿ ಪ್ರಖ್ಯಾತರ ಮೇಕಪ್ ಅನ್ನು ಅಳಿಸಿಹಾಕಿದೆ. ಆದರೆ ಮೇಕಪ್ಪಿಗೂ ಬರೀ ಕಪ್ಪಿಗೂ ವ್ಯತ್ಯಾಸವರಿಯದ ಮುಗ್ಧ ಕನ್ನಡಿಗರ ಕಣ್ಣಿಗೆ ಇದು ಅಷ್ಟಾಗಿ ಗಮನಕ್ಕೆ ಬಂದಿಲ್ಲವೆಂದೇ ನನ್ನ ಅನಿಸಿಕೆ.

ಈ ಹೊಗೇನಕಲ್ ಹೋರಾಟಕ್ಕೆ ಬೆಂಬಲಿಸಿ ಅತ್ತ ತಮಿಳುನಾಡಿನ "ನಡಿಗರ್ ಸಂಘಂ" (ನಡಿಗರ್ ಸಂಘಂ ಎಂದರೆ ಕಲಾವಿದರ ಸಂಘವೆಂದು) ಮುಷ್ಕರ ನಡೆಸಿದಾಗ ತನ್ನ ಪ್ರತಿಯೊಬ್ಬ ಸದಸ್ಯರೂ ಭಾಗವಹಿಸಬೇಕೆಂದು ರಾಜಾಜ್ಞೆಯನ್ನು ಹೊರಡಿಸಿತ್ತೋ ಅಥವಾ ಅದರೆಲ್ಲಾ ಸದಸ್ಯರೂ ಸ್ವಯಂ ಭಾಗವಹಿಸಿದರೋ ಒಟ್ಟಾಗೆ ತಮಿಳು ಸಿನಿಮಾರಂಗದ ದಿಗ್ಗಜರೆಲ್ಲಾ ಅಂದು ಅಲ್ಲಿದ್ದರು. ಅಮೇರಿಕಾದಲ್ಲಿ ಶೂಟಿಂಗ್ ಮಾಡುತ್ತಿದ್ದ ಕಮಲಹಾಸನ್ ಕೂಡ ತಕ್ಷಣವೇ ಹೊರಟು ಮಧ್ಯಾಹ್ನದ ಹೊತ್ತಿಗೆ ಮುಷ್ಕರದಲ್ಲಿ ಸೇರಿಕೊಂಡನೆಂದು ನನ್ನ ತಮಿಳು ಸ್ನೇಹಿತನೋರ್ವ ನನ್ನೊಂದಿಗೆ ಹೇಳಿಕೊಂಡನು. ಸದ್ಯ, ಅವನು ಕನ್ನಡ ನಡಿಗರ್ ಸಂಘದ ಮುಷ್ಕರದ ವಿವರಗಳನ್ನು ಕೇಳಲಿಲ್ಲ. ಈಗಾಗಲೇ ಮೆತ್ತಗಾಗಿರುವ ಪಾರ್ವತಮ್ಮ ರಾಜಕುಮಾರ್, ತಮಿಳರ ಅಧಿಪತ್ಯದ ಕನ್ನಡ ಚಾನೆಲ್ಲಿನ ಗೋಳಿನ ಸೀರಿಯಲ್ಲುಗಳ ಹಾಲಿ/ಮಾಜಿ ನಾಯಕಿಯರುಗಳು, ಬೆರಳೆಣಿಕೆಯ ಹಾಲಿ ಸಿನಿಮಾ ಹೀರೋಗಳು, ಅವರೊಂದಿಗೆ ಅವರುಗಳ ಪಟಾಲಂ ಇದ್ದುದನ್ನು, ನನ್ನ ಆ ತಮಿಳು ಮಿತ್ರ ಕೇಳಿದ್ದರೆ ಏನೆಂದು ಹೇಳಬೇಕಿತ್ತೋ?

ಜೀವನವನ್ನು ಹುಡುಕುತ್ತ, ಜೀವನ ಕಂಡಲ್ಲಿ ಜೀವನ ಮಾಡುವುದು ಮಾನವ ಸಹಜ ಗುಣ. ಆ ಮಾನವ ಸಹಜ ಗುಣದಿಂದಲೇ ಅವಕಾಶಗಳನ್ನು ಹುಡುಕುತ್ತ ನಡೆದ ರಜನಿಕಾಂತ್, ಪ್ರಕಾಶ್ ರೈ, ಅರ್ಜುನ್ ಸರ್ಜಾ ಅಂಥವರು ತಮಿಳಿನಲ್ಲಿ ಅವಕಾಶಗಳನ್ನು ಪಡೆದು ಅಲ್ಲಿ ನೆಲೆ ನಿಂತು, ನೆಲೆ ನಿಂತ ಜಾಗಕ್ಕೆ ನಿಷ್ಟೆಯನ್ನು ವ್ಯಕ್ತಪಡಿಸಿರುವುದು ಸಹಜವೇ ಆಗಿದೆ. ಯಾವುದೇ ಪ್ರಾಮಾಣಿಕ ವ್ಯಕ್ತಿ ಕೂಡ ಮಾಡಬೇಕಾದುದು ಅದನ್ನೇ. ಅದಕ್ಕೆ ಕನ್ನಡಿಗರಾದ ನಾವುಗಳು, ಕನ್ನಡ ಮೂಲದ ಆ ನಟರುಗಳ ಬಗ್ಗೆ ಹೆಮ್ಮೆ ಪಡಬೇಕೇ ವಿನಹಃ ಅವರುಗಳನ್ನು ಮೂದಲಿಸಬಾರದೆಂದೇ ನನಗನ್ನಿಸುತ್ತದೆ.

ಅದೇ ನಮ್ಮ ಚಿತ್ರರಂಗದವರನ್ನು ನೋಡಿದಾಗ, ರಾಜಕುಮಾರರ ನಂತರದ ಸ್ಥಾನವನ್ನು ತುಂಬಿದವರು/ತುಂಬುವವರು ಎಂದೆಲ್ಲಾ ಹೇಳಿಸಿಕೊಳ್ಳುವ ನಮ್ಮ ಮಂಡ್ಯದ ಗಂಡು, ಸಾಹಸಸಿಂಹಗಳು ಎಲ್ಲಿದ್ದವೋ? ಕಾರಣಾಂತರಗಳಿಂದ ಈ ಹೋರಾಟಕ್ಕೆ ಭಾಗವಹಿಸಲಾಗದಿದ್ದ ಈ ಧೀರರ ಕಾರಣಗಳು, ಕಮಲಹಾಸನ್ ತನ್ನ ಶೂಟಿಂಗ್ ಸ್ಥಗಿತಗೊಳಿಸಿ ಅಮೇರಿಕಾದಿಂದ ಹೋಗಿ ಭಾಗವಹಿಸುವಂತಹ ಕಷ್ಟವನ್ನೇನೂ ಬಯಸುತ್ತಿದ್ದಿಲ್ಲವೆಂದೇ ಅನಿಸುತ್ತದೆ.

ಲಂಚಕೋರರ ವಿರುದ್ಧ, ದುರುಳ ರಾಜಕಾರಣಿಗಳ ವಿರುದ್ದ ರೆಬೆಲ್ ಆಗಿ ನಟಿಸಿ ಪ್ರಖ್ಯಾತರಾದ ರೆಬೆಲ್ ಸ್ಟಾರ್, ನಮ್ಮಗಳ ಮುಂದೆಯೇ ಅಂತಹ ರಾಜಕಾರಣಿಗಳ ಗುಂಪಿಗೆ ಸೇರಿ ರಾಜಕಾರಣಿಯಾದುದು ಮಾರ್ಮಿಕ ವಿಪರ್ಯಾಸ. ಹಾಗೆಯೇ ಸಾಹಸಸಿಂಹವೂ ಕೂಡ ಯಾವುದೇ ಜನಪರ ಹೋರಾಟಗಳಲ್ಲಿ ಸಿಂಹದಂತೆ ಕಾಣಿಸಿಕೊಳ್ಳದೆ ಮೃಗಾಲಯ ಸಿಂಹವೇ ಆಗಿದೆ. ಕನ್ನಡಿಗರು ಅರಿಯಬೇಕು, ಈ ಸಿನಿಮಾ ಮಂದಿಯಿಂದ ಸುಖವಿಲ್ಲವೆಂಬುದನ್ನು.

ನೀವುಗಳು ಹಾಗೆಯೇ ಈ ಹಾಲಿವುಡ್ ನಟ ನಟಿಯರುಗಳನ್ನು ಗಮನಿಸಿ ನೋಡಿ. ಅವರೆಲ್ಲಾ ಯಾವುದಾದರೊಂದು ಸಾಮಾಜಿಕ ಸೇವೆಗೋ, ಹೋರಾಟಕ್ಕೋ ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜಮುಖಿಗಳಾಗಿರುತ್ತಾರೆ. ತನಗೆ ನಾಲ್ಕು ಮಕ್ಕಳಿದ್ದರೂ ಮಡೋನ್ನಾ ಆಫ್ರಿಕಾದ ಬಡ ಮಗುವೊಂದನ್ನು ದತ್ತು ತೆಗೆದುಕೊಂಡಿದ್ದಾಳೆ. ಏಂಜೆಲಿನಾ ಜೋಲೀ ವಿಶ್ವಸಂಸ್ಥೆಯ ಶಾಂತಿ ರಾಯಭಾರಿಯಾಗಿ ಕಾಂಬೋಡಿಯಾದಲ್ಲಿ ಆಗಾಗ್ಗೆ ಸಮಾಜಸೇವೆಯಲ್ಲಿ ತೊಡಗುತ್ತಾಳೆ. ಪಾಕಿಸ್ತಾನದಲ್ಲಿ ಭೂಕಂಪವಾದಾಗ ತನ್ನ ಗೆಳೆಯ ಬ್ರಾಡ್ ಪಿಟ್ ನೊಂದಿಗೆ ಖುದ್ದಾಗಿ ಭೂಕಂಪ ಸ್ಥಳಕ್ಕೆ ಭೇಟಿಕೊಟ್ಟು ಜನಸೇವೆ ಮಾಡಿದ್ದಾಳೆ. ಭಾರೀ ಎದೆಗಾತಿ ಪಮೇಲಾ ಪ್ರಾಣಿದಯಾ ಸಂಘಕ್ಕೆ ತನ್ನೆದೆಯ ತಿದಿಯೊತ್ತಿ ಹಣ ಸಂಗ್ರಹಿಸುತ್ತಾಳೆ. ಇಲ್ಲಿ ಬರೀ ಹಂಗಸರನ್ನೇ ಉದಹರಿಸಿದ್ದೇನೆ. ಯಾಕೆಂದರೆ ಬರೀ ಹಾಲಿವುಡ್ಡಿನ ಹೆಂಗಸರ್‍ಏ ಇಷ್ಟರ ಮಟ್ಟಿಗೆ ತಮ್ಮ ಖ್ಯಾತಿಯ ಬಲವನ್ನು ಸಮಾಜ ಸೇವೆಗಾಗಿ ಬಳಸುತ್ತಿದ್ದರೆ, ಇನ್ನು ಹಾಲಿವುಡ್ ಗಂಡುಗಳ ಸಮಾಜಸೇವೆಯ ಬಗ್ಗೆ ನೀವೇ ಊಹಿಸಿ!!!

ಇನ್ನು ನಮ್ಮ ಜನಗಳನ್ನು ನೋಡಿ! ರಿಚರ್ಡ್ ಗಿಯರ್ ಯಾರೆಂದು ಕೇಳಿದರೆ ಶಿಲ್ಪಾ ಶೆಟ್ಟಿಗೆ ಕಿಸ್ ಕೊಟ್ಟವನು ಎಂದು ತಡಮಾಡದೆ ಹೇಳುತ್ತಾರೆ. ಆದರೇ ಇದೇ ರಿಚರ್ಡ್ ಗಿಯರ್ ಅದೆಷ್ಟು ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದಾನೆ ಗೊತ್ತೆ? ಎಂದು ಕೇಳಿದರೆ ’ಹು ಕೇರ್‍ಸ್’ ಎನ್ನುತ್ತಾರೆ. ಟಿಬೆಟ್ ಹೋರಾಟವನ್ನು ಬೆಂಬಲಿಸುವ ರಿಚರ್ಡ್ ಗಿಯರ್, ಬಡತನ ನಿವಾರಿಸಬೇಕೆನ್ನುವ ಬಾನೋ, ಏಡ್ಸ್ ಅಳಿಸಿ ಎನ್ನುವ ಬೀಟಲ್ಸ್ ನ ಪೌಲ್ ಮೆಕ್ಕಾರ್‍ಟ್ನಿ, ಮಕ್ಕಳ ಅಭ್ಯುದಯಕ್ಕೆ ಹೋರಾಡುವ ಸ್ಟೀವೆನ್ ಸ್ಪೀಲ್ ಬರ್ಗ್............ಹಾಲಿವುಡ್ಡಿನ ಪ್ರತಿಯೊಬ್ಬ ಹಿರಿ ಕಿರಿ ನಟ, ನಟಿ, ಸಂಗೀತಗಾರ, ಟಿ.ವಿ. ತಾರೆಯರು ಅಷ್ಟೇ ಅಲ್ಲದೆ "ಅಮೇರಿಕನ್ ಐಡಲ್" ನಂತಹ ಟಿ.ವಿ. ಶೋಗಳು ಕೂಡಾ ಚಂದಾ ಎತ್ತಿ ಸಮಾಜವನ್ನು ಕಟ್ಟುವ ಕೈಂಕರ್ಯಕ್ಕೆ ಹಣ ಸಹಾಯ ಮಾಡುತ್ತಿದ್ದಾವೆ. ಇದೆಲ್ಲಾ ಭಾರತದ ನಟ, ನಟಿಯರುಗಳು ಅದ್ಯಾವಾಗ ಮಾಡುತ್ತಾರೋ?

ನಮ್ಮ ಸ್ಯಾಂಡಲ್ ವುಡ್ ಧೀರರು... ಸಮಾಜಸೇವೆಯನ್ನು ಬಿಡಿ, ಅದು ಬಹುದೂರದ ಮಾತು, ತಮ್ಮ ತಮ್ಮ ವೃತ್ತಿ ಬಾಂಧವರೇ ಆದ ರಾಜಾನಂದ್, ನೀಗ್ರೋ ಜಾನಿ ಕೊರಗಿ ಸಾಯುತ್ತಿದ್ದಾಗ ಅವರುಗಳ ಸಹಾಯಕ್ಕೆ ಇವರ್‍ಯಾರೂ ಒದಗದ ನಿದರ್ಶನಗಳು ಇನ್ನೂ ಹಸಿರಾಗಿವೆ. ಇಂಥ ನಾಟಕದ ಮಂದಿಯನ್ನು ನೆಚ್ಚಿಕೊಂಡು ಕನ್ನಡ ಹೋರಾಟಕ್ಕೆ ಹೊರ್‍ಅಟರೆ ಅದರ ಕ್ಲೈಮಾಕ್ಸ್ ಇವರುಗಳ ಚಲನಚಿತ್ರಗಳಂತಿರದೇ ರಾಜಾನಂದ್, ನೀಗ್ರೋ ಜಾನಿ ಅಂತಿಮದಂತಿರುತ್ತದೇನೋ!

ಪ್ರತಿಯೊಂದನ್ನು ಹಾಲಿವುಡ್ ಸಿನಿಮಾಗಳಿಗೆ ಹೋಲಿಸಿಕೊಳ್ಳುವ, ಕನ್ನಡ ಸಿನಿಮಾ ಶೂಟಿಂಗಿಗೆ ಹಾಲಿವುಡ್ಡಿಗೆ ಬರುವ, ತಮ್ಮ ತಲೆಗೋ, ಹೊಟ್ಟೆಗೋ ಅಮೇರಿಕಾದಲ್ಲಿ ತಯಾರಿಸಿದ ವಸ್ತುವೇ ಬೇಕೆನ್ನುವ, ಈ ಭಾವುಕಜೀವಿಗಳು ಕೊಂಚವಾದರೂ ಹಾಲಿವುಡ್ ನಟನಟಿಯರುಗಳ ಪ್ರಾಕ್ಟಿಕ್ಯಾಲಿಟಿಯನ್ನು ಕಲಿಯಬೇಕು.

ಹೊಗೇನಕಲ್ ನಂತಹ ವಿವಾದಗಳಿಗೆ ನ್ಯಾಯಾಲಯ ಹೋರಾಟವೇ ಸರಿಯೆನಿಸುತ್ತದೆ. ಅದನ್ನು ಸೋನಿಯಾ ಸರಿಮಾಡುತ್ತಾರೆನ್ನುವ ಮೊಯ್ಲಿ, ಪ್ರವಾಸ ಹೋಗುವ ಎಡ್ಯೂರಪ್ಪ, ವಿಗ್ಗಿನ ಕೃಷ್ಣ, ಕರ್ನಾಟಕಕ್ಕೆ ಅತಂತ್ರವೇ ಗತಿಯೆನ್ನುವ ದೇವೇಗೌಡ, ಶಿರಡಿ ಸಾಯಿಬಾಬಾ ವೇಷದ ಸಾಹಸಸಿಂಹ, ರಮ್ಮಿನ ಕಣ್ಣಿನ ಮಂಡ್ಯದ ಗಂಡು, ಥೇಟ್ ತಮಿಳು ಕಾಪಿಯಂತಿರುವ ನವ್ಯಪೀಳಿಗೆಯ ಕನ್ನಡ ಸಿನಿಮಾ ನಾಯಕರುಗಳು, ಗೋಸುಂಬೆ ಬುದ್ಧಿಜೀವಿಗಳು, ದಲೈಲಾಮಾರಿಗೆ ’ಬಸವಶ್ರೀ’ ಕೊಟ್ಟು ಪಬ್ಲಿಸಿಟಿ ಪಡೆದು ಈಗವರ ಹೋರಾಟವನ್ನು ಮರೆತಿರುವ ಚಿತ್ರದುರ್ಗದ ಶ್ರೀ, ಇವರುಗಳಿಂದ ನಾಡು ಕಟ್ಟುವ ಕಾರ್ಯವಾಗುವುದೇ? ನಾಡು ಕಟ್ಟಲು ಬೇಕು ಸಾಮಾನ್ಯಜೀವಿಗಳು. ಕನ್ನಡ ಹೋರಾಟ ಸಂಘಗಳು ಈ "ಕನ್ನಡ ಸೆಲೆಬ್ರಿಟಿ"ಗಳನ್ನು ಹೊರಗಿಟ್ಟು ತಮ್ಮ ಹೋರಾಟವನ್ನು ಜನಸಾಮಾನ್ಯರ ಬೆಂಬಲದಿಂದ ಸಂಘಟಿಸುವತ್ತ ಆಲೋಚಿಸಬೇಕು. ಒಂದು ವೇಳೆ ಇವರುಗಳ ಸಹಕಾರವನ್ನು ಬಯಸಿದರೂ ಈ ಸೆಲೆಬ್ರಿಟಿಗಳನ್ನು ಒಂದು ಅನುಮಾನದ ದೃಷ್ಟಿಯಿಂದಲೇ ನೋಡುತ್ತಿರಬೇಕು.

ಅಣಕ:

ಹೊಗೇನಕಲ್ ಹೋರಾಟಕ್ಕೆ ಬೆಂಭಲ ವ್ಯಕ್ತಪಡಿಸಿ ಕನ್ನಡ ಚಿತ್ರರಂಗದ ಮುಶ್ಕರಕ್ಕೆ ನಿಮಗೆಲ್ಲಾ ಹಾದರದ ಅಹ್ವಾನ! ಹೀಗೂ ಇರುತ್ತವೆ ಒಮ್ಮೊಮ್ಮೆ ಬೆಂಗಳೂರು ಕೇಂದ್ರಿತ ಕನ್ನಡ ಚಿತ್ರರಂಗದ ಜಾಹೀರಾತುಗಳು!

ಚೈನಾದ(?) ಟಿಬೆಟ್ಟೂ, ಭಾರತದ ಕಮ್ಯುನಿಸ್ಟರೂ.

ಈ ಬಾರಿ ಚೈನಾದಲ್ಲಿ ನಡೆಯಲಿರುವ ಒಲಿಂಪಿಕ್ಸ್ ಹತ್ತಿರ ಬರುತ್ತಿದ್ದಂತೆಯೇ ಚೈನಾದಿಂದ ಸ್ವಾತಂತ್ರ್ಯಕ್ಕೆ ಹೋರಾಡುತ್ತಿರುವ ಟಿಬೆಟ್ ಹೋರಾಟ ತೀವ್ರವಾಗುತ್ತಿದೆ.

ಹಾಗೆಯೇ ಟಿಬೆಟ್ ಇತಿಹಾಸವನ್ನು ಗಮನಿಸಿದಾಗ, ೧೬೪೪ ರಿಂದ ೧೯೧೨ರವರೆಗೆ ಚೈನಾವನ್ನಾಳಿದ ಕಿಂಗ್ಃ ರಾಜಪರಿವಾರದವರು ಟಿಬೆಟ್ಟಿಗೆ ದಲೈ ಲಾಮಾರನ್ನು ಧಾರ್ಮಿಕ ಮತ್ತು ರಾಜ್ಯಾಡಳಿತದ ಆಧಿಕಾರಿಯಾಗಿ ನೇಮಿಸಿದ್ದರು. ೧೯೧೧ರ ವರೆಗೆ ಚೈನಾದ ಅಧಿಪತ್ಯವನ್ನೊಪ್ಪಿಕೊಂಡು ಟಿಬೆಟ್ಟಿನ ಆಗಿಹೋದ ಎಲ್ಲಾ ದಲೈಲಾಮಾರು ಟಿಬೆಟ್ಟಿನ ಆಡಳಿತವನ್ನು ನಡೆಸಿದ್ದರು. ಐತಿಹಾಸಿಕವಾಗಿ ೧೯೧೧ರಲ್ಲಿ ಕಿಂಗ್ಃ ರಾಜಪರಿವಾರವು ಚೈನಾ ಅಧಿಪತ್ಯದ ಅಧಿಕಾರವನ್ನು ಕಳೆದುಕೊಂಡಾಗ ಟಿಬೆಟ್ ತನ್ನನ್ನು ಸ್ವತಂತ್ರ ದೇಶವೆಂದು ಘೋಷಿಸಿಕೊಂಡಿತು. ಹಾಗೆ ಸ್ವತಂತ್ರವನ್ನು ಘೋಷಿಸಿಕೊಂಡ ಟಿಬೆಟ್ ೧೯೫೧ರವರೆಗೆ ದಲೈ ಲಾಮಾರ ಅಧಿಕಾರದಲ್ಲಿ ಸ್ವತಂತ್ರ ದೇಶದಂತೆಯೇ ವ್ಯವಹರಿಸಿತು. ೧೯೧೧ರ ನಂತರದಲ್ಲಾದ ರಾಜಕೀಯ ಪರಿವರ್ತನೆ, ಅಂತರಿಕ ಕಲಹಗಳಿಂದಾಗಿ ಚೈನಾ ಕಮ್ಯುನಿಸ್ಟ್ ದೇಶವಾಗಿ ಹೊರಹೊಮ್ಮಿ ಚೈನಾದ ಮೇಲೆ ಹಿಡಿತವನ್ನು ಸಾಧಿಸುವ ಸುಧೀರ್ಘ ಪಯಣದಲ್ಲಿ ಟಿಬೆಟ್ ನ ಕುರಿತು ತಲೆಕೆಡಿಸಿಕೊಂಡಿರಲಿಲ್ಲ. ತಲೆ ಕೆಡಿಸಿಕೊಳ್ಳಲು ಚೈನಾಕ್ಕೆ ಸಾಕಷ್ಟು ಚೈನಾ ಮುಖ್ಯಭೂಮಿಯ ಅಂತರಿಕ ವ್ಯವಹಾರಗಳೇ ಸಾಕಷ್ಟಿದ್ದವು. ಟಿಬೆಟ್ ತನ್ನನ್ನು ಸ್ವತಂತ್ರ ರಾಷ್ಟ್ರವೆಂದುಕೊಂಡಿದ್ದರೂ ಇನ್ನಿತರೆ ಯಾವುದೇ ರಾಷ್ಟ್ರಗಳು ಟಿಬೆಟ್ಟನ್ನೊಂದು ರಾಷ್ಟ್ರವೆಂದು ಅಧಿಕೃತವಾಗಿ ಗುರುತಿಸಿ ಮಾನ್ಯತೆಯನ್ನು ಕೊಟ್ಟ ದಾಖಲೆಯಿಲ್ಲ. ಅಕ್ಟೋಬರ್ ೧, ೧೯೪೯ರಲ್ಲಿ ಕಡೆಗೂ "ಪೀಪಲ್ ರಿಪಬ್ಲಿಕ್ ಆಫ್ ಚೈನಾ" ಸ್ಥಾಪನೆಗೊಂಡು, ಬೀಜಿಂಗ್ ಮೇಲೆ ಸಂಪೂರ್ಣ ಹಿಡಿತವನ್ನು ಸಾಧಿಸಿ, ಮರುವರ್ಷವೇ ಟಿಬೆಟ್ ಅನ್ನು ವಶಪಡಿಸಿಕೊಳ್ಳಲು ತನ್ನ ನಲವತ್ತು ಸಾವಿರ ಸೈನಿಕರನ್ನು ಕಳುಹಿಸಿತು.

ಧರ್ಮ, ಶಾಂತಿ, ಬುದ್ಧ, ಹಿಮಾಲಯ, ದಲೈಲಾಮಾ, ಟಿಬೆಟ್ ಇಷ್ಟೇ ಜೀವನವೆಂದು, ತಾವಿರುವುದೇ ಸ್ವರ್ಗವೆಂದು ಮುಗ್ಧರಾಗಿ ಜೀವಿಸುತ್ತಿದ್ದ ಟಿಬೆಟನ್ನರಿಗೆ ಚೈನಾದ ಆಕ್ರಮಣ ದಿಗ್ಭ್ರಾಂತರನ್ನಾಗಿಸಿತು. ಶಸ್ತ್ರಾಸ್ತ್ರಗಳೇ ಇಲ್ಲದ, ಕೇವಲ ಐದು ಸಾವಿರ ಸೈನಿಕರಿದ್ದ ಟಿಬೆಟ್ ಸೈನ್ಯದ ಗುಬ್ಬಿ ಚೈನಾದ ಬ್ರಹ್ಮಾಸ್ತ್ರದೆದುರು ಸುಟ್ಟು ಕರಕಲಾಗಿಹೋಯಿತು.

ಈ ಮಧ್ಯೆ ಬ್ರಿಟಿಷರು ೧೯೧೪ರಲ್ಲಿ ಟಿಬೆಟ್ಟಿನ ಮೇಲೆ ಒತ್ತಡವನ್ನು ತಂದು ಟಿಬೆಟ್ಟನ್ನು ಒಳ ಟಿಬೆಟ್ ಮತ್ತು ಹೊರ ಟಿಬೆಟ್ ಎಂದು ವಿಭಜಿಸಿ ಒಳ ಟಿಬೆಟ್ಟನ್ನು ಟಿಬೆಟ್ ಎಂದೂ ಹೊರ ಟಿಬೆಟ್ಟನ್ನು (ಇಂದಿನ ಅರುಣಾಚಲ ಪ್ರದೇಶ) ಭಾರತದ ಭೂಭಾಗಕ್ಕೆ ಸೇರಿಸಿಕೊಂಡು "ಮೆಕ್ ಮಹಾನ್’ಎಂಬ ಗಡಿಯ ಗೆರೆಯನ್ನು ಎಳೆದರು. ಇದನ್ನೊಪ್ಪಿ ದಲೈ ಲಾಮಾ ಮತ್ತು ಅಂದಿನ ಭಾರತದ ಬ್ರಿಟಿಷ್ ಸರ್ಕಾರಗಳು ಒಡಂಬಡಿಕೆಗೆ ಸಹಿ ಹಾಕಿದವು. ಇದನ್ನೇ ಚೈನಾ, ಎಂದೂ ಸ್ವತಂತ್ರ ರಾಷ್ಟ್ರವಾಗಿರದ ಟಿಬೆಟ್ ಸಹಿ ಹಾಕಿದ ಈ ’ಮೆಕ್ ಮಹಾನ್’ ಒಪ್ಪಂದ ಕಾನೂನುಬಾಹಿರವೆನ್ನುತ್ತ, ಭಾರತದ ಅರುಣಾಚಲ ಪ್ರದೇಶ ತನ್ನ ಭೂಭಾಗವೆಂದು ಹೇಳಿಕೊಳ್ಳುವುದು.

ಇರಲಿ ಚೈನಾ ಏನೇ ಹೇಳಿಕೊಂಡರೂ, ಯಾವುದೇ ಇತರೆ ರಾಷ್ಟ್ರಗಳು ಟಿಬೆಟ್ಟನ್ನು ಒಂದು ರಾಷ್ಟ್ರವಾಗಿ ಮಾನ್ಯ ಮಾಡಿರದಿದ್ದರೂ ಟಿಬೆಟ್ ೧೯೧೨ರಿಂದ ೧೯೫೧ ರವರೆಗೆ ಸ್ವತಂತ್ರವಾಗಿದ್ದುದು ಸತ್ಯ! ಅದಕ್ಕೂ ಮೊದಲಿನಿಂದಲು ಕೂಡ ಟಿಬೆಟ್ ಸ್ವತಂತ್ರವಾಗಿ ತನ್ನ ಅಂತರಿಕ ವ್ಯವಹಾರಗಳನ್ನು ನಡೆಸುತ್ತಿತ್ತು. ಕಿಂಗ್ಃ ರಾಜಪರಿವಾರವು ಕೂಡ ದಲೈ ಲಾಮಾ ತಮ್ಮ ಧರ್ಮಗುರುಗಳೆಂದೋ, ಪೂಜ್ಯರೆಂದೋ ಅಥವ ಟಿಬೆಟನ್ನರ ಸಂಸ್ಕೃತಿ ಮುಖ್ಯ ಚೈನಾದಿಂದ ಭಿನ್ನವೆಂದೋ ಗೌರವಿಸಿ, ಟಿಬೆಟ್ ಮೇಲೆ ಯಾವುದೇ ತೆರಿಗೆಗಳನ್ನು ವಿಧಿಸದೆ ಸಂಪೂರ್ಣ ಸ್ವಾಯತ್ತತೆಯನ್ನು ಕೊಟ್ಟಿದ್ದರು. ಹಾಗಾಗಿ ಒಂದು ಪುರಾತನ ಸಂಸ್ಕೃತಿಯ ರಾಷ್ಟ್ರವಾಗಿ ತಮ್ಮ ಪಾಡಿಗೆ ತಾವಿರುತ್ತಿದ್ದ ಟಿಬೆಟನ್ನರು ಕೂಡ ಯಾವುದೇ ರಾಷ್ಟ್ರಗಳ ಮಾನ್ಯತೆಯನ್ನಾಗಲಿ, ಪುರಸ್ಕಾರವನ್ನಾಗಲಿ ಕೇಳುವ/ದಾಖಲಿಸುವ ಗೋಜಿಗೆ ಹೋಗಲಿಲ್ಲ. ಶಾಂತಿಯೇ ಜೀವನವೆನ್ನುವ, ಧಾರ್ಮಿಕ ಗುರುವೇ ರಾಜನೆನ್ನುವದು ಟಿಬೆಟನ್ನರ ವಿಶಿಷ್ಟ ಸಂಸ್ಕೃತಿ. ವ್ಯಾಟಿಕನ್ ಮಾದರಿಯಲ್ಲಿ ಟಿಬೆಟ್ ಕೂಡ ಬಹುಕಾಲದಿಂದಲೂ ಧಾರ್ಮಿಕ ಹಿನ್ನೆಲೆಯ ರಾಷ್ಟ್ರವಾಗಿದ್ದಿತೆನ್ನುವುದು ಅದರ ಹಿನ್ನೆಲೆಯನ್ನು ನೋಡಿದರೆ ಯಾರಿಗಾದರೂ ಅರ್ಥವಾಗುತ್ತದೆ.

ಆ ಎಲ್ಲಾ ವಿಷಯಗಳನ್ನರಿತು, ಟಿಬೆಟ್ಟಿನ ಸಂಸ್ಕೃತಿಯನ್ನು ಗೌರವಿಸಿ ಉಳಿಸಬೇಕಾದ ನಿಜ ಕಳಕಳಿಯಿಂದಲೇ ಜಗತ್ತಿನ ಎಲ್ಲಾ ಬುದ್ಧಿಜೀವಿಗಳು ಟಿಬೆಟ್ಟನ್ನು ಇಂದು ಒಕ್ಕೊರಲಿನಿಂದ ಬೆಂಬಲಿಸುತ್ತಿದ್ದಾರೆ. ಹಾಗೆಯೇ ಭಾರತವು ಕೂಡ ಬೆಂಬಲಿಸಬೇಕು, ಇಲ್ಲವೆಂದರೆ ಭಾರತ ಚೈನಾ ತರ್ಕವನ್ನು ಒಪ್ಪುವುದಾದರೆ ಅರುಣಾಚಲ ಪ್ರದೇಶವನ್ನು ಬಿಟ್ಟುಕೊಡಬೇಕೇನೋ!

ಈಗ ನಮ್ಮೊಳಗಿರುವ ರಾಜಕಾರಣೀ ಕಮ್ಯುನಿಸ್ಟರ ಟಿಬೆಟ್ ಕುರಿತಾದ ಹೇಳಿಕೆಗಳನ್ನು ಗಮನಿಸಿ. ಟಿಬೆಟ್ಟನ್ನು ಕಾಶ್ಮೀರಕ್ಕೆ ಹೋಲಿಸುತ್ತ, ಇದು ಚೈನಾದ ಆಂತರಿಕ ವಿಷಯವಾದ್ದರಿಂದ ನಾವುಗಳು ಇದನ್ನು ಬೆಂಬಲಿಸಬಾರದು ಎನ್ನುತ್ತಿದ್ದಾರೆ. ಆ ತರ್ಕವನ್ನು ಒಪ್ಪುವುದಾದರೆ, ಶತಮಾನಗಳಿಂದ ಇತ್ತೀಚಿನವರೆಗೆ ಭಾರತದ ಅವಿಭಾಜ್ಯ ಅಂಗಗಳಾಗಿದ್ದ ಅಫ್ಘನಿಸ್ತಾನ, ಪಾಕಿಸ್ತಾನ, ಬಾಂಗ್ಲಾದೇಶಗಳನ್ನು ಮುಂದೊಂದು ದಿನ ಸಧೃಢ ಭಾರತವು ಆಕ್ರಮಿಸಿಕೊಂಡು ತನ್ನನ್ನು ಸಮಗ್ರವಾಗಿ ಒಗ್ಗೂಡಿಸಿಕೊಳ್ಳಲು ಮುಂದಾಗಬಹುದೆಂದೇ?

ಯಾವುದೋ ಕಾಲದ ಸತ್ತ ತತ್ವಗಳನ್ನಿಟ್ಟುಕೊಂಡು ಬೊಗಳೆ ಬಿಡುತ್ತ ರಾಜಕೀಯದಲ್ಲಿ ತೊಡಗಿರುವ ಈ ಕಮ್ಯುನಿಸ್ಟರು, ಕನಿಷ್ಟ ಆ ತತ್ವಗಳಿಗೆ ಬದ್ಧರಾಗಿದ್ದಾರೆಯೇ? ಕಮ್ಯುನಿಸ್ಟ್ ಪಾರ್ಟಿಗಳೆಲ್ಲ ರಾಜಕೀಯ ಪಕ್ಷಗಳಾಗಿ, ಕಮ್ಯುನಿಸ್ಟರು ಫ್ಯಾಕ್ಟರೀ ಮಾಲೀಕರನ್ನು ಬೆದರಿಸುತ್ತ ಹಫ್ತಾ ವಸೂಲಿಸುತ್ತ ಬಂಡವಾಳಶಾಹಿಗಳೂ ನಾಚುವಂತೆ ಆಸ್ತಿಗಳನ್ನು ಮಾಡಿಕೊಂಡಿದ್ದಾರೆ. ಕೇರಳದಲ್ಲಿ ಈ ಕಾಮ್ರೇಡುಗಳ ಉಪಟಳದಿಂದಲೇ ಉದ್ದಿಮೆದಾರರು ಜಾಗ ಖಾಲಿ ಮಾಡಿದ್ದಾರೆ. ಹಾಗಾಗಿಯೇ ಅಲ್ಲಿನ ನೌಕರಶಾಹೀ ಉದ್ಯೋಗವನ್ನರಸಿ ದೇಶದೆಲ್ಲೆಡೆ ಉದ್ಯೋಗದಲ್ಲಿರುವುದು. ಇಂದು ಬೆಂಗಳೂರಿನಲ್ಲಿ ಅಧಿಕ ಮಲೆಯಾಳಿಗಳಿರುವುದಕ್ಕೆ ಈ ಕಾಮ್ರೇಡರೂ ಕಾರಣರು! ಈ ಕಾಮ್ರೇಡುಗಳು ತಮ್ಮ ಮಕ್ಕಳನ್ನು ಬಂಡವಾಳಶಾಹೀ ಅಮೇರಿಕಾಗೆ ಓದಲು ಕಳುಹಿಸಿ, "ಅಲ್ಲಿಯೇ ಸೆಟ್ಲ್ ಆಗು" ಎಂದು ಆಶೀರ್ವದಿಸುತ್ತಾರೆ. ನಾನೇ ನೋಡಿದಂತೆ ಆಂಧ್ರದ ಎಷ್ಟೋ ಕಮ್ಯುನಿಸ್ಟರು ತಮ್ಮ ಮಕ್ಕಳಿಗೆ ತಮ್ಮದೇ ಜಾತಿಯ, ತಮ್ಮ ಅಂತಸ್ತಿಗೆ ಹೊಂದುವಂತಹವರಲ್ಲಿ ಮಾತ್ರ ಸಂಬಂಧಗಳನ್ನು ಬೆಳೆಸಿರುವರೇ ವಿನಹ ಅಂತರ್ಜಾತೀಯ ಬಡ ಕುಟುಂಬಗಳೊಡನೆ ಸಂಬಂಧಗಳನ್ನು ಮಾಡಿರುವುದನ್ನು ನಾನು ನೋಡಿಯೇ ಇಲ್ಲ. ಈ ಕ್ಯಾಪಿಟಲಿಸ್ಟ್ ಕಮ್ಯುನಿಸ್ಟರು ಘನತೆಗಾಗಿ ವರದಕ್ಷಿಣೆಯನ್ನು ಕೇಳುವುದಿಲ್ಲ ಆದರೆ ಹುಡುಗಿಯ ಪಾಲಿನ ಎಲ್ಲಾ ಆಸ್ತಿಯೂ ಇವರಿಗೆ ಬೇಕೆನ್ನುತ್ತಾರೆ!

ಇವರನ್ನು ಬಿಡಿ, ಎಷ್ಟೇ ಆಗಲಿ ರಾಜಕಾರಣಿಗಳು, ಅದರಲ್ಲೂ ಭಾರತೀಯ ರಾಜಕಾರಣಿಗಳು! ಆದರೆ ಇಡೀ ಜಾಗತಿಕ ಜಗತ್ತಿನ ಬುದ್ಧಿಜೀವಿಗಳೆಲ್ಲ ಒಕ್ಕೊರಲಿನಿಂದ ಟಿಬೆಟ್ ಹೋರಾಟವನ್ನು ಬೆಂಬಲಿಸುತ್ತಿದ್ದರೆ, ನಮ್ಮ ಭಾರತದ ಅತೀ ಬುದ್ಧಿಜೀವಿಗಳು ಕೊಂಚವಾದರೂ ಉಸಿರೆತ್ತುತ್ತಿಲ್ಲ. ಚೈನಾದ ಅಂದಿನ ಆಕ್ರಮಣದಲ್ಲಿ ಸಾವಿರಾರು ಟಿಬೆಟನ್ನರು ಸತ್ತು, ಅದನ್ನು ಮುಂದುವರಿದ ಕೆಲ ರಾಷ್ಟ್ರಗಳು ’ಜೆನೊಸೈಡ್’/ಮಾರಣಹೋಮ ಎಂದು ಅಭಿಪ್ರಾಯಿಸಿ, ಟಿಬೆಟ್ ಹೋರ್‍ಆಟವನ್ನು ಜಾಗತಿಕ ಜಗತ್ತಿನ ಬುದ್ಧಿ ಇರುವ ಎಲ್ಲಾ ವರ್ಗದ ಜನಗಳು ಬೆಂಬಲಿಸುತ್ತಿದ್ದರೆ, ನಮ್ಮ ಬಲ ಪಂಥೀಯ/ಎಡ ಪಂಥೀಯ ಬುದ್ಧಿಜೀವಿಗಳಾಗಲಿ ಇನಿತಾದರೂ ಉಸಿರೆತ್ತದೆ ಜಾಣ ಮರೆವು ತೋರಿಸುತ್ತಿದ್ದಾರೆ. ಬಹುಶಃ ಇವರುಗಳ ಮಟ್ಟಿಗೆ ಭಾರತದ ಬಹುಸಂಖ್ಯಾತ ಅಥವ ಅಲ್ಪಸಂಖ್ಯಾತರನ್ನೊಳಗೊಂಡಿರದ ಯಾವುದೇ ಸಮಸ್ಯೆಗಳೂ ಸಮಸ್ಯೆಗಳೇ ಅಲ್ಲವೇನೋ!

ಸರಿ ಈ ಅತೀ ಬುದ್ಧಿವಂತರನ್ನು ಬಿಡಿ, ಶತಮಾನಗಳಿಂದ ತುಳಿತಕ್ಕೊಳಗಾಗಿದ್ದ, ಆದರೆ ಈಗ ಹೋರಾಟದ ಮಂಚೂಣಿಯಲ್ಲಿರುವ, ಬುದ್ಧನನ್ನು ಮೆಚ್ಚಿ, ಸಾಮಾಜಿಕ ಸಮಾನತೆಯ ಸಮನ್ವಯಕ್ಕಾಗಿ ಬೌದ್ಧಮತವನ್ನು ಸ್ವೀಕರಿಸಿರುವ ಲಕ್ಷೋಪಲಕ್ಷ ದಲಿತರು ಕೂಡ ಟಿಬೆಟ್ ಹೋರಾಟಕ್ಕೆ ಸಹಾನುಭೂತಿಯನ್ನು ತೋರದಿರುವುದು ಬುದ್ಧನ ದುರಾದೃಷ್ಟವೇ ಆಗಿದೆ!

ಅಂದು ಟಿಬೆಟನ್ನರು ಟಿಬೆಟ್ಟಿನಿಂದ ಓಡಿಬಂದಾಗ ಆಶ್ರಯ ಕೊಟ್ಟು ಆಗಷ್ಟೆ ಸ್ವತಂತ್ರನಾಗಿದ್ದ ಭಾರತೀಯ ವಿಶಾಲಹೃದಯವನ್ನು ಮೆರೆದರೆ, ಇಂದು ಆ ಸ್ವಾತಂತ್ರ್ಯದ ಅಮಲಿನಲ್ಲಿ ಅದೇ ಭಾರತೀಯ ಟಿಬೆಟನ್ನರ ಸ್ವಾತಂತ್ರ್ಯದ ಹೋರಾಟವನ್ನೇ ಮರೆತಿದ್ದಾನೆ. ಹೇಗೂ ಇತ್ತೀಚಿನ ಒಲಿಂಪಿಕ್ಸ್ ಗಳಲ್ಲಿ ಒಂದೂ ಪದಕ ಪಡೆಯದ ನಾವುಗಳು, ಈ ಬಾರಿ ಟಿಬೆಟ್ ನೆಪದಲ್ಲಿ ಒಲಿಂಪಿಕ್ಸ್ ಬಹಿಷ್ಕರಿಸಿ, ಆಟಗಳಲ್ಲಿ ಸೋಲುವ ಮುಖಭಂಗ ಮತ್ತು ಟಿಬೆಟನ್ನರಿಗೆ ಸಹಾನುಭೂತಿಯ ಆಂತಃಕರಣ ತೋರಿಸುವ, ಒಂದೇ ಏಟಿಗೆ ಎರಡು ಹಕ್ಕಿಗಳನ್ನು ಹೊಡೆಯುವ ಆಲೋಚನೆ ನಮ್ಮ ಕುಟಿಲ ನಾಯಕರುಗಳಿಗೆ ಹೊಳೆದಿಲ್ಲವೇಕೋ? ಬಹುಶಃ ಅವರ ಸರ್ಕಾರದಲ್ಲಿನ ಪಾಲುದಾರ ಮಿತ್ರ ಕಮ್ಯುನಿಸ್ಟರ ಭಯವಿರಬೇಕು.

ಅಣಕ:

ಒಮ್ಮೆ ಕ್ರಿಶ್ಚಿಯನ್ ಮಿಷನರಿಯೊಬ್ಬ ಒಂದು ಹಳ್ಳಿಗೆ ಮತಪ್ರಚಾರಕ್ಕೆ ಹೋಗಿದ್ದ. ಜನರಲ್ಲಿ ವಿಶ್ವಾಸ ಹುಟ್ಟಿಸಲೋ ಅಥವ ಮಕ್ಕಳ ಬಗೆಗಿನ ನಿಜ ಕಕ್ಕುಲಾತಿಯೋ ಅಂತೂ ಅಲ್ಲಿ ಬೀದಿಯಲ್ಲಿ ಕಂಡ ಕೊಳಕು ಮಗುವನ್ನೆತ್ತಿ ಮುದ್ದಿಸುತ್ತ ತನ್ನ ತೊಡೆಯ ಮೇಲೆ ಕುಳ್ಳಿರಿಸಿಕೊಂಡು ಒಂದು ಚಾಕೋಲೇಟ್ ಕೊಟ್ಟ. ಇದನ್ನು ಕಂಡ ಆ ಊರಿನ ಬಲಪಂಥೀಯ ಬುದ್ದಿಜೀವಿಯೊಬ್ಬ "ಹೋ! ಇವನೊಬ್ಬ ಮಕ್ಕಳ ಕಾಮಿ, ಹೊಡೆಯಿರಿ ಬಡಿಯಿರಿ" ಎಂದು ಬೊಬ್ಬೆ ಹಾಕಿದ. ಸರಿ, ಗ್ರಾಮಸ್ಥರೆಲ್ಲಾ ಸೇರಿಕೊಂಡು ಆ ಮಿಷನರಿಯನ್ನು ಹಿಗ್ಗಾಮುಗ್ಗಾ ಥಳಿಸಿದರು.

ಮರುದಿನ ಈ ಸುದ್ದಿಯನ್ನು ಕೇಳಿದ ಎಡಪಂಥೀಯ ಬುದ್ದಿಜೀವಿಗಳು "ಹಿಂದೂ ಮತೀಯವಾದಿಗಳು ಈ ಕೃತ್ಯದ ಹಿಂದಿದ್ದಾರೆ. ಅವರನ್ನು ಬಂಧಿಸಿ" ಎಂದು ಆಂದೋಲನ ನಡೆಸಿದರು. ಇದಕ್ಕೆ ಪ್ರತಿಸ್ಪಂದಿಸಿದ ಸರ್ಕಾರ ಆ ಗ್ರಾಮಸ್ಥರನ್ನೆಲ್ಲಾ ಬಂಧಿಸುವಂತೆ ಆದೇಶಿಸಿತು. ಆದರೆ ದುರದೃಷ್ಟವಶಾತ್ ಆ ಗ್ರಾಮದಲ್ಲಿದ್ದವರೆಲ್ಲಾ ಮುಸಲ್ಮಾನರಾಗಿದ್ದರು! ಹಾಗೆ ಬಂಧನಗೊಂಡು ಪೋಲೀಸರಿಂದ ಹಿಗ್ಗಾಮುಗ್ಗಾ ಥಳಿಸಿಕೊಂಡು ಬಿಡುಗಡೆಗೊಂಡ ಗ್ರಾಮಸ್ಥರು ಮುಸಲ್ಮಾನರೆಂದು ತಿಳಿದು ಮತ್ತೆ ಬುದ್ದಿಜೀವಿಗಳು "ಇದು ಪೊಲೀಸ್ ದೌರ್ಜನ್ಯ. ಪೊಲೀಸರು ಬೇಕೆಂತಲೇ ಪಕ್ಕದ ಹಳ್ಳಿಯ ಮುಸಲ್ಮಾನರನ್ನು ಬಂಧಿಸಿ ಥಳಿಸಿದ್ದಾರೆ. ಪಕ್ಕದ ಹಳ್ಳಿಯವರನ್ನು ಬಂಧಿಸಿ" ಎಂದು ಬೊಬ್ಬೆ ಹಾಕಿದರು. ಅಲ್ಲಿಗೆ ತಮಗರಿವಿಲ್ಲದಂತೆಯೇ ಆ ಸುತ್ತಮುತ್ತಲ ಗ್ರಾಮಸ್ಥರೆಲ್ಲಾ ಶಾಶ್ವತ ಮತೀಯವಾದಿಗಳಾಗಿ ಪರಿವರ್ತಿತರಾದರು!

ಇದು ಉತ್ಪ್ರೇಕ್ಷೆ ಎನಿಸಿದರೂ ಇಂದಿನ ಭಾರತದಲ್ಲಿ ಇದೇ ಆಗುತ್ತಿರುವುದು! ಹಿಂದೆ ರಾಜಕಾರಣಿಗಳು ಮಾಡುತ್ತಿದ್ದುದನ್ನು ಇಂದು ರಾಜಕಾರಣಿ ಪ್ರೇರಿತ ಬುದ್ದಿಜೀವಿಗಳು ಮಾಡುತ್ತಿದ್ದಾರೆ.

ಸಾಮಾನ್ಯಜೀವಿಗಳೇ ನಿಮ್ಮ ನಿಮ್ಮ ಬುದ್ದಿಯನ್ನು ಉಪಯೋಗಿಸಿ. ಅದನ್ನು ಈ ಬುದ್ದಿಜೀವಿಗಳಿಗೆ ಔಟ್ ಸೋರ್ಸ್ ಮಾಡಬೇಡಿ!