ಚೋಲಿ ಕೆ ಪೀಚೆ ಕ್ಯಾ ಹೈ, ಚೋಲಿ ಕೆ ಪೀಚೆ? ಚುನರಿ ಕೆ ನೀಚೆ ಕ್ಯಾ ಹೈ, ಚುನರಿ ಕೆ ನೀಚೆ?

ಚೋಲಿ ಕೆ ಪೀಚೆ ಕ್ಯಾ ಹೈ, ಚೋಲಿ ಕೆ ಪೀಚೆ? ಚುನರಿ ಕೆ ನೀಚೆ ಕ್ಯಾ ಹೈ, ಚುನರಿ ಕೆ ನೀಚೆ?

ದಿಢೀರನೆ ಈಗ ಗತಕಾಲದ ಸುಂದರಿ ಮಾಧುರಿ ನೆನಪಾಗಲು ಕಾರಣವೆಂದರೆ ನನ್ನ ಟ್ಯಾಗ್ಲೈನ್ ಕುರಿತು ಇತ್ತೀಚೆಗೆ ಹೆಚ್ಚು ಯುವ ಮನಸ್ಸುಗಳು ಮೇಲಿನ ಹಾಡಿನಂತೆಯೇ ಕೇಳುತ್ತಿವೆ. ನಾನು ಹದಿಹರೆಯದಲ್ಲಿದ್ದಾಗ ಪಡ್ಡೆಯಾಗಿದ್ದಾಗ ಇಂದಿನ ದೈವಿಕ ಯುವಪಡೆಯಂತಿರಲಿಲ್ಲದಿದ್ದರೂ ಅವರಂತೆಯೇ ಆತುರಗಾರನಾಗಿದ್ದೆ. ಹಾಗೆಂದು ಅಂದಿನ ನನ್ನ ಖಾಸಾ ಸ್ನೇಹಿತೆ ಸಮಾಧಾನದಿಂದ ಕುಚೋದ್ಯವಾಗಿ ಹೇಳುತ್ತಿದ್ದಳು. ಹಾಗಾಗಿ ನನ್ನ ಟ್ಯಾಗ್ಲೈನ್ ಕುರಿತಾದ ಕಳವಳವನ್ನು ಅರ್ಥ ಮಾಡಿಕೊಳ್ಳಬಲ್ಲೆ.

ಚೋಲಿ ಕೆ ಪೀಚೆ ಚುನರಿ ಕೆ ನೀಚೆ ಏನಿದೆಯೆಂದು ಮಾಧುರಿ ಎದೆ ಹಾರಿಸುತ್ತಾ, ಸೊಂಟ ತಿರುವುತ್ತ ದಿಲ್ ದಿಲ್ ದಿಲ್ ಎಂದು ಏರುದನಿಯಲ್ಲಿ ಉನ್ಮತ್ತಳಾಗಿ ಹೇಳಿದರೂ ಅಲ್ಲಿ ಕೇವಲ ದಿಲ್ ಮತ್ತು ದಿಲ್ ಮಾತ್ರ ಇದೆ. ಪ್ರೇಮಕ್ಕೆ ಮಿಡಿಯುವ ವಿಶಾಲ, ನಿಷ್ಠ, ಪ್ರಮಾಣಿಕ ದಿಲ್!

ಕಳೆದ ಹತ್ತು ವರ್ಷಗಳಿಂದ ಬಳಸುತ್ತಿರುವ ನನ್ನ ಟ್ಯಾಗ್ಲೈನ್ ಇತ್ತೀಚಿನದಲ್ಲ. ಆದರೆ ಇದನ್ನು ಪ್ರಶ್ನಿಸುತ್ತಿರುವವರು ನನ್ನ ನವನವೀನ ಯುವಮಿತ್ರರು. ನಾನು ಈ ಹಿಂದೆಯೇ ಅನೇಕ ಸಾರಿ ಈ ಪ್ರಶ್ನೆ ಬಂದಾಗ ಏಕೆ ಈ ಟ್ಯಾಗ್ಲೈನ್ ಎಂದು ಹೇಳಿದ್ದೇನೆ. ನೀವು ಹೇಳುವ ಐತಿಹಾಸಿಕ ಅಭಿಮಾನದ ಭಾರತ ಬೇರೆ. ನಾನು ಹೇಳುತ್ತಿರುವುದು ಪ್ರಜಾಪ್ರಭುತ್ವದ ಇಂದಿನ ವಾಸ್ತವದ ಭಾರತ. ಅದು ಹೇಗೆ ಹುಚ್ಚಾಸ್ಪತ್ರೆ ಮತ್ತು ಕಮಂಗಿಪುರ ಎಂದು ನನ್ನ ಆಯಾಯ ಲೇಖನದ ಪರಿಧಿಯಲ್ಲಿ ಮಾತ್ರ ಗಮನಿಸಿ ಸಮಾಧಾನಿಯಾಗಿ ಯೋಚಿಸಿದರೆ ಮಾಧುರಿಯ...ಅಲ್ಲಲ್ಲ ನನ್ನ ದಿಲ್ ಮಾತ್ರವಲ್ಲ ಅದರಲ್ಲಿನ ನಿಷ್ಠೆ, ಪ್ರಾಮಾಣಿಕತೆ, ಕಳಕಳಿ, ಪ್ರೀತಿ ಮತ್ತೆಲ್ಲವೂ ಕಾಣಿಸುತ್ತದೆ. ಅದು ಕಾಣದಿದ್ದರೆ ಚಿಂತಿಸಬೇಡಿ, ನಿಮ್ಮ ತಲೆಯಲ್ಲಿ ಚೋಲಿ, ಚುನರಿಗಳ ಮತ್ತು  ದಿಲ್ ನಡುವಿನ ಬೇರೇನೋ ಕಂಡರೆ ಅದು ನಿಮ್ಮ ತಪ್ಪಲ್ಲ. ಯುವಮಾನಸ್ಸುಗಳೇ ಹಾಗೆ. ಕಾಲ ದಿಲ್ ಅನ್ನು ಅಲ್ಲಿನ ಕಳಕಳಿಯನ್ನು ಸ್ಮೃತಿ ಪಟಲದ ಪರದೆಯ ಮೇಲೆ ತೋರಿಸುತ್ತದೆ. ಅಲ್ಲಿಯವರೆಗೆ ತಾಳ್ಮೆಯಿರಲಿ. ಏಕೆಂದರೆ ತಾಳಿದವನು ಬಾಳಿಯಾನು!

ಅದಲ್ಲದೆ ನನ್ನ ಕೆಲವು ಲೇಖನಗಳು ಟ್ಯಾಗ್ಲೈನ್ ಇಲ್ಲದೆಯೂ ಇವೆ. ಕೇವಲ ನನ್ನ ವಾಸದ ದೇಶವನ್ನು ಪರಿಗಣಿಸಿ ನಾನು ಪರದೇಶಗಳನ್ನು ಹೊಗಳುತ್ತಿದ್ದೇನೆ ಎಂದು ನಾನು ಬರೆಯದ ವಿಷಯಗಳನ್ನು ಏಕೆ ಊಹಿಸಿಕೊಳ್ಳುತ್ತೀರಿ? ಈ ಪೋಸ್ಟಿನ ಲೇಖನದ ಪರಿಧಿಯಲ್ಲಿ ಭಾರತ ಏಕೆ ಹುಚ್ಚಾಸ್ಪತ್ರೆಯಲ್ಲ ಎಂದು ತಿಳಿಸಿ, ವಿಡಂಬನೆ ಸಾಹಿತ್ಯದ ಒಂದು ಭಾಗ ಎಂದುಕೊಂಡು ಲೇಖನದ ಆಶಯವನ್ನು ಮಾತ್ರ ಗ್ರಹಿಸಿ, ನಮ್ಮ ವಾಸ್ತವದ ಹಿನ್ನೆಲೆಯಲ್ಲಿ ಲೇಖನವನ್ನು ಕಾಣಬೇಕೆ ಹೊರತು ಲೇಖಕನ ವಾಸದ ನೆಲೆಯ ಹಿನ್ನೆಲೆಯಲ್ಲಿ ಕಾಣಬಾರದು, ಸತ್ಯದ ಬುನಾದಿಯ ಮೇಲೆ ನನ್ನ ದೇಶವನ್ನು ಕಟ್ಟೋಣ/ನೋಡೋಣ ಎಂಬ ಆಶಯವೇ ನನ್ನ ಟ್ಯಾಗ್ಲೈನ್ ಹಿಂದಿನ ಕಳಕಳಿ, ಇತ್ಯಾದಿ ಇತ್ಯಾದಿಯಾಗಿ ನಾನು ಏನೇ ಬೊಮ್ಮಡಿ ಹೊಡೆದರೂ ಅದು ಚೋಲಿ, ಚುನರಿ ಮತ್ತು ದಿಲ್ ನಡುವಿನ ಕಲ್ಪನಾ ಭಾಗವಾಗಿಯೇ ಕಾಣುತ್ತದೆ.

ಇನ್ನು ಕೊರೋನಾ ಹಿನ್ನೆಲೆಯಲ್ಲಿ ನಮ್ಮಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿದೆ, ನಮ್ಮಲ್ಲಿ ಕೊರೋನಾ ಹೆಚ್ಚಿದ್ದರೆ ಇಷ್ಟರೊಳಗೆ ದೇಶದಾದ್ಯಂತ ಎಲ್ಲೆಲ್ಲೂ ಸಾವು ನೋವು ತುಂಬಿರಬೇಕಿತ್ತು, ಇತ್ಯಾದಿ ಇತ್ಯಾದಿ ಹುಸಿ ಧುರಭಿಮಾನದ ಭಾವನಾತ್ಮಕತೆಯನ್ನು ಬದಿಗಿಟ್ಟು ನೋಡಿದಾಗ ವಾಸ್ತವಿಕವಾಗಿ ಪ್ರಪಂಚದ ಇತರೆ ಭಾಗಗಳಲ್ಲಿ ದಶಕದ ಹಿಂದೆ ಬಂದು ಹೋದ ಚಿಕೂನ್ ಗುನ್ಯಾ, ಡೆಂಗ್ಯೂ, ಹಕ್ಕಿಜ್ವರ, ಹಂದಿಜ್ವರಗಳು ಭಾರತದಲ್ಲಿ ಭದ್ರವಾಗಿ ಇಂದಿಗೂ ತಳವೂರಿವೆ. ಭಾರತ ಮಧುಮೇಹಿಗಳ, ಹೃದ್ರೋಗಿಗಳ, ಅಜೀರ್ಣತೆಯ, ಅಪೌಷ್ಟಿಕತೆಯ ರಾಜಧಾನಿ ಎಂದು ಹೆಸರಾಗಿದೆ.

ಹಾಗಾಗಿ ವಾಸ್ತವದ ಹಿನ್ನೆಲೆಯಲ್ಲಿ ಲಾಕ್ ಡೌನ್ ಮಹತ್ವವನ್ನು ಅರಿತುಕೊಳ್ಳಿ. ಸರ್ಕಾರ ಫೋನುಗಳು ರಿಂಗ್ ಆಗುವ ಮುನ್ನ ಕೊಡುತ್ತಿದ್ದ ಎಚ್ಚರಿಕೆಯನ್ನು ಟ್ರೋಲ್ ಮಾಡಿದಂತೆ, ಚಪ್ಪಾಳೆ ಕರೆಯನ್ನು ವೈಪರೀತ್ಯಕ್ಕೆ ಕೊಂಡೊಯ್ದ ರೀತಿ ಮಾಡದೆ ಇಂದು ವಿಸ್ತರಿಸಿದ ಲಾಕ್ ಡೌನ್ ಅನ್ನು ಜವಾಬ್ದಾರಿಯಿಂದ ನಿರ್ವಹಿಸಿ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ.

ಚೋಲಿ ಕೆ ಪೀಚೆ, ಚುನರಿ ಕೆ ನೀಚೆ ಎಂದು ಈಗಲೂ ಕೇಳುವಿರಾದರೆ ನನ್ನ ಉತ್ತರ ಸದಾ "ನಾಯಕ್ ನಹೀ ಖಳ್ ನಾಯಕ್ ಹೂ ಮೇ!"

#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ
#ಕರ್ನಾಟಕವೆಂಬೋಕಮಂಗಿಪುರದಲ್ಲಿ

ಟ್ರಂಪ್ ನ ವೀಸಾ ನೀತಿಯೂ , ಭಾರತೀಯರ ಬೂಸಾ ಕಂಪೆನಿಗಳೂ!

ಭಾಗ ೧:
ಟ್ರಂಪ್ ವಲಸೆ ನೀತಿ ಕುರಿತು ಅಮೇರಿಕಾಕ್ಕಿಂತ ಭಾರತ ಹೆಚ್ಚು ಚಿಂತಿತವಾಗಿದೆ. ಅದರಲ್ಲೂ ಟ್ರಂಪ್ ಭಾರತೀಯರ ವಿರೋಧಿ ಎಂಬಂತೆ ಭಾರತೀಯ ಮಾಧ್ಯಮಗಳು ಚಿತ್ರಿಸುತ್ತಿವೆ. 

ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಟ್ರಂಪ್ ಸರ್ಕಾರ ವಲಸೆ ನೀತಿಯ ಕುರಿತು ಏನನ್ನೂ ಬದಲಾಯಿಸಿಲ್ಲ, ಇದ್ದ ನೀತಿಯನ್ನೇ ಬಲಪಡಿಸಿದೆ ಎಂಬುದು ಸತ್ಯದ ಸಂಗತಿ. ಅದೇಕೆ ಭಾರತೀಯ ಮಾಧ್ಯಮಗಳು ಈ ರೀತಿ ಸತ್ಯ ಸಂಗತಿಯನ್ನು ಮರೆಮಾಚಿ ರೋಚಕತೆಯನ್ನು ಭಿತ್ತಿಸುವವೋ!

ಯಾವ ದೇಶದ ನೀತಿಯೂ ತನ್ನ ನಾಗರೀಕರಿಗೆ ಉದ್ಯೋಗ ಕಲ್ಪಿಸದೇ ವಲಸೆಗಾರರನ್ನು ಕರೆತನ್ನಿ ಎಂದು ಹೇಳುವುದಿಲ್ಲ.  ಅಮೆರಿಕಾ ಕೂಡಾ ತನ್ನ ಈಗಿನ ಸದ್ಯದ ಹೆಚ್೧ಬಿ, ಹೆಚ್೪ ವೀಸಾಗಳ ಕುರಿತಾದ ನಿಯಮ ಬಲಪಡಿಸುವಿಕೆಯನ್ನು ಎಂದೋ ಮಾಡಬೇಕಿತ್ತು. ಭಾರತದ ಸಾಕಷ್ಟು ಪ್ರಮುಖ ಕಂಪೆನಿಗಳಿಂದ ಹಿಡಿದು ಸಣ್ಣಪುಟ್ಟ ಕಂಪೆನಿಗಳು ಸೇರಿ ಈ ವೀಸಾಗಳ ದುರುಪಯೋಗದ ಪರಮಾವಧಿಯನ್ನು ಮೀರಿದ್ದವು. ಈ ಕುರಿತಾಗಿ ವಿಖ್ಯಾತ ಇನ್ಫಸಿಸ್ ಅದಾಗಲೇ ದಂಡ ಕಟ್ಟಿದೆ.

ಹೆಚ್೧ಬಿ ವೀಸಾವನ್ನು ಆಯಾಯಾ ಉದ್ಯೋಗಕ್ಕೆ ಬೇಕಿರುವ ಉನ್ನತ ಶಿಕ್ಷಣ, ಅನುಭವವಿರುವವರಿಗೆ ಮತ್ತು ಆ ಕೆಲಸವನ್ನು ಮಾಡಲು ಅಮೇರಿಕನ್ನರು ಯಾರೂ ಲಭ್ಯವಿರದಿದ್ದರೆ ಕೊಡಬೇಕು ಎನ್ನುತ್ತದೆ ಅಮೆರಿಕಾ ವಲಸೆ ನೀತಿ. ಇದನ್ನು ನಿಯಮಬದ್ಧವಾಗಿ ೨೦೦೦ದವರೆಗೆ ಎಲ್ಲಾ ಕಂಪೆನಿಗಳೂ ಪಾಲಿಸುತ್ತಿದ್ದವು. ಆದರೆ ನಂತರ ಈ ವೀಸಾ ವ್ಯವಹಾರದಲ್ಲಿ ಪಳಗಿದ ಭಾರತೀಯ ಕಂಪೆನಿಗಳು ಈ ವೀಸಾವನ್ನು ದುರುಪಯೋಗಪಡಿಸಿಕೊಳ್ಳಲಾರಂಭಿಸಿದವು. ಇದು ಎಲ್ಲಿಗೆ ಹೋಗಿ ತಲುಪಿತೆಂದರೆ, ಹೆಚ್೧ಬಿ ನೋಂದಣಿ ಆರಂಭವಾಗಿ ಕೆಲವು ಗಂಟೆಗಳಲ್ಲೇ ಗರಿಷ್ಟ ಮಿತಿಯನ್ನು ತಲುಪಿ ಆಯಾಯಾ ವರ್ಷದ ಕೋಟಾ ಭರ್ತಿಯಾಗುವಷ್ಟು! ನಂತರ ಶುರುವಾದದ್ದೇ ಒಬಾಮಾ ಸಡಿಲಿಸಿದ ಡಿಪೆಂಡೆಂಟ್ ವೀಸಾದ ದುರುಪಯೋಗ! ಅಪ್ಪಟ ಗೃಹಿಣಿರೆಲ್ಲಾ ಹೆಚ್೧ಬಿ ತರದ ಯಾವುದೇ ಲಂಗುಲಗಾಮಿಲ್ಲದೇ ಕೆಲಸಕ್ಕೆ ಇದೇ ಭಾರತೀಯ ಕಂಪೆನಿಗಳ ಮೂಲಕ ಕಡಿಮೆ ಸಂಬಳಕ್ಕೆ ಬರತೊಡಗಿದರು. ತಮ್ಮದೇ ಆದ ವಲಯ, ಲಾಬಿಗಳನ್ನು ಕಛೇರಿಗಳಲ್ಲಿ ಕಟ್ಟಿಕೊಂಡ ಈ ವೀಸಾ ಭಾರತೀಯರು ಬೇರೆ ಯಾವುದೇ ವ್ಯಕ್ತಿ, ಅಮೇರಿಕನ್ ಪೌರತ್ವ ಹೊಂದಿದ ಭಾರತೀಯನನ್ನೂ ಸಹ ದೂರವಿಟ್ಟು ಅಮೆರಿಕನ್ ಐಟಿ ಜಾಬ್ ಮಾರ್ಕೆಟ್ಟಿನಲ್ಲಿ ಪಾಳೆಗಾರಿಕೆಯನ್ನು ಶುರುವಿಟ್ಟುಕೊಂಡರು. ಈ ಕುರಿತಾಗಿ ಭಾರತೀಯ ಮೂಲದ ಅಮೆರಿಕನ್ನರು ಕೂಡಾ ಸಾಕಷ್ಟು ಆಕ್ರೋಶ ವ್ಯಕ್ತಪಡಿಸಿದ್ದರು. ಇದೆಲ್ಲದರ ಪರಿಣಾಮವಾಗಿಯೇ ಟ್ರಂಪ್ ಸರ್ಕಾರ ವೀಸಾ ನೀತಿಯನ್ನು ಬಲಪಡಿಸಲು ಆಸಕ್ತಿ ತೋರಿದ್ದುದು. ಇದು ಅತ್ಯಂತ ಬೇಕಾಗಿದ್ದ ನೀತಿ ಬಲಪಡಿಸುವಿಕೆ. ಟ್ರಂಪ್ ಸರ್ಕಾರದ ಬೇರೆಲ್ಲಾ ನೀತಿಗಳನ್ನು ಜನ ಒಪ್ಪದಿದ್ದರೂ ಈ ವೀಸಾ ನೀತಿಯನ್ನು ತುಂಬು ಹೃದಯದಿಂದ ನನ್ನಂತಹ ಭಾರತೀಯ ಅಮೇರಿಕನ್ನರು ಒಳಗೊಂಡಂತೆ ಎಲ್ಲಾ ಅಮೇರಿಕನ್ನರೂ ಸ್ವಾಗತಿಸುತ್ತಿದ್ದಾರೆ. ಬಹುಶಃ ಈ ಕುರಿತಾಗಿ ಭಾರತೀಯ ಮೂಲದವರೇ ಯಾರೋ ಟ್ರಂಪ್ ಸಲಹೆಗಾರರಾಗಿರಬಹುದು! ಏಕೆಂದರೆ ಭಾರತೀಯ ಕಂಪೆನಿಗಳು ವಲಸೆ ಇಲಾಖೆಯ ನಿಯಮಗಳನ್ನು ಹೇಗೆ ಯಾಮಾರಿಸುತ್ತಿವೆ ಎಂಬುದನ್ನು ವಲಸೆ ಇಲಾಖೆ ಈಗ ಅರಿತಿದೆ. 

ಭಾರತೀಯ ಮೂಲದ ಎಲ್ಲಾ ಕಂಪೆನಿಗಳು ತಮಗೆ ಬೇಕುಬೇಕಾದ ಇಂಜಿನಿಯರಿಂಗಿನ ಎಲ್ಲಾ ವಿಭಾಗದಲ್ಲಿರುವವರಿಂದ ಹಿಡಿದು ಬಿಎಸ್ಸಿ, ಬಿಕಾಮ್ ಹಿನ್ನೆಲೆಯವರನ್ನೆಲ್ಲಾ ಕಂಪ್ಯೂಟರ್ ತಜ್ಞರೆಂದು ಬಿಂಬಿಸಿ ಕರೆತಂದು ಹೆಚ್೧ಬಿ ವೀಸಾವನ್ನು ಹಿಗ್ಗಾಮುಗ್ಗಾ ಶೋಷಣೆಗೊಳಪಡಿಸಿದ್ದರು. ಒಬ್ಬನೇ ವ್ಯಕ್ತಿ ಜಾವಾ ಕೆಲಸಕ್ಕೆ ಜಾವಾ, ಡಾಟ್ ನೆಟ್ ಕೆಲಸಕ್ಕೆ ಡಾಟ್ ನೆಟ್, ಯಾವುದು ಬೇಕೋ ಆಯಾಯ ಬೈಯೊಡೇಟಾ ಸಿದ್ಧಪಡಿಸಿಕೊಂಡಿರುತ್ತಾನೆ. ಅಥವಾ ಅವನ ಹೆಚ್1ಬಿ ಕಂಪೆನಿಯೇ ಸಿದ್ಧಪಡಿಸಿರುತ್ತದೆ.  ಹೀಗೆ ಹಿಗ್ಗಾಮುಗ್ಗಾ ಅನುಭವವನ್ನು ತೋರಿಸಿ, ಅನನುಭವಿಗಳನ್ನು ತಂದು ಕೂರಿಸಿ ಭಾರತೀಯರೆಂದರೆ ಮಹಾನ್ ಸುಳ್ಳುಗಾರರೆಂದು/ಮೋಸಗಾರರೆಂಬ ಅಭಿಪ್ರಾಯ ಬರುವಂತೆ ಮಾಡಿಟ್ಟಿದ್ದಾರೆ.  ಇದು ಇತರೆ ಪ್ರತಿಭಾವಂತ ಭಾರತೀಯರಿಗೆ ಸಾಕಷ್ಟು ಸಂಕಷ್ಟವನ್ನು ತಂದೊಡ್ಡಿದೆ. 

ಅದಲ್ಲದೇ ತಮ್ಮ ಅಂತರಿಕ ಕಂಪೆನಿ ವ್ಯವಹಾರಗಳಿಗೆ ಮಾತ್ರ ಒದಗುವ ಎಲ್ ವೀಸಾ, ಬಿಸಿನೆಸ್ ವೀಸಾಗಳನ್ನು ಹೆಚ್೧ಬಿಯ ಬದಲಿಯಾಗಿ ಉಪಯೋಗಿಸುವುದಲ್ಲದೇ ಈ ವೀಸಾದಾರರಿಗೆ ಗ್ರೀನ್‍ಕಾರ್ಡುಗಳನ್ನೊದಗಿಸಿ ಇಲ್ಲಿಯೇ ಭದ್ರವಾಗಿ ಠಿಕಾಣಿ ಹೂಡಿಸುವವರೆಗೆ ವೀಸಾ ದುರ್ಬಳಕೆ ಅವ್ಯಾಹತವಾಗಿ ನಡೆಯುತ್ತಿತ್ತು. ಟ್ರಂಪ್ ಸರ್ಕಾರದ ವೀಸಾ ನಿಯಮ ಬಿಗಿಗೊಳ್ಳುವಿಕೆಯಿಂದಾಗಿ ಈ ರೀತಿಯ  ಗ್ರೀನ್ ಕಾರ್ಡ್ ಪ್ರಾಯೋಜನೆ ನಿಂತಿದೆ.  ಇಲ್ಲಿ ಗಮನಾರ್ಹ ಸಂಗತಿಯೆಂದರೆ ಈ ರೀತಿ ಗ್ರೀನ್ಕಾರ್ಡ್ ಪಡೆದ ಬಹುತೇಕರು ಕೇವಲ ಭಾರತೀಯ ಮೂಲದ ಕಂಪೆನಿಗಳಲ್ಲಿ ಕೆಲಸ ಮಾಡಬಲ್ಲರೇ ಹೊರತು ಅಮೇರಿಕನ್ ಕಂಪೆನಿಗಳಲ್ಲಿ ಅಲ್ಲ. ಏಕೆಂದರೆ ಅವರ ದಗಲಬಾಜಿ ವೃತ್ತಿ ಅನುಭವ ಆ ಕಂಪೆನಿಗಳಲ್ಲಿ ಉಪಯೋಗಕ್ಕೆ ಬರುವುದೇ ಹೊರತು ಬೇರೆಡೆಯಲ್ಲ. 

ಸದ್ಯಕ್ಕೆ ಟ್ರಂಪ್ ಸರ್ಕಾರ ಈಗಿರುವ ವೀಸಾ ನಿಯಮಗಳನ್ನೇ ಕಟ್ಟುನಿಟ್ಟಾಗಿ ಪಾಲಿಸುವಂತೆ ವಲಸೆ ಅಧಿಕಾರಿಗಳಿಗೆ ಕಟ್ಟೆಚ್ಚರ ನೀಡಿದುದರ ಪರಿಣಾಮವಾಗಿ ಈ ಎಲ್ಲಾ ದುರುಪಯೋಗ ತಾನೇ ತಾನಾಗಿ ನಿಂತಿದೆ. ಅಂದರೆ ಯಾವ ನೀತಿಯ ಬದಲಾವಣೆಯಿಲ್ಲದೆ ಕೇವಲ ಕಟ್ಟೆಚ್ಚರದಿಂದ ವೀಸಾ ಅರ್ಜಿಗಳನ್ನು ಪರಿಶೀಲನೆ ಮಾಡಿದರೆ ನೀತಿ ನಿಯತ್ತು ಪಾಲಿಸುವ ಕಂಪೆನಿಗಳಿಗೆ ಭಯವೇಕಿರಬೇಕು. ಅಂದರೆ ವೀಸಾ ಕುರಿತು ಗಾಬರಿ ಭಯ ವ್ಯಕ್ತಪಡಿಸುವ ಕಂಪೆನಿಗಳ ನಿಯತ್ತು ಪ್ರಶ್ನಾರ್ಹವೆಂದಲ್ಲವೇ?

ವ್ಯವಸ್ಥೆ ಚಾಪೆ ಕೆಳಗೆ ತೂರಿದರೆ, ರಂಗೋಲಿ ಕೆಳಗೆ ತೂರಬಲ್ಲ ಭಾರತೀಯತೆ ಅಮೇರಿಕಾದಂತಹ ರಾಷ್ಟ್ರದ ವೀಸಾ ನೀತಿಯನ್ನು ತಿಪ್ಪರಲಾಗ ಹಾಕಿಸಿ ದುರ್ಬಳಕೆ ಮಾಡಿಕೊಂಡದ್ದು ಮಾತ್ರ ಸತ್ಯ. ಅಂತಹ ಭಾರತೀಯತೆಗೆ ಸಾಕ್ಷಿಯಾಗಿ ಮೋದಿಯ ನೋಟ್‍ಬ್ಯಾನ್ ಚಾಪೆಗೆ, ಬ್ಯಾಂಕ್ ಮ್ಯಾನೇಜರರುಗಳ ರಂಗೋಲಿಯನ್ನು ದೇಶವೇ ಕಂಡಿದೆಯಲ್ಲವೇ!?

ಭಾಗ ೨:

ಈ ವೀಸಾ ಬಳಕೆ 2000 ರದವರೆಗೆ ಎಲ್ಲಾ ಸರಿಯಾಗಿತ್ತು. ಏಕೆಂದರೆ ಅಲ್ಲಿಯವರೆಗೆ ಗ್ರಾಹಕನ ಪ್ಲಾನು, ಡಿಸೈನು. ಅದನ್ನು ಅಳವಡಿಸಲು ಈ ಭಾರತೀಯ ಕಂಪೆನಿಗಳ ಪ್ರೋಗ್ರಾಮರುಗಳು. ಆದರೆ ಯಾವಾಗ ಐಟಿ ಔಟ್ ಸೋರ್ಸ್ ಆಯಿತೋ ಆಗಿನಿಂದ ಈ ಸಮಸ್ಯೆಗಳು ಶುರುವಾದವು. ಭಾರತೀಯ ವಿದೇಶದಲ್ಲಿ ನೆಲೆಸಿ ವಿದೇಶೀ ಕಂಪೆನಿಗಳಿಗೆ ಕೆಲಸ ಮಾಡುತ್ತಿದ್ದರೆ ಸರಿ. ಯಾವಾಗ ಆತ ಭಾರತೀಯ ಕಂಪೆನಿಗೆ ಸೇರುತ್ತಾನೋ ಆಗ ಆತನ ಎಲ್ಲಾ ಭಾರತೀಯ ಅವಗುಣಗಳು ಜಾಗೃತವಾಗಿಬಿಡುತ್ತವೆ! ಈ ಔಟ್ ಸೋರ್ಸಿನಿಂದಾಗಿ ಸಾಕಷ್ಟು ಅವಗಡಗಳಾಗಿವೆ. ಕೇವಲ ಕಾಲ್ ಸೆಂಟರ್,  ಸಪೋರ್ಟ್ ಸೆಂಟರ್ ಅಂತ ಕೆಲಸಗಳನ್ನು ಮಾಡಲು ಮಾತ್ರ ಈ ಕಂಪೆನಿಗಳು ಸರಿಯೇ ಹೊರತು ತಂತಾಂಶ ಅಭಿವೃದ್ಧಿಗಲ್ಲ. ಹಾಗಾಗಿ ನಾನು ಆಫ್ ಶೋರಿಗಿಂತ ಆನ್ ಶೋರ್ ಪರ. ಮಾನವ ಸಂಪನ್ಮೂಲಗಳ ಕೊರತೆಯೇ, ಇನ್ನು ಹೆಚ್ಚಿನ ಹೆಚ್ಬೊನ್ನಿಗರನ್ನು ಕರೆತರೋಣವೇ ಹೊರತು ಔಟ್ ಸೋರ್ಸ್ ಬೇಡ ಎಂಬ ನಿಲುವು ತೋರಿದ್ದೇನೆ.  ಏಕೆಂದರೆ ಅಮೆರಿಕಾದ ಕೆಲಸವನ್ನು ಬೇರೆ ದೇಶದಲ್ಲಿ ಮಾಡಿ, ಆ ದೇಶಕ್ಕೆ ತೆರಿಗೆ ಕಟ್ಟಿ, ತಮ್ಮ ಸಂಬಳವನ್ನು ಆ ದೇಶದಲ್ಲಿ ವ್ಯಯಿಸಿ್ದಾಗ ಆ ದೇಶದ ಆರ್ಥಿಕಸ್ಥಿತಿ ಸುಧಾರಿಸುತ್ತದೆಯೇ ಹೊರತು ಅಮೆರಿಕಾದಲ್ಲ! ವಸ್ತು ಉತ್ಪಾದನೆ, ಗಾರ್ಮೆಂಟ್ಸ್, ಮುಂತಾದ ಔಟ್ ಸೋರ್ಸಿನಿಂದ ಅಮೆರಿಕಾಕ್ಕೆ ಒಳಿತಾಗಿದೆಯೇ ಹೊರತು ಈ ತಂತ್ರಾಂಶ ಅಭಿವೃದ್ಧಿಯ ಔಟ್ ಸೋರ್ಸ್ ನಿಂದಲ್ಲ.  ಏಕೆಂದು ಅರಿಯಲು ಈ ಕಂಪೆನಿಗಳ ಕಾರ್ಯವೈಖರಿ ಹೇಗಿರುತ್ತದೆ ಎಂದೊಮ್ಮೆ ಪರಿಚಯ ಮಾಡಿಕೊಳ್ಳೋಣ.

ಒಂದು ಪ್ರಾಜೆಕ್ಟಿಗೆ ಇಂತಿಷ್ಟು ಜನ ಎಂಬ ನಿಯಮ ಸಪೋರ್ಟ್ ಯಾ ಕಾಲ್ ಸೆಂಟರ್ ಕೆಲಸಗಳಿಗಿರುತ್ತದೆ. ಆದರೆ ಅದೇ ನಿಯಮವನ್ನು ಒಂದು ತಂತ್ರಾಂಶ ಅಭಿವೃದ್ಧಿಯ ಪ್ರಾಜೆಕ್ಟಿಗೆ ಕೂಡಾ ಗ್ರಾಹಕ ಕೇಳದಿದ್ದರೂ ಕುರುಡಾಗಿ ಪಾಲಿಸುತ್ತಿವೆ ಈ ಎಲ್ಲಾ ದೊಡ್ಡ ಕಂಪೆನಿಗಳು!  ತಂತ್ರಾಂಶ ಅಭಿವೃದ್ಧಿ ಒಂದು ಬೌದ್ಧಿಕ ಕಾರ್ಯ ಅದಕ್ಕೂ ಗಂಟೆಗೆ ಇಷ್ಟು ಕರೆಗಳನ್ನು ಸ್ವೀಕರಿಸಬೇಕೆಂಬ ಗುಮಾಸ್ತ ಕಾರ್ಯಕ್ಕೂ ವ್ಯತ್ಯಾಸವಿರುತ್ತದೆ. ಮೂಲಭೂತವಾಗಿ ಒಂದು ಉನ್ನತ ಬೌದ್ಧಿಕ ಕಾರ್ಯವನ್ನುಗುಮಾಸ್ತ ಕಾರ್ಯವಾಗಿ ಮಾಡುವುದಾದರೆ ಅದಕ್ಕೆ ಉನ್ನತ ಶಿಕ್ಷಣ ಮತ್ತು ಅನುಭವವಿರುವ ಹೆಚ್೧ಬಿ ತಂತ್ರಜ್ಞ ಏಕೆ ಬೇಕೆಂಬುದು ಬೇರೆ ಪ್ರಶ್ನೆ. ಒಟ್ಟಾರೆ ಬುದ್ಧಿಮತ್ತೆಯನ್ನು ಸರಕು ಸಾಮಗ್ರಿಯಾಗಿಸಿದ್ದಾವೆ ಈ ಕಂಪೆನಿಗಳು. ಕಾಲ್ ಸೆಂಟರನ್ನು ನಿಭಾಯಿಸುವ ತತ್ವಗಳನ್ನೇ ತಂತ್ರಾಂಶ ಅಭಿವೃದ್ಧಿಗೂ ಯಥಾವತ್ತಾಗಿ ಪಾಲಿಸುತ್ತವೆ. ಏಕೆಂದರೆ ತಂತ್ರಾಂಶ ಅಭಿವೃದ್ಧಿಯಲ್ಲಿ ಈ ಕಂಪೆನಿಗಳಿಗೆ ಇರುವ ಅನುಭವ ಕತ್ತೆ ಕೆಲಸದ ಅನುಭವವೆನ್ನಬಹುದು. ಇಲ್ಲದಿದ್ದರೆ ಈಗಾಗಲೇ ಯಾಹೂ, ಗೂಗಲ್, ಮೈಕ್ರೋಸಾಫ್ಟ್, ಮುಂತಾದ ಪ್ರಾಡಕ್ಟ್ ಕಂಪೆನಿಗಳು ಭಾರತದಾದ್ಯಂತ ಕಾಣಬೇಕಿತ್ತು. 

ಈ ರೀತಿಯ ಒಂದು ಕೂಲಿ ಕಾರ್ಮಿಕರನ್ನು ಕರೆತರುವ ಮೇಸ್ತ್ರಿ ಯಾ ಶೇರೆಗಾರರ ಮಾರ್ಕೆಟ್ ಟ್ರೆಂಡ್ ಅನ್ನು ಈ ಕಂಪೆನಿಗಳು ಪ್ರಮೋಟ್ ಮಾಡಿಟ್ಟಿವೆ.  ಹಾಗಾಗಿಯೇ ಒಬ್ಬ ದಕ್ಷ ಇಂಜಿನಿಯರ್ಗೆ ಗಂಟೆಗೆ $೧೫೦ ಇದ್ದ ರೇಟು ಈಗ $೪೦ಕ್ಕೆ ಬಂದಿದೆ. 

ಗಂಟೆಗೆ ನೂರಾಐವತ್ತು ಡಾಲರ್ ಛಾರ್ಜ್ ಮಾಡುವ ಒಬ್ಬ ದಕ್ಷ ಇಂಜಿನಿಯರ್ ಮಾಡಬಹುದಾದ ಕೆಲಸವನ್ನು ನಲವತ್ತು ಡಾಲರ್ರಿಗೆ ತಮ್ಮ ಭಾರತದ ಆಫೀಸಿನಿಂದ ಮತ್ತು ತಮ್ಮ ಕಂಪೆನಿಯ ಆನ್ ಶೋರ್ ಕೆಲಸಗಾರನಿಂದ ಜಾಯಿಂಟ್ ಆಗಿ ಮಾಡಿಸಿಕೊಡುವುದಾಗಿ ಒಪ್ಪಿಕೊಳ್ಳುತ್ತಾರೆ. ನಂತರ ಇದು ಒಬ್ಬ ಒಂದು ಗಂಟೆಯಲ್ಲಿ ಮಾಡಬಹುದಾದ ಕಾರ್ಯವಲ್ಲವೆಂದು ನೆಪಗಳ ಸರಮಾಲೆಗಳನ್ನೊಡ್ಡುತ್ತಾ, ಹತ್ತು ಜನರು ಬೇಕೆಂದು ಕಡೆಗೆ ಆರು ಜನರಿಗೆ ಒಪ್ಪಿಸುತ್ತಾರೆ. ಅಲ್ಲಿಗೆ $೧೫೦ ಕಕ್ಕಬೇಕಾದ್ದು ಈಗ $೨೪೦ ಆಯಿತು. 

ಗ್ರಾಹಕ ತಾನು ಈ ಕಂಪೆನಿಗೆ ಆಗಲೇ ಕೆಲಸ ವಹಿಸಿದ ತಪ್ಪಿಗೆ ಮತ್ತು ತನ್ನ ಆಡಳಿತ ಮಂಡಳಿ ತನ್ನನ್ನು ಎಲ್ಲಿ ಬಲಿಪಶು ಮಾಡಿಬಿಡುವುದೋ ಎಂಬ ಭಯದಲ್ಲಿ ಇವರ ತಾಳಕ್ಕೆ ಕುಣಿಯುತ್ತಾ ಸಾಗಬೇಕಾಗುತ್ತದೆ. ಕಡೆಗೆ ಮಿಕ ಬಿದ್ದ ಮೇಲೆ  ಎಲ್ಲಾ ಸಾಫ್ಟ್ವೇರ್ ಅಭಿವೃದ್ಧಿಯ ತತ್ವಸಿದ್ಧಾಂತಗಳನ್ನು ತಲೆಕೆಳಗು ಮಾಡುತ್ತಾ ತಮ್ಮದೇ ರೀತಿಯಲ್ಲಿ ವ್ಯಾಖ್ಯಾನಿಸಿ, ದೀಪಾವಳಿ, ಯುಗಾದಿ, ಹೋಳಿ, ಹುಣ್ಣಿಮೆ, ಅಮವಾಸ್ಯೆ, ರಾಮ, ಕೃಷ್ಣ, ಶಿವ, ಪಾರ್ವತಿಯರನ್ನೆಲ್ಲಾ ಪರಿಚಯಸುತ್ತಾ ಭಾರತೀಯ ಸಂಸ್ಕೃತಿ, ಬಾಲಿವುಡ್ ತಿರುಗಿಸಿ, ಒಬ್ಬ ರೈತ ತನ್ನ ಬೆಳೆಯನ್ನು ಮಾರುಕಟ್ಟೆಗೆ ಕೊಂಡುಹೋದಾಗ ದಲ್ಲಾಳಿಗಳು ಆರೈವಲ್ಸು, ಡಿಮ್ಯಾಂಡು, ಬಾಂಬೆ ರೇಟು, ದುಬೈ ಮಾರ್ಕೆಟ್, ಅದು ಇದು ಎಂದು ತಲೆ ಗಿರ್ರೆನಿಸುವಂತೆ ಅಷ್ಟೇ ಗೋಜಲು ಗೋಜಲಾದ ತಂತ್ರಾಂಶವನ್ನು ಮಾಡಿಕೊಡುತ್ತಾರೆ.

ಗ್ರಾಹಕನಿಗೇನಾದರೂ ಸಂಶಯ ಬಂದು ಇಷ್ಟೊಂದು ಜನರು ನಿಜಕ್ಕೂ ಬೇಕೇ ಎಂದರೆ, ಆತನಿಗೆ ಭಾರತದ ತಮ್ಮ ಕಛೇರಿಗೆ ಕರೆದೊಯ್ದು ಬಹುಮತ ಸಾಬೀತು ಪಡಿಸಲು ರಾಜ್ಯಪಾಲರ ಮುಂದೆ ಪರೇಡ್ ಮಾಡಿಸುವ ರಾಜಕಾರಣಿಯಂತೆ ಒಂದಷ್ಟು ಜನರನ್ನು ಇವರೆಲ್ಲಾ ನಿಮ್ಮ ಪ್ರಾಜೆಕ್ಟ್ಗೆ ಕೆಲಸ ಮಾಡುವವರೆಂದು ತೋರಿಸುತ್ತಾರೆ. ಹಾಗೆಯೇ ಸ್ಥಳೀಯ ಆಕರ್ಷಣೆಗಳನ್ನು ತೋರಿ ಸೈ ಎನ್ನಿಸಿಕೊಂಡು ಆ ಬಕರಾನನ್ನು ಹಲಾಲ್ ಮಾಡಿಬಿಡುತ್ತಾರೆ.

ಕಾಮೋಡ್ ಮಾಡಲು ಹೇಳಿದರೆ ಇತ್ತ ಇಂಡಿಯನ್ನೂ ಅಲ್ಲದ ಅತ್ತ ಪಾಶ್ಚಿಮಾತ್ಯವೂ ಅಲ್ಲದ "ಆಂಗ್ಲೋ-ಇಂಡಿಯನ್" ಎಂಬ ವಿಶೇಷ ಸಂಡಾಸವನ್ನು ಕಟ್ಟಿಕೊಟ್ಟುಬಿಡುತ್ತಾರೆ. ಕಟ್ಟಿಸಿಕೊಂಡ ತಪ್ಪಿಗೆ ಇದರ ಮೇಲೆ ಪೀಠಾರೋಹಿಯಾಗಿ ಬಡ ಅಮೆರಿಕನ್ನನು ತಿಣುಕುತ್ತಾನೆ. ಇದು ಆಂಗ್ಲೋ ಇಂಡಿಯನ್ ಸಂಡಾಸವಾದ್ದರಿಂದ ಕೆಟ್ಟರೆ ಇದನ್ನು ಕಟ್ಟಿದ ಪುಣ್ಯಾತ್ಮನೇ ರಿಪೇರಿ ಮಾಡಿಕೊಡಬೇಕಾಗುತ್ತದೆ. ಆ ಮಟ್ಟಿಗೆ ಗ್ರಾಹಕನ ಜುಟ್ಟು ಇವರ ಕೈಯಲ್ಲಿರುತ್ತದೆ!  ಹಾಗಾಗಿ ಇವರು ಅಭಿವೃದ್ಧಿಪಡಿಸಿದ ಗೋಜಲು ತಂತ್ರಾಂಶವನ್ನು ತಿಪ್ಪರಲಾಗ ಹಾಕಿದರೂ ಬೇರೆ ಯಾರೂ ಸಪೋರ್ಟ್ ಮಾಡದ ಕಾರಣ ಆ ಗ್ರಾಹಕನಲ್ಲಿ ಖಾಯಂ ಆಗಿ ಇವರು ಬೇರು ಬಿಡುತ್ತಾರೆ, ಬಿಟ್ಟಿದ್ದಾರೆ.

ಎಲ್ಲಾ ಭಾರತೀಯ ಬಹು ದೊಡ್ಡ ಕಂಪೆನಿಗಳ ಸೇವೆಯನ್ನು ಗ್ರಾಹಕನಾಗಿ ಬಳಸಿಕೊಂಡಿರುವ ನಾನು ಅಥವಾ ನನ್ನಂತಹ ಅನುಭವಸ್ಥರೆಲ್ಲರೂ ಈ ರೀತಿ ಖಚಿತವಾಗಿ ಹೇಳಬಲ್ಲರು. ನಾನು ಕಂಡಂತೆ ಈ ಕಂಪೆನಿಗಳು ಉತ್ತಮ ಕುದುರೆಗಳನ್ನು ಅಂದರೆ ಒಳ್ಳೊಳ್ಳೆ ಅಂಕಗಳನ್ನು ಪಡೆದ ಪ್ರತಿಷ್ಠಿತ ವಿದ್ಯಾಲಯಗಳಲ್ಲಿ ಓದಿರುವ ಪ್ರತಿಭಾವಂತರನ್ನು ಯಶಸ್ವಿಯಾಗಿ ಕತ್ತೆಗಳಾಗಿಸಿದ್ದಾವೆ ಎಂದು ಹೇಳಬಲ್ಲೆ. ಈ ಕಂಪೆನಿಗಳಲ್ಲಿ ಒಂದೆರಡು ವರ್ಷ ಕೆಲಸ ಮಾಡಿದ ನಂತರ ಆ ಪ್ರತಿಭಾನ್ವಿತ ಕತ್ತೆಯಾಗಿರುತ್ತಾನೆ.  ನಂತರ ಮದುವೆ, ಸಂಸಾರ, ಗೃಹಸಾಲ, ವಾಹನಸಾಲಗಳ ಸುಳಿಗೆ ಸಿಕ್ಕು, ಹೇಗೋ ಅದೇ ಕಂಪೆನಿಯಲ್ಲಿ ಕೆಲಸ ಉಳಿಸಿಕೊಳ್ಳಲು ಆ ಕಾರ್ಪೊರೇಟ್ ಮಾಫಿಯಾದ ಗಾರ್ಧಭ ಸದಸ್ಯನಾಗಿ ಜೀವನ ಕಂಡುಕೊಳ್ಳುತ್ತಾನೆ. ಹೇಳುತ್ತಾ ಸಾಗಿದರೆ ಒಂದು ಅದ್ಭುತ ಕಾದಂಬರಿಯೇ ಆಗುವಷ್ಟು ಈ ಕತೆ ಸಾಗುತ್ತದೆ. ಒಟ್ಟಾರೆ ಓರ್ವ ಸಾಮಾನ್ಯ ಇಂಜಿನಿಯರನಿಗೆ ಇರಬೇಕಾದ ಒಂದು ವಿಶ್ಲೇಷಣಾ ಚಾತುರ್ಯವನ್ನು ಬಹುಪಾಲು ಈ "ಮಾನವ ಸಂಪನ್ಮೂಲ"ಗಳು ಹೊಂದೇ ಇಲ್ಲವೆಂದು ಖಚಿತವಾಗಿ ಹೇಳಬಲ್ಲೆ.  

ಇರಲಿ, ಈಗ ಹೇಳಿ ಇವರ ಕಾರ್ಯವೈಖರಿಗೂ ನಿಮ್ಮಲ್ಲೇ ಸಾಕಷ್ಟು ಕಾಣಸಿಗುವ ಅಡ್ಡಕಸುಬಿಗಳಿಗೂ ವ್ಯತ್ಯಾಸವಿದೆಯೇ!?! ನಿಮ್ಮ ಮಕ್ಕಳನ್ನು ಈ "ಪ್ರತಿಷ್ಠಿತ"ಕಂಪೆನಿಗಳಿಗೆ ಕಳಿಸಿ ಕತ್ತೆಯಾಗಿಸುವಿರಾ?

ಹೈಡ್ರಾಕ್ಸಿಕ್ಲೋರಿನ್ - ಯಾರದು ಹುಚ್ಚು, ಯಾರದು ಕೆಚ್ಚು?

ಕಳೆದೆರಡು ವಾರಗಳ ಹಿಂದೆ ತಣ್ಣಗಾಗಿದ್ದ ಕೋರೋನಾ ಗುಣಪಡಿಸಲು ಸಹಕಾರಿಯಾಗಬಹುದೆಂಬ ಮಲೇರಿಯಾ ಔಷಧಿ ಹೈಡ್ರಾಕ್ಸಿಕ್ಲೋರೋಕ್ವಿನ್ ಈಗ ಮತ್ತೆ ಸೆಟೆದೆದ್ದು ನಿಂತಿದೆ ಯಾ ನಿಲ್ಲಿಸಲ್ಪಟ್ಟಿದೆ.

ಈ ಔಷಧಿ ಕೊರೊನಾಕ್ಕೆ ಔಷಧಿಯೆಂದು ಯಾವುದೇ ಪ್ರಯೋಗಗಳು ಸಾಬೀತು ಮಾಡಿಲ್ಲದಿದ್ದರೂ ಕೆಲವು ವೈದ್ಯರು ಇದು ಕೆಲವೊಬ್ಬ ರೋಗಿಗಳಿಗೆ ಕೇಸ್ ಬೈ ಕೇಸ್ ಕೆಲಸ ಮಾಡಬಹುದೆಂದಿದ್ದಾರೆ. ಆದರೆ ಇದು ಪ್ರತಿಯೊಬ್ಬ ಕೊರೋನಾ ಸೋಂಕಿತರನ್ನು ಗುಣಪಡಿಸುತ್ತದೆಂದು ಎಲ್ಲಿಯೂ ಹೇಳಿಲ್ಲ. ಕೆಲವು ಕೊರೋನಾ ಸೋಂಕಿತರಿಗೆ ಇರಬಹುದಾದ ಇತರೆ ಸಮಸ್ಯೆಗಳನ್ನು ಇದು ತಗ್ಗಿಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದೇ ಹೊರತು ಕೊರೋನವನ್ನು ಗುಣಪಡಿಸುತ್ತದೆಂದು ಯಾವುದೇ ತಜ್ಞರು ಹೇಳಿಲ್ಲ.

ಆಫ್ರಿಕಾದ ರಾಷ್ಟ್ರವೊಂದರಲ್ಲಿ ಹೈಡ್ರಾಕ್ಸಿಕ್ಲೋರೋಕ್ವಿನ್
ಕೊಟ್ಟ ಕೊರೋನಾ ಸೋಂಕಿತರು ಸತ್ತಿದ್ದಾರೆ. ಹಾಗಾಗಿ ಇದು ಇನ್ನೂ ಪ್ರಯೋಗ ಶಿಶುವೇ ಹೊರತು ಸಿದ್ದೌಷಧಿಯಲ್ಲ.

ಹೀಗಿರುವಾಗ ಈಗ ಮತ್ತೆ ಹೈಡ್ರಾಕ್ಸಿಕ್ಲೋರೋಕ್ವಿನ್ ಸುದ್ದಿ ಮಾಡುತ್ತಿದೆ.

ಪ್ರಧಾನಿ ಮೋದಿಯವರು ಹೈಡ್ರಾಕ್ಸಿಕ್ಲೋರೋಕ್ವಿನ್ ರಫ್ತನ್ನು ತಡೆಹಿಡಿದು ಕೆಚ್ಚು ಪ್ರದರ್ಶಿಸಿದ್ದು, ಟ್ರಂಪ್ ಅದನ್ನು ತಡೆ ಹಿಡಿದರೆ ಅದಕ್ಕೆ ಪ್ರತಿಯಾಗಿ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಹುಚ್ಚಾದದ್ದು ಎಂದು ಎಲ್ಲಾ ಮಾಧ್ಯಮಗಳು ಬಿಂಬಿಸುತ್ತಿವೆ. ಈ ಎಲ್ಲ ಹುಚ್ಚು ಕೆಚ್ಚುಗಳ ನಡುವೆ ಬಿಚ್ಚು ಸತ್ಯವೇನಿದೆ?

ಭಾರತಕ್ಕೆ ಐಟಿ ಹೊರಗುತ್ತಿಗೆ ಕಾಲಿಡುವ ಸಾಕಷ್ಟು ದಶಕಗಳ ಮುನ್ನ ಔಷಧಿ ಉತ್ಪಾದನೆಯ ಹೊರಗುತ್ತಿಗೆ ಸಬ್ಸಿಡಿಯರಿ ಕಂಪೆನಿಗಳ ಮೂಲಕ, ನಂತರ ನೇರವಾಗಿ ಮೂರನೇ ಕಂಪೆನಿಗಳಿಗೆ ಹೊರಗುತ್ತಿಗೆ ಕೊಡುವ ಮೂಲಕ ಜಾರಿಯಲ್ಲಿತ್ತು. ಈಗ ಇನ್ನೂ ವ್ಯಾಪಕವಾಗಿದೆ. ಅಮೆರಿಕಾ ತನ್ನ ವಸ್ತುಗಳ ಉತ್ಪಾದನೆಯನ್ನು ಚೈನಾಕ್ಕೆ ಹೊರಗುತ್ತಿಗೆ ನೀಡಿದ್ದರೆ, ಔಷಧಿಗಳ ಉತ್ಪಾದನೆಗೆ ಭಾರತದ ಕಂಪೆನಿಗಳನ್ನು ನೆಚ್ಚಿಕೊಂಡು ಆ ಕಂಪೆನಿಗಳಲ್ಲಿ ಬಂಡವಾಳವನ್ನು ತೊಡಗಿಸಿ ತನ್ನ ಒಡೆತನದ ಸಹಭಾಗಿತ್ವದಲ್ಲಿರಿಸಿಕೊಂಡಿದೆ. ಇದು Eli Lilly, Bayer,  Pfizer, Johnson & Johnson ಎಂಬ ದೈತ್ಯ ಕಂಪೆನಿಗಳಷ್ಟೇ ಅಲ್ಲದೆ ಹೈದರಾಬಾದ್, ಅಹಮದಾಬಾದ್, ಗ್ವಾಲಿಯರ್, ಮತ್ತು ಬೆಂಗಳೂರಿನ ಅನೇಕ ಚಿಕ್ಕ ಪುಟ್ಟ ಫಾರ್ಮ ಕಂಪೆನಿಗಳೂ(100% EOU) ಇವೆ.  ಇವುಗಳಲ್ಲಿ ಸಾಕಷ್ಟು ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿಯನ್ನು ಉತ್ಪಾದಿಸುತ್ತವೆ. ಕೇವಲ ಅಮೆರಿಕಾ subsidiary ಅಲ್ಲದೆ ಜಪಾನ್, ಇಸ್ರೇಲ್, ಜರ್ಮನಿ ಮತ್ತು ಯುರೋಪಿನ ಹಲವು ಕಂಪೆನಿಗಳ subsidiaryಗಳು,100% EOU (Export Oriented Unit) ಭಾರತದಲ್ಲಿವೆ. ಇದರಲ್ಲಿ ಹೈಡ್ರಾಕ್ಸಿಕ್ಲೋರೋಕ್ವಿನ್ ಹೆಚ್ಚಾಗಿ ಉತ್ಪಾದಿಸುವ Actavis ಇಸ್ರೇಲಿನ Teva ಕಂಪೆನಿಯ subsidiary. ಹಾಗೆಯೇ Novartis ಸ್ವಿಟ್ಜರ್ಲೆಂಡ್ ಕಂಪೆನಿ, Bayer ಜರ್ಮನ್ ಕಂಪೆನಿ, Mylan ಯುಕೆ ಕಂಪೆನಿ! ಅಂದ ಹಾಗೆ ಬಾಬಾ ರಾಮದೇವರು ಏನಾದರೂ ಔಷಧಿ ಕಂಡುಹಿಡಿದಿದ್ದರೂ ಅದರ ರಫ್ತನ್ನು ಅಮೆರಿಕಾಕ್ಕೆ ನಿಲ್ಲಿಸಲಾಗುತ್ತಿರಲಿಲ್ಲ. ಏಕೆಂದರೆ ಅವರ ಔಷಧಿಗಳಿಗೆ ಬೇರುನಾರಿನ ಗಿಡಮೂಲಿಕೆಗಳ ಸರಬರಾಜು ಮೂಲ ಕೂಡ ಅಮೆರಿಕ ಮತ್ತು ಕೆನಡಾ! ಅಮೆರಿಕಾದಿಂದ ಸಾಕಷ್ಟು ಗಿಡಮೂಲಿಕೆಗಳು ಬಾಬಾ ರಾಮದೇವ್ ಅವರ ಕಾರ್ಖಾನೆಗಳಿಗೆ ರಫ್ತಾಗುತ್ತಿವೆ. ಔಷಧಿ ಸ್ವದೇಶಿಯಾಗಿದ್ದರೂ, ಕಚ್ಚಾವಸ್ತುಗಳು ಪ್ರಪಂಚದ ಎಲ್ಲಾ ವಿದೇಶಿ ಮೂಲೆಗಳಿಂದ ಬಾಬಾ ರಾಮದೇವರ ಕಾರ್ಖಾನೆಗಳಿಗೆ ಹರಿದು ಬರುತ್ತಿವೆ.

ಇನ್ನು ಅಮೆರಿಕಾ ದಿಢೀರನೆ ಕೊರೋನಾ ಹಿನ್ನೆಲೆಯಲ್ಲಿ ಹೈಡ್ರಾಕ್ಸಿಕ್ಲೋರೋಕ್ವಿನ್ ಖರೀದಿಯ ಹೊಸ ಆರ್ಡರ್ ಅನ್ನು ಭಾರತದ ಕಂಪೆನಿಗಳಿಗೆ ಕೊಟ್ಟಿಲ್ಲ. ಇದರ ಪೂರೈಕೆ ಕೊರೋನಾ ಪೂರ್ವದಿಂದಲೂ ಅಭಾದಿತವಾಗಿ ಸಾಗಿ ಬರುತ್ತಿದೆ.  ಹಾಗಾಗಿ ಈ ಎಲ್ಲಾ ಮಾಹಿತಿಯನ್ನು ಸಮೀಕರಿಸಿಕೊಳ್ಳದೆ ಪ್ರಧಾನಿಗಳು ಹೈಡ್ರಾಕ್ಸಿಕ್ಲೋರೋಕ್ವಿನ್
ರಫ್ತನ್ನು ದಿಢೀರನೆ ನಿಲ್ಲಿಸಲು ಆಜ್ಞೆ ಹೊರಡಿಸಿದ್ದು ಕೆಚ್ಚೆಂದು ಕರೆಯಲಾಗದು. ಹಾಗೆಯೇ ಟ್ರಂಪ್ ತನ್ನ ಮಾಲನ್ನು ತಡೆಹಿಡಿದಿದ್ದಕ್ಕೆ ಕ್ರಮ ಜರುಗಿಸುತ್ತೇವೆ ಎಂದದ್ದನ್ನು ಹುಚ್ಚೆನ್ನಲಾಗದು.

ಆದರೆ ಇಂತಹ ವ್ಯವಹಾರ ಸೂಕ್ಷ್ಮವನ್ನರಿಯದೆ ಮಾಧ್ಯಮಗಳು, ಜನರು, ಚಿಂತಕರು, ಸುಧಾರಕರು ಈ ಕುರಿತು ಹುಚ್ಚು ಹೊಳೆ ಹರಿಸಿದ್ದು ಮಾತ್ರ ನನ್ನ ಟ್ಯಾಗ್ಲೈನನ್ನು ಧೃಢೀಕರಿಸಿದಂತಾಯಿತು. ಕೊರೋನಾ ಎಂಬುದನ್ನು ಮಾರಮ್ಮನ ಜಾತ್ರೆ ಎಂಬಂತೆ ಸಂಭ್ರಮಿಸಿ, ಜಾತ್ರೆಯ ಜಂಗೀಕುಸ್ತಿಯಲ್ಲಿ ಮೋದಿ-ಟ್ರಂಪ್ ಪರಸ್ಪರ ಪಟ್ಟು ಹಾಕಿದಂತೆ, ಮೊದಲಿಗೆ ಮೋದಿ ಬೆಂಬಲಿಗರಿಗೆ ಖುಷಿಯಾಗುವಂತೆ ನಂತರ ಮೋದಿ ವಿರೋಧಿಗಳಿಗೆ ಭೂರಿ ಭೋಜನ ಒದಗಿಸಿದಂತೆ ರೋಚಕತೆಯನ್ನು ಒಗ್ಗಟ್ಟಾಗಿ ಮೆರೆದರು.

ಆದರೆ ಭಾರತದಲ್ಲಿನ ಔಷಧಿ ಕಂಪೆನಿಗಳ ಮೂಲ, ಬಂಡವಾಳ, ಹೊರಗುತ್ತಿಗೆ ಕಂಟ್ರಾಕ್ಟ್ಗಳು, ಪೇಟೆಂಟುಗಳ ಬಂಧ ಇತ್ಯಾದಿ ಒಳಸುಳಿಗಳ ಆಳ ರಫ್ತನ್ನು ನಿರಾಕರಿಸುವಷ್ಟು ಸುಲಭವಲ್ಲ. ಹಾಗಾಗಿಯೇ ಮೋದಿಯವರು ಈ ವ್ಯವಹಾರ ಸೂಕ್ಷ್ಮವನ್ನರಿತ ಕೂಡಲೇ ಅಮೆರಿಕಾಕ್ಕೆ ಹೈಡ್ರಾಕ್ಸಿಕ್ಲೋರೋಕ್ವಿನ್
ರಫ್ತನ್ನು ತಕ್ಷಣ ಮುಕ್ತಗೊಳಿಸಿದ್ದಾರೆ. ಇಲ್ಲಿಗೆ ಹುಚ್ಚು ಯಾರದ್ದು ಮತ್ತು ಕೆಚ್ಚು ಯಾರದ್ದು ಎಂದು ತಣ್ಣನೆಯ ಬುದ್ಧಿಯಿಂದ ರೊಚ್ಚಿಗೇಳದೇ ಯೋಚಿಸಿ. ನನ್ನ ವಾಸ ನಿಮ್ಮ ದಿಕ್ಕೆಡಿಸದೇ ವಿಶ್ವಮಾನವರಾಗಿ ಸತ್ಯವನ್ನು ಮಾತ್ರ ಪರಿಗಣಿಸಿ.

ಕೊರೋನಾ ಸೃಷ್ಟಿಸಿರುವ ಅಂಧಕಾರದಲ್ಲಿ ನಾಯಕತ್ವ ತಪ್ಪು ಹೆಜ್ಜೆಯಿಡುವುದು, ಎಡವುವುದು, ಮತ್ತದನ್ನು ಸರಿಪಡಿಸಿಕೊಂಡು ಮುನ್ನಡೆಯುವುದು ಸಹಜ. ತಾಳ್ಮೆ ಮುಖ್ಯ, ಏಕೆಂದರೆ ತಾಳಿದವನು ಬಾಳಿಯಾನು.

#ಬಾರತವೆಂಬೋಹುಚ್ಚಾಸ್ಪತ್ರೆಯಲ್ಲಿ
#ಕರ್ನಾಟಕವೆಂಬೋಕಮಂಗಿಪುರದಲ್ಲಿ

ತಬ್ಲೀಜ್ ಇಜತೆಮಾ ಜಮಾತೆ ಮರ್ಕೇಜ್

ಒಂದು ಅಂತರರಾಷ್ಟ್ರೀಯ ಕಂಪೆನಿ ತನ್ನ ವಾರ್ಷಿಕ ಅಧಿವೇಶನವನ್ನು ದಿಲ್ಲಿಯಲ್ಲಿ ಒಂದು ವಾರದ ಕಾಲ ಏರ್ಪಡಿಸಿತ್ತು. ಆ ಅಧಿವೇಶನಕ್ಕೆ ಪ್ರಪಂಚದ ಎಲ್ಲಾ ಮೂಲೆಯಿಂದ ಕಂಪೆನಿ ಸದಸ್ಯರು ಬಂದಿದ್ದರು. ಕೆಲವರು ಅದಕ್ಕೆ ಬಿಜಿನೆಸ್ ವೀಸಾ ಪಡೆದಿದ್ದರೆ ಕೆಲವರು ಟೂರಿಸ್ಟ್ ವೀಸಾ ಪಡೆದಿದ್ದರು. ಅಮೇರಿಕೆಯ H1B ವೀಸಾ ಸಿಗದಿದ್ದರೆ B1 ಯಾ L1 ವೀಸಾ ಪಡೆದು ಭಾರತದ ಪ್ರತಿಷ್ಠಿತ ಕಂಪೆನಿಗಳ ನೌಕರರು ಅಮೆರಿಕೆಗೆ ಬರುವಂತೆಯೇ ಈ ಅಧಿವೇಶನಕ್ಕೆ ವಿದೇಶಿಯರು ಸಿಕ್ಕ ಭಾರತೀಯ ವೀಸಾಗಳನ್ನು ಪಡೆದು ಬಂದಿದ್ದರು. ಯಾವುದೇ ಕೊರೋನಾ ಯಾ ಇನ್ನಿತರೆ ಮಹಾಮಾರಿಯ ಕುರಿತಾಗಿ ಯಾವುದೇ ದೇಶದ ಪ್ರವಾಸಿಗರಿಗೆ ಭಾರತ ಕೂಡ ಯಾವುದೇ ನಿರ್ಬಂಧಗಳನ್ನು ಹೇರಿರಲಿಲ್ಲ.  ಮೇಲಾಗಿ ಭಾರತದಲ್ಲಿ ಕೊರೊನವನ್ನು ಪರೀಕ್ಷಿಸುವ ಯಾವುದೇ ಸಾಧನ ಕೂಡ ಇರಲಿಲ್ಲ. ಹಾಗಾಗಿ ಎಲ್ಲಾ ವಿದೇಶಿ ಪ್ರವಾಸಿಗರ ಟೆಂಪರೇಚರ್ ನೋಡಿಯೇ ಸ್ವಾಗತಿಸುತ್ತಿದ್ದರು. ಇದು ಕೇವಲ ಭಾರತದ ಸಂಗತಿಯಷ್ಟೇ ಅಲ್ಲದೆ ಜಗತ್ತಿಗೆ ದೊಡ್ಡಣ್ಣನೆನಿಸಿದ ಅಮೇರಿಕ ಕೂಡ ಯಾವುದೇ ಕೊರೋನಾ ಪರೀಕ್ಷೆಯಿಲ್ಲದೆ ವಿದೇಶಿಯರನ್ನು ಒಳಗೊಳ್ಳುತ್ತಿತ್ತು. ನಾನು ಮಾರ್ಚ್ 3ರಂದು ಭಾರತದಿಂದ ಕತಾರ್ ಮೂಲಕ ಅಮೆರಿಕಕ್ಕೆ ಬಂದಾಗ ಯಾವ ಕೊರೋನಾ ಪರೀಕ್ಷೆಗಳಿರಲಿಲ್ಲ. ಇದು ಯಾವುದೇ ಸರ್ಕಾರಿ ವೈಫಲ್ಯವಲ್ಲ. ಏಕೆಂದರೆ ಕೊರೋನಾ ಪರೀಕ್ಷಾ ಸಾಧನಗಳು ಜಗತ್ತಿನಲ್ಲಿ ಅಷ್ಟಾಗಿ ಈಗಲೂ ಇಲ್ಲ.

ಹಾಗಾಗಿ ಎಲ್ಲಾ ವಿದೇಶೀ ಆಹ್ವಾನಿತ ಸದಸ್ಯರು ಯಾವುದೇ ತೊಂದರೆಯಿಲ್ಲದೆ ಅಧಿವೇಶನದಲ್ಲಿ ಭಾಗವಹಿಸಿದರು. ಕಂಪೆನಿ ಕೂಡ ತನ್ನ ಆರ್ಥಿಕ ಪರಿಸ್ಥಿತಿಗನುಗುಣವಾಗಿ ಊಟ, ವಸತಿಯ ಏರ್ಪಾಡನ್ನು ಸದಸ್ಯರಿಗೆ ಮಾಡಿದ್ದಿತು.  ಅಧಿವೇಶನ ನಡೆದ ವಾರ ಕೂಡ ಕೊರೋನಾ ಕುರಿತು ಭಾರತ ಸರ್ಕಾರ ಯಾವುದೇ ನಿಬಂಧನೆ ಯಾ ನಿರ್ಬಂಧ ಹೇರಿರಲಿಲ್ಲ.

ಈ ಮಧ್ಯೆ ಭಾರತ ತನಗೊದಗಿದ ಸಾಂಕ್ರಾಮಿಕ ಮಹಾಮಾರಿಯ ಕೆಟ್ಟ ಪರಿಣಾಮವನ್ನು ಗ್ರಹಿಸಿ ಲಾಕ್ ಡೌನ್ ಘೋಷಿಸಿತು. ಆಗ ಈ ಕಂಪೆನಿಯ ಅಧಿವೇಶನಕ್ಕೆ ಬಂದಿದ್ದ ಸ್ಥಳೀಯ ಭಾರತೀಯರಲ್ಲಿ ಹಲವರು ಲಭ್ಯ ವ್ಯವಸ್ಥೆಗಳನ್ನು ಬಳಸಿಕೊಂಡು ತಮ್ಮ ತಮ್ಮ ಗೂಡನ್ನು ಸೇರಿಕೊಂಡರೆ, ಗೂಡನ್ನು ಸೇರಿಕೊಳ್ಳಲಾಗದ ಅನ್ಯರಾಜ್ಯ ಮತ್ತು ವಿದೇಶಿ ಸದಸ್ಯರು ತಮ್ಮ ಗೂಡಿಗೆ ಹೋಗಲಾಗದೆ ಕಂಪೆನಿ ಒದಗಿಸಿದ ವಸತಿಯಲ್ಲೇ ಉಳಿದುಕೊಂಡು ಆತಂಕದಿಂದ ಮುಂದೇನಾಗುವುದೋ ಎಂದು ಕಾಯುತ್ತಿದ್ದರು. ಈ ಲಾಕ್ ಡೌನ್ ಘೋಷಿಸಿದಾಗ ಈ ಸ್ಥಳೀಯ ಸದಸ್ಯರಂತೆಯೇ ಭಾರತದ ವಿವಿಧ ಮಹಾನಗರಗಳಲ್ಲಿದ್ದ ಕಾರ್ಮಿಕರು ನಗರಗಳನ್ನು ತೊರೆದು ತಮ್ಮ ತಮ್ಮ ಗೂಡನ್ನು ಸೇರಿಕೊಂಡರು.

ಆಗ ದಿಲ್ಲಿ ಸರ್ಕಾರ ಈ ಕಂಪೆನಿ ವಸತಿಯಲ್ಲಿದ್ದವರ ಸಂಖ್ಯೆಯನ್ನು ಪ್ರಶ್ನಿಸಿ ಸೆಕ್ಷನ್ 144 ಉಲ್ಲಂಘನೆಗಾಗಿ ದೂರು ದಾಖಲಿಸಿಕೊಂಡು ಕಾನೂನು ಚಲಾಯಿಸಲಾರಂಭಿಸಿದರು. ಈ ಮಧ್ಯೆ ಅಲ್ಲಿನ ಅತಿಥಿ ಸದಸ್ಯರಲ್ಲಿ ಹಲವಾರು ಮಂದಿ ಮಹಾಮಾರಿಗೆ ತುತ್ತಾದರು. ಇದನ್ನು ಅನುಕೂಲಸಿಂಧುವಾಗಿ ಮಹಾಮಾರಿಯಿದ್ದ ದೇಶದಿಂದ ಬಂದ ಸದಸ್ಯರ ಮೇಲೆ ದೂರು ಹೇರಿ ಸೋಂಕನ್ನು ಪ್ರಸರಿಸಿದರೆಂದು ದೂಷಿಸಲಾಯಿತು. ಬಿಜಿನೆಸ್ (ಮಿಷನರಿ) ವೀಸಾದಲ್ಲಿ ಬರದೆ ಪ್ರವಾಸಿ ವೀಸಾದಲ್ಲಿ ಬಂದು ತಮ್ಮ ಉದ್ದೇಶವನ್ನು ಉಲ್ಲಂಘಿಸಿದ್ದಾರೆ ಎನ್ನಲಾಯಿತು. ಭಾರತದ ಅನೇಕಾನೇಕ ಕಂಪೆನಿಗಳು ಅಮೆರಿಕಾದ H1B ವೀಸಾ ಸಿಗದೆ ಉದ್ದೇಶಪೂರ್ವಕವಾಗಿ L ಯಾ B ವೀಸಾ ಬಳಸಿದಂತೆ ಈ ಸದಸ್ಯರುಗಳು ಉದ್ದೇಶಪೂರ್ವಕವಾಗಿಯೋ ಯಾ ಅರಿಯದೆಯೋ ವೀಸಾ ತಪ್ಪನ್ನು ಎಸಗಿದ್ದುದು ಸತ್ಯ. ಆದರೆ ಅದು ಗುರುತರವಾದ ಅಪರಾಧವಲ್ಲ. ಅದಕ್ಕೆ ದಂಡ ವಿಧಿಸಬೇಕಾಗುತ್ತದೆ ಯಾ ಗಡೀಪಾರು ಮಾಡಬೇಕಾಗುತ್ತದೆ.

ಇಲ್ಲಿಯವರೆಗೆ ಆದುದೆಲ್ಲದೂ ಒಂದು ಸಾಂದರ್ಭಿಕ ಶಿಶು ಸಂಗತಿ! ಇಂತಹ ಒಂದು ದುರಿತ ಪಲ್ಲಟ ಕಾಲದಲ್ಲಿ ಧರ್ಮ, ಜನಾಂಗ, ಯಾ ಲಿಂಗ ಭೇಧವಿಲ್ಲದೆ ನೋಡಿದಾಗ ಹೀಗೆಯೇ ಆಗಬೇಕಿದ್ದುದು ಸಾಂದರ್ಭಿಕವಾಗಿದೆ.

 ಇಲ್ಲಿಂದ ಈಗ ಈ ಕಂಪೆನಿಯನ್ನು ತಬ್ಲೀಜಿ ಇಜ್ತೇಮ ಜಮಾತೆ ಮರ್ಕೇಜ್ ಎಂದುಕೊಳ್ಳಿ. ಏಕೆಂದರೆ ದಿಲ್ಲಿ ಜಮಾತೆ ಮರ್ಕೇಜ್ ನ ದುರಂತವು ಧರ್ಮಾತೀತವಾಗಿ ಒಂದು ವಾಣಿಜ್ಯ, ಕಲೆ, ರಾಜಕೀಯ ಯಾ ಯಾವುದೇ ರೀತಿಯ ಒಂದು ಅಧಿವೇಶನವಾಗಿದ್ದರೆ ಕೂಡ ಇಂದಿನ ದುರಂತದಂತೆಯೇ ಆಗುತ್ತಿತ್ತು. ಹಾಗಾಗಿ ಇದನ್ನೊಂದು ಧಾರ್ಮಿಕ ಘಟನೆಯಾಗಿ ನೋಡದೆ ಮೇಲಿನ ರೀತಿಯಾಗಿಯೇ ನೋಡೋಣ.

ಪ್ರಸ್ತುತ ಮಹಾಮಾರಿಯೆರಗಿದ ಇಂತಹ ಸಂದರ್ಭದಲ್ಲಿ ಜಮಾತೆ ಮರ್ಕೇಜ್ ಘಟನೆಯನ್ನು ಯಾವುದೇ ಧಾರ್ಮಿಕ ತಾರತಮ್ಯದ ಪೂರ್ವಾಗ್ರಹ ದೃಷ್ಟಿಯಿಂದ ನೋಡದೆ ಸಾಂದರ್ಭಿಕವಾಗಿ ಮಾತ್ರವೇ ನೋಡಬೇಕಾಗುತ್ತದೆ. ಅದನ್ನು ಧರ್ಮಕ್ಕೆ ತಳುಕು ಹಾಕಿ ನೋಡುವುದು ತಪ್ಪು. ಅದೇ ರೀತಿ ಆ ತಪ್ಪನ್ನು ಖಂಡಿಸುವ ಭರದಲ್ಲಿ ತಿರುಪತಿ, ಶಿರಡಿ ದೇವಸ್ಥಾನಗಳಲ್ಲಿ ಇಂತಹ ಘಟನೆ ಆಗಿದ್ದರೆ ಎಂದು ಇನ್ನೊಂದು ಗುಂಪನ್ನು ಉದ್ರೇಕಿಸುವುದು ಮಹಾ ತಪ್ಪು.

ಆದರೆ ಇಲ್ಲಿ ತದನಂತರ ಆಗುತ್ತಿರುವ ಅನುಮಾನಾಸ್ಪದ, ವಿವೇಚನಾರಹಿತ, ಮತ್ತು ದ್ವೇಷಕಾರಕ ಸಂಗತಿಯೆಂದರೆ ಭಾಗವಹಿಸಿದ ಸದಸ್ಯರು ಸಹಾಯ ಮಾಡಲು ಹೋದ ಸಿಬ್ಬಂದಿಯ ಮೇಲೆ ಉಗಿದಿರುವುದು. ಸಾಂಪ್ರದಾಯಿಕ ಯುದ್ದಗಳಲ್ಲಿ ಬಾಂಬ್ ಎಸೆದಂತೆಯೇ ಜೈವಿಕ ಯುದ್ಧಗಳಲ್ಲಿ ರೋಗಾಣು ಹರಡಲೆಂದು ಉಗಿಯುವುದು, ಕೆಮ್ಮುವುದು ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ಇದು ಅಕ್ಷಮ್ಯ ಅಪರಾಧ! ಉಗಿಯುವುದು ಜೈವಿಕ ಆಕ್ರಮಣವೇ ಸರಿ.  ಅಮೆರಿಕಾದ ಪೆನಿಸಿಲ್ವೇನಿಯಾದ ದಿನಸಿ ಸ್ಟೋರಿನಲ್ಲಿ ಓರ್ವ ಮಹಿಳೆ ಕಳೆದೆರಡು ವಾರಗಳ ಹಿಂದೆ ದುರುದ್ದೇಶದಿಂದ ಕೆಮ್ಮಿ ಬಂಧನಕ್ಕೊಳಗಾಗಿ ಭಯೋತ್ಪಾದನೆಯಡಿ ಕೇಸು ಜಡಿಸಿಕೊಂಡಿದ್ದಾಳೆ. 

ಹಾಗಾಗಿ ಯಾವ ಕಾರಣಕ್ಕೆ ಅಲ್ಲಿದ್ದವರು ಉಗಿದು ಆಕ್ರಮಣಗೈದರೋ ಅದು ಅವರ ಮೇಲಿನ ಎಲ್ಲಾ ಅನುಮಾನಗಳನ್ನು ತೀವ್ರಗೊಳಿಸುತ್ತದೆ ಮಾತ್ರವಲ್ಲ ಅದು ಭಯೋತ್ಪಾದನೆಗೆ ಸಮವೆನ್ನಿಸುತ್ತದೆ.

ಇದು ಖಂಡಿತವಾಗಿ ಧರ್ಮ, ಜನಾಂಗ, ಲಿಂಗಾತೀತವಾಗಿ ಭಯೋತ್ಪಾದನೆ ಎನ್ನಿಸುವುದು. ತದನಂತರದ ಘಟನೆಯನ್ನು ಖಂಡಿತವಾಗಿ ಪ್ರತ್ಯೇಕವಾಗಿ ವಿಭಜಿಸಿ ನೋಡಬೇಕಾಗಿದ್ದರೂ ಈ ಉಗಿಯುವಿಕೆಯೇ ಪ್ರಮುಖವಾಗಿ ಸಮಗ್ರ ಜಮಾತೆ ಮರ್ಕೇಜ್ ಅಧಿವೇಶನವನ್ನು ಒಂದು ಪಿತೂರಿಯೇನೊ ಎನಿಸಿ ಶ್ರೀಸಾಮಾನ್ಯನಲ್ಲಿ ಅನುಮಾನದ ಹುತ್ತಗಳನ್ನೇರಿಸಿಬಿಟ್ಟಿದೆ. ಇಂತಹ ದುರಿತ ಕಾಲದಲ್ಲಿ ಪ್ರತಿಯೊಂದು ಘಟನೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ವಿಶ್ಲೇಷಿಸುವ ತಾಳ್ಮೆ ಪ್ರಭುತ್ವ, ಆಡಳಿತ, ಮಾಧ್ಯಮ, ಮತ್ತು ಪ್ರಜೆಗಳಲ್ಲಿ ಖಂಡಿತ ಕಾಣುತ್ತಿಲ್ಲ. ಅದರಲ್ಲೂ ನಿರಾಶಾದಾಯಕ ಸಂಗತಿಯೆಂದರೆ ಪ್ರಜ್ಞಾವಂತರು ಕೂಡ ವಿವೇಚನೆಯನ್ನು ಮರೆತು ತಾವು ನಂಬಿದ ತತ್ವಗಳನ್ನೇ ಮೆರೆಸುತ್ತಿರುವುದು. ಇದು ಅವರೇ ಹೇಳುವಂತಹ ನಿಜದ ದುರಿತ ಕಾಲ, ಆದರೆ ಇದರ ಸೃಷ್ಟಿಗೆ ಇವರ ಕೊಡುಗೆ ಸಾಕಷ್ಟಿದೆ ಎಂಬುದನ್ನು ಅವರು ಇನ್ನೂ ಅರಿತಿಲ್ಲ. ಇದುವರೆಗೆ ತೋಳ ಬಂತು ತೋಳ ಎನ್ನುತ್ತಿದ್ದ ಪ್ರಜ್ಞಾವಂತರು ನಿಜದಿ ತೋಳ ಬಂದಾಗ ಕೂಡ ಅರಿಯದೇ ಮತ್ತದೇ ಟ್ರೋಲಿನಲ್ಲಿ ತೊಡಗಿರುವುದು ಅತ್ಯಂತ ವಿಷಾದಕರ.

ಜೈವಿಕ ಯುದ್ಧಗಳ ಗುರಿ ಕೇವಲ ಸಾಮೂಹಿಕ ಆರೋಗ್ಯದ ಮೇಲಿನ ಆಕ್ರಮಣವಲ್ಲ, ಪರಸ್ಪರರಲ್ಲಿ ಅನುಮಾನ, ದ್ವೇಷ, ಈರ್ಷ್ಯೆಗಳ ಕ್ರಿಮಿಗಳನ್ನು ಬಿತ್ತುವುದು ಕೂಡ.  ಕೊರೋನಾ ಜೈವಿಕ ಯುದ್ಧವಲ್ಲದಿದ್ದರೂ ಖಂಡಿತವಾಗಿ ಒಂದು ಜೈವಿಕ ಯುದ್ಧದ ಅಣಕು ಪ್ರಯೋಗ!

ಈ ಅಣಕು ಯುದ್ಧದಲ್ಲಿ ಭಾಗವಹಿಸಿರುವ ರಾಷ್ಟ್ರಗಳು ತಮ್ಮನ್ನು ತಾವೇ ಕನ್ನಡಿಯ ಮಾನದಂಡದಲ್ಲಿ ನೋಡಿಕೊಂಡು ಬೆನ್ನನ್ನೋ ಅಂಡನ್ನೋ ಅಥವಾ ಮತ್ತಿನ್ನೇನನ್ನೋ ತಟ್ಟಿಕೊಳ್ಳಬೇಕು.

ಸಂದರ್ಭಕ್ಕನುಗುಣವಾಗಿ ಅಣ್ಣನ ವಚನ ನೆನಪಾಗುತ್ತಿದೆ.

ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ ಧರೆ ಹತ್ತಿ ಉರಿದಡೆ ನಿಲಲುಬಾರದು. ಏರಿ ನೀರುಂಬಡೆ
ಬೇಲಿ ಕೆಯ್ಯ ಮೇವಡೆ
ನಾರಿ ತನ್ನ ಮನೆಯಲ್ಲಿ ಕಳುವಡೆ
ತಾಯ ಮೊಲೆವಾಲು ನಂಜಾಗಿ ಕೊಲುವಡೆ
ಇನ್ನಾರಿಗೆ ದೂರುವೆ ಕೂಡಲಸಂಗಮದೇವ!