ಟ್ರಂಪ್ ನ ವೀಸಾ ನೀತಿಯೂ , ಭಾರತೀಯರ ಬೂಸಾ ಕಂಪೆನಿಗಳೂ!

ಭಾಗ ೧:
ಟ್ರಂಪ್ ವಲಸೆ ನೀತಿ ಕುರಿತು ಅಮೇರಿಕಾಕ್ಕಿಂತ ಭಾರತ ಹೆಚ್ಚು ಚಿಂತಿತವಾಗಿದೆ. ಅದರಲ್ಲೂ ಟ್ರಂಪ್ ಭಾರತೀಯರ ವಿರೋಧಿ ಎಂಬಂತೆ ಭಾರತೀಯ ಮಾಧ್ಯಮಗಳು ಚಿತ್ರಿಸುತ್ತಿವೆ. 

ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಟ್ರಂಪ್ ಸರ್ಕಾರ ವಲಸೆ ನೀತಿಯ ಕುರಿತು ಏನನ್ನೂ ಬದಲಾಯಿಸಿಲ್ಲ, ಇದ್ದ ನೀತಿಯನ್ನೇ ಬಲಪಡಿಸಿದೆ ಎಂಬುದು ಸತ್ಯದ ಸಂಗತಿ. ಅದೇಕೆ ಭಾರತೀಯ ಮಾಧ್ಯಮಗಳು ಈ ರೀತಿ ಸತ್ಯ ಸಂಗತಿಯನ್ನು ಮರೆಮಾಚಿ ರೋಚಕತೆಯನ್ನು ಭಿತ್ತಿಸುವವೋ!

ಯಾವ ದೇಶದ ನೀತಿಯೂ ತನ್ನ ನಾಗರೀಕರಿಗೆ ಉದ್ಯೋಗ ಕಲ್ಪಿಸದೇ ವಲಸೆಗಾರರನ್ನು ಕರೆತನ್ನಿ ಎಂದು ಹೇಳುವುದಿಲ್ಲ.  ಅಮೆರಿಕಾ ಕೂಡಾ ತನ್ನ ಈಗಿನ ಸದ್ಯದ ಹೆಚ್೧ಬಿ, ಹೆಚ್೪ ವೀಸಾಗಳ ಕುರಿತಾದ ನಿಯಮ ಬಲಪಡಿಸುವಿಕೆಯನ್ನು ಎಂದೋ ಮಾಡಬೇಕಿತ್ತು. ಭಾರತದ ಸಾಕಷ್ಟು ಪ್ರಮುಖ ಕಂಪೆನಿಗಳಿಂದ ಹಿಡಿದು ಸಣ್ಣಪುಟ್ಟ ಕಂಪೆನಿಗಳು ಸೇರಿ ಈ ವೀಸಾಗಳ ದುರುಪಯೋಗದ ಪರಮಾವಧಿಯನ್ನು ಮೀರಿದ್ದವು. ಈ ಕುರಿತಾಗಿ ವಿಖ್ಯಾತ ಇನ್ಫಸಿಸ್ ಅದಾಗಲೇ ದಂಡ ಕಟ್ಟಿದೆ.

ಹೆಚ್೧ಬಿ ವೀಸಾವನ್ನು ಆಯಾಯಾ ಉದ್ಯೋಗಕ್ಕೆ ಬೇಕಿರುವ ಉನ್ನತ ಶಿಕ್ಷಣ, ಅನುಭವವಿರುವವರಿಗೆ ಮತ್ತು ಆ ಕೆಲಸವನ್ನು ಮಾಡಲು ಅಮೇರಿಕನ್ನರು ಯಾರೂ ಲಭ್ಯವಿರದಿದ್ದರೆ ಕೊಡಬೇಕು ಎನ್ನುತ್ತದೆ ಅಮೆರಿಕಾ ವಲಸೆ ನೀತಿ. ಇದನ್ನು ನಿಯಮಬದ್ಧವಾಗಿ ೨೦೦೦ದವರೆಗೆ ಎಲ್ಲಾ ಕಂಪೆನಿಗಳೂ ಪಾಲಿಸುತ್ತಿದ್ದವು. ಆದರೆ ನಂತರ ಈ ವೀಸಾ ವ್ಯವಹಾರದಲ್ಲಿ ಪಳಗಿದ ಭಾರತೀಯ ಕಂಪೆನಿಗಳು ಈ ವೀಸಾವನ್ನು ದುರುಪಯೋಗಪಡಿಸಿಕೊಳ್ಳಲಾರಂಭಿಸಿದವು. ಇದು ಎಲ್ಲಿಗೆ ಹೋಗಿ ತಲುಪಿತೆಂದರೆ, ಹೆಚ್೧ಬಿ ನೋಂದಣಿ ಆರಂಭವಾಗಿ ಕೆಲವು ಗಂಟೆಗಳಲ್ಲೇ ಗರಿಷ್ಟ ಮಿತಿಯನ್ನು ತಲುಪಿ ಆಯಾಯಾ ವರ್ಷದ ಕೋಟಾ ಭರ್ತಿಯಾಗುವಷ್ಟು! ನಂತರ ಶುರುವಾದದ್ದೇ ಒಬಾಮಾ ಸಡಿಲಿಸಿದ ಡಿಪೆಂಡೆಂಟ್ ವೀಸಾದ ದುರುಪಯೋಗ! ಅಪ್ಪಟ ಗೃಹಿಣಿರೆಲ್ಲಾ ಹೆಚ್೧ಬಿ ತರದ ಯಾವುದೇ ಲಂಗುಲಗಾಮಿಲ್ಲದೇ ಕೆಲಸಕ್ಕೆ ಇದೇ ಭಾರತೀಯ ಕಂಪೆನಿಗಳ ಮೂಲಕ ಕಡಿಮೆ ಸಂಬಳಕ್ಕೆ ಬರತೊಡಗಿದರು. ತಮ್ಮದೇ ಆದ ವಲಯ, ಲಾಬಿಗಳನ್ನು ಕಛೇರಿಗಳಲ್ಲಿ ಕಟ್ಟಿಕೊಂಡ ಈ ವೀಸಾ ಭಾರತೀಯರು ಬೇರೆ ಯಾವುದೇ ವ್ಯಕ್ತಿ, ಅಮೇರಿಕನ್ ಪೌರತ್ವ ಹೊಂದಿದ ಭಾರತೀಯನನ್ನೂ ಸಹ ದೂರವಿಟ್ಟು ಅಮೆರಿಕನ್ ಐಟಿ ಜಾಬ್ ಮಾರ್ಕೆಟ್ಟಿನಲ್ಲಿ ಪಾಳೆಗಾರಿಕೆಯನ್ನು ಶುರುವಿಟ್ಟುಕೊಂಡರು. ಈ ಕುರಿತಾಗಿ ಭಾರತೀಯ ಮೂಲದ ಅಮೆರಿಕನ್ನರು ಕೂಡಾ ಸಾಕಷ್ಟು ಆಕ್ರೋಶ ವ್ಯಕ್ತಪಡಿಸಿದ್ದರು. ಇದೆಲ್ಲದರ ಪರಿಣಾಮವಾಗಿಯೇ ಟ್ರಂಪ್ ಸರ್ಕಾರ ವೀಸಾ ನೀತಿಯನ್ನು ಬಲಪಡಿಸಲು ಆಸಕ್ತಿ ತೋರಿದ್ದುದು. ಇದು ಅತ್ಯಂತ ಬೇಕಾಗಿದ್ದ ನೀತಿ ಬಲಪಡಿಸುವಿಕೆ. ಟ್ರಂಪ್ ಸರ್ಕಾರದ ಬೇರೆಲ್ಲಾ ನೀತಿಗಳನ್ನು ಜನ ಒಪ್ಪದಿದ್ದರೂ ಈ ವೀಸಾ ನೀತಿಯನ್ನು ತುಂಬು ಹೃದಯದಿಂದ ನನ್ನಂತಹ ಭಾರತೀಯ ಅಮೇರಿಕನ್ನರು ಒಳಗೊಂಡಂತೆ ಎಲ್ಲಾ ಅಮೇರಿಕನ್ನರೂ ಸ್ವಾಗತಿಸುತ್ತಿದ್ದಾರೆ. ಬಹುಶಃ ಈ ಕುರಿತಾಗಿ ಭಾರತೀಯ ಮೂಲದವರೇ ಯಾರೋ ಟ್ರಂಪ್ ಸಲಹೆಗಾರರಾಗಿರಬಹುದು! ಏಕೆಂದರೆ ಭಾರತೀಯ ಕಂಪೆನಿಗಳು ವಲಸೆ ಇಲಾಖೆಯ ನಿಯಮಗಳನ್ನು ಹೇಗೆ ಯಾಮಾರಿಸುತ್ತಿವೆ ಎಂಬುದನ್ನು ವಲಸೆ ಇಲಾಖೆ ಈಗ ಅರಿತಿದೆ. 

ಭಾರತೀಯ ಮೂಲದ ಎಲ್ಲಾ ಕಂಪೆನಿಗಳು ತಮಗೆ ಬೇಕುಬೇಕಾದ ಇಂಜಿನಿಯರಿಂಗಿನ ಎಲ್ಲಾ ವಿಭಾಗದಲ್ಲಿರುವವರಿಂದ ಹಿಡಿದು ಬಿಎಸ್ಸಿ, ಬಿಕಾಮ್ ಹಿನ್ನೆಲೆಯವರನ್ನೆಲ್ಲಾ ಕಂಪ್ಯೂಟರ್ ತಜ್ಞರೆಂದು ಬಿಂಬಿಸಿ ಕರೆತಂದು ಹೆಚ್೧ಬಿ ವೀಸಾವನ್ನು ಹಿಗ್ಗಾಮುಗ್ಗಾ ಶೋಷಣೆಗೊಳಪಡಿಸಿದ್ದರು. ಒಬ್ಬನೇ ವ್ಯಕ್ತಿ ಜಾವಾ ಕೆಲಸಕ್ಕೆ ಜಾವಾ, ಡಾಟ್ ನೆಟ್ ಕೆಲಸಕ್ಕೆ ಡಾಟ್ ನೆಟ್, ಯಾವುದು ಬೇಕೋ ಆಯಾಯ ಬೈಯೊಡೇಟಾ ಸಿದ್ಧಪಡಿಸಿಕೊಂಡಿರುತ್ತಾನೆ. ಅಥವಾ ಅವನ ಹೆಚ್1ಬಿ ಕಂಪೆನಿಯೇ ಸಿದ್ಧಪಡಿಸಿರುತ್ತದೆ.  ಹೀಗೆ ಹಿಗ್ಗಾಮುಗ್ಗಾ ಅನುಭವವನ್ನು ತೋರಿಸಿ, ಅನನುಭವಿಗಳನ್ನು ತಂದು ಕೂರಿಸಿ ಭಾರತೀಯರೆಂದರೆ ಮಹಾನ್ ಸುಳ್ಳುಗಾರರೆಂದು/ಮೋಸಗಾರರೆಂಬ ಅಭಿಪ್ರಾಯ ಬರುವಂತೆ ಮಾಡಿಟ್ಟಿದ್ದಾರೆ.  ಇದು ಇತರೆ ಪ್ರತಿಭಾವಂತ ಭಾರತೀಯರಿಗೆ ಸಾಕಷ್ಟು ಸಂಕಷ್ಟವನ್ನು ತಂದೊಡ್ಡಿದೆ. 

ಅದಲ್ಲದೇ ತಮ್ಮ ಅಂತರಿಕ ಕಂಪೆನಿ ವ್ಯವಹಾರಗಳಿಗೆ ಮಾತ್ರ ಒದಗುವ ಎಲ್ ವೀಸಾ, ಬಿಸಿನೆಸ್ ವೀಸಾಗಳನ್ನು ಹೆಚ್೧ಬಿಯ ಬದಲಿಯಾಗಿ ಉಪಯೋಗಿಸುವುದಲ್ಲದೇ ಈ ವೀಸಾದಾರರಿಗೆ ಗ್ರೀನ್‍ಕಾರ್ಡುಗಳನ್ನೊದಗಿಸಿ ಇಲ್ಲಿಯೇ ಭದ್ರವಾಗಿ ಠಿಕಾಣಿ ಹೂಡಿಸುವವರೆಗೆ ವೀಸಾ ದುರ್ಬಳಕೆ ಅವ್ಯಾಹತವಾಗಿ ನಡೆಯುತ್ತಿತ್ತು. ಟ್ರಂಪ್ ಸರ್ಕಾರದ ವೀಸಾ ನಿಯಮ ಬಿಗಿಗೊಳ್ಳುವಿಕೆಯಿಂದಾಗಿ ಈ ರೀತಿಯ  ಗ್ರೀನ್ ಕಾರ್ಡ್ ಪ್ರಾಯೋಜನೆ ನಿಂತಿದೆ.  ಇಲ್ಲಿ ಗಮನಾರ್ಹ ಸಂಗತಿಯೆಂದರೆ ಈ ರೀತಿ ಗ್ರೀನ್ಕಾರ್ಡ್ ಪಡೆದ ಬಹುತೇಕರು ಕೇವಲ ಭಾರತೀಯ ಮೂಲದ ಕಂಪೆನಿಗಳಲ್ಲಿ ಕೆಲಸ ಮಾಡಬಲ್ಲರೇ ಹೊರತು ಅಮೇರಿಕನ್ ಕಂಪೆನಿಗಳಲ್ಲಿ ಅಲ್ಲ. ಏಕೆಂದರೆ ಅವರ ದಗಲಬಾಜಿ ವೃತ್ತಿ ಅನುಭವ ಆ ಕಂಪೆನಿಗಳಲ್ಲಿ ಉಪಯೋಗಕ್ಕೆ ಬರುವುದೇ ಹೊರತು ಬೇರೆಡೆಯಲ್ಲ. 

ಸದ್ಯಕ್ಕೆ ಟ್ರಂಪ್ ಸರ್ಕಾರ ಈಗಿರುವ ವೀಸಾ ನಿಯಮಗಳನ್ನೇ ಕಟ್ಟುನಿಟ್ಟಾಗಿ ಪಾಲಿಸುವಂತೆ ವಲಸೆ ಅಧಿಕಾರಿಗಳಿಗೆ ಕಟ್ಟೆಚ್ಚರ ನೀಡಿದುದರ ಪರಿಣಾಮವಾಗಿ ಈ ಎಲ್ಲಾ ದುರುಪಯೋಗ ತಾನೇ ತಾನಾಗಿ ನಿಂತಿದೆ. ಅಂದರೆ ಯಾವ ನೀತಿಯ ಬದಲಾವಣೆಯಿಲ್ಲದೆ ಕೇವಲ ಕಟ್ಟೆಚ್ಚರದಿಂದ ವೀಸಾ ಅರ್ಜಿಗಳನ್ನು ಪರಿಶೀಲನೆ ಮಾಡಿದರೆ ನೀತಿ ನಿಯತ್ತು ಪಾಲಿಸುವ ಕಂಪೆನಿಗಳಿಗೆ ಭಯವೇಕಿರಬೇಕು. ಅಂದರೆ ವೀಸಾ ಕುರಿತು ಗಾಬರಿ ಭಯ ವ್ಯಕ್ತಪಡಿಸುವ ಕಂಪೆನಿಗಳ ನಿಯತ್ತು ಪ್ರಶ್ನಾರ್ಹವೆಂದಲ್ಲವೇ?

ವ್ಯವಸ್ಥೆ ಚಾಪೆ ಕೆಳಗೆ ತೂರಿದರೆ, ರಂಗೋಲಿ ಕೆಳಗೆ ತೂರಬಲ್ಲ ಭಾರತೀಯತೆ ಅಮೇರಿಕಾದಂತಹ ರಾಷ್ಟ್ರದ ವೀಸಾ ನೀತಿಯನ್ನು ತಿಪ್ಪರಲಾಗ ಹಾಕಿಸಿ ದುರ್ಬಳಕೆ ಮಾಡಿಕೊಂಡದ್ದು ಮಾತ್ರ ಸತ್ಯ. ಅಂತಹ ಭಾರತೀಯತೆಗೆ ಸಾಕ್ಷಿಯಾಗಿ ಮೋದಿಯ ನೋಟ್‍ಬ್ಯಾನ್ ಚಾಪೆಗೆ, ಬ್ಯಾಂಕ್ ಮ್ಯಾನೇಜರರುಗಳ ರಂಗೋಲಿಯನ್ನು ದೇಶವೇ ಕಂಡಿದೆಯಲ್ಲವೇ!?

ಭಾಗ ೨:

ಈ ವೀಸಾ ಬಳಕೆ 2000 ರದವರೆಗೆ ಎಲ್ಲಾ ಸರಿಯಾಗಿತ್ತು. ಏಕೆಂದರೆ ಅಲ್ಲಿಯವರೆಗೆ ಗ್ರಾಹಕನ ಪ್ಲಾನು, ಡಿಸೈನು. ಅದನ್ನು ಅಳವಡಿಸಲು ಈ ಭಾರತೀಯ ಕಂಪೆನಿಗಳ ಪ್ರೋಗ್ರಾಮರುಗಳು. ಆದರೆ ಯಾವಾಗ ಐಟಿ ಔಟ್ ಸೋರ್ಸ್ ಆಯಿತೋ ಆಗಿನಿಂದ ಈ ಸಮಸ್ಯೆಗಳು ಶುರುವಾದವು. ಭಾರತೀಯ ವಿದೇಶದಲ್ಲಿ ನೆಲೆಸಿ ವಿದೇಶೀ ಕಂಪೆನಿಗಳಿಗೆ ಕೆಲಸ ಮಾಡುತ್ತಿದ್ದರೆ ಸರಿ. ಯಾವಾಗ ಆತ ಭಾರತೀಯ ಕಂಪೆನಿಗೆ ಸೇರುತ್ತಾನೋ ಆಗ ಆತನ ಎಲ್ಲಾ ಭಾರತೀಯ ಅವಗುಣಗಳು ಜಾಗೃತವಾಗಿಬಿಡುತ್ತವೆ! ಈ ಔಟ್ ಸೋರ್ಸಿನಿಂದಾಗಿ ಸಾಕಷ್ಟು ಅವಗಡಗಳಾಗಿವೆ. ಕೇವಲ ಕಾಲ್ ಸೆಂಟರ್,  ಸಪೋರ್ಟ್ ಸೆಂಟರ್ ಅಂತ ಕೆಲಸಗಳನ್ನು ಮಾಡಲು ಮಾತ್ರ ಈ ಕಂಪೆನಿಗಳು ಸರಿಯೇ ಹೊರತು ತಂತಾಂಶ ಅಭಿವೃದ್ಧಿಗಲ್ಲ. ಹಾಗಾಗಿ ನಾನು ಆಫ್ ಶೋರಿಗಿಂತ ಆನ್ ಶೋರ್ ಪರ. ಮಾನವ ಸಂಪನ್ಮೂಲಗಳ ಕೊರತೆಯೇ, ಇನ್ನು ಹೆಚ್ಚಿನ ಹೆಚ್ಬೊನ್ನಿಗರನ್ನು ಕರೆತರೋಣವೇ ಹೊರತು ಔಟ್ ಸೋರ್ಸ್ ಬೇಡ ಎಂಬ ನಿಲುವು ತೋರಿದ್ದೇನೆ.  ಏಕೆಂದರೆ ಅಮೆರಿಕಾದ ಕೆಲಸವನ್ನು ಬೇರೆ ದೇಶದಲ್ಲಿ ಮಾಡಿ, ಆ ದೇಶಕ್ಕೆ ತೆರಿಗೆ ಕಟ್ಟಿ, ತಮ್ಮ ಸಂಬಳವನ್ನು ಆ ದೇಶದಲ್ಲಿ ವ್ಯಯಿಸಿ್ದಾಗ ಆ ದೇಶದ ಆರ್ಥಿಕಸ್ಥಿತಿ ಸುಧಾರಿಸುತ್ತದೆಯೇ ಹೊರತು ಅಮೆರಿಕಾದಲ್ಲ! ವಸ್ತು ಉತ್ಪಾದನೆ, ಗಾರ್ಮೆಂಟ್ಸ್, ಮುಂತಾದ ಔಟ್ ಸೋರ್ಸಿನಿಂದ ಅಮೆರಿಕಾಕ್ಕೆ ಒಳಿತಾಗಿದೆಯೇ ಹೊರತು ಈ ತಂತ್ರಾಂಶ ಅಭಿವೃದ್ಧಿಯ ಔಟ್ ಸೋರ್ಸ್ ನಿಂದಲ್ಲ.  ಏಕೆಂದು ಅರಿಯಲು ಈ ಕಂಪೆನಿಗಳ ಕಾರ್ಯವೈಖರಿ ಹೇಗಿರುತ್ತದೆ ಎಂದೊಮ್ಮೆ ಪರಿಚಯ ಮಾಡಿಕೊಳ್ಳೋಣ.

ಒಂದು ಪ್ರಾಜೆಕ್ಟಿಗೆ ಇಂತಿಷ್ಟು ಜನ ಎಂಬ ನಿಯಮ ಸಪೋರ್ಟ್ ಯಾ ಕಾಲ್ ಸೆಂಟರ್ ಕೆಲಸಗಳಿಗಿರುತ್ತದೆ. ಆದರೆ ಅದೇ ನಿಯಮವನ್ನು ಒಂದು ತಂತ್ರಾಂಶ ಅಭಿವೃದ್ಧಿಯ ಪ್ರಾಜೆಕ್ಟಿಗೆ ಕೂಡಾ ಗ್ರಾಹಕ ಕೇಳದಿದ್ದರೂ ಕುರುಡಾಗಿ ಪಾಲಿಸುತ್ತಿವೆ ಈ ಎಲ್ಲಾ ದೊಡ್ಡ ಕಂಪೆನಿಗಳು!  ತಂತ್ರಾಂಶ ಅಭಿವೃದ್ಧಿ ಒಂದು ಬೌದ್ಧಿಕ ಕಾರ್ಯ ಅದಕ್ಕೂ ಗಂಟೆಗೆ ಇಷ್ಟು ಕರೆಗಳನ್ನು ಸ್ವೀಕರಿಸಬೇಕೆಂಬ ಗುಮಾಸ್ತ ಕಾರ್ಯಕ್ಕೂ ವ್ಯತ್ಯಾಸವಿರುತ್ತದೆ. ಮೂಲಭೂತವಾಗಿ ಒಂದು ಉನ್ನತ ಬೌದ್ಧಿಕ ಕಾರ್ಯವನ್ನುಗುಮಾಸ್ತ ಕಾರ್ಯವಾಗಿ ಮಾಡುವುದಾದರೆ ಅದಕ್ಕೆ ಉನ್ನತ ಶಿಕ್ಷಣ ಮತ್ತು ಅನುಭವವಿರುವ ಹೆಚ್೧ಬಿ ತಂತ್ರಜ್ಞ ಏಕೆ ಬೇಕೆಂಬುದು ಬೇರೆ ಪ್ರಶ್ನೆ. ಒಟ್ಟಾರೆ ಬುದ್ಧಿಮತ್ತೆಯನ್ನು ಸರಕು ಸಾಮಗ್ರಿಯಾಗಿಸಿದ್ದಾವೆ ಈ ಕಂಪೆನಿಗಳು. ಕಾಲ್ ಸೆಂಟರನ್ನು ನಿಭಾಯಿಸುವ ತತ್ವಗಳನ್ನೇ ತಂತ್ರಾಂಶ ಅಭಿವೃದ್ಧಿಗೂ ಯಥಾವತ್ತಾಗಿ ಪಾಲಿಸುತ್ತವೆ. ಏಕೆಂದರೆ ತಂತ್ರಾಂಶ ಅಭಿವೃದ್ಧಿಯಲ್ಲಿ ಈ ಕಂಪೆನಿಗಳಿಗೆ ಇರುವ ಅನುಭವ ಕತ್ತೆ ಕೆಲಸದ ಅನುಭವವೆನ್ನಬಹುದು. ಇಲ್ಲದಿದ್ದರೆ ಈಗಾಗಲೇ ಯಾಹೂ, ಗೂಗಲ್, ಮೈಕ್ರೋಸಾಫ್ಟ್, ಮುಂತಾದ ಪ್ರಾಡಕ್ಟ್ ಕಂಪೆನಿಗಳು ಭಾರತದಾದ್ಯಂತ ಕಾಣಬೇಕಿತ್ತು. 

ಈ ರೀತಿಯ ಒಂದು ಕೂಲಿ ಕಾರ್ಮಿಕರನ್ನು ಕರೆತರುವ ಮೇಸ್ತ್ರಿ ಯಾ ಶೇರೆಗಾರರ ಮಾರ್ಕೆಟ್ ಟ್ರೆಂಡ್ ಅನ್ನು ಈ ಕಂಪೆನಿಗಳು ಪ್ರಮೋಟ್ ಮಾಡಿಟ್ಟಿವೆ.  ಹಾಗಾಗಿಯೇ ಒಬ್ಬ ದಕ್ಷ ಇಂಜಿನಿಯರ್ಗೆ ಗಂಟೆಗೆ $೧೫೦ ಇದ್ದ ರೇಟು ಈಗ $೪೦ಕ್ಕೆ ಬಂದಿದೆ. 

ಗಂಟೆಗೆ ನೂರಾಐವತ್ತು ಡಾಲರ್ ಛಾರ್ಜ್ ಮಾಡುವ ಒಬ್ಬ ದಕ್ಷ ಇಂಜಿನಿಯರ್ ಮಾಡಬಹುದಾದ ಕೆಲಸವನ್ನು ನಲವತ್ತು ಡಾಲರ್ರಿಗೆ ತಮ್ಮ ಭಾರತದ ಆಫೀಸಿನಿಂದ ಮತ್ತು ತಮ್ಮ ಕಂಪೆನಿಯ ಆನ್ ಶೋರ್ ಕೆಲಸಗಾರನಿಂದ ಜಾಯಿಂಟ್ ಆಗಿ ಮಾಡಿಸಿಕೊಡುವುದಾಗಿ ಒಪ್ಪಿಕೊಳ್ಳುತ್ತಾರೆ. ನಂತರ ಇದು ಒಬ್ಬ ಒಂದು ಗಂಟೆಯಲ್ಲಿ ಮಾಡಬಹುದಾದ ಕಾರ್ಯವಲ್ಲವೆಂದು ನೆಪಗಳ ಸರಮಾಲೆಗಳನ್ನೊಡ್ಡುತ್ತಾ, ಹತ್ತು ಜನರು ಬೇಕೆಂದು ಕಡೆಗೆ ಆರು ಜನರಿಗೆ ಒಪ್ಪಿಸುತ್ತಾರೆ. ಅಲ್ಲಿಗೆ $೧೫೦ ಕಕ್ಕಬೇಕಾದ್ದು ಈಗ $೨೪೦ ಆಯಿತು. 

ಗ್ರಾಹಕ ತಾನು ಈ ಕಂಪೆನಿಗೆ ಆಗಲೇ ಕೆಲಸ ವಹಿಸಿದ ತಪ್ಪಿಗೆ ಮತ್ತು ತನ್ನ ಆಡಳಿತ ಮಂಡಳಿ ತನ್ನನ್ನು ಎಲ್ಲಿ ಬಲಿಪಶು ಮಾಡಿಬಿಡುವುದೋ ಎಂಬ ಭಯದಲ್ಲಿ ಇವರ ತಾಳಕ್ಕೆ ಕುಣಿಯುತ್ತಾ ಸಾಗಬೇಕಾಗುತ್ತದೆ. ಕಡೆಗೆ ಮಿಕ ಬಿದ್ದ ಮೇಲೆ  ಎಲ್ಲಾ ಸಾಫ್ಟ್ವೇರ್ ಅಭಿವೃದ್ಧಿಯ ತತ್ವಸಿದ್ಧಾಂತಗಳನ್ನು ತಲೆಕೆಳಗು ಮಾಡುತ್ತಾ ತಮ್ಮದೇ ರೀತಿಯಲ್ಲಿ ವ್ಯಾಖ್ಯಾನಿಸಿ, ದೀಪಾವಳಿ, ಯುಗಾದಿ, ಹೋಳಿ, ಹುಣ್ಣಿಮೆ, ಅಮವಾಸ್ಯೆ, ರಾಮ, ಕೃಷ್ಣ, ಶಿವ, ಪಾರ್ವತಿಯರನ್ನೆಲ್ಲಾ ಪರಿಚಯಸುತ್ತಾ ಭಾರತೀಯ ಸಂಸ್ಕೃತಿ, ಬಾಲಿವುಡ್ ತಿರುಗಿಸಿ, ಒಬ್ಬ ರೈತ ತನ್ನ ಬೆಳೆಯನ್ನು ಮಾರುಕಟ್ಟೆಗೆ ಕೊಂಡುಹೋದಾಗ ದಲ್ಲಾಳಿಗಳು ಆರೈವಲ್ಸು, ಡಿಮ್ಯಾಂಡು, ಬಾಂಬೆ ರೇಟು, ದುಬೈ ಮಾರ್ಕೆಟ್, ಅದು ಇದು ಎಂದು ತಲೆ ಗಿರ್ರೆನಿಸುವಂತೆ ಅಷ್ಟೇ ಗೋಜಲು ಗೋಜಲಾದ ತಂತ್ರಾಂಶವನ್ನು ಮಾಡಿಕೊಡುತ್ತಾರೆ.

ಗ್ರಾಹಕನಿಗೇನಾದರೂ ಸಂಶಯ ಬಂದು ಇಷ್ಟೊಂದು ಜನರು ನಿಜಕ್ಕೂ ಬೇಕೇ ಎಂದರೆ, ಆತನಿಗೆ ಭಾರತದ ತಮ್ಮ ಕಛೇರಿಗೆ ಕರೆದೊಯ್ದು ಬಹುಮತ ಸಾಬೀತು ಪಡಿಸಲು ರಾಜ್ಯಪಾಲರ ಮುಂದೆ ಪರೇಡ್ ಮಾಡಿಸುವ ರಾಜಕಾರಣಿಯಂತೆ ಒಂದಷ್ಟು ಜನರನ್ನು ಇವರೆಲ್ಲಾ ನಿಮ್ಮ ಪ್ರಾಜೆಕ್ಟ್ಗೆ ಕೆಲಸ ಮಾಡುವವರೆಂದು ತೋರಿಸುತ್ತಾರೆ. ಹಾಗೆಯೇ ಸ್ಥಳೀಯ ಆಕರ್ಷಣೆಗಳನ್ನು ತೋರಿ ಸೈ ಎನ್ನಿಸಿಕೊಂಡು ಆ ಬಕರಾನನ್ನು ಹಲಾಲ್ ಮಾಡಿಬಿಡುತ್ತಾರೆ.

ಕಾಮೋಡ್ ಮಾಡಲು ಹೇಳಿದರೆ ಇತ್ತ ಇಂಡಿಯನ್ನೂ ಅಲ್ಲದ ಅತ್ತ ಪಾಶ್ಚಿಮಾತ್ಯವೂ ಅಲ್ಲದ "ಆಂಗ್ಲೋ-ಇಂಡಿಯನ್" ಎಂಬ ವಿಶೇಷ ಸಂಡಾಸವನ್ನು ಕಟ್ಟಿಕೊಟ್ಟುಬಿಡುತ್ತಾರೆ. ಕಟ್ಟಿಸಿಕೊಂಡ ತಪ್ಪಿಗೆ ಇದರ ಮೇಲೆ ಪೀಠಾರೋಹಿಯಾಗಿ ಬಡ ಅಮೆರಿಕನ್ನನು ತಿಣುಕುತ್ತಾನೆ. ಇದು ಆಂಗ್ಲೋ ಇಂಡಿಯನ್ ಸಂಡಾಸವಾದ್ದರಿಂದ ಕೆಟ್ಟರೆ ಇದನ್ನು ಕಟ್ಟಿದ ಪುಣ್ಯಾತ್ಮನೇ ರಿಪೇರಿ ಮಾಡಿಕೊಡಬೇಕಾಗುತ್ತದೆ. ಆ ಮಟ್ಟಿಗೆ ಗ್ರಾಹಕನ ಜುಟ್ಟು ಇವರ ಕೈಯಲ್ಲಿರುತ್ತದೆ!  ಹಾಗಾಗಿ ಇವರು ಅಭಿವೃದ್ಧಿಪಡಿಸಿದ ಗೋಜಲು ತಂತ್ರಾಂಶವನ್ನು ತಿಪ್ಪರಲಾಗ ಹಾಕಿದರೂ ಬೇರೆ ಯಾರೂ ಸಪೋರ್ಟ್ ಮಾಡದ ಕಾರಣ ಆ ಗ್ರಾಹಕನಲ್ಲಿ ಖಾಯಂ ಆಗಿ ಇವರು ಬೇರು ಬಿಡುತ್ತಾರೆ, ಬಿಟ್ಟಿದ್ದಾರೆ.

ಎಲ್ಲಾ ಭಾರತೀಯ ಬಹು ದೊಡ್ಡ ಕಂಪೆನಿಗಳ ಸೇವೆಯನ್ನು ಗ್ರಾಹಕನಾಗಿ ಬಳಸಿಕೊಂಡಿರುವ ನಾನು ಅಥವಾ ನನ್ನಂತಹ ಅನುಭವಸ್ಥರೆಲ್ಲರೂ ಈ ರೀತಿ ಖಚಿತವಾಗಿ ಹೇಳಬಲ್ಲರು. ನಾನು ಕಂಡಂತೆ ಈ ಕಂಪೆನಿಗಳು ಉತ್ತಮ ಕುದುರೆಗಳನ್ನು ಅಂದರೆ ಒಳ್ಳೊಳ್ಳೆ ಅಂಕಗಳನ್ನು ಪಡೆದ ಪ್ರತಿಷ್ಠಿತ ವಿದ್ಯಾಲಯಗಳಲ್ಲಿ ಓದಿರುವ ಪ್ರತಿಭಾವಂತರನ್ನು ಯಶಸ್ವಿಯಾಗಿ ಕತ್ತೆಗಳಾಗಿಸಿದ್ದಾವೆ ಎಂದು ಹೇಳಬಲ್ಲೆ. ಈ ಕಂಪೆನಿಗಳಲ್ಲಿ ಒಂದೆರಡು ವರ್ಷ ಕೆಲಸ ಮಾಡಿದ ನಂತರ ಆ ಪ್ರತಿಭಾನ್ವಿತ ಕತ್ತೆಯಾಗಿರುತ್ತಾನೆ.  ನಂತರ ಮದುವೆ, ಸಂಸಾರ, ಗೃಹಸಾಲ, ವಾಹನಸಾಲಗಳ ಸುಳಿಗೆ ಸಿಕ್ಕು, ಹೇಗೋ ಅದೇ ಕಂಪೆನಿಯಲ್ಲಿ ಕೆಲಸ ಉಳಿಸಿಕೊಳ್ಳಲು ಆ ಕಾರ್ಪೊರೇಟ್ ಮಾಫಿಯಾದ ಗಾರ್ಧಭ ಸದಸ್ಯನಾಗಿ ಜೀವನ ಕಂಡುಕೊಳ್ಳುತ್ತಾನೆ. ಹೇಳುತ್ತಾ ಸಾಗಿದರೆ ಒಂದು ಅದ್ಭುತ ಕಾದಂಬರಿಯೇ ಆಗುವಷ್ಟು ಈ ಕತೆ ಸಾಗುತ್ತದೆ. ಒಟ್ಟಾರೆ ಓರ್ವ ಸಾಮಾನ್ಯ ಇಂಜಿನಿಯರನಿಗೆ ಇರಬೇಕಾದ ಒಂದು ವಿಶ್ಲೇಷಣಾ ಚಾತುರ್ಯವನ್ನು ಬಹುಪಾಲು ಈ "ಮಾನವ ಸಂಪನ್ಮೂಲ"ಗಳು ಹೊಂದೇ ಇಲ್ಲವೆಂದು ಖಚಿತವಾಗಿ ಹೇಳಬಲ್ಲೆ.  

ಇರಲಿ, ಈಗ ಹೇಳಿ ಇವರ ಕಾರ್ಯವೈಖರಿಗೂ ನಿಮ್ಮಲ್ಲೇ ಸಾಕಷ್ಟು ಕಾಣಸಿಗುವ ಅಡ್ಡಕಸುಬಿಗಳಿಗೂ ವ್ಯತ್ಯಾಸವಿದೆಯೇ!?! ನಿಮ್ಮ ಮಕ್ಕಳನ್ನು ಈ "ಪ್ರತಿಷ್ಠಿತ"ಕಂಪೆನಿಗಳಿಗೆ ಕಳಿಸಿ ಕತ್ತೆಯಾಗಿಸುವಿರಾ?

No comments: